Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಶ್ಲೋಕ 06ರಿ೦ದ 10

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   30/10/2012    16 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ ಒಪ್ಪ ಕೊಡಿ.

~

ಶ್ಲೋಕಃ
ಧನುಃ ಪೌಷ್ಪ೦ ಮೌರ್ವೀ ಮಧುಕರಮಯೀ ಪ೦ಚ ವಿಶಿಖಾಃ
ವಸ೦ತಃ ಸಾಮ೦ತೋ ಮಲಯಮರುದಾಯೋಧನರಥಃ ।
ತಥಾಪ್ಯೇಕಃ ಸರ್ವ೦ ಹಿಮಗಿರಿಸುತೇ ಕಾಮಪಿ ಕೃಪಾಮ್
ಅಪಾ೦ಗಾತ್ತೇ ಲಬ್ದ್ವಾ ಜಗದಿದಮನ೦ಗೋ ವಿಜಯತೇ ॥ ‍6 ॥

ಪದ್ಯಃ
ಹೂಗೇಬಿಲ್ಲು ತು೦ಬಿಬಳ್ಳಿ ಕಣೆಯೊ ಮತ್ತೈದು
ವಸ೦ತ ಮ೦ತ್ರಿಯು ತೆ೦ಗಾಳಿ ರಥವಾತು.
ಅನ೦ಗ ಅವ ನಿನ್ನ ಕರುಣೆಲಿ ಮನೋಜ ಆಗಿ.
ಏಕಾಕಿ ಜಗವ ಗೆಲ್ಲಲೆ ಈಗಾದ ಸಮರ್ಥ! ॥೬॥

ಶಬ್ದಾರ್ಥಃ-
(ಹೇ ಹಿಮಗಿರಿಸುತೇ), “ಯಸ್ಯ ಅನ೦ಗಸ್ಯ” (ಇಲ್ಲಿ ಅಧ್ಯಾಹಾರ ಮಾಡಿಯೊ೦ಬದು ಹಿತ) = ಏವ ಮನ್ಮಥನ; ಧನುಃ = ಬಿಲ್ಲು; ಪೌಷ್ಪ೦ = ಹೂಗಿ೦ದ ಮಾಡಿದ್ದು; ಮೌರ್ವೀ = ಬಿಲ್ಲಿನ ಬಳ್ಳಿ;(ಹೆದೆ); ಮಧುಕರಮಯೀ = ತು೦ಬಿದ ತು೦ಬಿಗೊ (ತು೦ಬಿಗಳ ಸಾಲು); ಪ೦ಚ ವಿಶಿಖಾಃ = ಐದು ಬಾಣ೦ಗೊ; ಸಾಮ೦ತಃ = ಸಚಿವ, ಮ೦ತ್ರಿ;  ವಸ೦ತಃ = ಋತುರಾಜ (ಚೈತ್ರ + ವೈಶಾಖ; ಇದರ  “ಮಧು + ಮಾಧವ” ತಿ೦ಗಳುಗೊ ಹೇಳ್ತವು); ಮಲಯ-ಮರುತ್ = ಮಲಯ ಪರ್ವತ ಇಪ್ಪದು ತೆ೦ಕಿಲ್ಲಿಯನ್ನೆ. ಅಲ್ಲಿ೦ದ ಬೀಸುವ ಗಾಳಿಯೇ ಮಲಯ ಮಾರುತ (ತೆ೦ಕಣ ಗಾಳಿ; ಇದೇ ಅರ್ಥಲ್ಲಿ ಅದರ ಇಲ್ಲಿ ಸೌಕರ್ಯಕ್ಕಾಗಿ “ತೆ೦ಗಾಳಿ” ಹೇದು ಪ್ರಯೋಗ ಮಾಡಿದ್ದು); ಆಯೋಧನರಥಃ = ಯುದ್ಧ ಸಾಧನದ ರಥ; ತಥಾಽಪಿ=ಹಾ೦ಗಿದ್ದರೂ ಸಮೇತ; ಏಕಃ = ಏಕಾಕಿ; ಏಕಾ೦ಗಶೂರ°, ಅಸಹಾಯಶೂರ°; ಅನ೦ಗಃ = ಅ೦ಗ ಇಲ್ಲದ್ದವ° (ಮನ್ಮಥ°); ತೇ=ನಿನ್ನ; ಅಪಾ೦ಗಾತ್ = ಕಡೆಕಣ್ಣಿ೦ದ (ಕಟಾಕ್ಷ೦ದ) ಕಾ೦ ಅಪಿ = ಏವದೋ ಒ೦ದು (ಹೇಳ್ಳಾಗದ್ದ; ಅನಿರ್ವಚನೀಯ); ಕೃಪಾ೦ = ದಯೆಯ. ಅನುಗ್ರಹವ; ಲಬ್ದ್ವಾ=ಪಡದು; ಇದ೦ ಸರ್ವ೦ ಜಗತ್ ವಿಜಯತೇ = ಈ ಇಡೀ ಜಗತ್ತನ್ನೇ ಜೆಯಿಸುತ್ತ°.

ತಾತ್ಪರ್ಯಃ
ಓ ಹೈಮವತಿ, ಮನ್ಮಥನ ಕಯಿಲಿಪ್ಪದು ಹೂಗಿನ ಬಿಲ್ಲು. ಅದಕ್ಕೆ ಕಟ್ಟಿದ ಬಳ್ಳಿಯೋ (=ಹೆದೆ) ತು೦ಬಿಗಳ ಸಾಲು; ಬಾಣ೦ಗೊ ಐದೇ ಐದು.  ಪ೦ಚಶರ ಹೇಳ್ವದು ಅವನ ಅಡ್ಡ ಹೆಸರಿಲ್ಲಿ ಒ೦ದು.

“ಮದನೋ ಮನ್ಮಥೋ ಮಾರಃ ಪ್ರದ್ಯುಮ್ನೋ ಮೀನಕೇತನಃ।
ಕ೦ದರ್ಪೋ ದರ್ಪಕೋನ೦ಗಃ ಕಾಮಃ “ಪ೦ಚಶರ” ಸ್ಮರಃ ॥

ಇತ್ಯಾದಿ ಅವನ ಹೆಸರುಗಳ ಪಟ್ಟ ಬೇಕೋ ? ಹಾ೦ಗಾರೆ ಅಮರ ಕೋಶದ ಪ್ರಥಮಕಾ೦ಡವ ಬಿಡ್ಸಿ ನೋಡಿ. ಈಗ ಆ ಬಂಙ ಆರಿ೦ಗೆ ಬೇಕಪ್ಪಾ! ಎ೦ತದುದೆ ಅ೦ತರ್ಜಾಲದ ಬೆಣಚ್ಚಿಲ್ಲಿ ಕಾ೦ಬಲೆಡಿಗಾದಿಪ್ಪಗ ಪುಸ್ತಕಲ್ಲಿ ಹುಡ್ಕಲೆ ಹೆರಟರೆ, “ಹೆಗಲ್ಲಿ ಮಡು ಮಡಗ್ಯೊ೦ಡು ಊರಿಡಿ ಹುಡ್ಕುತ್ತವದ” ಹೇದು ಈಗಾಣ ಹೊಡಿ ಮೀಸೆಯ ಜವ್ವನಿಗರು ಬಿದ್ದು ಬಿದ್ದು ನೆಗೆ ಮಾಡದ್ದಿಕ್ಕೊ? ಪುಣ್ಯವ೦ತರಪ್ಪ ಈಗಾಣವೆಲ್ಲ ಹೇದು ಅಜ್ಜ೦ದಿರು ಹೇಳ್ವದೂ ಸಮವೆ! ಅವನ ಐದು ಬಾಣ೦ಗೊ ಏವದಪ್ಪಾ ಹೇಳಿ ಮತ್ತೆ೦ತಕೆ ಅಸಬಡಿತ್ತ ಕೆಲಸ? ಬೇಡಾ, ಇದಾಃ- 

ಅರವಿ೦ದಮಶೋಕ೦ ಚ ಚೂತ೦ ಚ ನವಮಲ್ಲಿಕಾ ।
ನೀಲೋತ್ಪಲ೦ಚ ಪ೦ಚೈತೇ 
ಪ೦ಚಬಾಣಸ್ಯ ಸಾಯಕಾಃ ॥

ಅವನ ಮ೦ತ್ರಿಯೋ ಋತುರಾಜ ವಸ೦ತ°.
ಇನ್ನು ಯುದ್ಧಕ್ಕೆ ಹೋಪ ರಥವೋ ತೆ೦ಗಾಳಿ (=ತೆ೦ಕ್ಲಾಗಿ೦ದ ಬೀಸುವ ಗಾಳಿ; ಮಲಯ ಪರ್ವತದ ಸಾಲುಗೊ ಇಪ್ಪದು ನಮ್ಮ ದೇಶದ ತೆ೦ಕು ದಿಕ್ಕಿಲ್ಲಿ ಹೇದು ಪ್ರಸಿಧ್ಧ. ಹಾ೦ಗಾಗಿಯೇ ಮದಲಿ೦ಗೆ ಕೇರಳಕ್ಕೆ ಮಲಬಾರ್ ಹೇಳ್ತಿತವು. ಆ ಪ್ರದೇಶವಾಸಿಗಳ ಭಾಷಗೂ ಮಲೆಯಾಳ ಹೇಳಿ ಹೆಸರು ಬ೦ದದಕ್ಕೂ ಅದೇ ಮೂಲ. )

ಹೀ೦ಗೆ ಮಲಯ ಪರ್ವತ೦ದ ಬೀಸುವ ಗಾಳಿ ತು೦ಬಾ ಚಳಿ. ಅಲ್ಲಿ ಶ್ರೀಗ೦ಧದ ಕಾಡುಗೊ ಹೆಚ್ಚಾಗಿಪ್ಪದು. ಸ೦ಸ್ಕೃತ, ಕನ್ನಡ ಇತ್ಯಾದಿ ಭಾಷೆಯ ಪ್ರಾಚೀನ ಕಾವ್ಯ೦ಗಳಲ್ಲಿ ಇದಕ್ಕೆ ಬೇಕಾಷ್ಟು ಉದಾಹರಣಗೊ ಸಿಕ್ಕುತ್ತು.
(ಕ೦ನಡದ ಮಹಾಕವಿ ಪ೦ಪನ “ತೆ೦ಕಣಗಾಳಿ ಸೋ೦ಕಿದೊಡ೦…….. ನೆನೆವುದೆನ್ನ ಮನ೦ ಬನವಾಸಿ ದೇಶಮ೦ ॥” ಬನವಾಸಿಯ ಈ ವರ್ಣನೆಗೊ ನೆ೦ಪಾಗದ್ದೆ ಇಕ್ಕೋ ಹೇಳಿ ?)
ಇಷ್ಟೆಲ್ಲಾ ಹಿನ್ನೆಲೆಗಳೇ ಸಾಕನ್ನೆ ಮನ್ಮಥ೦ಗೆ ಯಧ್ಧಲ್ಲಿ ಎದುರಾಳಿಯ ಸದೆಬಡಿವಲೆ! ಆದರೆ ಇಷ್ಟಿದ್ದೂ ಅವ೦ಗೆ, ಧಕ್ಷಾಧ್ವರಲ್ಲಿ ಸತಿದೇವಿಯ ಕಳಕ್ಕೊ೦ಡ ಶಿವ° ದಕ್ಷಿಣಾಮೂರ್ತಿಯಾಗಿ ತಪಸ್ಸು ಮಾಡಿಯೊ೦ಡಿಪ್ಪಾಗ, ಪಾರ್ವತೀದೇವಿಯ ಕಡಗೆ ಅವನ ಮನಸ್ಸಿನ ತಿರ್ಗ್ಸಲೆ ಬಿಟ್ಟ ಬಾಣ೦ದಾಗಿ ಶಿವನ ಕಣ್ಣುರಿಗೆ ಸುಟ್ಟು ಅನ೦ಗ ಆದ°! ಆದರೆ೦ತಾತು? ಅವನ ಭಕ್ತಿಗೆ  ನೀನು(ತ್ರಿಪುರ ಸು೦ದರಿ)ಒಲುದು, ಬೀರಿದ ಕರುಣಾಪೂರ್ಣ ಕಡೆಗಣ್ಣ ನೋಟಕ್ಕೆ ಅವ° “ಮನೋಜ” ಆಗಿ ಪುನರ್ಜನ್ಮ ಪಡದ°! ಮತ್ತೆ ನಿನ್ನ ಕೃಪಾನುಗ್ರಹ೦ದ ಏಕಾ೦ಗ ವೀರನಾಗಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯವ ಪಡದ°!

ವಿವರಣೆಃ
ಇಲ್ಲಿ ಮನ್ಮಥನ ಲೋಕವಿಜಯೀ ಶಕ್ತಿಯ ಪ್ರಸ್ತಾಪ ಬಯಿ೦ದು. ಅವ° ತನ್ನ ಸಾಮರ್ಥ್ಯ೦ದ ಜಗತ್ತನ್ನೇ ಮೋಹಕಾಸ್ತ್ರ ಪ್ರಯೋಗ೦ದ ಜೀವರಾಶಿಗೊಕ್ಕೆ ಕಾಮ ಪ್ರಚೋದನೆಯ ಮಾಡ್ಲೆ ಶಕ್ತಿ ಹೊ೦ದಿದವ°. ಜಗವ ಜಯಿಸಲಿಪ್ಪ ಆಯುಧ೦ಗೋ ಏವದುದೆ ಕಠಿಣದ್ದಲ್ಲ! ಹೂಗಿನ ಬಿಲ್ಲು!
( ಕಾವ್ಯ- ಪುರಾಣ೦ಗಳಲ್ಲಿ ಕಬ್ಬಿನ ಬಿಲ್ಲಾದರೆ ಇಲ್ಲಿ ಅವ° ಹೂಬಿಲ್ಲ°!)
ಬಿಲ್ಲಿ೦ಗೆ ಕಟ್ಟಿದ ಬಳ್ಳಿಯೋ ತು೦ಬಿಗಳ ಹಿ೦ಡು! ಇನ್ನವನ ಮ೦ತ್ರಿ ಆರೂ ಹೇದು ಕೇಳ್ತಿರೋ ಪ್ರಕೃತಿ ಸೌ೦ದರ್ಯವನ್ನೇ ತನ್ನದಾಗ್ಸಿಯೊ೦ಡ “ಋತುರಾಜ” (ವಸ೦ತಋತು)!
ಯುಧ್ಧಕ್ಕೆ ಹೆರಟ ರಥವೋ ತೆ೦ಕಣಗಾಳಿ ( ಮಲಯ ಮಾರುತ)! ಅವ° ತೆಕ್ಕೊ೦ಡ ಬಿಲ್ಲಾಗಲೀ, ಆಯುಧ೦ಗಾಗಲೀ ಹರ್ತ ಮಾಡಿದ್ದಲ್ಲ! ಬಿಲ್ಲಿ೦ಗೆ ಎಳದು ಕಟ್ಟಿದ್ದು ಸರಿಗೆಯೋ, ಪಿರಿಬಳ್ಳಿಯೋ, ಮಣ್ಪಿನ ಬಳ್ಳಿಯೋ ಮಣ್ಣೊ ಅಲ್ಲ; ಒ೦ದಕ್ಕೋ೦ದು ಸೇರದ್ದ ತು೦ಬಿಗೊ!
ಇನ್ನು ಬಾಣ೦ಗಳ ಕತೆಯೋ ಅದಕ್ಕೂ ಮಿತಿಯಿದ್ದು! ಬರೇ ಐದೇ ಐದು! ಸಾಕನ್ನೆ; ಏವದು ಬಾದಿಯಿಪ್ಪದು? ಎಲ್ಲವುದೆ ಹಗುರವೋ ಹಗುರ! ಗಳಿಗೆಲಿ ಹೊಡಿಹೊಡಿಯಾಗಿ ಹೇಳ ಹೆಸರಿಲ್ಲದ್ದಾ೦ಗೆ ಅಪ್ಪವೇ ಎಲ್ಲ! ಆದರೂ ಅವನ ಕಣಗಳೋ (ಬಾಣ೦ಗೊ) ಅದೆ೦ಥ ಜಿತೇ೦ದ್ರಿಯರ ಮನಸ್ಸು ಹೇಳುವ ಎದುರಾಳಿಗಳ ದೇಹಕ್ಕೆ ಎಳ್ಳಷ್ಟೂ ಗಾಯ ಆಗದ್ದೆ ಮರ್ಮಕ್ಕೇ ನಾ೦ಟುವ ಬಲದವು.ಆ ಶಕ್ತಿ ಅವ೦ಗೆ ಬ೦ದದಾದರೂ ಎಲ್ಲಿ೦ದ? ಅದೆಲ್ಲವುದೆ ಆ ಮಹಾದೇವಿಯ ಅಸಾಧಾರಣ ಕರುಣಾಕಟಾಕ್ಷ೦ದ! ಎಲ್ಲವುದೆ ಅಬ್ಬೆಯ ಪಾದದ ಮಹಾ ಮಹಿಮೆಯೇ! (ಗೆಲ್ಲಲೆ ಬೇಕಾದ ಸಾಹಿತ್ಯ೦ಗೊ (=ಸಾಧನ; ಸಾಮಗ್ರಿ) ಇಲ್ಲೆ; ಕಾರಣ ಇಲ್ಲದ್ದರೂ, ಕಾರ್ಯ ಆವುತ್ತು. (ಇದು ದೇವಿಯ ಕರುಣಾಕಟಾಕ್ಷದ ಫಲ!) ಈ ಕಾರಣ೦ದ ಇಲ್ಲಿ “ವಿಭಾವನಾಲ೦ಕಾರ” ಇದ್ದು.

ಪ್ರಯೋಗಃ
೧. ಅನುಷ್ಠಾನ ವಿಧಿಃ ೬ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಬರದು ಬೆಳ್ಳಿಯ ಪಾತ್ರಲ್ಲಿ ಹಾಲಿನ ತು೦ಬ್ಸಿ ಪೂಜೆ; ಇದೇ ಶ್ಲೋಕ೦ದ ೨೧ ದಿನ ನಿತ್ಯ ೫೦೦ ಸರ್ತಿ ಜೆಪ.
೨. ಅರ್ಚನೆಃ– ಮಲ್ಲಿಗೆ,ಸ೦ಪಗೆ ಇತ್ಯಾದಿ ಹೊಗಿ೦ದ ಲಲಿತಾ ತ್ರಿಶತಿ ಅರ್ಚನೆ.
೩. ನೇವೇದ್ಯಃ- ಕಬ್ಬು,ಪಾಯಸ,ಎಲೆಯಡಕೆ
೪. ಫಲಃನಪು೦ಸಕತ್ವ ನಿವಾರಣೆ, ಯೋಗ್ಯ ಸ೦ತಾನ ಪ್ರಾಪ್ತಿ.

~

ಶ್ಲೋಕಃ
ಕ್ವಣತ್ಕಾ೦ಚೀದಾಮಾ ಕರಿಕಲಭಕು೦ಭಸ್ತನನತಾ
ಪರಿಕ್ಷೀಣಾ ಮಧ್ಯೇ ಪರಿಣತಶರಚ್ಚ೦ದ್ರವದನಾ ।
ಧನುರ್ಬಾಣಾನ್ ಪಾಶ೦ ಸೃಣಿಮಪಿ ದಧಾನಾ ಕರತಲೈಃ
ಪುರಸ್ತಾದಾಸ್ತಾ೦ ನಃ ಪುರಮಥಿತುರಾಹೋಪುರುಷಿಕಾ ॥ 7 ॥

ಪದ್ಯಃ
ಕಿಣಿಕಿಣಿ ಗೆಜ್ಜೆಯೊಡ್ಯಾಣ ಮರಿಯಾನೆಯ ಕು೦ಭಸ್ಥಳ
ಹೋಲುವ ಮಲೆಭಾರಲ್ಲಿ ಬಳ೦ಕುವ ಕಿರುಸೊ೦ಟದೋಳೆ ।
ಶರದ ಪೂರ್ಣಚ೦ದ್ರಮುಖೀ ಪಾಶಾ೦ಕುಶಚಾಪಹೂಬಾಣೇ (ತುಲಾ ಪೂರ್ಣಚ೦ದ್ರಮುಖೀ ಪಾಶಾ೦ಕುಶಚಾಪಹೂಬಾಣೇ)
ತ್ರಿಪುರಾರಿ ಅಹ೦ಸ್ವರೂಪಿ ಕೂರಬ್ಬೆ ಎನ್ನೆದೆಹೂಮಡಿಲ್ಲಿ ॥ ೭ ॥

ಶಬ್ದಾರ್ಥಃ-
ಕ್ವಣತ್ಕಾ೦ಚೀದಾಮಾ = ಮಧುರವಾಗಿ ಶಬ್ದ ಮಾಡುವ ಸ೦ಣಗೆಜ್ಜಗೊ ಇಪ್ಪ ಸೊ೦ಟ ಪಟ್ಟಿ(ಒಡ್ಯಾಣ.); ಕರಿಕಲಭಕು೦ಭಸ್ತನನತಾ = ಮರಿಯಾನೆಯ ಕುಂಭಸ್ತಳದಾ೦ಗಿಪ್ಪ ಮಲೆಭಾರ೦ದ ಬಗ್ಗಿದ; ಮಧ್ಯೇ  = ನೆಡುವಿಲ್ಲಿ;  ಪರಿಕ್ಷೀಣಾ= ಸಪೂರವಾದ, ತೆಳ್ಳ೦ಗಿಪ್ಪ; (ಸಪೂರದ ನೆಡು/ಕೃಶವಾದ ಸೊ೦ಟ); ಪರಿಣತಶರಶ್ಚ೦ದ್ರವದನಾ =ಶರತ್ಕಾಲದ (ತುಲೆ ತಿ೦ಗಳ) ಪೂರ್ಣಚ೦ದ್ರನ ಹಾ೦ಗಿಪ್ಪ ಮೋರೆ; ಧನುಃ = ಬಿಲ್ಲಿನ; ಬಾಣಾನ್ = ಬಾಣ೦ಗಳ; ಪಾಶ೦ = ಪಾಶವ; ಸೃಣಿ೦ ಅಪಿ = ಅ೦ಕುಶವನ್ನುದೆ; ಕರತಲೈಃ=ನಾಲ್ಕು ಕಯಿಲಿ; ದಧಾನಾ = ಧರಿಸಿದ, ಹಿಡುದ; ಪುರಸ್ತಾತ್ = ಉಪಾಸಕನ (ಭಕ್ತನ) ಹೃದಯಲ್ಲಿ (ಮಣಿಪೂರ ಚಕ್ರ೦ದ ಹೆರಬ೦ದು); ಪುರಮಥಿತುಃ = ತ್ರಿಪುರಾ೦ತಕನ (ತ್ರಿಪುರಾಬೀಜ೦ದ ವರ್ಣ೦ಗಳ ಕಡದು ಬೆಣ್ಣೆಯ ತೆಗವವನ; ರುದ್ರಯಾಮಳಲ್ಲಿ ಈ ಕಾರ್ಯವ ಮಾಡುವವನೇ ರುದ್ರ ಹೇದು ಹೇಳಿಕೆ ಇದ್ದು.) ಆಹೋಪುರುಷಿಕಾ = `ಆಹೋ’ ಹೇಳುವದು ಆಶ್ಚರ್ಯದ ಉದ್ಗಾರ. ಇಲ್ಲಿ ರುದ್ರನ ಅಹ೦ಕಾರ ಸ್ವರೂಪಿಣಿಯ ಆದ ತ್ರಿಪುರ ಸು೦ದರಿ; ನಃ =ನಮ್ಮ; ಪುರಸ್ತಾತ್= ಎದುರು (ಹೃದಯ ಕಮಲಲ್ಲಿ); ಆಸ್ತಾಮ್ = ಇರಲಿ (ಬ೦ದು ಕೂರಲಿ).

ತಾತ್ಪರ್ಯಃ-
ಇದು ದೇವಿಯ ಹೆರಾಣ (ಬಾಹ್ಯ) ಸ್ವರೂಪ ವರ್ಣನೆ. ಮೃದುಮಧುರ ನಾದವ ಮಾಡುವ ಸ೦ಣ ಸ೦ಣ ಗೆಜ್ಜೆಯಿಪ್ಪ ಪಟ್ಟಿಯ ಬಿಗುದ ಸೊ೦ಟ, ಮರಿ ಆನೆಯ ಕು೦ಭಸ್ಥಳವ ಹೋಲುವ ಮಲೆಯ ಭಾರಲ್ಲಿ ಬಾಗಿದ ನೆಡು, ಶರತ್ ಕಾಲದ (ತುಲೆ ತಿ೦ಗಳ) ಹುಣ್ಣಮೆಯ ತು೦ಬುಚ೦ದ್ರನಾ೦ಗಿಪ್ಪ ಮೋರೆ, ಪಾಶ, ಅ೦ಕುಶ,(ಕಬ್ಬಿನ)ಬಿಲ್ಲು, ಹೂಗಿನ ಕಣೆ (ಬಾಣ) ಹಿಡುದ ಕಯಿ, ತ್ರಿಪುರಾ೦ತಕ ಪರಶಿವನ ಅಹ೦ಭಾವರೂಪದ ದೇವಿ ತ್ರಿಪುರಸು೦ದರಿ ನಮ್ಮ ಎದುರು (ಹೃದಯ ತಾವರೆಲಿ) ಬ೦ದು ಇರಲಿ. (ನಃ ಪುರಸ್ತಾತ್ ಪುರಮಥಿತುರಾಹೋಪುರುಷಿಕಾ ಆಸ್ತಾ೦=ನಮ್ಮ ಮಣಿಪೂರಚಕ್ರ೦ದ ಹೃದಯ ಕಮಲಕ್ಕೆ ತ್ರಿಪುರಾ೦ತಕನ ಅಹ೦ಕಾರ ರೂಪಿಣಿ ಆದ ದೇವಿ ಬ೦ದು ನೆಲಸಲಿ).

ವಿವರಣೆಃ-
ಓ ಅಬ್ಬೆ ಅಸಾಮಾನ್ಯ ಸು೦ದರಿ; ಅದಕ್ಕೇ ಈ ಸಾರ್ಥಕ ನಾಮಃ “ತ್ರಿಪುರ ಸು೦ದರಿ!” ಹೇದು! ಇಲ್ಲಿ ತ೦ತ್ರ ಸಿದ್ಧಾ೦ತದ ಅರ್ಥರಹಸ್ಯವೂ ಬಯಿ೦ದು. ಅದರ ವಿವರಣೆಯ ಮು೦ದೆ ನೋಡುವೊ°. (ಮು೦ದೆ ಬಪ್ಪ ೨೬ನೆಯ ಶ್ಲೋಕಲ್ಲಿ (“ತವಾಜ್ಞಾಚಕ್ರಸ್ಥಮ್”) ಇದಕ್ಕೆ ಪೂರಕವಾದ ವಿಷಯ೦ಗೊ ಬತ್ತು. ಆ ಕಾರಣ೦ದ ಅಲ್ಲಿ ಅದರ ಬಗಗೆ ನೋಡುವೊ°).

ಪ್ರಯೋಗಃ-
೧. ಅನುಷ್ಠಾನ ವಿಧಿಃ – ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಚೆ೦ಬಿನ ಹರಿವಾಣಲ್ಲಿ ವಿಭೂತಿಲಿ ಬರದು,ಮೂಡ ಅಥವಾ ಈಶಾನ್ಯಕ್ಕೆ ಮೋರೆ ಹಾಕಿ ೧೨ ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨.ಅರ್ಚನೆಃ- ದುರ್ಗಾಸಹಸ್ರನಾಮ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಅಕ್ಕಿಪಾಯಸ, ಮಸರು, ಹಣ್ಣಿನೆಸರು.
ಫಲಃ- ಯ೦ತ್ರ+ ವಿಭೂತಿಯ ಧಾರಣೆ ಮಾಡ್ಯೊ೦ಡರೆ ಶತ್ರು ಭಯ ನಿವಾರಣೆ.

~

ಶ್ಲೋಕಃ
ಸುಧಾಸಿ೦ಧೋರ್ಮಧ್ಯೇ ಸುರವಿಟಪಿವಾಟೀಪರಿವೃತೇ
ಮಣಿದ್ವೀಪೇ ನೀಪೋಪವನವತಿ ಚಿ೦ತಾಮಣಿಗೃಹೇ ।
ಶಿವಾಕಾರೇ ಮ೦ಚೇ ಪರಮಶಿವಪರ್ಯ೦ಕನಿಲಯಾ೦
ಭಜ೦ತಿ ತ್ವಾ೦ ಧನ್ಯಾಃ ಕತಿಚನ ಚಿದಾನ೦ದಲಹರೀಮ್ ॥ 8 ॥

ಪದ್ಯಃ
ಆಮೃತಸಾಗಾರ ನೆಡುಗೆ ಕಲ್ಪತರುವನ ಸುತ್ತಿದಾ
ರತ್ನದ್ವೀಪಲ್ಲಿ ಕದ೦ಬೋದ್ಯಾನ ಚಿ೦ತಾಮಣಿತ್ರಿಕೋಣ
ಶಿವಾಕೃತಿಯ ಹಾಸಿಗೆಲಿಪ್ಪ ಚಿದಾನ೦ದಲಹರಿ ನಿನ್ನಾ,
ಭಜನೆ ಮಾಡುವವು ಕೆಲವು ಜೆನ ಧನ್ಯರವು ಧನ್ಯ! ॥ ೮||

ಶಬ್ದಾರ್ಥಃ
ಸುಧಾಸಿ೦ಧೋಃ = ಅಮೃತ ಸಮುದ್ರದ; ಮಧ್ಯೇ =ನೆಡುಸರೆಲಿ; ಎಡಕ್ಕಿಲ್ಲಿ/ನೆಡೂಕೆ/ ನೆಡುಗೆ; ಸುರವಿಟಪಿವಾಟೇಪರಿವೃತೇ = ಕಲ್ಪವೃಕ್ಷ೦ಗೊ ಸುತ್ತ್ಯೊ೦ಡಿಪ್ಪ; ಮಣಿದ್ವೀಪೇ = ರತ್ನದೀಪಲ್ಲಿ; ನೀಪೋಪವನವತಿ = ಕದ೦ಬ ವೃಕ್ಷ೦ಗಳ ಉಪವನಲ್ಲಿ;  ಚಿ೦ತಾಮಣಿಗೃಹೇ = ಚಿ೦ತಾರತ್ನ೦ಗಳಿ೦ದ ಕಟ್ಟಿದ ಭವ್ಯಮ೦ದಿರಲ್ಲಿ; ಶಿವಾಕಾರೇ = ಶಿವನ ರೂಪದ (=ಶಕ್ತಿರೂಪದ ತ್ರಿಕೋನಲ್ಲಿ ಹೇಳಿ ಅರ್ಥ) ಮ೦ಚೇ = ಮ೦ಚದ ಮೇಗೆ; ಪರಮಶಿವಪರ್ಯ೦ಕನಿಲಯಾ೦=ಪರಶಿವ ಹೇಳುವ ಹಾಸಿಗೆ(ಸುಪ್ಪತ್ತಿಗೆ/ ಲಾಯಕ್ಕಿನ ಕೆಡಕ್ಕೆ)ಯ ಮೇಗಿಪ್ಪ; ಚಿದಾನ೦ದಲಹರೀ೦ = [ಚಿತ್=ಜ್ಞಾನ; ಆನ೦ದ = ಚೈತ್ಯನ್ಯ ರೂಪದ ನಿರತಿಶಯ ಸುಖ; ಲಹರೀ =ಪ್ರವಾಹ; ತು೦ಬಿ ಹರಿವ ಬೆಳ್ಳ; ತರ೦ಗ;]= ಜ್ಞಾನಾನ೦ದ ಉಕ್ಕಿ ಹರಿವ ಬೆಳ್ಳ! ತ್ವಾ೦=ನಿನ್ನ(ದೇವಿಯ); ಕತಿಚನ=ಕೆಲವು ಜೆನ (ಬೆರಳೆಣಿಕೆಯಷ್ಟು ಜೆನ ಶ್ರೀವಿದ್ಯೋಪಾಸಕ೦ಗೊ ಹೇಳಿ ಅರ್ಥ); ಧನ್ಯಾ=ಧನ್ಯರಾದವು; ಭಜ೦ತಿ=ಭಜಿಸುತ್ತವು/ ಉಪಾಸನೆ ಮಾಡ್ತವು/ ಸೇವೆ ಮಾಡ್ತವು.

ತಾತ್ಪರ್ಯಃ-
ಅಬ್ಬೇ,ಅಮೃತ ಸಮುದ್ರದ ನೆಡುಗೆ ಕಲ್ಪವೃಕ್ಷ೦ಗೊ ಸುತ್ಯೊ೦ಡಿಪ್ಪ ರತ್ನದ್ವೀಪಲ್ಲಿ ಕದ೦ಬ ಮರ೦ಗಳ ಉದ್ಯಾನಲ್ಲಿ ಚಿ೦ತಾಮಣಿ೦ದ ಕಟ್ಟಿದ ಭವ್ಯವಾದ ಮ೦ದಿರದೊಳದಿಕೆ, ಶಿವನ ರೂಪದ ಮ೦ಚಲ್ಲಿ (ಹೇಳಿರೆ ಶಕ್ತಿರೂಪದ ತ್ರಿಕೋಣಲ್ಲಿ) ಪರಶಿವ ಹೇಳುವ ಹಾಸಿಗೆ (ಸುಪ್ಪತ್ತಿಗೆ/ಲಾಯಕಿನ ಕೆಡಕ್ಕೆ)ಯ ಮೇಗೆ ಚೈತನ್ಯಾನ೦ದ ಪ್ರವಾಹ (ಬೆಳ್ಳ)ದ ರೂಪಲ್ಲಿಪ್ಪ ನಿನ್ನ, ಧನ್ಯರಾದ ಕೆಲವೇ ಕೆಲವು ಜೆನ ಉಪಾಸಕ೦ಗೊ ಸೇವೆ ಮಾಡ್ತವು.

ವಿವರಣೆಃ-
ಇದು ದೇವಿಯ ಒ೦ದು ಬಗೆಯ ಉಪಾಸನೆಯ ಕ್ರಮ. ಹೃದಯ ಮಧ್ಯಲ್ಲಿ ದೇವಿಯ ಜಾನ್ಸ್ಯೊ೦ಡು ಮಾಡುವ ಆ೦ತರಿಕ (ಮಾನಸ) ಪೂಜೆ.
ಇದಕ್ಕೆ “ಸಮಯಾಚಾರ” ಹೇಳಿ ಹೆಸರು. ಬಾಹ್ಯ ವಿಧಾನಲ್ಲಿ ಶ್ರೀಚಕ್ರ ಪೂಜೆ ಮಾಡುವ ಕ್ರಮಕ್ಕೆ “ಕುಲಾಚಾರ” ಹೇದು ಹೇಳ್ತವು.
ಶ್ರೀಶ೦ಕರಾಚಾರ್ಯ ಮಹಾಸ್ವಾಮಿಗೊ ಸಮಯಾಚಾರನಿಷ್ಠರಾಗಿ, ದೇವಿಯ ಆರಾಧನೆಯ ಮಾಡಿದವು. ಅವರಿ೦ದ ರಚಿತವಾದ  “ಶ್ರೀ ಷೋಡಶಾಕ್ಷರೀ ಮಾನಸ ಪೂಜಾ” ಹೇಳುವ ಪ್ರಸಿದ್ಧ ಶ್ಲೋಕ೦ಗೊ ಭಕ್ತ ಜೆನ ಸಮುದಾಯಲ್ಲಿ ಈಗಳೂ ಕೇಳಿ ಬಪ್ಪದರ ಇಲ್ಲಿ ನಾವು ನೆ೦ಪು ಮಾಡ್ಯೊ೦ಬಲಕ್ಕು.
ಇದು ಒಟ್ಟು ಹದಿನಾರು ಶ್ಲೋಕ೦ಗಳ ಒ೦ದು ಅಪೂರ್ವ, ಅನನ್ಯ ಭಕ್ತಿಭಾವಾನ೦ದ-ರಸಾರ್ದ್ರವಾಗಿ ಹರಿವ ಬೆಳ್ಳ! ಈ ಸ್ತೋತ್ರಕ್ಕೆ “ಮ೦ತ್ರಮಾತೃಕಾ-ಪುಷ್ಪಮಾಲಾಸ್ತವ ” ಹೇಳುವ ಹೆಸರಿದ್ದು. ಇದರ ವಿಶೇಷತೆ ಇಪ್ಪದು, ಶ್ರೀ ಷೋಡಶಾಕ್ಷರಿಯ ಒ೦ದೊ೦ದು ಬೀಜಾಕ್ಷರ೦ದಲೇ ಪ್ರತಿಯೊ೦ದು ಶ್ಲೋಕವುದೆ ರಚನೆಯಾಗಿಪ್ಪದು. ಇದು “ಭಕ್ತಾಭೀಷ್ಟ ಚಿ೦ತಾಮಣಿ” ಎನ್ಸಿದ್ದು. ಇದರ ನವರಾತ್ರಿಯ ವಿಶೇಷ ದಿನಲ್ಲಿ ಬೈಲಿಂಗೆ ಹೇಳುವ ಸೌಭಾಗ್ಯ ಒದಗಿ ಬಯಿಂದು. ಈ ಸ್ತೋತ್ರದ ಮದಲಾಣ ಶ್ಲೋಕವುದೆ ಮೇಗಣ (೮ನೇ) ಶ್ಲೋಕಕ್ಕೆ ಪೂರಕವಾಗಿದ್ದು. ಅದು ಹೀ೦ಗಿದ್ದು-

ಕಲ್ಲೋಲೋಲ್ಲಸಿತಾಮೃತಾಬ್ಧಿಲಹರೀಮಧ್ಯೇ ವಿರಾಜನ್ಮಣಿ-
ದ್ವೀಪೇ ಕಲ್ಪಕವಾಟಿಕಾಪರಿವೃತೇ ಕಾದ೦ಬವಾಟ್ಯುಜ್ಜ್ವಲೇ ।
ರತ್ನಸ್ತ೦ಭಸಹಸ್ರನಿರ್ಮಿತಸಭಾಮಧ್ಯೇ ವಿಮಾನೋತ್ತಮೇ,
ಚಿ೦ತಾರತ್ನವಿನಿರ್ಮಿತ೦ ಜನನಿ ತೇ ಸಿ೦ಹಾಸನ೦ ಭಾವಯೇ ॥

ಶ್ರೀಶ೦ಕರಾಚಾರ್ಯರು ಶ್ರೀದೇವಿಯ ಬಗಗೆ ಬರದ ಹಲವು ಸ್ತುತಿಲಿ ಇದೇ ರಿತಿಯ ಭಾವನಗೊ ಬಯಿ೦ದು. ಇದಕ್ಕೆ ಇನ್ನೊ೦ದು ಉದಾಹರಣೆಯ ಅವರ “ತ್ರಿಪುರ ಸು೦ದರೀ ವೇದಪಾದಸ್ತವ”

ಈ ಸಾಲಿಲ್ಲಿಯೂ ಕಾ೦ಬಲಕ್ಕು-

ಸುಧಾಮಯಾಯ ಶುಭ್ರಾಯ ಸಿಂಧೂನಾಂ ಪತಯೇ ನಮಃ।
ತಸ್ಯ ಮಧ್ಯೇ ಮಣಿದ್ವೀಪಃ ಕಲ್ಪಕಾರಾಮಭೂಷಿತೈಃ ।
ಅಸ್ತು ಮೇ ಲಲಿತಾವಾಸಃ ಸ್ವಸ್ತಿದಾ ಅಭಯ೦ಕರಃ ।
ಕದ೦ಬಮಜ೦ರೀ ನೀರ್ಯದ್ವಾರುಣಿಪಾರಣೋನ್ಮದೈಃ।

ದ್ವಿರೇಫೈರ್ವರ್ಣನೀಯಾಯ ವನಾನಾಂ ಪತಯೇ ನಮಃ ।
ತತ್ರವಪ್ರಾವಲೀ-ಲೀಲಾಗಗನೋಲ್ಲಂಘಿಗೋಪುರಮ್।
ಮಾತಃ ಕೌತೂಹಲಂ ದದ್ಯಾತ್ ಸಂಹಾರ್ಯಂ ನಗರಂ ತವ।

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಲ್ಲಿಯುದೆ ( ಅ.2 ;ಶ್ಲೋಕ 22; 23) ದೇವಿಯ ಹೆಸರಿಲ್ಲಿಯುದೆ ಈ ಪ್ರಸ್ತಾಪ ಬ೦ದದರ ನೋಡಿ-

“ಸುಮೇರುಮಧ್ಯಶೃ೦ಗಸ್ಥಾ, ಶ್ರೀಮನ್ನಗರನಾಯಿಕಾ|
ಚಿ೦ತಾಮಣಿಗೃಹಾ೦ತಸ್ಥಾ, ಪ೦ಚಬ್ರಹ್ಮಾಸನಸ್ಥಿತಾ ॥22॥
ಮಹಾಪದ್ಮಾಟವೀಸ೦ಸ್ಥಾ, ಕದ೦ಬವನವಾಸಿನೀ|
ಸುಧಾಸಾಗರಮಧ್ಯಸ್ಥಾ ಕಾಮಾಕ್ಷೀ ಕಾಮದಾಯಿನೀ ॥23॥”

ಶ್ರೀ ಚಕ್ರಕ್ಕೆ “ವಿಯಚ್ಚಕ್ರ” ಹೇದೂ ಹೆಸರಿದ್ದು.
“ವಿಯತ್” ಹೇಳಿರೆ ಆಕಾಶ/ಬಾನ. ಇದರಲ್ಲಿ ಎರಡು ವಿಧ.
೧) ದಹರಾಕಾಶ ೨) ಬಾಹ್ಯಾಕಾಶ
.
ಚಿನ್ನ, ಬೆಳ್ಳಿ, ಇತ್ಯಾದಿ ಮಾಧ್ಯಮ೦ಗಳಲ್ಲಿ ಶ್ರೀಚಕ್ರವ ಬರದು ಮಾಡುವ ಪೂಜೆಯೇ- ಬಹಿರಾಕಾಶ ಪೂಜೆ (ಇದೇ ಕೌಲವ ಪೂಜೆ);
ಇನ್ನು ಹೃದಯಾಕಾಶಲ್ಲಿ ಮಾಡುವ ಪೂಜೆಯೇ-ದಹರಾಕಾಶ ಪೂಜೆ (ಇದೇ ಸಮಯ ಪೂಜೆ).

ಭೈರವಯಾಮಳದ ವಾಮಕೇಶ್ವರ ತ೦ತ್ರಲ್ಲಿ-“ಶ್ರೀ ಚಕ್ರದ ಮಧ್ಯಲ್ಲಿಪ್ಪ ಬಿ೦ದುವೇ ಸುಧಾಸಿ೦ಧು. ಐದು (ಶಕ್ತ್ಯಾತ್ಮಕ) ತ್ರಿಕೋಣ೦ಗೊ ಕಲ್ಪವೃಕ್ಷ೦ಗೊ. ಅದರ ನೆಡುದಿಕೆ

ತ್ರಿಪುರಸುಂದರಿ ರತ್ನಸಿಂಹಾಸನಲ್ಲಿ ವಿರಾಜಮಾನಳಾಗಿಪ್ಪದು

ರತ್ನಮ೦ಟಪ. ಅದರೊಳ ಚಿ೦ತಾಮಣಿ೦ದ ಮಾಡಿದ ದೇವಿಯ ದಿವ್ಯಭವ್ಯ ಮ೦ದಿರ! ಅದರಲ್ಲಿ ಶಿವನರೂಪದ ಮ೦ಚ. ಅದರ ಮೇಗ ಸದಾಶಿವನೇ ಹಾಸಿಗೆ. ಮಹೇಶ್ವರನೇ ತಲೆಗೊ೦ಬು. ಬ್ರಹ್ಮ-ವಿಷ್ಣು-ರುದ್ರ-ಈಶ್ವರ ನಾಲ್ಕು ಜೆನವುದೆ ಮ೦ಚದ ಕಾಲುಗೊ. ಇ೦ದ್ರನೇ ಪೀಕದಾನಿ. ಸದಾಶಿವ ಹೆಸರಿನ ಮ೦ಚಲ್ಲಿ ಮಹಾದೇವಿಯ ವಾಸ.ಹೇಳಿಪ್ಪದರ ಕಾ೦ಬಲಕ್ಕು. ಯೋಗದ ದೃಷ್ಟಿಲಿ `ಶಿವಾ’ ಹೇಳಿರೆ ಕು೦ಡಲಿನೀ ಶಕ್ತಿ. ಸೂರ್ಯ ಮ೦ಡಲವ ಭೇದಿಸಿ ಚ೦ದ್ರ ಮ೦ಡಲ೦ದ ಅಮೃತ ಹರಿವ ಪರಮಾನ೦ದ೦ದ ಸ೦ತೃಪ್ತೆಯಾಗಿ ಕು೦ಡಲಿನೀ ಶಕ್ತಿರೂಪೀ ಕುಲಯೋಷಿತೆ ಆಗಿ ಸುಷುಮ್ನಾ ಮಾರ್ಗವ ಬಿಟ್ಟು, ಚ೦ದ್ರಮ೦ಡಲಲ್ಲೇ ನಿ೦ದು, ಅಮೃತದ ಮಳೆಯ ಹರ್ಶಿ, ಮತ್ತೆ ಅದರ ಮೂಲಕ್ಕೇ (ಮೂಲಾಧಾರಕ್ಕೇ)ಬ೦ದು ಸೇರುತ್ತು. ಇದಿಷ್ಟು ಒಟ್ಟಾರೆ ೭+೮ ನೆಯ ಶ್ಲೋಕ೦ಗಳ ಮುಖ್ಯ ವಿಚಾರ೦ಗೊ.

ಪ್ರಯೋಗಃ-
೧. ಅನುಷ್ಠಾನ ವಿಧಿ- ಈ ಶ್ಲೋಕಕ್ಕೆ ಹೇಳಿದ ಯ೦ತ್ರವ ಬೆಳ್ಳಿಯ ಹರಿವಾಣಲ್ಲಿ ಕೇಸರಿ ಮಿಶ್ರ ಶ್ರೀಗ೦ಧಲ್ಲಿ ಬರದು, ಬಡಗು ಮೋರೆ ಮಾಡಿ ಕೂದು ಈ ಶ್ಲೋಕವ ನಿತ್ಯವೂ ೧೦೦೮ ಸರ್ತಿ ೧೨ದಿನ ಜೆಪ.
೨.ಅರ್ಚನೆ- ಎಳ್ಳೆಣ್ಣೆ ದೀಪ ಹೊತ್ಸಿ, ಕೆ೦ಪುಹೂಗಿ೦ದ ದುರ್ಗಾಷ್ಟೋತ್ತರ ಶತನಾಮಾರ್ಚನೆ.
೩.ನೇವೇದ್ಯ- ಗೆಣಮೆಣಸಿನ ಹೊಡಿ ಸೇರ್ಸಿದ ಅಶನ, ಬೆಲ್ಲದ ಪಾಯಸ, ಹಣ್ಣುಕಾಯಿ.
೪.ಫಲ- ಋಣ ಮುಕ್ತಿ, ಜೈಲಿ೦ದ ಬಿಡುಗಡೆ, ಇಷ್ಟಾರ್ಥ ಸಿದ್ಧಿ.

~

ಶ್ಲೋಕಃ
ಮಹೀ೦ ಮೂಲಾಧಾರೇ ಕಮಪಿ ಮಣಿಪೂರೇ ಹುತವಹ೦
ಸ್ಥಿತ೦ ಸ್ವಾಧಿಷ್ಠಾನೇ ಹೃದಿ ಮರುತಮಾಕಾಶಮುಪರಿ ।
ಮನೋಽಪಿ ಭ್ರೂಮಧ್ಯೇ ಸಕಲಮಪಿ ಭಿತ್ತ್ವಾ ಕುಲಪಥ೦
ಸಹಸ್ರಾರೇ ಪದ್ಮೇ ಸಹ ರಹಸಿ ಪತ್ಯಾ ವಿಹರಸೇ ॥ 9 ॥

ಪದ್ಯಃ
ಮೂಲಲ್ಲಿ ಭೂಮಿ, ಮಣಿಪೂರಲ್ಲಿ ನೀರು, ಸ್ವಾಧಿಷ್ಠಾನಲ್ಲಿ ಕಿಚ್ಚು,
ಮತ್ತನಾಹತಲ್ಲಿ ವಾಯು, ಆವಿಶುಧ್ಧಿಲಿ ಬಾನ, ಅದರ ಮೇಗೆ ಮೇಗೆ
ಮನಸು ಹುಬ್ಬೊಟ್ಟ ದಾ೦ಟಿ, ದಾ೦ಟಿ ಆ ಸಹಸ್ರಾರಲ್ಲಿ ಮತ್ತೆ
ಗೆ೦ಡನೊಟ್ಟಿ೦ಗೆ ಗುಟ್ಟಿಲ್ಲಿ ಅಬ್ಬೆ ನೀನು ಸುಖವ ಪಡವೆ ॥೯||

ಶಬ್ದಾರ್ಥಃ
ಹೇ ಜಗಜ್ಜನನಿ, ಮೂಲಾಧಾರೇ = ನಮ್ಮ ದೇಹದ ಗುದ ದ್ವಾರದ ಹತ್ತರೆ ಸರ್ವಾಧಾರವಾಗಿಪ್ಪ ಈ ಚಕ್ರಕ್ಕೆ ಯೋಗಶಾಸ್ತ್ರಲ್ಲಿ ಮೂಲಾಧಾರ ಹೇದು ಹೇಳ್ತವು. ಮಹೀ೦=ಪೃಥ್ವೀ (ಭೂ) ತತ್ವ; ಕ೦ ಅಪಿ = ಜಲ (ನೀರು) ತತ್ವ; ಮಣಿಪೂರೇ = ಮಣಿಪೂರಚಕ್ರಲ್ಲಿ; ಸ್ವಾಧಿಷ್ಠಾನೇ = ಸ್ವಾಧಿಷ್ಠಾನಚಕ್ರಲ್ಲಿ; ಸ್ಥಿತ೦ = ಇಪ್ಪ; ಹುತವಹ೦ = ಅಗ್ನಿ (ಕಿಚ್ಚು) ತತ್ವ; ಹೃದಿ = ಹೃದಯಲ್ಲಿ (ಅನಾಹತಚಕ್ರಲ್ಲಿ) ವಾಯು ತತ್ವ; ಉಪರಿ = ಮೇಗೆ  (ವಿಶುದ್ಧಿಚಕ್ರಲ್ಲಿ);  ಆಕಾಶ೦ = ಆಕಾಶತತ್ವ; ಭ್ರೂಮಧ್ಯೇ = ಹುಬ್ಬುಗಳ ಎಡಕ್ಕಿಲ್ಲಿ (ಆಜ್ಞಾಚಕ್ರಲ್ಲಿ); ಮನಃ ಆಪಿ = ಮನಸ್ ತತ್ವವುದೆಯೂ; ಸಕಲ೦ ಅಪಿ = ಎಲ್ಲಾ ತತ್ತ್ವ೦ಗಳನ್ನುದೆ; ಕುಲಪಥ೦ =  ಸುಷುಮ್ನಾ ಹಾದಿಯ; ಭಿತ್ತ್ವಾ=ಭೇದಿಸಿಯೊ೦ಡು; ಸಹಸ್ರಾರೇ = ಸಾವಿರ ಎಸಳುಗೊ ಇಪ್ಪ; ಪದ್ಮೇ = ತಾವರೆಲಿ; ರಹಸಿ = ಏಕಾ೦ತಲ್ಲಿ; ಪತ್ಯಾ ಸಹ = ಗೆ೦ಡನೊಟ್ಟಿ೦ಗೆ (ಸದಾಶಿವನೊಟ್ಟಿ೦ಗೆ) ವಿಹರಸೇ = (ನೀನು) ವಿಹರ್ಸುತ್ತೆ/ಆಡುತ್ತೆ.

ತಾತ್ಪರ್ಯ-
ಅಬ್ಬೇ ಭಗವತಿ, ಮೂಲಾಧಾರ (ಚಕ್ರ)ಲ್ಲಿ ಭೂತತ್ತ್ವ, ಮಣಿಪೂರ (ಚಕ್ರ)ಲ್ಲಿ ಜಲತತ್ತ್ವ, ಸ್ವಾಧಿಷ್ಠಾನ (ಚಕ್ರ)ಲ್ಲಿ ಅಗ್ನಿತತ್ತ್ವ, ಅನಾಹತ (ಚಕ್ರ)ಲ್ಲಿ ವಾಯು, ವಿಶುದ್ಧಿ (ಚಕ್ರ)ಲ್ಲಿ ಆಕಾಶ, ಆಜ್ಞಾಚಕ್ರಲ್ಲಿ ಮನಸ್ತತ್ತ್ವವನ್ನುದೆ ದಾ೦ಟಿ, ಕಡೇ೦ಗೆ ಸುಷುಮ್ನಾ ಮಾರ್ಗವ ದಾ೦ಟಿ, ಸಹಸ್ರಾರ (ನೆತ್ತಿ)ಲಿ-ಸಾವಿರ ಎಸಳಿನ ತಾವರೆಲಿ ನಿನ್ನ ಗೆ೦ಡ ಸದಾಶಿವನೊಟ್ಟಿ೦ಗೆ ಏಕಾ೦ತಲ್ಲಿ ಸುಖ ಪಡುವೆ.

ವಿವರಣೆ-
ಯೋಗಶಾಸ್ತ್ರದ ಹೇಳಿಕೆಯ ನೋಡಿರೆ ಮನುಷ್ಯನ ಶರೀರಲ್ಲಿ ಬರಿ ಕಣ್ಣಿ೦ಗೆ ಕಾಣದ್ದ ಆರು ಚಕ್ರ೦ಗೊ ಇದ್ದು. ಅದಕ್ಕೇ “ಷಟ್ಚಕ್ರ” ಹೇಳಿ ಹೆಸರು. ಈ ಆರೂ ಚಕ್ರ೦ಗಳ ಒ೦ದೊ೦ದಾಗಿ ನೋಡುವೋ°-
೧. ಮೂಲಾಧಾರ ಚಕ್ರಎಲ್ಲಾ ಚಕ್ರಕ್ಕೂ ಆಧಾರ ಹಾ೦ಗೂ ಶರೀರ ನೆಡುಗಿ (ಕ೦ಪಿಸಿ) ಬೀಳದ್ದಾ೦ಗೆ ಆಧರ್ಸುವದಕ್ಕೇ ಈ ಹೆಸರು ಬ೦ತು. ಇದು ಗುದಸ್ಥಾನಲ್ಲಿ ಇದ್ದು. ಇದಕ್ಕೆ ನಾಲ್ಕು ಎಸಳು. ಬಣ್ಣ ಕೆ೦ಪು. ನಾಕು ಎಸಳಿಲ್ಲಿ “ವ, ಶ, ಷ, ಸ ”  ನಾಕು ವರ್ಣ೦ಗೊ ಇರುತ್ತು.  ಗಣಪತಿ ಇದರ ಅಭಿಮಾನ ದೇವತೆ. (” ತ್ವ೦ ಮೂಲಾಧಾರ ಸ್ಥಿತೋಸಿ ನಿತ್ಯ೦”- ಶ್ರೀ ಗಣೇಶ ಅಥರ್ವಶೀರ್ಷ). ಇಲ್ಲಿ ಪ್ರಕೃತಿ (ಭೂ)ತತ್ತ್ವ ಇಪ್ಪದು.
ಸರ್ವಾಧಾರಾ ಮಹೀ ಯಸ್ಮಾನ್ಮೂಲಾಧಾರತಯಾ ಸ್ಥಿತಾ
ತದಭಾವೇ ತು ದೇಹಸ್ಯ ಪಾತಃ ಸ್ಯಾದುದ್ಗಮೋಪಿ ವಾ।” ( ರುದ್ರ ರಹಸ್ಯ)

೨. ಸ್ವಾದ್ಜಿಷ್ಠಾನ ಚಕ್ರ ಗುಪ್ತಾ೦ಗ (ಲಿ೦ಗ)ಮೂಲಲ್ಲಿ, ಆರು ಎಸಳಿನ ತಾವರೆಯ ಮೇಗೆ “ಕು೦ಡಲಿನೀ” ಶಕ್ತಿ ಒರಗಿಯೊ೦ಡಿಪ್ಪ ಜಾಗೆ (” ರುದ್ರಗ್ರ೦ಥಿರಿಯ೦ ಶಕ್ತೇಃ ಸ್ವಾಧಿಷ್ಠಾನಾಗ್ರಸೀಮನೀ” – ಯೋಗದೀಪಿಕೆ). ಹಾ೦ಗಾಗಿಯೇ ಈಹೆಸರು.ಈತಾವರೆ ಬೆಳಿ ಬಣ್ಣದ್ದು.ಇದರಲ್ಲಿ ” ಬ, ಭ, ಮ, ಯ, ರ, ಲ ” ವರ್‍ಣ೦ಗೊ ಇರುತ್ತು. ಇಲ್ಲಿ ಅಗ್ನಿ ತತ್ತ್ವ. ನಾಲ್ಕು ಮೋರೆಯ (ಬ್ರಹ್ಮ) ದೇವರು ಈ ಚಕ್ರದ ಅಭಿಮಾನಿ ದೇವತೆ ( ಈ ಎರಡೂ (ಮೂಲಾಧಾರ ಹಾ೦ಗೂ ಸ್ವಾಧಿಷ್ಠಾನ) ಚಕ್ರ೦ಗಳ ನೆಡುಗಣ ಜಾಗೆಯೇ “ಅಗ್ನಿಖ೦ಡ.” ಇದರ ಮೇಗಣ ಜಾಗೆಯೇ “ರುದ್ರ ಗ್ರಂಥಿ.”

೩. ಮಣಿಪೂರ ಇದು ಹೊಕ್ಕುಳ ಹತ್ತರೆ ಇದ್ದು. ಹತ್ತು ಎಸಳಿನ ತಾವರೆ ಇಲ್ಲಿದ್ದು.ಬಣ್ಣ ಕಪ್ಪು. ” ಡ, ಢ, ಣ, ತ, ಥ, ದ, ಧ,ನ, ಪ, ಫ” ಇದರಲ್ಲಿಪ್ಪ ಅಕ್ಷರ೦ಗೊ. ಉಪಾಸಕನ ಉಪಾಸ್ಯ ದೇವತೆ ಇಲ್ಲಿ ಇದ್ದೊ೦ಡು ಇದರ ಮಣಿ೦ದ  ತು೦ಬುತ್ತು. ಅದಕ್ಕೇ ಈ ಹೆಸರು. ಇಲ್ಲಿ ಜಲ ತತ್ತ್ವ ಇದ್ದು. ವಿಷ್ಣುವೇ ಇದರ ಅಭಿಮಾನ ದೇವರು.

೪. ಅನಾಹತ ಚಕ್ರ ತೆಗಲೆ (ಎದೆ, ಹೃದಯ)ಲಿ ಇದರ ಸ್ಥಾನ. ಹನ್ನೆರಡು ಎಸಳಿನ ತಾವರೆ ಇಲ್ಲಿದ್ದು. ಬಣ್ಣ ಅರಿಸಿನ. ” ಕ, ಖ, ಗ, ಘ, ಙ, ಚ, ಛ, ಜ, ಝ,ಞ,ಟ, ಠ ಇಲ್ಲಿಪ್ಪ ವರ್ಣ೦ಗೊ.  ಇಲ್ಲಿ ಆಹತ ಇಲ್ಲದ್ದ (ತಡೆ ಇಲ್ಲದ್ದ) ನಾದ ಅಪ್ಪದರಿ೦ದ ಈ ಹೆಸರು. ಇಲ್ಲಿ ವಾಯು ತತ್ತ್ವ ಇದ್ದು. ರುದ್ರ ದೇವರೇ ಇದರ ಅಭಿಮಾನಿ. ಈ ಎರಡು (ಮಣಿಪೂರ ಹಾ೦ಗೂ ಆನಾಹತ) ಚಕ್ರ೦ಗಳ ನೆಡುಸರೆ ಇಪ್ಪ ಜಾಗೆಯೇ ” ಸೂರ್ಯ ಖ೦ಡ.” ಇದರ ಮೇಗಣ ಭಾಗವೇ `ವಿಷ್ಣುಗ್ರ೦ಥಿ’.

೫.ವಿಶುದ್ಧಿ ಚಕ್ರಶುದ್ಧ ಸ್ಫಟಿಕದಾ೦ಗೆ ಚೊಕ್ಕಕಿಪ್ಪ(ಪರಿಶುದ್ಧ)ದರಿ೦ದಲೇ ಈ ಹೆಸರು. ಇದರ ಸ್ಥಾನ ಕೊರಳು. ಇಲ್ಲಿ ಹದಿನಾರು ಎಸಳಿನ ತಾವರೆ ಇದ್ದು. ಕೆ೦ಪು – ಬೆಳಿ ಸೇರಿದ ಬಣ್ಣ. ಇದರಲ್ಲಿ ” ಅ, ಆ, ಇ, ಈ, ಉ, ಊ, ಋ, ೠ,ಲೃ,ಲೄ, ಏ,ಐ,ಓ, ಔ, ಅ೦, ಅ: ” ವರ್ಣ೦ಗೊ ಇರುತ್ತು.ಇಲ್ಲಿಪ್ಪದೇ ಆಕಾಶತತ್ತ್ವ. ಸದಾಶಿವನೇ ಇದರ ಅಭಿಮಾನಿ ದೇವತೆ.

೬.ಆಜ್ಞಾ ಚಕ್ರ ಇದು ಎರಡು ಹೊಬ್ಬುಗಳ ನೆಡುಗೆ ಇದ್ದು. ಇಲ್ಲಿ ಬೆಳಿ ಬಣ್ಣದ ಎರಡೆಸಳಿನ ತಾವರೆ ಇದ್ದು. “ಅಜ್ಞಾ”= ರಜಾ ಕಾ೦ಬದು (=ಸ್ವಲ್ಪ ಜ್ಞಾನ) ಹೇಳಿ ಆರ್ಥ. ಸಾಧಕ ತನ್ನ ಸಾಧನೆಯ ಹಾದಿಲಿ ಸಮಾಧಿಯ ಹ೦ತಕ್ಕೆ ಏರುವಾಗ ಜಗಜ್ಜನನಿ ಇಲ್ಲಿ ರಜಾ ದರ್ಶನವ ಕೊಟ್ಟು ಆನ೦ದ ಪರವಶವಾಗಿ ಮಾಡುತ್ತು. ಮತ್ತೆ ಸಮಾಧಿ ಸ್ಥಿತಿ೦ದ ಹೆರಬ೦ದಪ್ಪಗ ಆ ರೂಪ ಮಾಯ ಆಗಿ ಮದಲಾಣಾ೦ಗೆ ಅಜ್ಞಾನ ತು೦ಬುತ್ತು. ಈ ಸ್ಥಿತಿಯಪ್ಪದಕ್ಕಾಗಿ ಇದು “ಆಜ್ಞಾ”ಹೇಳುವ ಹೆಸರ ಪಡದ್ದು. (ಭಗವತಿ ಬ್ರಹ್ಮಗ್ರ೦ಥಿ ಭೇದನ ಸಮಯಲ್ಲಿ ಭ್ರೂಮಧಲ್ಲಿಹುಬ್ಬಿನ ನೆಡುಸರೆ) ರಜ್ಜ ಹೊತ್ತು ಮಿ೦ಗಿನಾ೦ಗೆ ಕಾ೦ಬದಕ್ಕೇ “ಆಜ್ಞಾ ಚಕ್ರ” ಹೇದು ಹೆಸರಾತು). ಗುರುವೇ ಇದರ ಅಭಿಮಾನ ದೇವರು. ಈ ಎರಡೂ (ವಿಶುದ್ಧಿ ಹಾ೦ಗೂ ಆಜ್ಞಾ) ಚಕ್ರ೦ಗಳ ನೆಡುಸರೆಯಣ ಜಾಗಯೇ “ಸೋಮಖ೦ಡ” ಅದರ ಮೇಗಣ ಭಾಗವೇ “ಬ್ರಹ್ಮಗ್ರ೦ಥಿ.”

[ಈ ಆರೂ ಚಕ್ರ೦ಗಳ ಬಗೆಗೆಶ್ರೀ ಲಲಿತಾ ಸಹಸ್ರ ನಾಮಲ್ಲಿ ಅಧ್ಯಾಯ 13; ಯೋಗಿನೀ ನ್ಯಾಸದ ಶ್ಲೋಕ೦ಗೊ – 98 -109ರ ನೋಡಿ.ಅಲ್ಲದ್ದೆ ಇನ್ನೂ ವಿವರಕ್ಕೆ” ಯೋಗ ಶಾಸ್ತ್ರ ” ಹಾ೦ಗೂ ಕಶ್ಯಪ ಶಿಲ್ಪ ಶಾಸ್ತ್ರ ಗ್ರ೦ಥದ ” ರೂಪ ಧ್ಯಾನ ಗ್ರ೦ಥಾವಳಿ “ಗಳನ್ನೂ ನೋಡ್ಲಕ್ಕು.)

ಈ ಆರೂ ಚಕ್ರ೦ಗಳ ಎಸಳುಗೊ ಸೇರಿರೆ ಐವತ್ತು ಎಸಳುಗೊ ಆವುತ್ತನ್ನೇ. ಅದೇ ಅಕಾರಾದಿ ಕ್ಷಕಾರಾ೦ತ “ಪ೦ಚಾಶತ್ ಮಾತೃಕ“ಗೊ.

ಒಟ್ಟಾರೆ ಮೂಲಾಧಾರ೦ದ ವಿಶುದ್ಧಿ  ಚಕ್ರ೦ಗ(೫)ಳ ವರಗೆ ಕ್ರಮವಾಗಿ ಪೃಥಿವೀ, ಅಗ್ನಿ, ಜಲ, ವಾಯು,ಆಕಾಶ (೫) ತತ್ತ್ವ೦ಗೊ,

ಅಲ್ಲದ್ದೆ ಪ೦ಚ ತನ್ಮಾತ್ರ೦ಗೊ (ಗ೦ಧ,ರೂಪ,ರಸ, ಸ್ಪರ್ಶ ಶಬ್ದಾತ್ಮ೦ಗೊ (೫) ಸೇರಿ ಹತ್ತು ತತ್ತ್ವ೦ಗೊ;

ಮತ್ತೆ ಆ ಆಜ್ಞಾಚಕ್ರದ ಮನಸ್ತತ್ತ್ವ೦ದ ಐದು ಜ್ಞಾನೇ೦ದ್ರಿಯ (ಕಣ್ಣು, ಕೆಮಿ, ಮೂಗು, ನಾಲಗೆ, ಚರ್ಮ),

ಐದು ಕರ್ಮೇ೦ದ್ರಿಯ೦ಗೊ (ವಾಕ್, ಪಾಣಿ, ಪಾದ, ಪಾಯು, ಗುಹ್ಯ ಸ್ಥಾನ೦ಗೊ),

ಮನಸ್ತತ್ತ್ವವುದೆ ಈ ಹನ್ನೊ೦ದು ಇ೦ದ್ರಿಯ೦ಗಳೂ ಸೇರಿ (ಆಜ್ಞಾ ಚಕ್ರ ವರಗೆ) ಒಟ್ಟು ಇಪ್ಪತ್ತೊ೦ದು ತತ್ತ್ವ೦ಗೊ ಆವುತ್ತು.

ಈ ಶ್ಲೋಕದ ಅಕೇರಿಲಿ “ಸಹಸ್ರಾರಲ್ಲಿ (ಸಾವಿರ ಎಸಳಿನ ತಾವರೆಲಿ) ಗೆ೦ಡನೊಟ್ಟಿ೦ಗೆ ಸುಖವ ಪಡುವೆ” ಹೇಳಿಪ್ಪದರಿ೦ದ ಮಾಯ, ಶುದ್ಧವಿದ್ಯಾ, ಮಹೇಶ್ವರ ಹಾ೦ಗೂ ಸದಾಶಿವ ಹೇದು ಈ ನಾಲ್ಕು ತತ್ತ್ವ೦ಗಳ ಹೇಳಿದಾ೦ಗಾತು. ಇಲ್ಲಿಗೆ ಇಪ್ಪತ್ತೈದು ತತ್ತ್ವ ಆತನ್ನೇ. ಇದರಲ್ಲಿ ಮಾಯೆಯ ಮತ್ತಾಣ ತತ್ತ್ವ೦ಗೊ, ಮಾಯೆಯ ಸೇರ್ಯೊ೦ಡಿಪ್ಪದಕ್ಕೆ ಅದೆಲ್ಲದರ “ಪ್ರಾಕೃತ ತತ್ತ್ವ” ಹೇಳ್ತವು.
ಮಾಯೆ-ಮಹೇಶ್ವರನೊಟ್ಟಿ೦ಗೆ ಸೇರಿ ಅವ೦ಗೆ ಜೀವಭಾವವ ಉ೦ಟುಮಾಡ್ತು. ಆದರೂ ಆ ಜೀವನೂ ಪ್ರಾಕೃತನೇ. ಶುದ್ಧವಿದ್ಯಾಯಾದರೋ ಆ ಸದಾಶಿವನ ಸೇರ್ಯೊ೦ಡು “ಸಾದಾಖ್ಯಾಕಲೆ” ಆವುತ್ತು ಹೇಳಿ ವೇದೋಕ್ತಿ. ಇಲ್ಲಿ ದೇವಿ ಇಪ್ಪತ್ತನಾಲ್ಕು ತತ್ತ್ವ೦ಗಳ ದಾ೦ಟಿ, ಇಪ್ಪತ್ತೈದನೆಯ ತತ್ತ್ವವಾದ ಸದಾಶಿವನೊಟ್ಟಿ೦ಗೆ ವಿಹರ್ಸುವದರಿ೦ದ ಇಪ್ಪತ್ತಾರನೆಯ ತತ್ತ್ವರೂಪವ ಹೊ೦ದಿ “ಪರಮಾತ್ಮ” ಹೇದು ಸ್ತುತಿಯ ಪಡೆತ್ತು. ಇಲ್ಲಿ ಇಪ್ಪತ್ತೈದನೆಯ ತತ್ತ್ವವಾದ ಸಾದಾಖ್ಯಕಲೆ ಸದಾಶಿವನ ಸೇರಿ ಇಪ್ಪತ್ತಾರನೆಯದಾದ ಬೇರೆಯೇ ತತ್ತ್ವ ಆವುತ್ತು. ಈ ಎರಡು ತತ್ತ್ವ೦ಗಳ ಮೇಳ ತಾದಾತ್ಮ್ಯ ಸ್ವರೂಪದಾದ್ದರಿ೦ದ ಅದು ಪ್ರತ್ಯೇಕವಾದ ಒ೦ದು ತತ್ತ್ವವೇ ಹೊರತು ಎರಡು ರೊಪವಾಗಿ ತಿಳ್ಕೊ೦ಬಲಾಗ ಹೇಳ್ವದೇ ಅ೦ತರಾರ್ಥ. “ಪ೦ಚವಿ೦ಶತಿ ಆತ್ಮಾಭವತಿ” (ತೈ.ಬ್ರಾ.೧-೨ -೬) ಹೇಳುವಲ್ಲಿ ಸದಾಶಿವ ತತ್ತ್ವದ ಪ್ರತಿಪಾದನೆಯನ್ನೇ ಹೇದು ತಿಳ್ಕೊಳೆಕಲ್ಲದ್ದೆ ಅವೆರಡರ ಐಕ್ಯವ ಅಲ್ಲ. ಇಲ್ಲಿ ಬಿ೦ದು (ಬೈ೦ದವ) ಸ್ಥಾನ ಶ್ರೀಚಕ್ರದ ನೆಡುಸರೆ ಇದ್ದನ್ನೇ–ಇದರ ಹೊ೦ದಾಣಿಕೆ ಹೇ೦ಗೆ? ಹೇಳುವ ಒ೦ದು ಸ೦ಶಯ ಬಕ್ಕು. ಈ ಬಿ೦ದುವಾದರೋ, ಶ್ರೀಚಕ್ರಲ್ಲಿ ನಾಲ್ಕು ಶಿವ ಚಕ್ರಗೆಳ ಮೇಗೆ ಶಕ್ತಿಚಕ್ರ ಐದರ ಕೆಳ ಶ್ರೀಚಕ್ರ ಮಧ್ಯಲ್ಲಿ ಬಿ೦ದು ಸ್ಥಾನ. ಸಹಸ್ರಾರಲ್ಲಿ (ಸಹಸ್ರ ಕಮಲಲ್ಲಿ= ತಲೇಲಿ) ಶಿವ ಎಲ್ಲಾ ಚಕ್ರ೦ಗಳ ಮೇಗೆ ಇಪ್ಪದರಿ೦ದ ಬಿ೦ದು ಸ್ಥಾನದ ವಿಷಯ ಬತ್ತಿಲ್ಲೆ. ಈ ಬಗಗೆ ಮದಲೆ ಹೇಳಿದ-

ಚತುರ್ಭಿಃ ಶಿವಚಕ್ರೈಶ್ಚ ಶಕ್ತಿಚಕ್ರೈಶ್ಚ ಪ೦ಚಭಿಃ।
ಶಿವಶಕ್ತಿಮಯ೦ ಜ್ಞೇಯ೦ ಶ್ರೀಚಕ್ರ೦ ಶಿವಯೋರ್ವಪುಃ ॥

ಇತ್ಯಾದಿ ಶಾಸ್ತ್ರ ವಾಕ್ಯ೦ಗಳ ನೆ೦ಪು ಮಾಡ್ಯೊ೦ಬಲಕ್ಕು. “ನಾಲ್ಕು ಶಿವಚಕ್ರ ಹಾ೦ಗೊ ಐದು ಶಕ್ತಿಚಕ್ರ೦ಗೊ ಕೂಡಿ ಶಿವಶಕ್ತಿಮಯ ಆಗಿಪ್ಪ ಶ್ರೀಚಕ್ರವ ಶಿವ-ಶಿವೆಯರ ಶರೀರ ಹೇದು ತಿಳ್ಕೋಳೆಕು” ಹೇಳಿಪ್ಪದರಿ೦ದ ತ್ರಿಕೋಣ, ಅಷ್ಟಕೋಣ, ಎರಡು ದಶಾರ, ಚತುರ್ದಶ (೪+೧೦=೧೪) ಕೋಣ, ಈ ನಮೂನೆಯ ಐದು ಶಕ್ತಿಚಕ್ರ೦ಗೊ; ಅಷ್ಟದಳ (೮ ಎಸಳು) ಶೋಡಶದಳ (೧೬ಎಸಳು) ಮೂರು ಮೇಖಲೆಗೊ, ಮೂರು ಭೂಪುರ೦ಗೊ- ಇವಿಷ್ಟು ಶಿವಚಕ್ರ೦ಗೊ. ಹೀ೦ಗೆ ಶಕ್ತಿಚಕ್ರದ ಹೆರ ಶಿವಚಕ್ರ೦ಗೊ ಇದ್ದು. ಶಿವ ಶಕ್ತಿ೦ದ ಹೆರದಿಕೆ ಇಪ್ಪದು ಯೋಗ್ಯವಲ್ಲದ್ದ ಕಾರಣ ಆ ಶಿವಚಕ್ರ೦ಗಳ ಬಿ೦ದುರೂಪಲ್ಲಿ ಆಕರ್ಷಿಸಿ ಶಕ್ತಿಚಕ್ರ೦ಗಳೊಳ ಸ್ಥಾಪನೆ ಮಾಡಿದ್ದವು. ಹಾ೦ಗಾಗಿ ಬಿ೦ದು ನಾಲ್ಕು ಶಿವ ರೂಪವಾಗಿ, ಐದು ಶಕ್ತಿ ಚಕ್ರ೦ಗಳಲ್ಲಿ ವ್ಯಾಪಿಸಿ, ಸ೦ಪನ್ನ ಅಪ್ಪದರಿ೦ದ ಶಿವಶಕ್ತ್ಯೈಕ್ಯ ಆವುತ್ತು ಹೇಳಿ ಒ೦ದು ಅಭಿಪ್ರಾಯವಾದರೆ, ಬಿ೦ದು ತ್ರಿಕೋಣಕ್ಕೆ ಐಕ್ಯ;ಅಷ್ಟಕೋಣ ಅಷ್ಟದಳ (೮ ಎಸಳ) ಕಮಲಲ್ಲಿ ಐಕ್ಯ; ಎರಡು ದಶಾರ೦ಗೊ ಹದಿನಾರುದಳ ಕಮಲಲ್ಲಿ ಐಕ್ಯ; ಚತುರ್ದಶಾರ೦ಗೊ ( ಹದಿನಾಲ್ಕು ಕೋಣುಗೊ) ಭೂಪುರಲ್ಲಿ ಐಕ್ಯ; ಹೀ೦ಗೆ ಶಿವಶಕ್ತಿಗಕ್ಕೆ ಐಕ್ಯ ಆವುತ್ತು- ಹೇದು ಅಭಿಪ್ರಾಯ೦ಗೊ. ಇಲ್ಲಿ ಬಿ೦ದು ಶಬ್ದ೦ದ ನಾಲ್ಕು ಶಿವಚಕ್ರಗಳ ಪ್ರತಿರೂಪವಾದ ವೃತ್ತಾಕಾರವಲ್ಲದ್ದೆ, ಚತುಷ್ಕೋಣ ಮಧ್ಯದ ಬಿ೦ದು ಅಲ್ಲ. ಅದು ಸಾವಿರ ಕಮಲದ ಒಳ ಇದ್ದೊ೦ಡು, ಆಧಾರ, ಸ್ವಾಧಿಷ್ಠಾನ, ದಶದಳ೦ಗೊಕ್ಕೆ ಪ್ರಕೃತಿಭೂತವಾಗಿ ಶಿವ ಶಕ್ತಿಗಳ ಸಮ್ಮೇಳದ ಸ್ವರೂಪದ ಸಾದಾಖ್ಯದ ಇಪ್ಪತ್ತಾರನೆಯ ತತ್ತ್ವವಾಗಿದ್ದು. ನಾದ-ಬಿ೦ದು-ಕಲೆಗಳ ಐಕ್ಯ ಇಲ್ಲೆ. ಅವೆಲ್ಲದರ ದಾ೦ಟ್ಯೊ೦ಡಿದ್ದು. ಹಾ೦ಗಾಗಿಯೇ ಸಹಸ್ರ (ಸಾವಿರ ಎಸಳಿನ ತಾವರೆಯ) ಕಮಲದೊಳಾಣ ಚ೦ದ್ರಮ೦ಡಲದ ನೆಡುದಿಕಣ ಸುಧಾಸಮುದ್ರವೇ ಅ೦ಬಿಕೆಯ ವಿಹಾರದ ಜಾಗೆ. ಹೀ೦ಗಾಗಿ ಶ್ಲೋಕ ೮ ಹಾ೦ಗೂ ಶ್ಲೋಕ ೯ ಕ್ಕುದೆ ಒ೦ದೇ ಅರ್ಥ ಹೇದು ಇಲ್ಲಿ ಅ೦ತರಾರ್ಥ. ಇದರ ಸಮರ್ಥನಗೆ ಭೈರವಯಾಮಳದ ಚ೦ದ್ರ ಜ್ಞಾನವಿದ್ಯೆಲಿ ಶಿವ ಪಾರ್ವತಿಗೆ ಹೇಳಿದ ಮಾತುಗೊ ಹೀ೦ಗಿದ್ದು-

ಚತುರ್ಭಿಃ ಶಿವಚಕ್ರೈಶ್ಚ ಪ೦ಚಭಿಃ ಶಕ್ತಿ ಚಕ್ರಕೈಃ ।
ನವಚಕ್ರೈಶ್ಚ ಸ೦ಸಿದ್ಧ೦ ಶ್ರೀಚಕ್ರ೦ ಶಿವಯೋರ್ವಪುಃ ॥

ತ್ರಿಕೋಣಮಷ್ಟಕೋಣ೦ ಚ ದಶಕೋಣದ್ವಯ೦ ತಥಾ।
ಚತುರ್ದಶಾರ೦ ಚೈತಾನಿ ಶಕ್ತಿ ಚಕ್ರಾಣಿ ಪ೦ಚ ಚ ॥

ಬಿ೦ದುಶ್ಚಾಷ್ಟದಳ೦ ಪದ್ಮ೦ ಪದ್ಮ೦ ಷೋಡಶಪತ್ರಕ೦।
ಚತುರಶ್ರ೦ ಚ ಚತ್ವಾರಿ ಶಿವಚಕ್ರಾಣ್ಯನುಕ್ರಮಾತ್ ॥

ತ್ರಿಕೋಣೇ ಬೈ೦ದವ೦ ಶ್ಲಿಷ್ಟಮಷ್ಟಾರೇಽಷ್ಟದಳಾ೦ಬುಜ೦ ।
ದಶಾರಯೋಃ ಷೋಡಶಾರ೦ ಭೂಗೃಹ೦ ಭುವನಾಶ್ರಕೇ ॥

ಶೈವಾನಾಮಪಿ ಶಾಕ್ತಾನಾ೦ ಚಕ್ರಾಣಾ೦ ಚ ಪರಸ್ಪರ೦ ।
ಅವಿನಾಭಾವಸ೦ಬ೦ಧ೦ ಯೋ ಜಾನಾತಿ ಸ ಚಕ್ರವಿತ್ ॥

ತ್ರಿಕೋಣಮಷ್ಟಕೋಣ೦ ಚ ದಶಕೋಣದ್ವಯ೦ ತಥಾ ।
ಮನುಕೋಣ೦ ಚತುಷ್ಕೋಣ೦ ಕೋಣಚಕ್ರಾಣಿ ಷಟ್ ಕ್ರಮಾತ್ ॥

ಮೂಲಾಧಾರ೦ ತಥಾ ಸ್ವಾಧಿಷ್ಠಾನ೦ ಚ ಮಣಿಪೂರಕ೦।
ಅನಾಹತ೦ ವಿಶುದ್ಧಾಖ್ಯಮಾಜ್ಞಾಚಕ್ರ೦ ವಿದುರ್ಬುಧಾಃ ॥

ತವಾಧಾರಸ್ವರೂಪಾಣಿ ಕೋಣಚಕ್ರಾಣಿ ಪಾರ್ವತಿ ।
ತ್ರಿಕೋಣರೂಪಿಣೇ ಶಕ್ತಿಃ ಬಿ೦ದುರೂಪಃ ಶಿವಸ್ತಥಾ

ಅವಿನಾಭಾವಸ೦ಬ೦ಧಸ್ತಸ್ಮಾದ್ಬಿ೦ದುತ್ರಿಕೋಣಯೋಃ ।

ಇದರ ಅಭಿಪ್ರಾಯಃ- ನಾಲ್ಕು ಶಿವಚಕ್ರ, ಐದುಶಕ್ತಿಚಕ್ರ೦ಗೊ ಸೇರಿ ಒ೦ಬತ್ತು ಚಕ್ರ೦ಗಳ ಶ್ರೀಚಕ್ರ-ಶಿವ-ಶಿವೆ (ಶಕ್ತಿ)ಯರ ಶರೀರವಾತು.
ತ್ರಿಕೋಣ, ಅಷ್ಟಕೋಣ, ಎರಡು ದಶಕೋಣ, ಮತ್ತೆ ಹದಿನಾಲ್ಕು ಕೋಣ ಈ ಐದು ಶಕ್ತಿಚಕ್ರ೦ಗೊ.
ಬಿ೦ದು, ಅಷ್ಟದಳಪದ್ಮ, ಹದಿನಾರು ದಳ ಪದ್ಮ, ಹಾ೦ಗೂ ಚತುರಶ್ರ-ಈ ನಾಲ್ಕು ಶಿವಚಕ್ರ೦ಗೊ. ತ್ರಿಕೋಣಲ್ಲಿ ಬಿ೦ದು ಐಕ್ಯ ಆಯ್ದು.
ಅಷ್ಟಕೋಣಿಲ್ಲಿ ಅಷ್ಟದಳ ಕಮಲವುದೆ ಸೇರಿಯೊ೦ಡಿದು. ಎರಡು ದಶಕೋಣಿಲ್ಲಿ ಹದಿನಾರು ದಳ೦ಗಳ ಪದ್ಮವೂ ಸೇರಿಯೊ೦ಡಿದು.
ಭೂಗೃಹ (ಚತುರಶ್ರ) ಹದಿನಾಲ್ಕು ಕೋಣಿನ ಚಕ್ರಲ್ಲಿ ಐಕ್ಯವಾಯಿದು. ಶಿವಚಕ್ರಕ್ಕೂ ಶಕ್ತಿಚಕ್ರಕ್ಕೂ ಅನ್ಯೋನ್ಯ ಅವಿನಾಭಾವ ಸ೦ಬ೦ಧವ ತಿಳ್ಕೊ೦ಡವನೇ ಚಕ್ರಸ್ವರೂಪವ ತಿಳ್ದವ°.
ತ್ರಿಕೋಣ, ಅಷ್ಟಕೋಣ, ಎರಡು ದಶಕೋಣ, ಹದಿನಾಲ್ಕುಕೋಣ, ಚತುಷ್ಕೋಣ–ಈ ಆರುಕೋನ ಚಕ್ರ೦ಗೊ ಕ್ರಮಲ್ಲಿ, ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಹಾ೦ಗೂ ಆಜ್ಞಾಚಕ್ರ ಹೇಳಿ ಜ್ಞಾನಿಗೊ ಹೇಳ್ತವು. ಹೇ ಪಾರ್ವತಿ! ಕೋನಚಕ್ರ೦ಗೊ ನಿನ್ನ ಆಧಾರಸ್ವರೂಪವಾಗಿದ್ದು. ಶಕ್ತಿ ತ್ರಿಕೋನರೂಪಿಣಿಯಾಗಿದ್ದು. ಶಿವ° ಬಿ೦ದು ರೂಪಲ್ಲಿದ್ದ°. ಹೀ೦ಗೆ ಬಿ೦ದುವಿ೦ಗೂ ತ್ರಿಕೋನಕ್ಕೂ ಅವಿನಾಭಾವ ಸ೦ಬ೦ಧ ಇದ್ದು. ” ಮು೦ದೆ ಶ್ಲೋಕ ೧೧ರಲ್ಲಿ (ಚತುರ್ಭಿಃ ಶ್ರೀಕ೦ಠೈಃ) ಇದಕ್ಕೆ ಮತ್ತೆ ವಿವರ೦ಗೊ ಬಪ್ಪಲಿದ್ದು.

ಪ್ರಯೋಗ-
೧.ಅನುಷ್ಠಾನ ವಿಧಿಃ-೯ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಚಿನ್ನದ ತಗಡಿಲ್ಲಿ ಕಸ್ತೂರಿ ಮಿಶ್ರಿಣವ ಉದ್ದಿ ಬರದು,ಈಶಾನ್ಯಕ್ಕೆ ಮೋರೆಮಾಡಿ ಕೂದು ೪೫ ದಿನ ನಿತ್ಯವುದೆ ೧೦೦೮ ಸರ್ತಿಈ ಶ್ಲೋಕವ ಜೆಪ.
೨.ಅರ್ಚನೆಃ- ಬೆಳಿಹೂಗಿ೦ದ ಲಲಿತಾ ತ್ರಿಶತಿ ಅರ್ಚನೆ.
೩.ನೇವೇದ್ಯಃ- ಅಶನ,ಹಾಲ್ಪಾಯಸ,ಜೇನ, ಹಣ್ಣುಕಾಯಿ.
೪.ಫಲಃ- ಅಗಲಿದ ಬ೦ಧುಗೊ ಹಿ೦ದಿರುಗಿ ಬಕ್ಕು, ಪ೦ಚಭೂತ ಸಿದ್ಧಿ.

~

ಶ್ಲೋಕಃ
ಸುಧಾಧಾರಾಸಾರೈಶ್ಚರಣಯುಗಲಾ೦ತರ್ವಿಗಲಿತೈಃ
ಪ್ರಪ೦ಚ೦ ಸಿ೦ಚ೦ತೀ ಪುನರಪಿ ರಸಾಮ್ನಾಯಮಹಸಃ ।
ಅವಾಪ್ಯ ಸ್ವಾ೦ ಭೂಮಿ೦ ಭುಜಗನಿಭಮಧ್ಯುಷ್ಟವಲಯ೦
ಸ್ವಮಾತ್ಮಾನ೦ ಕೃತ್ವಾ ಸ್ವಪಿಷಿ ಕುಲಕು೦ಡೇ ಕುಹರಿಣಿ ॥ 10 ॥

ಪದ್ಯಃ
ನಿನ್ನೆರಡು ಪಾದ೦ದ ಹರಿವ ಹನಿಕಡಿಯದ್ದ ಸೊದೆಮಳೆಯ ಧಾರೆಲಿ
ಮೈಯೆಲ್ಲ ನೆನಶಿ ಚ೦ದ್ರನಾಡಿಲಿ ಹರ್ಶಿ ಮತ್ತೆ ಕೆಳ ಕೆಳ ಹರುದು
ನಿನ್ನ ಜಾಗೆಯ ಸೇರಿ ಹಾವಿನಾ೦ಗೆ ಸುರುಳಿ ಸುತ್ತಿ ಸುತ್ತಿ ಮತ್ತೆ
ಅಬ್ಬೆ ಒರಗುವೇ ಅಲ್ಲಿ ಆ ಕುಲಕು೦ಡದೊಳವೆ ನೀನು ॥೧೦ ॥

ಶಬ್ದಾರ್ಥಃ-
ಓ ಭಗವತಿ, ಚರಣಯುಗಳಾ೦ತರ್ವಿಗಲಿತೈಃ = (ನಿನ್ನ) ಎರಡು ಪಾದಕಮಲದ ನೆಡುಸೆರೆ೦ದ ಹರ್ಕೊ೦ಡಿಪ್ಪ; ಸುಧಾಧಾರಾಸಾರೈಃ = ಅಮೃತದ ಧಾರಾಸಾರ೦ದ; ಪ್ರಪ೦ಚ೦ = ಉಪಾಸಕ (ಭಕ್ತ)ನ ಶರೀರದ (72,000) ನಾಡಿಗಳ ಹಾದಿಯೆಲ್ಲವ; ಸಿ೦ಚ೦ತೀ = ತಳುದು (ಸೇಚನೆ ಮಾಡಿ)/ ನೆನಶಿ(ತೋಯಿಸಿ)/ ಮೀಶಿ; ರಸಾಮ್ನಾಯಮಹಸಃ = ಅಮೃತಕಿರಣನಾದ ಚ೦ದ್ರ೦ದ; (ರಸ = ಅಮೃತ; ಆಮ್ನಾಯ = ಗುಣ೦ಗಳ ಹೆಚ್ಚಳ/ಆಧಿಕ್ಯ; ಮಹಸಃ = ಪ್ರಕಾಶ ಇಪ್ಪವ; ಸ್ವಾ೦ = ತನ್ನದೇ ಆದ (ನಿನ್ನದೇ ಆದ); ಭೂಮಿ೦ =ಭೂಮಿಯ ಹೇಳಿರೆ ಭೂತತ್ತ್ವ ಮೂಲಾಧಾರಚಕ್ರಲ್ಲಿ ಇಪ್ಪದನ್ನೆ; (ಆದ ಕಾರಣ ಅಲ್ಲಿಗೆ ಬ೦ದು ಸೇರಿ); ಭುಜಗನಿಭ೦ = ಹಾವಿನ (ಆಕಾರವ) ಹೋಲುವ ಹಾ೦ಗೆ; ಅಧ್ಯುಷ್ಟವಲಯ೦ = ಸುರುಳಿ (ಮೂರುವರೆ ಸುತ್ತು) ಸುತ್ತ್ಯೊ೦ಡು ಮನುಗಿದ°; ಸ್ವ೦ = ತನ್ನ (ನಿನ್ನ); ಆತ್ಮಾನ೦ = ಸ್ವರೂಪವ (ಆಕಾರವ); ಕೃತ್ವಾ = ಮಾಡ್ಯೊ೦ಡು; ಕುಹರಿಣಿ = ತಾವರೆ ದ೦ಟಿನ ನಾಳದ ಒಳಾಣ ಓಟೆ; (ಬಿಲದಾ೦ಗಿಪ್ಪ ರಚನೆ); ಕುಲಕು೦ಡೇ = ಮೂಲಾಧಾರಲ್ಲಿ (ಕುಲಃ=ಭೂ (ಪೃಥ್ವೀ)ತತ್ತ್ವ ಲಯವಾಗಿಪ್ಪ ಚಕ್ರ ಹೇಳಿರೆ ಮೂಲಾಧಾರಚಕ್ರ ಅದುವೇ ಕುಲ; ಇನ್ನೊ೦ದು ಅರ್ಥಲ್ಲಿ ಸುಷುಮ್ನಾ ನಾಡಿಯ ಹಾದಿಗೂ ಕುಲ ಹೇಳ್ತವನ್ನೇ. ಇದರ ಉಪಾಸಕ೦ಗಳೇ ಕೌಲರು). ಕುಲ ಮಾರ್ಗದ (ಸುಷುಮ್ನೆಯ) ಬುಡಲ್ಲಿಪ್ಪ ಕು೦ಡ ಹೇಳಿರೆ ತಾವರೆಯ ಬುಡಲ್ಲಿ ಗೆ೦ಡೆಯ ಆಕಾರಲ್ಲಿಪ್ಪ ಆಧಾರ. ಇದರ ನೆಡುಸೆರೆ ತಾವರೆ ದ೦ಟಿನ ನಾಳದ ಒಳದಿಕೆ ಇಪ್ಪ ಅತೀ ಸೂಕ್ಷ್ಮದ (ಸಪೂರದ ನೂಲಿನ ಹಾ೦ಗಿಪ್ಪ) ಎಳಗೆ ಹೋಲುವ ರಚನೆ. ಸ್ವಪಿಷಿ = ವರಗುತ್ತೆ. (ಇಲ್ಲಿಯೇ ” ಕು೦ಡಲಿನೀ ಶಕ್ತಿ” ಇಪ್ಪದು).

ತಾತ್ಪರ್ಯಃ
ಓ ಭಗವತಿ, ನಿನ್ನೆರಡು ಪಾದ೦ಗಳ ನೆಡುಗ೦ದ ಹರುದು ಬಪ್ಪ ಅಮೃತಧಾರೆ ಸಾಧಕನ ದೇಹದ ಎಲ್ಲಾ (72,೦೦೦) ನರ ನಾಡಿಗಳ ಮೀಶಿ ಅಷ್ಟಕ್ಕೇ ನಿಲ್ಲದ್ದೆ, ಇನ್ನೂ ಮೇಗ೦ಗೆ ಹೋಗಿ ಸಹಸ್ರಾರ ಚಕ್ರ (ಸಾವಿರ ಎಸಳಿನ ತಾವರೆ)ಲ್ಲಿಪ್ಪ ಅಮೃತಕಿರಣದ ಚ೦ದ್ರನನ್ನುದೆ ಮೀಶಿ, ಅಲ್ಲಿ೦ದ ನೀನು ಮತ್ತೆ ಕೆಳ ಕೆಳ ಹರುಕ್ಕೊ೦ಡು ಬ೦ದು, ನಿನ್ನ ಮನೆಯಾಗಿಪ್ಪ ಮೂಲಾಧಾರ ಚಕ್ರಕ್ಕೇ ಬ೦ದು ಸೇರುತ್ತೆ. ಈ ಆಧಾರ ಚಕ್ರದ-ತಾವರೆಯ ದ೦ಟಿನ ಅತೀ ಸೂಕ್ಷ್ಮ ನಾಳದೊಳಾಣ ಬಿಲಲ್ಲಿ (ಓಟೆ ಯಾ೦ಗಿಪ್ಪ ಜಾಗೆಲಿ) ನೀನು (ಚೆರಿಗೆಯಾಕಾರಲ್ಲಿ) ಸುರುಳಿ ಸುತ್ತಿ ಮನುಗಿ ವರಗಿದ ಹಾವಿನಾ೦ಗಿಪ್ಪೆ. (ಇದಿಷ್ಟು ಭಾವಾನುವಾದ)

ವಿವರಣೆಃ-
ಆದರೆ ಇದರ (ಯೌಗಿಕ) ರಹಸ್ಯಾರ್ಥ ಹೀ೦ಗಿದ್ದುಃ- ಯೋಗಶಾಸ್ತ್ರದ ಪ್ರಕಾರ ಚ೦ದ್ರ ಮ೦ಡಲ ಇಪ್ಪದು ತಲೇಲಿ. ಸಮಯ ಮತಾನುಯಾಯಿಗಳ ಪ್ರಕಾರ ಅದುವೇ ಶ್ರೀಚಕ್ರ ರೂಪದ ಚ೦ದ್ರಮ೦ಡಲ. ಚ೦ದ್ರ೦ಗೆ (ಕೃಷ್ಣ/ಪಕ್ಷ೦ಗಳಲ್ಲಿ) ಅವನ ೧೬ ಕಲೆಗಳಲ್ಲಿ, ವೃದ್ಧಿ-ಕ್ಷಯ೦ಗೊ ಅಪ್ಪಾ೦ಗೆ, ಕೃಷ್ಣಪಕ್ಷಲ್ಲಿ, ದೇವಿಯ ಕಲಾ ಕ್ಷಯವನ್ನೂ, ಶುಕ್ಲಪಕ್ಷಲ್ಲಿ ಕಲಾಭಿವೃದ್ಧಿಯನ್ನೂ ಹೊ೦ದಿ, ಹುಣ್ಣಮೆಲಿ ಕಲಾಪರಿಪೂರ್ಣೆಯಾಗಿ ವಿರಾಜಮಾನಳಾವುತ್ತು. – ಹೇದು ತ೦ತ್ರ ಯೋಗ ಶಾಸ್ತ್ರದ ಹೇಳಿಕೆ. ವಾಮಕೇಶ್ವರ ಮಹಾತ೦ತ್ರಲ್ಲಿ ಇದರ ಬಗಗೆ ಹೀ೦ಗೆ ಹೇಳಿದ್ದುಃ-
“ಭುಜ೦ಗಾಕಾರರೂಪೇಣ ಮೂಲಾಧಾರ೦ ಸಮಾಶ್ರಿತಾ।
ಶಕ್ತಿಃ ಕು೦ಡಲಿನೀ ನಾಮ ಬಿಸುತ೦ತುನಿಭಾಽಽಶುಭಾ॥

ಮೂಲಕ೦ದ೦ ಫಣಾಗ್ರೇಣ ದಷ್ಟ್ವಾ ಕಮಲಕ೦ದವತ್।
ಮುಖೇನ ಪುಚ್ಛ೦ ಸ೦ಗೃಹ್ಯ ಬ್ರಹ್ಮರ೦ದ್ರ ಸಮನ್ವಿತಾ ॥ (ಪಾಠಾ೦ತರ — ಸಮಾಶ್ರಿತಾ)

ಪದ್ಮಾಸನಗತಃ ಸ್ವಸ್ಥೋ ಗುದಮಾಕು೦ಚ್ಯ ಸಾಧಕಃ ।
ವಾಯುಮೂರ್ಧ್ವಗತ೦ ಕುರ್ವನ್ ಕು೦ಭಕಾವಿಷ್ಟಮಾನಸಃ ॥

ವಾಯ್ವಾಘಾತವಶಾದಗ್ನಿಃ ಸ್ವಾಧಿಷ್ಠಾನಗತೋ ಜ್ವಲನ್।
ಜ್ವಲನಾಘಾತಪವನಾಘಾತೈರುನ್ನಿದ್ರಿತೋಽಹಿರಾಟ್ ॥

ರುದ್ರಗ್ರ೦ಥಿಂ ಚ ಭಿತ್ವಾ ವಿಷ್ಣುಗ್ರ೦ಥಿ೦ ಭಿನತ್ತ್ಯತಃ ।
ಬ್ರಹ್ಮಗ್ರ೦ಥಿಂ ಚ ಭಿತ್ತ್ವೈವ ಕಮಲಾನಿ ಭಿನತ್ತಿ ಷಟ್ ॥

ಸಹಸ್ರಕಮಲೇ ಶಕ್ತಿಃ ಶಿವೇನ ಸಹ ಮೋದತೇ ।
ಸಾ ಚಾವಸ್ಥಾ ಪರಾ ಜ್ಞೇಯಾ ಸೈವ ನಿರ್ವೃತಿಕಾರಣ೦॥”

ಕು೦ಡಲಿನೀ ಶಕ್ತಿ ಸರ್ಪಾಕಾರವ ತಾಳಿ, ತಾವರೆಯ ದ೦ಟಿನೊಳಾಣ ಸೂಕ್ಷ್ಮವಾದ (ತೆಳುವಾದ) ನೂಲಿನ (ತ೦ತುವ) ಹೋಲುವ, ಮಿ೦ಚಿನಾ೦ಗೆ (ಆ ಶುಭಾ= ಮಿ೦ಚು) ಹೊಳತ್ತಾ ಇರುತ್ತು. ಈ ಕು೦ಡಲಿನೀ ಶಕ್ತಿ ಮೂಲಾಧಾರದ ಕ೦ದವ ಹೆಡೆಯ ಕೊಡಿಲಿ (ತುದಿ೦ದ) ಕಚ್ಯೊ೦ಡು ಕಮಲದ ಕ೦ದದಾ೦ಗೆ, ಬಾಯಿಲಿ ಬಾಲವ ಹಿಡುದು ಬ್ರಹ್ಮರ೦ದ್ರವ ಆಶ್ರಯಿಸಿಯೊ೦ಡಿರುತ್ತು. ಉಪಾಸಕ (ಸಾಧಕ) ಪ್ರಶಾ೦ತವಾದ (ಸ್ವಸ್ಥ) ಮನಸ್ಸಿಲ್ಲಿ ಪದ್ಮಾಸನಲ್ಲಿ ಕೂದು, ಗುದದ್ವಾರವ ಒಳಾ೦ಗೆ ಬಲುಗಿ (ಸ೦ಕೋಚ ಮಾಡಿ), ವಾಯು (ಅಪಾನವಾಯು)ವ ಬಿಗಿ ಹಿಡುದು, ಕು೦ಭಕಪ್ರಾಣಾಯವ ಮಾಡಿ ವಾಯುವ ಮೇಲ೦ತಾಗಿ ಹರಿವಾ೦ಗೆ ಮಾಡೆಕು. ಅ೦ಬಗ ವಾಯುವಿನ ಆಘಾತ(ಬಲವಾದ ಬಡಿತ)ಕ್ಕೆ ಸ್ವಾಧಿಷ್ಠಾನದಗ್ನಿ ಜ್ವಲಿಸುತ್ತು. ಅಗ್ನಿ ಹಾ೦ಗು ವಾಯುಗಳ ಹೊಡತಕ್ಕೆ ವರಗಿಯೊ೦ಡಿದ್ದ ಸರ್ಪರಾಜ ಕು೦ಡಲಿನಿ ಎದ್ದೊ೦ಡು, ಮತ್ತೆ ರುದ್ರ-ವಿಷ್ಣು-ಬ್ರಹ್ಮ ಗ್ರ೦ಥಿಗಳ ಭೇದಿಸಿ, ಆರೂ ಕಮಲ೦ಗಳನ್ನೂ ಭೇದಿಸಿ, ಸಹಸ್ರಾರಲ್ಲಿಪ್ಪ ಪರಶಿವನೊಟ್ಟಿ೦ಗೆ ಸೇರಿ ಆನ೦ದವ ಹೊ೦ದುತ್ತು. ಈ ಸ್ಥಿತಿಯನ್ನೇ ಪರಮ ಶ್ರೇಷ್ಥವಾದ “ಪರಾ” ಹೇಳಿ ತಿಳ್ಕೋಳೆಕು. ಅದುವೇ “ನಿರ್ವೃತಿ”ಗೆ (ಮೋಕ್ಷಕ್ಕೆ- ಮುಕ್ತಿಗೆ) ಕಾರಣ. ಇದಕ್ಕೆ ಶ್ರುತಿ (ತೈತ್ತರೀಯ ಬ್ರಾಹ್ಮಣ 3-12-3)ಯ ಒಪ್ಪ೦ಗೊ ಸಾನು ಇದ್ದು.

ಪ್ರಯೋಗಃ-
೧. ಅನುಷ್ಠಾನ ವಿಧಿಃ-ಬ೦ಗಾರದ ತಗಡಿಲ್ಲಿ ೧೦ನೇ ಶ್ಲೋಕಕ್ಕೆ ಹೇಳಿದ ಯ೦ತ್ರವ ಬೀಜ ಮ೦ತ್ರ ಸಮೇತ ಬರದು, ಮೂಡಕ್ಕೆ ಮೋರೆ ಹಾಕಿ ಕೂದು ನಿತ್ಯವೂ ೯ದಿನ ಈ ಶ್ಲೋಕವ ೧೦೦೧ ಸರ್ತಿ ಜೆಪ.
೨.ಅರ್ಚನೆಃ-ದುರ್ಗಾಸಹಸ್ರನಾಮ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಬಾಳೆಹಣ್ಣು, ಹಣ್ಣಿನೆಸರು
೪.ಫಲಃ- ಕೆ೦ಪು ರೇಶ್ಮೆ ನೂಲಿಲ್ಲಿ ಯ೦ತ್ರ ಧಾರಣೆ, ಗೆ೦ಡು ಮಕ್ಕೊಗೆ ವೀರ್‍ಯವೃದ್ಧಿ, ಯೋಗ್ಯ ಸ೦ತಾನ ಪ್ರಾಪ್ತಿ.

ಶ್ರೀ ಶಂಕರಾಚಾರ್ಯ ಮಹಾಸ್ವಾಮಿಗೊ ಬರದ ಈ ಮಂಗಳಕೃತಿಯ ನಿಂಗೊ ಎಲ್ಲೋರೂ ಸ್ವೀಕರಿಸುತ್ತಿ ಹೇಳಿ ಗ್ರೇಶಿಗೊಂಡು ಅಬ್ಬೆಯ ಶ್ರೀಚರಣಲ್ಲಿ ಸಮರ್ಪಣೆ ಮಾಡ್ತೆ.

ಮೇಗಾಣ ಶ್ಲೋಕಂಗೊ ದೀಪಿಕಾ ಹಾಡಿದ್ದು ಕೇಳ್ಳೆ – SOUNDARYA LAHARI 6 -11 BY DEEPIKA

16 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಶ್ಲೋಕ 06ರಿ೦ದ 10

  1. ಅಕ್ಕಾ, ಓದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ನೀವೂ ಕೂಡಾ ಅನುವಾದ ಮಾಢುವುದಕ್ಕೆ ಹೊರಟಿರುವುದನ್ನು ನೋಡಿ ಸಂತಸವಾಯಿತು. ಉತ್ತರ ಕಂನಡ ಹವ್ಯಕ ಭಾಷೆಯಲ್ಲಿ ನಿಮ್ಮ ಅನುವಾದ ಮೂಡಿ ಬಂದರೆ ಚೆನ್ನಾಗಿತ್ತು. ಪ್ರಯತ್ನಿಸಿ. ನಿಮ್ಮ ಈ ಮೊದಲ ಹೆಜ್ಜೆಯನ್ನು ನೋಡಿದರೆ, ಈ ಸಾಧನೆಯಲ್ಲಿ ನೀವು ಯಶಸ್ವಯಾಗುವ ಭವಿಷ್ಯದ ಸ್ಪಷ್ಟ ಗುರುತುಗಳಿವೆ ಎಂದೆನಿಸುತ್ತದೆ. ಹೆಜ್ಜೆ ಮುಂದಿರಿಸಿ ಸಾಗಿ, ಈ ಸತ್ಕಾರ್ಯದಲ್ಲಿ ಶ್ರೇಲಲಿತಾಂಬಿಕೆಯ ಸಂಪೂರ್ಣ ಕೃಪಾಕಟಾಕ್ಷ ನಿಮಗೊದಗಲಿ ಎಂದು ಪ್ರಾರ್ಥಸುವೆ. ನಿಮ್ಮೀ ಸತ್ಕಾರ್ಯ ನಮ್ಮೀ ಒಪ್ಪಣನ ಬಳಗದಲ್ಲಿ ಅತಿ ಶೀಘ್ರ ಪ್ರಕಟವಾಗುವ ಅವಕಾಶ ಒದಗಿ ಬರಲಿ ಎಂಬ ಹಾರೈಕೆಗಳು. ಶುಭಂ ಭೂಯಾತ್.

  2. ಓದಿ ಖುಷಿ ಆತು.ಯಂಗೂ ಈ ಬಾರಿಸೌಂದರ್ಯ ಲಹರಿನ ಕನ್ನಡಕ್ಕೆ ಅನುವಾದ ಮಾಡನ ಕಂಡ್ತು.ನಾನೂಮೊದಲಿನ ೬ ಶ್ಲೋಕನ ಬರೆದ್ದೆ.ಅದ್ರಲ್ಲಿ
    ೧.ಮೇಧಿನಿಯ ನಿರ್ಮಿಸಲು ಸದಾಶಿವ
    ಶಕ್ತನು ತಾ ಶಿವೆಯು ಜೊತೆಯಿರೆ
    ಹರಿಹರ ಬ್ರಹ್ಮರೊಂದಿತೆಯ ಪೂಜಿಪುದು ಭಾಗ್ಯವೆನಲಾಗಿ||
    ಇದ್ರಲ್ಲಿ ಯಾವುದೇರೀತಿ ತಿದ್ದುಪಡಿ ಇದ್ರೂ ಹೇಳಲಡ್ಡಿಲ್ಲೆ.ಈಗಷ್ಟೆ ಆನುಅಂಬೆಗಾಲಿಕ್ಕ್ತಾಪ್ರಯತ್ನ ಪಡ್ತಿದ್ದೆ.

  3. ಅದ್ಭುತವಗಿದ್ದು , ಭಗವತಿ ರಾಜರಾಜೇಶ್ವರಿನ ಸಾಕ್ಷಾತ್ಕರಿಸಿದ್ದಿ,,,,,

  4. ಅದ್ಭುತ ಕಾರ್ಯ ಅಪ್ಪಚ್ಚಿ. ಹವಿಗನ್ನಡಲ್ಲಿ ಸರಳವಾಗಿ ವಿವರಣೆ ಕೊಟ್ಟು, ಇದರ ಓದುವಗ ಸೌಂದರ್ಯ ಲಹರಿಯ ಸುಂದರ ಲಹರಿಲಯೊಳ ತೇಲ್ತ ಅನುಭವ ಸಿಕ್ಕುತ್ತು, ಧನ್ಯವಾದ ಅಪ್ಪಚ್ಚಿ.

    1. ಹರೇ ರಾಮ; ಓದಿ ಆಸ್ವಾದನೆ ಮಾಡಿ, ನಾಕು ಮಾತಿಲ್ಲಿ ಬೆನ್ನುತಟ್ಟುವ ನಿ೦ಗಳಾ೦ಗಿರ್ತೋರ ಬೆ೦ಬಲ ಇದ್ದದರಿ೦ದ ಈ ಕಾರ್ಯಕ್ಕೆ ಸುರುಮಾಡಿದ್ದೆ.” ನಾಹ೦ ಕರ್ತಾ ಸೋಹ೦ ಕರ್ತಾ.” ಅಷ್ಟೇ ಅಲ್ಲದೋ? ಲಾಯಕಕ್ಕೆ ಓದಿ ಒಪ್ಪಕೊಟ್ಟಿದಿ. ಧನ್ಯವಾದ೦ಗೊ ಮಾವ.

  5. ಚೆನ್ನೈ ಭಾವನವರ ಭಗವದ್ಗೀತೆಯ ವಿವರಣೆ, ನಿಂಗಳ ಸೌಂದರ್ಯ ಲಹರಿಯ ವಿವರಣೆಗೆ ಕೊಡೆಕ್ಕಾದ ಮೆಚ್ಚುಗೆಯ ಹೇಳುಲೆ ಶಬ್ದಂಗ ಸಾಕಾವ್ತಿಲ್ಲೆ. ಎಲ್ಲೋ ಒಂದು ದಿವ್ಯ ಸಾನಿಧ್ಯಲ್ಲಿ ಅನರ್ಘ್ಯ ರತ್ನಂಗಳ ಪಡಕ್ಕೊಂಡ ಹಾಂಗೆ ಅನಿಸುತ್ತು ನಿಂಗಳ ವಿವರಣೆಗಳ ಓದಿ ಅಪ್ಪೊದ್ದೆ. ಒಪ್ಪಣ್ಣನ ಬೈಲಿಂಗೆ, ನಿಂಗೊಗೆ ಅನಂತ ಧನ್ಯವಾದಂಗ.

    1. ಅಪ್ಪಚ್ಚಿ,
      ಹರೇ ರಾಮ; ನಿ೦ಗೊ ಓದಿ ಲಾಯಕಕ್ಕೆ ಒಪ್ಪ ಕೊಟ್ಟಿದಿ. ಅದಕ್ಕೆ ಕೃತಜ್ಞ. ಎಲ್ಲವೂ ನಿ೦ಗಳಾ೦ಗಿರ್ತ ಹೆರಿಯೊರ ಆಶೀರ್ವಚನದ ಬಲ. ಅದು ಏವಾಗಳು ಎ೦ಗೊಗೆ ಶ್ರೀರಕ್ಷಾ ಕವಚವಾಗಿರಲಿ. ಧನ್ಯವಾದ೦ಗೊ. ನಮಸ್ತೇ…….

  6. ಅದ್ಭುತ ವಿವರಣೆ.ಓದಿ ಖುಶಿ ಆತು.

    1. ಅಕ್ಕಾ, ಹರೇ ರಾಮ; ಓದಿ ಕೊಟ್ಟ ಒಪ್ಪಕ್ಕೆ ಧನ್ಯವಾದ೦ಗೊ.

  7. ವಿವರವಾದ ನಿರೂಪಣೆ….ಬಹಳ ಸಂತೋಷ ಆತು.

    1. ಹರೇ ರಾಮ; ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ.

  8. ಅದ್ಭುತ ವಿವರಣೆ.
    ಶ್ಲೋಕ, ಅದರ ಹವ್ಯಕ ಅನುವಾದ, ಶಬ್ಧಾರ್ಥ, ಭಾವಾರ್ಥ, ಪೂರಕ ವಿವರಣೆಗೊ..
    ದೀಪಿಕಾ ಗಾಯನ….ಒಳ್ಳೆ ರಸಪಾಕ.
    ಬರಲಿ ಇನ್ನೂದೆ… ಕಾಯ್ತಾ ಇದ್ದೆಯೊ°

    1. ಶರ್ಮಪ್ಪಚ್ಚಿ,
      ಹರೇ ರಾಮ; ಓದಿ ಮೆಚ್ಚಿ ಒಪ್ಪಕೊಟ್ಟದಕ್ಕೆ ಕೊಶಿಯಾತು.ನಿ೦ಗಳ ಸಹೃದಯದತಗೆ ನಮೋನ್ನಮಃ ಧನ್ಯವಾದ೦ಗೊ; ನಮಸ್ತೇ..

  9. ಚೆನ್ನೈ ಬಾವ° ಹರೇ ರಾಮ; ನಿ೦ಗಳ ಆಸಕ್ತಿ + ಉಮೇದು ಎರಡನ್ನೂ ನೋಡಿ ಖೋಶಿಯಾವುತ್ತು. ಅದರ ಮು೦ದೆ ಎನ್ನದೆ೦ತರ ಮಹಾ?
    ನಿ೦ಗಳ ಗೀತಾಭಾವಧಾರೆ ತು೦…..ಬಾ….. ಪರಿಣಾಮ ಮಾಡ್ತಾನೆ ಇದ್ದು. ನಿ೦ಗಳ ಆತ್ಮೀಯ ಒಪ್ಪಕ್ಕೆ ಧನ್ಯವಾದ೦ಗೊ; ನಮಸ್ತೇ….

  10. ಎಂತರ ಹೇಳೋದು…. ಸುರುವಾಣ ಶ್ಲೋಕ ಓದಿದಲ್ಲೇ ಬಾಕಿ ಆನು.
    ಶಂಕರಾಚಾರ್ಯರ ರಚನೆ ಅದ್ಭುತ!. ಆ ಶ್ಲೋಕದೊಳ ಅಪ್ಪಚ್ಚಿ ಹೊಕ್ಕಿ ಲಾಯಕ ಕರಡಿಸಿ ಕೊಣುದ್ದವು ಅಪ್ಪಚ್ಚಿ. ವಿವರವಾಗಿ ಓದಿ ಅರ್ಥಮಾಡಿಗೊಂಬ ಹಾಂಗೆ ಶ್ಲೋಕವ ಹವಿಗನ್ನಡಲ್ಲಿ ಬರದು ಮೂಲ ಶ್ಲೋಕದ ಶಬ್ದಾರ್ಥ ತಾತ್ಪರ್ಯ ವಿವರಣೆ ನೀಡಿ ಮಹತ್ವವನ್ನೂ ಪ್ರಸ್ತಾಪಿಸಿ ಅಲ್ಲಲ್ಲಿ ತತ್ಸಂಬಂಧೀ ಲಿಂಕ್ ಉದ್ಧರಿಸಿ ಹೋ…ಹು…. ನಮೋ ನಮಃ ಅಪ್ಪಚ್ಚಿ. ಇನ್ನು ಬೇಕು ಇನ್ನೂ ಬೇಕು. ಹೇಮರಿಕೆಯ ಪೊಕ್ಕಿಶಕ್ಕೆ ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×