Oppanna.com

ಮುಳ್ಳುಸವುತ್ತೆಯ ವೈವಿದ್ಯಂಗೊ…

ಬರದೋರು :   ಬಂಡಾಡಿ ಅಜ್ಜಿ    on   06/09/2010    17 ಒಪ್ಪಂಗೊ

ಸೂಂಟುಮಣ್ಣು ಹಾಕಿ ಸಾಲು ಮಾಡಿ ನೆಟ್ಟಿಕಾಯಿ ಮಾಡಿದ್ದದೆಲ್ಲ ಫಲ ಕೊಡುವ ಸಮಯ ಅದ ಇದು. ಬೆಂಡೆ, ಅಲತ್ತೊಂಡೆ, ಸವುತ್ತೆ, ಮುಳ್ಳುಸವುತ್ತೆ, ಬದನೆ, ಕುಂಬ್ಳ ಹೀಂಗೆ ಎಲ್ಲ ಮನೆಲಿಯೇ ಬೆಳದ ನೆಟ್ಟಿಕಾಯಿಗೊ ಅಟ್ಟುಂಬೊಳ. ಸಂತೆಗೆ ಹೋಯೆಕ್ಕೂಳಿ ಇಲ್ಲೆ…
ಇದರಲ್ಲಿ ಎಲ್ಲದರಲ್ಲೂ ಎಲ್ಲೊರಿಂಗೂ ಭಾರೀ ಪ್ರೀತಿದು ಹೇಳಿರೆ ಮುಳ್ಳುಸವುತ್ತೆ ಅಲ್ಲದೋ.. ಪುಳ್ಯಕ್ಕೊಗೆ ಎಳತ್ತೆಳತ್ತು ಚೆಕ್ಕರ್ಪೆ ತಿಂಬದೇ ಒಂದು ಸಂಭ್ರಮ.. ಸರೂತ ಇಪ್ಪ ಮೆಡಿ ಕೊಯ್ಯೆಡಿ, ಬಿತ್ತಿಂಗೆ ಮಡಗುಲೆ ಬೇಕು ಹೇಳಿ ಅಜ್ಜಿ ಪರಂಚಿಗೊಂಡೇ ಬಾಕಿ… ಆಚೊಡೆಂದ ನೆಗೆಗಾರ ಹುಡುಕ್ಕಿ ಹುಡುಕ್ಕಿ ಸರೂತ ಇಪ್ಪ ಮೆಡಿಯನ್ನೇ ಕೊಯಿದು ತಿಂದುಗೊಂಡು ಹೋವುತ್ತ.. ಅಂಬಗ ಎಂತ ಹೇಳೆಕ್ಕು..
ಹ್ಮ್ ಎನ್ನ ಪರಂಚಾಣಕ್ಕೆ ಪಾಪ ಪುಳ್ಯಕ್ಕೊ ಬಳ್ಳಿಲಿ ಬಿಡುವ ಎಲ್ಲಾ ಮೆಡಿಯೂ ಮುರುಟಟೆಯೇ ಆಗಲಿ ಹೇಳಿ ಬೇಡಿಗೊಳ್ತವು..
ಅದಿರಳಿ… ಮುಳ್ಳುಸವುತ್ತೆಲಿ ಸುಮಾರು ವೈವಿಧ್ಯಂಗಳ ಮಾಡುಲಾವುತ್ತು… ಪುಳ್ಯಕ್ಕೊ ತಿನ್ನದ್ದೆ ಒಳಿಶಿರೆ…
ಸಳ್ಳಿ, ಕೊಚ್ಚಿಸಳ್ಳಿ, ಸಾಂಬಾರು, ಮೇಲಾರ, ತಾಳ್ಳು, ಪಾಯಸ, ದೋಸೆ, ಕೊಟ್ಟಿಗೆ, ಸುಟ್ಟವು, ಗುಳಿಸುಟ್ಟವು, ಸಾಸಮೆ, ಹಲುವ – ಹೇಳಿಗೊಂಡು ಹೋದರೆ ಮುಗಿಯಪ್ಪ.. ಅಷ್ಟಿದ್ದು..
ಸಳ್ಳಿ ಮಾಡುಲೆ ಗೊಂತಿದ್ದನ್ನೆ.. ಅದೊಂದಿದ್ದರೆ ಮತ್ತೆಂತದೂ ಬೇಡ ಉಂಬಲೆ… ಎನಗೆ ಈಗ ಮಾಂತ್ರ ಆ ಗರುಗುರು ಬಾಗ ಅಗಿವಲೆ ರೆಜಾ ಬಂಙ ಆವುತ್ತು.. ಪುಳ್ಯಕ್ಕೊಗೆಲ್ಲ ಬಾರೀ ಪ್ರೀತಿ ಸಳ್ಳಿ ಹೇಳಿರೆ..
ಅದರನ್ನೇ ಮಾಡಿ ಮಾಡಿ ಅಕೇರಿಗೆ ಬೊಡಿತ್ತುದೇ…
ಹ್ಮ್.. ಮತ್ತೆ ಕೊಚ್ಚಿಸಳ್ಳಿ.. ಇದು ಕೆಲಾವು ಜನಕ್ಕೆ ಆಗದ್ದೆ ಇಪ್ಪಲೂ ಸಾಕು.. ಸಾಸಮೆ ಕಡದು ಹಾಕುತ್ತಲ್ಲದೋ… ಆ ಪರಿಮ್ಮಳ ಆವುತ್ತಿಲ್ಲೆ ಇದಾ ಕೆಲವು ಜೆನಕ್ಕೆ..
ಮುಳ್ಳುಸವುತ್ತೆಯ ಕೊಚ್ಚಿ ಅದಕ್ಕೆ ಉಪ್ಪುದೇ ಮೊಸರುದೇ ಕಲಸಿ ಮಡುಗೆಕ್ಕು.. ಮತ್ತೆ ಸಾಸಮೆ, ಹಸಿಮೆಣಸು, ಕಾಯಿ ಎಲ್ಲ ಒಟ್ಟಿಂಗೆ ಕಡದ ಅರಪ್ಪು  ಸೇರುಸುದು… ಒಂದು ಒಗ್ಗರಣೆ ಕೊಟ್ಟರೆ ಪರಿಮ್ಮಳ ಆವುತ್ತು..
ಒಪ್ಪಕ್ಕ ಸಣ್ಣಾಗಿಪ್ಪಾಗ ಬರೇ ಕೊಚ್ಚಿಸಳ್ಳಿಯನ್ನೇ ತಿಂದುಗೊಂಡಿದ್ದತ್ತಡ… ಅಶನ ಹೋಗ, ಕೊಚ್ಚಿಸಳ್ಳಿ ಮನಾರ ಅಕ್ಕು… ಶಾಂತಕ್ಕ ಹೇಳಿಗೊಂಡಿದ್ದತ್ತು..
ಇನ್ನು ದೋಸೆ ಮಾಡುಲೆದೆ ಸುಲಾಬ… ಕಡವಾಗ ಒಟ್ಟಿಂಗೆ ಮುಳ್ಳುಸವುತ್ತೆಯನ್ನೂ ಸಣ್ಣಕ್ಕೆ ಕೊರದು ಹಾಕಿ ಕಡದತ್ತು.. ಎಳತ್ತಾದರೆ ಹಾಂಗೇ ಹಾಕುದು. ಬೆಳದ್ದದಾದರೆ ಚೋಲಿದೆ ತಿರುಳುದೆ ತೆಗೆಯೆಕಕ್ಕು…
ಕೊಟ್ಟಿಗೆಗುದೇ ಹಾಂಗೇ.. ತಿರುಳು ಚೋಲಿ ತೆಗದು ಕೊಚ್ಚಿ ಅಕ್ಕಿಯೊಟ್ಟಿಂಗೆ ಕಡವದು…
ದೋಸೆಯೂ ಕೊಟ್ಟಿಗೆಯೂ ಒಂದು ನಮುನೆ ಪರಿಮ್ಮಳ ಆವುತ್ತು… ರುಚಿಯುದೇ..
ಒಪ್ಪಣ್ಣ ದೋಸೆ ಎರದು ಕೊಟ್ಟಷ್ಟೂ ತಿಂಗು.. ಜೇನೋ ರವೆಯೋ ಕೂಡಿಗೊಂಡು…
ಮುಳ್ಳುಸವುತ್ತೆ ಪಾಯಸವೂ ಲಾಯಿಕಾವುತ್ತು… ಎಳತ್ತು ಇದ್ದರೆ ಒಳ್ಳೆದು…
ಅದರ ತಿರುಳು, ಚೋಲಿ ಎಲ್ಲ ತೆಗದು ಹದಾ ತೆಳುವಿಂಗೆ ಕೊರವದು.. ಅದಕ್ಕೆ ಚೂರು ನೀರಾಕಿ ಬೇವಲೆ ಮಡುಗುದು… ಸೆಕೆ ಬಪ್ಪಾಗ ಬೆಲ್ಲ ಹಾಕಿ ತೊಳಸುದು.. ಬೆಲ್ಲ ಕರಗಿಯಪ್ಪಗ ಅಕ್ಕಿಹಿಟ್ಟು ಸೇರುಸುದು… ಹಸರು ಹಾಕಿರೂ ಅಕ್ಕು.. ಯಾವುದಾರು ಒಂದು ಹಾಕೆಕ್ಕು.. ಇಲ್ಲದ್ದರೆ ಅದು ನೀರು ಬಿಟ್ಟಾಂಗೆ ಆವುತ್ತಿದಾ.. ಮಂದ ಆವುತ್ತಿಲ್ಲೆ..
ಅಕ್ಕಿಹಿಟ್ಟು ಸೇರುಸಿದ್ದು ಕೊದಿವಲೆ ಸುರು ಅಪ್ಪಾಗ ನೀರು ಕಾಯಾಲು ಹಾಕಿತ್ತು.. ಕಾಯಾಲು ಮೂರು ನಮುನೆದು ತೆಗದು ಮಡುಗುಲೆ ಗೊಂತಿದ್ದನ್ನೆ…
ಇದು ಆದ ಮತ್ತೆ ನೀರು ಹಾಕಿ ತೆಗದ ಕಾಯಾಲು ಸೇರುಸುದು.. ಅದಾಗಿ ಅಕೇರಿಗೆ ಮಂದ ಕಾಯಾಲು…
ಬೇರೆ ಪಾಯಸಂಗಳ ಮಾಡಿದಾಂಗೆಯೇ ಕ್ರಮ… ಒಂದೆರಡು ಕಲ್ಲು ಉಪ್ಪುದೇ ಹಾಕೆಕ್ಕು..
ಏಲಕ್ಕಿ ಬೇಕೂಳಿಯೇ ಇಲ್ಲೆ.. ಈ ಪಾಯಸದ್ದೇ ಒಂದು ಪರಿಮ್ಮಳ ಇದ್ದನ್ನೆ…
ಚೆಕ್ಕರ್ಪೆ ಹಲುವದೇ ಆವುತ್ತು ಕುಂಬ್ಳಕಾಯಿ ಹಲುವದಾಂಗೇ.. ಆದರೆ ಕುಂಬ್ಳದಷ್ಟು ಹೊತ್ತು ಬೇಕಾವುತ್ತಿಲ್ಲೆ ಬೇವಲೆ.. ಇದು ಬೇಗ ಆವುತ್ತು… ಮತ್ತೆ ಕೇರೇಟಿನ ಹಲುವದ ಹಾಂಗೆ ಗಟ್ಟಿ ಆವುತ್ತಿಲ್ಲೆ.. ನೀರುನೀರಪ್ಪದು…
ಮುಳ್ಳುಸವುತ್ತೆ ಸುಟ್ಟವು ಮಾಡದ್ರೆ ಅಕ್ಕೋ.. ನಾಕೈದು ಸರ್ತಿ ಆದರೂ ಮಾಡಿಯೇ ಮಾಡ್ತು…
ಮಾಡುಲುದೇ ಸುಲಾಬನ್ನೆ… ಅದರ ಕೊಚ್ಚಿ ಅಕ್ಕಿಯೊಟ್ಟಿಂಗೆ ಬೆಲ್ಲವನ್ನೂ ಸೇರುಸಿ ಕಡವದು.. ಮತ್ತೆ ಒಂದು ರಜಾ ಕಾಸೆಕ್ಕಾವುತ್ತು… ಕೈಲಿ ತೆಗವಲೆ ಬಪ್ಪಷ್ಟಕ್ಕೆ.. ಇಲ್ಲದ್ದರೆ ನೀರಿರ್ತಿದಾ…
ಅಷ್ಟು ಹದಾಕೆ ಕಾಸಿಕ್ಕಿ ಎಣ್ಣೆಲಿ ಬಿಟ್ಟು ಹೊರುದರಾತು… ಬೆಶಿ ಬೆಶಿ ಸುಟ್ಟವು ತಿಂಬಲೆ ಬಾರೀ ರುಚಿ ಅಲ್ಲದೋ…
ಗುಳಿ ಸುಟ್ಟವುದೇ ಹೀಂಗೆಯೇ.. ಇದರ ಹಿಟ್ಟಿನ ಕಾಸೆಕ್ಕೂಳಿ ಇಲ್ಲೆ.. ಕಡದಿಕ್ಕಿ, ಗುಳಿಗೆ ತುಪ್ಪವೋ ಎಣ್ಣೆಯೋ ಕಿಟ್ಟಿ, ಎರದು ಬೇಶಿದರಾತು..
ಇದರ ಉದಿಯಪ್ಪಗಾಣ ಕಾಪಿಗೂ ಮಾಡುಲಕ್ಕು…
ಇನ್ನು ಮದ್ಯಾನದ ಅಡಿಗೆಗೆ ತಾಳ್ಳು, ಸಾಂಬಾರು, ಮೇಲಾರ, ಜೀರಿಗೆ ಬೆಂದಿ ಎಲ್ಲ ಮಾಡುಲಕ್ಕು.. ಹೆ ಹೆ ಪುಳ್ಯಕ್ಕೊಗೆ ಬೊಡಿವನ್ನಾರವೂ ಅದರನ್ನೇ ಮಾಡುದು ಎಂತಾರು ಒಂದೊಂದು ಬಗೆ…
ಓ! ಸಾಸಮೆ ಹೆಳುಲೆ ಮರದತ್ತದ… ಮುಳ್ಳುಸವುತ್ತೆ ತಿರುಳಿಂಗೆ ಕಾಯಿ, ಸಾಸಮೆ, ಮೆಣಸು, ಉಪ್ಪು ಎಲ್ಲ ಹಾಕಿ ಕಡವದು.. ಮತ್ತೆ ಚೂರು ಮಜ್ಜಿಗೆ ಸೇರುಸುದು..
ಭಾರದ್ವಾಜದ ದೇವಿ ಅದೆಂತದೋ ಸಲಾಡು ಹೇಳಿ ಮಾಡುತ್ತಡ.. ಮುಳ್ಳುಸವುತ್ತೆ, ನೀರುಳ್ಳಿ, ಟೊಮೆಟ, ಹಸಿಶುಂಟಿ, ಹಸಿಮೆಣಸು ಎಲ್ಲ ಕೊಚ್ಚಿಹಾಕಿ…
ಹೀಂಗಿದ್ದದೆಲ್ಲ ಆರೋಗ್ಯಕ್ಕುದೇ ಒಳ್ಳೆದೇ…
ಒಂದು ಮುಳ್ಳುಸವುತ್ತೆಲಿ ಎಷ್ಟೆಲ್ಲ ನಮುನೆ ಅಡಿಗೆ ಮಾಡುಲಾವುತ್ತಲ್ಲದೋ… ಜಾಲ ತಲೇಲಿಯೋ, ಮನೆ ಹಿಂದೆಯೋ ಮಣ್ಣ ಬಿತ್ತಾಕಿ ಬೆಳೆಶಿರೆ ಆತು.. ಸಗಣ ನೀರು ಎರಕ್ಕೊಂಡಿದ್ದರೆ ಲಾಯಿಕಾವುತ್ತು ಬಳ್ಳಿಗೆ…
ನಿಂಗಳೂ ಬೆಳೆಶಿದ್ದಿರೋ… ಚೆಕ್ಕರ್ಪೆಲಿ ಎಂತೆಲ್ಲ ಮಾಡುಲಾವುತ್ತೋ ಅದರ ಎಲ್ಲ ಮಾಡಿ ತಿನ್ನಿ ಆತೊ…ಬೇಕಾರೆ ಬಂಡಾಡಿಂದಲೂ ಕೊಂಡೋಪಲಕ್ಕು..ಎಂತ..?
ಇದಾ ಚೆಕ್ಕರ್ಪೆಯ ಪಟಂಗಳ ಪುಳ್ಳಿ ಅಂಟುಸಿದ್ದು:

17 thoughts on “ಮುಳ್ಳುಸವುತ್ತೆಯ ವೈವಿದ್ಯಂಗೊ…

  1. ಮುಳ್ಳುಸೌತೆಲಿ ಇನ್ನೊಂದು ಬಗೆ ಮಾಡ್ಳವುತ್ತು “ಸಲ್ಲಿ ತಾಳು” ಹೇಳಿ.ಗೊಂತಿದ್ದ??
    ಅದಕ್ಕೆ ಮುಳ್ಳುಸೌತೆ ಮೆಡಿ,ಒಣಕ್ಕು ಮೆಣಸು,ಕಾಯಿ ತುರಿ,ಸಾಸಮೆ,ಉಪ್ಪು,ಅರಸಿನ ಹುಡಿ ಬೇಕು.
    ಮಾಡುವ ವಿದಾನ:- ಮುಳ್ಳುಸೌತೆ ಮೆಡಿಯ ಸಣ್ಣಕ್ಕೆ ಕೊಚ್ಚಿ ಅದಕ್ಕೆ ಬೇಕಾಸ್ಟು ಉಪ್ಪು ಬೆರುಸಿ ಮಡುಗೆಕ್ಕು.
    ಕಾಯಿ ತುರಿಗೆ ಸಾಸಮೆ,ಅರಿಸಿನ ಹುಡಿ, ಮೆಣಸು,ಮುಳ್ಳುಸೌತೆ ಕೊಚ್ಚಲಿಲ್ಲಿ ಬಿಟ್ಟ ನೀರು ಹಾಕಿ ಕಡದು ಮುಳ್ಳುಸೌತೆ ಕೊಚ್ಚಲಿಂಗೆ ಹಾಕಿ ಬೆರುಸಿದರೆ ಮುಳ್ಳುಸೌತೆ ಸಲ್ಲಿ ತಾಳು ರೆಡಿ.
    ಇದರ ಶೀತ ಇಪ್ಪವುದೇ ತಿಮ್ಬಲಕ್ಕು.ತಿಂದರೆ ದೋಷ ಇಲ್ಲೆ.

  2. ಅಜ್ಜಿ ಚೆಕ್ಕರ್ಪೆಯ ಬೋಳು ಬೆಂದಿ ಮಾಡುದು ಹೆಂಗೆ ಹೇಳಿ ಬರದ್ದು ಕಂಡತ್ತಿಲ್ಲೆ.ತಾಳುದೇ ಲಾಯಕಾವುತ್ತು.

    1. ಮರದತ್ತದೊ ಅಜ್ಜಿಗೆ.. ಹ್ಮ್ ಬೋಳುಬೆಂದಿಯುದೇ ಮಾಡುಲಾವುತ್ತು.. ಪುಳ್ಳಿಗೆ ಬೋಳುಬೆಂದಿ ಅಷ್ಟು ಕುಶಿ ಆವುತ್ತಿಲ್ಲೆ ಇದಾ.. ಹಾಂಗೆ ಮಾಡುದು ಕಮ್ಮಿ…

  3. { ಗೆಗಾರ ಹುಡುಕ್ಕಿ ಹುಡುಕ್ಕಿ ಸರೂತ ಇಪ್ಪ ಮೆಡಿಯನ್ನೇ ಕೊಯಿದು ತಿಂದುಗೊಂಡು ಹೋವುತ್ತ}
    ಅಜ್ಜಿ,
    ಮೆಡಿ ಸರೂತ ಇರೆಕ್ಕಾದ್ದಲ್ಲ,ಬಳ್ಳಿ ಸರೂತ ಇರೆಕ್ಕಾದ್ದೋ ಗ್ರೇಶಿದ್ದು ಆನು.
    ಅದಕ್ಕೆ ಬಳ್ಳಿ ಸರೂತ ಹೋದ ಜಾಗೆಂದ ಕೊಯಿಕ್ಕೊಂಡೇ ಇತ್ತಿಲ್ಲೆ ಆನು.

    1. ನಿನಗೆ ಬಿಂಗಿ ಅಲ್ಲದ್ದೆ ಮತ್ತೆಂತರ ಅರ್ತ ಆವುತ್ತು…? ಎಳತ್ತೆಳತ್ತು ಚೆಕ್ಕರ್ಪೆ ಪೂರ ಸಪಾಯಿ ಆಯಿದು ಬಳ್ಳಿಂದ… ಎನಗೆ ಇನ್ನು ನಿನ್ನ ಮೇಲೆಯೇ ಸಂಶಯ… ನೋಡೊ ಇನ್ನು ಕೊಚ್ಚಿಸಳ್ಳಿ ಮಾಡಿರೆ ನಿನಗೆ ಕೊಡುಲಿಲ್ಲೆ…

  4. ಅಣಂಬುವಿನ ನಾವು ಬ್ರಾಹ್ಮಣರು ಏಕೆ ತಿಮ್ಬಲಾಗ ಹೇಳುವ ವಿಚಾರವ ತಿಳುಷಿ ಕೊಟ್ಟರೆ ತುಂಬಾ ಉಪಕಾರ

    1. ಅಪ್ಪು ಡಾಕುಟ್ರಣ್ಣ ಹೇಳಿದಾಂಗೇ ಅದು ಸಸ್ಯಾಹಾರಿಗಳಾದ ನವಗೆ ನಿಷಿದ್ಧ. ಮೊದಲೆಲ್ಲ ಅದರ ಮಾಡಡಿಯಂಗೂ ತಪ್ಪಲಾಗ ಹೇಳಿ ಹೇಳಿಗೊಂಡಿತ್ತಿದ್ದವು. ಕಾಳಪ್ಪು ಗುಡ್ಡೆಂದಲೋ ಮಣ್ಣ ತೆಕ್ಕೊಂಡು ಬಂದರುದೇ ನಮ್ಮ ಮನೆ ಹತ್ತರಂಗೆ ತಾರ.. ದೂರಲ್ಲೆ ಮಡುಗಿಕ್ಕಿ ಬಕ್ಕು..
      ಸಸ್ಯಲ್ಲಿಪ್ಪ ಪತ್ತರಹರಿತ್ತು ಹೇಳುತ್ತದು ಎಂತದೋ ಒಂದು ಬಗೆ ಇಲ್ಲೆಡ ಅದರಲ್ಲಿ.. ಶರ್ಮಣ್ಣ ಹೇಳಿಗೊಂಡಿತ್ತಿದ್ದವು…

  5. {ಕೊಚ್ಚಿಸಳ್ಳಿ.. ಒಪ್ಪಕ್ಕ ಒಪ್ಪಣ್ಣಂಗೆ ತಕ್ಕಿತ ಒಳಿಶಿದ್ದು}… ಅದು ನೋಡಿ ನೆಗೆ ಬಂದು ತಡೆಯ. ಅದು ಎಲ್ಲೋರು ಹಾಂಗೇ. ಕಂಡರೆ ಬಿಡವು ಮತ್ತೆ. ಪಾಪ, ಅಷ್ಟಾದರೂ ಸಿಕ್ಕಿತ್ತನ್ನೆ ಒಪ್ಪಣ್ಣಂಗೆ.
    ಮುಳ್ಳುಸೌತೆಗೆ ಚೆಕ್ಕರ್ಪೆ ಹೇಳುದು. ಕೋಟ ಭಾಷೆಲಿ ಕೆಕ್ಕರ್ಪೆ ಹೇಳುದಡ.

    1. ಅಪ್ಪಬ್ಬೋ ಕೊಚ್ಚಿಸಳ್ಳಿ ಹೇಳಿದರೆ ಎಲ್ಲೊರಿಂಗೂ ಕೊದಿಯೇ…

  6. ಅಜ್ಜೀ, ಮುಳ್ಳು ಸೌತೆಯ ವೈವಿಧ್ಯಂಗೋ ನಿಂಗಳ ಪ್ರೀತಿ ತುಂಬಿಸಿಗೊಂಡೇ ಬೈಂದು ಬೈಲಿಂಗೆ!!! ಬರದ್ದು ಲಾಯ್ಕ ಆಯಿದು. ನಿಂಗೊ ಬರದು ಕೊಟ್ಟ ಹಾಂಗೆ ಮಾಡಿ ನೋಡಿ ಹೇಳ್ತೆಯಾ°.
    ಈ ವರ್ಷ ಎಂಗೊಗೆ ಮುಳ್ಳು ಸೌತೆ ಇಲ್ಲೆ, 🙁
    ಬಂಡಾಡಿಂದ ಕಳುಸಿ ಕೊಟ್ಟಿಕ್ಕಿ ಆತೋ. ನೆಗೆಗಾರನ ಹತ್ತರೆ ಕೊಟ್ಟಿಕ್ಕೆಡೀ… ಇಲ್ಲಿಗೆ ವರೆಗೆ ಎಂತದೂ ಬಾರ ಮತ್ತೆ..
    ನಿಂಗ ಪಟಲ್ಲಿ ಹಾಕಿದ್ದಿಯನ್ನೆ!! ಕೊಚ್ಚಿಸಳ್ಳಿ ಒಪ್ಪಕ್ಕ ಒಪ್ಪಣ್ಣಂಗೆ ತಕ್ಕ ಒಳಿಶಿದ್ದು ಹೇಳಿ, ಅದರ ನೋಡಿ ನೆಗೆಗಾರಂಗೆ ಒಳಂದಲೇ ನೆಗೆ ಬತ್ತಾ ಇದ್ದು..
    ಒಪ್ಪಣ್ಣ ಹೇಂಗಾರೂ ಅದರ ತಿನ್ತಾ ಇಲ್ಲೆ, ಹಾಂಗಾಗಿ ಒಪ್ಪಕ್ಕನ ಮಂಕಾಡ್ಸಿ ಅದರ ಮನಾರ ಮಾಡ್ಲಕ್ಕು ಹೇಳಿ…. 😉

    1. ಓ ಧಾರಾಳ ಕೊಡುವೊ ದೇವೀ.. ನೆಗೆಗಾರನತ್ತರೆ ಬೇಡ ಗುರಿಕ್ಕಾರನತ್ತರೋ, ಒಪ್ಪಣ್ಣನತ್ತರೋ ಮಣ್ಣ ಕಳುಸುತ್ತೆ ಆಗದೋ.. ಪುರುಸೊತ್ತಿದ್ದರೆ ನೀನೇ ಇತ್ಲಾಗಿ ಬಂದಿಕ್ಕಬ್ಬೋ ಒಂದರಿ…

  7. ಕೊಚ್ಚಿಸಳ್ಳಿ,ಪಾಯಸ,ಸುಟ್ಟವು,ಸಾಸಮೆ …ಆಹಾ..ಬಾಯಿಲಿ ನೀರು ಅರಿತ್ತು..
    ಅಜ್ಜಿ,ಬಂಡಾಡಿಂದ ಹೊರುವ ಕಷ್ಟ ಎಂತಗೆ?ಅಲ್ಲಿಯೇ ತಿಂದು ಮುಗುಸುಲೆ ಹೆರಡ್ತಾ ಇದ್ದೆ.ಆಗದೋ?ಕಡವ ಕಲ್ಲು ತರೆಕ್ಕಕ್ಕೋ??

    1. ರೆಜಾ ಜೊರ ಬಂದು ಈಚೊಡೆಂಗೆ ಬಪ್ಪಲೇ ಆಯಿದಿಲ್ಲೆ ಇದಾ.. ಒಂದೊಂದು ಸುರು ಆದರೆ ಪಕ್ಕನೆ ಮುಗಿವಲೇ ಇಲ್ಲೆ..
      ಹ್ಮ್ ಅದಿರಲಿ.. ಕಂಡಿತಾ ಬಪ್ಪಲಕ್ಕು ರಗೂ… ಪುಳ್ಯಕ್ಕೊ ಅಜ್ಜಿಗೆ ಸೇರ್ತೆಯೊ ಹೇಳಿ ಹೇಳಿದರೆ ಸಾಕು.. ಕುಶೀ ಆವುತ್ತು.. ಎಂತ ಮಾಡೆಕ್ಕೂಳಿ ಇಲ್ಲೆ..
      ಏವಗ ಬೇಕಾರು ಬಪ್ಪಲಕ್ಕು… ಎಂತ..?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×