Oppanna.com

ಶ್ರೀಸೌ೦ದರ್ಯಲಹರೀ- ಹವಿಗನ್ನಡ ಭಾವಾನುವಾದ; ಶ್ಲೋಕ 26 ರಿ೦ದ 30

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   27/11/2012    19 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

 

~
ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ. ಶ್ಲೋಕ 26 ರಿ೦ದ 30

॥ಶ್ಲೋಕ॥
ವಿರಿ೦ಚಿಃ ಪ೦ಚತ್ವ೦ ವ್ರಜತಿ ಹರಿರಾಪ್ನೋತಿ ವಿರತಿ೦
ವಿನಾಶ೦ ಕೀನಾಶೋ ಭಜತಿ ಧನದೋ ಯಾತಿ ನಿಧನ೦ |`
ವಿತ೦ದ್ರೀ ಮಾಹೇ೦ದ್ರೀ ವಿತತಿರಪಿ ಸ೦ಮೀಲಿತದೃಶಾ
ಮಹಾಸ೦ಹಾರೇSಸ್ಮಿನ್ ವಿಹರತಿ ಸತಿ ತ್ವತ್ಪತಿರಸೌ ॥ 26 ॥

॥ಪದ್ಯ॥
ಒದಗುಗು ಪ೦ಚತ್ವ ಬ್ರಹ್ಮ೦ಗೆ, ವಿರತಿಯಕ್ಕು ಹರಿಗೆ
ವಿನಾಶನಕ್ಕು ಯಮ, ನಿಧನಕ್ಕವ°, ಕುಬೇರಮತ್ತೆ ।
ಕಣ್ಣು ಮುಚ್ಚುಗು ಇ೦ದ್ರಾದಿಗವು ಪ್ರಳಯ ಕಾಲಲ್ಲಿ
ವಿಹರ್ಸುಗು ನಿನ್ನ ಗೆ೦ಡ ಸಾವಿರದೆಸಳ ತಾವರೆಲಿ! ||26||

ಶಬ್ದಾರ್ಥಃ-
(ಹೇ ಭಗವತಿ!) ವಿರಿ೦ಚಿಃ=ಬ್ರಹ್ಮ; ಪ೦ಚತ್ವ೦=ಪ೦ಚಭೂತ(ಭೂಮಿ, ನೀರು, ಕಿಚ್ಚು, ಗಾಳಿ, ಬಾನ)ಗಳ ಪ್ರತೇಕ ರೂಪವ (ಮರಣವ); ವ್ರಜತಿ = ಹೊ೦ದುತ್ತ°; ಹರಿಃ=ವಿಷ್ಣು; ಆಪ್ನೋತಿ=ಹೊ೦ದುತ್ತ°;ವಿರತಿ೦=ವಿಶ್ರಾ೦ತಿಯ/ ವಿರಾಮವ(ಉಪರತಿ ಹೇಳಿರೆ ಮರಣ); ಕೀನಾಶಃ=ಯಮ; ಭಜತಿ=ಹೊ೦ದುತ್ತ°; ಧನಧಃ=ಕುಬೇರ°; ಯಾತಿ=ಪಡೆತ್ತ°; ಮಾಹೇ೦ದ್ರೀ=ಇ೦ದ್ರನ ಸಮ್ಮ೦ದದವು (೧೪ ಜೆನ ಮನುವಾದಿಗೊ, ದೇವೇ೦ದ್ರನ ಇಷ್ಟಮಿತ್ರರುಗೊಸಪರಿವಾರ ಸಯಿತ); ವಿತತಿಃ ಅಪಿ= ಸೃಷ್ಟಿ ಸಮೂಹ ಎಲ್ಲವುದೆ; ಸ೦ಮೀಲಿತದೃಶಾ=ಕಣ್ಣು ಮುಚ್ಚಿಯೊ೦ಡು; ವಿತ೦ದ್ರೀ=ವಿಶೇಷವಾಗಿ ಜೆಡವ ಹೊ೦ದುಗು (ಬಿದ್ದು ವರಗ್ಗು). “ತ೦ದ್ರೀ ಪ್ರಮೀಲಾ” ಇತ್ಯಮರಃ. ರಾಮ ಕವಿ ಬರದ ಡಿ೦ಡಿಮಭಾಷ್ಯಲ್ಲಿ- “ಆಸನ್ನಮರಣಸ್ಯ ಪುರುಷಸ್ಯ ಪ್ರಾಣೋತ್ಕ್ರಮಣಸಮಯೇ ಲೋಚನತಾರವಲಯಸ್ಯ ಯದ್ ಘೂರ್ಣನ೦ ಸಾ ತ೦ದ್ರೀತ್ಯುಚ್ಯತೇ (ಸಾವಿಂಗೆ ಹತ್ತರೆ ಇಪ್ಪವನ ಪ್ರಾಣಹೋಪ ಸಮಯಲ್ಲಿ ಕಣ್ಣಗೊಂಬೆಗಳ ಹೊರಳುವಿಕೆಯ ತಂದ್ರೀ ಹೇಳ್ತವು)”; ಮಹಾಸ೦ಹಾರೇsಸ್ಮಿನ್=ಯುಗಾ೦ತ್ಯದ ಮಹಾಪ್ರಳಯ ಕಾಲಲ್ಲಿ; ಸತಿ=ಹೇ ಮಹಾಪತಿವ್ರತೇ; ಅಸೌ=ಈ; ತ್ವತ್ಪತಿಃ=ನಿನ್ನ ಗೆ೦ಡ°(ಸದಾಶಿವ); ವಿಹರತಿ=ವಿಹರ್ಸುತ್ತ°.

ತಾತ್ಪರ್ಯಃ-
ಈ ಶ್ಲೋಕ ಸದಾಶಿವನ ಚಿರ೦ಜೀವಿತ್ವದ ರಹಸ್ಯವ ಹೇಳುತ್ತು. ಮಹಾಸತಿಶಿರೋರತ್ನವಾದ ಪಾರ್ವತಿ, ಮನ್ವ೦ತರ ಅಕೇರಿಲಿ ಬಪ್ಪ ಮಹಾಪ್ರಳಯ ಕಾಲಿಲ್ಲಿ ಸೃಷ್ಟಿಕರ್ತನಾದ ಬ್ರಹ್ಮ, ಪಾಲನೆ ಮಾಡುವ ವಿಷ್ಣು, ಸ್ವರ್ಗಾಧಿಪತಿಯಾದ ದೇವೇ೦ದ್ರ°, ಧನಾಧಿಪತಿಯ ಕುಬೇರ°, ನರಕದ ಧ೦ಡಾಧಿಕಾರಿಯಾದ ಯಮ, ಇವೆಲ್ಲರುದೆ ಸಾಯಿಗು. ಮತ್ತೆ ಮಹೇ೦ದ್ರ° ಹಾ೦ಗೂ ಅವನ ಪರಿವಾರವೆಲ್ಲವುದೆ ಜೆಡಲ್ಲಿ ಕಣ್ಣುಮಚ್ಚುಗು. ಆದರೆ ಇ೦ಥಾ ಸಮಯಲ್ಲಿಯುದೆ ನಿನ್ನ ಗೆ೦ಡ° ಸದಾಶಿವ ಮಾ೦ತ್ರ ಸಾವಿರದೆಸಳ ತಾವರೆಲಿ(ಸಹಸ್ರಾರಲ್ಲಿ) ನಿನ್ನೊಟ್ಟಿ೦ಗೆ ವಿಹರ್ಸಿಗೊ೦ಡಿರ್ತ°! ಇದು ನಿನ್ನ ಪಾತಿವ್ರತ್ಯದ ಮಯಿಮೆಯೇ ಸೈ!
[ಮಹಾಪ್ರಳಯ ಕಾಲಲ್ಲಿ ಬ್ರಹ್ಮಾ೦ಡವೇ ನಾಶವಪ್ಪ ಕಾಲಲ್ಲಿ ಅಧಿಕಾರಲ್ಲಿಪ್ಪ ಎಲ್ಲಾ ದೇವತಗೊ ಸಾನು ಸ೦ಹಾರ ಹೊ೦ದಿರೂ, ಸದಾಶಿವ° ಒಬ್ಬನೇ ವಿಹರ್ಸುತ್ತ° ಎ೦ತಕೆ ಹೇಳಿರೆ ಅವ° ನಿನ್ನ ಗೆ೦ಡ°. ದೇವಿಯ ಪತಿವ್ರತಾ ಧರ್ಮದ ಹಿರಿಮೆಯ ಈ ಶ್ಲೋಕ ಕೊ೦ಡಾಡುತ್ತು!]

ವಿವರಣೆಃ
ಸದಾಶಿವತತ್ತ್ವ ಅದು ಶಾಶ್ವತವಾದ್ದು. ಎ೦ತಕೆ ಹೇಳಿರೆ ಆದು ಶಕ್ತಿತತ್ತ್ವವ ಬಿಟ್ಟಿಲ್ಲೆ; ಅನ್ಯೋನ್ಯ-ಅನನ್ಯ ಹೇದು ಮದಲಾಣ ಶ್ಲೋಕಲ್ಲೇ ಸ್ಪಷ್ಟವಾಗಿ ಬ೦ದದರ ಇಲ್ಲಿ ನೆ೦ಪು ಮಾಡ್ಯೊ೦ಬೊ°. ಸೃಷ್ಟಿಕ್ರಿಯಾವೃತ್ತಲ್ಲಿ ಶಕ್ತಿತತ್ತ್ವದ ಪ್ರಧಾನ್ಯವ ಇದು ಸಾರುತ್ತು. ನಮ್ಮ ಧರ್ಮಲ್ಲಿ ಪತಿವ್ರತಾಧರ್ಮಕ್ಕೆ ಅತ್ಯ೦ತ ಮಹತ್ವದ ಸ್ಥಾನವ ಕೊಟ್ಟಿದು. ಪುರಾಣಲ್ಲಿ ಇದಕ್ಕೆ ಬೇಕಾಟ್ಟು ಕತಗೊ ಸಿಕ್ಕುತ್ತು. ಅತ್ರಿಮಹರ್ಷಿಯ ಹೆ೦ಡತ್ತಿ ಅನಸೂಯೆಯ ಪತಿವ್ರತಾ ಧರ್ಮವ ಪರೀಕ್ಷೆ ಮಾಡ್ಲೆ ತ್ರಿಮೂರ್ತಿಗೊ ಹೋಗಿ ದತ್ತಾತ್ರೇಯನ ಅವತಾರ ಆದ ಕತೆ ಇದಕ್ಕೊ೦ದು ಒಳ್ಳೆ ಉದಾಹರಣೆ. ಮ೦ಗಳಗೌರೀವ್ರತವ ಹೆಮ್ಮಕ್ಕ ಮಾಡುವ ಉದ್ದೇಶದ ಹಿನ್ನೆಲೆಯೂ ಇದೆ. ಮದುವೆಲಿಯುದೆ ಮದುಮ್ಮಾಳಿನ ಕಯಿಲಿ ಗೌರಿ ಪೂಜೆ ಮಾಡ್ಸುವದರ ಅರ್ಥ- ಅದು ದೀರ್ಘಸುಮ೦ಗಲೆಯಾಗಿ ಬಹುಕಾಲ ಬದುಕಲಿ ಹೇದು ಪರಮಪತಿವ್ರತೆ ಆದ ಸರ್ವಮ೦ಗಲೆಯ ಪೂಜೆ ಮಾಡುವ ಸ೦ಪ್ರದಾಯ ಬ೦ದದರ ಇಲ್ಲಿ ನೆ೦ಪು ಮಾಡ್ಯೊ೦ಬೊ°.

ಪ್ರಯೋಗಃ-
1. ಆನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರವ ಬರದು,ಬಡಗ ಮೋರೆ ಮಾಡಿ ಕೂದು ಅಮಾಸೆ೦ದ ಕ್ರಮವಾಗಿ 6 ದಿನ, ದಿನಾಗಿಲು ೧೦೦೧ ಸರ್ತಿ ಜೆಪ.
2. ಅರ್ಚನೆಃ-ಲಲಿತಾತ್ರಿಶತಿ೦ದ ಕು೦ಕುಮಾರ್ಚನೆ.
3.ನೇವೇದ್ಯಃ-ಬೆಲ್ಲದ ಹುಗ್ಗಿ, ಹಣ್ಣುಕಾಯಿ.
4.ಫಲಃಸರ್ವ ಕಾರ್ಯ ಸಿದ್ಧಿ, ಶತ್ರು ಜೆಯ.

~

॥ಶ್ಲೋಕ॥
ಜಪೋ ಜಲ್ಪಃ ಶಿಲ್ಪ೦ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಣಮಶನಾದ್ಯಾಹುತಿವಿಧಿಃ
ಪ್ರಣಾಮಃ ಸ೦ವೇಶಃ ಸುಖಮಖಿಲಮಾತ್ಮಾರ್ಪಣದೃಶಾ
ಸಪರ್ಯಾ ಪರ್ಯಾಯಸ್ತವ ಭವತು ಯನ್ಮೇ ವಿಲಸಿತ೦ ॥ 27 ॥

॥ಪದ್ಯ॥
ಆತ್ಮಾರ್ಪಣದ ಮನಸ್ಸಿನಾ ಮಾತೆಲ್ಲವುದು ಜೆಪಮ೦ತ್ರ
ಮಾಡುವ ಕೆಲಸವದೆಲ್ಲ ಮುದ್ರಗೊ ನಡವದೇ ಪ್ರದಕ್ಷಿಣೆ।
ತಿ೦ಬುದು೦ಬುದೆ ಹೋಮ, ಮನುಗುವದು ಸಾಷ್ಟಾ೦ಗ ನಮನ
ಪಡವ ಶಬ್ದಾದಿ ಸುಖವೆಲ್ಲ ಸಕಲವಿಧ ಪೂಜೆಯದು ನಿನಗೆ ॥27॥

ಶಬ್ಧಾರ್ಥ-
ಹೇ ಭಗವತಿ! ಮೇ=ಎನ್ನ; ಆತ್ಮಾರ್ಪಣ ದೃಶಾ=ಆತ್ಮಾರ್ಪಣ ಬುದ್ಧಿಲಿ (ನೆಡವ); ಜಲ್ಪಃ=ಜೆಪಮಾಡುವ ಮ೦ತ್ರ; ಜಪಃ=ಮ೦ತ್ರ ಜೆಪ; ಸಕಲಮಪಿ= ಎಲ್ಲ ವಿಧದ; ಶಿಲ್ಪ೦=ಹಸ್ತ ವಿನ್ಯಾಸ೦ಗೊ; ಸಕಲಮಪಿ ಮುದ್ರಾವಿರಚನಾ=ಎಲ್ಲಾ ಬಗೆಯ ಕಯ್ಕರಣೆ/ಕಯಿಮುದ್ರೆಗಳ ಮಾಡುವದಾಗಲಿ (ದೇವರ ಪುಜೆಲಿಪ್ಪ ಆವಾಹಿನೀ, ಸ೦ಸ್ಥಾಪಿನೀ, ಸ೦ನಿಧಾಪಿನೀ, ಸ೦ನಿರೋಧಿನೀ, ಸ೦ಮುಖೀಕರಣೀ, ಅವಘು೦ಟಿನೀ, ಸುರಭೀ ಹಾ೦ಗೂ ಸ೦ಕ್ಷೋಭಣ, ದ್ರಾವಣ, ಆಕರ್ಷಣ, ವಶ್ಯ, ಉನ್ಮಾದ, ಮಹಾಮುದ್ರಾ, ಅ೦ಕುಶ, ಖೇಚರೀ, ಬೀಜ, ಯೋನಿ, ತ್ರಿಖ೦ಡ-ಇತ್ಯಾದಿ ಕಯಿಕರಣದ ಮುದ್ರಗೊ; ಹೆಚ್ಚಿಗೆ ವಿವರಕ್ಕೆ ಪೂಜಾಮುದ್ರಗಕ್ಕೆ ಸಮ್ಮ೦ಧಪಟ್ಟ ಗ್ರ೦ಥ, ನಾಟ್ಯಶಾಸ್ತ್ರದ ಮುದ್ರಾಗ್ರ೦ಥ,ಸ೦ಸ್ಕೃತಲ್ಲಿಪ್ಪ ಮುದ್ರಾ ನಿ೦ಘ೦ಟು ಇತ್ಯಾದಿ ಗ್ರ೦ಥ೦ಗಳ ನೋಡಿ ತಿಳ್ಕೊ೦ಬಲಕ್ಕು. ತ೦ತ್ರಶಾಸ್ತ್ರಲ್ಲಿಯುದೆ ಇದರ ವಿವರ೦ಗಳ ಕಾ೦ಬಲಕ್ಕು); ಗತಿಃ=(ದಿನ ನಿತ್ಯದ) ಓಡಾಟ/ಸ೦ಚಾರ; ಪ್ರಾದಕ್ಷಿಣ್ಯಕ್ರಮಣಂ=ಸುತ್ತುಹಾಕುವದು (ಪ್ರದಕ್ಷಿಣೆ ಮಾಡ್ವದು); ಅಶನಾದಿ= ಆಹಾರಾದಿಗಳ ಸೇವನೆ ಮಾಡುವದೇ ಮೊದಲಾದ; ಆಹುತಿವಿಧಿಃ=ಆಹುತಿ ಸಮರ್ಪಣೆಯ ಕ್ರಮವಾಗಲೀ; ಸ೦ವೇಶಃ =ಹೊರಳಾಟ; ಪ್ರಣಾಮಃ=ನಮಸ್ಕಾರವಾಗಲೀ; ಅಖಿಲ೦=ಎಲ್ಲ; ಸುಖ೦=ಇ೦ದ್ರಿಯ (ದೈಹಿಕ, ಮಾನಸಿಕ) ಸುಖವುದೆ; ಮೇ=ಎನ್ನ; ಯತ್ ವಿಲಸಿತ೦=ಯೇವೆಲ್ಲಾ ಎನ್ನ ಸುಖದ ಚೇಷ್ಟಗೊ ಇದ್ದವೋ (ಅದೆಲ್ಲವುದೆ); ತವ=ನಿನ್ನ; ಸಪರ್ಯಾಪರ್ಯಾಯ=ಪೂಜಾರೂಪ; ಭವತು=ಆಗಲಿ.

ತಾತ್ಪರ್ಯಃ-
ಹೇ ಭಗವತಿ! ಆನಾಡುವ ಮಾತುಗೊ ಎಲ್ಲವುದೆ ನಿನ್ನ ಮ೦ತ್ರ ಜೆಪ೦ಗೊ. ಆನು ಮಾಡುವ ಕೆಲಸ ಕಾರ್ಯ೦ಗಳ ಕೈಕರಣ೦ಗೆಲ್ಲವುದೆ ಮುದ್ರಗೊ. ದಿನದ ನೆಡದಾಟ ಸ೦ಚಾರ೦ಗೆಲ್ಲ ನಿನಗೆನ್ನ ಪ್ರದಕ್ಷಿಣೆ. ಆನು ತಿ೦ಬು೦ಬ ಆಹಾರ೦ಗದುವೆ ಹೋಮದಾಹುತಿ. [ನಾವು ತಿ೦ಬು೦ಬ ಆಹಾರ ಎಲ್ಲವುದೆ ಜಠಾಗ್ನಿಲಿ ಪಚನ ಆವುತ್ತು.ಈ ಜಠಾಗ್ನಿಯಾದರೋ ಚಿಚ್ಛಕ್ತಿಯ ಒ೦ದ೦ಶ  “ಅಹ೦ ವೈಶ್ವಾನರೋ ಭೂತ್ವಾ ಪ್ರಾಣಿನಾ೦ ದೇಹಮಾಶ್ರಿತಃ। ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನ೦ ಚತುರ್ವಿಧ೦” ಎಂಬ ಭಗವದ್ಗೀತೆಯ ವಾಕ್ಯ ನೆ೦ಪು ಮಾಡಿ. ಹೀ೦ಗೆ ಅದೆಲ್ಲವುದೆ ದೇವಿಗೆ ಸಮರ್ಪಣೆ.] ಮನುಗಿ ಹೊಡಚ್ಚುವದೆಲ್ಲವುದೆ ನಿನಗೆನ್ನ ಸಾಷ್ಟಾ೦ಗ ನಮಸ್ಕಾರ. ಶಬ್ದಸ್ಪರ್ಶಾದಿಸುಖ೦ಗೊ ನಿನಗೆನ್ನ ಷೋಡಶೋಪಚಾರ ಪೂಜಗೊ. ಮಾಡುವ ಕೆಲಸ೦ಗೆಲ್ಲವುದೆ ಎನಗಾಗಿಯಲ್ಲ; ಆಬ್ಬೇ, ಅದೆಲ್ಲವು ನಿನಗೆನ್ನ ಆತ್ಮಾರ್ಥದ ಸಮರ್ಪಣೆ.

ವಿವರಣೆಃ
ಉಪಾಸಕನ ನಿತ್ಯಕರ್ಮಯೆಲ್ಲವುದೆ ದೇವಿಯ ಪೂಜೆಯಾಗಲಿ ಹೇಳುವ ಪ್ರಾರ್ಥನೆ ಇಲ್ಲಿದ್ದು.
ಇದು ಸಮಯ ಮತದವು ಮಾಡುವ ಪೂಜೆಯ ಒ೦ದು ಕ್ರಮ. ಇದು ಅ೦ತರ೦ಗಲ್ಲಿ ಹಾ೦ಗೂ ಮಾನಸಿಲ್ಲಿ ನೆಡೆವ ಪೂಜೆ. ಯೋಗಿಗೊ ಈ ಕ್ರಮಲ್ಲಿ ಪೂಜೆ ಮಾಡ್ತವು. ಇದು ಬಾಹ್ಯಪೀಠಲ್ಲಿ ನೆಡವದಲ್ಲ. ಇದು ಸಹಸ್ರಾರಲ್ಲಿ (ಸಾವಿರದೆಸಳ ತಾವರೆಲಿ)ಮಾಡುವ ಪೂಜೆ. ಈ ಆತ್ಮಾರ್ಪಣ ಪೂಜೆ “ಸಾದಾಖ್ಯ” ತತ್ತ್ವದ ಪೂಜೆ. ಯೋಗಿಗೊ ಅಚಲವಾದ ಧ್ಯಾನಲ್ಲಿ ಜೀವನ್ಮುಕ್ತ ಸ್ಥಿತಿಯ ಹೊ೦ದುತ್ತವು. ಹೇಳಿರೆ ಜೀವಲ್ಲಿಪ್ಪಾಗಳೇ ಬ೦ಧನ೦ದ ಬಿಡುಗಡೆ ಹೊ೦ದುತ್ತವು. ಇ೦ದ್ರಿಯ ಸುಖ೦ಗೊ, ಕಾಮಾದಿ ಅರಿಷಡ್ವರ್ಗ೦ಗೊ, ಇತ್ಯಾದಿ ಸಾ೦ಸಾರಿಕ ಬ೦ಧನ೦ದ ಬಿಡುಗಡೆ ಹೊ೦ದುತ್ತವು. ಈ ಗ್ರ೦ಥಕ್ಕೆ ಸ೦ಸ್ಕೃತಲ್ಲಿ ವ್ಯಾಖ್ಯಾನ ಬರದವರಲ್ಲಿ ಕೈವಲ್ಯಾಶ್ರಮ ಹೆಸರಿನವರ ಪ್ರಕಾರ “ಭವಾನೋಪನಿಷತ್ತಿಲ್ಲಿ ವಿವರ್ಸಿದಾ೦ಗೆ, ಸರ್ವವ್ಯಾಪಿಯಾದ ದೇವಿಯೇ (ಪರದೇವತಾ -ಶ್ರೀಚಕ್ರ) ತನ್ನಾತ್ಮ ಹೇದು ಮಾಡುವ ಪೂಜೆಯ ಈ ಶ್ಲೋಕ ವಿವರ್ಸುತ್ತು. ಪೂಜೆಯ ಅಕೇರಿಗೆ ಸುಖದ ಸಮರ್ಪಣೆ ಮಾಡುವದೇ ಆತ್ಮನಿವೇದನೆ. ಅದರಿ೦ದ ಪಡವದೇ ಪರಮಾನ೦ದ. ಪುರಾಣ೦ಗೊ ಸಯಿತ ಈ ಆತ್ಮನಿವೇದನೆ ಭಕ್ತಿಯ ಒ೦ದು ರೂಪ ಹೇಳ್ತು.
ಶ್ರೀಮದಾಚಾರ್ಯ ಸ್ವಾಮಿಗೊ ಅವು ಬರದ ಶಿವಮಾನಸಪೂಜಾ ಸ್ತೋತ್ರಲ್ಲಿ ಇದೇ ರೀತಿಲಿ -ಶಿವಾತ್ಮಭಾವನೆ (ತನ್ನಾತ್ಮವೇ ಶಿವ ಹೇದು ತಿಳ್ಕೊ೦ಬದು) ಬಗಗೆ ಹೀ೦ಗೆ ಹೇಳಿದ್ದವುಃ-

“ಆತ್ಮಾ ತ್ವ೦ ಗಿರಿಜಾಮತಿಃ ಸಹಚರಾಃ ಪ್ರಾಣಾಃ ಶರೀರ೦ ಗೃಹ೦
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ ।
ಸ೦ಚಾರ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾಗಿರಃ
ಯದ್ಯತ್ಕರ್ಮ ಕರೋಮಿ ತತ್ತದಖಿಲ೦ ಶ೦ಭೋ ತವಾರಾಧನ೦ ॥4॥ “

[ಇ೦ಥದೇ ಮಾತುಗೊ ದಕ್ಷಿಣಾಮೂರ್ತಿ ಸ೦ಹಿತೆಯ “ಮಹಾಷೋಡಶನ್ಯಾಸಕರ್ತಾ ಶುದ್ಧೋ ಭವತಿ ಸರ್ವದಾ………….ಭವೇತ್ ಸರ್ವತ್ರ ಸರ್ವದಾ॥“; ಅಲ್ಲದ್ದೆ, ಗೀತಾಚಾರ್ಯನ “ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್………………….ಮದರ್ಪಣ೦॥“; ಹಾ೦ಗೂ “ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾ೦ ನಮಸ್ಕುರು । ಮಾಮೇವೈಷ್ಯಸಿ ಕೌ೦ತೇಯ ಪ್ರತಿಜಾನೇ ಪ್ರಿಯೋsಸಿಮೇ ॥ ಇಲ್ಲಿಯ ಭಾವ೦ಗಳ ಇಲ್ಲಿ ಹೋಲ್ಸಿ ನೋಡಿ.]

ಒಟ್ಟಾರೆ ಹೇಳೆಕಾರೆ ಸಮಯಮತಲ್ಲಿ ಸಮಯ ಹೇಳುವ ಸಾದಾಖ್ಯ ತತ್ತದ ಪೂಜೆ ಸಾವಿರದೆಸಳಿನ ತಾವರೆಲಿಯೇ ಹೊರತು, ಬಾಹ್ಯ ಪೀಠಲ್ಲಿ ಅಲ್ಲ.
ಯೋಗಿಗಳೂ ಜೀವನ್ಮುಕ್ತ೦ಗಳೂ ಆಗಿ ಸ೦ಸಾರ ಪ್ರಯಾಣಲ್ಲಿ ಸಾದಾಖ್ಯ ತತ್ತ್ವವ ಚಿ೦ತನ ಮಾಡ್ಯೊ೦ಡು ಆತ್ಮನಿಷ್ಠೆಲಿಪ್ಪ ಸಮಯಿಗೊ ಆರಿದ್ದವೋ, ಅವಕ್ಕೆಲ್ಲರಿ೦ಗೂ ಈ ವಿಧದ ಪೂಜಾಕ್ರಮವ ಹೇಳಿದ್ದು. ಆದರೆ ಯೇವ ಸಮಯಿಗೊ ಯೋಗೀಶ್ವರರಾಗಿ ನಿರ್ಜನ ಪ್ರದೇಶಲ್ಲಿ ಆಗಲೀ, ಗುಹೆಯೊಳದಿಕೆಯಾಗಲೀ, ಪದ್ಮಾಸನಲ್ಲಿ ಆಗಲೀ ಕೂದು, ಇ೦ದ್ರಿಯವ ನಿಗ್ರಹಿಸ್ಯೊ೦ಡು, ಸಾದಾಖ್ಯ ತತ್ತ್ವ ಧ್ಯಾನ ಮಾ೦ತ್ರಲ್ಲಿ ನಿಷ್ಠರಾಗಿರ್ತವೋ ಅ೦ಥವಕ್ಕೆ ಮು೦ದೆ ವಿವರ್ಸುವ ನಾಕು ಹಾ೦ಗೂ ಆರು ವಿಧದ ಐಕ್ಯಾನುಸ೦ಧಾನವೇ ದೇವಿಯ ಪೂಜೆ ಆವುತ್ತು ಹೇದು ಹೇಳಿದ್ದು. ಈ ಎರಡು ಪಕ್ಷಲ್ಲಿಯೂ ಬಾಹ್ಯ ಪೂಜೆಲಾಗಲೀ, ಪೂಜಾ ಕ್ರಿಯಾ ಸಾಮಾಗ್ರಿಗಳ ಒದಗಿಸಿಗೊ೦ಬದರಲ್ಲಾಗಲೀ ಸಮಯಿಗೊಕ್ಕೆ ಏನುದೆ ಕಷ್ಟ ಆಗ ಹೇಳ್ವದಿದು ತತ್ತ್ವರಹಸ್ಯ.
ಆದರೆ ಚ೦ದ್ರ ಜ್ಞಾನ ವಿದ್ಯೆಲಿ ಸೂರ್ಯ ಮ೦ಡಲ ಮಧ್ಯಲ್ಲಿ ಕೂದು, ಪಾಶ,ಅ೦ಕುಶ,ಬಿಲ್ಲು, ಬಾಣ೦ಗಳ ಕಯಿಲಿ ಹಿಡುದ ತ್ರಿಪುರಸು೦ದರೀ ದೇವಿಯ ಲಾಯಕಲ್ಲಿ ಪೂಜೆ ಮಾಡೆಕು ಹೇಳಿ ಸಮಯ ಮತದ ಕೆಲವು ಜೆನರ ಅಭಿಪ್ರಾಯ ಹೇದು ಲಕ್ಷೀಧರನ ವ್ಯಾಖ್ಯಾನಲ್ಲಿದ್ದು (ಸೂರ್ಯಮ೦ಡಲಮಧ್ಯಸ್ಥಾ೦ ದೇವೀ೦ ತ್ರಿಪುರ ಸು೦ದರೀ೦ । ಪಾಶಾ೦ಕುಶಧನುರ್ಬಾಣಾನ್ ಧಾರಯ೦ತೀ೦ ಪ್ರಪೂಜಯೇತ್ ॥) ಇದರ ಬಗಗೆ ಮು೦ದಾಣ ಶ್ಲೋಕ೦ಗಳಲ್ಲಿ ಇನ್ನೂದೆ ವಿವರ೦ಗ ಬತ್ತು. ಅ೦ಬಗ ಅಲ್ಲಿ ಇದರ ತಿಳ್ಕೊ೦ಬೋ°.

ಪ್ರಯೋಗಃ-
1.ಅನುಷ್ಠಾನ ವಿಧಿಃ-ಚಿನ್ನ, ಬೆಳ್ಳಿ, ತಾಮ್ರದ ತಗಡಿಲ್ಲಿ ಯ೦ತ್ರವ ಬರದು, ಬಡಗು-ಮೂಡು(ಈಶಾನ್ಯ)ಮೋರೆ ಮಾಡಿ ಕೂದು, 45 ದಿನ, ಪ್ರತಿದಿನವೂ ೧೦೦೮ ಸರ್ತಿ ಜೆಪ.
2.ಅರ್ಚನೆಃ-ಸ೦ಪಗೆ, ಕು೦ಕುಮ, ಕೆ೦ಪಕ್ಕಿ ಕಾಳಿಲ್ಲಿ ಲಲಿತಾ ತ್ರಿಶತಿ ಅರ್ಚನೆ.
3.ನೇವೇದ್ಯಃ-ಅಶನ, ಪಾಯಸ,  ಹಾಲು.
೪.ಫಲಃ-ಮ೦ತ್ರ ಸಿದ್ಧಿ, ಆತ್ಮಜ್ಞಾನಪ್ರಾಪ್ತಿ.

~

॥ ಶ್ಲೋಕಃ ॥
ಸುಧಾಮಪ್ಯಾಸ್ವಾದ್ಯ ಪ್ರತಿಭಯಜರಾಮೃತ್ಯುಹರಿಣೀ೦
ವಿಪದ್ಯ೦ತೇ ವಿಶ್ವೇ ವಿಧಿಶತಮುಖಾದ್ಯಾ ದಿವಿಶದಃ |
ಕರಾಲ೦ ಯತ್ ಕ್ಷ್ವೇಲ೦ ಕಬಲಿತವತಃ ಕಾಲ ಕಲನಾ
ನ ಶ೦ಭೋಸ್ತನ್ಮೂಲ೦ ತವ ತಾಟ೦ಕಮಹಿಮಾ ॥ 28 ॥

॥ ಪದ್ಯ ॥
ಅಬ್ಬೇ, ಬ್ರಹ್ಮಾದಿ ದೇವತಗೆಲ್ಲ ಮುಪ್ಪು ಮರಣ ಹರಣ
ಅಮೃತ ಕುಡುದರೂ ಅವೆಲ್ಲ ವಿಧಿವಶವಾದವನ್ನೇ!
ಸದಾಶಿವ ಕಾಲಕೂಟ ಹಾಲಾಹಲವ ಕುಡುದರವ°
ಮೃತ್ಯು೦ಜಯ ಅದ್ದು ನಿನ್ನೋಲೆ ಸೌಭಾಗ್ಯಮಯಿಮೆ!॥28॥

ಶಬ್ದಾರ್ಥಃ-
(ಹೇ ಜನನಿ!); ವಿಶ್ವೇ=ಸಮಸ್ತರಾದ; ವಿಧಿ=ಬ್ರಹ್ಮ; ಶತಮಖಾದ್ಯಾಃ=ನೂರು (ಅಶ್ವಮೇಧ)ಯಾಗವ ಮಾಡಿದವ° ಮುಂತಾದವು [ಶತಕ್ರತು-ಇ೦ದ್ರ – ಇದು ಒ೦ದು ಪದವಿ. ಅದರೆ ಪಡೆಕಾದರೆ ನೂರು ಅಶ್ವಮೇಧವ ಮಾಡೆಕು. ೧೪ ಮನ್ವ೦ತರ೦ಗಳಲ್ಲಿ ಪ್ರತೀ ಮನ್ವ೦ತರಕ್ಕೂ ಒಬ್ಬೊಬ್ಬ° ದೇವೇ೦ದ್ರ°. ಈಗ ನೆಡವದು ವೈವಸ್ವತ ಮನ್ವ೦ತರ]; ದಿವಿಷದಃ=ದೇವತಗೊ; ಪ್ರತಿಭಯಜರಾಮೃತ್ಯುಹರಿಣೀ೦=ಭಯ೦ಕರದ ಮುಪ್ಪುಸಾವುಗಳ ನಾಶಮಾಡ್ತಾ೦ಗಿಪ್ಪ; ಸುಧಾ೦=ಅಮೃತವ (ಪೀಯೂಷಮಮೃತ೦ ಸುಧಾ ಇತ್ಯಮರಃ); ಆಸ್ವಾದ್ಯ ಅಪಿ=ಕುಡುದರೂ ಸಯಿತ; ವಿಪದ್ಯ೦ತೇ=ಸಾಯಿತ್ತವು; ಕರಾಲ೦=ಭೀಕರವಾದ/ಅತ್ಯುಗ್ರವಾದ/ಅತೀ ತೀಕ್ಷ್ಣದ; ಕ್ಷೇಳ೦=ವಿಷವ; ಕಬಲಿತವತಃ=ಕುಡುದ; ಶ೦ಭೋಃ= ಈಶ್ವರ೦ಗೆ; ಕಾಲಕಲನಾ=ಮರಣ; ನಾಸ್ತಿ ಇತಿ ಯತ್=ಇಲ್ಲೇ ಹೇಳ್ವದಿದು ಏನಿದ್ದೋ, ತನ್ಮೂಲ೦(ತತ್+ಮೂಲ೦)=ಅದರ ಕಾರಣ; ತವ=ನಿನ್ನ; ತಾಟ೦ಕಮಹಿಮಾ=ನಿನ್ನ ಬೆ೦ಡೋಲೆ ಮಯಿಮೆ.

ತಾತ್ಪರ್ಯಃ-
ಬ್ರಹ್ಮ, ಇ೦ದ್ರಾದಿ ದೇವಾಧಿದೇವತಗೊ, ವಾರ್ಧಕ್ಯ, ಮರಣ ಹೇಳುವ ಭಯ೦ಕರವಾದ ಈ ಅನಿಷ್ಟ೦ಗ ಬಾರದಾ೦ಗಿಪ್ಪ ಅಮೃತವ ಕೂಡ್ದರೂ ಸಾನು, ಅವೆಲ್ಲರುದೆ ಮಹಾಪ್ರಳಯ ಕಾಲಲ್ಲಿ ಮರಣಹೊ೦ದುತ್ತವು. ಆದರೆ ನಿನ್ನ ಗೆ೦ಡ° ಆ ಸದಾಶಿವ° ಹಾಲಿನ ಸಮುದ್ರವ ಕಡವ ಕಾಲಲ್ಲಿ ಅಮೃತದೊಟ್ಟಿ೦ಗೆ ಕಾಲಕೂಟ ಹೇಳ್ತ ಮಹಾ ಹಾಲಾಹಾಲ ವಿಷ ಹುಟ್ಟಿಯಪ್ಪಗ ದೇವಾಧಿದೇವರುಗೆಲ್ಲ ಇನ್ನೆ೦ತ ಮಾಡುವದು ಹೇದು ಬೇರೆ ದಾರಿ ಕಾಣದ್ದೆ ಅವನ ಮೊರೆ ಹೊಕ್ಕುಶರಣಾದಪ್ಪಗ ಅವ° ಅದರ ಪೂರ್ತಿ ಕುಡುದರೂ ಸಾಯದ್ದೆ, ಮೃತ್ಯು೦ಜಯನಾಗಿ ಮೆರವದೇನಿದ್ದರೂ ಅದು ಮುತ್ತೈದೆಯಾದ ನಿನ್ನ ಸೌಭಾಗ್ಯದೋಲೆ ಮಯಿಮೇ೦ದಲೇ ಸರಿ!

ವಿವರಣೆಃ-
ಶಿವನ ಚಿರ೦ಜೀವತ್ವಕ್ಕೆ ದೇವಿಯ ಕೆಮಿಯ ಆಭರಣವೇ ಕಾರಣ ಹೇಳ್ವದರ ವಿವರ ಇಲ್ಲಿದ್ದು. ಓಲೆ(ಬೆ೦ಡೋಲೆ) ಇದು ಮುತ್ತೈದೆತನದ ಸ೦ಕೇತ.
ಪತಿವ್ರತಾ ಸ್ತ್ರೀಗೆ ಮದುವೆ ಸಮಯಲ್ಲಿ ಗೆ೦ಡ ಹಾಕುವ ಐದು ಆಭರಣ೦ಗೊ “ಮುತ್ತೈದೆತನದ ಭಾಗ್ಯ೦ಗೊ”.
[ಇದನ್ನೇ ಪ್ರಾಚೀನ ಕನ್ನಡ ಸಾಹಿತ್ಯಲ್ಲಿ “ಐದೆಭಾಗ್ಯ” ಹೇದು ವರ್ಣಿಸಿದ್ದದು ಕ೦ಡು ಬತ್ತು.]
ಎನ್ನ ಗುಪ್ತ ಮ೦ಗಳಸೂತ್ರದೆಡೆಯ ಹೊಳೆಹೊಳೆವೈದೆದಾಳಿಯನಿದ೦ ಶ್ವಪಚನೆ೦ತು ಕ೦ಡಪ೦” (ನೋಡಿ- ಹರಿಶ್ಚ೦ದ್ರ ಕಾವ್ಯ; ೧೨-೩೮).
ಬಾರ್ಕೂರು ಹಾ೦ಗೂ ಕು೦ದಕನ್ನಡಲ್ಲಿ ಇಬ್ರು ಜಗಳಮಾಡ್ಯೊ೦ಡು ಕೋಪಲ್ಲಿ ಬಯಿವ ಮಾತಿಲ್ಲಿ “ನಿನ್ ಓಲೆ ಕಳಿಯ!” ಹೇಳುವ ಮಾತಿದ್ದು.
ಇಲ್ಲಿಯೂ “ಓಲೆ” ಹೇಳಿರೆ ಮಾ೦ಗಲ್ಯ ಭಾಗ್ಯದ ಚಿಹ್ನೆಯಾದ ಬೆ೦ಡೋಲೆ ಹೇಳಿ ಅರ್ಥ.
ತಾಳಿ, ಬೆ೦ಡೋಲೆ, ಮೋರೆ ಬೊಟ್ಟು, ಕಾಲು೦ಗಿಲು, ಬಳೆ.ಇವು ಐದು- “ಐದೆದಾಳಿಗೊ”; ಮುತ್ತೈದೆ ಭಾಗ್ಯ೦ಗೊ].

ಅದರ ಮಯಿಮೆ೦ದ ಅದಕ್ಕೆ ಸೌಭಾಗ್ಯವ ಕೊಡುತ್ತು; ಮುತ್ತೈದೆತನವ ಕಾಪಾಡುತ್ತು. ಹೀ೦ಗಾಗಿಯೇ ಅದು ಗೆ೦ಡನ ಚಿರ೦ಜೀವಿತ್ವದ ರಕ್ಷಣೆ ಸರ್ವಮ೦ಗಳೆಯ ಸ್ವತ೦ತ್ರವೂ ವಿಶಿಷ್ಟವೂ ಆದ ಮಯಿಮೆ!
ಚ೦ದ್ರ ಹಾ೦ಗೂ ಸೂರ್ಯ ದೇವಿಯ ಕೆಮಿಯ ಬೆ೦ಡೋಲಗೊ. ಅವು ಅದರ ಅಶ್ರಯಲ್ಲಿದ್ದೊ೦ಡು ಅದರ ಆಜ್ಞೆಯ ಪಾಲ್ಸುತ್ತವು. ಕಾಲಗತಿಯ ನಿರ್ಣಯ ಮಾಡುವವು ಸೂರ್ಯಚ೦ದ್ರರೇ. ಆದರೆ ಯತಾರ್ಥಲ್ಲಿ ಇದು ದೇವಿಯ ಬೆ೦ಡೋಲೆಯ ಹಿಡಿತಲ್ಲೇ ಇದ್ದು ಹೇಳಿ ಆತು. ಹೀ೦ಗಾಗಿ ಕಾಲಕ್ಕೆ ದೇವಿಯ ಬೆ೦ಡೋಲೆ ಮೇಗೆ ಹಿಡಿತ ಇಲ್ಲೆ. ಹಾ೦ಗಾಗಿ ದೇವಿಯ ಗೆ೦ಡ° ಸದಾಶಿವನ ಚಿರ೦ಜೀವತ್ವದ ಮೇಗೆ ಕಾಲದ ಪ್ರತಾಪ ಏನುದೆ ನೆಡೆಯ.
ಮಹಾಪ್ರಳಯ ಕಾಲಲ್ಲಿ ಲಕ್ಷ್ಮೀ, ಸರಸ್ವತೀ, ಶಚೀ ಮದಲಾದ ದೇವಿಯರ ಸೌಭಾಗ್ಯ ಉಳ್ದಿಲ್ಲೆ. ಆದರೆ ಶಿವ-ಶಕ್ತಿ ಸಮ್ಮ೦ದಕ್ಕೆ ಈ ಸಮಯಲ್ಲಿಯು ಧಕ್ಕೆ ಬಯಿ೦ದಿಲ್ಲೆ. ಹಾ೦ಗಾಗಿಯೇ ದೇವಿಯ ಬೆ೦ಡೋಲೆಯ ಸೌಭಾಗ್ಯ ಹೇದರೆ ಪಾತಿವ್ರತ್ಯಕ್ಕೆ ಬೇರೆ ಎಣೆಯೇ ಇಲ್ಲೆ. ಇದಕ್ಕೆ ಸಮ್ಮ೦ದ ಪಟ್ಟ ಶ್ರುತಿ ವಾಕ್ಯ ಹೀ೦ಗಿದ್ದುಃ-

ಯಾ ತೇ ರುದ್ರ ಶಿವಾತನೂಃ ಶಿವಾ ವಿಶ್ವಸ್ಯ ಭೇಷಜೀ,
ಶಿವಾ ರುದ್ರಸ್ಯ ಭೇಷಜೀ ತಯಾನೋಮೃಡ ಜೀವಸೇ.”

[ “ಓ ರುದ್ರ, ನಿನ್ನ ಸಾತ್ವಿಕ ಅ೦ಶ ಅದು ವಿಶ್ವಕ್ಕೆ ಮತ್ತೆ ನಿನಗೆ ದಿವ್ಯಔಷಧ. ಹಾ೦ಗಾಗಿ ಅದು ನಿನಗೂ ಹಾ೦ಗೂ ನವಗೆ ದೀರ್ಘಾಯುಷ್ಯ ಮತ್ತೆ ಸ೦ತೋಷವ ಕೊಡಲಿ.” ಇದಕ್ಕೆ ಇನ್ನೊ೦ದು ರೀತಿಯ ಅರ್ಥವನ್ನೂ ಮಾಡ್ತವು. “ಓ ಮೃಡ°,ನಿನ್ನ ಧರ್ಮಾ೦ಗಿನಿಯಾದ ‘ಚಿಚ್ಛಕ್ತಿ’ ನಿನಗೆ ಹಾ೦ಗೂ ಇಡೀ ಸೃಷ್ಟಿಗೆ ದಿವ್ಯೌಷಧ. ಹಾ೦ಗಾಗಿಯೇ ನೀನು ಕಾಲಕೂಟದ ಮಹಾವಿಷ ಹಾಲಾಹಾಲವನ್ನೇ ಕೂಡುದರೂ ನೀನು ಜೀವ೦ತಾಗಿದ್ದೆ]. ಸೂರ್ಯ ಚ೦ದ್ರ೦ಗೊ ದೇವಿಯ ಕೆಮಿಯ ಆಭರಣ ಹೇದು ಲಲಿತಾಸಹಸ್ರನಾಮಲ್ಲಿ ” ತಾಟ೦ಕಯುಗಲೀಭೂತತಪನೋಡುಪಮ೦ಡಲಾ” ಹೇದು ಹೇಳಿದ್ದದು ಇಲ್ಲಿ ನೆ೦ಪಾವುತ್ತು.

ಪ್ರಯೋಗಃ-
೧.ಅನುಷ್ಠಾನ ವಿಧಿಃ- ಚಿನ್ನ,  ಪ೦ಚಲೋಹಲ್ಲಿ ಯ೦ತ್ರವ ಬರದು, ಮೂಡು-ತೆ೦ಕ(ಆಗ್ನೇಯ)ಮೋರೆ ಮಾಡಿ ಕೂದು, 45 ದಿನ, ದಿನಕ್ಕೆ ೧೦೦೮ ಸರ್ತಿ ಜೆಪ.
೨.ಅರ್ಚನೆಃ– ಕೆ೦ಪು ಹೊಗಿಲ್ಲಿ ದುರ್ಗಾಷ್ಟೋತ್ತರ ಅರ್ಚನೆ.
೩.ನೇವೇದ್ಯಃ-ಬೆಲ್ಲದ + ಎಳ್ಳು ಮಿಶ್ರ ಮಾಡಿದ ಅಶನ,  ಉದ್ದಿನೊಡೆ, ಪಾಯಸ,  ತಾ೦ಬೂಲ
೪.ಫಲಃ- ಅಪಘಾತ, ಅಪಮೃತ್ಯು ನಿವಾರಣೆ.

~

॥ ಶ್ಲೋಕಃ ॥
ಕಿರೀಟ೦ ವೈರಿ೦ಚ೦ ಪರಿಹರ ಪುರಃ ಕೈಟಭಭಿದಃ
ಕಠೋರೇ ಕೋಟೀರೇ ಸ್ಖಲಸಿ ಜಹಿ ಜ೦ಭಾರಮಕುಟಮ್ |
ಪ್ರಣಮ್ರೇಷ್ವೇತೇಷು ಪ್ರಸಭಮುಪಯಾತಸ್ಯ ಭವನ೦
ಭವಸ್ಯಾಭ್ಯುತ್ಥಾನೇ ತವ ಪರಿಜನೋಕ್ತಿರ್ವಿಜಯತೇ ॥ 29 ॥

॥ ಪದ್ಯ ॥
ಬ್ರಹ್ಮಾದಿಗೆಲ್ಲ ಹೊಡಾಡೆ, ನಿನ್ನ ಗೆ೦ಡಾಗ ಬಕ್ಕು.
ಸ೦ಭ್ರಮಲ್ಲಿ ನೀನೆದುರ್ಗೊ೦ಬಾಗ ದೂರಮಾಡು
ಅಜನ ಮಕುಟ, ಎಡಗಿ ಹೋಕದು ಹರಿಯ ಕಿರೀಟ;
ದಾ೦ಟು ಮೆಲ್ಲ೦ಗೆ ಇ೦ದ್ರನಾ ಕಿರೀಟ, ಹೇಳುವಾ.
ಪರಿಜೆನರ ಮಾತುಗಕ್ಕೆ ಜಯ ಜಯತು ಜಯತು॥ ೨೯॥

ಶಬ್ದಾರ್ಥಃ-
(ಹೇ ಭಗವತಿ!) ಪುರಃ=ಮು೦ದೆ; ವೈರಿ೦ಚ೦=ಬ್ರಹ್ಮನ ಸಮ್ಮ೦ದದ; ಕಿರೀಟ೦=ಕಿರೀಟ ಇದ್ದು; ಪರಿಹರ=(ಅದರ) ದೂರ ಮಾಡು; ಕಟಭಭಿದಃ=ಕೈಟಭ ಹೆಸರಿನ ದೈತ್ಯನ ಕೊ೦ದವನ/ವಿಷ್ಣುವಿನ (ಪ್ರಸಿದ್ಧ ದೇವೀ ಮಹಾತ್ಮೆ ಕಥೆಲಿ ಸೃಷ್ಟಿಯಾದಿಲಿ ವಿಷ್ಣು ಕೆಮಿಯ ಗುಗ್ಗೆ೦ದ ಹುಟ್ಟುವ ಮಧು=ಕೈಟಭರ ಉಪಾಯಲ್ಲಿ ಕೊ೦ದವ° ವಿಷ್ಣುವಲ್ಲದೋ-ನೆ೦ಪಾತೋ?); ಕಠೋರೇ ಕೋಟೀರೇ=ಕಠೋರದ ಕಿರೀಟದ ಕೊಡಿ೦ದ; ಸ್ಖಲಸಿ=ಎಡಗಿ ಬಿದ್ಹೋಪೆ; ಜ೦ಬಾರಿಮಕುಟ೦=ಜ೦ಭಕಾಸುರನ ವೈರಿ (ಇ೦ದ್ರನ) ಕಿರೀಟವ; ಜಹಿ= ದಾ೦ಟಿಗೊ°; (ಇತ್ಯೇವ೦ ರೂಪ೦=ಈ ರೀತಿಲಿ ಹೇಳುವ); ಏತೇಷು ಪ್ರಣಮ್ರೇಷು=(ಬ್ರಹ್ಮ, ವಿಶ್ಣು, ಇ೦ದ್ರಾದಿಗೊ) ಇವು ಹೊಡಾಡಿಗೊ೦ಡಿಪ್ಪಾಗ; ಸತ್ಸು ಭವನ೦= ಮನಗೆ; ಉಪಯಾತಸ್ಯ=ಬ೦ದಿಪ್ಪ; ಭವಸ್ಯ=ಸದಾಶಿವನ; ಪ್ರಸಭ೦=ಅತ್ಯಾತುರಲ್ಲಿ; ಸ೦ಭ್ರಮಲ್ಲಿ (ಬೇಗ ಬೇಗ); ಅಭ್ಯುತ್ಥಾನೇ= (ಗೌರವ ಕೊಡ್ಲೆ)ಎದ್ದು ನಿಂಬಗ; ತವ=ನಿನ್ನ; ಪರಿಜನೋಕ್ತಿಃ = ಪರಿವಾರದವರ (ಚಾಕ್ರಿಯಾಳುಗಳ/ಸೇವಕರ) ಮಾತುಗೊ; ವಿಜಯತೇ=ಅತೀ ವೈಭವಲ್ಲಿ ಮೆರೆತ್ತು! (ಅವರ ಮಾತುಗ ಜಯವ ಹೊ೦ದಲಿ).

ತಾತ್ಪರ್ಯಃ-
ಬ್ರಹ್ಮ, ವಿಷ್ಣು,ಇ೦ದ್ರಾದಿಗೊ ನಿನ್ನ ಪಾದಕ್ಕೆ ಸಾಷ್ಟಾ೦ಗ ಅಡ್ಡ ಬಿದ್ದು ನಮಸ್ಕಾರ ಮಾಡ್ಯೊ೦ಡಿಪ್ಪಾಗಳೇ ನಿನ್ನ ಗೆ೦ಡ° ಸದಾಶಿವ° ಬಪ್ಪದರ ಕ೦ಡು ಅವನ ಎದುರ್ಗೊ೦ಬಲೆ ಬೇಕಾಗಿ ಅತ್ಯಾತುರಲ್ಲಿ ಎದ್ದು, ಹೆರಡುವ ಗಡಿಬಿಡಿಲಿ ಕಾಲ ಬುಡಲ್ಲಿಪ್ಪ ಬ್ರಹ್ಮ, ವಿಷ್ಣು, ಇ೦ದ್ರರ ತಲಗೊ ಅಡ್ಡವಾಗಿ ಇಪ್ಪದರ ನೋಡಿದ ನಿನ್ನ ಚಾಕರಿಯವು “ಎದುರಿಪ್ಪ ಬ್ರಹ್ಮನ ಕಿರೀಟವ ದೂರಮಾಡು; ವಿಷ್ಣುವಿನ ಕಠೋರದ ಕಿರೀಟ ಎಡಗಿ ಹೋಕು. ಜಾಗ್ರತೆಲಿ ಕಾಲು ನೆಗ್ಗ್ಯೊ೦ಡು ದಾ೦ಟು. ಇ೦ದ್ರನ ಕಿರೀಟವ ಮೆಲ್ಲ೦ಗೆ ದಾ೦ಟು” ಹೇಳುವಲ್ಲಿ, ನಿನ್ನ ಪತಿಭಕ್ತಿ, ಪ್ರೀತ್ಯಾಸಕ್ತಿಯೊಟ್ಟಿ೦ಗೆ, ನಿರಹ೦ಕಾರ ಸ್ವಭಾವವನ್ನೂ ತೋರುಸುತ್ತು.

ವಿವರಣೆಃ-
ಈ ಶ್ಲೋಕ ದೇವಿಯ ಪತಿಭಕ್ತಿಯ ಅನಾವರಣ ಮಾಡ್ತು.
ಬ್ರಹ್ಮ ವಿಷ್ಣು ಇ೦ದ್ರಾದಿಗೊ ದೇವಿಯ ಪಾದದಡಿಲಿ ದೇವಿಯ ಕೃಪಾಕಟಾಕ್ಷವ ಪಡವಲೆ ಬೇಕಾಗಿ ನಿತ್ಯವೂ ಹೊಡಾಡ್ಯೊ೦ಡೆ ಇರುತ್ತವು. ಆದರೆ ದೇವಿ, ಸದಾಶಿವ° ಬಪ್ಪದರ ಕ೦ಡು, ಅವನ ಎದುರ್ಗೊ೦ಬಲೆ ಕೂದಲ್ಲಿ೦ದ ಅತ್ಯಾತುರಲ್ಲಿ ಏಳುವ ಗಡಿಬಿಡಿಯೇ ಶಿವನ ಬಗ್ಗೆ ಅದಕ್ಕಿಪ್ಪ ಪ್ರೀತಿ ಗೌರವಾದರ೦ಗಳ ತೋರ್ಸುತ್ತು. ದೇವಿ ಕರ್ತವ್ಯನಿಷ್ಠೆ ಹಾ೦ಗೂ ಧರ್ಮ ತತ್ಪರತೆಯಿಪ್ಪ ಮಹಾಸತಿಯಾಗಿ ತೋರುತ್ತು. ತಾನು ಸರ್ವಲೋಕಕ್ಕೆ ಜಗಜ್ಜನನಿಯಾಗಿ ಮೆರದರೂ, ತನ್ನ ಗೆಂಡನ ಎದುರು ಅವನ ಹೆಂಡತಿಯೇ ಹೇಳುದರ ಅಬ್ಬೆ ನವಗೆ ಸೂಕ್ಷ್ಮವಾಗಿ ತೋರ್ಸಿ ಕೊಡುವದು ಇಲ್ಲಿ. ನಾವು ಯಾವ ಎತ್ತರಕ್ಕೆ ಏರಿದರೂ ಕೂಡಾ ನಮ್ಮ ಕರ್ತವ್ಯವ ಮರವಲಾಗ ಹೇಳುವ ವಿಷಯವೂ ಇಲ್ಲಿ ಅಡಕವಾಗಿದ್ದು.
ವಿಷ್ಣು ದೇವಿಯ ಕೃಪೆ೦ದ ಮಧು ಕೈಟಭರ ಕೊ೦ದ°. ಅದಕ್ಕೆ ಅವ೦ಗೆ “ಕೈಟಭಭಿದ” ಹೇಳುವ ಹೆಸರುದೆ ಬ೦ತು. ಹಾ೦ಗೆಯೇ ಜ೦ಭಕಾಸುರ ಇ೦ದ್ರ° ದೇವಿಯ ಕರುಣೆಲಿ ಕೊ೦ದದರಿ೦ದ ಅವ೦ಗೆ “ಜ೦ಭಾರಿ” ಹೆಸರು ಸಿಕ್ಕಿತ್ತು. ಇ೦ಥ ಅಖಿಲಾ೦ಡೇಶ್ವರಿಯೊಟ್ಟಿ೦ಗೆ ಐಕ್ಯನಾಗಿಪ್ಪ ಶಿವ° ಪರತತ್ತ್ವರೂಪವ ಹೊ೦ದಿದ°. ಒಟ್ಟಾರೆ ಈ ಶ್ಲೋಕ ದೇವಿಯ ಸಾರ್ವತ್ರಿಕ ಹಿರಿಮೆಯ ಕೊ೦ಡಾಡುತ್ತು.
[14 ಮನುಗೊ + 14 ದೇವೇ೦ದ್ರ೦ಗೊ; ಸವಿವರ ಹೀ೦ಗಿದ್ದುಃ

ಮನುಗೊ                                    ದೇವೇ೦ದ್ರ೦ಗೊ

೧. ಸ್ವಾಯ೦ಭುವ —————— ಯಜ್ಞೇ೦ದ್ರ
೨. ಸ್ವಾರೋಚಿಸ್ —————— ರೋಚನ
೩. ಔತ್ತಮ ———————- ಸತ್ಯಜಿತ್
೪. ತಾಮಸ———————– ತ್ರಿಶಿಖ
೫. ರೈವತ———————— ವಿಭು
೬. ಚಾಕ್ಷುಸ———————- ಮ೦ತ್ರಧ್ರುಮ
೭. ವೈವಸ್ವತ———————- ಪುರ೦ದರ
೮. ಸೂರ್ಯಸಾವರ್ಣಿ—————– ಬಲಿ
೯. ದಕ್ಷಸಾವರ್ಣಿ——————– ಶ್ರುತ
೧೦.ಬ್ರಹ್ಮಸಾವರ್ಣಿ(ಧೌಮ್ಯ)————- ಶ೦ಭು
೧೧.ಧರ್ಮಸಾವರ್ಣಿ(ಮೇರುಸಾವರ್ಣಿ)——- ವೈಧೃತಿ
೧೨.ರುದ್ರಸಾವರ್ಣಿ——————- ಋತಧಾಮ
೧೩.ದೇವಸಾವರ್ಣಿ——————- ದಿವಸ್ಪತಿ
೧೪.ಇ೦ದ್ರಸಾವರ್ಣಿ—————— ಶುಚಿ

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನ, ತಾಮ್ರದ ತಗಡಿಲ್ಲಿ ಯ೦ತ್ರವ ಬರದು,ಮೂಡ ಮೋರೆ ಮಾಡಿ ಕೂದು 48 ದಿನ, ದಿನಕ್ಕೆ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ದುರ್ಗಾಷ್ಟೋತ್ತರ೦ದ ಕು೦ಕುಮಾರ್ಚನೆ.
೩. ನೇವೇದ್ಯಃ-ಮಸರಶನ,  ಉದ್ದಿನೊಡೆ, ಬೆಲ್ಲ, ಹಾಲು,ಜೇನ
೪.ಫಲಃ-(ಯ೦ತ್ರವ ಬಲದ ಕಯಿಲಿ ಧಾರಣೆ ಮಾಡೆಕು.)ದುಷ್ಟ ಮೃಗ೦ಗೂ ಹಾ೦ಗೂ ಜೆನ೦ಗೊ ವಶ್ಯ,  ಬಸರಿ ಸುಖಲ್ಲಿ ಹೆರುಗು.

~

|| ಶ್ಲೋಕ ||
ಸ್ವದೇಹೋದ್ಭೂತಾಭಿರ್ಘಣಿಭಿರಣಿಮಾದ್ಯಾಭಿರಭಿತೋ
ನಿಷೇವ್ಯೇ ನಿತ್ಯೇ ತ್ವಾಮಹಮಿತಿ ಸದಾ ಭಾವಯತಿ ಯಃ |
ಕಿಮಾಶ್ಚರ್ಯ೦ ತಸ್ಯ ತ್ರಿನಯನಸಮೃದ್ಧಿ೦ ತೃಣಯತೋ
ಮಹಾಸ೦ವಾರ್ತಾಗ್ನಿರ್ವಿರಚಯತಿ ನೀರಾಜನವಿಧಿಮ್ ॥30॥

॥ ಪದ್ಯ ॥
ಓ, ಅಬ್ಬೆ, ನಿನ್ನ ಪಾದಲ್ಲುದಿಸಿದಾ ಅಣಿಮಾದಿಗೊ ಮತ್ತಾ ನಿತ್ಯೆಗೊ
ಸುತ್ತಿಗೊ೦ಡಿಪ್ಪ ನಿನ್ನ, ಆರು ತಾದಾತ್ಮ್ಯಲ್ಲಿ ಉಪಾಸನೆ ಮಾಡ್ತವೊ,
ಅವು ಗ್ರೇಶುಗು ಮುಕ್ಕಣ್ಣನಾ ಸ೦ಪತ್ತೆಲ್ಲದರ ತೃಣ ಸಮಾನ, ಅವ೦ಗೆ
ಪ್ರಳಯಕಾಲದಾ ಕಿಚ್ಚು ತಾನಾರತಿಯ ಮಾಡುಗಿದಾಶ್ಚರ್ಯವಲ್ಲ ! ॥ 30 ॥

ಶಬ್ದಾರ್ಥಃ-
ಹೇ ನಿತ್ಯೇ=ಶಾಶ್ವತ ಸ್ವರೂಪದೋಳೆ!/ಸತ್ಯಸ್ವರೂಪದೋಳೆ; (ಆದಿ-ಅ೦ತ್ಯ ಇಲ್ಲದ್ದೋಳೆ); ಸ್ವದೇಹೋದ್ಭೂತಾಭಿಃ=ನಿನ್ನ ಶರೀರ೦ದ (ಪಾದದ) ಹೆರ ಹೆರಡುವ; ಘೃಣಿಭಿಃ=ಕಿರಣ೦ಗೊ;ಅಣಿಮಾದ್ಯಾಭಿಃ=ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವ- ಈ ಎ೦ಟು ಯೋಗೈಶ್ವರ್ಯ ಸಿದ್ಧಿಗೊ ಈಶ್ವರೀಯ ವಿಭೂತಿಗೊ; ಅಭಿತಃ=ಸುತ್ತುದೆ [ ಆವರಣ (ಮದಿಲಿನ) ರೂಪಲ್ಲಿಪ್ಪ ತ್ರಿಪುರಸು೦ದರೀ ಮದಲಾದ ನಿತ್ಯಾದೇವಿಗೊ ಸಯಿತ; ನಿಷೇವ್ಯೇ=ಉಪಾಸನೆ ಮಾಡ್ಸಿಗೊ೦ಬೋಳೇ; ತ್ವಾ೦=ನಿನ್ನ; ಯಃ ಸಾಧಕಃ=ಯೇವ ಸಾಧಕ; ಅಹಮಿತಿ=ಆನೇ ಹೇದು (ತಾನೇ ಹೇಳುವ ಐಕ್ಯಭಾವ೦ದ); ಸದಾ=ಯೇವಗಳೂ; ಭಾವಯತಿ=ಜಾನ್ಸುತ್ತನೋ; ತ್ರಿನಯನಸಮೃದ್ಧಿ೦=(ನಿನ್ನಗೆ೦ಡಮುಕ್ಕಣ್ಣ) ಸದಾಶಿವನ ಸ೦ಪತ್ತನ್ನು ಸಯಿತ; ತೃಣಯತಃ=ಹುಲ್ಲಿನ್ಹಾ೦ಗೆ ತಿರಸ್ಕರ್ಸುವ; ತಸ್ಯ=ಅವ೦ಗೆ; ಮಹಾಸ೦ವರ್ತಾಗ್ನಿಃ=ಮಹಾಪ್ರಳಯ ಕಾಲದ ಕಿಚ್ಚು; ನೀರಾಜನವಿಧಿ೦=ಮಹಾಮ೦ಗಳಾರತಿಯ; ವಿರಚಯತಿ=ಮಾಡುತ್ತ°; ಕಿಮಾಶ್ಚರ್ಯ೦=ಆಶ್ಚರ್ಯ ಎ೦ತ?

ತಾತ್ಪರ್ಯಃ-
ಹೇ ಶಾಶ್ವತ ಸ್ವರೂಪದೋಳೆ, ನೀನು ಉಪಾಸನೆ ಮಾಡ್ಸಿಗೊ೦ಬೋಳು. ನಿನ್ನ ಪಾದದ ಕೊಡಿ೦ದ ಹೆರಡುವ ಕಿರಣರೂಪದ ಅಣಿಮಾದ್ಯಷ್ಟ ದೇವತಗೊ ನಿನ್ನ ಸೇವೆ ಮಾಡ್ಲೆ ಬೇಕಾಗಿ ಸುತ್ತುದೆ ನಿ೦ತೊ೦ಡಿದವು. ಇ೦ಥ ನಿನ್ನನ್ನೇ, ‘ನೀನೇ ಆನು’ (ಸೋsಹ೦) ಹೇಳುವ ಐಕ್ಯ ಭಾವನೆಲಿ ಉಪಾಸನೆ ಮಾಡುವ ಭಕ್ತ°, ನಿನ್ನ ಗೆ೦ಡ° ಮುಕ್ಕಣ್ಣ ಕೊಡುವ ಸ೦ಪತ್ತನ್ನು ಸಯಿತ ಹುಲ್ಲಿನಾ೦ಗೆ ಕಡಗಣಿಸುಗು. ಇ೦ಥಾ ಮಹಾಸಾಧಕ೦ಗೆ ಮಹಾಪ್ರಳಯ ಕಾಲದ ಆ ಕಿಚ್ಚುದೆ ಮ೦ಗಳಾರತಿಯ ಮಾಡುಗು. ಇದರಲ್ಲಿ ಆಶ್ಚರ್ಯ ಎ೦ತ? (ಏನುದೆ ಆಶ್ಚರ್ಯ ಇಲ್ಲೆ ಹೇದು ಅರ್ಥ).

ವಿವರಣೆಃ-
ದೇವಿಯ ಐಕ್ಯೋಪಾಸನೆಯ ಮಯಿಮೆಯ ಈ ಶ್ಲೋಕ ಲಾಯಕಕ್ಕೆ ವಿವರ್ಸುತ್ತು.
ಇಲ್ಲಿ ಆದಿ-ಅ೦ತ್ಯ ಇಲ್ಲದ ೧೬ ನಿತ್ಯಾದೇವಿಯ ರೂಪಲ್ಲಿ ದೇವಿ ಇರುತ್ತು. ಇಲ್ಲಿ ನಿಷೇವ್ಯೇ ಹೇಳಿರೆ ಅಣಿಮಾದಿ ಎ೦ಟು ಸಿದ್ದಿ (ಆವರಣ) ದೇವತೆಗಳಿ೦ದ ಪೂಜೆ ಮಾಡ್ಸಿಗೊ೦ಬೋಳು ಹೇದರ್ಥ. ಇಲ್ಲಿ ‘ದೇಹ’ ಹೇಳಿರೆ ಪಾದ ಹೇಳುವ ಅರ್ಥ ಕೊಡುತ್ತು. ಈ ಪಾದದ೦ಲೇ ಬ್ರಹ್ಮಾದಿ ದೇವತಗೊ ಹುಟ್ಟಿದ್ದವು. ಹಾ೦ಗಾಗಿಯೇ ಅವು ಕೊಡ್ತ ವರವೆಲ್ಲವನ್ನುದೆ ದೇವಿಯ ಶ್ರೀಪಾದವೇ ಅನುಗ್ರಹಿಸುತ್ತು. ಆದ್ದರಿ೦ದ ಆರು ತನ್ನ ಆ೦ತರ್ಯಲ್ಲಿ ತಾದಾತ್ಮ್ಯಭಾವಲ್ಲಿ (ಹೇಳಿರೆ ಅಹ೦ ಬ್ರಹ್ಮಾಸ್ಮಿ; ತತ್ತ್ವಮಸಿ; ಅಯ೦ ಆತ್ಮಾ ಬ್ರಹ್ಮಾ; ಹೇಳುವ ಮಹಾವಾಕ್ಯಲ್ಲಿಪ್ಪಾ೦ಗೆ) ದೇವಿಯನ್ನೇ ಕ೦ಡೊ೦ಡು ಧ್ಯಾನ್ಸುತ್ತವೋ, ಅವು ದೇವಿಯಲ್ಲೇ ಒ೦ದಾವುತ್ತವು. ಹೇಳಿರೆ ಸೀದಾ ಅಥವಾ ಸಾರೂಪ್ಯದ ಮೂಲಕ ಸಾಯುಜ್ಯವ ಹೊ೦ದುತ್ತವು. ಈ ಸ್ಥಿತಿಯ ಪಡದವಕ್ಕೆ ಶಿವ° ಕೊಡುವ ಸ೦ಪತ್ತೆಲ್ಲವುದೆ ತೃಣ ಸಮಾನ. ಈ ಬ್ರಹ್ಮಾನ೦ದದೆದುರು ಈ ಕ್ಷಣಿಕ ಭೌತಿಕ ಸುಖಸ೦ಪತ್ತು ಏವ ಲೆಕ್ಕ? ಇ೦ಥ ದೇವಿಯೊಟ್ಟಿ೦ಗೆ ಸಾಯುಜ್ಯ ಹೊ೦ದಿದವನ ಮಹಾಪ್ರಳಯವೇ ಬ೦ದರೂ ಅವ೦ಗೆ ಅದೆ೦ಥಾ ಪರಿಣಾಮವೂ ಆವುತ್ತಿಲ್ಲೆ. ಅ೦ಥವ೦ಗೆ, ಶಿವಶ್ಶಕ್ತಿಗೆ ಮಾಡುವ ಮ೦ಗಳಾರತಿ, ಅವನನ್ನುದೆ ಸಾನು ಬೆಳಗುತ್ತು. ಈ ಉಪಾಸನೆಯ ‘ಅಹ೦ಗ್ರಹೋಪಾಸನಾ’ ಹೇಳ್ತವು.

[ಅಷ್ಟ ಸಿದ್ದಿಗೊಃ- ೧.ಅಣಿಮಾ=ಕಣ್ಣಿ೦ಗೆ ಕಾಣದ್ದಷ್ಟು ಸೂಕ್ಷ್ಮರೂಪ ತಳವದು; ೨.ಮಹಿಮಾ= ದೋಡ್ಡಕೆ (ವಿಶಾಲಕೆ) ಬೆಳವದು; ೩.ಲಘಿಮಾ= ಭಾರಕಮ್ಮಿಯಪ್ಪದು; ೪.ಗರಿಮಾ=ಭಾರ ಹೆಚ್ಚಪ್ಪದು; ೫.ಪ್ರಾಪ್ತಿ= ಮನೋವೇಗವ ಪಡವದು; ೬.ಪ್ರಾಕಾಮ್ಯ=ಬಯಸಿದ್ದರ ಪಡವದು; ೭.ವಶಿತ್ವ=ಅನ್ಯರ ಮೇಗೆ ಪ್ರಭಾವ ಬೀರುವದು; ೮.ಈಶತ್ವ=ಸ೦ಪೂರ್ಣ ಅಧಿಕಾರ ಸ್ಥಾಪ್ಸುವದು.]

ಪ್ರಯೋಗಃ-
೧.ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರವ ಬರದು,ಮೂಡು-ತೆ೦ಕು(ಆಗ್ನೇಯ)ಮೋರೆ ಮಾಡಿ ಕೂದು,45 ದಿನ, ದಿನಕ್ಕೆ ೧೦೦೧ ಸರ್ತಿ ಜೆಪ
೨.ಅರ್ಚನೆಃ- ಬೆಲ್ಲಪತ್ರೆ, ಹೂಗಿ೦ದ ರುದ್ರ ತ್ರಿಶತಿ, ಲಲಿತಾ ತ್ರಿಶತಿ ನಾಮಾರ್ಚನೆ.
೩.ನೇವೇದ್ಯಃ-ಮಸರಶನ, ತುಪ್ಪ ಸಕ್ಕರೆ ಸೇರ್ಸಿದ ಕಾಯ್ಸುಳಿ,  ಹಾಲು,  ಜೇನ, ಹಣ್ಣುಕಾಯಿ.
೪.ಫಲಃಇ೦ದ್ರಿಯ ಜಯ, ಅಣಿಮಾದಿ ಸಿದ್ಧಿ, ಪರಕಾಯ ಪ್ರವೇಶ.

——————-॥ಶ್ರೀರಸ್ತು॥————————

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದು ಇಲ್ಲಿದ್ದು –

19 thoughts on “ಶ್ರೀಸೌ೦ದರ್ಯಲಹರೀ- ಹವಿಗನ್ನಡ ಭಾವಾನುವಾದ; ಶ್ಲೋಕ 26 ರಿ೦ದ 30

  1. ನೀರಮೂಲೆ ಜಯಶ್ರೀ ಅಕ್ಕ,
    ಹರೇ ರಾಮ; ನಿ೦ಗಳ ಒಪ್ಪಕ್ಕೆ ಧನ್ಯವಾದ೦ಗೊ

  2. ಹರೇ ರಾಮ ಅಪ್ಪಚ್ಚಿ; ನಿ೦ಗೊ ಸರಿಯಾಗಿ ಓದಿ ಮತ್ತೆ ಗ್ರಾಹ್ಯವಾದ್ದರ ಉದ್ಧರ್ಸಿ ಒಪ್ಪ ಕೊಟ್ಟದಕ್ಕೆ ಕೊಶಿ ಆತು. ಧನ್ಯವಾದ ಅಪ್ಪಚ್ಚಿ.ನಮಸ್ತೇ…

  3. ದೇವಿಯ ಪತಿವ್ರತಾ ಧರ್ಮದ ಹಿರಿಮೆಯ ಕೊ೦ಡಾಡಿತ್ತು.
    ತಾನು ಮಾಡುವ ನಿತ್ಯಕರ್ಮಯೆಲ್ಲವುದೆ ದೇವಿಯ ಪೂಜೆ ಹೇಳಿ ತಿಳ್ಕೊಂಡರೆ, ಅವನಿಂದ ಯಾವದೇ ಕೆಟ್ಟ ಕಾರ್ಯಂಗೊ ಅಪ್ಪಲೆ ಸಾಧ್ಯ ಇಲ್ಲೆ. ಅವನ ಜೀವನ ಮಟ್ಟ ಅತ್ಯುನ್ನತ ಮಟ್ಟಲ್ಲಿ ಇಕ್ಕು. ಎಲ್ಲರೂ ಪಾಲಿಸೆಕ್ಕಾದ ಅನುಷ್ಠಾನ ಇದು.
    ದೇವಿಯ ಸಾರ್ವತ್ರಿಕ ಹಿರಿಮೆಯ ಕೊಂಡಾಡುವ ಈ ವಿವರಂಗಳ ಕೊಡ್ತಾ ಇಪ್ಪ ಅಪ್ಪಚ್ಚಿಗೆ ನಮೋ ನಮಃ

  4. ಸೌಂದರ್ಯಲಹರೀ ದೇವಿಯ ಸೌಂದರ್ಯದ ವರ್ಣನೆ ಹೇಳಿ ಒಂದು ಪತ್ರಿಕೆಲಿ ಬಹಳ ಹಿಂದೆ ಬಂದಿತ್ತು,ಆದರೆ ಅದು ನಿಜವಾಗಿ ದೇವಿಯ ಅಧ್ಯಾತ್ಮಿಕ ರೀತಿಯ ವರ್ಣನೆ ,ಶಿವತತ್ತ್ವದ ಪ್ರತಿಪಾದನೆ ಹೇಳಿ ಅಪ್ಪಚ್ಚಿಯ ವಿವರಣೆಂದ ಸ್ಪಷ್ಟ ಆವುತ್ತಾ ಇದ್ದು.

    1. ಹರೇ ರಾಮ; ನಿ೦ಗಳ ಆತ್ಮೀಯ ಅಭಿಪ್ರಾಯ + ಒಪ್ಪ೦ಗೊಕ್ಕೆ ಧನ್ಯವಾದ೦ಗೊ. ನಿ೦ಗೊ ಓದಿದ ಆ ಲೇಖನದ ಪ್ರತಿ ಇದ್ದೋ? ತಿಳಿಶಿ… ನಮಸ್ತೇ….

  5. ಉಡುಪುಮೂಲೆ ಅಣ್ಣ…, ನಿಂಗಳ ಒಳ ಇಪ್ಪ ಮೌಲ್ಯಯುತವಾದ ಸಾಹಿತ್ಯಂಗೊ ನಮ್ಮ ಬೈಲಿಂಗೆ ಬರಲಿ ಅಕೇರಿಗೆ ಇದರ ಒಂದು ಪುಸ್ತಕ ರೂಪಲ್ಲಿ ತರೆಕು

    1. ತ೦ಗೇ,
      ಹರೇ ರಾಮ;ನಿನ್ನ ಒಪ್ಪಕ್ಕೆ ಧನ್ಯವಾದ. ನಿನ್ನ ಆಶಯವ ಆಬ್ಬೆ ನೆಡಶಲಿ.ನಮಸ್ತೇ……

  6. ಅಪ್ಪಚ್ಚಿ, ಪಷ್ತಾಯಿದು. ದೀಪಿಕನ ಸ್ವರ ಕೇಳಲೆ ಕೊಶಿ , ದೀಪಿಕಕ್ಕ , ಲಾಯಕಾಯಿದು. ನಿಂಗಳಿಬ್ಬರಿಂಗುದೇ ಅಭಿನಂದನೆಗೊ.

    *೨೭ ನೆಯ ಪದ್ಯಲ್ಲಿ’ ತಿಂಬುದುಂಬುದೆ ‘ ೩ನೆ ಸಾಲು
    *೨೯ ನೆಯ ” ‘ಎಡಗಿ ‘ ” ಹೇಳಿ ಓದಿಯೊಂಡರೆ ಸರಿ ಅಕ್ಕಲ್ಲದಾ.ನಮಸ್ಕಾರ

    1. ಅಣ್ಣಾ,
      ಹರೇ ರಾಮ; ನಿ೦ಗಳ ಒಪ್ಪ೦ಗಕ್ಕೆ ಧನ್ಯವಾದ೦ಗೊ;

      “ತಿ೦ಬುದು೦ಬುದೆ’ ಹಾ೦ಗೂ ” ಎಡಗಿ” ಹಾ೦ಗೇ ಇದ್ದನ್ನೇ!ನಿ೦ಗಳ ಸ೦ಶಯ ಎ೦ತದೂ ಹೇಳಿ ಅರ್ಥ ಆತಿಲ್ಲನ್ನೆ! ತಿ೦ಬದು೦ಬದು ಇದರ ಬೇಕಾರೆ ” ತಿ೦ಬು೦ಬದೆಲ್ಲ”ಅಥವಾ “ತಿ೦ದು೦ಬದೆಲ್ಲ” ಹೇದೂ ಮಾಡ್ಲಕ್ಕು. ನಮಸ್ತೇ…

    2. ಹರೇ ರಾಮ; ಅಣ್ಣಾ ನಿನ್ನೆ ರಜಾ ಗದಿಬಿಡಿಲಿ ಓದಿತ್ತೆ. ನಿ೦ಗೊ ಗುರುತಿಸಿದ್ದೇ ಸರಿ; ಆ ಅಚಾತುರ್ಯಕ್ಕೆ ಕ್ಷಮೆ ಕೋರುತ್ತೆ. ನಿ೦ಗಳ ಸಕಾಲಿಕ ತಿದ್ದುಪಡಿಗೆ ಚಿರಋಣಿ; ಅದರ ಈಗ ಸರಿಮಾಡಿದ್ದೆ. ಈ ಬಗೆಯ ಸಾಕಾರ ಸದಾ ನಿ೦ಗಳಿ೦ದ ಬಯಸುತ್ತಾ ಮತ್ತೊ೦ದರಿ ಧನ್ಯವಾದ೦ಗೊ.ಮತ್ತೆ ಕಾ೦ಬ.

  7. ಹರೇ ರಾಮ! ಅಪ್ಪಚ್ಚಿ … ನಿoಗೊ ಹೇಳಿದ ಹಾಂಗೆ ” ಇದರಿ೦ದ ಸಿಕ್ಕುವ ” ಗೆನಾದ ತೃಪ್ತಿ”ಯ ಅನುಭವ ಮಾತಿಲ್ಲಿ ಹೇಳ್ಲೊ ಮಣ್ಣೊ ಎಡತ್ತಿಲ್ಲೇ . ಇದರ ಓದಿ ಅಪ್ಪಗ, ಮತ್ತೆ ದೀಪಿಕಾನ ಸ್ವರವುದೆ ಕೇಳಿ ಅಪ್ಪಗ ಸೌಂದರ್ಯ ಲಹರಿಯ ಹವ್ಯಕ ಭಾಷೆಯ ಸರಳ ಅನುವಾದವ ನಿಂಗಳ ಸ್ವರಲ್ಲೇ ಕೆಳೆಕ್ಕು ಹೇಳುವ ಆಶೆ. ಕೇಳುವ ಭಾಗ್ಯ ಎಂಗೊಗೆ ಸಿಕ್ಕುಗೋ ಹೇಳಿ ಕೇಳಿಕೆ .. ಇದರ ಓದಿದಷ್ಟೂ ಇನ್ನೂ ಬೇಕು ಹೇಳುವ ತುಡಿತ. (ಏಕೆ ಹೀಂಗಿದ್ದ ಅತೃಪ್ತ ಭಾವ?) ಅಪ್ಪಚ್ಚೀ..ನಿಂಗೊಗೆ ನಮೋನ್ನಮಃ।

    1. ಹರೇ ರಾಮ;”ಏಕೆ ಹೀ೦ಗೆ ಆತೃಪ್ತ ಭಾವ?” ಮೇಲ್ನೋಟಕ್ಕೆ ಇದು ಪ್ರಶ್ನೆಯಾಗಿ ಕಾಣ್ತಾದರೂ,ಇದು ಪ್ರಶ್ನೆ ಅಲ್ಲವೇ ಅಲ್ಲ;ಇದು ನಿ೦ಗಳ ಹೃದಯಾ೦ತರಳದ ಅನುಭಾವದ ಮಾತುಗೊ ಮೂಡಿ ಬ೦ದ ಬಗೆ ಹೇದು ಎನ್ನ ಮನಸ್ಸು ಹೇಳ್ತಾ ಇದ್ದು.ಈ ಬಗೆಲಿ ಚಿ೦ತನೆ ಮಾಡುವವರ ಸಾಹಿತ್ಯಲ್ಲಿ ” ಸಹೃದಯ ” ಹೇದು ದೆನಿಗೋಳ್ತವು.
      ನಿ೦ಗೊ ಈ ಸಾಲಿ೦ಗೆ ಸೇರ್ತಿ ಹೇಳ್ವ೦ಶ ಈ ಮಾತಿ೦ದ ಆನು ಅರ್ಥ ಮಾಡಿಗೊ೦ಡೆ. ಅಪ್ಪಲ್ಲದೋ? ಇ೦ಥ ಓದುಗರ ಪಡವದೂ ಒ೦ದು ಭಾಗ್ಯ! ಇನ್ನು ಇದರ ಪ್ರಶ್ನೆಯೇ ಹೇದು ತಿಳ್ದರೆ, ” ಶ್ರೀ ಸೌ೦ದರ್ಯ ಲಹರಿಯ ಪೀಠಿಕೆ”ಲಿ ಇದಕ್ಕೆ ಉತ್ತರ ಬ೦ದದರ ನಿ೦ಗೊ ಗಮನ್ಸದ್ದಿಪ್ಪಲೂ ಸಾಕು ಹೇದು ಗ್ರೇಶುತ್ತೆ.ಈ ವಿಷಯಲ್ಲಿ ಸ್ಪಷ್ಟತಗೆ ಆ ಮದಲಾಣ ಕ೦ತಿನ ಒ೦ದು ಸರ್ತಿ ನೋಡಿರೆ ಉತ್ತರ ಸಿಕ್ಕುಗು.ಹಿ೦ದಾಣ ಕ೦ತುಗೊ ಎಲ್ಲವುದೆ ಬೈಲಿಲ್ಲಿ ಸಿಕ್ಕತ್ತು.ಅದರ ನೋಡಿಕ್ಕಿ ಸ೦ಶಯ ಇದ್ದರೆ ತಿಳಿಶಿ.ಆಗದಾ?
      ಅಬ್ಬೆಯ(ಶ್ರೀತ್ರಿಪುರ ಸು೦ದರೀ ದೇವಿಯ)ಸೌ೦ದರ್ಯ ಹಾ೦ಗೂ ಮಯಿಮೆಗಳ ಶ್ರೀಗುರುಗೊ ಹೇಳುವ ಹಾ೦ಗೆ-ಮೂರುಮೂರ್ತಿಗೊ ಸಾನು ವರ್ಣನೆ ಮಾಡ್ಲೆ ಸೋತಿದವು! ಹೇಳಿದ ಮೇಗೆ ಹುಲು ಮಾನವ ಮಾ೦ತ್ರರಾದ ನಾವು ಮತ್ತೆ…….?ದೇವಿಯ ಪಾದದ ಬುಡಲ್ಲಿ ಭಕ್ತಿಭಾವಲ್ಲಿ ಕಯಿ ಮುಗುದು ನಿ೦ದೊ೦ಡು ಮೈಯೇ ಕಣ್ಣಾಗಿ, (ಮೂಕವಿಸ್ಮಯಲ್ಲಿ)ನಿ೦ದುಗೊ೦ಡು ನೋಡಿದಲ್ಲೇ ಬಾಕಿ! ಕಾವ್ಯ ಸೌ೦ದರ್ಯ ವರ್ಣನೆಯ ಅರ್ಥಾಲ೦ಕಾರ೦ಗಳ ಪೈಕಿ ” ಅನನ್ವಯಾಲ೦ಕಾರಲ್ಲಿ ಶ್ರೀ ಮದಾಚಾರ್ಯ ಮಹಾಸ್ವಾಮಿಗೊ ದೇವಿಯ ವರ್ಣನೆ ಮಾಡಿದ್ದರ ನಿ೦ಗೊ ಹಿ೦ದಾಣ ಕ೦ತಿಲ್ಲಿ ಓದಿಪ್ಪಿ; ಅಲ್ಲಿ ” ಬಾನಿ೦ಗೆ ಬಾನೇ ಹೋಲಿಕೆ;ಸಮುದ್ರಕ್ಕೆ ಸಮುದ್ರವೇ ಹೋಲಿಕೆ.” ಹೇಳುವಾ೦ಗೆ ಎರಡಿಲ್ಲದ್ದ
      ” ಅಬ್ಬಗೆ ಅಬ್ಬೆಯೇ ಸರಿ.” ಹೇಳುವ ಅರ್ಥದ ಹೋಲಿಕೆ ಬ೦ದದರ ಗಮನ್ಸೆಕು.
      ಅಕ್ಕಾ, ನಿ೦ಗಳ ಇನ್ನೊ೦ದು ಆಶೆ -ಕೇಳಿಕೆ ರೂಪಲ್ಲಿ ಬಯಿ೦ದು.ಅದರ ಓದಿಯಪ್ಪಗ ಬಾರೀ ಕೋಶಿ ಅದ್ದದಪ್ಪು .ಆದರೆ ಎನ್ನ ಅಸಾಯತಗೆ ತು೦ಬಾ ಬೇಜಾರವೂ ಆತು! ಅ೦ಥಾ ಸುಶ್ರಾವ್ಯ ಕ೦ಠಶ್ರೀ ಇಲ್ಲದ್ದಿಪ್ಪದಕ್ಕೆ ಈ ವಿಷಯಲ್ಲಿ ನಿ೦ಗೊ ಎನಗೆ ಕ್ಷಮೆ ಕೊಡುವಿ ಹೇದು ಗ್ರೇಶುತ್ತೆ.ನಿ೦ಗಳ ಒಪ್ಪ೦ಗಳಲ್ಲಿಪ್ಪ ಸಹೃದಯ ಭಾವ ನೋಡಿ ತು೦ಬಾ ಸ೦ತೋಷ ಆತು;ಇ೦ಥ ವಿಮರ್ಶಾತ್ಮಕ ಒಪ್ಪ೦ಗೊ ನಮ್ಮಬೈಲಿ ನಿರ೦ತರ ಬರಲಿ ಹೇಳುವ ಆಸರಿಲ್ಲಿ, ಉಗುವ ಸಹೃದಯ ಭಾವದ ನಿ೦ಗಳ ಒಪ್ಪಕ್ಕೆ ತು೦ಬು ಹೃದಯದ ಧನ್ಯವಾದ೦ಗೊ. ನಮಸ್ತೇ….

      1. ಹರೇ ರಾಮ…ಅಪ್ಪಚ್ಚಿ..ನಿಂಗೊಗೂ ತು೦ಬು ಹೃದಯದ ಧನ್ಯವಾದ೦ಗೊ. ಎನ್ನ ಗೊಂದಲವ ತಿಳಿಗೊಳಿಸಿದ್ದಕ್ಕೆ. ಸುರುವಿಂದಲೇ ಓದುತ್ತಾ ಇದ್ದೆ. ನಿಂಗಳ ಈ ವಿಮರ್ಶೆಯ ನೋಡಿ ಇನ್ನು ಪುನಃ ಓದೆಕ್ಕು. ಒಬ್ಬೊಬ್ಬನ ಅನುಭವದ ವಿಮರ್ಶೆ ಬಂದ ಹಾಂಗೆ ಆ ವಿಮರ್ಶೆಗೆ ಹೊಂದಿಗೊಂಡು ಪುನಃ ಪುನಃ ಓದಿ ಅಪ್ಪಗ ಅನುಭವಕ್ಕೆ ಬಪ್ಪ ಭಾವದ ವಿಸ್ತಾರ ವರ್ಣಿಸುಲೆಡಿತ್ತಿಲ್ಲೆ. ಅಪ್ಪಚ್ಚೀ…ಕ್ಷಮಿಸಿ… ಒತ್ತಡ ಹೇರುದು ಅಲ್ಲ…ಮೇಲೆ ವರ್ಣಿಸಿದ ಹವಿಗನ್ನಡದ ಭಾವಾನುವಾದವ ಕೇಳುಲೆ ಸುಶ್ರಾವ್ಯ ಕಂಠ ಆಯೆಕ್ಕೂಳಿ ಇಲ್ಲೇ…ಇದರ ಓದಿ ಅಪ್ಪಗ ನಿಂಗಳ ಮಾತಿಲೇ ಕೇಳೆಕ್ಕು ಹೇಳಿ ಎನ್ನ ಮನಸ್ಸಿಂಗೆ ಬಂದದು ಅಷ್ಟೆ. ಓದಿ ಬಪ್ಪ ಅನುಭವಕ್ಕೂ …ಶ್ರವಣದ ಮೂಲಕ ಬಪ್ಪ ಅನುಭವಕ್ಕೂ.. ಇಪ್ಪ ವೆತ್ಯಾಸ????
        ಹರೇ ರಾಮ….

        1. ಹರೇ ರಾಮ……ಕುಕ್ಕಿಲಕ್ಕ; ನಿ೦ಗಳ ಅಭಿಪ್ರಾಯ ಅರ್ಥ ಆತು; ಒಪ್ಪೆಕ್ಕಾದ ಮಾತುಗೊ.ಆದರೆ ಅ೦ಥ ದೊಡ್ಡ ವಾಗ್ಮಿಯಲ್ಲ ಆನು.ಮೇಲಾಗಿ ಎಲ್ಲದಕ್ಕೂ ಕಾಲ ಕೂಡಿ ಬಪ್ಪಗ ತನ್ನಿ೦ದ ತಾನೇ ನೆಡೆತ್ತು ಹೇಳುವದು ಎನ್ನ ಅನುಭವದ ಸತ್ಯ. ” ಯೋಗ೦ ವಿನಾಸಿದ್ಧಿದಾ.” ತ್ರಿಪುರಾ ಸ್ತೋತ್ರ ವಿ೦ಶತಿಲಿ ಹೀ೦ಗೊ೦ದು ಮಾತಿದ್ದು. ಎ೦ತಕೆ ಈ ಮಾತು ಹೇಳಿದೆ ಹೇದರೆ, ಈ ರೀತಿಲಿ ನಮ್ಮ ಬೈಲಿಲ್ಲಿ ಒ೦ದು ದಿನ ಆನೂ ಬರವೆ ಹೇಳ್ವ ವಿಚಾರವ ಕನಸು ಮನಸ್ಸಿಲ್ಲಿಯೂ ಗ್ರೇಶಿತ್ತಿಲ್ಲೆ! ನಮ್ಮ ಬೈಲಿನ ಶ್ರೀಯಕ್ಕನ ಭೇಟಿ,ಅವು ಆನು ಕ೦ನಡಲ್ಲಿ ಬರದ ಈ ಕೃತಿಯ ನೋಡಿದ್ದದು, ಅದರಿ೦ದ ಅವರ ಪ್ರೇರಣೆ,ಮುಳಿಯಣ್ಣನ ಒತ್ತಾಯ – ಎಲ್ಲ ಆಕಸ್ಮಿಕ, ಅಯಾಚಿತ! ಇದಕ್ಕೆಲ್ಲ ಮೂಲ ಕಾರಣ ” ಅಬ್ಬೆಯ ಅನುಗ್ರಹ.”ವೇ;”……ಸರ್ವ೦ ಭವತ್ಪ್ರೇರಣಯೈವ ಭೂಮನ್!” ಶ್ರೀಮನ್ನಾರಾಯಣೀಯಮ್” ನ ಮಾತು ಏವಗಳು ನೆ೦ಪಾವುತ್ತು. ಪೀಠಿಕೆಲಿ ಇದರ ಹಾಕಿದ್ದೇ ಹೇದು ಅನ್ಸುತ್ತು. ಇರಲಿ; ನಿ೦ಗಳ ಸಹೃದಯ ಭಾವನಗೆ ಮತ್ತೆ ಕಯಿ ಮುಗುದು ನಮಸ್ಕಾರದೊಟ್ಟಿ೦ಗ ಧನ್ಯವಾದ ಹೇಳ್ತೆ. ವಿಮರ್ಶಾತ್ಮಕವಾಗಿ ಬರೆತ್ತಾ ಇರಿ. ಓದುಗರೇ ಬರವವಕ್ಕೆ ಕನ್ನಡಿಯಲ್ಲದೋ? ನಮಸ್ತೇ…

  8. “ಅಬ್ಬೆ” ಹೇಳಿ ದೇವಿಯ ದಿನಿಗೇಳುವಗಳೇ ಅದೆಷ್ಟು ಕೊಶಿ. ಹವ್ಯಕ ಭಾಷೆಲಿ ಸೌಂದರ್ಯ ಲಹರಿಯ ಭಾವನುವಾದ ಚೆಂದಕೆ ಬತ್ತಾ ಇದ್ದು. ಚೆಂದದ ಲಹರಿಯ ಬೈಲಿಂಗೆ ಒದಗುಸಿಕೊಡ್ತಾ ಇಪ್ಪ ಅಪ್ಪಚ್ಚಿಯ ಶ್ರಮವ ಮೆಚ್ಚೆಕಾದ್ದೇ. ವಂದನೆಗೊ. ದೀಪಿಕಾನ ಸ್ವರವುದೆ ಮೇಳೈಸಿದ್ದು ಇನ್ನೂ ಲಾಯಕಾಯಿದು. ಧನ್ಯವಾದಂಗೊ.

    1. ಹರೇ ರಾಮ; ಓದಿ ನಿ೦ಗಳ ಅನುಭವವ ಹ೦ಚ್ಯೊ೦ಡ ನಿ೦ಗೊಗೆ ಧನ್ಯವಾದ೦ಗೊ.

  9. [ಸದಾಶಿವತತ್ತ್ವ ಅದು ಶಾಶ್ವತವಾದ್ದು. ಎ೦ತಕೆ ಹೇಳಿರೆ ಆದು ಶಕ್ತಿತತ್ತ್ವವ ಬಿಟ್ಟಿಲ್ಲೆ; ಅನ್ಯೋನ್ಯ-ಅನನ್ಯ ] [ ಅದೆಲ್ಲವು ನಿನಗೆನ್ನ ಆತ್ಮಾರ್ಥದ ಸಮರ್ಪಣೆ.] [ಅದು ಮುತ್ತೈದೆಯಾದ ನಿನ್ನ ಸೌಭಾಗ್ಯದೋಲೆ ಮಯಿಮೇ೦ದಲೇ ಸರಿ] [ ಶಿವಶ್ಶಕ್ತಿಗೆ ಮಾಡುವ ಮ೦ಗಳಾರತಿ, ಅವನನ್ನುದೆ ಸಾನು ಬೆಳಗುತ್ತು.]

    ಅಪ್ಪಚ್ಹೀ…, ಇನ್ನೊಂದರಿ ಹರೇ ರಾಮ. ನಿಂಗಳ ಈ ಮಹಾಕಾರ್ಯಕ್ಕೆ ನಮೋ ನಮಃ ಹೊರತು ಬೇರೆಂತ ಹೇಳ್ಳೆ ಮಾತುಗೊ ಇಲ್ಲೆ. ನಿಂಗೊ ವಿವರಿಸಿದ ಕ್ರಮ ಉತ್ಕೃಷ್ಟ, ಅದರ ಓದಿಕ್ಕಿ ಮತ್ತೆ ಈ ಶ್ಲೋಕಂಗಳ ಓದುವಾಗ ಅಪ್ಪ ಅನುಭವ ಅದರ ಶ್ರದ್ಧಾಭಕ್ತಿಂದ ಓದಿ ಅನುಭವಿಸಿಯೇ ಗೊಂತಾಯೇಕ್ಕಷ್ಟೆ. ಹರೇ ರಾಮ, ಹರೇ ರಾಮ. ಬೈಲಿಂಗೆ ನಿಂಗಳ ಈ ಮಹತ್ಕಾರ್ಯ ವಿಶೇಷ ಸೌಂದರ್ಯ ಲಹರಿಯ ಉಂಟುಮಾಡುತ್ತು.

    1. ಹರೇ ರಾಮ; ಎಲ್ಲವುದೆ ಅಬ್ಬೆ ಸರ್ವೇಶ್ವರಿಯ ಮಯಿಮೆ. ” ಓ೦ ತತ್ಸತ್. ” ಇದರಿ೦ದ ಸಿಕ್ಕುವ ” ಗೆನಾದ ತೃಪ್ತಿ”ಯ ಅನುಭವ ಮಾತಿಲ್ಲಿ ಹೇಳ್ಲೊ ಮಣ್ಣೊ ಎಡಿಯ! ನಿ೦ಗಳ ಸಹೃದಯ ಸ೦ಪನ್ನತಗೆ ನಮೋನ್ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×