ಅಜ್ಜಿ ಮಾಡುವ ಗೊಜ್ಜಿಗೊ..

January 23, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೊಜ್ಜಿ ಹೇಳುವಾಗ ಎನಗೆ ಆಚಮನೆ ಈಚನ ಮಗಳು ಸೀತನನ್ನೇ ನೆಂಪಪ್ಪದು. ಒಂದರಿ ಉದಿಯಪ್ಪಗ ಅದಕ್ಕೆ ಶಾಲಗೆ ಹೋಪ ಹೊತ್ತಿಂಗೆ ಮನೆಲಿ ಅಡಿಗೆ ಆಗಿತ್ತಿಲ್ಲೆಡ. ಹಾಂಗೆ ನಮ್ಮಲ್ಲಿಗೆ ಬಂತು ಕೂಸು, “ಅಜ್ಜಿ, ಎನಗೆ ಬುತ್ತಿಗೆ ಎಂತಾರು ಇದ್ದರೆ ಕೊಡಿ” ಹೇಳಿತ್ತು. ಅದೇ ದಿನ ಶಂಬಣ್ಣನಲ್ಲಿ ಪೂಜೆ ಇದ. ಹಾಂಗಾಗಿ ಉದಿಯಪ್ಪಗಳೇ ಅಡಿಗೆ ಆಗಿತ್ತಿದು. ಒಂದು ಟೊಮೆಟ ಗೊಜ್ಜಿಯುದೇ, ಅಲತ್ತೊಂಡೆ ತಾಳ್ಳುದೇ ಮಾಡಿದ್ದು. ಆ ಅಲತ್ತೊಂಡೆ ಮಾತ್ರ ಭಾರೀ ಲಾಯ್ಕಿತ್ತಾತ, ಚೂರಿಬೈಲಿಂದ ತಂದದು, ಎಳತ್ತೆಳತ್ತು. ಬಂಡಾಡಿಲಿ ಇದ್ದ ಒಂದು ಕಳದ್ದುದೇ ಬಂಬುಚ್ಚಿ ಬಂದು ಹೋಯಿದತ್ಲಾಗಿ. ಮೀಟರ್ ಅಲತ್ತೊಂಡೆ ಆಯಿದು ಒಂದು ನಾಕು ಅಷ್ಟೆ. ಹ್ಞಾ… ಸೀತಂಗೆ ಆ ಗೊಜ್ಜಿಯನ್ನುದೇ, ತಾಳ್ಳನ್ನುದೇ ಕೊಟ್ಟೆ ರಜ. ಹೊತ್ತೊಪ್ಪಾಗ ಕೂಸು ಬಂದು, “ಅಜ್ಜೀ ಎನಗೆ ಆ ಕೆಂಪು ಗೊಜ್ಜಿ ಬೇಕೂ..” ಹೇಳಿ ರಾಗ ಎಳತ್ತು. ಬಾರೀ ಕುಶಿ ಆಯಿದಡ ಅದಕ್ಕೆ. ಹಾಂಗೆ ಇದ್ದದರ ಪೂರ ಕೊಟ್ಟೆ. ಅದರಿಂದ ಮತ್ತೆ ಯಾವಾಗ ಬಂದರುದೇ “ಅಜ್ಜೀ… ಕೆಂಪುಗೊಜ್ಜಿ ಇದ್ದಾ…?” ಹೇಳಿ ಕೇಳುಗು. ಅದರ ಈಗ ಆನು ಕೆಂಪುಗೊಜ್ಜಿ ಕೂಚಕ್ಕ ಹೇಳಿಯೇ ದೆನಿಗೇಳುದು ಕುಶಾಲಿಂಗೆ. ಹ್ಹೆ ಹ್ಹೆ ಅದುದೇ ಉಸ್ಸಾರಿದ್ದಾತ, ಎನ್ನ ಕೆಂಪುಗೊಜ್ಜಿಅಜ್ಜಿ ಹೇಳಿ ಕೋಂಗಿ ಮಾಡ್ತು!

ಹ್ಮ್..ತಂಬುಳಿ ಉಂಡಿರನ್ನೆ. ಈ ಸರ್ತಿ ಕೆಲವು ಗೊಜ್ಜಿಗಳ ಮಾಡುವೊ ಆಗದೋ..?

ಕೆಂಪುಗೊಜ್ಜಿ(ಟೊಮೆಟ ಗೊಜ್ಜಿ): ಇಡೀ ಟೊಮೆಟವ ತೊಳದು ಬೇಶುದು. ಕಾಯಿ ಟೊಮೆಟ ಬೇಡ, ಆದಷ್ಟು ಹಣ್ಣಾದರೇ ಒಳ್ಳೆದು. ಅಜ್ಜಕಾನ ರಾಮ ಕೊಡೆಯಾಲಕ್ಕೆ ಹೋದರೆ ಟೊಮೆಟವೇ ತಪ್ಪದಡ, ಬೇರೆ ಎಂತರ ತಪ್ಪದೂಳಿಯೇ ಆಗ ಮಾಣಿಗೆ. ಆಚೊರ್ಷ ಟೊಮೆಟ ಸೆಸಿ ಮಾಡಿತ್ತಿದೆ ಒಂದು. ಕಾಯಿಯೂ ಬಿಟ್ಟಿತ್ತಿದು. ಆದರೆ ಕೊಡೆಯಾಲಲ್ಲಿ ಸಿಕ್ಕುತ್ತಾಂಗೆ ಒಳ್ಳೆತ ದೊಡ್ಡ ಆಯಿದಿಲ್ಲೆ ಮಾಂತ್ರ. ಸಣ್ಣ ಸಣ್ಣ ಟೊಮೆಟಂಗೊ. ಸರಿಕಟ್ಟು ಹಣ್ಣುದೇ ಆಯಿದಿಲ್ಲೆಪ್ಪ. ಅದರ ಮೇಲಾರ ಮಾಡಿದ್ದು. ಮತ್ತೆ ಆ ಸೆಸಿಗೆ ಎಂತದೋ ಹುಳು ಹಿಡುದು ಹೋತು. ಮತ್ತೆ ಬೆಳೆಶುಲೇ ಹೋಯಿದಿಲ್ಲೆ. ಹ್ಮ್…ಟೊಮೆಟ ಬೆಂದತ್ತೋ..? ಅದರ ಇಳುಗಿ, ತಣ್ಣಂಗಪ್ಪಗ ಚೋಲಿ ತೆಗದು ಪುರುಂಚೆಕ್ಕು. ಕಾಯಿಟೊಮೆಟ ಆದರೆ ಪುರುಂಚಲೆ ಬಂಙ, ರುಚಿಯುದೇ ಅಷ್ಟೇನಿಲ್ಲೆ. ಅದು ಮೇಲಾರಕ್ಕೆ ಅಕ್ಕಷ್ಟೆ. ಪುರುಂಚಿದ್ದದಕ್ಕೆ ಒಂದೆರಡು ಹಸಿಮೆಣಸು ಕೊಚ್ಚಿಹಾಕಿ, ಬೆಲ್ಲ ಹಾಕಿ ಜೊಯಿಂಕ ಒಗ್ಗರಣೆ ಕೊಟ್ಟತ್ತು. ರುಚಿಗೆ ಬೇಕಪ್ಪಷ್ಟು ಉಪ್ಪು ಹಾಕುಲೆ ಮರದಿಕ್ಕೆಡಿ. ಇದಕ್ಕೆ ಬೇಶಿದ ನೀರನ್ನೂ ಸೇರ್ಸಲಕ್ಕು ಬೇಕಾರೆ, ನೀರ್‌ನೀರಾಯೆಕ್ಕಾರೆ. ಮತ್ತೆ ಬೆಲ್ಲ ರಜ ಬಲ ಇರಳಿ. ಸೀವು ಸೀವಾದರೆ ಲಾಯಿಕಾವುತ್ತು (ಸೀವು ಅಪ್ಪವಕ್ಕೆ). ಕೆಂಪುಗೊಜ್ಜಿ ತಯಾರಾತದ.
ಟೊಮೆಟದ್ದು ಇನ್ನೊಂದು ಗೊಜ್ಜಿ ಇದ್ದು. ಅದು ಬಾರೀ ಸುಲಾಬ. ಎರಡು ಟೊಮೆಟ, ಹಸಿಮೆಣಸು, ನೀರುಳ್ಳಿ ಎಲ್ಲ ಕೊಚ್ಚಿಹಾಕಿ ಅದಕ್ಕೆ ಉಪ್ಪು, ಮೊಸರು ಬೆರುಸಿ, ಒಗ್ಗರಣೆ ಕೊಟ್ರಾತು. ಅಂಬೆರ್ಪಿಂಗೆ ಬೇಕಪ್ಪಾಗ ಇದರ ಮಾಡ್ಯೊಂಬಲಕ್ಕು.
ಹೇಳಿದಾಂಗೆ ಟೊಮೆಟಕ್ಕೆ ಶಕ್ಕರೆ ಹಾಕಿ ತಿಂಬದು ಗೊಂತಿದ್ದಲ್ದೋ..? ಗೊಜ್ಜಿ ಮಾಡುವಾಗ ಒಂದೆರಡು ಟೊಮೆಟ ಜಾಸ್ತಿ ಕೊಚ್ಚಿ, ಅದಕ್ಕೆ ಶಕ್ಕರೆ ಹಾಕಿ ಮಡುಗಿರೆ, ರಜ ಹೊತ್ತಪ್ಪಗ ಸರೀ ಎಳೆತ್ತು ಸೀವು. ಮಕ್ಕೊಗೆಲ್ಲ ಬಾರೀ ಪ್ರೀತಿ ಇದು. ನವಗುದೇ ತಿಂಬಲೆ ಕುಶೀ ಆವುತ್ತು ಅಲ್ದೋ..?

ನೀರಿಲಿ ಹಾಕಿದ ಮಾವಿನಕಾಯಿ ಗೊಜ್ಜಿ: ಸೊಳೆ ಹಾಕಿ ಮಡುಗುವ ಹಾಂಗೇ ಮಾವಿನಕಾಯಿಯನ್ನುದೇ ತೆಗದು ಮಡುಗುತ್ತು. ಮಾವಿನಕಾಯಿಯ ತೊಳದು ಭರಣಿಲಿ ಹಾಕೆಕು. ಅದಕ್ಕೆ ಉಪ್ಪುನೀರು ಕೊದಿಶಿ, ತಣಿಶಿ ಎರವದು. ಒಂದು ಐವತ್ತು ಮಾವಿನಕಾಯಿಗೆ ಅರ್ದ ಸೇರು ಉಪ್ಪು ಹಾಕೆಕು. ಇದು ಎರಡು ವರ್ಷಕ್ಕೆಲ್ಲ ಎಂತ ಆವುತ್ತಿಲ್ಲೆ. ಮಾವಿನಕಾಯಿ ಇಲ್ಲದ್ದಿಪ್ಪಗಳೂ ಮಾವಿನಕಾಯಿ ಗೊಜ್ಜಿ ಉಂಬಲಕ್ಕು. ಹೆಚ್ಚಾಗಿ ನೆಕ್ಕರೆ ಮಾವಿನಕಾಯಿಯನ್ನೇ ಹೀಂಗೆ ಹಾಕಿ ಮಡುಗುತ್ತ ಕ್ರಮ. ಬಂಡಾಡಿಲಿ ಒಂದು ಐದಾರು ಮರಂಗೊ ಇದ್ದು, ನೆಕ್ಕರೆದು. ತೋಟದ ಮೂಲೆಲಿಪ್ಪ ಮರ ಒಂದು ಮಾತ್ರ ಮಂಗಂಗೊಕ್ಕೇಳಿಯೇ ಆಯಿದು. ಒಳಿಶುತ್ತವೇ ಇಲ್ಲೆ. ಆಚೊಡೇಣ ತೆಂಗಿನಕಾಯಿ, ಅಡಕ್ಕೆ ಪೂರ ಹಾಳು ಮಾಡಿ ಹಾಕುತ್ತವು. ಅಜ್ಜಿ ಬೊಬ್ಬೆ ಹೊಡದರೆ ಕೇಳುಗೋ… ಎಂತರ ಮಾಡುದು. ಕಳುದೊರ್ಷ ಎಲ್ಲ ಮರಲ್ಲಿಯುದೇ ಪಲ ಬಿಟ್ಟಿತ್ತಿದು. ಈ ಸರ್ತಿ ಮಾತ್ರ ಮಳೆಂದಾಗಿ ಏವ ಆಲಪಲವೂ ಇಲ್ಲೆಯೋಳಿ. ಕಳುದೊರ್ಷ ನೀರಿಲಿ ಹಾಕಿ ಮಡಿಗಿದ ಮಾವಿನಕಾಯಿಯೇ ಗತಿ. ಉಪ್ಪಿನಕಾಯಿಯ ಸುದ್ದಿಗೇ ಹೋಪಲೆಡಿಯ. ಅದಿರಳಿ. ಗೊಜ್ಜಿ ಮಾಡ್ಳೆ, ಒಂದೆರಡು ಮಾವಿನಕಾಯಿಯ ತೊಳದು ಪುರುಂಚುದು. ಅದಕ್ಕೆ ಒಂಚೂರು ಬೆಲ್ಲ, ಬೇಕೂಳಿ ಆದರೆ ಉಪ್ಪು ಹಾಕುದು. ಒಂದೆರಡು ಕಾಯಿಮೆಣಸು ನುರಿವದು. ನುರಿವಾಗ ಜಾಗ್ರತೆ, ಕೆಲವು ಜನಕ್ಕೆ ಆವುತ್ತಿಲ್ಲೆ, ಕೈ ವಿಪರೀತ ಉರಿತ್ತು. ಹಾಂಗಾವುತ್ತರೆ, ಕೂಡ್ಳೆ ಹುಳಿಮಜ್ಜಿಗೆಲಿ ಕೈ ತೊಳೆಯೆಕು ಇಲ್ಲದ್ರೆ ಜೆಂಗಲ್ಲಿಪ್ಪ ಹುಳಿ ತೆಗದು ಅದರಲ್ಲಿ ಕೈ ತಿಕ್ಕಿ ತೊಳದರೂ ಆವುತ್ತು. ಹ್ಮ್…ಪುರುಂಚಿದ್ದದಕ್ಕೆ ರಜ ಮೊಸರು ಹಾಕಿ ಒಗ್ಗರಣೆ ಕೊಟ್ಟತ್ತು. ಮೊಸರು ಹಾಕದ್ರೂ ನಡೆತ್ತು. ಅದೊಂದು ಬೇರೆ ರುಚಿ.

ಹಾಗಲಕಾಯಿ ಗೊಜ್ಜಿ: ಹಾಗಲಕಾಯಿ ಆರೋಗ್ಯಕ್ಕೆ ಬಾರೀ ಒಳ್ಳೆದು, ಗೊಂತಿದ್ದನ್ನೇ…? ಇದರ ಗೊಜ್ಜಿ ಮಾಡುವಾಗ ಸರಿಯಾದ ಪಾಕ ಬಂದರೆ ಮಾತ್ರ ಲಾಯ್ಕಪ್ಪದು. ಏವದಾರು ಒಂದು ಹೆಚ್ಚುಕಮ್ಮಿ ಆದರೂ ಎಂತದೋ ಸರಿಆಗದ್ದಾಂಗಾವುತ್ತು. ಮತ್ತೆ ಕೈಕ್ಕೆಯುದೇ ಅಲ್ದೊ.. ಹಾಗಲಕಾಯಿಯ ತೊಳದು, ಬಿತ್ತು ತೆಗದು ಸಣ್ಣಕ್ಕೆ ಕೊರವದು. ಅದಕ್ಕೆ ನೀರು, ಬೆಲ್ಲ, ಉಪ್ಪು, ಹಸಿಮೆಣಸು ಎಲ್ಲ ಹಾಕಿತ್ತು. ಹಾಗಲಕಾಯಿ ಬಾಗದಷ್ಟೇ ಬೀಂಪುಳಿ ಬಾಗವನ್ನುದೇ ಹಾಕಿರೆ ಬಾರೀ ಲಾಯಿಕಾವುತ್ತು. ಇಲ್ಲದ್ರೆ ಒಂದ್ರಜ ಹುಳಿ ಹಾಕಿತ್ತು. ಎಲ್ಲ ಒಟ್ಟಿಂಗೆ ಲಾಯಿಕ ಬೇಶುದು. ಮತೆ ಪರಿಮ್ಮಳದ ಬೆಳ್ಳುಳ್ಳಿ ಒಗ್ಗರಣೆ ಕೊಟ್ರೆ ಗೊಜ್ಜಿ ಆತದ.

ಚಿತ್ತುಪುಳಿ ಚೋಲಿ ಗೊಜ್ಜಿ: ಸಾಮಾನ್ಯ ಎಲ್ಲೊರಿಂಗುದೇ ಚಿತ್ತುಪುಳಿ ಹೇಳಿರೆ ಇಷ್ಟವೇ. ಅದರ ಚೋಲಿಂದ ಪಷ್ಟ್ಲಾಸು ಗೊಜ್ಜಿ ಮಾಡ್ಳಾವುತ್ತದ. ಚೋಲಿಯ ಸಣ್ಣಕ್ಕೆ ಕೊಚ್ಚಿ ತುಪ್ಪಲ್ಲಿ ಹೊರಿಯೆಕ್ಕು. ಚೂರು ಹುಳಿ, ಬೆಲ್ಲ, ಉಪ್ಪು, ನೀರು,ಹಸಿಮೆಣಸು ಎಲ್ಲ ಹಾಕಿ ಕೊದಿಶೆಕ್ಕು. ಅದು ಸರೀ ಕೊದಿಯೆಕು ಮಾತ್ರ. ಇದುದೇ ಸರಿ ಪಾಕ ಬಂದರೆ ಮಾಂತ್ರ ಲಾಯ್ಕಕ್ಕು. ಮತ್ತೆ ಒಂದು ಬೆಳ್ಳುಳ್ಳಿ ಒಗ್ಗರಣೆ ಕೊಟ್ರೆ ಗೊಜ್ಜಿ ಆತು.

ಬಟಾಟೆ ಗೊಜ್ಜಿ: ಎರಡು ಇಡೀ ಬಟಾಟೆ ಬೇಶುದು. ಚೋಲಿ ತೆಗದು, ಕೈಲಿ ಹೊಡಿಮಾಡಿ ಅದಕ್ಕೆ ಉಪ್ಪು, ಹಸಿಮೆಣಸು, ಮೊಸರು, ನೀರುಳ್ಳಿ ಎಲ್ಲ ಹಾಕಿ ಲಾಯಿಕ ತೊಳಸುದು. ಮತ್ತೆ ಒಂದು ಒಗ್ಗರಣೆ ಕೊಡುದು. ಮಕ್ಕಳಂದ ಹಿಡುದು ಅಜ್ಜಂದ್ರೊರೆಗೆ ಎಲ್ಲೊರಿಂಗೂ ಕುಶಿ ಆವುತ್ತು ಈ ಗೊಜ್ಜಿ. ಬಟಾಟೆ ಆಗದ್ದೋರು ಕಮ್ಮಿ ಅಲ್ದೊ…

ಬದನೆ ಗೊಜ್ಜಿ: ಇಡೀ ಬದನೆಯ ಕೆಂಡಲ್ಲಿ ಸುಟ್ಟಾಕೆಕು. ಉಮ್ಮಪ್ಪ ಈಗ ಅದೆಂತದೋ ಬಿಗಿಲು ಹಾಕುತ್ತ ಪಾತ್ರಲ್ಲಿ ಬೇಶುತ್ತವು. ಹಾಂಗೆ ಮಾಡಿರೂ ಅಕ್ಕು, ಆದರೆ ಕೆಂಡಲ್ಲಿ ಸುಟ್ಟಾಕಿದ ರುಚಿ ಬಾರ ಮಾಂತ್ರ. ಅದು ತಣುದಪ್ಪಗ ತೆಗದು, ಪುರುಂಚುದು. ಅದಕ್ಕೆ ಒಂದೆರಡು ಹಸಿಮೆಣಸು ಕೊರದು ಹಾಕಿ, ಉಪ್ಪು, ಬೆಲ್ಲ,ಹುಳಿ ಹಾಕುದು. ಒಂದು ನೀರುಳ್ಳಿಯನ್ನುದೇ ಕೊಚ್ಚಿ ಹಾಕಿತ್ತು. ಲಾಯಿಕ ತೊಳಸಿ, ಒಗ್ಗರಣೆ ಕೊಟ್ರೆ ಬದನೆ ಗೊಜ್ಜಿ ಆತು.

ಅಂಬಟೆ ಗೊಜ್ಜಿ: ಹಣ್ಣಂಬಟೆ ಇಡೀ ಬೇಶಿ ಪುರುಂಚುದು. ಬೆಲ್ಲ, ಉಪ್ಪು, ನೀರುಳ್ಳಿ, ಮೆಣಸು ಹಾಕಿ ಒಗ್ಗರಣೆ ಕೊಡುದು. ಬದನೆ ಗೊಜ್ಜಿಯ ಹಾಂಗೆಯೇ, ಆದರೆ ಹುಳಿ ಹಾಕುದು ಬೇಡ ಇದಕ್ಕೆ.

ನೆಂಪಿಂಗೆ ಬಂದ ಗೊಜ್ಜಿಗಳ ಬರದೆ ಅದ. ನಿಂಗೊಗೆ ಏವದಾರು ನೆಂಪು ಬಂದರೆ ಹೇಳಿಕ್ಕಿ ಆತೊ…

ಅಜ್ಜಿ ಮಾಡುವ ಗೊಜ್ಜಿಗೊ.. , 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. Gojjigala hesaru maduva vidhana ella oduvaga undare akku heLi ashe avthu.

  [Reply]

  VA:F [1.9.22_1171]
  Rating: +1 (from 1 vote)
 2. raamajja

  innondu AJJI Gojju heli iddanne.. praya aatanne martattayikku.. pulyakka nempe madu helire avakke idella gonte ille idaa

  [Reply]

  VA:F [1.9.22_1171]
  Rating: 0 (from 0 votes)
 3. ಬದನೆಯ ಹುಳಿ, ಉಪ್ಪು ಹಾಕಿ ಬೇಶಿ, ಅರೆಚ್ಚಿ, ಹಸಿಮೆಣಸು, ಒಗ್ಗರಣೆ ಕೊಟ್ಟರೆ ಇನ್ನೊಂದು ರುಚಿ ರುಚಿ ಗೊಜ್ಜಿ ತಯಾರು. ಹಣ್ಣು ತೊಂಡಗೊ ಇದ್ದರೂ ಬೇಶಿ ಹೀಂಗೇ ಇಪ್ಪ ಗೊಜ್ಜಿ ಮಾಡ್ಲಕ್ಕು. ಏನೇ ಹೇಳಿ, ಇದರ ಓದಿ ಬಾಯಿಲಿ ನೀರು ಬಂತು.

  [Reply]

  VA:F [1.9.22_1171]
  Rating: 0 (from 0 votes)
 4. Laykiddu. bareddara odule kushi avuthu.indu manege hogi tomato gojji madude.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿಮುಳಿಯ ಭಾವಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಒಪ್ಪಕ್ಕಜಯಶ್ರೀ ನೀರಮೂಲೆvreddhiಚೆನ್ನೈ ಬಾವ°ಡಾಮಹೇಶಣ್ಣಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಅನು ಉಡುಪುಮೂಲೆಎರುಂಬು ಅಪ್ಪಚ್ಚಿಸುಭಗಅಜ್ಜಕಾನ ಭಾವಸರ್ಪಮಲೆ ಮಾವ°ಪುಟ್ಟಬಾವ°ವಿಜಯತ್ತೆವಿದ್ವಾನಣ್ಣನೆಗೆಗಾರ°ಕಜೆವಸಂತ°ತೆಕ್ಕುಂಜ ಕುಮಾರ ಮಾವ°ಗಣೇಶ ಮಾವ°ಜಯಗೌರಿ ಅಕ್ಕ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ