Oppanna.com

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

ಬರದೋರು :   ವಿಜಯತ್ತೆ    on   15/12/2015    19 ಒಪ್ಪಂಗೊ

                                          

೨೦೧೫ ನೇ ಸಾಲಿನ ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನಿತ ಕಥೆ

ಲೇ: ಶ್ರೀಮತಿ ಪ್ರಸನ್ನಾ ” ಚೆಕ್ಕೆಮನೆ, ಧರ್ಮತ್ತಡ್ಕ. 

                              ದಾರಿದೀಪಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

” ಉದ್ದಾ…  ಬಾನಂದೊಂದು ಬೂಚಿ ಬಿದ್ದತ್ತು. ಗಂಗೆ ಉಂಬೆ ,ಗೌರಿ ಉಂಬೆ……..ಇಲ್ಲೇಗಿ ಹುಲ್ಲು ತಿಂದು,…ಹಿಂಡಿ ತಿಂದು… ಪುಟ್ಟನ ಅಜ್ಜನ ಮನಗೆ ಹೋಪ ದಾರಿಲಾಗಿ……..”.ಶಂಭಣ್ಣ ಪುಳ್ಳಿ ಪ್ರಣವನ ಕೈಹಿಡ್ದು ಆಡ್ಯೊಂಡಿತ್ತಿದ್ದವು. ಇಬ್ರಿಂಗೂ ಜೋರು ಜೋರು ನೆಗೆ.

” ಇದೆಂತಾ ಅಜ್ಜಂದು ಪುಳ್ಳಿದು ಜೋರು ನೆಗೆ ಕೇಳ್ತನ್ನೇ” ಅಟ್ಟುಂಬೊಳಾಂದ ಪಾರ್ತಕ್ಕ ಮೆಲ್ಲಂಗೆ ಬಗ್ಗಿ ನೋಡಿ ಕೇಳಿದವು. ಶಂಭಣ್ಣ ನೆಗೆ ಮಾಡುದೇ ಅಪ್ರೂಪ. ಇವು ಏವಗಳೂ ಹೀಂಗೇ ನೆಗೆ ಮಾಡಿಂಡಿದ್ದರೆ …ಖುಶಿಯಾತವಕ್ಕೆ.

” ಆನು ದೋಸೆರೆತ್ತೆ  ಅತ್ತೆ , ನಿಂಗೊ ಬೇಕಾರೆ ಅವರೊಟ್ಟಿಂಗೆ ಆಡ್ಲೆ ಹೋಗಿ ” ಸೊಸೆ ಮಂಗಳೆ ಬಂದು ಹೇಳಿತ್ತು.

” ಬೇಡಪ್ಪಾ ,ಹಾಂಗೆ ದಣಿಯ ಎರವಲಿಲ್ಲೆ  ….”ಬಾಯಿಲಿ ಹಾಂಗೇಳಿರೂ ಸೊಸೆ ಬಂದು ಕೇಳ್ಯಪ್ಪಗ ಒಳ್ಳೆದಾತೂಳಿ ಆತವಕ್ಕೆ. ಮದ್ಲಾಣಾಂಗೆ ಒಲೆ ಬುಡಲ್ಲಿ ಕೆಲಸ ಮಾಡ್ಲೆ ಎಡ್ತಿಲ್ಲೆವಕ್ಕೆ. ಎರಡು ಮೂರು ದನಗಳ ಕರದಪ್ಪಗಳೇ ಸಾಕು ಸಾಕಾವ್ತು. ಮತ್ತೆ ಅವಕ್ಕೆ  ಅಕ್ಕಚ್ಚು ಕೊಡೆಕು, ತಿಂಬಲೆ ಹಾಕೆಕು. ಶಂಭಣ್ಣಂಗೂ ಈಗೀಗ ಹೆಚ್ಚು ಕೆಲಸ ಮಾಡ್ಲೆಡ್ತಿಲ್ಲೆ. ಅಷ್ಟಪ್ಪಗ ಇಬ್ರಿಂಗೂ ಕೋಪವೇ ಬಪ್ಪದು.

‘ ಹಾಂಗೆ ಮಾಡಿದ್ದು ಸರಿಯಾದಿಲ್ಲೆ, ಇದರ ಹೀಂಗೆ ಮಾಡಿದ್ದೆಂತಕೆ? ಹಾಂಗಿದ್ದ ಸಣ್ಣ ಸಣ್ಣ ವಿಷಯಂಗಳೇ ದೊಡ್ಡಾಗಿಂಡಿದ್ದದು. ದನಗಳ ಚಾಕ್ರಿ ಮಾಡ್ಲೆಡಿತ್ತಿಲ್ಲೆ. ಹಾಂಗೆ ಹೇಳಿ ಅವರ ಆರಿಂಗಾರು ಮಾರ್ಲೆ ಮನಸ್ಸೂ ಇಲ್ಲೆ ಶಂಭಣ್ಣಂಗೆ.

ಸೊಸೆ ದೋಸೆರೆತ್ತನ್ನೇಳಿ ಪಾರ್ತಕ್ಕ ಹೆರ ಬಂದವು. ಅಷ್ಟಪ್ಪಗ ಆಚ ಮನೆ ಗೋಪಾಲಣ್ಣ ಹಾಲಿಂಗೆ ಬಂದ. ಗೋಪಾಲಣ್ಣನೂ  ಶಂಭಣ್ಣನ ಪ್ರಾಯವೇ. ಐದಾರು ದನಗಳ ಸಾಂಕಿ, ಹಾಲು ವ್ಯಾಪಾರ ಮಾಡಿಂಡಿತ್ತಿದ್ದ. ದೊಡ್ಡ ಮಗ ಶಂಕರನೂ ಅಪ್ಪನೊಟ್ಟಿಂಗೆ ಎಲ್ಲಾ ಕೆಲಸಕ್ಕೂ ಸೇರ್‍ಯೋಂಡಿತ್ತಿದ್ದ. ವರ್ಷ ಮೂವತ್ತೆರಡು ಕಳ್ದರೂ ಅವಂಗೆ ಮದುವೆಯಾಗದ್ದಿಪ್ಪಗ ಗೋಪಾಲಣ್ಣಂಗೆ ತಲೆಬೆಶಿಯಪ್ಪಲೆ ಸುರುವಾತು. ದನಗೊ ಅತ್ತೆ ,ಮಾವ ಇಪ್ಪ ಮನೆ ಈಗ ಯೇವ ಕೂಸುಗೊಕ್ಕೂ ಬೇಡ. ಎಂತಾರೊಂದು ಕಾರಣಲ್ಲಿ ಬಂದ ಪೊದುವೆಲ್ಲಾ ಹಾಂಗೇ ಹೋತು. ಶಂಕರನ ತಮ್ಮ ಎಂ.ಸಿ..ಎ ಮಾಡಿ ಬೆಂಗ್ಳೂರಿಲಿಪ್ಪ ದಿನೇಶಂಗೆ ಬೇಗ ಮದುವೆಯೂ ಆತು. ದನಗೊ ಇದ್ದ ಕಾರಣವೇ ಮಗಂಗೆ ಮದುವೆಯಾಗದ್ದದೂಳಿ ಎಲ್ಲೋರೂ ಹೇಳುಗ ಗೋಪಾಲಣ್ಣ ಹೆಚ್ಚು ಆಲೋಚನೆ ಮಾಡದ್ದೆ ಮನಸ್ಸು ಗಟ್ಟಿ ಮಾಡಿ ಇಪ್ಪ ದನಗಳೆಲ್ಲಾ ಕೊಟ್ಟವು. ದನಗಳ ಮಾರಿರೂ ಹಾಲಿಲ್ಲದ್ದೆ ಆವ್ತೋ? ಹಾಂಗೆ ಈಗ ಏವಗಳೂ ಶಂಭಣ್ಣನ ಮನೆಂದ ಹಾಲು ಕೊಂಡೋಪದು.  ಶಂಭಣ್ಣ ಎದುರೇ ಇದ್ದರೆ ರಜಾ ಹೊತ್ತು ಸುಖ-ದುಕ್ಕ ಮಾತಾಡುದೂ ಇದ್ದು.

“ಇದೆಂತಾ ಉದಿಯಪ್ಪಗಳೇ ಅಜ್ಜಂದು, ಪುಳ್ಳಿದು ಆಟ”? ಗೋಪಾಲಣ್ಣ ಚೆಂಬು ಕರೇಲಿ ಮಡುಗಿಕ್ಕಿ ಅವರ ಹತ್ರ ಕೂದವು.

“ಇವಂಗೆ ರಜಾ ಹಳೇ ಆಟಂಗಳ ಕಲುಶುವಾಳಿಯಾತು. ಹಾಂಗೆ ಕೂದ್ದಷ್ಟೆ.” ಶಂಭಣ್ಣ ಪುಳ್ಳಿಯ ಕೈಹಿಡ್ಕೊಂಡು ಹೇಳಿದವು.

“ಏವಗ ಇವ್ವೆಲ್ಲ ಹೋಪದು?

ಗೋಪಾಲಣ್ಣನ ಮಾತಿಂಗೆ ಉತ್ತರ ಹೇಳಿದ್ದದು ಶಂಭಣ್ಣನ ಮಗ ಅರವಿಂದ.    “ಇನ್ನೊಂದು ವಾರ ರಜೆ ಇದ್ದು ಮಾವ ” ಅಬ್ಬೆಪ್ಪ ಒಪ್ಪಿರೆ ಅವರನ್ನೂ ಒಟ್ಟಿಂಗೆ ಕರಕ್ಕೊಂಡೋಯೆಕೂಳಿ ಇದ್ದು. ಅಪ್ಪಂಗೆ ಈ ದನಗಳ ಕೊಡ್ಲೆ ಮನಸ್ಸಿಲ್ಲೆ , ಈ ಪ್ರಾಯಲ್ಲಿ ತೋಟ, ದನಗೊ ಹೇಳ್ವ ರಗಳೆಯೆಲ್ಲಾ ಬಿಟ್ಟು  ಕೊಶೀಲಿಪ್ಪಲಕ್ಕನ್ನೇಳಿ ಆನು ಹೇಳುದು. ಅಪ್ಪ ಏವದಕ್ಕೂ ಒಪ್ಪುತ್ತವಿಲ್ಲೆ. ನಿಂಗೊಂದಾರಿ ಹೇಳಿ ಮಾವ , ನಿಂಗಳ ಮಾತಿನ ಒಪ್ಪಲೂ ಸಾಕು”.

ಮಗನ ಮಾತು  ಕೇಳಿ ಶಂಭಣ್ಣಂಗೆ ಪಿಸ್ರು ಬಂತು.

” ಆನೀಗ ಕೊಶೀಲಿಲ್ಲೇಳಿ ಆರಾರು ಹೇಳಿದ್ದವೋ ನಿನಗೆ?  ಈ ದನಗಳ ಕೊಟ್ಟಿಕ್ಕಿ ಎನಗೆ ನಿನ್ನೊಟ್ಟಿಂಗೆ ಬಂದು ಕೂರೇಕೂಳಿಲ್ಲೆ. ಎನಗಾರದ್ದೂ  ಶಿಫಾರಸ್ಸೂ  ಬೇಡ, ಆನು ಬತ್ತೂ ಇಲ್ಲೆ. ಅಬ್ಬೆಯ ಬೇಕಾರೆ ಕರ್ಕೊಂಡೋಗು”. “ಇದೊಳ್ಳೆ ಕತೆಯಾತು’, ಗೋಪಾಲಣ್ಣಂಗೆ ಹಾಲು ಕೊಡ್ಲೆ ಬಂದ ಪಾರ್ತಕ್ಕ ಸೆರಗು ಸೊಂಟಕ್ಕೆ ಕುತ್ತಿಕ್ಕಿ ಅಲ್ಲೆ ನಿಂದವು.

” ನೋಡಿ ಗೋಪಾಲಣ್ಣ, ಇವರ ಸಂಗತಿ ನಿಂಗೊಗೆ ಗೊಂತಿದ್ದನ್ನೇ, ಗೇಸಿನ ಒಲೆ ಹೊತ್ಸುಲೆ ಗೊಂತಿಲ್ಲೆ , ಫೋನು ಮಾಡ್ಲೆ ಅರಡಿತ್ತಿಲ್ಲೆ, ಮೊಬೈಲು ಫೋನು ಬಂದರೂ ತೆಗೆತ್ತ ಕ್ರಮ ಇಲ್ಲೆ. ಇನ್ನು ಮಿಕ್ಸಿ, ಫ್ರಿಜ್ಜು………ಇದರೆಲ್ಲಾ ಹೇಳದ್ದಿಪ್ಪದೇ ಒಳ್ಳೆದು.ಹಾಂಗಿಪ್ಪಗ ಇವರ ಮಾಂತ್ರ ಬಿಟ್ಟಿಕ್ಕಿ ಆವರೊಟ್ಟಿಂಗೆ ಹೋದರೆ ಎನಗಲ್ಲಿ ನಿಂದದು ನಿಂದ ಹಾಂಗಕ್ಕಾ? ಆದಾಂಗಾವ್ತೂಳಿ ಗಟ್ಟಿ ಮನಸ್ಸು ಮಾಡಿ ಹೋಪಲೆ ಎನಗೆಂತೋ ಮನಸ್ಸೇ ಬತ್ತಿಲ್ಲೆ.”

” ನಿಂಗಳ ಈ ಸಮಸ್ಸೆಗೆ ಎಂತರ ಪರಿಹಾರ ಹೇಳಿ ಎನಗೇ ಗೊಂತಾವುತ್ತಿಲ್ಲೆ ಪಾರ್ತಕ್ಕಾ, ನಮ್ಮ ಹೆರಿಯೋರು ನಮಗೆ ಬಿಟ್ಟು ಹೋದ ಭೂಮಿ, ಇದರ ನಮಗೆ ಫಕ್ಕ ಬಿಟ್ಟಿಕ್ಕಿ ಹೋಪಲೆ ಮನಸ್ಸು ಬಕ್ಕೋ? ನಮ್ಮ ಮುಂದಾಣ  ತಲೆ ಮಾರಿನವಕ್ಕೆ ಒಳ್ಳೆಯ ಬದ್ಕು ಬೇಕೂಳಿಯೇ ಅಲ್ದಾ ನಮ್ಮ ಹೆರಿಯೋರು ಒಂದಿಷ್ಟು ಆಚರಣೆ, ಸಂಪ್ರದಾಯಂಗಳ ತಂದದು. ಹೊಸ್ತಿಲು ಮೆಟ್ಲಾಗಾಳಿ ಅದಕ್ಕೆ ಹೆಮ್ಮಕ್ಕೊ ದೆನಾಗಳೂ ಹೂಗಾಕಿ ಹೊಡಾಡೆಕೂಳಿ ಹೇಳಿದವು. ಅಮಾಸೆ ದಿನ ಮಸರು ಕಡವಲಾಗ, ಮಡಿ, ಮೈಲಿಗೆ,ಶುದ್ಧ ಆಚರಣೆ ಎಲ್ಲ ಎಂತಕೆ ಬೇಕೂ ಹೇಳಿದ್ದವು? ಈಗಾಣ ವಿಜ್ಞಾನದ ಪ್ರಕಾರ ನೋಡಿರೂ ಅದಕ್ಕೆ ಸರಿಯಾದ ಕಾರಣವೇ ಇದ್ದು. ಅಂದರೂ ನಾವದರ ಅದರ ಅನುಸರ್ಸುತ್ತೋ? ಹೊಸ ಮನೆ ಕಟ್ಟಿರೆ ಅದಕ್ಕೆ ಹೊಸ್ತಿಲೇ ಇಲ್ಲೆ. ಮತ್ತೆಲ್ಲಿಂದ ಅದಕ್ಕೆ ಹೊಡಾಡುದು? ತಿಥಿ ಮುನ್ನಾಣ ದಿನ ಒಪ್ಪತ್ತು ಮಾಡದ್ರೆಂತಾವ್ತು? ನೂಲ ಹುಣ್ಣಿಮೆ ದಿನ ಜನಿವಾರ ಹಾಕೆಕೂಳಿಯೇ ಎಂತ?…….ಈಗಾಣ ಕಾಲದ ಮಕ್ಕಳ ಹೀಂಗಿದ್ದ ಚೋದ್ಯಂಗೊಕ್ಕೆ ಉತ್ತರ ಹೇಳ್ಳೆ ನಮಗೆಡಿಗೋ? ಎಲ್ಲ ‘ಕಾಲಕ್ಕೆ ತಕ್ಕ ಕೋಲ’ ಹೇಳಿ ಒಟ್ಟಾರೆ ಬದ್ಕುದಷ್ಟೆ.

ಶಂಭಣ್ಣ ಎಂತದೂ ಮಾತಾಡಿದ್ದವಿಲ್ಲೆ. ಗೋಪಾಲಣ್ಣನ ಮಾತು ಅದೆಷ್ಟು ಸತ್ಯ. ಮದ್ಲಾಣ ಕಾಲಲ್ಲಿ ದೊಡ್ಡವರ ಎದುರು ನಿಂದು ಮಾತಾಡ್ಲೇ  ಹೆದರಿಂಡಿತ್ತಿದ್ದ ಕಾಲ! ಈಗ ಮಕ್ಕೊ ಅವರೆದುರೆದುರೇ ಕಾಲ ಮೇಲೆ ಕಾಲು ಹಾಕಿ ಕೂರ್ತವು. ಮದ್ಲಾಣವರ ಬದ್ಕಿಲ್ಲಿ ಒಂದು ಆದರ್ಶ ಇದ್ದತ್ತು. ನಮ್ಮ ಮುಂದಾಣ ತಲೆಮಾರಿಂಗೆ ನಾವು ದಾರಿ ದೀಪ ಆಯೆಕು. ಅವು ನಮ್ಮ ಅನುಸರ್ಸ್ಯೊಂಡು ಬದ್ಕಿರೆ ನಮ್ಮ ಸಮಾಜವೇ ಒಳ್ಳೆದಾವ್ತು ಹೇಳ್ವ ಉದ್ದೇಶ ಇದ್ದತ್ತು. ಈಗ ಅದೆಲ್ಲಾ ಆರಿಂಗೆ ಬೇಕು? ‘ಆನೆ ನೆಡದ್ದದೇ ದಾರಿ’ ಹೇಳಿ ನಾವು ಕೊಶೀಲಿದ್ದರಾತು. ಇನ್ನೊಬ್ಬ ಹಳ್ಳಕ್ಕೆ ಬಿದ್ದರೂ ತೊಂದರೆ ಇಲ್ಲೆ.

” ಆನು ಹೇಳಿದ್ರಲ್ಲಿ  ಬೇಜಾರಾತಾ ಶಂಭಣ್ಣ?  ಆನಂಬಗ ಬತ್ತೆ.  ಅರವಿಂದ, ನೀನು ಕಲ್ತಿದೆ, ಐದಾರೊರ್ಷ ಮದಲು ಕೂಡಾ ಇದೇ ತೋಟಲ್ಲಿ ಗೈಯ್ದವ ನೀನು. ಆ ಡಾಕ್ಟ್ರು ಕಲ್ತ ಕೂಸು ನಿನ್ನ ಮದ್ವೆಯಾದ ಕಾರಣ ಮಾಂತ್ರ ಪೇಟಗೆ ಹೋದವ ನೀನು. ಅಪ್ಪನ ಬೇಜಾರ ನಿನಗೆ ಅರ್ಥಕ್ಕೂ  ಗ್ರೇಶುತ್ತೆ. ಈಗ ಏವದಕ್ಕೂ ಗಡಿಬಿಡಿ ಮಾಡೆಡ. ಹಾಂಗೆ ಬಂಙ್ಞ ಆವ್ತರೆ ಎಂಗೆಲ್ಲಾ ನೆರೆಕರೆಲಿ ಇಪ್ಪದೆಂತಕೆ ಹೇಳು? ನಿನ್ನ ಅಪ್ಪ ಎಂಗೊಗೆಲ್ಲಾ ಎಷ್ಟು ಸಕಾಯ ಮಾಡಿದ್ದವೂಳಿ ನಿನಗೆ ನೆಂಪಿರ. ಎಂಗೊಗದರ ಮರವಲೆಡಿಯ, ನಿನ್ನಪ್ಪಂಗೆ ದನಗೊ ಹೇಳಿರೆ ಎಷ್ಟು ಪ್ರೀತೀಳಿ ಗೊಂತಿದ್ದನ್ನೆ. ಶಂಭಣ್ಣ ದನಗಳ ಸಾಂಕುವಾಂಗೆ ಈ ಊರ್ಲಿ ಆರು ದನಗಳ ಸಾಂಕುತ್ತವು? ನೀನೆಲ್ಲ ಆಲೋಚನೆ ಮಾಡು. ಆನು ಬತ್ತೆ. ಪುರ್ಸೊತ್ತಿದ್ದರೆ ಮನಗೊಂದರಿ ಎಲ್ಲೋರನ್ನೂ ಕರ್ಕೊಂಡು ಬಾ , ಶಂಕರಂಗೆ ಅಬಲಾಶ್ರಮಂದ ಕೂಸು ನಿಗೆಂಟು ಮಾಡಿದೆಯ. ಮದ್ಲಾಣ ಕಾಲದವಾದರೆ ‘ಹೊಗು ಮನೆ’ ಇಲ್ಲೆ ಹೇಳುಗು. ನಾವೆಂತ ಅವರ ಅಪ್ಪನ ಮನಗೆ ಹೋಗಿ ಕೂರ್ತ? ಇನ್ನಿನ್ನು ಎಷ್ಟು ಕಾವದು? ಹೇಳಿಕ್ಕಿ ಕಾಲಿಂಗೆ ಜೋಡು ಹಾಕಿ ಹೆರಟವು ಪುನಾ ಒಂದಾರಿ ಒಳಾಂಗೆ ಬಗ್ಗಿ   “ಶಂಭಣ್ಣಾ  ನಮ್ಮ ಗೆಣಪ್ಪಣ್ಣನೂ ಅವನ ಹೆಂಡತಿಯೂ  ಈಗ ವೃದ್ಧಾಶ್ರಮಲ್ಲಿಪ್ಪದಾಡ,  ನಿಂಗೊಗೆ ಗೊಂತಾಯ್ದಾ? ಎಲ್ಲ ತಲೆಲಿ ಬರದ್ದದು. ಅದರ ಎಲೆಲಿ ಉದ್ದಿರೆ ಹೋಕೋ? ಹೇಳಿಕ್ಕಿ ಹೊದವು.

ಪುಳ್ಳಿಯ ಕಾಲಿಲ್ಲಿ ಕೂರ್ಸಿಂಡಿದ್ದ ಶಂಭಣ್ಣ ಅವನ ಕೆಳ ಕೂರ್ಸಿ ಎದ್ದದೇ ,”ಎಂತರ ಗೋಪಾಲಣ್ಣ ನೀನು ಹೇಳಿದ್ದದು?”

ಅಷ್ಟಪ್ಪಗ ಗೋಪಾಲಣ್ಣಂಗೆ ಹೋಗಿಯಾಯಿದು. ಗೆಣಪ್ಪಣ್ಣ ಹೇಳಿರೆ ಶಂಭಣ್ಣನ ಭಾರೀ ಚಂಙ್ಙಆಯಿ. ಶಾಲಗೆ ಹೋಪಂದ ಮದಲೇ ಅವು ಫ್ರೆಂಡುಗೊ. ಮಾವಿನ ಮರಕ್ಕೆ ಹತ್ತುಲೆ, ನೆಲ್ಲಿ ಮರಕ್ಕೆ ಕಲ್ಲಿಡ್ಕುಲೆ, ತೋಟಂದಾಚಿಗಿಪ್ಪ ಕೆರೆಲಿ ಈಜುಲೆ ಎಲ್ಲ ಒಟ್ಟಿಂಗೇ ಇದ್ದದು. ಗೆಣಪ್ಪಣ್ಣ ಕಲ್ತು ಮಾಸ್ಷ್ರ ಆದರೆ ಶಂಭಣ್ಣ ಹೆಚ್ಚು ಕಲಿಯದ್ದೆ ಮನೆಲೆ ಕೂದವು. ಗೆಣಪ್ಪಣ್ಣಂಗೆ ಮೂರು ಜನ ಮಾಣಿಯಂಗೊ ಮಾಂತ್ರ. ನಮ್ಮ ಬದ್ಕು ಬೇರೆಯವಕ್ಕೆ  ಆದರ್ಶವಾಗಿರೆಕು. ದಾರಿ ದೀಪ ಆಯೆಕೂಳಿ ಗೆಣಪ್ಪಣ್ಣ ತುಂಬಾ ಕಷ್ಟ ಪಟ್ಟವು. ಗಣಪತಿ ಮಾಸ್ಷ್ರು ಹೇಳಿರೆ ಆ ಊರ್ಲಿ ಎಲ್ಲೋರಿಂಗೂ ಪ್ರೀತಿಯೇ. ಮೂರು ಮಕ್ಕಳೂ   ಕಲಿವಲೆ ಉಶಾರಿದ್ದ ಕಾರಣ ಎಂಜಿನಿಯರಿಂಗ್ ಕಲಿಶಿದವು. ದೊಡ್ಡ ಮಗ ಅಮೇರಿಕಕ್ಕೆ ಹೋದ. ಎರಡ್ನೇಯವಂಗೂ ಬೆಂಗ್ಳೂರಿಲಿ ಒಳ್ಳೇ ಕೆಲಸ ಸಿಕ್ಕಿತ್ತು ಸಣ್ಣವ ಕಲಿವಲೆ ಅಮೇರಿಕಕ್ಕೆ ಹೋದವ. ಅಲ್ಲೇ ಕೆಲಸಕ್ಕೆ ಸೇರಿದ. ಗೆಣಪ್ಪಣ್ಣಂಗೂ  ಹೆಂಡತಿ ಕುಸುಮಕ್ಕಂಗೂ ಭಾರೀ ಕೊಶಿಯಾತು. ಮಕ್ಕೊ ಒಳ್ಳೆ ನೆಲೆಗೆ ಬಂದರೆ ಅಬ್ಬೆಪ್ಪಂಗೆ ಅದರಿಂದ ಹೆಚ್ಚೆಂತ ಸಂತೋಷ ಇದ್ದು?

ಮಕ್ಕೊ ಎಲ್ಲ ಕೆಲಸಕ್ಕೆ ಸೇರಿ, ಮದ್ವೆಯೂ ಕಳುದ ಮತ್ತೆ  ಅವೆಲ್ಲ ಗೆಣಪ್ಪಣ್ಣನ ಈ ಜಾಗೆ ಕೊಟ್ಟಿಕ್ಕಿ ಬಪ್ಪಲೆ ಒತ್ತಾಯ ಮಾಡ್ಲೆ ಸುರು ಮಾಡಿದವು. ಅಮೇರಿಕಂದ ಬಂದರೂ ಈ ಹಳ್ಳಿಲಿ ನಿಂಬದೇಂಗೇಳಿ ಆಗಿಂಡಿತ್ತಿದ್ದವಕ್ಕೆ. ಎರಡ್ನೇ ಮಗ ಆನು ಅಬ್ಬೆಪ್ಪನ ನೋಡ್ತೇಳಿ ಹೇಳಿದ ಕಾರಣ ಗೆಣಪ್ಪಣ್ಣ ಮನಸ್ಸಿಲ್ಲದ್ದ ಮನಸ್ಸಿಂದ ಈ ಜಾಗೆ ಮಾರಿ ಮಗನೊಟ್ಟಿಂಗೆ ಪೇಟಗೆ ಹೋದವು. ಅಲ್ಲಿ ಎಂತಾತೊ ,ಅತ್ತಗೂ ಸೊಸಗೂ ನೇರ್ಪಾಯಿದಿಲ್ಯೋ ಎಂತದೋ ಗೊಂತಿಲ್ಲೆ. ಅವನುದೇ ಇಂಗ್ಲೇಂಡಿಂಗೆ ಹೋವ್ತೇಳಿ ಹೆಂಡತ್ತಿ ಮಕ್ಕಳೊಟ್ಟಿಂಗೆ ವಿಮಾನ ಹತ್ತಿದ. ಗೆಣಪ್ಪಣ್ಣಂಗೆ ಎಂತ ಮಾಡ್ಲೆಡಿಗು.? ಊರಿಲ್ಲಿದ್ದರೆ ಆರಾದರೂ ನೆಂಟ್ರೋ ನೆರೆಕರೆಯವೋ ಮನಗೆ ಬಂದುಗೊಂಡಿರ್ತಿತವು. ಈ ದೊಡ್ಡ ಪೇಟೆಲಿ ಆರಿದ್ದವು.? ಸುರು ಸುರುವಿಂಗೆ ವಾರ ವಾರ ಫೋನ್ ಮಾಡಿಂಡಿದ್ದ ಮಕ್ಕೊ ಮತ್ತೆ,ಮತ್ತೆ ಕಡಮ್ಮೆ ಮಾಡಿದವು. ಹೆಂಡತಿಯ, ಅಬ್ಬೆಪ್ಪನ ಊರು ನೋಡ್ಳೇಳಿ ಅಮೇರಿಕಕ್ಕೆ, ಇಂಗ್ಲೇಂಡಿಂಗೆ  ಕರ್ಕೊಂಡೋದವಕ್ಕೆ  ಅವರ ಅಬ್ಬೆಪ್ಪನ ನೆಂಪೇ ಆಯಿದಿಲ್ಲೆ.  ಊರಿಂಗೆ ಬಂದರೂ ಅವಕ್ಕೆ ನಿಂಬಲೆ ಕೊಶಿಯಪ್ಪದು ಹೆಂಡತ್ತಿಯ  ಅಪ್ಪನ ಮನೆ.

“ನವಗೊಂದು ಮಗಳಿತ್ತಿದ್ದರೆ ಅದರ ಮನೆಲಾದರೂ ಹೋಗಿ ಕೂಬಲಾವುತಿತ್ತು.” ಹೇಳಿ ಕುಸುಮಕ್ಕ ಕೆಲವು ಸರ್ತಿ ಎಲ್ಲ ಗೆಂಡನತ್ರೆ ಹೇಳುಗು. ಈ ಸರ್ತಿ ಊರಿಂಗೆ ಬಂದ ಮಕ್ಕೊ ” ಎಂಗೊಗೆ ನಿಂಗಳ ಮಾತ್ರ ಈ ಮನೆಲಿ ಬಿಟ್ಟಿಕ್ಕಿ ಹೋಪಲೆ ಧೈರ್ಯ ಇಲ್ಲೆ. ಫಕ್ಕ ಎಂತಾರಾದರೆ ಸಕಾಯಕ್ಕೆ ಆರಿದ್ದವು? ಚಾಕ್ರಿಗೆ ಆರಿದ್ದವೂಳಿ”ಯೆಲ್ಲ ಹೇಳಿ ಅವರ ಒಪ್ಸಿ ವೃದ್ಧಾಶ್ರಮಕ್ಕೆ ಸೇರ್‍ಸಿದವು.

‘ ಇಲ್ಲಿ ನಿಂಗೊಗೆ ಉದಾಸೀನಾಗ, ನಿಂಗಳಾಂಗಿಪ್ಪವೇ ಇಲ್ಲಿಪ್ಪದು. ಪೈಸೆ ಬೇಕಾದಷ್ಟು ಎಂಗೊ ಕಳ್ಸುತ್ತೆಯೋ” ಹೇಳಿದವು. ಗೆಣಪ್ಪಣ್ಣಂಗೆ ಮಕ್ಕಳ ಈ ಕ್ರಮ ನೋಡಿ ಎದಗೆ ಪೀಶಾತಿ ಹಾಕಿದಷ್ಟು ಸಂಕಟಾತು. ಆದರೆ ಎಂತ ಮಾಡುದು? ಸ್ವಂತ ಮಕ್ಕಳೇ ಹೀಂಗೆ ಮಾಡ್ತವೂಳಿಯಾದರೆ ಅದು ನಮ್ಮ ಪ್ರಾರಾಬ್ಧ ಕರ್ಮ ಅಷ್ಟೇಳಿ ಗ್ರೇಶಿದವು. “ನಿಂಗೊಗಿನ್ನು ಹೀಂಗಿದ್ದ ಅಬ್ಬೆಪ್ಪ ಇಲ್ಲೇಳಿ ಗ್ರೇಶಿಕೊಳ್ಳಿ, ಎನಗೆ ನಿಂಗಳ ಪೈಸೆಯೂ ಬೇಡ, ಎನಗೆ ಬಪ್ಪ ಪೆನ್ಶನ್ ಸಾಕು ಎಂಗೊಗಿಬ್ರಿಂಗೂ” ಹೇಳಿದವು. ಅಲ್ಲಿಗೆ ಅಪ್ಪಂದೂ ಮಕ್ಕಳದ್ದೂ ಸಂಪರ್ಕವೇ ಕಡುದತ್ತು.

ಶಂಭಣ್ಣಂಗೆ ಈ ವಿಷಯ ಎಲ್ಲ ಗೊಂತಿದ್ದರೂ  ಆರತ್ರೂ ಹೇಳಿದ್ದವಿಲ್ಲೆ. ಈಗ ಗೋಪಾಲಣ್ಣನ ಬಾಯಿಂದ ಕೇಳಿಯಪ್ಪಗ ಒಂದರಿ ಜಿಗ್ಗಾತು.

ಶಂಭಣ್ಣಂಗೂ ಗೆಣಪ್ಪಣ್ಣಂಗೂ ಒಂದೇ ಪ್ರಾಯಾದರೂ, ಶಂಭಣ್ಣಂಗೆ ಮದುವೆಪ್ಪಗ ರಜಾ ತಡವಾತು. ಮಕ್ಕೊ ಅಪ್ಪಲೆ ಮತ್ತೂ ತಡವಾತು. ಮದ್ದು ,ಮಂತ್ರ ,ಹರಕ್ಕೆ ,ಪೂಜೆ ಹೇಳಿ ಸುಮಾರು ವ್ರತ, ಅದೂ,ಇದೂ ಮಾಡಿದ ಮತ್ತೆ ಮದ್ದಿನ ಕೊಂಬಿನ ಹಾಂಗೆ ಹುಟ್ಟಿದ ಅಪ್ರೂಪದ ಮಗನೇ ಅರವಿಂದ. ಅವಂಗೆ ಸಣ್ಣಾದಿಪ್ಪಗಳೇ ಕೃಷಿಲೇ ಮನಸ್ಸು. ಹಾಂಗೆ ಕೃಷಿ ವಿಜ್ಞಾನಲ್ಲಿ ಎಂ.ಎಸ್ಸಿ ಮಾಡಿ ಅಪ್ಪಂಗೆ ಕೃಷಿ ಕಾರ್ಯಕ್ಕೆ ಸಕಾಯ ಮಾಡಿಂಡಿತ್ತಿದ್ದ. ಈಗಾಣ ಕಾಲಲ್ಲಿ ಕೃಷಿಕ ಮಾಣ್ಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ ಹೇಳ್ತರೂ ಅರವಿಂದನ ದೆಸೆ ಒಳ್ಳೆದಿತ್ತು.

ಅವರ ಊರಿಂಗೆ ಏವದೋ ಕಾರ್ಯಕ್ರಮಕ್ಕೆ ಬಂದ ದೊಡ್ಡ ಆಯುರ್ವೇದ ಡಾಕ್ಟರು ಶ್ರೀಧರ ಹೇಳುವವು ಅರವಿಂದನ ಚೆಂದ, ಅವನ ಗುಣ ನಡತೆ ಎಲ್ಲ ಕೊಶಿಯಾಗಿ ಅವರ ಎರಡ್ನೇ ಮಗಳು ಎಂ.ಬಿ.ಬಿ.ಎಸ್.ಕಲಿವ ಸುಮಂಗಲೆಯ ಅರವಿಂದಂಗೆ ಕೊಡ್ಲಕ್ಕೂಳಿ ಮನಸ್ಸಿಲಿ ಗ್ರೇಶಿದ್ದು ಮಾಂತ್ರ ಅಲ್ಲ, ಮಗಳ ಜಾತಕ ,ಪಟ ತೆಕ್ಕೊಂಡು ಬಂದದೇ. ಡಾಕ್ಟ್ರು ಕಲಿವ ಸೊಸೆ ಶಂಭಣ್ಣಂಗೂ ಪಾರ್ತಕ್ಕಂಗೂ ಬೇಡಾಳಿಯಾದರೂ  ಈಗ ಹಾಂಗೆಲ್ಲಾ ಬೇಡಾ ಹೇಳಿ ಹೇಳುವ ಕಾಲ ಅಲ್ಲನ್ನೇ. ಸುಮಂಗಲೆಯೂ ಡಾಕ್ಟ್ರು ಕಲ್ತದೂಳಿ  ಯೇವ ಪೋರ್ಸುದೇ ಮಾಡಿದ್ದಿಲ್ಲೆ. ಅಂದರೂ ಮದುವೆಯಾಗಿ ಮನೆಲೇ ಕೂಬಲೆ ತಕ್ಕ ಅದಕ್ಕೆ ಪೂರ್ತಿ ಕಲ್ತಾದಿಲ್ಲೆ. ಹಾಂಗೆ ಅರರವಿಂದ ಪೇಟಗೆ ಹೋಯೆಕ್ಕಾಗಿ ಬಂತು. ಎಂ.ಎಸ್ಸಿ ಆದ ಕಾರಣ  ಮಾವಗಳ ಶಿಫಾರ್ಸಿಲಿ ಹತ್ರಾಣ  ಕೋಲೇಜಿಲ್ಲಿ ಕೆಲಸವೂ ಸಿಕ್ಕಿತ್ತು.

ವರ್ಷ ಆರನ್ನಾದರೂ ಕಾಯ್ತೋ?  ಸುಮಂಗಲೆ ಎಂ.ಬಿ.ಬಿ.ಎಸ್.ಕಲ್ತು ಒಂದು ವರ್ಷ ಹತ್ರಾಣ ಆಸ್ಪತ್ರೆಲಿ ಕೆಲಸ ಮಾಡಿತ್ತು. ಮತ್ತೆ ಎಂ.ಡಿ. ಮಾಡೇಕೂಳಿಯಾತು. ಅದರೆಡೆಲಿ ಪ್ರಣವನೂ ಹುಟ್ಟಿದ. ಅವಂಗೀಗ ಮೂರೊರ್ಷ. ಇಷ್ಟರವರೆಗೆ ಅರವಿಂದ ಇಲ್ಲದ್ರೂ ಶಂಭಣ್ಣ ಕೃಷಿ ಕೆಲಸ ,ಹಟ್ಟಿ ಕೆಲಸ ಸುಧಾರ್ಸಿಂಡು ಹೋಗಿಂಡಿತ್ತಿದ್ದವು. ಪಾರ್ತಕ್ಕನೂ ದನಗಳ ಕೆಲಸ ಎಲ್ಲ ಮಾಡುಗು. ಆದರೆ ಈಗೀಗ ಅವಕ್ಕಿಬ್ರಿಂಗೂ  ಕೆಲಸ ಮಾಡ್ಲೆ ಕಷ್ಟಾವ್ತು. ಮನಸ್ಸು ಹೋದಲ್ಲಿ ಮೈ ಹೋವುತ್ತಿಲ್ಲೆ.

ನಾಲ್ಕೈದು ವರ್ಷ ಪೇಟೆಲೇ ಇದ್ದು ಅಲ್ಯಾಣ ಬದ್ಕು ಒಗ್ಗಿ ಹೋದ ಅರವಿಂದಂಗೆ ಈಗ ಅಬ್ಬೆಪ್ಪ ಬಂಙ್ಙ ಬಪ್ಪದು ಕಾಂಬಗ ಅವರ ಪೇಟಗೇ ಕರಕ್ಕೊಂಡೋಪಾಳಿ ಆಗಿಂಡಿದ್ದತ್ತು. ಮಂಗಳೆಗೂ ಅತ್ತೆ ಮಾವ ಹೇಳಿರೆ ಪ್ರೀತಿಯೇ. ಅವು ನಮ್ಮೊಟ್ಟಿಂಗಿದ್ದರೆ ನಮ್ಮ ಮಗಂಗೂ ಒಳ್ಳೇದು. ಅವಂಗೆ ಅಜ್ಜಿ ಅಜ್ಜನ ಪ್ರೀತಿ ಬೇಕು ಹೇಳಿ ಅದರ ಅಭಿಪ್ರಾಯ!  ಹಿರಿಯರ ಆದರ್ಶಂಗೊ ನಮ್ಮ ಮಕ್ಕೊಗೆ ‘ದಾರಿದೀಪ’ ಆಯೆಕ್ಕು ಹೇಳಿ ಅದಂಬಗಂಬಗ ಗೆಂಡನತ್ರೆ ಹೇಳುಗು.

ಹಾಂಗೆ ಈ ಸರ್ತಿ ದನಗಳ ಮಾರಿಕ್ಕಿ ಅಬ್ಬೆಪ್ಪನ ಒಟ್ಟಿಂಗೆ ಕರ್ಕೊಂಡೊಪದೂಳಿಯೇ ಅವ ಒಂದು ವಾರ ರಜೆ ಹಾಕಿ ಬಂದದು. ಎಷ್ಟು ಒತ್ತಾಯ ಮಾಡಿರೂ  ಶಂಭಣ್ಣಂದು ಒಂದೇ ಹಟ. ದನಗಳ ಮಾರುದೂ ಬೇಡ, ಆನು ಪೇಟಗೆ ಬತ್ತೂ ಇಲ್ಲೆ. ನಮ್ಮ ದನಗಳ ನಾವು ಸಾಂಕಿದಾಂಗೆ ಆರು ಸಾಂಕುಗು? ಅವಕ್ಕೆ ಬಾಯಿ ಬಾರದ್ರೂ  ನಮ್ಮ ಮಾತೆಲ್ಲ ಅರ್ಥ ಆವ್ತು. ಕರವ ದನಗಳ ಆದರೆ ಆರಾರು ಕೊಂಡೋಕು, ಈ ಸುಬ್ಬಿ, ಕಪಿಲೆ ಎಲ್ಲ ಅಜ್ಜಿ ಆಯ್ದವು. ಅವರ ಆರಾರು ಕೊಂಡೋದರೂ ಸಾಂಕದ್ದೆ ಕಟುಕರಿಂಗೆ ಮಾರುಗಷ್ಟೆ ಇಷ್ಟೊರ್ಷ ನಮಗೆ ಹಾಲು ಕೊಟ್ಟು ಅಬ್ಬೆ ಹಾಂಗಿದ್ದ ದನಗೊ ಅವು. ನಮ್ಮ ಹಟ್ಟಿಯ ಪೊಲುಸು. ಅವರ ಆರಿಂಗೆ ಕೊಡ್ಲೂ ಆನು ಬಿಡೆ.

ಹೀಂಗೇ ಅವರಲ್ಲಿ ಏವಗಳೂ ಒಂದು ರೀತಿ ಮನಸ್ತಾಪ. ಪುಳ್ಳಿ ಪ್ರಣವನ ಬಿಟ್ಟು ಈಗ ಬೇರಾರತ್ರೂ ಅಗತ್ಯಂದ ಹೆಚ್ಚು ಮಾತಾಡ್ತವಿಲ್ಲೆ ಶಂಭಣ್ಣ. ಪುಳ್ಳಿಗೆ ಮಾಂತ್ರ ಪುಟ್ಟುಂಬೆಯ ತೋರ್ಸುಲೇಳಿ ಹಟ್ಟಿಗೆ ಕರ್ಕೊಂಡೋವ್ತವು. ತೋಟಂದ ತಂದ ಹಾಳೆ, ಕುಂಬಾಳೆ ಎಲ್ಲ ಸಿಗುದು ಅವನ ಕೈಲೇ ದನಗೊಕ್ಕೆ ಹಾಕ್ಸುತ್ತವು.

“ಇವ ಎನ್ನ ಕೊಂಡಾಟದ ಪುಳ್ಳಿ, ನಿಂಗೊಗೆಂತ ಮಾಡ,  ಹೆದರೆಡಿ” ಹೇಳಿ ದನಗಳತ್ರೆ ಹೇಳುಗು.

ಅರರವಿಂದಂಗೆ ಒಟ್ಟಾರೆ ಎಂತ ಮಾಡುದೂಳಿ ಗೊತಾಗದ್ದಾಂಗಾತು. ಅಪ್ಪಂಗೆ ಅಪ್ಪನ್ದೇ ಹಟ. ಹೀಂಗಾದರೆ ಹೇಂಗೆ?  ಅಬ್ಬೆ ಹೇಳಿರೂ ಅಪ್ಪ ಕೇಳವೂಳಿ ಗೊಂತಿದ್ದವಂಗೆ. ಇನ್ನಿಪ್ಪದು ಮಂಗಳೆ ಮಾಂತ್ರ.. ಡಾಕ್ಟ್ರು ಕಲ್ತ ಸೊಸೆ ಹೇಳಿ ಅದರತ್ರೆ ಶಂಭಂಣ್ಣಂಗೆ ರಜಾ ಕೊಂಡಾಟ ಹೆಚ್ಚಿಗೆ.  ” ಅಪ್ಪನತ್ರೆ ನೀನೇ ಒಂದಾರಿ ಹೇಳು, ನೀನು ಹೇಳಿರೆ ಕೇಳುಗು, ಅಂತೇ ಇಲ್ಲಿ ಬಂಙ್ಙ ಬಪ್ಪದೆಂತಕೇಳಿಲ್ಯಾ”

ಮಂಗಳೆಗೆ ಗೊಂತಿದ್ದು ಅದರ ಮಾತು ಕೇಳವುಳಿ. ಅಂದರೂ ಆನು ಹೇಳಿ ನೋಡುವೆ.ಎನಗೆ ಧೈರ್ಯ ಇಲ್ಲೆ. ಹೇಳಿ ಮಾವನ ಹುಡ್ಕ್ಯೊಂಡು ಹೋತು.

ಶಂಭಣ್ಣ ಹಟ್ಟಿ ಬೈಪ್ಪಣೆಲಿ ಕೂದು ಕಪಿಲೆಯ ಕೊರಳುದ್ದಿಂಡಿತ್ತಿದ್ದವು. ಆರತ್ರೋ ಮನುಷ್ಯರತ್ರೆ ಮಾತಾಡುವಾಂಗೆ ಅದರತ್ರೂ ಪಂಚಾತಿಕೆ.

” ನೋಡು ಮೋಳೇ, ನಮ್ಮ ಹಾಂಗೆ ಪ್ರಾಯಾದವಕ್ಕೆಲ್ಲ ಈಗ ಈ ಭೂಮಿಲಿ ಜಾಗೆಲ್ಲದ್ದಾಂಗಾಯಿದು. ನಾವು ಆರಿಂಗೂ ಬೇಡ, ಎಂಗಳ ಹಾಂಗಿಪ್ಪ ಮನುಷ್ಯರ ಆಶ್ರಮಲ್ಲಿ ಕೊಂಡೋಗಿ ಹಾಕುತ್ತವು. ಮತ್ತಾರೂ ಮೂಸುತ್ತವಿಲ್ಲೆ. ನಿಂಗಳ ಕಟುಕರ ಕತ್ತಿಗೆ ಒಡ್ಡುತ್ತವು.  ನಿಂಗೊ ಕೊಟ್ಟ ಅಮೃತದ ಹಾಂಗಿಪ್ಪ ಹಾಲು ಅವರ ಹೊಟ್ಟಗೆತ್ಯಪ್ಪಗ ಹಾಲಾಹಲ ಆವ್ತಾ ಕಾಣುತ್ತು ಎಂತ ಮಾಡುದು? ಈಗಾಣವರ ಅವಸ್ಥೆ ಹೀಂಗಾಯಿದು. ಮೊನ್ನೆ ಪೇಪರ್ಲಿ ನೋಡಿದ್ದೆ. ಹತ್ತು ಹದಿನೈದು ದನಗಳ ಒಂದು ಕಾರಿಲ್ಲಿ ಹಾಕಿ ಕೊಂಡೋಪಗ ಹಿಡ್ದವಾಡ. ನಿಂಗೊಗೆ ಹಾಂಗಿಪ್ಪ ಅವಸ್ಥೆ ಅಪ್ಪಲೆ ಆನು ಬಿಡೆ ಆತ. ಎನ್ನ ಮೈಲಿ ಜೀವ ಇಪ್ಪನ್ನಾರವೂ ನಿಂಗಳ ಆರಿಂಗೂ ಕೊಡ್ಲೆ ಬಿಡೆ ಮೋಳೇ. ಮತ್ತೆಂತಾವ್ತೂಳಿ ನವಗೆ ಗೊಂತಿರ್ತೋ.

ಮಾವ ಹೀಂಗೆಲ್ಲ ಹೇಳುದರ ಕೇಳ್ಲೆ ಮಂಗಳೆಗೆ ಎಡ್ತಿದಿಲ್ಲೆ. ಅದು ಸೀದಾ ತಿರುಗಿ ಹೋಗಿ ಗೆಂಡನ  ಕರ್ಕೊಂಡು ಬಂತು. ಮಾತಾಡ್ಲಾಗ ಹೇಳಿ ಕೈ ಭಾಷೆ ಮಾಡಿತ್ತು. ಅಪ್ಪ ದನದ ಹತ್ರೆ ಮಾತಾಡುದೆಲ್ಲ ಅರವಿಂದಂಗೆ ಕೇಳಿತ್ತು. ” ಇನ್ನೆಂತ ದಾರಿ?” ಹೆಂಡತಿಯ ಮೋರೆ ನೋಡಿದ.

“ನಿಂಗೊ ಇತ್ಲಾಗಿ ಬನ್ನಿಳಿ ಅವನ ಕೈ ಹಿಡ್ಕೊಂಡೇ ಜಾಲ ಕೊಡಿಯಂಗೆ ಹೋತದು. ಅಲ್ಲಿ ಪ್ರಣವ ಅಜ್ಜ ಮಾಡಿ ಕೊಟ್ಟ ಮರದ ಗಾಡಿಲಿ ಆಡ್ಯೊಂಡಿತ್ತಿದ್ದ.

” ನಿಂಗೊ ನಮ್ಮ ಮಗನ ನೋಡಿ, ಈ ಕೊಶಿ ,ಈ ಸಂತೋಷ ಅವಂಗೆ ಪೇಟೆಲಿಪ್ಪಗ ಇದ್ದಾ?  ಈಗ ಅವನ ಹಟ, ತರ್ಕ ಎಲ್ಲ ಎಲ್ಲಿ ಹೋದು? ಅರವಿಂದಂಗೇಕೋ ರಜಾ ಅಸಮಧಾನ. ” ಹೇಳೆಕಾದ್ದರ ಬೇಗ ಬೇಗ ಹೇಳ್ಲಾಗದಾ? ಅದಕ್ಕೆಂತಕ್ಕೆ  ಹೀಂಗಿದ್ದ ಮುನ್ನುಡಿ”

“ನಿಜವಾಗಿ ನಮ್ಮ ಮಗ ಬೆಳೆಯಕ್ಕಾದ್ದು ಇಲ್ಲಿ. ಎನ್ನ ಅಪ್ಪ ಎನ್ನ ನಿಂಗೊಗೆ ಮದುವೆ ಮಾಡಿ ಕೊಡುಗ ಒಂದು ಮಾತು ಹೇಳಿದ್ದವು. ‘ಕೃಷಿಕನ ಮದುವೆ ಅಪ್ಪದೂಳಿ ಬೇಜಾರ ಮಾಡ್ಲಾಗ ಮಗಳೇ, ಕೃಷಿಕನೇ ನಮ್ಮ ದೇಶದ ನಿಜವಾದ ಆಸ್ತಿ. ಇಂದು ನಮ್ಮಲ್ಲಿ ಕೃಷಿ ಸರಿಯಾಗಿ ಆಗದ್ದೆ, ತೋಟ ಗದ್ದೆ  ಮಾಯ ಅಪ್ಪಲೆ ಕಾರಣ ನಾವೇ, ಪೈಶಿನ ಆಶೆ ಹೆಚ್ಚಾದಾಂಗೆ ನಮ್ಮ ಮೋರೆ ಪೇಟೆ ಹೊಡೆಂಗೆ ತಿರುಗುತ್ತು. ಅದಕ್ಕೆ ಸರಿಯಾಗಿ ಹಳ್ಳಿಲಿಪ್ಪ ಮಾಣ್ಯಂಗೊಕ್ಕೆ ಕೂಸು ಸಿಕ್ಕುತ್ತವೂ ಇಲ್ಲೆ. ಆದರೆ ನೀನು ಒಬ್ಬ ಕೃಷಿಕನ ಮದುವೆ ಅಪ್ಪದೂಳಿ ಹೆಮ್ಮೆ ಪಡೆಕು ಮಗಳೇ. ನಮ್ಮ ನೋಡಿಯಾದರೂ ನಾಕು ಜೆನ ಹಳ್ಳಿ ಬದ್ಕಿನ ಒಪ್ಪಿಕೊಂಬಾಂಗಾಯಕೂಳಿ, ಅಪ್ಪನ ಮಾತು ಎನಗೆ ಏವಗಳೂ ನೆಂಪಿದ್ದು. ಅಂದರೂ ಕಲಿವಲೆ ನವಗೆ ಪೇಟಗೆ ಹೋಗದ್ದೆ ಆಯಿದಿಲ್ಲೆ., ಈಗ ಹಾಂಗಲ್ಲ! ಕಲ್ತಾಯಿದು. ಇನ್ನು ನವಗೆ ಪೇಟೆ ಬದ್ಕು ಅಗತ್ಯವಾ ಹೇಳಿ?”

ಹೆಂಡತಿಯ ಮಾತು ಕೇಳಿ ಅರವಿಂದಂಗೆ ನಿಜವಾಗಿಯೂ ಆಶ್ಚರ್ಯ ಆತು. ಇದೇವಗ ಇಷ್ಟು ಮಾತು ಕಲ್ತದು?  ಇಷ್ಟೆಲ್ಲಾ ಆಲೋಚನೆ ಮಾಡಿದ್ದು.?

” ಎಂತ ನಿಂಗೊ ಎನ್ನ ಹೊಸಬ್ಬರ ನೋಡಿದಾಂಗೆ ನೋಡುದು?  ಆನು ಹೇಳಿದ್ದು ತಪ್ಪಾತಾ?  ನಮ್ಮ ಸಮಾಜ ಒಳಿಯೆಕಾರೆ, ನಮ್ಮ ಸಂಪ್ರದಾಯ ,ಆಚರಣೆ ನಮ್ಮ ಮುಂದಾಣ ತಲೆಮಾರಿನವಕ್ಕೂ ಸಿಕ್ಕೆಕ್ಕೂಳಿ ಆದರೆ ನಾವು ರಜಾ ತ್ಯಾಗ ಮಾಡ್ಲೇ ಬೇಕು. ನಮ್ಮ ಮಕ್ಕೊಗೆ ಹೆರಿಯೋರ ಆಶೀರ್ವಾದ ಬೇಕಾದ್ದದು, ಅವರ ಶಾಪ ಅಲ್ಲ ಎನ್ನ ಮದುವೆಯಪ್ಪಂದ ಮದಲು ನಿಂಗೋ ಮನೇಲೇ ಇದ್ದದಲ್ದಾ? ಇನ್ನು ಪುನಾ ಹಾಂಗೇ ಇರಿ”.

“ಇದೆಲ್ಲ ಹೇಳುದು ನೀನೇ ಅಪ್ಪನ್ನೇ?, ಎನಗೆ ನಂಬಿಕೆ ಬತ್ತಿಲ್ಲೆ”

ಮಂಗಳೆಗೆ ಕುಶಾಲಿನ ನೆಗೆ,  “ಆನು ಹೇಳಿದ್ದು ತಪ್ಪಾ, ಪೇಟೆಲಿಪ್ಪವಕ್ಕೆ ಡಾಕ್ಟ್ರು ಬೇಕಾರೆ ಒಂದೊಂದು ತಿರ್ಗಾಸಿಲ್ಲಿಯೂ ಸಿಕ್ಕುಗು, ಆದರೆ ಈ ಹಳ್ಳಿಲಿ?  ಡಾಕ್ಟ್ರಕ್ಕಳ ನಿಜವಾದ ಸೇವೆ ಬೇಕಪ್ಪದು ಇಲ್ಯಾಣವಕ್ಕೆ. ಹಾಂಗಾಗಿ……ಹಾಂಗಾಗಿ…ಅತ್ತೆ ಮಾವನ ಮನಸ್ಸಿಂಗೆ ಬೇನೆ ಮಾಡ್ಸಿಕ್ಕಿ ನಾವಿನ್ನು ಪೇಟೆಗೆ ಹೋಪಲಿಲ್ಲೆ., ಇದಕ್ಕೆ ನಿಂಗಳ ಒಪ್ಪಿಗೆಯ ಮುದ್ರೆ ಬೀಳೆಕೂಳಿ ಎನ್ನ ಕೋರಿಕೆ”

ಅರವಿಂದಂಗೆ ಕೊಶಿಯಾತು. ಕೃಷಿಕನ ಮದುವೆಯಾದ ಅದಕ್ಕೆ ಹಳ್ಳಿಯ ಬದ್ಕುಬಂಙ್ಙ ಅಪ್ಪಲಾಗಾಳಿಯೇ ಅವ ಪೇಟೆಗೆ ಹೋಪೋಳಿ ಅಬ್ಬೆಪ್ಪನ ಒತ್ತಾಯ ಮಾಡಿಂಡಿದ್ದದು. ಈಗ ಹೆಂಡತಿಯೇ ಒಪ್ಪಿದ್ದು ನೋಡಿ ಅವನ ಮನಸ್ಸು ತುಂಬಿ ಬಂತು.

ಫಕ್ಕನೆ ಅದರ ಕೈ ಹಿಡುದ  “ಬಾ ನಾವು ಇದರ ಅಬ್ಬೆಪ್ಪನತ್ರೆ ಹೇಳುವ”

“ಇದೆಂತ ಒಳ್ಳೆ ಮದಿಮ್ಮಾಯನಾಂಗೆ ಮಾಡುದು? ನಿಂಗಳೇ ಹೋಗಿ ಹೇಳಿ, ಆನೆಂತಕೆ ಒಟ್ಟಿಂಗೆ?”

“ಹಾಂಗಲ್ಲ, ಇದು ನಿನ್ನ ತೀರ್ಮಾನಕ್ಕೆ ಎನ್ನ ಒಪ್ಪಿಗೆ ಬಿದ್ದದಷ್ಟೆ, ನೀನೇ ಅಪ್ಪನತ್ರೆ ಹೇಳೆಕು”. ಅದರ ಕೈ ಹಿಡ್ಕೊಂಡೇ ಹಟ್ಟಿಗೋದ. ಅಪ್ಪನತ್ರೆ ಎಲ್ಲ ವಿಷಯ ಹೇಳಿದ. ದನಗೊಕ್ಕೆ ತಿಂಬಲೆ ಹಾಕುಲೆ ಬಂದ ಪಾರ್ತಕ್ಕನೂ ಅಲ್ಲಿತ್ತಿದ್ದವು. ಮಗ ಸೊಸೆಯ ತೀರ್ಮಾನ ಕೇಳಿ ಅವರ ಮನಸ್ಸುದೇ ತುಂಬಿ ಬಂತು. ಸೊಸೆಯ ಹತ್ತರೆ ಬಂದು ಅದರ ಕೈ ಹಿಡ್ಕೊಂಡವು.” ನೀನು ಬರೀ ಸೊಸೆಯಲ್ಲ, ಎಂಗಳ ಮನೆಯ ಬೆಣ್ಚಿನ ದೀಪ, ಮಾವನ ಬಿಟ್ಟಿಕ್ಕಿ ಹೇಂಗೆ ನಿಂಗಳೊಟ್ಟಿಂಗೆ ಬಪ್ಪದೂಳಿತ್ತಿದ್ದೆ. ಪುಳ್ಳಿಯ ಬಿಟ್ಟು ನಿಂಬಲೂ ಮನಸ್ಸು ಕೇಳ್ತಿಲ್ಲೆ., ಈಗ ಮನಸ್ಸಿಂಗೆ ನೆಮ್ಮದಿಯಾತು.”

ಶಂಭಣ್ಣನೂ ಹತ್ತರೆ ಬಂದವು.. ಈ ದನಗಳ ಮಾರ್‍ಲಿಲ್ಲೆ ಹೇಳುದೇ ಅವಕ್ಕೊಂದು ಸಂತೋಷ.

” ಇಲ್ಲೆ ಮೋಳೇ,ಇನ್ನು ನಿಂಗಳ ಆರಿಂಗೂ ಕೊಡ್ಲಿಲ್ಲೆ. ಎನ್ನ ಸೊಸೆ ಇದ್ದನ್ನೇ, ಅದುವೇ ಹೇಳಿದ್ದು” ದನಗಳ ಕೊರಳು ಮುಟ್ಟಿ ಸಂತೋಷಲ್ಲಿ ಮಕ್ಕಳ ಹಾಂಗೆ ಹೇಳಿದವು ಶಂಭಣ್ಣ.

“ನಿನ್ನ ಈ ತೀರ್ಮಾನ ನಾಕು ಕೂಸುಗೊಕ್ಕೆ ‘ದಾರಿದೀಪ’ ದ ಹಾಂಗಿದ್ದು. ನಿನ್ನ ನೋಡಿ ಎಲ್ಲೋರೂ ಕಲಿಯೆಕು” ಅರವಿಂದನೂ ತುಂಬಿದ ಮನಸ್ಸಿಲಿ ಹೆಂಡತಿಯ ಹೊಗಳಿದ.

” ಅಜ್ಜಾ ದೀಪ ಎಲ್ಲಿದ್ದು?   ಎನಗೇ……ಪ್ರಣವ ಆಟಾಡಿ ಮನೆಯೊಳಾಂಗೆ ಬಂದಪ್ಪಗ ಆರನ್ನೂ ಕಾಣದ್ದೆ ಸೀದಾ ಹಟ್ಟಿಗೆ ಬಂದ. ಅಜ್ಜ ಪುಳ್ಳಿಯ ತೆಚ್ಚಿ ಕೊಂಡಾಟ ಮಾಡಿದವು.

” ಇನ್ನೀ ಅಜ್ಜಂಗೆಂತಕೋ ದೀಪ, ವಂಶ ಬೆಳಗುವ ದೀಪ ನೀನಿದ್ದೆ, ಮನೆ ಬೆಳಗುವ ಮಹಾಲಕ್ಷ್ಮಿ ಹಾಂಗೆ ಬೆಣಚ್ಚು ಕೊಡುವ ನಿನ್ನಬ್ಬೆ ಇದ್ದು. ನಿಂಗ ಎಲ್ಲೋರೂ ಎನ್ನೊಟ್ಟಿಂಗಿದ್ದರೆ ಈ ಅಜ್ಜಂಗೆ ಬೇರೆ ದೀಪ ಬೇಕೋ….” ಶಂಭಣ್ಣಂಗೆ ಸಂತೋಷಲ್ಲಿ ದೊಂಡೆ ಕಟ್ಟಿದಾಂಗಾಗಿ ಮುಂದೆ ಮಾತಾಡ್ಲೇ ಎಡ್ತಿದಿಲ್ಲೆ. ಅವರ ಈ ಕೊಶಿ ನೋಡಿದ ಮನೆಯವಕ್ಕೆಲ್ಲಾ ಸಂತೋಷಂದ ಕಣ್ಣಿಲ್ಲಿ ನೀರೇ ತುಂಬಿತ್ತು.

—-೦—-

{ಕಳುಹಿಸಿದವರು ವಿಜಯಾಸುಬ್ರಹ್ಮಣ್ಯ, ಕಾರ್ಯದರ್ಶಿ, ಕೊಡಗಿನಗೌರಮ್ಮ ಕಥಾಸ್ಪರ್ದೆ}

19 thoughts on “2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

  1. ಪ್ರಸನ್ನ…”ದಾರಿದೀಪ” ಕಥೆ ತುಂಬಾ ಚೆನ್ನಾಗಿ ಮೂಡಿಬಯಿಂದು. ಈ ಕಥೆ ನಿಜಾವಗಿಯೂ ಸಮಾಜಕ್ಕೇ ಒಂದು ದಾರಿದೀಪವಾಗಿ ಇದ್ದು. ಓದಿ ತುಂಬಾ ಖುಷಿ ಆತು. ಅಭಿನಂದನೆಗೊ.

  2. ಪ್ರಸನ್ನ…, `ದಾರಿದೀಪ’ ಈಗಷ್ಟೇ ಓದಿ ಮುಗುಶಿದೆ. ಓದಿ ಖುಷಿಯಾತು. ಅಭಿನಂದನೆಗೊ. ಮುಂದಾಣ ಕಥೆಗಳ ನಿರೀಕ್ಷೆಲಿ….
    ನಾಡಿದ್ದಿನ ಕಾರ್ಯಕ್ರಮಕ್ಕೆ ಶುಭಾಶಯಂಗೋ…

  3. ಕಥೆ ಓದಿ ತುಂಬಾ ಕುಶಿ ಅತು ,ಈಗನ ಯುವ ಪೀಳಿಗೆಗೆ ದಾರಿ ದೀಪವಗಿದ್ದು ..

  4. ಕಥಾಶೈಲಿ ತುಂಬ ಲಾಯಿಕಾಯಿದು. ಅಭಿನಂದನೆ ಗ

  5. ಹವ್ಯಕ ಭಾಷೆಲಿ ಸಮೃದ್ಧ ಸಾಹಿತ್ಯ.. ಈ ಕಥೆಯ ಓದಿಗೊ೦ಡು ಹೋದ ಹಾ೦ಗೆ ಹೃದಯ,ಮನಸ್ಸು ತು೦ಬಿ ಬ೦ತು.ನಿರೂಪಣೆ ತು೦ಬಾ ಲಾಯ್ಕ ಆಯಿದು.ಇದು ಕಥೆಯಾಗದ್ದೆ ನಮ್ಮ ಚರಿತ್ರೆ ಆಗಲಿ ಹೇಳ್ತ ಹಾರೈಕೆಗಳ ಒಟ್ಟಿ೦ಗೆ ಪ್ರತಿಭಾವ೦ತ ಕಥೆಗಾರ್ತಿ ಕೊಡಗಿನ ಗೌರಮ್ಮನ ಹೆಸರಿಲಿ ಕಥಾ ಸ್ಪರ್ಧೆ ಏರ್ಪಾಡು ಮಾಡಿ ನಮ್ಮ ಭಾಷೆಲಿ ಸಾಹಿತ್ಯ ರಚನೆಗೆ ಪ್ರೋತ್ಸಾಹ ಕೊಡ್ತಾ ಇಪ್ಪ ಆಯೋಜಕರಿ೦ಗೆ ಅಭಿನ೦ದನೆ ಸಲ್ಲುಸುತ್ತೆ.

  6. ಈ ಕಥೆಯ ಇಲ್ಲಿ ಒದಗಿಸಿದ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಸಂಚಾಲಕಿ ವಿಜಯತ್ತಿಗೆಗೆ ಧನ್ಯವಾದಂಗೋ

  7. ಕತೆ ಪ್ರಸ್ತುತಪಡಿಸಿದ್ದು ಲಾಯಿಕ ಅಯಿದು. ಸಾಮಾಜಿಕ ಕಳಕಳಿ ಎದ್ದು ಕಾಣುವ ಈ ಕತೆಲಿ ಅಕೇರಿಗೆ ಶಂಭಣ್ಣ ಹಟ್ಟಿ ಬೈಪಣೆಲಿ ಕೂದು ದನಗಳೊಟ್ಟಿಂಗೆ ತನ್ನ ಮನದಾಳದ ಸಂಕಟವ ಹೇಳುವದು ತುಂಬಾ ಹೃದಯಸ್ಪರ್ಶಿ.
    ಅದೇ ರೀತಿಲಿ ಸೊಸೆ, ತಾನು ಇಲ್ಲಿಯೇ ಉಳಕ್ಕೊಳ್ತೆ ಹೇಳಿ ಗಂಡನ ಹತ್ರೆ ಹೇಳುವದು, ಶಂಭಣ್ಣ ನ ಹೃದಯಾಂತರಾಳದ ಮಾತುಗೋ “ಇನ್ನೀ ಅಜ್ಜಂಗೆಂತಕೋ ದೀಪ, ವಂಶ ಬೆಳಗುವ ದೀಪ ನೀನಿದ್ದೆ, ಮನೆ ಬೆಳಗುವ ಮಹಾಲಕ್ಷ್ಮಿ ಹಾಂಗೆ ಬೆಣಚ್ಚು ಕೊಡುವ ನಿನ್ನಬ್ಬೆ ಇದ್ದು. ನಿಂಗ ಎಲ್ಲೋರೂ ಎನ್ನೊಟ್ಟಿಂಗಿದ್ದರೆ ಈ ಅಜ್ಜಂಗೆ ಬೇರೆ ದೀಪ ಬೇಕೋ….” ಇವೆಲ್ಲವೂ ಮನಸ್ಸಿನ್ಗೆ ತುಂಬಾ ನಾಟುತ್ತು, ಒಳ್ಳೆಯ ಆಶಯಲ್ಲಿ ಕತೆ ಮುಕ್ತಾಯ. ಈಗಾಣ ಕಾಲದ ಪರಿಸ್ಥಿತಿಗೆ ಅತ್ಯಂತ ಅಗತ್ಯ ಹೇಳಿ ತೋರಿಸಿಕೊಟ್ಟ ಕತೆಯ ಪ್ರಸ್ತುತಪಡಿಸಿದ ಪ್ರಸನ್ನಾ ಚೆಕ್ಕೆಮನೆ ಇವಕ್ಕೆ ಧನ್ಯವಾದಂಗೊ

  8. ಕಥೆ ತುಂಬಾ ಲಾಯಕಿತ್ತು. ನಿಜವಾಗಿಯೂ ಮನಸ್ಸಿಂಗೆ ತಟ್ಟುವ ಹಾಂಗಿದ್ದು. ಈಗಾಣ ಮಕ್ಕೊಗೆ ಒಳ್ಳೆ ಸಂದೇಶ ಕೊಡ್ತು. ಎಂ ಬಿ ಬಿ ಎಸ್ ಆದವು ರೂರಲ್ ಸರ್ವೀಸು ಮಾಡ್ಳೇ ಬೇಕು ಹೇಳಿ ಘನಸರಕಾರವೇ ಹೇಳಿದ್ದು. ಹಾಂಗೆ ಮಂಗಳೆಯ ಮನಸ್ಸು ತಿರುಗಿದ್ದಾಯ್ಕೊ ? ತಮಾಷೆಗೆ ಹೇಳಿದೆ.

  9. ಪ್ರಸನ್ನಕ್ಕ , ಅಭಿನಂದನೆಗೊ .

    ಪ್ರತಿಯೊಂದು ಪಾತ್ರ (Character )ದ ಮಾತನ್ನೂ ಅವರವರದ್ದೇ ಆದ ಧಾಟಿಲಿ ಮೂಡುಸಿದ ನಿಂಗಳ ಕಥೆಯ ಶೈಲಿ ಖುಷಿಯಾತು . ಅಭಿನಂದನೆ
    ಶ್ರಮ ತೆಕ್ಕೊಂಡು ಹಾಕಿದ ವಿಜಯತ್ತೆಗೆ ಧನ್ಯವಾದ

  10. ಪ್ರಸನಾ್ನ ವಿ.ಚೆಕ್ಕೆಮನೆ ಅವರ ಕಥೆ ಓದಿ ಮನಸ್ಸು ತುಂಬಿ ಬಂತು. ನಮ್ಮ ಮನೆ-ಮನಗಳಲಿ ಇಂದು ನಡೆತ್ತಿಪ್ಪ ತುಮುಲ-ತಲ್ಲಣಗಳ ತಾಜಾ ಚಿತ್ರಣ. ಮತ್ತೆ ಕಥೆಲಿ ಬಪ್ಪ ಮಾವ ಶಂಭಣ್ಣ ನಮ್ಮತನವ ಒಳಿಶುಲೆ ಹೆಣಗುವ ಮನೆಮನೆಗಳಲಿಪ್ಪ ಅಪ್ಪಂದಿರ ಪ್ರತಿನಿಧಿಯಾದರೆ ,ಸುಮಂಗಲಿ ಇಂದಿನ ಯುವತಿಯರಿಂಗೆ ಪ್ರೇರಣೆ ಆಯೆಕು. ತುಂಬ ತುಂಬ ಅರ್ಥಪೂರ್ಣ ಕಥೆ…ಇದಕ್ಕೆ ಪ್ರಶಸ್ತಿಯೂ ಅರ್ಹವಾಗಿಯೇ ಸಂದಿದು. ಅವಕ್ಕೆ ಹಾರ್ದಿಕ ಅಭಿನಂದನೆ.

  11. ಅತ್ಯಪೂರ್ವದ ಮತ್ತೆ ಅಷ್ಟೆ ಅಪರೂಪದ ಹವ್ಯಕ ಮನೆ ಮಾತಿನ ಶಬ್ದಂಗಳ ಸಾಕಷ್ಟು ಸಂಗ್ರಹ ಕಂಡೆ. ಉತ್ತಮ . ಕಥಾವಸ್ತು . ಬೆಸ್ಟ್ . ಕಥೆಯ ಜೊತೆಗೆ ಹವ್ಯಕ ಭಾಷೆಯ ಸಂಪತ್ತನ್ನು ಬೆಳೆಸಿ ಓದುಗರಿಂಗೆ ಕೊಟ್ಟ ಕಥೆಗಾರ್ತಿಗೆ ಧನ್ಯವಾದ .

  12. ಕಥೆ ಹಾಕಿದ ವಿಜಯಕ್ಕ೦ಗೆ ಧನ್ಯವಾದ೦ಗೊ .

  13. ಕಥೆ ತುಂಬಾ ಲಾಯ್ಕ ಆಯಿದು ಪ್ರಸನ್ನ .ಲೋಕಲ್ಲಿ ಈಗ ಮಾಮೂಲಿಯಾಗಿ ನಡವ ವಿಷಯಕ್ಕೆ ಅನಿರೀಕ್ಷಿತ ತಿರುವು. ಶ೦ಭ೦ಣನ ಸೊಸೆಯ ಹಾ೦ಗಿದ್ದೊವು ಇದ್ದರೆ ಮಾತ್ರ ನಮ್ಮ ಮು೦ದಾಣ ಪೀಳಿಗಗೆ ಪಿತ್ರಾರ್ಜಿತ ಭೂಮಿಯ ಅನುಭವಿಸುಲೆ ಎದಿಗಷ್ಟೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×