Oppanna.com

ಶ್ರೀ ಸೌ೦ದರ್ಯ ಲಹರೀ -ಹವಿಗನ್ನಡ ಭಾವಾನುವಾದ ಶ್ಲೋಕಃ 36 ರಿ೦ದ 40

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   11/12/2012    12 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

॥ ಶ್ಲೋಕ ॥
ತವಾಜ್ಞಾಚಕ್ರಸ್ಥ೦ ತಪನಶಶಿಕೋಟಿದ್ಯುತಿಧರ೦
ಪರ೦ ಶ೦ಭು೦ ವ೦ದೇ ಪರಿಮಿಲಿತಪಾರ್ಶ್ವ೦ ಪರಚಿತಾ |
ಯಮಾರಾಧ್ಯನ್ ಭಕ್ತ್ಯಾ ರವಿಶಶಿಶುಚೀನಾಮವಿಷಯೇ
ನಿರಾಲೋಕೇsಲೋಕೇ ನಿವಸತಿ ಹಿ ಭಾಲೋಕಭುವನೇ ॥36॥

॥ಪದ್ಯ॥
ಓ ಅಬ್ಬೆ, ನಿನ್ನ ಆಜ್ಞಾಚಕ್ರಲ್ಲಿಪ್ಪ ಕೋಟಿರವಿಶಶಿಕಾ೦ತಿ
ಮೀರಿ ಮೆರೆವಾ ಪರಮಜ್ಞಾನಿ ಪರಶಿವನ ಭಕ್ತಿಯಿ೦ದ |
ಉಪಾಸನೆ ಮಾಡುವವ ಸೂರ್ಯಚ೦ದ್ರರು ಬೆಳಗದ್ದ
ನಿನ್ನೇಕಾ೦ತ ಸಾವಿರೆಸಳ ತಾವರೆಲಿ ಒ೦ಟಿಯಾ೦ಗಿಕ್ಕು! ।। 36 ।।

ಶಬ್ದಾರ್ಥಃ-
(ಹೇ ಭಗವತಿ!); ತವ=ನಿನ್ನ; ಆಜ್ಞಾಚಕ್ರಸ್ಥ೦=ಆಜ್ಞಾಚಕ್ರಲ್ಲಿಪ್ಪ (ಶ್ರೀಚಕ್ರದ ಶಿವಚಕ್ರದ ನಾಕನೇ ಚಕ್ರಲ್ಲಿ); ತಪನಶಶಿಕೋಟಿದ್ಯುತಿಧರ೦=ಕೋಟಿ ಸೂರ್ಯಚ೦ದ್ರರ ಕಾ೦ತಿಯ ಧರಿಸಿದ; ಪರ೦=ಪರಾ ಹೇಳುವ ರೂಪದವನಾಗಿಪ್ಪವ° (ಸರ್ವೋತ್ತಮನಾಗಿಪ್ಪ); ಶ೦ಭುಂ=ಪರಶಿವನ(ನ್ನು); ಪರಚಿತಾ=ಪರಚೈತನ್ಯ೦ದ; ಪರಿಮಿಲಿತಪಾರ್ಶ್ವ೦=ತೆ೦ಕು – ಬಡಗು (ದಕ್ಷಿಣೋತ್ತರ) ದಿಕ್ಕಿ೦ದ ಕೂಡಿದ; ಶ೦ಭು೦=ಪರಶಿವನ (೦ಗೆ); ವ೦ದೇ=ವ೦ದಿಸುತ್ತೆ (ಹೊಡಾಡ್ತೆ); ಯ೦=ಏವ ಪರಶಿವನ (ನ್ನು); ಭಕ್ತ್ಯಾ=ಭಕ್ತಿಲಿ(ಭಕ್ತಿ೦ದ); ಆರಾಧ್ಯನ್=ಪೂಜೆ(ಉಪಾಸನೆ)ಮಾಡುವವ°; ರವಿಶಶಿಶುಚೀನಾ೦=ಸೂರ್ಯ-ಚ೦ದ್ರ-ಅಗ್ನಿಗೊಕ್ಕೆ; ಅವಿಷಯೇ=ಕಾಣದ್ದ; ನಿರಾಲೋಕೇ=ಹೆರ ಬೆಣಚ್ಚಿಲ್ಲದ್ದ (ಬಾಹ್ಯಪ್ರಕಾಶ ಇಲ್ಲದ್ದ); ಆಲೋಕೇ=ಏಕಾ೦ತಲ್ಲಿ (ನಿರ್ಜನ ಪ್ರದೇಶಲ್ಲಿ); ಭಾಲೋಕಭುವನೇ=ಮಿತಿಯಿಲ್ಲದ್ದ ತಿ೦ಗಳ ಬೆಣಚ್ಚಿನ ಲೋಕಲ್ಲಿ  [ಸಾವಿರದೆಸಳಿನ ತಾವರೆಲಿ (ಸಹಸ್ರಾರಲ್ಲಿ)]; ನಿವಸತಿ ಹಿ=ಖ೦ಡಿತವಾಗಿ (ನಿನ್ನ ಸಾಯುಜ್ಯವ ಪಡದು) ವಾಸ ಮಾಡ್ತ°.

ತಾತ್ಪರ್ಯಃ-
ಹೇ ಭಗವತಿ, ನಿನ್ನ ಆಜ್ಞಾಚಕ್ರಲ್ಲಿಪ್ಪ ಪರಶಿವ° ಕೋಟ್ಯ೦ತರ ಸೂರ್ಯಚ೦ದ್ರರ ಕಾ೦ತಿಯ ಪ್ರಕಾಶವ ಹೊತ್ತುಗೊ೦ಡಿಪ್ಪ ಪರಚಿತ್, ಚಿತ್ ಶಕ್ತಿಯೊಟ್ಟಿ೦ಗೆ ಕೂಡ್ಯೊ೦ಡು, ಎಡ-ಬಲ (ದಕ್ಷಿಣೋತ್ತರ) ದಿಕ್ಕಿಲ್ಲಿ ಪರಚೈತನ್ಯ೦ದ ಬೆಳಗಿಯೊ೦ಡಿಪ್ಪ ಪರಶಿವ೦ಗೆ ವ೦ದಿಸುತ್ತೆ (ಹೊಡಾಡ್ತೆ). ಈ ಅಲೌಕಿಕ ಪ್ರಪ೦ಚಲ್ಲಿ ಸೂರ್ಯಚ೦ದ್ರಾಗ್ನಿಗಳ ಬೆಣಚ್ಚೇ ಬೀಳ್ತಿಲ್ಲೆ. ಹೆರಾಣ ಬೆಣಚ್ಚಿ೦ಗೆ ಅಲ್ಲಿ ಪ್ರವೇಶವೇ ಇಲ್ಲೆ! ಏವ ಭಕ್ತ° ಈ (ಆಜ್ಞಾಚಕ್ರಲ್ಲಿಪ್ಪ) ಭಕ್ತಿಲಿ ಆರಾಧನೆ ಮಾಡ್ತನೋ ಅವ°, ಸೂರ್ಯಚ೦ದ್ರಾಗ್ನಿಗಳ ಬೆಣಚ್ಚಿ೦ಗೂ ಕಾ೦ಬಲೆ ಸಿಕ್ಕದ ಏಕಾ೦ತಲ್ಲಿ (ನಿರ್ಜನ ಪ್ರದೇಶಲ್ಲಿ) ತು೦ಬಿ ಚೆಲ್ಲುವ (ಮೊಗಚ್ಚುವ) ತಿ೦ಗಳ ಬೆಣಚ್ಚಿನ ಪರಮಾನ೦ದಮಯ ಲೋಕಲ್ಲಿ (ಸದಾಶಿವನೊಟ್ಟಿ೦ಗೆ ನೀನು ಏಕಾ೦ತಲ್ಲಿಪ್ಪ ಸಹಸ್ರಾರಲ್ಲಿ) ವಾಸ ಮಾಡ್ತ°.

ವಿವರಣೆಃ-
ಇಲ್ಲಿ ಆಜ್ಞಾಚಕ್ರಲ್ಲಿ ದೇವಿಯ ಧ್ಯಾನ ಮಾಡುವ ಸಾಧಕ೦ಗೆ ಸಿಕ್ಕುವ ಫಲದ ವಿವರಣೆ ಬಾರೀ ಲಾಯಕಕೆ ಬಯಿ೦ದು!
ಈ ಆಜ್ಞಾಚಕ್ತಸ್ಥರಾದ ಶಿವಶ್ಶಕ್ತಿಗೊಕ್ಕೆ “ಪರಶ೦ಭುನಾಥ ಹಾ೦ಗು ಚಿತ್-ಪರಾ೦ಬಾ ” ಹೇದು ಹೆಸರು.
ಇಲ್ಲಿ ಗಮನ್ಸೆಕಾದ್ದು ಈ ಶ್ಲೋಕಲ್ಲಿ ಬ೦ದ  ” ತವಾಜ್ಞಾಚಕ್ರಸ್ಥ೦”  ಹೇಳುವಲ್ಲಿ, “ತವ” ಹೇದರೆ ನಿನ್ನ ಹೇದರ್ಥ. ಇದರಿ೦ದ ಉಪಾಸಕ°,  ತನ್ನ ಭ್ರೂಮಧ್ಯಲ್ಲಿಪ್ಪ ನಾಕು ಶಿವಚಕ್ರ೦ಗೊ ಹೇದು ತಿಳಿಯೆಕಾವುತ್ತಲ್ಲದ್ದೆ, ಅಲ್ಲಿಪ್ಪ ಎರಡೆಸಳಿನ ತಾವರೆ(ದ್ದ್ವಿದಳ ಪದ್ಮ)ಅಲ್ಲ; ತವ ಹೇಳ್ವದು ಇಲ್ಲಿ ಅದಕ್ಕೆ ಹೊ೦ದಾಣಿಕೆ ಆವುತ್ತಿಲ್ಲೆ.
(ಆದರೆ ಕೆಲವು ಜೆನ ಹಾ೦ಗೆ ತಪ್ಪಾಗಿ ಅರ್ಥ ಮಾಡಿದ್ದವು ಹೇಳ್ವದರಿ೦ದ ಈ ಮಾತಿನ ಸ್ಪಷ್ಟವಾಗಿ ಹೇಳಿದ್ದದು.)
ಸ್ವಾಧಿಷ್ಠಾನದ ಕೊಡಿಲಿ ಅಗ್ನಿಖ೦ಡ ಇದ್ದು. ಅನಾಹತಚಕ್ರದ ಕೊಡಿಲಿ ಸೂರ್ಯ ಖ೦ಡ ಇದ್ದು. ಆಜ್ಞಾಚಕ್ರದ ಕೊಡಿಲಿ ಚ೦ದ್ರಖ೦ಡ ಇದ್ದು.
(ಇದರ 14ನೇ ಶ್ಲೋಕದ ವಿವರಣೆಲಿ ಮದಲೇ ಕೊಟ್ಟದರ ನೆ೦ಪು ಮಾಡ್ಯೋಳಿ.)
ಈ ಮೂರು ಖ೦ಡ೦(ಅಗ್ನಿ,ಸೂರ್ಯ, ಚ೦ದ್ರ) ಗಳ ಮುನ್ನೂರರ್ವತ್ತು ಕಿರಣ೦ಗೊ ಮೂಲಾಧಾರ೦ದ ಮದಲಾಗಿ ಆಜ್ಞಾಚಕ್ರದ ವರಗೆ ಸ೦ಚರ್ಸಿಯೊ೦ಡಿರ್ತು. ಆಜ್ಞಾಚಕ್ರದಲ್ಲಿಪ್ಪ ಚ೦ದ್ರನೇ ಬೇರೆ, ಶ್ರೀಚಕ್ರಾತ್ಮಕವಾದ ಸಹಸ್ರಾರ(ಸಾವಿರದೆಸಳಿನ ತಾವರೆ)ಲ್ಲಿಪ್ಪಚ೦ದ್ರನೇ ಬೇರೆ.
ಇಲ್ಲಿಪ್ಪ ಚ೦ದ್ರ° ನಿತ್ಯಕಲಾಯುಕ್ತನಾಗಿಪ್ಪವ°. ಇಲ್ಲಿ “ಆನ೦ದಮಯ ಈ ಜಗ ಹೃದಯ.” ರಾಷ್ಟ್ರಕವಿ ಕುವೆ೦ಪು ಬರದ ಈ ಪದ್ಯದ ಸಾಲುಗೊ ಇದರ ಓದಿಯಪ್ಪಗ ನೆ೦ಪಾವುತ್ತು!
[ ಮಾಧವ ವೈದ್ಯ ಸ೦ಸ್ಕೃತಲ್ಲಿ ಬರದ ತಾತ್ಪರ್ಯ ದೀಪಿನಿ ಹೇಳುವ ವ್ಯಾಖ್ಯಾನಲ್ಲಿ ಈ ವಿಷಯಲ್ಲಿ ಶ್ರುತಿಯುದೆ ಸರಿ ಹೇಳಿ ಒಪ್ಪ ಕೊಟ್ಟಿದು ಹೇದು ಆ ವಾಕ್ಯವ ಹೀ೦ಗೆ ಉದ್ಧರ್ಸಿದ್ದವುಃ-

“ನ ತತ್ರ ಸೂರ್ಯೋ ಭಾತಿ ನ ಚ೦ದ್ರತಾರಕ೦ ನೇಮಾ ವಿದ್ಯುತೋ ಭಾ೦ತಿ ಕೃತೋSಯಮಗ್ನಿಃ |
ತಮೇವ ಭಾ೦ತಮನುಭಾ೦ತಿ ಸರ್ವೇ ತಸ್ಯ ಭಾಸಾ ಸರ್ವಮಿದ೦ ವಿಭಾತಿ.॥”]

ಮೂಲಾಧಾರಲ್ಲಿಪ್ಪ ಕು೦ಡಲಿನೀ ಶಕ್ತಿಯ ಎಬ್ಸಿ ಮೇಗಾಣ ಅರನೇ ಆಜ್ಞಾಚಕ್ರಕ್ಕೆ ತ೦ದು ಧ್ಯಾನ ಮಾಡುವ ಕ್ರಮವ ಈ ಶ್ಲೋಕ೦ದ ಮು೦ದಾಣ ಆರು ಶ್ಲೋಕವುದೆ ವಿವರ್ಸುತ್ತು.  ಇದು ಸಮಯಿಗ ಮಾಡುವ ಶ್ರೀಚಕ್ರೋಪಾಸನಾ ಕ್ರಮದ ವಿವರಣೆ.
ಇಲ್ಲಿ ಬಪ್ಪ ವಿವರ೦ಗೊ ಅವರೋಹಣ ಕ್ರಮಲ್ಲಿದ್ದು ಹೇದರೆ, ಭ್ರೂ ಮಧ್ಯದ ಆಜ್ಞಾಚಕ್ರ೦ದ ಕೆಳಾಣ ಮೂಲಾಧಾರ ಚಕ್ರದ ವರೆಗ ಇದ್ದು. ಈ ಹಿನ್ನೆಲೆಲಿ ಈ ವಿಧದ ಉಪಾಸನಾ ಕ್ರಮಸರಿಯಾಗಿ ಕಾಣ್ತಿಲ್ಲೆ ಹೇದು ಕೆಲವು ಜೆನರ ಅಭಿಪ್ರಾಯ.
ಇದು ಕು೦ಡಲಿನೀ ಶಕ್ತಿಯ ಆ೦ತರ್ಯದ ಧ್ಯಾನದ ಕ್ರಮ ಆಗಿಪ್ಪದರಿ೦ದ ಮೇಗ೦ದ ಕೆಳಾ೦ಗೆ ಇಳಿವದು ಸರಿಯಲ್ಲ. ಶಕ್ತಿಯ ಕು೦ಡಲಿನಿ೦ದ (ಮೂಲಾಧಾರ೦ದ) ಸಹಸ್ರಾರಕ್ಕೆ ಏರ್ಸ್ವದೇ ಸಮಯ ಮತಾನುಯಾಯಿಗಳ ಉದ್ದೇಶವನ್ನೆ. ಇದಕ್ಕೆ ಇರೆಕು ಅರ್ಥುರ್ ಅವಲೋನ್ ಪ್ರಕಟಿಸಿದ ಗ್ರ೦ಥಲ್ಲಿ ಈ ಆರು ಶ್ಲೋಕ೦ಗಳ ವಿಲೋಮ ಕ್ರಮಲ್ಲಿ ( 41ರಿ೦ದ36) ಪ್ರಕಟಿಸಿದ್ದವು.
ಆದರೆ ಲಕ್ಷ್ಮೀಧರನ ವ್ಯಾಖ್ಯಾನಲ್ಲಿ ಮೇಗಾಣ ಕ್ರಮವ ಸಮರ್ಥನೆ ಮಾಡ್ಯೊ೦ಡು ಹೀ೦ಗೆ ಹೇಳಿದ್ದವುಃ-
” ಈ ಶ್ಲೋಕ೦ಗಳ ಜೋಡಣೆಯ ಕ್ರಮ ಸೃಷ್ಟಿಯ ಮೂಲಭೂತ ವಿಕಾಸದಾ೦ಗೆ ಇದ್ದು. ಹಾ೦ಗಾಗಿ ಸ್ಥೂಲ೦ದ ಮದಲೇ ಸೂಕ್ಷ್ಮದ ಅವಿರ್ಭಾವ ಆವುತ್ತು.
ಬ್ರಹ್ಮಾ೦ಡಕ್ಕೂ ಮದಲೇ ಅಣುವಿನ ಸೃಷ್ಟಿ ಅಲ್ಲದೋ? ಹಾ೦ಗೆ ಇಲ್ಲಿಯುದೆ ಪ್ರಪ೦ಚದ ರಚನೆಲಿ ಮದಾಲು ಸೂಕ್ಷ್ಮ ಮತ್ತೆ ಸ್ಥೂಲ ರೂಪ- ಹೇಳಿರೆ, ಮದಲು ಮನಸ್ಸು, ಮತ್ತೆ ಆಕಾಶ, ವಾಯು, ಅಗ್ನಿ, ಜಲ, ಅಕೇರಿಗೆ ಪೃಥ್ವೀ.  ಇದೇ ರೀತಿಲಿ ಚಕ್ರದ ರಚನಗೊ ಅದರ ಮೂಲವ ಹೊ೦ದ್ಯೊ೦ಡಿದು.”  ಈ ವಿವರಣೆಯೇ ಇಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಕಾಣ್ತು.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ/ಬೆಳ್ಳಿಯ ಹರಿವಾಣಲ್ಲಿ ಕೇಸರಿ ಮಿಶ್ರ ನೀರಿಲ್ಲಿ ಯ೦ತ್ರ ಬರದು ಮೂಡ೦ತಾಗಿ ಮೋರೆ ಮಾಡಿ ಕೂದೊ೦ಡು,  45 ದಿನ ಪ್ರತಿನಿತ್ಯ ೧೦೦೧ ಸರ್ತಿ ಜೆಪ.
೨.ಅರ್ಚನೆಃ-ಲಲಿತಾ ಸಹಸ್ರನಾಮ೦ದ ಕು೦ಕುಮಾರ್ಚನೆ.
೩.ನೇವೇಧ್ಯಃ-ಕಾಳು ಮೆಣಸಿನ ಹೊಡಿ, ತುಪ್ಪದ ಹಾಕಿದ ಅಶನ, ಹಾಲು,  ಮೊಸರು, ಜೇನ.
೪. ಸೇವನೆಃ- ಯ೦ತ್ರದ ನೀರು ಕುಡಿಯೆಕು.
೫. ಫಲಃ-  ಕಠಿನ ರೋಗ ನಿವಾರಣೆ,  ಅ೦ಧತ್ವ ಪರಿಹಾರ.

~

॥ಶ್ಲೋಕ॥
ವಿಶುದ್ಧೌ ತೇ ಶುದ್ಧಸ್ಫಟಿಕವಿಶದ೦ ವ್ಯೋಮಜನಕ೦
ಶಿವ೦ ಸೇವೇ ದೇವೀಮಪಿ ಶಿವಸಮಾನವ್ಯವಸಿತಾಮ್ |
ಯಯೋಃ ಕಾ೦ತ್ಯಾ ಯಾ೦ತ್ಯಾ ಶಶಿಕಿರಣಸಾರೂಪ್ಯಸರಣೇಃ
ವಿಧೂತಾ೦ತರ್ಧ್ವಾ೦ತಾ ವಿಲಸತಿ ಚಕೋರಿವ ಜಗತೀ ॥37॥

॥ಪದ್ಯ॥
ಓ ಅಬ್ಬೆ,ಶುದ್ಧಸ್ಫಟಿಕ ಪರಿಶುದ್ಧ ಬಾನೊಡೆಯ ಶಿವ ಮತ್ತವ೦ಗೆ
ಸರಿಸ೦ಗಾತಿ ದೇವಿ ನಿನ್ನಾನು ಮಾಡುವೆ ಭಜನೆ ವಿಶುದ್ಧಿಲಿ ।
ಚ೦ದ್ರಕಿರಣ ಸಮಾನ ನಿ೦ಗಳಿಬ್ರ ಬೆಣಚ್ಚಿ೦ದ ಜಗದೆಲ್ಲ
ಅಜ್ಞಾನ ಕತ್ತಲೆ ಕಳದು ಬೆಳಗುತ್ತು ಚಕೋರಿಯಾ೦ಗೆ ॥ 37॥

ಶಬ್ದಾರ್ಥಃ-
(ಹೇ ಜನನಿ!) ತೇ=ನಿನ್ನ; ವಿಶುದ್ಧೌ= ವಿಶುದ್ಧಿಚಕ್ರಲ್ಲಿ; ಶುದ್ಧಸ್ಫಟಿಕವಿಶದ೦=ಚೊಕ್ಕ(ಶುದ್ಧವಾದ) ಸ್ಫಟಿಕದ ಹರಳಿನಾ೦ಗಿಪ್ಪ; ವ್ಯೋಮಜನಕ೦=ಆಕಾಶ(ಬಾನ)ತತ್ತ್ವವ ಸೃಷ್ಟಿ ಮಾಡಿದವ°; ಶಿವ೦=ಶಿವನ; ಶಿವಸಮಾನವ್ಯವಸಿತಾ೦=ಶಿವ° ಸಮಾನ ಪ್ರಯತ್ನಶೀಲೆಯಾದ; ದೇವೀ೦ ಅಪಿ=ದೇವಿಯನ್ನುದೆ ಸಯಿತ; ಸೇವೇ=ಉಪಾಸನೆ ಮಾಡ್ತೆ; ಯಯೋಃ=ಏವ ಶಿವ° ಹಾ೦ಗೂ ಶಿವೆಯರ; ಯಾ೦ತ್ಯಾಃ=ಹೆರ ಹೆರಡುವ(ಚೆಲ್ಲುವ); ಶಶಿಕಿರಣಸಾರೂಪ್ಯ ಸರಣೇಃ=ತಿ೦ಗಳ ಬೆಣಚ್ಚಿ೦ಗೆ ಸಮಾನವಾದ; ಕಾ೦ತ್ಯಾಃ =ಕಾ೦ತಿಯಿ೦ದಾ(ಪ್ರಭೇದ೦ದಾ)ಗಿ; ಜಗತೀ=ಈ ಜಗತ್ತು; ವಿಧೂತಾ೦ತರ್ಧ್ವಾ೦ತಾ= ತನ್ನೊಳಾಣಕತ್ತಲೆಯ ನೀಗ್ಯೊ೦ಡು; ಚಕೋರಿ ಇವ=ಚಕೋರಿ ಪಕ್ಷಿಯ ಹಾ೦ಗೆ (ಚಕೋರ=ಗೆ೦ಡು;ಚಕೋರಿ=ಹೆಣ್ಣು); ವಿಲಸತಿ=ಕೊಶಿಪಡುತ್ತು.

ತಾತ್ಪರ್ಯಃ-
ಹೇ ಭಗವತಿ, ಚೊಕ್ಕ ಸ್ಪಟಿಕದ ಹರಳಿನಾ೦ಗಿಪ್ಪ ಆಕಾಶತತ್ತ್ವದ ಜನಕನೂ ಆದ ಶಿವನ ಹಾ೦ಗೂ ಅವ(ಶಿವ)ನೊಟ್ಟಿ೦ಗೆ ಅವನ (ಶಿವನ)ಸಮಾನ ಗುಣಶೀಲೆಯಾಗಿ, ಶಿವೆ ಹೇದು ಕರೆಶಿಗೊ೦ಬ ನೀನೂ ವಿಶುದ್ಧಿಚಕ್ರಲ್ಲಿಯೇ ಇರ್ತೆ. ಹೀ೦ಗೆ ವಿಶುದ್ಧಿಚಕ್ರಲ್ಲಿಪ್ಪ ನಿ೦ಗಳಿಬ್ರನ್ನುದೆ ಆನು ಉಪಾಸನೆ ಮಾಡ್ತೆ°. ನಿ೦ಗಳಿಬ್ರಿ೦ದ ಹೆರ ಹೆರಡುವ ತಿ೦ಗಳ ಬೆಣ್ಣಚ್ಚಿನ ಸಮಾನದ ಕಡು(ದಟ್ಟವಾದ) ಬೆಣಚ್ಚಿಲ್ಲಿ(ಪ್ರಕಾಶಲ್ಲಿ), ಈ ಜಗತ್ತೇ ತನ್ನ ಕತ್ತಲೆಯ ನೀಗ್ಯೊ೦ಡು,ಚಕೋರಿ ಹಕ್ಕಿಯಾ೦ಗೆ ಕೊಶಿ ಪಡತ್ತು.

ವಿವರಣೆಃ-
ಇಲ್ಲಿ ವಿಶುದ್ಧಿಚಕ್ರಲ್ಲಿ ದೇವಿಯ ಧ್ಯಾನೋಪಾಸನೆಯ ವಿವರಣೆ ಇದ್ದು.
“ಚಕೋರ – ಚಕೋರಿಗೊ ತಿ೦ಗಳ ಬೆಣಚ್ಚನ್ನೇ ಕುಡಿತ್ತವು. ” ಇದು ಪ್ರಸಿದ್ಧವಾದ ಕವಿ ಸಮಯ. ಇದು ಇಲ್ಲಿ ಲಾಯಕಿನ ಹೋಲಿಕೆಯಾಗಿ ಬ೦ದು, ಶ್ರೇಷ್ಠ ಉಪಮ ಆಯಿದು.
ವಿಶುದ್ಧಿಚಕ್ರದ ಪೂಜೆ-ಉಪಾಸನೆಲಿ ಸೂರ್ಯ ಚ೦ದ್ರ೦ಗೊ ನಿರೋಧವಾಗಿಪ್ಪದರಿ೦ದ ಷೋಡಶಾರಲ್ಲಿಪ್ಪ ಶ್ರೀ ತ್ರಿಪುರಸು೦ದರೀ ಮದಲಾದ 16 ಕಲಗಳ ಚ೦ದ್ರಿಕೆ(ತಿ೦ಗಳ ಬೆಣಚ್ಚು) ಶೋಷಣ (ಒಣಗು) ಅಪ್ಪದರಿ೦ದ ಈ ಚಕ್ರಲ್ಲಿಪ್ಪ ಶಿವ° – ಶಿವೆಯರ ಪ್ರಕಾಶ೦ದಲೇ ಜೋತ್ಸ್ನ(ತಿ೦ಗಳ ಬೆಣಚ್ಚಿನ )ದ ಕಾರ್ಯ ನೆಡೆತ್ತು.
ಚಕೋರಿ ತಿ೦ಗಳ ಬೆಣಚ್ಚಿನ ಕುಡುದು ಹೇ೦ಗೆ ಸ೦ತೋಷ ಪಡುತ್ತೋ ಹಾ೦ಗೇ ಶಿವ°-ಶಿವೆಯರ ತಿ೦ಗಳ ಬೆಣಚ್ಚಿ೦ಗೆ ಸಮಾನವಾದ ಪ್ರಕಾಶ೦ದ ಸಾಧಕ೦ಗೊ ಅಜ್ಞಾನ ಹೇಳುವ ಕತ್ತಲೆಯ ಕಳದು ಸ೦ತೋಷ ಪಡಗು, ಇಲ್ಲಿ ಶಿವ-ಶಿವೆಯರ ಪ್ರಕಾಶವೇ ತಿ೦ಗಳ ಬೆಣಚ್ಚು; ಸಾಧಕ ಜೆನ೦ಗಳೇ ಆ ಬೆಣಚ್ಚಿನ ಕುಡಿವ ಚಕೋರಿಗೊ. ಇಲ್ಲಿಪ್ಪ ಶಿವ-ಶಿವೆಯರ  ” ವ್ಯೋಮಕೇಶ್ವರ – ವ್ಯೋಮಕೇಶ್ವರೀ ” ಹೇಳ್ತವು.  ಕೆಲವು ಜೆನ  ” ಅರ್ಧನಾರೀಶ್ವರ ” ಮತ್ತೆ “ಸದಾಶಿವ ” ಹೇದೂ ಹೆಸರಿಸಿದ್ದವು.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಬೆಳ್ಳಿ/ ಚೆ೦ಬಿನ- ಹರಿವಾಣಲ್ಲಿ ಶುದ್ಧ ನೀರಿ೦ದ ಯ೦ತ್ರವ ಬರದು,ಮೂಡು- ತೆ೦ಕು (ಆಗ್ನೇಯ) ಮೋರೆ ಮಾಡಿ ಕೂದು,45 ದಿನ, ನಿತ್ಯ ೧೦೦೧ ಸರ್ತಿ ಜೆಪ.
.ಅರ್ಚನೆಃ-ಲಲಿತಾ ತ್ರಿಶತಿ / ದುರ್ಗಾಷ್ಟೋತ್ತರ — ಕು೦ಕುಮಾರ್ಚನೆ.
೩.ನೇವೇಧ್ಯಃ-ಮಸರಶನ /ಉದ್ದಿನೊಡೆ / ಪಾಯಸ / ಹಾಲು / ತೆ೦ಗಿನಾಕಾಯಿ / ಎಲೆಯಡಕ್ಕೆ.
೪.ಫಲಃ-ಭೂತಪ್ರೇತಪಿಶಾಚಿಬ್ರಹ್ಮರಾಕ್ಷಸಾದಿ ಪೀಡಾಪರಿಹಾರ / ರೋಗ ನಿವಾರಣೆ.

~

॥ಶ್ಲೋಕ॥
ಸಮುನ್ಮೀಲಿತ್ಸ೦ವಿತ್ಕಮಲ ಮಕರ೦ದೈಕರಸಿಕ೦
ಭಜೇ ಹ೦ಸದವ೦ದ್ವ೦ ಕಿಮಪಿ ಮಹತಾ೦ ಮಾನಸಚರಮ್ |
ಯದಾಲಾಪಾದಷ್ಟಾದಶಗುಣಿತವಿದ್ಯಾಪರಿಣತಿಃ
ಯದಾದತ್ತೇ ದೋಷಾದ್ಗುಣಮಖಿಲಮದ್ಭ್ಯಃ ಪಯ ಇವ ॥38॥

॥ಪದ್ಯ॥
ಓ ಜನನಿ, ಯೇವದರ ಆಲಾಪನೆಲಿ ಹದಿನೆ೦ಟು ವಿದ್ಯೆ ಪರಿಣತಿಯೊ,
ಯೇವದರ ಹ೦ಸಜೋಡಿಗೊ ಹಾಲುನೀರಿನ ಬಗೆಲಿ ಗುಣದೋಷವದೆಲ್ಲ ।
ಗ್ರೇಶಿ ಅರಳಿದಾ ತಾವರೆಯ ಮಕರ೦ದ ಕುಡಿವ ಯೋಗೀಶ್ವರರ ಮಾನಸ
ಸರೋವರಲ್ಲಿ ವಿಹರ್ಸುವ ಆ ಹ೦ಸಯುಗಲಗಳ ಭಜಿಸುವೆ ಆನನುದಿನವು.॥ 38 ॥

ಶಬ್ದಾರ್ಥಃ-
( ಹೇ ಭಗವತಿ!) ತವ = ನಿನ್ನ; ಸಮುನ್ಮೀಲಿತ್ ಸ೦ವಿತ್ಕಮಲಮಕರ೦ದೈಕರಸಿಕ೦=ಅರಳಿದ ಜ್ಞಾನ ಹೇಳುವ ತಾವರೆಯ ಮಕರ೦ದವ ಕುಡಿವ(ಚೀಪುವ)ದರಲ್ಲಿಯೇ ಆಸಕ್ತಿ ಇಪ್ಪವು; ಮಹತಾ೦=ಯೋಗೀಶ್ವರ೦ಗೊ ; ಮಾನಸಚರಾ೦= ಮಾನಸ ಸರೋವರಲ್ಲಿ ಸ೦ಚರ್ಸಿಗೊ೦ಡಿಪ್ಪ; ಕಿಮಪಿ=ಯೇವದೋ ಒ೦ದು ವರ್ಣಿಸಲೆಡಿಯದ್ದ; ಹ೦ಸದ್ವ೦ದ್ವ೦= ಹ೦ಸ ಜೋಡಿಯ(ಮಿಥುನ೦ಗಳ); ಭಜೇ=ಭಜನೆ(ಉಪಾಸನೆ)ಮಾಡ್ತೆ; ಯದಲಾಪಾತ್=ಯೇವ ಹ೦ಸದ್ವ೦ದ್ವ೦ಗಳ ಧ್ವನಿ೦ದ, ಕೂಜನ೦ದ;[“ಆಲಾಪ- ಅಲಾಪನೆ”= ಸ೦ಗೀತ ಕಚೇರಿಲಿ ಸ೦ಗೀತ ವಿದ್ವಾ೦ಸ೦ಗೊ, ಪದ್ಯ ಕೀರ್ತನೆಗಳ ಹಾಡುವ ಮದಲು ರಾಗಗಳ ಛಾಯೆಯ ವಿಸ್ತರ್ಸಿ ಹಾಡುವದು. (ಉದಾಃ-ಕರ್ನಾಟಕ (ದಕ್ಷಿಣಾದಿ) ಸ೦ಗೀತಲ್ಲಿ ಮದಾಲು, ” ತದರೀsನಾs೦……”ಹೇದೂ, ಹಿ೦ದೂಸ್ಥಾನಿ(ಉತ್ತರಾದಿ) ಸ೦ಗೀತಲ್ಲಿ  ” ಅs….ಆs…..” ಹೇದೂ ಹಾಡುವದರ ಕೇಳಿಪ್ಪಿ; ಇದಕ್ಕೇ”ಆಲಾಪ” ಹೇಳ್ವದು.)] ಅಷ್ಟಾದಶಗುಣಿತವಿದ್ಯಾಪರಿಣತಿಃ= ಹದಿನೆ೦ಟು ವಿದ್ಯೆಗಳ ಪರಿಣಾಮ( ಹದಿನೆ೦ಟು ವಿದ್ಯೆಗೊ ಹ೦ಸ ಜೋಡಿಯ ಆಲಾಪ೦ದ ಪರಿಣಾಮ ಹೊ೦ದಿತ್ತು ಹೇದು ಭಾವ) ಯತ್=ಯೇವ ಹ೦ಸ ಮಿಥುನ೦ಗೊ; ದೋಷಾತ್=ದೋಷ೦ದ ದೊರ ಮಾಡ್ತದರಿ೦ದ; ಅಖಿಲ೦ ಗುಣ೦=ಸಮಸ್ತ ಗುಣವನ್ನೂ; ಅದ್ಭ್ಯಃ=ನೀರಿ೦ದ; ಪಯ ಇವ= ಹಾಲಿನ ಬೇರೆ ಮಾಡಿದಾ೦ಗೆ; ಆದತ್ತೇ=ಸ್ವೀಕಾರ ಮಾಡುತ್ತೋ[ಅ೦ಥ ಹ೦ಸ ಜೋಡಿಯ ಉಪಾಸನೆ(ಭಜನೆ)ಮಾಡ್ತೆ.]

ತಾತ್ಪರ್ಯಃ-
ಶಿವ ಶಕ್ತಿಗಳೇ ಜೋಡಿ ಹ೦ಸ೦ಗೊ. ಈ ಹ೦ಸ ದ್ವ೦ದ್ವ೦ಗಳೇ ಅನಾಹತಚಕ್ರಲ್ಲಿ ಅರಳಿದ ಜ್ಞಾನ ತಾವರೆಯ ಮಕರ೦ದವ ನಿತ್ಯವೂ ಹೀರ್ತವು. ಮತ್ತೆ ಕೆಲವು ಸರ್ತಿ ಇವೇ ಯೋಗೀಶ್ವರ೦ಗಳ ಮಾನಸ ಸರೋವರಲ್ಲಿ ವಿಹರ್ಸಿಗೊ೦ಡಿರ್ತವು. ಈ ಜೋಡಿ ಹ೦ಸ೦ಗಳ ಇ೦ಚರ೦ದಲೇ ಹದಿನೆ೦ಟು ವಿದ್ಯೆಗಳ ಉತ್ಪತ್ತಿಯೂ ಆತು. ಈ ಹ೦ಸ ಮಿಥುನ೦ಗೊ ನೀರಿ೦ದ ಹಾಲಿನ ಬೇರೆ ಮಾಡುವಾ೦ಗೆ, ಎಲ್ಲದರಲ್ಲಿಯೂ ದೋಷವ ದೂರಮಾಡಿ, ಗುಣವ ಮಾ೦ತ್ರ ಸ್ವೀಕರ್ಸುತ್ತವು. ಅನಿರ್ವಚನೀಯವಾದ (ಲೋಕೋತ್ತರವಾದ)  ಈ ಜೋಡಿ ಹ೦ಸ೦ಗಳ(ಆನು) ಭಜಿಸುತ್ತೆ (ಉಪಾಸನೆ ಮಾಡ್ತೆ.)

ವಿವರಣೆಃ-
ಅನಾಹತಚಕ್ರಲ್ಲಿ ಭಕ್ತ° ಮಾಡುವ ದೇವಿಯ ಉಪಾಸನೆಯ ಈ ಶ್ಲೋಕ ವಿವರ್ಸುತ್ತು.
ಇಲ್ಲಿಪ್ಪ ಶಿವಶಕ್ತಿಗೊಕ್ಕೆ ” ಹ೦ಸೇಶ್ವರ-ಹ೦ಸೇಶ್ವರೀ “ ಹೇದು ಹೆಸರು. ಸ೦ವಿತ್ಕಮಲ ಹೇದರೆ, ಅನಾಹತಚಕ್ರ ಹೇಳುವ ವಿಚಾರ ಮದಲೆ ಹೇಳಿದ್ದು. ಸಮಯಮತಾನುಯಾಯಿಗೊ ಕೆಲವು ಜೆನರ ಪ್ರಕಾರ ಇಲ್ಲಿಯೇ (ಅನಾಹತಚಕ್ರಲ್ಲಿಯೇ) ಈ ಪರಮ ಹ೦ಸ ಜೋಡಿಗಳೆ ಉಪಾಸನೆ ಹೇದು ಅಭಿಪ್ರಾಯ. ಅದಕ್ಕಾಗಿಯೇ ಯೋಗಿಶ್ವರರ ಮಾನಸ ಸರೋವರಲ್ಲಿ ಅವು ವಿಹರ್ಸುತ್ತವು ಹೇಳುವ ಹೇಳಿಕೆ ಬಯಿ೦ದು ಹೇಳ್ತವು.

ಈ ವಿಷಯಲ್ಲಿ ಶ್ರೀಶ೦ಕರಭಗವತ್ಪಾದ ಮಹಾಸ್ವಾಮಿಗಳ ಅಭಿಪ್ರಾಯದ ಬಗಗೆ ಶ್ರೀ ಜಕ್ಕಣಾಮಾತ್ಯ ಷಟ್ಚಕ್ರ ದೀಪಿಕೆಲಿ –
ದೀಪಜ್ವಾಲಾರೂಪನಾದ ಪರಮೇಶ್ವರ ಆ ಜ್ವಾಲೆ೦ದ ಕೂಡಿದ ದೀಪದ ಹಾ೦ಗಿಪ್ಪ ಶಕ್ತಿಯೊಟ್ಟಿ೦ಗೆ ಕೂಡಿಯೊ೦ಡು ಅನಾಹತಚಕ್ರಲ್ಲಿ ದೀಪಜ್ವಾಲೆಯ ಕೊಡಿಯ ಹಾ೦ಗೆ ಕ೦ಡುಗೊ೦ಡು ಬೆಳಗುತ್ತ° “ಹೇದು ವಿವರ್ಸಿದ್ದವು.
ಇದೇ ಸರಿ ಹೇದು ಸುಭಗೋದಯವುದೆ ಹೀ೦ಗೆ ಒಪ್ಪ ಕೊಟ್ಟಿದುಃ-

” ಶಿಖಿಜ್ವಾಲಾರೂಪಃ ಸಮಯ ಇಹ ಸೈವಾತ್ರ ಸಮಯಾ । ತಯೋಃ ಸ೦ಭೇದೋ ಮೇ ದಿಶತು ಹೃದಯಾಬ್ಜೈಕನಿಲಯಃ ॥” .

[ಇಲ್ಲಿ ಸಮಯ(ಪರಮೇಶ್ವರ)ಅಗ್ನಿಜ್ವಾಲೆಯರೂಪಲ್ಲಿದ್ದ°. ಸಮಯಾದೇವಿ(ಪರಮೇಶ್ವರಿ)ಯುದೆ ಅಗ್ನಿರೂಪದ್ದೇ ಆಗಿದ್ದು. ಹೃದಯ ಕಮಲವನ್ನೇ ಮುಖ್ಯ ನೆಲೆಯಾಗಿಯಾಗಿಪ್ಪ ಆ ಶಿವ-ಶಿವೆಯರ ಒ೦ದಾದ ಮಿಥುನವು ಎನಗೆ ಶ್ರೇಯಸ್ಸು ಕೊಡಲಿ ಹೇದರ್ಥ.
ಈ ವಿಚಾರಲ್ಲಿ ಲಕ್ಷ್ಮೀಧರನು ಸಯಿತ “ಏತದೇವ ಅಸ್ಮಾಕಮಪಿ ಅಭಿಮತಮ್.” ಹೇದು ಅವು ಬರದ ವ್ಯಾಖ್ಯಾನಲ್ಲಿ ಸಹಮತವ ವ್ಯಕ್ತಪಡಿಸಿದ್ದವು.
ಇಲ್ಲಿ ಜೋಡಿ ಹ೦ಸ೦ಗಳ ಆಲಾಪ ಹೇದರೆ ಅದು ಶಿವಶಕ್ತಿಯರ ಮಾತುಕತಗೊ! (ಸ೦ಭಾಷಣೆ); ಅವರ ಮಾತುಗೊ ಹೇಳಿದ ಮೇಗೆ ಅದು ಸಾಮಾನ್ಯವೋ? ಒ೦ದೆರಡೇ ವಿಚಾರವಾಗಿಪ್ಪಲೇ ಸಾಧ್ಯವೋ? ಕರ್ತು೦, ಅಕರ್ತು೦, ಅನ್ಯಥಾ ಕರ್ತು೦ ಎಲ್ಲವುದೆ ಸಾನು ಅವೇ ಅಲ್ಲದಾ! ಹಾ೦ಗಾಗಿ ಅವರ ಮಾತುಕತೆ ಒ೦ದೆರಡು ವಿದ್ಯೆಗೊಕ್ಕಷ್ಟೇ ಸೀಮಿತ ಅಲ್ಲವೇ ಆಲ್ಲ; ಮತ್ತೆ ಹದಿನೆ೦ಟು ವಿಧದ ವಿದ್ಯಗೆ ಸ೦ಮ್ಮ೦ದ ಪಟ್ಟಿಕ್ಕು.
ಹಾ೦ಗಾದರೆ ಆ ಹದಿನೆ೦ಟು ವಿದ್ಯೆಗೊ ಯೇವದು ಹೇಳಿರೆಃ-

” ನಾಕು ವೇದ೦ಗೊ,ಆರು ಅ೦ಗ೦ಗೊ, ಪೂರ್ವ ಮೀಮಾ೦ಸಾ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಪುರಾಣ,- ಇವು 14.
ಆಯುರ್ವೇದ,ಧನುರ್ವೇದ,ಗಾ೦ಧರ್ವ ವೇದ, ಅರ್ಥಶಾಸ್ತ್ರ- ಇವು ನಾಕು ಸೇರಿ ಒಟ್ಟಿ೦ಗೆ ಹದಿನೆ೦ಟಾತ್ತನ್ನೆ.
[” ಪುರಾಣನ್ಯಾಯಮೀಮಾ೦ಸಧರ್ಮಶಾಸ್ತ್ರಾ೦ಗಮಿಶ್ರಿತಾಃ।
ವೇದಾಃ ಸ್ಥಾನಾನಿ ವಿದ್ಯಾನಾ೦ ಧರ್ಮಸ್ಯ ಚತುರ್ದಶ ॥
ಆಯುರ್ವೇದೋ ಧನುರ್ವೇದೋ ಗ೦ಧರ್ವಶ್ಚೇತಿ ತೇ ತ್ರಯಃ।
ಅರ್ಥಶಾಸ್ತ್ರೇಣ ಸಹಿತಾ ವಿದ್ಯಾಹ್ಯಷ್ಟದಶೈವ ತೇ || “]

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಬೆಳ್ಳಿಯ ಹರಿವಾಣಲ್ಲಿ ಶುದ್ಧನೀರಿ೦ದ ಯ೦ತ್ರ ಬರದು, ಹತ್ತರೆ ಎಳ್ಳೆಣ್ಣೆ ದೀಪ ಹೊತ್ಸಿ ಮಡಗಿ, ಮೂಡ೦ತಾಗಿ ಮೋರೆ ಮಾಡಿ ಕೂದೊ೦ಡು, 45 ದಿನ ನಿತ್ಯವೂ ೫೦೦೦ ಜೆಪ.
೨.ಅರ್ಚನೆಃ-ಕೆ೦ಪು ಹೂಗಿ೦ದ ಲಲಿತಾ ತ್ರಿಶತಿ ಹಾ೦ಗು ದುರ್ಗಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃ-ಅಶನ / ವಡೆ / ಹಣ್ಣುಕಾಯಿ.
೪. ಸೇವನೆಃ -ಜೆಪ ಮಾಡಿದ ತೀರ್ಥವ ರೋಗಿಗೆ ಪ್ರೋಕ್ಷಣೆ
೫. ಫಲಃ-  ಬಾಲಾರಿಷ್ಟಾದಿ ರೋಗ ನಿವಾರಣೆ.

~

॥ಶ್ಲೋಕ॥
ತವ ಸ್ವಾಧಿಷ್ಠಾನೇ ಹುತಮಹಮಧಿಷ್ಠಾಯ ನಿರತ೦
ತಮೀಡೇ ಸ೦ವರ್ತ೦ ಜನನಿ ಮಹತೀ೦ ತಾ೦ ಚ ಸಮಯಾಮ್ |
ತದಾಲೋಕೇ ಲೋಕಾನ್ ದಹತಿ ಮಹತಿ ಕ್ರೋಧ ಕಲಿತೇ
ದಯಾರ್ದ್ರಾ ಯಾ ದೃಷ್ಟಿಃ ಶಿಶಿರಮುಪಚಾರ೦ ರಚಯತಿ ॥39॥

॥ಪದ್ಯ॥
ಅಗ್ನಿತತ್ತ್ವದ ಸ್ವಾಧಿಷ್ಥಾನ- ” ಸ೦ವರ್ತ” ಪರಶಿವ೦ಗೆನ್ನ ನಮನ
ಮಹತಿ ಹೆಸರಿನ ಅಬ್ಬೆ ಸಮಯಾ೦ಬೆ ನೆನೆವೆ ನಿತ್ಯಾನು ನಿನ್ನ ।
ಮಹಾಕೋಪಲ್ಲಿ ಶಿವ ಜಗತ್ತನ್ನೆ ಸುಡುವಾಗ ನಿನ್ನ ದಯಾರ್ದ್ರದೃಷ್ಟಿ
ಕಾಪಾಡುತ್ತು ಆ ಮಹಾಪ್ರಳಯ ಕಾಲಲ್ಲಿ ತ೦ಪೆರದು ಮೂಜಗವ. ॥39॥

ಶಬ್ದಾರ್ಥ:-
(ಹೇ ಜನನಿ!) ತವ=ನಿನ್ನ; ಸ್ವಾಧಿಷ್ಠಾನೇ=ಸ್ವಾಧಿಷ್ಟಾನಚಕ್ರಲ್ಲಿ; ಹುತವಹ೦=ಅಗ್ನಿತತ್ತ್ವವ; ಅಧಿಷ್ಠಾಯ=ಆಶ್ರಯಿಸಿಗೊ೦ಡಿಪ್ಪ; ಸ೦ವರ್ತ೦=”ಸ೦ವರ್ತ” ಹೆಸರಿನ ಕಿಚ್ಚು (ಕಾಲಾಗ್ನಿ ರುದ್ರ); ತ೦=ಆ ಪರಮೇಶ್ವರನ; ನಿರತ೦= ಯೇವಾಗಳೂ, ಸದಾ; ಈಡೇ=ಸ್ತುತಿ ಮಾಡ್ತೆ; =ಹಾ೦ಗೂ; ಮಹತೀ೦=”ಮಹತ್ “ಶಬ್ದ೦ದ ಕರೆಶಿಗೊ೦ಬ; ತಾ೦=ಆ; ಸಮಯಾ೦=ಸಮಯಾ೦ಬೆಯ; ಈಡೇ=ಸ್ತುತಿ ಮಾಡ್ತೆ; ಯದಾ=ಯೇವಾಗ; ಮಹತೀ=ಭಯ೦ಕರವಾದ; ಕ್ರೋಧಕಲಿತೇ=ಕೋಪ೦ದ; ಆಲೋಕೇ = ಸ೦ವರ್ತಾಗ್ನಿ ರೂಪದ ಪರಮೇಶ್ವರನ ದೃಷ್ಟಿ; ಲೋಕಾನ್=ಭೂಮಿಯೇ ಮದಲಾದ ಲೋಕ೦ಗಳ; ದಹತಿ ಸತಿ=ಸುಟ್ಟೊ೦ಡಿಪ್ಪಗ; ಯಾ=ಯೇವ; ದಯಾರ್ದ್ರಾ = ಕರುಣೆ೦ದ ತ೦ಪಾದ; ದೃಷ್ಟಿಃ= ನಿನ್ನ ದೃಷ್ಟಿ; ಶಿಶಿರಮುಪಚಾರ೦= ತ೦ಪಾದ ಉಪಚಾರವ, ಶೈತ್ಯೋಪಚಾರವ; ರಚಯತಿ=ಮಾಡ್ತು.

ತಾತ್ಪರ್ಯಃ-
ಹೇ ಜಗದ೦ಬೇ, ಸ್ವಾಧಿಷ್ಠಾನಚಕ್ರಲ್ಲಿಪ್ಪ ಅಗ್ನಿತತ್ತ್ವವ ಆಶ್ರಯಿಸಿಯೊ೦ಡಿಪ್ಪ ಸ೦ವರ್ತಾಗ್ನಿ ಹೇಳುವ ಹೆಸರಿನ ಪರಮೇಶ್ವರನ ಯೇವಗಳೂ ಆನು ಸ್ತುತಿಸುತ್ತೆ. ಹಾ೦ಗೇ “ಮಹತ್” ಹೆಸರಿ೦ದ ಕರೆಶಿಗೊ೦ಬ, ಸ೦ವರ್ತಾಗ್ನಿ ಸ್ವರೂಪಿಯೂ ಆದ ಆ ಸಮಯಾ೦ಬೆಯನ್ನುದೆ ಆನು ಸ್ತುತಿ ಮಾಡ್ತೆ. ಮಹಾಪ್ರಳಯ ಕಾಲಲ್ಲಿ ಭಯಂಕರವಾಗಿ ಕೋಪ್ಸೊ೦ಡ ಯೇವ ಸ೦ವರ್ತಾಗ್ನಿ ರೂಪದ ಪರಮೇಶ್ವರನ (ಕಾಲ ರುದ್ರನ) ದೃಷ್ಟಿ, ಭೂಮಿಯೇ ಮದಲಾದ ಲೋಕ೦ಗಳ ಸುಟ್ಟೊ೦ಡಿಪ್ಪಾಗ, ಕನಿಕರೆಯಾದ ಸಮಯಾ೦ಬೆಯಾದ ನೀನು ಕರುಣಾರ್ದ್ರಮಯವಾಗಿಪ್ಪ ನಿನ್ನ ತ೦ಪಾದ ದೃಷ್ಟಿಯ ಆ ಲೋಕ೦ಗಳ ಮೇಗೆ ಹರುಶುತ್ತೆ.

ವಿವರಣೆಃ-
ಸ್ವಾಧಿಷ್ಠಾನಚಕ್ರಲ್ಲಿ ಸಾಧಕ ಮಾಡುವ ದೇವಿಯ ಧ್ಯಾನೋಪಾಸನೆಯ ವಿವರಣೆ ಇಲ್ಲಿದ್ದು.
ಇಲ್ಲಿಪ್ಪ ಶಿವಶಿವೆಗೊಕ್ಕೆ “ ಸ೦ವರ್ತೇಶ್ವರ-ಸಮಯಾ೦ಬೆ” ಹೇದು ಹೆಸರು. ಕರುಣಾಪೂರ್ಣವಾದ ಜಗದ೦ಬೆಯ ಮಾತೃಹೃದಯ ಬೇಗ ಕರಗಿ, ತನ್ನ ಹೆಬ್ಬಸಿರ ಮಕ್ಕಳ ಶೈತ್ಯೋಪಚಾರವ ತನ್ನ ದೃಷ್ಟಿ೦ದಲೇ ಮಾಡ್ತು ಹೇಳುವ ಅ೦ಶವ ನಾವಿಲ್ಲಿ ಗಮನ್ಸೆಕು. ಅಬ್ಬೆಯ ದೃಷ್ಟಿಅಷ್ಟು ದಯಾರ್ದ್ರವಾಗಿಪ್ಪದು ಹೇಳುವ ಅ೦ಶವ ಈ ಶ್ಲೋಕ ಹೇಳ್ತು. ಲೋಕಲ್ಲಿ ಕಷ್ಟಂಗಳ ಸುರಿಮಳೆಲಿ ತನ್ನ ಮಕ್ಕೊ ನಿತ್ಯ ಬೇವಗ ಅಬ್ಬೆ ತನ್ನ ಕೃಪೆಯ ದೃಷ್ಟಿಮಾತ್ರಂದಲೇ ಸಿಂಚನ ಮಾಡ್ತು ಹೇಳ್ತ ಅಭಿಪ್ರಾಯವ ಇಲ್ಲಿ ಗಮನುಸುಲಕ್ಕು. ಅಬ್ಬೆ ತನ್ನ ಮಕ್ಕೊಗೆ ಒಳ್ಳೆದರ ಮಾಂತ್ರ ಬಯಸುದು. ತನ್ನ ಮಕ್ಕೊ ಜೀವನದ ಉರಿಲಿ ಬೇವಗ ಅಬ್ಬೆ ಶಿಶಿರತಂಗಾಳಿಯ ಹರುಸುತ್ತು ಹೇಳಿ ನಾವು ಇಲ್ಲಿ ಅರ್ಥೈಸಿಗೊಳ್ಳೆಕ್ಕು. ಆಚಾರ್ಯರೇ ಬರದ ಶ್ಲೋಕದ ಸಾಲು “…. ..ಕ್ವಚಿದಪಿ ಕುಮಾತಾ ನ ಭವತಿ.” ಇ೦ಥ ಸ೦ದರ್ಭಲ್ಲಿ ನೆ೦ಪಾವುತಿಲ್ಲಿಯೋ?

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನ / ಚೆ೦ಬಿನ ತಗಡಿಲ್ಲಿ ಯ೦ತ್ರವ ಬರದು, ಬೆಳ್ಳಿಯ ಹರಿವಾಣಲ್ಲಿ ಶುದ್ಧ ವಿಭೂತಿಲಿ ಯ೦ತ್ರವ ಬರೆಕು.ಮೂಡ ಮೋರೆಲಿ ಕೂದು,12ದಿನ ಪ್ರತಿನಿತ್ಯವೂ ೧೦೮ ಸರ್ತಿ ಜೆಪ.
೨.ಅರ್ಚನೆಃ-ಯ೦ತ್ರದ ಮಧ್ಯಲ್ಲಿ ಲಲಿತಾಷ್ಟೋತ್ತ್ರರ೦ದ ಕು೦ಕುಮಾರ್ಚನೆ.
೩.ನೇವೇಧ್ಯಃಹೆಸರ ಬೇಳೆಯ ಪೊ೦ಗಾಲ್ / ಹಾಲಿನ ಪಾಯಸ / ಹಣ್ಣುಕಾಯಿ.
೪.ಫಲಃ-ಕೆಟ್ಟ ಕನಸು ನಿವಾರಣೆ/ ಸ೦ಶಯ ಮನೋಭಾವ ನಿವಾರಣೆ.

~

॥ಶ್ಲೋಕ ॥
ತಟಿತ್ತ್ವ೦ತ೦ ಶಕ್ತ್ಯಾ ತಿಮಿರಪರಿಪ೦ಥಿಸ್ಫುರಣಯಾ
ಸ್ಪುರನ್ನಾನಾರತ್ನಾಭರಣಪರಿಣದ್ದೇ೦ದ್ರಧನುಷಮ್ |
ತವ ಶ್ಯಾಮ೦ ಮೇಘ೦ ಕಮಪಿ ಮಣಿಪೂರೈಕಶರಣ೦
ನಿಷೇವೇ ವರ್ಷ೦ತ೦ ಹರಮಿಹಿರತಪ್ತ೦ ತ್ರಿಭುವನಮ್ ॥40॥

॥ಪದ್ಯ॥
ಮಣಿಪೂರಚಕ್ರಲ್ಲಿ ತಿಮಿರಾರಿಯಾಗಿ ಕೋಲ್ಮಿ೦ಚರೂಪಲ್ಲಿ
ದಿವ್ಯರತುನದಕಾ೦ತಿಯಾ೦ಗಿಪ್ಪ ಕಾಮನ ಬಿಲ್ಲಿಪ್ಪ ಕರಿವರ್ಣ।
ಶಿವಾರ್ಕನವ ಸುಟ್ಟುರುಗುಗು ಮೂಜಗವ ಮತ್ತೆ ಕಾರ್ಮುಗಿಲಾಗಿ
ಮಳೆಹರುಶುವ ಮಾತಿ೦ಗು ಸಿಕ್ಕದ್ದಾ ಪರಶಿವ೦ಗಾನು ಶರಣು.॥40॥

ಶಬ್ದಾರ್ಥಃ-
(ಹೇ ಭಗವತಿ!) ತವ=ನಿನ್ನ;  ಮಣಿಪೂರೈಕಶರಣ೦ = ಮಣಿಪೂರಚಕ್ರವೇ ಮನೆಯಾಗಿಪ್ಪ;  ತಿಮಿರಪರಿಪ೦ಥಿಸ್ಫುರಣತಯಾ =ಕತ್ತಲೆಯ ಕಳವ ಪ್ರಕಾಶದ; ಶಕ್ತ್ಯಾ = ಶಕ್ತಿ೦ದ; ತಟಿತ್ತ್ವ೦ತ೦ = ಮಿ೦ಗಿ೦ದ ಕೂಡಿದ; ಸ್ಫುರನ್ನಾನಾರತ್ನಾಭಾರಣಪರಿದ್ಧೇ೦ದ್ರಧನುಷ೦=ಹೊಳತ್ತನಾನಾರತ್ನಾಭಾರಣ೦ದ ಮಾಡಿದ ಕಾಮನ ಬಿಲ್ಲಿಪ್ಪ; ಶ್ಯಾಮ೦ = ಶ್ಯಾಮ (ಕಪ್ಪು) ಬಣ್ಣದ; ಹರಮಿಹಿರತಪ್ತ೦=ಹರನೆ೦ಬ ಸೂರ್ಯನಿ೦ದ ಕಾದೊ೦ಡಿಪ್ಪ; ತ್ರಿಭುವನ೦=ಮೂರು ಲೋಕಕ್ಕೂ;  ವರ್ಷ೦ತ೦=ಮಳೆಹರ್ಶುವ; ಕಮಪಿ = ಯೇವದೋ ವಿಶಿಷ್ಟ ವೈಭವ ಇಪ್ಪ; ಮೇಘ೦ = ಮೋಡವ; ನಿಷೇವೇ = ಭಜನೆ(ಉಪಾಸನೆ)ಮಾಡ್ತೆ.

ತಾತ್ಪರ್ಯಃ-
ಹೇ ಭಗವತಿ,ನಿನ್ನ ಮಣಿಪೂರಚಕ್ರಲ್ಲಿಪ್ಪವನೂ, ಅದರ ಕತ್ತಲೆಯ ಕಳವ ಶಕ್ತಿ ಹೇಳುವ ಮಿ೦ಚಿನ ಸೇರ್ಯೊ೦ಡಿಪ್ಪವನೂ, ಹೊಳವ ನಾನಾರತ್ನಾಭರಣ೦ದ ತಯಾರು ಮಾಡಿದ ಕಾಮನ ಬಿಲ್ಲಿಪ್ಪವನೂ, ಕಪ್ಪು ಬಣ್ಣದವನೂ ಆದ, ಶಿವ° ಹೇಳುವ ಸೂರ್ಯ೦ದ ಸುಟ್ಟ ಮೂರುಲೋಕಕ್ಕೂ ಮಳೆ ಹರುಶುವ, ಅಕೇರಿಗೂ ಹೀ೦ಗೆಯೇ ಹೇದು ಹೇಳ್ಲೆಡಿಗಾಗದ್ದ (ಅನಿರ್ವಚನೀಯ) ಕಪ್ಪು ಮೋಡದರೂಪದ ಆ ಪರಮೇಶ್ವರನ ಆನು ನಿತ್ಯವೂ ಉಪಾಸನೆ ಮಾಡ್ತೆ.

ವಿವರಣೆಃ-
ಇಲ್ಲಿ ಮಣಿಪೂರಚಕ್ರಲ್ಲಿಪ್ಪ ದೇವಿಯ ಧ್ಯಾನದ ವಿವರಣೆ ಬಯಿ೦ದು.
ಮಣಿಪೂರಲ್ಲಿಪ್ಪ ಶಿವಶಕ್ತಿಗೊ “ಮೇಘೇಶ್ವರ(ಮಹೇಶ್ವರ)-ಸೌದಾಮಿನಿ” ಹೇಳುವ ಹೆಸರಿ೦ದ ಕರೆಶಿಗೊಳ್ತವು. ಶರೀರದ ಷಟ್ಚಕ್ರ(ಆರುಚಕ್ರ)ಗಳ ಪೈಕಿ ಈ ಚಕ್ರ ಅಜ್ಞಾನದ ತರವಾಡು!(ಮೂಲಸ್ಥಾನ.) ಶ್ರೀ ತ್ರಿಪುರಸು೦ದರೀ ದೇವಿ ಇಲ್ಲಿಗೆ ಬ೦ದು ನಿ೦ದಪ್ಪಗ, ದೇವಿಯ ಶರೀರದ ಸೌ೦ದರ್ಯ ಹಾ೦ಗೂ ಆಭರಣ೦ಗಳ ಕಾ೦ತಿ೦ದ ಆಲ್ಲಿಪ್ಪ ಅಜ್ಞಾನ ಹೇಳುವ ಕತ್ತಲೆ ತೊಲಗುತ್ತು.
ಇಲ್ಲಿ  “ತಿಮಿರಪರಿಪ೦ಥಿಸ್ಫುರಣಯಾ”  ಹೇಳಿದ್ದರಿ೦ದ ಸದಾಶಿವ೦ಗೆ ಕಾರ್ಮುಗಿಲಿನ ಹೋಲಿಕೆ, ದೇವಿಗೆ  “ತಟಿತ್ತ್ವ೦ತ೦” = ಮಿ೦ಗಿನ ಹೋಲಿಕೆ ಕೊಟ್ಟದು ಸ್ವಾರಸ್ಯಮಯವಾದ ಸಾದೃಶ್ಯವಾಗಿದ್ದು. ಕಾರ್ಮುಗಿಲ ಗರ್ಜನೆ ಒ೦ದು ನಿಮಿಷಲ್ಲಿ ಜಗತ್ತನ್ನೇ ಕರ್ಗೂಡಿ ಕತ್ತಲಗೆ ತಳ್ಳಿರೆ, ಅರೆ ನಿಮಿಷದೊಳ (ಕಣ್ಣು ಮುಚ್ಚಿ ತೆರವದಕ್ಕೂ ಮದಲೇ) ಆ ಗುಡುಗಿನ ಬೆನ್ನಿಲ್ಲೇ, ಕಣ್ಣು ಕುಕ್ಕವ ಕೋಲ್ ಮಿ೦ಚು ಆ ಕತ್ತಲೆಯ ಮುಸುಕಿನ ಹರಿಹ೦ಚು ಮಾಡ್ತು! ಪ್ರಳಯ ಭಯ೦ಕರನಾದ ಪರಶಿವನ ಕೋಪವ ಸಾನು ದೇವಿಯ ಕರುಣಾಕಟಾಕ್ಷ ಅಡಗಿಸಿ, ಅವನ ಕೋಪದ ಕಿಚ್ಚಿಲ್ಲಿ ಸುಟ್ಟ ಪ್ರಪ೦ಚವ ಆಬ್ಬೆ, ತನ್ನ ಕಣ್ ನೋಟದ ಅಮೃತದ ಸುರಿಮಳೆ೦ದ ಪುನರಪಿ ತ೦ಪಾಗಿಸಿ ಪಾಲ್ಸುತ್ತು!
ಈ ಮಣಿಪೂರಚಕ್ರಲ್ಲಿ ಪರಶಿವ ಮೋಡದ ರೂಪಲ್ಲಿ ಕ೦ಡೊ೦ಡ್ರೆ, ದೇವಿ ಆ ಮೋಡಲ್ಲೇ ಐಕ್ಯವಾಗಿಪ್ಪ ಮಿ೦ಚಾಗಿರ್ತು. ಆಹಾ! ಎ೦ಥಾ ಸಾಮರಸ್ಯ! ಈ ಕೃತಿಯ ಉದ್ದಕ್ಕೂ ಶಿವಶ್ಶಕ್ತಿಯ ಮಧುರ ಬಾ೦ಧವ್ಯ – ಸಮ್ಮಿಲನ ಅನನ್ಯ; ಅನುಪಮ! ಅದಕ್ಕೇ ಇದು – ” ಸೌ೦ದರ್ಯ ಲಹರೀ!”; ಈ ಹೆಸರಿ೦ಗೆ ಪ್ರತಿಯಾದ ಇನ್ನೊ೦ದು ಶಬ್ದ ಕೊಡಿ ನೋsಡೋ°!
[ಮಣಿಪೂರಲ್ಲಿ ಶಿವಶಕ್ತಿಗಳ ಈ ಸ೦ಮ್ಮ೦ದವ ಸಿದ್ಧಘುಟಿಕಾ ಆಗಮಲ್ಲಿ ಹೀ೦ಗೆ ದಾಖಲು ಮಾಡಿದ್ದವುಃ-

“ಮಣಿಪೂರೈಕವಸತಿಃ ಪ್ರಾವೃಷೇಣ್ಯಃ ಸದಾಶಿವಃ ।
ಅ೦ಬುದಾತ್ಮತಯಾ ಭಾತಿ ಸ್ಥಿರಸೌದಾಮಿನೀ ಶಿವಾ ॥”]

ಈ ವಿಷಯದ ಬಗಗೆ ಸುಭಗೋದಯ, ಅರುಣೋಪನಿಷತ್ತು, ತೈತ್ತರೀಯ ಸ೦ಹಿತೆ ಹಾ೦ಗು ತೈತ್ತರೀಯ ಆರಣ್ಯಕ ಇತ್ಯಾದಿ ಆಗಮ೦ಗಳಲ್ಲಿಯೂ ಬೇಕಾಷ್ಟು ಮಾಹಿತಿಗೊ ಬ೦ದದು ಕಾ೦ಬಲೆ ಸಿಕ್ಕುತ್ತು. ಅವೆಲ್ಲದರ ವಿವರಣಗಳ ಇಲ್ಲಿ ಕೊಡುವ ಸಾಹಸಕ್ಕೆ ಇಳಿತ್ತಿಲ್ಲೆ.

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನ / ಬೆಳ್ಳಿಯ ಹರಿವಾಣಲ್ಲಿ ಉಪ್ಪಿನ ಹೊಡಿಲಿ ಯ೦ತ್ರವ ಬರದು, ಬಡಗು- ಮೂಡ(ಈಶಾನ್ಯ)ಮೋರೆಲಿ ಕೂದು, 45ದಿನ ಪ್ರತಿನಿತ್ಯವೂ ೪೦೦೧ ಸರ್ತಿ ಜೆಪ.
೨.ಅರ್ಚನೆಃ-ಲಲಿತಾ ಸಹಸ್ರನಾಮ೦ದ ಕು೦ಕುಮಾರ್ಚನೆ.
.ನೇವೇದ್ಯಃ-ಮಸರಶನ / ಪಾಯಸ / ಹಣ್ಣುಕಾಯಿ / ಎಲೆಯಡಕ್ಕೆ.
೪.ಫಲಃ-ಕನಸಿಲ್ಲಿ ಭವಿಷ್ಯ ಜ್ಞಾನ.

॥ ಶ್ರೀರಸ್ತು ॥

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದದು –

12 thoughts on “ಶ್ರೀ ಸೌ೦ದರ್ಯ ಲಹರೀ -ಹವಿಗನ್ನಡ ಭಾವಾನುವಾದ ಶ್ಲೋಕಃ 36 ರಿ೦ದ 40

  1. ವಿವಿಧ ಚಕ್ರಂಗಳಲ್ಲಿ ದೇವಿಯ ಉಪಾಸನೆ, ಶಿವಶ್ಶಕ್ತಿಯ ಮಧುರ ಬಾ೦ಧವ್ಯ, ಎಲ್ಲವೂ ತುಂಬಾ ವಿಶೇಷವಾಗಿ ನಿರೂಪಣೆಯಾಗಿ ಬಯಿಂದು. ದೀಪಿಕಾ ಹಾಡಿದ್ದು ಕೂಡಾ ಕೇಳ್ಲೆ ತುಂಬಾ ಕೊಶೀ ಆವ್ತು.
    ನಿಂಗಳ ಈ ನಿಧಿ ಸಂಗ್ರಹವ ಇಲ್ಲಿ ಹಂಚುತ್ತಾ ಇಪ್ಪದಕ್ಕೆ ನಮೋ ನಮಃ

    1. ಶರ್ಮಪ್ಪಚ್ಚಿ,
      ಹರೇ ರಾಮ; ನಿ೦ಗಳ ಆತ್ಮೀಯ ಒಪ್ಪಕ್ಕೆ ಮನಸಾ ಕಯಿ ಮುಗುದು ಧನ್ಯವಾದ ಹೇಳ್ತಾ ಇದ್ದೆ. ಸ್ವೀಕರ್ಸಿ. ನಮಸ್ತೇ….

  2. ಅಪ್ಪಚ್ಚಿ,’ ಸಾವಿರ+ಎಸಳಿನ= ಸವಿರೆಸಳಿನ ‘ ಮಾಡುದು ಸರಿ ಕಾಣುತ್ತಿಲ್ಲೆ . ಮತ್ತೆ, ಸವಿರ ಹೇಳಿದರೆ ಎಂತ ಅರ್ಥ?’ ಪೂರ್ತಿ’ ಹೇಳುತ್ತ ಅರ್ಥಲ್ಲಿ ಎಲ್ಲಿಯೋ ಪ್ರಯೋಗ ಆಯಿದು .ನೆಂಪಾವುತ್ತಿಲ್ಲೆ .ತಿಳಿದವು ಹೇಳೆಕು. ಮತ್ತೆ ಎನಗೆ ವ್ಯಾಕರಣದ ಬಗ್ಗೆ ತಿಳುವಳಿಕೆ ಕಮ್ಮಿ. (ಕವಿಗೊ ಅಳದು ತೂಗಿ ಹೊಸ ಪ್ರಯೋಗ ಮಾಡುತ್ತವು,ಅದರ ನಾವು ಒಪ್ಪಿದ್ದು.)

    ಮತ್ತೆ ,ನಿಂಗಳ ಈ ಅನುವಾದ ದ ಕೆಲಸ ಅಧ್ಬುತ . ಅದರ ಬಗ್ಗೆ ಎರಡು ಮಾತಿಲ್ಲೆ . ದೀಪಿಕ ಹಾಡಿದ್ದು ಲಾಯಕ ಆಯಿದು ಇಬ್ರಿಂಗುದೆ ಅಭಿನಂದನೆಗೊ

    1. ಸಾವಿರೆ+ಎಸಳ=ಸಾವಿರೆಸಳ ಈ ಪ್ರಯೋಗ ಸರಿಯೋ ಹೇದು ಕೇಳಲೇ ಟೈಪು ಮಾಡುವಾಗ-ಸಾ-ಬದಲು “ಸ ” ಆಗಿ ಹೋದ್ದದು ಎನ್ನ ಕಣ್ಣಿ೦ಗೆ ಬಿದ್ದಿತ್ತಿಲ್ಲೆ! ಎನ್ನ ಜಿಜ್ಞಾಸೆ ಇದಿದಾ — ‘ ಸಾವಿರೆಸಳಿನ ‘ ಪ್ರತಿಯಾಗಿ, -” ಸಾವಿರೆಸಳ ” ಹೇದು “ನ”ಕಾರವ ಲೋಪಮಾಡಿದರೂ ಆಗದೋ- ಹೇಳ್ವದಾಗಿತ್ತು.ಇದರ ಬಗಗಾಗಿತ್ತು ಎನ್ನ ಸ೦ದೇಹ. ಉತ್ತರುಸಿ.

      1. ಸಾವಿರ+ಎಸಳ=ಸಾವಿರೆಸಳ ನಮ್ಮ ಹವ್ಯಕ ಭಾಷೆಗೆ ಒಪ್ಪುತ್ತು.ಈಗೀಗ ಕನ್ನಡದ ಪತ್ರಿಕೆಗೊ ಭಾಷೆಯ ಈ ರೀತಿ ಉಪಯೋಗುಸುದು ಕಾಣ್ತು. ‘ಕಳವಿಗೆತ್ನ’ಇತ್ಯಾದಿ

        1. ಎನ್ನ ಗಡಿಬಿಡಿ೦ದ ನಿ೦ಗೊಗೆ ರಜ್ಜ ತೊ೦ದರೆ ಆತೋ ಹೇ೦ಗೆ? ತಕ್ಷಣ ಉತ್ತರುಸುವ ನಿ೦ಗಳ ಸಹೃದಯತೆ೦ದ ಹೃದಯ ತು೦ಬಿತ್ತು.ಧನ್ಯವಾದಣ್ಣ.ಒಟ್ಟಿ೦ಗೆ ನಮೋನ್ನಮಃ

          1. ಅಪ್ಪಚ್ಚಿ, ಸಾಹಿತ್ಯದ ವಿಚಾರಲ್ಲಿ ಮಾತಾಡ್ಳೆ ತೊಂದರೆ ಎಂತರ? ಸಹೃದಯರ ವಿಮರ್ಶೆ,ಅಭಿಪ್ರಾಯ ಬೇಕಾದ್ದೇ ಅಲ್ಲದೋ.ಅಂಬಗ ನಾವೂ ಬೆಳತ್ತು.

          2. ॥ ಸ್ವಸ್ತಿ ಪ೦ಥಾಮನು ಚರೇಮ ಸೂರ್ಯಾಚ೦ದ್ರಮಸಾವಿವ ॥
            ಬಾಲಣ್ಣ,
            ನಿ೦ಗಳ ಈ ಮನೋಭಾವ ತು೦ಬಾ ಕೊಶಿ ಕೊಟ್ಟತ್ತು.” ಈ ವಿಷಯಲ್ಲಿ ನಾವಿಬ್ರುದೆ ಸಮಾನ ಗುಣಶೀಲರು ಹೇದಾತು.ಸ೦ತೋಷ. ಪರಸ್ಪರರಲ್ಲಿ ಇ೦ಥ ಮುಕ್ತ ಚಿ೦ತನಶೀಲ ಕಾರ್ಯ೦ಗೊ ಮು೦ದುವರಿಯಲಿ.ಭಾಷೆ+ಸಾಹಿತ್ಯ- ಇವೆರಡರ ಸಾ೦ಗತ್ಯಲ್ಲಿ ” ಕೊಡುಕೊಳೆ ಸ೦ಮ್ಮ೦ದ ” ನಿರ೦ತರ ಇದ್ದರಷ್ಟೇ ಅದರ ಉಸಿರಾಟ.ಆರೋಗ್ಯಕರವಾದ ನಿ೦ಗಳ ಈ ಗುಣ ಎನಗೆ ತು೦ಬಾ ಕೊಶಿ ಕೊಟ್ಟತ್ತಣ್ಣ. ಇ೦ಥ “ಮಧುರ ಬಾ೦ಧವ್ಯ” ಸದಾ ಹಸುರಾಗಿರಲಿ . ನಮಸ್ತೇ…..

  3. ಅಪ್ಪಚ್ಚಿ ನಮಸ್ಕಾರಂಗೊ.ಲಾಯಕ್ಕಾಯಿದು ದೀಪಿಕ ಹಾಡಿದ್ದರ ಕೇಳಲೆ ಎಡಿಗಾಯಿದಿಲ್ಲೆ .ಮತ್ತೆ ಕೇಳುತ್ತೆ .

    (೩೬ ನೆ ಶ್ಲೋಕದ ಅನುವಾದ ದ ಕಡೇ ಸಾಲು..ಸಾವಿರೆಸಳಿನ ತಾವರೆಲಿ ಹೇಳಿ ಆಯೆಕೋ ಕಾಣುತ್ತು )

    1. ಬಾಲಣ್ಣ,
      ಹರೇ ರಾಮ; ನಿ೦ಗಳ ಸಲಹೆ ಸರಿ. ಹಾ೦ಗೆ ಬದಲಿಸಿದ್ದೆ. ” ಎಸಳಿನ ” ಇಲ್ಲಿ – ನ – ಷಷ್ಥೀ ವಿಭಕ್ತಿಯ ಪ್ರತ್ಯಯ ರೊಪ. ಇದರ ನಮ್ಮ ಭಾಷೆಲಿ ಲೋಪ ಮಾಡಿ ಪ್ರಯೋಗ ಮಾಡುವದು ಕೂಡಾ ರೂಡಿಲಿ ಇದ್ದೋ ಹೇಳುವದು ನಿ೦ಗಳಲ್ಲಿ ಎನ್ನದೊ೦ದು ಜಿಜ್ಞಾಸೆ. ಈ ದೃಷ್ಟಿಲಿ ” ಸವಿರೆಸಳ ” ಪದ ಪ್ರಯೋಗ ಮಾಡಿದ್ದದು.ಈ ಬಗಗೆ ನಿ೦ಗಳ ಅಭಿಪ್ರಾಯ ದಯಮಾಡಿ ತಿಳ್ಶಿ.ನಿ೦ಗಳ ಸಕಾಲಿಕ ಸಲಹೆ ಹಾ೦ಗೂ ಒಪ್ಪ೦ಗೊಕ್ಕೆ ಹಾರ್ದಿಕ ಧನ್ಯವಾದ. ಉತ್ತರದ ನಿರೀಕ್ಷೆಲಿ ಸದ್ಯ ವಿರಾಮ. ನಮಸ್ತೇ….

  4. ಪ್ರತಿಯೊಂದು ಶ್ಲೋಕವೂ ಅತ್ಯದ್ಭುತ, ಅಪ್ಪಚ್ಚಿಯ ವಿವರಣೆಯೂ ಅತ್ಯುತ್ಕೃಷ್ಟ. ಹವಿಗನ್ನಡ ಪದವೂ ಅಷ್ಟೇ ಕೊಂಡಾಟ. ಹರೇ ರಾಮ ಅಪ್ಪಚ್ಹಿ. ಬಪ್ಪವಾರಕ್ಕೆ ಕಾಯ್ತೆ.
    [ಕ್ವಚಿದಪಿ ಕುಮಾತಾ ನ ಭವತಿ.” ಇ೦ಥ ಸ೦ದರ್ಭಲ್ಲಿ ನೆ೦ಪಾವುತಿಲ್ಲಿಯೋ?] – ನಿಸ್ಸಂದೇಹ. ನಮೋ ನಮಃ .

    1. ಚೆನ್ನೈ ಭಾವ,
      ಹರೇ ರಾಮ; ನಿ೦ಗಳ ಅರ್ಥವತ್ತಾದ ಒಪ್ಪ- ಒಪ್ಪಕ್ಕೆ ತು೦ಬು ಹೃದಯ ಧನ್ಯವಾದ. ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×