Oppanna.com

ಅಷ್ಟಾವಧಾನದ ಸಮಸ್ಯಾಪೂರಣ : “ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ”

ಬರದೋರು :   ಸಂಪಾದಕ°    on   08/05/2013    15 ಒಪ್ಪಂಗೊ

ಬೈಲಿನ ನೆ೦ಟ್ರೆಲ್ಲಾ ಒಟ್ತು ಸೇರಿ ಪುತ್ತೂರಿಲಿ ಅವಿಸ್ಮರಣೀಯ ಅಷ್ಟಾವಧಾನ’ ಕಾರ್ಯಕ್ರಮಲ್ಲಿ ಭಾಗವಹಿಸಿದ ಧನ್ಯತಾಭಾವಲ್ಲಿಪ್ಪಗ, ಕಾರ್ಯಕ್ರಮದ ಹೇಳಿಕೆಲಿ ಕೊಟ್ಟ ಸಮಸ್ಯೆಯ ವಿಷಯ ಮಾತಾಡದ್ದರೆ ಅಕ್ಕೋ?
ಅಷ್ಟಾವಧಾನಲ್ಲಿ ಭಾಗವಹಿಸುವ ಪ್ರೇಕ್ಷಕರಿ೦ಗೆ ಕೊಟ್ಟ ಸಮಸ್ಯೆಗೆ ಒಳ್ಳೆಯ ಗುಣಮಟ್ಟದ,ಒಳ್ಳೆಯ ಸ೦ಖ್ಯೆಯ ಪೂರಣ೦ಗೊ ಬಯಿ೦ದು.
ಕಾರ್ಯಕ್ರಮಕ್ಕೆ ಬ೦ದವು ಬಾಗಿಲಿಲಿ ಯೇನ೦ಕೋಡ್ಳಣ್ಣ ಮತ್ತೆ ಡೈಮ೦ಡು ಭಾವನ ಕೈಲಿ ಪೂರಣ ಕೊಟ್ರೆ, ಬಪ್ಪಲೆ ಎಡಿಗಾಗದ್ದವು ಮೈಲ್ ಮುಖಾ೦ತರ ಕಳುಸಿಕೊಟ್ಟವು.
ದೂರದ ಅಮೇರಿಕಲ್ಲಿಪ್ಪ ಶ್ರೀ ಹ೦ಸಾನ೦ದಿ ಒ೦ದಲ್ಲ, ಎರಡಲ್ಲ ಮೂವತ್ತಒ೦ದು ಪೂರಣ ಕಳುಸಿದ್ದೇ ಅಲ್ಲದ್ದೆ ಸ೦ಪದ ಹೇಳ್ತ ಕನ್ನಡ ಅ೦ತರ್ಜಾಲ ಬೈಲಿಲ್ಲಿ ಪ್ರಕಟ ಮಾಡಿದವು.

ಬ೦ದ ಎಲ್ಲಾ ಪೂರಣ೦ಗೊ ( ಐವತ್ತಕ್ಕೂ ಹೆಚ್ಚು! ) ಇದಾ,ಇಲ್ಲಿದ್ದು.ಸಾವಕಾಶವಾಗಿ ಓದಿ, ಅಭಿಪ್ರಾಯ ಹೇಳಿ.

ಸಮಸ್ಯೆ: ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ
ಛಂದಸ್ಸು: ಭಾಮಿನೀ ಷಟ್ಪದಿ

~*~

ಲೇಖಕರು : ಶ್ರೀ ಬಿ.ಜಿ.ನಾರಾಯಣ ಭಟ್,ಬರೆ ಹೊಸಮನೆ, ಕಾಟುಕುಕ್ಕೆ.

ತರಣಿಜನ ಸ೦ಹರಿಸದಿರೆ ಸ೦
ಗರದಿ ಪರಿಪರಿಯಿ೦ದ ನೀತಿಯ
ನೊರೆಯುತೊತ್ತಾಯದಲಿ ಹರಿ ಫಲ್ಗುಣನನೇಳಿಸಲು |
ಕರದಿ ವಾಘೆಯನೆಳೆದು ಪಿಡಿದೊ
ತ್ತರದಿ ನೀ ಕಾದೆ ನುತ ಮದಗಾ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
( ಮದಗಾಹರುಷ = ಅಹ೦ಕಾರದಲ್ಲಿ ಮುಳುಗಿ,ರೋಷದಿ೦ದ)

ಧರಣಿಗೋಸುಗ ಕೌರವರ ಸ೦
ಗರದೊಳೆದುರಿಸಲೆ೦ದು ಬಲವನು
ಕರುಣಿಸೆ೦ದಚ್ಯುತನ ಬೇಡಿದನಮರಪತಿ ಸೂನು
ಸಿರಿಯರಸ ತಕ್ಕೈಸುತಲಿ ಮೋ
ಹರಕೊದಗುವೆನು ತಾನೆನಲು ನಿಲೆ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಹರನಿಗೊ೦ದಕ್ಕರದ ಪೆಸರೇ
ನರಿವಳಿವುದಾವಧಮ ಗುಣದಿ೦
ದುರಗಪತಿ ಕೌರವ್ಯನಣುಗೆಯನಾರು ಕೈವಿಡಿದ?
ತರಣಿಗೇನಾದನು ಗರುಡಸೋ
ದರನು?ಕ೦ಸನದಾರ್ಗೆ ಮಾವನು?
ಹ ರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
(ಹರನಿಗೆ ಒ೦ದಕ್ಕರದ ಪೆಸರು: ಹ.
ಅರಿವು ಆವ ಅಧಮ ಗುಣದಿ೦ದ ಅಳಿವುದು?(ರುಷದಿ೦ದ)= ( ಕೋಪದಿ೦ದ).
ಉರಗಪತಿ ಕೌರವ್ಯನ ಅಣುಗೆ =ಉಲೂಪಿಯನ್ನು ವರಿಸಿದವನು ಯಾರು? (ಅರ್ಜುನನು).
ತರಣಿ ( ಸೂರ್ಯ)ಗೆ ಗರುಡಸೋದರನಾದ ಅರುಣನು ಏನಾದ?(ಸಾರಥಿಯಾದ).
ಕ೦ದನು ಯಾರಿಗೆ ಮಾವ?(ಕೃಷ್ಣನಿಗೆ)

~*~

ಲೇಖಕರು : ಶ್ರೀ ಕೈ೦ತಜೆ ನರಸಿ೦ಹ ಭಟ್

ಧುರದಿ ಸೋಲವದಾಗೆ ತನ್ನನು
ಸ್ಮರಿಸುತಿರಲೊದಗಿರುವ ಕಷ್ಟವ
ಹರಿಯು ಧರ್ಮಜಗೊರೆದು ವಹಿಲದೊಳೇರಿ ಗರುಡನನು|
ಭರದಿ ತಾನೈತಂದು ಚಂಪಕ
ಪುರಿಗೆ, ತೇರಿಂಗಿಳಿಯೆ ಮಣಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ವರ ಮಹಾಭಾರತದ ಸಮರದಿ
ಕೊರಗುತಿರೆ ಪಾರ್ಥನಿಗೆ ಗೀತೆಯ-
ನೊರೆದು ತನ್ನಂತಾನೆ ತೋರಿದು ಮೆರೆವ ಹರಿಯಿರವ|
ಅರಿತು ಕರಗಳ ಮುಗಿದು, ಧನುವಿಗೆ
ತಿರವನೇರಿಸಿ ಶಿರವ ಮಣಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಕುರುಪತಿಯು ಯಾದವರ ಸೇನೆಯ
ಚರಣ ಸೀಮೆಯೊಳಿದ್ದ ವಿಜಯನು
ಹರಿಯ ಮುಂದಣ ಭಾರತಾಹವಕಾಗಿಯರ್ತಿಸಿದು|
ತೆರಳೆ ಕುರುಪತಿ ಮೈದುನನ ಮನ-
ದೆರಕವನು ಪತಿಕರಿಸೆ ಮಣಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಹರಿಯಿತೆನ್ನಯ ಮೋಹ, ನಿನ್ನಿಂ-
ದರಿವು ಮೂಡಿತು ಪ್ರಾಣಸಖ ಮುರ-
ಹರನೆ, ಮನ್ಮನದೊಳಗಿನಾ ಸಂದೇಹ ಬರಡಾಯ್ತು|
ಧರಿಸುವೆನು ಶಿರದಲ್ಲಿ ನಿನ್ನಯ
ಪರತರಾಜ್ಞೆಯನೆಂದು ನುಡಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಅಜಕ್ಕಳ ಗಿರೀಶ್ ಭಟ್ 

ವರಕಪಿಯೆ ಕೊಡೆಯಾಗಿ ರಥದೊಳು
ಸಿರಿಪತಿಯೆ ತುರಗಗಳನೋಡಿಸೆ
ಕುರುಪತಿಯ ಬೆಳುಗೊಡೆಯ ಕಾಯುವೆವೆ೦ಬ ವೀರರನೂ
ಗುರುಹಿರಿಯರೆ೦ದೆಣಿಸದೆಲೆ ಬರಿ
ಯರೆಘಳಿಗೆಯೊಳು ತರಿವೆನೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಗ೦ಗಾಧರ ಬೆಳ್ಳಾರೆ.

ಪರಮ ತೇಜಃಪು೦ಜ ಮೂರ್ತಿಯ
ಧರಿಸಿ ಮನದೊಳಗಾ ಧನ೦ಜಯ
ನರಿತ ಪಾರ್ಥಿವರಿ೦ಗೆ ಸಮರವೆ ಧರ್ಮವೆ೦ದೆನುತ
ಮರೆಗೆ ಸರಿಯಲು ಮೋಹ ಭಕುತಿಯೊ
ಳೊರೆದ ಹಳಚುವೆ ಹರಸೆನುತಲತಿ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಬಲ್ನಾಡು ಸುಬ್ಬಣ್ಣ ಭಟ್

ಹರಿಯೆ ನಿನ್ನಯ ಸಖ್ಯದಿ೦ ನಾ
ನರಿತೆ ಶರಣಜನೈಕ ಬ೦ಧುವೆ
ಪರಮಗುಹ್ಯ ವಿಚಾರಗಳನೀ ಸಮರದವಸರದಿ
ಹರಿದು ದಡಿಸಿದ ಮೋಹ ಮನದಲಿ
ಮರಳಿದುದು ಸ್ಮೃತಿಯೆ೦ದು ಪೇಳಿದ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಡಾ. ಚ೦ದ್ರಶೇಖರ ದಾಮ್ಲೆ

ಇರವು ಬ೦ಧುಗಳೆ೦ಬ ಚಿ೦ತೆಗ
ಳಿರವು ಮಾಯೆಯ ಭಾವತ೦ತುಗ
ಳಿರವು ದೇಹದೊಳಾಅತ್ಮ ಪಯಣಿಗನೆ೦ಬ ತಿಳುವೊಡೆಯೆ
ಇರಿವೆನೈ ನಿಷ್ಕಾಮ ಕರ್ಮದೊ
ಳರಿಗಳನು ತಾನೆ೦ದು ಪೇಳ್ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ರೇಶ್ಮಾ ಜಿ.ಭಟ್,ಬ೦ಟ್ವಾಳ.

ಮರೆಯಲಾಗದು ಹಿರಿಯ ಅಯ್ಯನ
ಬೆರಳು ಹೂಡಿದ ಸರಳ ಮೊನೆಗಳು
ಕುರುಧುರದಲುರವಣಿಸಿ ರಚಿಸಿದ ಭಾರಿ ಘಾಯಗಳ
ಕರೆದು ತೋರುವೆನಿದರ ಕುರುಹನು
ಕರುಳ ಕುಡಿಗಳಿಗೆಲ್ಲವೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಡಾ.ಪರಮೇಶ್ವರ ಭಟ್ ,ಚೌಕ್ಕಾರು

ಹರಿಯೆ ನಿನ್ನಯ ಕರುಣೆಯಿ೦ದಲಿ
ಹರಿಯಿತೆನ್ನಯ ಮೋಹ ಭರದಲಿ
ಮರಳಿತೆನಗಾ ಮತಿಯು ದೇವನೆ ನಿನ್ನ ವಚನವನು
ಅರಿತು ಪೂರೈಸುವೆನು ಸ೦ಶಯ
ವಿರದೆ ನಿ೦ತಿಹೆನೆ೦ದನಾ ಕಲಿ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀಮತಿ ಇ೦ದಿರಾ ಜಾನಕಿ

ಕುರುಪಿತಾಮಹನಿ೦ಗೆ ವ೦ದಿಸಿ
ಶಿರವ ಬಾಗುತ ಗುರುವಿನೆದುರಲಿ
ಧುರದಿ ನಿಜದಲಿ ವಿಜಯನಾಗುವೆ ನಿನ್ನ ಕರುಣದಲಿ
ಮೆರೆಸೆ ಸಮರದಿ ಬಿಲ್ಲುವಿದ್ಯೆಯ
ಹರಿಯೆ ರಥವನು ಹಾರಿಸೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಸಿರಿಯ ರಮಣಗೆ ಬಾಗಿ ನಮಿಸುತ
ತುರಗ ಕಟ್ಟಿದ ರಥವನೇರಿಯೆ
ಪೊರಟ ಪಾರ್ಥನು ಕೊಚ್ಚಿಕೊಲ್ಲಲು ಶತ್ರುಸೈನ್ಯವನು
ಹರಿಯೆ ನಿನ್ನಯ ಕರುಣದಿ೦ದಲೆ
ಧರೆಯ ಭಾಗ್ಯವು ಬರುವುದೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ನೆರೆದ ಬಾ೦ಧವ ಜನರ ನೋಡಿಯೆ
ನರನ ಮನಕೆ ಗ್ಲಾನಿಯಾಯಿತು
ಹರಿಯು ತೋರಿದ ಪಾರ್ಥನೆದುರಲಿ ವಿಶ್ವರೂಪವನು
ಕರುಮ ಮಾಡಲು ಪೇಳ್ದ ಗೀತೆಯ
ತಿರುಳನರಿಯುತ ಸಿದ್ಧನೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀಮತಿ ಸಿ.ಬಿ.ಪಾರ್ವತಿ,ಪುತ್ತೂರು

ಕುರುಡು ಮೋಹದ ಭ್ರಾ೦ತಿ ಕಳೆಯುತ
ಪರಮ ಸತ್ಯದ ವಿಶ್ವರೂಪವ
ದರುಶನದೆ ಜ್ನಾನವನು ಅರುಹಿದ ಹರಿಯು ಅರ್ಜುನಗೆ
ಧರುಮ ಸ೦ಸ್ಥಾಪನೆಯ ರಥದೊಳು
ನಿರತನೊಡೆಯನ ನೆಪಕೆ ದೊರಕಿದ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಕೆ.ನರಸಿ೦ಹ ಭಟ್,ಏತಡ್ಕ.

ಗುರುಹಿರಿಯರನು ಕ೦ಡು ಸಮರದಿ
ಕರುಣೆದೋರಿದ ಧನ೦ಜಯನಿಗೆ
ಮುರಹರನು ಗೀತೋಪದೇಶವ ಮಾಡಿ ತೋರಿದನಾ
ಕುರುಕ್ಷೇತ್ರದಿ ವಿಶ್ವರೂಪವ
ಕರಮುಗಿದು ವ೦ದಿಸುತ ನಿ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಬಾಲ ಮಧುರಕಾನನ

ಹರಿದ ಕ೦ಬನಿಯೊರಸಿದನು ಹರಿ
ಚರಣಗಳಿಗೆರಗಿದನನೆತ್ತಿದ
ವರ ಕಿರೀಟಿಯನಪ್ಪಿದನು ಬಿಗಿ ತೋಳತೆಕ್ಕೆಯಲಿ
ಅರಿಯುವವರಾರಿಹರು ನಿಮ್ಮಯ
ಕರುಣವಾರಿಯಪಾರವೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ವರಬಲದಿ ಸೊಕ್ಕಿದನ ತಿಕ್ಕಿದೆ
ಬೆರಳಲೆತ್ತಿದೆ ವರ್ಧನನ ನೀ
ನುರುಳಿಸಿದೆ ದುರುಳರ ಶಿರವ ಲೋಕ ಕ೦ಟಕರ
ಧರುಮವೆನೆ ಸಲೆ ಕಾಯ್ದೆ ನೀನೇ
ಕರುಮಗೈಯಲು ಪೇಳ್ದೆ ಎ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಿದೆ ಕುರುಕುಲದರಿಗಳನು ನಾ
ಬರಿದೆ ಪೊಗಳದಲೇಕೆ ನೀನೇ
ಕರುಣಿಸಿದೆ ವಿಜಯವನು ಬವರದಿ ಪಾ೦ಡುಸುತರಿ೦ಗೆ
ವರವನೀವವ ನೀನೆ ಭಕುತಿಗೆ
ಶಿರವ ಮಣಿವವ ನೀನೆ ಎ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಪಟಿಕ್ಕಲ್ಲು ಶ೦ಕರ ಭಟ್.

ಸುರರು ಯಕ್ಷರು ಕಿನ್ನರರು ಕಿ೦
ಪುರುಷ ಗ೦ಧರ್ವಾದಿ ಮೂಜಗ
ಹರಿ ಕಿರೀಟಿಯ ರಥದ ವೈಭವ ಕ೦ಡು ಮನದಣಿಯೆ
ಪರಿಕಿಸುವೆನರಿ ಪಡೆಯ ಪರಿಯನು
ಅರಿಕೆ ತೇರನು ಸ್ಥಾಪಿಸೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಮಧುರಕಾನನ ಗಣಪತಿ ಭಟ್.

ಇರುಳು ಪಗಲೆ೦ದರಿಯದ ಮೂಢನಾ
ಗಿರುವೆ ಚಕ್ರದಿ ದಿನಮಣಿಯ
ಮರೆಸಿ ದೈತ್ಯನ ತರಿಯಲೆನಗನುವಾಗಿ
ಪೊರೆಯೆ ಭಕುತರ ರಕ್ಷಕನೆ೦ದು
ಸುರುತಿರೆ ಮೂಜಗಕೆ ನೀನೆ೦ದು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ದುರುಳ ಕರ್ಣನ ಶಿರವ ನಾ ನೆಲ
ಕುಋಳುಸುವುದೆನಗೆ ಸರಳವೆನೀ
ನುರುಳು ನೇದನಗಿತ್ತಿ೦ತು ಪೊರೆಯದಿರ್
ನಿರುತ ಮನದಿ೦ ಭಜಿಪರೊಳು ನೀ
ನಿರುತ ಕಾವವನೆ ನೀನೆ೦ದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ : ಹ೦ಸಾನ೦ದಿ,ಅಮೇರಿಕಾ

ಗಿರಿಜೆ ಪೂಜೆಗೆ ಸತ್ಯಭಾಮೆಯು
ತೆರಳಬಯಸುತ ಜೊತೆಗೆ ಕುಳ್ಳಿರೆ
ಕರೆದಳೈ ಪತಿಯನ್ನು ನಾದಿನಿ ಸುಭದ್ರೆಯ ಸಹಿತ |
ಹೊರಗೆ ಸೂತನೆ ಕಾಣ! ಬೇಗನೆ
ಪುರದ ದೇವಳ ಸೇರಬೇಕೆನೆ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
ಗಿರಿಜೆ ಪೂಜೆಗೆ ಸತ್ಯಭಾಮೆಯು
ಪೊರಟಿರಲು ಪತಿಯೊಡನೆ ನೋಂಪಿಗೆ
ಬಿರಿದ ಹೂಗಳ ಬುಟ್ಟಿಯಲಿ ಹಾಕಿಟ್ಟು ಮುದದಿಂದ
ಹೊರಗೆ ನೋಡಲು ಸೂತನಿಲ್ಲವು
ಪುರದ ದೇವಳ ಸೇರಬೇಕೆನೆ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಸರಸದಲ್ಲಿ ಸುಭದ್ರೆಯತ್ತಿಗೆ-
ಯರೊಡಗೂಡುತ ಲೆತ್ತವಾಡಿರ-
ಲರಸಿ ರುಕ್ಮಿಣಿ ಗೆದ್ದು ನಾದಿನಿಯನ್ನು ಛೇಡಿಸುತ
ಮೆರವಣಿಗೆಯಲಿ ನನ್ನ ಗಂಡನ
ಪುರದಿ ಕೊಂಡೊಯ್ಯುವುದೆ ಪಣವೆನೆ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಮರಳಿ ನೆನೆದರು ಕುರುಕ್ಷೇತ್ರದ
ಭರದ ಕದನವ ಗೀತ ಬೋಧೆಯ
ನರನು ನಾರಾಯಣನು ಸೇರಿರೆ ವರ್ಷಗಳುಕಳೆದು ॥
ಮರಳಿಯದೆನಿತು ನಿನಗೆ ಸಲಿಪುದು
ಹರಕೆಯಂದಿನದೆಂದು ಪೇಳುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಳನಿವನಭಿಮನ್ಯು ದ್ವಾರಾ-
ಪುರಿಗೆ ತೆರಳಿರುವಾಗ ಕಡಲಿನ
ಕರೆಯ ಮರಳಲಿ ಕಪ್ಪೆ ಗೂಡನು ಕಟ್ಟಬಯಸಿದನು ।
ಕಿರಿಯ ಮಾವನು ತಾಯ ಜೊತೆ ಕು-
ಳ್ಳಿರಲೆ ಬೇಕೆಂದು ಹಠಗೈದಿರೆ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಳಶಿಶು ಅಭಿಮನ್ಯು ತಾಯ ತ-
ವರಿಗೆ ಪೋಗಿರುವಾಗ ಸಾಗರ
ಕರೆಯ ಉಸುಕಿನಲಾಡಬೇಕೆಂದಾಸೆ ಪಟ್ಟಿರಲು
ಕಿರಿಯ ಮಾವನು ರಥದಿ ಜೊತೆ ಕು-
ಳ್ಳಿರಲೆಬೇಕೆನುತ ಮಗು ಕೇಳಲು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಸರಸರನೆ ಷಾಪಿಂಗು ಮುಗಿಸದ
ಸರಸು ಕೃಷ್ಣನ ಹಿರಿಯ ಮೂರ್ತಿಯ-
ನರೆಗಳಿಗೆಯಲಿಕೊಳ್ಳೆ ವಿಸ್ಮಯ ಗಂಡ ಅರ್ಜುನಗೆ!
ಹೊರಟುಬಿಡುವೆನು ಬಾಕಿ ಕೆಲಸಗ-
ಳಿರುವುದೆನುತಲಿ ಕಾರಲಿರಿಸುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಸರಸರನೆ ಷಾಪಿಂಗು ಮುಗಿಸುತ
ಸರಸು ಕೃಷ್ಣನ ಹಿರಿಯ ಮೂರ್ತಿಯ-
ನರೆಗಳಿಗೆಯಲಿಕೊಳ್ಳೆ ವಿಸ್ಮಯ ಗಂಡ ಅರ್ಜುನಗೆ!
ಹೊರಡುವುದೆ ಸರಿಯೆಂದು ಕಾರ-
ಲ್ಲಿರಿಸಿ ಭಾರದ ವಿಗ್ರಹವ ತಾ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ವಿರಸ ಬೇಡೆಲೆ ಮಾನಿನೀ ನಾ-
ನರಸುತಿಲ್ಲವು ಸುಳ್ಳುಕಾರಣ
ಕರೆಯಬೇಡವೆ ಮಾಲಿಗೇ ಶಾಪಿಂಗ ನಾ ಮಾಣೆ ।
ಹೊರಡಬೇಕಿದೆ ಮಗನು ಟ್ಯೂಷನ್
ತರಗತಿಗೆ ತುಸು ಹೊತ್ತಿನಲೆನುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
(ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)

ತುರಿದು ಕಾಯನು ಘಮಘಮೆನ್ನುತ
ಹುರಿದ ರವೆಯುಪ್ಪಿಟ್ಟು ಮಾಡುವೆ
ತರುವ ಸಮಯವು ಬಾಲಕೃಷ್ಣನ ಶಾಲೆಯಿಂದೆನಲು
ಹೊರಟನರ್ಜುನ ಪುಟ್ಟ ಮಗನನು
ಕರೆದು ಮಾರುತಿಯೊಳಗೆ ಕೂರಿಸಿ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
(ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)

ತರಿವೆ ದುರುಳರ ನೀನಿರಲು ತಡೆ
ವರನ್ನಾರನು ಕಾಣೆನೆನ್ನಲು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
ಸುರರು ಸುರಿದರು ಸುಮಗಳನ್ನಾ
ದರದಿ ಸುರಪತಿ ಪುತ್ರನೀಗಲೆ
ಹೊರಟನೈ ಕಾಳಗಕೆ ಮಡುಹುವ ಕೌರವರನೆನುತ
ಹರಿಯೆ ಕೇಳೈ ನಿಚ್ಚಯವು ನಿನ-
ಗಿರಲು ನೇಹವು ಪಾಂಡು ಸುತರಲಿ
ಮರಳಿ ಏಳಕ್ಷೋಹಿಣಿಯ ಪಡೆಯನ್ನು ಗಣಿಸದೆಲೇ
ತರಿದು ಹಾಕುವೆ ಕುರುಡಕುವರರ
ಸರದಿಯಲಿ ನಾನೆಂದು ನುಡಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಮುರಿದು ದುರ್ಯೋಧನನ ತೊಡೆಯನು
ಮರುಳ ಕರ್ಣನ ಕೊಂದು ನಂತರ
ದುರುಳ ದುಶ್ಶಾಸನನ ರಕ್ತದಿ ಜಡೆಯ ಮೀಯಿಸಲು
ತರಳೆಗಾದವಮಾನಕದುವೇ
ಸರಿಯು ಕೇಳೆನ್ನುತಲಿ ನುಡಿದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಮರೆಯಲಾರೆನು ನಾನು ಮಾಧವ
ತರಳೆ ದ್ರೌಪದಿಗಂದು ಹಸ್ತಿನ
ಪುರದಿ ಕೌರವರಾಯನಿಂದಾಗಿರ್ದ ವಿಭವವನು ।
ದುರುಳ ಕರ್ಣನ ಯುದ್ಧ ಭೂಮಿಯ-
ಲುರುಳಿಸಾಯ್ತೈ ನೆಮ್ಮದಿಯೆನುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಕುರುಕ್ಷೇತ್ರದ ಭಾರಿಯುದ್ಧದ
ಮರೆಯಲಾರದ ದಿವಸವಿದು ಕೇಳ್
ತರಿದೆ ದುರ್ಯೋಧನನಿಗಾಸರೆಯಾದ ಕರ್ಣನನು ।
ಧರೆಗೆ ಬಿದ್ದನು! ಅಗ್ನಿ ಕನ್ಯೆಗೆ
ದೊರಕಿಹುದು ತುಸು ನ್ಯಾಯವೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಕುರುಕ್ಷೇತ್ರದ ಕಾಳಗದಲಿದು
ಮರೆಯಲಾರದ ದಿನವಿದೇ ಸರಿ
ದುರುಳ ದುರ್ಯೋಧನನಿಗಾಸರೆಯಾದ ಕಲಿಕರ್ಣ ।
ಧರೆಗೆ ಬಿದ್ದನುಯೆನ್ನ ಮಡದಿಗೆ
ದೊರಕಿಸಿದೆನೈ ನ್ಯಾಯವೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
(ಕರ್ಣ ಕೆಸರಿನಲ್ಲಿ ರಥವನ್ನೆತ್ತುತ್ತಿರುವಾಗ ಹೇಳಿದ್ದಿದು)

ಮರುಕವೊಂದನು ತೋರಬೇಡವು
ದುರುಳನೆಂಬುದೆ ದಿಟವು ಧರೆಯ ಕೆ-
ಸರಲಿ ಕರ್ಣನು ರಥದ ಗಾಲಿಯನೆತ್ತುತಿಹ ನೋಡೈ
ಸರಲು ಹೂಡುತಲಿವನ ಕೊಲ್ಲೆಂ
ದಿರಲು ಹರಿ ಸರಿ ಮಾಳ್ಪೆನೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಣಿ ತನಯನು ಮತ್ತೆ ಭೂಮಿಗೆ
ಮರಳಿ ಗಾಲಿಯನೆತ್ತುತಿರೆ ತಾ
ಶರವ ಹೂಡಿಡುತಲವನ ಧರಣಿಗುರುಳಿಸುತ
ತರುಣಿ ದುರುಪದಿಗಿಂದು ನೆಮ್ಮದಿ
ಬರುವುದೌ ಹರಿ ಕೇಳುಯೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಣಿಯಾಕಾಶದಲಿ ಕಂತು-
ತ್ತಿರಲು ಕರ್ಣನು ರಥದ ಚಕ್ರ ಕೆ-
ಸರಲಿ ಸಿಲುಕಲು ತಾನದನು ಬಿಡಿಸಲಿಕ್ಕಿಳಿದಿರಲು
ಸರಿಯ ಸಮಯವು ಕೊಲ್ಲಲೀತನ
ದುರುಳತನಕಿದು ತಕ್ಕುದೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ
ಸುರಿಸಿರಲು ಮಳೆಯನ್ನು ಖಂಡಿತ*
ಧರೆಗೆ ತಂಪಾಯ್ತೆಂದು ಹೇಳಿದ **
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
* ಕಂಡಿತ ಕ್ಕೆ ಬದಲಾಗಿ ಬಳಕೆಯಲ್ಲಿರುವ ಖಂಡಿತವನ್ನೇ ಬಳಸಿದೆ

ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ
ಸುರಿಸಿರಲು ಮಳೆಯನ್ನು ಖಂಡಿತ
ಧರಣಿ ಭಾರವದಿಳಿಯಿತೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಕರುಳ ಕುಡಿಯಭಿಮನ್ಯುವನು ತಾ
ನರಿಯದಂತೆಯೆ ವ್ಯೂಹದಲಿ ಸಿಲು-
ಕಿರಿಸಿದನು ಕಡುನೀಚನೀತನ ನಾನು ಬಿಡಲೊಲ್ಲೆ ।
ದುರುಳ ಕರ್ಣನಿಗೆನ್ನ ಸರಳಲಿ
ಮರಣವೇ ಸೈಯಿವನಿಗೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಉರಿವ ಹೊಟ್ಟೆಯ ಕರುಬುಗಾಂಧಾರಿಗಿವನೆ ಸಾಕುಮಗ
ದುರುಪದಿಯ ಮೇಣ್ ಸತಿಸುಭದ್ರೆಯ
ಮರುಗಿಸಿದನನು ಕೊಂದೆಯೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಕುರುಡು ಪಟ್ಟಿಯ ರಾಣಿಗೀತನೆ ಸಾಕುಮಗನಲ್ತೆ
ದುರುಪದಿಯನೇ ದಾಸಿಯೆಂದನೆ!
ತರಿದು ಶಾಂತಿಯ ಪಡೆದೆನೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಮರುಳ! ಶಲ್ಯನ ನಂಬಿ ಬಂದನು
ವಿರಸದಲ್ಲವ ಹೊರಟು ಹೋಗಿರೆ
ದುರುಳ ಕರ್ಣನು ಕಾಳಗವನಿನ್ನೆಂತು ನಡೆಸುವನು?
ಕರುಣೆಯನು ತೋರದೆಯೆ ನೀ ಶತ
ಶರವ ಹೂಡೆನೆ ಮಾಳ್ಪೆನೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಅರಳುಮರುಳಿನ ಮುದುಕ ಶಲ್ಯನ-
ನರಿಯದೆಯೆ ನಂಬಿದ್ದ ಕಾರಣ
ದುರುಳ ಕರ್ಣನಿಗೀಗ ಸಾರಥಿಯಿಲ್ಲದೇ ಹೋಯ್ತು
ಕೊರಗುತಿಹನೈ ರಥದ ಗಾಲಿಗ-
ಳೆರಡು ಸಿಲುಕಿವೆ ಕೆಸರಲೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಹರಿಯೆ ನೀನೀ ಗೀತ ಬೋಧೆಯ-
ನೊರೆದಿರಲು ಮನ ಹಗುರವಾದುದು!
ಮರುಳುಹಿಡಿದುದು ಬಿಟ್ಟುಹೋದುದು ನಿನ್ನ ದಯೆಯಿಂದ
ದುರುಳರನು ಕೊಲ್ವುದಕೆ ಬೇಗನೆ
ಹೊರಡು ಹೂಡಿ ಲಗಾಮೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಹೊರಡೊ ಮಗನೇ* ಊರು ದೂರವು
ಭರದಲೋಡಿಸು ಕಾರು ದಾರಿಗೆ
ಕರಿದ ತಿಂಡಿಯನಷ್ಟು ಕಟ್ಟಿಸಿಕೊಂಡು ಹೋಗೋಣ!
ಕುರುಕುರೆನ್ನುವ ಚಕ್ಕುಲಿಗಳಿರೆ
ಸರಿದು ಪೋಪುದು ಯಾನವೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
* – ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ ಎಂದು ( ಅಥವಾ ಈ ಕಾಲದ ಇಬ್ಬರು ಗೆಳೆಯರು ಅಂತ ಬೇಕಾದರೂ) ಇಟ್ಟುಕೊಳ್ಳಬಹುದು

ಮರದ ಮೇಗಡೆ ಹತ್ತಿ ನೋಡಿರೆ
ನೆರೆದ ಸೈನ್ಯವು ಬಾನಿನಂಚಿನ-
ವರೆಗು ನಿಂತಿರುವುದನು ಕಾಣುತ ಮನದಿ ಹಿತವಡೆದು
ಮುರಿದು ಹಾಕುವೆವಿನ್ನು ಕೌರವ
ದುರುಳರನೆನುತ ಕೂಗಿ ಪೇಳಿದ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

ಸರದಿಯಲಿ ಸತ್ತಿರುವ ಕೌರವ
ದುರುಳರೆಲ್ಲರು ತೆರಳಿ ಯಮನ ನ
ಗರಿಯಲೀಗಲೆ ಹಳಬರಾದರು ಶಿಕ್ಷೆಪಡೆಯುತಲಿ
ಪರಮ ಗುರು ನೀನೆಮ್ಮ ಜೊತೆಯಾ-
ಗಿರುವುದಕೆ ನಾ ಧನ್ಯನೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥
ಗುರುಗುಡುತ್ತಲಿ ತುಂಬುಕೆಸರಲಿ
ಭರದಿ ಹೊಕ್ಕಿರೆ ರಥದ ಚಕ್ರವು
ಸರಸರನೆಯಿಳಿದ ಕರ್ಣ ತಾನದನು ಬಿಡಿಸಲಿಕೆ
ಸರಿಯ ಕಾಲವು ಕೊಲ್ಲಲೆಂದಿರೆ
ಹರಿಯು ಬಾಣವ ಬಿಟ್ಟೆನೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ಲ.ನಾ.ಭಟ್.

ಧರೆಯ ಭಾರವನಿಳುಹಿ ಖೂಳರ
ತರಿದು ಕಾಯಲು ಸತ್ಯ ಧರ್ಮವ
ಹರಿಯು ರಚಿಸಿದ ನಾಟಕವ ಪಾಂಡವರ ಸೇರುತಲಿ
ನರನ ರಥದಲಿ ನಿಂದು ದೇವಕಿ
ತರಳ ಪಿಡಿದಿಹ ಕರದಿ ವಾಘೆಯ
ಬರುತ ಕುರುಧಾರುಣಿಗೆ ಯುದ್ಧಕೆ ಸೇನೆಯೊಡನಂದು॥

ನೆರೆದ ಸ್ತೋಮವ ಕಂಡು ಫಲುಗುಣ
ಒರೆದ ದುಃಖದಿ ಕಮಲ ನಾಭನೆ
ಸರಿಯಿದಪ್ಪುದೆ ಸವರಿ ಕಳೆವುದು ಮಿತ್ರ ಬಾಂಧವರ
ಸಿರಿವರನೆ ಕೇಳಿಂದು ರಕ್ತವ
ಹರಿಸಿ ಕೊಳ್ಳುವ ಜಯವನೊಲ್ಲೆನು
ಮರೆಸಬಲ್ಲೆವೆ ನಾವು ಸತಿಯರ ದುಃಖಗಳ ಬಳಿಕ॥

ಅರಗಿನಾಲಯ ಸುಡಲು ರಚಿಸಿದ
ಬೆರೆಸಿದನು ಲಡ್ಡುಗೆಗೆ ವಿಷವನು
ಅರಸಿಯನು ಸಭೆಗೆಳೆದ ದಿನವನು ನೆನೆಯೊ ನೀನೊಮ್ಮೆ
ಮರುಳೆ ಮರುಗದೆ ಕೇಳು ಪೇಳುವೆ
ದುರುಳ ಕೌರವನಾತತಾಯಿಯು
ಮರೆತೆಯೇನೈ ನಿರತ ನಿಮ್ಮನದೆಂತು ಪೀಡಿಸಿಹ॥

ಒರೆದ ನರನಿಗೆ ನೀತಿಸಾರವ
ಹರಿಸಿ ಮಂಜನು ಕಣ್ಣ ತೆರೆಸಿದ
ಗಿರಿಯಪೊತ್ತವ ಭರದಿತೋರಿದ ವಿಶ್ವ ರೂಪವನು
ವಿರಾಟ್ರೂಪವ ಕಣ್ಣ ತುಂಬಿದ
ಕೊರಗನೆಲ್ಲವ ಮೀರಿ ನಿಂದಿಹ
ಸುರಪಸುತ ಬಲು ಹಾಡಿ ಹೊಗಳಿದನಜನ ಪಿತನಾ॥

ಪರಮ ಕರುಣಾಕರನು ನೀನೈ
ನಿರತ ನಿನ್ನನು ನಂಬಿ ನಡೆವೆನು
ಸರಳುಗಳ ಸುರಿಮಳೆಯನಿಳಿಸುವೆ ದೇವ ನಿನ್ನಾಣೆ
ಹರಿಸು ರಥವನು ನೇಹದಿಂದಲಿ
ಭರಿತ ವಿನಯದೊಳಂದು ಪೇಳಿದ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಮಹೇಶ ಎಳ್ಯಡ್ಕ.

ಬಿರುಬಿಸಲಿನೊಳ್ ಯುದ್ಧ ರಂಗದಿ
ಮರುಗಿ ಕುಳಿತನು ಧೀರಯೋಧನು
ಕರುಣೆಯಿಂದಲೆ ಕೊಲ್ಲಲಾರದೆ ತನ್ನ ಮನೆ ಜನರ |
ಪರಮ ಸತ್ಯದ ಗೀತೆಬೋಧಿಸೆ
ಪರ ರಹಸ್ಯವೆ ತಿಳಿಯಿತೆಂದನು
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~*~

ಲೇಖಕರು : ಶ್ರೀ ರಘು ಮುಳಿಯ

ಕುರುವಿನ೦ಗಣದಲ್ಲಿ ಭೀಷ್ಮನ
ಶರದ ಹತಿಯಿ೦ ರಕುತವೊಸರಲು
ಕರದಿ ಚಕ್ರವ ಪಿಡಿದು ತರಿಯುವೆನೆನುತಲಾರ್ಭಟಿಸಿ
ಮೆರೆವ ಪುರುಷೋತ್ತಮನ ತಾ ಕ೦
ಡರೆಘಳಿಗೆ ವಾಘೆಯನು ಪಿಡಿಯುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥

~

ಸೂ: ನಿಂಗಳ ಪೂರಣಂಗೊ ಇದ್ದರೆ ಇಲ್ಲಿ ಬರೆಯಿ.

15 thoughts on “ಅಷ್ಟಾವಧಾನದ ಸಮಸ್ಯಾಪೂರಣ : “ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ”

  1. ಒರಳ ನಡುವಿಗೆ ಕಟ್ಟಿ ಕೃಷ್ಣನ
    ಮರುಗಿ ನೊಂದಳು ತಾಯಿ ಮನದಲಿ
    ಯೊರಳನೆಳೆಯುತ ಜೋಡಿಮರಗಳ ನಡುವೆ ನುಸುಳಿದನೂ ।
    ಧರೆಯೊಳೊರಗಿದ ಮರದ ಮೇಲೆಯೆ
    ಹರಿಯು ಕುಳಿತನು ಲೀಲೆಯಿಂದಲೆ
    ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥

    ಅರ್ಜುನ =ಮತ್ತಿಮರ

  2. ಕರಿಯ ಮಸಿಯಲಿ ಬರೆದು ನೋಡಿರಿ
    ಬರಿದು ಹಾಳೆಗೆ ಬಂತು ಸೊಬಗದು
    ಪರಮ ಸಾರ್ಥಕ ಬಾಳ್ವೆಯಿಪ್ಪುದು ಸಾಮರಸ್ಯದಲೀ ।
    ಹೊರಟು ನಿಂತರು ಕಪ್ಪು ಬಿಳಿಯರು
    ಪುರುಷ ರೂಪದಲೇರಿ ರಥವನು
    ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥

    ಅರ್ಜುನ =ಬಿಳಿಯ , ಕೃಷ್ಣ = ಕಪ್ಪು

  3. ವಾಹ್! ಒಂದಕ್ಕಿಂತ ಒಂದು ಬಲ. ಎಲ್ಲವೂ ಸೂಪರ್ ಆಯಿದು. ನಮ್ಮ ಪ್ರತಿಷ್ಟಾನದ ಅಷ್ಟಾವಧಾನ ಕಾರ್ಯಕ್ರಮದ ಯಶಸ್ಸಿನ ಒಟ್ಟಿಂಗೆ ಈ ಸಮಸ್ಯಾ ಪೂರಣ ಮೇಳೈಸಿ ಭರ್ಜರಿ ರೈಸಿದ್ದು ಕಂಡು ಕೊಶೀ ಆತು.

  4. ಅದ್ಭುತ! ಒಂದು ಸಮಸ್ಯೆಯ ಸಾಲಿಂಗೆ ಐವತ್ತಕ್ಕೂ ಹೆಚ್ಚು ನಮುನೆಯ ಕಲ್ಪನೆಗೊ ಇಪ್ಪ ಪೂರಣಂಗ! ಬೈಲಿನ ಸಾಹಿತ್ಯನಿಧಿ ಹೀಂಗೇ ಬೆಳೆಯಲಿ..

  5. ನರಹರಿಯ ರಿಪುವೆ೦ದರಿಯದೆಯೆ
    ಶಿರದ ಮೇಲೆರಗಲು ಬಿಡೆನೆನುತ
    ನರನು ಕಾಯಲು ಗಯನ ಕಾವೇರಿತು ಸಮಬಲದಲಿ
    ಉರಗ ಭೂಷಣ ಸಂಧಿ ಸಾರಲು
    ಶಿರದ ಗಯನನು ಹರಿಗೆಯೊಪ್ಪಿಸಿ
    ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ

    ನರ= ಅರ್ಜುನ

    ++++++++++++++++++++++++++++++++

    ಒರಗಿಯೇಳುವ ಹರಿಯ ಕಾಣಲು
    ನೆರವ ನೀಡೆ೦ದೆನುತ ಕೇಳಲು
    ಕರುಣಿಸಲು ಹರಿಯಾಯ್ಕೆಯ ಮೊದಲು ನೋಡಿದರ್ಜುನಗೆ
    ನೆರವಯಿ೦ಗಿತವರಿತು ಶ್ರೀಪತಿ
    ಯಿರಲೆಮಗೆ ಸಾಕೆನುತ ಕೋರಲು
    ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ

    +++++++++++++++++++++++++++++++++++

    ಇರಿವ ಮಾನಸದ೦ಬುಗಳ ನೋ
    ವಿರಲು ಸುರಪತಿಯ ಸುತನೀತನು
    ತೊರೆದನಾ ಗಾಂಡೀವ ಶರಗಳ ಕೇಂದ್ರ ಭೂಮಿಯಲಿ
    ಸಿರಿಪತಿಯುಯೇಕದೊಳನೇಕವ
    ನರುಹಿ ತತ್ವವ ತೋರಿಯೆತ್ತಲು
    ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ

  6. ಅದ್ಭುತ ರಚನೆಗೊ.
    ಹವ್ಯಕರ ಪ್ರತಿಭೆ ಹೆರ ಬಪ್ಪಲೆ ಸದವಕಾಶ ಸಿಕ್ಕಿತ್ತು ಈ ಪೂರಣ ಸ್ಪರ್ಧೆಲಿ.
    ಎಲ್ಲರಿಂಗೂ ಅಭಿನಂದನೆಗೊ

  7. ಅಮೋಘವಾದ ಸಾಹಿತ್ಯ! ಸೃಜನಶೀಲತೆ !. ಪೂರಣ ಕಳುಸಿದ ಎಲ್ಲೋರಿಂಗುದೆ ಅಭಿನಂದನೆಗೊ.

  8. ಸಾಹಿತ್ಯಕ್ಕೆ ನಮೋ ನಮಃ

  9. ಅತ್ಯದ್ಭುತ! ಸೃಜನಶೀಲ ರಚನೆಗಳು! ಬರೆದವರಿಗೆ ಹಾಗೂ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

  10. ಹರಿಯೆ ಗೀತೆಯ ಸಾರ ಸಂಸ್ಕೃತಿ
    ಹರಿದು ಮೋಹದ ಪರೆಯು ಸುಸ್ಥಿತಿ
    ಹಿರಿದು ಮನದಲಿ ವಿಜಯ ನಿಶ್ಚಿತವಾಯ್ತು ಪಾರ್ಥನಿಗೆ ।
    ಹಿರಿಮೆ ನಿನ್ನದು ಸಮರ ಸಾರುವೆ
    ಹೊರಡು ದೇವನೆ ರಥದಿಯೆನ್ನುತ
    ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥

    ಕಾರ್ಯಕ್ರಮಕ್ಕೆ ಮೊದಲೆ ಬರದ್ದೆ…. ಬಪ್ಪಲಾತಿಲ್ಲೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×