ಸಿಂಪಲ್ ಸಮಸ್ಯೆ-ಪಿಂಪಲ್[Pimple]

ಬೈಲಿನೋರಿಂಗೆ ಎಲ್ಲೋರಿಂಗೂ ಹೊಸ ವರ್ಷ ಸಂತೋಷ ಸಂತೃಪ್ತಿ ತರಲಿ. ಬೈಲಿನ ಹೊಸ ರೂಪ ನೋಡಿ ಆಶ್ಚರ್ಯ ಆತು..ರಜ್ಜ ಪರಡುವ ಹಾಂಗೆ ಆವ್ತು ಈಗ ! ಇನ್ನೊಂದು ರಜ್ಜ ಸಮಯ ಬೇಕು ಈ ಹೊಸ ಅವತಾರಕ್ಕೆ ಹೊಂದಿಗೊಂಬಲೆ :). 2010ರಲ್ಲಿ ಬೈಲಿನೋರು ಕೊಟ್ಟ ಪ್ರೀತಿ ಪ್ರೋತ್ಸಾಹಕ್ಕೆ ಕೃತಜ್ಞತೆಗೊ. ಇನ್ನು ಮುಂದೆಯೂ ನಿಂಗಳ ಪ್ರೋತ್ಸಾಹ, ಸಹಕಾರ ಹಾಂಗೇ ಇಕ್ಕು ಹೇಳ್ತ ಭರವಸೆ ಇದ್ದು.

ಈ ವಾರ ಒಂದು ತುಂಬಾ ಸಾಮಾನ್ಯ ಆದರೆ ಸುಮಾರು ಜೆನರ ಒರಕ್ಕು ಕೆಡುಸುವ ಒಂದು ಸಮಸ್ಯೆಯ ಬಗ್ಗೆ ಮಾತಾಡುವ.  ಇದಕ್ಕೆ ಇಂಗ್ಲೀಷಿಲ್ಲಿ ’ಪಿಂಪಲ್/pimple’ ಹೇಳಿ ಹೇಳ್ತವು, ವೈದ್ಯಕೀಯವಾಗಿ acne vulgaris ಹೇಳ್ತವು. ಕನ್ನಡಲ್ಲಿ ಮೊಡವೆ,ಮುದ್ದಣ ಹೇಳಿ ಹೇಳ್ತವು. ಇದು ಚರ್ಮಕ್ಕೆ ಸಂಬಂಧಿಸಿದ ಒಂದು ಸಮಸ್ಯೆ.

ಅಂಗೈ ಮತ್ತೆ ತುಟಿಗಳ ಬಿಟ್ಟು ಶರೀರದ ಎಲ್ಲ ಕಡೆಲಿಯೂ ಚರ್ಮಲ್ಲಿ ಸಣ್ಣ ಸಣ್ಣ ರೋಮಂಗೊ ಇದ್ದೇ ಇರ್ತು. ಈ ರೋಮಂಗಳ ಬೇರು ಇಪ್ಪಲ್ಲಿ ಒಳಾದಿಕ್ಕೆ ಸೆಬೇಶಿಯಸ್ ಗ್ರಂಥಿ ಇರ್ತು. ಈ ಗ್ರಂಥಿಂದ ಒಂದು ಜಿಡ್ಡು ಜಿಡ್ಡಾದ ದ್ರವ ಸ್ರವಿಸುತ್ತು. ಈ ದ್ರವ ಚರ್ಮಲ್ಲಿ ಇಪ್ಪ ಸೂಕ್ಷ್ಮ ರಂದ್ರಗಳ ಮೂಲಕ ಹೆರಾಂಗೆ ಬತ್ತು. ನಮ್ಮ ಚರ್ಮದ ಮೇಗೆ ಎಣ್ಣೆಯ ಹಾಂಗೆ ಇಪ್ಪದು ಇದೇ ದ್ರವ. ಇದು ಒಂದು ಸಾಮಾನ್ಯ ಪ್ರಕ್ರಿಯೆ, ಇದರ ಬಗ್ಗೆ ತಲೆಬೆಶಿ ಮಾಡೆಕಾದ ಅಗತ್ಯ ಇಲ್ಲೆ. ಆದರೆ ಇದರ ಸ್ರಾವಲ್ಲಿ ಹೆಚ್ಚು ಕಮ್ಮಿ ಆದರೆ, ಈ ಕ್ರಿಯೆಲಿ ವ್ಯತ್ಯಾಸ ಆದರೆ ಸಮಸ್ಯೆ ಖಂಡಿತಾ ಇದ್ದು.

ಸಮಸ್ಯೆ ಎಂತರ?

 • ಮೇಲೆ ಹೇಳಿದ ಹಾಂಗೆ ಸೆಬೇಶಿಯಸ್ ಗ್ರಂಥಿಂದ ಬಪ್ಪ ದ್ರವ, ಚರ್ಮಲ್ಲಿ ಇಪ್ಪ ರಂದ್ರದ ಮೂಲಕ ಹೆರ ಬಾರದ್ದೆ, ಅಲ್ಲಿಯೇ ಉಳುದು ಅಲ್ಲಿ ಸೋಂಕು ಉಂಟಪ್ಪದೇ ಈ ಮೊಡವೆ ಹೇಳ್ತ ಸಮಸ್ಯೆ.
 • ಸೋಂಕು ಉಂಟಪ್ಪಗ ಆ ಜಾಗೆ ರಜ್ಜ ದಪ್ಪ ಆಗಿ, ಕೆಂಪು ಬಣ್ಣಕ್ಕೆ ತಿರುಗುತ್ತು. ಅಲ್ಲದ್ದೆ ಬೇನೆಯೂ ಇರ್ತು. ಕೆಲವು ಸರ್ತಿ ರೆಶಿಗೆ ಹೆಚ್ಚಾವ್ತದೂ ಇದ್ದು. ಈ ಸಂದರ್ಭಲ್ಲಿ ಕೆಲವು ಬ್ಯಾಕ್ಟೀರಿಯಂಗಳೂ ಇಲ್ಲಿ ಬೆಳವಲೆ ಶುರು ಆವ್ತು.
 • ಇದಕ್ಕೆ ಕಾರಣ ಹೇಳೀರೆ ರಂದ್ರಂಗೊ ಮುಚ್ಚಿ ಹೋಪದು. ಧೂಳು ಅಥವಾ ಇನ್ನ್ಯಾವುದೇ ಸಣ್ಣ ಕಣಂಗೊ ರಂದ್ರವ ಮುಚ್ಚುವ ಸಾಧ್ಯತೆ ಇದ್ದು. ಅಥವಾ ಕೆಲಾವು ಸರ್ತಿ ಸೆಬೇಶಿಯಸ್ ದ್ರವವೇ ಗಟ್ಟಿ ಆಗಿ ರಂದ್ರಂಗಳ ಮುಚ್ಚುವ ಸಾಧ್ಯತೆ ಇದ್ದು.
 • ಈ ಮೊಡವೆಗಳ ಸಮಸ್ಯೆ ಹೆಚ್ಚಾಗಿ ಶುರು ಅಪ್ಪದು ಹದಿಹರೆಯಲ್ಲಿ, ಆಂಡ್ರೋಜನ್ ಹೇಳ್ತ ರಸದೂತದ ಪ್ರಭಾವ ಹೆಚ್ಚಿದ್ದಷ್ಟು ಮೊಡವೆಗೊ ಹೆಚ್ಚು. ಹೆಚ್ಚಿನವಕ್ಕೆ ಪ್ರಾಯ ಇಪ್ಪತ್ತು ಕಳಿವಗ ಈ ಸಮಸ್ಯೆ ಕಮ್ಮಿ ಆವ್ತು. ಇನ್ನು ಕೆಲವರಿಂಗೆ ಮೂವತ್ತು ಕಳುದರೂ ಮುದ್ದಣ ಬೀಳುದು ನಿಲ್ಲುತ್ತಿಲ್ಲೆ.
 • ಕೆಲವು ಸರ್ತಿ ಸೋಂಕು ಉಂಟಪ್ಪದರ ಬದಲು ಒಳವೇ ಉಳಿವ ದ್ರವ ಅಲ್ಲಿಯೇ ಗಟ್ಟಿ ಆಗಿ ಚರ್ಮಲ್ಲಿ ಒಂದು ಸಣ್ಣ ಗಡ್ಡೆ ಆದ ಹಾಂಗೆ ಆವ್ತು.
 • ಇದು ಹೆಚ್ಚಾಗಿ ಮೋರೆ, ಎದೆ ಮತ್ತೆ ಬೆನ್ನಿನ ಮೇಲೆ ಅಪ್ಪದು.
 • ಅದು ಚರ್ಮದ ಮೇಲಾಣ ಪದರ್ಲ್ಲಿಯೇ ಇದ್ದರೆ ಸಮಸ್ಯೆ ಹೆಚ್ಚಿಲ್ಲೆ, ಆದರೆ ಚರ್ಮದ ಒಳಾಣ ಪದರಂಗಳನ್ನೂ ಒಳಗೊಂಡಿದ್ದರೆ ಕಲೆ ಉಳಿವ ಸಾಧ್ಯತೆ ಹೆಚ್ಚು.
 • Blackheads ಮತ್ತೆ whiteheads ಹೇಳಿ ಹೇಳುದರ ಕೇಳಿಕ್ಕು. ಇದು ಈ ದ್ರವ ಚರ್ಮದ ಒಳವೇ ಗಟ್ಟಿಯಾಗಿ ಉಳುದು ಉಂಟಪ್ಪ ಸಮಸ್ಯೆ. ದೇಹಂದ ಹೆರಹೋಯೆಕ್ಕಾದ ಯಾವುದೇ ತ್ಯಾಜ್ಯ ಒಳವೇ ಉಳುದಪ್ಪಗ ಸಮಸ್ಯೆ ಉಂಟಪ್ಪದು ಸಹಜ ಅಲ್ಲದಾ.
 • ಕೆಲವು ಸರ್ತಿ ಈ ಸಮಸ್ಯೆ ಹೆಚ್ಚಿಪಗ ಮಾನಸಿಕವಾಗಿಯೂ ಹಿಂಸೆ ಅನುಭವಿಸುತ್ತವು, ಮಾನಸಿಕವಾಗಿ ಕುಗ್ಗುತ್ತ ಸಾಧ್ಯತೆಗೊ ಇದ್ದು.

ಪರಿಹಾರ:

 • ಇದಕ್ಕೆ ಇಂತದ್ದೇ ಮದ್ದು ಹೇಳಿ ಹೇಳುಲೆ ಎಡಿಯ. ಮೊಡವೆಗೆ ಕಾರಣ ಎಂತರ ಹೇಳುದರ ಮೇಲೆ ಚಿಕಿತ್ಸೆ ನಿರ್ಧಾರ ಆವ್ತು. ಹದಿಹರಯಲ್ಲಿ ಇದು ಸಾಮಾನ್ಯ ಆದ ಕಾರಣ, ಒಂದು ಮಿತಿಲಿ ಇದ್ದರೆ ಹೆಚ್ಚಿಗೆ ತಲೆ ಬೆಶಿ ಮಾಡೆಕಾದ ಅಗತ್ಯ ಇಲ್ಲೆ. ಆದರೆ ತುಂಬಾ ಇದ್ದರೆ, ಇದರಿಂದಾಗಿ ತೊಂದರೆ ಹೆಚ್ಚಿದ್ದರೆ ಚಿಕಿತ್ಸೆ ಖಂಡಿತಾ ಅಗತ್ಯ.
 • ಇದು ಹೆಚ್ಚಾಗಿ ಮೋರೆಲಿ ಅಪ್ಪ ಕಾರಣ, ದಿನಾಗ್ಲೂ ನಾಲ್ಕು ಐದು ಸರ್ತಿ ಮೋರೆಯ ಸಾಬೂನು/ಫೇಸ್ ವಾಶ್/ಕಡ್ಲೇಹೊಡಿ/ಹಸರುಕಾಳಿನ ಹೊಡಿ ಇತ್ಯಾದಿ ಉಪಯೋಗಿಸಿ ತೊಳದು ಚರ್ಮವ ಸ್ವಚ್ಛ ಮಡೀಕ್ಕೊಳ್ಳೆಕು, ಇದರಿಂದ ರಂದ್ರಂಗೊ ಮುಚ್ಚದ್ದೆ ಸೆಬೇಶಿಯಸ್ ದ್ರವ ಸರಿಯಾಗಿ ಹೆರ ಹೋಪಲೆ ಸಹಾಯ ಆವ್ತು.
 • ಹೆಚ್ಚು ಹೆಚ್ಚು ನೀರು ಕುಡಿವದು[10-12 glasses], ಹಸಿ ತರಕಾರಿ, ಹಣ್ಣುಗಳ ಸೇವನೆ- ಸರಿಯಾದ ಆಹಾರ ಕ್ರಮವ ಪಾಲಿಸುದು ಕೂಡ ಸಹಾಯ ಮಾಡ್ತು.
 • ಮೋರೆಗೆ ಫೇಸ್ ಪ್ಯಾಕ್ ಹಾಕುದು- ಅವರವರ ಚರ್ಮಕ್ಕೆ ಸರಿ ಹೊಂದುವ facepack ಹಾಕುದರಿಂದ ಚರ್ಮದ ಆರೋಗ್ಯವ ಕಾಪಾಡುಲೆ ಎಡಿತ್ತು. ಪೇಟೆಲಿ ಸಿಕ್ಕುವ ಕೃತಕ facepack ಉಪಯೋಗ್ಸುವ ಬದಲು ಮನೆಲಿಯೇ ಹಣ್ಣಿನ/ತರಕಾರಿ ಅಥವಾ ಯಾವುದಾದರೂ ಧಾನ್ಯಂಗಳ facepack ಮಾಡಿ ಉಪಯೋಗ್ಸುದು ಒಳ್ಳೆದು. ಅರಶಿನ ಅಥವಾ ಚಂದನದ ಹಾಂಗಿಪ್ಪ ಮದ್ದುಗಳನ್ನೂ ಉಪಯೋಗ್ಸುದು ಚರ್ಮದ ಆರೋಗ್ಯಕ್ಕೆ ಒಳ್ಳೆದು.
 • ಮುದ್ದಣಲ್ಲಿ ಸೋಂಕು ಉಂಟಾಗದ್ದೆ ಅಲ್ಲಿಯೇ ಗಟ್ಟಿ ಆಗಿ ಸಿಸ್ಟ್ ಆಗಿದ್ದರೆ, ಅದರ ವೈದ್ಯರ ಹತ್ತರೆ ಹೋಗಿ ತೆಗಶೆಕ್ಕು.
 • ಇನ್ನು blackheads ಮತ್ತೆ whiteheads ಗಳ ತೊಂದರೆ ಇದ್ದಪ್ಪಗ ನಾವು ಬ್ಯೂಟಿಪಾರ್ಲರಿಂಗೆ ಹೋದರೆ ಅವ್ವು ಅದರ ತೆಗೆತ್ತವು, ಆದರೆ ಅಲ್ಲಿ ಮಾಡ್ಸುದು ಎಷ್ಟು ಸೂಕ್ತ? ಅದರ ಬದಲು ನಾವೇ ಮನೆಲಿ ಮಾಡ್ಲಕ್ಕು. ಮೋರೆಗೆ ರಜ್ಜ ಹೊತ್ತು ಹಬೆ ಹಿಡುದರೆ ಈ ರಂದ್ರಂಗೊ ಮುಚ್ಚಿದ್ದು ತೆರಕ್ಕೊಂಬಲೆ ಸಹಾಯ ಆವ್ತು, ಅಂಬಗ ಸ್ವಚ್ಛ ಮಾಡ್ಲೆ ಸುಲಾಭ ಆವ್ತು.
 • ಮೊಡವೆಯ ತೊಂದರೆ ಹೆಚ್ಚಿದ್ದರೆ ಮನೆಲಿ ಮಾಡುವ ಯಾವ ಪರಿಹಾರಂದಲೂ ಕಮ್ಮಿ ಆಗದ್ದರೆ ಪೇಟೆಲಿ ಸಿಕ್ಕುವ ಹಲವು ಕ್ರೀಮುಗಳ ಕಿಟ್ಟುವ ಬದಲು ವೈದ್ಯರ ಕಾಣೆಕಾದ್ದು ಅಗತ್ಯ.
 • ನಮ್ಮ ಚರ್ಮಕ್ಕೆ ಸರಿಹೊಂದದ್ದ ಕ್ರೀಮು/ಮೇಕಪ್ಪುಗಳ ಉಪಯೋಗ್ಸುದರ ನಿಲ್ಲುಸೆಕು.
 • ರಸದೂತಂಗಳ ಏರುಪೇರಿಂದಾಗಿಯೂ ಸಮಸ್ಯೆ ಉಂಟಪ್ಪ ಕಾರಣ ವೈದ್ಯರ ಸಹಾಯ ಖಂಡಿತಾ ಬೇಕು.
 • ಇದರೊಟ್ಟಿಂಗೆ..ಮಾನಸಿಕವಾಗಿ ಧೈರ್ಯ ತೆಕ್ಕೊಳ್ಳೆಕಾದ್ದೂ ಅಗತ್ಯ. ಈಗಾಣ ಕೆಲವು ಜಾಹೀರಾತುಗಳಲ್ಲಿ ಒಂದು ಮೊಡವೆ ಮೋರೆಲಿ ಬಿದ್ದರೆ ಜೀವನವೇ ಮುಳುಗಿತ್ತು ಹೇಳಿ ತೋರ್ಸುತ್ತವು !! ಮಕ್ಕಳ/ಹದಿಹರಯದ್ದವರ ದಾರಿ ತಪ್ಪುಸುವ ಕೆಲಸ.

ಕೆಲವು ಮನೆಮದ್ದುಗೊ:

 • ಗೆಣಮೆಣಸಿನ ನೀರಿಲ್ಲಿ ತಳದು ಕಿಟ್ಟುದು
 • ಅರಶಿನ ಮತ್ತೆ ಗಂಧ ತಳದು ಕಿಟ್ಟುದು
 • ಕುಂಬಳ ಸೊಪ್ಪಿನ ಎಸರಿಂಗೆ ನಿಂಬೆಹುಳಿ ಎಸರು ಮತ್ತೆ ಜೇನು ಬೆರುಸಿ ಕಿಟ್ಟುದು
 • ನಿಂಬೆಹುಳಿಯ ಹಿಂಡಿದ ಕಡಿಯ ಮೋರೆಗೆ ತಿಕ್ಕುದು
 • ಕೊತ್ತಂಬರಿ ಸೊಪ್ಪಿನ ಎಸರಿಂಗೆ ಗರಿಕೆ ಎಸರಿನ ಸೇರ್ಸಿ ಕಿಟ್ಟಿರೆ ಮೊಡವೆಯ ಕಲೆ ಹೋಪಲೆ ಸಹಾಯ ಆವ್ತು
 • ಕಹಿಬೇವಿನ ಸೊಪ್ಪು (neem) ಮತ್ತೆ ಕೊತ್ತಂಬರಿ ಸೊಪ್ಪಿನ ಮೊಸರಿನೊಟ್ಟಿಂಗೆ ಅರದು ಕಿಟ್ಟುದು
 • ಹುಳಿ ಬಿತ್ತಿನ ನಿಂಬೆ ಎಸರಿಲ್ಲಿ ತಳದು ಕಿಟ್ಟಿರೆ ಹೊಸತ್ತಾಗಿ ಮೂಡಿದ ಮೊಡವೆ ಅಲ್ಲಿಗೇ ಗುಣ ಆವ್ತು
 • ಒಣಗಿದ ನೆಲ್ಲಿಕಾಯಿ ಹೊಡಿಯ ಪನೀರಿನೊಟ್ಟಿಂಗೆ ಕಿಟ್ಟಿರೆ ಒಳ್ಳೆದು [ನೆಲ್ಲಿಕಾಯಿ ಚೂರ್ಣ ಪೇಟೆಲಿ ಸಿಕ್ಕುತ್ತು]
 • ಮುಳ್ಳುಸೌತೆಕಾಯಿ [ಚಕ್ಕರ್ಪೆ]ಯ ತುರುದು facepack ಹಾಕುಲಕ್ಕು.
 • ಮುಲ್ತಾನಿ ಮಣ್ಣು ಅಥವಾ ಹಾಂಗಿಪ್ಪ ಯಾವುದಾರೂ ಮಣ್ಣಿನ facepack ಕೂಡ ಒಳ್ಳೆದು.

ಬೈಲಿನೋರಿಂಗೆ ಹೆಚ್ಚಿನ ಮದ್ದುಗೊ ಗೊಂತಿಕ್ಕು, ಖಂಡಿತಾ ತಿಳುಶಿ…..

-ನಿಂಗಳ

ಸುವರ್ಣೀನೀ ಕೊಣಲೆ

ಸುವರ್ಣಿನೀ ಕೊಣಲೆ

   

You may also like...

11 Responses

 1. ಅಕ್ಕೋ! ಒಳ್ಳೆ ಮಾಹಿತಿಯುಕ್ತ ಲೇಖನ.. ಆನು ಓದುವಾಗ ರಜ ತಡವಾತಿದಾ! ಪಿಂಪಲೆಲ್ಲಾ ಮಾಯ ಆಯ್ದೀಗ, ತಮ್ಮಂಗೆ ಓದ್ಲೆ ಹೇಳ್ತೆ ಆತಾ 😉

  • ಬೊಳುಂಬು ಮಾವ says:

   ಲೇಖನ ಓದಿ ಅಪ್ಪಗಳೇ ಪಿಂಪಲ್ಲು ಮಾಯ ಆತೊ ? ಸುವರ್ಣಿನಿ ಅಕ್ಕನ ಕೈಗುಣವೊ ಹೇಳಿ.

 2. ಲೇಖನ ಲಾಯಕ ಆಯಿದು ಅಕ್ಕ. ಉಪಯುಕ್ತ ಬರಹ.

 3. ಬೊಳುಂಬು ಮಾವ says:

  ನೊಂಪಾದ ಮೋರೆಲಿ ಪಿಂಪಲ್ ಬೀಳುತ್ತದು ಸಿಂಪಲ್ ಸಮಸ್ಯೆ, ಅದಕ್ಕ ಸೋಂಕು ಆಗದ್ದ ಹಾಂಗೆ ಮಾಡಿ, ತಂಪು ಮಾಡ್ಯೊಳಿ ಹೇಳಿ ನೆಂಪಿಲ್ಲಿ ನಮ್ಮ ಗುಂಪಿಂಗೆ ಹೇಳಿದ್ದು ಸುವರ್ಣಿನಿ ಅಕ್ಕ. ಒಳ್ಳೆ ಮಾಹಿತಿ ಕೊಟ್ಟಿದು. ಧನ್ಯವಾದಂಗೊ.

 4. ಶರ್ಮಪ್ಪಚ್ಚಿ says:

  ಹದಿಹರಯದ ಸಾಮಾನ್ಯ ಸಮಸ್ಯೆಯ ಬಗ್ಗೆ ಚಿತ್ರ ಸಮೇತ ವಿವರವಾದ ಲೇಖನ.
  ಧನ್ಯವಾದಂಗೊ

 5. Gopalakrishna BHAT S.K. says:

  ಒಳ್ಳೆ ಕವಿಯ ಹೆಸರು ಇದ್ದು ಈ ರೋಗಕ್ಕೆ!
  ಮಕ್ಕೊಗೆ ತಲೆಬೆಶಿ ಮಾಡುವಷ್ಟು ಮಟ್ಟಿನ ರೋಗ ಇದು.
  ಪರಿಹಾರ ತಿಳಿಸಿದ್ದು ಒಳ್ಳೇದಾತು.

 6. ಆಯುರ್ವೇದಲ್ಲಿ ಸುಶ್ರುತ ಆಚಾರ್ಯರು ಈ ತೊಂದರೆಯ “ಮುಖದೂಷಿಕಾ” ಅಥವಾ “ಯೌವನ ಪಿಡಕಾ” ಹೇಳಿದೇ ಇದು ಕಫ,ವಾತ ಮತ್ತೆ ರಕ್ತ ದೋಷಂದಾಗಿ ಯೌವನಲ್ಲಿ ಮೋರೆಲಿ ಶಾಲ್ಮಲಿ=ಬೂರೂಗದ ಮರದ) ಮುಳ್ಳಿನ ರೀತಿಯ ಬೊಕ್ಕೆ ಬಪ್ಪದು ಹೇಳಿ ವಿವರಣೆ ಕೊಟ್ಟಿದವು..
  शाल्मलीकण्टकप्रख्याः कफमारुतशॊणितैः ।
  जायण्तॆ पिडका यूनां वक्त्रॆ या मुखदूषिकाः ॥ -सु.नि-१३/३८
  ಅಷ್ಟಾಂಗಸಂಗ್ರಹಲ್ಲಿ ವಿವರ್ಸುವ ಪ್ರಕಾರ ಮೋರೆಯ ಚರ್ಮಲ್ಲಿಪ್ಪ ಮೇದೋಪಿಂಡದ್ವಾರ(sebaceous cyst) ಮುಚ್ಚಿಯಪ್ಪಗ ಉದ್ಭವ ಅಪ್ಪ ಬೊಕ್ಕೆ.ಅದರ ಒಳ ಮೆದಸ್(ಎಣ್ಣೆ ಅಂಶ)ತುಂಬಿರ್ತು.ಅದರ ಹಾಂಗೇ ಬಿಟ್ಟರೆ ಅದು ಪಾಕ ಆಗಿ(ರೆಶಿಗೆ ಆಗಿ) ಒಡೆತ್ತು.
  • ಇದಕ್ಕೆ ಶಾಸ್ತ್ರೀಯ ಚಿಕಿತ್ಸೆ ಹೇಳಿದರೆ ವಮನ ಕರ್ಮ.ಇದರಂದ ಎಲ್ಲಾ ದೋಷಂಗೊ ಕಮ್ಮಿ ಆಗಿ ಶರೀರ ಶುದ್ದ ಆವುತ್ತು ಅಥವಾ
  • ವಚ(ಬಜೆ),ಲೋಧ್ರ(ಸಾಮ್ರಾಣಿ ಗಿಡ),ಸೈಂದುಪ್ಪು ಹಾಕಿ ಒಂದು ಲೇಪ ಮಾಡಿ ಹಾಕೆಕ್ಕು ಅಥವಾ
  • ಕುಸ್ತುಂಬರೀ(ಕೊತ್ತಂಬರಿ),ವಚ(ಬಜೆ),ಲೋಧ್ರ(ಸಾಮ್ರಾಣಿ ಗಿಡ),ಕುಷ್ಠ(ಕೋಷ್ಠ) ಇದರ ಲೇಪ ಹಾಕೆಕ್ಕು.
  -ಮನೆ ಮದ್ದಾಗಿ ಅತೀ ಸುಲಬಲ್ಲಿ ಮಾಡ್ಲೆ ಎಡಿವಂತಾದ್ದು ಹೇಳಿದರೆ ಹಸಿ ಅರಿಶಿನವ ಅರದು ದಿನನಿತ್ಯ ಕಿಟ್ಟುದು.ಇದರಂದ ಈ ತೊಂದರೆ ತುಂಬಾ ಕಮ್ಮಿ ಆವುತ್ತು ಹಾಂಗೇ ಕಲೆ ತೆಗೆತ್ತು,ಚರ್ಮಕ್ಕೆ ಒಳ್ಳೆ ಬಣ್ಣದೇ ಬತ್ತು..
  -ಶ್ರೀಗಂಧದೊಟ್ಟಿಂಗೆ ರಕ್ತಚಂದನ ಕಿಟ್ಟಿದರೂ ಪ್ರಯೋಜನ ಆವುತ್ತು. 🙂

 7. ಓ! ಮುದ್ದಣುವೋ?
  ಎನ್ನ ಹಾಂಗೆ ಪ್ರಾಯ ಆಗದ್ದೋರಿಂಗೆ ತೊಂದರೆ ಇಲ್ಲೆ ಅದರದ್ದು.
  ಪ್ರಾಯ ಆದೋರಿಂಗೆ ಹೇಂಗೂ ತೊಂದರೆ ಇಲ್ಲೆ.
  ಪ್ರಾಯ ಬಂದೋರಿಂಗೆ ಅದು ಉಪದ್ರ ಕೊಡ್ತು, ಹೇಳಿ ಅಜ್ಜಕಾನಬಾವ ಹೇಳ್ತ° ಒಂದೊಂದರಿ.

  ಒಳ್ಳೆ ಶುದ್ದಿ, ಕೊಶಿ ಆತು. 🙂

 8. Harish Kevala says:

  Doctre, Utatma lekhana.. Harmone imbalancindagi pimples bappadakke enadaru parihara idda?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *