Oppanna.com

ಸಮಸ್ಯೆ 22 : ಚಿತ್ರಕ್ಕೆ ಪದ್ಯ (2)

ಬರದೋರು :   ಸಂಪಾದಕ°    on   09/03/2013    91 ಒಪ್ಪಂಗೊ

ಈ ಚಿತ್ರಕ್ಕೆ ಯೇವದೇ ಛ೦ದಸ್ಸಿಲಿ ಕವನ ಬರೆಯಿ.

ಚಿತ್ರಕೃಪೆ: ಪವನಜ ಮಾವ°
ಚಿತ್ರಕೃಪೆ: ಪವನಜ ಮಾವ°

91 thoughts on “ಸಮಸ್ಯೆ 22 : ಚಿತ್ರಕ್ಕೆ ಪದ್ಯ (2)

  1. ಈ ಪದ್ಯವ ಎನ್ನ ಅಪ್ಪ ಬರದದ್ದು. ಆನು ಅದರ ವಾರ್ಧಕಕ್ಕೆ ಅಳವಡಿಸಿ ಇಲ್ಲಿ ಹಾಕಿದ್ದೆ.

    ಕಡುಬೆಶಿಲ ಧಗೆ ನೋಡಿ ಭೂತಾಯಿ ಬಾಯೊಡೆದು
    ಕುಡಿಗಳಡೆ ತಿರುಗಿತ್ತು ಕೇಳ್ಯೊಂಡು ಹನಿನೀರ
    ಕೊಡಿಯೆನಗೆ ಬಾಯಾರಿ ಬಳಲಿದ್ದೆಯಾನಿಂದು ಕರುಣೆಂದ ನೋಡಿಯೆನ್ನ
    ಒಡಲಕುಡಿ ಬಲುಬುದ್ಧಿ ಜೀವಿಗಳೆ ಹಾಳ್ಗೆಡುಸಿ
    ಸುಡುತಿಪ್ಪ ಪರಿಸರಲಿಯುಸಿರಾಟ ಕಷ್ಟವೆನೆ
    ತಡಬಡಿಸಿ ಸಮತೋಲಗೊಳುಸುಲೆ ಪಕೃತಿಯೇ ಸುರುಸಿತ್ತು ಹಿಮದರಾಶಿ

  2. ಎಲ್ಲ ನೋಡಿ ಅಪ್ಪಗ ಕಾಂಬದು, ಒಂದು ಹವ್ಯಕ ಕವಿ ಸಮ್ಮೇಳನ ಮಾಡಿರೆಂತ?

    1. ಅಪ್ಪು ಶ್ಯಾಮಣ್ಣ. ನಿಂಗಳ ಆಶಯ ಬಹು ಬೇಗ ಸಾಕಾರ ಅಗಲಿ ಹೇಳಿ ಸರಸ್ವತಿಗೆ ಕೈ ಮುಗಿತ್ತೆ.

  3. ಅದಿತಿ, ಎಂತ ಹೇಳೆಕ್ಕು ಹೇಳಿ ಗೊಂತಾವುತ್ತಿಲ್ಲೆ. ಹಿಗ್ಗಿನ ಸಗ್ಗವೇರಿದ ಅನುಭವ ! ಪ್ರತಿಯೊಂದನ್ನೂ ಮುಟ್ಟಿಮಾತಾಡ್ಸಿಕ್ಕಿ ಬಂದದು, ಆ ಎಲ್ಲವನ್ನೂ ಪದಂಗಳಲ್ಲಿ ಹಿಡುದುನೇಯ್ದು ಪದ್ಯ ಬರದ್ದದರ ಓದಿ ರೋಮಾಂಚನ ಆತು. ಅಭಿನಂದನೆಗೊ ಅದಿತಿ .

    1. ಎಲ್ಲರ ಪ್ರೋತ್ಸಾಹದ ನುಡಿಗೊಕ್ಕೆ ಧನ್ಯವಾದ.
      ನಿಂಗಳೆಲ್ಲರ ಮಾತುಗೊ ಎನಗೆ ಇನ್ನೂ ಹೆಚ್ಚು ಹೆಚ್ಚು ಬರವ ಉತ್ಸಾಹ ತಂದು ಕೊಟ್ಟಿದು.

  4. ಅಬ್ಬಾ…. ಸ್ಪರ್ಧೆಯೋ ಹೇಂಗೆ…. ಭಾಮಿನಿಗೆ ನಡದೂ ನಡದೂ ಬಚ್ಚುವಷ್ಟು ಲಾಯ್ಕಲ್ಲಿ ಓಡಿಸಿದ್ದಿ ಮುಳಿಯದಣ್ಣ, ಅದಿತಿಯಕ್ಕ………
    ಅಣ್ಣಾ, ನಿಂಗಳ ಸುರುವಾಣ ಷಡ್ಪದಿಯ ಅಖೇರಿ ಗೆರೆಯ ಮೊದಲಕ್ಷರ ಗೊಂತಾತಿಲ್ಲೆನ್ನೇ
    ಎಲ್ಲೋರ ಪದ್ಯವೂ ವಿಭಿನ್ನವಾಗಿ ಮೂಡಿದ್ದು….. ಆನು ಪರದೆಲಿ ಈ ಪಟವ ನೋಡಿಗೊಂಡಿಪ್ಪಗ ಎನ್ನ ಮಗ ೩ ವರ್ಷದ ಲೂಟಿ ಪೋಕ್ರಿ ಹೀಂಗೆ ಗೇಶಿದ಼… 🙂

    ದಿಕ್ಕಿನ ಚಾಮಿಗೆ
    ಹಕ್ಕಿಗಳಿಂಚರ
    ಶಕ್ಕರೆ ಜೀಜಿಯ ಪನ್ನೀರು
    ಬಿಕ್ಕಿದ ಬಜವಿಲಿ
    ಪುಸ್ಕನೆ ಜಾರುಗು
    ಫಕ್ಕನೆಯೋಡಿರೆ ಕಾರಿಂಗೆ

    1. ಜೆ೦ಬರದ ಸ೦ಭ್ರಮವೊ ಸುತ್ತಲಿಲಿ+ಅ೦ಬರಕ್ಕೂ ಭೂಮಿದೇವಿಗು ಬದ್ಧವಿದ್ದಡವೋ?
      ಅ೦ಬರವ ಆಕಾಶದ ಬದಲು ಮೋಡ ಹೇಳ್ತ ಭಾವಲ್ಲಿ ತೆಕ್ಕೊ೦ಡೆ.
      ಮುದ್ದಣನ ರಾಮಾಶ್ವಮೇಧಲ್ಲಿ ಒ೦ದು ಸಾಲು ಹೀ೦ಗಿದ್ದು – ತಿರೆವೆಣ್ಗೆ ಮುಗಿಲ್ಸೊ೦ದಿಯೊಳ್ ಬಳ್ಳಿವರೆದ ನೇಹದಿ೦ ಬೆಳ್ಳ೦ಗೆಡೆವ ಸೊಗದಾಲಿ ನೀರೆನೆ ಪೆರ್ಚಿ ಪರಿದುದೀ ಪೊರ್ಪ೦…( ಭೂ ವನಿತೆಗೆ ಮುಗಿಲ ವಿಟನೊಟ್ಟಿ೦ಗೆ ಬೆಳದ ಸ್ನೇಹದ ಫಲವಾಗಿ ಉ೦ಟಾದ ಸ೦ತೋಷದ ಕಣ್ಣೀರಿನ ಹಾ೦ಗೆ ತು೦ಬಿ ಹರುದತ್ತು ಸರೋವರ ),

      1. ಹಾಂ…. ಈಗ ಮಂಡೆಗೆ ಹೊಕ್ಕತ್ತಣ್ಣಾ…… ವಿವರಿಸಿದ್ದಕ್ಕೆ ಧನ್ಯವಾದಂಗೊ….

  5. ಯಬ್ಬೋ!! ಭಾರೀ ಲಯ್ಕಿನ ಭರ್ಜರಿ ಪದ್ಯಂಗ…ರಘು ಅಣ್ಣ ಮತ್ತು ಅದಿತಿ ಅಕ್ಕನ ಕಲ್ಪನೆ, ವರ್ಣನೆ, ಪದಮಾಲೆಗೆ ಒಂದು ಸಲಾಂ..

  6. “ಟೀಕೆ” ಮಾವ ಮತ್ತು ಮುಳಿಯ ಭಾವ ಹೇಳಿದ ಹಾಂಗೆ ಪಟಲ್ಲಿ ಕಾಂಬ ಎಲ್ಲದರನ್ನೂ ಸಂಪೂರ್ಣ ಕವಿತೆ ಮೂಲಕ ವರ್ಣನೆ ಮಾಡುಲೆ ಪ್ರಯತ್ನಿಸಿದ್ದೆ.
    ಬರಿ ಓದುದು ಅಲ್ಲ, ಮುಂದಣ ಚಳಿಗಾಲಲ್ಲಿ ಬೆಳಗಿಞ್ಞಾವ ಎದ್ದು ಹೆರ ಬರೆಕ್ಕು ಆತೋ? ಎನಗಂತೂ ಹಿಮ ನೋಡುದು ಹೇಳಿರೆ ತುಂಬಾ ಕುಶಿ.
    ಸಣ್ಣಕಿಪ್ಪಗ ಬಾಗಿಲು ಚೂರು ಓರೆ ಮಾಡಿ ಸೆರೆಲಿ (ಪೂರ ತೆಗದರೆ ಹಿಮ ಒಳ ಬತ್ತು ಹೇಳಿ ಅಮ್ಮ ಬೈಕ್ಕೊಂಡಿತ್ತು. ಅಮ್ಮಂಗೆ ಶೀತ ಆವ್ತು ಹಿಮ ಉಸಿರಿಲಿ ಹೋದರೆ, ಹಾಂಗಾಗಿ) ಹೆರ ಇಣುಕಿಕೊಂಡು ಇತ್ತಿದ್ದೆ. ಪದ್ಯ ಬರವಗ ಅದುವೇ ನೆಂಪು ಆಯ್ಕೊಂಡಿತ್ತು.

    ಮನೆಯ ಸುತ್ತಲು ಮೈಂದು ಕವಿದಿದು
    ಕನಸು ಕಂಡದು ಸಾಕು ಮಾಡುವ
    ಕೊನರು ಕೊಂಬೆಯ ಮಾತಿಗೆಳಿಯುವ ಹೇಳಿ ಕಂಡತ್ತು
    ತನುವ ಭಾರವ ಹಗುರ ಮಾಡುಲೆ
    ಮನಕೆ ತಪ್ಪಲೆ ಶಾಂತಿ ನೆಮ್ಮದಿ
    ದಿನವು ಹೊದಿಕೆಯ ಬಿಸುಟು ದೂರಕೆ ಹೋಪಲಿದ್ದಾನು

    ಹೆರಟೆ ಬೆಳಗಿಞ್ಞಾವ ಸುತ್ತುಲೆ
    ಹೆರಣ ದೃಶ್ಯವ ಹೇಂಗೆ ಹೇಳಲಿ
    ದೊರಗು ಕೆಂಪಿನ ಮಣ್ಣ ಮಾರ್ಗದೆ ಕಾಣ್ತು ನೊಂಪಿಂಗೆ
    ಗರಿಯ ತೋರುಸಿ ತೆಂಗು ನಾಚಿರೆ
    ಪರದೆ ಮೋರಗೆ ಹಿಡುದು ನಿಂದಿದು
    ಮರವು ದೂರಲಿ ಮೌನ ಮುರಿಯದೆ ಭಾರಿ ಚೆಂದಲ್ಲಿ

    ಬೇಲಿ ತಾನುದೆ ಹಿಂದೆ ಬೀಳದೆ
    ಪಾಲು ಕೊಟ್ಟಿದು ಚೆಂದ ನೋಟಕೆ
    ಮಾಲಿ ಮರಗಿಡ ಬೇಡ ಬೀಳುದು ಹೇಳಿ ಬಲಕೊಟ್ಟು
    ಮಾಲೆ ಕಟ್ಟಿದ ಹಾಂಗೆ ಸಾಲಿಲಿ
    ನೂಲು ಗೂಡಿನ ಜೇಡನರಮನೆ
    ನೇಲಿ ಬೆದುರಿನ ಕೋಲು ಬೆಳ್ಳಿಯ ಗೆಜ್ಜೆ ಹಾಂಗಾಯ್ದು

    ಸೋಕಿ ತಣ್ಣನೆ ಗಾಳಿ ಮೋರಗೆ
    ಮೋಕೆ ಮಾಡಿತು ಪ್ರೀತಿಯಿಂದಲೆ
    ಶೋಕವಿದ್ದರೆ ಮನಸ ಮೂಲೆಲಿ ಮಾಯ ಘಳಿಗೆಲಿಯೆ
    ನಾಕವಿಪ್ಪದು ಭೂಮಿ ಮೇಗೆಯೆ
    ಬೇಕು ಕಣ್ಣುಗೊ ಪತ್ತೆ ಮಾಡುಲೆ
    ಸಾಕು ಬೇರೆಯ ಸಗ್ಗ ಬೇಡೆನಗಿದುವೆ ನೆಮ್ಮದಿಯು

    ರಂಪ ಮಾಡದ್ದೇಳಿ ಬೇಗನೆ
    ತಂಪು ಪರಿಸರ ಕಣ್ಣು ತುಂಬಲಿ
    ನೆಂಪು ಹಾರಿದ ಕತೆಯ ಮಾತಿನ ಹೇಳಿ ತಪ್ಪಿಸೆಡಿ
    ಇಂಪು ಗಾನವು ಕೆಮಿಗೆ ಕೇಳುಗು
    ಕಂಪು ಬೀರುಗು ಸುತ್ತ ಹೂಗುಗೊ
    ಗೊಂಪು ಕೊಯ್ಯುವ ನೆವನ ಮಾಡಿಯೆ ಹಜ್ಜೆ ಹೆರಮಡುಗಿ

    1. ವ್ಹಾ!
      {ಗರಿಯ ತೋರುಸಿ ತೆಂಗು ನಾಚಿರೆ
      ಪರದೆ ಮೋರಗೆ ಹಿಡುದು ನಿಂದಿದು
      ಮರವು ದೂರಲಿ ಮೌನ ಮುರಿಯದೆ ಭಾರಿ ಚೆಂದಲ್ಲಿ}
      {ನಾಕವಿಪ್ಪದು ಭೂಮಿ ಮೇಗೆಯೆ
      ಬೇಕು ಕಣ್ಣುಗೊ ಪತ್ತೆ ಮಾಡುಲೆ}
      ಲಾಯಕ ಕಲ್ಪನೆ! ವರ್ಣನೆ! ವೈಚಾರಿಕತೆ!

    2. ಅದಿತಿ ಅಕ್ಕಂದುದೆ ರೈಸುತ್ತಾ ಇದ್ದು…. ಒಟ್ಟಾರೆ ಮೇಗೆ ಬೈಲಿಲಿ ಕವಿಗಳ ಕಾರ್ಬಾರೇ ಕಾರ್ಬಾರು…

      1. ಅದಿತಿ ಅಕ್ಕ, “ರವಿ ಕಾಣದ್ದನ್ನು ಕವಿ ಕ೦ಡ” ಹೇಳಿದ್ದು ನಿ೦ಗಳ ಹಾ೦ಗಿಪ್ಪವರ ನೋಡಿಯೆ . ನಿ೦ಗಳ + ಮುಳಿಯದಣ್ಣನ ಕವನ ಓದಿ ಅಪ್ಪಗ ರವಿಯ ಬಗ್ಗೆ ಕನಿಕರ ಮೂಡಿತ್ತು– ಉದಿಯಪ್ಪಗಾಣ ಈ ಚೆ೦ದವ ನೋಡ್ಲೆ ಅವ೦ಗೆ ಎಡಿತ್ತಿಲ್ಲೆನ್ನೆ ಹೇಳಿ ..

    3. ಚಿತ್ರಕ್ಕೆ ಪದ್ಯ ಬರೆರಿ ಹೇಳಿರೆ ಕಾವ್ಯವೇ ಬಂತು ರಘು + ಅದಿತಿಯರದ್ದು. ತುಂಬಾ ಒಳ್ಳೆದಿದ್ದು.

  7. ಕ೦ಬಳಿಯ ಗುಡಿತೆಗದು ಚಾವಡಿ
    ಕ೦ಬದಾ ಬುಡಲಿದ್ದ ಹಸೆ ತಲೆ
    ಕೊ೦ಬಿನೆಡೆ ಕಣ್ಣೆರಡು ಪಿಳಿಪಿಳಿ ಮಾಡಿ ನೋಡುವಗ।
    ನ೦ಬುಲೆಡಿಯದ್ದೊ೦ದು ಸ೦ಗತಿ
    ಜೆ೦ಬರದ ಸ೦ಭ್ರಮವೊ ಸುತ್ತಲಿ
    ಲ೦ಬರಕ್ಕೂ ಭೂಮಿದೇವಿಗು ಬದ್ಧವಿದ್ದಡವೋ?।।

    ಹಸೆ ಮಡುಸಿ ಹೆರಬ೦ದು ನೋಡಿರೆ
    ಸೆಸಿ ಮರ೦ಗದ ಸಾಲು ಸಾಲಿಲಿ
    ಹಸಿರ ತೋರಣದಾಯ್ತಪಾಣಿಗಳಾಗಿ ನಿ೦ದಿದವು।
    ಕುಸುಮದಳವರಳುವ ಮುಹೂರ್ತಕೆ
    ನಸುಕಿಲಿಯೆ ಬಪ್ಪವರ ಹರಸುಲೆ
    ಯೊಸಗೆಯಕ್ಷತೆಯಾ೦ಗೆ ನಾಲ್ಕೆಲೆ ಚದುರಿ ಬಿದ್ದತ್ತು।।

    ನೊ೦ಪು ನೆಲಗ೦ಬಳಿಯ ಹಾಸಿದ
    ಕೆ೦ಪು ಚರಳಿನ ಮಾರ್ಗ ಕರೆ ಕೆಮಿ
    ಗಿ೦ಪು ಸ೦ಗೀತಕ್ಕೆ ಕೋಗಿಲೆ ಕೊರಳೆ ಕೊಳಲಾತು।
    ತ೦ಪು ಗಾಳಿಯ ತು೦ಬ ಹೂಗಿನ
    ಕ೦ಪು ಹರಡಿದ್ದನ್ನೆ ಬದ್ಧದ
    ನೆ೦ಪು ಜೀವನದುದ್ದ ಹಸುರಾಗಿಕ್ಕಿದನುದಿನವೂ ।।

    ಮನೆಯ ಜಾಲಿಡಿ ರ೦ಗವಲ್ಲಿಯೆ
    ವನದ ಪರದೆಯು ಕರಗೊಗಿಬ್ಬನಿ
    ಹನಿಗೊ ತಟಪಟ ಬೀಳುವದೆ ಪನ್ನೀರಿನಭಿಷೇಕ।
    ನನಸೊ?ದೇವರೆ ಹಸಿರು ಬಾವುಟ
    ಮನಸು ಮಾಡಿಯೆ ಬೀಸಿದನೊ? ಸವಿ
    ಕನಸು ಕ೦ಡೀ ಪ್ರೇಮಿಗಳ ಮಧುಚ೦ದ್ರವೆಲ್ಲಿಕ್ಕೊ? ।।

    ಮಣ್ಣಗೋಡೆಗೆ ಬೇಡ ಸುಣ್ಣದ
    ಬಣ್ಣ ಮುಸುಕಿನ ಬಿಡುಸಿ ನೋಡುವ
    ಕಣ್ಣು ಕೇಳುವ ಕೆಮಿಗೊ ಸಾಕೀ ಹೃದಯ ತು೦ಬುಸಲೆ।
    ಮಣ್ಣಿ ತಿ೦ಬಗ ಕೊಶಿಲಿ ಹಿಗ್ಗುವ
    ಸಣ್ಣ ಮಗುಮುಗ್ಧತೆಲಿ ಹಾಡುವ°
    ಮಣ್ಣು ಮುಗಿಲಿನ ಬ೦ಧ ಶಾಶ್ವತವಿರಲಿ ಮು೦ದೆ೦ದೂ।।

    1. ಮಣ್ಣ ಮುಗಿಲಿನ ಬಂಧದ ಬದ್ದಕ್ಕೆ ಹೋಪಲೆ ಇನ್ನಾಣ ಚಳಿಗಾಲಕ್ಕೊರೆಗೆ ಕಾಯೆಕ್ಕನ್ನೆಯಪ್ಪಾ ! ಪ್ರೌಢವೂ ಮನಸ್ಪರ್ಶಿಯೂ ಆದ ಸುಂದರ ಕವಿತಾಗುಚ್ಚ . ನೋಡುವ ಕಣ್ಣೂ ಕೇಳುವ ಕೆಮಿಯೂ ಇದ್ದರೆ ಎಲ್ಲೆಲ್ಲೂ ಸಂಗೀತವೇಯಡ, ಎಲ್ಲವೂ ಪ್ರಕೃತಿಲಿಯೇ ಇದ್ದು , ನಾವು ಅದರ ನೋಡುವ ಮನಸು ಮಾಡೆಕ್ಕಾದ್ದು ಮುಖ್ಯ. ಸೊಗಸಾದ ರಚನೆಗೆ ಅಭಿನಂದನೆಗೊ.

    2. ಭಾವ, ಕಲ್ಪನೆ ಲಾಯ್ಕಿದ್ದು. ಪದ್ಯ ಓದಿದ ಮೇಲೆ ಪುನಾ ಪಟ ನೋಡಿದೆ.
      ಅಲ್ಲಿ ಮಣ್ಣ ಮಾರ್ಗ ಇತ್ತಿಲ್ಲೆ. ಕೆಂಪು ನೆಲಗಂಬಳಿಯೇ ಕಂಡತ್ತು

    3. ಪಸ್ಟ್ ಕ್ಲಾಸಾಯಿದು ಇದು… ನಾಕು ನಾಕು ಸರ್ತಿ ಓದಿದೆ….

    4. ವಾಹ್, ಕವನವ ನೋಡಿ ಅಪ್ಪಗ ಮುಳಿಯದ ಮಾಣಿ ಹೇಳಿ ಸರೀ ಗೊಂತಾವ್ತು. ಅಂಬರ ಭೂಮಿಯ ಮದುವೆ ಅದ್ಭುತ ಕಲ್ಪನೆ. ರಘು ಭಾವಾ, ರೈಸಿತ್ತೋ, ರೈಸಿತ್ತು. ಪಟಕ್ಕೆ ತಕ್ಕ, ಪದ್ಯ.

    5. ಓಹ್ ! ರಮ್ಯ! ನಸುಕಿನ ಪ್ರಕೃತಿಲಿಪ್ಪ ಚೇತನವೆಲ್ಲಾ ಈ ಕವನಲ್ಲೆ ಬ೦ದು ಕೂದುಗೊ೦ಡ ಹಾ೦ಗಿದ್ದನ್ನೆ!!

    6. ಆಹಾ!…ಮುಳಿಯದಣ್ಣಾ.ಕೋಗಿಲೆ ಕೊರಳೆ ಕೊಳಲಾತು,ದೇವರೆ ಬೀಸಿದ ಹಸಿರು ಬಾವುಟ,ಮಣ್ಣು ಮುಗಿಲಿನ ಬಂಧ..ಇದೆಲ್ಲಾ ಮರವಲೆಡಿಗೋ ? ನಿಂಗಳ ಕವಿ ಭಾವಕ್ಕೆ ಕೈ ಮುಗಿದೆ .

  8. ಮುಳಿಯ ಭಾವ,
    ವಿಸಂಧಿ ದೋಷ ಪರಿಹಾರ ಮಾಡಿದ್ದಕ್ಕೆ ಆಭಾರಿ.ದಿನಕರ ದೇಸಾಯಿಗಳಹೆಚ್ಹಿನ ಚುಟುಕಂಗಳಲ್ಲಿ ಸುರುವಾಣ ಎರಡು ಗೆರಗೆ ಒಂದು ರೀತಿ,ಅಕೇರಿಯಾಣ ಎರಡು ಗೆರೆಗೆ ಮತ್ತೊಂದು ರೀತಿಯ ಅಂತ್ಯ ಪ್ರಾಸ ಬತ್ತು.ನಾಲ್ಕು ಗೆರೆಲಿಯೂ ಒಂದೇ ರೀತಿಯ ಅಂತ್ಯ ಪ್ರಾಸ ಬಪ್ಪದೂ ಇದ್ದು.ಹೆಚ್ಹಿನ ವಿವರ ಕೆಳಾಣ ಪುಸ್ತಕಲ್ಲಿ ಸಿಕ್ಕುತ್ತು.
    ಪುಸ್ತಕಃ ದಿನಕರನ ಚೌಪದಿ(೨೫೦೦ ಚುಟುಕಂಗಳ ಸಂಗ್ರಹ)ಪ್ರಕಟಣೆಃ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು(೨೦೧೦)
    ಪುಟಃ ೫೧೪+೮ ಕ್ರಯಃ ರೂ ೨೦೦
    ಪುತ್ತೂರಿನ ಅರ್ತಿಕಜೆ ಅಣ್ಣ(ಅಜ್ಜ) ಈ ಸಾಹಿತ್ಯ ಪ್ರಕಾರಲ್ಲಿ ತುಂಬಾ ಕೆಲಸ ಮಾಡಿದ್ದವು.

  9. ಎರಡು ಪದ್ಯವೂ ಭಾರಿ ಲಾಯ್ಕಲ್ಲಿ ಬೈಂದು.
    ನಿಂಗ ಕ್ಯಾಮೆರಾದ ಜನ ಆದ ಕಾರಣ ಲೆನ್ಸ್ ಬಗ್ಗೆ ಅಷ್ಟು ಬೇಗ ತಲೆಗೆ ಬಂತದ ಆಲೋಚನೆ.
    ಎನಗೆ ಕುಶಿಯಾತು ಪದ್ಯ ಓದಿ.

  10. ಪವನಜ ಮಾವ ತೆಗದ ಫೊಟೋ ಲಾಯಕು ಬಯಿಂದು, ಎರಡು ಮಾತಿಲ್ಲೆ.
    ಮುಂಜಾವಿನ ವರ್ಣನೆ ಬಿಟ್ಟು ಬೇರೆ ಮಾರ್ಗ ಹಿಡುದ್ದೆ.

    ಕೋಟೆ ಕರೆಲಿ ಕಸದ ರಾಶಿ
    ಮೂಟೆ ಹಾಂಗೆ ಕೂಡಿ ಮಡಗಿ
    ಸೂಟುಮಣ್ಣು ಮಾಡುಲೇಳಿ ಕಿಚ್ಚುಕೊಟ್ಟವು ।
    ತೋಟಕೊಳ್ಳೆಯೀಟುವಾತು
    ಕಾಟಕೊಡುವ ನುಸಿಯು ಹೋತು
    ಮಾಟವಾಗಿ ಕಂಡು ಬಂತು ಹೊಗೆಯ ವೈಭವ ॥

    ಇನ್ನೊಂದು ಪದ್ಯ ಹೀಂಗಿದ್ದು. ಎರಡ್ನೆ ಸರ್ತಿ ಪವನಜ ಮಾವನಲ್ಲಿ ಕ್ಷಮೆಕೋರ್ತಾ ಇದ್ದೆ.

    ಮಸುಕಾಯಿದೋ ಹೇಂಗೆ ಕೆಮರಾದ ಲೆನ್ಸು
    ಬಂದಿಪ್ಪಲೂ ಸಾಕು ರಜ್ಜ ಫಂಗಸ್ಸು
    ಹೀಂಗೆಯಾದರೆ ಹೇಂಗೆಯಾಗ ಫೋಕಸ್ಸು
    ಹೊಗೆಲಿ ತೆಗದಾ ಹಾಂಗೆ ಪಟಂಗೊ ಬಸ್ಸು ॥

  11. ಉದಾಹರಣೆಯೊಟ್ಟಿಂಗೆ ಒಪ್ಪಮಾಹಿತಿ ಕೊಟ್ಟ ತೆಕ್ಕುಂಜ ಭಾವಂಗೆ,ವಸ್ತುವಿನ ಮೆಚ್ಹಿದ ಜಯಗೌರಿ ಅಕ್ಕಂಗೆ ಧನ್ಯವಾದಂಗೊ.ಆನು ಕಾಸ್ರೋಡಿನ ಮೂಲೆಲಿಪ್ಪ ಏತಡ್ಕಹೇಳ್ತ ಹಳ್ಲಿಲಿಪ್ಪದು.ಎನ್ನ ಪದ್ಯವ ಈ ರೀತಿ ಬದಲ್ಸಿ ಬರೆತ್ತೆ.
    ನಸುಕು ನೋಡು ಮುಸುಕು ಹನಿಗೆ
    ಮಸುಕು ಕಾಂಬ ನೋಟ ಚೆಂದ
    ಮುಸುಕು ಹಾಕಿ ಒರಗಿ ಕನಸು ಕಂಡ ಮಾಣಿಗೆ
    ಉಸುಲು ಕಟ್ಟಿ ಬಂದ ಮಳಗೆ
    ಕೆಸರು ರಟ್ಟಿ ವಸ್ತ್ರ ಕೆಂಪು
    ಕಸವು ಕಟ್ಟಿ ತೋಡ ನೀರು ಸಮಲಿ ಹಟ್ಟಿಗೆ

    ಇದರೊಟ್ಟಿಂಗೆ ದಿನಕರ ದೇಸಾಯಿ ಬರದ ರೀತಿಲಿಪ್ಪ ಒಂದು ಚುಟುಕ-
    ಮುಸುಕಿದ ಹನಿಯೊಳ ಇಪ್ಪ ಚೆಂದದ ನೋಟ
    ಬಣ್ಣ ಬಣ್ಣದ ಹೂಗುಗೊ ಅರಳಿದ ತೋಟ
    ಹೇಳದ್ದೆ ಮಳೆ ಬಂದು ಬೊದುಲಿದ್ದು ಮಾರ್ಗ
    ಅವರವರ ಭಾವಕ್ಕೆ ಸುಲಭದ ಸ್ವರ್ಗ

    1. ನರಸಿ೦ಹ ಭಾವಾ,
      ನಿ೦ಗಳ ಪ್ರಯತ್ನ ಕೊಶಿ ಕೊಟ್ಟತ್ತು. ಲಾಯ್ಕ ಆತೀಗ.
      ಮೂರನೆ ಸಾಲಿಲಿ “ಮುಸುಕು ಹಾಕಿಯೊರಗಿ ಕನಸು ಕಂಡ ಮಾಣಿಗೆ” ಹೇಳಿರೆ ವಿಸ೦ಧಿ ದೋಷ ತಪ್ಪುತ್ತು.
      ಮಾಣಿಯ ಕನಸು ನೀರಾಗಿಕ್ಕು ಬೆಳ್ಳಕ್ಕೆ !

      ಚುಟುಕವೂ ಅರ್ಥಪೂರ್ಣ. ದಿನಕರ ದೇಸಾಯಿಗೊ ಎರಡ್ನೆ ಮತ್ತೆ ನಾಲ್ಕನೆ ಸಾಲಿನ ಅ೦ತ್ಯಪ್ರಾಸಲ್ಲಿ ಬರಕ್ಕೊ೦ಡಿದ್ದದು ಅಲ್ಲದೋ?

    2. ಒಳ್ಳೆ ಕಲ್ಪನೆ ಮಾವ. ಪದ್ಯ ಲಾಯ್ಕಾತು.

  12. ಬೆಳಗಪ್ಪಗ ಎದ್ದ ಕೂಡ್ಲೆ ಕಾಂಬ ದೃಶ್ಯದ ವರ್ಣನೆ ಲಾಯಿಕಾಯ್ದು…

  13. ಮಾಹಿತಿಗೆ ಧನ್ಯವಾದಂಗೊ ಅದಿತಿಯಕ್ಕ

  14. ಒೞೆ ಆಶಯ ಇಪ್ಪ ಪದ್ಯ.
    ಮೈ೦ದು ಮುಸುಕಿದ ಪಟಲ್ಲಿ ಆ ಸಣ್ಣ ಕಾರು ಕ೦ಡದ್ದು ಸಾಕನ್ನೆ. ಃ-)

    1. ಹಿಮಕರಗಿರೆ ಎಂತ ಇಕ್ಕು ನೋಡ್ಲೆ ಝೂಮ್ ಔಟ್ ಮಾಡಿರೆ ಒಂದು ಸಣ್ಣ ಕಾರಿತ್ತು..ಧನ್ಯವಾದ 🙂

  15. ಹಸುರುಸಿರಿ ಪರಿಸರದ ನಡುಕಂಗೆ ಮನೆಯಿದ್ದು

    ಮಸುಕಿದ್ದು ಹಿಮತುಂಬಿ ನೋಟವದು ಗೋಜಲಾ

    ಗಿಸಿದರೂ ಗುಮ್ಮನಂತಿಪ್ಪದೀಯೊಂದುಂದು ಕಾರಕ್ಕು ನೂರಲ್ಲ ಸಾವಿರಾರು

    ಬುಸುಬುಸುನೆ ಹೊಗೆಬಿಡುವ ವಾಹನಂಗಂಳದ್ದೇ

    ಬಿಸುಪಿಕ್ಕು ಮುಂದೊಂದು ದಶಕಲ್ಲಿ ಮರಗಿಡವೊ

    ಳುಸುಲಪ್ಪ ಗುರುತರದ ಹೊಣೆಹೊತ್ತು ಭೂತಾಯಿ ಕಣ್ವರಸಿ ಮಂಕಡಿಸುವ

    1. ಜಯಗೌರಿ, ನಿಂಗಳ ಪದ್ಯದ ಮೂರನೇ ಸಾಲಿಲಿ ಏಳು ಗಣ ಬಂದಹಾಂಗಿದ್ದನ್ನೆ. ಮತ್ತೆ ನಾಲ್ಕರಲ್ಲಿ ಅಕೇರಿಗೆ ವಾಹನಂಗ ಆದಮೇಲಾಣ ಸೊನ್ನೆ ತೆಗೆಯಕ್ಕಾತೋ. ತಿದ್ದಿದ್ದಲ್ಲ, ಎನ್ನನ್ನೇ ಆನು ಪರಿಶೀಲಿಸಿಗೊಂಬದು ಅಷ್ಟೇ.

    2. ಜಯಗೌರಿ ಅಕ್ಕ,
      ಭಾರೀ ಲಾಯ್ಕ ಆಯಿದು.ಮೂರನೆ ಸಾಲಿಲಿ “ನೂರಲ್ಲ” ಶಬ್ದ ತೆಗವಲಕ್ಕು,ಮಾತ್ರೆ ಲೆಕ್ಕಾಚಾರಲ್ಲಿ.
      ನಾಲ್ಕನೆ ಸಾಲಿಲಿ “ವಾಹನ೦ಗಳದ್ದೇ” ಇದು ಜಗಣ ಆವುತ್ತು,ರಜಾ ತಿದ್ದೆಕ್ಕು.”ವಾಹನ೦ಗಳ ಜಾತ್ರೆ”ಹೇಳಿ ಏನಾರು..

    3. ಇಂದಿರತ್ತೆ ಮತ್ತು ರಘು ಅಣ್ಣಂಗೆ ಧನ್ಯವಾದ…

      ಹಿಂಗೆ ಬದಲಾಯಿಸಿದರೆ…

      ಹಸುರುಸಿರಿ ಪರಿಸರದ ನಡುಕಂಗೆ ಮನೆಯಿದ್ದು

      ಮಸುಕಿದ್ದು ಹಿಮತುಂಬಿ ನೋಟವದು ಗೋಜಲಾ

      ಗಿಸಿದರೂ ಗುಮ್ಮನಂತಿಪ್ಪದೀಯೊಂದುಂದು ಕಾರಕ್ಕು ಸಾವಿರಾರು

      ಬುಸುಬುಸುನೆ ಹೊಗೆಬಿಡುವ ವಾಹನಮೆರವಣಿಗೆಯ

      ಬಿಸುಪಿಕ್ಕು ಮುಂದೊಂದು ದಶಕಲ್ಲಿ ಮರಗಿಡವೊ

      ಳುಸುಲಪ್ಪ ಗುರುತರದ ಹೊಣೆಹೊತ್ತು ಭೂತಾಯಿ ಕಣ್ವರಸಿ ಮಂಕಡಿಸುವ

      1. “ಬುಸುಬುಸುನೆ ಹೊಗೆಬಿಡುವ ವಾಹನಮೆ/ರವಣಿಗೆಯ”

        ಯತಿ ,ಲಘುಗೊ ಹೆಚ್ಚಾಗಿ ರಜಾ ಕಷ್ಟ ಆವುತ್ತನ್ನೆ ಅಕ್ಕಾ.

        1. “ವಾಹನಗಳಾಯಣದ” ಹೇಳಿರೆ ಸರಿಯಕ್ಕ ಅಣ್ಣ??

          1. ರಾಮಾಯಣ ಹೇಳಿದ ಹಾ೦ಗೋ? “ವಾಹನಗಳಾಯನ” ಆಗದ್ದೇ ಇಲ್ಲೆ !

          2. ಆನು ನಿಂಗ ಹೇಳಿದಾಂಗೆ ‘ಜಾತ್ರೆ’ ಪದಕ್ಕೆ ಮಾತ್ರೆ ಸರಿಯಪ್ಪ ಹಾಂಗೆ ಪದ ಹುಡ್ಕಿಕೊಂಡು ಇತ್ತಿದ್ದೆ. ಎನ್ನ ಅಮ್ಮ ಹೇಳಿದವು, ‘ಆಯಣ’ ಶಬ್ದ ಹವ್ಯಕರಲ್ಲಿ ಜಾತ್ರೆ,ಉತ್ಸವದ ಅರ್ಥಲ್ಲಿ ಪ್ರಯೋಗಿಸುತ್ತವು ಹೇಳಿ…
            ರಾಮಾಯಣ ಹೇಳಿದಾಂಗು ಅಕ್ಕು ಅಲ್ಲದ? ಬೆಂಗಳೂರಿಲಿ ಅದೆ ಅನ್ನೆ ಅಯ್ಕೊಂಡಿಪ್ಪದು..

          3. ಬಹುಶಃ `ಜಾತ್ರೆ’ ಹೇಳುವ ಅರ್ಥಲ್ಲಿ `ಆಯನ’ ಹೇಳಿ ಹೇಳ್ವದು. “ಆಯಣ’ ಆಗಿರ.
            `ಅಯನ’ ಹೇಳಿರೆ ಚಲನೆ ಹೇಳಿ ಅರ್ಥ.
            ಗರ್ಭಗುಡಿಲ್ಲಿಪ್ಪ ದೇವರು ಹೆರ ತಿರುಗಾಟಕ್ಕೆ ಬಪ್ಪದು ಹೇಳ್ವ ಅರ್ಥಲ್ಲಿ `ಅಯನ’ ಹೇಳಿ ಬಂದದಾಯಿಕ್ಕು.
            ಹಾಂಗೆಯೇ,
            ದೇವರ `ಯಾತ್ರೆ’ ಹೇಳುವ ಶಬ್ದಂದಲೇ `ಜಾತ್ರೆ’ ಹೇಳಿ ಬಂದದಾಗಿಕ್ಕು. ಆದರೆ ಈಗ `ಜಾತ್ರೆ’ ಹೇಳುವಗ `ಗೌಜಿ, ಉತ್ಸವ’ ಹೇಳಿ ಮನಸ್ಸಿಂಗೆ ತೋರ್ತು.

            ರಾಮಾಯಣ = ರಾಮನ ಅಯನ = ರಾಮನ ಚಲನೆ.
            ಉತ್ತರಾಯಣ = ಉತ್ತರ ದಿಕ್ಕಿಂಗೆ ಚಲನೆ (ಸೂರ್ಯನ)
            ದಕ್ಷಿಣಾಯನ = ದಕ್ಷಿಣಕ್ಕೆ ಚಲನೆ
            ದೇವಾಯನ = ದೇವರ ಅಯನ = ದೇವರ ಚಲನೆ

          4. ಓಹ್..ಸರಿ ಸರಿ. ಆನು ರಘು ಅಣ್ಣನ ಒಪ್ಪಲ್ಲಿ ‘ಣ’ ಬದಲು ‘ನ’ ನೋಡಿದೆ. ಆದರೆ ಹೆಚ್ಚು ವ್ಯತ್ಯಾಸ ಇರಳಿ ಗ್ರೇಸಿದೆ…ನಾವು ಸಾಮಾನ್ಯ ‘ಶ’-‘ಸ’ ದ ಬಳಕೆ ಮಾಡಿದಾಂಗೆ.
            ಧನ್ಯವಾದ ಮಹೇಶಣ್ಣ..

          5. ನೀರಿನ ಒರತೆಯ ಮೂಲವ ಹುಡುಕ್ಕುವ ಹಾ೦ಗೆ ಶಬ್ದದ ಸರಿಯಾದ ಅರ್ಥ ಗೊ೦ತಾತು ಈ ಲೆಕ್ಕಲ್ಲಿ.
            ಧನ್ಯವಾದ ಮಹೇಶಣ್ಣಾ.

  16. ತ್ರಿಪದಿಲಿ ಶಬ್ದಂಗಳ ಹಿಡುದು ಮಡಗುಲೆ ಪರಡಿದೆ , ಉದ್ದಂಡ ಷಟ್ಪದಿಲಿ ಜೋಡುಸುಲೆ ಒದ್ದಾಡಿದೆ. ಇದು ಪದಗಳ ಸರ್ಕಸ್ಸಿಲಿ ಪ್ರಾಯೋಗಿಕವಾಗಿ ಮಾಡಿದ ಪ್ರಯತ್ನ ಅಷ್ಟೆ. ಭಾವದ ಅಭಾವ ಆಗಿಪ್ಪಲೂ ಸಾಕು. ಸರಿಯೋ ತಪ್ಪೋ, ಮುಳಿಯದ್ದೆ ಟೀಕೆಮಾಡುವಿ ಹೇಳಿ ನಂಬಿದ್ದೆ .

    1. ಉದ್ದಂಡ ಷಟ್ಪದಿ ಅಷ್ಟು ವಾಡಿಕೆ ಇಲ್ಲದ್ದ ಛ೦ದಸ್ಸು.ಲಾಯ್ಕಾಯಿದು ಅತ್ತೆ.

    2. ಉದ್ದಂಡ ಷಡ್ಪದಿ ವಾರ್ಧಕದ ರೂಪಾಂತರ, ಐದರ ಬದಲು ನಾಲ್ಕು -ನಾಲ್ಕರ ಐದು ಗುಛ್ಚಂಗೊ.
      ಮೂರನೆ ಮತ್ತೆ ಅರನೆ ಪಾದಲ್ಲಿ ನಾಕರ ೮ ಗುಛ್ಚಂಗೊ. ಉದಾಹರಣೆಗಾಗಿ ಒಂದು ಪದ್ಯ – ರಾಘವಂಕನ “ವೀರೇಶ ಚರಿತೆ”ಂದ –
      ಕುಂದದೆ ತಂತಮ್ಮೆಡೆಯಂ ತಾವೇ ರಕ್ಷಿಪು
      ದೆಂದಷ್ಟ ದಿಶಾವರರಿಗೆ ಬೆಸನಂ ಕೊಟ್ಟು ಮು
      ಕುಂದಂಗಗ್ರಾಸನವಿತ್ತೆಲ್ಲಾ ಮಾನ್ಯರ್ಗುಚಿತಾಸನಮಂ ಸಲಿಸಿ।
      ( ಸಲಿಸಿ -> ಅಕೇರಿಯಾಣ ಸಿ ಗುರು ಹೇಳಿ ತೆಕ್ಕೊಂಡಿದು)
      ಅಂಬಗ ನಿಂಗೊ ಬರದ ಉದ್ದಂಡ ತಪ್ಪಿದ್ದು ಹೇಳೆಕ್ಕಾಗಿ ಬತ್ತು.
      ತ್ರಿಪದಿ ಲಾಯಿಕಿದ್ದು.
      ( ಇನ್ನೂ ವಿವರ ಬೇಕಾರೆ ಡಾ. ವೆಂಕಟಾಚಲ ಶಾಸ್ತ್ರಿಗೊ ಬರದ ” ಕನ್ನಡ ಛಂದಃಸ್ವರೂಪ” ಪುಸ್ತಕ ಓದುಲಕ್ಕು)

      1. ಆನು ಮಾತ್ರೆ ತೆಕ್ಕೊಂಡದು ರಜಾ ಕಮ್ಮಿಯಾತು- ಮಾವ, ಮತ್ತೆ ಗುಣ ಅಪ್ಪದು ಹೇಂಗೆ ಅಲ್ಲದಾ ? ಸಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟಿದಿ – ತಪ್ಪಿನ ಪುರಾವೆ ಸಹಿತ ತೋರಿಸಿಕೊಟ್ಟು ತಿದ್ದಿದ್ದಕ್ಕೆ ಚಿರಋಣಿ. ಒಂದುಕಾಲಲ್ಲಿ ಕಲಿವಾಗ ” ಬೀಲ ಒಳುದಿತ್ತಿದ್ದು ” ಹೇಳುದು ಅರ್ಥಾವುತ್ತಲ್ಲದಾ !
        ಉದ್ದಂಡ ದಂಡ ಆತು, ಇನ್ನು ಪರಿವರ್ಧಿನಿಲಿ ಬೇರೆ ಬರವ ಪ್ರಯತ್ನಮಾಡ್ತೆ.

        ಮೋಹನ ರಾಗವ ತಾನೇ ಹಾಡಿದ
        ಮೋಹಿಸುವಾಂಗೆಯೆ ಭೂಮಿಲಿ ಜನಪದ
        ಮೋಹಕ ಸೂರ್ಯನು ಬಂದನೆಯರುಣನ ಜೊತೆಯಾಗಿ ।
        ದಾಹವ ತಣಿಶುವ ತೆಂಗಿನಬೊಂಡಕೆ
        ವಾಹನ ಹೋವುತ ಮಣ್ಣಿನ ಮಾರ್ಗಕೆ
        ಮೀಹವ ಮಾಡಿದ ಮೈಂದಿನ ಹನಿಹನಿ ಮನಸಿನ ಗೆದ್ದತ್ತೂ ॥

        1. ಮೂರನೆ ಸಾಲಿಲಿ ಮಾತ್ರೆ ಕಮ್ಮಿ ಕಾಣ್ತನ್ನೆ ಅತ್ತೆ.

        2. “ಬಾನಿಲಿ “ಹೇಳುವ ಪದ ಬಿಟ್ಟೇಹೋಯಿದು ,ಕ್ಷಮಿಸಿ –

          ಮೋಹನ ರಾಗವ ತಾನೇ ಹಾಡಿದ
          ಮೋಹಿಸುವಾಂಗೆಯೆ ಭೂಮಿಲಿ ಜನಪದ
          ಮೋಹಕ ಸೂರ್ಯನು ಬಂದನೆ ಬಾನಿಲಿಯರುಣನ ಜೊತೆಯಾಗಿ ।
          ದಾಹವ ತಣಿಶುವ ತೆಂಗಿನಬೊಂಡಕೆ
          ವಾಹನ ಹೋವುತ ಮಣ್ಣಿನ ಮಾರ್ಗಕೆ
          ಮೀಹವ ಮಾಡಿದ ಮೈಂದಿನ ಹನಿಹನಿ ಮನಸಿನ ಗೆದ್ದತ್ತೂ ॥

          ಎಂಥ ಸಂಗತಿ ! ಮಾತ್ರೆ ಕಮ್ಮಿ ಕಮ್ಮಿ ಆವುತ್ತಾ ಇದ್ದು ! ಈಸರ್ತಿಲಿ ಪರಮೋಶಿಲಿ ಬಿಟ್ಟುಹೋದ್ದಷ್ಟೆ. ಬರವಗ ಬರದಿತ್ತಿದ್ದೆ, ಒತ್ತುವಗ ಬಿಟ್ಟುಹೋತು.

          1. ಮಾತ್ರೆ ಕಮ್ಮಿ ಆದ್ದಕ್ಕೆ ತಲೆ ಬೆಶಿ ಬೇಡ ಅತ್ತೆ. ಪದ್ಯಂಗೋ ಲಾಯಕ ಬರೆತ್ತಾ ಇದ್ದಿ.

  17. ನಸುಬೆಶಿಲು ಬೀಳುಗದ ನೆಲದ ಮೇಲಂಗೆಲ್ಲ
    ಹೊಸದಾರಿ ಹಿಡುದು ಸಾಗಿದರೆ ಬಲುದೂರ
    ಹಸುರಾದ ಬನವು ಎದುರಕ್ಕು ॥

    ಮುಸುಕಿನ ಸರುಸುಗು ನೇಸರ ಕಿರಣವು
    ಮೊಸರಿನ ಕಡೆಗದ ನಸುಕಿಲಿಯಜ್ಜಿಯು
    ಬೆಶಿಲಿನ ತಾಪಕೆ ಬಾಳೆಯ, ತೆಂಗಿನ ಮರಗಳ ಮೇಗಣ ಮೈಂದುದೆ ಕರಗುಗು ।
    ಪಸರುಗು ಘಮ್ಮನೆ ಮಣ್ಣಿನ ವಾಸನೆ
    ಪಿಸಿಪಿಸಿ ಹೇಳುಗು ಹಕ್ಕಿಗೊ ಗೂಡಿಲಿ
    ಹೊಸಿಲಿಲಿ ನಿಂದೇ ನೋಡುವನಜ್ಜನು ಹೂಗಿನ ಕೊಯ್ವಲೆ ಬೆಣಚಿಯು ಬಿಟ್ಟದು ॥

    1. ನಮ್ಮ ಊರಕಡೆ ಮನೆಗಳಲ್ಲಿ ಕಾಂಬ ಉದಿಯದ ಚಟುವಟಿಕೆಗಳ ಸುಂದರ ನಿರೂಪಣೆ

  18. ಧನ್ಯವಾದ ತೆಕ್ಕುಂಜ ಭಾವ.’ತಿರುಕನ’ ತಲೆಲಿ ಮಡುಗಿಯೊಂಡು ‘ಭೋಗ’ಲ್ಲಿ ಪ್ರಯತ್ನ ಅಷ್ತೆ.

    1. ಭೋಗ ಷಡ್ಪದಿಗೆ ಒಳ್ಳೆ ಉದಾಹರಣೆ “ತಿರುಕನ ಕನಸು” ಪದ್ಯ. ಆದರೆ ಹಾಡುವ ಕ್ರಮಲ್ಲಿ ವಿಭಜನೆ ಮಾಡಿ ಹಾಡಿ, ಅದನ್ನೆ ಮನಸ್ಸಿಲಿ ಮಡಿಕ್ಕೊಂಡರೆ ಇನ್ನೊಂದು ಪದ್ಯ ಬರವಗ ತಪ್ಪುಲಿಲ್ಲೆ.ಉದಾಹರಣೆಗೆ
      ತಿರುಕ।ನೋರ್ವ।ನೂರ।ಮುಂದೆ
      ಮುರುಕು।ಧರ್ಮ।ಶಾಲೆ।ಯಲ್ಲಿ
      ಒರಗಿ।ರುತ್ತ।ಲೊಂದು।ಕನಸ।ಕಂಡ।ನಂತೆ।ನೆ…..

      ಹಾಂಗೆ ಪ್ರತಿಯೊಂದು ಛಂದಸ್ಸಿಂಗೆ ಅದರದ್ದೆ ಆದ ರಾಗ ಹಾಕಿ ( ಗಮಕ ಕಲೆ ಗೊಂತಿಪ್ಪವು ಇನ್ನೂ ವಿಅವರುಸುಗು) ಮನಸ್ಸಿಲಿ ಮಡಿಕ್ಕೊಂಡರೆ ಪದ್ಯ ರಚನೆ ಸುಲಭ ಆವುತ್ತು. ಮಾತ್ರೆ ತಪ್ಪುಲೂ ಇಲ್ಲೆ.

  19. ಭಾರಿ ರೈಸಿತ್ತು ಅತ್ತೆ. ” ಪಾಲ ಹಾಕಿದ ಹಾಂಗೆಯಿತ್ತದು ಭೂಮಿಯಾಗಸಕೆ” ಒಳ್ಳೆ ಪ್ರಯೋಗವುದೆ.
    ಚಿತ್ರಕ್ಕೆ ಸರಿಯಾಗಿ ಒಪ್ಪುವ ಪದ್ಯ. ಅಭಿನಂದನೆಗೊ

    1. ತೆಕ್ಕುಂಜಮಾವಂಗೂ ಅದಿತಿಗೂ ಧನ್ಯವಾದಂಗೊ.

  20. ಬಾಲ ಭಾಸ್ಕರನಿಣುಕಿ ನೋಡಿರೆ
    ಕೋಲು ಕಿರಣವು ಹೆಣೆದು ಬಿಟ್ಟಿದು
    ಪಾಲ ಹಾಕಿದ ಹಾಂಗೆಯಿತ್ತದು ಭೂಮಿಯಾಗಸಕೇ ।
    ಸಾಲು ತೆಂಗಿನ ಮರದಯೆಡೆಯೆಡೆ
    ಕಾಲುದಾರಿಯ ಕೊಡಿಯ ಗುಡ್ಡೆಲಿ
    ಸೋಲು ಕಂಡತು ಸೂರ್ಯನೆದುರಿಲಿ ಮಂಜಿನಿಬ್ಬನಿಯೂ ॥

    1. ಅತ್ತೆ,
      ಪದ್ಯ ತು೦ಬಾ ಲಾಯ್ಕು ಆಯ್ದು.

    2. ಓಹ್..ಎಷ್ಟು ಮನುಗಿಬಿಟ್ಟೆ ಇಂದು!!…ಹೇಳುವ ಅನುಭವ ಆತು..ಪದ್ಯ ಚೆಂದಕ್ಕೆ ಬಂದಿದು..

  21. ನಸುಕಿನ ಕ೦ಡರೆ

    ನಸುನೆಗೆ ಮೂಡುಗು

    ಮಸುಕಿದ ಕಸ್ತಲೆ ಮುಗುದತ್ತು

    ಹಸುರಿನ ತರುಲತೆ

    ನಿಸರ್ ಗ ನಿಜಗುಣ

    ಮಿಸುಕದ ಉಸುಲದು ತಿಳುದತ್ತು

    1. ಶರ ಷಡ್ಪದಿ ಲಾಯಿಕಿದ್ದು.

    2. ನಿಸರ್ಗದ ಹಗಲಿರುಳಿನಾಟದ ಲಾಯ್ಕದ ಪದ್ಯ

  22. ಜೀವನದ ಮಾರ್ಗ ರಜ ಮಂಜಾದರೆಂತ ಬೇ 
    ಡಾವ ಹೆದರಿಕೆ ಬೆಳಕು ಮೂಡುತ್ತು ಹಿಮವ 
    ದಾವಿಯಾಗಿ ಸ್ಪಷ್ಟ ಹಜ್ಜೆಯ ಮಡುಗುಲಕ್ಕು 
    ದೇವರೆಂಗಳ ಕಾಯ್ತ ಚಿಂತೆ ಬೇಡ 

    1. ಒಳ್ಳೆದಿದ್ದು.
      ಚಿತ್ರಲ್ಲಿಪ್ಪ ಮಣ್ಣೀನ ಮಾರ್ಗ, ಎಡದ ಹೋಡೆಲಿಪ್ಪ ಬೇಲಿ ತೋಟ, ಬಲದೊಡೆಲಿಪ್ಪ ಮನೆ, ತೆಂಗಿನಮರಂಗೊ – ಇವೆಲ್ಲದರ ವರ್ಣನೆ ಬಪ್ಪ ಹಾಂಗೆ ಇನ್ನೊಂದು ಪದ್ಯ ಬರೆರಿ.
      ಭಾಮಿನಿಲಿ ಪ್ರಯತ್ನ ಮಾಡ್ತಿರೊ..?

      1. ಆತು ಮಾವ, ನಿಂಗ ಹೇಳಿದ ವರ್ಣನೆ ಬಪ್ಪ ಹಾಂಗೆ ಪದ್ಯ ಬರವಲೆ ಪ್ರಯತ್ನಿಸುತ್ತೆ.

    2. ಧೈರ್ಯಲ್ಲಿ ಮುನ್ನುಗ್ಗುಸುವ ಪದ್ಯ ಲಾಯ್ಕಿದ್ದು…

    3. ಭಾವಪೂರ್ಣ ರಚನೆ ಅದಿತಿ ಅಕ್ಕ೦ದು.
      ಎರಡು ಮತ್ತೆ ಮೂರನೆ ಸಾಲಿನ ನೆಡುಕೆ ಸ೦ಧಿ ಮಾಡದ್ದರೆ ಓದುಲೆ ಸರಿ ಬಕ್ಕು.ಮೂರನೆ ಸಾಲಿಲಿ ಯತಿ ಸಮಸ್ಯೆ ಇದ್ದು.
      “ಡಾವ ಹೆದರಿಕೆ ಬೆಳಕು ಮೂಡುತ್ತು ಹಿಮವು
      ಆವಿಯಪ್ಪಗ ಸ್ಪಷ್ಟ ಹಜ್ಜೆ ಮಡುಗುಲೆ ಸುಲಭ ”

      ಹೇಳಿ ಮಾಡ್ಲಕ್ಕು.

  23. ತೋಡಿನ ಕರೆಲಿಯೆ ಹೋದರೆ ಕಾಂಗದ 
    ಜೇಡನ ಜಾಲಲಿ  ಮುತ್ತಿನ ತೋರಣ 
    ಸೂಡುಲೆ ಹೂಗಿನ ಕೊಯ್ದರೆ ಸಿಕ್ಕುಗು ನೀರಿನ ಹವಳಂಗೋ 
    ಮಾಡಿನ ಹಂಚಿಗು ಮಜ್ಜನ ಮಾಡುಸಿ 
    ಬಾಡುಲೆ ಬಿಡದೆಯೆ ಬೇಲಿಯ ಹೂಗಿನ 
    ಮೂಡುಸಿ ಕೊಟ್ಟಿದು ಚೆಂದದ ನೋಟವ ನೋಡುವ ಕಣ್ಣಿಂಗೆ 

    ಬೆಣ್ಣೆಯ ಹಾಂಗೆಯೆ ನೊಂಪಿಗೆ ಕಾಂಬದು 
    ಕಣ್ಣಿಗೆ  ಕಂಡರು ಮುಷ್ಟಿಲಿ ಸಿಕ್ಕದು 
    ಬಣ್ಣನೆಗೆಕ್ಕದೆ ಥಟ್ಟನೆ ಮಾಯವು ಬೆಶಿಲಿನ ನೋಡಿದರೆ 
    ಸಣ್ಣದು ದೊಡ್ಡದು  ಬೇಧವ ಮಾಡದೆ 
    ಮಣ್ಣಿನ ಮಕ್ಕೊಗೆ ಮೀಯಣ ಮಾಡುಸಿ 
    ತಣ್ಣಂಗಾಗಿಸಿ ಭೂಮಿಯ ಬಾಯಿಯ ಹೋವ್ತದು ತಾ ಕರಗಿ 

    1. ವಾಹ್.. !ಒಳ್ಳೆ ಕಲ್ಪನೆ. ಲಯ,ಗತಿ ಇಪ್ಪ ಸುಂದರ ಪದ್ಯಂಗೊ.
      ಭೇಷ್..ಭೇಷ್..ಅದಿತಿಯಕ್ಕ.

    2. ಶಬ್ದ ಸಂಗ್ರಹಂದ ಹವ್ಯಕಭಾಷೆಯ ಬಳಕೆಯಾದ್ದು ತುಂಬಾ ಖುಷಿಕೊಟ್ಟತ್ತು . ಕವನಂಗೊ ಸೊಗಸಾಗಿ ಬಯಿಂದು .

      1. ಇಂದಿರತ್ತೆ ಮತ್ತು ತೆಕ್ಕುಂಜ ಮಾವನ ಪ್ರೋತ್ಸಾಹದ ನುಡಿಗಳಿಂಗೆ ಧನ್ಯವಾದ.

    3. ಹಿಮಬೆಳಗಲ್ಲೊಂದು ವಿಹಾರವಾತುಃ)…

    4. ಸುರುವಾಣದ್ದು ಲಾಯ್ಕವೋ ಅಲ್ಲ ಎರಡ್ನೆದೋ ಹೇಳಿ ಮತ್ತೆ ಮತ್ತೆ ಓದಿದೆ,ಉಮ್ಮಪ್ಪಾ..ಇನ್ನೂ ಮೂರು ಚರಣ ಬರದರೆ ಪರಿಪೂರ್ಣ ಕವಿತೆ,ಬೇಗ ಬರೆಯಿ ಅಕ್ಕ.

  24. ಉಸುರದ್ದೆ ಬತ್ತಪ್ಪ ಮಳೆ
    ನಸುಕಿಂಗೆ ಮುಸುಕುತ್ತು ಹನಿ
    ಮಸುಕಾದರೂ ಕಾಂಬ ನೋಟವೂ ಚೆಂದ
    ಮುಸುಕು ಹಾಕಿ ಒರಗಿರೆಡಿಯ
    ಕಸುವಿಪ್ಪ ಕಾಲಪುರುಷನ
    ಉಸುಲು ಬಿಗಿಹಿಡ್ದು ನೋಡೆಕ್ಕು ಕೋಲಂಗಳ

    1. ಅರ್ಥಪೂರ್ಣ ಪದ್ಯ.
      ಆದರೆ ಯೇವ ಛಂದಸ್ಸು ಹೇಳಿ ಗೊಂತಾತಿಲ್ಲೆ.

    2. ನರಸಿ೦ಹ ಮಾ(ಭಾ)ವ,

      ಪದ್ಯದ ಭಾವಾರ್ಥ ತು೦ಬಾ ಲಾಯ್ಕಿದ್ದು.

      ‘ಭೋಗ’ಲ್ಲಿ ಮೊದಲೆರಡು, ೪, ೫, ನೆಯ ಸಾಲಿಲಿ ಒಟ್ಟು ೧೨ ಮಾತ್ರೆ, ೩ ಮತ್ತು ೬ ನೆಯ ಸಾಲಿಲಿ ಒಟ್ಟು ೨೦ ಮಾತ್ರೆ ಬೇಕು ನಿಜ. ಆದರೆ ಅದರ ೩+೩+೩+೩ ಮತ್ತು ೩+೩+೩+೩+೩+೩+೨ ಹೇಳಿ ಭಾಗ ಮಾಡುಲೆ ಬಪ್ಪ ಹಾ೦ಗೆ ಇರೆಕ್ಕು.
      ಪದ್ಯವ ಹಾ೦ಗೆ ಬದಲುಸುಲೆ ಪ್ರಯತ್ನಿಸಿ ನೋಡಿ.

      ಯಾವುದೇ ಷಟ್ಪದಿಯ ಬಗ್ಗೆ ಹೆಚ್ಚಿನ ಮಾಹಿತಿ ಕೆಳಾಣ ಸ೦ಕೋಲೆಲಿ ಸಿಕ್ಕುತ್ತು.
      https://oppanna.com/chodyango/samasye-chodyango/oppanna.com/oppa/shara-kusuma-bhoga-bhamini-shatpadi

    3. ನಿಂಗಳ ಪದ್ಯಲ್ಲಿಪ್ಪ ಗಡಿಬಿಡಿಯ ವರ್ಣನೆ ನೋಡಿರೆ ನಿಂಗ ಬೆಂಗಳೂರಿಲಿಪ್ಪ ಹಾಂಗೆ ಕಾಣ್ತುಃ)..ಪದ್ಯದ ವಸ್ತು ಲಾಯ್ಕಿದ್ದು..ಮಾತ್ರೆ ಲೆಕ್ಕಾಚಾರ ನಮ್ಮ ಛಂದಡಾಕುಟ್ರುಗೊ ಹೆಂಗೂ ಹೇಳಿದ್ದವು 🙂

  25. ಅತ್ತೆ ಪದ್ಯ ಲಾಯ್ಕ ಆಯಿದು………ಎನ್ನ ಪ್ರಯತ್ನ

    ಉದೆಗಾಲ ಮೈಂದಿಂದ ಮಿಂದೆದ್ದ ಗಡಿಬಿಡಿಗೆ
    ಮುದುಡಿಪ್ಪದರಳಿ ಜಡಬಿರಿಯೆ ಹೊಸತುದಿನ
    ಕದತೆಗೆವ ಜೀವಕ್ಕೆ ಲವಲವಿಕೆ ಪುಟಿದರೂ
    ಬದಲಾಗ ಸತ್ತಿಪ್ಪ ಮಡ್ಡುರೋಡು

    1. ‘ದ’ + ‘ಡ’ದ ಅನುಪ್ರಾಸಂಗೊ ಅಲ್ಲಲ್ಲಿ ಬಂದು ಪದ್ಯ ಚೆಂದ ಆತು.

    2. ಜಡಬಿರುದು ಲವಲವಿಕೆ ಹೆಚ್ಚಾದ್ದು ಗೊಂತಾವುತ್ತು. ಸೊಗಸಾದ ಪ್ರತಿಕ್ರಿಯೆ.

      1. ಧನ್ಯವಾದಂಗೊ……….ನಿಂಗಳೆಲ್ಲರ ಪ್ರೋತ್ಸಾಹ ಸದಾ ಇರಲಿ.

    3. ನಮ್ಮ ರಾಜಕಾರಣಿಗೊಕ್ಕೂ ಒಂದು ಬಿಸಿ ಮುಟ್ಟುಸಿದ್ದಿ..ಮಡ್ಡು ರೋಡಿನ ಬಗ್ಗೆ ಗಮನ ಸೆಳೆದು..ಲಾಯ್ಕಿದ್ದು

    4. ಗಟ್ಟಿ ಕವಿತ್ವ ಇದ್ದು ಶೈಲಜನ ಈ ಕವಿತೆಲಿ. ಅನುಪ್ರಾಸವೂ ಲಾಯ್ಕ ಆಯಿದು.
      ಮಡ್ಡುರೋಡಿನ ಮಣ್ಣಮಾರ್ಗ ಹೇಳಿಯೂ ಮಾಡ್ಲಕ್ಕು!

  26. ಮಸುಕಾಗಿ ಕಂಡತ್ತು ಮನೆಯ ಸುತ್ತದ ನೋಟ
    ನಸುಕಿಲಿಯೆ ಕರಗುತ್ತು ಕಸ್ತಲೆಯ ಪರದೆ
    ಪಿಸುಮಾತು ಕೇಳುತ್ತು ಮರದ ಗೆಲ್ಲುಗಳಲ್ಲಿ
    ಹಸನಾದ ಚಿತ್ರವಿದು ತುಂಬಿತ್ತು ಮನ ॥

    1. “ಪಿಸುಮಾತು ಕೇಳುತ್ತು ಮರದ ಗೆಲ್ಲುಗಳಲ್ಲಿ “-> ತುಂಬ ಕೊಶಿಯಾತು ಈ ಗೆರೆ.
      ಲಾಯಿಕ್ಕಾಯಿದು.

    2. ಬೆಳಗಪ್ಪಗ ಎದ್ದ ಕೂಡ್ಲೆ ಕಾಂಬ ದೃಶ್ಯದ ವರ್ಣನೆ ಲಾಯಿಕಾಯ್ದು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×