Oppanna.com

ಕಂಕಣ ಬಲ-೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಥಮ ಪ್ರಶಸ್ತಿ ವಿಜೇತ ಕಥೆ.

ಬರದೋರು :   ವಿಜಯತ್ತೆ    on   14/07/2013    3 ಒಪ್ಪಂಗೊ

ಹರೇ ರಾಮ
೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಥಮ ಪ್ರಶಸ್ತಿ ವಿಜೇತ ಕಥೆ.
ಲೇಖಕಿ: ಶ್ರೀಮತಿ ಜಯಲಕ್ಷ್ಮಿ ಟಿ.ಭಟ್. ಮುಕ್ವೆ, ಪುತ್ತೂರು.

ಕಂಕಣ ಬಲ

 ರಾಮಣ್ಣ ಹೇಳಿರೆ ಊರಿಲ್ಲೇ ಅತೀ ದೊಡ್ಡ ಪೈಸೆಕ್ಕಾರ. ಹಾಂಗೆಯೇ ಕಡು ಲೋಭಿಯುದೆ. ಅದೇವ ಮುಹೂರ್ತಲ್ಲಿ ಆ  ಪುಣ್ಯ ಪುರುಷನ ಹೆಸರು ಮಡುಗಿದ್ದವೋ ಗೊಂತಿಲ್ಲೆ!. ಈ ಮನುಷ್ಯ ಮಾಂತ್ರ ಸರೀ ತದ್ವಿರುದ್ಧ. ಊರವರ ಬಾಯಿಲಿ ಕುರೆ ರಾಮಣ್ಣ ಹೇಳಿಯೇ ಪ್ರಸಿದ್ಧಿ. ಇವನ ಹೆಂಡತ್ತಿ ಸೀತಾರತ್ನ. ಹೆಸರಿಂಗೆ ತಕ್ಕ ಹಾಂಗೆ ಸಾದ್ವಿ, ಗುಣವಂತೆ. ಈ ದಂಪತಿಗೊಕ್ಕೆ ಚರಣ, ಶರಣ ಹೇಳುವ ಎರಟೆ ಕುಟ್ಟಿ ಮಾಣಿಯಂಗೊ. ಮುಂದಾಣದ್ದು ಮಗಳು ಸ್ಪೂರ್ತಿ.ಹೆರಿಯವು ಮಾಡಿ ಮಡುಗಿದ ಸಂಪತ್ತು ಮೂರು ತಲೆಮಾರು ಕೂದು ತಿಂದರೂ ಮುಗಿಯದ್ದಷ್ಟು! ಹಾಂಗೆಯೇ ರಾಮಣ್ಣ ದಾನ, ಧರ್ಮ, ಪೂಜೆ ಪುನಸ್ಕಾರ ಕೂಡಾ ಮಾಡದ್ದೆ ಕೂಡುಸಿ ಕೂಡುಸಿ ಮಡುಗಿದ್ದು ಅದೆಷ್ಟೋ!! ಇಷ್ಟೆಲ್ಲಾ ಇದ್ದರೂ ರಾಮಣ್ಣಂಗೆ ತೃಪ್ತಿ ಇಲ್ಲೆ. ಮನುಷ್ಯಂಗೆ ಅತೃಪ್ತಿ ಹೇಳುವ ಭೂತ ಹೊಕ್ಕರೆ ಅಲ್ಲಿಗೇ ಮುಗುದತ್ತು ಕಥೆ! ಮೂರು ಹೊತ್ತೂ ಪೈಸೆ, ಪೈಸೆ, ಪೈಸೆಇದಿಷ್ಟೇ ಅವಂಗೆ ಗೊಂತಿಪ್ಪದು.
ಊಟ ಕಾಫಿ ಹೊತ್ತಿಂಗೆ ಆರಾದರು ಬಂದರೆ ಊಟ ಕೊಡುವದು ಹಾಂಗಿರಲಿ, ದೊಂಡೆ ಕಟ್ಟಿ ಒಂದು ಮುಕ್ಳಿ ನೀರು ಬೇಕಾದರೂ ಬಾಯಿ ಬಿಟ್ಟು ಕೇಳಿರೇ ಸಿಕ್ಕುಗಷ್ಟೆ! ಅವನ ಈ ಪೀನಾರಿ ಬುದ್ಧಿ ಗೊಂತಿಪ್ಪವು ಅದೆಷ್ಟೇ ಹತ್ರಣ ಸಂಬಧಿಕರಾದರೂ ಆ ಹೊತ್ತಿಂಗೆ ಅಲ್ಲಿಗೆ ಅಣೆಯವು. ಸೀತಕ್ಕಂಗೆ ಹೀಂಗಿಪ್ಪದೆಲ್ಲ ಸರಿ ಕಂಡುಗೊಂಡು ಇತ್ತಿಲ್ಲೆ. ಮದುವೆಯಾದ ಹೊಸತ್ತಿಲ್ಲಿ ಅದು ಪಟ್ಟ ಪಾಡು ಅಷ್ಟಲ್ಲ. ಅದು ಹುಟ್ಟಿ ಬೆಳದ ಪರಿಸರವೇ ಬೇರೆ. ಅಲ್ಲಿ ಒಳಂಗೊಂದು ಹೆರಂಗೊಂದು ಹೇಳಿ ಇಲ್ಲೆ. ಎಲ್ಲೋರಿಂಗೂ ಒಂದೇ ನಮೂನೆಯ ಅಡಿಗೆ. ಏವದರಲ್ಲು ಮುಚ್ಚು ಮರೆ, ಕಣ್ಣು ವಂಚನೆ ಇಲ್ಲದ್ದ ಸ್ವಚ್ಚ ಬದುಕು. ಊಟ ಕಾಫಿ ಹೊತ್ತಿಂಗೆ ಆರೇ ಬರಲಿ ಊಟದ ವ್ಯವಸ್ಥೆ, ದಾನ, ಧರ್ಮ ಎಲ್ಲವೂ ಇಕ್ಕಲ್ಲಿ. ಹೆರಿಯವಾದ ಅತ್ತೆ, ಗೆಂಡ ಆ ರೀತಿ ಇಪ್ಪಗ ಅದಕ್ಕಾದರೂ ಎಂತ ಮಾಡ್ಲೆ ಎಡಿಗು? ಕ್ರಮೇಣ ಕಂಡೂ ಕಾಣದ್ದ ಹಾಂಗೆ ಇಪ್ಪಲೆ ಕಲ್ತತ್ತು.
ಇಲ್ಲಿ ಕೆಲಸದವಕ್ಕೆ ಬೇರೆಯೇ ಅಡಿಗೆ! ವರ್ಷಾವಧಿಗೆ ಅಪ್ಪಷ್ಟು ಉಪ್ಪು ಸೊಳೆ, ನೀರು ಮಾವಿನಕಾಯಿ, ಮಣ್ಣು ಉದ್ದಿ ಹಾಕಿದ ಹಲಸಿನಕಾ ಬೇಳೆ. ಅದು ಹುಟ್ಟಿ ಒಂದಡಿ ಬೆಳದು ಪಚ್ಚೆ ಕಟ್ಟಿರೂ ಅಕ್ಕು. ಮುನ್ನೂರೈವತ್ತು ದಿನಕ್ಕೂ ಅದೇ ಅಡಿಗೆ. ಬೇಳೆ ಗುದ್ದಿ ಹಾಕಿ ಬೇಶಿರೆ ಮಂದ ಬಪ್ಪಲೆ ಒಳ್ಳೆದಲ್ಲದ್ದೆ ಕಾಯೂ ಕಮ್ಮಿ ಸಾಕು ಹೇಳುವ ಐಡಿಯ. ಎಲ್ಲವನ್ನೂ ಒಟ್ಟಿಂಗೆ ಹಾಕಿ ಮಡ್ಡಿ ಹಾಂಗೆ ಬೇಶಿ ಮುನ್ನಾಣ ದಿನಕ್ಕೆ ಒಳಂಗೆ ಮಾಡಿದ ಬೆಂದಿ ಒಳುದ್ದರನ್ನೂ ಹಾಕಿ ಮೊಗಚ್ಚಿರೆ ಆತಲ್ಲಿಗೆ. ಮತ್ತೆ ಸ್ಟೋರಿನಕ್ಕಿ ಅಶನ. ಸೊಸೆ ಎಲ್ಲಿಯಾರು ಆಳುಗೊಕ್ಕೆ ಒಳಾಣ ಅಡಿಗೆಯ “ಶೇಷದ್ದೆಂತರು ಮಾಡಿದ್ದರ ಬಳುಸಿರೆ ಹೇಳಿ ಆಳುಗೊ ಉಂಡು ಹೋಪಲ್ಲಿವರೆಗೆ ಸೊಣಂಗು ಪುಚ್ಚೆಯ ಹಾಂಗೆ ಅಲ್ಲೆ ಅತ್ತಿತ್ತೆ ಸುಳುಕ್ಕೊಂಡು ಇಕ್ಕು ಅತ್ತೆ! ರಾಮಣ್ಣ ಆದರೂ ಅಷ್ಟೆ. ಮರದಡಲಿ ಬಾಡಿ ಬಿದ್ದ ಹಲಸಿನ ಹಣ್ಣಾದರೂ ಅಂತೇ ಕೊಟ್ಟಿಕ್ಕ ಪುಣ್ಯಾತ್ಮ.  ಇದೆಲ್ಲ ಅವಂಗೆ ಅಬ್ಬೆಂದಲೇ ಬಂದ ಬಳುವಳಿ ಹೇಳ್ಳಕ್ಕು. ಹಾಂಗೆ ನೋಡಿರೆ ಅವನ ಅಜ್ಜ, ಅಪ್ಪ ಎಲ್ಲ ತುಂಬ ಒಳ್ಳೆಯವೆ. ಅಪ್ಪ ರಜ ಸಾಧು ಮನುಷ್ಯನಾದಕಾರಣ ಎಲ್ಲ ಕಾರ್ಭಾರೂ ಅಬ್ಬೆದೇ ಆಗಿತ್ತು. ಹೀಂಗಿಪ್ಪಗ ಒಂದಿನ ರಾಮಣ್ಣನ ಅಬ್ಬೆ ಅಪಘಾತವೊದರಲ್ಲಿ ಬೆನ್ನು ಮೂಳೆ ಮುರುದು ಮನುಗಿದಲ್ಲೇ ಆತು. ಆಸ್ಪತ್ರೆಗೆ ಕರಕ್ಕೊಂಡು ಹೋದರೂ ಏನೂ ಪ್ರಯೋಜನ ಆಯಿದಿಲ್ಲೆ. ಸೀತಕ್ಕಂಗೆ ಈಗ ಹಬ್ಬ ಹರು ಹೇಳುವ ಹಾಂಗೆ ಆತು. ಒಂದು ದಿಕ್ಕೆ ದೂರ್ವಾಸ ಮುನಿಯ ಹಾಂಗಿದ್ದ ಗೆಂಡ, ಇನ್ನೊಂದು ದಿಕ್ಕೆ ಶಾಲೆಗೆ ಹೋಪ ಮಕ್ಕೊ. ಇವಕ್ಕೆಲ್ಲಾ ಹೊತ್ತು ಹೊತ್ತಿಂಗೆ ಮಾಡೆಕ್ಕು. ಇನ್ನು ಮನುಗಿದಲ್ಲೇ ಆದ ಅತ್ತೆಯ ಹೇಲುಚ್ಚು ತೆಗವದರಿಂದ ಹಿಡುದು ಊಟ ಮಾಡ್ಸುವಲ್ಲಿ ವರೇಗೆ ಹೇಳುವ ಹಾಂಗೆ ಎಲ್ಲಾ ಚಾಕ್ರಿಯೂ ಮಾಡಿಗೊಳ್ಳೆಕ್ಕು. ಆದರೂ ಒಂದು ರಜವೂ ಬೇಜಾರು ಮಾಡಿಗೊಳ್ಳದ್ದೆ ಪರಂಚದ್ದೆ, ಅತೀವ ಶ್ರದ್ದೆ, ಪ್ರೀತಿಂದಲೇ ಅತ್ತೆಯ ಆರೈಕೆ ಮಾಡುಗು. ಹಗಲಿಡೀ ಕೆಲಸ ಮಾಡಿ ಬಚ್ಚಿಗೊಂಡಿಪ್ಪಗ, ಇರುಳೆಲ್ಲಿಯಾರು ಬಡುದು ಹಾಕಿದ ಹಾಂಗೆ ಒರಕ್ಕು ಬಂದು ಎಚ್ಚರಿಕೆ ಆಗದ್ರೆ ಹೇಳಿ ಇರುಳು ಎರಡು ಗಂಟೆಗೊಂದರಿ ಎಲರಾಂ ಮಡುಗಿ ಎದ್ದು ನೋಡ್ಳೆ ಸುರು ಮಾಡಿತ್ತು. ಆದರೂ ಮಗಂಗೆ ದಿನಕ್ಕೊಂದರಿ ಅಬ್ಬೆ ಹತ್ರೆ ಮಾತಾಡೆಕ್ಕು ಹೇಳಿ ಕಂಡುಗೊಂಡು ಇತ್ತಿಲ್ಲೆ. ಕರುಳು ಹಿಂಡುವ ಹಾಂಗಿದ್ದ ದಯನೀಯ ಪರಿಸ್ಥಿತಿಲ್ಲಿದ್ದ ಅಬ್ಬೆಯ ಕಂಡು ಅವನ ಕಲ್ಲು ಹೃದಯ ಕರಗಿದ್ದೇ ಇಲ್ಲೆ. ಮಾನವೀಯ ಸಂಬಂಧ ಹೊರತಾಗಿ ಬರೀ ಪೈಸೆಯನ್ನೇ ನೋಡಿಗೊಂಡಿದ್ದ ಪುಣ್ಯಾತ್ಮಂಗೆ ಅಬ್ಬೆ ಚಲಾವಣೆಲಿ ಇಲ್ಲದ್ದ ನಾಣ್ಯದ ಹಾಂಗೆ ಉಪಯೋಗಕ್ಕೆ ಇಲ್ಲದ್ದು. ಮಗಳಕ್ಕೊ ಒಂದು ರಜ ದಿನ ಇದ್ದು ಹೋಯೆಕ್ಕಾರೆ ಮೊದ್ಲೆ ರಾಮಣ್ಣನ ಹತ್ರೆ ಸೀತ ಇರುಳು ಹಗಲು ಹೇಳುವ ಹಾಂಗೆ ಎಷ್ಟು ಬಂಜ್ಞ್ ಬಕ್ಕು? ಅದರೆಡೆಲಿ ಮನೆ ಕೆಲಸವೂ ಆಗಿಯೊಳೆಕ್ಕು. ಅಬ್ಬೆಯ ಚಾಕ್ರಿಗೆ ಒಂದು ನರ್ಸಿನ ಮಾಡ್ಳಕ್ಕನ್ನೆ ಹೇಳಿದವು. ಈಗ ಸೀತಕ್ಕನೇ “ನರ್ಸುಗಳ ಮಾಡಿರೆ ಅವು ನೋಡಿಗೊಂಬದು ಇಂತಿಷ್ಟೇ ಹೇಳಿ ಇದ್ದತ್ತಿಗೆ. ಬಿದ್ದು ಒರಗ್ಗು. ಪಂಡಿ ಪರಕ್ಕೆ ಹೇಳಿ ಮಾಡುಗಷ್ಟೆ” ಹೇಳಿಯೊಂಡತ್ತು. ಅಂಬಗ ರಾಮಣ್ಣ “ನಿಂಗೊಗೆ ಹೇಳ್ಳೆ ಸುಲಭ. ಆನ ಮಾಡಿರೆ ಅವರ ಕೈ ಕಾವದಾರು?” ಹೇಳುವಾಗ ಅವೆಲ್ಲ ಸುಮ್ಮನಾದವು.ತನಗೆಷ್ಟು ಕಷ್ಟ ಆದರೂ ಅತ್ತೆತ್ತರೆ ಕೇಳಿ ಅವಕ್ಕಿಷ್ಟವಾದ ತಿಂಡಿ ಮಾಡಿ ಉಣುಸುಗು ಸೀತಕ್ಕ. ಹೀಂಗಿದ್ದ ಒಂದು ದಿನ  ಅತ್ತೆ ಬಿಕ್ಕಳಿಸಿಗೊಂಡು ಸೊಸೆಯ ಎರಡೂ ಕೈ ಹಿಡುಕ್ಕೊಂಡು “ಇದು ನಿನ್ನ ಕೈ ಅಲ್ಲ ಕಾಲು ಹೇಳಿ ಜಾಂನ್ಸಿಗೊ ಮಗಳೇ. ಆನು ನಿನ್ನ ಒಂದು ದಿನವೂ ಸುಖವಾಗಿ ನೆಮ್ಮದಿಂದ ಇಪ್ಪಲೆ ಬಿಟ್ಟಿದೇ ಇಲ್ಲೆ. ಹರ್ಕು ಹೆಡಗೆಲಿ ನೀರು ಹೊರ್ಸಿದ ಹಾಂಗೆ ನಿನ್ನ ಹರುದು ಮುಕ್ಕಿದ್ದಕ್ಕೆ ಮಿತಿಯೇ ಇಲ್ಲೆ. ಇಂದೀಗೆ ನೀನೆ ಎನ್ನ ಚಾಕ್ರಿ ಮಾಡ್ಲೆ ಸಿಕ್ಕಿದು ನೋಡು. ಹೊಟ್ಟೆಲಿ ಹುಟ್ಟಿದ ಮಗಳಕ್ಕೊ ಕುಂಡೆ ಧೂಳು ಕುಡುಗಿಕ್ಕಿ ಹೋದವು! ಇನ್ನು ಮಗಂಗೊಂದರಿ ಎನ್ನ ಮೋರೆ ನೋಡೆಕ್ಕು ಹೇಳಿಯೇ ಕಾಣುತ್ತಿಲ್ಲೆ. ಆನೆಂಥಾ ಪಾಪಿ ಹೇಳಿ ಇದರಲ್ಲೇ ಗೊಂತಾವುತ್ತು ನೋಡು. ಕಣ್ಣಿಲ್ಲಿ ನೆತ್ತರಿಲ್ಲದ್ದ ಹಾಂಗೆ ಅಂದು ನಿನ್ನ ಅರದು ಕುಡುದ್ದಕ್ಕೆ ದೇವರಿಂದೆನಗೆ ಇಂಥಾ ಶಿಕ್ಷೆ ವಿಧಿಸಿದ್ದು. ನೀನು ಗಂಧದ ಕೊರೆಡಿನ ಹಾಂಗೆ ನಿನ್ನ ಜೀವ ತೇಯ್ತಾ ಇದ್ದೆ. ನಿನಗೆ ದೇವರೆಂದಿಂಗೂ ಒಳ್ಳೆದು ಮಾಡುಗು. ರೈಲು ಹೋದ ಮತ್ತೆ ಟಿಕೇಟು ತೆಗದ ಹಾಂಗೆ ಇನ್ನು ಹೇಳಿ ಎಂತ ಪ್ರಯೋಜನ ಇದ್ದು” ಹೇಳಿ ಅತ್ತೆ ಕಣ್ಣೀರು ಹಾಕುವಾಗ
“ಅತ್ತೆ ನಿಂಗೊ ಇನ್ನು ಮೊದ್ಲಾಣದ್ದೆಲ್ಲ ನೆನೆಸಿಗೊಂಡು ಕಣ್ಣೀರು ಹಾಕುಲಾಗ. ನಿಂಗೊ ಹೆರಿಯವು, ಎಂತದೇ ಹೇಳಿರೂ ಬುದ್ಧಿಗೆ ಹೇಳಿ ತೆಕ್ಕೊಂಡು ನಿಂಗೊಗೆ ಬೇಕಾದ ಹಾಂಗೆ ನೆಡಕ್ಕೊಂಡಿದೆ. ನಿಂಗೊ ಎನ್ನ ಹೆತ್ತಬ್ಬೆಯ ಹಾಂಗೆ. ನಿಂಗಳ ಸೇವೆ ಮಾಡುವದು ಎನ್ನ ಕರ್ತವ್ಯ”. ಹೇಳುವಾಗ ಅತ್ತೆಯ ಮನಸ್ಸು ತುಸು ಹಗುರ ಆತು. ಹೆಂಡತ್ತಿ ಎಲ್ಲಾ ಕೆಲಸ ಮಾಡಿ ಸೋತು ಸುಣ್ಣ ಆದರೂ ಗೆಂಡ ಹೇಳುವ ಭೂಪಾಲಂಗೆ ಅದರ ಮೇಲೆ ರಜವೂ ಕರುಣೆ ಮೂಡಿದ್ದಿಲ್ಲೆ. ಅದಕ್ಕೇನಾರು ತನ್ನಿಂದಾದ ಸಹಾಯ ಮಾಡುವ ಬದಲಾಗಿ ಅವನ ಕೋಪ, ತಾಪ, ರೌದ್ರಾವತಾರ ದಿನಂದ ದಿನ ಹೆಚ್ಚಾತು! ಊರೇ ಮುಳುಗಿರೂ ಸರಿಯೇ ಅವಂಗೆ ಮಾಂತ್ರ ಎಲ್ಲವೂ ಸರಿಯಾಗಿರೆಕು.
ಪಶ್ಚಾತ್ತಾಪದ ಬೇಗೆಲಿ ಬೆಂದುಗೊಂಡು ಹೇಂಗೊ ಎರಡು ವರ್ಷ ಮನುಗಿದಲ್ಲೇ ಆದ ಜೀವ ಇಹ ಲೋಕ ತ್ಯಜಿಸಿತ್ತು. ಹೋಪ ಜೀವಕ್ಕೆ ಅಖೇರಿಗೂ ಸೊಸೆಯ ನೀರೇ ಸಿಕ್ಕಿತ್ತು! ಜೀವ ಹೋಯೆಕ್ಕಾರೆ ಮೊದಲು ಸೊಸೆಯೇ ಅತ್ತೆಯ ಕೈಲಿ ರಾಮ ರಾಮ ಹೇಳಿತ್ತು. ಕಡೇಂಗೂ ಎಲ್ಲೊ ಹೋಗಿತ್ತಿದ್ದ ಮಗ ರಾಮಣ್ಣ ಬಪ್ಪಗ ಎಲ್ಲಾ ಮುಗುದ್ದು! ಈ ಮನುಷ್ಯ ಅಬ್ಬೆಯ ದಿನವನ್ನಾದರೂ ಕುರೆ ಕಟ್ಟದ್ದೆ ಲೈಕಕೆ ಮಾಡಲಿ ಹೇಳಿ ಅಕ್ಕ ತಂಗೆಕ್ಕೊ ಅತ್ತಿತ್ತೆ ಮಾತಾಡಿಗೊಂಡು ಧಾರಾಳವಾಗಿ ‘ಕಣ್ಣೋಕು'(ಕಣ್ಣೋಕು ಹೇಳಿರೆ ಸತ್ತವರ ಮಗಳಕ್ಕೊ, ಹತ್ತರಾಣ ಬಂಧು ವರ್ಗದವು ಕೊಡುವ ಪೈಸೆ) ದೆ ಕೊಟ್ಟವು. ಹಾಂಗಾಗಿ ಅಬ್ಬೆಯ ದಿನ ಮಾಡ್ಲೆ ರಾಮಣ್ಣ ಕೈಂದ ಏನೂ ಖರ್ಚು ಮಾಡೆಕ್ಕಾಗಿ ಬಯಿಂದಿಲ್ಲೆ! ಅದರಲ್ಲೆ ರಜಾದರು ಒಳಿಶಿಗೊಳೆಕ್ಕು ಹೇಳುವ ಲೆಕ್ಕಾಚಾರ ಅವಂದು.ಕಾರ್ಯಕ್ರಮ ಕಳುದು ಬಂದ ನೆಂಟ್ರುಗೊ ಹೋಪಗ, ರಜ ರಜ ಹೋಳಿಗೆ ಕಟ್ಟಿ ಕೊಟ್ಟತ್ತು ಸೀತಕ್ಕ. ಬಂದ ಜನ ಬಿರುದ ಮೇಲೆ ಮೆಲ್ಲಂಗೆ ಸೆರಗಿಲ್ಲಿ ಕೈ ಉದ್ದಿಗೊಂಡು ಬಾಗಿಲ ಬುಡಂದಲೇ ಹೆದರಿ ಹೆದರಿಯೇ ಗೆಂಡನತ್ರೆ “ಇದಾ ಪಾಯಸ, ಭಕ್ಷ್ಯಂಗೊ, ತಾಳು, ಮೇಲಾರ ಎಲ್ಲ ತುಂಬ ಒಳುದ್ದು. ರಜ ರಜ ಆಳುಗೊಕ್ಕೆ ಕೊಟ್ರಾಗದೋ” ಹೇಳಿತ್ತು.
ಸಂದರ್ಭ ಎಲ್ಲಿ ಸಿಕ್ಕುತ್ತು ಹೇಳಿ ಹೊಣಕ್ಕ್ಂಡು ಕೂದಂಡಿದ್ದ ರಾಮಣ್ಣ ಒಂದರಿಯೇ ಕೆರಳಿ ಕೆಂಡಾಮಂಡಲ ಆದವನೇ ನಿನಗದೆಲ್ಲಾ ಕಾರ್ಭಾರ ಬೇಡ, ಆನಾಗಂದಲೇ ನೋಡ್ತಾಯಿದ್ದೆ! ಸಿಕ್ಕಿ ಸಿಕ್ಕಿದವಕ್ಕೆಲ್ಲಾ ಕಟ್ಟಿ ಹೊರ್ಸಿದನ್ನೇ? ಆರತ್ರೆ ಕೇಳಿ ಕೊಟ್ಟೆ ಹೇಳು? ಈಗ ಭಾರೀ ಸುಭಗೆತ್ತಿಹಾಂಗೆ ಬಂದೆನ್ನತ್ರೆ ಕೇಳ್ತೆನ್ನೆ? ಆನಿನ್ನೂ ಸಾಯದ್ದೆ ಜೀವತಾರ . ಆಳುಗೊ ಮೊನ್ನೆಂದ ಇಲ್ಲಿ ಮೂಗಿಂಗೊರೆಗೆ ಹೊಳ್ಸುತ್ತಾ ಇದ್ದವು!ಇನ್ನುದೆ ಅವಕ್ಕೆ ಹೊರ್ಸೆಕ್ಕು ಹೇಳಿಲ್ಲೆ. ಒಳುದು ಹಾಳಾಗಲಿ ಅದಕ್ಕೆ ನೀನು ತಲೆ ಬೆಶಿ ಮಾಡೆಡ.ಹೇಳಿದ ಖಾರವಾಗಿ.
ಹೀಂಗಿಪ್ಪ ಮನುಷ್ಯರು ಏವ ಕಾಲಕ್ಕೂ ಸರಿಯಪ್ಪ ಬಗೆಯಲ್ಲ.    ಇಂತವಕ್ಕೆಲ್ಲ ಕಾಲವೇ ಉತ್ತರಹೇಳೆಕ್ಕಷ್ಟೆ.ಆದರೂ ಸೀತಕ್ಕಂಗೆ ಅತ್ತೆ ಸಾಯೆಕ್ಕರೆ ಹೇಳಿದ ಮಾತು ನೆಂಪಾತು.ಇನ್ನೂ ಹೀಂಗೆ ತಳಿಯದ್ದೆ ಕೂದರಾಗ ನಾಳೆ ಮಕ್ಕಳನ್ನೂ  ಅವನ  ಅವನದಾರಿಗೇ ಎಳಗು. ಹಾಂಗಾಗದ್ದ ಹಾಂಗೆ  ನೋಡಿಗೊಳೆಕ್ಕು ಕಂಡತ್ತು, ಆದರೂ ಹೇಂಗೊ ಧೈರ್ಯ ಮಾಡಿ  ನಿಂಗೊ ಎಂತಕೆ ಬೇಕಾಗಿ ಕೋಪ ಮಾಡಿಗೊಳ್ತಿ ಹೇಳಿ ಗೊಂತಾವುತ್ತಿಲ್ಲೆನಗೆ  ಇಷ್ಟಕ್ಕೂ ಅಬ್ಬೆಯ ದಿನ ಮಾಡ್ಳೆ ನಯಾಪೈಸೆ ಕೂಡಾ ಕೈಂದ ಖರ್ಚು ಮಾಡೆಕ್ಕಾಗಿ ಬೈಂದಿಲ್ಲೆ!. ಒಳ್ದದರ ಆರಿಂಗಾರೂ ಪಾಪದವಕ್ಕೆ ಕೊಟ್ರೆ ಅತ್ತೆಯ ಆತ್ಮಕ್ಕಾರೂ ಶಾಂತಿ ಸಿಕ್ಕುಗು ಹೇಳಿ ಕಂಡತ್ತು ಹಾಂಗೆ ಕೇಳದ್ದೆ ಕೊಟ್ಟೆ..ಅದೂ ಅಲ್ಲದ್ದೆ ಅತ್ತೆ ಸಾಯೆಕ್ಕರೆ ಮದಲು ಮಗ ಎನ್ನ ಹತ್ರೆ ಬಂದು ಪ್ರೀತಿಲಿ ಮಾತಾಡ್ಸಿದ್ದಾಯಿಲ್ಲೆ ಹೇಳ್ತ ಕೊರಗು ಇದ್ದತ್ತು. ನೀನು ಹೇಳಿ  ಸರಿ  ಮಾಡ್ಸು ಹೇಳಿತ್ತಿದ್ದವು..  ಅದೆಲ್ಲ ನಿನ್ನದೇ ಹುಟಾರಣೆ. ಸುಮ್ಮನೆ ಏನಾರು ಕೆಲದರೆ  ಗೆಬ್ಬಿಂಗೆ ಕೊಡುವೆ ಹೇಳಿ ಸೀತಕ್ಕಂಗೆ ಕೈ ಬೇರಿಗೊಂಡು ಬಂದಪ್ಪಗ ರಜ ದೊಡ್ಡಾದ ಮಕ್ಕೊ ಬಂದು ತಡೆಯದ್ರೆ ಬಹುಶ: ಸೀತಕ್ಕಂಗೆ ಕಪಾಳಮೋಕ್ಷ ಮಾಡಿಯೇ ಬಿಡುತ್ತಿತ°. ಸೀತಕ್ಕ ಸುಮ್ಮನಾತು.
ಒಂದು ವಿಚಾರಲ್ಲಿ ಮಾಂತ್ರ ರಾಮಣ್ಣ ಅತಿಯಾದ ಬುದ್ಧಿವಂತಿಕೆ ಪ್ರದರ್ಶನ  ಮಾಡಿದ.  ಮಕ್ಕೊಗಿಬ್ರಿಂಗೂ  ಪಿ ಯು. ಸಿ ಆತು. ಮೆಡಿಕಲ್ ಓದೆಕ್ಕು ಹೇಳುವ ಹಂಬಲಂದ ಹೆದರೆಂಡೇ ಅಪ್ಪನೆದುರು ತಮ್ಮ ಠರಾವು ಒಡ್ಡಿದವು.ಅದಕ್ಕೆಂತ ಮಾಡೆಕ್ಕು ನಿಂಗೊ ಕಲಿವದಿದ್ದರೆ ಕಲಿಶಿಯೇ ಬಿಡ್ತೆ. ಅಪ್ಪ ಒಂದೇ ಪೆಟ್ಟಿಂಗೆ ಒಪ್ಪಿಯೇ ಬಿಟ್ಟ. ಇಲ್ಲಿ ರಾಮಣ್ಣನ ಬುದ್ದಿವಂತಿಕೆ ಈಗ ಒಂದಾರಿ ಖರ್ಚು ಮಾಡೀರೆ ಮತ್ತೆ ಸರಳೆಮ್ಮೆ ಕರದ ಹಾಂಗೆ ಇಬ್ರೂ ಒಟ್ಟಿಂಗೆ ಸಂಪಾದನೆ ಮಾಡಿ ಪೈಸೆ ತಂದು ಸೊರ್ಗನ್ನೆ!
ಮತ್ತೆರಡು ವರ್ಷಲ್ಲಿ ಮಗಳು ಕೀರ್ತಿಗೆ  ಪಿ. ಯು. ಸಿ ಆತು.ಇನ್ನು ಮುಂದೆ ಕಲಿಯೇಕ್ಕು ಹೇಳುವ ಆಶೆ ಬೆಟ್ಟದಷ್ಟಿದ್ದರೂ ಅಪ್ಪನೆದುರು ಹೇಳುವಷ್ಟು ದೈರ್ಯ ಇಲ್ಲೆದಕ್ಕೆ.. ಅಬ್ಬೆ ಹತ್ರೆ ಹೇಳಿರೂ ಪ್ರಯೋಜನ ಆಗ ಹೇಳಿಂಡು ಅಣ್ಣಂದ್ರ ಮೊರೆ ಹೊಕ್ಕತ್ತು.! ಅವು ಶತಾಯ ಗತಾಯ ಹೇಳುವಾಂಗೆ ಹರಸಾಹಸ ಮಾಡಿ ಅಪ್ಪನ ಒಪ್ಪುಸುವಲ್ಲಿ ಸಫಲರಾದವು. ಆದರೂ॒ ಒಳ್ಳೇಸಂಬಂಧ ಬಂದರೆ ಮದುವೆ ಮಾಡುವದೆ ನಿಂಗಳ ಆರ ವಕಾಲ್ತೂ ನೆಡೆಯ. ಹೇಳುವ ಶರತ್ತಿನ ಮೇಲೆ! ಅಂತೂ ಕೀರ್ತಿ ಒಂದರಿಯಂಗೆ ಬದುಕ್ಕಿಯೊಂಡತ್ತು.
[ಇನ್ನೂ ಇದ್ದು]

3 thoughts on “ಕಂಕಣ ಬಲ-೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಥಮ ಪ್ರಶಸ್ತಿ ವಿಜೇತ ಕಥೆ.

  1. ಕತೆಯ ಓಟ ಲಾಯ್ಕ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×