Oppanna.com

ಅಸ್ತಮಾ [Asthma]

ಬರದೋರು :   ಸುವರ್ಣಿನೀ ಕೊಣಲೆ    on   07/11/2010    36 ಒಪ್ಪಂಗೊ

ಸುವರ್ಣಿನೀ ಕೊಣಲೆ

ಉಸಿರಾಟ ಎಷ್ಟು ಮುಖ್ಯ ಹೇಳುದು ನವಗೆಲ್ಲರಿಂಗೂ ಗೊಂತಿದ್ದು. ನಿಧಾನಕ್ಕೆ ಉಸಿರಾಡುದು ಎಷ್ಟು ಮುಖ್ಯ ಹೇಳುದನ್ನೂ ನಾವು ರಜ್ಜ ತಿಳ್ಕೊಂಡಿದು. ಉಸಿರಾಟದ ಬಗ್ಗೆ ನಾವು ಗಮನ ಕೊಡೆಕಾದ್ದು ಅಗತ್ಯವೇ, ಮೊನ್ನೆ ಆನು ಶ್ವಾಸಕೋಶದ ಬಗ್ಗೆ ಬರವಗ ಹೇಳಿದ್ದೆ, ನಾವು ಹುಟ್ಟುವಗ ಹೆಚ್ಚು ಕಮ್ಮಿ ಪಿಂಕ್ ಬಣ್ಣಲ್ಲಿಪ್ಪ ಈ ಅಂಗ, ನಾವು ಬೆಳದ ಹಾಂಗೇ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತು ಹೇಳಿ,ಇದು ನಮ್ಮಹಾಂಗಿದ್ದೋರ ಕಥೆ. ಅದಕ್ಕೆ ಕಾರಣ ನಾವು ಉಸಿರಾಟ ಮಾಡುವಗ ಒಳ ಹೋಪ [ಕಣ್ಣಿಂಗೆ ಕಾಣದ್ದ] ಕಲ್ಮಷಂಗೊ! ಇನ್ನು ಬೀಡಿ ಸಿಗರೇಟ್ ಎಳೆತ್ತವರ ಶ್ವಾಸಕೋಶ ಮಸಿ ತುಂಡಿನ ಹಾಂಗೆಯೇ ಇಕ್ಕಾ ಹೇಳಿ!

ಇಂದು ಉಸಿರಾಟಕ್ಕೆ ಸಂಬಂಧಪಟ್ಟ ಒಂದು ತೊಂದರೆಯ ಬಗ್ಗೆ ಬರೆತ್ತೆ. ಅಸ್ತಮ, ಸುಮಾರು ಜೆನಕ್ಕೆ ಈ ಸಮಸ್ಯೆ ಇರ್ತು. ಇನ್ನು ಕೆಲವು ಜೆನಕ್ಕೆ ಅಸ್ತಮಲ್ಲಿ ಇಪ್ಪ ಕೆಲವು ಲಕ್ಷಣಂಗೊ ಇಪ್ಪದನ್ನೇ ತಪ್ಪು ತಿಳುದು ಅಸ್ತಮ ಇದ್ದು ಗ್ರೇಶುತ್ತವು. ಹಾಂಗಾಗಿ ಇದರ ಬಗ್ಗೆ ರಜ್ಜ ತಿಳ್ಕೊಂಬ.

ಪ್ರಪಂಚಲ್ಲಿ ಮುನ್ನೂರು ಮಿಲಿಯ ಜೆನಂಗೊಕ್ಕೆ ಅಸ್ತಮ ಇದ್ದು ಹೇಳಿ ಒಂದು ಲೆಕ್ಕ ಹೇಳ್ತು ! ಅಧ್ಯಯನಂಗಳ ಪ್ರಕಾರ ಸಣ್ಣ ಮಕ್ಕಳಲ್ಲಿ ಅಸ್ತಮ ಹೆಚ್ಚು ಕಂಡುಬಪ್ಪದು ಮಾಣಿಯಂಗೊಕ್ಕೆ, ಕೂಸುಗೊ ಪ್ರೌಢದೆಶೆಗೆ (puberty) ಬಂದಪ್ಪಗ ಈ ಸಮಸ್ಯೆ ಹೆಚ್ಚು ಕಾಡುದು. ಈ ಸಮಸ್ಯೆಯ ಕಂಟ್ರೊಲಿಲ್ಲಿ ಮಡುಗದ್ದರೆ ಅಪ್ಪ ನಷ್ಟ ತುಂಬಾ.. ಶಾಲೆಗೆ ಹೋಪಲೆಡಿಯ, ಕೆಲಸಕ್ಕೆ ಹೋಪಲೆಡಿಯ,ಆಸ್ಪತ್ರೆಗೆ ಹೋಪ ಕಷ್ಟ,ಇನ್ನೂ ಕೆಲವರಿಂಗೆ ಇದರಿಂದಾಗಿ ಮೃತ್ಯುದೇ ಬತ್ತು.ಹಾಂಗಾಗಿ ಜಾಗೃತೆಂದ ಇದ್ದು, ಸಮಸ್ಯೆಗೆ ಪರಿಹಾರ ಕಂಡುಗೊಳ್ಳೆಕು.

ಸಾಮಾನ್ಯ ಲಕ್ಷಣಂಗೊ:

  • (wheezing) ಉಬ್ಬಸ
  • (cough) ಸೆಮ್ಮ
  • (chest tightness) ಎದೆಗೂಡಿನ ಒಳ ತುಂಬಿದ ಹಾಂಗಪ್ಪದು
  • (Breathlessness)ಸಣ್ಣ ಸಣ್ಣ ಶ್ವಾಸ ತೆಕ್ಕೊಂಬದು [ದೀರ್ಘ ಶ್ವಾಸ ತೆಕ್ಕೊಂಬಲೆ ಎಡಿಯದ್ದಿಪ್ಪದು]
  • ಹೆಚ್ಚಾಗಿ ಇರುಳು ಮತ್ತೆ ಉದೀಗಾಲಕ್ಕೆ ಈ ಲಕ್ಷಣಂಗೊ ಕಂಡುಬತ್ತು.

ಇದರ ತೀವ್ರತೆ ಅಸ್ತಮಾ ಯಾವ ಹಂತಲ್ಲಿ ಇದ್ದು ಹೇಳ್ತದರ ಅವಲಂಬಿಸಿರ್ತು.

ಕಾರಣಂಗೊ: ಇದಕ್ಕೆ ಸುಮಾರು ಕಾರಣಂಗೊ ಇದ್ದು

  • (genetic causes) ಅನುವಂಶೀಯತೆ
  • (Allergy) ಒಗ್ಗದಿರುವಿಕೆ – ಧೂಳು, ಪರಾಗರೇಣು, ಸಾಂಕಿದ ಪ್ರಾಣಿ, ಶೀತದ ವಸ್ತು, ಶೀತ ವಾತಾವರಣ, ಹೊಗೆ, ಇತ್ಯಾದಿ.
  • (childhood respiratory infections) ಸಣ್ಣಪ್ರಾಯಲ್ಲಿ ಆದ ಶ್ವಾಸಕೋಶದ ಸೋಂಕು

ಲಕ್ಷಣಂಗೊ ಕಾರಣಂಗೊ ಎಲ್ಲ ಗೊಂತಾತು…ಹಾಂಗಾರೆ ಈ ಅಸ್ತಮಾ ಹೇಳ್ತದು ಏಂತರ? ಇದರಲ್ಲಿ ನಿಜವಾಗಿಯೂ ಎಂತ ಆವ್ತು ನಮ್ಮ ದೇಹಲ್ಲಿ? ಇದರ ವಿವರ್ಸುಲೆ ಹೆರಟರೆ ತುಂಬ ದೊಡ್ಡ ಕಥೆ !! ಹಾಂಗಾಗಿ ಸಣ್ಣಕ್ಕೆ , ಆದರೆ ಅರ್ಥ ಅಪ್ಪಹಾಂಗೆ ಹೇಳುವ ಪ್ರಯತ್ನ ಮಾಡ್ತೆ.

ಮೇಲೆ ಹೇಳಿದ ಯಾವುದೇ ಕಾರಣಂದಾಗಿ  hypersensitivity/ಅತಿಸೂಕ್ಷ್ಮ ಸಂವೇದನಾಶೀಲತೆ ಉಂಟಾಗಿ ನಮ್ಮ ಶ್ವಾಸಕೋಶಲ್ಲಿ ಇಪ್ಪ ನಾಳಂಗಳ ಒಳಾಣ ದಾರಿ ಸಣ್ಣ ಅಪ್ಪದು,  ಹೆಚ್ಚಿಗೆ ಕಫ ಉತ್ಪತ್ತಿ ಅಪ್ಪದು. ಶ್ವಾಸನಾಳದ ದಾರಿ ಸಣ್ಣ ಅಪ್ಪ ಕಾರಣಂದಾಗಿ ಮತ್ತೆ ಅಲ್ಲಿ ಕಫ ತುಂಬುವ ಕಾರಣಂದಾಗಿ ಮೇಲೆ ಹೇಳಿದ ಎಲ್ಲ ಲಕ್ಷಣಮ್ಗೊ ಉಂಟಾವ್ತು. ಇದೊಂದು ದೀರ್ಘ ಕಾಲಿಕ ಶ್ವಾಸನಾಳದ ಉರಿ ಊತ ಮತ್ತು ಅತಿಸೂಕ್ಷ್ಮ ಸಂವೇದನಾಶೀಲತೆಯ  ಕಾರಣಂದಾಗಿ ಉಂಟಪ್ಪ ತೊಂದರೆ. [It is a chronic airway  inflammation and increased airway hyper-responsiveness leading to symptoms of wheeze, cough, chest tightness and dyspnea/breathlessness.]

ಕೆಲವು ಜೆನಂಗೊಕ್ಕೆ, ಸರಿಯಾಗಿ ಮದ್ದು ಮಾಡದ್ದೆ ಇದ್ದ ಸಂದರ್ಭಲ್ಲಿ, ಈ ಲಕ್ಷಣಂಗೊ ತುಂಬಾ ಪ್ರಾಣಾಂತಿಕ ಆಗಿರ್ತು. ಅಲ್ಲದ್ದರೆ, ಸಾಮಾನ್ಯವಾಗಿ ಈ ತೊಂದರೆಗೊ ಅಸ್ತಮ ಅಟಾಕ್ ಆಗಿ ರಜ್ಜ ಹೊತ್ತು ಇದ್ದು ಒಂದಾ ತನ್ನಷ್ಟಕ್ಕೇ ಕಮ್ಮಿ ಆವ್ತು ಅಥವಾ ಮದ್ದು ತೆಕ್ಕೊಂಡಪ್ಪಗ ಸಾಮಾನ್ಯ ಸ್ಥಿತಿಗೆ ಬತ್ತು.

ಈ ಪಟಲ್ಲಿ ನಿಂಗೊ ನೋಡ್ಲಕ್ಕು, ಯಾವುದೇ ತೊಂದರೆ ಇಲ್ಲದ್ದ ಆರೋಗ್ಯಕರವಾದ ಶ್ವಾಸನಾಳಕ್ಕುದೇ, ಅಸ್ತಮ ಇಪ್ಪ ಶ್ವಾಸನಾಳಕ್ಕುದೇ ಇಪ್ಪ ವ್ಯತ್ಯಾಸ.

ಸಮಸ್ಯೆಯ ಬಗ್ಗೆ ತಿಳ್ಕೊಂಡಾತು, ಇನ್ನು ಪರಿಹಾರದ ಬಗ್ಗೆ ರಜ್ಜ ತಿಳ್ಕೊಳ್ಳೆಡದಾ?

ಸಾಮಾನ್ಯವಾಗಿ ಇದಕ್ಕೆ ಮದ್ದು ಹೇಳಿ ಕೊಡುದು bronchodialators  ಹೇಳಿರೆ ಶ್ವಾಸನಾಳಂಗಳ ದಾರಿಯ ಅಗಲ ಮಾಡುಲೆ ಇಪ್ಪ ವಸ್ತುಗೊ ಅಥವಾ ಸ್ಟೀರಾಯ್ಡ್.  ಇದರಿಂದಾಗಿ ತಾತ್ಕಾಲಿಕ ಪರಿಹಾರ ಖಂಡಿತಾ ಸಿಕ್ಕುತ್ತು. ಅಸ್ತಮಾ ಅಟಾಕ್ ಆಗಿಪ್ಪ ಸಂದರ್ಭಲ್ಲಿ ಜೀವ ಉಳುಶುಲೆ ಇದು ಅಗತ್ಯ ಕೂಡ.

ಸರಿಯಾದ ವೈದ್ಯರ ಭೇಟಿ ಆಗಿ, ಪರೀಕ್ಷೆಗಳ ಮಾಡ್ಸಿಗೊಂಡು ಅಸ್ತಮ ಇಪ್ಪದು ಖಚಿತಪಡಿಸಿಗೊಳ್ಳೆಕಾದ್ದು ಮುಖ್ಯ. ಅಲ್ಲದ್ದರೆ ಕೆಲವು ಸರ್ತಿ ಅಂತೆ ಬಪ್ಪ ಸೆಮ್ಮ/ಅಲರ್ಜಿಗಳನ್ನುದೇ ಕೆಲವು ಸರ್ತಿ ನಾವು ಅಸ್ತಮ ಹೇಳಿ ತಪ್ಪು ತಿಳಿವ ಸಾಧ್ಯತೆ ಇರ್ತು.

ಎನಗೆ ಗೊಂತಿಪ್ಪ ಮಟ್ಟಿಂಗೆ ಪ್ರಕೃತಿ ಚಿಕಿತ್ಸೆ ಮತ್ತೆ ಯೋಗಲ್ಲಿ ಇದಕ್ಕೆ ಇಪ್ಪ ಪರಿಹಾರಂಗಳ ಬಗ್ಗೆ ರಜ್ಜ ಮಾಹಿತಿ ಕೊಡ್ತೆ.

ಪ್ರಕೃತಿ ಚಿಕಿತ್ಸೆ:

  • ಆಕ್ಯುಪಂಕ್ಚರ್ ಅಥವಾ ಸೂಜಿ ಚಿಕಿತ್ಸೆ ಹೇಳ್ತ ಚೀನಾದ ಚಿಕಿತ್ಸಾ ಪದ್ದತಿಲಿ ಅಸ್ತಮಾಕ್ಕೆ ಪರಿಹಾರ ಇದ್ದು. ಇದರ ಚಿಕಿತ್ಸೆಯ ಹತ್ತು ದಿನ ಅಥವಾ ಹೆಚ್ಚು ದಿನ ತೆಕ್ಕೊಂಡರೆ ಸಮಸ್ಯೆ ಕಮ್ಮಿ ಆವ್ತು, ಪೂರ ಗುಣ ಅಪ್ಪದೂ ಇದ್ದು.
  • ಜಲಚಿಕಿತ್ಸೆ (Hydrotherapy)ಯ ಕೆಲವು ವಿಧಾನಂಗಳ ನಿತ್ಯವೂ (ಕೆಲವು ದಿನಂಗಳ ಮಟ್ಟಿಂಗೆ) ಮಾಡುದರಿಂದ ಉತ್ತಮ ಫಲಿತಾಂಶ ಸಿಕ್ಕುತ್ತು.
  • ಆಹಾರ ಚಿಕಿತ್ಸೆ: ಆಹಾರದ ಮೂಲಕ ಇದರ ನಿಗ್ರಹಿಸುಲೆ ಎಡಿತ್ತು. ಕೆಲವು ಜೆನಕ್ಕೆ ಕೆಲವು ಆಹಾರ ಪದಾರ್ಥಂಗೊ ಆಗಿ ಬತ್ತಿಲೆ ಅಂತ ಸಂದರ್ಭಲ್ಲಿ ಅದರ ಸೇವನೆ ಮಾಡುದು ಬಿಟ್ಟರೆ ಒಳ್ಳೆದು. ಅಲ್ಲದ್ದೆ ದೇಹಕ್ಕೆ ಶಕ್ತಿ ಕೊಡುವ ಆಹಾರದ ಸೇವನೆ ಅಗತ್ಯ.
  • ಮಾಲೀಶು ಚಿಕಿತ್ಸೆ (massage therapy): ಅಂತೆ ಎಣ್ಣೆ ಹಾಕಿ ತಿಕ್ಕುದಲ್ಲ, ವೈಜ್ಞಾನಿಕವಾಗಿ ಇಪ್ಪ ಕೆಲವು ಚಲನೆಗಳ ಮೂಲಕ ಮಾಲೀಷು ಮಾಡುದರಿಂದ ಕಫ ಹೆರ ಬಪ್ಪಲೆ ಸಹಾಯ ಮಾಡ್ತು, ಉಸಿರಾಟ ಸುಲಭ ಅಪ್ಪಲೆ ಸಹಾಯ ಮಾಡ್ತು.
  • ಉಪವಾಸ ಚಿಕಿತ್ಸೆ: ಇದರ ಬಗ್ಗೆ ಅಂದೇ ಹೇಳಿದ್ದೆ, ಅಸ್ತಮಲ್ಲಿ ಉಪವಾಸ ಚಿಕಿತ್ಸೆಯ ಮಾಡುದರಿಂದ ತುಂಬಾ ಒಳ್ಳೆ ಫಲಿತಾಂಶ ಸಿಕ್ಕುತ್ತು.

ಯೋಗ ಚಿಕಿತ್ಸೆ:

ಎಲ್ಲಾ ಅಭ್ಯಾಸಂಗಳನ್ನೂ ಮಾಡ್ಲಕ್ಕಾದರೂ ಉಸಿರಾಟದ ತೊಂದರೆಗೊಕ್ಕೆ ಹೇಳಿಯೇ ಕೆಲವು ಯೋಗಾಭ್ಯಾಸಂಗೊ ಇದ್ದು, ಅದರ ಕಲ್ತು ನಿತ್ಯ ಅಭ್ಯಾಸ ಮಾಡುದರಿಂದ ಅಸ್ತಮವ ದೂರ ಮಾಡ್ಲಕ್ಕು.

  • ಮಾಡೆಕ್ಕಾದ ಕೆಲವು ಆಸನಂಗೊ:  ತಾಡಾಸನ, ಅರ್ಧಚಕ್ರಾಸನ, ಸೇತುಬಂಧಾಸನ, ಮತ್ಸ್ಯಾಸನ, ಭುಜಂಗಾಸನ, ಧನುರಾಸನ, ಉಷ್ಟ್ರಾಸನ, ಗೋಮುಖಾಸನ ಇತ್ಯಾದಿ.
  • ಮಾಡ್ಲಕ್ಕಾದ ಕೇಲವು ಪ್ರಾಣಾಯಾಮಂಗೊ: ನಾಡಿಶುದ್ಧಿ, ಸೂರ್ಯಭೇದನ, ಭ್ರಾಮರಿ.
  • ಇದಲ್ಲದ್ದೆ, ವಸ್ತ್ರ ಧೌತಿ ಮತ್ತೆ ಜಲ ಧೌತಿ ಹೇಳ್ತ 2 ಯೋಗದ ಕ್ರಿಯೆಗೊ ಅಸ್ತಮವ ಗುಣ ಮಾಡ್ಲೆ ತುಂಬಾ ಸಹಾಯ ಮಾಡ್ತು.

ಈ ಅಭ್ಯಾಸಂಗಳ ಆರಾರು ಯೋಗ ಗುರುಗಳ ಹತ್ತರೆ ಸರಿಯಾಗಿ ಕಲ್ತು ಮಾಡೆಕ್ಕು.

ಯೋಗಾಭ್ಯಾಸಂಗೊ ಅಲ್ಲದ್ದೆ, ಕೆಲವು ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಂಗೊ ನಾವು ನಿತ್ಯವೂ ಮಾಡ್ಲಕ್ಕು ಅದರಿಂದಾಗಿ ತುಂಬಾ ಉಪಕಾರ ಇದ್ದು. ಅದರ್ಲಿ ಸುಮಾರು ವಿಧಂಗೊ ಇದ್ದು, ಉದಾಹರಣೆಗೆ Hands in and out breathing, Hand stretch breathing, tadasana breathing, trikonasana breathing etc. ಆನು ಇಲ್ಲಿ ನಾಲ್ಕು ರೀತಿಯ ಅಭ್ಯಾಸಂಗಳ ಬಗ್ಗೆ ಬರೆತ್ತೆ.

ಕೈ ಒಳ- ಹೆರ ಮಾಡ್ತ ಉಸಿರಾಟ [Hands in and out breating]

ಅಭ್ಯಾಸ ಕ್ರಮ: ಸರ್ತ ನಿಂದುಗೊಂಡು ಎರಡೂ ಕೈಗಳ ನಮ್ಮ ಎದೂರಿಂಗೆ ನೀಡಿ ಜೋಡ್ಸಿ ಹಿಡಿಯಕ್ಕು. ಉಸಿರು ಒಳ ತೆಕ್ಕೊಳ್ತಾ ನಿಧಾನಕ್ಕೆ ಎರಡೂ ಕೈಗಳ ಅಗಲ್ಸಿಗೊಂಡು ಹೋಯಕ್ಕು (ನಾವು ತುಂಬ ಹೇಳಿ ತೋರ್ಸುಲೆ ಕೈ ಅಗಲ ಮಾಡ್ತಿಲ್ಲೆಯ, ಹಾಂಗೆ). ಮತ್ತೆ ಉಸಿರು ಹೆರಬಿಟ್ಟುಗೊಂಡು ಕೈಗಳ ಮುಂದಂಗೆ ತರೆಕು.

ಸೇತುಬಂಧಾಸನದ ಉಸಿರಾಟ [Setubandhaasana breathing]

ಅಭ್ಯಾಸ ಕ್ರಮ: ಬೆನ್ನಿನಮೇಲೆ ಮನಿಕ್ಕೊಂಡು ನಿಧಾನಕ್ಕೆ ಎರಡೂ ಕಾಲುಗಳ ಮೊಳಪ್ಪಿಲ್ಲಿ ಮಡುಸಿ ಪಾದಂಗಳ ದೇಹಕ್ಕೆ ಹತ್ತರೆ (ಹಿಮ್ಮಡಿ buttocksಗೆ ತಾಗೆಕ್ಕು) ಮಡುಗೆಕ್ಕು. ಕೈಗಳಿಂದ ಕಾಲಿನ ಮಣಿಕಟ್ಟಿನ ಹಿಡ್ಕೊಳ್ಳೆಕು (ಬಲಗೈಲಿ ಬಲಗಾಲು , ಎಡಗೈಲಿ ಎಡಗಾಲು). ಮತ್ತೆ ನಿಧಾನಕ್ಕೆ ಉಸಿರು ಒಳ ತೆಕ್ಕೊಳ್ತಾ ಹೊಟ್ಟೆಯ ಮತ್ತೆ ಎದೆಯ ಭಾಗವ ಮೇಲೆ ಎತ್ತೆಕು, ತಲೆ, ಕೈಗೊ ಮತ್ತೆ ಮಾಪ ನೆಲಕ್ಕೆಯೇ ಇರ್ತು. ಉಸಿರು ಹೆರ ಬಿಡೂವಗ ನಿಧಾನಕ್ಕೆ ಕೆಳ ಬಂದು ಬೆನ್ನಿನ ನೆಲಕ್ಕೆ ಮಡುಗುದು.

ಭುಂಜಂಗಾಸನದ ಉಸಿರಾಟ [Bhujangaasana breathing]

ಅಭ್ಯಾಸ ಕ್ರಮ: ಕವುಂಚಿ ಮನುಗಿ (ಹೊಟ್ಟೆಯಮೇಲೆ ಮನುಗಿ) ಎರಡೂ ಕಾಲುಗೊ ಜೋಡ್ಸಿರೆಕ್ಕು, ಹಣೆ ನೆಲಕ್ಕೆ ಮುಟ್ಟಿರೆಕ್ಕು. ಕೈಗಳ ಎದೆಯ ಎರಡೂ ಹೊಡೆಲಿ ನೆಲಕ್ಕೆ ಮಡುಗೆಕ್ಕು. ನಿಧಾನಕ್ಕೆ ಉಸಿರು ಒಳ ತೆಕ್ಕೊಳ್ತಾ ತಲೆ, ಕೊರಳು ಮತ್ತೆ ಎದೆ, ಹೊಕ್ಕುಳಿನ ವರೆಗೆ ಮೇಲೆ ಎತ್ತೆಕ್ಕು. ಕೆಳಹೊಟ್ಟೆ , ಅಂಗೈ ಮತ್ತೆ ಕಾಲುಗೊ ನೆಲಕ್ಕೆಯೇ ಇರ್ತು. ಮತ್ತೆ ಉಸಿರು ಹೆರ ಬಿಟ್ಟುಗೊಂಡು ನಿಧಾನಕ್ಕೆ ಎದೆ ಮತ್ತೆ ತಲೆಯ ಕೇಲ ತಂದು ನೆಲಕ್ಕೆ ಮಡೂಗೆಕ್ಕು, ಹಣೆ ನೆಲಕ್ಕೆ ಮುಟ್ಟೆಕು.

ಶಶಾಂಕಾಸನದ ಉಸಿರಾಟ [Shashaankaasana breathing]

ಅಭ್ಯಾಸ ಕ್ರಮ: ಇದು ತುಂಬಾ ಸುಲಭ :), ವಜ್ರಾಸನಲ್ಲಿ ಕೂದುಗೊಂಡು [ವಜ್ರಾಸನದ ಬಗ್ಗೆ ಆನು ಮೊದಲೇ ಬರದ್ದೆ, ಆ ಲೇಖನವ ಓದಿ] ಎರಡೂ ಕೈಗಳ ಬೆನ್ನ ಹಿಂದೆ ಕಟ್ಟೆಕು, ಎಡಗೈಂದ ಬಲಗೈಯ ಮಣಿಗಂಟಿನ ಹಿಡ್ಕೊಳ್ಳೆಕು. ಮತ್ತೆ ಉಸಿರು ಹೆರ ಬಿಡ್ತಾ ನಿಧಾನಕ್ಕೆ ಮುಂದೆ ಬಗ್ಗಿ ಹಣೆಯ ನೆಲಕ್ಕೆ ಮುಟ್ಟುಸೆಕ್ಕು ಒಟ್ಟಿಂಗೇ ಹೊಟ್ಟೆ ಮತ್ತೆ ಎದೆ ತೊಡೆಗೆ ತಾಗೆಕ್ಕು. ಉಸಿರು ಒಳ ತೆಕ್ಕೊಂಬಗ ನಿಧಾನಕ್ಕೆ ಮೇಳೆ ಬರೆಕ್ಕು, ಬೆನ್ನು ಕೊರಳು ತಲೆಯ ಸರ್ತಕ್ಕೆ ಮಡುಗಿ ವಜ್ರಾಸನಕ್ಕೆ ಬರೆಕ್ಕು.

  • ಈ ಮೇಲೆ ಹೇಳಿದ ಎಲ್ಲಾ ಅಭ್ಯಾಸಂಗಳ ಪ್ರತಿಯೊಂದನ್ನೂ ದಿನಕ್ಕೆ ಹತ್ತು ಸರ್ತಿ ಮಾಡ್ಲೆಕ್ಕು. ನಿಧಾನಕ್ಕೆ ಹೆಚ್ಚಿಗೆ ಮಾಡ್ಲಕ್ಕು.
  • ಈ ಎಲ್ಲಾ ಅಭ್ಯಾಸಂಗಳನ್ನೂ ಆದಷ್ಟು ನಿಧಾನಕ್ಕೆ ಮಾಡೆಕ್ಕು.
  • ಇದಲ್ಲದ್ದೆ ಆನು ಕಳದ ಸರ್ತಿ ಹೇಳಿದ ನಿಧಾನಕ್ಕೆ ಉಸಿರಾಡುವ ಕ್ರಮವನ್ನೂ ಅಭ್ಯಾಸ ಮಾಡ್ಲಕ್ಕು.
  • ಇನ್ನು ಎಲ್ಲಕ್ಕಿಂತ ಮುಖ್ಯ ಬೇಕಾದ್ದು ಮನಃಶಾಂತಿ, ಯಾವುದೇ ದೈಹಿಕ ಸಮಸ್ಯೆ ಗುಣ ಆಯೆಕಾರೆ ಮದ್ದು ಅಥವಾ ಚಿಕಿತ್ಸೆಗಳೊಟ್ಟಿಂಗೆ ಮಾನಸಿಕ ಶಾಂತಿಯೂ ಅಷ್ಟೇ ಮುಖ್ಯ. ಅದಿಲ್ಲದ್ದರೆ ಎಲ್ಲವೂ ನೀರಿಲ್ಲಿ ಮಾಡಿದ ಹೋಮದ ಹಾಂಗೆ !!

ಹಾಂಗೇ ಇನ್ನೊಂದು ಮಾತು, ಮನಸ್ಸಿಂಗೆ ಬಂದದು. ನಮ್ಮ ಶ್ರೀಗುರುಗಳ ಶ್ರೀರಕ್ಷೆ ಇಪ್ಪ ಎಲ್ಲೋರಿಂಗೂ ಇಡೀ ಜೀವನವೇ ದೀಪಾವಳಿ…ಹೇಂಗೆ ಹೇಳಿರೆ… ದೀಪಾವಳಿ ಕತ್ತಲೆ ಕಳದು ಬೆಳಕು ತುಂಬುವ ಹಬ್ಬ, ಶ್ರೀಗುರುಗೊ ಎಲ್ಲೋರನ್ನೂ ಕತ್ತಲೆಂದ ಬೆಣಚ್ಚಿಂಗೆ ಕರಕ್ಕೊಂಡು ಹೋವ್ತವು ..ಅದಕ್ಕೇ ಅಲ್ಲದ “ಗುರು” ಹೇಳುದು… ಹಾಂಗಿಪ್ಪಗ ನಿತ್ಯವೂ ದೀಪಾವಳಿಯೇ ಅಲ್ಲದಾ? ಜೀವನವೇ ಒಂದು ಹಬ್ಬ ನವಗೆ 🙂 : ) 🙂 ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗಳ ಹೇಳ್ತೆ.

-ನಿಂಗಳ ಸುವರ್ಣಿನೀ ಕೊಣಲೆ.

36 thoughts on “ಅಸ್ತಮಾ [Asthma]

  1. blood pressure control madle upayoga appantha simple yogasanango idda? suvarniniyakka?…………………….. iddare thilisutthira?

    1. ಅಧಿಕರಕ್ತದೊತ್ತಡ , ಇದಕ್ಕೆ ಆಸನಂದಲೂ ಹೆಚ್ಚಿಗೆ ಪ್ರಾಣಾಯಾಮ ಮತ್ತೆ ಧ್ಯಾನ ಉಪಕಾರ ಆವ್ತು. ಅದ್ದೊ ಅಲ್ಲದ್ದೆ ಕೆಲವು special techniques ಇದ್ದು. ಅದರ ಅಭ್ಯಾಸ high blood pressureನ control ಮಾಡ್ಲೆ ಸಹಯ ಮಾಡ್ತು.

        1. ಆನು ಇಲ್ಲಿ ಈ ಅಭ್ಯಾಸಂಗೊ ಹೇಂಗೆ,ಎಂತರ ಹೇಳಿ ಮಾಹಿತಿ ಕೊಡ್ಲಕ್ಕು. ಈ ಎಲ್ಲಾ ಅಭ್ಯಾಸಂಗಳನ್ನೂ ತಿಳುದವರ ಹತ್ತರೆ ಕಲ್ತು ಮಾಡೆಕ್ಕು.

  2. ಸುವರ್ಣಿನಿ ಅಕ್ಕ,
    ಕಾಲಕ್ಕೆ ಹೊಂದುವಂತಹ ನಿಂಗಳ ಶುದ್ದಿ ಆಯ್ಕೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
    ಯೇವತ್ತಿನಂತೆ ಶುದ್ದಿ ಚೊಕ್ಕಕೆ ಇದ್ದು.

    ಸುವರ್ಣಿನಿ ಅಕ್ಕನ ಅಸ್ತಮಾ ವಿವರಣೆಯೂ, ಡಾಗುಟ್ರಕ್ಕನ ತಮಕಶ್ವಾಸವೂ ಓದಿ ಅಪ್ಪಗ ಎಂಗೊಗೇ ಉಸುಲುಕಟ್ಳೆ ಸುರು ಆತು ಹೇಳಿ ನೆಗೆಮಾಡಿಗೊಂಡೆಯೊ°..
    ಎರಡೂ ಲಾಯಿಕಾಯಿದು!

  3. ಅಸ್ತಮಾದ ಬಗ್ಗೆ ವಿವರಣೆ ಲಾಯಕ ಆಯಿದು ಸುವರ್ಣಿನಿ ಅಕ್ಕೋ. ನಿಂಗೊ ಹೇಳಿದ ಹಾಂಗೆ ನವಗೆ ಯಾವುದು ಆವುತ್ತಿಲ್ಲೆ ಹೇಳಿ ಗಮನಿಸಿಗೊಂಡು ಅದರಿಂದ ದೂರ ಇದ್ದರೆ ಅರ್ಧ ಸಮಸ್ಯೆ ಪರಿಹಾರ ಅಲ್ಲದಾ?
    ಆದರೆ ಕೆಲವು ಸಂದರ್ಭಲ್ಲಿ ನವಗೆ ಅನುಭವಿಸೆಕ್ಕಾಗಿ ಬತ್ತು. ಎಲ್ಲಾ ಸರ್ತಿಯೂ ಸಮಸ್ಯೆಂದ ಓಡಲೆ ಎಡಿತ್ತಿಲ್ಲೇ. ಇದು ಪ್ರಾಣಾಂತಿಕ ಆವುತ್ತು ಹೇಳುದು ನೆನಪ್ಪು ಬೇಕು ಅಷ್ಟೇ!!!
    ಈಗಾಣ ವಾತಾವರಣಲ್ಲಿ ಮಕ್ಕಳಲ್ಲಿ ಅನುವಂಷಿಕ ಅಲ್ಲದ್ದರೂ ಈ ಕಾಯಿಲೆಯ ಲಕ್ಷಣನ್ಗ ಕಾಣ್ತು. ಮುಖ್ಯವಾಗಿ ಹೆರಾಣ ಧೂಳು, ಹೊಗೆಂದ ಅದುದೆ ಪೇಟೆ ಮಕ್ಕಳಲ್ಲಿ. ನಮ್ಮ ಮಕ್ಕೊಗೆ ಬಾರ ಹೇಳಿ ಗ್ರೇಶಿ ಕೂದರೆ ಅದು ಅವರ ಜೀವಕ್ಕೆ ಅಪಾಯ ಮಾಡುಗು. ಮಕ್ಕೊಗೆ ಶ್ವಾಸ ಸಂಬಂಧಿ ಏನಾರು ಆದರೆ ಕೂಡಲೇ ವೈದ್ಯರ ಹತ್ತರೆ ಹೋಪದು ಒಳ್ಳೇದು. ಅಲ್ಲದಾ ಅಕ್ಕೋ?

  4. ಒಪ್ಪಕ್ಕೆ ಒ೦ದು ಒಪ್ಪ.ಸುವರ್ಣಿನಿ ಅಕ್ಕ೦ ಬರದ ಇದು ತು೦ಬಾ ಮುಖ್ಯ …….ಯಾವ ಡಾಕ್ಟರೂ ಎ೦ತದೂ ಮಡ್ಲೆ ಎಡಿಯ.ಇದು ತಿಳಿಯದ್ದವ೦ ಅನುಭವಿಸೇಕಷ್ಟೆ.ಅದಕ್ಕೇ ಹಿರಿಯವು ಹೇಳಿದ್ದು ಊಟ ಬಲ್ಲವನಿಗೆ ರೋಗ ಇಲ್ಲ ಹೇಳಿ.ಲೇಖನ ತು೦ಬಾ ವಿಚಾರ೦ಗಳ ತು೦ಬಿ ಒಳ್ಳ್ಳೆದಾಗಿ ಬಯಿ೦ದು.ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ

  5. ಅಕ್ಕ! ನಿಂಗಳ ಲೇಖನ ಭಾರೀ ಮಾಹಿತಿ ಕೊಟ್ಟತ್ತು.
    ಇಷ್ಟೆಲ್ಲಾ ಮಾಲಿನ್ಯ ಇಪ್ಪಗ ಪ್ರಾಣಾಯಾಮ ಎಲ್ಲ ಮಾಡಿ ಅನ್ಬಗಂಬಗ ಸರ್ವೀಸು ಮಾಡಿಗೊಮ್ಬದು ಒಳ್ಳೇದು!!
    ಧನ್ಯವಾದ!

    (ಇನ್ನು ಬೀಡಿ ಸಿಗರೇಟ್ ಎಳೆತ್ತವರ ಶ್ವಾಸಕೋಶ ಮಸಿ ತುಂಡಿನ ಹಾಂಗೆಯೇ ಇಕ್ಕಾ ಹೇಳಿ!)
    ಹಿಂಡಿರೆ ಡಾಮರು ಬಕ್ಕಾ ಹೇಳಿ? 😀 😀 !!! ಎಲ್ಲಿಯೋ ಸಿಗರೇಟ್ ಎಫ್ಫೆಕ್ಟ್ ಅನಿಮೇಷನ್ ನೋಡಿದ ನೆನಪು!

    1. ಹಹಹ ಆದಿಕ್ಕು. ಅಪ್ಪು, ಹೆರ ಅಪ್ಪ ಮಾಲಿನ್ಯದ ಬಗ್ಗೆ ನವಗೆ ಹೆಚ್ಚಿಗೆ ಎಂತದೂ ಮಾಡ್ಲೆ ಎಡಿಯ.. ನಮ್ಮ ಆರೋಗ್ಯವ ಎಡಿಗಾಷ್ಟು ಸರಿಯಾಗಿ ಮಡಿಕ್ಕೊಂಬದು ನಮ್ಮ ಕೈಲಿದ್ದು.

    2. ಸಣ್ಣ ಉದಾಹರಣೆ ಹೇಳ್ತರೆ ಪುಟ್ಟ ಭಾವ,
      ಒಂದರಿ ಜಲ ಕಪಾಲಭಾತಿ ಕ್ರಿಯೆ ಮಾಡಿ ನೋಡಿ – ನಮ್ಮ ಮುಗಿನೊಳ ಎಷ್ಟು ಹೊಗೆ, ಧೂಳು ಕೂಯಿದು ಹೇಳಿ ಗೊಂತಾವುತ್ತು. ಮುಗಿಲ್ಲೇ ಅಷ್ತಿಪ್ಪಗ ಇನ್ನೂ ಶ್ವಾಸ ಕೋಶ ಮಸಿ ಹಿಡುದ ಹಾಂಗೆ ಆಗದ್ದೆ ಇಕ್ಕೋ?????

  6. ಎನಗೆ ಕಳುದ ೨೦ ವರ್ಶ೦ದಲೂ ಇಪ್ಪ ತೊ೦ದರೆ ಇದು. ಇದರಿ೦ದಾಗಿಯೆ ಬಹಳಸ್ತು ಕಸ್ತ ಅನುಭವಿಸಿದೆ.
    ಮನೆ ಮತ್ತು ಪರಿಸರ ನಿರ್ಮಲವಾಗಿ ಮದಿಕ್ಕೊ೦ದರೆ ರಜ್ಜ ಉಪಕಾರ ಅವ್ತು ಇದಕ್ಕೆ.
    ಸಧ್ಯಕ್ಕೆ ವಿಜಯಾ ಹೇಳುವ ದಾಕ್ತ್ರ ಮದ್ದು ತೆಕ್ಕೊಳ್ತಾ ಇದ್ದೆ. ಆವು ಕಾಸರಗೊದಿಲ್ಲಿ ಇಪ್ಪದು.

    ಆಸ್ತಮಾ ತೊ೦ದರೆ೦ದಾಗಿ ಒ೦ದು ನಮೂನೆ ದಿಪ್ರೆಸ್ಸನ್ ಕೂದ ಬತ್ತು ಮನಸ್ಸಿ೦ಗೆ.

    PUC li ippaga asthmaa nda suffer adappaga vitlada obba ‘iddadara idda hange heLuva’ swabhavakke hesarada dactra hattare engala lecturer enna kaLusida. Avu ‘Huduga cigarette eletta’ heLi enna lecturer hattare heLiddu enage eegaloo nenapiddu:)

    1. ಯಾವುದನ್ನೂ ತಲೆಗೆ ಹಚ್ಹ್ಚಿಯೋಮ್ಬಲೇ ಹೋಗೆಡಿ..
      ನಾವು ಯಾವುದೇ ವಿಷವಾಗಿ ಹೆಚ್ಚು ಹೆಚ್ಚು ಯೋಚನೆ ಮಾಡಿದಷ್ಟು ದಮ್ಮು ಕಟ್ಟುದು ಜಾಸ್ತಿ..
      ಇಪ್ಪದರ ಇಪ್ಪಹಾನ್ಗೆ accept ಮಾಡಿ ಆ acceptanceಲಿ ಬದುಕ್ಕುದು ಉತ್ತಮ .. ಉದ್ರೇಕ ಚಿಂತೆ ಯಾವುದಕ್ಕೂ ಒಳ್ಳೇದಲ್ಲ. ಇದು ಎನ್ನ ಅನುಭವ.

      be cool.. try it. it works.
      never be serious.

  7. olle lekhana.SriDharmasthala shanthivana trust idara aspatre Ujire matte Pareeka[near Manipal] lli iddu.

  8. ಲೇಖನ ನಿಜವಾಗಲು ಲೈಕಾಯಿದು… ಕಳೆದ ೨೦ ವರ್ಷಂದ ಈ ಅಸ್ತಮಾ ಹೇಳ್ತದು ಎನ್ನ ಒಳ್ಳೆ ಫ್ರೆಂಡ್ ಹೇಳ್ತ ಹಾಂಗೆ ಇದ್ದು .. ಎಂತ ಮಾಡಿರು ಎನ್ನ ಬಿಟ್ಟು ಹೋಪಲೇ ಕೇಳ.. ಈಗ ನಿಂಗೊ ಹೇಳಿದ ಆಸನ ಪ್ರಾಣಾಯಾಮ ಮಾಡಿ ಎನ್ನ ಗೆಳಯಂಗೆ ಟಾಟ ಬೈ ಬೈ ಹೇಳುಲೇ ಎಡಿತ್ತೋ ನೋಡ್ತೆ.. ಭಾರಿ ಲೈಕಕೆ ಬರದ್ದಿ ಅತೋ…

    1. ನಿಂಗಳ friendನ ಅವ್ವು ಇಪ್ಪ ಊರಿಲ್ಲಿಯೇ ಆರಾರು ಪ್ರಕೃತಿಚಿಕಿತ್ಸೆ ಮತ್ತೆ ಯೋಗದ ಡಾಕ್ಟ್ರ ಕಾಂಬಲೆ ಹೇಳಿ.

        1. .am sorry… ಆನು ಗಡಿಬಿಡಿಲಿ ಓದಿದ್ದು, ಹಾಂಗಾಗಿ confuse ಮಾಡಿಗೊಂಡೆ…really sorry
          ನಿಂಗೊ free ಇಪ್ಪಗ treatment ತೆಕ್ಕೊಳ್ಳಿ, ನಿಂಗೊಗೆ ಹತ್ತರೆ ಅಪ್ಪಲ್ಲಿಯಾಣದ್ದು ಆರನ್ನಾರು contact ಮಾಡ್ಸುತ್ತೆ. ಅಥವಾ ಶರ್ಮಪ್ಪಚ್ಚಿ ಹೇಳಿದ “ಪ್ರಣವ” ಕ್ಕೆ ಹೋಪಲಕ್ಕು.

    2. ಮಂಗ್ಳೂರಿಲ್ಲಿ ಪ್ರಕೃತಿ ಚಿಕಿತ್ಸೆ ಪಂಪ್ ವೆಲ್ ಹತ್ರೆ “ಪ್ರಣವ” ಹೇಳ್ತಲ್ಲಿ ಇದ್ದು.
      ಅಲ್ಲಿ ಡಾ| ರಾಜೇಶ್ ಮತ್ತೆ ಅವರ ಹೆಂಡ್ತಿ ಇಬ್ರೂ ಡಾಕ್ಟ್ರಕ್ಕಳೇ.

    3. ಯೋಗ ಒಟ್ಟಿಂಗೆ ಆಯರ್ವೇದ ಮಾಡ್ತರೆ ಉಡುಪಿಯ ಎಮ್ ಜಿ ಎಮ್ ಕಾಲೇಜಿನ ಹತ್ತರೆ ಶರ್ಮ ಡಾಕ್ಟ್ರು ಹೇಳಿ ಇದ್ದವು. ಉದ್ಯಾವರದ ಧರ್ಮಸ್ಠಳ ಆಸ್ಪತ್ರೆಲಿ ಅವು ಡಾಕ್ಟ್ರು. ಅಲರ್ಜಿಯ ಹಾಂಗಿಪ್ಪದಕ್ಕೆ ಒಳ್ಳೆ ಮದ್ದು ಕೊಡ್ತವು. ಬೇಕಾದ್ರೆ ಟ್ರೈ ಮಾಡಿ.

      1. ಈ ಡಾಕ್ಟ್ರ ಪೂರ್ತಿ ಹೆಸರು ಮುರಳೀಧರ ಶರ್ಮಾ ಹೇಳಿ

        1. ಅಪ್ಪು,ಶ್ಯಾಮಣ್ಣ ಹೇಳಿದ್ದು ಸರಿ..ಉಡುಪಿಯ ಆಯುರ್ವೇದ ಆಸ್ಪತ್ರೆಲಿ ಇಪ್ಪ ಶರ್ಮ ಡಾಕ್ಟ್ರು ತುಂಬಾ ಒಳ್ಳೆ ಕೈಗುಣ ಇಪ್ಪೋರು,ಹಾಂಗೇ ಅವರ ಮದ್ದು ಯಾವಾಗಳೂ ಎಲ್ಲರಿಂಗೂ ಹಿಡಿತ್ತು..ಒಳ್ಳೆ ಚಿಕಿತ್ಸೆ ಕೊಡ್ತವು..ಅವು ಎನಗೆ ಆಯುರ್ವೇದ ಪಾಠ ಮಾಡಿದ ಗುರುಗಳು ಹೇಳುಲೆ ಎನಗೆ ಹೆಮ್ಮೆ ಆವುತ್ತು.. ಅವರ ಹಾಂಗೇ ಡಾ.ಶ್ರೀನಿವಾಸ ಆಚಾರ್ಯ ಹೇಳಿ ಇನ್ನೊಬ್ಬರು ಇದ್ದವು,ಅವುದೇ ಲಾಯಿಕ್ಕಲಿ ಚಿಕಿತ್ಸೆ ಕೊಡ್ತವು… 🙂

  9. ಅಸ್ತಮಾದ ಸಾಮಾನ್ಯ ಲಕ್ಷಣ, ಕಾರಣ, ನಿವಾರಣೆಗೆ ಉಪಾಯ, ತಿಳಿಸಿ ಕೊಟ್ಟ ಒಳ್ಳೆ ಲೇಖನ.
    ಅಕೇಶಿಯಾ ಹೂಗಿನ ಪರಾಗ, ಹಳ್ಳಿಗಳಲ್ಲಿ ಅಡಕ್ಕೆ ಸೊಲಿವಾಗ ಅದರ ಮಕ್ಕು, ಸಾಮಾನ್ಯ ಧೂಳು, ದೀಪಾವಳಿ ಸಮಯಲ್ಲಿ ಪಟಾಕಿ ಸುಟ್ಟ ಹೊಗೆ, ಎಲ್ಲವೂ ಇದರ ಉಲ್ಬಣಿಸುತ್ತು. ತನಗೆ ಯಾವುದು ಆಗದ್ದೆ ಬತ್ತು ಹೇಳ್ತರ ತಿಳ್ಕೊಂಡು ಜಾಗ್ರತೆ ಮಾಡುವದು ಮುಖ್ಯ.

    1. ಅಪ್ಪು, ಇದು ತುಂಬಾ ಮುಖ್ಯ. ನವಗೆ ಆಗದ್ದೆ ಬಪ್ಪ ವಸ್ತುಗಳಿಂದ ದೂರ ಇರೆಕ್ಕಾದ್ದು ಎಲ್ಲಕ್ಕಿಂತ ಹೆಚ್ಚು ಮುಖ್ಯ. ಕೆಲವು ಜೆನಕ್ಕೆ ಒಂದು ಅಭ್ಯಾಸ ಇದ್ದು…”ಎನಗೆ ಬೇಕಾದ್ದರ ಆನು ತಿಂತೆ, ರೋಗ ಗುಣ ಮಾಡೆಕಾದ್ದು ಡಾಕ್ಟರ್ ನ ಕೆಲಸ” ಹೇಳಿ. ಇದು ತಪ್ಪು. ನಮ್ಮ ಆರೋಗ್ಯದ ಬಗ್ಗೆ ನವಗೇ ಕಾಳಜಿ ಇಲ್ಲದ್ದಎ ಯಾವ ಡಾಕ್ಟರುದೇ ಎಂತದೂ ಮಾಡ್ಲೆ ಎಡಿಯ.

  10. ಒಳ್ಳೆ ಲೇಖನ, ಧನ್ಯವಾದ೦ಗೊ. Hands in and out breathing-ಲ್ಲಿ ನಮ್ಮ ಎರಡು ಅ೦ಗೈಗೊ ಹೇ೦ಗೆ ಇರೆಕು? ಪರಸ್ಪರ ಮುಖಾಮುಖವಾಗಿ? ಕೆಳಮುಖವಾಗಿ? ಮೇಲ್ಮುಖವಾಗಿ? ಕೈಗಳ ಹೆರ ತಪ್ಪಗ ಅದರ ವ್ಯತ್ಯಾಸ ಮಾಡ್ಳೆ ಇದ್ದಾ?

  11. ಅಸ್ತಮಾ ಕಾಯಿಲೆ ಬಗ್ಗೆ ಬರದ ಲೇಖನ ತುಂಬಾ ಒಳ್ಳೆದಾಯಿದು.ಪಟಾಕಿ ಹೊಟ್ಟುಸುವಾಗಳೂ ಅದರ್ಲಿಪ್ಪ ಸಲ್‌ಫರ್‌ ಡೈ ಓಕ್ಸೈಡ್‌ ವಾತಾವರಣಲ್ಲಿ ಅದು ಲೀನವಾಗಿ ಯಾವುದೇ ದುಶ್ಚಟ ಇಲ್ಲದ್ದವಂಗೂ ಅಸ್ತಮಾ ಬತ್ತು ಹೇಳಿ ಚೆಸ್ಟ್‌ ರೀಸರ್ಚ್‌ ಫೌಂಡೇಶನ್‌ ಹೇಳಿದ್ದಡ..ಇದು ಎನಗೆ ಯಾವ್ದೋ ಪೇಪರಿಲಿ ಓದಿದ ನೆಂಪು.ಇದು ಸರಿಯೋ?

    1. ಅಪ್ಪು ಸಲ್ಫರ್ ಡೈ ಆಕ್ಸೈಡ್ respiratory irritant, ಹೇಳಿರೆ ಶ್ವಾಸಾಂಗದ ಕೆರಳಿಸುವ ವಸ್ತು. ಅದರಿಂದಾಗಿ ಅಸ್ತಮಾ ಶುರು ಅಪ್ಪ ಸಾಧ್ಯತೆಗೊ ಇದ್ದು. ಇದೊಂದೇ ಅಲ್ಲದ್ದೆ, ವಾತಾವರಣವ ಕಲುಷಿತ ಮಾಡುವ ಬೇರೆ ಯಾವುದೇ ವಸ್ತುಗಳಿಂದಲೂ ಅಸ್ತಮ ಶುರು ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×