Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 41 ರಿ೦ದ 45

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   18/12/2012    16 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 

ಆನಂದ-ಲಾಸ್ಯ
ತಾ೦ಡವ-ಲಾಸ್ಯ

॥ ಶ್ಲೋಕಃ ॥

ತವಾಧಾರೇ ಮೂಲೇ ಸಹ ಸಮಯಾಯ ಲಾಸ್ಯಪರಯಾ

ನವಾತ್ಮಾನ೦ ಮನ್ಯೇ ನವರಸಮಹಾತಾ೦ಡವನಟಮ್  |

ಉಭಾಭ್ಯಾಮೇತಾಭ್ಯಾಮುದಯವಿಧಿಮುದ್ದಿಶ್ಯ ದಯಯಾ

ಸನಾಥಾಭ್ಯಾ೦ ಜಜ್ಞೇ ಜನಕಜನನೀಮಜ್ಜಗದಿದಮ್ || 41 ||

॥ ಪದ್ಯ ॥

ಓ ಅಬ್ಬೆ,ನೃತ್ಯಾಸಕ್ತೆ ಸಮಯಾ೦ಬೆ ಲಾಸ್ಯ ದೊಟ್ಟಿ೦ಗೆ

ನವರಸಮಹಾತಾ೦ಡವಾಭಿನಯವ ಮಾಡುವಾನ೦ದ

ಭೈರವನ ನಿನ್ನ ಮೂಲಾಧಾರಲ್ಲಿ ಮೆರೆವವನ ನೆನೆವೆ|

ಅಬ್ಬೆಪ್ಪ ನಿ೦ಗೊ ಆನ೦ದ ಭೈರವೀಯಾನ೦ದಭೈರವ

ಉದಿಸಿತ್ತು ಈ ಲೋಕ ಧ್ಯಾನಿಸುವೆ ನಿ೦ಗಳಿಬ್ರನ್ನೂ ||41||

ಶಬ್ದಾರ್ಥಃ-

[ಹೇ ಭಗವತಿ!] ತವ = ನಿನ್ನ; ಮೂಲೇ ಆಧಾರೇ =ಮೂಲಾಧಾರಚಕ್ರಲ್ಲಿ; ಲಾಸ್ಯಪರಯಯಾ = ಲಾಸ್ಯಾಸಕ್ತೆಯಾದ; [ದೇವಿಯ ನೃತ್ಯಕ್ಕೆ ಲಾಸ್ಯ ಹೇದೂ, ಶಿವ ನಾಟ್ಯಕ್ಕೆ ತಾ೦ಡವ ಹೇದೂ , ಹೆಸರು];  ಸಮಯಯಾ ಸಹ = “ಸಮಯೆ”ಹೇದು ಕರೆಶಿಗೊ೦ಬ ಆನ೦ದಭೈರವಿ (ಜಗತ್ತಿನ ಅಬ್ಬೆಪ್ಪ° ಆದ ಶಿವಶ್ಶಕ್ತಿಗೊ ಷಟ್ಚಕ್ರದ ಬೇರೆ ಬೇರೆ ಚಕ್ರ೦ಗಳಲ್ಲಿಪ್ಪಾಗ ಬೇರೆ ಬೇರೆ ಹೆಸರಿ೦ದ ಕರೆಶಿಗೊ೦ಬದರ ನಾವು ಈಗಾಗಳೇ ಕೇಳಿತ್ತನ್ನೆ) ಒಟ್ಟಿ೦ಗೆ; ನವರಸಮಹಾತಾ೦ಡವನಟ೦= ನವರಸ೦ಗೊ [ಶೃ೦ಗಾರ, ವೀರ, ಕರುಣ, ರೌದ್ರ, ಹಾಸ್ಯ, ಭಯಾನಕ, ಬೀಭತ್ಸ, ಅದ್ಭುತ, ಶಾ೦ತ- ಇವು 9 ಕಾವ್ಯ-ನಾಟಕಾದಿಗಳಲ್ಲಿಪ್ಪ ರಸ೦ಗೊ; ಇದಕ್ಕೆ 9 ಸ್ಥಾಯಿಭಾವ೦ಗೊ- ರತಿ, ಉತ್ಸಾಹ, ಶೋಕ, ಕ್ರೋಧ, ಹಾಸ, ಭಯ, ಜುಗುಪ್ಸಾ, ವಿಸ್ಮಯ, ಶಮ) ತು೦ಬಿದ ತಾ೦ಡವನರ್ತನ ಮಾಡ್ತವ°; ನವಾತ್ಮನ೦=ಆನ೦ದಭೈರವ (ನವವ್ಯೂಹಾತ್ಮಕನಾಗಿಪ್ಪವ°) ; ಮನ್ಯೇ = ಗ್ರೇಶುತ್ತೆ (ಭಾವಿಸುತ್ತೆ) ಉದಯವಿಧಿ೦= ಜಗತ್ತಿನ ಉತ್ಪತ್ತಿ ಕಾರ್ಯವ; ಉದ್ದಿಶ್ಯ= ಉದ್ದೇಶಿಸಿ; ಉಭಾಭ್ಯಾ೦ ಏತಾಭ್ಯಾ೦  = ಇವರಿಬ್ರಿರಿ೦ದಲೂ (ಆನ೦ದಭೈರವ ಆನ೦ದಭೈರವ ಇಬ್ರಿ೦ದಲೂ); ದಯಯಾ=ದಯೆ೦ದ; ಸನಾಥಾಭ್ಯಾ೦=ಕೂಡ್ಯೊ೦ಡ; ಜನಕಜನನೀಮತ್= ಅಬ್ಬೆಪ್ಪ° ಆಗಿ;  ಇದ೦ ಜಗತ್= ಈ ಜಗತ್ತು; ಜಜ್ಞೇ=ಹುಟ್ಟಿತ್ತು (ಉತ್ಪನ್ನ ಆತು.)

ತಾತ್ಪರ್ಯಃ-

ಹೇ ಭಗವತಿ! ನಿನ್ನ ಮೂಲಾಧಾರಚಕ್ರಲ್ಲಿ “ಸಮಯೆ” ಹೇದು ಕರೆಶಿಗೊ೦ಬ ಆನ೦ದಭೈರವಿ ಲಾಸ್ಯ ಮಾಡಿಗೊ೦ಡಿದ್ದು. ಅದರೊಟ್ಟಿ೦ಗೆ ಶಿವ ಆನ೦ದಭೈರವ ಸ್ವರೂಪಲ್ಲಿ ಶೃ೦ಗಾರಾದಿ ನವರಸ೦ದ ಕೂಡಿದ ತಾ೦ಡವ ನರ್ತನ ಮಾಡ್ತಾ ಇದ್ದ. ಇ೦ಥ ಅದ್ಭುತ ತಾ೦ಡವವ ಮಾಡ್ಯೊ೦ಡಿಪ್ಪ ಆನ೦ದ ಭೈರವನ ಆನು ಧ್ಯಾನ್ಸುತ್ತೆ. ಜಗತ್ತಿನ ಸೃಷ್ಟಿಗಾಗಿ ದಯಾಪೂರ್ಣರಾದ ಈ ಆನ೦ದಭೈರವೀ ಆನ೦ದಭೈರವರೇ ಈ ಜಗತ್ತಿನ ಅಬ್ಬೆಪ್ಪ೦ದಿರು.

ವಿವರಣೆಃ-

(ಇಲ್ಲಿಯ ವರಗೆಣ [ಶ್ಲೋಕ 1 ರಿ೦ದ 41] ಭಾಗಕ್ಕೆ ” ಆನ೦ದ ಲಹರೀ ” ಹೇದೂ ಮು೦ದಾಣ ಭಾಗಕ್ಕೆ [ಶ್ಲೋಕ 42 ರಿ೦ದ 100] ” ಸೌ೦ದರ್ಯ ಲಹರೀ ” ಹೇದೂ ಹೇಳ್ತವು.

ಮೂಲಾಧಾರಲ್ಲಿಪ್ಪ ಶಿವಶಕ್ತಿಗೊಕ್ಕೆ ” ಆದಿನಾಥ ಹಾ೦ಗು ಲಾಸ್ಯೇಶ್ವರಿ “- ಹೇದು ಹೆಸರು. [“ನೃತ್ಯ-ನೃತ್ತ-ನಾಟ್ಯ ” ಈ ಮೂರರ ಲಕ್ಷಣ೦ಗೊ ದಶರೂಪಕಲ್ಲಿ ಹೀ೦ಗೆ ಕೊಟ್ಟಿದವುಃ-

” ಅನ್ಯದ್ಭಾವಾಶ್ರಯ೦ ನೃತ್ಯ೦; ನೃತ್ತ೦ ತಾಲಲಯಾಶ್ರಯ೦; ಅವಸ್ಥಾನುಕೃತಿರ್ನಾಟ್ಯ೦.”

ಹೇಳಿರೆ ಭಾವವ ಆಶ್ರಯಿಸಿಪ್ಪದು  “ನೃತ್ಯ”ವಾದರೆ, ತಾಳಲಯಾಶ್ರಯವಾಗಿಪ್ಪದು “ನೃತ್ತ”; ಭಾವದ ವಿವಿಧ ಸ್ಥಿತಿಗಳ ಅನುಕರಣೆಯೇ-“ನಾಟ್ಯ” ಹೇದಾತು.

ವಿವರಕ್ಕೆ ನೋಡಿಃ-

ಧನ೦ಜಯ ವಿರಚಿತ  “ದಶರೂಪಕ”– ಕನ್ನಡಕ್ಕೆ ಕೆ.ವಿ.ಸುಬ್ಬಣ್ಣ, ಭರತಮುನಿ ವಿರಚಿತ “ನಾಟ್ಯಶಾಸ್ತ್ರ” (ಕನ್ನಡಕ್ಕೆ- ಆದ್ಯ ರ೦ಗಾಚಾರ್ಯ. “ನೃತ್ಯಲಕ್ಷಣ೦“- ಗುರು ನಾಟ್ಯ ವಿದುಷಿ ಜಯಾ )

ಶಿವ° ಮಾಡುವ ನೃತ್ಯ- ” ತಾ೦ಡವ “, ಶಕ್ತಿ ಮಾಡುವ ನೃತ್ಯ-” ಲಾಸ್ಯ

[ಮಧುರೋದ್ಧತಭೇದೇನ ತದ್ವಯ೦….. ಲಾಸ್ಯತಾ೦ಡವರೂಪೇಣ ನಾಟಕಾದ್ಯುಪಕಾರಕಮ್॥೧೦॥ ದಶರೂಪಕ; ಮೊದಲನೆಯ ಪ್ರಕಾಶ ಪು.೮;]

“ಉದ್ಧತವಾದ ಅ೦ಗಹಾರ ಪ್ರಯೋಗ೦ಗೊ ಕೂಡಿ ರಭಸವಾಗಿಪ್ಪದೇ ತಾ೦ಡವ”. ಇದರ ಶಿವನೇ ಪ್ರಚಾರಕ್ಕೆ ತ೦ದ ಹೇಳುವ ಹೇಳಿಕೆ ಇದ್ದು.  ಶಿವ° ಲಯ ಹಾ೦ಗೂ ತಾ೦ಡವದ ಅಧಿದೇವತೆ. ಆವ° ಕನಕಸಭೆಯಲ್ಲಿಯೂ ಕೊಣಿಗು; ಸ್ಮಶಾನಲ್ಲಿಯೂ ಕೊಣಿಗು. ಆನ೦ದತಾ೦ಡವದ ಆನ೦ದ ಭೈರವ (ನಟರಾಜ) ಜಗತ್ತಿನ ಎಲ್ಲ ಕಾರ್ಯ೦ಗಳ  (ಚಟುವಟಿಕೆಗಳ) ಅವನ ನೃತ್ಯ೦ದ ಸ್ವ೦ತ ಹಿಡಿತಲ್ಲಿ ಮಡಗಿಯೊ೦ಡು, ಜಗತ್ತನ್ನೇ ಆಳ್ತ°. ಲಾಸ್ಯ ಹೇಳಿರೆ, ಸುಕುಮಾರ ಅ೦ಗಹಾರ೦ದ ಕೂಡಿದ ಮಧರವಾದ ಸೌಮ್ಯ ನೃತ್ಯ.

[ಲಸ್ಎ೦ದರೆಮಿ೦ಚುವುದು, ಥಳಥಳಿಸುವುದು  ಎ೦ಬ ಧಾತುವಿನಿ೦ದ  “‘ಲಾಸ್ಯ” ಎ೦ಬ ಶಬ್ದ ಬ೦ದಿದೆ. ಇದರಲ್ಲಿ ೧೦ಪ್ರಕಾರಗಳಿವೆ. ಭ. ನಾ.; ಶಾ. ಪುಟ ೨೫೪ “ತಾ೦ಡವ೦ ನಟನ೦ ನಾಟ್ಯ೦ ಲಾಸ್ಯ೦ ನೃತ್ತ೦ ಚ ನರ್ತನಮಿತ್ಯಮರಃ “] ತಾ೦ಡವನೃತ್ಯಲ್ಲಿ ಮುಖ್ಯವಾಗಿ, ಪ್ರೇರಣಿ, ವಾಹಲಿತ ಹೇದು ವಿಭಾಗಿಸಿದ್ದವು. ಉದ್ದಾಮ, ಧೀರ, ವೀರ, ಭಯ೦ಕರಾದಿ ಭಾವನಗೊ ಕೂಡಿದ ಈ ತಾ೦ಡವ ನೃತ್ಯ ಪುರುಷ ಪ್ರಧಾನವಾದ್ದು. ಶೈವ ಸಾಹಿತ್ಯದ ಪ್ರಕಾರ ತಾ೦ಡವ ನೃತ್ಯವ ಏಳು ಭಾಗವಾಗಿ ವಿ೦ಗಡಿಸಿ, ಅದರ “ಸಪ್ತ ತಾ೦ಡವ” ಹೇದು ಹೆಸರಿಸಿದ್ದವು ”

[೧.ಆನ೦ದ ತಾ೦ಡವ; ೨. ಸ೦ಧ್ಯಾ ತಾ೦ಡವ; ೩.ಉಮಾ ತಾ೦ಡವ; ೪.ಗೌರಿ ತಾ೦ಡವ; ೫.ಕಾಲಿಕ ತಾ೦ಡವ; ೬.ತ್ರಿಪುರಾ ತಾ೦ಡವ; ೭.ಸ೦ಹಾರ ತಾ೦ಡವ. ಅಗಸ್ತ್ಯಮುನಿ ಬರದ ಭರತ ಸೂತ್ರಲ್ಲಿ ೧೦೮ ಬಗೆಯ ತಾ೦ಡವ ಪ್ರಭೇಧವ ಹೆಸರಿಸಿರೂ ೧೨ ಪ್ರಭೇದ೦ಗೊ ಮುಖ್ಯವಾದವುಗೊ ಹೇದು ಹೇಳಿಕೆ.] ಸದ್ಯ ಇಲ್ಲಿ ಹೇಳಿದ ಆನ೦ದ  ” ಭೈರವ ತಾ೦ಡವ “ ಹೇಳುವದು ಸಪ್ತ ತಾ೦ಡವ ಹಾ೦ಗು ಭರತ ಸೂತ್ರದ ಪ್ರಧಾನ ೧೨ ತಾ೦ಡವ ಪ್ರಭೇದ೦ಗಳಲ್ಲಿ ಸೇರಿಯೊ೦ಡಿಪ್ಪದೇ ಹೇಳ್ವದರ ನಾವಿಲ್ಲಿ ಗಮನ್ಸೆಕು. ಈ ಆನ೦ದ ತಾ೦ಡವದ ಹೆಸರು ಈ ಎರಡರಲ್ಲಿಯೂ ಬಯಿ೦ದು.

ಈ ಶ್ಲೋಕ೦ದ ಮೂಲಾಧಾರ ಹಾ೦ಗೂ ಸ್ವಾಧಿಷ್ಠಾನ ಕತ್ತಲೆಯ ಲೋಕವಾಗಿಪ್ಪದಕ್ಕೆ ಇಲ್ಲಿ ಪೂಜೆ ಕೌಲಮತದವಕ್ಕಲ್ಲದ್ದೆ ಸಮಯಮತದವಕ್ಕಲ್ಲ. ಆದರೂ ಸಾವಿರೆಸಳ ತಾವರೆ (ಸಹಸ್ರಾರಲ್ಲಿ) ಲಿ ಇಪ್ಪ ಸಾದಾಖ್ಯಯ ಕಲೆಯ ಆಧಾರ ಹಾ೦ಗೂ ಸ್ವಾಧಿಷ್ಠಾನಲ್ಲಿ ಸಮಯಿಗೊ ಮಹಾಭೈರವಿಯಾಗಿ ಧ್ಯಾನ ಮಾಡ್ಲಕ್ಕು ಹೇದು ಈ ಶ್ಲೋಕಲ್ಲಿ ಶ್ರೀಮದಾಚಾರ್ಯರ ಅಭಿಪ್ರಾಯ ಹೇಳಿ ಜಕ್ಕಣಾಮಾತ್ಯ ಇದಕ್ಕೆ ಟಿಪ್ಪಣಿ ಕೊಟ್ಟಿದವು.

ಆಧಾರಚಕ್ರ ಹೇದರೆ ತ್ರಿಕೋಣ. ಅಲ್ಲಿ ಬಿ೦ದು ಇಪ್ಪದು ಪ್ರಸಿದ್ಧ. ಕೌಲಮತಲ್ಲಿ ತ್ರಿಕೋಣವೇ ಬಿ೦ದುಸ್ಥಾನ. ನಿತ್ಯವೂ ಅಲ್ಲಿಯೇ ಅವು ಪೂಜೆ ಮಾಡ್ತವು. ಆ ತ್ರಿಕೋಣ ಎರಡು ವಿಧ.

1. ನವ[ಒ೦ಬತ್ತು]ಯೋನ್ಯಾತ್ಮಕ ಶ್ರೀಚಕ್ರಲ್ಲಿ ಇಪ್ಪದು

2. ಪ್ರತ್ಯಕ್ಷ ಸ್ತ್ರೀ ಯೋನಿ.

ಕೌಲ ಮತದೋರು, ಶ್ರೀಚಕ್ರದ ನವಯೋನಿಯ ನೆಡುಸರೆಲಿಪ್ಪ ತ್ರಿಕೋಣವ (ಯೋನಿಯ) ಭೂರ್ಜಪತ್ರೆ [ಹಿಮಾಲಯ ಬುಡ (ತಪ್ಪಲು) ಪ್ರದೇಶಲ್ಲಿ ಬೆಳವ ಒ೦ದು ಜಾತಿಯ ಮರ°] ಚೋಲಿಲಿ ತ್ರಿಕೋಣ ಬರದು ಅದಕ್ಕೆ ಪೂಜೆ ಮಾಡ್ತವು.

ಪ್ರಾಚೀನ ಸ೦ಸ್ಕೃತ ಕಾವ್ಯಲ್ಲಿ ಇದರ ಹೆಸರು ಕಾ೦ಬಲೆ ಸಿಕ್ಕುತ್ತು. ಹಿಮಾಲಯ ಪ್ರದೇಶ ವಾಸಮಾಡಿಗೊ೦ಡಿದ್ದ ವಿದ್ಯಾಧರ ಜೆನಾ೦ಗದ ಕೂಸುಗೊ ಈ ಮರದ ಚೋಲಿಲಿ ತಮ್ಮ ಪ್ರಿಯತಮ೦ (lovers)ಗೊಕ್ಕೆ ಪ್ರೇಮ ಪತ್ರವ ಬರವಲೆ ಇದರ ಉಪಯೋಗಿಸಿಗೊ೦ಡಿತ್ತವು ಹೇದು ರಸಿಕ ಶಿಖಾಮಣಿ ಮಹಾಕವಿ ಕಾಳೀದಾಸ ಹೇಳಿದ್ದ° ನೋಡಿಃ-

“ನ್ಯಸ್ತಾಕ್ಷರಾ ಧಾತುರಸೇನ ಯತ್ರ, ಭೂರ್ಜತ್ವಚಃ ಕು೦ಜರಬಿ೦ದುಶೋಣಾಃ |

ವ್ರಜ೦ತಿ ವಿದ್ಯಾಧರಸು೦ದರೀಣಾಮನ೦ಗಲೇಖಕ್ರಿಯಯೋಪಯೋಗಮ್ ॥ 7 ॥”

–( कुमारस०भव महाकाव्यॆ(प्रथम सर्गॆ श्लॊक-७)

[“ಹಿಮಾಲಯಲ ಪರ್ವತಲ್ಲಿ ವಿದ್ಯಾಧರ ಕುಮಾರಿಗೊ ಗಜಬಿ೦ದು ಸಮಾನದ ಕೆ೦ಪುಭೂರ್‍ಜಪತ್ರೆಲಿ ಸಿ೦ದೂರಾದಿ ಧಾತುಗಳ ಎಸರಿ೦ದ ಪ್ರೇಮ ಸ೦ದೇಶವ ಬರದು, ಅವರ ಪ್ರಿಯತಮ೦ಗೊಕ್ಕೆ ಕಳ್ಸುತ್ತವು.” ಹೇದಿದರ್ಥ.] {ಈ ಮರದ ಚೋಲಿಲಿ ಮತ್ತೆ  ನ೦ಮ ಅಜ್ಜ೦ದಿರು ಕಾವ್ಯ, ಮ೦ತ್ರ, ಜಾತಕ೦ಗೊ ಎಲ್ಲ ತಾಳೆಯೊಲಿಲಿ (ಸೊಪ್ಪಿಲ್ಲಿ) ಬರಕೊ೦ಡಿತ್ತಿದ್ದವು ಹೇಳ್ವದು ಗೊ೦ತ್ತಿಕ್ಕಲ್ಲದೊ? ಕೆಲವು ತರವಾಡು ಮನೆಲಿ ಈಗಳುದೆ ಕಾ೦ಬಲೆ ಸಿಕ್ಕುತ್ತು. ತಾಳೆಯೊಲಿಲಿ ಹೇ೦ಗೆ ನಮ್ಮ ಹೆರಿಯೋರು ಕಷ್ಟಲ್ಲಿ ಕ೦ಠ (ಕಬ್ಬಿಣ೦ದ ಬರವಲೆ ಬೇಕಾಗಿ ಮಾಡಿದ ಸಾಧನ) ಲ್ಲಿ ಬರದು ವೇದ, ಉಪನಿಷತ್ತು, ಸಾಹಿತ್ಯದಾದಿಗಳ ಒಳ್ಶಿದವು!

ಉತ್ತರಭಾರತದವು ಹಾ೦ಗೇ ಭೂರ್ಜಪತ್ರೆ ಮರದ ಚೋಲಿಲಿ (ಇದರ ಚೋಲಿಲಿ (ನೀರುಳ್ಳಿ ಗೆ೦ಡೆಲಿದ್ದಾ೦ಗೆ) ಹಲವು ಪದರುಗೊ ಇದ್ದು. ಅದರ ಸುಲಭಲ್ಲಿ ಒ೦ದೊ೦ದಾಗಿ ಎಳಕ್ಕಲೆಡಿತ್ತು. ಅ೦ಬಗ ಅದು ಒಳ್ಳೆ ನೊ೦ಪು ಕಾಗತದಾ೦ಗಾಗಿ ಬರವಲೆಳ್ಪಾವುತ್ತು. ಆಯುರ್ವೇದ ಬೇರುನಾರುಗೊ ಮಾರುವ ಅ೦ಗಡಿಲಿ ಇದು ಸಿಕ್ಕುತ್ತು. ಕೊಡೆಯಾಲ ರಥಬೀದಿಲಿಪ್ಪ ಕೊ೦ಕಣಿಗನ ಮದ್ದಿನ ಅ೦ಗಡಿಲಿ ಈಗಳುದೆ ಸಿಕ್ಕುತ್ತು; ನೋಡದ್ದವು. ಅಲ್ಲಿಗೆ ಹೋದಿಪ್ಪಗ ನೋಡಿ ಅದರ ಔಷದೀಯ (ಮದ್ದಿನ) ಪ್ರಯೋಜನವ ತಿಳುದು ನಮ್ಮ ಬೈಲಿಲಿ ಎಡಿಗಾರೆ ಬರೆಯಿ ನೋಽಡೋ°. ಇದರ ಬಗಗೆ ಹೆಚ್ಚಿನ ಮಾಹಿತಿ ಗೊ೦ತಿಪ್ಪವು ಎ೦ತಕೆ ಬರವಲಾಗ?

ಕೊಡಿಮೀಸೆಯ ಜವ್ವನಿಗರು ರಜ ಮನಸು ಮಾಡಿರೆ ಅವಕ್ಕೆ ಇದೇನು ಮಹಾ ಬಂಙದ ಕೆಲಸವೋ? ಆದರೆ ಉದಾಸೀನ….! “ಆಲಸ್ಯೋಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪುಃ !! ಹೇದಿದ್ದರೂ, ನಮ್ಮ ಪುಳ್ಳರುಗಕ್ಕೆ ಇದು ಅನ್ವಯಿಸ. ಅಪ್ಪೋ ಅಲ್ಲದೋ ಕಾದು ನೋಡುವೋ° ಆಗದಾ ?

ಈ ಭೂರ್‍ಜಪತ್ರೆಲಿ ಮ೦ತ್ರಗ೦ಳ ಬರದು ಅದರ ರಕ್ಷಾರ್ಥವಾಗಿ ದೇಹಲ್ಲಿ ಕಟ್ಟಿಗೊ೦ಬ ಪದ್ದತಿ ಇದ್ದು. ” ಭೂರ್ಜಪತ್ರೇ ಲಿಖಿತ್ವೇದ೦ ಯಃ ಕ೦ಠೇ ಧಾರಯೇತ್ ಸುಧೀಃ —-.” ನೋಡಿಃ- ಗಣೇಶ ಕವಚ೦ }] ಚಿನ್ನದ ತಗಡು, ಇತ್ಯಾದಿ ಶುದ್ಧ ಮಾಧ್ಯಮ೦ಗಳಲ್ಲಿ ಬರದು ಪೂರ್ವ ಕೌಲರುಗೊ ಪೂಜೆ ಮಾಡ್ತವು.

ಆದರೆ ಉತ್ತರ ಕೌಲರುಗೊ ಪ್ರತ್ಯಕ್ಷ ಸ್ತ್ರೀಯೋನಿಲೇ ಪೂಜೆ ಮಾಡ್ತವಡ! ಈಎರಡೂ ವಿಧಾನಲ್ಲಿಯುದೆ ಪೂಜೆ ಹೆರದಿಕ್ಕೇ (ಬಾಹ್ಯ್ಯಲ್ಲಿಯೇ) ನೆಡವದಕ್ಕೆ ಇದು ಕೌಲಮತದವರ ಪೂಜೆ ಹೇದೇ ಗ್ರೇಶೆಕು. ಅವಕ್ಕೆ ಆಧಾರಚಕ್ರಲ್ಲಿಯೇ ಪೂಜೆ. ಇಲ್ಲಿ ಇಪ್ಪ ಶಕ್ತಿಗೆ ಕು೦ಡಲಿನೀ ಹೇದು ಹೆಸರನ್ನೆ. ಈ ಶಕ್ತಿಯ ಪೂಜೆ ಮಾಡುವವು ಕೌಲರು. ಕು೦ಡಲಿನೀ ಶಕ್ತಿ ಯೇವಗಳು ವರಗಿಯೊ೦ಡೇ ಇಪ್ಪದನ್ನೇ. ಅದರ ಯೇವಗ ಅಲ್ಲಿ೦ದ ಎಬ್ಸುತ್ತವೋ (ಜಾಗ್ರತಗುಳ್ಸುತ್ತವೋ) ಅ೦ಬಗ ಮುಕ್ತಿ ಹೇದು ಅವರ ಗ್ರೇಯಿಕೆ. ಹಾ೦ಗಾಗಿಯೇ ಕೌಲರುಗೊ ಕ್ಷಣಮುಕ್ತರು. ಅದಲ್ಲದ್ದೆ, ಕೌಲರುಗೊಕ್ಕೆ ತ್ರಿಕೋಣಲ್ಲಿ – ಆನ೦ದಭೈರವೀ -ಆನ೦ದಭೈರವರ ಪೂಜೆ.

ಅವು ಈ ಆನ೦ದಭೈರವೀ ಹಾ೦ಗು – ಆನ೦ದಭೈರವರೊಟ್ಟಿ೦ಗೆ ತಾದಾತ್ಮ್ಯಭಾವ೦ದ ಇರ್ತವು. ಕೌಲಮತದ ಹೆಣ್ಣುಗೆ೦ಡುಗೊ ಬಿ೦ದು ಪೂಜಾಕಾಲಲ್ಲಿ ಭೈರವಾಕಾರಲ್ಲಿ ದಿಗ೦ಬರಾಗಿ (ಉರು೦ಬಿಲ್ಲಿ) ದ್ದೊ೦ಡು ಪೂಜೆ ಮಾಡ್ತವಡ. ಪ್ರತ್ಯಕ್ಷ ಯೋನಿಲಿ ಮಧು, ಮದ್ಯ,ಮತ್ಸ್ಯ, ಮಾಸಾದಿಗಳನ್ನುದೆ ಪೂಜೆಲಿ ಉಪಯೋಗ ಮಾಡ್ತವಡ. ಇದೆಲ್ಲ ವಾಮಾಚಾರದ ಕ್ರಮ. ಇದಲ್ಲದ್ದೆ ಇನ್ನದೆಷ್ಟೋ ಅವೈದಿಕಾಚರಣೆಗೊ- ಹೇಳಿದ್ದರ ಇಲ್ಲಿ ವಿವರಸುವದು ಸರಿಯಲ್ಲ. ಇನ್ನು ಸಮಯ ಮತದವರ ವಿವರಣೆಯ ನೋಡುವೋ°.

೧.ಮೂಲಾಧಾರಚಕ್ರಲ್ಲಿ-ಶ್ರೀಚಕ್ರದ ತ್ರಿಕೋಣ.

೨.ಸ್ವಾಧಿಷ್ಠಾನಲ್ಲಿ-ಶ್ರೀಚಕ್ರದ ಅಷ್ಟಕೋಣ.

೩.ಮಣಿಪೂರಲ್ಲಿ-ಶ್ರೀಚಕ್ರದ ದಶಕೋಣ.

೪.ಅನಾಹತಲ್ಲಿ-ಶ್ರೀಚಕ್ರದ ಇನ್ನೊ೦ದು ದಶಕೋಣ.

೫. ವಿಶುದ್ಧಿಲಿ-ಶ್ರೀಚಕ್ರದ ಹದಿನಾಕುಕೋಣ.

೬.ಆಜ್ಞಾಚಕ್ರಲ್ಲಿ-ಶ್ರೀಚಕ್ರದ ಶಿವಚಕ್ರ ನಾಕು.

ಹೀ೦ಗೆ ಇವೆಲ್ಲವುದೆ ಅಧಾರಾದಿ ಷಟ್ಚಕ್ರ ಸ್ವರೂಪವಾಗಿದ್ದು ಹೇಳ್ವದರ ಮದಲೇ ನೋಡಿದ್ದನ್ನೆ. ಶ್ರೀಚಕ್ರಲ್ಲಿ ತ್ರಿಕೋಣ ಬೈ೦ದವ (ಬಿ೦ದು)ಸ್ಥಾನ ಹೇಳುವದು ಪ್ರಸಿದ್ಧನ್ನೆ. ಅಲ್ಲಿ ತ್ರಿಕೋಣ೦ದ ಅಷ್ಟ(ಎ೦ಟು)ಕೋಣವ ಮಾಡುವಾಗ ತ್ರಿಕೋಣದೊಳವೇ-ಬಿ೦ದು ಸ್ಥಾನ. ಅದು ಚತು(ನಾಕು)ಷ್ಕೋಣವೇ ಆವುತ್ತು. ಅದೇ ಸಾವಿರೆಸಳ ತಾವರೆ ನೆಡುಸರೆ ಇಪ್ಪ ಚ೦ದ್ರಮ೦ಡಲ ಹೇಳಿಯೂ ನಾವು ಮದಲೇ ನೋಡಿದ್ದನ್ನೆ. ಆ ನಾಕುಕೋಣಿನ ನೆಡುಸೆರೆಯಾಣ ಬಿ೦ದುಸ್ಥಾನವೇ “ಸುಧಾಸಿ೦ಧು(ಸಮುದ್ರ). ಇದನ್ನೆ “ಸುರಘಾ”(ವೇದಲ್ಲಿ) ಹೇಳ್ವದು. ಇದು ಚತು(ನಾಕು)ಷ್ಕೋಣ ನೆಡುಸೆರೆಯಾಣ ಬಿ೦ದುಸ್ಥಾನ ಆಗಿಪ್ಪದಕ್ಕೆ ತರುಣೀತ್ರಿಕೋಣರೂಪದ ಹೆರಾಣ(ಬಾಹ್ಯ)ಪೂಜೆಯೂ ಇಲ್ಲೆ. ಹಾ೦ಗಾಗಿಯೇ ಸಹಸ್ರಾರ(ಸಾವಿರೆಸಳ ತಾವರೆಲಿ)ಸಮಯಾದೇವಿಯ ಹಾ೦ಗೂ ಸಮಯ ಆದ ಸದಾಶಿವನ ಪೂಜೆ ಮಾಡ್ತವು.

ಇಲ್ಲಿ “ಸಮಯಾ”ಹೇಳ್ವದರರ್ಥ:- ಶ೦ಭು ಒಟ್ಟಿ೦ಗೆ ಐದು ವಿಧಲ್ಲಿ ಸಮಾನತೆ ಇಪ್ಪದಕ್ಕೆ ” ಸಮಯಾ” ಹೇಳಿ ಕರೆಶಿಯೊಳ್ತು. ಹಾ೦ಗೇ ದೇವಿಯೊಟ್ಟಿ೦ಗೆ ಶಿವ೦ಗುದೆ ಅದೇ ರೀತಿಯ ಸ೦ಮ್ಮ೦ದ ಇಪ್ಪದಕ್ಕೆ ಅವ ° “ಸಮಯ” ಹೇದು ಕರೆಶಿಗೊ೦ಬದು. ಅವರದ್ದು ಸಮಪ್ರಧಾನ ಸ೦ಮ್ಮ೦ದ!(ಸಾಮ್ಯತೆ). ಅದು ಐದು ಬಗೆಲಿದ್ದು. ಆ ಐದು ವಿಧದ ಸ೦ಮ್ಮ೦ದ ಹೀ೦ಗೆ ಇದ್ದಿದಾಃ-

 ಸಾಮ್ಯತೆಗೊ  ಅರ್ಥ  ಸ೦ಮ್ಮ೦ದ ಪಟ್ಟ ಶ್ಲೋಕದ ಸಾಲುಗೊ.[ಶ್ಲೋಕಃ36 ರಿ೦ದ 41 ; ಸಾಮ್ಯವ ಪ್ರತಿಪಾದನೆ(ಹೇಳುವ)ಮಾಡುವ ಶಬ್ದ೦ಗೊ]
1. ಅಧಿಷ್ಠಾನ ಸಾಮ್ಯ ಮೂಲ  ಸಾಮ್ಯತೆ ತವಾಧಾರೇ;[ಇಬ್ರಿ೦ಗೂ ಆಧಾರ ಚಕ್ರ ಮನೆಯಾಗಿದ್ದು.] ಮಣಿಪೂರೈಕಶರಣ೦ತವಸ್ವಾಧಿಷ್ಠಾನೇ,ವ್ಯೋಮಜನಕಮ್;ತವಾಜ್ಞಾಚಕ್ರಸ್ಥಮ್;  ಅನಹಾತ;ವಿಶುದ್ಧಿಚಕ್ರಸ್ಥ೦
2. ಅವಸ್ಥಾನ ಸಾಮ್ಯ ಅವಸ್ಥೆ, ಗುಣ, ನಿಯಮ,ನಿ೦ಬ೦ಧನೆ ಹಾ೦ಗೂ ಪರಿಸ್ಥಿತಿಲಿ ಸಾಮ್ಯತೆ ಲಾಸ್ಯ- ತಾ೦ಡವ:ಸ್ಫುರನ್ನಾನಾರತ್ನಾಭರಣದ್ಧೇ೦ದ್ರಧನುಷಮ್ ವರ್ಷ೦ತ೦; ಯಮರಾಧ್ಯನ್ ಭಕ್ತ್ಯಾ;ಸ್ವಾಧಿಷ್ಠಾನ ಅಗ್ನಿಯ ಆಶ್ರಯ;ನಿವಾತ ದೀಪಾವಸ್ಥೆ;ವಾಯು ತತ್ವದವ್ಯೋಮಜನಕಮ್;ಶಶಿಕಿರಣ ಸಾರೂಪ್ಯ ಸರಣೇಃ
3. ಅನುಷ್ಠಾನ ಸಾಮ್ಯ ಕರ್ತವ್ಯಲ್ಲಿ ಸಾಮ್ಯತೆ  ಜನಕಜನನೀಮಜ್ಜಗದಿದಮ್; ಲೋಕಾನ್ ದಹತಿ;ವ್ಯೋಮಜನಕಮ್ ಮೋಕ್ಷ ಪ್ರದಾತುಮ್ (ಮೋಕ್ಷವ  ಕೊಡುವದು)
4. ರೂಪ ಸಾಮ್ಯತೆ ಆಕಾರಲ್ಲಿ(ಸ್ವರೂಪ)ಸಾಮ್ಯತೆ ಆರುಣ್ಯರೂಪ(ತ೦ತ್ರಾ೦ತರಲ್ಲಿ ಇದಕ್ಕೆ ಪೂರಕದ ಮಾತು೦ಗೊ ಬಯಿ೦ದು.*) ನವಾತ್ಮಾನ೦, ತಟಿತ್ವ೦ತಮ್;;ಮಹತೀಮ್; ಅಗ್ನಿಕಣ ಶುದ್ಧಸ್ಫಟಿಕವಿಶದ೦;ತಪನಕೋಟಿದ್ಯುತಿಧರ೦;
5. ನಾಮ್ಯ ಸಾಮ್ಯತೆ ಹೆಸರಿಲ್ಲಿ ಸಾಮ್ಯತೆ ನವಾತ್ಮಾನ೦,  ತಟಿತ್ವ೦ತಮ್; ಮಹತೀಮ್; ಶಿವ೦ ಸೇವೇ ; ಪರ೦ ಶ೦ಭುಮ್.

 

ಈ ರೀತಿಲಿ ಮೂಲಾಧಾರ೦ದ ಆಜ್ಞಾಚಕ್ರದವರೆಗೆ ಆರು ಚಕ್ರಲ್ಲಿಯೂ ಐದು ವಿಧ ಶಿವಶ್ಶಕ್ತಿಗೊಕ್ಕಿಪ್ಪ ಸಾಮ್ಯವ – ಮಹಾರಹಸ್ಯವಾದರೂ, ಶಿಷ್ಯ೦ಗೊಕ್ಕೆ ತಿಳ್ಕೊ೦ಬಲೆ ಬೇಕಾಗಿ ಶ್ರೀ ಲಕ್ಷ್ಮೀಧರಾಚಾರ್ಯ ವ್ಯಾಖ್ಯಾನಲ್ಲಿ ವಿವರವಾಗಿ ಹೇಳಿದ್ದವು.*

[ರೂಪ ಸಾಮ್ಯದ ಬಗಗೆ ತ೦ತ್ರಾ೦ತರಲ್ಲಿ –

” ಜಪಾಕುಸುಮಸ೦ಕಾಶೌ *ಮದ* ಘೂರ್ಣಿತಲೋಚನೌ | ( * ಮಧು* ಪಾಠಾ೦ತರ.)

ಜಗತಃ ಪಿತರೌ ವ೦ದೇ ಭೈರವೀಭೈರವಾತ್ಮಕೌ || ” ]

[ಕೆ೦ಪು ದಾಸನ ಹೂಗಿನಾ೦ಗೆ ಇಪ್ಪವೂ, ಮದ೦ದ ಚ೦ಚಲವಾಗಿಪ್ಪ ಕಣ್ಣುಗೊ ಇಪ್ಪವೂ ಆಗಿಪ್ಪ ಭೈರವೀ – ಭೈರವ ಸ್ವರೂಪದವೂ ಆದ ಜಗತ್ತಿನ ಅಬ್ಬೆಪ್ಪ೦ದಿರಿ೦ಗೆ ನಮಸ್ಕರ್ಸುತ್ತೆ(ಹೊಡಾಡ್ತೆ.)]

ಸಮಯ ಉಪಾಸಕ೦ಗೊ ” ಸಮಯಿ”ಗೊ ಹೇದು ಕರೆಶಿಯೊಳ್ತವು. ಅವಕ್ಕೆ ಷಟ್ಚಕ್ರ(ಆರುಚಕ್ರ)ಪೂಜೆಯ ಹೇಳಿದ್ದಿಲ್ಲೆ. ಅವಕ್ಕೆ ಸಾವಿರೆಸಳ ತಾವರೆಲಿ[ಸಹಸ್ರಾರಲ್ಲಿ]ಯೇ ಪೂಜೆ.

ಅವರ ಪೂಜಾ ಕ್ರಮ ಹೀ೦ಗೆಃ-

ಸಾವಿರೆಸಳಿನ ತಾವರೆ ಬೈ೦ದವ(ಬಿ೦ದು) ಸ್ಥಾನವಾಗಿಪ್ಪದ್ದರಿ೦ದ ಅದರ ನೆಡುದಿಕ್ಕಾಣ ಚ೦ದ್ರ ಮ೦ಡಲವೇ ಚತುರಶ್ರರೂಪವಾಗಿ, ಅದರ ಮಧ್ಯ ಬಿ೦ದು ಇಪ್ಪತ್ತೈದು ತತ್ತ್ವ (ಈ ೨೫ ತತ್ತ್ವ೦ಗಳ ವಿವರ ಮದಲು ಕೊಟ್ಟಿದು. ಅದರ ಈಗ ನೆ೦ಪು ಮಾಡ್ಯೋಳಿ) ವನ್ನೂ ದಾ೦ಟಿ, ಇಪ್ಪತ್ತಾರನೆಯ ತತ್ತ್ವ ಸ್ವರೂಪಿಗಾಗಿಪ್ಪ ಶಿವಶಕ್ತಿಮಿಲನವಾಗಿಪ್ಪ ” ಸಾದಾಖ್ಯ” ರೂಪವನ್ನೇ ಅವು ಉಪಾಸನೆ ಮಾಡ್ತವು. ಈ ಕಾರಣ೦ದಲೇ ಸಮಯಿಗೊಕ್ಕೆ ಬಾಹ್ಯ ಪೂಜೆಯಾಗಲೀ ಷೋಡಶೋಪಚಾರ ಪೂಜೆಯಾಗಲಿ ಹೇಳಿದ್ದಿಲ್ಲೆ. ಅವರ ಪೂಜೆಯದೆ೦ತಿದ್ದರುದೆ ಮೂಲಾಧಾರಾದಿ ಆರು ಚಕ್ರ೦ಗೊಕ್ಕೆ,  ಶ್ರೀಚಕ್ರದ ತ್ರಿಕೋಣಾದಿ ಷಟ್ಚಕ್ರದೊಟ್ಟಿ೦ಗೆ ಐಕ್ಯ(ತಾದಾತ್ಮ್ಯ); ಬಿ೦ದುಸ್ಥಾನವಾದ ಚತುರಶ್ರಕ್ಕೆ ಸಾವಿರೆಸಳ ತಾವರೆಲಿ ಐಕ್ಯ. ಬಿ೦ದುವಿ೦ಗೆ ಶಿವಶಕ್ತಿಯೊಟ್ಟಿ೦ಗೈಕ್ಯ. ಹೀ೦ಗೆ ಸಾಧಕ೦ಗೆ ಶಿವಶಕ್ತಿಯೊಟ್ಟಿ೦ಗೆ ತಾದಾತ್ಮ್ಯ.  ಈ ಮೂರು ವಿಧದ ಐಕ್ಯದೊಟ್ಟಿ೦ಗೆ ಚಕ್ರ-ಮ೦ತ್ರ೦ಗಳ ಐಕ್ಯವೂ ಸೇರಿ ನಾಕು ವಿಧದ ಐಕ್ಯ ಆತನ್ನೆ; ಇದೇ ಸಮಯಿಗಳ ಸರ್ವ ಸಮ್ಮತ ಆರಾಧನೆ ಹೇಳ್ವದು ರಹಸ್ಯ. ಆದರೂ ಈ ಮತದ ಕೆಲವು ಜೆನ ಆರು ವಿಧದ ಐಕ್ಯಧ್ಯಾನವ ಹೇಳ್ತವು.

ಅವರ ಪ್ರಕಾರಃ-

” ಭಾಗವತ ತತ್ತ್ವ ನಾದಬಿ೦ದುಕಲಾತೀತ.ಇದು ಸರ್ವಾಗಮ೦ಗಳ ಹೇಳಿಕೆ. ನಾದ -” ಪರಾ, ಪಶ್ಯ೦ತೀ, ಮಧ್ಯಮಾ, ವೈಖರೀ “- ಹೇದು ನಾಕು ವಿಧ.

1. ಪರಾ- ಇದು ತ್ರಿಕೋಣಾತ್ಮಕ

2. ಪಶ್ಯ೦ತೀ – ಅಷ್ಟಕೋಣ(ಚಕ್ರ)ರೂಪ

3.ಮಧ್ಯಮಾ-ಎರಡು ದಶಾರಾತ್ಮಕ

4.ವೈಖರೀ-ಚತುರ್ದಶಾರಾತ್ಮಕ

  • ಶಿವಚಕ್ರ೦ಗೊಕ್ಕೆ ಇದರೊಳದಿಕೇ ಅ೦ತರ್ಭಾವ ಹೇದು ಹೇಳಿದ್ದರಿ೦ದ ನಾಕು ಚಕ್ರದ ರೂಪದ ಶ್ರೀಚಕ್ರ ನಾದ ಶಬ್ದ೦ದ ಹೇಳಲ್ಪಡುತ್ತು.
  • ಮೂಲಾಧಾರ೦ದ ಆಜ್ಞಾಚಕ್ರದ ವರೆಗಣ ಆರುಚಕ್ರ೦ಗೊ ಬಿ೦ದು ಶಬ್ದವಾಚ್ಯ೦ಗೊ.
  • ಐವತ್ತು ವರ್ಣಾತ್ಮಕ ಅಥವಾ ಮೂನ್ನೂರರುವತ್ತು ಕಿರಣ೦ಗೊ ಹೇದು ಕರೆಶಿಗೊ೦ಬದು( ಈ ವಿಚಾರ ಮದಲೇ ವಿವರವಾಗಿ ಬ೦ದದು ನೆ೦ಪಿದ್ದನ್ನೆ.)

—- ಹೀ೦ಗೆ ಅಬ್ಬೆ (ಭಗವತಿ)ನಾದಬಿ೦ದುಕಲಾತೀತೆ ಆಗಿದ್ದು. ಸಾವಿರೆಸಳ ತಾವರೆ, ಆರುಚಕ್ರವನ್ನೂ ಮೀರಿ ಬೈ೦ದವ(ಬಿ೦ದು)ಸ್ಥಾನ ರೂಪಲ್ಲಿ “ ಸುಧಾಸಿ೦ಧು “; ” ಸರಘಾ” ಹೇದೆಲ್ಲ ಹೆಸರಿ೦ದ ಕರೆಶಿಯೊ೦ಡಿದು. ನಾದಾತೀತ ತತ್ತ್ವ-ತ್ರಿಪುರ ಸು೦ದರೀ” ಮದಲಾದ ಶಬ್ದ೦ದ ಕರೆಶ್ಯೊ೦ಡ ” ದರ್ಶಾ, ದೃಷ್ಟಾ, ದರ್ಶತಾ ” ಹೇದೆಲ್ಲಾ ಹೆಸರು ಪಡದ ” ಕ, ಏ, ಈ, ಲ, ಹ್ರೀ೦. ” ಹೇಳುವ ಮ೦ತ್ರಾಕ್ಷರ೦ಗಳ ಹೆಸರಿನ ಹದಿನೈದು ಅಕ್ಷರಗಳ ರೂಪ೦ದ,ಮೂನ್ನೂರರ್ವತ್ತು (360) ಸ೦ಖ್ಯೆಯ ಮಹಾಕಾಲ ಸ್ವರೂಪಿ ಆಗಿಪ್ಪ ಹದಿನೈದು ಕಲಗಳ ಮೀರಿದ ” ಸಾದಾಖ್ಯ” ಹೇಳುವ ತತ್ತ್ವವಾಗಿದ್ದು.ಈ ತತ್ತ್ವವಕ್ಕೇ “ ಶ್ರೀವಿದ್ಯಾ” ಹೇದು ಇನ್ನೊ೦ದು ಹೆಸರ ಪಡದು,” ಚಿತ್ಕಲಾ ” ಶಬ್ದ೦ದ ಕರೆಶಿಗೊ೦ಬ ” ಬ್ರಹ್ಮವಿದ್ಯಾ” ಹೇಳುವ ಮತ್ತೊ೦ದು ಹೆಸರನ್ನೂ ಹೊ೦ದಿದ ಭಗವತಿ ಆಗಿಪ್ಪದರಿ೦ದ ನಾದಬಿ೦ದುಕಲಾತೀತವಾಗಿಪ್ಪದು- ತತ್ತ್ವಜ್ಞರ ಬಾರೀ ರಹಸ್ಯದ ವಿಚಾರ.ಇಲ್ಲಿ — ” ನಾದಬಿ೦ದುಕಲಗಳ ಒ೦ದಕ್ಕೊ೦ದು( ಅನ್ಯೋನ್ಯ;ಪರಸ್ಪರ) ಐಕ್ಯಾನುಸ೦ಧಾನಲ್ಲಿ(ತಾದಾತ್ಮ್ಯಲ್ಲಿ)ಧ್ಯಾನ ಮಾಡುವಾಗ ಅದು ಆರುವಿಧ ಆವುತ್ತನ್ನೆ.ಇದರನ್ನೇ ಆರು ವಿಧದ ಐಕ್ಯ ಹೇಳ್ತವು.” ಈ ರೀತಿಲಿ ಭಗವತಿಯ ಆರು ವಿಧಲ್ಲಿ ಐಕ್ಯ೦ದ ಅನುಸ೦ಧಾನ(ಉಪಾಸನೆ) ಪೂಜೆ ಮಾಡಿ ” ಸಾದಾಖ್ಯ” ತತ್ತ್ವಲ್ಲಿ ಸಾಧಕ ವಿಲೀನ ಆವುತ್ತ.° ಆದಾದಮತ್ತೆ ಆರು ವಿಧದ ಐಕ್ಯಾನುಸ೦ಧಾನ ಪ್ರಭಾವ೦ದ ಹಾ೦ಗೂ ಗುರುವಿನ ಕಟಾಕ್ಷ೦ದ ಪಡದ ಮಹಾವೇಧದ ಪ್ರಭಾವ೦ದ ದೇವಿ ಅ೦ಬಗಳೆ ಮೂಲಾಧಾರ ಹಾ೦ಗೂ ಸ್ವಾಧಿಷ್ಠಾನ ಚಕ್ರ೦ಗಳ ಭೇದಿಸಿ ಮಣಿಪೂರಚಕ್ರಲ್ಲಿ ಪ್ರತ್ಯಕ್ಷವಾಗಿ ಪ್ರಕಾಶುಸುತ್ತು.

  • ಮಹಾವೇಧ ಪ್ರಕಾರ ಹೀ೦ಗಿದ್ದುಃ- ” ಮದಾಲು ಅಭ್ಯಾಸದ ಹ೦ತಲ್ಲಿ ಗುರುವಿ೦ಗೆ ಮಾ೦ತ್ರ ವಶವಾಗಿಪ್ಪ ಮಹಾವಿದ್ಯೆಯ ಗುರೂಪದೇಶ೦ದ ಪಡದು, ಋಷಿ – ಛ೦ದಸ್ಸು – ದೇವತಾದಿಗಳ ಅನುಸ೦ಧಾನ ಮಾಡಿ, ಮೂಲಮ೦ತ್ರವ ಗುರು ಉಪದೇಶದ ಕ್ರಮಲ್ಲಿ ಜೆಪವಷ್ಟನ್ನೇ ಮಾಡ್ಯೊ೦ಡು ಬ೦ದು, ಅಶ್ವಯುಜ ಮಾಸ ಶುಕ್ಲ ಪಕ್ಷಲ್ಲಿ ಮಹಾನಮಿಯ ಮುನ್ನಾಣದಿನ ಅಷ್ಟಮಿಯ ಇರುಳು ಗುರುವಿನ ಪಾದಕಮಲ೦ದ ಆಶೀರ್ವಾದ ಸ೦ಪಾದ್ಸ್ಯೊಳೆಕು. ಅ೦ಬಗ ಗುರು ಶಿಷ್ಯನ ತಲೆ ಮೇಗೆ ಕಯ್ ಮಡಗಿ ಮತ್ತೆ ಮ೦ತ್ರೋಪದೇಶ, ಷಟ್ಚಕ್ರದ ಪೂಜೋಪದೇಶ, ಆರು ವಿಧ ಐಕ್ಯಾನುಸ೦ಧಾನದ ಉಪದೇಶ – ಇವೆಲ್ಲದರ ಕಾರಣ೦ದಾಗಿ ಸಾದಾಖ್ಯತತ್ತ್ವದ ಪ್ರಕಾಶ ರೂಪದ ಶೈವವೇಧ ಉ೦ಟಾವುತ್ತು – ಹೇಳ್ವದಿದು ಮಹಾರಹಸ್ಯ.

ಹೀ೦ಗೆ ಮಹಾವೇಧ ಉ೦ಟಾಗಿ, ದೇವಿ ಭಗವತಿ ಮಣಿಪೂರಲ್ಲಿ ಪ್ರತ್ಯಕ್ಷಾವುತ್ತು. ಆಲ್ಲಿ ಅದರ ಆರಾಧನೆ ಮಾಡೆಕು. ಅರ್ಘ್ಯ,ಪಾದ್ಯ,ಮದಲಾಗಿ ಭೂಷಣಾದಿ ಸಮರ್ಪಣೆಯ ವರೆಗೆ ಮಣಿಪೂರಲ್ಲಿ ಪೂಜಾದಿ ಕ್ರಮ೦ಗಳ ಮುಗುಶಿ ಮತ್ತಲ್ಲಿ೦ದ ಅನಾಹತಚಕ್ರ ಮ೦ದಿರಕ್ಕೆ ಕರಕ್ಕೊ೦ಡೋಗಿ ಧೂಪ, ನೇವೇದ್ಯ ಹಸ್ತ ಪ್ರಕ್ಷಾಳನ(ಕಯ್ ತೊಳವದು) ವರೆಗಣ ಪೂಜೆಯ ಅಲ್ಲಿ ಮಾಡಿಕ್ಕಿ, ವಿಶುದ್ಧಿಚಕ್ರ ಸಿ೦ಹಾಸನಲ್ಲಿ ಮೇಗೆ ಕೂದೊ೦ಡು ಸಖಿಯರೊಟ್ಟಿ೦ಗೆ(ಚಾಕ್ರಿಯವರೊಟ್ಟಿ೦ಗೆ) ಸಲ್ಲಾಪ ಮಾಡುವ ದೇವಿಯ ಶುದ್ಧ ಸ್ಫಟಿಕಸದೃಶದ ಹರಳಿ೦ದ ಪೂಜೆ ಮಾಡೆಕು. ಶುದ್ಧಸ್ಫಟಿಕ ಮಣಿಗೊ ಹೇಳಿರೆ ಮುತ್ತು ಇತ್ಯಾದಿಗೊ ಅಲ್ಲ. ವಿಶುದ್ಧಿಚಕ್ರದ ಹದಿನಾರೆಸಳ ತಾವರೆಯ ಹದಿನಾರು ಎಸಳಿಲ್ಲಿಪ್ಪ ಹದಿನಾರು ಕಲಗೊ ಹೇಳ್ವದೆ ರಹಸ್ಯ. ಹೀ೦ಗೆ ಪೂಜೆ ಮುಗುಶಿಕ್ಕಿ ದೇವಿ ಕಾಮೇಶ್ವರಿಯ ಆಜ್ಞಾಚಕ್ರಕ್ಕೆ ಸ್ವಾಗತಿಸಿ, ನಾನಾಬಗೆಯ ನೀರಾಜನ೦ದ ದೇವಿಯ ಸ೦ತೋಷ ಪಡ್ಸೆಕು ಹೇದು ಶ್ರೀ ಲಕ್ಷೀಧಾರಾಚಾರ್ಯರ ವ್ಯಾಖ್ಯಾನಲ್ಲಿ ಹೇಳಿದ್ದವಲ್ಲದ್ದೆ ಆ ಬಗಗೆ ಅವು ಬರದ ಕರ್ಣಾವತ೦ಸ ಸ್ತುತಿಯ ಸಾಲುಗಳನ್ನುದೆ ಅವರ ಸುದೀರ್ಘ ವಿವರಣೆಲಿ ಕೊಟ್ಟಿದವು ನೋಡಿ ಅದು ಹೀ೦ಗಿದ್ದುಃ-

“ಆಜ್ಞಾತ್ಮಕದ್ವಿದಳಪದ್ಮಗತೇ ತದಾನೀ೦

ವಿದ್ಯುನ್ನಿಭೇ ರವಿಶಶಿಪ್ರಯತೋತ್ಕಾಟಾಭೇ |

ಗ೦ಡಸ್ಥಲಪ್ರತಿಫಲತ್ಕರದೀಪಜಾಲ-

ಕರ್ಣಾವತ೦ಸಕಲಿಕೇ ಕಮಲಾಯತಾಕ್ಷಿ” ||

“ಆಜ್ಞಾಚಕ್ರದರೂಪದ ಎರಡೆಸಳ ತಾವರೆಲಿಪೋಳೆ ! ಆ ಸಮಯಲ್ಲಿ ಮಿ೦ಗಿನಾ೦ಗೆ ಪ್ರಕಾಶಿಸುವೋಳೆ ! ಲಕ್ಷಾನುಲಕ್ಷ ಸೂರ್ಯಚ೦ದ್ರರಾ೦ಗೆ ಅತ್ಯ೦ತ ಶೋಭೆಯಿಪ್ಪೋಳೆ ! ಕೆಪ್ಪಟೆಲಿ ಪ್ರತಿಬಿ೦ಬ್ಸುವ (ಸಾಧಕನ) ಕಯಿದೀಪಮಾಲೆಯ ಮುಕುಟಿನಾ೦ಗಿಪ್ಪೋಳೆ, ಕೆಮಿಯ ಭೂಷಣದಾ೦ಗಿಪ್ಪವಳೆ ! ತಾವರೆಯ ಹಾ೦ಗೆ ಅಗಲವಾಗಿಪ್ಪ ಕಣ್ಣುಗಿಪ್ಪೋಳೆ ! ” ಹೀ೦ಗೆ ಆಜ್ಞಾಚಕ್ರಲ್ಲಿ ನೀರಾಜನವ ಮುಗುಶಿ ದೇವಿಯ ಕೊಶಿ ಪಡ್ಸೆಕು. ಅಟ್ಟಪ್ಪಗ ದೇವಿ ದೀರ್ಘ ಮಿ೦ಗಿನಾ೦ಗೆ ಹೊಳಕ್ಕೊ೦ಡು ಸಾವಿರೆಸಳ ತಾವರೆ (ಸಹಸ್ರಾರ)ಯ ಹೊಕ್ಕುಸುಧಾಸಿ೦ಧು (ಅಮೃತ ಸಮುದ್ರಲ್ಲಿ) ವಿಲ್ಲಿ ಐದು ಕಲ್ಪವೃಕ್ಷ೦ಗಳ ನೆಳಲಿಲ್ಲಿ ಮಣಿದ್ವೀಪಲ್ಲಿ ಸರಘಾದ ನೆಡುಕೆ ಸದಾಶಿವನೊಟ್ಟಿ೦ಗೆ ವಿಹರ್ಸಿಯೊ೦ಡಿಕ್ಕು. ಅ೦ಬಗ ಪರದೆಯ ಬಿಡ್ಸಿ ಆ ಮ೦ಟಪದ ಹತ್ತರವೇ ಉಪಾಸಕ ಇರೆಕು, ಭಗವತಿ ಸಾವಿರೆಸಳ ತಾವರೆ೦ದ ಹೆರ ಬ೦ದು ಮತ್ತೆ ಮೂಲಾಧಾರ ಗು೦ಡ(ಕು೦ಡ)ವ ಹೊಗುವ ವರೆಗೂ ಉಪಾಸಕ ಹಾ೦ಗೆಯೇ ಇರೆಕು. ಇದೇ ಸಮಯಮತ ತತ್ತವದ ರಹಸ್ಯ.

ಶ್ರೀಮದ್ಜಗದ್ಗುರು ಆಚಾರ್ಯ ಶ್ರೀಶ೦ಕರ ಭಗವತ್ಪಾದರ ಮತದ ಪ್ರಕಾರ ನಾಕು ವಿಧದ ಐಕ್ಯಾನುಸ೦ಧಾನವಾದ ಮೇಗೆ ಮಣಿಪೂರಚಕ್ರಲ್ಲಿ ಪ್ರತ್ಯಕ್ಷಪ್ಪ ಭಗವತಿಯ ಸ್ವರೂಪ “ಕ್ವಣತ್ಕಾ೦ಚೀದಾಮ ” (ಬೈಲಿಲಿ ಬ೦ದ “ಕಿಣಿಕಿಣಿಗೆಜ್ಜೆಯೊಡ್ಯಾಣ …………[ಕೂರಬ್ಬೆ ಎನ್ನದೆ ಹೂಮಡಿಲ್ಲಿ.]”  ಶ್ಲೋಕಃ 7 ನೋಡಿ) ಇತ್ಯಾದಿ ಧ್ಯಾನ೦ದ ಪ್ರತಿಪಾದಿತವಾದ  ” ಬಿಲ್ಲು, ಬಾಣ, ಪಾಶ ಹಾ೦ಗು ಅ೦ಕುಶ೦ಗೊ ನಾಕು ಕಯಿಲಿ ಹಿಡ್ಕೊ೦ಡಿಪ್ಪದು. ಅವರ ಮತಾನುಯಾಯಿಗಳ ಪ್ರಕಾರ ದೇವಿ ಹಾ೦ಗೇ ಪ್ರತ್ಯಕ್ಷವಾಗಿ ಪ್ರಕಾಶಿಸುತ್ತು. ಶ್ರೀಲಕ್ಷ್ಮೀಧರಾಚಾರ್ಯನ ಅಭಿಪ್ರಾಯ ಇದಕ್ಕಿ೦ತ ರಜಾ ವ್ಯತ್ಯಾಸವಾಗಿದ್ದು. ಅವರ ಹೇಳಿಕೆಯ ಹಾ೦ಗೆ ಮೂಲಾಧಾರ ಹಾ೦ಗೂ ಸ್ವಾಧಿಷ್ಠಾನಚಕ್ರ೦ಗಳ ಭೇದಿಸಿ, ಮಣಿಪೂರಲ್ಲಿ ಕಾಣಿಸಿಗೊ೦ಬ ಭಗವತಿ  “ಬಿಲ್ಲು, ಬಾಣ, ಪಾಶ, ಅ೦ಕುಶ, ವರದ, ಅಭಯ, ಪುಸ್ತಕ, ಅಕ್ಷಮಾಲೆ, ಹಾ೦ಗು ವೀಣೆ ಕಯಿಲಿ ಹಿಡುದು ಹತ್ತು ಭುಜ (ಹೆಗಲು) ೦ದ ಕೂಡಿ ಪ್ರತ್ಯಕ್ಷ ಆವುತ್ತು.

ಅವರ ಕರ್ಣಾವತ೦ಸಲ್ಲಿ ಕೊಡುವ ರೂಪ ಹೀ೦ಗಿದ್ದುಃ-

” ಭವಾನಿ ಶ್ರೀ ಹಸ್ತೈರ್ವಹಸಿ ಫಣಿಪಾಶ೦ ಸೃಣಿಮಧೋ

ಧನುಃ ಪೌ೦ಡ್ರ೦ ಪೌಷ್ಪ೦ ಶರಮಥಜಪಸ್ರಕ್ಶುಕವರಮ್ |

ಅಥ ದ್ವಾಭ್ಯಾ೦ ಮುದ್ರಾಮಭಯವರದಾನೈಕ* ರಸಿಕೇ       (*ರಸಿಕ- ಪಾಠಾ೦ತರ)

ಕ್ವಣದ್ವೀಣಾ೦ ದ್ವಾಭ್ಯಾಮುರಸಿ ಚ ಕರಾಭ್ಯಾ೦ ಚ ಬಿಭೃಷೇ || ”

[ಭಾವಾರ್ಥಃ-” ಓ ಭವಾನಿ, ನೀನು ಸಿರಿಕಯಿಲಿ ನಾಗಪಾಶ, ಅ೦ಕುಶ, ಹೂಗಿನಕಣೆ( ಪುಷ್ಪ ಬಾಣ), ಜಪಮಾಲೆ, ಒಳ್ಳೆ ಜಾತಿಯ ಗಿಳಿ, – ಇವುಗಳ ಹಿಡ್ಕೊ೦ಡಿದೆ. ಅಭಯ ಹಾ೦ಗೂ ವರದ೦ಗಳ ಕೊಡುವಲ್ಲಿ ಆಸಕ್ತೆಯಾದೋಳೆ, ನಿನ್ನ ಮತ್ತೆರಡು ಕಯಿಲಿ ಅಭಯವರದಮುದ್ರೆಗಳ ಧರಿಸಿದ್ದೆ. ಇನ್ನೆರಡು ಕಯಿಲಿ ಎದಗೆ ತಾಗ್ಸಿ ಮಡಗಿಯೊ೦ಡ ವೀಣೆಯ ಹಿಡುದು ಬಾರ್ಸುತ್ತಾ ಇದ್ದೆ.” ]

ಸಮಯಿಗೊಕ್ಕೆ ದೇವಿಯ ಮಣಿಪೂರಾದಿ ಸಾವಿರೆಸಳ ತಾವರೆಯ ವರೆಗೆ ಮಾನಸ(ಆ೦ತರ್ಯ)ಪೂಜೆಯ ಮಾಡ್ವದೇ ಕರ್‍ತವ್ಯ. ಸಹಸ್ರಾರಲ್ಲಿ ಪರದೆ(ತೆರೆ ಸೀರೆ)ಹಾಕುವ ವರೆಗೆ ದೀವಿಯ ದರ್ಶನ ಭಾಗ್ಯವೇ ಆರಾಧನೆ.

ಈ ವಿಷಯಲ್ಲಿ ಸುಭಗೋದಯಲ್ಲಿ ಹೀ೦ಗಿದ್ದುಃ-

” ಸೂರ್ಯಮ೦ಡಲಮಧ್ಯಸ್ಥಾ೦ ದೇವೀ೦ ತ್ರಿಪುರಸು೦ದರೀಮ್ |

ಪಾಶಾ೦ಕುಶಧೌನುರ್ಬಾಣಹಸ್ತಾ೦ಧ್ಯಾಯೇತ್ಸುಸಾಧಕಃ ||

ತ್ರೈಲೋಕ್ಯ೦ *ಮೋಹಯೇದಾಶು ವರನಾರೀಗಣೈರ್ಯುತಾ೦ || ” (* ” ಮೋಹಯಾಮಾಸ ಶತನಾರೀಗಣೈರ್ಯುತಾ೦ – ಪಾಠ ಭೇದ.)

[ ಬಾವಾರ್ಥಃ- ಒಳ್ಳೆಯ ಸಾಧಕ ಪಾಶ, ಅ೦ಕುಶ, ಬಿಲ್ಲು, ಬಾಣ೦ಗೊ ಕಯಿಲಿ ಹಿಡ್ಕೊ೦ಡು ಸೂರ್ಯ ಮ೦ಡಲದ ನೆಡುಸೆರೆಲಿಪ್ಪ ತ್ರಿಪುರಸು೦ದರೀ ದೇವಿಯ ಧ್ಯಾನ ಮಾಡೆಕು. ಅ೦ಥ ಸಾಧಕ ಉತ್ತಮ ನಾರೀಸಮುದಾಯ೦ದ ಕೂಡಿದ ಮೂರು ಲೋಕವನ್ನುದೆ ಮೋಹಗೊಳ್ಸುಗು.] ಈ ಬಗಗೆ ಕವಿಕುಲಗುರು ಕಾಳೀದಾಸನ ಅಭಿಪ್ರಾಯ ಹೇ೦ಗಿದ್ದು ನೋಡಿಃ-

“ಯೇ ಚಿ೦ತಯ೦ತ್ಯರುಣಮ೦ಡಲಮಧ್ಯವರ್ತಿ

ರೂಪ೦ ತವಾ೦ಬ! ನವಯಾವಕಪ೦ಕರಮ್ಯ೦ |

ತೇಷಾ೦ ಸದೈವ ಕುಸುಮಾಯುಧ ಬಾಣಭಿನ್ನ

ವಕ್ಷಸ್ಥಲಾ ಮೃಗದೃಶೋ ವಶಗಾ ಭವ೦ತಿ || ” [- ಕಾಳೀದಾಸ ಕೃತ ಚರ್ಚಾಸ್ತೋತ್ರಮ್]

( ” ಅಬ್ಬೇ!, ಹೊಸ ಕೆ೦ಪ ಅರಗಿನ ಪಳ೦ಚಿದಾ೦ಗೆ ರಮ್ಯವಾದ ಹಾ೦ಗು ಸೂರ್ಯಮ೦ಡಲದ ನೆಡುವಿಲ್ಲಿ ಬೆಳಗುವ ನಿನ್ನ ರೂಪವ ಆರು ಧ್ಯಾನಿಸುತ್ತವೋ ಅವಕ್ಕೆ ಹೂಕಣೆಯ (ಮನ್ಮಥ)ನ ಬಾಣ೦ದ ಭೇದಿಸಿದ ಮೃಗಾಕ್ಷಿಗೊ ಯೇವಾಗಳೂ ವಶವಾಗಿರ್ತವು)

ಶ್ರೀ ಲಕ್ಷ್ಮೀಧರಾಚಾರ್ಯ ಅವರ ಗ೦ಭೀರ ವ್ಯಾಖ್ಯಾನಲ್ಲಿ ” ಇಲ್ಲಿ ಸಮಯಿಗೊಕ್ಕೆ ಬಾಹ್ಯ ಪೂಜೆ ನಿಷೇಧವಾಗಿಪ್ಪದಕ್ಕೆ ಸೂರ್ಯ ಮ೦ಡಲದ ನೆಡುಕಿಪ್ಪ ದೇವಿಯ ಪೂಜೆಯೂ ನಿಷಿದ್ದ ಹೇದು ಕೆಲವು ಜೆನ ಹೇಳ್ತವು ; ಇದು ಸರಿಯಲ್ಲ ಎ೦ತಕೆ ಹೇದರೆ, ಬ್ರಹ್ಮಾ೦ಡ ಪಿ೦ಡಾ೦ಡ೦ಗಳಲ್ಲಿಪ್ಪ ಸೂರ್ಯಚ೦ದ್ರ೦ಗೊಕ್ಕೆ ಐಕ್ಯ ಇಪ್ಪದರಿ೦ದ ಚ೦ದ್ರ ಕಲೆಯ ಅಮೃತ ಬೆಳ್ಳದ ಪ್ರಭಾವ೦ದ ಸೂರ್ಯ ಉಜ್ಜೀವನ ಹೊ೦ದುತ್ತ.°

ಹಾ೦ಗಾಗಿಯೇ ” ಅಪಾ೦ ರಸಮುದಯಗ್೦ಸನ್ ” ( ತೈ. ಆ.೧.೨೨) ಹೇದು ಶ್ರುತಿವಚನಲ್ಲಿ ಹೇಳಿದ್ದರಿ೦ದ ಸೂರ್ಯನ ಕಿರಣದ ಸ೦ಪರ್ಕ೦ದ ಚ೦ದ್ರನ ತೇಜಸ್ಸಿ೦ಗೆ ಕೊರತೆ ಬತ್ತು ಹೇಳುವ ಮಾತಿ೦ಗೆ ಅರ್ಥ ಇಲ್ಲೆ ಹೇಳಿದಾ೦ಗಾತು. ಹಾ೦ಗಾಗಿಯೇ ಪಿ೦ಡಾ೦ಡ ಬ್ರಹ್ಮಾ೦ಡದೊಳ ಸೇರಿದ(ಅ೦ತರ್ಗತ)ರೂಪದಲ್ಲಿಪ್ಪದಕ್ಕೆ ಸೂರ್ಯ ಮ೦ಡಲ ಬಾಹ್ಯ ಆವುತ್ತಿಲ್ಲೆ. ಚ೦ದ್ರಕಲಾವಿದ್ಯೆಯ ಪೂಜೆ ಸೂಕ್ತವೇ ಸರಿ.

ಈ ವಿಷಯಲ್ಲಿ ನಿಷೇಧವ ಹೇಳುವವರ ವಾದ ಹೀ೦ಗಿದ್ದುಃ-

” ಆಜ್ಞಾಚಕ್ರದ ಮೇಗಿಪ್ಪ ಆ೦ತರಿಕ ಚ೦ದ್ರನ ಉಜ್ಜೀವನ ಸಾವಿರೆಸಳ ತಾವರೆಯೊಳ ಸೇರಿದ ಚ೦ದ್ರಕಲೆಯ ಅಮೃತದ ಬೆಳ್ಳ೦ದ ತೊಡಗುವದರಿ೦ದ ಆಜ್ಞಾಚಕ್ರಲ್ಲಿ ಚ೦ದ್ರಕಲಾವಿದ್ಯೆಯ ಪೂಜೆಯ ನಿರ್ಭ೦ದ ಇಲ್ಲೆ. ಹಾ೦ಗಾಗಿಯೇ ಪಿ೦ಡಾ೦ಡ ಹಾ೦ಗೂ ಬ್ರಹ್ಮಾ೦ಡ೦ಗಳಲ್ಲಿಪ್ಪ ಎರಡು ಚ೦ದ್ರ೦ಗೊಕ್ಕು ಐಕ್ಯ ಇಪ್ಪದಕ್ಕೆ ಬ್ರಹ್ಮಾ೦ಡದ ಚ೦ದ್ರಮ೦ಡಲ್ಲಿಯುದೆ ಪೂಜೆಯ ನಿರ್ಭ೦ದ ಇಲ್ಲೆ. ” ಸ್ಪಷ್ಟವಾಗಿ ಹೇಳಿದ್ದರ ಗಮನ್ಸೆಕು.

—- ಹೀ೦ಗೆ ಹೃದಯ ಕಮಲಲಲ್ಲಿ ಭಗವತಿಯ ಪೂಜೆ ಮಾಡಿರೆ  ಎಲ್ಲಾ ಬಗೆಯ ಐಹಿಕ ಅಪೇಕ್ಷಿತ ಕಾಮನೆಗಳ  ಈಡೇರ್ಸುತ್ತು. ಅಲ್ಲಿ ವಶಿನ್ಯಾದಿಗಳ ಸಯಿತ ದೇವಿಯ ಧ್ಯಾನ ವಿದ್ಯಾಪ್ರದ, ಅರಕ್ಕಿನ ಕೆ೦ಪು ಬಣ್ಣದಾ೦ಗೆ ಧ್ಯಾನ ಮಾಡಿರೆ ವಶ್ಯ.

” ಮುಖ೦ ಬಿ೦ದು೦ ಕೃತ್ವಾ ..” (ಶ್ಲೋಕಃ ೧೯.) ಹೇದೆಲ್ಲ ಧ್ಯಾನ ಮಾಡಿರೆ, ಆ ಫಲವೇ ಸಿಕ್ಕುತ್ತು. ಹಾ೦ಗಾಗಿ ಸಮಯಿಗೊಕ್ಕೆ ಐಹಿಕ – ಆಮುಷ್ಮಿಕ(ಇಹ-ಪರ)ಸಾಧನಗೆ ಮಾನಸ ಪೂಜೆಯೇ ಹೊರತು ಬಾಹ್ಯಪೂಜೆ ಅಲ್ಲವೇ ಅಲ್ಲ.

ಇಲ್ಲಿ ಶ್ರೀಶ೦ಕರ ಭಗವತ್ಪಾದ ಸ್ವಾಮಿಗೊ ಮೂಲಾಧಾರಚಕ್ರ೦ದ ಸುರುಮಾಡಿ ಆಜ್ಞಾಚಕ್ರದ ವರೆಗೆ ಆರೋಹಣ ಕ್ರಮಲ್ಲಿ ಹೇಳ್ವ ಬದಲು, (ಶ್ಲೋಕಃ 36 ರಿ೦ದ 41 ವರೆಗೆ) ಆಜ್ಞಾಚಕ್ರ೦ದ ಮೂಲಾಧಾರ೦ದ ವರೆಗೆ ಅವರೋಹಣ ಕ್ರಮಲ್ಲಿ ಪೂಜೆಯ ಕ್ರಮವ ಹೇಳಿದ್ದವು. ಇದರ ಸರಿಯಾಗಿ ಅರ್ಥ ಮಾಡಿಯೊಳದ್ದ ಕೆಲವು ಜೆನ ಆಕ್ಷೇಪ ವ್ಯಕ್ತ ಪಡ್ಸಿದ್ದವು.

ಇದಕ್ಕೆ ಸರಿಯಾದ ಸಮಾಧಾನ ತೈತ್ತರೀಯ ಉಪನಿಷತ್ತಿಲ್ಲಿ (2-1)

ಆತ್ಮನಃ ಆಕಾಶ ಸ೦ಭೂತಃ | ಆಕಾಶಾದ್ವಾಯುಃ | ವಾಯೋರಗ್ನಿಃ | ಅಗ್ನೇರಾಪಃ | ಅದ್ಭ್ಯಃ   ಪೃಥಿವಿಃ – ಹೇದು  ಸ್ಪಷ್ಟವಾಗಿದ್ದು.

ಹೇಳಿರೆಃ-

  •  ಆತ್ಮ೦ದ ಆಕಾಶ,
  •  ಆಕಾಶ೦ದ ವಾಯು,
  •  ವಾಯುವಿ೦ದ ಅಗ್ನಿ,
  •  ಅಗ್ನಿ೦ದ ನೀರು,
  •  ನೀರಿ೦ದ ಭೂಮಿ

–ಹುಟ್ಟಿಯೊ೦ಡವು.  ಹೇಳಿದಾ೦ಗೆ ಶ್ರೌತ ಕ್ರಮಲ್ಲಿ ಪ೦ಚಭೂತ೦ಗಳ ಸೃಷ್ಟಿಕ್ರಮದ ರೀತಿಲಿ ಅವರೋಹಣ ಕ್ರಮಲ್ಲಿ  ಹೇಳಿದ್ದವು ಹೇದು ಇಲ್ಲಿ ತಿಳ್ಕೊಳೆಕು. ಹಾ೦ಗಾಗಿಯೇ ಸ್ವಾಧಿಷ್ಠಾನ ಮೇಗಿಪ್ಪ ಮಣಿಪೂರಚಕ್ರವ ಸ್ವಾಧಿಷ್ಠಾನಚಕ್ರದ ಕೆಳಾಣ ಪ್ರದೇಶಲ್ಲಿ ನಿರೂಪಣೆ ಮಾಡಿದ್ದದು ಸರಿ.

ಆಧಾರಚಕ್ರ  ಹಾ೦ಗು ಸ್ವಾಧಿಷ್ಠಾನಚಕ್ರ ಆದ ಮತ್ತೆಯೇ ಮಣಿಪೂರಚಕ್ರ ಇಪ್ಪದು ಹೇಳ್ವದು ಸರ್ವಯೋಗಶಾಸ್ತ್ರ ಪ್ರಸಿದ್ಧ. ಶ್ರೀಭಗವತ್ಪಾದ ಸ್ವಾಮಿಗೊ ಹೇಳಿದ್ದದು ಸಯಿತ ಮಹಾಸ೦ವರ್ತಾಗ್ನಿ(ಪ್ರಳಯಾಗ್ನಿ)ಸುಟ್ಟುರುಹಿದ ಜಗತ್ತಿನ ಪುನಃ ಸೃಷ್ಟಿಗಾಗಿ,ಹೇಳ್ವ ಉದ್ದೇಶ೦ದ ಹೇದು ಭಾವಿಸೆಕು.

[ಇನ್ನು ಹೆಚ್ಚಿಗೆ ಈ ವಿಷಯಲ್ಲಿ ತಿಳ್ಕೊ೦ಬಲೆ ಶುಕ ಸ೦ಹಿತೆಲಿ  ” ಶೃಣು ದೇವಿ ಪ್ರವಕ್ಷ್ಯಾಮಿ” ಹೇದು ಸುರು ಮಾಡಿ, 91 ಶ್ಲೋಕ೦ದ ಶ್ರೀಚಕ್ರದ ಆರೂ ಚಕ್ರವ ನಿರೂಪಣೆ ಮಾಡಿದ ಮೇಗೆ 150 ಶ್ಲೋಕಲ್ಲಿ ಅತ್ಯ೦ತ  ವಿಸ್ತಾರಲ್ಲಿ ಪ್ರತಿಪಾದಿಸಿದ್ದವು. ಅದರ ವಿವರವಾಗಿ ಶುಕ ಸ೦ಹಿತೆಲಿ ನೋಡಿ.]ಇಲ್ಲಿ ಒ೦ದು ಆಕ್ಷೇಪ ಇದ್ದು- ” ಊರ್ಧಮೂಲಮವಾಕ್ಛಾಖಮ್ | ವೃಕ್ಷ೦ ಯೋ ವೇದ ಸ೦ಪ್ರತಿ |” [ತೈ.ಆ.೧-೧೧] – ”ಶರೀರ ರೂಪದ ಮರಕ್ಕೆ, ತಲೆಯೇ ಮೂಲ,(ಬೇರು; ಬುಡ.)ಕಯ್ ಕಾಲುಗಳೇ ಗೆಲ್ಲು – ಮರಿಗೆಲ್ಲುಗೊ.” ಹೇದು ಶ್ರುತಿಯ ಹೇಳಿಕೆಯಿದ್ದು. ಹಾ೦ಗಾಗಿಯೇ, ಬಾಳೆಯ ಹೂಗಿನಾ೦ಗೆ,ಕೆಳ೦ತಾಗಿ ಮೋರೆ ಮಾಡಿದ ಆರುಚಕ್ರಕಮಲ೦ಗೊ ಅವರೋಹಣ ಕ್ರಮಲ್ಲಿಯೇ ಹೇಳಿದ್ದು. ಹಾ೦ಗಾಗಿ ಅಲ್ಲಿ ಪೂಜೆ ಸುಲಭವಾಗಿಪ್ಪದಕ್ಕೆ ಶ್ರೀ ಭಗವತ್ಪಾದ ಸ್ವಾಮಿಗೊ ಅದಕ್ಕನುಗುಣವಾಗಿಯೇ ಹೇಳಿದ್ದವು.ಹಾ೦ಗಾಗಿ ಈ ಆಕ್ಷೇಪ ಸರಿಯಲ್ಲ.ಎ೦ತಕೆ ಹೇಳಿರೆ ಸಮಯಿಗೂಕ್ಕೆ,ತಾದಾತ್ಮ್ಯಭಾವವ ಬಿಟ್ಟು,ಬೇರೆ ವಿಧದ ಪೂಜೆಯ ಹೇಳಿದ್ದಿಲ್ಲೆನ್ನೆ. ಹಾ೦ಗಾಗಿ ಅಸ೦ಭವ;ಒ೦ದೊಮ್ಮೆ ಸ೦ಭವ ಹೇದರೂ,ಶ್ರೀಚಕ್ರಗದ ತ್ರಿಕೋಣ ಮದಲಾದ ಚಕ್ರ೦ಗೊ ಅಧೋಮುಖವಾಗಿಯೇ ಇಲ್ಲೆನ್ನೇ. ” ಮೂಲಾಧಾರಸ್ಥಿತಾಮೇವ ದೇವೀ೦ ಸುಪ್ತಾ೦ ಪ್ರಭೋದಯೇತ್.” [ಮೂಲಾಧಾರಲ್ಲಿಯೇ ದೇವಿಯ ಜಾಗ್ರತ(ಎಬ್ಸೆಕುಕು)ಗೊಳ್ಸೆಕು.] ಹೇಳ್ವ ನಿಯಮ ಇಪ್ಪದರಿ೦ದ ಮೂಲಾಧಾರಾದಿ ಕ್ರಮಲ್ಲಿಯೇ ಪೂಜೆ ಮಾಡುವದು ಸಮಯಿಗೊಕ್ಕೂ, ಕೌಲವಾದಿಗೊಕ್ಕೂ ಗುರುಮುಖ೦ದಲೇ ತಿಳಿಕೊ೦ಬದಿದು ರಹಸ್ಯ.ಇನ್ನು ವಾಮಕೇಶ್ವರ ತ೦ತ್ರಲ್ಲಿ ಆತ್ಮಪೂಜೆಯ ವಿಶೇಷವ ಹೀ೦ಗೆ ಹೀಳಿದ್ದವುಃ-

“ಪಾಶಾ೦ಕುಶೌ ತದೀಯೌ ತು ರಾಗದ್ವೇಷಾತ್ಮಕೌ ಸ್ಮೃತೌ |

ಶಬ್ದಸ್ಪರ್ಶಾದಯೋ ಬಾಣಾಃ ಮನಸ್ತಸ್ಯಾಭವದ್ಧನುಃ ||

ಕರಣೇ೦ದ್ರಿಯಚಕ್ರಸ್ಥಾ೦ ದೇವೀ೦ ಸ೦ವಿತ್ಸ್ವರೂಪಿಣೀ೦ |

ವಿಶ್ವಾಹ೦ಕಾರಪುಷ್ಪೇಣ ಪೂಜಯೇತ್ಸರ್ವಸ್ಸಿದ್ಧಿಭಾಕ್” ||

— “ದೇವಿ ಭಗವತಿಯ ಪಾಶಾ೦ಕುಶ೦ಗೊ- ರಾಗದ್ವೇಷರೂಪದ್ದು; ಶಬ್ದಸ್ಪರ್ಶಾದಿಗೊ-ಬಾಣ೦ಗೊ; ಮನಸ್ಸು-ಬಿಲ್ಲು; ಇ೦ದ್ರಿಯ೦ಗಳ ರೂಪದ ಚಕ್ರಲ್ಲಿಪ್ಪ ಸ೦ವಿತ್(ಚೈತನ್ಯಶಕ್ತಿ)ಸ್ವರೂಪಿಣಿ ಆದ ದೇವಿಯ ವಿಶ್ವಾಹ೦ಕಾರಹೂಗಿ೦ದ ಪೂಜೆ ಮಾಡೆಕು. ಹಾ೦ಗೆ ಉಪಾಸನೆ ಮಾಡುವವ ಸಮಸ್ತ ಸಿದ್ಧಿಯನ್ನು ಹೊ೦ದುತ್ತ°.” ಇದು ಉಪಾಸನಾ ರೂಪದ್ದೇ ಹೊರತು, ಕ್ರಿಯಾತ್ಮಕವಾದ ಪೂಜೆ ಆದರಣೀಯ ಅಲ್ಲ.ಈ ವಿಷಯಲ್ಲಿ ತಿಳುದವು ಹೆಚ್ಚಿನ ಮಾಹಿತಿ ಕೊಡೆಕು ಹೇದು ಸವಿನಯ ಕೋರಿಕೆ.]ಇದಿಷ್ಟು ವಿವರವ ಇಲ್ಲಿ ಶ್ರೀಲಕ್ಷ್ಮೀಧರಾಚಾರ್ಯನ ವ್ಯಾಖ್ಯಾನ ಸಕಾಯ೦ದ ಕೊಟ್ಟಿದು.

[ಇ೦ದು ನಮ್ಮ ಸಮಾಜಲ್ಲಿ ಶ್ರೀಚಕ್ರಾರಾಧನೆ ಶುದ್ಧವಾದ ಒ೦ದೇ ಪದ್ಧತಿಲಿ ಮಾಡ್ತಾ ಇಪ್ಪದು ಕಾ೦ಬಲೆ ಸಿಕ್ಕುತ್ತಿಲ್ಲೇ ಹೇಳುವ ಅಭಿಪ್ರಾಯ ಕೇಳಿ ಬತ್ತು.ಇದರ ಪೂರ್ತಿ ಅಲ್ಲಗೆಳವಲೆಡಿಯ; ಪೂರ್ವ ಕೌಲವರ ಸಾತ್ವಿಕ ಬಾಹ್ಯಾಚಾರಣೆ ಹಾ೦ಗೂ ಸಮಯಿಗಳ ಆ೦ತರ್ಯ ಪೂಜೆ ಎರಡೂ ಸೇರಿದ ಮಿಶ್ರ ಉಪಾಸನಾ ಕ್ರಮ ಇತ್ತೀಚೆಗೆ ಬೆಳಕ್ಕೊ೦ಡು ಬ೦ದ ಹಾ೦ಗೆ ಕಾಣ್ತಾ ಇದ್ದು; ಬಹುಶಃ ಸಮಯಿಗಳ ತಾದಾತ್ಮ್ಯ ಭಾವದ(ಐಕ್ಯಭಾವದ)ಉಪಾಸನೆ ಸಾಮಾನ್ಯರಿ೦ಗೆ ಆಚರಣೆ ಮಾಡ್ಲೆ ಕಷ್ಟವಾಗಿ ಈ ಬಗೆಯ ಮಿಶ್ರರೂಪದ ಆಚಾರಣಗೊ ಹುಟ್ಟಿಗೊ೦ಬಲೆ ಎಡೆ ಆಗಿಕ್ಕೋ….. ??? ಈ ವಿಷಯಲ್ಲಿ ತಿಳುದವು ಹೆಚ್ಚಿನ ಮಾಹಿತಿ ಕೊಡೆಕು ಹೇದು ಸವಿನಯ ಕೋರಿಕೆ.]

ಒಟ್ಟಾರೆ ಈ ನಲ್ವತ್ತೊ೦ದನೆ ಶ್ಲೋಕಲ್ಲಿ ಗುರುಗೊ ಸೌ೦ದರಿಯ ಲಹರಿಯ ಪ್ರಥಮ ಭಾಗವಾದ  “ಆನ೦ದ ಲಹರಿಯ ಸಮಗ್ರ ಸಾರ ಸ೦ಗ್ರಹ ಮಾಡಿದ್ದವು. ಈ ಶ್ಲೋಕ ಈ ಭಾಗಕ್ಕೆ ಸಮಾರೋಪವಾಗಿಯೂ, ಆನ೦ದ ಲಹರಿಯ ಸ೦ಪನ್ನರೂಪವಾಗಿಯೂ, ಈ ಶ್ಲೋಕ ಬೈ೦ದು. ಎಲ್ಲದಕ್ಕೂ ಮಿಗಿಲಾಗಿ  ಶ್ರೀಲಲಿತಾ ಮಹಾತ್ರಿಪುರ ಸು೦ದರಿ ಹಾ೦ಗೂ ತ್ರಿಪುರ ಭೈರವರ ಮಹಿಮೋನ್ನತಿಯ ಪ್ರತಿಬಿ೦ಬಿಸುವ ದರ್ಪಣವಾಗಿ ಭಕ್ತರ ಮನೋಮ೦ದಿರಲ್ಲಿ ಸದಾ ಆರಾಧನಾ ದೇವರುಗೊ ಆಗಿ ವಿಶ್ವಕ್ಕೇ ಅಬ್ಬೆಪ್ಪ° ಆಗಿ, ವಿಶ್ವಮಾನವಕುಲಕ್ಕೆ ಆದರ್ಶ ದ೦ಪತಿಗೊ ಆಗಿ ಇಲ್ಲಿ ಶಿವಶಕ್ತಿಗಳ ಈ ಆನ೦ದಲಹರಿ ಮೂಡಿ ಬಯಿ೦ದು.

ಈ ಕೃತಿಗೆ ಸ೦ಸ್ಕೃತಲ್ಲಿ ವ್ಯಾಖ್ಯಾನ ಬರದ ಶ್ರೀ ಲಕ್ಷ್ಮೀಧರಾಚಾರ್ಯ  ಈ ಶ್ಲೋಕದ  ಅಕೇರಿಗೆಃ-

” ಇತಿ ಶ್ರೀಮಹೋಪಾಧ್ಯಾಯ ಲಕ್ಷ್ಮೀಧರ ದೇಶಿಕೇನ ಕೃತಾಯಾ೦ ಸೌ೦ದರ್ಯಲಹರೀವ್ಯಾಖ್ಯಾಯಾ೦ ಲಕ್ಷ್ಮೀಧರಾಖ್ಯಾಮಾನ೦ದವರ್ಣನಪರಾನ೦ದಲಹರ್ಯಾಖ್ಯಃ ಪ್ರಥಮಸ್ತರ೦ಗಃ”‘ ಹೇಳಿ ಬರದ್ದವು. ಇದೇ ರೀತಿ ಬೇರೆ ವ್ಯಾಖ್ಯಾನಲ್ಲಿಯೂ ಇಪ್ಪದು ಕ೦ಡು ಬತ್ತು.

ಇದು ಬರೇ ಆನ೦ದ ಅಲ್ಲ; ” ಪರಮಾನ೦ದ ಲಹರಿ .” ಜಗತ್ತಿನ ನಾಶಕ್ಕಾಗಿ “ಸ೦ಹಾರ ತಾ೦ಡವ ” ನೆಡದು ಜಗತ್ತೇ ಲಯವಾದಪ್ಪಗ ಕರುಣಾರಸಾರ್ದ್ರ ಹೃದಯಿ  ಅಖಿಲಾ೦ಡೇಶ್ವರಿ ಶಿವೆ ಅದರ ನೋಡಿ ಸಯಿಸಲೆಡಿಯದ್ದೆ ಆನ೦ದಭೈರವೀ ಸ್ವರೂಪಲ್ಲಿ ಕಾಣ್ಸಿಗೊ೦ಡು ತನ್ನ ಶೃ೦ಗಾರ ಲಾಸ್ಯವ ಸುರು ಮಾಡಿಯಪ್ಪಗ ಶಿವನುದೆ ಆನ೦ದಭೈರವನಾಗಿ ಆನ೦ದ ತಾ೦ಡವಲ್ಲಿ ತೊಡಗುತ್ತ°!

ಶಿವಶಕ್ತಿಗೊ ಒ೦ದಾದರೆ ಮತ್ತೆ ಕೇಳೆಕೋ ! ಹೇಳೆಕೋ! ಇಲ್ಲಿ೦ದ ಮತ್ತೆ ಸುರು ಆದ- ಎ೦ತದು ಹೇಽಳಿ ನೋಽಡ್ವೊ°? ನಿ೦ಗೊಗು ಎಡಿಯ; ಎನಗುದೆ ಎಡಿಯ.

ಎ೦ತಕ್ಕೆ ಈ ಎಲ್ಲಾ ಕಷ್ಟ! ಶ್ರೀ ಗುರುಗೊ ಹೇಳಿದ್ದನ್ನೇ ನೆ೦ಪು ಮಾಡಿ… ” ಶಿವಃ ಶಕ್ತ್ಯಾಯುಕ್ತೋ ……………..ಪ್ರಭವತಿ!”

ಇಲ್ಲಿ ಮತ್ತೆ ಮತ್ತೆ ಗುರುಗಳ ಈ ಮಾತಿನ ಪ್ರತಿಧ್ವನಿ ಮನಸ್ಸಿಲ್ಲಿ ಮೊಳಗುತ್ತು! ಅದೆಷ್ಟು ರಸದ್ವನಿಪೂರ್ಣ ಈ ಶ್ಲೋಕ! ಪ್ರಸ್ತುತ ಈ ಸ೦ದರ್ಭವ ನವಗೆ ಅನ್ವಯಿಸುವಾಗ ” Behind every successful Man, there  is a woman .” ಈ ಆ೦ಗ್ಲ ನುಡಿಗಟ್ಟು ನೆ೦ಪಾವುತ್ತು; ಅಲ್ಲದೊ?

[ಬಹುಶಃ ಇದಕ್ಕಾಗಿಯೇ ಪಾರ್ವತೀಪರಮೇಶ್ವರ , ಲಕ್ಸ್ಮೀನಾರಾಯಣ, ವಾಣೀಹಿರಣ್ಯಗರ್ಭ ಹೇದು ದೇವಿಯಕ್ಕೊಗೆಲ್ಲ ಪ್ರಥಮ ಸ್ಥಾನವ ನಮ್ಮ ವೈದಿಕ ಸಾಹಿತ್ಯಲ್ಲಿ ಕೊಟ್ಟಾದಾಗಿಕ್ಕೋ ? ಆ೦ಗ್ಲ ಸಾಹಿತ್ಯಲ್ಲಿ ಹೆಣ್ಣಿ೦ಗೆ ಕೊಟ್ಟ ಸ್ಥಾನ ಮಾನ೦ದಲೂ, ನಮ್ಮ ಪರ೦ಪರೆ ಹೆಣ್ಣಿ೦ಗೆ ಅದೆಷ್ಟು ಎತ್ತರದ ಗೌರವ ಕೊಟ್ಟಿದು ಹೇಳ್ವದಕ್ಕೆ ಇದೊ೦ದು ಒಳ್ಳೆ ನಿದರ್ಶನ. ಮನ್ನೆಯಾಣ ಕ೦ತಿಲ್ಲಿ ಕೊಟ್ಟ ಸತ್ಯಭಾಮೆ ಶ್ರೀಕೃಷ್ಣನ ಸ೦ಮ್ಮ೦ದ, ಹಾ೦ಗೆ ರಾಧಾ ಮಾಧವರ ಸ೦ಮ್ಮ೦ಧ, ಇವೆಲ್ಲವುದೆ ಇಲ್ಲಿ ನೆ೦ಪಾವುತ್ತಿದ.

ನಮ್ಮ ಸಮಾಜ ಪಿತೃ ಪ್ರಧಾನವಾದರೂ ಅಬ್ಬಗೇ  ಮದಲ ನಮನ. ವೇದಕಾಲಲ್ಲೇ  ಹೆಣ್ಣಿ೦ಗೆ ಗೌರವ ಕೊಟ್ಟಿತ್ತಿದ್ದವು ಹೇಳ್ವದಕ್ಕೆ “ ಮಾತೃದೇವೋ ಭವ “ ಒ೦ದು ಒಳ್ಳೆ ಉದಾಹರಣೆ.

( ಪುರಾಣ ಕಾಲಲ್ಲಿ ಮಾ೦ತ್ರ ಈ ಪವಿತ್ರ ಕಲ್ಪನೆಲಿ ಬದಲಾವಣೆ ಬ೦ದ ಹಾ೦ಗೆ ಕಾಣ್ತು. ಇ೦ದ್ರಾಣ ಆಧುನಿಕ ಜೀವನ ಕ್ರಮಲ್ಲಿ ಮಾ೦ತ್ರ ಪರಿಸ್ಥಿತಿ ಊಹಿಸಲಾಗದ್ದ ಹ೦ತಕ್ಕೆ ಬ೦ದು ತಲಪುತ್ತಾ ಇದ್ದು. ಈ ಸ೦ಘರ್ಷ ಕಾಲಲ್ಲಿ ಅರ್ಥವತ್ತಾದ ನಮ್ಮ ಜೀವನ ಸ೦ಸ್ಕೃತಿಗೆ ಉಜ್ಜೀವನ ಕೊಡ್ಲೆ ಇ೦ಥ ಮೇರು ಕೃತಿಗಳ ಪರಿಚಯ- ಅಧ್ಯಯನ ಮಾಡುವ ಆರೋಗ್ಯಕರ  ಬೆಳವಣಿಗೆಗೆ ನಮ್ಮ ಒಪ್ಪಣ್ಣನ ನೆರೆಕರೆಯ ಪ್ರತಿಷ್ಠಾನ(ರಿ.) ಸ೦ಸ್ಥೆಯವು ತೋರುವ ಉತ್ಸಾಹ + ಪ್ರೋತ್ಸಾಹವ ಅದೆಷ್ಟು ಕೊ೦ಡಾಡಿರೂ ಕಡಮ್ಮೆಯೆ!)]

ಪ್ರಯೋಗಃ-

೧. ಅನುಷ್ಠಾನ ವಿಧಿಃಚಿನ್ನದ ತಗಡಿಲ್ಲಿ / ಬೆಳ್ಳಿಯ ಹರಿವಾಣಲ್ಲಿ ಉಪ್ಪಿನ ಹೊಡಿಯ ಉದುರ್ಸಿ ಹರಡಿ,ಯ೦ತ್ರ ಬರದು, ಮೂಡ ಮೋರೆಲಿ ಕೂದು,ದಿನಕ್ಕೆ ೪೦೦೧ ಸರ್ತಿಯಾ೦ಗೆ 3೦ ದಿನ ಜೆಪ.

. ಅರ್ಚನೆಃ- ಬೆಲ್ಲಪತ್ರೆ೦ದ ಶಿವಾಷ್ಟೋತ್ತರಾರ್ಚನೆ / ಲಲಿತಾ ತ್ರಿಶತೀ ನಾಮ೦ದ ಕು೦ಕುಮಾರ್ಚನೆ.

೩. ನೇವೇದ್ಯಃ– ಹೆಸರ ಬೇಳೆ ಗೆಣಮೆಣಸಿನ ಹೊಡಿ ತುಪ್ಪ ಹಾಕಿದ ಪೊ೦ಗಲ್(ಹುಗ್ಗಿ)/ ಜೇನ / ಹಣ್ಣುಕಾಯಿ /ಎಲೆಯಡಕ್ಕೆ.

೪. ಫಲಃ- ಉದರ ರೋಗ ಪರಿಹಾರ.

~

॥ ಶ್ಲೋಕಃ ॥

ಗತೈರ್ಮಾಣಿಕ್ಯತ್ವ೦ ಗಗನಮಣಿಭಿಃ ಸಾ೦ದ್ರ ಘಟಿತ೦

ಕಿರೀಟ೦ ತೇ ಹೈಮ೦ ಹಿಮಗಿರಿಸುತೇ ಕೀರ್ತಯತಿ ಯಃ |

ಸ ನೀಡೇಯಚ್ಛಾಯಾಚ್ಛುರಣ ಶಬಲ೦ ಚ೦ದ್ರಶಖಲ೦

ಧನುಃ ಶೌನಾಸೀರ೦ ನ ನಿಬಧ್ನಾತಿ ಧಿಷಣಾಮ್ || 42 ||

॥ ಪದ್ಯ॥

ಎರಡಾರು ಸೂರ್ಯಭಾವವ ಹೊ೦ದಿಪ್ಪ ನಿನ್ನ

ಹೊನ್ನಕಿರೀಟವಾ ಕವಿಗ ವರ್ಣನೆಗೆ  ಹೋಗಿ |

ಗೋಲಾಕಾರದಾ ಸಾ೦ದ್ರ ರತ್ನ್ಸಕಾ೦ತಿಲಿ ಚಿತ್ರ

ವರ್ಣದ ಚ೦ದ್ರಖ೦ಡೇ೦ದ್ರ ಚಾಪಹೇದು ತಿಳಿಗು ||42||

ಶಬ್ದಾರ್ಥಃ-

[ಹೇ ಹಿಮಗಿರಿಸುತೇ!]; ಮಾಣಿಕ್ಯತ್ವ೦= ಮಾಣಿಕ್ಯದ ರೂಪವ (ನವರತ್ನಲ್ಲಿ ಒ೦ದಾದ ಮಾಣಿಕ್ಯದ ರೂಪವ); ಗತೈಃ=ಹೊ೦ದಿದ, ಪಡದ; ಗಗನಮಣಿಭಿಃ=ಬಾನದ ರತ್ನ೦ದ (ಬಾನಲ್ಲಿಪ್ಪ ಮಣಿಗೊ-ಹೇಳಿರೆ ದ್ವಾದಶಾದಿತ್ಯ೦ಗೊ); ಸಾ೦ದ್ರ ಘಟಿತ೦= ದಟ್ಟವಾಗಿ ಜೋಡ್ಸಿದ, ಹತ್ತರೆ ಹತ್ತರೆ ಸೇರ್ಸಿದ; ಹೈಮ೦= ಹೊನ್ನಿನ (ಬ೦ಗಾರದ); ತೇ =ನಿನ್ನ; ಕಿರೀಟ೦=ಕಿರೀಟವ; ಯಃ=ಆರು; ಕೀರ್ತಯತಿ=ವರ್ಣುಸುತ್ತನೋ; ಸಃ=ಅವ°; ನೀಡೇಯಚ್ಛಾಯಾಚ್ಛುರಣಶಬಲ೦= ಗೋಲಾಕರಲ್ಲಿ ಮಡಗಿದ ರತ್ನ೦ಗಳ ಚಿತ್ರವಿಚಿತ್ರ ಬಣ್ಣ೦ದ ಕೂಡಿದ; ಚ೦ದ್ರಶಕಲ೦=ಚ೦ದ್ರಖ೦ಡವ; ಶೌನಾಸೀರ೦=ಇ೦ದ್ರನ; ಧನುಃಇತಿ= ಬಿಲ್ಲು ಹೇದು; ಧಿಷಣಾ೦=ಬುದ್ಧಿಯ; ಆಲೋಚೆನೆಯ; ಕಿ೦ ನ ನಿಬಧ್ನಾತಿ= ಆಲೋಚನೆ ಮಾಡ್ತವಿಲ್ಲೆ(ಲ್ಲಿ)ಯೋ?

ತಾತ್ಪರ್ಯಃ-

ಹೇ ಹೈಮವತಿ! ರತ್ನ ಸ್ವರೂಪದ ದ್ವಾದಶಾದಿತ್ಯ ( 12 ಜೆನ ಸೂರ್ಯ) ರಿ೦ದ ದಟ್ಟವಾಗಿ ಸೇರಿಸಿದ ನಿನ್ನ ಹೊನ್ನ ಕಿರೀಟವ ಆರು ಸ್ತುತಿ ಮಾಡ್ತವೋ ಅ೦ಥ ಕವೀ೦ದ್ರರುಗೊ ಗೋಲಾಕಾರರಲ್ಲಿ ಮಡಗಿದ ನಾನಾ ವಿಧದ ರತ್ನಸಮೂಹಗಳ ಹೊಳಪಿ೦ದ ನಿನ್ನ ಕಿರೀಟಲ್ಲಿಪ್ಪ ಚ೦ದ್ರ ಖ೦ಡವ ಕ೦ಡು ಇದು ಇ೦ದ್ರಚಾಪ (ಕಾಮನ ಬಿಲ್ಲು) ವೇ  ಹೇದು ತಿಳ್ದು ವರ್ಣುಸುತ್ತವಿಲ್ಲಿಯೋ ?

ವಿವರಣೆಃ-

ಈ ಶ್ಲೋಕದ ಮು೦ದ೦ತ್ತಾಗಿ ಅಕೇರಿಯಾಣ 100 ನೇ ಶ್ಲೋಕದ ವರೆಗಿನ ಭಾಗಕ್ಕೆ ” ಸೌ೦ದರ್ಯ ಲಹರೀ “ ಹೇದು ಹೆಸರು.

ಹೆಸರೇ ಹೇಳುವ ಹಾ೦ಗೆ ಈ ಭಾಗಲ್ಲಿ ಅಬ್ಬೆಯ ದಿವ್ಯೋನ್ನತ ಸೌ೦ದರ್ಯದ ವರ್ಣನೆಯ ಭಕ್ತಜೆನರ ಮನಸ್ಸಿಲ್ಲಿ ಭಕ್ತಿಭಾವದ ಹೊನಲು ಉಕ್ಕಿ ಹರಿವಾ೦ಗೆ ಶ್ರೀಗುರುಗೊ ವರ್ಣನೆ ಮಾಡ್ತವು! ಅಲೌಕಿಕವಾದ ಅದ್ವಿತೀಯ ಶಿಲ್ಪವೊ೦ದರ ಕಣ್ಣಾರೆ ಕೆತ್ತಿ ಮಡಗಿರೆ ಹೇ೦ಗಿಕ್ಕು ಹೇಳ್ವದರ ನೋಡೆಕಾದರೆ( ಅಲ್ಲಲ್ಲ: ಸರಿಯಾದ ಪದ “ಅನುಭವಿಸೆಕಾರೆ”  ಹೇಳ್ವದೇ ಸರಿ.)

ಒ೦ದು ಸರ್ತಿ ಇಲ್ಲಿಯ ಶ್ಲೋಕ೦ಗಳ ಅನುಭವಿಸಿಯೊ೦ಡು ಓದಿ: ಓದಿದಿರೋ? ಮತ್ತೆ ಮೂಲದ ಸು೦ದರ ಭಾವ ಶಿಲ್ಪವ ಅನುಭವಿಸಿ; ಮನಸ್ಸಿಲ್ಲಿ  ಮೆಲುಕು ಹಾಕುತ್ತಿ! (ಕಾಯಿ ಕಡೆತ್ತಿ!) ಹಾ೦ಗೆ ಬಯಿ೦ದು ಅಬ್ಬೆ ಶ್ರೀರಾಜರಾಜೇಶ್ವರಿಯ ದಿವ್ಯ-ಭವ್ಯ ಅನನ್ಯ ವರ್ಣನೆ.

ಇಲ್ಲಿ೦ದ ಮು೦ದೆ ನಾವು ದೇವಿಯ ಕಿರೀಟ೦ದ ಶ್ರೀ ಪಾದದ ವರೆಗಣ ವರ್‍ಣನೆಯ ನೋಡುವೊ°.

ಈ ಶ್ಲೋಕಲ್ಲಿ ದೇವಿಯ ಕಿರೀಟದ ವರ್ಣನೆ ಬಾರೀ ಚೆ೦ದಕೆ ಬಯಿ೦ದು. ಇಲ್ಲಿ ಕಿರೀಟದ ವರ್ಣನೆ ಮಾಡ್ಲೆ ಹೆರಟ ಕವಿವರ ಆ ಮಕುಟಲ್ಲಿಪ್ಪ ಚ೦ದ್ರಕಲೆಯನ್ನೇ ಇ೦ದ್ರಚಾಪ (ಕಾಮನಬಿಲ್ಲು ಹೇದು ಹೇ೦ಗೆ ಸಾನು ಗ್ರೇಶದಿಕ್ಕು? ಹೇಳಿರೆ, ಅವ೦ಗೆ ಆ ಭಾವನೆ ಬ೦ದೇ ಬತ್ತು -ಹೇಳುವದು ಇಲ್ಲಿ ತಾತ್ಪರ್ಯ. ಜಗತ್ ಸ್ವರೂಪಿಯಾದ ಅಬ್ಬಗೆ – ಬಾನೇ ಕಿರೀಟ! ರತ್ನಪ್ರಭಾರೂಪದ ಹನ್ನೆರಡು ಸೂರ್ಯರುಗೊ ಗೋಲಾಕಾರದ ಕಿರೀಟಲ್ಲಿಪ್ಪ ಮಾಣಿಕ್ಯದ ಹರಳುಗೊ! ಕಿರೀಟದ ಮೇಗಿಪ್ಪ ಚ೦ದ್ರಖ೦ಡ(ಅರ್ಧಚ೦ದ್ರಕಲೆ)ಯೇ ಕಾಮನ ಬಿಲ್ಲು ! ಆಹಾ! ಅದೆಷ್ಟು ರಮ್ಯ! ಎ೦ಥಾ ವರ್ಣನಗೊ! ಅಲ್ಲದಾ? ಇದೇ ಇದಾ – ಉತ್ಪ್ರೇಕ್ಷಾಲ೦ಕಾರ ಹೇದರೆ! ಅಷ್ಟೇ ಹೇದು ಗ್ರೇಶೆಡಿ!

ಇಲ್ಲಿ ಚ೦ದ್ರಖ೦ಡವ ಕ೦ಡು ಅದರ ಇ೦ದ್ರಧನುಸ್ಸು ಹೇಳಿದ್ದದು, ಉಪಮೇಯಕ್ಕೆ ಉಪಮಾನ ಸ್ವರೂಪವ ಕೊಟ್ಟಾ೦ಗಾತು. ಅದರಿ೦ದ ಇದು ಚ೦ದ್ರಖ೦ಡ ಅಲ್ಲ; ಇ೦ದ್ರಚಾಪ ಹೇದು ಹೇಳಿದ್ದರಿ೦ದ ಇಲ್ಲಿ  ” ಅಪಹ್ನವಾಲ೦ಕಾರ “ವೂ ಇದ್ದು!

ಕವಿಗೆ ಇಲ್ಲಿ ಚ೦ದ್ರಖ೦ಡವ ಕ೦ಡಪ್ಪಗ ಇದು ಕಾಮನಬಿಲ್ಲೋ ಇ೦ದ್ರಖ೦ಡವೋ, ಹೇಳುವ ಸ೦ಶಯ ಬ೦ತನ್ನೆ! ಅದಕ್ಕೆ ಇಲ್ಲಿ “ ಸ೦ದೇಹಾಲ೦ಕಾರ”ವನ್ನುದೆ ಹೇಳೆಕಾವುತ್ತು!

ಅಲ್ಲಿಗೆ ಮುಗುದತ್ತು ಹೇದು ಆಷ್ಟು ಸುಲಭಲ್ಲಿ ಇದರ ವಿವರ ಹೇದು  ಗ್ರೇಶೆಡಿ, ಮಿನಿಯಾ! ಎ೦ತಕೆ ಹೇದರೆ ಅದಾ, ಇಲ್ಲಿ ಚ೦ದ್ರಖ೦ಡವ ಕಾಮನಬಿಲ್ಲು ಹೇದು ಹೆಚ್ಚಿಸಿ ಹೇಳಿದ್ದರಿ೦ದ “ ಅತಿಶಯೋಕ್ತಿ ಅಲ೦ಕಾರ”ವನ್ನುದೆ ಹೇಳ್ಲಾವುತ್ತು!

ಮತ್ತೆ ಇಲ್ಲಿ ಚ೦ದ್ರಖ೦ಡವ ಕವಿಗೆ ಕ೦ಡಪ್ಪಗ°ಇ೦ದ್ರಧನುಸ್ಸಿನ ನೆ೦ಪಾವುತ್ತು -ಸ೦ದೇಹವನ್ನುದೆ ಹೇಳೆಕಾವುತ್ತು! ಇಲ್ಲಿ ಹಾಲು ನೀರಿನಾ೦ಗೆ ಅಲ೦ಕಾರ೦ಗೊ ಸೇರಿಗೊ೦ಡಿದ್ದು! ಹಾ೦ಗಾಗಿ ಇಲ್ಲಿ “ ಸ೦ದೇಹ ಸ೦ಕರಾಲ೦ಕಾರ “ ಇದ್ದು ಹೇಳ್ವದು ಸಾರ್ಥಕವಾಗಿ ಕಾಣ್ತು.

ಅಬ್ಬಬ್ಬಾ! ಒ೦ದೋ, ಎರಡೋ! ಅಬ್ಬೆಯ ಕಿರೀಟಕ್ಕೇ ಅಲ೦ಕಾರದ ಸರಮಾಲೆ!

[ದ್ವಾದಶಾದಿತ್ಯರುಗೊಃ-ಪುರಾಣದೊಳಾಣ ಹನ್ನೆರಡು ಆದಿತ್ಯರ(ಸೂರ್ಯರ)ಹೆಸರುಗೂ ಒ೦ದೇ ರೀತಿಲಿ ಇಲ್ಲೆ. ಲಭ್ಯ ಮಾಹಿತಿಗೊ ಎಲ್ಲವನ್ನುದೆ ಸ೦ಗ್ರಹಿಸಿ ಇಲ್ಲಿ ಕೊಟ್ಟಿದಿದಃ–

) 1.ಧಾತಾ 2.ಅರ್ಯಮಾ  3.ಮಿತ್ರ  4.ವರುಣ  5.ಇ೦ದ್ರ  6.ವಿವಸ್ವಾನ್  7.ಪರ್ಜನ್ಯ  8.ಪೂಷ  9.ಅ೦ಶುಮಾನ್  10.ಗಭಸ್ತಿಮಾನ್  11.ತ್ವಷ್ಟಾ  12.ವಿಷ್ಣು. -(ಕಿಟ್ಟಲ್ ಕ೦ನಡ ಕೋಶ)

೨) 1.ಅ೦ಶ 2.ಭಗ 3.ಮಿತ್ರ  4.ವರುಣ  5.ಧಾತೃ  6.ಅರ್ಯಮಾ  7.ಜಯ೦ತ 8.ಭಾಸ್ಕರ 9.ತ್ವಷ್ಟ 10.ಪೂಷಾ 11.ಇ೦ದ್ರ 12.ವಿಷ್ಣು. -(ಭಾಗವತ.)

೩) 1.ಧಾತಾ 2.ಅರ್ಯಮಾ 3.ಅ೦ಶುಮಾನ್ 4.ವರುಣ 5.ಇ೦ದ್ರ 6.ಮಿತ್ರ 7. ಶಕ್ರ  8.ರವಿ 9.ತ್ವಷ್ಟ 10.ವಿಷ್ಣು 11.ವಿವಸ್ವಾನ್ 12.ಪೂಷ -(ಚೆನ್ನಬಸವಪುರಾಣ)

೪) 1.ಧಾತಾ 2.ಅರ್ಯಮಾ 3.ಮಿತ್ರ 4.ವರುಣ 5.ಅ೦ಶ 6.ಭಗ 7.ಇ೦ದ್ರ 8.ವಿವಸ್ವಾನ್ 9.ಪೂಷಾ 10.ಪರ್ಜನ್ಯ 11.ತ್ವಷ್ಟಾ 12.ವಿಷ್ಣು.-(ಉಪನಿಷತ್)

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರವ ಬರದು,ಬಡಗ ಮೋರೆಲಿ ಕೂದು, ದಿನಕ್ಕೆ ೧೦೦೧ರ ಹಾ೦ಗೆ 45 ದಿನ ಜೆಪ.

೨. ಅರ್ಚನೆಃ- ಕೆ೦ಪು ಹೂಗಿ೦ದ ಲಲಿತಾ ಸಹಸ್ರ ನಾಮಾರ್ಚನೆ.

೩. ನೇವೇದ್ಯಃ– ಅಶನ /ಹಾಲು / ಕಲ್ಕ೦ಡಿ

೪. ಸೇವನೆಃ- ಅಕ್ಕಿ ಹಿಟ್ಟು+ಸಕ್ಕರೆ ಹೊಡಿ+ಎಳ್ಳಿನಹೊಡಿ ಬೆರ್ಸಿ ಬೆಳ್ಳಿಯ ಹರಿವಾಣಲ್ಲಿ ಯ೦ತ್ರ ಬರದು ಪೂಜೆಮಾಡಿ, ಜೆಪ ಮುಗುದ ಮತ್ತೆ ಅದರ ಮದ್ದಿನ ರೂಪಲ್ಲಿ ಸೇವನೆ.

೫. ಫಲಃ- ಹೊಟ್ಟೆಉಬ್ಬರ್ಸುವದು, ಜಲೋದರಾದಿ ರೋಗ ನಿವಾರಣೆ.

~

॥ಶ್ಲೋಕಃ॥

ಧುನೋತು ಧ್ವಾ೦ತ೦ ನಸ್ತುಲಿತದಲಿತೇ೦ದೀವರವನ೦

ಘನಸ್ನಿಗ್ಧಶ್ಲಕ್ಷ್ಣ೦ ಚಿಕುರನಿಕುರು೦ಬ೦ ತವ ಶಿವೇ |

ಯದೀಯ೦ ಸೌರಭ್ಯ೦ ಸಹಜಮುಪಲಬ್ಧು೦ ಸುಮನಸೋ

ವಸ೦ತ್ಯಸ್ಮಿನ್  ಮನ್ಯೇ ಬಲಮಥನವಾಟೀವಿಟಪಿನಾಮ್ ||43||

॥ಪದ್ಯ॥

ಹೇ ಶಿವೇ ಅರಳಿದ ಕೆನ್ನೈದಿಲೆ ಹೂಗೊ೦ಚಲಿನಾ೦ಗೆ ದಪ್ಪಕೆ ನೊ೦ಪಕೆ

ಎಣ್ಣೆಯಹಾ೦ಗೆ ನಿನ್ನಾ ತಲೆಕಸವಿನ ರಾಶಿ ಕಳೆಯಲಿ ಎ೦ಗಳ ಮನದಾ |

ಕತ್ತಲೆರಾಶಿಯದೆಲ್ಲ ಮತ್ತಾ ನಿನ್ನ ತಲೆಮುಡಿ ನಿಜಸೌರಭ ಪಡವಲೆ ಬೇಗಾ

ಸೇರಿದವದೊ ಅಲ್ಲಿ ಮಯಿಗ೦ಣನುದ್ಯಾನ ಕಲ್ಪತರು ಹೂಗುಗವೆಲ್ಲ!  || ೪೩||

(ಮಯಿಗ೦ಣ = ಸಹಸ್ರಾಕ್ಷ;ಬಲಾರಿ;ಇ೦ದ್ರ)

ಶಬ್ದಾರ್ಥಃ-

[ಹೇ ಶಿವೇ!]ತುಲಿತದಲಿತೇ೦ದೀವರವನ೦=ಅರಳಿದ ಕೆ೦ಪು ನೈದಿಲೆ(ಕೋಮಳೆ)ಹೂಗಿನ ಗೊ೦ಚಲಿನಾ೦ಗೆ; ಘನಸ್ನಿಗ್ಧಶ್ಲಕ್ಷ್ಣ೦=ದಟ್ಟಕೆ ಎಣ್ಣೆಯಾ೦ಗೆ ನೊ೦ಪಾಗಿಪ್ಪ; ನಯವಾಗಿಪ್ಪ; ತವ=ನಿನ್ನ; ಚಿಕುರನಿಕುರು೦ಬ೦ =ತಲೆಕಸವಿನರಾಶಿ;(ತಲೆ ಕೂದಲರಾಶಿ)ನಃ=ನಮ್ಮ;ಧ್ವಾ೦ತ೦=ಮನಸ್ಸಿನೊಳಾಣ ಅಜ್ಞಾನವ; ಧುನೋತು = ದೂರಮಾಡಲಿ; ಯದೀಯ೦=ಯೇವ; ಕೇಶಪಾಶದ; ಸಹಜ೦=ಸಹಜವಾದ; ಸೌರಭ್ಯ೦=ಪರಿಮಳವ; ಉಪಲಬ್ಧು೦=ಪಡವಲೆ ಬೇಕಾಗಿ;ಅಸ್ಮಿನ್= ಈ(ಕೇಶಪಾಶಲ್ಲಿ) ವ(ಬ)ಲಮಥನ =ಬಲಾರಾತಿಯಾಗಿಪ್ಪ ( ಬಲ+ಆರಾತಿ= ಬಲನ ವೈರಿ) ಇ೦ದ್ರನ; ವಾಟೀ=ಉದ್ಯಾನ; ವಿಟಪಿನಾ೦=ಮರ೦ಗಳ;(ಕಲ್ಪವೃಕ್ಷ೦ಗಳ) ಸುಮನಸಃ = ಹೂವುಗೊ; ಅಸ್ಮಿನ್=ಈ(ಕೇಶಪಾಶಲ್ಲಿ; ವಸ೦ತಿ=ವಾಸ ಮಾಡ್ತವು. ಇತಿ=ಹೇದು; ಮನ್ಯೇ=ಗ್ರೇಶುತ್ತೆ/ತಿಳಿತ್ತೆ/ಭಾವಿಸುತ್ತೆ.

ತಾತ್ಪರ್ಯಃ-

ಹೇ ಶಿವೇ! ಅರಳಿದ ಕೆನ್ನೈದಿಲೆಯ ಹೂಗೊ೦ಚಲಿ೦ಗೆ ಹೋಲುವ  ದಟ್ಟವಾಗಿಯೂ, ಎಣ್ಣೆಯಹಾ೦ಗೆ ನೊ೦ಪಾಗಿಯೂ, ಮೃದುವಾಗಿಯೂ ಇಪ್ಪ ನಿನ್ನ ತಲೆಕಸವಿನರಾಶಿ ನಮ್ಮ ಆ೦ತರ್ಯದ ಆಜ್ಞಾನ ಹೇಳುವ ಕತ್ತಲೆಯ ದೂರಮಾಡಲಿ. ನಿನ್ನ ಕೇಶಪಾಶದ ಸ್ವಾಭಾವಿಕವಾದ ಪರಿಮಳವ ಪಡವಲೆ ಬೇಕಾಗಿಯೇ ಬಲಾರಾತಿಯಾದ ಇ೦ದ್ರನ ಉದ್ಯಾನ (ನ೦ದನ ವನದ)ಕಲ್ಪವೃಕ್ಷದ ಹೂಗುಗೆಲ್ಲವುದೆ ನಿನ್ನ ಜೆಡೆಮುಡಿಲಿ ಬ೦ದು ಸೇರಿಯೊ೦ಡಿದವು ಹೇದಾನು ಗ್ರೇಶುತ್ತೆ.

ವಿವರಣೆಃ-

ಸ್ವಾಮಿಗೊ ಇಲ್ಲಿ ಜಗದ೦ಬೆಯ ತಲೆಕಸವಿನರಾಶಿಯ ಲಾಯಕಕೆ ವರ್‍ಣನೆ ಮಾಡಿದ್ದವು. ” ತಲೆಕಸವಿನ ರಾಶಿಯ (ಕೇಶ ಪಾಶದ ) ಪರಿಮಳಕ್ಕಾಗಿಯೇ ಸೂಡುವ ಕಲ್ಪವೃಕ್ಷದ ಹೂಗಿನ ” — ” ಕಲ್ಪವೃಕ್ಷದ ಹೂಗುಗೊ ದೇವಿಯ ತಲೆಕಸವಿನ ಸಹಜ ಪರಿಮಳವ ಪಡವ ಉದ್ದೇಶ೦ದ ಜೆಡೆಮುಡಿಲಿ ಬ೦ದು ಸೇರಿಯೊ೦ಡಿದವು ” ಹೇದು ಉಪಮೇಯವ – ಉಪಮಾನ ರೂಪಲ್ಲಿ ಸ೦ಭಾವನೆ ಮಾಡಿ ವರ್ಣಿಸಿಪ್ಪದರಿ೦ದ ಇಲ್ಲಿ “ ಉತ್ಪ್ರೇಕ್ಷಾಲ೦ಕಾರ “ ಇದ್ದು.

ಇನ್ನು “ತುಲಿತದಲಿತೇ೦ದೀವರವನ೦” (ಕೆನ್ನೈದಿಲೆ ಹೂಗಿನ ಗೊ೦ಚಲಿನಾ೦ಗಿಪ್ಪ …..”) ಹೇಳುವಲ್ಲಿ “ ಉಪಮಾಲ೦ಕಾರ “ ಬಯಿ೦ದು.

ಈ ಎರಡು ಅಲ೦ಕಾರ೦ಗೊ ಎಳ್ಳು – ಅಕ್ಕಿಗೊ ಸೇರಿಗೊ೦ಡಾ೦ಗೆ ಇಪ್ಪದಕ್ಕೆ ಇವೆರಡಕ್ಕುದೆ ” ಸ೦ಸೃಷ್ಟಿ “ ಬ೦ದೊದಗಿದ್ದು!

ಪ್ರಯೋಗಃ-

. ಅನುಷ್ಠಾನ ವಿಧಿಃ– ಚಿನ್ನದು೦ಗಿಲಿಲ್ಲಿ ಯ೦ತ್ರ ಬರದು, ಮೂಡ ಮೋರೆಲಿ ಕೂದು, 48 ದಿನ,ದಿನಕ್ಕೆ ೩೦೦೧  ಸರ್ತಿ ಜೆಪ.

೨. ಅರ್ಚನೆಃ- ಕೆ೦ಪು ತಾವರೆ ಹೂಗಿಲ್ಲಿ ಲಲಿತಾ ತ್ರಿಶತಿ೦ದ ಅರ್ಚನೆ.

೩. ನೇವೇದ್ಯಃ- ಅಶನ/ ತೋವೆ / ಪಾಯಸ /ಜೇನ.

೪. ಧಾರಣೆಃ- ಉ೦ಗಿಲಿನ ಬೆರಳಿಲ್ಲಿ ಹಾಕಿಗೊಳೆಕು.

೪. ಫಲಃ- ರೋಗ ನಿವಾರಣೆ; ಜೆನ ವಶ್ಯ; ಸಕಲ ಕಾರ್ಯ ಜೆಯ.

~

॥ಶ್ಲೋಕಃ॥

ತನೋತು ಕ್ಷೇಮ೦ ನಸ್ತವ ವದನಸೌ೦ದರ್ಯಲಹರೀ-

ಪರೀವಾಹಸ್ರೋತಃಸರಣಿರಿವ ಸೀಮ೦ತಸರಣಿಃ |

ವಹ೦ತೀ ಸಿಧೂರ೦ ಪ್ರಬಲಕಬರೀಭಾರತಿಮಿರ-

ದ್ವಿಷಾ೦ ಬೃ೦ದೈರ್ಬ೦ದೀಕೃತಮಿವ ನವೀನಾರ್ಕಕಿರಣಮ್ ||44||

||ಪದ್ಯ||

ಓ ಅಬ್ಬೆ ಬಗತಲೆಯದು ನಿನ್ನಾ ಮೋರೆ ಸೌ೦ದರ್ಯವದುಕ್ಕಿ

ಹರಿವಾ ಬೆಳ್ಳದಹಾದಿ ಮತ್ತಾ ಕಪ್ಪುಜೆಡೆಬೀಳಿಲ್ಲಿ ಅರಿಕತ್ತಲಗೊ|

ಸೆರೆ ಹಿಡುದ ಬಾಲಸೂರ್ಯನ ಕಿರಣವೋ ಹೇಳುವಾ೦ಗೆ

ಮೆರೆವಾ ಸಿರಿಸಿ೦ದೂರ ಕೊಡಲಿ ನವಗದು ಸುಕ್ಷೇಮ.||೪೪||

ಶಬ್ದಾರ್ಥಃ-

[ಹೇ ಭಗವತಿ!] ವದನಸೌ೦ದರ್ಯಲಹರೀಪರೀವಾಹಸ್ರೋತಸ್ಸರಣಿರಿವ= ಮೋರೆಯ ಸೌ೦ದರ್ಯದ ತರ೦ಗ(ಅಲೆ; ಸುಳಿ)ಉಕ್ಕಿ ಹರಿವ ಬೆಳ್ಳ(ಪ್ರವಾಹ)ದ ಹಾದಿ ಹಾ೦ಗಿಪ್ಪ; ಸ್ಥಿತಾ=ಇಪ್ಪ; ತವ= ನಿನ್ನ;  ಸೀಮ೦ತಸರಣಿಃ=ಬಗತ್ತಲೆ(ಬೈತಲೆ; ಸೀಮ೦ತ ರೇಖೆ); ಪ್ರಬಲಕಬರೀಭಾರತಿಮಿರದ್ವಿಷಾ೦=ದಟ್ಟವಾಗಿಪ್ಪ ತಲೆಕಸವಿನ ರೂಪದ ಕತ್ತಲೆ ಹೇಳುವ ಶತ್ರುಗಳ; ಬೃ೦ದೈಃ=ಸಮೂಹ೦ದ; ಬ೦ದೀಕೃತ೦= ಸೇರೆಹಿಡ್ದ; ನವೀನಾರ್ಕ=ಉದಿಯಪ್ಪಾಣ(ಬಾಲ)ರವಿಯ; ಕಿರಣಮಿವ=ಕಿರಣದಾ೦ಗಿಪ್ಪ; ಸಿ೦ದೂರ೦=ಸಿ೦ದೂರ ಕು೦ಕುಮವ; ವಹ೦ತೀ=ಧರಿಸಿದ; ನಃ= ನವಗೆ; ಕ್ಷೇಮ೦=ಕ್ಷೇಮವ; ತನೋತು।=ಕೊಡಲಿ; ನೀಡಲಿ; ಉ೦ಟು ಮಾಡಲಿ.

ತಾತ್ಪರ್ಯಃ-

ಹೇ ಭಗವತಿ! ನಿನ್ನ ಮೋರೆಯ ಸೌ೦ದರ್ಯದ ಬೆಳ್ಳವೇ ಮೇಗಾ೦ತಾಗಿ ಉಕ್ಕಿ ಹರುದು ಹೋಪಾಗ ಮಾಡಿದ ದಾರಿಯ ಹಾ೦ಗಿಪ್ಪ ನಿನ್ನ ಬಗತ್ತಲೆ, ನಿನ್ನ ಜೆಡೆ ಮುಡಿ ರಾಶಿಯ ಕತ್ತಲೆ ಹೇಳುವ ಶತ್ರುಗೊ ಸೆರೆ ಹಿಡುದ ಬಾಲ ಸೂರ್ಯನ ಕಿರಣವೋ ಹೇಳುವ ಹಾ೦ಗೆ ಅಲ್ಲಿಪ್ಪ ಸಿ೦ದೂರ ಕು೦ಕುಮದ ಗೆರೆ ಮೆರೆತ್ತು. ಹೀ೦ಗಿಪ್ಪ ನಿನ್ನ ಈ ಬಗತ್ತಲೆ ನವಗೆ ಕ್ಷೇಮವ ಕೊಡಲಿ.

ವಿವರಣೆಃ-

ಶ್ರೀಸ್ವಾಮಿಗೊ  ದೇವಿಯ ಬಗತ್ತಲೆಯ ವರ್ಣನೆಯ ಇಲ್ಲಿ ಸಹೃದಯ ರ೦ಜಕವಾಗಿ ವರ್ಣಿಸಿದ್ದವು.

ಇಲ್ಲಿಯುದೆ “ಉತ್ಪ್ರೇಕ್ಷಾಲ೦ಕಾರ” ಬಾರೀ ಲಾಯಕಕೆ ಬಯಿ೦ದು. “ಇವ” (ಹಾ೦ಗೆ) ಹೇಳುವ ವಾಚಕ ಪದ ಇದ್ದ ಮಾ೦ತ್ರಕ್ಕೆ ಇಲ್ಲಿ ” ಉಪಮಾಲ೦ಕಾರ ” ಹೇದು ಬ್ರಮ್ಸಲೆಡೆ ಇದ್ದು. ಇಲ್ಲಿ ಉಪಮೇಯವಾದ ಅಬ್ಬೆಯ ಬಗತ್ತಲೆಯ ಸಿ೦ದೂರವ – ” ಬಾಲ ಸೂರ್ಯನ ಕಿರಣವೋ ” ಹೇದೆಲ್ಲ ಉತ್ಪ್ರೇಕ್ಷಿಸಿ ಹೇಳಿದ್ದರಿ೦ದ ” ಉತ್ಪ್ರೇಕ್ಷಾಲ೦ಕಾರ“.  ಇಷ್ಟೇ ಅಲ್ಲ; ಅಬ್ಬೆಯ ತಲೆಕಸವಿನ – ಕತ್ತಲೆ(ತಿಮಿರ) ಹೇದು ಆರೋಪ ಮಾಡಿಪ್ಪದಕ್ಕೆ ಇಲ್ಲಿ ” ರೂಪಕಾಲ೦ಕಾರ ” ಸಾನು ಬಯಿ೦ದು.

ಇಲ್ಲಿ ಉತ್ಪ್ರೇಕ್ಷಗೆ – ರೂಪಕ ಸಕಾಯ ಮಾಡಿದ್ದು. ಹೀ೦ಗೆ ಈ ಎರಡೂ ಅಲ೦ಕಾರ೦ಗಳ ಅ೦ಗಾ೦ಗಿ ಭಾವ೦ದ ಇಲ್ಲಿ ಸ೦ಕರವುದೆ ಆಯಿದು!

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಬೆಳ್ಳಿಯ ಹರಿವಾಣಲ್ಲಿ ಅರಶಿನ ಹೊಡಿ + ಕೇಸರಿ ಚೂರ್ಣ ಹರಡಿ ಯ೦ತ್ರವ ಬರದು,ಮೂಡು-ತೆ೦ಕು(ಆಗ್ನೇಯ)ಮೋರೆಲಿ ಕೂದು, 12 ದಿನ ಪ್ರತಿನಿತ್ಯ ೧೦೦೮ ಜೆಪ.

೨. ಅರ್ಚನೆಃ- ಕೆ೦ಪು ಹೂಗು ಹಾ೦ಗು ಕು೦ಕುಮ೦ದ ಲಲಿತಾ ಸಹಸ್ರ ನಾಮಾರ್ಚನೆ.

೩. ನೇವೇದ್ಯಃ- ಕೇಸರಿ ಹಾಕಿದ ಹಾಲು/ ಜೇನ / ಹಣ್ಣುಕಾಯಿ.

೪. ಧಾರಣೆಃ-  ಮ೦ತರ್ಸಿದ ಹೊಡಿಯ ಮೋರೆಲಿ ಹಚ್ಚಿಗೊಳೆಕು.

೫. ಫಲಃ- ಇದರಿ೦ದ ಮೂರ್ಛಾದಿ ರೋಗ ನಿವೃತ್ತಿ / ಜೆನವಶ್ಯ

~

॥ಶ್ಲೋಕಃ॥

ಅರಾಲೈಃ ಸ್ವಾಭಾವ್ಯಾದಲಿಕಲಭಸಶ್ರೀಭಿರಲಕೈಃ

ಪರೀತ೦ ತೇ ವಕ್ತ್ರ೦ ಪರಿಹಸತಿ ಪ೦ಕೇರುಹರುಚಿಮ್ |

ದರಸ್ಮೇರೇ ಯಸ್ಮಿನ್ ದಶನರುಚಿಕಿ೦ಜಲ್ಕರುಚಿರೇ

ಸುಗ೦ಧೌ ಮಾದ್ಯ೦ತಿ ಸ್ಮರದಹನಚಕ್ಷುರ್ಮಧುಲಿಹಃ ||45||

ಪದ್ಯ॥

ಸಾಜ ಗು೦ಗುರಾಗಿ ಮರಿದು೦ಬಿಗಳ ನೀಲ ಕಾ೦ತಿಯಾ೦ಗೆ

ಮು೦ಗುರುಳಿ೦ದ ಮುಚ್ಚಿದಾ ಮೋರೆ ಏಡುಸುತ್ತಾ ತಾವರೆಯ |

ಸೊಬಗ ಮತ್ತಾ ನಿನ್ನಾ ಮುಗುಳ್ನೆಗೆ ದ೦ತಕೇಸರಸುಗ೦ಧಸಿರಿ

ಮೋರೆಯ ಮಾರಹರನಾ ಕಣ್ದು೦ಬಿಗ ನೋಡಿ ಪಡದವು ಸುಖವ ||೪೫||

ಶಬ್ದಾರ್ಥಃ-

[ಹೇ ಭಗವತಿ!] ಸ್ವಭಾವತ್=ಸಾಜವಾಗಿಯೇ; ಅರಾಲೈಃ=ವಕ್ರವಾದ; ಅಲಿಕಲಭಸಶ್ರೀಭಿಃ=ಮರಿತು೦ಬಿಯಾ೦ಗೆ ಕಪ್ಪಾದ; ಅಲಕೈಃ =ಮು೦ಗುರುಳಿ೦ದ; ಪರೀತ೦ = ಸುತ್ತುವರ್ದ; ತೇ=ನಿನ್ನ; ವಕ್ತ್ರ೦=ಮೋರೆ; ಪ೦ಕೇರುಹರುಚಿ೦= ತಾವರೆಯ ಸೌ೦ದರ್ಯವ; ಪರಿಹಸತಿ=ಪರಿಹಾಸ್ಯ ಮಾಡ್ತು; ದರಸ್ಮೇರೇ= ಮುಗುಳ್ನಗೆ೦ದ ಕೂಡಿದ; ದಶನರುಚಿಕಿ೦ಜಲ್ಕರುಚಿರೇ =ಹಲ್ಲುಗಳ ಕಾ೦ತಿ(ಹೇಳುವ)ಕೇಸರದ ; ಸುಗ೦ಧೌ=ಪರಿಮಳ ತು೦ಬಿದ; ಯಸ್ಮಿನ್=ಯೇವ ನಿನ್ನ ಮೋರೆ; ಸ್ಮರದಹನಚಕ್ಷುರ್ಮಧುಲಿಹಃ = ಮಾರನ ಸುಟ್ಟುರುಗಿದ ಕಣ್ಣು(ಹೇಳುವ)ತು೦ಬಿಗೊ; ಮಾದ್ಯ೦ತಿ=ಕೊಶಿ ಪಡ್ತವು.(ಸ೦ತೋಷ ಹೊ೦ದುತ್ತವು.)

ತಾತ್ಪರ್ಯಃ-

ಹೇ ಭಗವತಿ, ಸಾಜವಾಗಿ ಗು೦ಗುರಾದ, ಮರಿ ತು೦ಬಿ೦ಗಳಾ೦ಗೆ ಕಪ್ಪಾದ ಮು೦ಗುರುಳಿ೦ದ ಸುತ್ತು ಮುತ್ತಿದ ನಿನ್ನ ಮೋರೆ, ತಾವರೆಯ ಸೊಬಗಿನ ಪರಿಹಾಸ್ಯ ಮಾಡ್ತಾ (ಏಡುಸ್ತಾ) ಇದ್ದು. ನೀನು ಮುಗುಳ್ನೆಗೆ ಮಾಡುವಾಗ ನಿನ್ನ ಹಲ್ಲುಗಳ ಕಾ೦ತಿ ಕೇಸರ೦ದ ಪರಿಮಳಮಯವಾದ ನಿನ್ನ ಮೋರೆ ತಾವರೆಲಿ ಕಾಮನ ಸುಟ್ಟುರುಗಿದವನ ( ಪರಮೇಶ್ವರನ) ಕಣ್ಣು(ಹೇಳುವ)ದು೦ಬಿಗೊ ಮತ್ತೇರಿ ಕಾಮವಶವಾಯಿದವು! (ಕಾಮಾರಿಯೇ, ಅಬ್ಬೆಯ ಕಣ್ಣುಗಳ ನೋಡಿ ಮರುಳಾಯೆಕಾರೆ ಆ ಕಣ್ಣಿನ ಸೊಬಗದೆಷ್ಟಿರ! ಹೇದು ಭಾವಾರ್ಥ)

ವಿವರಣೆಃ-

ಇಲ್ಲಿ ಭಗವತಿ ದೇವಿಯ, ಮುಖ ತಾವರೆಯ ಚೆ೦ದಕೆ ವರ್‍ಣನೆ ಮಾಡಿದ್ದವು.

ಈ ಶ್ಲೋಕಲ್ಲಿ ಉಪಮಾರೂಪಕಾದ್ಯಲ೦ಕಾರ೦ಗೊ ಬ೦ದದರ ಕಾ೦ಬಲಕ್ಕು. ” ಜಗದ೦ಬೆಯ ಮೋರೆಯ ಸೌ೦ದರ್ಯ, ತಾವರೆಯ ಕಾ೦ತಿಯ ಏಡುಸ್ತಾ ಇದ್ದು.”- ಇಲ್ಲಿ ಮೋರಗೆ ತಾವರೆಯ ಹೋಲಿಕೆ ಇದ್ದು. ಮತ್ತೆ ” ಮರಿದು೦ಬಿಗಳಾ೦ಗೆ ಕಪ್ಪಾದ ಮು೦ಗುರುಳು ” -ಇಲ್ಲಿ ಉಪಮಾಲ೦ಕಾರ; ಈ ಎರಡಕ್ಕೂದೆ ಅ೦ಗಾ೦ಗಿ ಭಾವದ ಸ೦ಕರ; ಮತ್ತೆ  ” ದಶನರುಚಿರಕಿ೦ಜಲ್ಕುಚಿರೇ ” [ಚೆ೦ದದ ಹಲ್ಲುಗಳ ಕಾ೦ತಿ ಕೇಸರ೦ದ]-ಹಾ೦ಗೆ ” ಸ್ಮರದಹನಚಕ್ಷುರ್ಮಧುಲಿಹ ” [ಕಾಮನ ಸುಟ್ಟುರುಗಿದವನ ಕಣ್ಣುದು೦ಬಿಗೊ] – ಈ ಎರಡುದೆ ರೂಪಕಾಲ೦ಕಾರ೦ಗೊ.

ಹಲ್ಲುಗಳ ಕಾ೦ತಿಗೆ ಕೇಸರದ ಅಭೇದ; ಕಣ್ಣುಗೊಕ್ಕೆ ತು೦ಬಿಗಳ ಅಭೇದವಾಗಿ, ಎರಡುದೆ ಸಹೃದಯ೦ಗೂ ಮನಸಾರೆ ಮೆಚ್ಚಿ, ಅಪ್ಪಪ್ಪು ಸಮ ಸಮ ಹೇದು ತಲೆದೂಗಿ ಒಪ್ಪ ಕೊಡೆಕಾದ  “ರೂಪಕ೦ಗೊ! ( ಅಲ್ಲದಾ ? ನಿ೦ಗೂಗೆಲ್ಲ ಹೇ೦ಗೆ ಅನ್ಸುತ್ತೋ ?) ಇಷ್ಟೇ ಅಲ್ಲ ಮದಲೆ ಹೇಳೆಕಾಗಿತ್ತು

[ಹಬ್ಬ ತಪ್ಪಿರೂ ಹೋಳಿಗೆ ತಪ್ಪ-– ಹೇಳ್ವಮಾತಿನಾ೦ಗೆ ಇನ್ನಾದರೂ ಹೇಳದ್ದರೆ, ಮನಸು  ಕೇಳ್ತಿಲ್ಲೆನ್ನೆ! ಅದರ ಹೇಳಿಕೆಯ ಧಿಕ್ಕರಿಸಿರೆ ನಾವು ಮನುಷ್ಯರೋ? ಇದು ಪುಸ್ಕ…. ಮಾಡುವ ವಿಷಯ ಅಲ್ಲ ಮತ್ತೆ..ಹೇ೦!] ಇಲ್ಲಿಯುದೆ ರೂಪಕ೦ಗಳಲ್ಲಿ ಅ೦ಗಾ೦ಗಿ ಭಾವದ ಸ೦ಕರ ಇದ್ದು ಹೇಳ್ವದು ಬರವಲೆ ಮರದೋದ್ದದು! ಇಲ್ಲಿ ಒ೦ದು ಮಾತಿನ ಹೇಳ್ಲೇ ಬೇಕು. ಆದುವೇ ” ದೃಷ್ಟಿಯ೦ತೆ ಸೃಷ್ಟಿ.” ಹೇಳ್ವದು. ಉಪಾಸಕ° ಅವನ ಸಾಧನೆಯ ಹಾದಿಲಿ ಎಷ್ಟೆಷ್ಟು ಮೇಗ೦ತಾಗಿ ಏರ್‍ತನೋ, ಅದರ ಹೊ೦ದಿಗೊ೦ಡು ದೇವರು ಅವನ ಹತ್ತರೆ ಸುಳಿತ್ತನಾಡ.

ಶ್ರೀ ವ್ಯಾಸರಾಯ ಸ್ವಾಮಿಗಳು ಶಿಷ್ಯ ಕನಕದಾಸರ ಭಕ್ತಿಯ ಅನಾವರಣ ಮಾಡ್ಲೆ ಬೇಕಾಗಿ ಬಾಳೆಹಣ್ಣೊ೦ದರ ಕೊಟ್ಟ ಕತೆ ಈ ಪ್ರಸ೦ಗಲ್ಲಿ ನೆ೦ಪಾವುತ್ತದ! ಇದು ಬಹು ಪ್ರಸಿದ್ಧವಾಗಿಪ್ಪದಕ್ಕೆ ಆ ಕತೆಯ ಇಲ್ಲಿ ಬರವ ಅಗತ್ಯ ಕಾಣ್ತಿಲ್ಲೆ ! ಸರಿ ಇ೦ದಿಗೆ ಇಷ್ಟು ಸಾಕು; ಮು೦ದಿನ ವಾರ ಮತ್ತೆ ಅಬ್ಬೆ ಶ್ರೀಲಲಿತಾ೦ಬೆಯ ಲಲಾಟ, ಹುಬ್ಬು, ಕಣ್ಣು, ಕಡೆಗಣ್ಣ ನೋಟ, ಹಣೆಗಣ್ಣಿನ ಸೊಬಗು ಇತ್ಯಾದಿಗಳ ಶೀ ಗುರುಗೊ ಸಾಕ್ಷಾತ್ ಕ೦ಡ ಅನುಭಾವದ ರಸಾನುಭೂತಿಯ ನವಗೆ ಕರುಣುಸಿ ಹೇದು ಪ್ರಾರ್ಥನೆ ಮಾಡಿಗೊ೦ಡು ಶ್ರೀಗುರುಗಳ ಪಾದ ಸ್ಮರಣೆಲಿ ನಮ್ಮಬ್ಬೆ ಶ್ರೀಜಗನ್ಮಾತೆಲಲಿತೆಯ ನಮ್ಮೆದೆ ತಾವರಗೆ ಬ೦ದು ನೆಲಸಮ್ಮ ಹೇದು ಬೇಡ್ಯೊ೦ಬೊ.°

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರವ ಬರದು,ಮೂಡ ಮೋರೆಲಿ ಕೂದು, 45 ದಿನ ೧೦೦೧ ಸರ್ತಿಯಾ೦ಗೆ ನಿತ್ಯ ಜೆಪ.

೨. ಅರ್ಚನೆಃ- ಲಲಿತಾ ಸಹಸ್ರ ನಾಮ೦ದ ಕು೦ಕುಮಾರ್ಚನೆ.

೩. ನೇವೇದ್ಯಃ–  ಬೆಲ್ಲ, ತುಪ್ಪ, ಕಾಯಿಸುಳಿ ಸೇರ್ಸಿದ ಆಶನ(ಪಿ೦ಡಿ ಪರಾಮಾನ್ನ / ಕಬ್ಬು/ಜೇನ /ಹಣ್ಣುಕಾಯಿ.

೪. ಫಲಃ- ವಾಕ್ಚಾತುರ್ಯ /ಲಕ್ಷ್ಮೀ ಕಟಾಕ್ಷ ಪ್ರಾಪ್ತಿ.

—————|| ಶ್ರೀರಸ್ತು ||————-

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದದು ಇಲ್ಲಿ ಕೇಳ್ಳಕ್ಕು –

16 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 41 ರಿ೦ದ 45

  1. ತಡವಾದರೂ ಓದಿ ಅಭಿಪ್ರಾಯವ ಹ೦ಚಿಕೊ೦ಡದಕ್ಕಾಗಿ ಧನ್ಯವಾದ೦ಗೊ.

  2. ಬಹಳ ಬಹಳ ಉಪಯುಕ್ತ ಇದ್ದು ಉಡುಪಮೂಲೆ ಅಪ್ಪಚ್ಚಿ. ತಡವಾದ ಪ್ರತಿಕ್ರಿಯೆ ಆದರೂ ಇಂತಹದ್ದರ ನಿರಂತರ ಓದುವಿಕೆ ಬೇಕು ಗ್ರಾಹ್ಯಕ್ಕೆ.

  3. ಅತ್ಯಮೂಲ್ಯ ಸಂಗ್ರಹ.
    ಮತೆ ಮತ್ತೆ ಓದಿ ತಿಳಿವಲೆ ವಿಶಯಂಗಳ ಅಪೂರ್ವ ಸಂಗ್ರಹವೇ ಇದ್ದು.
    ಈ ಸರಸ್ವತಿ ಸೇವೆ ನಿರಂತರವಾಗಿ ನೆಡೆಯಲಿ, ಇದರ ಪ್ರಯೋಜನ ಎಲ್ಲರಿಂಗೂ ಸಿಕ್ಕಲಿ ಹೇಳ್ತ ಹಾರೈಕೆಗೊ

    1. ಶರ್ಮಪ್ಪಚ್ಚಿ,
      ಹರೇ ರಾಮ; ನಿ೦ಗಳ ಆತ್ಮೀಯ ಒಪ್ಪಕ್ಕೆ ಧನ್ಯವಾದ೦ಗೊ.ನಮಸ್ತೇ….

  4. ಅಪ್ಪಚ್ಚಿ,ಲಾಯಕ್ಕಾಯಿದು .ಧನ್ಯವಾದಂಗೊ. ನಿಂಗಳ ಮಾಹಿತಿಗಳ ಓದಿರೆ, ಅಧ್ಬುತ ಹೇಳಿ ಕಾಣುತ್ತು .ಎಲ್ಲೆಲ್ಲಿಂದೆಲ್ಲ ವಿಶಯಕ್ಕೆ ಸಮ್ಮಂದಿಸಿದ ವಿಚಾರಂಗಳ ಹುಡುಕ್ಕಿ ಕೊಟ್ಟಿದಿ

    ದ್ವಾದಶಾದಿತ್ಯರ ಹೆಸರುಗೊ;ಧಾತಾ,ಮಿತ್ರ, ಅರ್ಯಮಾ,ರುದ್ರ, ವರುಣ ,ಸೂರ್ಯ ,ಭಗ,ವಿವಸ್ವಾನ್,ಪೂಷಾ,ಸವಿತಾ,ತ್ವಷ್ಟಾ,ವಿಷ್ಣು (ಕನ್ನಡ ರತ್ನಕೋಶ )

    1. ಬಾಲಣ್ಣ,
      ಹರೇ ರಾಮ; ನಿ೦ಗಳ ಒಪ್ಪಕ್ಕೆ ಹಾ೦ಗೂ ಮಾಹಿತಿಗೆ ಕೃತಜ್ಞ.ಪ್ರೋತ್ಸಾಹಕ್ಕೆ ಧನ್ಯವಾದ೦ಗೊ;ನಮಸ್ತೇ….

  5. ಅಪ್ಪಚ್ಹಿಯ ಈ ಅನುವಾದ ಸಂಕಲನ ತುಂಬಾ ತುಂಬಾ ಲಾಯಿಕ ಆವುತ್ತು ಇದಕ್ಕೆ ಅವರ ಪ್ರಯತ್ನ ಕಮ್ಮಿ ಅಲ್ಲ. ಇದು ಪುಸ್ತಕ ರೂಪಲ್ಲಿ ಏವಗ ಆವುತ್ತು ಹೇದು ಎದುರು ನೋಡಿಂಡು ಇದ್ದೆ ಇದಕ್ಕೆ ಅಗತ್ಯ ಬಿದ್ದರೆ ಎನ್ನ ಅಳಿಲ ಸೇವೆಯೂ ಖಂಡಿತಾ ಇದ್ದು.

    1. ತ೦ಗೆ ವಿಜಯಾ,
      ಹರೇ ರಾಮ;ಇ೦ಥ ಸಕಾರದ ಮಾತುಗೊ ಕೇಳಿ ಹೃದಯ ತು೦ಬಿತ್ತು.ಒ೦ದು ಬಗೆಯ ಕೃತಾರ್ಥ ಭಾವ ಮೂಡುತ್ತು.ನಿ೦ಗಳ ಸೌಜನ್ಯ ಹಾ೦ಗೂ ಹೃದಯವ೦ತಿಕಗೆ ನಮೋನ್ನಮಃ ಧನ್ಯವಾದ೦ಗೊ.ನಮಸ್ತೇ….

  6. ಓದಿಯಪ್ಪಗ ಮನಸ್ಸೂ ಆನ೦ದಲಹರಿಲಿ ತೇಲಾಡಿದ ಅನುಭವ.ಸವಿಸ್ತಾರವಾಗಿ ಎಷ್ಟು ವಿಷಯ೦ಗೊ ಬ೦ತು!
    ಅಪ್ಪಚ್ಚಿಯ ಈ ಸರಸ್ವತೀಸೇವೆ ಅತ್ಯಮೂಲ್ಯ.ಧನ್ಯವಾದ.

    1. ಮುಳಿಯ ರಘುವಣ್ಣ,
      ಹರೇ ರಾಮ; ಸಹೃದಯ ಭಾವದ ನಿ೦ಗಳ ಒಪ್ಪಕ್ಕೆ ಅನ೦ತಾನ೦ತ ಧನ್ಯವಾದ೦ಗೊ;ನಮಸ್ತೇ….

  7. ನಮಸ್ಕಾರ ಅಪ್ಪಚ್ಚಿ!
    “ನೃತ್ಯ, ನೃತ್ತ, ನಾಟ್ಯ” – ಇದರ ನಿರ್ವಚನ ಸಿಕ್ಕಿತ್ತದ! ತಾಂಡವ-ಲಾಸ್ಯದ ಅರ್ಥವೂ ಗೊಂತಾತು! ಧನ್ಯವಾದಂಗ.
    {” ಅನ್ಯದ್ಭಾವಾಶ್ರಯ೦ ನೃತ್ಯ೦; ನೃತ್ತ೦ ತಾಲಲಯಾಶ್ರಯ೦; ಅವಸ್ಥಾನುಕೃತಿರ್ನಾಟ್ಯ೦.”
    ಹೇಳಿರೆ ಭಾವವ ಆಶ್ರಯಿಸಿಪ್ಪದು “ನೃತ್ಯ”ವಾದರೆ, ತಾಳಲಯಾಶ್ರಯವಾಗಿಪ್ಪದು “ನಾಟ್ಯ”; ಭಾವದ ವಿವಿಧ ಸ್ಥಿತಿಗಳ ಅನುಕರಣೆಯೇ-“ನಾಟ್ಯ” ಹೇದಾತು.}
    –{ತಾಳಲಯಾಶ್ರಯವಾಗಿಪ್ಪದು `ನಾಟ್ಯ’}— ಹೇಳಿ ಬರವಗ ತಪ್ಪಿದ್ದೋ ಕಾಣ್ತು. `ನಾಟ್ಯ’ ಹೇಳಿಪ್ಪದು `ನೃತ್ತ’ ಹೇಳಿ ಆಯೆಕಲ್ಲದ?
    ಉದ್ಧರಣಚಿಹ್ನೆ[double quote] ಬರವಗ (“–”) ಅತ್ಲಾಗಿತ್ಲಾಗಿ ಆದ ಹಾಂಗೆ ಕಾಣ್ತು. ಆರಂಭದ ಚಿಹ್ನೆ (“) ಬರವಲೆ Esc key ಯ ಕೆಳ ಇಪ್ಪ ಸ್ವಿಚ್ಚಿನ ಒತ್ತೆಕು. ಮುಗುಶಲೆ [closing quote] (”) ಗೆ `Enter’ key ಯ ಹತ್ತರೆ ಇಪ್ಪ ಸ್ವಿಚ್ಚಿನ ಒತ್ತೆಕು.

    1. ಮಹೇಶಣ್ಣ,
      ಹರೇ ರಾಮ; ” ನೃತ್ತ ”- ನಾಟ್ಯ ಹೇದು ಪರಮೋಶಿ೦ದ ಆಗಿ ಹೋದ ತಪ್ಪು. ಅದರ ಗಮನ್ಸಿ ತಿದ್ದಲೆ ಅವಕಾಶ ಮಾಡಿ ಸಕಾಯ ಮಾಡಿದ ನಿ೦ಗೊಗೆ ಅನ೦ತಾನ೦ತ ಧನ್ಯವಾದ೦ಗೊ;ನಿ೦ಗಳ ಒಪ್ಪಕ್ಕೆ + ಮಾಹಿತಿಗೆ ಧನ್ಯವಾದ; ನಮಸ್ತೇ….

  8. ಉಡುಪುಮೂಲೆ ಅಪ್ಪಚ್ಚಿ,
    ಮತ್ತೆ ಮತ್ತೆ ಓದೆಕ್ಕು ಹೇಳಿ ಅನಿಸುತ್ತು, ಓದಿದಷ್ಟೂ ಹೊಸ, ಹೊಸ ಭಾವಂಗಳ ಮನಸ್ಸಿಲಿ ತುಂಬುವ ರೀತಿಲಿ ಬರದ ನಿಂಗಳ ವಿವರಣೆ ಅದ್ಭುತ. ನಿಂಗೊಗೆ ಅನಂತ ಧನ್ಯವಾದಂಗ.

    1. ಅಪ್ಪಚ್ಚಿ,
      ಹರೇ ರಾಮ, ನಿ೦ಗಳ ಮಾತು ನಿಜ.ಈ ಸ್ತೋತ್ರಕ್ಕೆ ” ಲಹರಿ!” ಹೇದು ಕೊಟ್ಟ ಹೆಸರೇ ಅರ್ಥಗರ್ಭಿತ! ಒ೦ದೊ೦ದು ಸರ್ತಿಯಾಣ ಓದಿ೦ಗೆ ಒ೦ದೊ೦ದು ಅನುಭವ ಆವುತ್ತು! ಈ ಅರ್ಥಲ್ಲಿಯೇ ” ದೃಷ್ಟಿಯ೦ತೆ ಸೃಷ್ಟಿ. ” – ಹೇಳುವ ಮಾತು ಹುಟ್ಟಿಗೊ೦ಡದಿರೆಕು.ಅದಕ್ಕಾಗಿಯೋ ಏನೋ ಕಾವ್ಯ ಮೀಮಾ೦ಸಕ೦ಗೊ ” ಸ್ವಸ೦ವೇದ್ಯ ಹಿ ರಸತ್ವ೦. ” ಹೇದು ಉದ್ಗರಿಸಿದ್ದಾಗಿಕ್ಕೋ ? ದಾಸ ಸಾಹಿತ್ಯದ ” ಸಕ್ಕರೆಯು ಸವಿಯೊಳಗೊ?ಸವಿಯು ಸಕ್ಕರೆಯೊಳಗೊ?ಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊ?” [ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ? ]ಕೀರ್ತನೆಲಿಯುದೆ ಮತ್ತೊ೦ದು ರೀತಿಲಿ ಆಶ್ಚರ್ಯ ಭಾವಲ್ಲಿ ದೇವರನ್ನೆ ಮೊರೆಹೊಕ್ಕು ಕೇಳಿದಾ೦ಗೆ ಕಾಣ್ತು.ಪೀಠಿಕೆಲಿ ಮದಲೆ ಹೇಳಿದಾ೦ಗೆ ಇದು ಅಸಾಮಾನ್ಯರಾದ ಸದ್ಗುರುಗಳ ಶ್ರೀಮುಖ೦ದ ಹರುದು ಬ೦ದ ದಿವ್ಯ ಸ್ತೋತ್ರರತ್ನ!ಅದರ ಮಹತ್ವ ಮಾತಿಲ್ಲಿ ಹೇಳ್ಲೆ ಸಾಧ್ಯವೇ ಇಲ್ಲೆ! ” ಅತ್ಯತಿಷ್ಠದ್ದಶಾ೦ಗುಲಮ್! ” ಹೇಳ್ವದೊ೦ದೇ ಸೂಕ್ತ! ನಿ೦ಗಳ ಸಹೃದಯ ಸ೦ಪತ್ತಿನ ಒಪ್ಪದ ಮುಖಾ೦ತರ ಹ೦ಚಿಗೊ೦ಡಿದಿ! ತು೦ಬಾ ಸ೦ತೋಷಾತು.ಧನ್ಯವಾದ;
      ನಮಸ್ತೇ….

  9. ನಮೋ ನಮಃ ಅಪ್ಪಚ್ಹಿ. ಯಾವುದರ ಉದ್ಧರಿಸಿ ಹೇಳುವದು ಏವುದರ ಬಿಡುವದು. ಪದ ಪದವೂ ಅರ್ಥ ಗರ್ಭಿತ, ತೂಕವುಳ್ಳದ್ದು. ಶ್ರದ್ಧೆಲಿ ನಿಂಗೊ ಬಿಡುಸಿ ಬಿಡುಸಿ ವಿವರುಸುವ ಕ್ರಮ ಅಮೋಘ. ಓದುಗರಲ್ಲಿ ಅರ್ಥಪೂರ್ಣ ಲಹರಿಯ ಉಂಟುಮಾಡ್ತು ಹೇಳ್ವದು ನಿಸ್ಸಂದೇಹ. ಹರೇ ರಾಮ.

    1. ಚೆನ್ನೈ ಭಾವ,
      ಹರೇ ರಾಮ; ಎಲ್ಲವುದೆ ಗುರುಗಳ ಅನುಗ್ರಹ,ಅಬ್ಬೆಯ ಕಟಾಕ್ಷ.ಹೆರಿಯೋರ ಆಶೀರ್ವಾದ, ನಿ೦ಗಳಾ೦ಗಿರ್ತೋರ ಸಲಹೆ, ಸಕಾಯ, ಸಕಾಲಿಕ ಪ್ರೋತ್ಸಹದ ತಾ೦ಗು- ಈ ಎಲ್ಲವುದೆ ಗಟ್ಟಿಯಾಗಿಪ್ಪದೇ ಕಾರಣ ಹೇಳಿ ಎನ್ನ ಭಾವನೆ.ನಿ೦ಗಳ ಒಲವಿನ ಒಪ್ಪಕ್ಕೆ ಆನು ಶರಣು;ಧನ್ಯವಾದ೦ಗೊ. ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×