Oppanna.com

ಕಾಶಿ(ಕುಂಬ್ಳಕಾಯಿ) ಹಲ್ವ

ಬರದೋರು :   ಬಂಡಾಡಿ ಅಜ್ಜಿ    on   02/05/2010    23 ಒಪ್ಪಂಗೊ

ಓ ಮೊನ್ನೆ ಪುಳ್ಯಕ್ಕೊಗೆ ಹಾಳೆಲಿ ಉಂಬಲೆ ಕೊದಿ ಆದ್ದದು. ಎಂಗೊ ಸಣ್ಣಾದಿಪ್ಪಗ ಅದರಲ್ಲೇ ಉಂಡೊಂಡಿದ್ದದು ಹೆಚ್ಚಾಗಿ. ಅದು ರುಚಿಯೇ ಬೇರೆ. ಹಾಂಗೆ ಪುಳ್ಯಕ್ಕೊಗೆ ಉಂಬಲೆ ಹೇಳಿಗೊಂಡು ಹಾಳೆ ಕಡಿವಲೆ ಹೋದ್ದು ಕೆಳಾಣ ತೋಟಕ್ಕೆ.
ಸೋಗೆ ಹಿಡುದು ಹಾಳೆ ಕಡಿವಾಗ ಕತ್ತಿ ಕೈಗೆ ತಾಗಿತ್ತು! ದೊಡಾ ಗಡಿ ಆತದು. ಪ್ರಾಯ ಆದ ಮತ್ತೆ ಹೀಂಗೆ ಗಾಯಂಗೊ ಆದರೆ ಬೇಗ ಗುಣ ಆಗ ಇದಾ. ಆನು ಮತ್ತೆ ಬೇರೆ ಮದ್ದುದೇ ಮಾಡ್ಳೆ ಹೋಯಿದಿಲ್ಲೆ. ಪಂಚವಲ್ಲಿ ತೈಲ ಕಿಟ್ಟಿದ್ದದು. ಸುಮಾರು ದಿನ ಬೇನೆ ಇದ್ದ ಕಾರಣ ಕರೆಂಟಿನ ಪುಸ್ತಕದ ಮುಂದೆ ಕೂಪಲೇ ಆತಿಲ್ಲೆ. ಈಗ ಕಮ್ಮಿ ಇದ್ದು.
ಪುಳ್ಯಕ್ಕೊಗೆಲ್ಲ ರಜೆ. ಮೊನ್ನೆಂದ ಎನಗೆ ಕೈಬೇನೆ ಇದ್ದ ಕಾರಣ ಎಂತ ಮಾಡ್ಳಾಗಿತ್ತಿಲ್ಲೆ. ಈಗ ಗುಣ ಆದ ಕಾರಣ ಕಾಶಿ ಹಲ್ವ (ಕುಂಬ್ಳಕಾಯಿ ಹಲ್ವ) ಮಾಡುವಾಳಿ ಹೆರಟದು.
ಉಗ್ರಾಣದ ಅಡ್ಡಕ್ಕೆ ಬಾಳೆಬಳ್ಳಿಲಿ ನೇಲುಸಿ ತೆಗದು ಮಡಿಗಿದ ಕುಂಬ್ಳಕಾಯಿ ಇದ್ದಿದಾ. ಪೇಟೆಂದ ಬಪ್ಪ ಪುಳ್ಯಕ್ಕೊಗೆಲ್ಲ ಅದರ ನೋಡಿ ಬಾರೀ ಆಶ್ಚರ್ಯ. ಅದೆಂತರ, ಅದೆಂತಕೆ ಹೇಳಿಯೊಂಡು ಹತ್ತು ಹಲವು ಪ್ರಶ್ನೆಗೊ. ಹ್ಮ್ ಅದಿರಳಿ.
ಹೇಳಿದಾಂಗೆ ಈ ಕುಂಬ್ಳಕಾಯಿಲಿ ಎರಡು ಬಗೆಗೊ ಇದ್ದು. ದೊಡ್ಡಜಾತಿಯುದೇ, ಸಣ್ಣಜಾತಿಯುದೇ. ಸಣ್ಣಜಾತಿ ಕುಂಬ್ಳವ ಕಾಶಿಕುಂಬ್ಳಕಾಯಿ ಹೇಳಿ ಹೇಳ್ತವು. ಹಾಂಗೆ ಅದರಿಂದ ಮಾಡಿದ ಹಲ್ವ ಕಾಶಿಹಲ್ವ. ಹಲ್ವಕ್ಕೆ ದೊಡ್ಡಜಾತಿ ಕುಂಬ್ಳವೂ ಆವುತ್ತು. ಎರಡುದೇ ಲಾಯ್ಕಾವುತ್ತು. ದೊಡ್ಡಜಾತಿ ಕುಂಬ್ಳಕಾಯಿಂದ ಮಾಡಿರೆ ಬರೇ ಕುಂಬ್ಳಕಾಯಿ ಹಲ್ವ ಹೇಳಿ ಹೇಳುದು.
ಆನು ಮಾಡ್ಳೆ ಹೆರಟದು ಕಾಶಿ ಕುಂಬ್ಳದ ಹಲ್ವ. ಎರಡುದೇ ಮಾಡ್ತ ಕ್ರಮಲ್ಲಿ ಏನೂ ವ್ಯತ್ಯಾಸ ಇಲ್ಲೆಪ್ಪ.
ಅದರ ಚೋಲಿ, ತಿರುಳು ಎಲ್ಲ ತೆಗೆಯೆಕ್ಕು ಮದಾಲು. ಚೋಲಿಯ ರಜ ದಪ್ಪಕ್ಕೆ ತೆಗದರೆ ಮತ್ತೆ ತಾಳ್ಳು ಮಾಡ್ಳಕ್ಕು. ಚೂರಿಬೈಲು ದೀಪ ಅದರ ಬಿತ್ತಿನ ಅಂಟುಸಿ ಎಂತಾರು ಚಿತ್ರ ಮಾಡ್ತು. ತಿರುಳಿನ ದನಗೊಕ್ಕೆ ತಿಂಬಲೆ ಕೊಟ್ಟತ್ತು. ಅದಾ ಎಂತದೂ ವೆರ್ಥ ಅಪ್ಪಲಿಲ್ಲೆ ನಮ್ಮಲ್ಲಿ.
ಚೋಲಿ, ತಿರುಳು ತೆಗದಿಕ್ಕಿ ಸಣ್ಣಕ್ಕೆ ಕೊಚ್ಚೆಕ್ಕು. ಒಪ್ಪಕ್ಕ ಆದರೆ ಅದೆಂತದೋ ತುರಿತ್ತ ತಗಡಿಲಿ ತುರುದು ಕೊಡ್ತು. ಎನಗೆ ಅದು ಅರಡಿಯ, ಜಾರುತ್ತು, ಕೈಗೇ ಬತ್ತು.
ಮತ್ತೆ ಅದರ ಒಂದು ಬಣಲೆಗೆ ಹಾಕಿ ಒಲೆಲಿ ಮಡುಗಿತ್ತು. ನೀರು ಆರುವನ್ನಾರ ಕಾಸೆಕ್ಕು. ಅಷ್ಟಪ್ಪಾಗ ಬೆಂದಿರ್ತುದೆ. ಮತ್ತೆ ಸಕ್ಕರೆ ಹಾಕಿ ಪುನಾ ಕಾಸೆಕ್ಕು. ಅದು ಕರಗಿ, ಕಾದು ಒಂದು ಪಾಕ ಬಪ್ಪಲಪ್ಪಗ ತುಪ್ಪ ಹಾಕಿತ್ತು. ರಜ ಮೊಗಚ್ಚಿಕ್ಕಿ, ತಳ ಬಿಡ್ಳಪ್ಪಗ ಇಳುಗೆಕ್ಕು.
ಪರಿಮ್ಮಳಕ್ಕೆ ಬೇಕಾರೆ ನಾಕು ಏಲಕ್ಕಿ ಗುದ್ದಿ ಹಾಕುಲಕ್ಕು. ಕೆಲಾವು ಜನ ರಂಗಿನ ಹೊಡಿಯುದೇ ಹಾಕುತ್ತವು.
ಒಂದು ಬಟ್ಳಿಂಗೆ ತುಪ್ಪ ಉದ್ದಿ ಹಲ್ವವ ಅದರಲ್ಲಿ ಹರಡಿ, ತಣುದಪ್ಪಾಗ ತುಂಡು ಮಾಡಿ ತಿಂಬಲೆ ಕೊಟ್ಟತ್ತು.
moncler frakker salg
ಪುಳ್ಯಕ್ಕೊಗೆ ಬಾರೀ ಪ್ರೀತಿ ಇದು. ಕೆಲಾವು ಜನಕ್ಕೆ ಮಾತ್ರ ಕುಂಬ್ಳಕಾಯಿಯ ಪರಿಮ್ಮಳ ಆವುತ್ತಿಲ್ಲೆ. ಅವಕ್ಕೆ ಹಲ್ವದೇ ಅಷ್ಟಕ್ಕಷ್ಟೆ. ನಮ್ಮ ಬೈಲಿನ ಪುಳ್ಯಕ್ಕೊ ಆರುದೇ ಹಾಂಗಿಲ್ಲೆಪ್ಪ. ಪೇಟೆ ಮಕ್ಕೊಗೆ ಅದಾಗ, ಇದಾಗ ಹೇಳ್ಯೊಂಡು ಒಂದೊಂದು ಕೋಲ.
ಇದರ ಹಾಂಗೆಯೇ ಕೇರೇಟಿನ ಹಲ್ವದೇ ಮಾಡ್ಳಾವುತ್ತು. ಈಗ ದಣಿಯ ಬರವಲೆಡಿತ್ತಿಲ್ಲೆ. ಕೈ ಬೇನೆ ಸರೀ ಕಡಮ್ಮೆ ಆದ ಮತ್ತೆ ಬರೆತ್ತೆ ಆತೊ..

23 thoughts on “ಕಾಶಿ(ಕುಂಬ್ಳಕಾಯಿ) ಹಲ್ವ

  1. ನಿಂಗೊ ಹೇಳಿದ ಹಾಂಗೆ ಹಲ್ವ ಮಾಡಿದೆ. ರುಚೀ ಆಯಿದು. ಓಡು ತಾಳ್ಳುದೆ ಮಾಡಿದೆ. ಫುಡ್ ಪ್ರೋಸೆಸರ್ ಹೇಳ್ತದಲ್ಲಿ ತುರಿವಲೆ ತುಂಬಾ ಸುಲಭ ಆವ್ತು.
    ಥ್ಯಾಂಕ್ಸ್ ಅಜ್ಜಿ! 🙂 ನಿಂಗೋಗೆ ಪಾರ್ಸೆಲ್ ಮಾಡಿದ್ದೆ, ಸಿಕ್ಕಿತ್ತೋ?

  2. ಅಜ್ಜೀ, ಸಕ್ಕರೆ ತುಪ್ಪ ಎಷ್ಟೆಷ್ಟು ಅಳತೆ ಹಾಕೆಕು? ಒಂದು ಸಣ್ಣ ಕುಂಬಳಕಾಯಿಲಿ ಎಷ್ಟು ಹಲ್ವ ಆವ್ತು? ಈ ಆದಿತ್ಯವಾರ ಮಾಡುವಾ ಹೇಳಿ ಗ್ರೇಶುದು..

    1. ಆಗಲಿ ಮಾಡಬ್ಬೊ…. ಒಂದು ಗ್ಲಾಸು ಕೊಚ್ಚೆಲಿಂಗೆ ಒಂದೂವರೆ ಗ್ಲಾಸು ಅಪ್ಪಷ್ಟು ಶೆಕ್ಕರೆ ಹಾಕೆಕ್ಕು. ತುಪ್ಪ ಅರ್ದ-ಮುಕ್ಕಾಲು ಕುಡ್ತೆ. ಕುಂಬ್ಳಕಾಯಿ ಹಲುವಕ್ಕೆ ತುಪ್ಪ ರೆಜ ಜಾಸ್ತಿಯೇ. ಆದರೆ ಬಾಳೆಹಣ್ಣು ಹಲುವಕ್ಕೆ ಬೇಕಪ್ಪಷ್ಟೆಲ್ಲ ಬೇಕಾವುತ್ತಿಲ್ಲೆಪ್ಪ.
      ಕುಂಬ್ಳದ ಚೋಲಿ ತೆಗವಗ ರೆಜಾ ದಪ್ಪಕೆ ತೆಗದು ಓಡಿನ ತಾಳ್ಳುದೇ ಮಾಡು. ಆರೋಗ್ಯಕ್ಕೂ ಒಳ್ಳೆದು. ಆತೊ?
      ಅಜ್ಜಿಗೆ ರುಚಿ ನೋಡುಲೆ ಕಳುಸಾತೊ ರೆಜ…

  3. kaashi halva bhaaree laika iddu.enaguu ondari maadi makkoge kodekku.aanu kashi halwa maadi tumba dina aatu.

  4. ಬಾಯಿಲಿ ನೀರು ಬತ್ತಾ ಇದ್ದು ಅಜ್ಜಿ… ಹೆಚ್ಚು ಆಶೆ ಬರುಸೆದ…

  5. ಎನಗೆ ನಿಜವಾಗಿ ಕೊದಿ ಆದ್ದದು ಕುಂಬಳಕಾಯಿ ಹಲ್ವ ತಿಂಬಲೆ ಅಲ್ಲ ; ಹಾಳೆಲಿ ಉಂಬಲೆ !! ಉಪ್ಪಿನಕಾಯಿ ಎಸರಿಂದಾಗಿ ಹಾಳೆಯೂ ಕಂಪು ಆಯಿಕ್ಕೊಂಡಿದ್ದದು ಈಗಳೂ ನೆಂಪು ಆವುತ್ತು.

    1. ಅಪ್ಪಪ್ಪು.. ಹಾಳೆಲಿ ಮಜ್ಜಿಗೆ ಅಶನಕ್ಕೆ ಇಡಿಕ್ಕಾಯಿ ಉಪ್ಪಿನಕಾಯಿ ಹಾಕಿಯೊಂಡು ಉಂಬಲೆ ಅಂತೂ ಬಾರೀ ರುಚಿ ಆವುತ್ತು…

    1. ಹೋಟೇಲಿಲಿ ಮಾಡಿದ್ದದು ಆರಿಂಗೆ ರುಚಿ ಆವುತ್ತಿಲ್ಲೆ… ಬಾಯಿಗೆ ರುಚಿ ಆದರುದೇ ಕೆಲವು ಸರ್ತಿ ಹೊಟ್ಟೆಗೆ ಆಗದ್ದೆ ಬತ್ತು.. ಅದರಿಂದ ಮನೆಲೆ ಸೊಸ್ತಕೆ ಮಾಡಿ ತಿಂಬದು ಒಳ್ಳೆದಲ್ಲದೊ…

  6. ಅಜ್ಜೀ, ಅಲ್ಲಾ… ಹಾಳೆ ಕಡಿವಲೆ ನಿಂಗಳೇ ಹೊದ್ದದಿದ್ದಾ? ಬೇರೆ ಆರ ಹತ್ತರೆ ಆದರೂ ಹೇಳಿ ಕಡಿಶುಲೇ ಆವುತ್ತಿತ್ತನ್ನೇ… ಪುಳ್ಳಿಯಕ್ಕಳನ್ನೂ ಒಟ್ಟಿನ್ಗೆ ಕರಕ್ಕೊಂದು ಹೋದರೆ ಹಾಂಗೆ ಅಪ್ಪದು.. ನಿಂಗ ಕಡಿವಾಗ ಕುಟ್ಟಿದವಾಯಿಕ್ಕು ನಿಂಗಳ… ಅಷ್ಟು ದೊಡ್ಡ ಗಡಿ ಆದಪ್ಪಗ ಪಂಚವಲ್ಲಿ ತೈಲ ಕಿಟ್ಟಿ ಕೂದ್ದದಾ? ನಮ್ಮ ಬಡೆಕ್ಕಿಲ ಡಾಕ್ಟ್ರನ ಹತ್ತರೆ ತೋರ್ಸಿ ಒಂದು ಸೂಜಿ ಕುತ್ತುಸೆಕ್ಕಾತನ್ನೆಪ್ಪಾ…. ಪ್ರಾಯ ಆದಪ್ಪಗ ಬೇಗ ಗುಣ ಆವುತ್ತಿಲ್ಲೆ ಇದಾ… ತಾಗಿದ್ದು ಹೇಳಿ ಸುಮ್ಮನೆ ಕೂಪೋರೂ ಅಲ್ಲನ್ನೇ ನಿಂಗೊ.. ಏನಾರು ಗುರುಟಿಗೊಂಡಿಪ್ಪಿ… ಈ ಅಜ್ಜಿಗೆ ಕೈ ಬೇನೆ ಆಗಿ ಬೈಲಿನವಕ್ಕೆ ಒಂದೇ ಹಲ್ವ ಸಿಕ್ಕಿದ್ದು.. ಕೇರೆಟ್ ಹಲ್ವದೇ ಇದ್ದು ಹೇಳಿ ಗೊಂತಾತು.. ಇಲ್ಲದ್ದರೆ ತರಾವರಿ ಹಲ್ವಂಗ ಸಾಲಿಲಿ ಬರ್ತಿತ್ತು… ಅಜ್ಜೀ.., ಇನ್ನಾದರೂ ರಜ್ಜ ರೆಸ್ಟ್ ತೆಕ್ಕೊಂಡು ಇನ್ನುದೆ ಬಗೆಗಳ ಕರೆಂಟ್ ಪುಸ್ತಕಲ್ಲಿ ಬರೇರಿ ಆತಾ.. ಎಂಗೋ ಕಾಯ್ತೆಯಾ°

    1. ಎಂತರ ಮಾಡುದು ದೇವೀ… ಕೆಲಸದ ಕಾಳಪ್ಪು ಮಗಳ ಮದುವೆ ಹೇಳಿ ರಜೆ ಮಾಡಿದ್ದು… ಕಾಯಮಿನ ಚಿನ್ನಮ್ಮಂಗೂ ಕಾಲುಬೇನೆಡ..
      ಪುಳ್ಯಕ್ಕೊ ರಜೆಯ ಕುಶಿಲಿ ಓಡಿಆಡಿಯೊಂಡಿಪ್ಪಾಗ ರೆಜ ಕುಟ್ಟಿಹೋದರೆ ಅದು ಸಾರ ಇಲ್ಲೆಪ್ಪಾ… ಬೈವಲೆ ಮನಸ್ಸು ಬತ್ತಿಲ್ಲೆ.. ಹಾಂಗಾಗಿ ಆ ಸುದ್ದಿ ಹೇಳಿದ್ದೇ ಇಲ್ಲೆ ಆನು.. ನಿನಗೆ ಗೊಂತಾದ್ದು ಸಾಕಾತೊ..
      ಅಂದೊಂದರಿ ಏವದೋ ಡಾಕುಟ್ರ ಹತ್ತರೆ ಹೋಗಿ ಸೂಜಿ ಕುತ್ತುಸಿದ್ದದರಲ್ಲಿ ಅದು ಎಂತದೋ ಇನ್ನುಫೇಕ್ಷನು ಎಲ್ಲ ಆಗಿ ಸುಮಾರಾಯಿದು ಕತೆ… ಹಾಂಗೆ ಅದರಿಂದ ಮತ್ತೆ ಈ ಸೂಜಿ ಕುತ್ತುದು ಹೇಳಿರೆ ಹೆದರಿಕೆ ಅಪ್ಪದು ಅಜ್ಜಿಗೆ… ಪಂಚವಲ್ಲಿಲಿ ಗುಣಕಾಣ್ತು.. ರೆಜಾ ನಿದಾನ ಅಷ್ಟೆ…
      ಮತ್ತೆ ನವಗೆ ತಳಿಯದ್ದೆ ಕೂಪಲೆ ಅರಡಿಯ ಇದಾ…
      ತರಾವರಿ ಹಲ್ವಂಗಳ ಮಾಡಿಕೊಡುವೊ ಆತೊ… ಪುಳ್ಯಕ್ಕೊಗೆ ರಜೆ ಇನ್ನುದೇ ಇದ್ದಿದಾ…

      1. ಅಜ್ಜೀ.. ಎನ್ನ ಶ್ರೀ ಹೇಳಿ ದಿನಿಗೆಳುಳಕ್ಕು ನಿಂಗೊ ಆತಾ? ಈ ಕೆಲಸದವರ ಹಣೆ ಬರಹವೇ ಅಷ್ಟು ಅಜ್ಜಿಯೇ.. ಬೇಕಪ್ಪಗ ಬಾರವು.. ಅದರಲ್ಲೂ ಮಕ್ಕೊಗೆ ರಜೆ ಇದ್ದರೆ ಹತ್ತರೆ ಸುಳಿಯವು.. ಕೆಲಸ ಹೆಚ್ಚಿಗೆ ಆವುತ್ತಿದಾ? ಮಕ್ಕಳ ಕೊಂಡಾಟ ಮಾಡುವ ನಿಂಗಳ ಹಾಂಗಿಪ್ಪ ಅಜ್ಜಿ ಇದ್ದರೆ ಪುಳ್ಳಿ ಯಕ್ಕೊಗೆ ಸೊಕ್ಕುದು ಒಂದೇ ಕೆಲಸ ಅಲ್ಲದಾ? ಮತ್ತೆ ಕಣ್ಣು ಮೋರೆ ಇಲ್ಲದ್ದೆ ಓಡುಗು ಇದಾ..ಬೇಕಾಬಿಟ್ಟಿ ತಿಂಬಲೆ ಮಾಡಿ ಕೊಡ್ಲೆ ನಿಂಗ ಇದ್ದಿರನ್ನೇ.. ಬೈಲಿನ್ಗೆ ಬರೆಯದ್ದರೂ ಮಕ್ಕೊಗೆ ತಿಂಬಲೆ ಕೊರತೆ ಆಗ ಅಲ್ಲದಾ? ನಿಂಗೊ ಇನ್ನು ರಜೆ ಮುಗುದ ಮೇಲೆಯೇ ಕರೆಂಟ್ ಪುಸ್ತಕದ ಎದುರು ಕೂಪದಾ ಎಂತಾ? ರಾಮ ರಾಮಾ..!!!

        1. ಹಾಂಗೇನಿಲ್ಲೆ ಶ್ರೀ… ಎಡೆಹೊತ್ತಿಲಿ ಒಂದೊಂದರಿ ಕರೆಂಟಿನ ಪುಸ್ತಕ ನೋಡುಲಿದ್ದಪ್ಪ. ಬೈಲಿನ ಪುಳ್ಯಕ್ಕೊ ತರ್ಕ ಮಾಡ್ತವೋ ಎಂತ ಕತೆ ಹೇಳಿ ನೋಡೆಕ್ಕಲ್ಲದೋ…
          ಪಾಪ ಮಕ್ಕೊಗೆ ಪರಂಚೆಡಬ್ಬೋ.. ಭಾರದ್ವಾಜದ ಮಕ್ಕಳ ಹಾಂಗೆ ಎಲ್ಲೊರೂ ಪಾಪವೇ ಅಪ್ಪ… ಅವು ಹೀಂಗೆ ಓಡಿಆಡಿಯೊಂಡಿದ್ದರೇ ನವಗೆ ಕುಶಿ ಅಪ್ಪದಲ್ಲದೋ…

  7. ಅಜ್ಜೀ..
    ಹಲುವ ಲಾಯಿಕಾಯಿದು!
    ಆದರೆ, ಇದರ ತುಂಬ ತಿಂದರೆ ಆಗದ್ದೆ ಬತ್ತಡ, ಕುಂಬ್ಳಕಾಇ ಶೀತ ಅಲ್ಲದೋ – ಹಾಂಗೆಡ!
    ಚೂರಿಬೈಲು ದೀಪಕ್ಕ ಹೇಳಿಗೊಂಡಿತ್ತು ಓ ಮೊನ್ನೆ.

    1. ಹಲುವವ ಪಾಯಸದ ಹಾಂಗೆ ತಿಂಬದಲ್ಲ ಪುಳ್ಳೀ… ರುಚಿಗೆ ಒಂದೋ ಎರಡೋ ತುಂಡು ತಿಂಬದು. ಲಾಯ್ಕಾವುತ್ತೂಳಿ ಪೂರ ಮುಗಿಶುಲೆ ಹೆರಟ್ರೆ ಹಾಂಗಪ್ಪದದ…

      1. ಪಾಪ ಒಪ್ಪಕ್ಕ ಓಳಿಶಿರೆ ಅಲ್ಲದ ಒಪ್ಪಣ್ಣಂಗೆ ಸಿಕ್ಕುದು.
        ಸೀದಾ ಒಪ್ಪಕ್ಕಂಗೆ ಹೇಳುವ ಬದಲು ಹೀಂಗೆ ಬರದ್ದಲ್ಲದ ಒಪ್ಪಣ್ಣ.

        1. ಎಂತ ಒಪ್ಪಕ್ಕ ಊರಿಲಿಲ್ಲೇ ಹೇಳಿ ಗ್ರೆಶಿದ್ದೀರಾ ಹೆಂಗೆ ??
          ನಿಂಗೋಗೆ ಅಜ್ಜಿ ಹತ್ರೆ ಹೇಳ್ತೆ, ಮತ್ತೆ ಎಂತದೂ ಸಿಕ್ಕ ತಿಮ್ಬಲೇ….
          ಮತ್ತೆ ಒಪ್ಪಕ್ಕನ ಬೈಕ್ಕೊಂಡು ಕೂರೆಕ್ಕಷ್ಟೇ.. ಹ್ಞಾ………….

          1. ಒಪ್ಪಕ್ಕನ ಅಲ್ಲದ್ರೂ ಬೈತ್ತೆಯೊ° ಎಂಗೊ… 😉
            @ ಕೊಳಚಿಪ್ಪು ಭಾವ..
            ನೋಡು, ನಿನ್ನಂದಾಗಿ ಇಷ್ಟೆಲ್ಲ ಆದ್ದು.
            ಮೊದಾಲು ಒಪ್ಪಕ್ಕನ ಸಮಾದಾನ ಮಾಡು, ಅಲ್ಲದ್ರೆ ಅಜ್ಜಿಗೆ ಚಾಡಿ ಹೇಳಿರೆ ತಣ್ಣೀರೇ ಗತಿ!!

          2. ಎಂತಾತು ಒಪ್ಪಕ್ಕೊ… ಬೇಜಾರ ಮಾಡೆಡ.. ಆರದು ಬೈವದು ಒಪ್ಪಕ್ಕಂಗೆ…! ಹಪ್ಪಾ…
            ನೀನು ಸಣ್ಣ ಅಲ್ಲದಾ… ಹಾಂಗೆ ನಿನಗೆ ಎಲ್ಲೊರಂದ ಜಾಸ್ತಿ ಕೊಡುವೊ ಆತೊ…

  8. ಕುಂಬಳ ಕಾಯಿ ಹಲ್ವ ಚಮಚಲ್ಲಿ ಕೋರಿ ತಿಂದು ಗೊಂತಿದ್ದು. ತುಂಡು ಮಾಡುವಷ್ಟು ಗಟ್ಟಿ ಕಾಸಿ ನೋಡೆಕ್ಕು ಒಂದರಿ. ಎಲ್ಲರೂ ಹಲ್ವ ಮಾಡ್ಲೆ ಹೆರಟರೆ ಕುಂಬಳ ಕಾಯಿಗೆ ರೇಟ್ ಜಾಸ್ತಿ ಅಕ್ಕ ಹೇಳಿ!!!

    1. ತುಂಬ ನೀರಾದರೆ ಪುಳ್ಯಕ್ಕೊ ಮೈಗೆಲ್ಲ ಅರಿಶಿಗೊಳ್ತವಿದಾ.. ಚಂಚಲ್ಲಿ ತಿಂಬಲೆ ಬಂಙ ಆವುತ್ತಡ.. ಹಾಂಗೆ ರೆಜ ಗಟ್ಟಿಗೆ ಮಾಡೊದು.. ಲಾಯ್ಕಾವುತ್ತಪ್ಪ… ಮತ್ತೆ ದಣಿಯ ಗಟ್ಟಿ ಕಾಸಿದರೆ ಅದು ಕುಂಬ್ಳಕಾಯಿ ಬರ್ಫಿ ಅಕ್ಕತ್ಲಾಗಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×