Oppanna.com

ಪದ್ಮಾಸನ (the lotus pose)

ಬರದೋರು :   ಸುವರ್ಣಿನೀ ಕೊಣಲೆ    on   01/08/2010    18 ಒಪ್ಪಂಗೊ

ಸುವರ್ಣಿನೀ ಕೊಣಲೆ

ನಿಲ್ಲದ್ದೇ ಸುರಿತ್ತಾ ಇಪ್ಪ ಮಳೆಯ ನೋಡ್ತಾ ಇತ್ತಿದ್ದೆ, ಮನಸ್ಸಿಲ್ಲಿ ಎಂತೆಂತದೋ ಆಲೋಚನೆಗೊ. ಕೇರಳಲ್ಲಿ ಮನೆಯ ಮುಂದೆ ಇಪ್ಪ ಕೆರೆಲಿ ನೋಡಿದ ತಾವರೆ ಹೂಗಿನ ನೆಂಪಾತು !! ಅಪ್ಪು, ಮನಸ್ಸೇ ಹಾಂಗೆ..ಎಲ್ಲಿಂದ ಎಲ್ಲಿಗೋ ಓಡ್ತು. ಆ ಹೂಗು ಅದರ ಚಂದದ ಬಗ್ಗೆ ಮನಸ್ಸಿಲ್ಲಿಯೇ ಲೆಖ್ಖ ಹಾಕುವಗ ಅದಕ್ಕೆ ಸಂಬಂಧಪಟ್ಟ ಒಂದೊಂದೇ ವಿಚಾರಂಗೊ ಮನಸ್ಸಿಲ್ಲಿ ಬಪ್ಪಲೆ ಶುರುವಾತು. ಎಲ್ಲಿಗೇ ಹೋದರೂ ನಾವು ಅಕೇರಿಗೆ ಎತ್ತುದು ನಮ್ಮ ಮನೆಗೇ ಅಲ್ಲದಾ? ಮನಸ್ಸುದೇ ಅಷ್ಟೆ !! ಯೋಗದ ದಿಕ್ಕಿಂಗೆ ತಿರುಗಿತ್ತು. ಕಮಲದ ಹೂಗಿಂಗೂ ಯೋಗಕ್ಕೂ ಸಂಬಂಧವಾ? ಅಪ್ಪು! ನವಗೆಲ್ಲರಿಂಗೂ ಗೊಂತಿಪ್ಪ “ಪದ್ಮಾಸನ”. ಯೋಗಕ್ಕೂ “ಪದ್ಮ”ಕ್ಕೂ ಹತ್ತರಾಣ ಸಂಬಂಧ ಇದ್ದು. ತತ್ವಶಾಸ್ತ್ರಲ್ಲಿಯೂ.. ಆಧ್ಯಾತ್ಮಿಕವಾಗಿಯೂ  ತುಂಬಾ ಲಾಯ್ಕ ವಿವರಣೆ ಇದ್ದು :). ನಾವೀಗ ಈ ಆಸನದ ಬಗ್ಗೆ ರಜ್ಜ ವಿವರವಾಗಿ ಮಾತಾಡುವ, ಆಗದಾ?
ನವಗೆಲ್ಲರಿಂಗೂ ಪದ್ಮಾಸನ ಗೊಂತಿಪ್ಪದೇ. ಪದ್ಮ ಹೇಳಿರೆ ಕಮಲದ ಹೂಗು, ಆಸನ ಹೇಳಿರೆ ಯಾವುದೇ ಒಂದು ಸ್ಥಿತಿಲಿ ಹೆಚ್ಚು ಹೊತ್ತು ಆರಾಮವಾಗಿ ಇಪ್ಪದು. ಈ ಆಸನಕ್ಕೆ ಈ ಹೆಸರು ಎಂತಗೆ ಬಂತು? ನಿಂಗೊ ಈ ಆಸನವ ಸರಿಯಾಗಿ ಗಮನಿಸಿರೆ, ಇಲ್ಲಿ ಎರಡೂ ಮಡುಸಿದ ಕಾಲುಗೊ ಕಮಲದ ದಳಂಗಳ ಹಾಂಗೆ ಕಾಣ್ತು, ಅಥವಾ ಪ್ರತಿನಿಧಿಸುತ್ತು, ಅದಕ್ಕೇ ಈ ಹೆಸರು. ಕೇವಲ ಈ ಒಂದು ಕಾರಣ ಮಾಂತ್ರ ಅಲ್ಲ, ಇಲ್ಲಿ ನಮ್ಮ ಶರೀರವುದೇ ಪದ್ಮದ ಹಾಂಗೇ ಇರ್ತು. ಯೋಗದ ಪ್ರತಿಯೊಂದು ಆಸನವುದೇ ಅಷ್ಟೇ ಪ್ರಕೃತಿಲಿ ಇಪ್ಪ ಜೀವಿಗಳ, ಇತರ ವಸ್ತುಗಳ ಹೋಲಿಕೆ ಇರ್ತು. ಅದಕ್ಕೆ ತಕ್ಕ ಹಾಂಗೇ ಹೆಸರುಗೊ :). ಹ್ಞಾ… ಆಸನದ ಹೆಸರು ತಿಳ್ಕೊಂಡಾತು, ಮಾಡುದು ಹೇಂಗೆ ಹೇಳೀ ತಿಳ್ಕೊಳ್ಳೆಡದಾ? [ಆದರೆ..ಇಲ್ಲಿ ಬರದ ಮಾಹಿತಿಯ ಮಾಂತ್ರ ನೋಡಿ ಅಭ್ಯಾಸವ ಮಾಡೆಡಿ,ಗೊಂತಿಪ್ಪೋರ ಹತ್ತರೆ ಕಲ್ತು ಮಾಡಿ]
ಅಭ್ಯಾಸ ಕ್ರಮ:
ಸ್ಥಿತಿ:
ಯಾವುದೇ ಆಸನ ಶುರು ಮಾಡುವನ್ನ ಮೊದಲು ನಾವು ಒಂದು ಭಂಗಿಲಿ ಇರೆಕ್ಕು, ಕೂದುಗೊಂಡು ಮಾಡುವ ಆಸನ “ಪದ್ಮಾಸನ” ಹಾಂಗಾಗಿ ಇಲ್ಲಿ “ಸ್ಥಿತಿ” ಹೇಳೀರೆ ಕಾಲು ನೀಡಿ ಸರ್ತ ಕೂಬದು. ಎರಡೂ ಕೈಗಳುದೇ ತೊಡೆಯ ಮೇಲೆ ಮಡುಗಿರೆಕ್ಕು. ಬೆನ್ನು ಸರ್ತ ಇರೆಕ್ಕು. ಕಣ್ಣಿನ ದೃಷ್ಟಿ ನೇರ ಇರೆಕ್ಕು.
ಅಭ್ಯಾಸ:

  • ದೀರ್ಘ ಉಸಿರಿನ ಒಳ ತೆಕ್ಕೊಳ್ಳೆಕು, ಮತ್ತೆ ಉಸಿರು ಬಿಡ್ತಾ, ಬಲದ ಕಾಲಿನ ಕೈಲಿ ಹಿಡ್ಕೊಂಡು ನಿಧಾನಕ್ಕೆ ಮಡಸಿ ಬಲದ ಪಾದವ ಎಡದ ತೊಡೆಯ ಮೇಲೆ ಮಡುಗೆಕ್ಕು, ಶರೀರಕ್ಕೆ ಹತ್ತರೆ.
  • ಮತ್ತೆ  ಉಸಿರಿನ ಒಳ ತೆಕ್ಕೊಂಡು ಉಸಿರು ಬಿಡ್ತಾ,  ಎಡದ ಕಾಲಿನ ಕೈಲಿ ಹಿಡ್ಕೊಂಡು ಮಡಸಿ ಬಲದ ತೊಡೆಯ ಮೇಲೆ ಶರೀರಕ್ಕೆ ಹತ್ತರೆ ಮಡುಗೆಕ್ಕು.
  • ಎರಡೂ ಅಂಗಾಲುಗಳುದೇ ಮೇಲ್ಮುಖವಾಗಿರೆಕ್ಕು. ಹಿಮ್ಮಡಿಗೊಕೆಳ ಹೊಟ್ಟೆಗೆ ತಾಗಿಯೊಂಡಿರೆಕ್ಕು.
  • ಎರಡೂ ತೊಡೆಗೊ, ಮೊಳಪ್ಪುದೇ ನೆಲಕ್ಕೆ ತಾಗಿಯೊಂಡಿರೆಕ್ಕು.
  • ಕೈಗಳ ಯಾವುದೇ ಮುದ್ರೆಲಿ ತೊಡೆಗಳ ಮೇಲೆ ಮಡಿಕ್ಕೊಳ್ಳೆಕ್ಕು.
  • ಬೆನ್ನು,ಕೊರಳು ಸರ್ತ ಇರೆಕ್ಕು.
  • ಕಣ್ಣು ಮುಚ್ಚಿ ಇರೆಕ್ಕು, [ಇಲ್ಲದ್ರೆ ನಾಸಿಕಾಗ್ರ ಅಥವಾ ಶಾಂಭವೀ ಮುದ್ರೆಲಿ ಇಪ್ಪಲಕ್ಕು].
  • ಇದು “ಆಸನ ಸ್ಥಿತಿ”.
  • ಆಸನವ ಬಿಡುಸುವಗ ನಿಧಾನಕ್ಕೆ ಒಂದೊಂದೇ ಕಾಲಿನ ಬಿಡುಸಿ ಸರ್ತ ಮಡಗಿ, ಸ್ಥಿತಿಗೆ ಬರೆಕ್ಕು. ಮತ್ತೆ ನಿಧಾನಕ್ಕೆ ಕಾಲುಗಳ ಹನ್ಸುಲಕ್ಕು.
  • ಇದಿಷ್ಟನ್ನೂ ಯಾವುದೇ ಗಡಿಬಿಡಿ ಇಲ್ಲದ್ದೆ, ನಿಧಾನಕ್ಕೆ ಉಸಿರಾಟದೊಟ್ಟಿಂಗೆ ಮಾಡೆಕ್ಕು.


ಮುಂಜಾಗೃತೆ ವಹಿಸೆಕ್ಕಾದ ಅಂಶಂಗೊ:
ಮೊಳಪ್ಪಿನ ಸಂಧಿವಾತ ಇಪ್ಪವ್ವು,
ಕಾಲಿನ ಮಣಿಗಂಟಿನ ತೊಂದರೆ ಇಪ್ಪವ್ವು,
ಅಥವಾ ಕಾಲಿನ ಯಾವುದೇ ಗಂಟಿನ ಬೇನೆ ಇಪ್ಪವು ಜಾಗೃತೆ ವಹಿಸೆಕ್ಕು, ಮಾಡದ್ದೇ ಇದ್ದರೆ ಒಳ್ಳೆದು.
ಪ್ರಯೋಜನಂಗೊ:

  • ಹಠಯೋಗ ಪ್ರದೀಪಿಕೆಲಿ, ಶಿವ ಸಂಹಿತೆಲಿಯುದೇ ಹೇಳಿದ್ದವು “ಪದ್ಮಾಸನವ ಅಭ್ಯಾಸ ಮಾಡುವ ವ್ಯಕ್ತಿಗೆ ಯಾವುದೇ ರೋಗ ಬಾಧೆ ಇರ್ತಿಲ್ಲೆ, ಪದ್ಮಾಸನ ಸರ್ವರೋಗಹರ” ಆದರೆ..
    ಅದರೊಟ್ಟಿಂಗೆ ಹೀಂಗುದೇ ಹೇಳ್ತವು “ಪದ್ಮಾಸನವ ಅಭ್ಯಾಸ ಮಾಡುದು ಎಲ್ಲೋರಿಂದಲೂ ಸಾಧ್ಯ ಇಲ್ಲೆ, ಇಡೀ ಪ್ರಪಂಚಲ್ಲಿ ಕೇವಲ ಕೆಲವೇ ಕೆಲವು ಜೆನ ಜ್ಞಾನಿಗೊಕ್ಕೆ ಮಾಂತ್ರ ಇದು ಸಿದ್ಧಿಸುದು”
  • ಹಾಂಗಾರೆ ನಾವೆಲ್ಲ ಅಭ್ಯಾಸ ಮಾಡುದು ತಪ್ಪಾ? ಖಂಡಿತಾ ಅಲ್ಲ. ಆದರೆ ಒಂದು ಆಸನಲ್ಲಿ ನಾವು ಕಮ್ಮಿಲಿ ಮೂರು ಘಂಟೆಗಳ ಕಾಲ ಯಾವುದೇ ತೊಂದರೆ ಇಲ್ಲದ್ದೆ ಇಪ್ಪಲೆ ಎಡಿತ್ತರೆ ಮಾಂತ್ರ ನಾವು ಅದರ್ಲಿ ಪರಿಪೂರ್ಣ ಹೇಳಿ ಹೇಳ್ಲಕ್ಕು, ಹಾಂಗಿಪ್ಪಗ ನಾವು ಮಾಡುವ ಪ್ರತಿಯೊಂದೂ ಅಸನಂಗಳುದೇ ನಮ್ಮ ಸಣ್ಣ ಪ್ರಯತ್ನಂಗೊ. ಆದರೆ ಅದರ ಪ್ರಯೋಜನಂಗೊ ಸಣ್ಣದಲ್ಲ!
  • ಈ ಆಸನವ ನಾವು ಧ್ಯಾನ, ಪ್ರಾಣಾಯಾಮ, ಪೂಜೆ, ಸಂಧ್ಯಾವಂದನೆ ಮಾಡುವ ಸಂದರ್ಭಲ್ಲಿ ಮಾಡ್ಲಕ್ಕು. ನಾವು ಅಧ್ಯಯನ ಮಾಡುವಗಲೂ ಮಾಡಿರೆ ತುಂಬಾ ಒಳ್ಳೆದು.
  • ಈ ಆಸನಲ್ಲಿ ಕೂದರೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತು. ಶರೀರಲ್ಲಿ ಸಂಚರಿಸುವ ಪ್ರಾಣ, ಮನಸ್ಸುಗಳ ಸಮಸ್ಥಿತಿಗೆ ತಪ್ಪಲೆ ಉಪಕಾರ ಆವ್ತು.
    ಒಂದರಿ ನವಗೆ ಈ ಆಸನಲ್ಲಿ ತುಂಬಾ ಹೊತ್ತು ಕೂಬದು ಅಭ್ಯಾಸ ಆದಮೇಲೆ ಯಾವುದೇ ತೊಂದರೆ ಇಲ್ಲೆನ್ನೆ? ಹಾಂಗಾಗಿ ಎಲ್ಲಾ ಸಂದರ್ಭಲ್ಲಿಯುದೇ ಕೂಬಲಕ್ಕು.
  • ನಾವು ಈ ಆಸನಲ್ಲಿ ಕೂದಪ್ಪಗ ನಮ್ಮ ಕಾಲಿನ ಎಲ್ಲಾ ಗಂಟುಗಳ ಮೇಲೆ ಪ್ರಭಾವ ಬೀರುತ್ತು. ಹಾಂಗಾಗಿ ಗಂಟುಗಳ ಚಲನೆಲಿ ಇಪ್ಪ ಮಿತಿ(restricted movements) ಕಮ್ಮಿ ಆವ್ತು, ಗಂಟುಗಳ ಚಲನೆ ಸುಲಭ ಆವ್ತು.
  • ಮಲಬದ್ಧತೆ ನಿವಾರ್ಸುಲೆ,ಜೀರ್ಣಕ್ರಿಯೆಲಿಯುದೇ ಉಪಕಾರ ಆವ್ತು.
  • ಹೆಮ್ಮಕ್ಕೊ ಈ ಅಭ್ಯಾಸವ ಮಾಡುದರಿಂದ ಗರ್ಭಕೋಶದ ಸುತ್ತ ಇಪ್ಪ ಸ್ನಾಯುಗೊ,ಕಿಬ್ಬೊಟ್ಟೆಯ ಸ್ನಾಯುಗೊ ಮತ್ತೆ ಅಲ್ಲಿ ಇಪ್ಪ ಅಸ್ಥಿರಜ್ಜು(ligaments)ಗಳ  ಬಿರುಸುತನ(rigidity) ಕಮ್ಮಿ ಆಗಿ ಅವುಗಳ flexibility ಹೆಚ್ಚವ್ತು,ಅಲ್ಲದ್ದೆ ಅವುಗಳ ಶಕ್ತಿಯೂ ಹೆಚ್ಚುತ್ತು. ಇದು ಹೆರಿಗೆಯ ಸಂದರ್ಭಲ್ಲಿ ಉಪಕಾರ ಆವ್ತು. ಹೆರಿಗೆ ಸುಲಭ ಆವ್ತು (ಬೇರೆ ಎಲ್ಲಾ ರೀತಿಂದಲೂ ತೊಂದರೆ ಇಲ್ಲದ್ದರೆ).
  • ಅಂಡಾಶಯಂಗಳ ಮೇಲೆದೇ ಪರಿಣಾಮ ಆವ್ತು, ಇದರಿಂದ ಮುಟ್ಟಿನ ತೊಂದರೆಗೊ, ಹಾರ್ಮೋನಿನ ಸಮಸ್ಯೆಗೊ, PCOS(poly cystic ovarian syndrome)ಹೀಂಗಿದ್ದ ಸಮಸ್ಯೆಗೊಕ್ಕೆ ಉಪಕಾರ ಆವ್ತು.

ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶಯ ಇದ್ದರೆ ಖಂಡಿತಾ ಕೇಳಿ 🙂 …
ಆನು ಈಗ ಸಧ್ಯಕ್ಕೆ…ಎನ್ನ ಮಳೆಯ ನೆನಪುಗಳೊಟ್ಟಿಂಗೆ ರಜ್ಜ ಸಮಯ ಕಳುದಿಕ್ಕಿ ಬತ್ತೆ……..
ನಿಂಗಳೂ ಅನುಭವಿಸಿ..ಮಳೆಯ ಚೆಂದವ…ತಾವರೆಯ ಸೌಂದರ್ಯವ…ಪದ್ಮಾಸನದ ಉಪಯೋಗಂಗಳ 🙂

18 thoughts on “ಪದ್ಮಾಸನ (the lotus pose)

  1. ಸಾಮಾನ್ಯವಾಗಿ ಪ್ರಾಣಾಯಾಮ ಮಾಡುವಾಗ ನಾವು ಜೆಪಲ್ಲಿ ಹೇಳುವ ಮಂತ್ರಂಗೋ ಉಪಯೋಗ ಮಾಡ್ತವು. ಸೂರ್ಯ ನಮಸ್ಕಾರಲ್ಲಿ ಇಪ್ಪ ಹಾಂಗೆ ಯೋಗಾಸನಲ್ಲಿ ಪ್ರತಿಯೊಂದು ಆಸನಕ್ಕು ಒಂದೊಂದು ಮಂತ್ರಂಗೋ ಇದ್ದು ಹೇಳಿ ಆರೋ ಹೇಳಿದ ಹಾಂಗೆ ನೆಂಪು ? ಎನಗೆ ಇದರ ಬಗ್ಗೆ ಕುತೂಹಲ ಇದ್ದು .ಈ ವಿಷಯದ ಬಗ್ಗೆ ತಿಳಿಶಿರೆ ಒಳ್ಳೆದಿತ್ತು .

    1. ಎನಗೆ ಗೊಂತಿಪ್ಪ ಹಾಂಗೆ ಮಂತ್ರಂಗೊ ಇಲ್ಲೆ. ಆದರೆ ಪ್ರತಿಯೊಂದೂ ಆಸನಂಗಳನ್ನೂ ವಿವರ್ಸುವ ಶ್ಲೋಕಂಗ ಇದ್ದು.

  2. ಅಬ್ಬ!
    ಈ ಸುವರ್ಣಿನಿಅಕ್ಕ° ಹೇಳಿದಾಂಗೆ ಕಾಲು ಮಡುಸಿ ಪದ್ಮಾಸನ ಹಾಕಿದ್ದು.!
    ಕೆಳನೆಲಕ್ಕಲ್ಲಿ ಕೂದವಂಗೆ ಕಾಲುಮಡಿಕ್ಕೆಯ ಬಿಡುಸಲೆ ಎಡಿಯದ್ದೆ ಕೂದಲ್ಲೆ ಬಾಕಿ –
    – ಹಾಂಗೆ ಈ ಒಪ್ಪ ಬರವಲೆ ಬಪ್ಪಗ ತಡವಾತು!!

    1. ಮತ್ತೆ ಕಾಲಿನ ಆರು ಬಿಡುಸಿದವು ಅಳಿಯಾ ?

      1. ಆರುದೇ ಬಯಿಂದವಿಲ್ಲೆ ಮಾವ°.. 🙁
        ಆನು ಮತ್ತೆ ಅಲ್ಲಿಂದಲೇ ವಜ್ರಾಸನ ಹಾಕಿದೆ, ಮೆಲ್ಲಂಗೆ ಮಡಿಕ್ಕೆ ಬಿಟ್ಟತ್ತು!! 😉

    2. ನೆಗೆಗಾರ ಭಾವ, ದೊಡ್ಡೋರು ಹೇಳಿದ ಹಾಂಗೆ ಕೇಳಿದರೆ ಈ ತೊಂದರೆ ಆವುತ್ತಿತಿಲ್ಲೆ. ಸು ಅಕ್ಕ ಹೇಳಿದ್ದಲ್ಲದಾ, ಯೋಗ ಟೀಚರ್ ಹತ್ರವೇ ಕಲಿಯಕ್ಕು ಹೇಳಿ…. ಇದರ ನೋಡಿ ಮಾಡೆಡಿ ಹೇಳಿ. 🙂

  3. ಉತ್ತಮ ಮಾಹಿತಿ. ಧನ್ಯವಾದಂಗೊ.
    ಇದರ ಓದಿ ಸುಮಾರು ಜೆನ ಕೈ ಕಾಲು ಕುತ್ತ ಮಾಡುದರ ಗ್ರೆಶುವಾಗಲೇ ನೆಗೆ ತಡವಲೆ ಎಡಿತ್ಟಿಲ್ಲೆ.

    1. ನಿಂಗೊ ಕೂಡಾ ಶುರು ಮಾಡಿದ್ದಿ ಅಡಾ. ಪೆರ್ಲದಣ್ಣ ಹೇಳಿದ.. ಬೈಲಿಂಗೆ ಸುದ್ದಿ ಹುಡುಕುಲೆ ಹೋಪಗ ನೋಡಿದ್ದಡಾ ಅವ°

  4. ದಾಗುತ್ರಕ್ಕಾ.. ತುಂಬಾ ಧನ್ಯವಾದನ್ಗೋ.
    ಇಂದು ಉದಿಯಪ್ಪಗ ಪ್ರಯತ್ನ ಮಾಡಿದೆ. ಉಸುಲು ಒಳ ತೆಕ್ಕೊಮ್ಬೊದು ಬಿಡೊದು ಎಲ್ಲಾ ಸರಿಗಟ್ತಾಯಿದು. ಎಡದ ಕಾಲು ಮಡಿಸಿದ್ದದು ಬಲದ ತೊಡೆ ಮೇಲೆ ಮಡುಗುಲೆ ಎಡಿಗಾಯಿದಿಲ್ಲೇ..ಕರೆಲಿ ಮಗ ಇತ್ತಿದ್ದ. ಅವನ ಕಾಲ ಮೇಲೆ ಮಡುಗಿ ನಿಮ್ರತ್ತಿ ಮಾಡಿದೆ !!.

      1. ಮತ್ತಾಣ ಕತೆ ಕೇಳೆಡಿ ಅಕ್ಕೋ.. ಇಂದು ಉದಿಯಪ್ಪಗ ಕಾಲು ಆನು ಹೇಳಿದ ಹಾಂಗೆ ಕೇಳುತ್ತು . ಪದ್ಮಾಸನ ಸರಿ ಆತು,ಇನ್ನು ಯಾವ ಆಸನ??

        1. ಈ ವಾರ ಬರವಲೆ ಎಡಿಗಾಯ್ದಿಲ್ಲೆ 🙁 ಎಲ್ಲೋರೂ ಕ್ಷಮಿಸೆಕ್ಕು. ಇನ್ನಾಣವಾರ ಇನ್ನೊಂದು ಆಸನದ ಬಗ್ಗೆ ಬರೆತ್ತೆ, ಆದರೆ ಮನೆಲಿ ಅಭ್ಯಾಸ ಮಾಡ್ಲೆ ಪ್ರಯತ್ನ ಮಾಡಿ ಅನರ್ಥ ಮಾಡಿಗೊಳ್ಳೆಡಿ !!

  5. ಪದ್ಮಾಸನದ ಕ್ರಮ. ಸಾಧಕ, ಬಾಧಕ, ಒಟ್ಟಿಂಗೆ ವಿವರವಾದ ಲೇಖನ. ಧನ್ಯವಾದಂಗೊ

    1. ನಿಂಗೊಗೆಲ್ಲೋರಿಂಗೂ ಧನ್ಯವಾದಂಗೊ 🙂 ಬೈಲಿಲ್ಲಿ ಇಪ್ಪೋರಿಂಗೆ ಪ್ರಯೋಜನ ಆವ್ತಾ ಇದ್ದಲ್ಲದಾ..ಅದೇ ಸಂತೋಷ 🙂

  6. ತುಂಬಾ ಒಳ್ಳೆಯ ರೀತಿಯಲ್ಲಿ ವಿವರಿಸಿದ್ದೀರಿ.
    ಈ ವಿವರಣೆಯನ್ನು ಓದಿ ಯೋಗಾಸನ ಮಾಡಿಯೇ ಬಿಡೋಣ ಅನ್ನಿಸುತ್ತೆ. ಆದರೆ ಅಭ್ಯಾಸವಿಲ್ಲದ ಕಾರಣ ಮಾಡಲು ಕಷ್ಟವಾಗಬಹುದೇನೋ ಎಂದು ಅಂದುಕೊಂಡು ಮಾಡಲು ಪ್ರಯತ್ನಿಸುವುದಿಲ್ಲ. ಆದರೆ ನಿಮ್ಮ ವಿವರಣೆ ಹಾಗೂ ಈ ಆಸನದಿಂದ ಆಗುವ ಉಪಯೋಗವನ್ನು ಓದಿ ಅಭ್ಯಾಸ ಮಾಡಬೇಕು ಅನ್ನಿಸುತ್ತೆ.
    @[ಆದರೆ..ಇಲ್ಲಿ ಬರದ ಮಾಹಿತಿಯ ಮಾಂತ್ರ ನೋಡಿ ಅಭ್ಯಾಸವ ಮಾಡೆಡಿ,ಗೊಂತಿಪ್ಪೋರ ಹತ್ತರೆ ಕಲ್ತು ಮಾಡಿ]—- ಈ ಆಸನವನ್ನು ಮಾಡಲು ಶರೀರದ ಪ್ರಾಥಮಿಕ ಸಿದ್ಧತೆಯ ಬಗ್ಗೆ ವಿವರಣೆ ನೀಡಿದ್ದರೆ, ಆಸನವನ್ನು ನಿಧಾನವಾಗಿ ಪ್ರಾರಂಭ ಮಾಡಬಹುದಿತ್ತು. ತಿಳಿದಿರುವವರು ಅಥವಾ ಯೋಗಾಸನ ಗೊತ್ತಿರುವವರು ಎಲ್ಲರಿಗೂ ಸಿಗುವುದಿಲ್ಲ. ಹಾಗಾಗಿ ಒಂದು ಆಸನದ ಪರಿಪೂರ್ಣ ಸ್ಥಿತಿಯಲ್ಲದಿದ್ದರೂ ಆ ಸ್ಥಿತಿಯತ್ತ ಪ್ರಯತ್ನಗಳನ್ನು ಮಾಡುವ ಸಲಹೆಗಳನ್ನು ಕೊಟ್ಟರೆ ಎಲ್ಲರೂ ಪ್ರಯತ್ನಿಸಬಹುದೇನೋ.
    ಹಾಗೆಯೇ ಪ್ರಾರಂಭದಲ್ಲಿ ಸರಳವಾದ ಆಸನಗಳನ್ನು ತಿಳಿಸಿದರೆ, ನಾವೂ ಮಾಡಬಹುದೆಂದು ವಿಶ್ವಾಸ ಬರಬಹುದಲ್ಲವೇ? ನಿಮ್ಮ ವಿವರಣೆ ಓದಿ ಮಾಡದೆ ಇರಲು ಆಗುವುದಿಲ್ಲ. ಹಾಗಾಗಿ ಮುಂದಿನ ವಾರ ಸರಳವಾದ ಆಸನದ ಬಗ್ಗೆ ವಿವರಣೆಯನ್ನು ಅಪೇಕ್ಷಿಸುತ್ತೇವೆ.

    1. ಧನ್ಯವಾದಂಗೊ, ಆಸನವ ಮಾಡುವ ಪ್ರಾಥಮಿಕ ಸಿದ್ಧತೆಗಳ ಬಗ್ಗೆ ಕಳುದವಾರದ ಲೇಖನಲ್ಲಿ ಬರದ್ದೆ. ಇನ್ನು ಪದ್ಮಾಸನವ ಯಾವಾಗಲೂ (ಓದುವಗ, ಬರವಗ,ಧ್ಯಾನ ಮಾಡುವಗ,ಪ್ರಾಣಾಯಾಮ ಮಾಡುವಗ ಇತ್ಯಾದಿ ಸಂದರ್ಭಲ್ಲಿ)ಮಾಡ್ಲಕ್ಕು.
      ಮಾಡೆಕು ಹೇಳಿ ಆಶೆ ಅಪ್ಪದಪ್ಪು, ಆದರೆ ಇದರ ನೋಡಿಯೇ ಮಾಡುದು ತಪ್ಪು. ಲೇಖನವ ಓದಿ, video/photo ನೋಡಿ ನಿಂಗೊ ಯಾವುದೇ ಅಭ್ಯಾಸವ ಪ್ರಯತ್ನ ಮಾಡಿರೆ, ನಿಂಗೊ ಅಭ್ಯಾಸ ಮಾಡುವಗ ಏನಾರೂ ತಪ್ಪಾದರೆ? ಸರಿ ಮಾಡುಲೆ ಆರಾರೂ ಬೇಡದಾ? ಆನು ಅಲ್ಲಿ ಇರ್ತಿಲ್ಲೆನ್ನೆ. ಯೋಗಾಭ್ಯಾಸಂಗಳಿಂದ ಪ್ರಯೋಜನಂಗೊ ಬೆಕಾಷ್ಟು ಇದ್ದು, ಸರಿಯಾದ ರೀತಿಲಿ ಅಭ್ಯಾಸ ಮಾಡಿರೆ. ಅದೇ ಅಭ್ಯಾಸದ ಕ್ರಮಲ್ಲಿ ತಪ್ಪಾದರೆ ಋಣಾತ್ಮಕ ಪ್ರಭಾವಂಗೊ ಆವ್ತು. ಅದರಿಂದ ನಿಂಗೊಗೇ ತೊಂದರೆ ಅಲ್ಲದಾ? ಹಾಂಗಾಗಿ ತಿಳುದೋರ ಸಮ್ಮುಖಲ್ಲಿಯೇ ಕಲಿಯಕ್ಕು ಹೇಳುದು :). ಮತ್ತೊಂದು ಕಾರಣ ಎಂತರ ಹೇಳಿರೆ, ಅಕಸ್ಮಾತ್ ಎಂತಾರು ಹೆಚ್ಚು ಕಮ್ಮಿ ಆದರೆ ಅದಕ್ಕೆ ಆನು ಜವಾಬ್ದಾರಿ ಆವ್ತೆ!
      ನಿಂಗಳ ಸಮಸ್ಯೆ ಅರ್ಥ ಆತು, ಕಲುಶುವವ್ವು ಆರುದೇ ಇಲ್ಲೆ ಹೇಳಿ, ನಿಂಗೊಗೆ ಸಮಯ ಇಪ್ಪಗ ಯಾವುದಾದರೂ ಆರೋಗ್ಯಧಾಮಕ್ಕೆ,ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರಕ್ಕೆ ಹೋಗಿ ಒಂದು ವಾರ ಅಥವಾ ಹತ್ತು ದಿನ ಇದ್ದು ನಿಂಗೊಗೆ ಅಗತ್ಯ ಇಪ್ಪ ಯೋಗಾಭ್ಯಾಸಂಗಳ ಕಲಿವಲಕ್ಕು. ಇದರ ಬಗ್ಗೆ ಮಾಹಿತಿ ಬೇಕಾರೆ ಎನಗೆ email ಮಾಡಿ 🙂

      1. ಹೌದು, ನಿಮ್ಮ ಮಾತು ಸತ್ಯ. ಧನ್ಯವಾದಗಳು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×