Oppanna.com

ಸಮಸ್ಯೆ 44 : ಬಾಲ ಕೃಷ್ಣನ ತು೦ಟಾಟದ ವರ್ಣನೆ

ಬರದೋರು :   ಸಂಪಾದಕ°    on   24/08/2013    55 ಒಪ್ಪಂಗೊ

ಕಳುದ ವಾರ ರಾಮ-ಹನುಮರ ಭೇಟಿಯ ವರ್ಣನೆ ಭಾರೀ ಚೆ೦ದಕೆ ಆತು.ಈ ವಾರ

ಕಿಟ್ಟ ಚಾಮಿಯ ತು೦ಟಾಟದ ವರ್ಣನೆ

ಮಾಡುವ°,ಆಗದೋ?.

55 thoughts on “ಸಮಸ್ಯೆ 44 : ಬಾಲ ಕೃಷ್ಣನ ತು೦ಟಾಟದ ವರ್ಣನೆ

  1. ಯದುಕುಲಲವತರಿಸಿದ° ಕರಿಮನೆಲೇ
    ಮಧು ರಸವುಣುಸಿದ° ಮಗ ಹಡೆದಿರುಳೇ
    ಸದೆಬಡುದುರುಳಿಸಿದಸುರರ ಮರೆಲೇ
    ನಿಧಿಯವ ಭಕುತರಬೆಳಿ ಮನದೊಳವೇ
    ಕರಿಮನೆ = ಕಾರಗೃಹ
    ಬೆಳಿಮನ =ನಿಷ್ಕಲ್ಮಷ
    ++++++++++++++
    ಎಂಟರಾಗರ್ಭಂದ
    ಎಂಟನೇ ತಿಥಿಯಂದೆ
    ಎಂಟರವತಾರಲ್ಲಿ ಲಕ್ಷ್ಮೀಶನೆ
    ಎಂಟು ಮತ್ತಿಪ್ಪತ್ತು
    ಎಂಟರಾಗಷ್ಟಿಲೀ
    ಎಂಟರಾ ಲೀಲೆಗಿದು ಕುಸುಮಾಂಜಲಿ

    1. ಎಂಟರ ನಂಟು ಬಿಗುದ್ದದು ಭಾರೀ… ಲಾಯ್ಕಾಯಿದನ್ನೆ ಭಾಗ್ಯಕ್ಕ.

    2. ಮಣಿಗಣ ವಿವರಣೆಯೆನಗದುಕೊಶಿಯೇ…..

    3. ತುಂಬ ತುಂಬ ಲಾಯಕದ ಪದ್ಯಂಗೊ.

  2. ಒಡದು ಮಡುಗಿ ಮಸರ ಭರಣಿ
    ಕಡದು ಚೆಲ್ಲಿ ತಿಂದು ಬೆಣ್ಣೆ
    ಬೊಡುದು ಹುಡುಕೆ ಬಾಗಿಲೆಡೆಲಿ ನಿಂದು ಹೆದರಿಸಿ
    ಮಡಲು ಕಸವು ಮನೆಗೆ ತಂದಿ
    ಕೆಡೆಲಿ ಜೊಗುಳಿಲದ್ದಿ ಕೈಯ
    ತೊಡೆಯ ಹತ್ತಿ ಕೂರೆ ಕಾಲ ಕೆಸರ ಪಗರಿಸಿ ॥
    ಮದುವೆ ಸೀರೆಯೆಳದು ತೆಗದು
    ಹೊದಕೆ ಸುತ್ತಿ ಕುರೆಯ ಮೆತ್ತಿ
    ಬೊದುಳಿಸುಚ್ಚಿಲದರ ಚೀಪಿದೋರೆ ನೋಟಲೆ
    ಕೆದೆಲಿ ಜಾಯಿ ಕರವಗಮ್ಮ
    ಸುದರಿಕೆಲ್ಲಿ ಕಮ್ಮಿ ಹೇಳಿ
    ಮುದದಿ ಕುಡುದ ಕಂಜಿ ಹತ್ರೆ ಕಣ್ಣ ಮಿಟುಕಿಸಿ ॥
    ತೆಗದು ಪೊರ್ಪಿ ಸೆಸಿಯ ನೆಟ್ಟು
    ಬಗದು ಮಣ್ಣು ಬೆಶಿಲು ತಿಂದು
    ಜಗಳ ಮಾಡಿ ಚಾಡಿ ಹೇಳಿ ಪೆಪ್ಪಿಯೊಪ್ಪ ತಿಂದದಾ
    ರಗಳೆ ಮಾಡಿ ಸೋಪ ನೊರೆಯ
    ತೆಗದು ಮೆತ್ತಿ ವಸ್ತ್ರ ಜೆಪ್ಪಿ
    ನೆಗೆಲಿಯೋಡಿ ಜಾರಿ ಬೀಳೆ ತೊದಲಿ ಕೂಗುವಾ ॥
    ಹಗಲು ಸೊಕ್ಕೆ ಕನಸಿಲಿರುಳು
    ನೆಗೆಲಿ ಹೊರಳೆ ತುಂಬುಗನ್ನೆ
    ಜೊಗುಳಿಯಿಳುಶೊ ಮೋರೆ ಕಂಡು ಖುಷಿಲಿ ಕಣ್ಣಿದಾ
    ಮುಗಿವಲಿಲ್ಲೆ ನಾಳೆ ಹೊಸತು
    ಮಗನ ಲೂಟಿ ಕೃಷ್ಣನಾಂಗೆ
    ಸೊಗಸು ಕಂಡು ಹೋದೆ ತಿರುಗ ಬಾಲ್ಯ ನೆಂಪಿಲೀ ॥

    1. ಶೈಲಜಕ್ಕ ಮನೆಲಿಪ್ಪ ಕಿಟ್ಟಚಾಮಿಯ ಲೂಟಿಯ ವರ್ಣನೆ ಮಾಡಿದ್ದದು ಭಾರೀ ಲಾಯ್ಕಾಯಿದು.
      “ಜಗಳ ಮಾಡಿ ಚಾಡಿ ಹೇಳಿ ಪೆಪ್ಪಿಯೊಪ್ಪ ತಿಂದದಾ” ಇಲ್ಲಿ ಮಾತ್ರೆ ಹೆಚ್ಚಾಯಿದು ಅಷ್ಟೆ.
      ಅಭಿನ೦ದನೆಗೊ.

      1. ಹೋ… ಅಪ್ಪಲ್ಲದಾ…
        ಜಗಳ ಮಾಡಿ ಚಾಡಿ ಹೇಳಿಯೊಪ್ಪ ತಿಂದದಾ ಹೇಳಿ ಮಾಡ್ತೆ ….

    2. ಇದಂತೂ ಮನೆಕಿಟ್ಟಚಾಮಿದೇ ಕಥೆ- ಲೂಟಿ ಜೋರಿದ್ದಾ ಕಾಣ್ತು.

    3. ಲಾಯಿಕಾಯಿದು.
      ಮದುವೆ ಸೀರೆಯೆಳದು ತೆಗದು
      ಹೊದಕೆ ಸುತ್ತಿ ಕುರೆಯ ಮೆತ್ತಿ
      ಬೊದುಳಿಸುಚ್ಚಿಲದರ ಚೀಪಿದೋರೆ ನೋಟಲೆ- ಇದ೦ತೂ ಎಲ್ಲಾ ಬಾಬೆಗೊ ಮೊದಾಲು ಮಾಡುವ ಕೆಲಸ.ಆ ಓರೆ ನೋಟಲಿ ಒೞೆ ಚೆ೦ದ ಕ೦ಡಿಕ್ಕದ.ಒ೦ದರಲ್ಲೆ ಸುದಾರ್ಸಿದ್ದು ವಿಶೇಷ

    4. ಆಹಾ!,ಈ ಕಿಟ್ಟ ಚಾಮಿಯ ಒಂದಾರಿ ನೋಡೆಕ್ಕಾತನ್ನೇ…. ಶೈಲಕ್ಕಾ, ಲಾಯಕ ಆಯಿದು.

  3. ಅಣ್ಣ ಮಿಂದಿದ ಬೊಟ್ಟು ಮಡುಗಿದ
    ಸಣ್ಣ ಪುಟ್ಟಾ ವಸ್ತ್ರ ತೆಗೆ ನಾ-
    ವೆಣ್ಣೆ ಕಿಟ್ಟುಲೆ ಕೂರು ಸುಮ್ಮನೆ ನಿನಗು ಮೀಯೆಡದೋ?
    ಹಣ್ಣು ತತ್ತೆಯಾನೀಗ ತಿಂಬಲೆ
    ಕಣ್ಣು ತಪ್ಪಿಸಿ ಪಕ್ಕ ಜಾರೆಡ
    ಮಣ್ಣು ಮೆತ್ತುಗು ನೆನಪು ಮಾಡಂದಾದ್ದು ಹೆರಹೋಗಿ
    ನಡುಕೆ ಜಾಲಿಲಿ ಕೂದದೆಂತಕೆ?
    ಕಡೆಮನೆಯ ಗೋಪಿಯೆನ ಹೇಳಿದ್ದು
    ಹಿಡಿಲಿ ಮಣ್ಣಿನ ತೆಗದು ತಿಂತೆಯೊ ಬಾಯಿ ಕಳಿ ನೋಡ್ತೆ
    ಇಡಿಯ ವಿಶ್ವವೆ ಕಾಣ್ತು ಬಾಯಿಲಿ!!
    ಹುಡುಗ ನಿಜಕೂ ದೇವ ಮಾನವ
    ಮಡಿಲು ತುಂಬಿದ ಕಂದನಿಂದಾನಿಂದು ಧನ್ಯಳಾದೆ
    ಹಿಂಡು ಮಕ್ಕೊಗೆ ನೀನೆ ನಾಯಕ
    ಕಂಡ ಮನೆಯೊಳ ಬೆಣ್ಣೆ ಕದಿವದು
    ಚೆಂಡು ಹೆಟ್ಟುಸಿ ಮಡಕೆಯೊಡವದು ದೂರು ಸಿಕ್ಕಿದ್ದು
    ಸೆಂಡಿಗೆ ತೆಗದು ಕೊಡುದು ಹಕ್ಕಿಗೆ
    ಪುಂಡ ಕರುಗಳ ಕಟ್ಟ ಬಿಚ್ಚುದು
    ಗುಂಡಿ ನೋಡದೆ ಹೊಳಗೆ ಹಾರುದು ಪೂರ ಗೊಂತಾಯ್ದು
    ಉಂಬ ಹೊತ್ತಿಲಿ ಲೂಟಿ ಮಾಡೆಡ
    ಕಂಬ ಕಂಬವ ಸುತ್ತಿಯೋಡೆಡ
    ಬಿಂಬ ನೋಡದ ಮೇಲೆ ! ಕೊಡಲಿಯ ತುತ್ತು ಚಂದ್ರಂಗೆ?
    ತುಂಬುಗಣ್ಣುಗೊ ಯಾಕೆ ಮಗನೇ?
    ತಿಂಬಗಶನವ ಹಾಂಗೆ ಕೂಗುದ?
    ನಂಬು ನಾಳಂಗೆ ನವನೀತವ ಕೊಡ್ತೆಯೂಟಕ್ಕೆ
    ಬುಟ್ಟಿ ಮುಟ್ಟೆಡ ಕೌಂಚಿ ಬೀಳುಗು
    ಹೆಟ್ಟಿ ತಾಳವ ಶಬ್ದ ಮಾಡೆಡ
    ಹಟ್ಟಿಲುಂಬೆಗೊ ಕೂಡ ನಿದ್ದೆಗೆ ಜಾರಿ ಬಿಟ್ಟಿದವು
    ಜುಟ್ಟು ಹಿಡುದೇಳಿಸೆಡ ರಾಮನ
    ಬಿಟ್ಟೆಲ್ಲಾಟಿಕೆ ಮನುಗು ಬೇಗನೆ
    ತಟ್ಟಿ ಬೆನ್ನಿನ ಹಾಡ್ತೆ ಜೋಗುಳ ಕೇಳು ಬಾ ಕಂದಾ

    1. ಕೊಂಡಾಟದ ಭಾಮಿನಿ ಲಾಯಕ ಆಯಿದು ಅಕ್ಕ.
      ಮೂರು ಜಾಗೆಲಿ ಮಾತ್ರೆಗೊ ತಪ್ಪಿದ್ದು .
      ಹಣ್ಣು/ ತತ್ತೆಯಾ/ನೀಗ ತಿಂಬಲೆ
      ಮಡಿಲು/ ತುಂಬಿದ/ ಕಂದ/ನಿಂದಾ/ನಿಂದು/ ಧನ್ಯಳಾದೆ
      ಬಿಟ್ಟೆ/ಲ್ಲಾಟಿಕೆ ಮನುಗು ಬೇಗನೆ
      ಸಣ್ಣ ಸಣ್ಣ ತಿದ್ದುಪಡಿ ಬೇಕಕ್ಕು ಅಷ್ಟೆ.

      1. ಪದ್ಯ ಬರವ ಉತ್ಸಾಹಲ್ಲಿ ಮಾತ್ರೆ ಮರ್ತತ್ತು 🙂
        ಮಾತ್ರೆ ಸರಿ ಮಾಡಿದ ಪದ್ಯ:
        ಅಣ್ಣ ಮಿಂದಿದ ಬೊಟ್ಟು ಮಡುಗಿದ
        ಸಣ್ಣ ಪುಟ್ಟಾ ವಸ್ತ್ರ ತೆಗೆ ನಾ-
        ವೆಣ್ಣೆ ಕಿಟ್ಟುಲೆ ಕೂರು ಸುಮ್ಮನೆ ನಿನಗು ಮೀಯೆಡದೋ?
        ಹಣ್ಣು ಬೇಕಾ ತತ್ತೆ ತಿಂಬಲೆ
        ಕಣ್ಣು ತಪ್ಪಿಸಿ ಪಕ್ಕ ಜಾರೆಡ
        ಮಣ್ಣು ಮೆತ್ತುಗು ನೆನಪು ಮಾಡಂದಾದ್ದು ಹೆರಹೋಗಿ
        ನಡುಕೆ ಜಾಲಿಲಿ ಕೂದದೆಂತಕೆ?
        ಕಡೆಮನೆಯ ಗೋಪಿಯೆನ ಹೇಳಿದ್ದು
        ಹಿಡಿಲಿ ಮಣ್ಣಿನ ತೆಗದು ತಿಂತೆಯೊ ಬಾಯಿ ಕಳಿ ನೋಡ್ತೆ
        ಇಡಿಯ ವಿಶ್ವವೆ ಕಾಣ್ತು ಬಾಯಿಲಿ!!
        ಹುಡುಗ ನಿಜಕೂ ದೇವ ಮಾನವ
        ಮಡಿಲು ಮನ ಮನೆಗಳನೆ ತುಂಬುಸಿ ಧನ್ಯಗೊಳಿಶಿದೆ ನೀ
        ಹಿಂಡು ಮಕ್ಕೊಗೆ ನೀನೆ ನಾಯಕ
        ಕಂಡ ಮನೆಯೊಳ ಬೆಣ್ಣೆ ಕದಿವದು
        ಚೆಂಡು ಹೆಟ್ಟುಸಿ ಮಡಕೆಯೊಡವದು ದೂರು ಸಿಕ್ಕಿದ್ದು
        ಸೆಂಡಿಗೆ ತೆಗದು ಕೊಡುದು ಹಕ್ಕಿಗೆ
        ಪುಂಡ ಕರುಗಳ ಕಟ್ಟ ಬಿಚ್ಚುದು
        ಗುಂಡಿ ನೋಡದೆ ಹೊಳಗೆ ಹಾರುದು ಪೂರ ಗೊಂತಾಯ್ದು
        ಉಂಬ ಹೊತ್ತಿಲಿ ಲೂಟಿ ಮಾಡೆಡ
        ಕಂಬ ಕಂಬವ ಸುತ್ತಿಯೋಡೆಡ
        ಬಿಂಬ ನೋಡದ ಮೇಲೆ ! ಕೊಡಲಿಯ ತುತ್ತು ಚಂದ್ರಂಗೆ?
        ತುಂಬುಗಣ್ಣುಗೊ ಯಾಕೆ ಮಗನೇ?
        ತಿಂಬಗಶನವ ಹಾಂಗೆ ಕೂಗುದ?
        ನಂಬು ನಾಳಂಗೆ ನವನೀತವ ಕೊಡ್ತೆಯೂಟಕ್ಕೆ
        ಬುಟ್ಟಿ ಮುಟ್ಟೆಡ ಕೌಂಚಿ ಬೀಳುಗು
        ಹೆಟ್ಟಿ ತಾಳವ ಶಬ್ದ ಮಾಡೆಡ
        ಹಟ್ಟಿಲುಂಬೆಗೊ ಕೂಡ ನಿದ್ದೆಗೆ ಜಾರಿ ಬಿಟ್ಟಿದವು
        ಜುಟ್ಟು ಹಿಡುದೇಳಿಸೆಡ ರಾಮನ
        ಬಿಟ್ಟು ಕೊಳಲಿನ ಮನುಗು ಬೇಗನೆ
        ತಟ್ಟಿ ಬೆನ್ನಿನ ಹಾಡ್ತೆ ಜೋಗುಳ ಕೇಳು ಬಾ ಕಂದಾ

        1. ಪಷ್ಟಾಯಿದಕ್ಕಾ… ಕೊನೆ ಚರಣ ಅಂತೂ ಸೂಪರ್….

        2. ಯಶೋದೆಯಾಗಿ ಕೃಷ್ಣನ ಕಂಡದು ಲಾಯ್ಕಾಯಿದು.

        3. ಅದಿತಿ ಅಕ್ಕ, ಅಮ್ಮನ ವಾತ್ಸಲ್ಯ ಭಾವಲ್ಲಿ ಪೋಕ್ರಿ ಮಾಣಿಯೊಟ್ಟಿ೦ಗೆ ಬಕ್ಕು ಹೇಳಿ ನೀರೀಕ್ಶೆ ಇತ್ತೆನಗೆ. ತು೦ಬಾ ಲಾಯಿಕಾಯಿದು.

  4. ತೋಟಕ ತುಂಬ ಲಾಯಿಕಾಯಿದು ಭಾಗ್ಯಕ್ಕ. ಕಿಟ್ಟ ಚಾಮಿಯ ಕೊಂಡಾಡುಲೆ ಸರಿಯಾದ ಛಂದಸ್ಸು.
    “ಮೊಟ್ಟೆಲದಾ” ಪದಕ್ಕೆ ಬೇರೆ ಪರ್ಯಾಯ ಪದ ಉಪಯೋಗಿಸಿದರೆ ಈ ತೋಟಕ ಮತ್ತಷ್ಟು ಲಾಯ್ಕಕ್ಕು.

    1. ಧನ್ಯವಾದ೦ಗೊ ಮಾವ. ಮೊಟ್ಟೆ – ಹೇಳಿದರೆ ಮಡಿಲು ಹೇಳಿ ಅರ್ಥಲ್ಲಿ ಬರದ್ದು.ಎ೦ತಕ್ಕೆ ಬದಲುಸೆಕ್ಕು ಹೇಳಿ ಗೊನ್ತಾಯಿದಿಲ್ಲೆನ್ನೆ. ಅ೦ದು, ಈ ತೋಟಕಲ್ಲಿ ಸಮಸ್ಯೆ ಕೋಡುವಗ ಇದೇ ಮಾಣಿ ಅಲ್ಲಿದೆ ಬ೦ದದು.

      1. ಮೊಟ್ಟೆಲಿ + ಅದಾ -> ಮೊಟ್ಟೆಲದಾ . ಈ ಸಂಧಿ ಸರಿಯೋ ? ಇದು ಲೋಪ ಸಂಧಿ ಮಾಡಿರೆ ವ್ಯಾಕರಣ ತಪ್ಪಾವುತ್ತೋ ಸಂಶಯ,ಹಾಂಗಾಗಿ ಹೇಳಿದ್ದು.

        1. ಮೊಟ್ಟೆಲಿಯೇ – ಹೇಳಿರೆ ಆತು,ಅಲ್ಲದೊ?

          1. ಇಲ್ಲಿ ಸರಿ ಮಾಡಿದೆ. ಪರ್ಯಾಯ ಪದ ಹೇಳುವಗ ಎನ್ನ ತಲೆಲಿ ಅಲೋಚನೆ ಬ೦ದದು ಸಮಾನರ್ಥದ ಬೇರೆ ಪದ ಹೇಳಿ.(ಇದರರ್ತ ವ್ಯಾಕರಣ ಗೊ೦ತಿದ್ದು ಹೇಳಿ ಅಲ್ಲ)
            ನಲಿವಿಂದಲೆ ಕಿಟ್ಟನು ಆಟಲಿದಾ
            ಒಲವಿಂದಲೆ ಪೂತನಿ ಮೊಟ್ಟೆಲಿಯೇ
            ಮಲೆಹಾಲಿನ ಹೀರುತ ಬಿಟ್ಟನದಾ
            ಮಲತಾಯಿಗೆ ಕೊಟ್ಟನು ಮುಕ್ತಿಯುದೇ

  5. ನಲಿವಿಂದಲೆ ಕಿಟ್ಟನು ಆಟಲಿದಾ
    ಒಲವಿಂದಲೆ ಪೂತನಿ ಮೊಟ್ಟೆಲದಾ
    ಮಲೆಹಾಲಿನ ಹೀರುತ ಬಿಟ್ಟನದಾ
    ಮಲತಾಯಿಗೆ ಕೊಟ್ಟನು ಮುಕ್ತಿಯುದೇ

  6. ಅತ್ತೆ,
    ಹೊಸ ರೀತಿಯ ಪ್ರಾಸ ಪ್ರಯೋಗ ಎನಗಂತು ಕುಶಿ ಕೊಟ್ಟತ್ತು.
    ಅಣ್ಣ ತಮ್ಮರ ಸಂಭಾಷಣೆ ಸತ್ಯಕ್ಕೂ ಹಾಂಗೆಯೆ ಇದ್ದದ್ದು ಹೇಳುವಷ್ಟು ಲಾಯ್ಕಕ್ಕೆ ಬರೆದ್ದಿ.
    “ಬೆಣ್ಣೆ ಕದಿವನೊ, ಕಂಜಿ ಕಟ್ಟಿದ
    ಕಣ್ಣಿ ಬಿಚ್ಚಿಯೆ ಲೂಟಿ ಮಾಡ್ವನೊ,
    ಮಣ್ಣರಾಶಿಯೊಳಾಟವಾಡಿಯೆ ಬಿದ್ದು ಹೊಡೆಚುವನೊ” ಈ ಸಾಲುಗೊ ಓದಿ ಕುಶಿಯಾತು. ಪೋಕರಿ ಕೃಷ್ಣ ಕೇಳಿಕ್ಕು/ಮಾಡಿಕ್ಕು ಹೀಂಗೆಯೆ.
    ಎನಗೆ ಎಲ್ಲರ ಪದ್ಯ ಓದಿ ಓದಿ, ಬಾ(ಬೆ)ಲ ಕೃಷ್ಣನ ಮೇಲೆ ಪ್ರೀತಿ ಹೆಚ್ಚಾವ್ತ ಇದ್ದು.

  7. ಈಗ ಬರದ್ದರಲ್ಲಿ ಆದಿಪ್ರಾಸದ ನಿಯಮವ ರೆಜಾ ತಪ್ಪಿಸಿದ್ದೆ- ಪೂರ್ವಾರ್ಧಕ್ಕೊಂದು, ಉತ್ತರಾರ್ಧಕ್ಕೊಂದು ಪ್ರಾಸ ಹಾಕಿದ್ದೆ- ದಯವಿಟ್ಟು ಕ್ಷಮಿಸಿ, ಸಹಕರಿಸಿ.
    ಕೃಷ್ಣ- ಬಲರಾಮರ ಮಾತುಕಥೆಯ ಕಲ್ಪಿಸಿಗೊಂಡು ಬರೆತ್ತಾಯಿದ್ದೆ……
    ಹೊಳೆಯ ಕರೆಲೇ ಹೋಪನಣ್ಣಾ
    ಗೆಳೆಯರೊಟ್ಟಿಂಗಾಟವಾಡುಲೆ ?
    ಹೊಳವ ಹರವದು ಬಂದರಂಬಗಳಬ್ಬೆ ಬೈಗನ್ನೆ ।
    ಗುಡ್ಡೆಗೋಪನ ದನದ ಹಿಂದೆಯೆ?
    ದೊಡ್ಡಮರ ನೀನ್ಹತ್ತುಲೋಪಗ
    ಳಡ್ಡಿಮಾಡದೆ ಬಿಟ್ಟರಬ್ಬೆಯು ಸೇರ್ಸಿ ಬೈಗನ್ನೆ ॥
    ಬೆಣ್ಣೆ ಕದಿವನೊ, ಕಂಜಿ ಕಟ್ಟಿದ
    ಕಣ್ಣಿ ಬಿಚ್ಚಿಯೆ ಲೂಟಿ ಮಾಡ್ವನೊ,
    ಮಣ್ಣರಾಶಿಯೊಳಾಟವಾಡಿಯೆ ಬಿದ್ದು ಹೊಡೆಚುವನೊ?
    ಮಣ್ಣು ಮೋರೆಗೆ ಮೆತ್ತಿಗೊಂಡರೆ
    ಸಣ್ಣ ಬಾಯಿಯನೊಡವಲೇಳುಗು
    ಕಣ್ಣುಕಸ್ತಲೆ ಕಟ್ಟುಗಬ್ಬೆಗೆ ವಿಶ್ವರೂಪಕ್ಕೆ ॥
    ಹಟ್ಟಿಗೋಗಿಯೆ ಪುಟ್ಟುಕಂಜಿಗೆ
    ಕಟ್ಟಬಿಡುಸಿಯೆ ಹುಲ್ಲುಕೊಡುವನೊ?
    ಪೆಟ್ಟು ತಿನ್ನೆಕ್ಕಕ್ಕು ನಾವದ ಕಂಜಿಯೋಡಿದರೆ ।
    ಮತ್ತೆಯೆಂತರ ಮಾಡುದೇಳಿಯೆ
    ಸುತ್ತ ನೋಡಿದ° ಬಾಲಕೃಷ್ಣನು
    ಬತ್ತೆ ಹೇಳಿಕಿ ಮೆಲ್ಲ ಜಾರಿದ° ಕೊಳಲ ಹಿಡ್ಕೊಂಡು ॥

    1. ಇದಾದರೆ ಪಷ್ಟಾಯಿದು. ಹೊಸ ಹೊಸ ಪ್ರಯೋಗಂಗೊ ಬರಲಿ. ಒಳ್ಳೆದೇ.
      “ಸಣ್ಣ ಬಾಯಿಯನೊಡವಲೇಳುಗು” ಬದಲು “ಸಣ್ಣ ಬಾಯಿಯೊಡವಲೆನಗೆಡಿಯ” ಹೇಳಿ ಸರಿ ಮಾಡಿರೆ ಆವುತ್ತೋ ಏನೋ.? ಒಂಬತ್ತು ಸರ್ವ ಲಘು ಬತ್ತು.ಒಳ್ಳೆ ಲಕ್ಷಣ ಅಲ್ಲ ಹೇಳುಗು ಪದ್ಯಪಾನಿಗೊ.

      1. ಮಾವ, ನಮ್ಮ ಭಾಷೆಲಿ ‘ಬಾಯಿ ಒಡವದು’ ಹೇಳಿ ಹೇಳುದಲ್ಲದಾ- ಎಡೇಲಿ ಸ್ವರಾಕ್ಷರ ಬಪ್ಪಲಾಗದ್ದ ಕಾರಣ ‘ಸಣ್ಣ ಬಾಯಿಯನೊಡವಲೇಳುಗು’ ಹೇಳಿ ಬರದ್ದು. ‘ಬಾಯಿಯೊಡವಲೆನಗೆಡಿಯ’ ಹೇಳಿ ಬರದರೆ ಭಾವ ತುಂಬುತ್ತಿಲ್ಲೆ ಹೇಳುದು ಎನ್ನ ಅನುಮಾನ. ಅಬ್ಬೆ ಮಗನ ಬಾಯಿಯ ಒಡೆಶಿ ಮಣ್ಣಿದ್ದಾ ಹೇಳಿ ನೋಡುತ್ತಲ್ಲದಾ- ಅಂಬಗಳೇ ಅದಕ್ಕೆ ಇಡೀ ಬ್ರಹ್ಮಾಂಡ ಕಾಂಬದಲ್ಲದಾ-‘ ಬಾಯಿಯನೊಡವಲೇಳುಗು’ ಹೇಳುವಾಗ ನಾಲಗೆ ಪೆಡಚ್ಚೆಕ್ಕಾವುತ್ತು ಹೇಳಿಯಾದರೆ ‘ಸಣ್ಣ ಬಾಯಿಯ ಬಿಡುಸಿ ನೋಡುಗು’ ಹೇಳಿ ಮಾಡಿರೆಅಕ್ಕೋ ಏನೋ -ಇದೆನ್ನ ಅಭಿಪ್ರಾಯ- ಸರಿಯಾವ್ತೋ ನೋಡಿ.

        1. ಒಳ್ಳೆ ವಿಷಯ.
          ‘ಬಾಯಿ ಒಡವದು’ ಹೇಳಿ ಇಪ್ಪದರ ‘ಬಾಯಿಯನೊಡವಲೇ’ ಹೇಳಿ ಸಂಧಿ ಮಾಡಿರೆ ವ್ಯಾಕರಣ ದೋಷ ಆವುತ್ತೋ ಸಂಶಯ, ಹಾಂಗಾಗಿ ಆನು ಹೇಳಿದ್ದು.
          {‘ಬಾಯಿಯೊಡವಲೆನಗೆಡಿಯ’ ಹೇಳಿ ಬರದರೆ ಭಾವ ತುಂಬುತ್ತಿಲ್ಲೆ ಹೇಳುದು ಎನ್ನ ಅನುಮಾನ.} ನಿಂಗಳ ಅನುಮಾನ ಸರಿಯಾದ್ದೆ.ಮತ್ತೆ ‘ಸಣ್ಣ ಬಾಯಿಯ ಬಿಡುಸಿ ನೋಡುಗು’ ಹೇಳಿ ಬರವಗ ಎಲ್ಲ ಸರಿ ಆವುತ್ತು, ಅದರೆ ಆ ಮೂಲ ಭಾವ ಬತ್ತಿಲೆ ಅಲ್ಲದೊ.!
          ಹೀಂಗಿರ್ಸ ಸಂದರ್ಭಲ್ಲಿ ವಿಸಂಧಿಯ ಹಾಂಗೆ ಒಳುಶುದೇ ಸೂಕ್ತ ಅಕ್ಕು. ಟೀಕೆ ಮಾಡ್ತವು ಮಾಡಲಿ.
          ಹೀಂಗಿಪ್ಪ ಸಂದರ್ಭ ಆನು ಸುಮಾರು ಸರ್ತಿ ನೋಡಿದೆ, ಈ ಮದಲು ಬಂದ ಪೂರಣಂಗಳಲ್ಲಿ. ಬಾಲಣ್ಣನ ಪದ್ಯಲ್ಲಿ ಹವ್ಯಕ ಶಬ್ದವ ಬಳಸಿ ಭಾವನೆಗಳನ್ನೂ ತುಂಬುಸಿ ಬರತ್ತವು. ಆನು ಅವರ ಪದ್ಯಲ್ಲಿಇ ವಿಸಂಧಿಯ ಹುಡ್ಕೊದು ಬಿಟ್ಟಿದೆ.
          ಬಹುಶಃ ಇದರ,ಹವ್ಯಕ ಭಾಷೆಲಿ ಷಡ್ಪದಿ ಅಥವ ಇತರ ಛಂದಸ್ಸುಗಳ ಲಿಮಿಟೇಶನ್ ಹೇಳಿ ತಿಳ್ಕೊಂಬನೋ..?

          1. ಮಾವ ನಿಂಗಳ ತರ್ಕ ಸರಿಯಾದ್ದೇ… ವಾಕ್ಯ ಸರಿ ಮಾಡ್ಲೆ ಹೋದರೆ ಭಾಷೆ ಬದಲುತ್ತು ಹೇಳಿ ಎನ್ನ ಅನುಭವಕ್ಕೂ ಬಯಿಂದು…. ಆದಷ್ಟೂ ನಮ್ಮ ಭಾಷೆಲಿ ಬರವಲೆ ಪ್ರಯತ್ನಿಸುದು ಅಲ್ಲದಾ…?

          2. ಸ೦ಪೂರ್ಣ ಒಪ್ಪಿಗೆ ಇದ್ದು.ಈ ಸಮಸ್ಯೆ ಬ೦ದೇ ಬತ್ತು,ನಮ್ಮ ಶಬ್ದ೦ಗಳ ಜೋಡಣೆ,ವ್ಯಾಕರಣದ ವ್ಯತ್ಯಾಸ೦ದಾಗಿ.ಅನಿವಾರ್ಯ ಹೇಳಿ ಕ೦ಡ್ರೆ ವಿಸ೦ಧಿಯ ನೋಡದ್ದೆ ಇಪ್ಪದು ಭಾಷಾಶುದ್ಧಿಯ ಮಟ್ಟಿ೦ಗೆ ಕ್ಷೇಮ.

          3. ಸಂದರ್ಭೋಚಿತ ಮಾರ್ಗದರ್ಶನಕ್ಕೆ ಧನ್ಯವಾದಂಗೊ ಮಾವ.
            ಭಾವನೆಯನ್ನೂ ವ್ಯಾಕರಣವನ್ನೂ ಸರಿತೂಗುಸುವಾಗ ಅನಿವಾರ್ಯವಾದರೆ ವಿಸಂಧಿದೋಷವ ಕೈಬಿಡೆಕ್ಕಷ್ಟೆ.

    2. ತು೦ಬಾ ಚೆ೦ದಾಯಿದು. ಕೊಳಲ ನಾದ ಕೇಳಿದ್ದಿಲ್ಲೆನ್ನೆ ಅತ್ತೆ. ನಾಳೆ ಕೇಳುಗಾಯಿಕ್ಕು.

  8. ಅತ್ತೆ,
    ನಿಂಗಳ ಮೂರೂ (ಮೇಲಣ ಸುರುವಿಂದು ಸೇರಿ) ಪದ್ಯಗಳ ಓದಿ ಎನಿಗೆ ಅನುಮಾನ. ನಿಂಗ ಕೃಷ್ಣ ಬೆಣ್ಣೆ ಕದಿಯುದರ ಖಂಡಿತ ನೋಡಿದ್ದಿ ಹೇಳಿ. ಅಲ್ದಾ?

  9. ಮುದ್ದೆ ಮಾಡಿಯೆ ಬೆಣ್ಣೆ ತೆಗವಗ
    ಸುದ್ದಿಯಿಲ್ಲದೆ ಬಂದನಲ್ಲಿಗೆ
    ಮುದ್ದು ಮೋರೆಯ ಪುಟ್ಟುಕೃಷ್ಣನು ಬೆನ್ನ ಹಿಂದಂದ ।
    ಮೊದ್ದು ಮಾತಿಲಿ ಮೋಡಿಮಾಡಿದ
    ನದ್ದಿ ಕೈಗಳ ಬೆಣ್ಣೆಯಳಗೆಲಿ
    ಗುದ್ದು ಕೊಡುಗು ಯಶೋದೆ ಹೇಳಿಯೆ ದೂರವೋಡುಗದ ॥
    ಅಕ್ಕಪಕ್ಕದ ಮನೆಗಳಲ್ಲಿದೆ
    ಮಕ್ಕೊಗಾರಿಂಗಿಲ್ಲದಾಂಗೆಯೆ
    ಸಿಕ್ಕಿದಾಲಿನ ಮೊಸರು ಬೆಣ್ಣೆಯ ಹುಗ್ಗುಸುತ್ತವಡ ।
    ಬಕ್ಕು ಮೆಲ್ಲನೆ ಕೃಷ್ಣನಲ್ಲಿಗೆ
    ಚೊಕ್ಕವಾಗಿಯೆ ಮೇಲೆ ಹತ್ತುಗು
    ಸಿಕ್ಕ ದೊಣ್ಣೆಲಿ ಕುಟ್ಟಿಯಳಗೆಯ ಬಾಯಿಯೊಡ್ಡುಗದ ॥

    1. ಪದ್ಯಂಗೊ ಲಾಯಿಕಾಯಿದು ಅತ್ತೆ.
      “ಸಿಕ್ಕಿದಾಲಿನ” ಪ್ರಯೋಗ ಸರಿ ಕಾಣುತ್ತಿಲೆ – ಸರಿ ಮಾಡೆಕ್ಕಾತು ( ಬೊಕ್ಕು ಬಾಯಿಲಿ..?)

  10. ಅಳಗೆ ಮಜ್ಜಿಗೆಲಿ ಮಡುಗಿದ ಬೆಣ್ಣೆ ಕದ್ದವನ
    ಜಳಕ ಮಾಡುವ ಗೋಪಿಕೆಯ ವಸ್ತ್ರ ತಸ್ಕರನ
    ಪುಳಕಂದಲೇ ಅಬ್ಬೆಗೆ ಬಾಯಿಲಿ ಮೂಲೋಕ ತೋರುಸಿದ ಗೋಪಾಲನ
    ಕಳುಸಿ ದುಷ್ಟರ ಯಮಪುರಿಗೆ ಶಿಷ್ಟ ರಕ್ಷಕನ
    ಮಳೆಲಿ ಗೋವರ್ಧನಗಿರಿಯ ನೆಗ್ಗಿ ಹಿಡುದವನ
    ಇಳೆಲಿ ಕೊಂಡಾಟಂದ ಪೂಜೆ ಮಾಡುತ್ತವೂ ಜನ್ಮಾಷ್ಟಮಿ ಹಬ್ಬದಿನ

    1. ಮಾವ,
      ಕೃಷ್ಣನ ಲೀಲೆಗಳ ಒಂದೇ ಪದ್ಯಲ್ಲಿ ತುಂಬಾ ತುಂಬಾ ಲಾಯ್ಕಲ್ಲಿ ಹಿಡುದು ಮಡುಗಿದ್ದಿ. ಸಂದರ್ಭೋಚಿತ (ಆ ೨೮ ಕ್ಕೆ ಕೃಷ್ಣ ಜನ್ಮಾಷ್ಟಮಿಯನ್ನೇ) ಕವನ.

    2. ತಸ್ಕರಣೆ ಮಾಡುವವ – ತಸ್ಕರ –>ಹೊಸ ಪ್ರಯೋಗ ಲಾಯಿಕಾಯಿದು ಮಾವ.

  11. ಕಿಟ್ಟ ಚಾಮಿಯ ತುಂಟಾಟದ ವರ್ಣನೆ ಭಾರೀ ಲಾಯಿಕಕ್ಕೆ ಬತ್ತಾ ಇದ್ದು…ಅವನ ತುಂಟತನದ ಬಗ್ಗೆ ಎಷ್ಟು ಬರದರೂ ಕಡಮ್ಮೆಯೇ…

  12. ಎಲ್ಲಿ ಹೋದೆಯೊ ಕಿಟ್ಟ ನೀನೇ
    -ಕಲ್ಲಿ ದನಗಳ ಬೀಲ ಹಿಡುದೆಯೊ
    ಮೆಲ್ಲ ಬಂದೀಗೆನ್ನ ಜಿಡೆಯಾ ಎಳದೆ ಎಂತಕ್ಕೇ?/
    ಕಲ್ಲು ತೆಗದಿಡುಕಿದೆಯೊ ,ಮಾವಿನ
    ಗೆಲ್ಲ ಕೊಡಿಲಿಯೆ ಹತ್ತಿ ಕೂದೆಯ ?
    ಎಲ್ಲರಾ ಮನೆ ಕೂಸು ಮಕ್ಕೊಗೆ ಮರುಳು ಹಿಡುಶಿದೆಯಾ?/
    **** **** ****
    ಹಾಲು ಕುಡಿ ಮಗ, ಸುತ್ತು ಓಡಿ ಕು-
    ಶಾಲು ಮಾಡೆಡ ಎನ್ನ ಬೊಡುಶೆಡ
    ಹೋಲುಗಿದು ಬಣ್ಣಲ್ಲಿ ಚಂದ್ರನ ನೋಡು ಬಾನಲ್ಲಿ /
    ಕಾಲು ಸೋತತ್ತೆನಗೆ, ಈ ಮನ
    ಸೋಲುಗೋ? ಕಣ್ಣೆರಡದೂ ಎನ
    ಸಾಲವೋ? ಹೇಳಿತ್ತು ದೇವಕಿ ಕಣ್ಣು ಹನಿಗೂಡಿ/
    ***** ***** *****
    “ಕಣ್ಣು ಮುಚ್ಚಿದೆ ಹಾಲು ಕುಡಿ ಮಗ”
    “ಬೆಣ್ನೆ ಕೊಡು ಹಾಂಗಾರೆ ಕುಡಿವೆನು”
    “ಸಣ್ನ ಕೂದಲು ಉದ್ದ ಬರೆಡದೊ? ಹಾಲು ಕುಡಿ ಮಗನೇ” /
    “ಅಣ್ಣ ರಾಮಂಗಿರುಳು ಕೊಟ್ಟಾ
    ಹಣ್ಣು ಎನಗುದೆ ಬೇಕು ಕೊಡು ಎನ
    ಸಣ್ನ ತುಂಡಾ? ಬೇಡ, ಇಡಿಇಡಿ ಮಾಡಿ ಕೊಡು ಬೇಗ ”
    *** *** ****

    1. ಪ್ರತೀ ಸಾಲು ಸಾಲಿಲಿಯೂ ಕಿಟ್ಟಚಾಮಿಯ ಪಿಕಲಾಟ ಕಣ್ಣಿಂಗೆ ಕಾಂಬ ಹಾಂಗೆ ಬರದ್ದಿ, ಬಾಲಣ್ಣ.

    2. ಬಾಲಕೃಷ್ಣನ ಲೂಟಿ ಬಾಲಣ್ಣನ ಕಲ್ಪನೆಲಿ ಸೊಗಸಾಯಿದು.

    3. ಪೋಕನ ಲೂಟಿಯ ಲಾಯ್ಕಲ್ಲಿ ವರ್ಣಿಸಿದ್ದಿ.

    4. ಕವಿ ಬಾಲಣ್ಣ ಒನ್ದು ಚಿತ್ರವೂ ಬಿಡಿಸಿದ್ರೆ ಲಾಯ್ಕ್ ಆವುತ್ತಿತ್ತು

  13. ಎಕ್ಕಸಕ್ಕ ಲೂಟಿ ಮಾಣಿ
    ಗೆಕ್ಕದಾಂಗೆ ಮೇಲೆಯಿಪ್ಪ
    ಸಿಕ್ಕದೊಳವೆ ಮಡಗಿಬಿಡ್ತೆ ಬೆಣ್ಣೆಯಳಗೆಯ ।
    ಬಕ್ಕು ಗೋಪ ಮಕ್ಕಳೆಲ್ಲ
    ರಿಕ್ಕದಳಗೆ ನೇಲ್ಸಿದಲ್ಲಿ
    ಸಿಕ್ಕಿಬಿದ್ದರಂಬಗೋಡಿ ಕೃಷ್ಣ ಪೀಂಕುಗು ॥

    1. ಒಳ್ಳೆ ಶಬ್ದ ಜೋಡಣೆ. ಲಾಯಿಕಾಯಿದು ಅತ್ತೆ.

      1. ಬೆಣ್ಣೆ ಕದ್ದೋಡುವ ವರ್ಣನೆ ಲಾಯ್ಕಾಯ್ದು.

  14. ಈ ಸರ್ತಿ ಒ೦ದು ಘಟನೆಯ ಒ೦ದೇ ಚರಣಲ್ಲಿ ಮುಗಿಶುತ್ತೆ–
    ಮಣ್ಣು ತಿ೦ತೆಯ ಕಳ್ಳ ?
    ಬಣ್ಣದ೦ಗಿಯು ಹಾಳು !
    ಕಣ್ಣು ಕೆ೦ಪಾದ್ದೆನ್ನದೆರಡು ನೋಡು /
    ಅಣ್ಣನಾ ದೂರಲ್ದ ?
    ದೊಣ್ಣೆ ಬೇಡಮ್ಮಯ್ಯ!
    ಸಣ್ಣ ಬಾಯೊಳ ನೋಡಿದೊ೦ದು ಗುಮ್ಮ /

    1. ಮಣ್ಣು ತಿಂದರೆ ಮತ್ತೆ ಬೈಯದ್ದೆ ಆವ್ತ ? ಅಲ್ದಾ ?
      ಪದ್ಯ ಲಾಯ್ಕಿದ್ದು.

  15. ಎಲ್ಲ ಮಕ್ಕೊಗಿಂತ ತುಂಟ
    ಮೆಲ್ಲ ಹೋಗಿ ಬೆಣ್ಣೆ ಕದಿಗು
    ಕಲ್ಲು ಮಣ್ಣು ಕುಶಿಲಿ ತಿಂಗು ಕಳ್ಳ ಕಿಟ್ಟನು
    ನಿಲ್ಲದೋಡಿ ಪೋಕ ಹಲ್ಲು-
    ಗೆಲ್ಲ ಬಿಟ್ಟು ಕೆಪ್ಪಟೆ ರಸ-
    ಗುಲ್ಲ ಮಾಡಿ ಮರುಳು ಮಾಡ್ತ ಬಾಲ ಗೋಪನು

    1. ಅದಿತಿ ಅಕ್ಕಂಗೆ ಇನ್ನೂ ಚೆಂದಕ್ಕೆ ಪದ್ಯ ಬರವಲೆಡಿಗು, ಅಲ್ಲದೋ…!

      1. ಇನ್ನೊಂದು ಪದ್ಯ ಬರಿವ ಪ್ರಯತ್ನ ಮಾಡ್ತೆ ಮಾವ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×