Oppanna.com

ಷಡ್ರಸ ಭೋಜನ…

ಬರದೋರು :   ಡಾಗುಟ್ರಕ್ಕ°    on   16/10/2010    19 ಒಪ್ಪಂಗೊ

ಡಾಗುಟ್ರಕ್ಕ°

ಬೈಲಿನ ಎಲ್ಲರತ್ರೂ ಇಷ್ಟು ದಿನ ಬಾರದ್ದದಕ್ಕೆ ಕ್ಷಮೆ ಕೇಳ್ತೆ..
ಬರೆಕ್ಕು ಹೇಳಿ ತುಂಬಾ ಆಸೆ ಇತ್ತು, ಆದರೆ ಬೈಲಿಂಗೆ ಬಪ್ಪ ಸಂಕ ಹಾಳಾಗಿತ್ತು 🙁 ಈಗ ರಿಪೇರಿ ಆತು..

ಬಂದು ನೋಡಿದ ಕೂಡ್ಲೆ ಎಲ್ಲರೂ ಮದುವೆಗೆ ಹೋಪ ತಯಾರಿ ಮಡ್ತಾ ಇದ್ದವು, ಅಲ್ಲಿ ಎಂತರ ಎಲ್ಲಾ ತಿಂಬಲಕ್ಕು ಹೇಳಿ ಕೆಲವರು ಲೆಕ್ಕ ಹಾಕಿಗೊಂಡಿಕ್ಕು..
ನೆರೆಕರೆಗೆ ಹೋಗಿ ಇಣ್ಕಿ ನೋಡಿದರೆ ಅಲ್ಲಿದೇ ಅದೇ ಸುದ್ದಿ.. ಅದರೊಟ್ಟಿಂಗೆ ಬ್ರಾಹ್ಮಣರು ಭೋಜನ ಪ್ರಿಯರಾ ಹೇಳಿ ಜಿಜ್ಞಾಸೆ ಬೇರೆ… 🙂
ಅಂಬಗ ಮದುವೆ ಊಟ ಉಂಬ ಮೊದಲು ನಮ್ಮ ಊಟದ ಬಗ್ಗೆ ರಜ ತಿಳ್ಕೊಂಬ..

ಬ್ರಾಹ್ಮಣರ ಊಟಲ್ಲಿ ಸುಮಾರು ನಮೂನೆಯ ಬಗೆಗೊ ಇರ್ತು. ಎಂತಕೆ?
ಬ್ರಾಹ್ಮಣರು ಭೋಜನ ಪ್ರಿಯರು ಹೇಳ್ತವು, ಅಪ್ಪಾ? 😉
ಎಂತಕೆ ನಮ್ಮ ಹಿರಿಯರು ಇದೇ ರೀತಿಲಿ ಊಟ ಮಾಡುವ ಕ್ರಮ ಹೇಳಿ ಹೇಳಿದ್ದು?
ಆಯುರ್ವೇದ ಎಂತ ಹೇಳ್ತು ಈ ಬಗ್ಗೆ?ರಜಾ ಈ ಬಗ್ಗೆ ನೋಡುವ..ಆಗದೋ?

ಬಾಳೆಎಲೆ ಊಟ, ನಾಳ್ತು ಮದುವೆಲಿ ಹೀಂಗಿಕ್ಕಾ???

ಆಯುರ್ವೇದಲ್ಲಿ ಆಹಾರಲ್ಲಿ ಬಪ್ಪ ರಸಂಗಳ(ರುಚಿಗಳ) ೬ ರೀತಿಯಾಗಿ ವಿಭಾಗ ಮಾಡಿದ್ದವು ಇದನ್ನೇ ಷಡ್ರಸ (ಷಟ್=ಆರು,ರಸ=ರುಚಿ) ಹೇಳುದು..

रसाःस्वाद्वम्ललवणतिक्तॊषणकषायकाः

ಆಚಾರ್ಯರ ಪ್ರಕಾರ ಷಡ್ರಸ ಹೇಳಿದರೆ- ಸ್ವಾದು(ಸೀವು), ಅಮ್ಲ(ಹುಳಿ), ಲವಣ(ಉಪ್ಪು), ತಿಕ್ತ(ಕೈಕ್ಕೆ), ಉಷ್ಣ/ಕಟು(ಖಾರ), ಕಷಾಯ(ಒಗರು)..
ನಾವು ದಿನಾಗುಳೂ ತೆಕ್ಕೊಂಬ ಆಹಾರಲ್ಲಿ ಈ ಎಲ್ಲಾ ರಸಂಗಳೂ ಇರೆಕ್ಕು, ಯಾವುದೂ ಅತಿ ಅಪ್ಪಲಾಗ ಹಾಂಗೇ ಯಾವುದೂ ಕಮ್ಮಿ ಅಪ್ಪಲಾಗ..

ಹಾಂಗಾರೆ ಈ ರಸಂಗಳ ಗುಣ-ಲಕ್ಷಣಂಗಳ, ಅತಿಯಾದರೆ ಅಪ್ಪ ತೊಂದರೆಗೊ, ನಮ್ಮ ಊಟದ ಕ್ರಮ ಎಂತಕೆ ಪರಿಪೂರ್ಣ – ಹೇಳಿ ನೋಡುವ..

೧)ಮಧುರ ರಸ—

ನಾವು ಹುಟ್ಟಿದ ಕೂಡ್ಲೆ ಅಮ್ಮನ ಎದೆ ಹಾಲಿನ ಮೂಲಕ ಬಾಯಿಗೆ ಸುರುವಿಂಗೆ ಸಿಕ್ಕುವ ರಸವೇ ಮಧುರ ರಸ..
ಹಾಂಗಾಗಿ ಮಧುರ ರಸ ಹೇಳ್ತದು ಸುರುವಿಂದಲೇ ನಮ್ಮ ದೇಹಕ್ಕೆ ಒಗ್ಗಿ ಹೋಪ ರಸ..

ಹಾಂಗಾಗಿ ಇದು ನಮ್ಮ ದೇಹದ ಧಾತುಗಳಾದ ರಸ, ರಕ್ತ, ಮಾಂಸ, ಮೇದಸ್, ಅಸ್ಥಿ, ಮಜ್ಜಾ, ಶುಕ್ರ – ಇವುಗಳ ವೃದ್ದಿಗೆ ಅಗತ್ಯ.
ಇದರೊಟ್ಟಿಂಗೆ ಆಯುಷ್ಯಕಾರಕ, ಷಡಿಂದ್ರಿಯಂಗಳ(ಪಂಚ ಜ್ಞಾನೇಂದ್ರಿಯ+ಮನಸ್ಸು) ಪ್ರಸನ್ನ ಮಾಡ್ತು, ಬಲ-ವರ್ಣ ವೃದ್ದಿ ಮಾಡ್ತು, ಪಿತ್ತ-ವಿಷ-ವಾತ-ತೃಷೆ(ಆಸರು)-ದಾಹ(ಉರಿ) ಕಮ್ಮಿ ಮಾಡ್ತು, ಚರ್ಮ-ಕೇಶಕ್ಕೆ ಹಿತ, ಗಂಟಲಿನ ತೊಂದರೆ ಕಮ್ಮಿ ಮಾಡ್ತು, ಶರೀರವ ಪೋಷಣೆ ಮಾಡಿ ಜೀವನ ಕೊಡ್ತು, ತೃಪ್ತಿ ಕೊಡ್ತು, ಬೃಂಹಣ(ಶರೀರವ ಸ್ಥೂಲ ಮಾಡ್ತು), ಶರೀರಕ್ಕೆ ಸ್ಥಿರತೆ ಕೊಡ್ತು, ಕ್ಷೀಣತೆಯ ನಾಶ ಮಾಡ್ತು, ಗಾಯಂಗಳ ವಾಸಿ ಮಾಡ್ತು, ಸಂಧಾನಕಾರಕ(ಮೂಳೆ ಮುರುದರೆ ಕೂಡ್ಲೆ ಸಹಾಯ ಮಾಡ್ತು), ಮೂಗು-ಬಾಯಿ-ಗಂಟಲು-ತುಟಿ-ನಾಲಗೆಗೆ ಆನಂದ ಕೊಡುವ ರಸ..
ಎಲ್ಲರಿಂಗೂ ಇಷ್ಟ ಅಪ್ಪ ರಸ,ದಾಹ,ಮೂರ್ಛೆ ಕಮ್ಮಿ ಮಾಡುವ, ಷಟ್ಪದಪಿಪೀಲಿಕಾನಾಮಿಷ್ಟತಮ ಹೇಳಿದರೆ ಆರು ಕಾಲು ಇಪ್ಪ ದುಂಬಿ, ನೆಳವು, ಎರುಗೊಂಗೊಕ್ಕೆ ಇಷ್ಟ ಅಪ್ಪ ರಸ..

ಮಧುರ ರಸ ಸ್ನಿಗ್ಧ ಗುಣ ಪ್ರಧಾನ,ಶೀತ,ಗುರು(ದೇಹಲ್ಲಿ ಕರಗುದು ನಿಧಾನ) ಗುಣಂಗಳ ಇಪ್ಪ ರಸ..

ಉದಾಹರಣೆ:
ಹಾಲು, ತುಪ್ಪ, ಬೆಲ್ಲ, ದ್ರಾಕ್ಷೆ, ಖರ್ಜೂರ, ಕುಂಬಳಕಾಯಿ, ಅಕ್ಕಿ, ಗೋಧಿ ಇತ್ಯಾದಿ..

ನಮ್ಮ ಊಟದ ಕ್ರಮಲ್ಲಿ ನಾವು ಮೊದಲು ಪಾಯಸ, ತುಪ್ಪ ಹಾಕಿದ ಅಶನ ಉಣ್ತು ಅಲ್ಲದಾ?ಎಂತಕೆ?

ಅದಕ್ಕೆ ಆಯುರ್ವೇದ ಕೊಡುವ ಕಾರಣ-
ಊಟದ ಸುರುವಿಂಗೆ ಮಧುರ ರಸ ತೆಕ್ಕೊಳ್ಳೆಕ್ಕು ಹೇಳಿ.
ಇದರಂದ ಮೇಲೆ ಹೇಳಿದ ಹಾಂಗೆ ದೇಹದ ಧಾತುಗೊಕ್ಕೆ ಶಕ್ತಿ ಸಿಕ್ಕುತ್ತು, ಮನಸ್ಸಿಂಗೆ ಸಂತೋಷ ಸಿಕ್ಕುತ್ತು. ಹಾಂಗಾಗಿ ಲಾಯಿಕ್ಕಲಿ ಊಟ ಮಾಡ್ಲೆ ಎಡಿತ್ತು.
ಮತ್ತೊಂದು ಕಾರಣ ಜೋರು ಹಶು ಆಗಿಪ್ಪಗ ಮಧುರ ರಸ ದಾಹ ಕಮ್ಮಿ ಮಾಡುವ ಹಾಂಗೆ ಶೀತ ಗುಣಂದಾಗಿ ಹೊಟ್ಟೆಯ ತಂಪು ಮಾಡ್ತು..
ಮಧುರ ರಸ ಸುರುವಿಂಗೆ ತೆಕ್ಕೊಂಬ ಕಾರಣ ನಮ್ಮ ಬಾಯಿ, ಜಠರಂಗಳಲ್ಲಿ ಆಹಾರದ ಒಂದು ಪದರ ಆವುತ್ತು, ಇದು ಮತ್ತೆ ತಿಂಬ ಖಾರ ಪದಾರ್ಥಂಗೊ ಜಠರಲ್ಲಿ ಮಾಡುವ ಉರಿಯ ಕಮ್ಮಿ ಮಾಡ್ತು..
ಇದರ ಅನುಭವ ಎಲ್ಲರಿಂಗೂ ಆದಿಕ್ಕು,ಆಗದ್ದರೆ ಇನ್ನಾಣ ಸರ್ತಿ ಉಂಬಗ ಗಮನಿಸಿ,ತುಪ್ಪ ಹಾಕಿ ಮೊದಲು ಉಂಡಪ್ಪಗ ಹೊಟ್ಟೆ ಉರಿ ಇರ್ತಿಲ್ಲೆ,ಅದೇ ಸೀದ ಖಾರ ತಿಂದರೆ ಹೊಟ್ಟೆ ಉರಿ ಜಾಸ್ತಿ..

ಇನ್ನು ಈಗಣ ಆಹಾರ ತಜ್ಞರೂ ಈಗ ಊಟದ ಸುರುವಿಂಗೆ ತುಪ್ಪಲ್ಲಿ ಉಣ್ಣೆಕ್ಕು ಹೇಳ್ತವು.ಇದರಂದ ಕೊಬ್ಬಿನ ಅಂಶಲ್ಲಿ ಕರಗುವ ಜೀವಸತ್ವಂಗಳ ಹೀರಿಗೊಂಬಲೆ ದೇಹಕ್ಕೆ ಸಹಾಯ ಆವುತ್ತು.

ಸರಿ ಅಂಬಗ,ಈ ಡಾಗುಟ್ರಕ್ಕ ಸೀವು ತಿಂದರೆ ಒಳ್ಳೆದು ಹೇಳಿತ್ತನ್ನೇ, ಇನ್ನು ಸಮಾ ಸೀವು ತಿಂಬಲಕ್ಕು ಹೇಳಿ ಗ್ರೇಶಿಗೊಂಡಿಪ್ಪಿ..
ಅತಿಯಾಗಿ ಮಧುರ ರಸ ಇಪ್ಪ ಆಹಾರ ತೆಕ್ಕೊಂಡರೆ ಎಂತ ಆವುತ್ತು ನೋಡುವ..

ಆಚಾರ್ಯ ಚರಕ ಹೇಳ್ತವು- ಅತಿಯಾಗಿ ಮಧುರ ರಸಯುಕ್ತ ಆಹಾರ ತೆಕ್ಕೊಂಡರೆ ಸ್ಥೌಲ್ಯ(ದೇಹ ಭಾರ ಹೆಚ್ಚಪ್ಪದು) ಖಂಡಿತ ಹೇಳಿ.
ಇದರೊಟ್ಟಿಂಗೆ ಮಾಂಸಂಗೊ ಮೃದು ಆವುತ್ತು, ಆಲಸ್ಯ(ಶಕ್ತಿ ಇದ್ದರೂ ಕೆಲಸ ಮಾಡ್ಲೆ ಉದಾಸಿನ ಅಪ್ಪದು), ಅತಿಯಾದ ವರಕ್ಕು ಬಪ್ಪದು, ಶರೀರ ಭಾರ ಅಪ್ಪದು, ಜಠರಾಗ್ನಿ ಕಮ್ಮಿ ಅಪ್ಪದು, ಮತ್ತಾಣ ಸರ್ತಿ ಭೋಜನ ಮಾಡ್ಲೆ ಮನಸ್ಸು ಇಲ್ಲದ್ದೆ ಅಪ್ಪದು, ಮೋರೆ-ಗಂಟಲಿನ ಸುತ್ತ ಮಾಂಸ ವೃದ್ಧಿ(ಕೊಬ್ಬು ಜಾಸ್ತಿ ಅಪ್ಪದು ಹೇಳಿ ತೆಕ್ಕೊಂಬಲಕ್ಕು), ಶ್ವಾಸ, ಕಾಸ, ಪ್ರತಿಶ್ಯಾಯ(ನೆಗಡಿ), ಸ್ವರಭೇದ(ಸ್ವರ ಹಾಳಪ್ಪದು), ಬಾಯಿಲಿ ಯಾವಾಗಳೂ ಸೀವು ಅನುಭವ ಅಪ್ಪದು, ವಾಂತಿ ಬಪ್ಪದು, ಧಮನಿಗಳಲ್ಲಿ ಗಂಟಲಿನ ಒಳ ಒಂತರಾ ಲೇಪ ಆದ ಹಾಂಗಪ್ಪದು, ಕಣ್ಣಿನ ತೊಂದರೆಗೊ ಹೀಂಗೇ ಇತರ ಕಫ ದೋಷಂದಾಗಿ ಬಪ್ಪ ತೊಂದರೆಗೊ ಬತ್ತು..

ಮಧುರ ರಸವ ಈಗಾಣ ಆಹಾರ ತಜ್ಞರು ಹೇಳುವ ಶರ್ಕರಪಿಷ್ಟ(carbohydrate), ಕೊಬ್ಬಿನ ಅಂಶ(fat), ಸಕ್ಕರೆ ಅಂಶ ಹೇಳಿ ತೆಕ್ಕೊಂಬಲಕ್ಕು.
ಆಚಾರ್ಯರು ಮಧುರ ರಸದ ಅತಿ ಸೇವನೆಂದ ಅಪ್ಪ ತೊಂದರೆಗಳ ತಿಳಿಶಿ ಕೊಟ್ಟದು ಈಗಾಣ ಕಾಲದವರೆಗೂ ಸರಿ.
ದೇಹದ ಭಾರ ಹೆಚ್ಚಪ್ಪದು, ಆಲಸ್ಯ, ರಕ್ತದ ಧಮನಿಗಳಲ್ಲಿ ಲೇಪ ಅಪ್ಪದು(ಹೇಳಿದರೆ plaque formation/atherosclerosis).
ಈ ತೊಂದರೆಗೊಕ್ಕೆ ಈಗಾಣ ವೈದ್ಯರೂ ಹೇಳುವ ಕಾರಣ ಸೀವು,ಕೊಬ್ಬಿನ ಅಂಶ ಹೆಚ್ಚಾಗಿ ಇಪ್ಪ ಆಹಾರ ಸೇವನೆ..
ಅಂಬಗ ನಮ್ಮ ಆಯುರ್ವೇದ ವೈದ್ಯ ಪದ್ದತಿ ವೈಜ್ಞಾನಿಕ ಅಲ್ಲ ಹೇಳಿ ಹೇಳುವೋರಿಂಗೆ ನಾವು ಎಂತ ಹೇಳೆಕ್ಕು? 🙁
ಸರಿ ಮುಂದೆ ಹೋಪ..

೨)ಅಮ್ಲ ರಸ

ಅಮ್ಲ ರಸ ಹೇಳಿದರೆ ಹುಳಿ ರುಚಿ.
ಉದಾಹರಣೆಗೆ ಮೊಸರು, ಮಜ್ಜಿಗೆ, ಅಂಬಟೆ ಕಾಯಿ, ನೆಲ್ಲಿಕಾಯಿ, ಮಾದಳ ಫಲ, ಮಾವಿನ ಕಾಯಿ ಇತ್ಯಾದಿ..

ಇದು ಭೋಜನದ ಬಗ್ಗೆ ಆಸಕ್ತಿ ಉಂಟು ಮಾಡ್ತು, ಜಠರಾಗ್ನಿಯ ಹೆಚ್ಚು ಮಾಡ್ತು, ಶರೀರ ಬೃಂಹಣ ಮಾಡ್ತು, ಮನಸ್ಸಿನ ಗಟ್ಟಿ ಮಾಡ್ತು, ಇಂದ್ರಿಯಂಗಳ ದೃಢ ಮಾಡ್ತು, ಬಲ ವರ್ಧನೆ ಮಾಡ್ತು, ವಾಯು ಅನುಲೋಮನ ಮಾಡ್ತು ಹೇಳಿದರೆ ದೇಹಲ್ಲಿಪ್ಪ ವಾತಕ್ಕೆ ಅದರದ್ದೇ ಆದ ಮಾರ್ಗಲ್ಲಿ ಹೋಪಲೆ ಸಹಾಯ ಮಾಡ್ತು, ಹೃದಯಕ್ಕೆ ತೃಪ್ತಿ ಆವುತ್ತು, ಬಾಯಿಲಿ ಲಾಲಾಸ್ರಾವ ಹೆಚ್ಚಾವುತ್ತು(ಹುಳಿ ರುಚಿಯ ಹೆಸರು ಕೇಳಿದ ಕೂಡ್ಲೆ,ಅಥವಾ ನೋಡಿದರೆ ಬಾಯಿಲಿ ನೀರು ಬಪ್ಪಲೆ ಸುರು ಆವುತ್ತು ಅಲ್ಲದಾ? ಇದುವೇ ಊಟದ ಬಗ್ಗೆ ಆಸಕ್ತಿ ಇಪ್ಪ ಲಕ್ಷಣ.ಮಾಡಿದ ಊಟವ ಆಮಾಶಯಕ್ಕೆ(ಹೊಟ್ಟೆಗೆ) ತತ್ತು, ಅನ್ನ ಅಳಿಕೆಯ ಸ್ರಾವಯುಕ್ತವಾಗಿ ಮಡುಗುತ್ತು, ಊಟವ ಜೀರ್ಣ ಮಾಡ್ತು, ಮನಸ್ಸಿಂಗೆ ತೃಪ್ತಿ ಕೊಡ್ತು..
ಅಮ್ಲರಸಲ್ಲಿ ಲಘು,ಉಷ್ಣ,ಸ್ನಿಗ್ಧ ಗುಣಂಗೊ ಇದ್ದು..

ನಮ್ಮ ಊಟಲ್ಲಿ ಮಜ್ಜಿಗೆ,ಉಪ್ಪಿನಕಾಯಿ ಅಕೇರಿಗೆ ಇಪ್ಪದಲ್ಲದಾ?
ಆಮ್ಲ ರಸ ಅಕೇರಿಗೆ ತೆಕ್ಕೊಂಬ ಕಾರಣ ಮನಸ್ಸಿಂಗೆ ಸಂತೃಪ್ತಿ ಸಿಕ್ಕುತ್ತು.
ಮಾಡಿದ ಊಟ ಜೀರ್ಣ ಅಪ್ಪಲೆ ಸಹಾಯ ಮಾಡ್ತು.
ಅದೂ ಇಂಗು ಹಾಕಿದ ಮಜ್ಜಿಗೆ ಆದರೆ ಮಾಡಿದ ಊಟ ಜೀರ್ಣ ಅಪ್ಪಲೆ ಬೇರೆ ಎಂತದೂ ಬೇಡ.. ಇದು ಜೀರ್ಣಕ್ಕೂ ಲಘು(ಸುಲಭ)..ತಂಬುಳಿಗಳೂ ಅಷ್ಟೇ,ಆಹಾರ ಜೀರ್ಣ ಅಪ್ಪಲೆ ಸಹಾಯ ಮಾಡ್ತು..
ಆದ ಕಾರಣ ಅಜೀರ್ಣ ಇಪ್ಪಗ ಮಜ್ಜಿಗೆ ಅಶನ ಮಾತ್ರ ಕೊಡ್ಲೆ ಹೇಳುದು..
ಉತ್ತರ ಕನ್ನಡಲ್ಲಿ ಊಟದ ಸುರುವಿಂಗೆ ಅಪ್ಪೆಹುಳಿ ಹೇಳಿ ಕೊಡ್ತವು.ಇದೂ ಜಠರಾಗ್ನಿ ಹೆಚ್ಚು ಮಾಡ್ತು..ಈಗಾಣ ಕಾಲಲ್ಲಿ ಸೂಪ್ ಹೇಳಿ ಕುಡಿವದರ ಮೊದಲಾಣೋರು ಹೇಳಿದ್ದವು..

ಅಮ್ಲ ರಸ ಇಪ್ಪ ಹೆಚ್ಚಿನ ಆಹಾರಂಗಳ ಉದಾಹರಣೆಗಳ ನೋಡಿದರೆ ಅದರಲ್ಲಿ ವಿಟಮಿನ್ ಸಿ ಇಪ್ಪದು ಕಾಣ್ತು.ಇದು ನಮ್ಮ ದೇಹಕ್ಕೆ ಬೇಕಪ್ಪ ಮುಖ್ಯವಾದ ಜೀವಸತ್ವ.

ಬೇರೆ ಎಲ್ಲಾ ರಸಂಗಳ ಬಿಟ್ಟು ಬರೇ ಹುಳಿ ರುಚಿ ಇಪ್ಪ ಆಹಾರಂಗಳ ಹೆಚ್ಚು ತೆಕ್ಕೊಂಡರೆ ಎಂತ ಎಲ್ಲಾ ತೊಂದರೆಗೊ ಆವುತ್ತು?
ಅತಿ ಹೆಚ್ಚು ಅಮ್ಲ ರಸ ತೆಕ್ಕೊಂಡರೆ ದಂತಹರ್ಷ(ಹಲ್ಲು ಹುಳಿ ಹುಳಿ ಅಪ್ಪದು), ಹೆಚ್ಚಾಗಿ ಆಸರು ಅಪ್ಪದು, ಕಣ್ಣು ಹುಳಿಂದಾಗಿ ಮುಚ್ಚುತ್ತು(ಹುಣಸೆ ಹುಳಿ ತಿಂಬೋರ ಮೋರೆ ನೋಡಿಕ್ಕಿ ಒಂದರಿ 🙂 ), ರೋಮಂಗೊ ಸರ್ತ ಆವುತ್ತು(ರೋಮಾಂಚನ ಆವುತ್ತು), ಕಫವ ಕರಗುಸುತ್ತು, ಪಿತ್ತ ಜಾಸ್ತಿ ಮಾಡ್ತು, ರಕ್ತವ ದೂಷಣೆ ಮಾಡ್ತು, ಮಾಂಸಂಗಳಲ್ಲಿ ದಾಹ ಆವುತ್ತು, ಶರೀರ ಸಂಧಿಗೊ ಸಡಿಲ ಆವುತ್ತು, ಶರೀರ ಕ್ಷೀಣ-ದುರ್ಬಲ ಆವುತ್ತು.

ಶರೀರಲ್ಲಿ ಗಾಯಂಗೊ ಇದ್ದರೆ,ಯಾವುದಾದರೂ ವಿಷ ಪ್ರಾಣಿ ಕಚ್ಚಿದ್ದರೆ,ಕಿಚ್ಚು ಮುಟ್ಟಿದ್ದರೆ,ಮೂಳೆ ಮುರುದಿದ್ದರೆ, ಬಾಪು ಇದ್ದರೆ, ಮೂಗೇಟು ಆಗಿದ್ದರೆ ಇತ್ಯಾದಿಗಳಲ್ಲಿ ಅಮ್ಲ ರಸ ಇಪ್ಪ ಆಹಾರಂಗೊ ಇವುಗಳ ಪ್ರಭಾವವ ಜಾಸ್ತಿ ಮಾಡ್ತು ಎಂತಕೆ ಹೇಳಿದರೆ ಅಮ್ಲ ರಸಲ್ಲಿ ಅಗ್ನಿ ಅಥವ ಉಷ್ಣ ಗುಣ ಪ್ರಧಾನವಾಗಿ ಇದ್ದು.
ಹಾಂಗೇ ಗಂಟಲಿಲಿ,ಎದೆಲಿ,ಹೃದಯಲ್ಲಿ ಉರಿ ಸುರು ಆವುತ್ತು.. ಹಾಂಗಾಗಿಯೇ ಹಿರಿಯರು ಹುಳಿ ಹೆಚ್ಚು ತಿಂಬಲೆ ಬಿಡ್ತವಿಲ್ಲೆ(ಪಿತ್ತ ಜಾಸ್ತಿ ಅಪ್ಪ ಕಾರಣ ಉರಿ ಬಪ್ಪದು), ಅದರೊಟ್ಟಿಂಗೆ ಪಥ್ಯ ಆಹಾರ ಹೇಳಿದರೆ ಹುಳಿ ಖಾರ ಕಮ್ಮಿ ಇಪ್ಪ ಆಹಾರ,ಇದಕ್ಕೂ ಈ ರಸಂಗಳಲ್ಲಿ ಇಪ್ಪ ಉಷ್ಣ ಗುಣವೇ ಕಾರಣ..

ಈಗಾಣ ಆಹಾರ ತಜ್ಞರು ಹೇಳ್ತವು,ಮೊಸರು ಮಜ್ಜಿಗೆಲಿ ನಮ್ಮ ಕರುಳಿಲಿ ಜೀರ್ಣ ಅಪ್ಪಲೆ ಸಹಾಯ ಮಾಡುವ ಜೀವಕೋಶಂಗೊ ಇರ್ತು ಹೇಳಿ.ನಮ್ಮ ಕರುಳಿಳಿ ಲಾಕ್ಟಿಕ್ ಆಸಿಡ್(lacto bacilli) ಹೇಳ್ತ ಅಂಶ ಆಹಾರವ ಜೀರ್ಣ ಮಾಡ್ಲೆ ಸಹಾಯ ಮಾಡ್ತು,ಈ ಅಂಶ ಮಜ್ಜಿಗೆಲಿ ಹೇರಳವಾಗಿ ಇದ್ದು, ಆದ ಕಾರಣ ಮಜ್ಜಿಗೆ ಆಹಾರ ಜೀರ್ಣ ಮಾಡ್ಲೆ ಸುಲಭ ಮಾಡ್ತು. ಹಾಂಗಾಗಿ ಜಠರಕ್ಕೆ,ಕರುಳಿಂಗೆ ಸಂಬಂಧಪಟ್ಟ ತೊಂದರೆಗಳಲ್ಲಿ,ಬೇಧಿ ಇಪ್ಪಗ ಮಜ್ಜಿಗೆ ಕೊಡ್ಲೆ ಹೇಳ್ತವು.ಈ ವಿಷಯವ ನಮ್ಮ ಆಚಾರ್ಯರು ಕೆಲವು ಸಾವಿರ ವರ್ಷ ಮೊದಲೇ ಹೇಳಿದ್ದವು..

೩)ಲವಣ ರಸ

ಲವಣ ಹೇಳಿದರೆ ಎಲ್ಲರಿಂಗೂ ಗೊಂತಿಪ್ಪಾಂಗೆ ಉಪ್ಪು.
ಲವಣಲ್ಲೂ ಕೆಲವು ನಮೂನೆಗೊ ಇದ್ದು-ಸೈಂಧವ, ಸೌವರ್ಚಲ, ವಿಡ, ಸಮುದ್ರ, ಕಾಲ ಲವಣ ಹೇಳಿ.

ಲವಣ ರಸ ಪಾಚನ ಕ್ರಿಯೆಗೆ ಸಹಾಯ ಮಾಡ್ತು, ಇದಕ್ಕೆ ಕ್ಲೇದನ ಹೇಳಿದರೆ ನೀರು ಎಳಕ್ಕೊಂಡು ಚೆಂಡಿ ಮಾಡುವ ಗುಣ ಇದ್ದು, ದೀಪನ-ಪಾಚಕಾಗ್ನಿಯ ಉದ್ದೀಪನ ಮಾಡ್ತು,ಕಫವ ಕರಗುಸುತ್ತು,ತೀಕ್ಷ್ಣ,ಸರ(ಚಲನೆ ಇಪ್ಪದು), ಹರಡುವುದು, ಅವಕಾಶ ಮಾಡುವಂತದು, ವಾತ ನಾಶಕ, ಶರೀರಲ್ಲಿ ಸ್ಥಂಭನ, ಮಲಬಂಧ ಲವಣ ರಸದ ಗುಣಂಗೊ..ಲವಣ ರಸದ ಮತ್ತೊಂದು ಮುಖ್ಯ ಗುಣ ಹೇಳಿದರೆ ಸರ್ವರಸಪ್ರತ್ಯನೀಕತೆ ಹೇಳಿದರೆ ಎಲ್ಲಾ ರಸಂಗಳೊಟ್ಟಿಂಗೆ ಇದ್ದರೂ ತನ್ನ ಪರಾಕ್ರಮವ ತೋರ್ಸುವ ಒಂದೇ ಒಂದು ರಸ.ಇದು ಇಲ್ಲದ್ದರೆ ಆಹಾರಕ್ಕೆ ರುಚಿ ಇರ್ತಿಲ್ಲೆ.ಬಾಯಿಲಿ ಲಾಲಾಸ್ರಾವ ಬರ್ಸುತ್ತು,ಸ್ರೋತಸ್ ಶುದ್ಧ ಮಾಡ್ತು,ಶರೀರ ಅವಯವಂಗಳ ಮೃದು ಮಾಡ್ತು,ಆಹಾರಕ್ಕೆ ರುಚಿ ಕೊಡ್ತು..ಲವಣ ರಸ ಸ್ನಿಗ್ಧ,ಉಷ್ಣ,ಅಧಿಕ ಗುರು ಗುಣ ಇಲ್ಲದ್ದ ರಸ..

ಲವಣ ರಸ ಆಹಾರಲ್ಲಿ ಹೆಚ್ಚಾಗಿ ಉಪಯೋಗ ಮಾಡಿದರೆ ಅಪ್ಪ ತೊಂದರೆಗೊ–ಪಿತ್ತ ವೃದ್ದಿ,ರಕ್ತ ವೃದ್ದಿ,ಹೆಚ್ಚು ಆಸರಪ್ಪದು,ಮೂರ್ಛೆ ಹೋಪದು,ದೇಹದ ಉಷ್ಣತೆ ಹೆಚ್ಚುದು,ದೇಹಲ್ಲಿ ವಿಷ,ಕುಷ್ಠ ಇದ್ದರೆ ಅದರ ಹೆಚ್ಚು ಮಾಡ್ತು,ಪುರುಷತ್ವ ನಾಶ ಮಾಡ್ತು,ಇಂದ್ರಿಯಂಗಳ ಶಕ್ತಿ ಕಮ್ಮಿ ಮಾಡ್ತು,ಶರೀರಲ್ಲಿ ನೆರಿಗೆ ಹೆಚ್ಚು ಮಾಡ್ತು,ಅಕಾಲಲ್ಲಿ ಕೂದಲು ಬೆಳಿ ಆವುತ್ತು,ಉದುರುತ್ತು.ಹೀಂಗೇ ಇನ್ನೂ ಹಲವು ಖಾಯಿಲೆಗೊ ಬತ್ತು..

ಲವಣಲ್ಲಿ ಸೋಡಿಯಮ್ ಮತ್ತೆ ಕ್ಲೋರಿನ್ ಇಪ್ಪ ಕಾರಣ ನಮ್ಮ ಶರೀರಕ್ಕೆ ಬೇಕಪ್ಪ ಮುಖ್ಯ ಅಂಶ ಉಪ್ಪು..ದೇಹಲ್ಲಿ ಉಪ್ಪು ಹೆಚ್ಚಾದರೆ ನೀರು ನಿಂಬದೂ ಹೆಚ್ಚಾವುತ್ತು.ಇದು ನವಗೆ ಮೂತ್ರಪಿಂಡದ ದೋಷ ಇಪ್ಪೋರಲ್ಲಿ,ರಕ್ತದೊತ್ತಡ ಇಪ್ಪೋರಲ್ಲಿ ಕಾಂಬಲೆ ಸಿಕ್ಕುತ್ತು.ಆಯುರ್ವೇದಲ್ಲಿ ಪಿತ್ತ ವೃದ್ದಿ-ರಕ್ತ ವೃದ್ದಿ ಅಪ್ಪ ಕಾರಣ ರಕ್ತದೊತ್ತಡ ಬಪ್ಪದು ಹೇಳಿ ಹೇಳ್ತವು..ರಕ್ತದೊತ್ತಡಕ್ಕೆ ಉಪ್ಪು ಕಮ್ಮಿ ತಿನ್ನೆಕ್ಕು ಹೇಳಿ ಎಲ್ಲರಿಂಗೂ ಗೊಂತ್ತಿಪ್ಪ ವಿಷಯ..ನಮ್ಮ ಆಚಾರ್ಯರೂ ಇದನ್ನೇ ತಿಳಿಶಿ ಕೊಟ್ಟದು..

೪)ಕಟು ರಸ-

ಕಟು ಹೇಳಿದರೆ ಖಾರ.ಉದಾಹರಣೆಗೆ ಶುಂಠಿ,ಮರೀಚ(ಗೆಣ ಮೆಣಸು),ಲಶುನ(ಬೆಳ್ಳುಳ್ಳಿ),ತುಳಸಿ,ಮೂತ್ರ,ಇಂಗು ಇತ್ಯಾದಿ..

ಕಟು ರಸ ಬಾಯಿಯ ಶುದ್ಧ ಮಾಡ್ತು, ಪಾಚಕಾಗ್ನಿ ಹೆಚ್ಚು ಮಾಡ್ತು, ಆಹಾರದ ದ್ರವ ಅಂಶವ ಒಣಗುಸುತ್ತು, ಕಣ್ಣಿಲಿ-ಮೂಗಿಲಿ ನೀರು ಬರ್ಸುತ್ತು, ಹೀಂಗೆ ನೀರು ಬಪ್ಪ ಕಾರಣ ಜ್ಞಾನೇಂದ್ರಿಯ ಶುದ್ಧ ಆವುತ್ತು, ಅದರಲ್ಲಿ ಹೊಸ ಚೇತನ ಬತ್ತು, ಭೋಜನವ ಸ್ವಾದಿಷ್ಟ ಮಾಡ್ತು, ತುರಿಕೆ ಕಮ್ಮಿ ಮಾಡ್ತು, ಮೈಲಿ ಗುಳ್ಳೆ ಎದ್ದಿದ್ದರೆ ಅಲ್ಲಿಗೇ ತಗ್ಗುಸುತ್ತು,ಕ್ರಿಮಿ ನಾಶ ಮಾಡ್ತು, ಮಾಂಸ ಕಮ್ಮಿ ಮಾಡ್ತು, ಕಫ ಕಮ್ಮಿ ಮಾಡ್ತು.

ಕಟು ರಸಕ್ಕೆ ಲಘು,ಉಷ್ಣ,ರೂಕ್ಷ ಗುಣ ಇದ್ದು..

ಕಟು ರಸ ಇಪ್ಪ ಔಷಧೀಯ ದ್ರವ್ಯಂಗೊ ಸುಮಾರಿದ್ದು,ಒಂದೊಂದಕ್ಕೂ ಬೇರೆ ಬೇರೆ ರೋಗಂಗಳ ಗುಣ ಮಾಡುವ ಶಕ್ತಿ ಇದ್ದು..
ತುಳಸಿ,ಮೂತ್ರ ಕ್ರಿಮಿ ನಾಶಕ ಆಗಿ ಕೆಲಸ ಮಾಡ್ತು..
ಕಟು ರಸ ಮಾತ್ರ ಇಪ್ಪ ಆಹಾರಂಗಳ ಹೆಚ್ಚಾಗಿ ತೆಕ್ಕೊಂಡರೆ ಪುರುಷತ್ವ ನಾಶ ಆವುತ್ತು, ಶರೀರ ಕೃಶ ಆವುತ್ತು, ಮೂರ್ಛೆ ಬತ್ತು, ಕಣ್ಣು ಕಸ್ತಲೆ ಕಟ್ಟುತ್ತು, ತಲೆ ತಿರುಗುತ್ತು, ದೊಂಡೆಲಿ ಉರಿ ಬತ್ತು, ಶರೀರ ಬೆಶಿ ಆವುತ್ತು,
ಬಲ ನಾಶ ಆವುತ್ತು,ಆಸರು ಜಾಸ್ತಿ ಆವುತ್ತು,ಹಾಂಗೇ ಇನ್ನೂ ಕೆಲವು ವಾತಂದಾಗಿ ಬಪ್ಪ ತೊಂದರೆಗೊ ಆವುತ್ತು..

ಆದ ಕಾರಣ ನಮ್ಮ ಊಟಲ್ಲಿ ಖಾರ ಇಪ್ಪ ಸಾರು,ಕೊದಿಲು ಹೀಂಗಿಪ್ಪದರ ಊಟದ ಮಧ್ಯಲ್ಲಿ ಬಳ್ಸುಸು..ಮಧ್ಯಲ್ಲಿ ಬಳ್ಸುವ ಕಾರಣ ಶರೀರಲ್ಲಿ ಅಪ್ಪ ತೊಂದರೆಗೊ ಕಮ್ಮಿ ಆವುತ್ತು.ಸುರುವಾಣ ಸೀವು,ಅಕೇರಿಯಾಣ ಮಜ್ಜಿಗೆ ಖಾರವ-ಉರಿಯ ಕಮ್ಮಿ ಮಾಡ್ತು..

೫)ತಿಕ್ತ ರಸ

ತಿಕ್ತ ಹೇಳಿದರೆ ಕೈಕ್ಕೆ ರಸ..
ಇದಕ್ಕೂ ಆಯುರ್ವೇದ ಹೆಸರಿಂಗೂ ಅವಿನಾಭಾವ ಸಂಬಂಧ ಹೇಳಿ ಎನಗೆ ಕಾಣ್ತು, ಆರತ್ರೆ ಬೇಕಾರು ಆಯುರ್ವೇದ ಮದ್ದು ಹೇಳಿ- ಅವ್ವು ಕೂಡ್ಲೆ ಕೈಕ್ಕೆ ಮದ್ದು ಹೇಳ್ತವು 😉
ಕೈಕ್ಕೆ ರಸಕ್ಕೆ ಉದಾಹರಣೆ ಬೇಕಾಗ ಆದರೂ ಹೇಳದ್ರೆ ಎನಗೆ ಸಮಾಧಾನ ಆವುತ್ತಿಲ್ಲೆ..
ಕಹಿಬೇವು,ಅರಿಶಿನ, ಶ್ರೀಗಂಧ, ಒಂದೆಲಗ, ಲಾವಂಚ, ಶಂಖಪುಷ್ಪ, ಜಾಜಿ, ಅರ್ಕ, ಬಜೆ, ಶತಾವರಿ(ಹಲವು ಮಕ್ಕಳ ತಾಯಿ) ಕೈಕ್ಕೆ ರಸ ಇಪ್ಪ ಕೆಲವು ದ್ರವ್ಯಂಗೊ..

ತಿಕ್ತ ರಸದ ಗುಣ ಕರ್ಮಂಗಳ ನೋಡುವ-
– ತಿಕ್ತ ರಸ ತಿಂಬಗ ಬಾಯಿಗೆ ರುಚಿ ಕೊಡದ್ರೂ ಅದರ ಗುಣ ಅರುಚಿಯ ನಾಶ ಮಾಡುವಂತದ್ದು, ವಿಷ ನಾಶಕ, ಕೃಮಿ ನಾಶಕ, ಮೂರ್ಛೆ ಬಪ್ಪದು-ತೊರ್ಸುದು-ದಾಹ-ಕುಷ್ಟ-ಆಸರಪ್ಪದರ ಕಮ್ಮಿ ಮಾಡ್ತು, ಚರ್ಮ-ಮಾಂಸಂಗೊಕ್ಕೆ ಸ್ಥಿರತೆ ಕೊಡ್ತು, ಜ್ವರನಾಶಕ, ಅಗ್ನಿ ದೀಪಕ, ಪಾಚಕ, ಎದೆ ಹಾಲು ಶುದ್ದ ಮಾಡ್ತು. ಮೇದಸ್ಸು,ಮಜ್ಜೆ,ಪೂಯ(ರೆಶಿಗೆ),ಸ್ವೇದ,ಮೂತ್ರ,ಮಲ,ಪಿತ್ತ,ಕಫವ ಒಣಗುಸುತ್ತು.

ಇದಕ್ಕೆ ರೂಕ್ಷ, ಶೀತ, ಲಘು ಗುಣ ಇದ್ದು..

ತಿಕ್ತ ರಸಲ್ಲಿಪ್ಪ ಬಾಯಿ ರುಚಿ ಹೆಚ್ಚು ಮಾಡುವ, ಆಸರು ಕಮ್ಮಿ ಮಾಡುವ,ಅಗ್ನಿ ವೃದ್ಧಿ ಮಾಡುವ ಗುಣಂಗೊ ಇಪ್ಪ ಕಾರಣಂದಲೇ ಹಾಗಲಕಾಯಿ ಮೆಣಸ್ಕಾಯಿ ಹೇಳುವ ಬಗೆ ಬಳ್ಸುದು..
ಇಲ್ಲದ್ದರೆ ರುಚಿ ರುಚಿ ಭೋಜನದ ಮಧ್ಯೆ ಕೈಕ್ಕೆ ಹಾಗಲಕಾಯಿ ಮೆಣಸ್ಕಾಯಿಗೆಂತ ಕೆಲಸ ಅಲ್ಲದಾ?ಅದಕ್ಕೂ ಕೆಲಸ ಇಪ್ಪ ಕಾರಣ ನಮ್ಮ ಅಡಿಗೆಲಿ ಅದಕ್ಕೂ ಸ್ಥಾನ ಸಿಕ್ಕಿದ್ದು..

ತಿಕ್ತ ರಸ ಒಂದೇ ಆಗಿ ಅಧಿಕವಾಗಿ ತೆಕ್ಕೊಂಡರೆ ಅದರ ರೂಕ್ಷ ಗುಣಂದಾಗಿ ಧಾತುಗಳ(ರಸ,ರಕ್ತ,ಮಾಂಸ,ಮೇದಸ್,ಅಸ್ಥಿ,ಮಜ್ಜಾ,ಶುಕ್ರ) ಶೋಷಣೆ(ಒಣಗುವಿಕೆ) ಆವುತ್ತು, ಬಲ ಕಮ್ಮಿ ಆವುತ್ತು, ಶರೀರ ಕೃಶ ಆವುತ್ತು, ಹರ್ಷಕ್ಷಯ ಆವುತ್ತು, ತಲೆ ತಿರುಗುತ್ತು,ಬಾಯಿ ಒಣಗುತ್ತು ಹಾಂಗೇ ಸುಮಾರು ವಾತಂದಾಗಿ ಬಪ್ಪ ತೊಂದರೆಗೊ ಬತ್ತು..

೬)ಕಷಾಯ ರಸ

ಒಗರು ರುಚಿಗೆ ಕಷಾಯ ರಸ ಹೇಳುದು.ಉದಾಹರಣೆಗೆ ಮಾವಿನ ಮೆಡಿ,ವಟ(ಗೋಳಿ),ಅಶ್ವಥ,ಅತ್ತಿ ಇತ್ಯಾದಿ..

ಕಷಾಯ ರಸ ದೋಷಂಗಳ ಶಾಂತ ಮಾಡ್ತು,ಗಾಯಂಗಳ ಕೂಡ್ಸಿ ಒಣಗುಸುತ್ತು,ಕಫ,ರಕ್ತ,ಪಿತ್ತ ಶಮನ ಮಾಡ್ತು,ಶರೀರದ ಆರ್ದ್ರತೆಯ ಒಣಗುಸುತ್ತು.ಇದಕ್ಕೆ ಮುಖ್ಯವಾಗಿ ರೂಕ್ಷ,ಶೀತ,ಗುರು ಗುಣ ಇದ್ದು..ಹಾಂಗಾಗಿ ಮಾವಿನ ಮೆಡಿ ಉಪ್ಪಿನಕಾಯಿ ಮಜ್ಜಿಗೆ ಅಶನದೊಟ್ಟಿಂಗೆ ತಿಂದಪ್ಪಗ ದೋಷಂಗೊ ಸರಿಯಾಗಿ ಇರ್ತು..

ಅತಿಯಾದ ಸೇವನೆಂದ ಅಪ್ಪ ತೊಂದರೆಗೊ–ಬಾಯಿ ಒಣಗುತ್ತು,ಹೃದಯಲ್ಲಿ ಒಂತರಾ ಹಿಂಡಿದ ಅನುಭವ,ಹೊಟ್ಟೆ ಉಬ್ಬರ,ಅಸ್ಪಷ್ಟ ಸ್ವರ,ಪುರುಷತ್ವ ನಾಶ ಆವುತ್ತು,ಅಪಾನ ವಾಯು,ಮೂತ್ರ,ಮಲ,ವೀರ್ಯವ ತಡದು ಹಿಡಿತ್ತು,ಶರೀರ ಕೃಶ ಆವುತ್ತು,ಅತಿಯಾಗಿ ಆಸರಾವುತ್ತು,ಶರೀರಕ್ಕೆ ಜಡ ಆವುತ್ತು,ಪಕ್ಷಾಘಾತ,ಅರ್ದಿತ ಹೀಂಗಿಪ್ಪ ವಾತ ತೊಂದರೆಗೊ ಬತ್ತು..

ಆಯುರ್ವೇದಲ್ಲಿ ರಸಂಗಳ ಬಗ್ಗೆ ಕೊಟ್ಟ ವಿವರಂಗಳ ನೋಡಿದರೆ ನಮ್ಮ ಆಹಾರ ಪದ್ದತಿ ಪರಿಪೂರ್ಣ ಹೇಳ್ತದು ಸತ್ಯ ಹೇಳಿ ಗೊಂತಾವುತ್ತು.ನಮ್ಮ ದಿನನಿತ್ಯದ ಆಹಾರಲ್ಲೂ ಎಲ್ಲಾ ರಸಂಗೊ ಇಪ್ಪ ಹಾಂಗೆ ನೋಡಿಗೊಳ್ಳೆಕ್ಕು.ಈಗಾಣ ಯಾವ ಊಟದ ಕ್ರಮಲ್ಲಿ ಈ ರೀತಿ ಎಲ್ಲಾ ರಸಂಗೊ ಇಪ್ಪ ವ್ಯವಸ್ಥೆ ಇದ್ದು?ನಮ್ಮ ಈ ರೀತಿಯ ಊಟದ ಕ್ರಮಂದಾಗಿಯೇ ಹಿರಿಯರು ಹಲವು ವರ್ಷ ಬದುಕುಲೆ ಎಡಿತ್ತು ಹೇಳಿ ತೋರ್ಸಿ ಕೊಟ್ಟಿದವು..ನಮ್ಮ ಊಟದ ಕ್ರಮವ ಈಗಾಣ ಆಹಾರ ತಜ್ಞರೂ ಒಪ್ಪಿಗೊಂಡಿದವು.ನಮ್ಮ ಅಡಿಗೆಲಿ ಎಲ್ಲಾ ನಮೂನೆಯ ಪೋಷಕಾಂಶಂಗೊ ಸಿಕ್ಕುತ್ತು ಹೇಳಿದೆ ಒಪ್ಪಿಗೊಂಡಿದವು.. ಈ ರೀತಿ ಎಲ್ಲಾ ರಸಂಗೊ ಇಪ್ಪ ಆಹಾರ ಸೇವನೆ ಮಾಡುದರಂದಲೇ ನಮ್ಮ ದೇಹಲ್ಲಿ ದೋಷಂಗೊ ಸಾಮ್ಯತೆಲಿ ಇಪ್ಪದು,ದೋಷಂಗೊ ಸಾಮ್ಯತೆಲಿ ಇದ್ದರೆ ಮತ್ತೆಲ್ಲಿಂದ ರೋಗ? ಹೀಂಗಾಗಿ ನಾವು ನಮ್ಮತನವ ಬಿಟ್ಟು ಬೇರೆಯೋರ ಅನುಕರಣೆ ಮಾಡುದರಂದ ನವಗೇ ನಷ್ಟ..

ಬ್ರಾಹ್ಮಣರು ಹೀಂಗೆ ಕ್ರಮಪ್ರಕಾರವಾಗಿ ಊಟ ಮಾಡುವ ಕಾರಣ ಬ್ರಾಹ್ಮಣರು ಭೋಜನ ಪ್ರಿಯರು ಹೇಳುದಾದಿಕ್ಕಾ?ಎಂತದೇ ಇರಲಿ,ನಮ್ಮ ಕ್ರಮದ ಊಟಲ್ಲಿಪ್ಪಷ್ಟು ವೈಜ್ಞಾನಿಕತೆ ಬೇರೆ ಯಾವ ಪಂಗಡದ ಕ್ರಮಲ್ಲೂ ಕಾಂಬಲೆ ಸಿಕ್ಕ.. ಎಂತ ಹೇಳ್ತಿ??

ಆಯುರ್ವೇದಲ್ಲಿ ರಸ ಮಾತ್ರಾ ಅಲ್ಲದ್ದೆ ಇನ್ನೂ ಸುಮಾರು ವಿಷಯಂಗಳ ತಿಳಿಶಿ ಕೊಟ್ಟಿದವು..ಇದರ ಬಗ್ಗೆ ಮುಂದೆ ಹೇಳ್ತೆ.. ನಮ್ಮ ಆಚಾರ್ಯರು ಹೇಳಿದ ವಿಷಯಂಗೊ ಅಂದಿಂಗೂ ಇಂದಿಂಗೂ ಮುಂದಾಣ ಕಾಲಕ್ಕೂ ಯಾವಾಗಳೂ ಸತ್ಯ,ವೈಜ್ಞಾನಿಕ..

ಹಾಂಗಾಗಿ ನಾಳ್ತು ಮದುವೆಲಿ ಹೋಳಿಗೆ,ಪಾಯಸಂಗಳಷ್ಟೇ ಹಾಗಲಕಾಯಿಗೂ ಪ್ರಾಮುಖ್ಯತೆ ಕೊಟ್ಟು ಊಟ ಮಾಡುವ ಆಗದಾ?
ನಾವು ಆರೋಗ್ಯವಾಗಿದ್ದುಗೊಂಡು ಅವಕ್ಕೂ ಗುರುಗೊ ಆಯುಷ್ಯ, ಆರೋಗ್ಯ, ಭಾಗ್ಯ ಕೊಡಲಿ ಹೇಳಿ ಹಾರೈಸುವ…

पूजितं ह्यशनं नित्यं बलमूर्जं च यच्छति।
अपूजितं तु तद् भुक्तमुभयं नाशयेदिदम्॥ -मनु

( ಪೂಜಿತಂ ಹ್ಯಶನಂ ನಿತ್ಯಂ ಬಲಮೂರ್ಜಂ ಚ ಯಚ್ಛತಿ|
ಅಪೂಜಿತಂ ತು ತದ್ ಭುಕ್ತಮುಭಯಂ ನಾಶಯೇದಿದಮ್||)

ಪೂಜ್ಯ ಭಾವನೆ ಮಡಿಕ್ಕೊಂಡು ಊಟ ಮಾಡಿದರೆ ಅನ್ನ ದೇಹಕ್ಕೆ ಬಲ,ಶಕ್ತಿ ಕೊಡ್ತು. ಅದೇ ಪೂಜನೀಯ ಭಾವ ಇಲ್ಲದ್ದೆ ಒಟ್ಟು ಉಂಬಲೆ ಸಿಕ್ಕಿತ್ತು ಹೇಳಿ ತಿಂದರೆ ಅದೇ ಅನ್ನ ದೇಹವ ನಾಶ ಮಾಡ್ತು..
(ಮನುಸ್ಮೃತಿಲಿ ಹೇಳಿದ ವಿಷಯ ಈಗಾಣ ಕಾಲದವರೆಗೂ ಎಷ್ಟು ಪ್ರಸ್ತುತ!!!!)

– ಡಾ.ಸೌಮ್ಯ ಪ್ರಶಾಂತ
sowprash@gmail.com

19 thoughts on “ಷಡ್ರಸ ಭೋಜನ…

  1. ಧನ್ಯವಾದ ಶ್ರೀ ಅಕ್ಕ..ನಿನ್ನ ಪ್ರೋತ್ಸಾಹದ ಮಾತುಗೊ ಇನ್ನೂ ಬರವ ಹಾಂಗೆ ಮಾಡ್ಸುತ್ತು… 🙂

  2. ಸೌಮ್ಯ,
    ಈ ಶುದ್ದಿ ಬಪ್ಪಲೆ ಸುಮಾರು ಸಮಯಂದ ಕಾದೊಂಡಿತ್ತಿದ್ದೆ.. (ಹಾಂಗೆ ಒಪ್ಪ ಬರವಲೂ ಸುಮಾರು ದಿನ ಆತು.. 😉 🙁 !!!!)
    ನಿನಗೆ ಬೈಲಿಂಗೆ ಬಪ್ಪ ಸಂಕ ಸರಿ ಇಲ್ಲದ್ದೆ ಬಪ್ಪಲಾಗದ್ದದು.. ಎನಗೆ ತಮ್ಮನ ಮದುವೆ ಸುಧಾರ್ಸುಲೆ ಇತ್ತದಾ?
    ಅದಾಗಿ, ದೀಪಾವಳಿ, ಗೋಪೂಜೆ ಗೌಜಿ ಆತು.. ಮನೆ ಒಂದು ದಿಕ್ಕೆ, ದನಗ ಒಂದು ದಿಕ್ಕೆ ಆದರೆ ಹೀಂಗೇ ತಾಪತ್ರಯ ಅಪ್ಪದಿದಾ….;-)
    ಇರಲಿ.. ಶುದ್ದಿ ಲಾಯ್ಕಾಯಿದು..
    ನಮ್ಮ ಹವ್ಯಕರಲ್ಲಿ ಮಾತ್ರವೇ ಈ ರೀತಿಯ ಊಟದ ಕ್ರಮ ಇಪ್ಪದು..
    ಅದರ ನೀನು ಷಡ್ರಸಂಗಳ ಮಾಹಿತಿಯೊಟ್ಟಿನ್ಗೆ ಚೆಂದಲ್ಲಿ ವಿವರ್ಸಿದ್ದೆ. ಲಾಯ್ಕಾಯಿದು.
    ನಾವು ಜೆಂಬರಲ್ಲಿ ಉಂಬಗ ಇನ್ನು ಗಮನಿಸಿ ಉಂಬಲಕ್ಕಿದಾ.!!!! ಯಾವುದಾಗಿ ಯಾವುದು ಉಣ್ಣುತ್ತಾ ಇದ್ದು ಹೇಳಿ!!
    ಮನು ಸ್ಮೃತಿಯ ಶ್ಲೋಕದ ಉಲ್ಲೇಖ, ವಿವರಣೆ ಲಾಯ್ಕಾಯಿದು.

  3. ಕೆ.ಜಿ.ಡಾಕ್ಟ್ರತ್ರೆ ಚರ್ಚೆ ಅಲ್ಲ ಆದರೆ ಸ್ವಮೂತ್ರ ಪಾನದ ಬಗ್ಯೆ ನಿ೦ಗಳ ಅಭಿಪ್ರಾಯವ ಒಪ್ಪುವೊ೦,ಆದರೆ ದನಗಳ ತ್ಯಾಜ್ಯ ಅದೆ ಲೆಕ್ಕಕ್ಕೆ ತೆಕ್ಕೊಬಲೆಡಿಯಾನೆ.ಹಾ೦ಗಾದರೆ ಆಮ್ಲ ಜನಕ ಸಸ್ಯತ್ಯಾಜ್ಯ ಆವುತ್ತಿಲ್ಲಿಯೊ?ಭೋಪಾಲಲ್ಲಿ ಗೇಸ್ ಲೀಕದ ಸಮಯಲ್ಲಿ ಗೊಮಯ ಬ ಳಸಿದ ಕಟ್ಟೋಣಲ್ಲಿ ಇದ್ದಿದ್ದವಕ್ಕೆ ಅದರ ಪರಿಣಾಮ ಕಮ್ಮಿ ಆಗಿದ್ದತ್ತು ಹೇಳುವದು ಸತ್ಯ ಅಲ್ಲದೊ?ನವಗೆ ಗೊ೦ತ್ತಿದ್ದ ಹಾ೦ಗೆ ನಮ್ಮ ಹಿರಿಯವು ವೈಜ್ನಾನಿಕವಾಗಿ ತಿಳುದ ಸ೦ಗತಿಗಳ ಅ೦ದ್ರಾಣವು ಶಾಸ್ತ್ರ ಹೇಳದ್ರೆ ನ೦ಬವು ಹೇಳಿ ಶಾಸ್ತ್ರ ಹೇಳಿ ಹೆಳಿದ್ದಲ್ಲದ್ದೆ ಅವು ನಮ್ಮ೦ದ ತು೦ಬಾ ತಿಳುವಳಿಕೆ ಕಮ್ಮಿ ಆದವಾಗಿ ಅಲ್ಲ ಹೇಳಿ ಎನ್ನ ಅಭಿಪ್ರಾಯ.ಇನ್ನು ಲೋಕಲ್ಲಿ ನವಗೆ ಗೊ೦ತಿಲ್ಲದ್ದ ಎಷ್ಟೋ ಸ೦ಗತಿಗೊ ಇರುತ್ತು ಅದರ ಎಲ್ಲ ವಿವರಪಡವಲೆ ನಮ್ಮಜನ್ಮ ಸಾಕಕ್ಕೊ?ಕೆಲವು ವಿಶಯ೦ಗಳ ಹಿರಿಯವು ಹೇಳಿದ್ದರ ನ೦ಬಿಯೇ ನೆಡೆಕಾವುತ್ತು.ತಪ್ಪು ತಿಳಿಯೇಡಿ ಏಕೊ ಅಭಿಪ್ರಾಯ ಬರೇಕು ಹೇಳಿ ಕ೦ಡತ್ತು;ಚರ್ಚಗೆ ಬೇಕಾಗಿ ಅಲ್ಲ.ನಮ್ಮ ನ೦ಬಿಕಗೆ ಪೆಟ್ಟು ಬಪ್ಪಗ ಪ್ರತಿಕ್ರಯಿಸದ್ದರೆ ತಪ್ಪು ಪ್ರಜ್ನೆ ಉ೦ಟಾವುತ್ತು.ಒಪ್ಪ೦ಗಳೊಟ್ಟಿ೦ಗೆ

  4. ಧನ್ಯವಾದ.. 🙂
    ನಾವು ಎಂತಕೆ ನಮ್ಮ ಕ್ರಮವ ಬಿಡ್ಲಾಗ ಹೇಳಿ ಹಿರಿಯರು ಹೇಳುದು ಹೇಳಿ ಯೋಚನೆ ಮಾಡಿಗೊಂಡು ಚರಕ ಸಂಹಿತೆ ತೆಗದು ನೋಡುವಗ ಈ ವಿಷಯ ಕಣ್ಣಿಂಗೆ ಬಿದ್ದತ್ತು..ಹಾಂಗಾಗಿ ಬೈಲಿನೋರೊಟ್ಟಿಂಗೆ ಮಾತಾಡಿಗೊಂಡದು ಈ ವಿಷಯವ… 🙂

  5. ಡಾಗುಟ್ರಕ್ಕ ಲೇಖನ ಬರದ್ದರ ನೋಡ್ಲೇ ಆಯ್ದಿಲ್ಲೆ ಆನು ಆಸ್ಪತ್ರೆಗೆ ಹೋದ ಗೌಜಿಲಿ. ಇಂದು ಓದಿದ್ದಿದಾ… ಬರದ್ದು ಲಾಯ್ಕ ಆಯ್ದು. ಹೀಂಗಿದ್ದ ಮಾಹಿತಿ ನಿತ್ಯ ಜೀವನಕ್ಕೆ ಅಗತ್ಯವೇ. ತುಂಬಾ ಧನ್ಯವಾದಂಗೊ 🙂

  6. ಕಟುಕ ಲವಣ ತಿಕ್ತ ಮಿಶ್ರಿತಾ ಮಧುರಾಮ್ಲೌಚ ಕಷಾಯ ಇತ್ಯಪಿ,ಹೇಳಿ ಹೇಳುವ ರುಚಿ ಯವಿವರಣೆ ಒಂದು ಗ್ರಂಥಲ್ಲಿ ಓದಿದ ನೆಂಪು.ಇದು ನಿಂಗ ವಿಭಾಗಕ್ಕೆ ಹೇಳುವ ರುಚಿಯ ಪೂರಕವಾಗಿದ್ದು ಹೇಳಿ ಎನಗೆ ಅನಿಸುತ್ತು.ಅಲ್ದಾ?

    1. ನಿಂಗೊ ಹೇಳಿದ್ದು ಸರಿ ಗಣೇಶ ಮಾವ… 🙂

  7. ಡಾಗುಟ್ರಕ್ಕ,
    ಸಂಕ ರಿಪೇರಿ ಆದ್ದದು ಬೈಲಿನವಕ್ಕೆ ಎಲ್ಲೋರಿಂಗುದೇ ಒಳ್ಳೆದಾತು…
    ರುಚಿಕಟ್ಟಾದ ಒಂದು ಲೇಖನ ಓದಿದ ಹಾಂಗಾತು.ಒಟ್ಟಿಂಗೆ ಮಾಹಿತಿಗಳುದೇ…

    ಕೃಷ್ಣಪ್ರಕಾಶ ಬೊಳುಂಬು

    1. ಧನ್ಯವಾದ.. ಎನಗೆ ಗೊಂತಿಪ್ಪ ಮಾಹಿತಿಗಳ ಬೈಲಿಂಗೆ ತಿಳಿಶಿ ಕೊಡ್ತಾ ಇದ್ದೆ,ಇದು ನಮ್ಮ ಆಚಾರ್ಯರು ಉಪದೇಶ ಮಾಡಿದ ಮಾಹಿತಿಗೊ..ಎನಗೆ ಎನ್ನ ಆಚಾರ್ಯರಿಂದ ಸಿಕ್ಕಿದ ಉಪದೇಶಂಗೊ… ಈಗಾಣ ಎಲ್ಲಾ ಜನಂಗೊಕ್ಕೂ ಈ ಮಾಹಿತಿಗೊ ಗೊಂತಾಯೆಕ್ಕು,ಅದು ಅವರ ಜೀವನಲ್ಲಿ ಉಪಯೋಗ ಆಯೆಕ್ಕು ಹೇಳಿ ಎನ್ನ ಆಸೆ… 🙂

    1. ಎಂತಕಾಗಾ? ಪಂಚಗವ್ಯ ತೆಕ್ಕೊಳ್ತಿಲ್ಲೆಯಾ? ಅದರಲ್ಲಿ ಗೋ ಮೂತ್ರ ಇಪ್ಪದು ಗೊಂತಿಲ್ಲೆಯಾ ನೆಗೆಗಾರ ಅಣ್ಣಂಗೆ?ಗೋಮೂತ್ರ/ಗೋಅರ್ಕ ತೆಕ್ಕೊಳ್ತಿಲ್ಲೆಯಾ?
      ಸ್ವಮೂತ್ರ ತೆಕ್ಕೊಂಡರೂ ಒಳ್ಳೆದು ಹೇಳಿ ಮೊರಾರ್ಜಿ ದೇಸಾಯಿ ಅಜ್ಜ ತೋರ್ಸಿ ಕೊಟ್ಟಿದವು… 🙂

      1. ಗೋಮೂತ್ರ ಆಗಲೀ ಅರ್ಕ ಆಗಲೀ ಆನು ತೆಕ್ಕೊಳ್ತಿಲ್ಲೆ.ಎನ್ನ ಅಪ್ಪನ ಬೊಜ್ಜದ ದಿನವೂ ತೆಕ್ಕೊಂಡಿದಿಲ್ಲೆ.ಹಾಂಗೆ ಹೇಳಿ ಆನು ನಾಸ್ತಿಕ ಅಥವಾ ವಿಚಾರವಾದಿ ಅಲ್ಲ.ಶರೀರ ಹೆರ ಹಾಕಿದ ವಸ್ತು ಪುನಃ ತೆಕ್ಕೊಂಬದು ಹೇಳಿ ಆದರೆ ದೇವರು ಅದರ ಹೆರ ಬಪ್ಪಲೆ ಬಿಡ್ತಿತಾಯಿಲ್ಲೆ°.ಇದು ಚರ್ಚೆಗೆ ಅಲ್ಲ.ಕೆಲವು ಜೆನ ಅಭಿಪ್ರಾಯ ಹೆಳ್ತವಿಲ್ಲೆ.ಆನಂತೂ ಹೇಳ್ತೆ.

  8. ಪರಮ ಷಡ್ರಸ ಭೋಜನದ ಸವಿ ಸಿಕ್ಕಿತ್ತು ಅಕ್ಕ,ಧನ್ಯವಾದ.ಮಿತಲ್ಲಿ ಎಲ್ಲವನ್ನೂ ಸೇವಿಸಿರೆ ಹಿತ ಹೇಳೋದು ಸರ್ವಕಾಲಿಕ ಸತ್ಯ.
    ಊಟಲ್ಲಿ ಶುರುವಿಂಗೆ ರಜ ಸೀವು ಬಳುಸೊದಕ್ಕು,ವಿಮಾನಲ್ಲಿ ಶುರುವಿಂಗೆ ಚಾಕಲೇಟು ಕೊಡೋದಕ್ಕೂ ಕಾರಣ ಒಂದೇ ಆಗಿರೆಕ್ಕಲ್ಲದೋ?

    1. ಅಂಬಗ ದೊಡ್ದ ದೊಡ್ಡ ಹೋಟ್ಲಿಲ್ಲಿ ಸೂಪ್ (ಸೂಪಿ ಅಲ್ಲ!) ಕುಡಿತ್ತದು ಈ ಲೆಕ್ಕಕ್ಕೆ ಬತ್ತೊ ?! ವಿಮಾನಲ್ಲಿ ಚಾಕ್ಲೇಟು ಕೊಡುತ್ತದು ಜಗಿಯಲೆ; ಜಗುದಪ್ಪಗ ಕೆಮಿಯ ಒಳಾಣ ಒತ್ತಡ ಹೆರಾಣ ಒತ್ತಡಕ್ಕೆ ಸರಿಯಾಗಿ, ಕೆಮಿ ಗುಡುಗುಡು ಆವ್ತದು, ಬೇನೆ ಆವ್ತದು ಎಲ್ಲ ಕಡಮ್ಮೆ ಆವ್ತು. ಜೆಂಬಾರದ ಊಟಲ್ಲಿ ಸುರುವಿಂಗೆ ಸೀವು ಉಂಡಪ್ಪಗ ಉಂಬಲೆ ಶಕ್ತಿ ಬತ್ತು ! ಅದು ಪರಮಾನ್ನ, ದೇವರಿಂಗೆ ನೈವೇದ್ಯ ಮಾಡಿದ ಪ್ರಸಾದ, ಸುರುವಿಂಗೆ ಉಣ್ಣೆಕು ಹೇಳಿ ಆಯ್ಕು.

  9. ಸಂಶಯ ಪರಿಹಾರ ಮಾಡಿದ್ದಕ್ಕೆ ಧನ್ಯವಾದ ಸೌಮ್ಯ

    1. ನಿನ್ನ ಪಟ ಏಕೆ ಹಾಕಿದ್ದಿಲ್ಲೆ? 🙂

  10. ಧನ್ಯವಾದ ಅಪ್ಪಚ್ಚಿ.. ಅಪ್ಪು,ಆಯುರ್ವೇದಲ್ಲಿ ಜಿವನ ಕ್ರಮಕ್ಕೆ ತುಂಬಾ ಪ್ರಾಮುಖ್ಯತೆ ಕೊಟ್ಟಿದವು..ಜೀವನ ಕ್ರಮಲ್ಲಿ ಏರುಪೇರು ಆಗಿ ರೋಗ ಬಂದರೆ ಮಾತ್ರ ಮದ್ದು ಹೇಳುದು..ಆದರೆ ಜೀವನ ಕ್ರಮ ಸರಿ ಇದ್ದರೆ ಬೇರೆ ಎಂತದೂ ಬೇಕಾವುತ್ತಿಲ್ಲೆ…
    ನಮ್ಮ ಊಟಲ್ಲಿ ಕೈನೀರು ಹಾಕಿ ಊಟಕ್ಕೆ ನಮಸ್ಕಾರ ಮಾಡಿ ಊಟಮಾಡುದು ಕ್ರಮ ಅಲ್ಲದಾ?
    ಭಗವದ್ಗೀತೆಲಿ ಹೇಳ್ತವು
    ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ|
    ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್|| -ಭ.ಗೀತಾ ೧೫.೧೪
    ಭಗವಂತ ಅರ್ಜುನಂಗೆ ಹೇಳ್ತವು ಅವು ಎಲ್ಲಾ ಪ್ರಾಣಿಗಳ ಶರೀರಲ್ಲಿ ಜಠರಾಗ್ನಿ ಪ್ರಾಣ,ಅಪಾನ ಹೀಂಗೇ ೫ ವಿಧದ ವಾಯುವಿನೊಟ್ಟಿಂಗೆ ಸೇರಿಗೊಂಡು ೪ ಬಗೆಯ ಆಹಾರವ ಕರಗುಸುತ್ತೆ ಹೇಳಿ.. ಹಾಂಗಾಗಿ ನಾವು ಭಗವಂತಂಗೆ,ಅಗ್ನಿಗೆ ಹವಿಸ್ಸು ಕೊಡುವ ಭಾವನೆಲಿ ಊಟ ಮಾಡೆಕ್ಕು ಹೇಳಿ ಹಿರಿಯರು ಕೈನೀರು ಅಭ್ಯಾಸ ಮಾಡ್ಸಿದ್ದಾದಿಕ್ಕು ಅಲ್ಲದಾ?.. 🙂

    ಬೃಂಹಣ ಹೇಳಿದರೆ ವೃದ್ಧಿ ಹೊಂದುವಿಕೆ ಅಥವಾ ತುಂಬಿ ಪೂರ್ಣವಾಗುವಿಕೆ ಹೇಳಿ ಅರ್ಥ…ದೇಹವೂ ದಷ್ಟಪುಷ್ಟ ಅಪ್ಪದಕ್ಕೆ ಬೃಂಹಣ ಹೇಳುದು..

    ರೂಕ್ಷ ಹೇಳಿದರೆ ಸ್ನೇಹ ಅಂಶ ಹೋಗಿ ಒಣಗಿ ಒರಟು ಅಪ್ಪದು.. ಈಗಾಣ ಜಾಹೀರಾತಿಲಿ ಚರ್ಮ ರೂಕ್ಷ ಅಪ್ಪದು ಹೇಳ್ತವಲ್ಲದಾ?ಹಾಂಗೇ.. 🙂

  11. ಷಡ್ರಸ ಭೋಜನ ಕೊಟ್ಟ ಡಾಕುಟ್ರಕ್ಕಂಗೆ ಧನ್ಯವಾದಂಗೊ. ಆರು ರಸಂಗಳ ಗುಣ ದೋಷವ ನಮ್ಮ ಹಿರಿಯರು ತಿಳ್ಕೊಂಡು ಅದರ ಊಟಲ್ಲಿ ಅಳವಡಿಸಿದ ಕ್ರಮ ಮೆಚ್ಚೆಕ್ಕಾದ್ದೆ. ಆಹಾರ ವಿಜ್ಞಾನ ಆಯುರ್ವೇದದ ಒಂದು ಭಾಗವೇ ಆಗಿತ್ತಿದ್ದು.
    [ಪೂಜ್ಯ ಭಾವನೆ ಮಡಿಕ್ಕೊಂಡು ಊಟ ಮಾಡಿದರೆ ಅನ್ನ ದೇಹಕ್ಕೆ ಬಲ,ಶಕ್ತಿ ಕೊಡ್ತು. ಅದೇ ಪೂಜನೀಯ ಭಾವ ಇಲ್ಲದ್ದೆ ಒಟ್ಟು ಉಂಬಲೆ ಸಿಕ್ಕಿತ್ತು ಹೇಳಿ ತಿಂದರೆ ಅದೇ ಅನ್ನ ದೇಹವ ನಾಶ ಮಾಡ್ತು]
    ಒಳ್ಳೆ ಮಾತು. ಎಲ್ಲಾ ಕಾಲಕ್ಕೂ ಪ್ರಸ್ತುತವೇ.
    ನಮ್ಮಲ್ಲಿ ಊಟ ಹೇಳಿರೆ ಸಿಕ್ಕಿದ್ದರ ಮುಕ್ಕುತ್ತ ಕ್ರಮ ಅಲ್ಲ. ಎಲ್ಲವನ್ನೂ ಬಳುಸಿ ಆದ ಮತ್ತೆ ಪರಿಷಿಂಚನ ಮಾಡಿ ಎಲ್ಲರೂ ಒಟ್ಟಿಂಗೆ ಸುರು ಮಾಡುವದು. ಊಟವ ಯಜ್ಞಕ್ಕೆ ಹೋಲಿಕೆ ಮಾಡ್ತವು. ಜಠರಾಗ್ನಿಗೆ ನಾವು ಅರ್ಪಿಸುವ ಹವಿಸ್ಸು ಹೇಳ್ತ ಭಾವನೆಲಿ ಊಟ

    [ಶರೀರ ಬೃಂಹಣ ಮಾಡ್ತು]- ಇಲ್ಲಿ ಬೃಂಹಣ ಶಬ್ದದ ಅರ್ಥ ಗೊಂತಾಯಿದಿಲ್ಲೆ
    [ಕಟು ರಸಕ್ಕೆ ಲಘು,ಉಷ್ಣ,ರೂಕ್ಷ ಗುಣ ಇದ್ದು..] ರೂಕ್ಷ ಗುಣ ಹೇಳಿರೆ ಎಂತರ?
    ಶರ್ಮಪ್ಪಚ್ಚಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×