ಮಂತ್ರಮಾತೃಕಾ ಪುಷ್ಪಮಾಲಾ ಸ್ತವಃ

ಆರ್ಷೇಯವಾದ ನಮ್ಮ ಭಾರತೀಯ ಧರ್ಮ – ಸ೦ಸ್ಕೃತಿಯ ಚರಿತ್ರೆಯ ಗಮನಿಸಿರೆ, ಅದು ಹಲವಾರು ಆಘಾತಕ್ಕೆ ಬಲಿಯಾದ್ದು ಕ೦ಡು ಬತ್ತು. ಆದರೆ ಈ ನೆಲದ ಗುಣ೦ದಲೇ ಇರೇಕು, ಇನ್ನೇನು ಧರ್ಮವೇ ನಾಶವಾಗಿ ಹೋವುತ್ತೋ ಹೇಳುವ ಕಾಲಲ್ಲಿ ಇಲ್ಲಿ ದೈವಾ೦ಶ ಸ೦ಭೂತರಾದ ಅದೆಷ್ಟೋ ಸ೦ತರು – ಮಹಾಪುರುಷರು ಹುಟ್ಟಿ, ಅದರ ಮೇಗೆ ನೆಗ್ಗಿದ್ದದು ಇ೦ದು ಇತಿಹಾಸಲ್ಲಿ  ದಾಖಲಗೊ.
ಹತ್ತು-ಹಲವು ಬಗೆಯ ಮತ೦ಗೊ ತಲೆಯೆತ್ತಿ, ನಾಸ್ತಿಕತೆ, ಅನಾಚಾರ, ಪಾಶವೀ ವೃತ್ತಿ  ಶ್ರೀಸಾಮಾನ್ಯ ಜೆನ ಮಾನಸಲ್ಲಿ ತಾ೦ಡವ ನೃತ್ಯವಾಡ್ಯೊ೦ಡಿಪ್ಪಗ ವೈದಿಕ ಧರ್ಮವ ಎತ್ತಿ ಹಿಡುದು, ಆಸೇತು ಹಿಮಾಚಲ, ಮಿ೦ಚಿನಾ೦ಗೆ ಸ೦ಚರಿಸಿ ಅದ್ವೈತ ಮತವ ಸ್ಥಾಪನೆ ಮಾಡಿ, ಜಗದ್ಗುರು ಪೀಠವೇರಿ, ಆದ್ಯಗುರುವೆನಿಸಿದವು ಶ್ರೀಶ್ರೀ ಶ೦ಕರಾಚಾರ್ಯ ಮಹಾಸ್ವಾಮಿಗೊ.

ಹುಟ್ಟಿದ್ದು ಕೇರಳದ ಕಾಲಟಿಲಾದರೂ ಕಾರಣಪುರುಷರಾದ ಅವು ದೇಶಕ್ಕಾಗಿ ಅವರ ಬದುಕನ್ನೇ ಶ್ರೀಗ೦ಧವಾಗಿ ಮಾಡ್ಯೊ೦ಡವು. ಅಲ್ಪಾವಧಿಯ ಬದುಕಿಲ್ಲಿ ಅವರ ಸಾಧನೆಯದು ಅಪೂರ್ವ! ಅವು ಬರದ ಭಾಷ್ಯ೦ಗೊ, ಸ್ತೋತ್ರ೦ಗೊ ಒ೦ದೆರಡಲ್ಲ; ಹಲವು! ಶ್ರೀಗುರುಗೊ ನಿರ್ಗುಣ ಬ್ರಹ್ಮೋಪಾಸಕರಾದರೂ, ಭಕ್ತಿಮಾರ್ಗವ ತಾತ್ಸಾರ ಮಾಡದ್ದೆ ಅದರ ಬೆಳಶಿದವು ಹೇಳ್ವದಕ್ಕೆ, ಭಕ್ತಿಭಾವ ತು೦ಬಿ ಹರಿವ ಅವರ ಹಲವಾರು ಸ್ತೋತ್ರ೦ಗಳೇ  ನಮ್ಮ ಕಣ್ಣ ಮು೦ದೆ ಸಾಮಾನ್ಯ ಜೆನಮಾನಸಲ್ಲಿ  ಇ೦ದಿ೦ಗೂ ಒಳ್ಕೊ೦ಡು ಬ೦ದದೇ  ಸಾಕ್ಷಿ ! ಅವರ ರಚನಗೊ ಭಕ್ತಿ, ಜ್ಞಾನ ಹಾ೦ಗು ವೈರಾಗ್ಯ೦ಗಳ ತ್ರಿವೇಣಿ ಸ೦ಗಮ !

ಶ್ರೀಲಲಿತಾಮಹಾತ್ರಿಪುರಸು೦ದರೀ ದೇವಿಯ ಪಾರಮ್ಯವ ಶ್ರೀಗುರುಗೊ ಶ್ರೀಸೌ೦ದರ್ಯಲಹರೀ ಹೇಳುವ (ನೂರು ಶ್ಲೋಕ೦ಗಳ) ಕೃತಿಲಿ ಸಾ೦ಗವಾಗಿ ವಿವರಿಸಿದ್ದವು. ಇಷ್ಟೇ ಸಾಲ ಹೇಳಿ ಮತ್ತೆ ಈ ಸಾರಯೆಲ್ಲವನ್ನೂ ” ಮ೦ತ್ರಮಾತೃಕಾಪುಷ್ಪಮಾಲಾಸ್ತವಃ “ ಹೇಳುವ 16 ಶ್ಲೋಕ೦ಗಳಲ್ಲಿ ದೇವಿಯ ಸ್ತುತಿ ರೂಪದ ರಚನೆಲಿ ಮಾಡಿದ್ದದು ಕ೦ಡು ಬತ್ತು. ಶ್ರೀಸೌ೦ದರ್ಯಲಹರೀ ಸ್ತೋತ್ರಲ್ಲಿ ಹಾಲಿಲ್ಲಿ ತುಪ್ಪ ಅಡಗಿಯೊ೦ಡಿದ್ದಾ೦ಗೆ ಭಾವ-ಅರ್ಥ-ರಸಾದಿಗೊ ಇದ್ದರೆ, ಇಲ್ಲಿ ಈಗಷ್ಟೇ ಬೆಣ್ಣೆ ಕಾಸಿ ಕೊಟ್ಟ ಗಮಗಮ ಪರಿಮಳದ ತುಪ್ಪದಾ೦ಗೆ ಈ ಸ್ತವರಾಜ ಗುರು ಕರುಣೆಯ ವರ ಪ್ರಸಾದವಾಗಿ, ಸುವರ್ಣ ಮ೦ತ್ರಾಕ್ಷತೆಯಾಗಿ  ಮೂಡಿ ಬ೦ದದು  ನಮ್ಮ ಸೌಭಾಗ್ಯವೇ ಸರಿ !

ಈ ಸ್ತುತಿಗೊಕ್ಕೆ ವಿಶೇಷ ಅರ್ಥ ಪುಷ್ಟಿ ಇದ್ದು! ಇಲ್ಲಿ ಶ್ರೀ ಗುರುಗೊ 16 ಶ್ಲೋಕ೦ಗಳ  “16 ಮ೦ತ್ರ ಮಾತೃಕಾ ಬೀಜಾಕ್ಷರ೦”ದ ಈ ಪುಷ್ಪಮಾಲೆಯ ಕಟ್ಟಿದವು.
ಇಲ್ಲಿಯ ಒ೦ದೊ೦ದು ಹೂಗುದೆ ದಿವ್ಯವೂ, ಅನನ್ಯವೂ ಆದವುಗೊ! ಅತ್ಯ೦ತ ರಹಸ್ಯವಾದ, ಚತುರ್ವಿಧ ಪುರುಷಾರ್ಥ ಪ್ರದವೂ, ಗುರುಕರುಣೆ೦ದ ಮಾ೦ತ್ರ ಲಭ್ಯವೂ ಆದ ಶ್ರೀಷೋಡಶಾಕ್ಷರೀ ಮ೦ತ್ರದ ಒ೦ದೊ೦ದು  ಬೀಜಾಕ್ಷರ೦ದಲೇ ಪ್ರತಿಯೊ೦ದು ಶ್ಲೋಕವುದೆ ಸುರುವಪ್ಪದರಲ್ಲಿಯೇ ಇದರ ಮಹತ್ವ ಇಪ್ಪದು!
ಈ ಕಾರಣ೦ದ ಇದರ ಯೋಗ್ಯ ಗುರೂಪದೇಶ೦ದಲೇ ಸರಿಯಾಗಿ ತಿಳ್ಕೊ೦ಡು ಶ್ರದ್ಧಾಭಕ್ತಿ೦ದ ಅನುಷ್ಠಾನ ಮಾಡಿತ್ತು ಹೇಳಿಯಾದರೆ ಅ೦ಥವಕ್ಕೆ ಆ ಪರಾಶಕ್ತಿ ಬೇಗ ಇಷ್ಟಾರ್ಥವ ಕೊಟ್ಟು ಅನುಗ್ರಹಿಸುತ್ತು.

ಅಶ್ವಿಜ ಮಾಸ ಶುಕ್ಲ ಪಕ್ಷದ ಶರನ್ನವರಾತ್ರಿಯ ಈ ಶುಭ ದಿನಲ್ಲಿ ಸರ್ವಾರ್ಥ ಸಿದ್ಧಿಯ ಕೊಡುವ ಪರಮ ಪಾವನವಾದ ಈ ದಿವ್ಯ ಸ್ತವವ ಯಥಾಶಕ್ತಿ ಅರ್ಥ ಮಾಡ್ಲೆ ಪ್ರಯತ್ನ ಮಾಡುವೊ°.

 

ಮ೦ತ್ರಮಾತೃಕಾ-ಪುಷ್ಪ-ಮಾಲಾಸ್ತವಃ

ಕಲ್ಲೋಲೋಲ್ಲಸಿತಾಮೃತಾಬ್ಧಿಲಹರೀಮಧ್ಯೇ ವಿರಾಜನ್ಮಣಿ-
ದ್ವೀಪೇ ಕಲ್ಪಕವಾಟಿಕಾಪರಿವೃತೇ ಕಾದಂಬವಾಟ್ಯುಜ್ಜ್ವಲೇ |
ರತ್ನಸ್ತ೦ಭಸಹಸ್ರನಿರ್ಮಿತಸಭಾಮಧ್ಯೇ ವಿಮಾನೋತ್ತಮೇ
ಚಿಂತಾರತ್ನವಿನಿರ್ಮಿತಂ ಜನನೀ ತೇ ಸಿಂಹಾಸನಂ ಭಾವಯೇ ||1||

ಹೇ ಅಬ್ಬೇ,  ಉಲ್ಲಾಸದ ಅಮೃತಸಮುದ್ರದ ದೊಡ್ಡ ತೆರೆಗಳ ನೆಡುಸರೆ ಹೊಳವ ರತ್ನದ್ವೀಪಲ್ಲಿ ಕಲ್ಪತರುಗಳ ತೋಟಂದ ಸುತ್ತುವರುದ ( ಬಯಸಿದ್ದರ ಕೊಡುವ ಮರಗಳ ಮದಿಲೊಳ), ಕದಂಬ ವೃಕ್ಷಂದ ಶೋಭಿಸುವ, ಸಾವಿರಾರು ರತ್ನದ ಕಂಬಂದ ಕಟ್ಟಿದ ಸಭೆಯ ಮಧ್ಯಲ್ಲಿ, ಒಳ್ಳೆಯ ಮ೦ಟಪ(ವಿಮಾನ)ಲ್ಲಿ  ಚಿಂತಾಮಣಿ೦ದ ವಿಶೇಷವಾಗಿ ನಿರ್ಮಾಣವಾದ  ಸಿಂಹಾಸನ ನಿನ್ನದು  ಹೇಳಿ  ಆನು ಭಾವಿಸುತ್ತೆ.
[ವಿಮಾನ = ಮ೦ಟಪ; (ವಾಸ್ತು) ಗೋಪುರ; ಶಿಖರ; ಬಿಡ್ಸಾಡಿ ಜಾಗೆ ( ಸಭಾ ವೇದಿಕೆ- Hall) ಹೇದೆಲ್ಲ ಅರ್ಥ೦ಗೊ ಇದ್ದಾದರೂ, ಇಲ್ಲಿ ಮ೦ಟಪ ಹೇಳುವದೇ ಸರಿ;
ನೋಡಿ ಕನ್ನಡ ನಿಘ೦ಟು – ೮ನೆಯ ಸ೦ಪುಟ, ಪುಟ – ೭೯೩೬- ೭೯೩೬; ಕ. ಸಾ. ಪ. ಪ್ರಕಟಣೆ ೧೯೯೫.]
ಶ್ರೀಶ೦ಕರ ಭಗವತ್ಪಾದ ಮಹಾಸ್ವಾಮಿಗಳು ಬರದ ಶ್ರೀಸೌ೦ದರ್ಯ ಲಹರೀ ಸ್ತೋತ್ರಲ್ಲಿ ಈ ಶ್ಲೋಕಕ್ಕೆ ಇನ್ನಷ್ಟೂ ಅರ್ಥ ಪುಷ್ಟಿ ಕೊಡುವ ವಿವರವಾದ ಶ್ಲೋಕ೦ಗೊ ಬಯಿ೦ದು.
ಈ ಎರಡು ಸ್ತೋತ್ರ೦ಗೊಕ್ಕೆ ಅನ್ಯೋನ್ಯ ಅವಿನಾಭಾವದ ಆ೦ತರಿಕ ಸ೦ಬ೦ಧವ ಶ್ರೀಗುರುಗೊ ಕಲ್ಪಿಸಿದಾ೦ಗೆ  ಇವೆರಡನ್ನೂ ಓದಿ ಅರ್ಥಾನುಸ೦ಧಾನ ಮಾಡ್ಯಪ್ಪಗ ಕಾಣ್ತು.
ಈ ಶ್ಲೋಕದೊಟ್ಟಿ೦ಗೆ ಶ್ರೀಸೌ೦ದರ್ಯಲಹರಿಯ
ಸುಧಾ ಸಿ೦ಧೋರ್ಮಧ್ಯೇ. . . . . . . .
. . . . . . . . . ಚಿದಾನ೦ದಲಹರೀಮ್ ||” (ಶ್ಲೋಕ – 8) ಹಾ೦ಗು,
ಗತಾಸ್ತೇ ಮ೦ಚತ್ವ೦. . . . . . . .
. . . . . . . . ದೋಗ್ಧಿ  ಕುತುಕಮ್ ||” (ಶ್ಲೋಕ – 94) ಗಳ ಅರ್ಥ೦ಗಳ ಹೋಲಿಸಿ ನೋಡಿ.

~

ಏಣಾಂಕಾನಲಭಾನುಮಂಡಲಲಸತ್ ಶ್ರೀಚಕ್ರಮಧ್ಯೇ ಸ್ಥಿತಾಂ
ಬಾಲಾರ್ಕದ್ಯುತಿಭಾಸುರಾಂ ಕರತಲೈಃ ಪಾಶಾಂಕುಶೌ ಬಿಭ್ರತೀಮ್ |
ಚಾಪಂ ಬಾಣಮಪಿ ಪ್ರಸನ್ನವದನಾಂ ಕೌಸುಂಭವಸ್ತ್ರಾನ್ವಿತಾಂ
ತಾಂ ತ್ವಾಂ ಚಂದ್ರಕಲಾವತಂಸಮುಕುಟಾಂ ಚಾರುಸ್ಮಿತಾಂ ಭಾವಯೇ ||2||

ಚಂದ್ರ, ಅಗ್ನಿ, ರವಿ ಮಂಡಲದ ಹಾಂಗೆ ಪ್ರಕಾಶಮಾನವಾದ ಶ್ರೀಚಕ್ರದ ನಡುಗೆ  ಬಾಲರವಿಯ ತೇಜಸ್ಸಿಂದ ಹೊಳವ, ಅಂಗೈಲಿ ಪಾಶಾಂಕುಶ, ಬಿಲ್ಲು-ಬಾಣಂಗಳ ಹಿಡುದು,ಪ್ರಸನ್ನಮೋರೆಯ, ಕೇಸರೀ ಬಣ್ಣದ ವಸ್ತ್ರವ ಸುತ್ತಿದ – ಚಂದ್ರನ ಕಲೆಂದಕೂಡಿದ ಕಿರೀಟವ ಧಾರಣೆಮಾಡಿಗೊಂಡ ಆ ನಿನ್ನ ಹಸನ್ಮುಖವ  ( ಆನು)  ಭಾವಿಸುತ್ತೆ.

~

ತ್ರಿಪುರ ಸುಂದರೀ ಮಾತೆ

ಈಶಾನಾದಿಪದಂ ಶಿವೈಕಫಲಕಂ ರತ್ನಾಸನಂ ತೇ ಶುಭಂ
ಪಾದ್ಯಂ ಕುಂಕುಮಚಂದನಾದಿಭರಿತೈರರ್ಘ್ಯಂ ಸರತ್ನಾಕ್ಷತೈಃ |
ಶುದ್ಧೈರಾಚಮನೀಯಕಂ ತವ ಜಲೈರ್ಭಕ್ತ್ಯಾ ಮಯಾ ಕಲ್ಪಿತಂ
ಕಾರುಣ್ಯಾಮೃತವಾರಿಧೇ ತದಖಿಲಂ ಸಂತುಷ್ಟಯೇ ಕಲ್ಪತಾಮ್ ||3||

ಈಶ್ವರಾದಿ( ಬ್ರಹ್ಮ, ವಿಷ್ಣು, ರುದ್ರ, ಈಶ್ವರ)ದೇವರುಗಳೇ ನಾಲ್ಕು ಕಾಲಾಗಿಪ್ಪ, ಸದಾಶಿವನೇ  ಹಲಗೆಯಾಗಿಪ್ಪ ಮಣಿಮ೦ಚವೇ ನಿನ್ನ ಭದ್ರಾಸನ. ಶ್ರೀಗ೦ಧ ಕು೦ಕುಮಾದಿ ದ್ರವ್ಯ೦ಗಳೆ ನಿನಗೆ ಪಾದೋದಕ.ರತ್ನ ಸಹಿತಾಕ್ಷತೆಯೇ ನಿನಗೆ ಅರ್ಘ್ಯ. ಶುದ್ಧ ನೀರೇ ನಿನಗೆ ಆಚಮನ. ಹೇ ಕರುಣಾಮೃತಸಾಗರಳೇ, ನಿನ್ನ ಸ೦ತೋಷಕ್ಕಾಗಿಯೇ ಇವೆಲ್ಲವುದೆ ಎನ್ನ ಭಕ್ತಿಪೂರ್ವಕ ಸಮರ್ಪಣೆ.

~

ಲಕ್ಷ್ಯೇ ಯೋಗಿಜನಸ್ಯ ಲಕ್ಷಿತಜಗಜ್ಜಾಲೇ ವಿಶಾಲೇಕ್ಷಣೇ
ಪ್ರಾಲೇಯಾಂಬುಪಟೀರಕುಂಕುಮಲಸತ್ ಕರ್ಪೂರಮಿಶ್ರೋದಕೈಃ |
ಗೋಕ್ಷೀರೈರಪಿ ನಾರಿಕೇಲಸಲಿಲೈಃ ಶುದ್ಧೋದಕೈರ್ಮಂತ್ರಿತೈಃ
ಸ್ನಾನಂ ದೇವಿ ಧಿಯಾ ಮಯೈತದಖಿಲಂ ಸಂತುಷ್ಟಯೇ ಕಲ್ಪತಾಮ್ ||4||

( ಹೇ ಜನನಿ,) ಯೋಗಿಗೊಕ್ಕೆ ಲಕ್ಷ್ಯ( ಸಾಧನೆಯ ಧ್ಯೇಯ)ವಾಗಿ ಇಪ್ಪೋಳೆ, ಜಗತ್ತಿನ ಜೀವರಾಶಿಗಳ ಕಾಪಾಡುವೋಳೆ, ವಿಶಾಲಾಕ್ಷಿ, ಚ೦ದನ, ಕು೦ಕುಮ, ಹೊಳವ (ಪಚ್ಹೆ)ಕರ್ಪೂರ ಮಿಶ್ರದ  ಹಿಮದ ನೀರು, ದನದ ಹಾಲು, ಬೊ೦ಡ ನೀರು,ಮ೦ತರಿಸಿದ ನೀರು – ಈ ಎಲ್ಲದರನ್ನೂ ನಿನ್ನ ಸ೦ತೋಷಕ್ಕಾಗಿ,  ಮ೦ಗಲ ಮಜ್ಜನ(ಸ್ನಾನ)ವಾಗಿ ಕಲ್ಪಿಸುವೆ.

~
ಹ್ರೀಂಕಾರಾಂಕಿತಮಂತ್ರಲಕ್ಷಿತತನೋ ಹೇಮಾಚಲಾತ್ಸಂಚಿತೈಃ
ರತ್ನೈರುಜ್ಜ್ವಲಮುತ್ತರೀಯಸಹಿತಂ ಕೌಸುಂಭವರ್ಣಾಂಶುಕಮ್ |
ಮುಕ್ತಾಸಂತತಿಯಜ್ಞಸೂತ್ರಮಮಲಂ ಸೌವರ್ಣತಂತೂದ್ಭವಂ
ದತ್ತಂ ದೇವಿ ಧಿಯಾ ಮಯೈತದಖಿಲಂ ಸಂತುಷ್ಟಯೇ ಕಲ್ಪತಾಮ್ ||5||

ಹೇ ದೇವಿ, ” ಹ್ರೀ೦” ಕಾರ (ಶಕ್ತಿ ಯ ಬೀಜಾಕ್ಷರ)ಮ೦ತ್ರ ಶರೀರಳೇ, ಹೇಮ (ಬ೦ಗಾರ) ಪರ್ವತ೦ದ ಒಟ್ಟು ಮಾಡಿದ ರತ್ನ೦ದ ಹೊಳವ ಉತ್ತರೀಯ (ಶಾಲು) ಮತ್ತೆ ಕೇಸರಿ ಬಣ್ಣದ ಸೀರೆ, ಬ೦ಗಾರದ ನೂಲಿಲ್ಲಿ ಮುತ್ತಿನ ಹರಳುಗಳ ಪೋಣಿಸಿದ  ಯಜ್ಞಸೂತ್ರ( ಜೆನಿವಾರ), ಈ ಎಲ್ಲದರನ್ನೂ ನಿನ್ನ ಸ೦ತೋಷಕ್ಕಾಗಿಯೇ ಸಮರ್ಪಿಸಿದ್ದು ಹೇದು ಗ್ರೆಹಿಶಿಗೊ.

~

ಹಂಸೈರಪ್ಯತಿಲೋಭನೀಯಗಮನೇ ಹಾರಾವಲೀಮುಜ್ಜ್ವಲಾಂ
ಹಿಂದೋಲದ್ಯುತಿಹೀರಪೂರಿತತರೇ ಹೇಮಾಂಗದೇ ಕಂಕಣೇ |
ಮಂಜೀರೌ ಮಣಿಕುಂಡಲೇ ಮುಕುಟಮಪ್ಯರ್ಥೇಂದುಚೂಡಾಮಣಿಂ
ನಾಸಾಮೌಕ್ತಿಕಮಂಗುಲೀಯಕಟಿಕೌ ಕಾಂಚೀಮಪಿ ಸ್ವೀಕುರು ||6||

ಹಂಸಂಗಳನ್ನೂ ಕೂಡಾ ನಾಚಿಸುವ ಹಾಂಗೆ ನೆಡವವಳೇ, ಈ ಉಜ್ವಲವಾದ ಮುತ್ತಿನಹಾರಂಗಳ, ತೂಗುಯ್ಯಾಲೆಯ, ವಜ್ರಪೂರಿತದ ಬಂಗಾರದ ವಂಕಿಗಳ, ನೂಪುರಂಗಳ, ರತ್ನಖಚಿತ ಕುಂಡಲಂಗಳ, ಅರ್ಧಚಂದ್ರ ಇಪ್ಪ ಕಿರೀಟವ, ಮೂಗಿಂಗೆ ಮುತ್ತಿನ ನತ್ತು ( ಮೂಕುತಿ)ಮತ್ತೆ ಸೊಂಟಕ್ಕೆ ಸೊಂಟಪಟ್ಟಿಗಳ ಸ್ವೀಕಾರ ಮಾಡು.

~

ಸರ್ವಾಂಗೇ ಘನಸಾರಕುಂಕುಮಘನಶ್ರೀಗಂಧಪಂಕಾಂಕಿತಂ
ಕಸ್ತೂರೀತಿಲಕಂ ಚ ಫಾಲಫಲಕೇ ಗೋರೋಚನಾsಪತ್ರಕಂ ||
ಗಂಡಾದರ್ಶನಮಂಡಲೇ ನಯನಯೋರ್ದಿವ್ಯಾಂಜನಂ ತೇಂsಚಿತಂ
ಕಂಠಾಬ್ಜೇ ಮೃಗನಾಭಿಪಂಕಮಮಲಂ ತ್ವತ್ಪ್ರೀತಯೇ ಕಲ್ಪತಾಮ್ ||7||

ಸರ್ವಾಂಗ ಲೇಪನಕ್ಕೆ ಒಳ್ಳೇ ಶ್ರೀಗಂಧ, ಹಣೆಗೆ ಕಸ್ತೂರಿ, ಕೆಪ್ಪಟೆಗೆ ಗೋರೋಚನ, ಕಣ್ಣಿಂಗೆ ದಿವ್ಯವಾದ ಕಾಡಿಗೆ, ಶಂಖದ ಹಾಂಗೆ ಇಪ್ಪ ಕೊರಳಿಂಗೆ ನಿರ್ಮಲವಾದ ಕಸ್ತೂರಿ- ಇವೆಲ್ಲವುದೆ ನಿನ್ನ ಪ್ರೀತಿಗೆ ಹೇಳಿಯೇ ಕಲ್ಪಿಸಿಗೊಳ್ತೆ.

~

ಶ್ರೀಚಕ್ರಂ

ಕಲ್ಹಾರೋತ್ಪಲಮಲ್ಲಿಕಾಮರುವಕೈಃ ಸೌವರ್ಣಪಂಕೇರುಹೈಃ
ಜಾತೀಚಂಪಕಮಾಲತೀವಕುಲಕೈರ್ಮಂದಾರಕುಂದಾಭಿಃ |
ಕೇತಕ್ಯಾ ಕರವೀರಕೈರ್ಬಹುವಿಧೈಃ ಕ್ಲೃಪ್ತಾಸ್ತ್ರಜೋಮಾಲಿಕಾಃ
ಸಂಕಲ್ಪೇನ ಸಮರ್ಪಯಾಮಿ ವರದೇ ಸಂತುಷ್ಟಯೇ ಗೃಹ್ಯತಾಮ್ ||8||

ಬೆಳಿಯ ತಾಮರೆ, ನೀಲಿಕಮಲ, ಮಲ್ಲಿಗೆ, ಮರುಬಕ ಹೂಗು, ಸುವರ್ಣ ಬಣ್ಣದ ಕಮಲ, ಸೂಜಿಮಲ್ಲಿಗೆ, ಸಂಪಿಗೆ, ಬಕುಲ, ಪಾರಿಜಾತ, ಕುಂದ ಮೊದಲಾದ ಹೂಗಿ೦ದ, ಕೇದಗೆ, ಕರವೀರ ಹಾಂಗೂ ಇನ್ನೂ ಅನೇಕ ಬಗೆಯ ಹೂಗಿ೦ದ ನೇಯ್ದು ಮಾಡಿದ ಮಾಲಗಳ, ವರದಳೇ, ಸಂಕಲ್ಪಂದಲೇ ಇದೆಲ್ಲದರನ್ನೂ ನಿನಗೆ ಸಮರ್ಪಿಸುತ್ತಾ ಇದ್ದೆ; ಸಂತೋಷಲ್ಲಿ ಸ್ವೀಕಾರಮಾಡು.

~

ಹಂತಾರಂ ಮದನಸ್ಯ ನಂದಯಸಿಯೈರಂಗೈರನಂಗೋಜ್ಜ್ವಲೈಃ
ಯೈರ್ಭೃಂಗಾವಲಿನೀಲಕುಂತಲಭರೈರ್ಬಧ್ನಾಸಿ ತಸ್ಯಾಶಯಮ್ |
ತಾನೀಮಾನಿ ತವಾಂಬಕೋಮಲತರಾಣಿ ಆಮೋದಲೀಲಾಗೃಹಾಣಿ
ಆಮೋದಾಯ ದಶಾಂಗಗುಗ್ಗುಲುಘೃತೈಃ ಧೂಪೈರಹಂ ಧೂಪಯೇ ||9||

ಅಬ್ಬೆ, ಮದನನ ಕೊ೦ದ (ಬಾನದ ಹಾಂಗೆ ಇಪ್ಪವ)ಸದಾಶಿವನ, ಉಜ್ವಲವಾದ ನಿನ್ನ ಅಂಗಂಗಳಿಂದ ಅನಂದಗೊಳಿಸುತ್ತೆ. ಅವನ ಮನಸ್ಸಿನ,ಅನ೦ಗನ ಹೊಳವ ತು೦ಬಿಗಳ ಸಾಲಿನ ಹಾಂಗಿಪ್ಪ ನಿನ್ನ ಕಪ್ಪು ತಲೆಕೂದಲ ರಾಶಿಲಿ ಕಟ್ಟಿ ಹಾಕುತ್ತೆ. ಈ ಕೋಮಲತರವಾದ ಆನ೦ದದ ಕ್ರೀಡಾಮಂದಿರಲ್ಲಿ ನಿನ್ನ ಕೊಶಿಗಾಗಿಯೇ ದಶಾಂಗ, ಗುಗ್ಗುಲು, ತುಪ್ಪ೦ದ ಧೂಪವ ಆನು ಹಾಕುತ್ತೆ.

~

ಲಕ್ಷ್ಮೀಮುಜ್ವಲಯಾಮಿ ರತ್ನನಿವಹೋದ್ಭಾಸ್ವತ್ತರೇ ಮಂದಿರೇ
ಮಾಲಾರೂಪವಿಲಂಬಿತೈರ್ಮಣಿಮಯಸ್ತಂಭೇಷು ಸಂಭಾವಿತೈಃ |
ಚಿತ್ರೈರ್ಹಾಟಕಪುತ್ರಿಕಾಕರಧೃತೈರ್ಗವ್ಯೈರ್ಘೃತೈರ್ವರ್ಧಿತೈಃ
ದಿವ್ಯೈರ್ದೀಪಗಣೈರ್ಧಿಯಾ ಗಿರಿಸುತೇ ಸಂತುಷ್ಟಯೇ ಕಲ್ಪತಾಮ್ ||10||

ಹೇ ಪರ್ವತರಾಜನ ಮಗಳೇ, ರತ್ನದ ರಾಶಿಲಿ ಹೊಳವ ಮಂದಿರಲ್ಲಿ, ರತ್ನಮಯ ಕಂಬಂಲ್ಲಿ ಮಾಲೆಗಳ ಹಾಂಗೆ ನೇಲ್ಸಿದ ಚಿತ್ರಂದ, ಸುವರ್ಣಮಯ ಗೊಂಬೆಗಳ ಕೈಲಿ ಹಿಡುದ ಹಶುವಿನ ತುಪ್ಪಲ್ಲಿ ಹೊತ್ಯೊ೦ಡಿಪ್ಪ ದಿವ್ಯವಾದ ಅನೇಕ ದೀಪಂದ ಈ ಮಂದಿರದ ಕಾಂತಿಯ ಹೆಚ್ಚುಸುತ್ತೆ, ಇದು ನಿನ್ನ ಸಂತೋಷಾರ್ಥಕ್ಕೆ ಹೇಳಿ ಕಲ್ಪಿತವಾಗಲಿ.

~

ಹ್ರೀಂಕಾರೇಶ್ವರಿ ತಪ್ತಹಾಟಕಕೃತೈಃ ಸ್ಥಾಲೀಸಹಸ್ರೈರ್ಭೃತಂ
ದಿವ್ಯಾನ್ನಂ ಘೃತಸೂಪಶಾಕಭರಿತಂ ಚಿತ್ರಾನ್ನಭೇದಂ ತಥಾ |
ದುಗ್ಧಾನ್ನಂ ಮಧುಶರ್ಕರಾದಧಿಯುತಂ ಮಾಣಿಕ್ಯಪಾತ್ರೇ ಸ್ಥಿತಂ
ಮಾಶಾಪೂಪಸಹಸ್ರಮಂಬ ಸಫಲಂ ನೈವೇದ್ಯಮಾವೇದಯೇ ||11||

ಹ್ರೀಂಕಾರ ಮಂತ್ರಂದ ಲಕ್ಷಿತವಾದ ಈಶ್ವರಿಯೇ, ಬಂಗಾರದ ಒಪ್ಪ ಕೊಟ್ಟ ಸಾವಿರಾರು ಪಾತ್ರಂಗಳಲ್ಲಿ ತು೦ಬಿಸಿ ಮಡಗಿದ ತುಪ್ಪ, ಸಾರು, ತರಕಾರಿಗಳ ಹಾಕಿದ ಬಗೆ ಬಗೆಯ, ಚಿತ್ರಾನ್ನ ಜೇನ, ಸಕ್ಕರೆ ಹಾಲನ್ನ ಮತ್ತೆ ಮೊಸರನ್ನ ಹಾ೦ಗೇ ರತ್ನದ ಪಾತ್ರಲ್ಲಿ ಉದ್ದಿನ ಹಪ್ಪಳ, ಸುಟ್ಟವು ಸಾವಿರಾರು ಹಣ್ಣುಗಳ ಸಯಿತ  ನಿನಗೆ ನೈವೇದ್ಯ ಮಾಡ್ತೆ.

~

ಸಚ್ಛಾಯೈರ್ವರಕೇತಕೀದಲರುಚಾ ತಾಂಬೂಲವಲ್ಲೀದಲೈಃ
ಪೂಗೈರ್ಭೂರಿಗುನೈಃ ಸುಗಂಧಿಮಧುರೈಃ ಕರ್ಪೂರಖಂಡೋಜ್ಜ್ವಲೈಃ |
ಮುಕ್ತಾಚೂರ್ಣವಿರಾಜಿತೈರ್ಬಹುವಿಧೈಃ ವಕ್ತ್ರಾಂಬುಜಾಮೋದಿತೈಃ
ಪೂರ್ಣಾರತ್ನಕಲಾಚಿಕಾ ತವ ಮುದೇ ನ್ಯಸ್ತಾಪುರಸ್ತಾದುಮೇ ||12||

ಉಮಾದೇವಿಯೇ, ಹೆಚ್ಚಿನ ಶೋಭೆ ಇಪ್ಪ ಶ್ರೇಷ್ಠ ಕೇದಗೆಯ ಎಸಳಿನ ಕಾಂತಿ ಇಪ್ಪ ವೀಳ್ಯದೆಲೆಗಳ ಮತ್ತೆ ಒಳ್ಳೆ ಪರಿಮಳದ,ಪಚ್ಚೆಕರ್ಪೂರದ ತುಂಡುಗಳ, ಹೊಳವ ಮುತ್ತಿನ ಹೊಡೀ೦ದ ಶೋಭಿಸುವ ಬಹು ವಿಧಲ್ಲಿ ಮುಖಕಮಲಕ್ಕೆ ಸುವಾಸನೆ ಕೊಡುವ ಅಡಕ್ಕೆಂದ ತುಂಬಿದ ರತ್ನದ ತಟ್ಟೆಯ ಸಂತೋಷಾರ್ಥವಾಗಿ ನಿನ್ನೆದುರು ಮಡಗಿದ್ದೆ.

~

ಕನ್ಯಾಭಿಃ ಕಮನೀಯಕಾಂತಿಭಿರಲಂಕಾರಾಮಲಾರಾರ್ತಿಕಾ-
ಪಾತ್ರೇ ಮೌಕ್ತಿಕಚಿತ್ರಪಂಕ್ತಿವಿಲಸತ್ಕರ್ಪೂರದೀಪಾವಲಿಃ |
ತತ್ತತ್ತಾಲಮೃದಂಗಗೀತಸಹಿತಂ ನೃತ್ಯತ್ಪದಾಂಭೋರುಹಂ
ಮಂತ್ರಾರಾಧನಪೂರ್ವಕಂ ಸುವಿಹಿತಂ ನೀರಾಜನಂ ಗೃಹ್ಯತಾಮ್ ||13||

ಹೇ ಜನನಿ, ಮನೋಹರವಾದ  ಕಾ೦ತಿಯುತ ಕನ್ನಿಕೆಯರಿ೦ದ ಅಲ೦ಕೃತವಾದ ನಿರ್ಮಲ ಆರತಿಯ ತಟ್ಟೆಲಿ ಮುತ್ತುಗಳ ಸಾಲುಗಳಿ೦ದ ಹೊಳವ ಕರ್ಪೂರ ದೀಪಾವಳಿಲಿ (ಬೆಣಚ್ಚಿಲ್ಲಿ),ಹಿಮ್ಮೇಳದ ವಾದ್ಯ೦ಗಳಾದ ಆ ತಾಳ, ಮೃದ೦ಗ ಇ೦ಪಾದ ಲಯಬದ್ಧವಾದ ಹಾಡುಗಳ ಸಾ೦ಗತ್ಯಲ್ಲಿ ನೃತ್ಯ(ಕೊಣಿವ) ಮಾಡುವ ನಿನ್ನ ಪಾದಾ೦ಬುಜ೦ಗಕ್ಕೆ  ನಿನ್ನ ಮೆಚ್ಚಿಗೆಯ ಮ೦ತ್ರ೦ದ ಮಾಡುವ ಪೂಜೆ ನೀರಾ೦ಜನಂಗಳ ಸ್ವೀಕರ್ಸು.

~

ಲಕ್ಷ್ಮೀರ್ಮೌಕ್ತಿಕಲಕ್ಷಕಲ್ಪಿತಸಿತಚ್ಛತ್ರಂ ತು ಧತ್ತೇ ರಸಾತ್
ಇಂದ್ರಾಣೀ ಚ ರತಿಶ್ಚ ಚಾಮರವರೇ ಧತ್ತೇ ಸ್ವಯಂ ಭಾರತೀ |
ವೀಣಾಮೇಣವಿಲೋಚನಾಃ ಸುಮನಸಾಂ ನೃತ್ಯಂತಿ ತದ್ರಾಗವತ್
ಭಾವೈರಾಂಗಿಕ ಸಾತ್ತ್ವಿಕೈಃ ಸ್ಫುಟರಸಂ ಮಾತಸ್ತ್ವಮಾಕರ್ಣ್ಯತಾಮ್ ||14||

ಲಕ್ಷ್ಮೀ ದೇವಿ ಲಕ್ಷಗಟ್ಟಲೆ ಮುತ್ತುಗಳಿಂದ ಕಲ್ಪಿತವಾದ ಶ್ವೇತಛತ್ರವ ಪ್ರೀತಿಂದ ಹಿಡುದ್ದು. ಶಚೀದೇವಿ ಹಾ೦ಗೂ ರತಿ ದೇವಿಗೊ ಚಾಮರಂಗಳ ಹಿಡುದು ಚಾಕರಿಗೆ ನಿಂದಿದವು. ಸ್ವತಃ ಸರಸ್ವತಿಯೇ ವೀಣೆ ಬಾರುಸುತ್ತಾ ಇದ್ದು. ಜಿಂಕೆ ಕಣ್ಣಿನ ದೇವತಾ ಸ್ತ್ರೀಗೊ ರಾಗಬದ್ಧವಾಗಿ ಹಾಡ್ಯೊ೦ಡು, ಸಾತ್ತ್ವಿಕ ಭಾವ, ರಸಾದಿಗಳ ಆ೦ಗಿಕಾಭಿನಯ೦ದ ಲಾಯಕಾಗಿ ನೃತ್ಯ ಮಾಡ್ತಾ ಇದ್ದವು. ಅಬ್ಬೇ! ನೀನದರ ಕೆಮಿಗೊಟ್ಟು ಕೇಳು.

~

ಹ್ರೀಂಕಾರತ್ರಯಸಂಪುಟೇನ ಮನನೋಪಾಸ್ಯೈಃ ತ್ರಯೀಮೌಲಿಭಿಃ
ವಾಕ್ಯೈರ್ಲಕ್ಷ್ಯತನೋ ತವ ಸ್ತುತಿವಿಧೌ ಕೋ ವಾ ಕ್ಷಮೇತಾಂಬಿಕೇ |
ಸಲ್ಲಾಪಾಃ ಸ್ತುತಯಃ ಪ್ರದಕ್ಷಿಣಶತಂ ಸಂಚಾರ ಏವಾಸ್ತು ತೇ
ಸಂವೇಶೋ ಮನಸಃ ಸಮಾಧಿರಖಿಲಂ ತ್ವತ್ಪ್ರೀತಯೇ ಕಲ್ಪತಾಮ್ ||15||

ಹ್ರೀಂಕಾರದ ಮೂರು ಶ್ಲೋಕಂಗಳ ಸರಿಯಾಗಿ ಅರ್ಥ ಮಾಡಿ ಉಪಾಸನೇ೦ದ ಬ೦ದ ಮೂರು ವೇದಂಗೊಕ್ಕೆ ಶಿರೋಪ್ರಾಯವಾದ ವಾಕ್ಯಂದ ಲಕ್ಷಿತವಾದ ಶರೀರೇ,(ಪಾರ್ವತಿಯೇ,) ನಿನ್ನ ಸ್ತುತಿ ಮಾಡ್ಲೆ ಆರು ಸಾನೇ ಸಮರ್ಥರು?
ಸಂಭಾಷಣೆಗಳೇ ಸ್ತುತಿಗೊ, ಸಂಚಾರಂಗಳೇ ನೂರಾರು ಪ್ರದಕ್ಷಿಣೆಗೊ, ಮನಸ್ಸಿನ ನಿನ್ನಲ್ಲಿ ಮಡುಗುವದೇ ಸಮಾಧಿ, ಇದೆಲ್ಲವೂ ನಿನ್ನ ಪ್ರೀತಿಗೋಸ್ಕರ ಕಲ್ಪಿಸಿದ್ದೆ.

~

ಶ್ರೀಮಂತ್ರಾಕ್ಷರಮಾಲಯಾ ಗಿರಿಸುತಾಂ ಯಃ ಪೂಜಯೇಚ್ಚೇತಸಾ
ಸಂಧ್ಯಾಸು ಪ್ರತಿವಾಸರಂ ಸುನಿಯತಃ ತಸ್ಯಾಮಲಂ ಸ್ಯಾಚ್ಚಿರಾತ್ |
ಚಿತ್ತಾಂಭೋರುಹಮಂಟಪೇ ಗಿರಿಸುತಾ ನೃತ್ತಂ ವಿಧತ್ತೇ ರಸಾತ್
ವಾಣೀ ವಕ್ತ್ರಸರೋರುಹೇ ಜಲಧಿಜಾ ಗೇಹೇ ಜಗನ್ಮಂಗಲಾ ||16||

ಪ್ರತಿದಿನವೂ ಸಂಧ್ಯಾಕಾಲಂಗಳಲ್ಲಿ ಶ್ರೀಮಂತ್ರಾಕ್ಷರಮಾಲೆಂದ ಆರು ನಿಯಮಪೂರ್ವಕವಾಗಿ ಪಾರ್ವತಿಯ ಉಪಾಸನೆ ಮಾಡ್ತವೋ ಅವರ ಮನಸ್ಸು ಶುದ್ಧವಾಗಿರ್ತು. ಅವರ ಹೃದಯಕಮಲಮಂಟಪಲ್ಲಿ ಗಿರಿಸುತೆ ನರ್ತನ ಮಾಡ್ತು. ಸರಸ್ವತೀ ಅವನ ಮುಖಕಮಲಲ್ಲಿ ವಾಸಮಾಡುವದರಿಂದ ಅವನ ಮಾತುಗೊ ಸ್ವಾರಸ್ಯ೦ದ ತು೦ಬುತ್ತು. ಮತ್ತೆ ಅವನ ಮನೆಲಿ ಜಗನ್ಮ೦ಗಳೆಯಾದ ಲಕ್ಷ್ಮಿ ವಾಸಮಾಡ್ತು.

~

ಇತಿ ಗಿರಿವರಪುತ್ರಿಪಾದರಾಜೀವಭೂಷಾ
ಭುವನಮಮಲಯಂತೀ ಸೂಕ್ತಿಸೌರಭ್ಯಸಾರೈಃ |
ಶಿವಪದಮಕರಂದಸ್ಯಂದನೀಯಂ ನಿಬದ್ಧಾ
ಮದಯತು ಕವಿಭೃಂಗಾನ್ ಮಾತೃಕಾಪುಷ್ಪಮಾಲಾ ||17||

ಹಿಮರಾಜನ ಮಗಳಾದ ಪಾರ್ವತಿಯ ಮಂಗಲಕರವಾದ ಪಾದಕಮಲಂಗೊಕ್ಕೆ ಅಲಂಕಾರವಾದ ಸುವಿಚಾರ ಪರಿಮಳದ ಸಾರಂದ ಜಗತ್ತಿನ ಪಾವನ ಮಾಡ್ಲೆ ರಚನೆಮಾಡಿದ ಈ ಶ್ರೀಮಂತ್ರಮಾತೃಕಾಪುಷ್ಪಮಾಲಾ ಸ್ತೋತ್ರವ ಮಂಗಳಕರವಾದ ಅಬ್ಬೆಯ ಚರಣಕಮಲಂದ ಹೊರಹೊಮ್ಮುವ ತು೦ಬಿಗಳ ಹಾಂಗೆ ಇಪ್ಪ ಕವಿಗೊ ಸೇವಿಸಿ-ಸ್ತುತಿಸಿ ಮೈಮರೆಯಲಿ.

~

||ಇತಿ ಶ್ರೀಮತ್ಪರಮಹಂಸ-ಪರಿವ್ರಾಜಕಾಚಾರ್ಯ-ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯ
ಶ್ರೀಮಚ್ಛಂಕರಾಚಾರ್ಯಕೃತೌ ಮಂತ್ರಮಾತೃಕಾಪುಷ್ಪಮಾಲಾಸ್ತವಃ ಸಂಪೂರ್ಣಃ ||

~*~*~

ಶ್ರೀಸೌ೦ದರ್ಯಲಹರೀ , ಶ್ರೀ ಮ೦ತ್ರಮಾತೃಕಾಪುಷ್ಪಮಾಲಾಸ್ತವ ಹಾ೦ಗೂ ಶ್ರೀಲಲಿತಾ ಸಹಸ್ರನಾಮ ಸ್ತೋತ್ರ೦ಗೊಕ್ಕೆ ಅವಿನಾಭಾವ ಸ೦ಬ೦ಧ ಇದ್ದು!
ಹಾಸುಹೊಕ್ಕಿನ ಎಳಗಳ ಅನ್ಯೋನ್ಯತೆ ಇಲ್ಲಿ ಕ೦ಡು ಬಪ್ಪದ೦ತು ನಿಜ!
ಈ ವಿಚಾರವ ಮನನ ಮಾಡಿ ಅನುಷ್ಠಾನ ಮಾಡಿದರೆ ಅದರಿ೦ದ ಅನನ್ಯ ಅನುಭಾವ೦ಗಳ ಪಡವಲಕ್ಕು.
ಪಂಚದಶೀ ಮತ್ತೆ ಷೋಡಶೀ ಮಂತ್ರಂಗಳ ಬಗ್ಗೆ ಒಂದು ಟಿಪ್ಪಣಿಃ

ಪಂಚದಶೀ ಮಂತ್ರಲ್ಲಿ ‘ಕಾದಿ‘ ಮತ್ತೆ ‘ಹಾದಿ‘ ಹೇಳಿ ಎರಡು ಸಂಪ್ರದಾಯಂಗ ಇದ್ದು.
ಮದಲಾಣದ್ದು ಅಗಸ್ತ್ಯಂಗೂ ಎರಡ್ನೇದು ಅವನ ಹೆಂಡತಿ ಲೋಪಾಮುದ್ರೆಗೆ ಸಂಬಂಧ ಪಟ್ಟದು.
ಹದ್ನೈದು ಅಕ್ಷರಂಗಳ ಹೊಂದಿದ ಈ ಮಂತ್ರ ಮೂರು ಕೂಟ ಆಗಿ ವಿಭಾಗ ಹೊಂದಿದ್ದು.

ವಾಗ್ಭವ ಕೂಟ, ಕಾಮರಾಜ ಕೂಟ ಮತ್ತೆ ಶಕ್ತಿಕೂಟ – ಈ ಎರಡೂ ಸಂಪ್ರದಾಯಂಗಳ ಮಂತ್ರವ ಮೂರು ಕೂಟ ಆಗಿ ವಿಭಾಗ ಮಾಡಿ ಈ ಕೆಳ ಕೊಟ್ಟಿದು-

 1. ಕ ಏ ಈ ಲ |ಹ್ರೀಂ |
 2. ಹ ಸ ಕ ಹ ಲ | ಹ್ರೀಂ|
 3. ಸ ಕ ಲ |ಹ್ರೀಂ|

ಇದು ‘ಕ’ ಅಕ್ಷರಂದ ಸುರು ಅಪ್ಪ ಕಾರಣ ಇದಕ್ಕೆ ‘ಕಾದಿವಿದ್ಯಾ’ ಹೇಳಿ ಹೆಸರು.

 1. ಹ ಸ ಕ ಲ|ಹ್ರೀಂ|
 2. ಹ ಸ ಕ ಹ ಲ |ಹ್ರೀಂ|
 3. ಸ ಕ ಲ |ಹ್ರೀಂ|

ಇದು ‘ಹ’ ಕಾರಂದ ಸುರು ಅಪ್ಪ ಕಾರಣ ಇದಕ್ಕೆ ‘ಹಾದಿವಿದ್ಯಾ’ ಹೇಳಿ ಹೆಸರು.

‘ಕಾದಿ’ ಸಂಪ್ರದಾಯ ‘ಹಾದಿ’ ಸಂಪ್ರದಾಯಂದ ಮದಲಾಣದ್ದೂ ಹೇಳಿಯೂ, ಹೆಚ್ಚು ಮುಖ್ಯಪಟ್ಟದು (ಪ್ರಾತಿನಿಧ್ಯ — ಪ್ರಾಶಸ್ತ್ಯ೦ಗಳ ಪಡದ್ದು)ಹೇಳಿಯೂ ಗಣನೆ ಮಾಡ್ತವು.
ಶ್ರೀವಿದ್ಯಾ ಸಂಪ್ರದಾಯದ ಅತಿ ಮುಖ್ಯ ಗ್ರಂಥ ಆದ ‘ಲಲಿತಾ-ತ್ರಿಶತೀ-ಸ್ತೋತ್ರ’ ‘ಕಾದಿ’ ಮಂತ್ರವ ಅಳವಡಿಸಿಗೊಂಡಿದು.
ಈ ಸ್ತೋತ್ರಲ್ಲಿ ಈ ಮಂತ್ರದ ಬೇರೆ ಬೇರೆ ಅಕ್ಷರಂಗಳ ತೆಕ್ಕೊಂಡು ದೇವಿಯ ವಿವಿಧ(300)ನಾಮಾವಳಿಗಳ ರಚನೆ ಮಾಡಿದ್ದವು.

ಈ ಪಂಚದಶೀ ಮಂತ್ರ ಅಲ್ಲದ್ದೆ ಅತ್ಯಂತ ರಹಸ್ಯಮಯ ಹೇಳಿ ಪರಿಗಣಿಸುವ ಷೋಡಶೀ ಮಂತ್ರ ಹೇಳುದು ಒಂದು ಇದ್ದು.
ಮೇಲಾಣ ಮಂತ್ರಕ್ಕೆ ‘ಶ್ರೀಂ’ ಬೀಜವರ್ಣವ ಸೇರ್ಸಿದರೆ ಅದು ಷೋಡಶೀ ಮಂತ್ರ ಆವುತ್ತು:

ಓಂ|ಕ ಏ ಈ ಲ|ಹ್ರೀಂ|ಹ ಸ ಕ ಹ ಲ|
ಹ್ರೀಂ| ಸ ಕ ಲ|ಹ್ರೀಂ|ಶ್ರೀಂ||

ಇದರಲ್ಲಿ ಪಂಚದಶಿಯ ಮೂರುಕೂಟಂಗಳ ಒಟ್ಟಿಂಗೆ ನಾಲ್ಕನೆಯದಾದ ‘ಶ್ರೀಂ’ ಸೇರಿದ್ದು.
ಇದಕ್ಕೆ ‘ತುರೀಯ ಕೂಟ’ ಹೇಳಿ ಹೆಸರು. ಪಂಚದಶಿಲಿ ತುರೀಯ ಅವ್ಯಕ್ತ ಹೇಳಿ ಪರಿಗಣಿಸಿದ್ದು ಷೋಡಶಿಲಿ ಅದು ವ್ಯಕ್ತವಾಗಿದ್ದು.

~
ಆಧಾರ: ‘ಶ್ರೀಲಲಿತಾಸಹಸ್ರನಾಮ ಮತ್ತು ಶ್ರೀಲಲಿತಾತ್ರಿಶತಿಸ್ತೋತ್ರ ‘ (ಭಾಷ್ಯ ಸಹಿತ)
-ಸ್ವಾಮಿ ಆದಿದೇವಾನಂದ
ಶ್ರೀರಾಮಕೃಷ್ಣಾಶ್ರಮ ಮೈಸೂರು.

~*~ಶ್ರೀ~*~

ಉಡುಪುಮೂಲೆ ಅಪ್ಪಚ್ಚಿ

   

You may also like...

11 Responses

 1. ಚೆನ್ನೈ ಭಾವ° says:

  ಹರೇ ರಾಮ . ಉತ್ತಮ ಮಾಹಿತಿ , ವಿವರಣೆ.

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ, ಓದಿ ನೋಡಿ ಒಪ್ಪ ಕೊಟ್ಟ ಚೆನ್ನೈ ಭಾವ೦ಗೆ ಧನ್ಯವಾದ೦ಗೊ; ಎನ್ನ ಈ ಸತ್ಕಾರ್ಯಕ್ಕೆ ಮೂಲ ಕಾರಣ ನಮ್ಮ ಶ್ರೀಯಕ್ಕ.° ಎಲ್ಲ ರೀತಿಯ ಧನ್ಯವಾದ೦ಗಳುದೆ ಅವಕ್ಕೆ ಸಲ್ಲೆಕು. ಆನು ಕೇವಲ ” ನಿಮಿತ್ತ ಮಾತ್ರ೦ ಭವ ಸವ್ಯಸಾಚಿ ” ಹೇಳುವ ಗೀತಾಚಾರ್ಯನ ಮಾತಿನಾ೦ಗೆ. ಅಷ್ಟೆ! ನಮಸ್ತೇ…

 2. ಪಡಿಕ್ಕಲ್ಲಪ್ಪಚ್ಚಿ says:

  ಉಡುಪುಮೂಲೆ ಅಪ್ಪಚ್ಚಿಗೆ ನಮೋ ನಮ:. ಅದ್ಭುತವಾಗಿದ್ದು.

  • ಉಡುಪುಮೂಲೆ ಅಪ್ಪಚ್ಚಿ says:

   ಪಡಿಕ್ಕಲ್ಲಪ್ಪಚ್ಚಿ ಹರೇರಾಮ, ಓದಿ ನೋಡಿ ಒಪ್ಪ ಕೊಟ್ಟದಕ್ಕೆ ಧನ್ಯವಾದ೦ಗೊ. ನಿ೦ಗಳಾ೦ಗಿರ್ತ ಹೆರಿಯೋರ ಆಶೀರ್ವಚನ ಹಸ್ತವ ಎನ್ನ ತಲೆ ಏವಗಳುದೆ ಹೊತ್ತೊ೦ಬಾ೦ಗಾಗಲಿ ಹೇದು ಬಯಸುತ್ತೆ.ನಮಸ್ತೇ ಅಪ್ಪಚ್ಚಿ.

 3. ವಿದ್ಯಾ ರವಿಶಂಕರ್ says:

  ಹರೇರಾಮ. ಚೆಂದಕೆ ವಿವರಣೆ ನೀಡಿದ್ದಿ, ಧನ್ಯವಾದಂಗೊ.

 4. ಉಡುಪುಮೂಲೆ ಅಪ್ಪಚ್ಚಿ says:

  ಹರೇ ರಾಮ, ಓದಿ ಒಪ್ಪಕೊಟ್ಟದಕ್ಕೆ ಧನ್ಯವಾದ.

 5. ಶರ್ಮಪ್ಪಚ್ಚಿ says:

  ಎಲ್ಲವೂ ನಿನಗಾಗಿಯೇ ಹೇಳ್ತ ಸಮರ್ಪಣಾಭಾವ, ದೇವಿಯ ವರ್ಣನೆ ಎಲ್ಲವೂ ಲಾಯಿಕಲಿ ವಿವರಿಸಿ ತಿಳಿಶಿ ಕೊಟ್ಟದಕ್ಕೆ ಧನ್ಯವಾದಂಗೊ

 6. ಉಡುಪುಮೂಲೆ ಅಪ್ಪಚ್ಚಿ says:

  ಹರೆ ರಾಮ; ಓದಿ ಒಪ್ಪಕೊಟ್ಟದಕ್ಕೆ ಧನ್ಯವಾದ೦ಗೊ. ನಮಸ್ತೇ…

 7. ಖುಶಿ ಆತು ಅಪ್ಪಚ್ಚೀ 🙂

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ; ಓದಿ ಒಪ್ಪಕೊಟ್ಟದಕ್ಕೆ ಧನ್ಯವಾದ. ನಮಸ್ತೇ.

 8. ಉಡುಪುಮೂಲೆ ಅಪ್ಪಚ್ಚಿ says:

  ಡಾ। ಅಜೇಯಣ್ಣ,
  ಹರೇ ರಾಮ;ಆನು ಕಳದ ಜೂನ್ ತಿ೦ಗಳಿ೦ದ ಇ೦ಗ್ಲೆ೦ಡ್ಲಿಲ್ಲಿದ್ದೆ.ರಜ್ಜ ಸಮಯ ಒ೦ದು ಕಿರು ಪ್ರವಾಸ ಮಾಡುವ ಅವಕಾಶ.ಹಾ೦ಗಾಗಿ ನಿ೦ಗಳ ಮೈಲ್ ಇ೦ದಷ್ಟೇ ನೋಡಿದೆ.ನಿ೦ಗೊ ಲಲಿತಾ ಸಹಸ್ರನಾಮದ ಋಷ್ಯಾದಿ ಷಡ೦ಗ ನ್ಯಾಸದ ಕುರಿತಾಗಿ ಜಿಜ್ಞಾಸೆ ವ್ಯಕ್ತ ಪಡಿಸಿದ್ದಿ. ಸ೦ತೋಷ;ದಯಮಾಡಿ ಶ್ರೀ ರಾಮಕೃಷ್ಣಾಶ್ರಮ೦ದ ಪ್ರಕಟವಾದ ಪುಸ್ತಕವ ನೋಡಿ.ಅದರಲ್ಲಿ ನಿ೦ಗೊಗೆ ಬೇಕಾದ ಎಲ್ಲಾ ವಿವರ೦ಗೊ ಸಿಕ್ಕುತ್ತು.ಮತ್ತೆ ಏವ ಸ೦ಶಯಕ್ಕೂ ಅವಕಾಶ ಬಾರ.ನಿ೦ಗಳ ಮೈಲಿ೦ಗ ಉತ್ತರುಸಲೆ ತಡವಾದ್ದಕ್ಕೆ ಕ್ಷಮೆ ಇರಲಿ.ನಿ೦ಗಳ ಆಸಕ್ತಿಗೆ ಬಹಳ ಅಭಿಮಾನ.ಅಭಿನ೦ದನಗೊ;ನಮಸ್ತೆ.ನಿ೦ಗಳ ಬಗ್ಗೆ ಹೆಚ್ಚಿನ ಮಾಹಿತಿ ಬಯಸುತ್ತೆ.ನಮಸ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *