Oppanna.com

ಆರ್ಯಾ – ಅಬೇಸ್… ಬೇಸಗೆಲಿ ಬಾವಿ ತೋಡುವ ಶುದ್ದಿ…

ಬರದೋರು :   ಒಪ್ಪಣ್ಣ    on   08/06/2012    17 ಒಪ್ಪಂಗೊ

ಆಚಮನೆ ಪುಟ್ಟಣ್ಣನ ಮದುವೆ ಗವುಜಿ ಸುರು ಆಗದ್ದೆ – ಇನ್ನಿಪ್ಪದು ಮೂರೇ ವಾರ ಇದಾ.
ಒಂದು ಹೊಡೆಲಿ ಹಪ್ಪಳ ಸೆಂಡಗೆ ಒತ್ತುತ್ತ ತಲೆಬೆಶಿ ಆದರೆ, ಮತ್ತೊಂದು ಹೊಡೆಲಿ ಕೊಟ್ಟುಹೋದ ಅಕ್ಕಂದ್ರು ಬಂದು ಜವುಳಿ ತೆಗೆತ್ತ ತಲೆಬೆಶಿ!
ದೊಡ್ಡಣ್ಣಂಗೆ ಸಾಮಾನು ರೂಡಿ ಮಾಡ್ತ ತಲೆಬೆಶಿ, ಪುಟ್ಟಣ್ಣಂಗೆ ಹೇಳಿಕೆ ವಿಲೇವಾರಿಯ ತಲೆಬೆಶಿ; ಹೊಸಾ ಚಿಕ್ಕಮ್ಮ ಆಡ್ಳೆ ಬಕ್ಕೋ – ಬಾರದೋ ಹೇಳಿಗೊಂಡು – ಗಾಯತ್ರಿಗೆ ಅದರದ್ದೊಂದು ಬೇರೆಯೇ ತಲೆಬೆಶಿ;
ಅದರ ಕುಂಞಿ ತಂಗೆಗೆ ಯೇವಗ ನೋಡಿರೂ ಒಂದೇ ತಲೆಬೆಶಿ, ಅರ್ಗೆಂಟು ಮಾಡ್ತದು ಹೇಂಗೇದು!! 😉
ಒಟ್ಟಿಲಿ ಜೆಂಬ್ರ ತೆಗದರೆ ಎಲ್ಲೋರಿಂಗೂ ತಲೆಬೆಶಿಯೇ!
~

ಇದರೆಡಕ್ಕಿಲಿ ದೊಡ್ಡಪ್ಪಂಗೆ ಇನ್ನೊಂದು ತಲೆಬೆಶಿ ಸುರು ಆಗಿತ್ತು, ಎಂತರ?
ಜೂನು ಬಂದಿಳುತ್ತು, ಇನ್ನೂ ಮಳೆ ಇಲ್ಲೆ, ಭೂಮಿಲಿ ನೀರಾಯಿದಿಲ್ಲೆ. ತೋಟಕ್ಕಿಲ್ಲದ್ದರೆ ಹೋಗಲಿ, ಕುಡಿವಲಾದರೂ ಬೇಕನ್ನೇ!
ಜೆಂಬ್ರದ ಮನೆಗೆ ಹೇಂಗೂ ಅತ್ಯಗತ್ಯ. ಈಗ ಎರಡು ಮಳೆ ಬಂತಾದರೂ – ಬಾವಿಲಿ ನೀರಪ್ಪಷ್ಟಾಯಿದಿಲ್ಲೆ.
ಜೆಂಬ್ರ ತೆಗದರೆ ಸಾಕೋ, ಆಸರಿಂಗೆ ಊಟದ ಏರ್ಪಾಡು ಆಗೆಡದೋ? ಮುಖ್ಯವಾಗಿ ನೀರು ಬೇಡದೋ?!
ದೊಡ್ಡಪ್ಪಂಗೆ ತಲೆಬೆಶಿ!

ಆಚಮನೆಯ ಈಶಾನ್ಯಖಂಡಲ್ಲಿ ಕುಡಿವ ನೀರಿನ ಬಾವಿ ಇದ್ದಲ್ಲದೋ, ಹನ್ನೆರಡು ಚಿಲ್ರೆ ಕೋಲಿನ ಬಾವಿಲಿ ಅರ್ಧ ಕೋಲು ನೀರಿಪ್ಪದಷ್ಟೆ – ಕೊಡಪ್ಪಾನ ಬಂಙಲ್ಲಿ ಮುಳುಂಗುದು.
ನಿತ್ಯ ನೀರೆಳೆತ್ತ ಅತ್ತಿಗೆಗೆ ಅಭ್ಯಾಸ ಇದ್ದ ಆದ ಕಾರಣ ಆತು; ಬೋಚಬಾವ° ನೀರೆಳವದಾದರೆ ಒಂದುಸರ್ತಿ ಕೊಡಪ್ಪಾನ ಇಳುದ್ದರ್ಲಿ – ಗೆದ್ದೆಯ ಹಾಂಗೆ ಮಲಂಪು ಕರಡುಗು ಬಾವಿಯೊಳ!

ಹನ್ನೆರಡೂವರೆ ಕೋಲಿಲಿ ಮೇಗಂದ ನೋಡಿರೆ ಕಾಂಬದು ಒಂಭತ್ತೇ ಕೋಲು – ಒಳುದ್ದೆಲ್ಲ ಕೆಸರೇ ಅದರ್ಲಿ!
ಎಷ್ಟು ಕಾದರೂ ಮಳೆಯೂ ಬಂತಿಲ್ಲೆ – ಮೆಲ್ಲಂಗೆ ಬಾವಿಕೆಲಸ ಮಾಡ್ಸದ್ದೆ ಆಗ, ತುಂಬಿದ್ಸರ ತೆಗೆಶಲಾವುತಿತು – ಹೇದು ದೊಡ್ಡಪ್ಪ° ಆರು ಸರ್ತಿ ಹೇಳಿದವಡ.
ಆಚಮನೆ ಕುಂಞಣ್ಣಂಗೆ ಈ ಸಂಗತಿ ಮನವರಿಕ್ಕೆ ಆದಪ್ಪದ್ದೇ – ಮೂರು ಗಟ್ಟಿ ಆಳುಗಳ ಹೇಳಿಕ್ಕಿ ಬಂದ°; ಮತ್ತೆ ಮೂರು ಜೆನ ಅವ್ವೇ ಇದ್ದವನ್ನೇ – ದೊಡ್ಡಣ್ಣ, ಪುಟ್ಟಣ್ಣ, ಕುಂಞಣ್ಣ!
ಮನ್ನೆ ಆಯಿತ್ಯವಾರ ಎಲ್ಲೋರುದೇ ಸೇರಿ ಬಾವಿಂದ ಚೋಳು ಹೊರ್ತ ಕೆಲಸ ಮಾಡಿದವು.
~

ಎಡಕ್ಕಿಲಿ ಒಂದಾರಿ ಹೋಗಿ ನೋಡಿಂಡಿಪ್ಪಾಗ – ಒಪ್ಪಣ್ಣ ಸಣ್ಣ ಇಪ್ಪಗ ಮನೆಲಿ ಬಾವಿ ತೆಗದ್ಸು ನೆಂಪಾತು!

~

ಹಳೆಯ ಮುಳಿಮನೆ ಮುರುದು ಹಂಚಿನ ಹೊಸಮನೆ ಕಟ್ಟುವಗ ಬೇರೆಯೇ ಜಾಗೆಲಿ ಕಟ್ಟಿದ್ಸು.
ಹಳೆಮನೆಗೆ ಹತ್ತರೆ ಒಂದು ದೊಡಾ ಕೆರೆ ಇದ್ದತ್ತು. ಒಂದು ಹೊಡೆಂದ ಪಂಪು, ಇನ್ನೊಂದು ಹೊಡೆಂದ ರಾಟೆ – ತೋಟಕ್ಕೂ ಆತು, ಕುಡಿಯಲೂ ಆತು – ಹೇಳಿಗೊಂಡು.
ಸೇಡಿಮಣ್ಣಿನ ಅಡಿ ಆದ ಕಾರಣ ಜೆರುದು ದೊಡಾ ಮಾಟೆ ಆಗಿಂಡಿತ್ತಾಡ, ಹಾಂಗೆ – ಮಕ್ಕೊಗೆ ಅದರ ಹತ್ತರೆ ಹೋಪಲೆ ಅವಕಾಶ ಇದ್ದತ್ತಿಲ್ಲೆ. ಜೆರುದು ಕೆರೆ ನಿಗುದ ಕಾರಣ ಬೇಸಗೆ ಬರೆಕ್ಕಾರೇ ನೀರು ಆರಿಂಡಿತ್ತು; ಮತ್ತೆ ಕೆಳಾಣ ಕೆರೆಯೇ ಗೆತಿ; ಅಲ್ಲಿಂದ ನೀರು ಹೊರ್ಸು.

ಹೊಸಾ ಮನೆ ಆದ ಮತ್ತೆ ಎಲ್ಲದಕ್ಕೂ ದೂರವೇ; ಈ ಕೆರೆಗುದೇ.
ಏನೇ ಆದರೂ, ಕುಡಿವ ನೀರು ಈಶಾನ್ಯದ ಬಾವಿಂದಲೇ ಆಯೇಕು – ಹೇದು ಅಜ್ಜ° ಅಭಿಪ್ರಾಯ ಮಾಡಿದ ಕಾರಣವೂ, ನೀರು ತಪ್ಪಲೆ ದೂರ ಆವುತ್ತು – ಹೇದು ಅಮ್ಮನೂ ಅಭಿಪ್ರಾಯ ಮಾಡಿದ ಕಾರಣವೂ – ಜಾಲಕರೆಲೇ ಒಂದು ಬಾವಿ ತೋಡುಸುತ್ತ ಏರ್ಪಾಡು ಮಾಡಿದವು.
ಇದೆಲ್ಲ ಅರೆಒರಕ್ಕಿಲಿ ಕಂಡ ಹಾಂಗೆ ನೆಂಪಷ್ಟೇ ಒಪ್ಪಣ್ಣಂಗೆ; ಮದಲಾಣ ಕತೆಗೊ ಅಲ್ಲದೋ!

~

ಒಂದು ದಿನ ನೋಡಿಂಡಿದ್ದ ಹಾಂಗೇ ಗೋಡೆಐತ್ತನವು ಬಂದವು.
(ಅಗಳು ತೆಗೆತ್ತ ಐತ್ತ ಅಗಳು ಐತ್ತ ಹೇಳಿಯೂ, ಗೋಡೆ ಕಟ್ಟುತ್ತ ಐತ್ತನ ಗೋಡೆಐತ್ತ ಹೇಳಿಯೂ ನಮ್ಮ ಊರಿಲಿ ಇಬ್ರು ಐತ್ತಂಗೊ!)
ಐತ್ತ ಮಾಂತ್ರ ಅಲ್ಲ, ಚನಿಯ, ತುಕ್ರ, ಚೋಮ, ಅಂಗಾರ – ಎಲ್ಲೋರುದೇ ಒಟ್ಟಿಂಗೇ ಬಂದವು.
ಹೊಸಮನೆಯ ಮಣ್ಣಗೋಡೆಕಟ್ಟುತ್ತ ಸಮೆಯಲ್ಲಿ ಬಂದೋರೇ ಆದ ಕಾರಣ, ಅದಾಗಲೇ ಒಪ್ಪಣ್ಣಂಗೆ ಅವರ ಎಲ್ಲೋರ ಗುರ್ತ ಇತ್ತು!

ಬಾವಿ ಕೆಲಸ ಮಾಡ್ಳೆ ಹೇಳಿಯೇ, ಕೊರಗ್ಗು “ಮಣ್ಣ ಹೆಡಗೆ” ಮಾಡಿ ಕೊಟ್ಟಿದು.
(ಹೆಡಗೆಯ ಮಾದೆರಿ ಬಳ್ಳಿಲಿ ಮಾಡಿದ್ದಾದರೂ; ಮಣ್ಣ ಕೆಲಸಕ್ಕೆ ಉಪಯೋಗುಸುತ್ತ ಕಾರಣ “ಮಣ್ಣ ಹೆಡಗೆ” ಹೇಳುಸ್ಸು! )
ಎರಡು ಪಿಕ್ಕಾಸು, ಎರಡು ಕೊಟ್ಟು, ಒಂದು ಸಬ್ಬಲು, ಹೆಡಗೆಗೊ ಕೊಟ್ಟಂಪಾಳೆ, ಮುಟ್ಟಾಳೆ – ಒಟ್ಟುಮಾಡಿದವು.
ಬಾವಿ ಎಷ್ಟು ಅಗಲ ಬೇಕೋ – ಆ ವ್ಯಾಸದಷ್ಟು ಉದ್ದದ ಸಲಕ್ಕೆ ತಯಾರು ಮಾಡಿಗೊಂಡವು.
ಹಾಂಗೂ ಹೀಂಗೂ ಬೇಕಾದ ಎಲ್ಲವನ್ನೂ ರೂಢಿ ಮಾಡಿಗೊಂಡು, ಬಾವಿಕೆಲಸಕ್ಕೆ ತೆಯಾರು ಮಾಡಿದವು.
~

ಮನೆಯ ಈಶಾನ್ಯ ಖಂಡಲ್ಲಿ ಕುಡಿತ್ತ ನೀರು ಇರೇಕು, ಆದರೆ ಸೀತ ಹೋಗಿ ಬಾವಿ ತೋಡುದೋ? ಬಾವಿ ತೋಡುದು ಹೇಳಿ ಸಿಕ್ಕಿಸಿಕ್ಕಿದಲ್ಲಿ ತೋಡುದೋ? ಅದಕ್ಕೆ ಜಾಗೆ ನೋಡೇಕು.
ಅದೂ ಒಂದು ಕಲೆ! ಅರ್ತೋರು “ನೀರು ಹೇಳುದು” ಹೇಳ್ತವು ಅದರ!
ಸದ್ರಿಪ್ರಕೃತಿಯ ರಚನೆ, ಅಲ್ಯಾಣ ಪುಂಚಂಗಳ ಸಾಂದ್ರತೆ, ಸುತ್ತುಮುತ್ತ ಇಪ್ಪ ತೋಡು – ಹಳ್ಳ – ಹೊಳೆಗೊ ಎಲ್ಲವನ್ನೂ ಗಮನುಸಿಂಡು ಒಂದೊಳ್ಳೆ ಜಾಗೆಯ ಆಯ್ಕೆ ಮಾಡುಗು. (ಹಲವು ಜೆನಂಗೊ ನೀರು ಹೇಳುದರನ್ನೇ ವ್ಯಾಪ್ತಿ ಮಾಡಿಂಡು ನಮ್ಮ ಒಟ್ಟಿಂಗೆ ಜೀವನ ಮಾಡಿಂಡಿದ್ದವು.) ಅದಿರಳಿ.

~
ಹೊಸಮನೆಯ ಜಾಲಕರೆ ಮೂಲೆಲಿ ದಾಸನ ಗೆಡುಗೊ, ಹೂಗಿನ ಗೆಡು ಎಲ್ಲವನ್ನೂ ಕೆರಸಿ ಮನಾರ ಮಾಡಿದವು ಐತ್ತನವು.
ಅಜ್ಜ° ತೋರುಸಿದ ಜಾಗೆಲಿ ವೃತ್ತಾಕಾರಕ್ಕೆ ಗುರ್ತ ಹಾಕಿಂಡು, ಎರಡು ಎಡ್ಡೆಪಾತೆರ ಹೇಳಿಕ್ಕಿ ಗರ್ಪಲೆ ಸುರುಮಾಡಿದವು.
ಇನ್ನು ನೀರು ಸಿಕ್ಕುವನ್ನಾರ ತೋಡುದೇ!
ಒಂದು ಗಟ್ಟಿ ಆಳು ಗಟ್ಟಿಮಣ್ಣಿನ ಪಿಕ್ಕಾಸಿಲಿ ಗರ್ಪುದು, ಬಲಿಷ್ಠ, ನಾಜೂಕಿನ ಒಬ್ಬ° ಸಬ್ಬಲಿಲಿ ಗರ್ಪುದು, ಚುರ್ಕಿನ ಒಬ್ಬ° ಕೊಟ್ಟಿಲಿ ಗರ್ಪಿ ಹೆಡಗ್ಗೆ ತುಂಬುಸುದು, ತ್ರಾಣದವು ಇಬ್ರು ಹೊರುದು!!

ಗರ್ಪುದು ಹೇಳಿಗೊಂಡು ಬೋಚಬಾವ° ಹೊಯಿಗೆ ಒಕ್ಕಿದ ಹಾಂಗೆ ಗರ್ಪುದೋ – ಅಲ್ಲ!
ಅಡಿಯಂಗೆ ಹೋದ ಹಾಂಗೆ, ಬರೆ ನೇರ ಇದ್ದೋ ನೋಡಿಗೊಳೇಕು. ಬಾವಿ ಓರೆ ಹೋಪಲಾಗ ಇದಾ!
ಮೇಗಂದ ಕೆಳ ಒರೆಂಗೆ ಒಂದೇ ನಮುನೆ ವ್ಯಾಸ ಇರೇಕು. ಹಾಂಗಿದ್ದರೇ ಅದಕ್ಕೆ ಶಕ್ತಿ; ನೋಡ್ಳೂ ಚೆಂದ.

ಬೋರ್ವೆಲ್ಲು ಪೈಪಿನ ನಮುನೆ ಸರ್ತ ಗುಂಡಿ ಆದರೆ ಆತಿಲ್ಲೆ, ಗೇಸಿನ ಸಿಲಿಂಡರಿನ ಹಾಂಗೆ ಚಡಿ ಬೇಕು ಅದರ್ಲಿ! 😉
ಎಂತ ಚಡಿ?
ಪ್ರತೀ ಒಂದು ಕೋಲು ಅಳತೆಗೆ ಒಂದು ಗುರ್ತದ ಚಡಿ.
ಅದರ “ಅಂಕರಿಕೆ” ಹೇಳ್ತವು ನಮ್ಮ ಭಾಶೆಲಿ.
ಬಾವಿಯ ಒಳಮೈಲಿ ಎರಡಂಗುಲ ಉಬ್ಬಿದ ವೃತ್ತಾಕಾರದ ಚಡಿ;
ಆಳ ಎಷ್ಟು ಆತು – ಹೇಳಿಗೊಂಡು ಗುರ್ತಕ್ಕೂ ಆವುತ್ತು; ಬಳ್ಳಿಲಿ ನೇತು ಇಳಿತ್ತೋರಿಂಗೆ ಕಾಲಿಂಗೆ ಆಧಾರವೂ ಆವುತ್ತು! ಊರಿನ ಯೇವದೇ ಬಾವಿಗಳ ಒಂದರಿ ಬಗ್ಗಿ ನೋಡಿ – ಈ ಅಂಕರಿಕೆ ಕಾಂಗು!

~

ಶುಬತ್ತೆ ಮಗನ "ವೆಲ್", ಐತ್ತನ "ಗೂ-ವೆಲ್". ಅಂಕರಿಗೆ ಕಾಣ್ತೋ? ಆರ್ಯಾ - ಅಬೇಸ್ ಕೇಳ್ತೋ?

ಗರ್ಪಿ ಗರ್ಪಿ ಮಣ್ಣಿನ ಗುಡ್ಡೆ ಹಾಕಿರೆ ಆತೋ – ಹೊರೆಡದೋ? ಅದುದೇ ಒಂದು ದೊಡ್ಡ ಕೆಲಸವೇ.
ಒಂದು ಭರ್ತಿ ಮಣ್ಣಹೆಡಗೆಲಿ ಭರ್ತಿ ಮಣ್ಣು – ದೂರಕ್ಕೆ ಹೊರೇಕು!

ಭೂಮಿಯ ಮೇಗಾಣ ಮಣ್ಣು ಫಲವತ್ತು ಇಪ್ಪ ಕಾರಣ ಸೆಸಿ ತೋಟಕ್ಕೋ, ನೆಟ್ಟಿಗೆದ್ದೆಗೋ ಮಣ್ಣ ಹಾಕಲಕ್ಕು; ಅಡಿಅಡಿ ಹೋದ ಹಾಂಗೆ ಫಲವತ್ತತೆ ಇರ್ತಿಲ್ಲೆ, ಸತ್ವ ಇರ್ತಿಲ್ಲೆ. ಆ ಮಣ್ಣಿನ ತೋಟದ ಕರೆಂಗೋ, ತೋಡಕರೆಂಗೊ ಮಣ್ಣ ಹಾಕೇಕಟ್ಟೆ!
ಬೆಳಿಬಣ್ಣದ ಸೇಡಿಕಲ್ಲುಗೊ ಇದ್ದರೆ ನೀರಿಲಿ ಕರಡುಸಿ, ಒಣಗ್ಸಿ, ಗಾಳ್ಸಿರೆ ಮಂಡ್ಳ ಹಾಕಲೆ ಉಪಯೋಗ ಅಕ್ಕಷ್ಟೆ. ಅದಿರಳಿ.
ಮಣ್ಣಿನ ತುಂಬ ದೂರಕ್ಕೆ ಹೊರುದಾದರೆ ಒಬ್ಬನೇ ಹೊತ್ತುಗೊಂಡು ಹೋಪದಲ್ಲ, ಎಡೆದಾರಿಲಿ ಇನ್ನೊಬ್ಬಂಗೆ ಪಗರುಸಲೆ ಇದ್ದು. ಹೋಪಗ ಮಣ್ಣೆಡಗೆ ಕೊಂಡೋದರೆ, ಬಪ್ಪಗ ಕಾಲಿ ಹೆಡಗೆ ಹಿಡ್ಕೊಂಡು ಬಕ್ಕು – ಕೈಯಾನ ಕೈ ಪಗರುಸೆಂಡು ವೃತ್ತಾಕಾರಲ್ಲಿ ತಿರುಗೆಂಡಿಕ್ಕು.
ಅಂತೂ – ಈ ಹೊರುವವು ನೆಡದು ನೆಡದು ಎರಡೇ ದಿನಲ್ಲಿ – ತೋಟಕ್ಕೆ ಹೋವುತ್ತ ದಾರಿಯಷ್ಟು ತಳೆತ್ತದು ಕಾಂಗು.

ಬಾವಿ ಸುರುಮಾಡುವಗ ನೆಲಕ್ಕಂದಲೇ ಹೊತ್ತು ತಲೆಲಿ ಮಡಗಲೆ ಎಡಿಗಾರೂ, ಮತ್ತೆ ಮತ್ತೆ ಗುಂಡಿ ಅಡಿಯಂಗೆ ಹೋವುತ್ತಲ್ಲದೋ!
ನಾಕೈದು ಕೋಲು ಗುಂಡಿ ಒರೆಂಗೆ ಬಾವಿಲೇ ಕರೇಲಿ ಮೆಟ್ಳು ಮಾಡುಗು. ಬಾವಿ ಗುಂಡಿ ಆದ ಹಾಂಗೆ ಈ ಮೆಟ್ಳುದೇ ಸುತ್ತಿಸುತ್ತಿ ಕೆಳ ಇಳಿಗು. ಹೆಡಗೆ ಹೊರೆ ಹಿಡ್ಕೊಂಡು ಜಾಗ್ರತೆಲಿ ಮೆಟ್ಳು ಹತ್ತೇಕು, ಇಳಿಯೇಕು.
ತರವಾಡುಮನೆ ಉಪ್ಪರಿಗೆಮೆಟ್ಳಿನ ಹಾಂಗಿಪ್ಪದಲ್ಲ; ಸಪೂರದ್ದು. ಜಾಗ್ರತೆಲಿ ಇಳಿಯಲೆ ದಕ್ಕಿತ.
ಕಾಲು ಜಾರಿರೆ ಹೊಂಡಕ್ಕೆ, ಆದರೆ ಅಷ್ಟು ಗೋಷುಬಾರಿಲಿ ಇಳಿಯಲೆ ವಿದ್ಯಕ್ಕ° ಹೋವುತ್ತಿಲ್ಲೆ ಇದಾ, ಇದರ್ಲಿ 🙂
~

ನಾಕೈದು ಕೋಲು ಗುಂಡಿ ಒರೆಂಗೆ ಮೆಟ್ಳಿಲೇ ಇಳಿವದು ಸುಲಬ ಆದರೂ, ಬಾವಿ ಆರೆಂಟುಕೋಲಿಂದಲೂ ಕೆಳ ಇಳುದ ಮತ್ತೆ ಎಂತ ಮಾಡುದು?
ಪ್ರತೀ ಹೆಡಗೆ ಮಣ್ಣಿನ ಆ ಸಪೂರದ ಮೆಟ್ಳಿಲಿ ಹೊರುದು ಸುಲಬವೋ? ಒಂದು ವೇಳೆ – ಒಂದು ವ್ವೇ-ಳೆ ಕಾಲು ಜಾರಿರೆ, ಕೆಳ ಬಿದ್ದರೆ – ಅಷ್ಟು ಎತ್ತರಂದ ಬಿದ್ದು ಸೊಂಟ ಮುರಿಯದೋ?
ಐತ್ತಂದೇ ಆಗಲಿ, ಚೋಮಂದೇ ಆಗಲಿ, ಸೊಂಟ ಸೊಂಟವೇ ಅಲ್ಲದೋ?!
ಅದಕ್ಕೆ ಇನ್ನೊಂದು ಕೆಣಿ ಇದ್ದು ನಮ್ಮವರ ಹತ್ತರೆ – ರಾಟೆಲಿ ಎಳವದು.

~

ಮಣ್ಣೆಳವದು ಹೇಂಗೆ?
ಜಾತಿಮರದ ಗಟ್ಟಿ ಎರಡು ಕಂಬವ ಬಾವಿಕರೆಂಗೆ ನೆಡುಗು. ಬರೇ ಕಂಬ ಅಲ್ಲ – ಬಾವಿಗಪ್ಪ ಕಂಬ; ಒಂದು ಎಗೆಯ ಬುಡ ಅಲ್ಲಿರೇಕು – ಇಂಗ್ಳೀಶ್ ಅಕ್ಷರದ ವೈ ಬರದ ಹಾಂಗೆ.
ಗಟ್ಟಿ ಬೆದುರೋ – ಎಂತಾರು ಆ ಕಂಬಕ್ಕೆ ಅಡ್ಡ ಹಾಕಿರೆ, ರಾಟೆ ನೇಲುಸಲೆ ಸಮ.
ನಿತ್ಯಕ್ಕೆ ನೀರೆಳೆತ್ತದರಿಂದ ಈ ವೆವಸ್ತೆ ಗಟ್ಟಿ ಬೇಕು, ಎಂತಕೆ ಹೇದರೆ, ಒಂದು ಹೆಡಗೆ ಮಣ್ಣೆಳೇಕಲ್ಲದೋ!

ಮಣ್ಣ ಹೆಡಗೆಯ ಬೆನ್ನಿಂಗೆ ಬಳ್ಳಿಯ ಹೊಲುದು, ಎರಡೂ ಹೊಡೆಲಿ ಕೈಯ ಹಾಂಗೆ ಮಾಡುಗು – ನೇಲುಸಲೆ.
ನೇಲುಸುಸ್ಸು ಎಲ್ಲಿಗೆ? ಕೊಕ್ಕೆಗೆ!
ಹಸಿ ಗೆಲ್ಲಿನ ಬುಡಂದ ಕಡುದು, ಗೆಲ್ಲಿನ ಎಗೆಯ ಕೊಕ್ಕೆಯ ನಮುನೆ ಚೆಂದ ಮಾಡುಗು. (ಕುತ್ತಂಕನ ಕೋಲು / ಕುತ್ತಂಕೋಲಿನ ನಮುನೆ ಕೊಕ್ಕೆ).
ಹೀಂಗಿರ್ಸ ಎರಡು ಕೊಕ್ಕೆಯ ಬಾವಿಗೆ ಇಳುಶಿದ ಬಳ್ಳಿಯ ಕೊಡಿಯಂಗೆ ಗಟ್ಟಿಗೆ ಕಟ್ಟುಗು. ಈ ಎರಡು ಕೊಕ್ಕೆಗೊ – ಹೆಡಗೆಗೆ ಸುರುದ ಬಳ್ಳಿಗೆ ಸಿಕ್ಕುಸಲೆ ಇಪ್ಪದು.
ಹೆಡಗೆಯ ಕೈಯ ಹತ್ತರೆ ಆಗಿ ಎರಡು ಬಳ್ಳಿಯ ಕೈ. ಬಳ್ಳಿಯ ಆ ಕೈಗೆ ಎರಡು ಕೊಕ್ಕೆ ಸಿಕ್ಕುಸುದು; ಆ ಕೊಕ್ಕೆ ಬಾವಿಬಳ್ಳಿಗೆ ಕಟ್ಟಿಂಡಿರ್ತಲ್ಲದೋ – ಈಗ ಬಾವಿಬಳ್ಳಿ ಎಳದರೆ ಹೆಡಗೆ ಮನಾರಕ್ಕೆ ಬತ್ತು. ಎರಡೂ ಹೊಡೆಂದ ಹಿಡಿತ್ತ ಇದ್ದ ಕಾರಣ ಅಳಂಚಲೂ ಇಲ್ಲೆ, ಚೆಲ್ಲಲೂ ಇಲ್ಲೆ! ಅನುಭವಸ್ಥರು ಇಷ್ಟು ಮಾಡಿಂಡ್ರೆ, ಮುಂದಾಣದ್ದೆಲ್ಲ ಭಾರೀ ಸ್ಪಷ್ಟ.
~

ಬಾವಿಂದ ನೀರೆಳವಲೆ ಒಬ್ಬಂಗೇ ಎಡಿಗು, ಆದರೆ ಮಣ್ಣೆಳವಲೆ ಎಡಿಗೋ? ಎಡಿಗಾರೂ – ದಿನ ಇಡೀ ಎಡಿಗೋ? ಬಾವಿ ತೆಗದು ನೀರು ಸಿಕ್ಕುವನ್ನಾರ ಎಡಿಗೋ? ಎಡಿಯಪ್ಪಾ!
ಅದಕ್ಕೆ, ಮಣ್ಣಿನ ಎಳವದರ್ಲಿಯೂ ಒಂದು ಹಿಕ್ಮತ್ತು ಇದ್ದು. ಬಾವಿಬಳ್ಳಿಯ ಒಂದು ಹೊಡೆಂಗೆ ಕೊಕ್ಕೆ ಕಟ್ಟಿ ಕೆಳಂಗೆ ಇಳುಶುತ್ತಲ್ಲದೋ – ಇನ್ನೊಂದು ಹೊಡೆಯ – ಉದ್ದದ ಕೊದಂಡಿಯ ಮಧ್ಯಕ್ಕೆ ಕಟ್ಟುದು.
ಮಧ್ಯಲ್ಲಿ ಬಳ್ಳಿ ಕಟ್ಟಿದ್ದರ ಎಡ, ಬಲ ಹೊಡೆಲಿ ಒಬ್ಬೊಬ್ಬ ನಿಂದುಗೊಂಬಷ್ಟು ಸ್ಥಳಾವಕಾಶ ಇರ್ತು; ನೇಗಿಲಿಂಗೆ ಕಟ್ಟಿದ ಹೋರಿಗಳ ಹಾಂಗೆ.
ಪ್ರತಿ ಸರ್ತಿ ಮಣ್ಣು ಎಳೇಕಾದಪ್ಪಗ ಈ ಇಬ್ರು ಕೊದಂಟಿಯ ಹಿಡ್ಕೊಂಡು ಬಾವಿಂದ ದೂರ ನೆಡಕ್ಕೊಂಡು ಹೋಪದು. ಅವು ದೂರ ಹೋದ ಹಾಂಗೆ, ಬಳ್ಳಿಯನ್ನೂ ಎಳಕ್ಕೊಳ್ತ ಕಾರಣ – ರಾಟೆ ತಿರುಗಿ, ಮಣ್ಣು ತುಂಬಿದ ಹೆಡಗೆ ಮೇಗೆ ಬತ್ತು.

ಮಣ್ಣು ಹೊರ್ಲೆ ಹೇಂಗಾರೂ -ಆಗಾಣ ಜೆನಂಗೊ ಇದ್ದವನ್ನೇ!

~
ಬಾವಿಯ ಒಳದಿಕೆ ಪಿಕ್ಕಾಸು, ಸಬ್ಬಲು ಹಿಡುದೋರು ಮಾಡಿದ ಹೊಡಿಮಣ್ಣಿನ ಒಬ್ಬ ಹೆಡಗೆಲಿ ತುಂಬುಸಲೆ. ಮೇಗೆ ಇಬ್ರು ಎಳವಲೆ!
ತುಂಬುಸುತ್ತೋನಿಂಗೆ ತುಂಬುಸಿ ಆತು ಹೇದು ಎಳೆತ್ತೋರಿಂಗೆ ಗೊಂತಾವುಸ್ಸು ಹೇಂಗೆ? ಅವಕ್ಕೆ ಅತ್ತಿತ್ತೆ ಕಾಣ್ತೋ?
ಎಳೆತ್ತೋರು ಬಾವಿಂದ ದೂರ ನೆಡವಗ, ಅವು ಎಳೆತ್ತ ಹೆಡಗೆ ಮೇಗಂಗೆ ಎತ್ತಿತ್ತೋ ಗೊಂತಪ್ಪದು ಹೇಂಗೆ?
ಮೇಗೆ ಬಂದ ಹೆಡಗೆಯ ಇಳಿಶುತ್ತು ಆರು? – ಆ ಕೆಲಸಕ್ಕೆ ಬೇಕಾಗಿ ರಾಟೆಯ ಬುಡಲ್ಲಿ – ಕಂಟ್ರೋಲು ಮಾಡ್ಳೆ – ಒಬ್ಬ° ಜೆನ ನಿಂದುಗೊಳ್ತ°!

~
ಇಲ್ಲಿ ಮುಖ್ಯವಾಗಿ ನೋಡೇಕಾದ್ಸು ನಾವು – ಅಷ್ಟೋ ಜೆನರ ಪರಸ್ಪರ ಹೊಂದಾಣಿಕೆ.

ಬಳ್ಳಿಯ ಕೊಕ್ಕಗೆ ಕಾಲಿ ಹೆಡಗೆಯ ಸಿಕ್ಕುಸಿ ಬಾವಿ ಒಳಂಗೆ ಬಿಡುಗು – ರಾಟೆಯ ಹತ್ತರೆ ನಿಂದ ಜೆನ.
ಕೊದಂಟಿ ಹಿಡ್ಕೊಂಡ “ಮಣ್ಣೆಳವ” ಜೆನಂಗೊ ನಿಧಾನಕ್ಕೆ ಬಾವಿಯ ಹತ್ತರೆ ಬಂದ ಹಾಂಗೇ, ಕಾಲಿ ಹೆಡಗೆ ಹೊತ್ತ ಕೊಕ್ಕೆ ಕೆಳ ಇಳಿಗು. ಈಗಾಗಲೇ ಒಂದು ಹೆಡಗೆಲಿ ತುಂಬುಸಿ ಆಗಿರ್ತು, ತುಂಬುಸುತ್ತ ಮನಿಶ್ಶಂಗೆ.
ಕೊಕ್ಕೆಂದ ಕಾಲಿ ಹೆಡಗೆ ತೆಗದು ಮಡಿಕ್ಕೊಂಡು, ಮಣ್ಣಿನ ಹೆಡಗೆಯ ಬಳ್ಳಿ ಸಿಕ್ಕುಸುಗು.
ಕೊಕ್ಕೆ ಗಟ್ಟಿಗೆ ಕಚ್ಚಿಗೊಂಡತ್ತೋ – ಪುನಾ ಒಂದರಿ ಧೃಡ ಮಾಡಿಗೊಂಡು ತುಂಬುಸಿದ ಮನಿಶ್ಶ ಬಾವಿ ಒಳಂದಲೇ ಅಬೇ..ಸ್ ಹೇಳುಗು – ಜೋರಾಗಿ!
ಜೋರು ಹೇಳುಸ್ಸು ಎಂತಕೆ? – ಮೇಗೆ ರಾಟೆಯ ಹತ್ತರೆ ನಿಂದ ಮನಿಶ್ಶಂಗೂ, ಮಣ್ಣು ಎಳೆತ್ತ ಮನುಶ್ಯರಿಂಗೂ ಕೇಳೇಕಿದಾ.

“ಅಬೇಸ್” ಕೇಳಿದ ಕೂಡ್ಳೇ ಮಣ್ಣು ಎಳವ ಇಬ್ರುದೇ ಸೇರಿ ಎಳೇಕು – ಜೋಡಿ ಎತ್ತಿನ ಹಾಂಗೆ,
ಅವಕ್ಕೆ ಒಂದೇ ರಭಸಲ್ಲಿ, ಒಂದೇ ಎತ್ತರಲ್ಲಿ ಎಳೇಕು.
ಅವು ಎಳಕ್ಕೊಂಡು ಹೋದ ಹಾಂಗೇ, ಮಣ್ಣ ಹೆಡಗೆ ಮೇಲೆ- ಮೇಲೆ ಹೋಕು; ರಾಟೆ ಚರಚರ ಶಬ್ದವೂ ಮಾಡುಗು.
ಎಳೆತ್ತವು ಅಂಬೆರ್ಪು ಮಾಡಿರೆ ಹೆಡಗೆಂದ ಕಲ್ಲು-ಮಣ್ಣು ಕೆಳ ಉದುರುಗು; ಕೆಳ ಕೆಲಸ ಮಾಡ್ತೋರ ಮೇಗಂಗೆ ಬೀಳುಗು – ಹಾಂಗಾಗಿ ನಿಧಾನಕ್ಕೆ ಎಳೇಕು!
ಎಳದು ಎಳದು – ರಾಟೆಯ ಹತ್ತರೆ ಎತ್ತಿತ್ತು ಹೇಳಿ ಅಪ್ಪಗ – ಅಲ್ಲಿ ನಿಂದ ಮನಿಶ್ಶ ಅದರ ಆದರುಸಿ ನೆಲಕ್ಕಂಗೆ ಮಡಗೆಕ್ಕಪ್ಪೋ.
ಅದರಿಂದಲೂ ಮದಲು ಎಳೆತ್ತೋರ ನಿಂಬಲೆ ಹೇಳೇಕು – ಗಟ್ಟಿಗೆ “ಆರ್ಯಾ..” ಹೇಳುಗು.
ಹೆಡಗೆಯ ಇಳುಸಿ, ಕೊಕ್ಕೆ ಬಿಡುಸಿ, ಮಣ್ಣು ಹೊರ್ತೋನ ತಲಗೆ ಮಡಗ್ಗು. ಮಣ್ಣು ಹೊರ್ತವ ತಂದ ಕಾಲಿ ಹೆಡಗೆಯ ಪುನಾ ಕೊಕ್ಕೆಗೆ ಸಿಕ್ಕುಸಿ ಬಾವಿಗೆ ಇಳುಸುಗು. ಮಣ್ಣೆಳೆತ್ತೋರು ಪುನಾ ಬಾವಿ ಹತ್ತರಂಗೆ ಬತ್ತವು. ಪುನಾ ಇನ್ನೊಂದು ಹೆಡಗೆ..
ಅಬೇಸ್… ಮಣ್ಣೆಳವದು, ರಾಟೆ ಚರಚರ ಮಾಡುದು, ಹೆಡಗೆ ಮೇಗೆ ಬಪ್ಪದು.. ಆರ್ಯಾ.. ಎಳೆತ್ತೋರು ನಿಂಬದು. ಹೆಡಗೆ ಇಳುಸುದು; ಮಣ್ಣು ಹೊರುವವನ ತಲಗೆ ಮಡಗುದು, ಅವ ತಂದ ಕಾಲಿ ಹೆಡಗೆಯ ಪುನಾ…

ಬಾವಿ ಕೆಲಸ ಅಪ್ಪನ್ನಾರವೂ ಇದೊಂದು ವೃತ್ತಾಕಾರ.

ಆಚೀಚ ಮನೆಗೆ ಈ ಆರ್ಯಾ- ಒಬೇಸ್ ಮಾಂತ್ರ ಕೇಳುಗಷ್ಟೆ 🙂
ಆ ಎರಡು ವಿಚಿತ್ರ ಶಬ್ದಂಗೊ ಬಾವಿ ಕೆಲಸಲ್ಲಿ ಮಾಂತ್ರ ಕೇಳುಗಷ್ಟೆ; ಆ ಎರಡು ಶಬ್ದಂಗೊ ಮಾಂತ್ರ ಕೇಳ್ತರೆ ಬಾವಿ ಕೆಲಸ ಮಾಡ್ತಾ ಇದ್ದವು ನಿಘಂಟೇ.

ಅದರ ಅರ್ತ ಎಂತರ, ಆ ಶಬ್ದಂಗಳ ಮೂಲ ಎಂತರ – ಉಮ್ಮ, ನವಗರಡಿಯ.
ಆದರೆ, ಬಾವಿಕೆಲಸಕ್ಕೆ ಹೋವುತ್ತ ಎಲ್ಲೋರುದೇ ಅದೇ ಶಬ್ದವ ಬಳಸಿಗೊಳ್ತವು. ಅದೊಂದು “ಸೂಚಿ”.

~

ಅದೊಂದು ಶುಭಗಳಿಗೆ.
ಹತ್ತು-ಹನ್ನೆರಡು ಕೋಲು ಹೋಪಗ ನೀರಿನ ಪಸೆ ಕಾಂಬಲೆ ಸಿಕ್ಕುಗು! ಅಷ್ಟೂ ಹೊತ್ತು ನೀರಿನ ಸುಳಿವೂ ಕೊಡದ್ದ ಭೂಮಾತೆ ಒಂದರಿಯೇ ಗಂಗಾಮಾತೆಯ ತೋರುಸಿಕೊಡುಗು! ಅಪ್ಪು, ಸುರೂವಿಂಗೆ ಸಿಕ್ಕಿದ ನೀರಿನ “ಗಂಗೆ” ಹೇಳುದು.

ಮಣ್ಣೆಡೆಂದ ತಂಪು ನೀರು ಒರತ್ತೆ ಆಗಿ ಹರುದು ಬಕ್ಕು. ಮಣ್ಣಿನ ಎಡೆಂದಲೇ ಬತ್ತರೂ ಕಲಂಕಿಲ್ಲದ್ದೆ ಶುಭ್ರವಾಗಿ, ಖನಿಜ ಲವಣಯುಕ್ತವಾದ ಪರಿಶುದ್ಧವಾದ ನೀರಿನ ಒದಗುಸುತ್ತ ಭೂಮಾತೆ ನಿಜವಾಗಿಯೂ ಅಬ್ಬೆಯೇ!
~

ಒರತ್ತೆಲಿ ಎರಡು ವಿಧ.
ಅಡಿ ಒರತ್ತೆ, ಅಡ್ಡ ಒರತ್ತೆ – ಹೇದು.
ಹೆಸರೇ ಹೇಳ್ತ ಹಾಂಗೆ, ಬಾವಿಯ ಗುಂಡಿಯ ಅಡಿಯಂದ, ಲಂಬವಾಗಿ ಮೇಗೆ ಬಪ್ಪ ಒರತ್ತೆಯ ಅಡಿಒರತ್ತೆ ಹೇಳುದು.
ಬಾವಿ ಅಡಿಯಂಗೆ ಹೋದ ಹಾಂಗೆ ಈ ಒರತ್ತೆಯೂ ಅಡಿಯಂಗೇ ಹೋಕಷ್ಟೆ ವಿನಃ, ನೀರು ಬಪ್ಪದು ಹೆಚ್ಚಾಗ.
ಬಾವಿಯ ಬರೆಂದ (ಗೋಡೆಂದ) ಒಸರುವ ಒರತ್ತೆಗೆ ಅಡ್ಡ ಒರತ್ತೆ ಹೇಳುದು.
ಬಾವಿ ಗುಂಡಿ ಆದ ಹಾಂಗೇ ಈ ಒರತ್ತೆಯ ಮಟ್ಟಕ್ಕೆ ನೀರು ನಿಲ್ಲುತ್ತ ಕಾರಣ ಇದು ತುಂಬಾ ಉಪಕಾರಿ ಒರತ್ತೆ.
ಅಡಿ ಒರತ್ತೆ ಇದ್ದರೆ ನೀರಾರ. ಅಡ್ಡ ಒರತ್ತೆ ಇದ್ದರೆ ನೀರು ಇಳಿಯ.
ಒಳ್ಳೆ ಬಾವಿಲಿ ಎರಡೂ ಒರತ್ತೆಗೊ ಬೇಕಡ; ಆಚಮನೆ ದೊಡ್ಡಪ್ಪ° ಹೇಳುಗು.

~

ಅದೇನೇ ಇರಳಿ; ಸುರೂವಾಣ ಒರತ್ತೆಯ ಸಂಗ್ರಹ ಮಾಡಿ, ಆ ನೀರಿನ ಒಂದು ಚೆಂಬಿಲಿ ಹಿಡುದು, ಹೆಡಗೆಲಿ ಮಡಗಿ, ಜಾಗ್ರತೆಲಿ ಮೇಲೆಳದು – ಆ ನೀರಿಲಿ ಒಂದು ಶರ್ಬತ್ತು ಮಾಡಿ ಅಲ್ಲಿಪ್ಪೋರಿಂಗೆ ಎಲ್ಲೋರಿಂಗೂ ಕೊಡುಗು.
ಅಮ್ಮು ಪೂಜಾರಿಯಲ್ಲಿ ಬಾವಿಲಿ ನೀರು ಸಿಕ್ಕುವಗ ಎಲ್ಲೋರಿಂಗೂ ಕಳ್ಳು ಕೊಟ್ಟಿದವು; ಅದು ಬೇರೆ ಶರ್ಬತ್ತು! 😉

~

ಮಾತಾಡಿಂಡು ಹೋದ ಹಾಂಗೆ ಬಾವಿ ಕೆಲಸಲ್ಲಿ ಎಷ್ಟೂ ಸ್ವಾರಸ್ಯ ಸಿಕ್ಕುತ್ತು. ಇನ್ನೂ ಇಪ್ಪದರ ನಿಧಾನಕ್ಕೆ ಮಾತಾಡುವೊ°.
ಈಗ ಈ ಶುದ್ದಿ ನೆಂಪಾದ್ಸು ಆಚಮನೆ ಬಾವಿಯ ಕೆಲಸ ನೋಡ್ಳೆ ಹೋದ್ಸಕ್ಕೆ.
ಎಲ್ಲೇ ಆಗಿರಲಿ, ಈ ಇಡೀ ಬಾವಿಕೆಲಸ ಹೊಂದಾಣಿಕೆಯ ಪ್ರತೀಕ ಅಲ್ಲದೋ – ಹೇಳಿ ಕಾಂಬದು ಒಪ್ಪಣ್ಣಂಗೆ.
ಹೆಡಗ್ಗೆ ತುಂಬುಸುತ್ತೋನು, ಆ ಹೆಡಗೆ ಎಳೆತ್ತೋನು; ಹೆಡಗೆ ಹೊರ್ತೋನು, ಹೆಡಗೆ ಇಳಿಶುತ್ತೋನು – ಎಲ್ಲೋರುದೇ ಸಮಯಕ್ಕೆ ಸರಿಯಾಗಿ ಸೇರಿಗೊಂಡು; ದೊಡ್ಡದೊಂದು ಒಟ್ಟೆ ತೆಗದು, ಗಂಗಾಮಾತೆಯ ಒಲುಸಿಗೊಳ್ತವು.
ಇವಿಷ್ಟು ವಿಭಾಗಲ್ಲಿ ಯೇವದಾರು ಒಂದು ವಿಭಾಗ ಕೈ ಕೊಟ್ರೂ ಪೂರ್ತಿ ಕೆಡಗ್ಗು.

ನಮ್ಮ ಜೀವನಲ್ಲಿಯೂ ಹಲವು ಜೆನಂಗೊ ನಮ್ಮ ಒಟ್ಟಿಂಗೆ ಬದ್ಕುತ್ತವು. ಎಲ್ಲೋರುದೇ ಸೇರಿಂಡು ಹೊಂದಾಣಿಕೆ ಮಾಡಿಂಡು ಮಣ್ಣು ಹೊರ್ತದೇ ಜೀವನ. ಹೆಚ್ಚಾದಲ್ಲಿ ಕೆತ್ತಿ, ಕಮ್ಮಿ ಆದಲ್ಲಿ ಮೆತ್ತಿಂಡು – ಇನ್ನೊಬ್ಬನನ್ನೂ ಕೂಡಿಂಡು ಮುಂದುವರಿತ್ತದೇ ಜೀವನ. ಅಲ್ಲದೋ?

ಜೀವನಲ್ಲಿ ಮುಂದೆ ಹೋಪಲೆಡಿಯದ್ದೆ ಕೈಕ್ಕಾಲು ಕಟ್ಟಿದ ಹಾಂಗೆ ಆದರೆ, ಒಂದರಿಂಗೆ ತಾಂಗಿ “ಅಬೇಸ್” ಹೇಳುವಂತೋರು; ದಾರಿ ತಪ್ಪಿದಲ್ಲಿ “ಆರ್ಯಾ” ಹೇಳಿ ನಿಲ್ಲುಸಿ, ತಪ್ಪು ತೋರುಸಿಕೊಟ್ಟು ತಿದ್ದಿ ಒಳ್ಳೆ ದಾರಿಗೆ ಕೊಂಡು ಹೋವುತ್ತೋರು ನಮ್ಮ ಆತ್ಮೀಯರಾಗಿದ್ದರೆ ಎಷ್ಟು ದೊಡ್ಡ ಬಾವಿ ಬೇಕಾರೂ ತೋಡಿ ನೀರು ತೆಗವಲೆ ಎಡಿಗು.
ಎಂತ ಹೇಳ್ತಿ?

ಒಂದೊಪ್ಪ: ಈಗ ಬೋರುವೆಲ್ಲಿನ ಮಿಶನುಗಳ ಹರಟೆಗೆ “ಆರ್ಯಾ”ವೂ ಕೇಳ “ಅಬೇಸ್”ದೇ ಕೇಳ, ಅಲ್ಲದೋ?

17 thoughts on “ಆರ್ಯಾ – ಅಬೇಸ್… ಬೇಸಗೆಲಿ ಬಾವಿ ತೋಡುವ ಶುದ್ದಿ…

  1. ಸಣ್ಣ ಇಪ್ಪಗ ಕೇಳಿದ ಈ ಶಬ್ದಂಗಳ, ಕೆಲಸದವು ದೊಡ್ಡಾಕ್ಕೆ ಹೇಳುವ ಹಾಂಗೆ ಎಂಗಳೂ ಅನುಕರಣೆ ಮಾಡಿಯೊಂಡಿದ್ದದೆಲ್ಲ ನೆಂಪಾತು ಒಪ್ಪಣ್ಣ. ಬಾಲ್ಯದ ಕ್ಷಣಂಗೊ, ಅಪ್ಪಚ್ಚಿಯಕ್ಕಳ ಒಟ್ಟಿಂಗೆ ತೋಟಕ್ಕೆ, ಬಾವಿ ತೋಡುವಲ್ಲಿಗೆಲ್ಲ ಹೋಗಿಯೊಂಡಿದ್ದದೆಲ್ಲ ನೆಂಪಾತು. ಲಾಯಿಕದ ಶುಧ್ಧಿ ಯಾವತ್ತಿನಂತೆ…. ನಾಳೆಯ ಶುಧ್ಧಿಗೆ ಕಾಯ್ತೆ,
    ~ಸುಮನಕ್ಕ….

  2. ಸಣ್ಣ ಇಪ್ಪಗ ಬಾವಿ ತೋಡೊದರ, ಸೊರಂಗ ಮಾಡೊದರ ನೋಡಿದ್ದು ನೆಂಪಾತು! ದೊಡ್ಡ ರಜೆಲಿ ಕೊಟ್ಟು, ಪಿಕ್ಕಾಸು ತೆಕ್ಕೊಂಡು ಸೊರಂಗ, ಬಾವಿ ತೋಡುವ ಸಾಹಸಕ್ಕೆ ಹೆರಟದೂ ನೆಂಪಾತು! ಆ ಚಿತ್ರ ಮಸುಕು ಮಸುಕಾಗಿ ಈಗಳೂ ಕಾಣುತ್ತು!

    ಈಗ ಹಾಂಗಿಪ್ಪ ಕೆಲಸ ಎಲ್ಲಿ ನೋಡ್ಳೆ ಸಿಕ್ಕುತ್ತು? ಆಚಮನೆಲಿ ಬಾವಿ ತೋಡುವ ಕೆಲಸ ನೋಡಿದ ಒಪ್ಪಣ್ಣ ಬರೀ ಮಾತಿಲ್ಲೇ ಅದರ ವೀಡಿಯೋ ತೋರಿಸಿದ!!

  3. ನೀರು ನೋಡೊದರಿ೦ದ ಹಿಡುದು ಭಾವಿ ತೋಡುವವರೆಗೆ– ಓದಿಗೊ೦ಡು ಹೋದ ಹಾ೦ಗೆ ಬಾಲ್ಯದ ಆ ದಿನ೦ಗೊ ಕಣ್ಣ ಮು೦ದೆ ಕಟ್ಟಿತ್ತು.ಬಾವಿ೦ದ ಮಣ್ಣು ಬಲುಗಿದ್ದು ನೆ೦ಪಾತು, ಸೊರ೦ಗ೦ದ ಮರದ ಮರಿಗೆಲಿ ಮಣ್ಣು ಎಳದ್ದೂ ನೆ೦ಪಾತು!
    ಈಗ ಅ೦ತರ್ಜಲದ ಮಟ್ಟ ಇಳುದೂ ಇಳುದೂ “ಅಬೇಸೂ” ಇಲ್ಲೆ “ಆರ್ಯವೂ” ಕೇಳ್ತಿಲ್ಲೆ..
    ಹೊ೦ದಾಣಿಕೆಯ ಜೀವನಸ೦ದೇಶದ ಈ ಶುದ್ದಿ ಕೊಶಿ ಕೊಟ್ಟತ್ತು ಒಪ್ಪಣ್ಣಾ.

  4. ಬಾವಿ ತೋಡುವದು, ಮರ ಎಳವದು ಹೀಂಗಿಪ್ಪ ಕೆಲಸಂಗೊ ಪರಸ್ಪರ ಸಹಕಾರಲ್ಲಿ ತುಂಬಾ ಚೆಂದಕೆ ಮಾಡುವದರ ನೋಡುವದೇ ಕೊಶಿ. ಅಲ್ಲಿ ಅವು ಹೇಳ್ತ ಶಬ್ದಂಗೊಕ್ಕೆ ಶಬ್ಧಾರ್ಥ ಇದ್ದೋ ಇಲ್ಲೆಯೋ ಗೊಂತಿಲ್ಲೆ. ಆದರೆ ಅವಕ್ಕೆಲ್ಲಾ ಅರ್ಥ ಅಗಿ ಹೊಂದಾಣಿಕೆ ಮಾಡಿಗೊಂಬಲೆ ಇಪ್ಪ ಶಭ್ದಂಗೊ ಹೇಳಿ ಹೇಳ್ಲಕ್ಕು.
    ಎಂಗಳಲ್ಲಿ ಬಾವಿ ತೋಡುವಾಗ ಆನು ಹೇಳಿದೆ “ಎನಗೆ ಅಂಕರಿಕೆ ಇಪ್ಪ ಬಾವಿ ಆಯೆಕ್ಕು” ಹೇಳಿ.
    ಅದು ಎಂಗೊಗೆ ಅರಡಿತ್ತಿಲ್ಲೆ ಹೇಳಿ ಒಪ್ಪಿಗೊಂಡವು. ಇಲ್ಲಿ ಕೆಲಸ ಮಾಡ್ತವಕ್ಕೆ ಅದರ ಅನುಭವವೇ ಇಲ್ಲೆ.
    ಬಾವಿ ತೋಡುವ ನೈಜ ಚಿತ್ರಣ ಲಾಯಿಕ ಆಯಿದು.
    ಹೊಂದಾಣಿಕೆ ಇಲ್ಲದ್ದೆ ಗ್ರೂಪಿಲ್ಲಿ ಕೆಲಸ ನಡೆಯ. ಬೋಂಬೇ ಡಬ್ಬಾವಾಲಾಂಗಳದ್ದು ಇದೇ ರೀತಿ ಇನ್ನೊಂದು ಹೊಂದಾಣಿಕೆಗಳ ವೆವಸ್ಥೆ. ಅನಕ್ಷರಸ್ತರಾದರೂ, ಯಾವದೇ ತಪ್ಪು ಮಾಡದ್ದೆ, ಎತ್ತೆಕ್ಕಾದಲ್ಲಿಗೆ ಸರಿಯಾದ ಸಮಯಕ್ಕೆ ಎತ್ತುಸುವ ಅವರ ಕಾರ್ಯ ವೈಖರಿ ಅದ್ಭುತ.

  5. ಅದಾ ಬಾವಿ ತೆಗವದು ಹಳೆ ಕಾಲದ್ದು ನೆಂಪು ಆತಿದಾ ..ಈಗ bore well ತೆಗವದೆ ಕಾಂಬಲೆ ಸಿಕ್ಕುತ್ತಷ್ಟೇ

  6. ಭಾವಿಯ ವಿಷಯ ಕೇಳುವಗ ಸಣ್ಣಾದಿಪ್ಪಗ ವಿಲ್ಲಿಯರ್ಸ ಪಂಪಲಿ ನೀರು ಎಳೆತದು ನೆನಪ್ಪಾವುತ್ತು.
    ವಿಲ್ಲಿಯರ್ಸು ಪಂಪ್ ಹೇಳಿದರೆ, ಅದಕ್ಕೆ ಎರಡು ಟಾಂಕ್ ಇಕ್ಕು, ಒಂದರಲ್ಲಿ ಪೆಟ್ರೋಲ್, ಇನ್ನೊದರಲ್ಲಿ ಚಿಮಿಣಿ ಎಣ್ಣೆ. ಸುರುವಿಲಿ ಪೆಟ್ರೋಲ್ ನೋಬ್ ನ ಬಿಟ್ಟು ಪಂಪು ಸ್ಟಾರ್ಟ್ ಆದ ಮೇಲೆ ಚಿಮಿಣಿ ಎಣ್ಣೆ ನೋಬಿಂಗೆ ತಿರುಗುಸೆಕ್ಕು, ಅದು ಸ್ಟಾರ್ಟ್ ಆಯೆಕ್ಕಾರೆ ಅದಕ್ಕೆ ದಾರ ಸುಂದಿ ಎಳೆಯಕ್ಕು, ಬಾವಿಗೆ ಜೋಡಿಸಿದ ಪೈಪಿಲಿ ನೀರು ಇರೆಕ್ಕು, ಬಾವಿಂದ ನೀರು ಕೊಡಪ್ಪಾನಲ್ಲಿ ತಂದು ನೀರು ಐದಾರು ಕೊಡಪ್ಪಾನ ಎರದು, ದಾರ ಸುಂದಿ ಒಂದು ಐವತ್ತು ಸರ್ತಿ ಎಳದಪ್ಪಗೆ ಪಂಪ ಸ್ಟಾರ್ಟ್ ಅಕ್ಕು, ಆದ್ರೆರೆ ಅಷ್ಟಪ್ಪಗ ಪೈಪಿನ ನೀರು ಖಾಲಿ ಅಕ್ಕು. ಪುನಃ ಪುಂಪು ನಿಲ್ಲಿಸಿ ನೀರು ಎರವದು, ನೀರು ತುಂಬಿ ಅಪ್ಪಗೆ ಪಂಪ ಸ್ತಾರ್ಟ ಆಗ. ಒಂದು ಐವತ್ತು ಸರ್ತಿ ಎಳದು ಸ್ಟಾರ್ಟ್ ಅಪ್ಪಗ ಪುನಃ ಪೈಪಿನ ನೀರು ಖಾಲಿ ಅಪ್ಪದು, ಕೊನೆಗೆ ನೀರು ನಿಂಬಲೆ ಗಟ್ಟಿ ಸಗಣವ ಕಲಸಿ ಸುರುವಿಲಿ ಎರದು ನಂತರ ಐದಾರು ಕೊಡಪ್ಪಾನ ನೀರು ಎರದು ಅಂತೂ ನೀರು ಮೇಲೆ ಬತ್ತ ಹೊತ್ತಿಂಗೆ ಈಚೋನು ಪಡ್ಚ!

    1. ಗಣೇಶ ಸುಂದರಣ್ಣಂಗೆ ಆತ್ಮೀಯ ಸ್ವಾಗತ. ಪೈಪಿಂಗೆ ಸಗಣ ನೀರು ಹಾಕುವ ವಿಷಯ ಲಾಯಕಾಯಿದು. ಫ್ಲುಟ್ ವಾಲ್ವ್ (ಅಂಬಗ ಫುಟ್ ಬಾಲ್ ಹೇಳ್ತದು) ಸರೀ ಮುಚ್ಚದ್ದೆ ಅಪ್ಪಗ ಅದಕ್ಕೆ ಕೋಲಿಲ್ಲಿ ಕುತ್ತುವಗ ಮಲಂಪು ನೀರು ರಟ್ಟುವದುದೆ ನೆಂಪಾತು. ಗಣೇಶಣ್ಣನ ಒಪ್ಪಂಗೊ, ಶುದ್ದಿಗೊ ಬತ್ತಾ ಇರಳಿ.

  7. ಭಾರೀ ಲಾಯಕ ಆಯ್ದು ಶುದ್ದಿ.
    ಮನೆಲಿ ಬಾವಿ ತೆಗದು ನೀರು ಸಿಕ್ಕಿಪ್ಪಗ ಆಳುಗೋ ಶರಬತ್ತು ಮಾಡಿ ಕೊಟ್ಟದು ನೆಮ್ಪಾತು.
    ಅಬೇಸ್ ಆರ್ಯಾ ಶುದ್ದಿಗೆ ಭೇಷ್.

  8. ಶುದ್ದಿ ಭಾರೀ ಪಸ್ತಾಯಿದು ಒಪ್ಪಣ್ಣಾ..ಧನ್ಯವಾದ೦ಗೊ.

  9. ಬಾವಿ ತೋಡುವ ಸಮಯದ ಪ್ರತಿಯೊಂದು ಕ್ಷಣವನ್ನು ಎಳೆ ಎಳೆಯಾಗಿ ಬಿಡುಸಿ ಮಡಗಿದ ಒಪ್ಪಣ್ಣನ ಶುದ್ದಿ ಅದ್ಭುತ. ಪ್ರತಿಯೊಂದು ವಿಷಯವನ್ನುದೆ ನೆಂಪು ಮಾಡ್ಯೊಂಡು ಬರದ್ದದರ ಮೆಚ್ಚಲೇ ಬೇಕು. ಬಾವಿ ತೋಡುವಾಗಿನ ಹೊಂದಾಣಿಕೆ, ಸ್ನೇಹಂಗಳ ಜೀವನಲ್ಲಿಯುದೆ ಅಳವಡಿಸೆಂಡರೆ ಜೀವನ ನಿಜವಾಗಿಯೂ ಸಾರ್ಥಕ ಅಕ್ಕು. ಸಣ್ಣದಿಪ್ಪಗ ಕೆರೆಂದ “ಮಲಂಪು” ತೆಗವಲೆ, ಹೆಡಗೆ ಎಳವಲೆ, ಬಾವಿ ಬಳ್ಳಿಗೆ ಕಟ್ಟಿದ “ಕುಟ್ಟಾರೆ ತಳ್ಳೆ”ಯ ಅಣ್ಣನ ಒಟ್ಟಿಂಗೆ ಹಿಡುದು ಎಳದ್ದದು ನೆಂಪಾತು.
    ಬಾವಿ ಅಂಕರಿಕೆಗೆ, ಈಗ ಕೋಲಿನ ಬದಲು ಫೀಟಿನ ಲೆಕ್ಕ ಬಯಿಂದು.

    ಬೋರ್ ವೆಲ್ಲಿನ ಆರ್ಬಟೆ ಎದುರ “ಆರ್ಯ-ಅಬೇಸ್” ಕೇಳದ್ದದು ಕೇಳಿ ಬೇಜಾರು ಆತು.

    ಆರ್ಯಾ -ಅಬೇಸ್ ಕೋಡ್ ಶಬ್ದಂಗಳ ಡಿ-ಕೋಡ್ ಮಾಡ್ಳೆ ಸುವರ್ಣಿನಿ ಅಕ್ಕನ ಮಾವನತ್ರೇ ಹೇಳುವನೊ ?

  10. “ಜೀವನಲ್ಲಿ ಮುಂದೆ ಹೋಪಲೆಡಿಯದ್ದೆ ಕೈಕ್ಕಾಲು ಕಟ್ಟಿದ ಹಾಂಗೆ ಆದರೆ, ಒಂದರಿಂಗೆ ತಾಂಗಿ “ಅಬೇಸ್” ಹೇಳುವಂತೋರು; ದಾರಿ ತಪ್ಪಿದಲ್ಲಿ “ಆರ್ಯಾ” ಹೇಳಿ ನಿಲ್ಲುಸಿ, ತಪ್ಪು ತೋರುಸಿಕೊಟ್ಟು ತಿದ್ದಿ ಒಳ್ಳೆ ದಾರಿಗೆ ಕೊಂಡು ಹೋವುತ್ತೋರು ನಮ್ಮ ಆತ್ಮೀಯರಾಗಿದ್ದರೆ ಎಷ್ಟು ದೊಡ್ಡ ಬಾವಿ ಬೇಕಾರೂ ತೋಡಿ ನೀರು ತೆಗವಲೆ ಎಡಿಗು.”

    ಇಂತಹವರ ಸಹವಾಸಲ್ಲಿ ಜೀವನವ ಅನುಭವಿಸಿದವಕ್ಕೆ ಮಾಂತ್ರ ಆ ಸವಿ ಅರ್ಥ ಅಕ್ಕಷ್ಟೇ… ಅದರ ವರ್ಣಿಸುಲೆ ಸಾಧ್ಯ ಇಲ್ಲೇ…ಜೀವನಕ್ಕೆ ಒಂದು ಥ್ರಿಲ್ ಬೇಕು ಹೇಳಿ ಹೇಳುವವೆಲ್ಲ ಹೀಂಗಿದ್ದವರ ಸಹವಾಸಲ್ಲಿ ಜೀವನ ಅನುಭವಿಸಿರೆ ನಿಜವಾದ ಥ್ರಿಲ್ ಹೇಳಿರೆ ಹೇಂಗೆ ಹೇಳಿ ಅರ್ಥ ಅಕ್ಕು.

    “ಆರ್ಯಾ”, “ಅಬೇಸ್” ಈ ಶಬ್ದ ಕೆಳಿಯಪ್ಪಗ ಜಯಕ್ಕ ಒಂದರಿ ಪುಟಾಣಿ ಕೂಸು ಆಗಿ ಆ ಆನಂದದ ಕ್ಷಣನ್ಗಳ ನೆನಪಿಸಿಗೊಂಡೆ.

    “ಎಲ್ಲೋರುದೇ ಸೇರಿಂಡು ಹೊಂದಾಣಿಕೆ ಮಾಡಿಂಡು ಮಣ್ಣು ಹೊರ್ತದೇ ಜೀವನ. ಹೆಚ್ಚಾದಲ್ಲಿ ಕತ್ತಿ, ಕಮ್ಮಿ ಆದಲ್ಲಿ ಮತ್ತಿಂಡು – ಇನ್ನೊಬ್ಬನನ್ನೂ ಕೂಡಿಂಡು ಮುಂದುವರಿತ್ತದೇ ಜೀವನ.”

    ಈ ಹೊಂದಾಣಿಕೆಯ ಜೀವನಲ್ಲೇ ಜೀವನದ ಮಾಧುರ್ಯತೆ ಅಡಗಿಪ್ಪದು ಹೇಳುದು ಇಂದ್ರಾಣ ಯುವಜನತೆಗೆ ಮತ್ತು ಮುಂದಿನ ಪೀಳಿಗೆಗೆ ಅರ್ಥ ಆದರೆ ಸಾಕು…

  11. “ಇನ್ನೊಬ್ಬನನ್ನೂ ಕೂಡಿಂಡು ಮುಂದುವರಿತ್ತದೇ ಜೀವನ. ಅಲ್ಲದೋ?” ನಿಜವಾಗಿಸಾ ಅಪ್ಪಲ್ಲದ….ಬಾವಿ ತೆಗವದರ ನೋಡದ್ದರೂ ಓದುತ್ತಾ ಹೋಪಗ ನಿಜವಾಗಿ ನೋಡಿದ ಹಾ೦ಗೆ ಆತು. ಮತ್ತೆ ಕಡೆ ೪ ಸಾಲುಗ ಎನಗೆ ತು೦ಬಾ ಲಾಯಿಕಾಯಿದು.

  12. ಶುದ್ದಿಯ ವಿಷಯ ಲಾಯ್ಕಿದ್ದು!!

  13. ಬಾವಿ ತೋಡುವ ಕೆಲಸ ಬಾಲ್ಯಲ್ಲಿ ನೋಡಿದ್ದು ನೆಂಪಾತು.ವಿವರಣೆ ತುಂಬಾ ಲಾಯ್ಕ ಆಯಿದು.ಹೊಂದಿಕೆ ಇಲ್ಲದ್ದರೆ ಕೆಲಸ ಸಾಗ.ತೋಟಕ್ಕೆ ಮಣ್ಣು ಹಿಡಿಸುವ ಕೆಲಸವೂ ಹೀಂಗೆ,ಹಲವು ದಿನ-ಹಲವು ಆಳುಗೊ ಸೇರಿ ನಡಕ್ಕೊಂಡಿತ್ತು.
    ಬಾವಿಲಿ ನೀರು ಸಿಕ್ಕಿ ಅಪ್ಪಗ ಆಳುಗಳ ಸಂಭ್ರಮ ನೋಡೆಕ್ಕು.ಅದೊಂದು ಸಾರ್ಥಕ ಗಳಿಗೆ.ತೆಂಗಿನ ಕಾಯಿ ಒಡದು ಬೆಲ್ಲ ಹಾಕಿ ತಿಂಗು.
    ಹೀಂಗಿದ್ದ ದೊಡ್ದ ಕೆಲಸ ಮುಗಿದ ದಿನ ಆಳುಗೊಕ್ಕೆ ಪಾಯಸ ಮಾಡಿ,ಹಂಚಿ ಸಡಗರ ಮಾಡಿಂಡಿತ್ತಿದ್ದವು.

  14. ನೋಡ್ತವಂಗೆ ಒಂದು ಬಾವಿ ತೋಡ್ತದು; ಮನೆಯವಂಗೆ ಒಂದು ಬಾವಿ ತೋಡುತ್ತದು. ದೂರಂದ ನಿಂದು ನೋಡ್ತವಂಗೆ ಐದಾರು ಆಳುಗೊ ಬಾವಿ ತೋಡ್ತದು ಹೇಳಿ ಕಂಡರೂ ಆ ದಾರೀಲೆ ಹೋಪಗ ಆಸರಪ್ಪಗ ಆ ಬಾವಿ ನೀರು ಕುಡಿವಲೆ ಸಿಕ್ಕಿರೆ ಅದೊಂದು ಅಮೃತಪಾನವೇ ಸರಿ. ಬಾವಿ ತೋಡುವ ಸಂಯಮ, ಜವಾಬ್ದಾರಿ ಕೆಲಸವ ಸ್ವಾರಸ್ಯವಾಗಿ ಚಿತ್ರಿತ ಆಯ್ದು, ಜೊತೆಲಿ ಸಾಮಾಜಿಕ ಕಳಕಳಿ ಚಿಂತನೆಯೂ ಚೊಕ್ಕ ಆಯ್ದು ಹೇಳಿ ಹೇಳಿತ್ತು – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×