Oppanna.com

Food hygiene-ಆಹಾರದ ಶುಚಿತ್ವ

ಬರದೋರು :   ಸುವರ್ಣಿನೀ ಕೊಣಲೆ    on   16/01/2011    33 ಒಪ್ಪಂಗೊ

ಸುವರ್ಣಿನೀ ಕೊಣಲೆ

ಬೈಲಿಂಗೆ ಬಪ್ಪ ಎಲ್ಲ ಬಂಧುಗೊಕ್ಕೆ ಮತ್ತೆ ಬೈಲಿನ ನೆರೆಕರೆಯೋರಿಂಗೆ ಸಂಕ್ರಾಂತಿಯ ಶುಭಾಶಯಂಗೊ 🙂 ಕಳುದವಾರ ಏಕೆ ಶುದ್ದಿ ಬರದ್ದಿಲ್ಲೆ ಹೇಳಿ ಕೇಳಿರೆ ಕಾರಣ ಇಲ್ಲೆ!, ಅಕ್ಷರ ಹೇಳಿದ ಹಾಂಗೆ …ಹೇಳಿಗೊಂಬ ಹಾಂಗಿದ್ದ ಯಾವುದೇ ದೊಡ್ಡ ಕೆಲಸ ಇಲ್ಲದ್ದರೂ ಪುರ್ಸೊತ್ತೇ ಇರ್ತಿಲ್ಲೆದಾ.. ಎರಡುವಾರ ಕಳುತ್ತದ ನಾವು ಮಾತಾಡಿ, ಹಾಂಗಾಗಿ ಶುದ್ದಿ ಸುಮಾರಿದ್ದು ಮಾತಾಡ್ಲೆ ! ಎಂಗಳ ಊರಿಲ್ಲಿ ಒಂದು ಹಬ್ಬ ನಡೆತ್ತಾ ಇದ್ದನ್ನೆ..’ವಿರಾಸತ್’ ಅದ್ಭುತ ಕಾರ್ಯಕ್ರಮಂಗೊ, ಇಂದು ಅಕೇರಿ. ಒಂದರಿಯಾರೂ ನೋಡೆಕಾದ ಕಾರ್ಯಕ್ರಮ. ನಿನ್ನೆ ಸಂಕ್ರಾಂತಿ ಲೆಕ್ಕಲ್ಲಿ ರಜೆ. ನವಗೆ ಬೇಕಾದ್ದೂ ಅದೇ ಅಲ್ಲದಾ 😉 . ಆದರೂ ಮನೆಲಿ ಇಪ್ಪಲಾಯ್ದಿಲ್ಲೆ, ಇರುಳಾಯ್ದು ಮನೆಗೆತ್ತುವಗ..ಹೀಂಗೇ ಇದ..ಪುರ್ಸೊತ್ತೇ ಇಪ್ಪಲಿಲ್ಲೆ, ಇಂದು ಆದಿತ್ಯವಾರ ಆದರೂ ಕೂಡ ಆರಾಮಕ್ಕೆ ಇಪ್ಪ ಹೇಳಿ ಗ್ರೇಶುಲೆಡಿಯ..ಎಂತಾರು ಕೆಲಸಂಗೊ..ಡ್ಯೂಟಿ ಇಪ್ಪದೇ. ಅದರ ಎಡಕ್ಕಿಲ್ಲಿ ಬೈಲಿಂಗೆ ಒಂದರಿ ಬಂದಿಕ್ಕಿದೆ.

ಆರೋಗ್ಯದ ಬಗ್ಗೆ ಮಾತಾಡುದು ನಾವು ಯಾವಾಗ್ಲೂ, ಯಾವುದಾರೂ ರೋಗದ ಬಗ್ಗೆ, ಚಿಕಿತ್ಸೆಯ ಬಗ್ಗೆ ಇತ್ಯಾದಿ…ಆದರೆ ಈ ವಾರ ನಾವು food hygiene ನ ಬಗ್ಗೆ ಮಾತಾಡುವ, ಆಗದಾ? ಈ ವಿಷಯಕ್ಕೆ ಕನ್ನಡಲ್ಲಿ ’ಆಹಾರ ಕ್ಷೇಮಪಾಲನ ಶಾಸ್ತ್ರ’ ಹೇಳಿ ಹೇಳುಲಕ್ಕಾ ಹೇಳಿ ಕಾಣ್ತು [ಶಬ್ದಕೋಶಲ್ಲಿ ಹುಡುಕ್ಕಿ ಈ ರೀತಿಯ ಕನ್ನಡ ಭಾಷಾಂತರ ಮಾಡಿದ್ದೆ,ಆರಿಂಗಾರು ಸರಿಯಾದ ಕನ್ನಡ ಶಬ್ದ ಗೊಂತಿದ್ದರೆ ತಿಳುಶಿ]

ಸರಿ, ಈ food hygiene  ಹೇಳಿರೆ ಎಂತರ? ತುಂಬಾ ಸರಳವಾಗಿ ಹೇಳ್ತರೆಆಹಾರದ ಸಂಗ್ರಹ, ತಯಾರಿ, ಬಳ್ಸುದು ಮತ್ತೆ ತಿಂಬದು ಕಾರ್ಯಂಗಳಲ್ಲಿ ಸ್ವಚ್ಛತೆಯ ಕಾಪಾಡುದು”. ಈಗ ಹೆಚ್ಚಿನವ್ವು ಒಂದು ಪ್ರಶ್ನೆ ಕೇಳುಗು ’ಎಂಗೊ ಎಲ್ಲವನ್ನೂ ತೊಳದೇ ಉಪಯೋಗ್ಸುದು, ಅಷ್ಟು ಸಾಲದಾ?’ ಹೇಳಿ. ತೊಳದು ಉಪಯೋಗ್ಸುದು ಸರಿಯಾದ ಕ್ರಮ ಅಪ್ಪಾರೂ ಅಷ್ಟು ಮಾಂತ್ರ ಖಂಡಿತಾ ಸಾಲ. ಗೊಂತಿದ್ದೂ ನಾವು ತಪ್ಪು ಮಾಡ್ತಿಲ್ಲೆ, ಆದರೆ ನವಗೇ ಗೊಂತಿಲ್ಲದ್ದೆ ಅಪ್ಪ ಕೆಲವು ಪ್ರಮಾದಂಗಳ ಕಮ್ಮಿ ಮಾಡ್ಲಕ್ಕು ಅಲ್ಲದಾ? ಅ ಕಾರಣಂದ ಈ ವಿಷಯದ ಆಯ್ಕೆ ಮಾಡಿದ್ದೆ.

ಈಗ ಆಹಾರದ ಸಂಗ್ರಹ, ತಯಾರಿ ಇತ್ಯಾದಿ ಒಂದೊಂದೇ ವಿಷಯದ ಬಗ್ಗೆ ಮಾತಾಡಿಗೊಂಡು ಹೋಪ…

ಆಹಾರದ ಸಂಗ್ರಹ:

  • ಸಂಗ್ರಹ ಮಾಡುದು ಹೇಳಿರೆ ನಾವು ಅಡಿಗೆ ಮಾಡುದಕ್ಕಿಂತ ಮೊದಲೇ ಅಂಗಡಿಂದ ತಂದ ಸಾಮಾನುಗಳ ಅಥವಾ ಬೆಳದ ತರಕಾರಿಗಳ ಹೇಂಗೆ ಹಾಳಾಗದ್ದ ಹಾಂಗೆ ಮಡುಗೆಕ್ಕು ಹೇಳುದು. [ಹೆಚ್ಚಿಂದು ಎಲ್ಲೋರಿಂಗೂ ಗೊಂತಿಪ್ಪದೇ]
  • ಬೇಳೆ ಇತ್ಯಾದಿಗಳ ಲಾಯ್ಕಕ್ಕೆ ತೊಳದು ಒಣಗ್ಸಿ ನೀರು ಅಥವಾ ಯಾವುದೇ ಕ್ರಿಮಿಗೊಕ್ಕೆ ಹೋಪಲೆ ಸಾಧ್ಯ ಇಲ್ಲದ್ದ ಹಾಂಗೆ ತುಂಬುಸಿ ಮಡುಗುದು.
  • ಒಣ ಮೆಣಸು, ಅಕ್ಕಿ ಇನ್ನು ಕೆಲವು ಸಾಮಾಗ್ರಿಗಳ ನೀರಿಲ್ಲಿ ತೊಳೆತ್ತ ಕ್ರಮ ಇಲ್ಲೆ, ಅವುಗಳ ಬೆಶಿಲಿಂಗೆ ಒಣಗ್ಸಿ ಸ್ವಚ್ಛ ಮಾಡಿ ತುಂಬುಸಿ ಮಡುಗೆಕು.
  • ತರಕಾರಿಗಳ ನಾವು ತಂದು ಮಡುಗುತ್ತರೆ ಅದು ಒಣಗದ್ದ ಹಾಂಗೆ, ಕೊಳೆಯದ್ದ ಹಾಂಗೆ ಮಡುಗೆಕ್ಕು. ತಂದ ತರಕಾರಿಗಳ ತೊಳದು ಮಡುಗುತ್ತರೆ,ತೊಳದು ನೀರಿನ ಉದ್ದಿ ಮಡುಗೆಕ್ಕು. ಇನ್ನು ಅದರ ಫ್ರಿಜ್ಜಿಲ್ಲಿ ಮಡುಗುದರಿಂದ ಕೊಳವದರ ತಪ್ಪುಸುಲಕ್ಕು. [ಮಡುಗುದು ಎಷ್ಟು ಸರಿ ಹೇಳುದು ಬೇರ ಪ್ರಶ್ನೆ] ಫ್ರಿಜ್ಜಿಲ್ಲಿ ಹೆಚ್ಚು ದಿನ ಮಡುಗುದು ಸರಿ ಅಲ್ಲ, ಇದರಿಂದಾಗಿ ಪೋಷಕಾಂಶಂಗೊ ನಷ್ಟ ಆವ್ತು.
  • ಅದಲ್ಲದ್ದೆ ನಾವು ಬ್ರೆಡ್ ಇತ್ಯಾದಿಗಳ ತಂದರೆ ಅದಕ್ಕೆ ಬೂಸರು ಬಪ್ಪದರ ನೋಡಿಕ್ಕು, ಹಾಂಗಾಗಿ ತಂದು ಹೆಚ್ಚು ಸಮಯ ಮಡುಗುಲಾಗ, ಕೂಡ್ಲೇ ಉಪಯೋಗ್ಸೆಕು.
  • ಇನ್ನು ಕೆಲವು ಪೇಟೆಂದ ತಪ್ಪ ವಸ್ತುಗಳ ಮೇಲೆ ಅದರ ತಂಪಿಲ್ಲಿ ಮಡುಗೆಕ್ಕು ಹೇಳಿ ಬರದಿರ್ತವು, ಅಂತಹ ವಸ್ತುಗಳ ತಪ್ಪದ್ದೇ ಪ್ರಿಜ್ಜಿಲ್ಲಿಯೇ ಮಡುಗೆಕ್ಕು. ಅಲ್ಲದ್ದರೆ ಅದು ತಿಂಬಲೆ ಯೋಗ್ಯವಾಗಿ ಉಳಿಯ.
  • ಮತ್ತೆ ಕೆಲವು ವಸ್ತುಗಳಲ್ಲಿ ಬೆಶಿಲಿಂಗೆ ಮಡುಗುಲಾಗ ಹೇಳಿ ಬರದ್ದಿದ್ದರೆ ಅದರ ಪಾಲನೆ ಮಾಡೆಕು.
  • ಪೇಟೆಲಿ ಪ್ಯಾಕ್ ಆಗಿ ಸಿಕ್ಕುವ ಎಲ್ಲ ವಸ್ತುಗಳ ಮೇಲೆಯೂ ‘best before…’ ಹೇಳಿ ಒಂದು ಅವಧಿಯ ಮಿತಿ ಕೊಟ್ಟಿರ್ತವು. ಅದರ ಮೀರಿ ನಾವು ಆ ವಸ್ತುಗಳ ಖಂಡಿತಾ ಉಪಯೋಗ್ಸುಲಾಗ. ಅದು ಆರೋಗ್ಯಕ್ಕೆ ಹಾನಿ ಉಂಟುಮಾಡ್ತು [ಕೆಲವು ವಸ್ತುಗೊ ಆ ಸಮಯದ ಮಿತಿಯ ಒಳದಿಕ್ಕೆಯೇ ಹಾಳಪ್ಪದೂ ಇದ್ದು!]

ಇದೆಲ್ಲಾ ನಾವು ಅಡಿಗೆ ಮಾಡ್ತ ಮೊದಲು ಸಂಗ್ರಹ ಮಾಡುವ ಕ್ರಮಂಗೊ, ಆಹಾರ ತಯಾರಿ ಆದಮೇಲೆ ಹೇಂಗೆ ಸಂಗ್ರಹ ಮಾಡುದು?

  • ಅಡಿಗೆ ಮಾಡಿ ಅದರ ಹೆಚ್ಚು ಸಮಯ ಸಂಗ್ರಹ ಮಾಡುದು ಸರಿ ಅಲ್ಲ. ಕೂಡ್ಲೇ ಊಟ ಮಾಡೆಕು.
  • ತಯಾರು ಮಾಡಿದ ಆಹಾರವ ಫ್ರಿಜ್ಜಿಲ್ಲಿ ಮಡುಗಿ ಸೇವಿಸುದು ತಪ್ಪು, ಅಕಸ್ಮಾತ್ ಅಂತಹ ಸಂದರ್ಭ ಇದ್ದರೆ ಕೇವಲ ಒಂದು ಸರ್ತಿ ಮಾಂತ್ರ ಫ್ರಿಜ್ಜಿಲ್ಲಿ ಮಡುಗುಲಕ್ಕು ಎರಡು ಮೂರು ದಿನ ಮಡುಗುದು ಆರೋಗ್ಯಕ್ಕೆ ಹಾನಿ.
  • ಫ್ರಿಜ್ಜಿಲ್ಲಿ ಮಡುಗಿದ ಆಹಾರವ ಕೇವಲ ಒಂದು ಸರ್ತಿ ಮಾಂತ್ರ ಸರಿಯಾಗಿ ಕೊದುಶಿ ಸೇವನೆ ಮಾಡೆಕ್ಕು.
  • ಆಹಾರವ ತುಂಬಾ ಸರ್ತಿ ಕೊದುಶುದರಿಂದಾಗಿ ಅದರ್ಲಿಪ್ಪ ಪೋಷಕಾಂಶಂಗೊ ನಷ್ಟ ಆವ್ತು.
  • ಆಹಾರ ಪದಾರ್ಥಂಗಳ ಯಾವಾಗ್ಲೂ ಧೂಳು,ಕಸವು, ಕೀಟ ಇತ್ಯಾದಿ ಹೋಗದ್ದ ಹಾಂಗೆ ಸರಿಯಾಗಿ ಮುಚ್ಚಿ ಮಡುಗೆಕ್ಕು.
  • ಬೇರೆ ಬೇರೆ ಪದಾರ್ಥಂಗೊಕ್ಕೆ ಬೇರೆ ಬೇರೆ ಸೌಟು ಮತ್ತೆ ಮುಚ್ಚಲು ಉಪಯೋಗ್ಸೆಕ್ಕು.
  • ಪಾತ್ರೆ, ತಟ್ಟೆ ಮತ್ತೆ ಸೌಟುಗೊ ಸ್ವಚ್ಛ ಇರೆಕ್ಕು ಹೇಳಿ ಬೇರೆ ಹೇಳುವ ಅಗತ್ಯ ಇಲ್ಲೆನ್ನೆ 🙂

ಆಹಾರ ತಯಾರಿ:

  • ಇದು ಒಂದು ಮುಖ್ಯ ಅಂಶ, ತಯಾರಿ ಎಷ್ಟು ಶುಚಿಯಾಗಿರ್ತೋ ರುಚಿಯೂ ಅಷ್ಟೇ ಹೆಚ್ಚು 🙂
  • ಎಲ್ಲ ಸಾಮಾಗ್ರಿಗಳ ತೊಳದು ಉಪಯೋಗ್ಸೆಕು. ನಮ್ಮ ಕೈಯನ್ನುದೇ!
  • ಯಾವುದೇ ವಸ್ತುವಿಂಗೆ ಹಾಕಿಪ್ಪ ಕೀಟ ನಾಶಕಂಗಳ ಸಾಧ್ಯ ಆದಷ್ಟು ಮಟ್ಟಿಂಗೆ ಶುಚಿಗೊಳ್ಸುದು ಅಗತ್ಯ.
  • ಶೀತ, ಸೆಮ್ಮ, ಹೊಟ್ಟೆಂದಹೋಪದು, ವಾಂತಿ ಇತ್ಯಾದಿ ಸಮಸ್ಯೆ ಇದ್ದವ್ವು ಅಡಿಗೆಕೋಣೆಂದ ದೂರ ಇಪ್ಪದೇ ಒಳ್ಳೆದು. ಆದರೆ ಅನಿವಾರ್ಯ ಇದ್ದಂತಹ ಸಂದರ್ಭಲ್ಲಿ ಕೈಯ್ಯ ಸರಿಯಾಗಿ ಸಾಬೂನಿಲ್ಲಿ ತೊಳಕ್ಕೊಂಡು, ಮೂಗು-ಬಾಯಿಗೆ ಅಡ್ಡ ವಸ್ತ್ರಕಟ್ಟಿಗೊಂಡು ಅಡಿಗೆ ಮಾಡೆಕ್ಕು.
  • ಆಹಾರವ ಸರೀಯಾಗಿ ಕೊದುಶೆಕ್ಕು.
  • ಯಾವುದೇ ವಸ್ತುಗಳ ಬಣ್ಣ, ವಾಸನೆಲಿ ಯಾವುದೇ ವ್ಯತ್ಯಾಸ ಇದ್ದರೆ ಅದರ ಉಪಯೋಗ್ಸುಲಾಗ.
  • ಸಾಧ್ಯ ಆದಷ್ಟು ತರಕಾರಿ ಹಣ್ಣು ಬೇಶಿದ ನೀರಿನ ಚೆಲ್ಲುಲಾಗ, ಅದರಲ್ಲಿ ಪೋಷಕಾಂಶ ನಷ್ಟ ಅಕ್ಕು.
  • ಮಾಂಸಾಹಾರ ತಯಾರಿ ಮಾಡುವವ್ವು ಅದಕ್ಕೆ ಬೇರೆಯೇ ಚಾಕು, ಮಣೆ,ಪಾತ್ರೆಗಳ ಉಪಯೋಗ್ಸೆಕು.ಮಾಂಸವ ಹೆಚ್ಚು ಸಮಯ ಹೆರ ಮಡೂಗುಲಾಗ. [ನವಗೆ ಅನ್ವಯ ಆವ್ತಿಲ್ಲೆ!]
  • ಅಡಿಗೆಕೋಣೆ ಸ್ವಚ್ಛವಾಗಿರೆಕ್ಕು, ಅಡಿಗೆಕೋಣೆಲಿ ಉಪಯೋಗ್ಸುವ  ಕೈ ಉದ್ದುವ ವಸ್ತ್ರವ ದಿನಾಗ್ಲೂ ಬದಲ್ಸೆಕು, ಕಿಚನ್ ಏಪ್ರೊನಿನ ಕೂಡ ದಿನಾಗ್ಲೂ ತೊಳೆಯಕ್ಕು[ಉಪಯೋಗ್ಸುವವ್ವು]
  • ಒಂದರಿ ಉಪಯೋಗ್ಸಿದ ಪಾತ್ರೆಯ ಇನ್ನೊಂದು ವಸ್ತುವಿಂಗೆ ಉಪಯೋಗ್ಸುತ್ತರೆ ತೊಳದು ಉಪಯೋಗ್ಸುದು ಒಳ್ಳೆದು.

ಮಾಡಿದ ರುಚಿ-ಶುಚಿಯಾದ ಅಡಿಗೆಯ ಬಳ್ಸುದು:

  • ನಿತ್ಯಕ್ಕೆ ಮನೆಲಿ ನಾವು ಬಳ್ಸುವಗ ಹೆಚ್ಚು ತಲೆಬೆಶಿ ಮಾಡೆಕಾದ ಅಗತ್ಯ ಇಲ್ಲೆ.
  • ಕೈ ತೊಳೆಕ್ಕೊಂಡು ಬಳ್ಸೆಕು ಹೇಳ್ತದರ ಮತ್ತೆ ಹೇಳುವ ಅಗತ್ಯ ಇಲ್ಲೆನ್ನೆ 🙂
  • ಆದರೆ ನೆಲಕ್ಕೆ ಬಿದ್ದ ಆಹಾರವ ತೆಗದು ತಟ್ಟೆಗೆ ಹಾಕುದು ತಪ್ಪು ಕ್ರಮ, ನಾವು ನಮ್ಮ ನೆಲ ಸ್ವಚ್ಛ ಇದ್ದು ಹೇಳಿ ಗ್ರೇಶಿರೂ ಕೂಡ ಕಣ್ಣಿಂಗೆ ಕಾಣದ್ದ ಸುಮಾರು ವಸ್ತುಗೊ ಇರ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡ್ಲೆ.
  • ನಾವು ಊಟ ಮಾಡ್ತ ಕೈಲಿಯೇ ಬಳ್ಸುದು ತಪ್ಪು ಕ್ರಮ.
  • ದೊಡ್ಡ ದೊಡ್ಡ ಕಾರ್ಯಕ್ರಮಂಗಳಲ್ಲಿ ಬಳ್ಸುವಗ ಕೈಲಿ ಬಳ್ಸುದು ತಪ್ಪು ಕ್ರಮ. ಸೌಟಿಲ್ಲಿಯೇ ಬಳ್ಸೆಕ್ಕು.
  • ಮತ್ತೆ ನಮ್ಮಲ್ಲಿ ಬಾಳೆಲಿ ಉಂಬ ಕ್ರಮ ಇಪ್ಪ ಕಾರಣ ಜಾಗೃತೆಲಿ, ಗಡಿಬಿಡಿ ಮಾಡದ್ದೆ ಕೆಳಾಂಗೆ ಚೆಲ್ಲದ್ದ ಹಾಂಗೆ ಬಳ್ಸೆಕ್ಕು.
  • ಇದಲ್ಲದ್ದೆ ಇನ್ನೊಂದು ಮುಖ್ಯ ವಿಷಯ ಹೇಳಿರೆ , ನೆಲಕ್ಕೆ ಕೂದು ಉಂಬಂತಹ ಸಂದರ್ಭಲ್ಲಿ ಬಳ್ಸುವ ಜೆನಂಗೊ ತಮ್ಮ ಕಾಲಿನ ಸ್ವಚ್ಛತೆಗೆ ಗಮನ ಕೊಡೆಕ್ಕು, ಅಲ್ಲದ್ದೆ ಬಾಳೆಗಳ ಮೇಲೆ ಕಾಲು ಮಡುಗದ್ದೆ ಇಪ್ಪದರ ಬಗ್ಗೆ ಗಮನ ಕೊಡೆಕ್ಕು.

ಆಹಾರ ಸೇವನೆಯ ಕ್ರಮ:

  • ನಮ್ಮಲ್ಲಿ ಊಟ ಮಾಡುದಕ್ಕೆ ಒಂದು ಕ್ರಮ ಹೇಳಿ ಇದ್ದು, ಅದರ ಬಗ್ಗೆ ಹೆಚ್ಚು ವಿವರಣೆಯ ಅಗತ್ಯ ಇಲ್ಲೆ. ಅದು ಎಲ್ಲೋರಿಂಗೂ ಗೊಂತಿಪ್ಪದೇ.
  • ಆದರೆ ಸ್ವಚ್ಛತೆಯ ಬಗ್ಗೆ ಹೇಳುವಗ ನೆಂಪು ಮಡುಗೆಕಾದ ಅಂಶ ಹೇಳಿರೆ ಕೈಗಳ ತೊಳಕ್ಕೊಂಡು ಊಟ ಮಾಡೆಕಾದ್ದು.
  • ಒಂದೇ ತಟ್ಟೆಂದ ತುಂಬಾ ಜೆನ ಊಟ ಮಾಡುದು ತಪ್ಪು.
  • ನೆಲಕ್ಕೆ ಬಿದ್ದ ವಸ್ತುವಿನ ಸೇವನೆ ಮಾಡುದು ಕೂಡ ತಪ್ಪು.
  • ಎಡದ ಕೈಲಿ ತಟ್ಟೆಯ ಮುಟ್ಟದೆಯೇ ಊಟ ಮಾಡುದು ಒಳ್ಳೆಯ ಕ್ರಮ [ಅನಿವಾರ್ಯ ಸಂದರ್ಭಂಗಳ ಹೊರತು ಪಡಿಸಿ]
  • ಸಣ್ನ ಮಕ್ಕೊಗೆ ಊಟ ಮಾಡ್ಸುವಗ ನಮ್ಮ ತಟ್ಟೆಂದಲೇ ಅವಕ್ಕೆ ಉಣ್ಸುದು ಸರಿ ಅಲ್ಲ.
  • ಜಂಬ್ರಂಗಳಲ್ಲಿ ಬಾಳೆ ಎಲೆಯ ಸರಿಯಾಗಿ ತೊಳೆಯಕಾದ್ದು ಮುಖ್ಯ, ಬಾಳೆಲಿ ಅಡಕ್ಕೆಗೆ ಹಾಕಿದ ಮದ್ದು ಇಪ್ಪ ಸಾಧ್ಯತೆಗೊ ಹೆಚ್ಚು ಇರ್ತು.
  • ಊಟ ಮಾಡುವ ಜಾಗೆಯ ಸ್ವಚ್ಛತೆಯೂ ಕೂಡ ಅಷ್ಟೇ ಮುಖ್ಯ.

ಇಷ್ಟೆಲ್ಲ ಮಾಹಿತಿಯ ಕೊಟ್ಟಪ್ಪಗ.. ಹೋಟೆಲ್ಲುಗಳಲ್ಲಿ ಉಂಬದು ಎಷ್ಟು ಸರಿ ಹೇಳ್ತ ಪ್ರಶ್ನೆ ಕೇಳಿರೆ ಎನ್ನ ಹತ್ತರೆಯೂ ಸರಿಯಾದ ಉತ್ತರ ಇಲ್ಲೆ 🙁 ಅನಿವಾರ್ಯ ಸಂದರ್ಭಲ್ಲಿ ಎಂತ ಮಾಡುದು ಅಲ್ಲದಾ?

ಆನು ಇಲ್ಲಿ ಈ ಶುದ್ದಿ ಬರದ್ದರ್ಲಿ ಸುಮಾರು ಅಂಶಂಗಳ ಬಿಟ್ಟಿಪ್ಪ ಸಾಧ್ಯತೆ ಇದ್ದು, ನಿಂಗೊಗೆ ಗೊಂತಿಪ್ಪ ಬೇರೆ ಅಂಶಂಗಳ ಬಗ್ಗೆ ತಿಳುಶಿ. ಎನಗೂ, ಓದುತ್ತ ಜೆನಂಗೊಕ್ಕೂ ಉಪಕಾರ ಅಕ್ಕು 🙂

-ನಿಂಗಳ

ಸುವರ್ಣಿನೀ ಕೊಣಲೆ

33 thoughts on “Food hygiene-ಆಹಾರದ ಶುಚಿತ್ವ

  1. ಬರದ್ದು ಲಾಯಕಾಯಿದು ಅಕ್ಕ.. ಧನ್ಯವಾದ.

  2. ಅಕ್ಕೋ, ಏವತ್ತಿನ ಹಾಂಗೆ ಒಳ್ಳೆ ಮಾಹಿತಿ ಕೊಟ್ಟ ಲೇಖನ! Food hygiene ಬಗ್ಗೆ ನಾವು ತಿಳ್ಕೊಳೆಕ್ಕಾದ್ದು ತುಂಬಾ ಇದ್ದು ಖಂಡಿತಾ.. ದ್ರಾಕ್ಷೆ, ಕ್ಯಾಬೇಜ್ ಮತ್ತೆ ಕಾಲಿ ಪ್ಲವರ್ ಸಾಲದ್ದಕ್ಕೆ ಈಗೀಗ ಬದನೆಯ ಕೂಡ ಕ್ರಿಮಿನಾಶಕಲ್ಲಿಯೇ ಮೀಶುತ್ತವು.. ಎಷ್ಟೂ ತೊಳದರೂ ವಿಷವೇ.. ಊಟಕ್ಕೆ ಉಪಯೋಗ್ಸುವ ಬಾಳೆ ಎಲೆ ಬಗ್ಗೆ ಹೇಳಿದ್ದು ಒಳ್ಳೆದಾತು.. ಮೈಲುತುತ್ತು ನಿಧಾನ ವಿಷ.. ತೊಳದರುದೆ ಬಾಳೆ ಒಂದರಿ ಸ್ವಛ್ಚ ಆದ ಹಾಂಗೆ ಕಾಣ್ತಷ್ಟೆ ಹೊರತು ಒಣಗಿದರೆ ಮೈಲುತುತ್ತು ಬಾಳೆಲಿ ಹಾಂಗೇ ಇರ್ತು..
    ಒಟ್ಟಿಲಿ ಸಂಗ್ರಹಯೋಗ್ಯ ಲೇಖನ ಕೊಟ್ಟಿದಿ ಅಕ್ಕ! ಧನ್ಯವಾದಂಗೋ!
    ~

    [ಕೈಗಳ ತೊಳಕ್ಕೊಂಡು ಊಟ ಮಾಡೆಕಾದ್ದು]

    ಕೈ ತೊಳಕ್ಕೋಂಡು ಊಟ ಮಾಡ್ತದು ಹೇಂಗೆ!!? ಆನಂತೂ ಕೈ ತೊಳದಿಕ್ಕಿ ಊಟ ಮಾಡುದು, ಊಟ ಮಾಡಿಕ್ಕಿ ಕೈ ತೊಳವದು.. 😉

    ಹೇಳಿದಾಂಗೆ, ನಗೆಭಾವ ಕೇಳಿಗೊಂಡಿತ್ತಿದ್ದ, ತೊಳವಲೆ ಉಪ್ಯೋಗ್ಸುತ್ತ ನೀರಿನ ಮೊದಾಲು ತೊಳೆಯೆಡದೋ ಹೇಳಿ, ಗೊಂತಿದ್ದರೆ ಹೇಳಿಕ್ಕೊ ಆತೋ.. 😉

  3. ಸುವರ್ಣಿನಿ ಅಕ್ಕೋ / ತಂಗೆ,

    ಎನಗೆ ಊಟ ಮಾಡಿ ಮಾತ್ರ ಅಲ್ಲ ಅಡಿಗೆ ಮಾಡಿಯೂ ಅಭ್ಯಾಸ ಇಪ್ಪ ಕಾರಣ ನಿನ್ನ ಬರವಣಿಗೆ ಎನ್ನ ಓದಿಸಿಕೊಂಡು ಹೋತು.. ಬರೆತ್ತಾ ಇರೆಕ್ಕು ಆತೋ ಹೀಂಗೆ..

    1. ಧನ್ಯವಾದ 🙂 ಖಂಡಿತಾ ..ಬರೆತ್ತಾ ಇರ್ತೆ, ಎನ್ನ ಬರವಣಿಗೆಂದ ಜೆನಂಗೊಕ್ಕೆ ಪ್ರಯೋಜನ ಆವ್ತರೆ ಸಂತೋಶವೇ 🙂 ..ನಿಂಗಳ ಪ್ರೀತಿ ಹೀಂಗೇ ಇರಲಿ.

      1. ಮತ್ತೆ ಈ ಅಕ್ಕ/ತಂಗೆ confusion ಬೇಡ. ತಂಗೆ ಹೇಳಿಯೇ ಹೇಳಿ 🙂

  4. ಆಹಾ, ಆಹಾರ ಸಂಗ್ರಹಣೆ, ಆಹಾರ ತಯಾರಿ, ಬಡುಸುವದು, ಉಂಬದರಲ್ಲಿಯೂ ಸ್ವಚ್ಛತೆ; ಸುವರ್ಣಿನಿಯಕ್ಕನ ಸವಿವರ ಲೇಖನ ಲಾಯಕಾಯಿದು. ಕೆಲವು ಸೂಕ್ಷ್ಮ ವಿಷಯಂಗಳನ್ನು ಚೆಂದಕೆ ವಿವರುಸಿ ಕೊಟ್ಟಿದು. ಧನ್ಯವಾದಂಗೊ.

    1. ಅಪ್ಪು, ಹೆಚ್ಚಿನ ವಿಷಯಂಗಳ ನಾವು ಸಣ್ಣದು ಹೇಳಿ ಗ್ರೇಶಿ ಹೆಚ್ಚು ಪ್ರಾಮುಖ್ಯತೆ ಕೊಡ್ತಿಲ್ಲೆ. ಆದರೆ ಅದರ ನಾವು ನಿರ್ಲಕ್ಷ್ಯ ಮಾಡ್ಲಾಗ… ಎಲ್ಲ ವಿಚಾರಂಗೊಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರ್ತು 🙂

  5. ಅರೋಗ್ಯವಂತರಾಗಿ ಇರೆಕ್ಕಾರೆ, ತೆಕ್ಕೊಳ್ತ ಆಹಾರವೂ ಅಷ್ಟೇ ಸ್ವಚ್ಛವಾಗಿರೆಕು. ಸಾಮಾಗ್ರಿಗೊ ಮನೆಗೆ ತಂದು, ಸಂಗ್ರಹ ಮಾಡುವ ವಿಧಾನಂದ ಸುರು ಮಾಡಿ ಅಡಿಗೆ ಮಾಡಿ ಉಣ್ಣುವ ವರೆಗಿನ hygiene ಬಗ್ಗೆ ಒಳ್ಳೆ ಲೇಖನ. ಧನ್ಯವಾದಂಗೊ

  6. ಡಾಗುಟ್ರಕ್ಕಾ,ಒಳ್ಳೆ ಲೇಖನ.
    ಅಹಮದಾಬಾದಿಲಿ ಅಕ್ಕಿ ಬೇಳೆಗಳ ದಾಸ್ತಾನು ಮಾಡುವ ಕ್ರಮ ನೆ೦ಪಾತು. ಅಲ್ಲಿ ಪ್ರತಿ ಮನೆಲಿ ವರುಷಕ್ಕೊಂದರಿ ಬೇಕಾದ ಧಾನ್ಯಂಗಳ ಹಳ್ಳಿಂದ ಕ್ರಯ ಕೊಟ್ಟು ತೆಕ್ಕೊಂಡು ಬೆಶಿಲಿಂಗೆ ಹಾಕಿ ರಜಾ ಪ್ರಮಾಣಲ್ಲಿ ಬೋರಿಕ್ ಎಸಿಡ್ ಮತ್ತೆ ಹರಳೆಣ್ಣೆ ಹಾಕಿ ಕಲಸಿ ಉಗ್ರಾಣಲ್ಲಿಪ್ಪ ದೊಡ್ಡ ದೊಡ್ಡ ಅಲ್ಮಿನಿ ಡಬರಿಗಳಲ್ಲಿ ತುಂಬುಸಿ ಮಡುಗುತ್ತವು. ಇದು ಈಗ ಮಾಲ್ ಯುಗಲ್ಲಿಯೂ ಬದಲಾಯಿದಿಲ್ಲೆ ಹೇಳಿ ಈಗ ಫೋನು ಮಾಡಿ ತಿಳುಕ್ಕೊಂಡೆ.ಇದಕ್ಕೆ “ಕೋಟಿ ಭರನಾ” ಹೇಳ್ತವು ಅವರ ಭಾಷೆಲಿ.
    ಮನ್ನೆ ಊರಿಲಿ ಒಬ್ಬ ಭಾವ° ಹೇಳಿದ ವಿಷಯವೂ ನೆ೦ಪಾತು.ಈಗ ಅಕ್ಕಿಲಿ ಗುಗ್ಗುರು ಕಾಂಬಲೆ ಸಿಕ್ಕ.ಎಂತಗೆ ಹೇಳಿರೆ ಅಕ್ಕಿಯ ದಾಸ್ತಾನು ಮಾಡೊಗ ಬೇಕಾದಷ್ಟು ವಿಷವ ಹಾಕಿರ್ತವು.ಬೇಕಾರೆ ನಾಕು ಗುಗ್ಗುರು ತಂದು ಅಕ್ಕಿ ಗೋಣಿಯೊಳ ಹಾಕಿ ನೋಡು ಭಾವ,ಹೇಂಗೆ ಹೆರ ಓಡಿಗೊಂಡು ಬತ್ತು,”ಬದುಕಿದೆಯಾ ಬಡ ಜೀವವೇ ಹೇಳಿಗೊಂಡು” ಹೇಳಿ ಹೊಟ್ಟುಸಿದ°..

    1. ಈಗಾಣ ಕಾಲಲ್ಲಿ ಎಲ್ಲದಕ್ಕೂ ರಾಸಾಯನಿಕ ವಿಷಂಗಳ ಹಾಕುತ್ತವು 🙁 ಅದರ ಸರಿ ಮಾಡೆಕ್ಕಾರೆ ಕಷ್ಟ. ದೊಡ್ಡ revolution ಆಯಕ್ಕು. ಸಾವಯವ ಕೃಷಿಯ ಬಗ್ಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡೆಕ್ಕು, ಅದರಿಂದಾಗಿಯೇ ನಾವು ಮುಂದೊಂದು ದಿನ ಸಂಪೂರ್ಣವಾಗಿ ಆರೋಗ್ಯವ ರಕ್ಷಣೆ ಮಾಡೀಗೊಂಬಲೆ ಎಡಿಗಷ್ಟೇ.

  7. ನಿತ್ಯ ವ್ಯವಹಾರದ ಗುಣದೋಶಂಗಳ ಸೂಕ್ಷ್ಮವಾಗಿ ಗಮನಿಸಿ ಸಂಗ್ರಹಿಸಿ ಎಲ್ಲೋರಿಂಗೂ ಅರ್ಥ ಅಪ್ಪ ಹಾಂಗೆ ಪರಿಹಾರ-ಪರ್ಯಾಯಂಗಳ ಸಹಿತ ಹೇಳುದು ಬಹಳ ಒಳ್ಳೇದು. ಅದರ ಆರಂಭ ಇಲ್ಲಿಂದಲೇ ಆಗಲಿ.
    ತುಂಬಾ ಒಳ್ಳೇ ಬರಹ.
    ಊಟಲ್ಲಿ ಉಪ್ಪಿನಕಾಯಿಯ ಹಾಂಗೆ ಕೆಲವು ಕಾಲೆಳವ ಕುಶಾಲಿನ ಒಪ್ಪಂಗಳೂ ಇರಳಿ.

    1. ಧನ್ಯವಾದಂಗೊ. ಹೀಂಗಿದ್ದ ವಿಚಾರಂಗಳಿಂದ ನಮ್ಮ ಜೀವನವ-ಆರೋಗ್ಯವ ನಾವು ಕಾಪಾಡಿಗೊಂಡು ಹೋಪಲಾವ್ತು 🙂 ಹಾಂಗಾಗಿ ಸಣ್ಣ ಸಣ್ಣ ವಿಚಾರಂಗೊಕ್ಕೂ ಪ್ರಾಮುಖ್ಯತೆ ಕೊಡೆಕಾದು ಅಗತ್ಯ .

  8. ಸುವರ್ಣಿನಿ ಅಕ್ಕೋ ಒಳ್ಳೆ ಲೇಖನ ತು೦ಬಾ ಸಮಯದ ನ೦ತ್ರ ಬ೦ದು ಕೊಶಿ ಆತು.ಬೈಲಿ೦ಗೆ ಬಪ್ಪಲೆ ತಡವು ಮಾಡ್ಲಾಗ ಹೇಳಿ ಹಿ೦ದೆ ಒ೦ದಾರಿ ಆನು ಹೇಳಿದ್ದಿದ್ದೆ.ಇನ್ನು ಭೋಸ ಭಾವನೂ ಅನಾಮಿಕ ಅಣ್ಣನು ಕಾದಿಯೋಳೆಡಿ ಆತೊ.ಅವ೦ ಒಳ್ಳೆ ಹೆಸರು ಹುಡ್ಕುತ್ತದರಲ್ಲಿ ಇದ್ದನಷ್ಟೆ ನೀನು ಹೇ೦ಗಾರು ಬೋಸ ಅಲ್ಲದೊ ರಜ ಮೆಲ್ಲ೦ಗೆ ಗೊ೦ತಿದ್ದವರತ್ರೆ ಕೇಳಿ ತಿಳುಕ್ಕೊ.ಅಜ್ಜಕಾನ ಭಾವನತ್ರಾದರೂ ಅಕ್ಕು..ಒಪ್ಪ೦ಗಳೊಟ್ಟಿ೦ಗೆ.

    1. ಚೆ ಚೇ..!!!
      ಆನು ಆರತ್ರೂ ಕದುತ್ತ ಮನುಶ್ಯ ಅಲ್ಲಪ್ಪಾ….

  9. ಸುವರ್ಣಿನಿಯಕ್ಕ!! ನಿಂಗ ಬರದ್ದು ಭಾರೀ ಲಾಯ್ಕಾಯ್ದು!! ಎಂಗ ಅಡಿಗೆ ಮಾಡಿ ಉಮ್ಬಗ ಈ ನಮೂನೆ ವಿಷಯಂಗಳ ಬಗ್ಗೆ ತಲೆಕೆಡಿಸಿಗೊಳ್ಳೆಕ್ಕು ಹೇಳಿ ಗೊಂತಿತ್ತಿಲ್ಲೇ! ಧನ್ಯವಾದನ್ಗೋ!

  10. @ ಬೋಸ …
    ನಮ್ಮ ಬೈಲಿಲಿ ಬರದ್ದದರ ಓದಿ ಅರ್ಥ ಮದಿಗೊಮ್ಬಲೇ ಎದಿಯದಷ್ಟು ಹೆಡ್ಡರು ಆರು ಇಲ್ಲೆ ಹೇಳಿ ಆನು ಗ್ರೆಶುತ್ತೆ… ವಿಷಯಂಗಳ ರಜವು ಅರ್ಥ ಮದಿಗೊಲ್ಲದಷ್ಟು ಅಷ್ಟು ಹೆಡ್ಡರು ಆರದ್ರು ಇದ್ದರೆ ಹೇಳಿ ಅವಕ್ಕೆ ಪ್ರತ್ಯೇಕವಾಗಿ ವಿವರಣೆ ಮಾಡುವ ಏರ್ಪಾಡು ಮಾಡಲೇ ಗುರಿಕ್ಕರ ರ ಹತ್ತಾರೆ ಹೇಳುವ.. ಮತ್ತೆ ಬೋಸ ನ ಹಾಂಗೆ ಇಪ್ಪವಕ್ಕೆ/ ಮಾದುವವಕ್ಕೆ ಎಷ್ಟು ಸರಿಯಾಗಿ ಅರ್ಥ ಅಪ್ಪ ಹಾಂಗೆ ಹೇಳಿದರು ಒಂದೇ ಎಂತಕೆ ಹೇಳಿದರೆ ಅವ ಬೋಸ ಅಷ್ಟೇ ಅನ್ನೇ..ನಿಂಗೊ ಎಂತ ಬರದೊರಿನ್ಗೆ ಎಷ್ಟು ಗೊಂತಿದ್ದು ಹೇಳಿ ನೋಡುದ??
    @ಗುರಿಕ್ಕರು
    ಲೇಖನ ನಗಳ ಬರವದು ಬೈಲಿಲಿ ಇಪ್ಪೋರಿನ ಮಾಹಿತಿಗೆ/ ತಿಳುವಳಿಕೆಗೆ ಹೇಳಿ ಅನು ಗ್ರೆಶಿದ್ದೆ.. ಆದರೆ ಕೆಲವು ಒಪ್ಪಂಗಳ ನೋಡುವಾಗ ಒಪ್ಪ ಬರವದು ಹೇಳಿದರೆ ಬರದೊರ ಕಾಲು ಏಳವಳೇ ಹೇಳುವ ಹಾಂಗೆ ಕಾಣ್ತು.. ಅದು ಅಷ್ಟು ಸರಿ ಅಲ್ಲ ಹೇಳಿ ಎನಗೆ ಕಾಣ್ತು. ತೀರ ಬಾಲಿಷವಾಗಿ / ವಯಕ್ತಿಕವಾಗಿ ಕೊಡುದು ಅಷ್ಟು ಸರಿ ಅಲ್ಲ .. ವಿಷಯಕ್ಕೆ ಪೂರಕವಾಗಿ ಇಪ್ಪ ಒಪ್ಪಂಗಳ ಕೊಟ್ಟು ಪ್ರೋಥ್ಸಹಿಸೆಕ್ಕು .. ಅದು ಬಿಟ್ಟು ಕೆಲವು ಸರ್ತಿ ವಿಷಯಾಂತರ ಆಗಿ ಲೇಖನಕ್ಕೂ ಬರದ ಒಪ್ಪಂಗೊಕ್ಕು ಯಬ್ದೆ ರೀತಿ ಸಂಭಂದ ಇಲ್ಲದ್ದ ಹಾಂಗೆ ಆದದ್ದರ ಆನು ಗಮನಿಸಿದ್ದೆ.. .. ಈ ಬಗ್ಗೆ ಗುರಿಕ್ಕರು ರಜ ಗಮನ ಕೊಟ್ಟರೆ ಒಳ್ಳೆದು ಹೇಳಿ ಎನ್ನ ಅಭಿಪ್ರಯ ..

    1. ಅನಾಮಿಕ- ಒ೦ದು ನಾಮ ನಡಿಕ್ಕೊ ಮರಾಯಾ…!! ಬೈಲಿನೋವೋ,ಗುರಿಕ್ಕಾರೋ.. ನಿನ್ನ ಹೇ೦ಗ ಗುರ್ತ ಹಿಡಿಸ್ಸು??
      ನಮ್ಮ ಬೈಲಿಲಿ ಬರದ್ದದರ ಓದಿ ಅರ್ಥ ಮಡಿಗೊಮ್ಬಲೇ ಎದಿಯದಷ್ಟು ಹೆಡ್ಡ ಆನ್ ಇದ್ದೆ… ಎನ್ನ ಹೆಸರೇ “ ಬೋಸ…”
      ನಿ೦ಗಳ೦ತಾ ಮೇದವಿಗೋಕ್ಕೆ ಬೇಗ ಗೊ೦ತಕ್ಕೊ ಎನೊ.. ನಿ೦ಗೋ ಹೇಳಿದಾ೦ಗೆ ಆನು ಬರೇ ಬಡ್ಡ..
      ಪ್ರತ್ಯೇಕವಾಗಿ ವಿವರಣೆಗೆ ನಿ೦ಗಳತ್ರೆ ಬತ್ತೆ.. ನಿ೦ಗ “ನಾಮ”ದೇಯ ಬರೇರಿ.. ಆತೋ??

    2. ಅನಾಮಿಕ ಭಾವ ( ಅಕ್ಕ),
      ಬೈಲಿಲಿ ಬರವವು ಹಾಸ್ಯಪ್ರಜ್ಞೆಯ ಬೆಳೆಸಿಗೊಂಡವು.ಅವಧಾನದ ಏಕತಾನತೆಯ ಬದಲುಸಿ ನೆಗೆಯ ಟಾನಿಕ್ ಕೊಡುಲೆ ಅಪ್ರಸ್ತುತ ಹೇಳಿ ಇರ್ತ ,ಹಾಂಗೆಯೇ ಬೈಲಿಲಿ ಕೆಲವು ಜೆನ ಪ್ರಯತ್ನ ಮಾಡುತ್ತಾ ಇದ್ದವು,ನೆಗೆಗಾರ,ಬೋಸ,ಪೆಂಗಣ್ಣ. ವಿಷಯಂಗಳ ಒಟ್ಟಿ೦ಗೆ ರಜಾ ನೆಗೆಯೂ ಇದ್ದರೆ ಜೆಮ್ಬ್ರದ ಊಟಲ್ಲಿ ಸೀವು ಉಂಡ ಹಾಂಗೆ ಅಕ್ಕಲ್ಲದೋ? ನಿಂಗೊಗೆ ಇಷ್ಟ ಆಗದ್ದರೆ ಈ ಪಿಟ್ಕಾಯಣ೦ಗಳ ಓದೆಡಿ. ಬಾಳೆ ಕರೇಲಿ ನವಗೆ ಮೆಚ್ಚದ್ದ ತಾಳಿನ ಸೇರುಸುತ್ತಿಲ್ಲೆಯೋ ಹಾಂಗೆ ಮಾಡಿ ಬಿಡಿ.

      ನೆಗೆಯು ಸಹಜದ ಧರ್ಮ
      ನೆಗೆಮಾಡ್ಸೋದು ಪರಧರ್ಮ ಹೇಳಿ ಶಂಭಟ್ಟಜ್ಜ ಹೇಳಿದ್ದವಿಲ್ಲೆಯೋ?? ಎನ್ನ ಜೋರು ಮಾಡೆಡಿ ಇನ್ನು..

      1. @ ಬೋಸ°,
        {ಬಾಳೆಲಿ ಬಳುಸಿದ್ದು ಪುರಾ ಕಾಲಿ ಅಕ್ಕು…!! }
        – ಅಬ್ಬ, ಬಾಳೆ ಆದರೂ ಒಳಿತ್ತನ್ನೇ ಹೇಳಿ ಸಮಾದಾನ ಆತು ನವಗೊಂದರಿ!

        @ ಅನಾಮಿಕ,
        ಬೈಲಿಲಿ ಆರೆಲ್ಲ ಇದ್ದವೋ – ನಿಜಜೀವನಲ್ಲಿಯೂ ಇದ್ದೇ ಇದ್ದವು.
        ನಿಜಜೀವನಲ್ಲಿ ಆರೆಲ್ಲ ಸಿಕ್ಕುತ್ತವೋ, ಬೈಲಿಲಿ ಅವೆಲ್ಲರೂ ಸಿಕ್ಕುಗು.

        ನಮ್ಮ ಸಮಾಜಲ್ಲಿ ಗುರುಗೊ ಇದ್ದವು, ಗುರಿಕ್ಕಾರ್ರು ಇದ್ದವು, ಉಶಾರಿ ಮಕ್ಕೊ ಇದ್ದವು, ಅಕ್ಕಂದ್ರು- ಅಜ್ಜಿಯಕ್ಕೊ ಇದ್ದವು, ಅಪ್ಪಚ್ಚಿಯಕ್ಕೊ ಇದ್ದವು, ಡಾಗುಟ್ರು, ಇಂಜಿನಿಯರು ಇದ್ದವು – ಎಲ್ಲೋರುದೇ ಇದ್ದವು.
        ಉಶಾರಿಗಳ ಎಡಕ್ಕಿಲಿ ರಜ ಮಂದದವುದೇ ಇದ್ದವು.
        ಸಮಾಜ ಬೆಳೇಕಾರೆ ಅವುದೇ ಇರೇಕು.
        – ಸಮಾಜಲ್ಲಿ ಮಾಂತ್ರ ಅಲ್ಲ, ನಮ್ಮೊಳವುದೇ ಅವೆಲ್ಲೊರುದೇ ಇರ್ತವು.
        ಎಷ್ಟೋ ಸರ್ತಿ ನಾವುದೇ ಬೋಸ° ಆಗಿರ್ತು! ಅಪ್ಪೋ ಅಲ್ಲದೋ?

        ಈ ಬೋಸ° ನಮ್ಮ ಬೈಲಿನ ಆಸ್ತಿ. ಎಲ್ಲ ಶುದ್ದಿಗಳ ಓದಿ, ಒಪ್ಪಕೊಟ್ಟು ಶುದ್ದಿ ಬರದೋರಿಂದ ಹಿಡುದು ಬೈಲಿನ ಎಲ್ಲೋರನ್ನೂ ಒಂದರಿ ನೆಗೆಮಾಡುಸಿ ಬಿಡ್ತ°!
        ನಿಜಜೀವನಲ್ಲಿ ಅವ° ಬೋಸ° ಆಗಿರದ್ರೂ, ಬೈಲಿಂಗೆ ಬೇಕಾಗಿ ಬೋಸ° ಆಗಿ ಒಪ್ಪ ಕೊಡ್ತ°.
        ಯೇವದೇ ಶುದ್ದಿ ಆದರೂ, ಬೋಸನ ಯೋಚನಾದೃಷ್ಟಿಂದ ನೋಡಿ – ಓ-ಹೀಂಗೂ ಇರ್ತಲ್ಲದೋ ನಮ್ಮ ಸಮಾಜಲ್ಲಿ – ಹೇಳ್ತದರ ತೋರುಸಿಕೊಡ್ತ°.
        ಹಾಂಗೆಯೇ ಅದರೊಟ್ಟಿಂಗಿಪ್ಪ ಕೆಲವೆಲ್ಲ ವೆಗ್ತಿತ್ವಂಗೊ.

        { ತೀರ ಬಾಲಿಷವಾಗಿ / ವಯಕ್ತಿಕವಾಗಿ ಕೊಡುದು ಅಷ್ಟು ಸರಿ ಅಲ್ಲ }
        ಯೇವದು ಬಾಲಿಷ? ಯೇವದು ವೈಯೆಗ್ತಿಕ? ಆರು ನಿಗಂಟು ಮಾಡ್ತ°? – ಅಲ್ಲದೋ?
        ನವಗೆ ಬಾಲಿಷ ಆದ್ದು ಇನ್ನೊಬ್ಬಂಗೆ ಕಠಿಣ ಆಗಿಕ್ಕು,
        ನವಗೆ ರುದ್ರ ಕಲ್ತಿಕ್ಕಲೆ ಪ್ರಾಣಕ್ಕೆ ಬತ್ತು, ಆದರೆ ಬಟ್ಟಮಾವಂಗೆ ಅದು ಬಾಲಿಷ! – ಸಣ್ಣ ಇಪ್ಪಗಳೇ ಕಲ್ತು ನೀರು ಕುಡುದಾಗಿರ್ತು!

        { ಒಪ್ಪ ಬರವದು ಹೇಳಿದರೆ ಬರದೊರ ಕಾಲು ಏಳವಳೇ ಹೇಳುವ ಹಾಂಗೆ ಕಾಣ್ತು }
        ಬೈಲಿಲಿ ಈಗ ಕಾಣ್ತಾ ಇಪ್ಪ ಒಪ್ಪಂಗೊ ಎಲ್ಲವುದೇ ಸರಿಯಾಗಿಯೇ ಇದ್ದು! ತೀರಾ ಕಾಲುಎಳದು ಗುಂಡಿಗೆ ಹಾಕುತ್ತ ಪರಿಸ್ಥಿತಿ ಬಂದರೆ ಗುರಿಕ್ಕಾರ್ರು ಬಂದೇ ಬತ್ತವು ಅಲ್ಲಿಗೆ.

        ಬೈಲಿನ, ನೆರೆಕರೆಯ ಆರೊಬ್ಬಂಗೂ ಬೇನೆ ಆಗದ್ದ ಹಾಂಗೆ ಬೈಲು ಇಂದಿನ ಒರೆಂಗೆ ನೆಡಕ್ಕೊಂಡು ಬಯಿಂದು. ಅಪ್ಪೋ – ಅಲ್ಲದೋ?
        ನಿಂಗಳೂ ಶುದ್ದಿ ಬರವಲೆ ಸುರುಮಾಡಿ, ಈ ನಮುನೆಯ ಒಪ್ಪಂಗೊ ಕಂಡಪ್ಪಗ ಶುದ್ದಿ ಬರದ ಟೆನ್ಷನು ರಜಾ ಇಳಿತ್ತು!
        ಬೇಕಾರೆ ನೋಡಿಕ್ಕಿ!

        { ಅನಾಮಿಕ }
        ಬೈಲಿಲಿ ಒಪ್ಪ ಕೊಡುವಗ ಹೆಸರು ಖಡ್ಡಾಯ.
        ಹೆಸರು ಚೆಂದದ್ದೇ ಆಯೆಕ್ಕು ಹೇಳಿ ಇಲ್ಲೆ, ಬೋಸ, ಪೆಂಗ – ಎಂತ ಇದ್ದರೂ ಆವುತ್ತು!
        ಅನಾಮಿಕ ಹೇಳಿ ಇದ್ದರೆ ಅದು ಹೇಂಗಕ್ಕು? ನಿಂಗಳೇ ಹೇಳಿ!
        ಇದಾರು ಹೇಳ್ತದರ ಕಾಶಿಂದ ರಾಮೇಶ್ವರ ಒರೆಂಗೆ ಹುಡ್ಕೇಕಕ್ಕು! 😉
        ಅಲ್ಲ, ಹಾಂಗೆಯೇ ಹೆಸರು ಮಡಗುತ್ತದಾದರೆ ಎಂಗಳಿಂದ ಅಡ್ಡಿ ಇಲ್ಲೆ!

        ಬನ್ನಿ, ಒಪ್ಪಕೊಟ್ಟೋಂಡಿರಿ, ವಿದ್ವಾನಣ್ಣನ ಹಾಂಗಿರ್ತವರ ವಿದ್ವತ್ತಿನ ಒಪ್ಪಂಗಳ ಓದಿಗೊಂಡಿರಿ, ಉತ್ತರಿಸಿಗೊಂಡಿರಿ.

        ಒಳ್ಳೆದಾಗಲಿ,
        ಹರೇರಾಮ.

        1. ಒಪ್ಪಣ್ಣೋ ಸರಿಯಾತು, ನಮ್ಮ ಬೈಲಿಲಿ ಏನೂ ತೊಂದರೆ ಬಾರ.
          ಮಕ್ಕೊಗೆ ತಿದ್ದಿ ಕೊಂಡಾಟಲ್ಲಿ ಹೇಳೇಕು.
          ಜವ್ವನಿಗರಿಂಗೆ ಸಮಧಾನಲ್ಲಿ ಬೆನ್ನುತಟ್ಟಿ ಹೇಳೇಕು.
          ಪ್ರಾಯದವಕ್ಕೆ ಕಾಲುಹಿಡುದು ಹೇಳೇಕು.
          ಹೇಳುಲೆ – ಅಜ್ಜ° ಅಜ್ಜಿಂದ ಹಿಡುದು ಕುಞ್ಞಿಮಕ್ಕಳವರೆಗೆ ಎಲ್ಲೋರೂ ನಮ್ಮ ಬೈಲಿಲಿ ಇದ್ದವು. ಹಾಂಗೇ ಗುರುಗಳಿಂದ ಹಿಡುದು ಗುರಿಕ್ಕಾರನ ವರೆಗೆ ಬೇಕಾದೋರೆಲ್ಲಾ ಇದ್ದವನ್ನೆ.
          ಆರೂ ಕೋಪ ಮಾಡ್ಲಾಗ.
          ಎಲ್ಲೋರೂ ಬೇಕೇಬೇಕು.

        2. ಗುರಿಕ್ಕಾರಿಂಗೆ ನಮಸ್ಕಾರ 🙂 ನಿಂಗಳ ಮಾತು ಸತ್ಯ … ಎಲ್ಲ ರೀತಿಯ ಜೆನಂಗಳೂ ಪ್ರಪಂಚಲ್ಲಿ ಇದ್ದವು, ಹಾಂಗೆಯೇ ನಮ್ಮ ಬೈಲಿಲ್ಲಿಯೂ 🙂 ಎಲ್ಲೋರೂ ಒಟ್ಟಿಂಗೆ ಸಹಬಾಳ್ವೆ ನಡಶೆಕಾದ್ದೇ ಮುಖ್ಯ 🙂

  11. ಅಕ್ಕೊ… ಇದರೆಲ್ಲಾ, ಅಡಿಗೆ ಮಾಡಿ ಬಳುಸುತ್ತವು ನೋಡಿಗೊಳೆಕಾದ ವಿಚಾರ..
    ಎನ್ನ ಹಾ೦ಗೆ ತಿ೦ತ್ತವು ಅಲ್ಲ…!!
    ಆನು, ಅಜ್ಜಕಾನ ಭಾವ, ಪೆ೦ಗಣ್ಣ ಸೇರಿರೆ…. ಬಾಳೆಲಿ ಬಳುಸಿದ್ದು ಪುರಾ ಕಾಲಿ ಅಕ್ಕು…!! 🙂

    ನವಗೆ ಮತ್ತೆ ಬಾಳೆಲಿ ಹೋಳಿಗೆ, ಪಾಯಸ ಬಿದ್ದರೆ- ಕೈಗು ಬಾಯಿಗು ಪುರುಸೊತ್ತಿಲ್ಲೆ…!!

  12. ಸುವರ್ಣಿನಿ ಅಕ್ಕಾ.. ಪುನಃ ಒ೦ದು ಒಳ್ಳೇ ಲೇಖನ ಕೊಟ್ಟದಕ್ಕೆ ಧನ್ಯವಾದ೦ಗೊ..

    ಇದರಲ್ಲಿ ವಿವರಿಸಿದ ಎಲ್ಲಾ ವಿಷಯ೦ಗಳುದೆ ಉಪಯುಕ್ತ ಆಗಿ ಇದ್ದು. ಆದರೆ ಸೊಪ್ಪು ತರಕಾರಿಗಳ ಸ೦ಗ್ರಹ ಮಾಡುವದು ಹೇ೦ಗೆ? ಅದರ ತೊಳದು ಸರಿಯಾಗಿ ಕುಡುಗಿ ಮಡುಗಿರೆ ಸಾಕಾ? ಅಥವಾ ಆಹಾರ ತಯಾರುಸುವ೦ದ ಮೊದಲು ಮಾ೦ತ್ರ ಶುಚಿ ಮಾಡಿರೆ ಸಾಕಾ?
    cabbageನ ಹೇ೦ಗೆ ಶುಚಿ ಮಾಡುವದು? 🙁 ಎನಗೆ ತಲೆಗೇ ಹೋವ್ತಿಲ್ಲೆ. ಅದು ಸಣ್ಣ ಮುಕುಟು ಆಗಿಪ್ಪಗಳೇ ಅದಕ್ಕೆ ಕೀಟನಾಶಕ ಸಿ೦ಪಡಿಸಿರೆ ಅದರ ಎಲೆಗಳ ಒಳದಿಕೆ ಎಲ್ಲಾ ಅದು ಇರ್ತಿಲ್ಲೆಯಾ? ಅದರ ಶುಚಿ ಮಾಡೆಕಾರೆ ಒ೦ದೊ೦ದು ಎಸಳುದೆ ಬಿಡುಸಿ ತೊಳೆಯಕಾ? 🙁
    ಈಗ ಇಲ್ಲ್ಯಾಣ supermarketಗೊಕ್ಕೆ ಬತ್ತ ಕರಿಬೇವಿನ ಸೊಪ್ಪುಗೊಕ್ಕೆ ಕೂಡಾ endosulphan ಸಿ೦ಪಡುಸುವದು ಮೊನ್ನೆ ಟಿ ವಿ ಲಿ ತೋರಿಸಿತ್ತಿದ್ದವು 🙁 🙁
    ಆನು ಹೆಚ್ಚಿನ ತರಕಾರಿಗಳನ್ನುದೆ ಬೇಯಿಸದ್ದೆ, ಹಸಿ ರೂಪಲ್ಲೇ ತೆಕ್ಕೊ೦ಬದು.. ಹಾ೦ಗೆ ಬೇಯಿಸದ್ದೆ ತಯಾರಿಸಿದ ಆಹಾರ೦ಗಳ (ಉದಾಹರಣೆಗೆ ಚಕ್ಕರ್ಪೆ ಸಳ್ಳಿ/ ಕೊಚ್ಚುಸಳ್ಳಿ, ಮೊಳಕೆ ಬರಿಸಿದ ಹಸರು ಇತ್ಯಾದಿ) ಫ್ರಿಜ್ಜಿಲ್ಲಿ ಮಡುಗಿ ಪುನಃ ಉಪಯೋಗಿಸುವದರ ಮೊದಲು ತೆಕ್ಕೋಳೆಕಾದ ಮು೦ಜಾಗ್ರತೆಗೊ ಎ೦ತೆಲ್ಲಾ?

    1. ನಿಂಗಳ ಪ್ರಶ್ನೆಗೊ ಲಾಯ್ಕಿದ್ದು 🙂 ಆದರೂ ಉತ್ತರ ಕೊಡುವಗ ತಡವಾದ್ದಕ್ಕೆ ಕ್ಷಮಿಸಿ.
      ಸೊಪ್ಪುಗಳ ನಾವು ತುಂಬಾ ದಿನ ಮಡುಗುದು ಕಷ್ಟ, ಅದು ಕೊಳೆತ್ತು ಅಥವಾ ಒಣಗುತ್ತು. ಈ ಸೊಪ್ಪುಗಳ ತಂದ ದಿನವೇ ಅಥವಾ ಒಂದೆರಡು ದಿನದೊಳದಿಕ್ಕೆ ಉಪಯೋಗ್ಸುದು ಒಳ್ಳೆದು. ಕೂಡ್ಲೆ ಉಪಯೋಗ ಮಾಡದ್ದರೆ , ಅದರ ಬೆಶಿನೀರಿಲ್ಲಿ ರಜ್ಜ ಉಪ್ಪು ಹಾಕಿ ತೊಳದು, ಶುಚಿ ಮಾಡಿ ನೀರಿನ ಅಂಶ ತೆಗದು (ಕುಡುಗಿ) ಅಥವಾ ಒಣಾಗಿದ ಬೈರಾಸಿಲ್ಲಿ ಸುಂದಿ ಮಡುಗುಲಕ್ಕು. ಫ್ರಿಜ್ಜಿಲ್ಲಿ ಒಂದು ದಿನದ ಮಟ್ಟಿಂಗೆ ಮಡುಗುಲಕ್ಕು.
      ಇನ್ನು ಕ್ಯಾಬೇಜಿನ ಬಗ್ಗೆ ಹೇಳ್ತರೆ ಅದರಲ್ಲಿಪ್ಪ ರಾಸಾಯನಿಕವ ಪೂರ ತೆಗವದು ಸಾಧ್ಯವೇ ಇಲ್ಲೆ ಹೇಳ್ಲಕ್ಕು :(. ಆದರೂ ಮಾಡ್ಲಕ್ಕಾದ ಕೆಲಸ ಹೇಳಿರೆ ಸುರೂವಿಂಗೆ ಹೆರಾಣ ಎರಡು ಪದರವ ಬಿಡುಸಿ ಇಡ್ಕೆಕು. ಮತ್ತೆ ತೊಳದು, ಕೊರದಾದಮೇಲೆ ಅದರ ಉಪ್ಪು ಹಾಕಿದ ಬೆಶಿನೀರಿಲ್ಲಿ ತೊಳಯಕ್ಕು. ರಜ್ಜ ಅರಶಿನ ಹೊಡಿದೇ ಹಾಕುಲಕ್ಕು. ಇಷ್ಟು ಮಾಡಿರೂ () ಮಾಂತ್ರ ಶುಚಿ ಅಪ್ಪದು 🙁
      ನಿಂಗೊ ತರಕಾರಿಗಳ ಹಸಿಯೇ[ಸಲಾಡ್] ತಿಂಬದು ಹೇಳಿ ಹೇಳಿದ್ದಿ, ಮಾಡಿದ್ದರ ಕೂಡ್ಲೇ ತಿಂದು ಮುಗುಶಿರೆ ಒಳ್ಳೆದು. ಫ್ರಿಜ್ಜಿಲ್ಲಿ ಮಡುಗುದು ಅಷ್ಟು ಒಳ್ಳೆದಲ್ಲ. ನಾವು ಅದರ ಮತ್ತೆ ಬೆಶಿ ಮಾಡ್ತಿಲ್ಲೆ ಅಲ್ಲದಾ. ಮೊಳಕೆ ಬರ್ಸಿದ ಕಾಳುಗಳನ್ನೂ ಅಷ್ಟೇ..ಒಂದು ದಿನಕ್ಕೆ ಎಷ್ಟು ಬೇಕೋ ಅಷ್ಟೇ ಮಾಡೀಗೊಂಡರೆ ಒಳ್ಳೆದು.
      ಧನ್ಯವಾದಂಗೊ 🙂

      1. ಅಷ್ಟು ಮಾಡಿರೂ ಕ್ಯಾಬೇಜು 25% ಮಾಂತ್ರ clean ಅಪ್ಪದು

      2. thank you ಅಕ್ಕಾ..

        ನಿ೦ಗೊ ಹೇಳಿದ್ದದು ಸರಿ, ಫ್ರಿಜ್ಜು ಎಷ್ಟು ಎಡಿಗೋ ಅಷ್ಟು ಕಮ್ಮಿ ಉಪಯೋಗಿಸುವದು ಒಳ್ಳೇದು ಅಲ್ದಾ..? ಸೊಪ್ಪು ತರಕಾರಿ ತ೦ದು, ಅದರ ಬೈರಾಸಿಲ್ಲಿ ಸು೦ದಿ ಎಲ್ಲ ಮಡುಗುವದಕ್ಕಿ೦ತ ಅ೦ಬಗ೦ಬಗಳೇ ಉಪಯೋಗಿಸುವದೇ ಒಳ್ಳೇದು, ಆದರೆ ಕನಿಷ್ಠ ಪಕ್ಷ ೧ ಕ೦ತೆ ಆದರೂ ಸೊಪ್ಪು ಅ೦ಗಡಿ೦ದ ತೆಕ್ಕೋಳೆಕಾವ್ತಲ್ಲದಾ.. ಒಬ್ಬ೦ಗೆ ಅದು ಜಾಸ್ತಿ ಆವ್ತು, ಫ್ರಿಜ್ಜಿಲ್ಲಿ ಮಡುಗದ್ದೆ ನಿವೃತ್ತಿ ಇಲ್ಲೆ..
        ಎನ್ನ ಸ೦ಶಯ೦ಗೊಕ್ಕೆ ಪರಿಹಾರ ಒದಗಿಸಿ ಕೊಟ್ಟದಕ್ಕೆ ಧನ್ಯವಾದ೦ಗೊ..

      3. ಕ್ಯಾಬೇಜ್ ಮತ್ತೆ ಕಾಲಿ ಪ್ಲವರ್ ತಪದನ್ನೇ ಆನು ಬಿಟ್ಟಿದೆ. ಹುಳ ಬಪ್ಪಲೆ ಆಗ ಹೇಳಿ ಅತ್ಯಧಿಕ ಕ್ರಿಮಿನಾಶಕಂಗಳ ಹಾಕುವದರಲ್ಲಿ ಇವೆರಡಕ್ಕೆ ಅಗ್ರ ಸ್ಥಾನ ಆದರೆ ನಂತ್ರದ ಸ್ಥಾನ ಅಳತ್ತೊಂಡೆಗೆ.
        ಇನ್ನೊಂದು ಇತ್ತೀಚೆಗಿನ ಬೆಳವಣಿಗೆ ಹೇಳಿರೆ ಹಣ್ಣುಗೊ ಹಾಳಪ್ಪಲಾಗ ಹೇಳಿ ವೇಕ್ಸ್ ನ ಲೇಪ ಮಾಡುವದು. ಇದು ಆಪಲ್ Oಗೆ ಜಾಸ್ತಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×