ತಲೆಬೇನೆ : ಭಾಗ-2

ಹೊಸ ವರ್ಷ ಬಂತು…ಒಂದು ತಿಂಗಳುದೇ ಕಳತ್ತದ. ದಿನ ಹೋಪದೇ ಗೊಂತಾವ್ತಿಲ್ಲೆ ಅಲ್ಲದಾ? ಶಾಲೆಮಕ್ಕೊಗೆ ಪರೀಕ್ಷೆಯ ಶುರು ಅಪ್ಪ ಸಮಯ ಇದು! ಎಂಗಳ ಸಂಸ್ಥೆಲಿ ಪಿಯುಸಿ ಮಕ್ಕೊಗೆ ಓದುತ್ತ ಗೌಜಿಲಿ ಎಂತಕ್ಕೂ ಪುರ್ಸೊತ್ತಿಲ್ಲೆ ಈಗ ! ಅಪ್ಪ ಅಮ್ಮಂಗೆ ಓದುಸುವ ಗೌಜಿ ! ಅಷ್ಟೊತ್ತಿಂಗೆ ಜಂಬ್ರಂಗಳ ಗೌಜಿಯೂ ಶುರು ಆತಿದ ! ಒಟ್ಟಾರೆ ಈ ಗೌಜಿಗಳ ಗೌಜಿಲಿ ತಲೆ ಒಳದಿಕ್ಕೆ ಚೆಂಡೆ ಹೆಟ್ಟಿದ ಹಾಂಗಿದ್ದ ಅನುಭವ ಕೆಲವರಿಂಗೆ. ಅದರೊಟ್ಟಿಂಗೇ ಎನ್ನ ಶುದ್ದಿಗೊ ! ಒಂದರ ಹಿಂದೊಂದು ಪ್ರಶ್ನೆಗಳ ಪೀಠಿಕೆಯೊಟ್ಟಿಂಗೆ ಶುರುವಾದ ಕಳುದವಾರದ ಶುದ್ದಿ ತಲೆ ಇಪ್ಪೋರಿಂಗೆಲ್ಲವೂ ತಲೆಬೆಶಿ ಹೆಚ್ಚು ಮಾಡುವ ಹಾಂಗಿದ್ದ ತಲೆಬೇನೆಗೆ ಇಪ್ಪ ಹಲವಾರು ಕಾರಣಂಗಳ ತಿಳ್ಕೊಂಬದರ್ಲಿ ನಿಲ್ಸಿದ್ದು ನಾವು. ಒಂದು ಉದ್ದ ಪಟ್ಟಿಯ ನಿಂಗೊ ನೋಡಿದ್ದಿ ಅದಲ್ಲದ್ದೇ ಇನ್ನೂ ಹಲವು ಕಾರಣಂದಲೂ ತಲೆಬೇನೆ ಬಪ್ಪ ಸಾಧ್ಯತೆಗೊ ಇದ್ದು ! ಎಲ್ಲವನ್ನೂ ಒಂದರಿಯೇ ತಿಳ್ಕೊಂಬಲೆ ರಜ್ಜ ಕಷ್ಟವೇ ಅಲ್ಲದಾ? ಕೆಲವು ಮುಖ್ಯವಾದ ವಿಚಾರಂಗಳ ಬಗ್ಗೆ ನಾವು ವಿಮರ್ಶೆ ಮಾಡುವ.

ಮನುಷ್ಯನ ತಲೆ ಹೇಳ್ತದು ಮೊದಲೇ ಹೇಳಿದ ಹಾಂಗೆ ತುಂಬಾ ಸಂಕೀರ್ಣ ರಚನೆ. ತಲೆ ಹೇಳಿ ನಾವು ಹೇಳುವ ಭಾಗ ದೇಹದ ಮೇಲಭಾಗಲ್ಲಿ ಇಪ್ಪದು, ನಮ್ಮ ಸಂಸ್ಕೃತಿಲಿ ಕೂಡ ತಲೆಗೆ ಹೆಚ್ಚು ಪ್ರಾಶಸ್ತ್ಯ ಇದ್ದಿದಾ,ಮನುಷ್ಯ ದೇಹದ ಶ್ರೇಷ್ಠ ಭಾಗ ಹೇಳಿ ಲೆಕ್ಕ ಈ ’ತಲೆ’. ಹಿರಿಯೋರ ಮುಂದೆ ಶಿರಬಾಗುದು ಪದ್ಧತಿ ಅಲ್ಲದಾ, ಅದು ಗೌರವ ಸೂಚಕ.  ಅದೇ ರೀತಿ ಶರೀರ ರಚನೆ ಮತ್ತೆ ಕ್ರಿಯೆಲಿಯೂ ಕೂಡ ತಲೆಗೇ ಹೆಚ್ಚಿನ ಪ್ರಾಮುಖ್ಯತೆ ! ತುಂಬಾ ತುಂಬಾ ಸಂಕೀರ್ಣ,ಆನು ಮೊದಲೇ ಹೇಳಿದ ಹಾಂಗೆ. ಹೀಂಗಿದ್ದ ಒಂದು ರಚನೆಯ ಒಳ ತೊಂದರೆ ಉಂಟಾದಪ್ಪಗ ಅದರ ಕಂದುಹಿಡಿವದು ಮತ್ತೆ ಪರಿಹಾರ ಮಾರ್ಗವೂ ಕೂಡಾ ಅಷ್ಟೇ ಕಷ್ಟ. ಎಲ್ಲ ಸಮಸ್ಯೆಯನ್ನೂ ನಾವು ಒಂದರಿಯೇ ತಿಳ್ಕೊಂಬಲೆ ಎಡಿಯ…ಇಂದು ಕೆಲವು ವಿಷಯಂಗಳ ಬಗ್ಗೆ ಮಾತಾಡುವ :).

ತಲೆಬೇನೆಲಿ ಸುಮಾರು ವಿಧಂಗೊ ಇದ್ದರೂ ಕೂಡ ಮುಖ್ಯವಾಗಿ  2 ರೀತಿ:

 • ಒಂದು primary headache , ಈ ರೀತಿಯ ತಲೆಬೇನೆಗೊ ಕೆಲವು ಸರ್ತಿ ನಿತ್ಯಜೀವನ ನಡಶುಲೆ ಕೂಡ ಕಷ್ಟ ಅಪ್ಪಷ್ಟು ತೊಂದರೆ ಕೊಡ್ತು, ಆದರೆ ಪ್ರಾಣಕ್ಕೆ ಅಪಾಯ ಇರ್ತಿಲ್ಲೆ. ಉದಾಹರಣೆ: ಮೈಗ್ರೇನ್,  ಒತ್ತಡದ ತಲೆಬೇನೆ ಇತ್ಯಾದಿ.
 • ಮತ್ತೊಂದು secondary headache , ಇಲ್ಲಿ ತಲೆಬೇನೆ ಹೇಳುದು ಬೇರೆಯಾವುದೋ ಒಂದು ರೋಗ/ಸಮಸ್ಯೆಯ ಲಕ್ಷಣ ಅಷ್ಟೆ. ಉದಾಹರಣೆ:ಮೆದುಳಿಲ್ಲಿ ರಕ್ತಸ್ರಾವ, ಮೆದುಳಿಲ್ಲಿ ಕ್ಯಾನ್ಸರ್ ಇತ್ಯಾದಿ.
 • ಇದಲ್ಲದ್ದೆ ಕೆಲವು ಸರ್ತಿ ಮೋರೆಯ ನರದ ಬೇನೆ, ಇತ್ಯಾದಿಗಳೂ ಕೂಡ ತಲೆಬೇನೆ ತತ್ತು.

ಹೊಟ್ಟೆ ಹಶುವಿಂದ ಅಪ್ಪ ತಲೆಬೇನೆ:

ಸುರೂವಿಂಗೆ ಒಂದು ಸಾಮಾನ್ಯ ಕಾರಣ ಹೇಳಿರೆ ಹೊಟ್ಟೆ ಖಾಲಿ ಇದ್ದರೆ ಅಪ್ಪ ತಲೆಬೇನೆಯ ಬಗ್ಗೆ ನೋಡುವ. ತುಂಬಾ ಹೊತ್ತು ಎಂತದೂ ತಿನ್ನದ್ದೇ ಇದ್ದರೆ ನವಗೆ ತಲೆಬೇನೆ ಆವ್ತು, ಇದರ ಅನುಭವ ಎಲ್ಲರಿಂಗೂ ಆದಿಕ್ಕು. ಕೆಲವು ಜೆನಕ್ಕೆ ಊಟದ ಹೊತ್ತು ಬದಲಾದರೆ ತಲೆಬೇನೆ ಶುರು ಆವ್ತು, ಇನ್ನೊಂದೊಂದಾರಿ ಅನಿವಾರ್ಯ ಕಾರಣಂದ ಒಂದು ಹೊತ್ತಿನ ಊಟ ಅಥವಾ ತಿಂಡಿ ತಪ್ಪಿದರೆ ತಲೇಬೇನೆ ಆವ್ತು. ಊಟ ಸಿಕ್ಕದ್ದರೆ ಹೊಟ್ಟೆ ಬೇನೆ ಆಯೆಕ್ಕು ! ತಲೆಬೇನೆ ಹೇಂಗೆ ಅಪ್ಪದು?

ಕಾರಣ ಇಲ್ಲಿದ್ದು: ನಾವು ತೆಕ್ಕೊಂಬ ಆಹಾರಲ್ಲಿ ವಿಟಮಿನ್, ಪ್ರೋಟೀನ್ ಇತ್ಯಾದಿಗಳೊಟ್ಟಿಂಗೆ ಶಕ್ತಿ ಉತ್ಪಾದನೆಗೆ ಅಗತ್ಯ ಆಗಿಪ್ಪ ಶರ್ಕರಪಿಷ್ಠಂಗೊ[carbohydrates] ಇರ್ತು [ಮುಖ್ಯವಾಗಿ ಅಕ್ಕಿ,ಗೋಧಿಳಲ್ಲಿ ಇತ್ಯಾದಿ]. ಇದು ನಮ್ಮ ಹೊಟ್ಟೆಲಿ ಜೀರ್ಣ ಆಗಿ ’ಗ್ಲುಕೋಸು’ ಹೇಳ್ತ ಸಣ್ಣ ಸಣ್ಣ ರೂಪಲ್ಲಿ ನೆತ್ತರಿನೊಟ್ಟಿಂಗೆ ಸೇರಿ ಶರೀರದ ಬೇರೆ ಬೇರೆ ಭಾಗಂಗೊಕ್ಕೆ ಹೋವ್ತು. ಜೀವಕೋಶಂಗೊ ಈ ಗ್ಲುಕೋಸಿನ ಉಪಯೋಗಿಸಿಗೊಂಡು ಶಕ್ತಿಯ ಉತ್ಪಾದನೆ ಮಾಡ್ತು. ನಾವು ಹೊಟ್ಟೆ ಹೆಚ್ಚು ಹೊತ್ತು ಖಾಲಿ ಬಿಟ್ಟಪ್ಪಗ ಈ ಶಕ್ತಿಯ ಕೊರತೆ ಉಂಟಾವ್ತು. ಬೇರೆ ಎಲ್ಲ ಅಂಗಾಂಶಂಗಳಲ್ಲಿಯೂ ಕೂಡ ರಜ್ಜ ಸಮಯಕ್ಕೆ ಬೇಕಾದ ಸಂಗ್ರಹ ಇರ್ತು. ಅಕಸ್ಮಾತ್ ರಜ್ಜ ಹೆಚ್ಚು ಕಮ್ಮಿ ಆದರೂ ತಡಕ್ಕೊಂಬಲೆ ಎಡಿತ್ತು. ಆದರೆ ಮೆದುಳಿಂಗೆ ಮಾಂತ್ರ ನಿರಂತರ ಗ್ಲುಕೋಸು ಸಪ್ಪ್ಲೈ ಬೇಕು ! ಅಲ್ಲದ್ದರೆ ಕೆಲಸ ಮಾಡುಲೆ ಎಡಿತ್ತಿಲ್ಲೆ ! ಅಂಬಗ ತಲೆಬೇನೆ ಶುರುಆವ್ತು. ಸಾಮಾನ್ಯವಾಗಿ ಉಪವಾಸ ಮಾಡೂವಗ, ಪ್ರವಾಸಲ್ಲಿ ಇಪ್ಪ ಸಂದರ್ಭಲ್ಲಿ ಅಥವಾ ಕೆಲಸದ ಒತ್ತಡಲ್ಲಿ ನಾವು ಹೊಟ್ಟೆಗೆ ಏನೂ ಹಾಕದ್ದೆ ಇದ್ದರೆ ಈ ಸಮಸ್ಯೆ ಶುರು ಆವ್ತು.

ಪರಿಹಾರ:

 • ಸಾಧ್ಯ ಆದಷ್ಟೂ ಹೊತ್ತಿಂಗೆ ಸರಿಯಾಗಿ ತಿಂಬಲೆ ಪ್ರಯತ್ನ ಮಾಡೆಕ್ಕು.
 • ಊಟಕ್ಕೆ ಸಮಯ ಇಲ್ಲದ್ದಷ್ಟು ಅನಿವಾರ್ಯತೆ ಇದ್ದರೆ, ಒಟ್ಟಿಂಗೆ ಎಂತಾರು ಹಣ್ಣುಗಳ, ಬಿಸ್ಕುಟು/ಚಾಕೊಲೇಟುಗಳ, ಶರ್ಬತ್ತು ಇತ್ಯಾದಿಗಳ ಆ ಸಂದರ್ಭಲ್ಲಿ ತೆಕ್ಕೊಳ್ಳೆಕ್ಕು. ಇದರಿಂದ ಶರೀರಕ್ಕೆ ಬೇಕಾದ ಶರ್ಕರ ಸಿಕ್ಕುತ್ತು.
 • ಆಹಾರ ತೆಕ್ಕೊಂಡು ರಜ್ಜ ಹೊತ್ತಿಲ್ಲಿ ಈ ತಲೆಬೇನೆ ಮಾಯ ಆವ್ತು 🙂

[ಶರ್ಕರಪಿಷ್ಠದ ಕೊರತೆ ಶರೀರಲ್ಲಿ ಉಂಟಾದಪ್ಪಗ ಸಂಗ್ರಹಲ್ಲಿ ಇಪ್ಪದರ ಉಪಯೋಗ್ಸುತ್ತು ನಮ್ಮ ಶರೀರ. ಆದರೆ ಅದುದೇ ಮುಗುದಪ್ಪಗ? ಶರೀರದ ಬೇರೆ ಬೇರೆ ಭಾಗಲ್ಲಿ ಸಂಗ್ರಹಾ ಆಗಿಪ್ಪ ಕೊಬ್ಬಿನ ಅಂಶ ಶರ್ಕರಪಿಷ್ಠ ಆಗಿ ಪರಿವರ್ತನೆ ಆಗಿ ಶಕ್ತಿ ಬಿಡುಗಡೆ ಮಾಡ್ತು. ಮತ್ತುದೇ ಆಹಾರ ಸಿಕ್ಕದ್ದೆ ಶಕ್ತಿಗೆ ಕೊರತೆ ಉಂಟಪ್ಪ ಸಂದರ್ಭಲ್ಲಿ ನಮ್ಮ ಶರೀರ ದೇಹಲ್ಲಿಪ್ಪ ಪ್ರೊಟೀನುಗಳನ್ನೂ ಕೂಡ ಶಕ್ತಿ ಉತ್ಪಾದನೆಗೆ ಬಳಸಿಗೊಳ್ಳುತ್ತು.]

ಸೈನಸೈಟಿಸ್:

 • ನಮ್ಮ ತಲೆಯ ಎಲುಬಿಲ್ಲಿ [ತಲೆಬುರುಡೆ/skull bone] ಮೂಗಿನ ಸುತ್ತಮುತ್ತ ಕೆಲವು ಖಾಲಿ ಗೂಡಿನ ಹಾಂಗಿದ್ದ ಜಾಗೆಗೊ ಇದ್ದು. ಇದಕ್ಕೆ ’ಸೈನಸ್’ ಹೇಳಿ ಹೇಳ್ತವು. ಉದಾಹರಣೆಗೆ ಹುಬ್ಬಿನ ಹಿಂದಾಣ ಭಾಗಲ್ಲಿ ಇಪ್ಪದಕ್ಕೆ frontal sinus ಹೇಳ್ತವು, ಮೂಗಿನ ಎರಡೂ ಹೊಡೆಲಿ ಇಪ್ಪದಕ್ಕೆ maxillary sinus ಹೇಳ್ತವು.
 • ಈ ಜಾಗೆಗಳಲ್ಲಿ ಇಪ್ಪ ಗ್ರಂಥಿಗಳಿಂದ ಕೆಲವು ದ್ರವರೂಪದ ವಸ್ತುಗಳ ಬಿಡುಗಡೆ ಆವ್ತು. ಈ ದ್ರವ ಸೈನಸ್ಸುಗಳ ಸಣ್ಣ ಸುರಂಗದ ಹಾಂಗಿತ್ತ ಮಾರ್ಗದ ಮೂಲಕ ನಮ್ಮ ಮೂಗಿಂಗೆ ಬಂದು ವಿಸರ್ಜನೆ ಆವ್ತು.
 • ಇದು ಸಾಮಾನ್ಯ ಸ್ಥಿತಿಲಿ ಇದ್ದರೆ ಏನೂ ಸಮಸ್ಯೆ ಇಲ್ಲೆ. ಆದರೆ ಕೆಲವು ಸರ್ತಿ ಸುಮಾರು ಕಾರಣಂಗಳಿಂದಾಗಿ ಈ ದ್ರವದ ಬಿಡುಗಡೆ ಲೆಕ್ಕಂದ ಹೆಚ್ಚಿಗೆ ಆವ್ತು, ಉದಾಹರಣೆಗೆ ನವಗೆ ಶೀತ ಆದಿಪ್ಪಗ, ಅಂಬಗ ಆ ಖಾಲಿ ಗೂಡುಗಳ ಒಳದಿಕ್ಕೆ ದ್ರವ ತುಂಬುತ್ತು. ಇದರಿಂದಾಗಿ ತಲೆ ಭಾರ ಅಪ್ಪದು ಸೆಳಿವದು ಇತ್ಯಾದಿ ಶುರು ಆವ್ತು.
 • ಇನ್ನು ಕೆಲವು ಸರ್ತಿ ಅಲ್ಲಿಂದ ದ್ರವವ ಹೆರ ಸಾಗುಸುವ ಸಪೂರ ದಾರಿ ಮುಚ್ಚಿಹೋವ್ತು. ಅಂತಹ ಸಂದರ್ಭಲ್ಲಿ ಸ್ರವಿಸಿದ ದ್ರವ ಅಲ್ಲಿಯೇ ಶೇಖರ ಆಗಿ ಅದರಿಂದಾಗಿ ಬೇನೆ ಆವ್ತು. ಅಲ್ಲದ್ದೇ ಈ ದ್ರವ ಅಲ್ಲಿಯೇ ಗಟ್ಟಿ ಆವ್ತು
 • ಕೆಲವು ಜೆನಕ್ಕೆ ಧೂಳು ಇತ್ಯಾದಿ ಅಲರ್ಜಿಂದಲೂ ಇದು ಹೆಚ್ಚು ಆವ್ತು.
 • ರೋಗಾಣು ಸೋಂಕಿಂದಾಗಿಯೂ ಈ ಸಮಸ್ಯೆ ಉಂಟಾವ್ತು.
 • ಈ ತೊಂದರೆ ಇದ್ದೋರಿಂಗೆ ತಲೆಬೇನೆ ನಿತ್ಯದ ನೆಂಟ! ಸಾಮಾನ್ಯವಾಗಿ ಯಾವ ಸೈನಸಿಲ್ಲಿ ಸಮಸ್ಯೆ ಇದ್ದೋ ಆ ಭಾಗಲ್ಲಿ ಹೆಚ್ಚು ಬೇನೆ ಆವ್ತು, frontal sinusitis  ಆದರೆ ಹಣೆ/ಹುಬ್ಬಿನ ಭಾಗಲ್ಲಿ ಹೆಚ್ಚು ಬೇನೆ ಇರ್ತು. Maxillary sinusitis  ಆದರೆ ಮೋರೆಲಿ ಕಣ್ಣಿನ ಕೆಳ ಬೇನೆ ಇರ್ತು. ಈ ಭಾಗಂಗಳಲ್ಲಿ ಬೆರಳಿಲ್ಲಿ ಮೆಲ್ಲಂಗೆ ಮುಟ್ಟಿರೂ ಕೂಡ ತುಂಬಾ ಬೇನೆ ಇರ್ತು. ಅಲ್ಲದ್ದೆ ಮೂಗುಕಟ್ಟಿದ ಅನುಭವವೂ ಹೆಚ್ಚಿನ ಸಂದರ್ಭಲ್ಲಿ ಆವ್ತು. ಮುಂದೆ ಬಗ್ಗುವಗ ಭಾರ ಆದ ಹಾಂಗೆ ಅಪ್ಪದು, ಸೆಳಿವದು ಇತ್ಯಾದಿ ಲಕ್ಷಣಂಗೊ ಇರ್ತು.

  ತಲೆಯ ಎಲುಬಿಲ್ಲಿ ಇಪ್ಪ ಸೈನುಸ್ಸುಗೊ

ಪರಿಹಾರ:

 • ಧೂಳಿನ ಅಲರ್ಜಿ ಇದ್ದೋರು ಸಾಧ್ಯ ಆದಷ್ಟು ಧೂಳಿಂದ ದೂರ ಇಪ್ಪ ಪ್ರಯತ್ನ ಮಾಡೆಕ್ಕು.
 • ವೈದ್ಯರ ಹತ್ತರೆ ಹೋಯಕಾದ್ದರ ಅಗತ್ಯ ಇದ್ದು, ಸೋಂಕು ಇದ್ದಂತಹ ಸಂದರ್ಭಲ್ಲಿ ಅದಕ್ಕೆ ಸರಿಯಾದ ರೀತಿಲಿ ಮದ್ದಿನ ಅಗತ್ಯ ಇದ್ದು.
 • ಆಧುನಿಕ ವೈದ್ಯಪದ್ಧತಿಲಿ ಕೂಡ ಹಲವು ಪರಿಹಾರ ಕ್ರಮಂಗೊ ಇದ್ದು.
 • ಅದಲ್ಲದ್ದೆ ಈ ಸಮಸ್ಯೆಯ ಬಗೆಹರಿಸುಲೆ ಇಪ್ಪ ಪರಿಹಾರ ಕ್ರಮಂಗೊ ಹೇಳೀರೆ ಯೋಗ ಮತ್ತೆ ಆಯುರ್ವೇದ 🙂
 • ಯೋಗದ ಕಪಾಲಭಾತಿ, ಜಲನೇತಿ, ಸೂತ್ರನೇತಿ ಮತ್ತೆ ವಮನ ಧೌತಿ ಅಭ್ಯಾಸಂಗಳ ಮಾಡುದರಿಂದ ಸೈನಸ್ಸುಗಳ ಒಳದಿಕ್ಕೆ ಸಂಗ್ರಹ ಆಗಿಪ್ಪ ದ್ರವ ಹೆರ ಬಪ್ಪಲೆ ಸಹಾಯ ಆವ್ತು. ಅಲ್ಲದ್ದೆ ಸೈನಸ್ಸುಗಳಲ್ಲಿ ದ್ರವದ ಸಂಗ್ರಹ ಅಪ್ಪದೂ ನಿಲ್ಲುತ್ತು.
 • ಆಯುರ್ವೇದಲ್ಲಿ ಮಾಡ್ತ ಪಂಚಕರ್ಮದ ಒಂದು ಅಂಗ  ’ನಸ್ಯ’ ಕೂಡ  ಈ ಸಮಸ್ಯೆಯ ಪರಿಹಾರಲ್ಲಿ ಎಲ್ಲಕ್ಕಿಂತ ಮುಖ್ಯ ಪಾತ್ರ ವಹಿಸುತ್ತು.

ಹೀಂಗೆ ತಲೆಬೇನೆಯ ಹಿಂದೆ ಇಪ್ಪ ಹತ್ತು ಹಲವು ಸಾಧ್ಯತೆಗಳಲ್ಲಿ ಎರಡು ವಿಷಯಂಗಳ ತಿಳ್ಕೊಂಡಿದು ನಾವು. ಇನ್ನಾಣವಾರ ಇನ್ನೂ ಹೆಚ್ಚಿನ ಅಂಶಂಗಳ ತಿಳ್ಕೊಂಬ, ಆಗದಾ?

-ನಿಂಗಳ
ಸುವರ್ಣಿನೀ ಕೊಣಲೆ.

ಸುವರ್ಣಿನೀ ಕೊಣಲೆ

   

You may also like...

29 Responses

 1. Suresh Krishna says:

  ಈ ತೊಂದರೆ ಇದ್ದೋರಿಂಗೆ ತಲೆಬೇನೆ ನಿತ್ಯದ ನೆಂಟ!…

  ಈ ತಲೆ ಬೇನೆ ಎನ್ನ ನೆಂಟನೆ…ಎನಗೆ ಕೆಲವು ವರ್ಷಂದ sinusitis ನ ತೊಂದರೆ ಇದ್ದು. ಒಂದು ವರ್ಷ ಆಯುರ್ವೇದ ಮದ್ದು ತೆಕ್ಕೊಂಡೆ.. ಶಿರ ಶೂಲಾಡಿ ವಟಿ ಮಾತ್ರೆ ಸರಾಗ ತೆಕ್ಕೊಂಡೆ. ಮಾತ್ರೆ ಬಿಟ್ಟಪ್ಪಗ ತಲೆಬೇನೆ ವಾಪಸ್ !!!. ಈಗ ಕ್ರೋಸಿನ್ ಮಾತ್ರ ಪರಿಹಾರ !!.

  ಈ ಜಲನೇತಿ ಬಗ್ಗೆ ವಿವರುಸಿದರೆ ಒಳ್ಳೆದಿದ್ದತ್ತು…

 2. ಅಕ್ಷರ ದಾಮ್ಲೆ says:

  ಆಪ್ತವಾದ ಆರೋಗ್ಯ ಸಲಹೆ. ಲಾಯ್ಕ ಆಯ್ದು ಅಕ್ಕ…. ಃ)

 3. Mohananna says:

  ಶ್ಯಾಮಣ್ಣೋ ಪಿತ್ತ೦ದ ಬತ್ತ ತಲೆಬೇನಗೆ ಇರುಳು ಪುನರ್ಪುಳಿ ಓಡಿನ ನೀರಿಲ್ಲಿ ಹಾಕಿ ಮಡಗಿ ಉದಿಯಪ್ಪಗ ಹಸಿ ಹೊಟ್ಟಗೆ ಆ ನೀರಿನ ಕುಡಿಯೇಕು.ಹಾ೦ಗೆ ಕುಡಿವಲೆ ಎಡಿಯದ್ರೆ ರಜ ಸಕ್ಕರೆ ಹಾಕಲಕ್ಕು.ಹಿ೦ಗೆ ಮೂರುದಿನ ಕುಡುದರ ಪಿತ್ತ೦ದಬತ್ತ ಹೆಚಿನ ತೊ೦ದರಗಳೂ ನಿವಾರಣೆ ಆವುತ್ತು.ಈ ಪ್ರಯೋಗ ಎರಡು ಮೂರು ತಿ೦ಗಳಿ೦ಗೊ೦ದಾರಿ ಮಾಡಿಯೊಡಿದ್ದರೆ ಪಿತ್ತದ ತೊ೦ದರೆ ಇಲ್ಲೆ.ಇದಕ್ಕೆ ಆನೇ ಉದಾಹರಣೆ.ಒಪ್ಪ೦ಗಳೊಟ್ಟಿ೦ಗೆ.

 4. ಶರ್ಮಪ್ಪಚ್ಚಿ says:

  ಸೈನಸೈಟಿಸ್ ಬಗ್ಗೆ ವಿವರ ಲಾಯಿಕ ಆಯಿದು. ಸಚಿತ್ರ ಲೇಖನ ಕೊಟ್ಟದಕ್ಕೆ ಧನ್ಯವಾದಂಗೊ

 5. ಅಡಕೋಳಿ says:

  ಮಕ್ಕಳ ಕೆಮ್ಮಕ್ಕೆ ಒಂದು ಉಪಾಯ ಹೇಳಿ. ಈ ಲೇಖನ ಚಲೋ ಇದ್ದು

 6. ವೈಶಾಲಿ ಬೆದ್ರಡಿ says:

  ಅಕ್ಕ… ಉತ್ತಮವಾದ ಲೇಖನ.. 🙂 ಸೈನಸ್ ನ ಸಮಸ್ಯೆ ಇದ್ದರೆ ನಾಡಿ ಶೋಧನ ಪ್ರಾಣಾಯಾಮ ಉತ್ತಮ ಫಲಕಾರಿ ಆವ್ತಲ್ಲದ? ಎನಗು ಈ ಸಮಸ್ಯೆ ಇದ್ದು. ಪ್ರಾಣಾಯಾಮ ಒ೦ದು ದಿನ ಬಿಟ್ಟರೆ ಅ೦ಬಗ ತಲೆ ಬೇನೆ ಸುರು ಆವುತ್ತು. ಈಗ ಯಾವಾಗಲು ಮಾಡ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *