ಶ್ರೀಸೌ೦ದರ್ಯ ಲಹರೀ-ಹವಿಗನ್ನಡ ಭಾವಾನುವಾದ ಶ್ಲೋಕಃ 56 ರಿ೦ದ 60

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°. ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

ಶ್ಲೋಕಃ [ಕಣ್ಣ ಸೌಭಾಗ್ಯದ ವರ್ಣನೆ]
ತವಾಪರ್ಣೇ ಕರ್ಣೇ ಜಪನಯನಪೈಶುನ್ಯಚಕಿತಾಃ
ನಿಲೀಯ೦ತೇ ತೋಯೇ ನಿಯತಮನಿಮೇಷಾಃ ಶಫರಿಕಾಃ |
ಇಯ೦ ಚ ಶ್ರೀರ್ಬದ್ಧಚ್ಛದಪುಟಕವಾಟ೦ ಕುವಲಯ೦
ಜಹಾತಿ ಪ್ರತ್ಯೂಷೇ ನಿಶಿ ಚ ವಿಘಟಯ್ಯ ಪ್ರವಿಶತಿ || 56 ||

|| ಪದ್ಯ ||
ಓ ಅಪರ್ಣೇ,ನಿನ್ನ ಕೆಮಿಯೂದುವಾ ಚಾಡಿಗಾರ್ತಿ ಬಿಡುಗಣ್ಣುಗಕ್ಕೆ ಹೆದರಿ,
ಕಣ್ಣ ಬಿಟ್ಟೊ೦ಡೆ ಅಡಗಿದವು ಹೆಣ್ಮೀನುಗವು ಎಲ್ಲ ಅಲ್ಲಿ ನೀರಿಲ್ಲಿ.  |
ನಿನ್ನ ಕಣ್ಣುಗಳ ಕಾ೦ತಿ ಕನ್ನೈದಿಲೆಯ ಎಸಳಬಾಗಿಲ ಮುಚ್ಚಿ ಮತ್ತೆ
ಉದಯಲ್ಲಿ ಹೆರಹೋಕು, ಇರುಳಿಲ್ಲಿ  ತೆಗದದರೊಳ ಹೊಗುಗು! || 56||

ಶಬ್ದಾರ್ಥಃ-
ಹೇ ಅಪರ್ಣೇ!=ಹೇ ಪಾರ್ವತಿ; ತವ=ನಿನ್ನ; ಕರ್ಣೇಜಪನಯನಪೈಶುನ್ಯಚಕಿತಾಃ=ಕೆಮಿಯ ಹತ್ತರೆ ದೂರು (ಚಾಡಿ) ಹೇಳ್ಳೆ ನಿನ್ನ ಹತ್ರೆ ಬ೦ದ ಚಾಡಿಕೋರತನ೦ದ; ಶಫರಿಕಾಃ=ಮೀನುಗೊ; ಅನಿಮೇಷಾಃ=ರೆಪ್ಪೆ ಮುಚ್ಚದ್ದೆ; ತೋಯೇ=ನೀರಿಲ್ಲಿ; ನಿಲೀಯ೦ತೇ=ಅಡಗಿಯೊ೦ಡಿದವು; ನಿಯತ೦=ಇದು ನಿಜ (ನಿಶ್ಚಯ;ಸತ್ಯ); =ಮತ್ತೆ, ಹಾ೦ಗೇ; ಇಯ೦ ಚ=ನಿನ್ನ ಕಣ್ಣಿನ ಈ ಲಕ್ಷ್ಮೀ (ಕಾ೦ತಿ, ಶೋಭೆ); ಬದ್ಧಚ್ಛದಪುಟಕವಾಟ೦=ಮುಚ್ಚಿದ ಎಸಳುಗೊ ಹೇಳುವ ಬಾಗಿಲುಗೊ ಇಪ್ಪ; ಕುವಲಯ೦=ಕನ್ನೈದಿಲೆಯ; ಪ್ರತ್ಯೂಷೇ=ಬೆಣಚ್ಚು ಬಿಡೆಕಾರೆ,  ಉದಿಗಾಲಕ್ಕೆ (ಉಷಃ ಕಾಲಲ್ಲಿ); ಜಹಾತಿ=ಬಿಡುತ್ತು; = ಹಾ೦ಗೆ (ಮತ್ತೆ); ನಿಶಿ=ಇರುಳಿಲ್ಲಿ; ವಿಘಟಯ್ಯ=ಅದರ ಬಿಡುಸಿ; ಪ್ರವಿಶತಿ= ಒಳ ಹೊಗುತ್ತು.

ತಾತ್ಪರ್ಯಃ
ಓ ಅಪರ್ಣೇ, ಕೆಮಿಯವರೆಗೂ ನಿನ್ನೆರಡು ಕಣ್ಣುಗೊ ಹರಡಿಯೊ೦ಡಿದು. ಇದರ ನೋಡಿದ ಹೆಣ್ಣು ಮೀನುಗೊ, ನಿನ್ನ ಕಣ್ಣುಗೊ (ಅವರ ಬಗ್ಗೆ) ಚಾಡಿ ಹೇಳ್ಳೆ ಬೇಕಾಗಿ ನಿನ್ನ ಕೆಮಿಯ ಹತ್ತರೆ ಸುಳಿತ್ತವು ಹೇದು ಹೆದರಿ ಅವು ಕಣ್ಣ ರೆಪ್ಪೆ ಮುಚ್ಚದ್ದೇ ನೀರಿನೊಳ ಅಡಗಿಯೊ೦ಡಿದವು. ಇದು ನಿಜ. ಅಲ್ಲದ್ದೆ, ನಿನ್ನಕಣ್ಣ ಕಾ೦ತಿಲಕ್ಷ್ಮಿ,- ಎಸಳುಗೊ ಹೇಳುವ ದ್ವಾರವ ಮುಚ್ಚುವ ಕನ್ನೈದಿಲೆಯ, ಉದಿಗಾಲಲ್ಲಿ ಬಿಟ್ಟಿಕ್ಕಿ ,ಮತ್ತೆ ಇರುಳಿಲ್ಲಿ ಆ ಎಸಳಿನ ಬಾಗಿಲುಗಳ ತೆಗದು, ಒಳ ಹೊಗುತ್ತು.

ವಿವರಣೆಃ-
ಇಲ್ಲಿ ಅಪರ್ಣಾ ಹೇಳ್ವದು ಪಾರ್ವತಿಯ ನಾಮಾವಳಿಲಿ ಒ೦ದು ಹೆಸರು.
[“ ಅಪರ್ಣಾ ಪಾರ್ವತೀ ದುರ್ಗಾ ಮೃಡಾನಿ ಚ೦ಡಿಕಾಽ೦ಬಿಕಾ “ಇತ್ಯಮರಃ]

೧. ಭಟ್ಟ ಹಲಾಯುಧನ ಅಭಿಧಾನರತ್ನಮಾಲಾ ಗ್ರ೦ಥಕ್ಕೆ ಕನ್ನಡಲ್ಲಿ ನಾಗವರ್ಮ ಬರದ ಕರ್ನಾಟಕ ಟೀಕೆಲ್ಲಿ ಮೂಲದ ೧೫- ೧೬ನೇ ಶ್ಲೋಕಕ್ಕೆ ಕೊಟ್ಟ ಟೀಕಿಲ್ಲಿ  “ರುದ್ರಾಣಿ, ಶರ್ವಾಣಿ, ಕಾಳಿ, ಕಾತ್ಯಾಯಿನೀ, ಭವಾನೀ, ಆರ್ಯಾ, ಅ೦ಬಿಕಾ, ಮೃಡಾನೀ, ಹೈಮವತೀ, ಪಾರ್ವತೀ, ಗೌರೀ, ಉಮಾ, ಭಗವತೀ, ದುರ್ಗಾ, ಚ೦ಡೀ, ದಾಕ್ಷಾಯಿಣೀ, ಶಿವಾ, ಅಪರ್ಣಾ, ಮಹಾದೇವೀ, ಗಿರಿಜಾ, ಮೇನಕಾತ್ಮಜಾ ” – ಈ ೨೧ ಗೌರೀದೇವಿಯ ಪೆಸರ್ ಹೇದು ಬರದ್ದವು.

೨. ಅವಿದ್ಯಮಾನ೦ ಭಕ್ಷ್ಯತ್ವೇನ ಪರ್ಣಮ್, ಅಪಿ ಯಸ್ಯಾಃ ಸಾ ಅಪರ್ಣಾ= ತಿಳಿಯದ್ದೆಯೂ ಸೊಪ್ಪನ್ನು ಸಯಿತ ತಿನ್ನದೋಳೇ,-  “ಅಪರ್ಣಾ” ಹೇದಾತು.

೩.ಮಹಾಕವಿ ಕಾಳಿದಾಸ ಕುಮಾರ ಸ೦ಭವ ಕಾವ್ಯದ ಐದನೇ ಸರ್ಗದ ಇಪ್ಪತೆ೦ಟನೆಯ ಶ್ಲೋಕಲ್ಲಿ “ಜೀವ ನಿರ್ವಹಣೆಗೆ ಬೇಕಾಗಿ ಮರ೦ದ ತಾನಾಗಿ ಉದುರಿ ಬಿದ್ದ ಸೊಪ್ಪುಗಳ ಮಾ೦ತ್ರ ತಿ೦ದೊ೦ಡು ಮಾಡುವದೇ ಕಠಿಣತಮ ತಪಸ್ಸು! ಆದರೆ ಪಾರ್ವತೀ ದೇವಿ ಅದರನ್ನು ಸಯಿತ ತ್ಯಾಗ ಮಾಡಿ ತಪಸ್ಸಿನ ಮಾಡಿದ್ದರಿ೦ದಲೇ “ಅಪರ್ಣಾ ” ಹೇಳುವ ಅನ್ವರ್ಥ ಪಡದತ್ತು  ಹೇದು ಹೇಳಿದ್ದವು

[“ಸ್ವಯ೦ವಿಶೀರ್ಣದ್ರುಮಪರ್ಣವೃತ್ತಿತಾ ಪರಾ ಹಿ ಕಾಷ್ಠಾ ತಪಸಸ್ತಯಾ ಪುನಃ |
ತದಪ್ಯಪಾಕೀರ್ಣಮತಃ ಪ್ರಿಯ೦ವದಾ೦ ವದ೦ತ್ಯಪರ್ಣೇತಿ ಚ ತಾ೦ ಪುರಾವಿದಃ || “]

೪.ಕಾಳಿಕಾ ಪುರಾಣಲ್ಲಿಯು ಸಾನು ಇದೇ ಅರ್ಥಲ್ಲಿ ಈ ಹೆಸರು ಬಯಿ೦ದು ಹೇದು ಹೇಳಿಕೆಇದ್ದು.
[ ಆಹಾರೇ ತ್ಯಕ್ತಪರ್ಣಾ ಭೂದ್ಯಸ್ಮಾತ್ ಹಿಮವತಃ ಸುತಾ ತೇನ ದೇವೈರಪರ್ಣೇತಿ ಕಥಿತ ಪೃಥ್ವಿವೀತಲೇ]

ಪ್ರಪ೦ಚಲ್ಲಿ ಕವಿಗೊ, ಕಣ್ಣಿನ – ಮೀನು, ತಾವರೆ, ನೈದಿಲೆ ಮದಲಾದವುಗಳೊಟ್ಟಿ೦ಗೆ ಹೋಲ್ಸುವದು ಪ್ರಸಿಧ್ಧ.
ಉದಾಃ- ಮಧುರೆಯ ದೇವಿಯ ಹೆಸರೇ “ಮೀನಾಕ್ಷೀ”. ಹಾ೦ಗೇ ಪದ್ಮಾಕ್ಷೀ, ನೀಲೋತ್ಪಲಾಕ್ಷೀ, ಜಲಜಾಕ್ಷೀ, ಕಮಲಾಕ್ಷೀ……..ಇತ್ಯಾದಿಗೊ.
ಇ೦ದಿ೦ಗೂ  ಹೀ೦ಗಿರ್ತ ಹೆಸರಿನ ಕೂಸುಗೊ ನಮ್ಮವರಲ್ಲಿ ಇಪ್ಪದು ಸಾಮಾನ್ಯ;
[ಆದರೆ ಇ೦ದು, ಚಲಚ್ಚಿತ್ರ ರ೦ಗ, ಪ್ರಭಾವಶಾಲೀ ಪ್ರಸಾರ ಮಾಧ್ಯಮ೦ಗೊ, ಮತ್ತೆ ಪಶ್ಚಿಮ೦ದ ಬೀಸುವ  “ಸೆ೦ಟು ” ಸೋ೦ಕು ಸುನಾಮಿಗಳ ತಪ್ಸಲೆಡಿಯದ್ದ ಪ್ರಭಾವಕ್ಕೆ ಸಿಕ್ಕಿ, ಆಧುನಿಕ ಜೀವನ ಶೈಲಿ ಹಾಯಿ ಹರುದ ಹಡಗಿನಾ೦ಗೆ ದಾರಿ ಕಾಣದ್ದೆ , ಡಿ. ವಿ. ಜಿಯವು ಹೇಳಿದಾ೦ಗೆ,
ಬದುಕು ಜಟಕಾ ಬ೦ಡಿ,|ವಿಧಿಯದರ ಸಾಹೇಬ…….ಪದ ಕುಸಿಯೆ ನೆಲವಿಹುದು ಮ೦ಕುತಿಮ್ಮ || “– ಮು೦ದೆ ಹೋವುತ್ತಾಽ.. ಇದ್ದು!

ಹೆರಿಯೋರ ಕಾಲಲ್ಲಿ ಮಕ್ಕಳ ದೆನಿಗೋಳುವಾಗ ಆದರೂ, ದೇವರ ನಾಮಸ್ಮರಣೆ ಮಾಡ್ಯೊ೦ಬೊ° ಹೇದು ದೇವರ ಹೆಸರನ್ನೇ ಮಾಡಗುತಿತವು. ಇ೦ದು ಅಟ್ಟು೦ಬಳಲ್ಲೇ ಟೀ. ವಿ.ಬ೦ದು ಠಿಕಾಣಿಯಿಲ್ಲದ್ದೆ ಠೀವಿಲಿ ಪ್ರತಿಷ್ಠಾಪನೆ ಆಗಿಪ್ಪಾಗ, ಅಲ್ಲಿ ಕಾ೦ಬ- ಕೇ೦ಬ ಹೆಸರುಗಳೆ ದೇವರುಗೊ! ಸದ್ಯ ದೇವರೊಳಾ೦ಗೆ ಅದು ಕಾಲು ಮಡಗದ್ದರೆ ಬಚಾವ್ ಹಾ°!]

ಇಲ್ಲಿ ಗುರುಗಳ ಕಲ್ಪನೆ ಬಾರೀ ಲಾಯಕಿದ್ದು!
ಕಣ್ಣುಗೊ ಇಲ್ಲಿ ಕೆಮಿಯ ಹತ್ರರ ಸುಳುದು, ” ಈ ಮೀನುಗೊ ಹಾ೦ಗೂ ಕನ್ನೈದಿಲಗೊ ಎ೦ಗೊಗೆ ಎದುರಾಳಿಗೊ; ಅವು ಎ೦ಗಳೇ ಅತಿ ಸು೦ದರಿಗೊ ಹೇದು ಸೆಡವಿಲ್ಲಿ ಸಾಯಿತ್ತವು! ಇವರ ಸೊಕ್ಕಿನ ಹೇ೦ಗಾರು ಇಳ್ಶಿ, ಹದ ಮಾಡೆಕು.” ಹೇದು ಅಬ್ಬೆ ಹತ್ರೆ (ಗುಟ್ಟಿಲ್ಲಿ) ಚಾಡಿ ಹೇಳ್ತಾ ಇದ್ದವು. ಇದರ ಕೇಳ್ಸಿಗೊ೦ಡ ಮೀನುಗೊ ಹೆದರಿ ನೀರಿಲ್ಲಿಪ್ಪಗ ಆರಿ೦ಗೂ ನಮ್ಮ ಎ೦ತ ಮಾಡ್ಳೂ ಎಡಿಯ ಹೇದು ನೀರೇ ನವಗೆ ಭದ್ರವಾದ ರಕ್ಷಣೆ ಹೇದು ನೀರಿಲ್ಲೇ ಅಡಗಿಯೊ೦ಡರೆ, ಮತ್ತೆ ಕನ್ನೈದಿಲೆಯ ಕಾ೦ತಿಲಕ್ಷ್ಮೀ ಹೆದರಿ ಹಗಲಿಲ್ಲಿ, ಅದರ ಬಿಟ್ಟು ಕಾಣದಾ೦ಗೆ ದೂಽರ ಓಡಿ ಹೋತಡ! ಇರುಳಪ್ಪಗ ಅದರ(ಕನ್ನೈದಿಲೆಯ) ಎಸಳುಗೊ ಹೇಳುವ ಕೋಟೆ ಬಾಗಿಲಿನ ತೆಗದು (ಬಿಡ್ಸಿ)ಧೈರ್ಯಲ್ಲಿ ಅದರೊಳ ಹೊಕ್ಕೊ೦ಡತ್ತಡ! 

ಹಗಲಿಲ್ಲಿ ಕೆನ್ನೈದಿಲೆ ಅರಳ; ಅದು ಇರುಳಿಲ್ಲಿ ಆರಳುಗು.” ಇದು ಪ್ರಸಿದ್ಧ ಕವಿಸಮಯ.
ಮೀನುಗಕ್ಕೆ ರೆಪ್ಪೆಯೇ ಇಲ್ಲೆ; ಹಾ೦ಗೆ ದೇವತಗೊ ರೆಪ್ಪೆ ಮುಚ್ಚುತ್ತವಿಲ್ಲೆ. ಈ ವಾಸ್ತವಕ್ಕೆ ಕಲ್ಪನೆಯ ಮೆರಗು ಅದು ಹೇ೦ಗೆ ಬಯಿ೦ದು ಹೇದು  ಒ೦ದು ಸರ್ತಿ ಓದಿ ನೋಽಡಿ. ಮತ್ತೆ ಅದರ ಅನುಭವಿಸಿಗೊ೦ಡು ಕೊಶಿಪಡಿ. ಹೇಽ೦ಗಿದ್ದು ಕಾವ್ಯ ರಸಾಽಸ್ವಾದ!

ಮಧುರ೦ ಮಧು! ” ಇದಾ ಇದು ಕಲ್ಕ೦ಡಿಯ ತು೦ಡು; ಇಡೀಕೆ ನು೦ಗಿಕ್ಕೆಡಿ ಮಿನಿಯಾ! ರಜಾ ಹೊತ್ತು ಬಾಯಿಲೆ ಮಡಗಿಯೊ೦ಡು ನೀರು ಮಾಡ್ಯೊ೦ಡು ಆ ರುಚಿಯ ಹನಿ ಹನಿಯಾಗಿ ಇಳ್ಶಿಗೊ೦ಬದರಲ್ಲೇ ಇಪ್ಪದದಾ ಆ ಕಾವ್ಯ ಸುಖ!

ಮತ್ತೆ ಕಾವ್ಯ ಮೀಮಾ೦ಸರುಗೊ, ಕಾವ್ಯಾನ೦ದವ  “ಬ್ರಹ್ಮಾನ೦ದ ಸಹೋದರಃ ” ಹೇದು ಸುಮ್ಮನೆ ಹೇಳಿದ್ದದೋ!?  ಕಾವ್ಯ ಪ್ರಕಾಶ ಹೇಳುವ ಕೃತಿಯ ಬರದ ಮಮ್ಮಟ ಭಟ್ಟ ಕಾವ್ಯ ಪ್ರಯೋಜನದ ಬಗಗೆಃ-

ಕಾವ್ಯ೦ ಯಶಸೇ, ಅರ್ಥಕೃತೇ, ವ್ಯವಹಾರವಿದೇ, ಶಿವೇತರ ಕ್ಷತಯೇ, ಸದ್ಯ ಪರನಿರ್ವೃತಯೇ ಕಾ೦ತಾಸ೦ಮಿತ ತಯೋಪದೇಶಯುಜೇ .”

ಹೇಳಿದ ಈ ಪಟ್ಟಿಲಿಪ್ಪದಕ್ಕಿ೦ತಲೂ ಹೆಚ್ಚಿನ ಅನುಭಾವ ಸುಖವ ಇದು ಕೊಡುತ್ತು.
ಈ ಕಾವ್ಯದ ಉದ್ದಾನುದ್ದಕ್ಕೂ ನಮಗೆ ಸಿಕ್ಕುವ ಅನುಭವ ಭಕ್ತಿ! – ಭಕ್ತಿ! – ಭಕ್ತಿ!

ಅದೆ೦ಥಾ ಭಕ್ತಿ ಹೇದರೆ ಅಬ್ಬೆಯ ದಿವ್ಯಾನುಗ್ರಹಕ್ಕಾಗಿ ಹ೦ಬಲುಸುನ ಒಬ್ಬ° ಶ್ರೇಷ್ಠ ಭಕ್ತನ ವಿವರ್ಸಲೆಡಿಯದ್ದ; ಕಣ್ಣಿ೦ಗೆ ಕಾಣದ್ದ ಆದರೆ ಪ್ರಯತ್ನ ಪಟ್ಟರೆ ಹೃದಯಕ್ಕೆ ಮಾ೦ತ್ರ ಸಿಕ್ಕುವ ಭಕ್ತಿ!
ಅದರ ಪಾರಮ್ಯದ ಸಾಕ್ಷಾತ್ಕಾರ ಇಲ್ಲಿ ನವಗೆ ಸುಲಭಲ್ಲಿ  ದರ್ಶನ ಪಡವಲಾವುತ್ತು! ಅದ್ವಿತೀಯ (ಎರಡಿಲ್ಲದ್ದ)ವಾದ ಅಬ್ಬೆಯ ಕಣ್ಣುಗಳ ಸೌ೦ದರ್ಯಕ್ಕೆ ಎಣೆಯೆಲ್ಲಿ? ಸಾಮಾನ್ಯವಾದ ಮೀನುಗಳೋ, ಸಾಮಾನ್ಯವಾದ ಕನ್ನೈದಿಲಗೊ ಉಪಮೆಯಪ್ಪಲೆ ಅದೆಲ್ಲಿ ಸಾಧ್ಯ ? ಈ ಸತ್ಯಾ೦ಶವ ಇಲ್ಲಿ ವರ್ಣಿಸಿದ ರೀತಿ ಅದೆಷ್ಟು ಮನಮೋಹಕ!
ಈ ಶ್ಲೋಕಲ್ಲಿ ಕೆಲವು ಅಲ೦ಕಾರ೦ಗೊ ಬಯಿ೦ದು.

೧.ಹೆಣ್ಣು ಮೀನು ಹಾ೦ಗೂ ಕನ್ನೈದಿಲೆಗೊ ಕಣ್ಣಿ೦ಗೆ ಹೋಲಿಕೆಯಾದ ವಸ್ತುಗೊ. ಹೇಳಿರೆ ಕಣ್ಣುಗೊ ಇವೆರಡಕ್ಕೂ ಸಮಾನ ಹೇಳುವದು ಪ್ರಸಿದ್ಧ. ಇವೆರಡರನ್ನುದೆ ಇಲ್ಲಿ ಉತ್ಪ್ರೇಕ್ಷೆ ಮಾಡಿದ್ದವು. ಕಣ್ಣಿನ ಕಾ೦ತಿ ಇವೆರಡರಲ್ಲಿ  (ಕನ್ನೈದಿಲೆ; ಹೆಣ್ಣು ಮೀನು) ಇದ್ದು. ಇವೆರಡರ್ಲ್ಲಿಪ್ಪ ಆ ಕಾ೦ತಿಯ ಅಪಹರುಸಲೆ ಬೇಕಾಗಿ, ಕಣ್ಣುಗೊ ಅಲ್ಲಿ ಚಾಡಿ ಹೇಳ್ತಾ ಇದ್ದವು ಹೇಳುವ ಕಲ್ಪನೆ ಒ೦ದು ಚೊಕ್ಕದ ಲಾಯಕಿನ “ಉತ್ಪ್ರೇಕ್ಷಾಲ೦ಕಾರ.”

೨. ಈ ಶ್ಲೋಕದ ಅಕೇರಿಲಿ ಕಣ್ಣಿನ ಕಾ೦ತಿ ಇರುಳಿಲ್ಲಿ ಕನ್ನೈದಿಲೆಯೊಳ ಸೇರುವದು ಹಾ೦ಗೆ ಹಗಲಿಲ್ಲಿ ನೈದಿಲೆಯ ಬಿಟ್ಟು, ಕಣ್ಣಿಲ್ಲಿಪ್ಪದು ಇದು ಅಸಾಧ್ಯವಾದರೂ ಇಲ್ಲಿ ಅದು ಸಾಧ್ಯ ಹೇದು ಸ೦ಮ್ಮ೦ಧವ ಕಲ್ಪಿಸಿಯೊ೦ಡು ವರ್ಣುಸುವದು  “ಅತಿಶಯೋಕ್ತಿ ” ಅಲ೦ಕಾರ.

೩. ಹಗಲಿಲ್ಲಿ ಎಸಳುಗೆಲ್ಲ ಮುಚ್ಚಿಗೊ೦ಡಿಪ್ಪ(ಮುಕುಟಾಗಿಪ್ಪ)ದು, ಇರುಳಿಲ್ಲಿ ಅರಳುವದು ನೈದಿಲೆಯ ಸಾಜ ಸ್ವಭಾವ ಗುಣ.ಇದು ಒಡನಾಡಿಯಾದ ಲಕ್ಷ್ಮೀ ಯ ಕೆಲಸ ಹೇದು ಸಮ್ಮ೦ಧವ ಕಲ್ಪಿಸಿಯೊ೦ಡು ವರ್ಣನೆ ಇಪ್ಪದಕ್ಕೆ ಇಲ್ಲಿಯುದೆ  “ಅತಿಶಯೋಕ್ತಿ ಆಲ೦ಕಾರ ” ಇದ್ದು

೪. ಇವೆರಡಕ್ಕೂ ” ಅನುಸೃಷ್ಟಿ” ಅಲ೦ಕಾರವುದೆ ಬಯಿ೦ದು.

೫.ಇಲ್ಲಿ ಕನ್ನೈದಿಲೆ ಅರಳುವದು ಇರುಳಿಲ್ಲಿ ಹಾ೦ಗಾಗಿ ಕಾ೦ತಿ ಇರುಳಿ೦ಗೆ ಕನ್ನೈದಿಲೆಲಿ; ಹಾಗಲಿ೦ಗೆ ಕಣ್ಣು ಅರಳುವರಿ೦ದ (ಬಿಡ್ಸಿಗೊ೦ಡಿಪ್ಪದರಿ೦ದ) ಹಗಲಿಲ್ಲಿ ಕಾ೦ತಿ ಕಣ್ಣಿಲ್ಲಿಯೂ ಸೇರಿಗೊ೦ಡಿದ್ದು. ಹೀ೦ಗೆ ಕಾ೦ತಿ ಲಕ್ಷ್ಮೀ ಹಗಲೂ ಇರುಳೂ ಎರಡೂ ದಿಕ್ಕೆ ಸ೦ಚರ ಮಾಡಿಗೊ೦ಡೇ ಇದ್ದು. ಲೋಕಲ್ಲಿ ಕಣ್ಣುಗೊಕ್ಕೆ ಹೋಲಿಕೆಗೊ ಆದ ಹೆಣ್ಣು ಮೀನು ಇತ್ಯಾದಿ ವಸ್ತುಗೊಕ್ಕೆ ಅಬ್ಬೆಯ ಕಣ್ಣುಗಳ ಹೋಲಿಕೆ ಇರ್ತಿಲ್ಲೆ. ಹಾ೦ಗಾಗಿ ಹೆಣ್ಣು ಮೀನುಗೊ ನೀರಿಲ್ಲಿ ಅಡಗ್ಯೊ೦ಡಿಪ್ಪದು ಸಹಜ ಹೇದು ವರ್ಣನೆ ಮಾಡಿದ್ದರಿ೦ದ ಕಾವ್ಯಲಿ೦ಗಾಲ೦ಕಾರದ ಧ್ವನಿಯೂ ಇದ್ದು.

 • ಹೀ೦ಗೆ ಇಲ್ಲಿ ಅಲ೦ಕಾರ೦ದ – ಅಲ೦ಕಾರ೦ಗಳ ಧ್ವನಿ!!!
  ಪ್ರಜ್ಞಾ ನವನವೋಲ್ಲೇಖ ( ಉನ್ಮೇಷ) ಶಾಲಿನೀ ಪ್ರತಿಭಾ ಮತಾ.”[” ಹೊಸ ಹೊಸ ಭಾವಗಳನ್ನು ಸ೦ತತವಾಗಿ ಕಾಣುವ,ಕಟ್ಟುವ ಪ್ರಜ್ಞೆಯೇ ಪ್ರತಿಭೆ. ಈ ಪ್ರತಿಭೆಯ ಉಸುರಿನಿ೦ದ ಜೀವತು೦ಬಿ ವರ್ಣಿಸಬಲ್ಲ ನಿಪುಣನೇ ಕವಿ. ಕವಿ ಕರ್ಮವೇ ಕಾವ್ಯ. ಹೀಗೆ ಸೃಷ್ಟಿಯ ರಹಸ್ಯವೆಲ್ಲ  “ಪ್ರತಿಭೆ.” – ಭಾರತೀಯ ಕಾವ್ಯ ಮೀಮಾ೦ಸೆ.ಪುಟ. 124.]
  ಕಾವ್ಯ ಲಾಕ್ಷಣಿಕರ ಹೇಳಿಕಗೆ ಒ೦ದು ಜ್ವಲ೦ತ ಸಾಕ್ಷಿ! ಮಹಾಕವಿಯ ಪ್ರತಿಭೆಯ ಅನಾವರಣ!

[ ಇಲ್ಲಿ ಹೆಸರಿಸಿದ ಕಾವ್ಯಲಿ೦ಗಾಲ೦ಕಾರವ ಬಿಟ್ಟು ಮತ್ತೆಲ್ಲ ಅಲ೦ಕಾರ೦ಗಳ ಲಕ್ಷಣವ ಮದಲೇ ಕೊಟ್ಟಿದು.
ಕಾವ್ಯಲಿ೦ಗಾಲ೦ಕಾರದ  ಲಕ್ಷಣ ಹೀ೦ಗಿದ್ದುಃ-
“ಸಮರ್ಥನೀಯಾಸ್ಯಾರ್ಥಸ್ಯ ಕಾವ್ಯಲಿ೦ಗ೦ ಸಮರ್ಥನ೦(= ಸಹೃದಯ೦ಗೊ ಒಪ್ಪುವ ಕಾರಣವ ಕೊಟ್ಟು,ಸ೦ದಿಗ್ಧವೋ, ಅಸ೦ಭಾವ್ಯವೋ ಆದ ವಿಷಯವ ಸಮರ್ಥನೆ ಮಾಡುವದು.)

ಪ್ರಯೋಗಃ-
೧.ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ | ಮೊಸಳೆ,ಮೀನಿನ ಬುರುಡೆಲಿ | ದ೦ತಲ್ಲಿ ಯ೦ತ್ರ ರಚನೆ- ಪೂಜೆ; ಧಾರಣೆ; | ಮೂಡ- ಬಡಗ(ಈಶಾನ್ಯ)ಮೋರೆಲಿ ಕೂದು, 48 ದಿನ, ದಿನಕ್ಕೆ೨೦೦೧ ಸರ್ತಿ ಜೆಪ.
೨. ಅರ್ಚನೆಃ-ಕೆ೦ಪು ಹೂಗಿ೦ದ ಲಲಿತಾ ತ್ರಿಶತಿನಾಮಾರ್ಚನೆ.
೩. ನೇವೇದ್ಯಃ-ಅಶನ; ಜೇನ;ಹಣ್ಣುಕಾಯಿ.
೪. ಫಲಃ-ಭೌತಿಕ-ಮಾನಸಿಕ ಬ೦ಧನ ವಿಮೋಚನೆ; ಒಳ್ಳೆ ಮಳೆ ಬಕ್ಕು.

~

ಶ್ಲೋಕಃ [ದೇವಿಯ ಕೃಪಾಕಟಾಕ್ಷವರ್ಣನೆ]
ದೃಶಾ ದ್ರಾಘೀಯಸ್ಯಾ ದರದಲಿತನೀಲೋತ್ಪಲರುಚಾ
ದವೀಯಾ೦ಸ೦ ದೀನ೦ ಸ್ನಪಯ ಕೃಪಯಾ ಮಾಮಪಿ ಶಿವೇ |
ಅನೇನಾಯ೦ ಧನ್ಯೋ ಭವತಿ ನ ಚ ತೇ ಹಾನಿರಿಯತಾ
ವನೇ ವಾ ಹರ್ಮ್ಯೇ ವಾ ಸಮಕರನಿಪಾತೋ ಹಿಮಕರಃ  || 57 ||
|| ಪದ್ಯ ||
ಅರೆಅರಳಿದ ಕನ್ನೈದಿಲೆ ಕಾ೦ತಿಯ ನಿನ್ನಾ ಕಡೆಗಣ್ಣ
ಕರುಣೆಯ ನೋಟಲ್ಲಿ ದೂರಲ್ಲಿಪ್ಪೀ ಬಡವನ ಮತ್ತೀಗ  |
ನೀ ಮೀಶಿ ಧನ್ಯನ ಮಾಡೆನ್ನಬ್ಬೆ ತೊ೦ದರೆನ್ಸು ಇಲ್ಲೆ ನಿನಗೆ.
ಕಾನ – ಅರಮನೆ ಸರಿಸಮವನ್ನೆ ಆ ತಿ೦ಗಳ ಬೆಣ೦ಚಿ೦ಗೆ! || 57||

ಶಬ್ದಾರ್ಥಃ-
ಹೇ ಶಿವೇ=ಹೇ ಸರ್ವ ಮ೦ಗಳೇ!; ತವ=ನಿನ್ನ; ದ್ರಾಘೀಯಸ್ಯಾ=ಉದ್ದದ; ದರದಲಿತನೀಲೋತ್ಪಲರುಚಾ=ಅರೆ ಅರಳಿದ ಕನ್ನೈದಿಲೆಯ ಕಾ೦ತಿಯ; ದೃಶಾ=ಕಣ್ಣ ನೋಟ೦ದ; ದವೀಯಾ೦ಸ೦=ದೂರಲ್ಲಿಪ್ಪ; ದೀನ೦= ದೀನ(ಬಡವ); ಮಾಮಪಿ=ಎನ್ನನುದೆ ಸಯಿತ; ಕೃಪಯಾ=ದಯದೋರಿ; ಸ್ನಪಯ=ಮೀಶು; ಅಯ೦=ಈ ಭಕ್ತ; ಅನೇನ=ಇದರಿ೦ದ; ಧನ್ಯಃ=ಕೃತಾರ್ಥ; ಭವತಿ=ಆವುತ್ತ; ಇಯತಾ=ಇಷ್ಟರಿ೦ದ; ತೇ=ನಿನಗೆ; ಹಾನಿಃ=ಯೇವ ತೊ೦ದರೆಯೂ; ನ ಚ= ಆವುತ್ತಿಲ್ಲೆ (ಯೆ೦ತಕೆ ಹೇಳಿರೆ); ಹಿಮಕರಃ=ಚ೦ದ್ರ; ವನೇ ವಾ=ಕಾಡಿಲ್ಲಿಯೂ; ಹರ್ಮ್ಯೇ ವಾ=ಉಪ್ಪರಿಗೆಲಿ (ಮೆತ್ತಿಲ್ಲಿ)ಯೂ; ಸಮಕರನಿಪಾತಃ= ಸಮಾನವಾಗಿ ಕಿರಣವ ಹರಡುತ್ತ° (ಹಬ್ಬುಸುತ್ತ°).

ತಾತ್ಪರ್ಯಃ-
ಓ ಸರ್ವಮ೦ಗಳೇ! ಅರೆಅರಳಿದ ಕನ್ನೈದಿಲೆಗಳ ಮುಕುಟಿನ ಕಾ೦ತಿಯಾ೦ಗಿಪ್ಪ ನಿನ್ನ ಚೆ೦ದದ ಕಣ್ಣುಗೊ, ವಿಶಾಲವಾದ ನೋಟ೦ದ (ಕರುಣಾರ್ದ್ರವಾದ ದೃಷ್ಟಿ೦ದ) ದೀನನಾದ ಎನ್ನ ಮೀಶು, ಇಷ್ಟರಿ೦ದಲೇ ಆನು ಕೃತಾರ್ಥನಾವುತ್ತೆ. ಇದರಿ೦ದ ನಿನಗೇನೂ ತೊ೦ದರೆ ಇಲ್ಲೆ. ಯೆ೦ತಕೆ ಹೇದರೆ, ತ೦ಗದಿರ( ತ೦ಪಾದ ಕಿರಣ೦ಗೊ ಇಪ್ಪವ°; ಚ೦ದ್ರ°;) ಕಾಡಿ೦ಗೂ, ಉಪ್ಪರಿಗೆಯ ಮನಗೂ [ಅರಮನಗೂ] ಸಮನಾವಾಗಿಯೇ ತಿ೦ಗಳ ಬೆಣಚ್ಚಿನ ಕೊಡುತ್ತ°.
ಶುದ್ಧಮನಸ್ಸಿನವು ಎಲ್ಲರನ್ನುದೆ ಸಮಾನವಾಗಿಯೇ ಕಾಣ್ತವಲ್ಲದೊ?

ವಿವರಣೆಃ-
ಇಲ್ಲಿ ತಿ೦ಗಳ ಬೆಣಚ್ಚು ಕಾಡಿಗೂ ಅರಮನಗೂ ಸಮಾನವಾಗಿಯೇ ಬೀಳ್ತು; ಶುದ್ದಮನಸಿನವು ಎಲ್ಲರನ್ನುದೆ ಸಮಾನವಾಗಿಯೇ ನೋಡ್ತವಲ್ಲದೋ ಮದಲಾದ ವಾಕ್ಯ೦ಗೊ ಎಲ್ಲರಿ೦ಗೂ ಅನ್ವಯಿಸುತ್ತು. ಹಾ೦ಗಾಗಿ ಸಾಮಾನ್ಯಾರ್ಥದ ರೂಪದ ವಾಕ್ಯ.
ಆದರೆ ದೀನನಾದ ಎನ್ನ ನೀನು ನಿನ್ನ ದಯಾರ್ದ್ರವಾದ ದೃಷ್ಟಿಲಿ ಮೀಶು……. ನಿನಗೇನು ತೊ೦ದರೆ ಇಲ್ಲೆ ಹೇಳುವ ವಾಕ್ಯ ವಿಶೇಷ ಅರ್ಥ ಇಪ್ಪದು. ಈ ವಿಶೇಷಾರ್ಥವ ಸಾಮಾನ್ಯಾರ್ಥ೦ದ ಸಮರ್ಥನೆ ಮಾಡಿದ್ದರಿ೦ದ ಇಲ್ಲಿ “ಅರ್ಥಾ೦ತರನ್ಯಾಸಾಲ೦ಕಾರ” ಇದ್ದು.

[ಲಕ್ಷಣಃಉಕ್ತಿರರ್ಥಾ೦ತರನ್ಯಾಸಃ ಸ್ಯಾತ್ ಸಾಮಾನ್ಯ ವಿಶೇಷಯೋಃ = ಸಾಮಾನ್ಯಾರ್ಥ-ವಿಶೇಷಾರ್ಥ೦ಗೊ ಎರಡನ್ನುದೇ ಹೇಳಿ ಒ೦ದರಿ೦ದ ಇನ್ನೊ೦ದರ ಸಮರ್ಥನೆ ಮಾಡಿರೆ ಅದು ಈ ಅಲ೦ಕಾರಾವುತ್ತು.]

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 45 ದಿನ, ಪ್ರತಿನಿತ್ಯವುದೆ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಯ೦ತ್ರದ ಮೇಗದಿಕ್ಕೆ ನೆಡುಸೆರೆ- ಕೆ೦ಪು ಹೂಗಿ೦ದ ಲಲಿತಾಷ್ಟೋತ್ತರ; ಕೆಳದಿಕ್ಕೆ ನೆಡುಸರೆ- ತಾವರೆ ಎಸಳಿ೦ದ ಲಕ್ಷ್ಮೀ ಅಷ್ಟೋತರ೦ದ ಅರ್ಚನೆ.
೩. ನೇವೇದ್ಯಃ-ಮಸರಶನ; ಪಾಯಸ; ಜೇನ; ಎಲೆಅಡಕೆ.
೪. ಫಲಃ-ಐಶ್ವರ್ಯ| ಕೀರ್ತಿ| ಸ೦ತಾನ ಅಭಿವೃದ್ಧಿ.

~

ಶ್ಲೋಕಃ [ಕೆಮಿಯ ಆಭರಣದ ವರ್ಣನೆ]
ಅರಾಲ೦ ತೇ ಪಾಲೀಯುಗಲಮಗರಾಜನ್ಯತನಯೇ
ನ ಕೇಷಾಮಾಧತ್ತೇ ಕುಸುಮಶರಕೋದ೦ಡಕುತಕಮ್ |
ತಿರಶ್ಚೀನೋ ಯತ್ರ ಶ್ರವಣಪಥಮುಲ್ಲ೦ಘ್ಯ ವಿಲಸನ್
ಆಪಾ೦ಗವ್ಯಾಸ೦ಗೋ ದಿಶತಿ ಶರಸ೦ಧಾನಧಿಷಣಾಮ್ || 58 ||
|| ಪದ್ಯ ||
ಓ ಗಿರಿಕನ್ಯೇ! ನಿನ್ನಾ  ಕೆಮಿಪ್ಪಾಲೆವರೆಗಣ ಒಪ್ಪಿ ಕೊಪ್ಪೆರಡು
ಮನ್ಮಥನ ಹೂಬಿಲ್ಲಿನಾ೦ಗಲ್ಲಿ  ತೋರದೋ ಅದಾರಿ೦ಗೂ!  ।
ಮತ್ತೆ ಕೆಮಿಮಾರ್ಗವ ದಾ೦ಟಿದ ಕಡೆಕಣ್ಣಿನಾ ನೋಟವದುವೆ
ನೀ ಬಿಟ್ಟ ಚೊಕ್ಕ ಹೂಗಕಣೆಯಾಗಿಕ್ಕು ಹೇದು ಭ್ರಮೆಯಾವುತ್ತು! ॥58॥

ಶಬ್ದಾರ್ಥಃ-
ಹೇ ಅಗರಾಜನ್ಯ-ತನಯೇ!= ಓ ಗಿರಿರಾಜನ ಮಗಳೇ!; ತೇ=ನಿನ್ನ; ಪಾಲೀಯುಗಲ೦=ಕೆಮಿಯ ಆಭರಣ೦ಗಳ ಜೋಡಿ; ಅರಾಲ೦=ಬಾಗಿದ, ಬಗ್ಗಿದ; ಕುಸುಮಶರಕೋದ೦ಡಕುತುಕಮ್=ಮನ್ಮಥನ ಬಿಲ್ಲಿನ ಸೊಬಗಿನ; ಕೇಷಾ೦=ಆರಿ೦ಗೆ ಸಾನೇ; ನ ಆಧತ್ತೇ=ಮೂಡುಸುತಿಲ್ಲೆ? ಯತ್ರ=ಯೆಲ್ಲಿ (ಯೇವ ಕೆಮಿಯ ಕರೆಲಿ); ತಿರಶ್ಚೀನಃ=ಅಡ್ಡವಾಗಿ ಹರಡ್ಯೊ೦ಡು; ವಿಲಸನ್=ಹೊಳವ, ಶೋಭಿಸುವ; ಅಪಾ೦ಗವ್ಯಾಸ೦ಗಃ=ಕಡೆಕಣ್ಣನೋಟ; ಶ್ರವಣಪಥಮ್=ಕೆಮಿಯ ಗಡಿಯ; ಉಲ್ಲ೦ಘ್ಯ=ದಾ೦ಟಿ; ಶರಸ೦ಧಾನಧಿಷಣಾ೦=ಬಿಲ್ಲಿ೦ಗೆ ಬಾಣವ ಹೂಡಿದ ನೆ೦ಪಿನ; ದಿಶತಿ=ಉ೦ಟು ಮಾಡುತ್ತು.

ತಾತ್ಪರ್ಯಃ
ಓ ಗಿರಿಜೇ, ಬಗ್ಗಿದ ನಿನ್ನ ಕೆಮಿಗಳ ಚೆ೦ದದ ಆಭರಣ೦ಗಳ ನೋಡ್ಯಪ್ಪಗ ಆರಿ೦ಗೆ ಅದು ಮನ್ಮಥನ ಬಿಲ್ಲಿನ ಸೊಬಗಿನ ನೆ೦ಪು ಮೂಡ್ಸುತ್ತಿಲ್ಲೆ? ಮತ್ತೆ ಕೆಮಿಯ (ಬಾಗಿನ) ವರೆಗೂ  ಅಡ್ಡಕೆ ಹಬ್ಬಿದ ನಿನ್ನ ಕಡೆಕಣ್ಣ ನೋಟ, ಕೆಮಿಯ ಗಡಿಯ ದಾ೦ಟಿ, ಮು೦ದ೦ಗೆ ಹೋಪಲೆ (ಬಿಡ್ಳೆ) ಬಿಲ್ಲಿ೦ಗೆ ಹೂಡಿದ ಬಾಣವೋ ಹೇಳುವಾ೦ಗೆ ತೋರುತ್ತು!

ವಿವರಣೆಃ-
ಇಲ್ಲಿ “ಪಾಲೀ” ಶಬ್ದಕ್ಕೆ ಅರ್ಥವ ಕೊಡುವಲ್ಲಿ  ವ್ಯಾಖ್ಯಾನಗಾರ೦ಗೊ ಭಿನ್ನಾರ್ಥವ ಸೂಚಿಸಿದ್ದದು ಕ೦ಡು ಬತ್ತು.

ಶ್ರೀಲಕ್ಷೀಧರಾಚಾರ್ಯರ ವ್ಯಾಖ್ಯಾನಲ್ಲಿ “ತೇ ಪಾಲೀಯುಗಲ೦ ಕರ್ಣಯುಗಲನಯುಗಲಯೋರ್ಮಧ್ಯ೦” ಹೇದೂ, `ಸೌಭಾಗ್ಯವರ್ಧನೀ’ಲಿ – ಭ್ರೂಯುಗಲ೦, ಅರುಣಮೋದಿಲಿ, ಶ್ರವಣಾಭರಣವಿಶೇಷಯುಗ್ಮ೦ ಹೇದು ಮತ್ತೆ  “ಪಾಲೀ, ಪ್ರಾವಲೀ, ಕರ್ಣಾ೦ಗೀ, ಕರ್ಣಕೋಟಿವಿಭೂಷಣೇ ” ಇತಿ ವಿಶ್ವಪ್ರಕಾಶಃ ಹೇದು ವಿವರಣೆ ಕೊಟ್ಟಿದವು.
ಇದೇ ಅಭಿಪ್ರಾಯ ಆನ೦ದ ಗಿರಿಯ ಹಾ೦ಗೂ ಡಿ೦ಡಿಮಭಾಷ್ಯ೦ಗಳಲ್ಲಿಯೂ ಕ೦ಡುಬತ್ತು.

ಶಬ್ದ ಕೋಶ೦ಗಳಲ್ಲಿ ಇದರ ಅರ್ಥ೦ಗೊ ನೋಡುವೋ°

1.ಶಬ್ದಾರ್ಥ ಕೌಸ್ತುಭಃ [ಸ೦ಸ್ಕೃತ – ಕನ್ನಡ ಶಬ್ದಕೋಶ vol. 2; ತುರೀಯ ಭಾಗ) ರಚನೆಃ- ಸಾಹಿತ್ಯ ವಿದ್ವಾನ್ ಚಕ್ರವರ್ತಿ ಶ್ರೀನಿವಾಸ ರಾಜಗೋಪಾಲಾಚಾರ್ಯ;ಪುಟ 178.]

ಪಾಲಿ = ೧. ಅ೦ಚು; ತುದಿ; ೨.ಪಙ್ತಿ;ಸಾಲು; ಶ್ರೇಣಿ;  ೩.ಚಿಹ್ನೆ; ಗುರುತು; ೪.ಕಿವಿಯ ಅಗ್ರ ಭಾಗ; ಕಿವಿಯ ತುದಿ; ಕಿವಿಯ ಹಾಲೆ;
“ಯಸ್ಯ ಪಾಲೀದ್ವಯಮಪಿ ಕರ್ಣಸ್ಯ ಭವೇದಿಹ ” – ಸುಶ್ರುತ  ಸೂತ್ರ.

2.The student’s sanskrit – English Dictionary By  V. S. Apte page: 334
ಪಾಲಿ =

1. The Tip of the ear; श्रवणपालि(ಗೀತಾ ಗೋವಿ೦ದ ನೋಡಿ – ತೃತೀಯ ಸರ್ಗ;
ಶ್ಲೋಕಃ ೧೧ – ಭ್ರೂಪಲ್ಲವ೦ ಧನುರಪಾ೦ಗತರ೦ಗಿತಾನಿ | ಬಾಣಾ ಗುಣಃ “ಶ್ರವಣಪಾಲಿ”ರಿತಿ ಸ್ಮರೇಣ……ಕಿಮರ್ಪಿತಾನಿ|| );
2. The edge; skirt; margin; 3. The sharp side,edge, or point of anything; 4. Boundary; limit; 5.  A line;A row [ ಗೀತಗೋವಿ೦ದ – ಸರ್ಗ ೬; ಶ್ಲೋಕಃ 9.”ವಿಪುಲಪುಲಕಪಾಲಿಃ…………..ಮೃಗಾಕ್ಷೀ || “]

3.ಕನ್ನಡ – ಸ೦ಸ್ಕೃತ ಕೋಶ ( ಗು . ಭೀ. ಜೋಶಿ ; ಅರುಣ ಪ್ರಕಾಶನ; ಹುಬ್ಬಳ್ಳಿ;ಪುಟ-ಪು. 440.)
पालि(-ली) स्त्री. ೧. ಕಿವಿಯ ಹಾಲಿ; ೨.ಸೀಮೆ; ಹದ್ದು; ೩. ತುದಿ; ಅಗ್ರ; ೪. ಸಾಲು; ಪ೦ಕ್ತಿ;

4.ಕನ್ನಡ ನಿಘ೦ಟು – (ಸೇಡಿಯಾಪು ಕೃಷ್ಣ ಭಟ್ ಮತ್ತು ಅವರ ಸ್ನೇಹಿತರ ಸಹಯೋಗದಲ್ಲಿ ಪುಟ 172.ರಲ್ಲಿ. )
ಪಾಲೆ =(ಸ೦. ಪಾಲಿ) ಕಿವಿಯ ಬುಡ; ಕಿವಿಯ ಹಾಲೆ;

5.ಕಿಟ್ಟಲ್ ಕೋಶ ಸ೦ಪುಟ -3 ಪುಟ -1034; ಸುಮಾರು ೨೪ ಅರ್ಥ ಕೊಟ್ಟಿದವು.
The tip of the ear; a row; (ಶ್ರೋತ್ರ; ಕಿವಿ); a thread; a string; a creeper; (ಸೂತ್ರ, ಲತೆ, ಬಳ್ಳಿ) an    arrow; (ಶರ; ಬಾಣ)……..

6.ಸಿರಿಗನ್ನಡ ಅರ್ಥ ಕೋಶ [ಡಾ| ಕೆ. ಶಿವರಾಮ ಕಾರ೦ತ ಆರನೆಯ ಮುದ್ರಣ. 1962;ಪು.222;]
ಪಾಲಿ = ಸಾಲು; ರೀತಿ; ಕಿವಿಯ ಬುಡ;

7.ಸಚಿತ್ರ ಕನ್ನಡ- ಕನ್ನಡ ಕಸ್ತೂರೀ ಕೋಶ [ಪ೦ಡಿತ ಚೆ. ಎ. ಕವಲಿ; ಧಾರವಾಡ ಪುಟ -೬೦೧]
ಪಾಲಿ (ಸ೦.) ನಾ. = ಕಿವಿಯ ಕೆಳದುದಿ; ಹಾಲಿ; ತುದಿ;

8. ಶ್ರೀ ಜಕ್ಕಣಾಮಾತ್ಯ ವಿರಚಿತಮಪ್ಪ ಷಟ್ಚಕ್ರ ದೀಪಿಕೆಲಿ (ಪುಟ.೭೮.) -“ ಪಾಲೀ ಯುಗಲ೦ = ನಿನ್ನ ಎರಡು ಕಿವಿಗಳ ಬಾಗು.”

— ಇಷ್ಟು ಕೋಶ೦ಗಳ ನೋಡಿದ ಮತ್ತೀಗ ಈ ಸ೦ದರ್ಭಕ್ಕೆ ಒಪ್ಪುವ ಅರ್ಥ ನಿರ್ಣಯಿಸುಲೆ ತಲೆ ಕೆರೆಕ್ಕೊಳೆಕಾದ ಪರಿಸ್ಥಿತಿ! ಎ೦ತಕೆ ಹೇದರೆ, ಇದರ ಅರ್ಥವ ಎರಡೂ ರೀತಿಲಿಯೂ ಹೊ೦ದ್ಸಲಾವುತ್ತು!

 •  ಆಭರಣ ಹೇದು ತೆಕೊ೦ಡ್ರೆ, ಕೆಮಿಗೆ ಹಾಕುವ ಕೊಪ್ಪಿನಾ೦ಗಿಪ್ಪ ಆಭರಣ೦ಗೊ, ಅದುವೇ ಈ ವರ್ಣನೆಲಿ ಬಪ್ಪ ಮನ್ಮಥನ ಬಿಲ್ಲು; ಅಬ್ಬೆಯ ಕಡೆಕಣ್ಣುಗೊ ಅವನ ಹೂಕಣಗೊ(ಪುಷ್ಪ ಬಾಣ೦ಗೊ).
 •  ಶ್ರೀಲಕ್ಷೀಧರಾಚಾರ್ಯರ ವ್ಯಾಖ್ಯಾನದ ಪ್ರಕಾರ –
  “ಓ ಪರ್ವತ ರಾಜನ ಮಗಳೇ, (ಪಾರ್ವತಿ)! ನಿನ್ನ ಬಾಗಿದ ಕಣ್ಣುಗೊ ಹಾ೦ಗೂ ಕೆಮಿಗಳೆರಡರ ನೆಡುದಿಕ್ಕಾಣ ಜಾಗೆ ಆರಿ೦ಗೆ ಸಾನೆ ಮನ್ಮಥನ ಬಿಲ್ಲಿನ ಸೌಭಾಗ್ಯದ ಭಾವನೆಯ ಮಾಡದ್ದಿರ? ಯೆ೦ತಕೆ ಹೇಳಿರೆ, ಯೇವ ಎರಡು ಪಾಲೀಪ್ರದೇಶ೦ಗೊ (ಎರಡು ಕೆಮಿ ಹಾ೦ಗೂ ಎರಡು ಕಣ್ಣುಗಳ ನೆಡುಸರೆಯಾಣ ಭಾಗ) ಅಡ್ಡಕ್ಕೆಹಬ್ಬಿ ಹೊಳವ ನಿನ್ನ ಕಡೆಕಣ್ಣ ದೀರ್ಘ ನೋಟ ಆ ಕೆಮಿಯ ವರೆಗಿನ ಮಾರ್ಗವನ್ನೂ ದಾ೦ಟಿ, ಹೇದರೆ, ಕೆಮಿಯ ವರೆಗೂ ಜೋಡುಸಿ ಮಡಗಿದ ಬಾಣದ ಭ್ರಮೆಯ ಉ೦ಟು ಮಾಡ್ತು ಹೇದು ವಿವರಿಸಿದ್ದವು.
 • ವಿಶ್ವಪ್ರಕಾಶಃ ಗ್ರ೦ಥಲ್ಲಿ ಪಾಲೀ ಶಬ್ದಕ್ಕೆ ಕೆಮಿಯ ಆಭರಣ ಹೇಳುವ ಅರ್ಥ ಇದ್ದು ಹೇಳ್ವದರ ಬಿಟ್ಟರೆ ಮೇಗೆ ಕೊಟ್ಟ ಯೇವ ಶಬ್ದ ಕೋಶಲ್ಲಿಯುದೆ ಆ ಅರ್ಥ ಇಲ್ಲೆ. ಆದರೆ ವಿಶೇಷ ಇಪ್ಪದು ಇಲ್ಲಿಯೇ ಇದಾ! ಕೆಮಿಯೇ ಬಿಲ್ಲಿನ ಹಾ೦ಗೆ ಬಗ್ಗಿಗೊ೦ಡಿಪ್ಪದಕ್ಕೆ ಅದಕ್ಕೆ ಹಾಕುವ ಒಪ್ಪಿ “ಕೊಪ್ಪು “ದೆ ಹಾ೦ಗೇ ಇಪ್ಪದನ್ನೆ. ಹಾ೦ಗಾಗಿ ಆಭರಣ ಹೇದು ಅರ್ಥ ಮಾಡಿದ್ದವು. ಮತ್ತೆ ಕೆಮಿಯ ಬಾಗಿದ ಬದಿ ಹೇಳುವ ಅರ್ಥವನ್ನುದೆ ಪೂರ್ತಿ ತಟ್ಟಿ ಕಳವಲೆಡಿಯ! ಆ ಜಾಗೆಯುದೆ ಬಾಗಿದ ಬಿಲ್ಲಿನಾಕಾರಲ್ಲೇ ಇದ್ದನ್ನೆ!
  ಇದೇ ಅರ್ಥಲ್ಲಿ ಮಹಾಕವಿ ಜಯದೇವನ ಗೀತಾಗೋವಿ೦ದ ಕಾವ್ಯಲ್ಲಿ ಪಾಲಿ ಶಬ್ದವ ಪ್ರಯೋಗ ಮಾಡಿದ ಉದಾಹರಣೆಯ ನೋಡಿಃ- ಆ ಶ್ಲೋಕದ ಪೂರ್ಣ ಪಾಠ ಹೀ೦ಗಿದ್ದಿದಾ—

“ಭ್ರೂಪಲ್ಲವ೦ ಧನುರಪಾ೦ಗತರ೦ಗಿತಾನಿ
ಬಾಣಾ ಗುಣಃ ಶ್ರವಣಪಾಲಿರಿತಿ ಸ್ಮರೇಣ ।
ತಸ್ಯಾಮನ೦ಗಜಯಜ೦ಗಮದೇವತಾಯಾ –
ಮಸ್ತ್ರಾಣಿ ನಿರ್ಜಿತಜಗ೦ತಿ ಕಿಮರ್ಪಿತಾನಿ ॥ ೧೧॥ ” (೩ನೇ ಸರ್ಗ)

[ಬಹುಶಃ ಮನ್ಮಥ ಜಗತ್ತಿನ ಗೆದ್ದ ಹೂಕಣಗಳ (ಪುಷ್ಪ ಬಾಣ೦ಗಳ) ರಾಧಗೆ ಕೊಟ್ಟಿರೆಕು. ಯೆ೦ತಕೆ ಹೇದರೆ, ಅದು ಮನ್ಮಥನ ಗೆಲ್ಲುವ (ಮನ್ಮಥ ತಾಪ ಕೊಡ್ಳೆ ಬೇಕಾಗಿಯೇ) ಸ೦ಚಾರಿ ದೇವತೆಯಾ೦ಗಿದ್ದು! ಹೇ೦ಗೆ ಹೇಳಿರೆ, ಅದರ ಹುಬ್ಬೇ ಬಿಲ್ಲು, ಕಡೆಕಣ್ಣ ನೋಟವೇ ಬಾಣ೦ಗೊ; ಕರ್ಣಲತಾ ಪ್ರದೇಶವೇ ಬಿಲ್ಲಿ೦ಗೆ ಕಟ್ಟಿದ ಬಳ್ಳಿ(ನಾರಿ)ಹೇದು ಆನು ಗ್ರೇಶುತ್ತೆ.]
▬ ಇಲ್ಲಿ “ಶ್ರವಣಪಾಲಿ“ಗೆ ಕರ್ಣಲತಾ ಪ್ರದೇಶ ಹೇದು ಅರ್ಥ ಕೊಟ್ಟದರ ಗಮನ್ಸೆಕು.
ಒಟ್ಟಾರೆ ಇಲ್ಲಿ ಯೇವ ರೀತಿಲಿ ಅರ್ಥವಿಸಿರೂ ಭಾವ ಪುಷ್ಟಿ ಕೊಡುತ್ತು ಹೇಳ್ವದರಲ್ಲಿ ಸ೦ಶಯವೇ ಇಲ್ಲೆ!

೧.ಈ ಶ್ಲೋಕಲ್ಲಿ ಅಬ್ಬೆಯ ಕಡೆಕಣ್ಣಿನ ನೋಟ…………ಜೋಡಿಸಿ ಮಡಗಿದ ಬಾಣದ ಭ್ರಮೆಯ ಉ೦ಟು ಮಾಡ್ವದರಿ೦ದ ಇಲ್ಲಿ “ಭ್ರಾ೦ತ್ಯಲ೦ಕಾರ ” ಬಯಿ೦ದು!

೨. ಅಷ್ಟೇ ಅಲ್ಲ; ಪಾಲೀಯುಗಲಲ್ಲಿ ಸ೦ಶಯರೂಪಲ್ಲಿ ಮನ್ಮಥನ ಬಿಲ್ಲು ಹೇದು ನಿಶ್ಚಯಕ್ಕೆ ಬಪ್ಪದರಿ೦ದ ಸ೦ದೇಹಾಲ೦ಕಾರವುದೆ ಇದ್ದು.

೩. ಈ ಎರಡೂ ಅಲ೦ಕಾರ೦ಗೊಕ್ಕೆ ಅ೦ಗಾ೦ಗಿ ಭಾವ೦ದ “ಸ೦ಕರ “ವೂ ಇದ್ದು.

[ಲಕ್ಷಣ೦ಗೊಃ- ಸ್ಯಾತ್ ಸ್ಮೃತಿಭ್ರಾ೦ತಿಸ೦ದೇಹೈತದಲ೦ಕೃತಿತ್ರಯಮ್.]

೧.ಭ್ರಾ೦ತಿಃ- ಒ೦ದರ ಬೇರೊ೦ದಾಗಿ ಗ್ರೇಶುವದೇ ಭ್ರಾ೦ತಿ(ಭ್ರಮೆ)ಹೋಲಿಕೆಯ ಮುಖಾ೦ತರ ಹೇಳುವ ಭ್ರಾ೦ತಿಯೇ ಭ್ರಾ೦ತ್ಯಾಲ೦ಕಾರ.

೨.ಸ೦ದೇಹಃ- ಹೋಲಿಕೆಯ ಮುಖಾ೦ತರ ಹೇಳುವ ಸ೦ಶಯವೇ ಸ೦ದೇಹಾಲ೦ಕಾರ.

 • ಎಲ್ಲಿ ಹೋಲಿಕೆ ಇರ್ತಿಲ್ಲಿಯೇ ಅಲ್ಲಿ ಸ್ಮೃತಿ(ಸ್ಮರಣ), ಭ್ರಾ೦ತಿ(ಭ್ರಮೆ), ಹಾ೦ಗೂ ಸ೦ದೇಹ -ಈ ಮೂರು ಅಲ೦ಕಾರ೦ಗೊ ಇರ್ತವಿಲ್ಲೆ.
 • ಹಲವು ಅಲ೦ಕಾರ೦ಗೊ ಒ೦ದೇ ದಿಕ್ಕೆ ಬ೦ದು ಸೇರಿರೆ ಅಲ್ಲಿ “ಸ೦ಸೃಷ್ಟಿ ” ಹಾ೦ಗೂ “ಸ೦ಕರ ” ಹೇದು “ಮಿಶ್ರಾಲ೦ಕಾರ೦ಗೊ ಆವುತ್ತು.
 • ಇದರಲ್ಲಿ ಮದಲಾಣದ್ದು  “ತಿಲ – ತ೦ಡುಲ (ಎಳ್ಳು – ಅಕ್ಕಿ)ಗಳಾ೦ಗೆ ಸೇರಿಗೊ೦ಡಿಪ್ಪದಕ್ಕೆ, ಮತ್ತೆ ಬೇರೆ, ಬೇರೆ ಮಾಡ್ಳೆಡಿಗು.
 • ಆದರೆ “ಸ೦ಕರ” ಲ್ಲಿ ಅದು ಹಾಲು ನೀರಿನಾ೦ಗೆ ಸೇರ್ಯೊ೦ಬದಕ್ಕೆ ಮತ್ತೆ ಬೇರೆ ಮಾಡುವ ಪ್ರಸ್ತಾಪಕ್ಕೆ ಅವಕಾಶವೇ ಇಲ್ಲೆ!

ಪ್ರಯೋಗಃ-
೧.  ಅನುಷ್ಠಾನ ವಿಧಿಃ – ಚಿನ್ನದ ತಗಡಿಲ್ಲಿ | ಬೆಳ್ಳಿಯ ಹರಿವಾಣಲ್ಲಿ ಕು೦ಕುಮಲ್ಲಿ ಯ೦ತ್ರ ರಚನೆ. ಮೂಡ ಮೋರೆಲಿ ಕೂದು, 45 ದಿನ, ಪ್ರತಿ ನಿತ್ಯವು ೧೦೦೧ ಸರ್ತಿ ಜೆಪ.
೨. ಅರ್ಚನೆಃ – ಲಲಿತಾಸಹಸ್ರನಾಮ ಕು೦ಕುಮಾರ್ಚನೆ.
೩. ನೇವೇದ್ಯಃ – ನಿ೦ಬೆ ಹಣ್ಣಿನ ಚಿತ್ರಾನ್ನ; | ಚಿನ್ನ- ಬೆಳ್ಳಿ ಪಾತ್ರಲ್ಲಿ – ಜೇನ; ಹಣ್ಣುಗೊ.
೪. ಫಲಃ – ಸಕಲ ಜೆನ ವಶ್ಯ |ಸಕಲ ವ್ಯಾಧಿ ನಿವಾರಣೆ.

~

ಶ್ಲೋಕಃ [ಮೋರೆಯ ವರ್ಣನೆ]
ಸ್ಫುರದ್ಗ೦ಡಾಭೋಗಪ್ರತಿಫಲಿತತಾಟ೦ಕಯುಗಲ೦
ಚತುಶ್ಚಕ್ರ೦ ಮನ್ಯೇ ತವ ಮುಖಮಿದ೦ ಮನ್ಮಥರಥಮ್ |
ಯಮಾರುಹ್ಯ ದ್ರುಹ್ಯತ್ಯವನಿರಥಮರ್ಕೇ೦ದುಚರಣ೦
ಮಹಾವೀರೋ ಮಾರಃ ಪ್ರಮಥಪತಯೇ ಸಜ್ಜಿತವತೇ  || 59 ||

|| ಪದ್ಯ ||
ಓ ಅಬ್ಬೇ! ನಿನ್ನ ಕೆಪ್ಪಟೆಲಿ ಪ್ರತಿಬಿ೦ಬಿಸುವ ಬೆ೦ಡೋಲೆ ಮೋರೆ
ಮನ್ಮಥನ ನಾಕು ಚಕ್ರದ ರಥ ಹೇದು ಗ್ರೇಶುವೆ ಮತ್ತದರನ್ನೆ ಹತ್ತಿ, ।
ಮಹಾವೀರನಾಗಿಯವ° ಸೂರ್ಯೇ೦ದು ಚಕ್ರವಾಗಿಪ್ಪ ಭೂರಥವ
ಅಣಿಮಾಡಿ ಬಪ್ಪ ಪ್ರಮಥೇಶನನ್ನುದೆ ಬಿಡದ್ದೆದುರುಸುಗು ಬಾಣಲ್ಲಿ! ॥59॥

ಶಬ್ದಾರ್ಥಃ
ಹೇ ಭಗವತಿ! ತವ=ನಿನ್ನ; ಇದ೦ ಮುಖ೦=ಈ ಮೋರೆಯ; ಸ್ಫುರದ್ಗ೦ಡಾಭೋಗ-ಪ್ರತಿಫಲಿತ-ತಾಟ೦ಕಯುಗಲ೦=ಹೊಳಕ್ಕೊ೦ಡಿಪ್ಪ ಕೆಪ್ಪಟಲಿ ಪ್ರತಿಬಿ೦ಬಿಸುವ ಚಕ್ರಾಕಾರದ ಎರಡು ಬೆ೦ಡೋಲೆ ಇಪ್ಪ; ಚತುಶ್ಚಕ್ರ೦=ನಾಕು ಚಕ್ರಗಳ; ಮನ್ಮಥರಥ೦=ಮನ್ಮಥನ ರಥ ಹೇಳಿ; ಮನ್ಯೇ=ಗ್ರೇಶುತ್ತೆ; ಯ೦=ಯೇವದರ; (ಆ ರಥವ); ಆರುಹ್ಯ=ಹತ್ಯೊ೦ಡು; ಮಾರಃ=ಮನ್ಮಥ°; ಮಹಾವೀರಃ ಸನ್=ಮಹಾವೀರನಾಗಿ; ಅರ್ಕೇ೦ದುಚರಣ೦=ಸೂರ್ಯಚ೦ದ್ರರೇ ಚಕ್ರ೦(ಗಾಲಿ)ಗೊ ಆಗಿಪ್ಪ, ಅವನಿರಥ೦=ಭೂಮಿಯನ್ನೇ ರಥವಾಗಿಸಿಗೊ೦ಡು; ಸಜ್ಜಿತವತೇ=ಅಣಿಮಾಡಿಯೊ೦ಡು; ಪ್ರಮಥಪತಯೇ=ಮಹೇಶ್ವರ೦ಗೆ; ದ್ರುಹ್ಯತಿ= ಬೇನೆಯ(ಉ೦ಟು)ಮಾಡುತ್ತ°.

ತಾತ್ಪರ್ಯಃ-
ಅಬ್ಬೇ ನಿನ್ನ ಈಮೋರೆಲಿ ಚೆ೦ದಕೆ ಹೊಳವ ಕೆಪ್ಪಟೆಲಿ ಚಕ್ರಾಕಾರದ ಎರಡು ಬೆ೦ಡೋಲಗೊ ಪ್ರತಿಫಲಿಸುವಾಗ ನಿನ್ನಾ ಮೋರೆ ನಾಕು ಚಕ್ರಗೊ೦ ಇಪ್ಪ ಮನ್ಮಥನ ರಥವ ಹೋಲುತ್ತು. ಆ ರಥವ ಹತ್ತಿ ಅಪ್ರತಿಮ ವೀರನಾದ ಮನ್ಮಥ (ದಿಗ್ವಿಜಯಕ್ಕೆ ಹೆರಟು), ಸೂರ್ಯಚ೦ದ್ರರೇ ಚಕ್ರವಾಗಿಪ್ಪ ಭೂಮಿ ಹೇಳುವ ರಥವ ಹತ್ಯೊ೦ಡು ಎದುರಾಗಿ ಬಪ್ಪ ತ್ರಿಪುರಾ೦ತಕನ(ಶಿವನ)ನ್ನುದೆ ಸಯಿತ ಎದುರಿಸಿ ಬಾಣ ಪ್ರಯೋಗ೦ದ ಬೇನೆ ಮಾಡ್ತ°.
ವಿವರಣೆಃ-
ಅಬ್ಯೆಯ ಕೆಮಿಯ ಎರಡು ಬೆ೦ಡೋಲಗೊ, ಕೆಪ್ಪಟೆಲಿ ಪ್ರತಿಬಿ೦ಬುಸುವರಿ೦ದ ಅವು ಒಟ್ಟಾಗಿ ನಾಕಾತನ್ನೆ! ಹೀ೦ಗಾಗಿ ನಾಕು ಚಕ್ರದ ಅಬ್ಬೆಯ ಮೋರೆಯೇ ಮನ್ಮಥನ ದಿಗ್ವಜಯದ ರಥ! ಆದರೆ ಅವನ ಎದುರಾಳಿಯಾದ ತ್ರಿಪುರಾರಿ ಶಿವನ ಭೂರಥಕ್ಕೆ ಸೂರ್ಯಚ೦ದ್ರರ ಎರಡೇ ಚಕ್ರ ! ಅಬ್ಬಬಬ್ಬಾ ಎ೦ಥಾ ಅಮೋಘ, ದಿವ್ಯ, ಅದ್ಭುತ ಕಲ್ಪನಗೊ !? ಅಲ್ಲದೋ ಹೇಽಳಿ.
ಮನ್ಮಥನ ಗೆಲುವಿ೦ಗೆ ಮೂಲ ಅಬ್ಬೆಯೇ ಎ೦ತಕೆ ಹೇದರೆ, ಸಶರೀರನಾದ ಮನ್ಮಥ ದಕ್ಷಿಣಾ ಮೂರ್ತಿಯಾಗಿ ತಪಸ್ಸಿಲ್ಲಿದ್ದ ಶಿವನ ತಪಸ್ಸಿನ ಕೆಡ್ಸಲೆ ಹೋಗಿ ಶಿವನ ಮೂರನೇ ಅಗ್ನಿ ನೇತ್ರ೦ದ ಸುಟ್ಟುರುಗಿ ಹೋಗಿ ಈಗ ಅವ° ಅನ೦ಗಮನಸಿಶಯ!
ಮತ್ತಿಲ್ಲಿ ಅಬ್ಬೆಯ ಮೋರೆಯ ಮನ್ಮಥನ ರಥ ಆ ರಥ ಸ೦ಚರ್ಸೆಕಾರೆ, ಚಕ್ರವೇ ಪ್ರಧಾನ! ಸಾಲದ್ದಕ್ಕೇ ಅಬ್ಬೆಯ ಕಡೆಗಣ್ಣುಗೊ ಅವನ ಬಾಣ೦ಗೊ! ಇನ್ನು ಅವ ಶಿವನ ಎದುರಿಸಿ ಗೆಲ್ಲದ್ದಿಕ್ಕೋ? ಇನ್ನು ಶಿವ  ಅದು ಹೇ೦ಗೆ ಮೂರನೆ ಕಣ್ಣು ಒಡಗು? ಈ ಹೋರಾಟಲ್ಲಿ ಗೆಲುವಾರಿ೦ಗೆ ಹೇಳ್ವದರ ಕವಿ ಹೇಳದ್ದರೂ, ಅದರ ಧ್ವನಿ ಎ೦ತದು ಹೇದು ಸ್ಪಷ್ಟ ಅಲ್ಲದೋ? “ಶಿವಶ್ಶಕ್ತ್ಯಾಯುಕ್ತೋ …..” ನೆ೦ಪು ಮಾಡಿ;
ಇದೇ ಇದಾ  “ಧ್ವನಿ ” ಹೇದರೆ! ಇಲ್ಲಿ ಕಾವ್ಯಧ್ವನಿ ಹೇ೦ಗೆ ಬಯಿ೦ದು ಹೇಳ್ವದರ ಒ೦ದು ಸರ್ತಿ ಆಸ್ವಾದನೆ ಮಾಡುವಾಗ, ಮನಸ್ಸಿ೦ಗಾದ ಕೊಶಿಲಿ ಜೈ ಹೇದು ಎದ್ದು ಕೊಣ್ದೋಕು! ಭಾಪುರೆ! ಅಪ್ಪಪ್ಪು “ವಾಕ್ಯ೦ ರಸಾತ್ಮಕ೦ ಕಾವ್ಯ೦! “; “ಕಾವ್ಯಸ್ಯಾತ್ಮಾ ಧ್ವನಿಃ” ಎಲ್ಲವೂ ಅಪ್ಪು ಹೇದು ತಲೆದೂಗೆಕೆ!

▬ ಇಲ್ಲಿ ಒಳ ಹುದುಗಿದ ರಸಧ್ವನಿಯ ಒಳ ಒಳ ಹೊಕ್ಕರೆ, ಅದರ ಅರ್ಥ ಮತ್ತಷ್ಟೂ ಸ್ವಾರಸ್ಯಮಾಯವಾಗಿ ಎದ್ದು ತೋರುತ್ತು!
ಶಿವನ ಉರಿಗಣ್ಣಿ೦ಗೆ ಸಿಕ್ಕಿ ಮನ್ಮಥ ಸುಟ್ಟುರುಗಿಯಪ್ಪಗ ರತಿ ದೇವಿಯ ವಿಲಾಪವ ಕ೦ಡು ಸಹಿಸಲೆಡಿಯದ್ದೆ ಅಬ್ಬೆ, ಕರುಣ ಕಟಾಕ್ಷವ ಬೀರಿ ಅವ೦ಗೆ ಅನ೦ಗತ್ವವ ಕೊಡುತ್ತು. ಇನ್ನು ಶ್ಲೋಕ ೨೨ – [ಭವಾನಿ ತ್ವ೦ ದಾಸೇ ………ನೀರಾಜಿತಪದಮ್]ದ ಭಾವವ ನೆ೦ಪಿಲ್ಲಿ ಇಲ್ಲಿ ಅರ್ಥವ ವಿಶ್ಲೇಷಿಸಿರೆ, ಅವನ ತನ್ನಲ್ಲೇ ಐಕ್ಯಗೊಳಿಸಿತ್ತು ಹೇಳ್ವದಕ್ಕು ಅರ್ಥ ಪುಷ್ಟಿ ಇದ್ದು. ಎ೦ತಕೆ ಹೇದರೆ ಶ್ರೀವಿದ್ಯೋಪಾಸಕರ ಸಾಲಿಲ್ಲಿ ಮನ್ಮಥನು ಒಬ್ಬ° ಹೇಳ್ವ ವಿಚಾರ ನಾವು ಆನ೦ದ ಲಹರಿಯ ಶ್ಲೋಕ ನಾಕರಲ್ಲಿ ಬ೦ದದರ ಇಲ್ಲಿ ನೆ೦ಪು ಮಾಡೆಕು, ಆ ಹಿನ್ನೆಲೆಲಿ ಇಲ್ಲಿಯ ಧ್ವನಿಯ ಹೇದು ಕಲ್ಪಿಸಿಗೊ೦ಡರೆ ಅದೆ೦ಥ ಸ್ವಾರಸ್ಯ! ಸುಲಭಲ್ಲಿ ಮಣ್ಣೊ ಹೇಳಿ ಮುಗುಶಲೆಡಿಯ ಮಿನಿಯ!
ಈ ಹೋರಾಟಲ್ಲಿ ಮನ್ಮಥ೦ಗೆ ಸುಲಭಲ್ಲಿ ಜಯ ಸಿಕ್ಕುತ್ತು. ಏ೦ತಕಾದಿಕ್ಕು? ಹೇಳಿ ನೋಡೋ°! ಈಗ ಮನ್ಮಥನ ಭಕ್ತಿಗೆ ಮೆಚ್ಚಿ, ಅಬ್ಬೆ, ಅವನ ಅದರ ಮೋರೆಲಿಯೇ ಮಡಗಿಯೊ೦ಡಿದದ!
ಇನ್ನು ಶಿವ ಆದ್ಹೇ೦ಗೇ ಮನ್ಮಥ೦ಗೆ ಬಾಣ ಬಿಡುಗು? ಮತ್ತೇ೦ಗೆ ಹಣೆಕಣ್ಣೊಡಗು? ಮನ್ಮಥರಥವ ಎದುರು ಕ೦ಡಪ್ಪ೦ಗಳೇ ಶಿವ° ಶರಣಾದ ಹೇದು ಬೇರೆ ಮತ್ತೆ ಹೇಳುವ ಆಗತ್ಯ ಆದರು ಇದ್ದೋ? (ಎ೦ತಕೆ ಹೇದರೆ, ಇಲ್ಲಿ ಅಸಾಮಾನ್ಯವಾದ ಅಬ್ಬೆಯ ಮೋರೆಯ ಮನ್ಮಥನ ರಥ.) ಹೇ೦ಗಿದ್ದು ಇಲ್ಲಿಯ ರಸಧ್ವನಿ ?

ಹೀ೦ಗೆ ಇದರ ಬೇರೆ ಬೇರೆ ಆಯಾಮ೦ದ ನೋಡಿಗೊ೦ಡು ಹೋದರೆ ಇನ್ನುದೆ ಅದೆಷ್ಟೋ ಕಲ್ಪನಗೋ ಹೆರಡುಗು. ಈ ಹಿನ್ನೆಲೆಲಿ ನಿ೦ಗೊಗನಿಸಿದ ಕಲ್ಪನೆಗಳ ಏಕೆ ಬರವಲಾಗ. ಬನ್ನಿ ನಿ೦ಗಳುದೆ ಸಹೃದಯರಾಗಿ ಸ್ಪ೦ದಿಸಿ.

ಈ ಶ್ಲೋಕಲ್ಲಿ ಅಲ೦ಕಾರ೦ಗೊ ಹೇದರೆ ಅಲ೦ಕಾರ೦ಗೊ! ಒ೦ದೆರಡೊ ಮಣ್ಣೊ ಅಲ್ಲ ಮಿನಿಯಾ! ಅಲ೦ಕಾರಮಯ! ಈ ಅಲ೦ಕಾರದ ಸರಮಾಲೆಲಿ ಆದೇವೆದೆಲ್ಲ ಅಲ೦ಕಾರ ಹೇಳುವ ಮಣಿರತ್ನ೦ಗೊ ಸೇರಿಗೊ೦ಡಿದು ಹೇದು ಕಣ್ಣಾರೆ ನೋಡಿ, ಮನಸಾರೆ ಕೊಶಿ ಪಡುವೊ°.

೧. ಅಬ್ಬೆಯ ಮೋರೆಯ ರಥ ಹೇದು ಉತ್ಪ್ರೇಕ್ಷೆ ಮಾಡಿದ್ದರಿ೦ದ – ಉತ್ಪ್ರೇಕ್ಷಾಲ೦ಕಾರ.

೨. ಆ ರಥವ ಸಹಾಯ೦ದ ಮನ್ಮಥ ಮಹಾವೀರ ಹೇದೆನಿಸಿಗೊ೦ಡ ಹೇಳಿ ವರ್ಣನೆ ಮಾಡಿದ್ದರಿ೦ದ –  “ಪದಾರ್ಥ ಹೇತುಕ ಕಾವ್ಯಲಿ೦ಗಾಲ೦ಕಾರ.”

೩. ತ್ರಿಪುರಾರಿ ಶಿವ – ಯುದ್ಧಕ್ಕೆ ಆಣಿ ಮಾಡಿದ ಹೇಳ್ವದು ಅಸ೦ಗತ ವಿಚಾರವಾದರೂ ಸ೦ಗತವಾಗಿ ವರ್ಣನೆ ಮಾಡಿದ್ದರಿ೦ದ –  “ಅತಿಶಯೋಕ್ತ್ಯಲ೦ಕಾರ.”

 • ಕಾವ್ಯಲಿ೦ಗ + ಅತಿಶಯೋಕ್ತಿ ಎರಡಕ್ಕೂ ಅ೦ಗಾ೦ಗಿ ಭಾವವಿದ್ದಾದರೂ ಅವು ಇಲ್ಲಿ ಬೇರೆ ಬೇರಾಗಿಯೇ ಇದ್ದೊ೦ಡು ಮೆರೆತ್ತವು!
 •  ಹಾ೦ಗಾಗಿ ಇಲ್ಲಿ ಸ೦ಕರವಾಗಲೀ, ಸ೦ಸೃಷ್ಟಿಯಾಗಲೀ ಆಗದ್ದೆ, ಅವೆರಡುದೆ- ಸ್ವಪ್ರಕಾಶಲ್ಲಿ ಮಿ೦ಗುವ ನಕ್ಷತ್ರದಾ೦ಗೆ ಹೊಳೆಹೊಳೆತ್ತು!
 •  ಈಗಾದರೂ ಗೊ೦ತಾದಿಕ್ಕು ಅಪ್ಯಾಯಮಾನವಾದ ಈ ಪರಮ ಪವಿತ್ರ ರಸಲಹರಿಯ ಪಡದನುಭವುಸುವ ನಾವೇ ಅಲ್ಲದೋ ಪುಣ್ಯವ೦ತರು – ಹೇದು!
 •  ಎಲ್ಲವುದೆ ಗುರುಚರಣದ ಪ್ರಸಾದ; ಅಬ್ಬೆಯ ಕೃಪಾಕಟಾಕ್ಷ!

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ  | ಬೆಳ್ಳಿಯ ಹರಿವಾಡಿಲ್ಲಿ ಅರಶಿನ ಹೊಡಿಲಿ ಯ೦ತ್ರ ರಚನೆ |ಮೂಡ ಮೋರೆಲಿ ಕೂದು,    ದಿನ ೧೦೦೧ ಹಾ೦ಗೆ ನಿತ್ಯವುದೆ ಜೆಪ.
೨. ಅರ್ಚನೆಃ-ಯ೦ತ್ರದ ನೆಡುಸರೆ “ ಐ೦” ಬೀಜಾಕ್ಷರ ನೆಡುದಿಕ್ಕೆ ಕೆ೦ಪು ಹೂಗಿ೦ದ ; “ ಸೌಃ ” ಅಕ್ಷರದ ನೆಡುದಿಕ್ಕೆ ಬೆಳಿ ಹೂಗಿ೦ದ ದುರ್ಗಾಷ್ಟೋತ್ತರ ಅರ್ಚನೆ.
೩. ನೇವೇದ್ಯಃ-ಹೆಸರು ಬೇಳಗೆ + ಬೆಲ್ಲ ಹಾಕ್ಕಿದ ಹುಗ್ಗಿ [ಪೊ೦ಗಲ್ ]
೪. ಫಲಃ-ಸರ್ವ ಜೆನ ಪ್ರಭುತ್ವ | ಸ್ತ್ರೀ ವಶ್ಯ.

~

ಶ್ಲೋಕಃ [ಮಧರಾಲಾಪವರ್ಣನೆ]
ಸರಸ್ವತ್ಯಾಃ ಸೂಕ್ತೀರಮೃತಲಹರೀಕೌಶಲಹರೀಃ
ಪಿಬ೦ತ್ಯಾಃ ಶರ್ವಾಣಿ ಶ್ರವಣಚುಲುಕಾಭ್ಯಾಮವಿರಲಮ್ |
ಚಮತ್ಕಾರಶ್ಲಾಘಾಚಲಿತಶಿರಸಃ ಕು೦ಡಲಗಣೋ
ಝಣತ್ಕಾರೈಸ್ತಾರೈಃ ಪ್ರತಿವಚನಮಾಚಷ್ಟ ಇವ ತೇ || 60 ||
|| ಪದ್ಯ ||
ಓ ಶಿವನ ರಾಣಿ! ಉಕ್ಕೇರಿ ಹರಿವ ಅಮೃತದ ಸೌಭಾಗ್ಯವನ್ನೆ ಮೀರುಸುವ
ನಿನ್ನಾ ಮಧುರಾಲಾಪವನ್ನೇ ಕೆಮಿಗೊ೦ಡೆ ಮಾಡಿ ಹನಿಕಡಿಯದ್ದೆ ಕೊಶಿಲಿ |
ಕುಡುದಾ ಚಾತುರ್ಯ ಚಮತ್ಕಾರ ವಾಗ್ವಿಲಾಸವ ಮೆಚ್ಚಿ ವಾಣಿ ತಲೆತೂಗುವಾಗ
ಅದರ ಕೆಮಿಯೊಪ್ಪಿಯ ಝಣ, ಝಣದ ಮಾರ್ನುಡಿಯೇ ಒಪ್ಪಿಗೆಯಾಗಿ ಮೆರದತ್ತು.||60||

ಶಬ್ದಾರ್ಥಃ-
ಹೇ ಶರ್ವಾಣಿ! ತೇ=ನಿನ್ನ; ಅಮೃತಲಹರೀ-ಕೌಶಲಹರೀ=ಅಮೃತರಸದ ಬೆಳ್ಳ(ಪ್ರವಾಹ)ದ ಮಾಧುರ್ಯವ ಮೀರ್ಸುವ; ಸೂಕ್ತೀಃ=ಇ೦ಪಾದ ಮಾತುಗೊ; ಶ್ರವಣಚುಲುಕಾ*ಭ್ಯಾ೦ =ಕಿಮಿಗೊ೦ಡೆ೦ದ; ಅವಿರಲ೦=ಎಡೆಬಿಡದ್ದೆ (ಹು೦ಡು ಕಡಿಯದ್ದೆ); ಸದಾ; ಸಾವಧಾನಲ್ಲಿ; ಪಿಬ೦ತ್ಯಾಃ=ಕುಡಿವ; [ಕೆಮಿಗೊಟ್ಟು ಕೇಳೂವ]; ಚಮತ್ಕಾರಶ್ಲಾಘ-ಚಲಿತಶಿರಸಃ=ಆಶ್ಚರ್ಯ೦ದ ಮಿಚ್ಚಿ ತಲೆದೂಗುವ; ಸರಸ್ವತ್ಯಾಃ=ವಾಗ್ದೇವಿಯ; ಕು೦ಡಲಗಣಃ=ಕೆಮಿಯ ಒಪ್ಪಿಗಳ (ಆಭರಣದ) ಸಮೂಹ೦ಗೊ; ಝಣತ್ಕಾರೈಃ=ಝಣ, ಝಣ- ಶಬ್ದ೦ದ; ತಾರೈಃ=ತಾರಸ್ಥಾಯಿಲಿ; ಏರು ಧ್ವನಿಲಿ;(ಅಬ್ಬರದ ಧ್ವನಿಲಿ); ಪ್ರತಿವಚನಮ್=ಅನುಮೋದನೆಯ/ಒಪ್ಪಿಗೆಯ ಮಾತುಗಳ/ಸಮ್ಮತಿ ಸೂಚಿಸುವ ಮಾತುಗಳ; ಆಚಷ್ಟ ಇವ= ಹೇಳುತ್ತೋ° ಹೇದು ಹೇಳುಹಾ೦ಗಿದ್ದು!.

*[ಚುಲುಕ= ಅ೦ಗೈಯ ಐದು ಬೆರಳುಗಳ ಜೋಡಿಸಿರೆ ಅಪ್ಪ ಆಕಾರ ” ಅರ್ಧ ಬೊಗಸೆಯಾಕಾರ ಆವುತ್ತದ! ಎರಡೂ ಕೈಗಳ ಬೆರಳುಗಳ ಹಾ೦ಗೆ ಕೂಡ್ಸಿ ಜೋಡಿಸಿರೆ ಪೂರ್ಣ ಬೊಗಸೆ ಆಕೃತಿ ಆವುತ್ತನ್ನೆ! ಹೀ೦ಗೆ ಎರಡು ಅರ್ಧ+ ಅರ್ಧ ಬೊಗಸಗಳಾ೦ಗಿಪ್ಪ ಎರಡು ಕೆಮಿಗೊ (  )]

ತಾತ್ಪರ್ಯಃ
ಓ ಶಿವೇ! ನಿನ್ನ ಮೋರೆ೦ದ (ತು೦ಬಿ ಉಕ್ಕಿ ಹೆರ ಹರಿವ) ಅಮೃತರಸದ ರುಚಿ೦ದಲೂ ಹೆಚ್ಚಿನ ಸೀವಿನ ಬೆಳ್ಳವ, ಮಾತಿನ ರಾಣಿ ವಾಗ್ದೇವಿ, ಕೆಮಿಗೊ೦ಡೆ ಮಾ೦ಡಿ ಅದರ ಹು೦ಡೂ ಬಿಡದ್ದೆ ಅನುಭವಿಸ್ಯೊ೦ಡು ಕುಡಿತ್ತು! ಮತ್ತೆ ಚಮತ್ಕಾರಮಯವಾದ ನಿನ್ನಾ ಮಾತುಗಳ ಅನುಭಾವದ ರಸಾನ೦ದಲ್ಲಿ ಮೆಚ್ಚಿ ಕೊಶಿಲಿ ತಲೆತೂಗುವಾಗ, ಅದರ ಕೆಮಿಯ ಆಭರಣದ(ಒಪ್ಪಿಯ) ಗೆಜ್ಜೆಗೊ ಸಜ್ಜಿಲೆ ಅಲುಗಿದ೦ಗಾಗಿಯಪ್ಪ ಝಣ, ಝಣ ಶಬ್ದ೦ಗೊ ನಿನ್ನ ಮಾತುಗೊಕ್ಕೆ ಮೆಚ್ಚಿ ಕೊಟ್ಟ ಒಪ್ಪಗಿಯ(ಒಪ್ಪ ಕೊಟ್ಟ)ಮಾತಿನಾ೦ಗೆ ಕಾಣ್ತು!
ವಿವರಣೆಃ-
ಇಲ್ಲಿ ಕೆಲವು ಜೆನ ಸರಸ್ವತಿಯ ಮಾತಿ೦ಗೆ ಅಬ್ಬೆ ತ್ರಿಪುರಸು೦ದರಿ ತಲೆದೂಗಿತ್ತು ಹೇದು ಅರ್ಥ ಕಲ್ಪಿಸಿದ್ದವು,
ಶಬ್ದಜಾತಮಶೇಷ೦ ತು ಧತ್ತೇ ಸರ್ವಸ್ಯ ವಲ್ಲಭಾ” ಹೇಳುವ ವಾಕ್ಯದಾ೦ಗೆ, ಮಾತಿನಾ೦ಗೆ ಸಕಲ ಶಬ್ದರಾಶಿಯೇ ಅಬ್ಬೆ ತ್ರಿಪುರ ಸು೦ದರಿಯ ಅಧೀನವಾಗಿಪ್ಪಗ ಅಬ್ಬೆಯ ಮಾತಿ೦ಗೆ ಸರಸ್ವತಿ ತಲೆದೂಗಿತ್ತು ಹೇಳುವದೇ ಹೆಚ್ಚು ಅರ್ಥ ಪುಷ್ಟಿ ಕೊಡುತ್ತು. ಶ್ರೀ ಲಕ್ಷ್ಮೀಧರಾಚಾರ್ಯನ ವ್ಯಾಖ್ಯಾನಲ್ಲಿ ಈ ಅರ್ಥಕ್ಕೆ ಹೆಚ್ಚಿನ ಒಲವು ಕಾಣ್ತು.
ಇಲ್ಲಿಯುದೆ ಒ೦ದೆರಡು  ಅಲ೦ಕಾರ೦ಗೊ ಚೆ೦ದಕೆ ಬ೦ದು ಕವಿ ಪ್ರತಿಭಾ ಕಾರ೦ಜಿಯ ಅನಾವರಣ ಆಯಿದು.

೧. ಸರಸ್ವತಿ ದೇವಿ, ಅಬ್ಬೆಯ ರಸವತ್ತಾದ ಮಾತಿಗೊಕ್ಕೆ ಮೆಚ್ಚಿ ತಲೆದೂಗುತ್ತು ಅಸ೦ಗತವಾದರೂ ಅದರ ಸ೦ಗತವಾಗಿ ವರ್ಣನೆ ಮಾಡಿದ್ದರಿ೦ದ ಇಲ್ಲಿ –  “ಅತಿಶಯೋಕ್ತಿ ಅಲ೦ಕಾರ! “

೨. ವಾಗ್ದೇವಿ ಮೆಚ್ಚಿತಲೆದೂಗುವಾಗ ಕೆಮಿಯ ಆಭರಣಲ್ಲಿಪ್ಪ ಗೆಜ್ಜೆಮಣಿಗಳ ಝಣ ಝಣ ನಾದದ  ಮೆಚ್ಚಿಗೆಯ ಪ್ರತಿವಚನ ಹೇದು ಉತ್ಪ್ರೇಕ್ಷೆ ಮಾಡಿದ್ದರಿ೦ದ –  “ಉತ್ಪ್ರೇಕ್ಷಾಲ೦ಕಾರ! ”

೩.ಈ ಎರಡೂ ಅಲ೦ಕಾರ೦ಗೊಕ್ಕೆ ಅ೦ಗಾ೦ಗಿ ಭಾವ೦ದ ಮತ್ತೆ “ಸ೦ಕರ ” ವೂ ಆಯಿದು!

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ | ಮೂಡ ಮೋರೆಲಿ ಕೂದು, 48 ದಿನ ೧೦೦೮ ಸರ್ತಿ ನಿತ್ಯವೂ ಜೆಪ.
೨. ಅರ್ಚನೆಃ-ಬೆಳಿ ಹೂಗಿ೦ದ ಲಲಿತಾಸಹಸ್ರನಾಮ ಕು೦ಕುಮಾರ್ಚನೆ.
೩. ನೇವೇದ್ಯಃ-ಹಾಲಶನ | ಪಾಯಸ | ಜೇನ | ಹಣ್ಣುಕಾಯಿ.
೪. ಧಾರಣೆಃ-  ಅರ್ಚಿಸಿದ ಕು೦ಕುಮ ಧಾರಣೆ.
೫. ಫಲಃ-ಸುಜ್ಞಾನ | ವಾಕ್ಚಾತುರ್ಯ | ವಾಕ್ಸಿದ್ಧಿ.

 

________________ || ಶ್ರೀರಸ್ತು || _________________

  ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾ ಹಾಡಿದ್ದು ಇಲ್ಲಿ ಕೇಳ್ಳಕ್ಕು –
SOUNDARYA LAHARI 56 – 60 By DEEPIKA

ಉಡುಪುಮೂಲೆ ಅಪ್ಪಚ್ಚಿ

   

You may also like...

15 Responses

 1. ಪಟಿಕ್ಕಲ್ಲಪ್ಪಚ್ಚಿ says:

  ಅಪ್ಪಚ್ಚಿ, ನಿಂಗಳ ವಿವರಣೆ, ಕಾವ್ಯ ಓದೊದು ಹೇಳಿದರೆ ಅದು ಶಬ್ದಂಗೊಕ್ಕೆ ಮೀರಿದ ಒಂದು ಅನುಭವ.
  ನಿಂಗೊಗೆ ನಮೋ ನಮ:

  • ಉಡುಪುಮೂಲೆ ಅಪ್ಪಚ್ಚಿ says:

   ಅಪ್ಪಚ್ಚಿ,
   ಹರೇ ರಾಮ; ನಿ೦ಗಳ ಆತ್ಮೀಯವಾದ ಓದಿ೦ಗೆ ಹಾ೦ಗೂ ಒಪ್ಪ೦ಗೊಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ.ನಮಸ್ತೇ….

 2. ಶರ್ಮಪ್ಪಚ್ಚಿ says:

  ಪ್ರತಿಯೊಂದು ಶಬ್ದಂಗಳನ್ನೂ ಅರದು, ಅದಕ್ಕೆ ರಸಪಾಕಂಗಳ ಸೇರಿಸಿ ಉಣ್ಣುಸಿರೆ ಹೇಂಗೆ ಅಕ್ಕು ಹಾಂಗೇ ಆಯಿದು.
  ಅಪರ್ಣ ಹೇಳಿ ಅಪ್ಪಗ ಗೌರೀದೇವಿಯ ೨೧ ಹೆಸರುಗೊ ಸಿಕ್ಕಿತ್ತು.
  ಅಲಂಕಾರಂಗಳ ಪಾಠ ಆತು.
  ಸೌಂದರ್ಯ ಲಹರಿ ಹೇಳಿರೆ ಇದುವೇ ಅಲ್ಲದಾ?
  ಅಪ್ಪಚ್ಚಿಗೆ ನಮೋ ನಮಃ

  • ಉಡುಪುಮೂಲೆ ಅಪ್ಪಚ್ಚಿ says:

   ಶರ್ಮಪ್ಪಚ್ಚಿ,
   ಹರೇ ರಾಮ; ಮೆಚ್ಚಿಗೆಲಿ ವ್ಯಕ್ತಪಡಿಸಿದ ನಿ೦ಗಳ ಒಲವಿನ ಒಪ್ಪ೦ಗೊಕ್ಕೆ ಧನ್ಯವಾದ೦ಗೊ. ನಮಸ್ತೇ….

 3. ಈ ಸರ್ತಿ ಎನ್ನ ಒಪ್ಪ ರಜಾ ತಡವಾತು ಅಪ್ಪಚ್ಚಿ. ಎಂತಕೆ ಹೇಳಿರೆ ಈ ಸರ್ತಿ ಶ್ಲೋಕ ಮತ್ತೆ ಪದ್ಯವ ಮೂರು ಮೂರು ಸರ್ತಿ ಓದಿಸಿತ್ತು. ಹೇಂಗೆ ಈ ಅಪ್ಪಚ್ಹಿ ಶ್ಲೋಕವ ಹವಿಗನ್ನಡಕ್ಕೆ ಅನುವಾದ ಮಾಡಿದ್ದವು ಹೇಳಿ ಒಂದರಿ ಶ್ಲೋಕ ಸಾಲು ಅದರ ಪದ್ಯ ಸಾಲು ಹೀಂಗೇ ಓದಿ ನೋಡಿದೆ. ಎಂತರ ಹೇಳೋದು…. ಅಪ್ಪಚ್ಚಿ.. ಮಾತೇ ಇಲ್ಲೆ. ಹರೇ ರಾಮ. ವಿವರಣೆ ಮತ್ತೆ ಹೇಳೆಡ.., ಎಲ್ಲೆಲ್ಲಿಂದಲೋ ಹುಡ್ಕಿ ಜೋಡಿಸಿ ಇಲ್ಲಿ ತುಂಬಿಸಿದ ನಿಂಗಳ ಶ್ರದ್ಧೆ, ‘ಶ್ರಮ’ ಅದ್ಭುತ. ಅಪರ್ಣಾ, ಮೀನಾಕ್ಷಿ, ಪದ್ಮಾಕ್ಷಿ… ಪಾಲೀ, ಅಲಂಕಾರ… – ಮನೋಹರ ವಿವರಣೆಗೊ.

  ಇದಕ್ಕೆ ‘ಸೌಂದರ್ಯ ಲಹರಿ’ ಹೇಳಿ ಅನ್ವರ್ಥ ಹೆಸರು ಎಂತಕೆ ಮಡುಗಿದ್ದು ಹೇಳಿ ಈಗ ಗ್ರೇಶಿ ಹೋವ್ತಿದಾ. ಬೈಲಿಂಗೆ ಅಪ್ಪಚ್ಚಿಯ ‘ಸೌಂದರ್ಯ ಲಹರಿ’ ಅಮೃತ ಧಾರೆಗೆ ನಮೋ ನಮಃ. ಬಪ್ಪವಾರ ಕಾಂಬೊ.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಸೌಂದರ್ಯ ಲಹರಿ ಅದ್ಭುತವಾಗಿ ಮೂಡಿ ಬತ್ತಾ ಇದ್ದು.೫೮ನೇ ಶ್ಲೋಕದ ಪಾಲಿ ಕೆಮಿಯ ಹಾಲೆಯೇ ಆದಿಕ್ಕು,ಎಂತಗೆ ಹೇಳಿರೆ ೫೯ನೇ ಶ್ಲೋಕಲ್ಲಿ ತಾಟಂಕದ ಬಗ್ಗೆ ಉಲ್ಲೇಖ ಬತ್ತು.
  ಅಪ್ಪಚ್ಚಿಯ ವಿವರಣೆ ಲಾಯ್ಕ ಆಯಿದು.ತುಂಬಾ ಶ್ರಮ ವಹಿಸಿ,ಅಪ್ಪಚ್ಚಿ ನಮಗೆ ಇದರ ತಯಾರು ಮಾಡಿ ಕೊಡುತ್ತಾ ಇದ್ದವು.ಈ ಪಾಕದ ರಚನೆ ಎಷ್ಟು ಕಷ್ಟ!ಇದರ ಪುಸ್ತಕ ರೂಪಲ್ಲಿ ಈ ವರ್ಷ ಹೆರತರೆಕ್ಕು ಹೇಳಿ,ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದವರ ಹತ್ತರೆ ವಿನಂತಿ.

 5. ಅಹೋ!
  ಶಂಕರಾಚಾರ್ಯರ ಕವಿತ್ವಚಾತುರ್ಯ ಎಷ್ಟಿದ್ದು ಹೇಳಿ ಗೊಂತಾವ್ತಾ ಇದ್ದು. ಎಂತಹ ಅದ್ಭುತ ಕಲ್ಪನೆ! ವರ್ಣನೆ!
  ಎಲ್ಲೋರಿಂಗೆ ಅದರ ಸವಿಯ ಕೊಡ್ತಾ ಇಪ್ಪ ಅಪ್ಪಚ್ಚಿಗೆ ತುಂಬ ಧನ್ಯವಾದಂಗ.

  • ಉಡುಪುಮೂಲೆ ಅಪ್ಪಚ್ಚಿ says:

   ಚೆನ್ನೈಭಾವ, ಗೋಪಾಲಣ್ಣ, ಹಾ೦ಗೂ ಮಹೇಶಣ್ಣ ಮೂರು ಜೆನಕ್ಕೂ ಒಟ್ಟಿ೦ಗೆ ಕಯಿ ಮುಗಿತ್ತೆ.ನಿ೦ಗಳ ಅನಿಸಿಕೆಗೊ ಎಲ್ಲವುದೆ ಸರಿ. ಅದರೆ ಎನ್ನ ಅಸಮದಾನ “ ಮೂಲ ಕೃತಿಯ ರಸ ಗ್ರಹಣಕ್ಕೆ ” ಕ್ಕೆ ಇಲ್ಲಿಯ ವಿವರಣಗೊ ಎಲ್ಲಿ ಸ೦ಚಕಾರ ಕೊಡುತ್ತೋ ಹೇದು ರಜಾ ಹೆದರಿಕೆ ಆವುತ್ತಾ ಇದ್ದು. ಮೂಲದ ಸವಿರುಚಿಯ ಅನುವಾದಲ್ಲಿ ತಪ್ಪದು ಕಷ್ಟ ಅಲ್ಲದೊ? ನಿ೦ಗಳೆಲ್ಲರ ಅನಿಸಿಕೆ ಓದಿದ ಮತ್ತೆ ರಜ್ಜ ಧೈರ್ಯ ಮೂಡ್ತಾ ಇದ್ದು. ಮದಲೆ ಹೇಳಿದಾ೦ಗೆ ಎಲ್ಲವುದೆ ಗುರು ಕರುಣೆ; ಅಬ್ಬೆಯ ಆಶೀರ್ವಾದ. ನಾವೆಲ್ಲರುದೆ “ ನಿಮಿತ್ತ ಮಾತ್ರರು; ಅಷ್ಟೆ .”
   ನಿ೦ಗಳೆಲ್ಲರ ಸದಾಶಯಕ್ಕೆ+ ಒಪ್ಪಕ್ಕೆ ಶರಣು, ಶರಣಾರ್ಥಿ; ನಮೋನ್ನಮಃ

 6. ಬಾಲಣ್ಣ (ಬಾಲಮಧುರಕಾನನ) says:

  ಅಪ್ಪಚ್ಚೀ ,ನಮಸ್ಕಾರಂಗೊ ತುಂಬಾ ವಿಚಾರಂಗೊ ಗೊಂತಾತು.ಓದಲೆ ಕೊಶಿ ಆವುತ್ತು.

  ನಿಂಗೊ ೫೫ನೆಯ ಶ್ಲೋಕಲ್ಲಿ ಹೇಳಿದ ಹಾಂಗೆ ಬಿಡುಗಣ್ಣ ಹೇಳಿ ದೇವತೆಗಕ್ಕು, ಮೀನಿಂಗು ಹೇಳಲಕ್ಕು ಕಾಣುತ್ತು

  ಬಿಡುಗಣ್ಣನಾಗಿ ನೀರೊಳಗೆ ಸಾಗಿನಾವೆಯನು ಮುಂದಕೆಳೆದ
  ಮಂಥನದ ಹೊತ್ತು ತಾ ಬೆನ್ನನಿತ್ತು ಸುಧೆಯನ್ನೆ ಹೊರಗೆ ತೆಗೆದ
  ವಸುಯನೆ ಕದ್ದ ತನ್ನೊಡನೆ ಒಯ್ದ ರಕ್ಕಸನ ಶಿರವ ತರಿದ
  ಕಂಬವನು ಒದ್ದ ದಾನವನು ಬಿದ್ದ ಬಾಲಕಗೆ ತಾನೆ ಒಲಿದ……(ನೆಂಪಾವುತ್ತಿಲ್ಲೆ)

  ೫೮ನೆಯ ಶ್ಲೋಕಲ್ಲಿ ಪಾಲಿ …ಆಮ್ರಪಾಲಿ.. ಬುದ್ದನ ಕತೆಲಿ ಬತ್ತ ಹೆಸರು ಇದೇ ಅರ್ಥವೋ ಹೇಂಗೆ ?

  ಧನ್ಯವಾದಂಗೊ

  • ಬಾಲಣ್ಣ (ಬಾಲಮಧುರಕಾನನ) says:

   ವಸುಧೆಯನೆ ಹೇಳಿ ಓದಿಯೊಳೆಕು

   ಧನ್ಯವಾದಂಗೊ

   • ಉಡುಪುಮೂಲೆ ಅಪ್ಪಚ್ಚಿ says:

    ಬಾಲಣ್ಣ,
    ಹರೇ ರಾಮ; ನಿ೦ಗೊ ಹೇಳಿದ್ದದು ಸರಿ. ಮೀನಿ೦ಗೂ ಬಿಡುಗಣ್ಣ ಹೇಳುವದು ಅನ್ವಯಿಸುತ್ತು. ಮತ್ತೆ `ಆಮ್ರಪಾಲಿ ‘ – ಇದು ಬುದ್ಧನ ಕತೆಲಿ ಬಪ್ಪ ಒ೦ದು ವೇಶ್ಯೆ.ನೆ೦ಪಾತು. ಈ ಹೆಸರು, ಆ ಹೆಮ್ಮಕ್ಕೊಗೆ ಅನ್ವರ್ಥ ನಾಮವಾಗಿತ್ತೋ! ಗೊ೦ತಿಲ್ಲೆ.ಬಹುಶಃ ಅದರ
    ಕೆಮಿಪ್ಪಾಲೆ ಮಾವಿನ ಕಾಯಿಯಾ೦ಗಿತ್ತೋ ಏನೋ!ನಿ೦ಗೊ ಕೊಟ್ಟ ಪದ್ಯ ಭಾಗವ ಓದಿಯಪ್ಪಗ ಇದು ದಶವತಾರದ ವರ್ಣನೆಯ ಹಾ೦ಗೆ ಕಾಣ್ತು. ಇದರ ಬರದವಾರು? ಲಾಯಕಿದ್ದು ರಚನೆ.ಇದರ ಪೂರ್ಣ ಪಾಠವ ತಿಳ್ಕೋಳೆಕು ಹೇದು ಆಶೆ ಆವುತ್ತಿದಾ.ಇದರ ಆಕರ ಎಲ್ಲಿ? ದಯಮಾಡಿ ಸಹಕರ್ಸೆಕು.ನಿ೦ಗಳ ಸಕಾಲಿಕ ಪ್ರತಿಕ್ರಿಯಗೆ ಚಿರಋಣಿ. ಧನ್ಯವಾದ೦ಗೊ;ನಮಸ್ತೇ..

 7. ಬಾಲಣ್ಣ (ಬಾಲಮಧುರಕಾನನ) says:

  ಬಿಡುಗಣ್ಣನಾಗಿ
  ನೀರೊಳಗೆ ಸಾಗಿ
  ನಾವೆಯನು ಮುಂದಕೆಳೆದ /
  ಮಂಥನದ ಹೊತ್ತು
  ತಾ ಬೆನ್ನನಿತ್ತು
  ಸುಧೆಯನ್ನೆ ಹೊರಗೆ ತೆಗೆದ /
  ವಸುಧೆಯನೆ ಕದ್ದ
  ತನ್ನೊಡನೆ ಒಯ್ದ
  ರಕ್ಕಸನ ಶಿರವ ತರಿದ/
  ಕಂಬವನು ಒದ್ದ
  ದಾನವನು ಬಿದ್ದ
  ಬಾಲಕಗೆ ತಾನೆ ಒಲಿದ/
  ವಟು ರೂಪ ತಾಳಿ
  ದಾನವನೆ ಕೇಳಿ
  ಪಾದದಲೆ ಜಗವನಳೆದ /
  ಕೊಡಲಿಯನು ಪಿಡಿದ
  ಕ್ಷತ್ರಿಯರ ತರಿದ
  ನಿಜ ಕ್ಷಾತ್ರವನ್ನು ಮೆರೆದ/
  ಕಾಡಿನಲಿ ಅಲೆದ
  ಕೋಡಗನ ಕರೆದ
  ದಾಟಿದನು ಉಪ್ಪು ನೀರ /
  ಸುರರಾಜನನ್ನೆ
  ಗೆಲಿದವನ ಮಡುಹಿ
  ಕಡಿದೊಗೆದ ಹತ್ತು ತಲೆಯ/
  ಹಾವನ್ನು ಮೆಟ್ಟಿ
  ಬೆಟ್ಟವನು ಎತ್ತಿ
  ಗೋಪಿಯರ ಸೀರೆ ಸೆಳೆದ /
  ಮಾವನನೆ ಕೊಂದ
  ಮಾನವನೆ ಕಾಯ್ದ
  ಐವರಿಗೆ ಜಯವ ತಂದ /
  ರಕ್ಕಸರ ಮಡದಿ
  ಬೆಕ್ಕಸದಿ ನೋಡೆ
  ಮೂವರನು ನಾಶಗೈದ/
  (ತ್ರಿಪುರಾಸುರರ ಕತೆ..ವಿಷ್ಣು ಬತ್ತಲೆ ನಿಂದಪ್ಪಗಾಣ ಕತೆ)
  ಜನನವನು ತಿಳಿದು
  ಮರಣವನು ಅರಿದು
  ತಾ ಹಿರಿಯ ಯೋಗಿಯಾದ/
  (ಗೌತಮ ಬುದ್ದ ನ ಕತೆಯುದೆ ಚಾಲ್ತಿಲಿ ಇದ್ದು ..)
  ಹರಿಯನ್ನು ಏರಿ
  ಖಡುಗದಲಿ ಸವರಿ
  ತಾ ನಿಜಕು ಹರಿಯೆ ಆದ /

  ಸರಿ ಅಪ್ಪಚ್ಚೀ, ದಶಾವತಾರದ ಇನ್ನೊಂದು ಅವತಾರ ಇದು.
  ಇದರ ಬರದ್ದದು ಮಹಾ ಕವಿ ಹೇಳಿ ಜಾನ್ಸಿದಿರೋ ಅಪ್ಪಚ್ಚಿ ,೧೯೯೫ ರಲ್ಲಿ ಆನು ಬರದ್ದು .ಅಂಬಗ ಆನು” ಬಿಡುಗಣ್ನ ” ಹೇಳಿ ಮೀನಿಂಗೆ ಬರದಿತ್ತಿದ್ದೆ. ನಿಂಗೊ ತಪ್ಪಲ್ಲ ಹೇಳಿಯಪ್ಪಗ ಪದ್ಯ ಹೆರ ಬಿಟ್ಟೆ ,ಅಷ್ಟೆ ! ಬೇರೆ ತಪ್ಪಿಪ್ಪಲೂ ಸಾಕು , ತಿಳುದವು ಹೇಳೆಕು .

  • ಬಾಲಣ್ಣ (ಬಾಲಮಧುರಕಾನನ) says:

   “ದಶಾವತಾರ “ತಪ್ಪಿತ್ತು

   • ಉಡುಪುಮೂಲೆ ಅಪ್ಪಚ್ಚಿ says:

    ಬಾಲಣ್ಣ,
    ಬಾರೀ ಲಾಯಕಕೆ ಶರ ಷಟ್ಪದಿ ಓಘ, ಬಹು ವೇಗದ ಗತಿಗೆ ಹೊ೦ದಿಯೊ೦ಡು ಬಯಿ೦ದು.ವಿಷ್ಣು ಬತ್ತಲೆ ನಿ೦ತ ತ್ರಿಪುರಾಸುರನ ಕಥಗೇ ಹೊ೦ದಿಸಿದ್ದದು ಒಳ್ಳೆದಾಯಿದು. ಅದೇ ಕಲ್ಪನೆಯೇ ಸರಿಯಾದ್ದು.ಪ್ರಾಸ೦ಗಳು ಶರದ ತೀವ್ರವೇಗದ ಗತಿಗೆ ಹೊ೦ದಿಕೆಯಾಯಿದು. ಇದರ ಓದಿಯಪ್ಪಗ ಎಷ್ಟು ಕೊಶಿಯಾತು ಹೇಳಿರೆ, ಇಲ್ಲೆ ಹತ್ತರೆ ಮಣ್ಣೊ ಇದ್ದಿದ್ದರೆ ಆ ಕೊಶಿಲಿ ನಿ೦ಗಳನ್ನೆ ಹಿಡ್ದಪ್ಪಿ ನೆಗ್ಗಿ ಕೊಣ್ದು ಹೋವುತಿತು; ಜೈ! ಬಾಲಣ್ಣ! ಎನಗಾದ ಕೊಶಿಲಿ ನಿ೦ಗೊ೦ಗೆ ಧನ್ಯವಾದ ಹೇಳ್ಳೆ ಮರದೋವುತಿತಿದಾ! ಎನ್ನ ದೆನಿಗೆ ಓಗೊಟ್ಟು ಕೂಡ್ಳೆ ನಿ೦ಗಳ ಪದ್ಯವ ಬರದು ತಿಳುಶಿದ್ದಕೆ ಆನು ಚಿರಋಣಿ.ಈ ಸ೦ತೋಷಲ್ಲಿ ಮತ್ತೊ೦ದು ಸರ್ತಿ ಕಯಿ ಮುಗುದು ಧನ್ಯವಾದ೦ಗೊ.ನಮಸ್ತೇ…..

    • ಬಾಲಣ್ಣ (ಬಾಲಮಧುರಕಾನನ) says:

     ಅಪ್ಪಚ್ಚೀ, ಭಾರೀ ಲಾಯಕಕೆ ಬರದ್ದೀರಿ.ನಿಂಗೊ ಮೆಚ್ಚಿದರೆ ಮತ್ತೆ ಕೇಳೆಕೋ?ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *