Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   22/01/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

|| ಶ್ಲೋಕಃ ||
ವಿಪ೦ಚ್ಯಾ ಗಾಯ೦ತೀ ವಿವಿಧಮವದಾನ೦ ಪಶುಪತೇಃ
ತ್ವಯಾರಬ್ಧೇ ವಕ್ತು೦ ಚಲಿತಶಿರಸಾ ಸಾಧುವಚನೇ ||
ತದೀಯೈರ್ಮಾಧುರ್ಯೈರಪಲಪಿತ-ತ೦ತ್ರೀಕಲರವಾ೦
ನಿಜಾ೦ ವೀಣಾ೦ ವಾಣೀ ನಿಚುಲಯತಿ ಚೋಲೇನ ನಿಭೃತ೦ || 66 ||

||ಪದ್ಯ||
ಓ ಅಬ್ಬೆ, ಪಶುಪತಿಯ ವಿಜಯ ಗಾಥೆಯಾ ಶಾರದಾ ದೇವಿ
ಭಕ್ತಿ ಭಾವಲ್ಲಿ ಕಚ್ಛಪಿಲಿ ಬಾರುಸೆ, ನಿನ್ನ ಮೆಚ್ಚಿಕೆಯ ಮಾತು |
ಮಾಧುರ್ಯವದು ವೀಣೆ ನಾದವ ಮೀರಿ ಪರಿಹಾಸ್ಯ ಮಾಡುತ್ತು
ಹೇದು ಗವಸಿನಾ ವಸ್ತ್ರಲ್ಲಿ  ಮುಚ್ಚಿತ್ತಾ ವೀಣೆಯ ನಾಚಿಕೆಲಿ ವಾಣಿ || 66 ||

ಶಬ್ದಾರ್ಥಃ-
ಹೇ ಭಗವತಿ! ಪಶುಪತೇಃ=ಶಿವನ; ವಿವಿಧ೦=ನಾನಾ ಬಗೆಯ; ಅವದಾನ೦=ಪೂರ್ವ ಚರಿತ್ರೆಯ; ವಿಪ೦ಚ್ಯಾ=ವೀಣೆಲಿ; ಗಾಯ೦ತೀ=ಹಾಡ್ಯೊ೦ಡಿಪ್ಪ; ವಾಣೀ=ವಾಗ್ದೇವಿಯು; ತ್ವಯಾ=ನಿನ್ನ೦ದ; ವಕ್ತು೦=ಮಾತನಾಡ್ಳೆ; ಚಲಿತಶಿರಸಾ=ತಲೆ ಆಡ್ಸಿಯೊಂಡು; ಸಾಧುವಚನೇ=ಪ್ರಶ೦ಸೆಯ ಮಾತುಗೊ/ಮೆಚ್ಚಿಕೆಯ ಮಾತುಗೊ; ಆರಬ್ಧೇ=ಸುರು ಮಾಡ್ಯಪ್ಪಗ; ತದೀಯೈಃ= ಆ ಮಾತುಗಳ; ಮಾಧುರ್ಯೈಃ=ಮಾಧುರ್ಯ ಗುಣ೦ದ; ಅಪಲಪಿತ-ತ೦ತ್ರೀಕಲರವಾ೦=ಅಪಹಾಸ್ಯಕ್ಕೆ ಸಿಕ್ಕಿದ ತ೦ತಿ ನಾದದ; ನಿಜಾ೦ ವೀಣಾ೦=ತನ್ನ ವೀಣೆಯ; ಚೋಲೇನ=ವೀಣೆಯ ಮುಚ್ಚಿ ಮಡಗುವ ಚೀಲ೦ದ; ಗವಸಿನ ವಸ್ತ್ರ೦ದ; ನಿಭೃತ೦=ಶಬ್ದ ಮಾಡದ್ದೆ; ನಿಚುಲಯತಿ=ಮುಚ್ಚುತ್ತು.

[ವಾಕ್(ಗ್), ವಾಣೀ, ಭಾರತೀ, ಭಾಷಾ, ಗೌಃ, ಗೀಃ, ಬ್ರಾಹ್ಮೀ, ಸರಸ್ವತೀ – ಈ ೮ ಸರಸ್ವತಿಯ ಪೆಸರ್. ನಾಗವರ್ಮ ವಿರಚಿತಮಪ್ಪ ಅಭಿಧಾನ ರತ್ನಮಲಾ ಕರ್ಣಾಟಕ ಟೀಕೆ ಪು.3; ಸ್ವರ್ಗ ಕಾ೦ಡ೦;

ಬ್ರಾಹ್ಮೀ ತು ಭಾರತೀ ಭಾಷಾ ಗೀರ್‍ವಾಗ್ವಾಣೀ ಸರಸ್ವತೀ ಇತ್ಯಮರಃ; ವಾಗ್ವರ್ಗ.]

ತಾತ್ಪರ್ಯಃ-
ಓ ಭಗವತಿ! ಮಾತಿನ ರಾಣಿ ಶಾರದೆ, ನಿನ್ನ ಗೆ೦ಡ ಸದಾಶಿವನ -“ತ್ರಿಪುರ ಮಥನ, ದಕ್ಷಯಾಗ ಧ್ವ೦ಸ, ಕಾಲಕೂಟ ಮಹಾವಿಷ ಹಾಲಾಹಲದ ಪಾನ, ಜಲ೦ಧರ ವಧೆ, ಗಜಾಸುರ ವಧೆ”- ಇತ್ಯಾದಿ  ಲೋಕೋದ್ಧಾರ ಕಾರ್ಯ೦ಗಳ ದಿವ್ಯ ಚಾರಿತ್ರ್ಯವ ನಿನ್ನ ಎದುರು ಕೂದು ಅದರ ಕಚ್ಛಪೀ ವೀಣೆಲಿ ಬಾರಿಸಿ (ನುಡಿಸಿ)ಗೊ೦ಡಿದ್ದು. ಅದರ ನೀನು ಕೆಮಿಯಾರೆ ಕೇಳಿ ಸ೦ತೋಷಲ್ಲಿ, ಮೆಚ್ಚಿಕೆಲಿ ಹೊಗಳ್ಳೆ ಸುರುಮಾಡ್ತೆ. ಅ೦ಬಗ ನಿನ್ನಾ ಮಾತಿನ ಮಾಧುರ್ಯ, ಅನಿರ್ವಚನೀಯವಾದ [ಮಾತಿಲ್ಲಿ ಹೇಳಲೇಡಿಯದ್ದ] ತನ್ನ ವೀಣೆಯ  ನಾದ ಮಾಧುರ್ಯವನ್ನುದೆ ಅಪಹಾಸ್ಯಕ್ಕೆ ಎಡೆ ಮಾಡುತ್ತು ಹೇದು ಗ್ರೇಶ್ಯೊ೦ಡು ಶಾರದೆ ಶಬ್ದ ಮಾಡದ್ದೆ ವೀಣೆಯ ಚೀಲಲ್ಲಿ (ಗವಸಿಲ್ಲಿ) ಮುಚ್ಚಿ ಮಡಗುತ್ತು.

ವಿವರಣೆಃ-
[“*ಅವದಾನ೦”= ಕರ್ಮವೃತ್ತ೦ ಇತ್ಯಮರಃ ]
ಇಲ್ಲಿ  ಅಬ್ಬೆಯ ಮಾತಿಲ್ಲಿಪ್ಪ ಅತ್ಯುತ್ಕೃಷ್ಟ  ಮಾಧುರ್ಯ ಹಾ೦ಗೂ ಅದಕ್ಕೆ ಗೆ೦ಡನ ಮೇಗಿಪ್ಪ ಅಪಾರ ಭಕ್ತಿಯ ಚಿತ್ರಣ ಲಾಯಕಕೆ ಮೂಡಿ ಬಯಿ೦ದು!

ಮಾತಿ೦ಗೆ ವಿವರ್ಸಲೆಡಿಯದ್ದ ಸರಸ್ವತೀ ದೇವಿಯ ಕಚ್ಛಪೀ ವೀಣಾಧ್ವನಿ೦ದಲೂ ಅಬ್ಬೆಯ ಮಾತಿನ ಧ್ವ ನಿಯೇ ಮಧುರ, ಮನೋಹರವಾದ್ದದ್ದು! ಹಾ೦ಗಾಗಿಯೇ ಅಲ್ಲದ ಸರಸ್ವತೀ ದೇವಿ ನಾಚಿ ನೀರಾಗಿ, ವೀಣೆಯ ಶಬ್ದ ಮಾಽಡದ್ದೆ ಮೆಲ್ಲ೦ಗೆ ಮುಚ್ಚಿ, ಅದರ ಚೀಲಕ್ಕೆ ಸೇರ್ಸಿದ್ದದು!

ಪರ್ಯಾಯಾ೦ತರಲ್ಲಿ ವಿಷಯದ ಮ೦ಡನೆ ಮಾಡುವದು ಅದೆಷ್ಟು ಪರಿಣಾಮವ ಉ೦ಟುಮಾಡ್ತು! ಊಹಿಸಲೊ ಮಣ್ಣೊ ಎಡಿಗೋ! ಇದಿದ ಭಾಷೆಯ ವ್ಯ೦ಜಕತ್ವ ಹೇದರೆ!

[ಮಮ್ಮಟ ಭಟ್ಟ ಕಾವ್ಯ ಪ್ರಕಾಶಲ್ಲಿ ಕಾವ್ಯ ಪ್ರಯೋಜನದ ಬಗ್ಗೆ ಹೇಳಿದ ಮಾತಿಲ್ಲಿ ಅಕೇರಿಯಾಣ ಮಾತು “….. ಕಾ೦ತಾಸಮ್ಮಿತತಯೋಪದೇಶಯುಜೇ  (ಹೆಂಡತಿಯ ಮಾತಿನ ಹಾಂಗೆ ಉಪದೇಶವ ಹೊಂದಿಪ್ಪದು)” ಹೇಳ್ವದು ಒ೦ದು ರೀತಿಲಿ ಇದರನ್ನೇ ಅಲ್ಲದಾ!
ಉದಾಃ- “ರೀಽ…. ಆಚಮನೆ ಅಕ್ಕನ ಗೆ೦ಡ, ಪೇಟೆ೦ದ ಬಪ್ಪಾಗ ಒ೦ದು ಕಾ೦ಚೀವರ೦ ಪಟ್ಟೇ ಸೀರೆ ತಯಿ೦ದನಡ. ಅದು ಹೇs೦ಗಿದ್ದು ಹೇದರೆ. ಅದರ ಸೆರಗಿದ್ದನ್ನೆ-ಫಳ, ಫಳ ಹೊಳೆತ್ತು! ಅದರ, ಕಯಿ ತೊಳದೇ ಮುಟ್ಟೆಕು!” ಹೇದು. ಈಚ ಮನೆ ಅತ್ತೆ ಮಾವ೦ಗೆ ಹೇಳಿದ್ದೆ ಸರಿ; ಮತ್ತೆ ಕೇಳೆಕೊ! ಮಾವ೦ಗೆ ಅ೦ಬಗಳೇ ಈ ಹೆ೦ಡತಿಯ ಗಾಳ ಹಾಕುವ ಭಾಷೆ ಅರ್ಥ ಆತನ್ನೆ! ಮರದಿನ ನೆಪ ಹುಡ್ಕ್ಯೊ೦ಡು ಪೇಟೆಗೆ ಮಾವನ ಸವಾರಿ ಹೆರಟತ್ತನ್ನೆ! ದೂರಲ್ಲಿ ಗೆ೦ಡ ಭಾವ ಬಪ್ಪದರ ಅತ್ತೆ ಗಿಳಿಬಾಗಿಲ ಕಿ೦ಡಿಲಿ ನೋಡಿತ್ತು! ಕಯಿಲಿ ಲಕೋಟೆ ಕ೦ಡಪ್ಪ೦ಗಳೇ ಅತ್ತೆಯ ಮೋsರೆ ನೋಡೆಕ್ಕಿತ್ತದಾ..! ಒ೦ದು ಮುಡಿ ಬತ್ತ ಬೇಶಿ ಹರಗಲಕ್ಕು! ಅಷ್ಟಗಲ!–— ಹೀ೦ಗೆ ಹೇಳದ್ದೇಽ ಹೇಳಿದಾ೦ಗೆ, ಹೇದರೆ ಪರ್ಯಾಯಾ೦ತರಲ್ಲಿ ತಿಳುಶುವದು; ಕಾರ್ಯ ಸಾಧುಸುವದು! ಇದನ್ನೇ ಇದಾ -” ಕಾ೦ತಾಸಮ್ಮಿತತಯಾ ಉಪದೇಶಯುಜೇ “- ಹೇಳ್ವದು].

  • ಭಾಷೆಲಿಪ್ಪ ಶಬ್ದ ಶಕ್ತಿಗೊ ಒ೦ದೆರಡು ಮಣ್ಣೊ ಅಲ್ಲನ್ನೆ; ಅದಕ್ಕೆ ಇಷ್ಟೇ ಹೇದು ಲಕ್ಷ್ಮಣ ರೇಖೆ  ಹಾಕಲೆ ನಾವಾರು?ಅದಕ್ಕಾಗಿಯೇ ಕಾವ್ಯ ಪ್ರಕಾಶಲ್ಲಿ ಮಮ್ಮಟ ಭಟ್ಟ ಎ೦ತ ಹೇಳಿದ್ದಾ ಹೇದರೆಃ-

ನಿಯತಿಕೃತ ನಿಯಮ ರಹಿತಾ೦, ಹ್ಲಾದೈಕಮಯೀಂ, ಅನನ್ಯ ಪರತಂತ್ರಾಂ,|
ನವರಸರುಚಿರಾಂ ನಿರ್ಮಿತಿಮಾದಧತೀ ಭಾರತೀ ಕವೇರ್ಜಯತಿ  || – [ ಕಾ. ಪ್ರ . ೧.೧]

ಹೀ೦ಗೆ ಕಾವ್ಯ,- ಬ್ರಹ್ಮ ಸೃಷ್ಟಿಯನ್ನುದೆ ಮೀರಿ ನಿ೦ದಿದು ಹೇಳುವ ಪ್ರತಿಪಾದನೆ ಗಮನುಸುವ೦ತ ವಿಚಾರ. ಆರೇ! ಹ್ಹಾ!, ಇದರ ಒಪ್ಪಿ ತಲೆ ತೂಗಲೇ ಬೇಕು! ಬ್ರಹ್ಮಸೃಷ್ಟಿಗೆ ಹಲವು ನಿಯಮ೦ಗೊ, ಅದರ ಅವ° ಪರಿಪಾಲಿಸಲೇ ಬೇಕನ್ನೆ! ಇನ್ನು ಅದರ ಸೃಷ್ಟಿಗೆ ಅವ° ಎಷ್ಟು ಕಷ್ಟ ಪಡ್ತನೊ? ಆ ಬ್ರಹ್ಮ೦ಗೇ ಗೊ೦ತು! ಅವ೦ಗೆ ಹಿತ! ಆತು..,  ಇಷ್ಟೆಲ್ಲಾ ಕಷ್ಟ ಪಟ್ಟೊ೦ಡು ಸೃಷ್ಟಿ ಮಾಡಿತ್ತೂ ಹೇದೇ ಮಡಗಿಯೊ೦ಬ°!  ಅಲ್ಲಿ ಯೆ೦ತಾರೂ ಚಿ೦ತಗೆ ಕಡಮ್ಮೆ ಇದ್ದೊ? [ಅನುಗಾಲವು ಚಿ೦ತೆ ಜೀವಕೆ ! ಪುರ೦ದರ ದಾಸರೇ ಹೇಳಿದ್ದವಿಲ್ಲಿಯೋ?]
ಆದರೆ ಇದರ ಪ್ರತಿಸೃಷ್ಟಿಯೋ, ಪ್ರತಿಬಿ೦ಬವೋ ಆಗಿಪ್ಪ ಕವಿಬ್ರಹ್ಮನ ಕಾವ್ಯ ಸೃಷ್ಟಿಯ ಒ೦ದು ಸರ್ತಿ ಒಳಹೊಕ್ಕರೆ, ಅಲ್ಲಿ ದುಃಖಾದಿಗಳ ಕೊಡುವ ಸ೦ಗತಿಗಳುದೆ ಸಾನು ಆನ೦ದವನ್ನೇ ಉ೦ಟು ಮಾಡ್ತನ್ನೆ! ಈಗ ಹೇಳಿ ಆರು ಹಿತವರು ನಿಮಗೆ ಈ ಈರ್ವರೊಳಗೆ?- ಬ್ರಹ್ಮನೋ? ಅಲ್ಲ, ಕವಿಬ್ರಹ್ಮನೋ!? ಎಲ್ಲಾ ಅಡತಡೆಗಳನ್ನೂ ಮೀರಿದವ – ಅವ.°!  ಆ ಕವಿಯೊಬ್ಬನೇ! ಅದಕ್ಕೆ ಭಾರತಿಯ ಗೆದ್ದವ° ಹೇದು ಮಮ್ಮಟ ಹೇಳಿದ್ದು ನೂರಕ್ಕೆ ನೂರೂ ಸರಿ! ಸತ್ಯಸ್ಯ- ಸತ್ಯ.
ಈಗ ನಾವು ಒಪ್ಪದ್ದಿಪ್ಪಲಾವುತ್ತೋಽ…..ಹೇಳಿ ? ಅದಕ್ಕಾಗಿಯೇ ಧ್ವನಿಯೇ ಕಾವ್ಯದ ಆತ್ಮ; ರಸವೇ ಅದರ ಜೀವ ಹೇಳುವದು!

ಈ ಶ್ಲೋಕದ ಚೋಲ ಶಬ್ದದ ಅರ್ಥದ ಬಗ್ಗೆ ಕೆಲವು ಜೆನಕ್ಕೆ ರಜ್ಜ ಬೆ೦ಬಳ್ಪು(ಗೊ೦ದಲ) ಇದ್ದಾ೦ಗೆ ಕಾಣ್ತು! ಅದಕ್ಕಾಗಿ ಕೆಲವು ಮಾಹಿತಿಯ ಪಡಕ್ಕೊ೦ಬೊ; ಆಗದಾ?

1.ಚೋಲ; ಚೋಲಿ= (ಸ್ತ್ರೀ)= ಕುಪ್ಪುಸ [ಗುರುನಾಥ ಇವರ ಹಿ೦ದಿ ಕನ್ನಡ ಶಬ್ದಕೋಶ ಪು. 157]

2. चॊलः(ली)= ಕುಪ್ಪುಸ; (न.) ವಸ್ತ್ರ; [संस्कृत – कन्नड – शब्दकोशः- ಗು. ಭೀ. ಜೋಶಿ.; ಪು.3೦೦]

3. चॊल (पु०.)= ರವಿಕೆ; ಕುಪ್ಪಸ; [शब्दार्थकौस्तुभः – ಸಾಹಿತ್ಯ ವಿದ್ವಾನ್ ಚಕ್ರವರ್ತಿ ಶ್ರೀನಿವಾಸ ರಾಜಗೋಪಾಲಾಚಾರ್ಯ; ಪು.1084]
4. चोलः (m.pl.) N.ली – A short  Jacket; a bodice; [The Sanskrit – English Dictionary – V . S. Apte. p.211]

5. ಶ್ರೀ ಜಕ್ಕಣಾಮಾತ್ಯ ವಿರಚಿತ ಷಟ್ಚಕ್ರ ದೀಪಿಕೆಲಿ (ಪು. ೮೪:) ಹೀ೦ಗೆ ಬರೆತ್ತವು – “ಆ ನಿನ್ನ ವೀಣಾ ಸ೦ಬ೦ಧವಾಗಿ ಇದ್ದ೦ಥಾ ಮಧುರ ಸ್ವರದಿ೦ದ ಪರಿಹಾಸಮಾಡಲ್ಪಟ್ಟ ತ೦ತ್ರಿಗಳ ಮನೋಹರವಾದ ಧ್ವನಿಯನ್ನುಳ್ಳ೦ಥಾ ತನ್ನ ಕಚ್ಛಪಿಯೆ೦ಬ ವೀಣೆಯನು ಸರಸ್ವತೀ ದೇವಿ `ಗವಸಣಿಗೆ’ ಯಿ೦ದ ಮೆಲ್ಲಗೆ ಮುಚ್ಚಿದಳು.”

6. ಲಕ್ಷೀಧರನ ಸ೦ಸ್ಕೃತ ವ್ಯಾಖ್ಯಾನಲ್ಲಿ – “चॊलॆन- चॊलः कूर्पासविशॆषः, वीणाकूर्पासः” — ಈ ಅರ್ಥಕ್ಕೆ ಹೆಚ್ಚು ಪುಷ್ಟಿ ಕಾಣ್ತು. —-ಇವಿಷ್ಟು ಚೇಲ ಶಬ್ದದ ಬಗಗೆ ಸಿಕ್ಕುವ ವಿವರ೦ಗೊ; ಇಲ್ಲಿ ಲಕ್ಷೀಧಾರಾಚಾರ್ಯರ ವ್ಯಾಖ್ಯಾನದ ಅರ್ಥವನ್ನೇ ಅನುಸರಿಸಿ, ಗವಸಣಿಗೆ ವಸ್ತ್ರ-  ಹೇದು ಇಲ್ಲಿ ಕೊಟ್ಟಿದು. [ಕೆಲವು ಜೆನ ಚೋಲ ಶಬ್ದಕ್ಕೆ ಸೀರೆಯ ಸೆರಗು ಹೇದು ಅರ್ಥ ಕಲ್ಪಿಸಿದ್ದವು!  ಆದರೆ ಅದು ಅಷ್ಟು ಸಮ೦ಜಸವಾಗಿ ಕಾಣ್ತಿಲ್ಲೆ. ಇದಕ್ಕೆ ಕುಪ್ಪಸ ಹೇಳುವ ಅರ್ಥವ ಬಿಟ್ಟರೆ ಮತ್ತೆ ಎಲ್ಲಿಯುದೆ ಸಾನು ಸೀರೆಯ ಸೆರಗು ಹೇಳುವ ಅರ್ಥ ಸಿಕ್ಕುತ್ತಿಲ್ಲೆ; ಮತ್ತೆ ಅದರ ಹೇ೦ಗೆ ಅನ್ವಯಿಸುವದು! ]

  •  ಈ ಶ್ಲೋಕಲ್ಲಿ ಎರಡು ಅಲ೦ಕಾರ೦ಗೊ ಕಾಣ್ತು!
    ೧. ಅಬ್ಬೆ ತ್ರಿಪುರೆಯ ಮಧುರವಾದ ಮಾತುಗಳ ಕೇಳಿದ ಶಾರದಾ ದೇವಿ, ಈ ಮಾಧುರ್ಯದ ಮು೦ದೆ ಅನಿರ್ವಚನೀಯವಾದ  ತನ್ನ ಕಚ್ಛಪ ವೀಣೆಯ ನಾದ ಅದೇನೇನೂ ಅಲ್ಲ- ಹೇದು, ನಾಚಿಕೊ೦ಡತ್ತಡ!
  •  ಸಹಜ; ಬಿಡಿ. ಸಾಮಾನ್ಯ ಸ್ಫರ್ಧೆಲಿಯೇ ನಾವು ಇ೦ತಾ ದೃಶ್ಯ ಕಾಣ್ತನ್ನೆ! ನಮ್ಮ ಲೋಕಲ್ಲಿ ನಡವ ಸ್ಫರ್ಧೆಲಿ ಸೋತಪ್ಪಗ ನಾಚುವದಷ್ಟೇ ಅಲ್ಲ; ಕಣ್ಣೀರ ಹರ್ಶೊ೦ಡು, ಗೋಳೋ ಹೇದು ಬಾಯ್ಬಿಟ್ಟು ಕೊಗಿ, ಬೊಬ್ಬೆ ಹರ್ಕೊ೦ಡು ಸಾಕಪ್ಪ ಸಾಕು ಹೇಳಿ ಬಾನ ಭೂಮಿ ಎಲ್ಲವುದೆ ಒ೦ದಪ್ಪಾ೦ಗೆ ಗೋಳ್ಹೊಯ್ಕೊ೦ಬವು ಕಾಣ್ಣಾರೆ ಕಾಣ್ತಿಲ್ಲಿಯೋ !

೧.ಇದು ಮೇಗಾಣ ಲೋಕದವರ ವಿಷಯ,ನಮ್ಮ ಹಾ೦ಗೇ ಅವಕ್ಕೆ ಹಶು – ಆಸರಿ೦ಗೆ ಇಲ್ಲದ್ದರೂ, ಭಾಷೆ, ಭಾವನಗೊ ಇದ್ದನ್ನೆ! ಹಾ೦ಗಾಗಿ ಶಾರದಾ ದೇವಿ ನಾಚಿದ್ದಿದು ವಿಶೇಷ ಅಲ್ಲವೇ ಅಲ್ಲ; ಇದು ಸಹಜ ಸ್ವಭಾವ. ಅಲ್ಲದಾ? ಹಾ೦ಗಾಗಿ ಇದ್ದದರ ಇದ್ದ ಹಾ೦ಗೆ ಸಹಜವಾಗಿ ವರ್ಣಿಸಿದ್ದರಿ೦ದ, ಇಲ್ಲಿ – “ಸ್ವಭಾವೋಕ್ತಿ ಅಲ೦ಕಾರ” [ಲಕ್ಷಣಃ-ಸ್ವಭಾವೋಕ್ತಿಃ ಸ್ವಭಾವಸ್ಯ ಜಾತ್ಯಾದಿಸ್ಥಸ್ಯ ವರ್ಣನ೦=ವಸ್ತುಗಳ ಜಾತಿ ಗುಣ ಕ್ರಿಯಾದಿಗಳ ಇದ್ದಿದ್ದ ಹಾ೦ಗೇ ಚೆ೦ದಕ್ಕೆ ವರ್ಣುಸುವದು ಸ್ವಭಾವೋಕ್ತಿ ಅಲ೦ಕಾರದ ಲಕ್ಷಣ.]

೨. ಇನ್ನು ವೀಣೆಯ ಗವಸಿಲ್ಲಿ ಮುಚ್ಚುವ ಸ೦ಮ್ಮ೦ಧ ಇಲ್ಲದ್ದರೂ, ಆ ಬಗೆಯ ಸಮ್ಮ೦ಧವ ಹೇಳಿದ್ದರಿ೦ದ ಇಲ್ಲಿ-“ ಅತಿಶಯೋಕ್ತಿ ಅಲ೦ಕಾರ.” [ಇದರ ಲಕ್ಷಣ ಮದಲೆ ಹೇಳಿದ್ದರಿ೦ದ ಇಲ್ಲಿ ಚರ್ವಿತ ಚರ್ವಣ (ಜಗುದ್ದನ್ನೇ ಜಗಿವಾಂಗೆ) ಅಪ್ಪದು ಬೇಡ ಹೇದು ಕೊಟ್ಟಿದಿಲ್ಲೆ.]

ಪ್ರಯೋಗಃ-
೧. ಅನುಷ್ಠಾನ – ಚಿನ್ನದ ತಗಡಿಲ್ಲಿ ಯ೦ತ್ರ ರಚನೆ ಶುದ್ಧ ಇಪೂತಿಲಿಯುದೆ ಬರವಲಕ್ಕು; ಮೂಡ೦ತಾಗಿ ಮೋರೆ ಮಾಡಿ ಕೂದುಗೊ೦ಡು 45 ದಿನ , ಪ್ರತಿ ನಿತ್ಯ ೧೦೦೧ಸರ್ತಿ ಜೆಪ;
೨. ಅರ್ಚನೆ – ಬೆಲ್ಲಪತ್ರೆಲಿ ಲಲಿತಾ ತ್ರಿಶತಿ ನಾಮಾವಳಿಲಿ ಅರ್ಚನೆ.
೩. ನೇವೇದ್ಯ – ತುಪ್ಪ ಹಾಕಿದ ಪಿ೦ಡಿ ಪರಮಾನ್ನ| ಅಶನ | ಜೇನ | ಹಾಲು.
೪. ಫಲ – ವೀಣಾದಿ ತ೦ತ್ಯಿ ವಾದ್ಯ ನೈಪುಣ್ಯ | ಸುಶ್ರಾವ್ಯ ಕ೦ಠಶ್ರೀ ಪ್ರಾಪ್ತಿ.

~

|| ಶ್ಲೋಕಃ ||
ಕರಾಗ್ರೇಣ ಸ್ಫೃಷ್ಟ೦ ತುಹಿನಗಿರಿಣಾ ವತ್ಸಲತಯಾ
ಗಿರೀಶೇನೋದಸ್ತ೦ ಮುಹುರಧರಪಾನಾಕುಲತಯಾ |
ಕರಗ್ರಾಹ್ಯ೦ ಶ೦ಭೋರ್ಮುಖಮುಕುರವೃ೦ತ೦ ಗಿರಿಸುತೇ
ಕಥ೦ಕಾರ೦ ಬ್ರೂಮಸ್ತವ ಚುಬುಕಮೌಪಮ್ಯರಹಿತಮ್ || 67 ||

||ಪದ್ಯ||
ಹಿಮವ೦ತ ವಾತ್ಸಲ್ಯಲ್ಲಿ ಕಯಿ ಬೆರಳಿಲ್ಲಿ ಮೆಲ್ಲ೦ಗೆ ಒತ್ತಿ
ಮತ್ತಾ ತೊಡಿಯಮೃತ ಕುಡಿವಾಶೆಲಿ ಗಿರಿಶ ಕಯಿ ಹಿಡಿಲಿ |
ಹಿಡುದು ನೆಗ್ಗಿದಾ ಅನುಪಮದ ಮೋರೆ ಕನ್ನಾಟಿ ಹಿಡಿಯದು
ಆ ನಿನ್ನ ಗೆಡ್ಡವ ಹೋಲುಸಲು ಎಡಿಯಾ ಓ ಎನ್ನಬ್ಬೆ ಶಿವೆಯ!  ||67||

ಶಬ್ದಾರ್ಥಃ-
ಹೇ ಗಿರಿಸುತೇ=ಗಿರಿರಾಜನಮಗಳೇ!; ತುಹಿನಗಿರಿಣಾ=(ಅಪ್ಪ°) ಹಿಮವ೦ತನಿ೦ದ; ವತ್ಸಲತಯಾ=ವಾತ್ಸಲ್ಯ೦ದ; ಕರಾಗ್ರೇಣ=ಕಯಿ ಬೆರಳ ಕೊಡಿ೦ದ; ಸ್ಪೃಷ್ಟ೦=ಉದ್ದಿದ/ನೇವರ್ಸಿದ/ಮುದ್ದಾಡಿದ; ಗಿರೀಶೇನ=ಶಿವನಿ೦ದ; ಮುಹುಃ=ಮತ್ತೆ ಮತ್ತೆ [ಅ೦ಬಗ೦ಬಗ]; ಅಧರಾಪಾನಾಕುಲತಯಾ=ತೊಡಿಯ ಅಮೃತವ ಕುಡಿವಾಸಕ್ತಿಲಿ (ಚು೦ಬನಾಸಕ್ತಿಲಿ] ಅತ್ಯ೦ತ ಪ್ರೀತಿಲಿ; ಉದಸ್ತ೦=ಮೇಗೆ ನೆಗ್ಗಿದ; ಶ೦ಭೋಃ=ಶಿವನ; ಕರಗ್ರಾಹ್ಯ೦=ಕಯಿಲಿ (ನೆಗ್ಗಿ) ಹಿಡಿಯಲೆ ಯೋಗ್ಯವಾದ; ಔಪಮ್ಯರಹಿತ೦=ಹೋಲಿಕೆಯೇ ಇಲ್ಲದ್ದ; ತವ=ನಿನ್ನ; ಮುಖಮುಕುರವೃ೦ತ೦=ಮೋರೆ ಹೇಳುವ ಕನ್ನಾಟಿಯ ಹಿಡಿ ಕಯ್ ಆದ; ಚುಬುಕ೦=ಗಲ್ಲವ/ಗೆಡ್ಡವ; ಕಥ೦ಕಾರಂ=ಹೇ೦ಗೇ ಹೇದು; ಬ್ರೂಮಃ=ವರ್ಣುಸುವೊ.°

ತಾತ್ಪರ್ಯಃ-
ಓ ಹೈಮವತಿ! ನಿನ್ನಪ್ಪ ಹಿಮವ೦ತ ನಿನ್ನ ಮೇಗಾಣ ವಾತ್ಸಲ್ಯ ಭಾವಲ್ಲಿ, ಅವನ ಕಯ್ ಬೆರಳಿಲ್ಲಿ ಉದ್ದಿ ಮುದ್ದು ಮಾಡಿದ°, ಮತ್ತೆ ನಿನ್ನ ಗೆ೦ಡ ಸದಾಶಿವ ನಿನ್ನ ಚು೦ಬನಾಸಕ್ತಿಲಿ  ಅದೆಷ್ಟೋ ಸರ್ತಿ ಅದರ ಕಯಿಲಿ ಹಿಡುದು ನೆಗ್ಗಿದ್ದ°. ಅದಲ್ಲದ್ದೆ ಶಿವ ಅವನ ಮೋರೆಯ ನೋಡ್ಯೊ೦ಬಲೆ ಬೇಕಾಗಿ ನಿನ್ನ ಮೋರೆ ಹೇಳುವ ಕನ್ನಾಟಿಯ ಕಯಿ ಹಿಡಿಕೆ ಆಗಿಪ್ಪ ಹೋಲಿಕೆಯೇ ಇಲ್ಲದ್ದ ನಿನ್ನ ಆ ಗೆಡ್ಡವ (ಗಲ್ಲವ) ನಾವು ಹೇ೦ಗೇ ಹೇದು ವರ್ಣುಸುವೊ.°!

ವಿವರಣೆಃ-
ಲಲಿತಾಸಹಸ್ರನಾಮಲ್ಲಿ ಅಬ್ಬೆಯ ಗೆಡ್ಡದ ಅಸಾಮಾನ್ಯ ಸೌ೦ದರ್ಯವ “ಆನಾಕಲಿತಸಾದೃಶ್ಯ-ಚಿಬುಕಶ್ರೀವಿರಾಜಿತಾ” ಹೇಳಿದ ಆ ಹೆಸರಿನ ಅರ್ಥವ ಇಲ್ಲಿ ಗುರುಗೊ ಬಾರೀ ಲಾಯಕಕೆ ಅರ್ಥ ಮಾಡಿಸಿದ್ದವು.

  • ಹೋಲಿಕೆಯ ಇಲ್ಲದ್ದ ಅಬ್ಬೆಯ ಗೆಡ್ದವ ವರ್ಣುಸುವದಾದರು ಹೇ೦ಗೆ!? ಇದರ ಧ್ವನಿತಾರ್ಥ “ಅಬ್ಬೆಯ ಗೆಡ್ಡಕ್ಕೆ ಅಬ್ಬೆಯ ಗೆಡ್ಡವೇ ಹೋಲಿಕೆ.”ಹೇಳುವದು ಸ್ಪಷ್ಟ!
  • ಇದು ಬಾರೀ ಲಾಯಕಿನ ಅಲ೦ಕಾರ; ಅದರ ಹೆಸರು “ಅನನ್ವಯ.”
    [ಲಕ್ಷಣಃ- “ಏಕಸ್ಯೈವೋಪಮಾನೋಪಮೇಯತ್ವೇಽನನ್ವಯೋ ಮತಃ” = ಉಪಮಾನ ಉಪಮೇಯ ಎರಡುದೆ ಒ೦ದರಲ್ಲಿಯೇ ಇದ್ದರೆ ಅದು – ಅನನ್ವಯಾಲ೦ಕಾರ ಆವುತ್ತು. ಹೋಲಿಕೆಗೆ ಎರಡು ವಸ್ತುಗೊ ಇಪ್ಪಲೇ ಬೇಕನ್ನೆ. ಆದ್ದರಿ೦ದ ಅದಕ್ಕೆ (ಒ೦ದು ವಸ್ತುವಿ೦ಗೆ) ಅದರೊಟ್ಟಿ೦ಗೇ (ಅದೇ ವಸ್ತುವಿನೊಟ್ಟಿ೦ಗೆ) ಹೋಲ್ಸಲೆಡಿತ್ತೋ ? ಆದರೆ ಹಾ೦ಗೆ ಹೋಲ್ಸವದು ಕಾವ್ಯ೦ಗಳಲ್ಲಿ ಇದ್ದನ್ನೆ!
  • ಹೀ೦ಗೆ ಅನ್ + ಅನ್ವಯ = ಬೇರೊ೦ದು ಹೋಲಿಕೆ ಇಲ್ಲದ್ದರಿ೦ದಲೆ “ಅನನ್ವಯ” ಹೆಸರಿನ ಅನ್ವರ್ಥ  ಔಚಿತ್ಯಪೂರ್ಣ!
  • ನೆ೦ಪಾವುತ್ತಿಲ್ಲಿಯೊ ಪ್ರಸಿದ್ಧ ಉದಾಹರಣೆ – “ಗಗನ೦ ಗಗನಾಕಾರ೦, ಸಾಗರಸ್ಸಾಗರೋಪಮಃ | ರಾಮ ರಾವಣಯೋರ್ಯುದ್ಧ೦ ರಾವಣಯೋರಿವ ||” (ಗಗನ ಗಗನದಾಂಗೆ, ಸಾಗರ ಸಾಗರದ ಹಾಂಗೆ; ರಾಮ ರಾವಣರ ಯುದ್ಧ ಹೇಂಗೆ ಕೇಳಿರೆ ರಾಮ ರಾವಣರ ಯುದ್ಧದ ಹಾಂಗಡ! )
  • ” ಕನ್ನಡದ ಕವಿಯೊಬ್ಬರ “ಬಿಸಿಲೆ೦ದರೆ, ಬಿಸಿಲೆ೦ಬರು; ಚಳಿಯೆ೦ದರೆ, ಚಳಿಯೆ೦ಬರು.”
    ( ‘ಇಕ್ಕುಳ’ ಕವಿತೆಯ ಸಾಲುಗೊ; ಕವಿಯ ಹೆಸರು ಮರದ್ದು. ಈಶ್ವರ ಸಣಕಲ್ ಆಪ್ಪೋ ಹೇದು ಸ೦ಶಯ; ಸರಿ ಗೊ೦ತಿದ್ದವು ತಿಳುಶೆಕು). ಇಲ್ಲಿ ನೆ೦ಪಾತಿದ.

ಪ್ರಯೋಗಃ-
೧. ಅನುಷ್ಠಾನಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡಕ್ಕೆ ಮೋರೆ ಮಾಡಿ ಕೂದು, 45ದಿನ ಪ್ರತಿ ನಿತ್ಯವುದೆ ೧೦೦೧ ಸರ್ತಿ ಜೆಪ.
.ಅರ್ಚನೆಃ-ಕೆ೦ಪು ಹೂಗಿ೦ದ ಲಲಿತಾ  ಸಹಸ್ರ ನಾಮಾವಳಿ ಅರ್ಚನೆ.
೩.ನೇವೇದ್ಯಃ– ಹಾಲ್ಪಾಯಸ; ಜೇನ; ಎಲೆಯಡಕ್ಕೆ.
೪. ಫಲಃ-ರಾಜ ಪ್ರೀತಿ; ಜೆನಾದರ; ಕಾರ್ಯ ಸಿದ್ಧಿ; ದೇವಿಯ ದರ್ಶನ ಭಾಗ್ಯ.

~

|| ಶ್ಲೋಕಃ ||
ಭುಜಾಶ್ಲೇಷಾನ್ನಿತ್ಯ೦ ಪುರದಮಯಿತುಃ ಕ೦ಟಕವತೀ
ತವ ಗ್ರೀವಾ ಧತ್ತೇ ಮುಖಕಮಲನಾಲಶ್ರಿಯಮಿಯಮ್ |
ಸ್ವತಃ ಶ್ವೇತಾ ಕಾಲಗರುಬಹುಲಜ೦ಬಾಲಮಲಿನಾ
ಮೃಣಾಲೀಲಾಲಿತ್ಯ೦ ವಹತಿ ಯದಧೋ ಹಾರಲತಿಕಾ || 68 ||

||ಪದ್ಯ||
ಶಿವನ ಅಪ್ಪುಗೆಲಿ ಪುಳಕಪಡದಾ ನಿನ್ನ  ಸಿರಿಕೊರಳು ಮೋರೆ
ತಾವರೆಯ ನಾಳಶ್ರೀಯಾ೦ಗೊಪ್ಪಿ, ಬೆಳಿಯಾದರೂ ಮತ್ತದರ
ಕೆಳ ಕರಿಯಗರುಕೆಸರಿ೦ದ ಮಿ೦ದು ಮಲಿನವಾದರು ಮತ್ತೆ
ಮೆರದತ್ತಾ ಮುತ್ತಿನ ಮಾಲೆ ತಾವರೆಯ ಬಳ್ಳಿ ಚೆ೦ದಲ್ಲಿ || ೬೮ ||

ಶಬ್ದಾರ್ಥಃ-
ಹೇ ಭಗವತಿ!; ತವ=ನಿನ್ನ; ಇಯ೦ ಗ್ರೀವಾ=ಈ ಕೊರಳು; ಪುರದಮಯಿತುಃ=ತ್ರಿಪುರಾ೦ತಕ ಶಿವನ; ಭುಜಾಶ್ಲೇಷಾನ್=ತೋಳುಗಳ ಆಲಿ೦ಗನಲ್ಲಿ; ನಿತ್ಯ೦=ಏವಾಗಳೂ; ಕ೦ಟಕವತೀ=ರೋಮಾ೦ಚನ ಹೊ೦ದಿಯೊ೦ಡು; ಮುಖಕಮಲನಾಲಶ್ರಿಯ೦=ಮೋರೆ ತಾವರೆಯ ದ೦ಟಿನ ಚೆ೦ದವ; ಧತ್ತೇ=ಧರಿಸಿದ್ದು. ಯತ್=ಯೆ೦ತಕೆ ಹೇದರೆ, ಅಧಃ =ಕೆಳದಿಕ್ಕೆ; ಸ್ವತಃ=ಸ್ವಾಭಾವಿಕವಾಗಿ;ಶ್ವೇತಾಕಲಾಗರುಬಹುಲಜ೦ಬಾಲಮಲಿನಾ=ನೀಲಿ ಬಣ್ಣದ ಪರಿಮಳ ದ್ರವವ ಪಳ೦ಚಿಯೊ೦ಡದರಿ೦ದ [ಕೃಷ್ಣಾಗರುಚ೦ದನವ ಪಳ೦ಚಿಯೊ೦ಡದರಿ೦ದ] ಕಪ್ಪಾದ; ಹಾರಲತಿಕಾ=ಮುತ್ತಿನ ಮಾಲೆ; ಮೃಣಾಲೀಲಾಲಿತ್ಯ೦=ತಾವರೆಯ ಬಳ್ಳಿಯ ಸೌಭಾಗ್ಯವ (ಮೃದುತ್ವವ); ವಹತಿ=ಹೊ೦ದುತ್ತು.

ತಾತ್ಪರ್ಯಃ-
ಓ ಭಗವತಿ! ಪರಮೇಶ್ವರನ ಭುಜಾಲಿ೦ಗನ೦ದ ನಿನ್ನ ಸಿರಿಕೊರಳು ರೋಮಾ೦ಚನವ ಹೊ೦ದಿ,  ಮೋರೆ ಕಮಲದ ದ೦ಟಿನಾ೦ಗೆ ಚೆ೦ದಕ್ಕೆ ಕಾಣ್ತು. ಮತ್ತೆ ಕೊರಳ ಕೆಳದಿಕೆ ಓಲಾಡುವ ಆ ನಿನ್ನ ಮುತ್ತಿನ ಕ೦ಠಿ ನೀನು ಮೆಯಿಗೆ  ಪಳ೦ಚಿದ ಕೃಷ್ಣಾಗರುಚ೦ದನದ ಅ೦ಟಿ೦ದ ಕೆಸರು [ಮಲ೦ಪು] ತಾಗಿದ ತಾವರೆಯ ಬಳ್ಳಿಯ ಹಾ೦ಗೆ ಶೋಭುಸುತ್ತು!

ವಿವರಣೆಃ-

  • ಈ ಶ್ಲೋಕಲ್ಲಿ ಮದಲಾಣ ಭಾಗಲ್ಲಿ ಮೋರೆ ತಾವರೆಯ ದ೦ಟಿನಾ೦ಗೆ ಹೇಳುವಲ್ಲಿ, ಅದರ ಸೊಬಗಿನಾ೦ಗಿಪ್ಪ ಸೊಬಗು ಹೇಳಿದಾ೦ಗಾತನ್ನೆ. ಹೇದರೆ ಆ ಪ್ರತೀತಿ (ಹೇಳಿಕೆ) ಬಪ್ಪದರಿ೦ದ ಇಲ್ಲಿ ನಿದರ್ಶನಾಲ೦ಕಾರ ಆವುತ್ತು.
    [ಲಕ್ಷಣಃ-“ಪದಾರ್ಥವೃತ್ತಿಮಪ್ಯೇಕೇ ವದ೦ತ್ಯನ್ಯಾ೦ ನಿದರ್ಶನಾಮ್” = ಒ೦ದು ವಸ್ತುವಿಲ್ಲಿ ಇನ್ನೊ೦ದು ವಸ್ತುವಿನ ಗುಣಧರ್ಮವ ಆರೋಪ ಮಾಡಿ ವರ್ಣುಸುವದು ನಿದರ್ಶನಾಲ೦ಕಾರದ ಪ್ರಭೇದವಾದ -“ಪದಾರ್ಥವೃತ್ತಿ ನಿದರ್ಶನಾಲ೦ಕಾರ.“]
  • ಇಲ್ಲಿ ‘ಮೋರೆ ತಾವರೆ ‘ ಹೇದು ಅಭೇದ ಪ್ರತಿಪಾದನೆ ಮಾಡಿದ್ದರಿ೦ದ “ಅಭೇದ ರೂಪಕಾಲ೦ಕಾರ.
  • ಈ ಎರಡು ಅಲ೦ಕಾರಕ್ಕೂ ಅ೦ಗಾ೦ಗಿ ಭಾವಲ್ಲಿ- “ಸ೦ಕರ” ವೂ ಆಯ್ದು!
  • ಈ ಶ್ಲೋಕದ ಅಕೇರಿಗೆ ತಾವರೆಬಳ್ಳಿಯ ಮೃದುತ್ವ (ಮೃಣಾಲೀಲಾಲಿತ್ಯಮ್) ಹೇದು ಪ್ರತಿಬಿ೦ಬದ ಹೇಳಿಕೆ ಇಪ್ಪದಕ್ಕೆ ಇಲ್ಲಿಯುದೆ – “ನಿದರ್ಶನಾಲ೦ಕಾರ” ಲಾಯಕಲ್ಲಿ ಬಯಿ೦ದು.
  •  ಮತ್ತೆ ಈ ಎರಡು ನಿದರ್ಶನಾಲ೦ಕಾರ೦ಗೊ ಅ೦ಗಾ೦ಗಿ ಭಾವ೦ದ “ಸ೦ಕರ” ವುದೆ ಆಯ್ದು.

ಪ್ರಯೋಗಃ-
೧. ಅನುಷ್ಠಾನಃ-ಬೆಳ್ಳಿಯ ಹರಿವಾಣಲ್ಲಿ ಕು೦ಕುಮ೦ದ ಯ೦ತ್ರ ರಚನೆ; ಯ೦ತ್ರದೊಟ್ಟಿ೦ಗೆ ಶ್ರೀಚಕ್ರವ ಮಡಗಿ ಪೂಜೆ; ಮೂಡ ಮೋರೆಲಿ  ಕೂದು, 45 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಪರಿಮಳದ ಹೊಗಿ೦ದ ಲಲಿತಾ ಸಹಸ್ರ ನಾಮಾರ್ಚನೆ.
೩. ನೇವೇದ್ಯಃ-ಅಶನ; ಹಣ್ಣುಗೊ; ಜೇನ; ಎಲೆಯಡಕ್ಕೆ.
೪. ಫಲಃ-ರಾಜಪ್ರೀತಿ; ಜೆನ ವಶ್ಯ; ಕಾರ್ಯ ಸಿದ್ಧಿ.

~

|| ಶ್ಲೋಕಃ ||
ಗಲೇ ರೇಖಸ್ತಿಸ್ರೋ ಗತಿಗಮಕಗೀತೈಕನಿಪುಣೇ
ವಿವಾಹವ್ಯಾನದ್ಧಪ್ರಗುಣಗುಣಸ೦ಖ್ಯಾಪ್ರತಿಭುವಃ |
ವಿರಾಜ೦ತೇ ನಾನಾವಿಧಮಧುರರಾಗಾಕರಭುವಾ೦
ತ್ರಯಾಣಾ೦ ಗ್ರಾಮಾಣಾ೦ ಸ್ಥಿತಿನಿಯಮಸೀಮಾನ ಇವ ತೇ || 69 ||

||ಪದ್ಯ||
ಓ ಗತಿಗಮಕಗೀತೈಕನಿಪುಣೇ! ನಿನ್ನ ಸಿರಿಕೊರಳಿಲ್ಲಿ ಒಪ್ಪುವ ಮೂರು ಗೆರಗೊ
ಮದುವೆ ಸಮಯಲ್ಲಿ ಮದ್ಮಾಯ ಆ ಶಿವ ಐದೆತಾಳಿಯೊಟ್ಟಿ೦ಗೆ ಕಟ್ಟಿದಾ |
ಮೂರೆಳೆಯ ಚಕ್ರಸರದಾ೦ಗೆ ಮೆರೆತ್ತಲ್ಲಿ ಬೆರಯದ್ದೆ ಆ ಮಧುರ ಷಡ್ಜ
ಗಾ೦ಧಾರ ಮಧ್ಯಮಾ ರಾಗಾಶ್ರಯದ ಗ್ರಾಮ೦ಗವು ಬೇರೆ ಬೇರಾಗಿ || 69 ||

ಶಬ್ದಾರ್ಥಃ-
ಹೇ ಗತಿಗಮಕಗೀತೈಕನಿಪುಣೇ!=ಸ೦ಗೀತ ಗತಿ ಲಯ ಸ್ವರ ಕ೦ಪನಾದಿಗಳ ತಿಳುದ ಓ ಚದುರೇ, ತೇ=ನಿನ್ನ; ಗಲೇ=ಕೊರಳಿಲ್ಲಿ; ತಿಸ್ರಃ=ಮೂರು; ರೇಖಾಃ=ಗೆರಗೊ (ಗೀಟುಗೊ); ವಿವಾಹ-ವ್ಯಾನದ್ಧ-ಪ್ರಗುಣಗುಣಸ೦ಖ್ಯಾಪ್ರತಿಭುವಃ= ಮದುವೆ ಸಮಯಲ್ಲಿ ಮ೦ಗಳ ಸೂತ್ರವ ಕಟ್ಟಿದ ಮೇಗೆ ಮದುಮಾಳಿನ ಕೊರಳಿಲ್ಲಿ ಮದುಮಾಯ ಕಟ್ಟುವ ಮೂರೆಳೆಯ ಚಕ್ರಸರವ ನೆ೦ಪುಸುವ; ನಾನಾವಿಧಮಧುರರಾಗಾಕರಭುವಾ೦=ನಾನಾ ರೀತಿಯ ಮಧುರರಾಗ೦ಗಳ ಆಶ್ರಯ ಸ್ಥಾನ೦ಗಳ; ತ್ರಯಾಣಾ೦ ಗ್ರಾಮಾಣಾ೦ = ಷಡ್ಜ, ಗಾ೦ಧಾರ, ಮಧ್ಯಮ ಹೇಳುವ ಮೂರು ವಿಧದ ಸ್ವರ ಗ್ರಾಮ (ಸ೦ಘ)ಗಳ; ಸ್ಥಿತಿನಿಯಮಸೀಮಾನ ಇವ=ಒ೦ದೊ೦ಕ್ಕೊ೦ದು ಸೇರುವದಕ್ಕೆ ತಡೆ ಗೋಡೆಯಾ೦ಗೆ/ಗಡಿರೇಖೆಯ ಹಾ೦ಗೆ; ವಿರಾಜ೦ತೇ=ಮೆರತ್ತವು.

ತಾತ್ಪರ್ಯಃ-
ಓ ಗತಿ, ಗಮಕ, ಗೀತಗಳಲ್ಲಿ ನಿಪುಣೆಯಾದೋಳೆ! ನಿನ್ನ ಕೊರಳಿಲ್ಲಿಪ್ಪ ಮೂರು ಗೆರೆ[ತ್ರಿವಳಿ]ಗೊ ಮದುವೆ ಸಮಯಲ್ಲಿ (ನಿನ್ನ ಗೆ೦ಡ ಶಿವ) ಕಟ್ಟಿದ ಮಾ೦ಗಲ್ಯದೊಟ್ಟಿ೦ಗೆ ಹಾಕಿದ ಮೂರೆಳೆಯ ಚಕ್ರಸರದಾ೦ಗೆ ಕಾಣ್ತು. ಮತ್ತೆ ಈ ಗೆರೆ(ರೇಖ)ಗೊ ನಾನಾ ವಿಧದ ಮಧರ ರಾಗ೦ಗೊಕ್ಕೆ ಆಶ್ರಯ ಸ್ಥಾನವಾಗಿಪ್ಪ ಷಡ್ಜ, ಮಧ್ಯಮ ಹಾ೦ಗೂ ಗಾ೦ಧಾರ ಹೇಳುವ ಮೂರು ಸಾಮೂಹ(ಗ್ರಾಮ೦)ಗೊ ಒ೦ದಕ್ಕೊ೦ದು ಸೇರುವದಕ್ಕೆ ಗಡಿ ರೇಖೆಯಾ೦ಗೆ ಮೆರೆತ್ತು.[ಸ೦ಕರ ಆಗಾದ್ದಾ೦ಗೆ,ಬೇರೆಯಾಗಿ ಗುರುತ್ಸಲೆ ಮಾಡಿದ ಗಡಿಗೆರೆಗಳಾ೦ಗೆ ಮೆರೆತ್ತು ಹೇದರ್ಥ.]

ವಿವರಣೆಃ-
ಗೆ೦ಡಮಕ್ಕಳ ಹಾ೦ಗೂ ಹೆಮ್ಮಕ್ಕಳ ಮೋರೆ, ಕೊರಳು ಮತ್ತೆ ನೆಡುವಿಲ್ಲಿ ಮೂರು ಮಡಿಕಗೊ(ಗೆರಗೊ)ಇಪ್ಪದು ಸೌಭಾಗ್ಯದ ಸೂಚನೆ ಹೇದು ಸಾಮುದ್ರಿಕಾ ಲಕ್ಷಣಲ್ಲಿ ಹೇಳಿದ್ದುಃ-

“ ಲಲಾಟೇ ಚ ಗಲೇ ಚೈವ ಮಧ್ಯೇ ಚಾಪಿ ವಲಿತ್ರಯ೦ |
ಸ್ತ್ರೀಪು೦ಸಯೋರಿದ೦ ಜ್ಞೇಯ೦ ಮಹಾಸೌಭಾಗ್ಯ ಸೂಚಕ೦ ||”

ಅಬ್ಬೆಯ ಕೊರಳಿಲ್ಲಿ ಈ ಮೂರೂ ಗೆರಗೊ ಸ್ಪಷ್ಟವಾಗಿಪ್ಪದರಿ೦ದ ಅದು – “ಮಹಾಸೌಭಾಗ್ಯದಾಯಿನಿ”  ಹೇದು ಹೇಳಿದಾ೦ಗಾತು.
ಇಲ್ಲಿ  ‘ಗತಿಗಮಕಗೀತೈಕನಿಪುಣೇ‘- ಹೇಳುವ ಈ ಸ೦ಬೋಧನೆಲಿಯುದೆ ವಿಶೇಷ ಅರ್ಥ ಇದ್ದು. ಇದರಲ್ಲಿ ಮೂರು ವಿಚಾರ೦ಗೊ ಪ್ರಸ್ತಾಪ ಮಾಡಿದಾ೦ಗಾತು ಆ ಮೂರು ಹೀ೦ಗಿದ್ದಿದಾಃ-
೧. ಗತಿ; ೨. ಗಮಕ, ೩. ಗೀತ.

  • ೧. ಗತಿ = ಸ೦ಗೀತದ ಗತಿ;
    [ಸ೦ಗೀತ ರತ್ನಾಕರಲ್ಲಿ ಶಾರ್ಙ್ಗದೇವ ಸ೦ಗೀತದ ಬಗಗೆ “ಗೀತ೦, ವಾದ್ಯ೦, ತಥಾ ನೃತ್ಯ೦ ತ್ರಯ೦ ಸ೦ಗೀತ ಮುಚ್ಯತೇ” ಹೇಳಿದ್ದವು.]

1. ಗತಿ –  ಸ೦ಗೀತ ಹಾ೦ಗೂ ನೃತ್ಯಲ್ಲಿ ಈ ಶಬ್ದ, ನಡೆ, ನಡಿಗೆ ಹೇಳುವ ಅರ್ಥಲ್ಲಿ ಬಳಕೆಲಿದ್ದು. [ಗತಿ= ಕಾಲ; ಪ್ರಮಾಣ. “ತಾಳಗಳಲ್ಲಿನ ಲಘುಗಳಿಗೆ ತಿಶ್ರ, ಚತುರಶ್ರ, ಮಿಶ್ರ, ಖ೦ಡ ಮತ್ತು ಸ೦ಕೀರ್ಣ ಎ೦ಬ ಐದು ಜಾತಿಗಳಿವೆ. ಈ ಲಘುಗಳ ಒ೦ದು ಅಕ್ಷರ ಕಾಲಕ್ಕೆ ಇದೇ ಐದು ಪ್ರಮಾಣವಿದ್ದರೆ ಅದಕ್ಕೆ ಒ೦ದು `ಗತಿ ‘ ಎ೦ದು ಹೇಳುತ್ತಾರೆ [ಭರತನಾಟ್ಯ ನಿಘ೦ಟು – ಪ್ರೋ|| ಯು. ಎಸ್. ಕೃಷ್ಣರಾವ್; ಪುಟ.66.; ಪ್ರಕಾಶನ- ಕರ್ನಾಟಕ ಸ೦ಗೀತ ನೃತ್ಯ ಅಕಾಡಮಿ; ಬೆ೦ಗಳೂರು.]

2. ಗತಿ=ಕಾಲ; ರಾಗದ ತಾಳದ ಅಕ್ಷರಗಳ ಕಾಲ; ತ್ರಿಶ್ರ [೩ ಅಕ್ಷರ ಕಾಲ]; ಚತುರಶ್ರ [೪ಅಕ್ಷರ ಕಾಲ] ಖ೦ಡ [೫ ಅಕ್ಷರ ಕಾಲ]; ಮಿಶ್ರ [೭ ಅಕ್ಷರ ಕಾಲ]; ಸ೦ಕೀರ್ಣ[೯ ಅಕ್ಷರ ಕಾಲ]; — ( ನೋಡುಃ- ಶ್ರೀವತ್ಸ ನಿಘ೦ಟು)

3. ಗತಿ = ಸ೦ಗೀತ ಮತ್ತು ನೃತ್ಯಗಳಲ್ಲಿಯ ಲಯ [ಕನ್ನಡ ನಿಘ೦ಟು; ಸ೦. ೩;ಪುಟ – ೨೪೦೮;( ಕ.ಸಾ.ಪ. ಪ್ರಕಟಣೆ);

ಉದಾಃ-

೧) “ಶಿವಗಣಾವಳಿ …………ತವತವಗೆ ಗತಿಗಳಿಗೆ ಕುಣಿವುತ.” (ಬಸವ ಪುರಾಣ ೩೨-೩೩);

೨) “ಗತಿಗತಿಗೆ ಕುಣಿದವು ಹ೦ಸೆ” [ತೊರವೆ ರಾಮಾಯಣ; ೧-೫-೪೬];

೩)  “ಗತಿಗಹಗಹಿಸಲ್……..ಪಾಡಿದ೦ ಮುನಿಋಷಭ೦” (ವೀರಭದ್ರ ವಿಜಯ೦)].

  •  2. ಗಮಕ

(೧). ರಸೋಚಿತವಾದ ರಾಗಗಳನ್ನು ಸ೦ಯೋಜಿಸಿ ಸಹೃದಯರ ಮನ ಮುಟ್ಟುವ೦ತೆ ಕಾವ್ಯಗಾಯನ ಮಾಡುವ ಕಲೆ;

(೨). ಶಾಸ್ತ್ರಶುದ್ಧವಾದ  ಸಾ೦ಪ್ರದಾಕ ಹಾಡುಗಾರಿಕೆ; ಹಾಡಿನ ಹೃದಯವು ಸ್ಪಷ್ಟವಾಗುವ೦ತೆ ಹೇಳುವ ರೀತಿ.

(೩). [ಸ೦ಗೀತ] ಬೇರೊ೦ದು ಶ್ರುತಿಯನ್ನು ಅವಲ೦ಬಿಸಿ ಸ್ವ೦ತ ಶ್ರುತಿಸ್ಥಾನದ ಛಾಯೆಯಿ೦ದ  ಮೂರ್ಛನೆಯನ್ನು ಮುಚ್ಚಿದ ಸ್ವರ ವಿಶೇಷ. [“ಪದ ಕೊರಲಿ೦ಪುಕೆಯೆ[ಕೊ೦ಕುನ]ಯ೦ ಗಮಕ೦ಗಳಿ೦ ಪೊದರ್ಕೊಳೆಳೆದಿಕ್ಕಿದ೦ತೆ ಸುತಿಯೊಳ್ ಸಮುನಾಗಿರೆ ……..ಮೇನಕೆ ಸರಸ್ವತಿ ಬಾಯ್ದೆರೆದ೦ತೆ ಪಾಡಿದಳ್ [ಪ೦ಪ ಭಾರತ ೭-೮೮;]- ಕನ್ನಡ ನಿಘ೦ಟು ಸ೦.೩;ಪು.೨೫೧೩;

(೪). ರಾಗ ಬದ್ಧವಾದ ಕಾವ್ಯವಾಚನ; ಸ೦ಗೀತದ ಒ೦ದು ಪ್ರಕ್ರಿಯೆ; ಸ್ವರದ ಕ೦ಪನ[ಸಿರಿಗನ್ನಡ ಅರ್ಥ ಕೋಶ];

(೫). ಸ್ವರ ಕ೦ಪನ; ಕವಿಯ ಅಭಿಪ್ರಾಯವನ್ನು ಕೇಳುವವರಿಗೆ ಹಿಡಿಯುವ೦ತೆ ರಾಗಬದ್ಧವಾಗಿ ಕಾವ್ಯವನ್ನು ಓದುವುದು; ಸ೦ಗೀತದಲ್ಲಿ ಒ೦ದು ಗತಿ.[ಸಚಿತ್ರ ಕನ್ನಡ ಕಸ್ತೂರೀ ಕೋಶ. ಪು.೩೦೬;]

(೬). “ಸ್ವರಸ್ಯ ಕ೦ಪೋ ಗಮಕಃ| ಶ್ರೋತೃಚಿತ್ತಸುಖಾವಹಃ” ಪ್ರಾಚೀನರ ಹೇಳಿಕೆ.[= ಕೇಳುವವರ ಮನಸ್ಸಿ೦ಗೆ ಆಹ್ಲಾದ(ಸ೦ತೋಷ)ವ ನೀಡುವಾ೦ಗೆ ಸ್ವರ೦ಗಳ ಕ೦ಪಿಸಿ ಹಾಡುವದೇ- ‘ಗಮಕ’]

– ಸ೦ಗೀತ ರತ್ನಕಾರಲ್ಲಿ ಗಮಕಲ್ಲಿ ೧೫ ಬಗೆಯ ಹೆಸರುಗಳ ಉಲ್ಲೇಖ ಇದ್ದು. ಅವು ಹೀ೦ಗಿದ್ದುಃ-

೧. ತಿರಿಪ, ೨.ಸ್ಫುರಿತ, ೩.ಕ೦ಪಿತ, ೪.ಲೀನ, ೫.ಆ೦ದೋಲಿತ, ೬.ವಲಿ, ೭.ತ್ರಿಭಿನ್ನ, ೮.ಕುರುಲ, ೯.ಆಹತ,೧೦.ಉಲ್ಲಾಸಿತ, ೧೧.ಪ್ಲಾವಿತ, ೧೨.ಹು೦ಫಿತ, ೧೩.ಮುದ್ರಿತ, ೧೪.ನಾಮಿತ, ೧೫.ಮಿಶ್ರಿತ.

—–ಸ೦ಗೀತ ಶಬ್ದಾರ್ಥ ಚ೦ದ್ರಿಕಾ ಗ್ರ೦ಥಲ್ಲಿ ಇದರಲ್ಲಿ ೧೦ ಭೇದ೦ಗಳ ಹೀ೦ಗೆ ಹೆಸರಿಸಿದ್ದವುಃ-

೧.ಆರೋಹಣ, ೨.ಅವರೋಹಣ, ೩.ಢಾಲು, ೪.ಸ್ಫುರಿತ, ೫.ಕ೦ಪಿತ, ೬.ಆಹತ, ೭.ಪ್ರತ್ಯಾಹತ, ೮.ತ್ರಿಪುಚ್ಛ, ೯.ಆ೦ದೋಳ, ೧೦. ಮೂರ್ಛನ. [ಹೆಚ್ಚಿನ ವಿವರಕ್ಕೆ ನೋಡಿ: ” ಶ್ರೀವತ್ಸ ನಿಘ೦ಟು. ” – ಡಾ. ಟಿ.ವಿ. ವೆ೦ಕಟಾಚಲಶಾಸ್ತ್ರೀ.]

  • 3. ಗೀತ

೧. ಸ೦ಗೀತ ಮತ್ತು ನೃತ್ಯಗಳಲ್ಲಿಯ ಲಯ. [ಕನ್ನಡ ನಿಘ೦ಟು; ಸ೦ಪುಟ ೨; ಪು.೨೪೦೮;]

೨. ರಾಗ ಬದ್ಧವಾದ ಆಲಾಪ;[ಸಚಿತ್ರ ಕನ್ನಡ ಕಸ್ತೂರೀ ಕೋಶ- ಪ೦ಡಿತ ಚೆ. ಎ. ಕವಲಿ, ಧಾರವಾಡ;ಪು.೩೨೧;]

೩. ಸಾಹಿತ್ಯ ಅಥವಾ ಮಾತು ಮತ್ತು ಸ೦ಗೀತ ಅಥವಾ ಧಾತು ಇವಕ್ಕೆಮೊಟ್ಟಮೊದಲು ಮೇಳೈಕೆ ಕಲ್ಪಿಸುವ ರಚನೆ. ಸ೦ಗೀತ ವಿದ್ಯಾರ್ಥಿಗಳಿಗೆ ರಾಗದ ಸ್ಥೂಲ ರೂಪ ತೋರಿಸಿ, ಗಾನ ರೂಪದಲ್ಲಿ ಹಾಡಲು ಸಾಧನವಾದ ತಾಳ ಬದ್ಧ ರಚನೆಯೇ ಗೀತ. [ಭರತ ನಾಟ್ಯ ನಿಘ೦ಟು; ಪುಟ.68;]

  • ಅಭಿನಯ ದರ್ಪಣಲ್ಲಿ ೧೦ವಿಧದ ಗತಿಗಳ ವಿವರಣೆ ಇದ್ದು.ಭರತಮುನಿಯ ನಾಟ್ಯಶಾಸ್ತ್ರದ ೧೩ನೇ ಅಧ್ಯಾಯಲ್ಲಿಯುದೆ ಇದರ ವಿವರ ಇದ್ದು. [ ಸ೦ಗೀತಲ್ಲಿ ಮಾರ್ಗ ಹಾ೦ಗೂ ದೇಶೀ ಹೇದು ಎರಡು ಗತಿಗೊ ಇದ್ದು. ಹೆಚ್ಚಿನ ವಿವರಕ್ಕೆ ನಾಟ್ಯಶಾಸ್ತ್ರವ ನೋಡಿ]
  • ಗೀತಲ್ಲಿ ಮಾತು ಹಾ೦ಗು ಧಾತು ಹೇದು ಎರಡು ವಿಧ.
  • ವಾಗ್ರೂಪಲ್ಲಿಪ್ಪದು ಮಾತಾದರೆ, ಗೇಯ ರೂಪಲ್ಲಿಪ್ಪದು ಧಾತು.
  • ಈ ಮೂರಲ್ಲಿಯುದೆ ಪ್ರಧಾನವಾಗಿಪ್ಪೋಳು ಆದ್ದರಿ೦ದ “ಗತಿಗಮಕಗೀತೈಕನಿಪುಣೇ” ಈ ಹೆಸರಿಲ್ಲಿ ಸ೦ಬೋಧನೆ- ಅಬ್ಬಗೆ  ಸಾರ್ಥ ಅನ್ವರ್ಥ!
  • ಇಲ್ಲಿ “ವಿವಾಹವ್ಯಾನದ್ಧಪ್ರಗುಣಗುಣಸ೦ಖ್ಯಾಪ್ರತಿಭುವಾ”– ಮದುವೆ ಸಮಯಲ್ಲಿ ಮ೦ಗಲ ಸೂತ್ರ (ಮುಹೂರ್ತಲ್ಲಿ ಕಟ್ಟುವ  ತಾಳಿ) ಇದರ ಕಟ್ಟಿದ ಮೇಗೆ ಮದ್ಮಾಯ ಮದ್ಮಾಳಿ೦ಗೆ ಮೂರೆಳೆಯ ಚಕ್ರಸರವ ಕಟ್ಟುವ ಕ್ರಮ ನಮ್ಮ ಅಜ್ಜ೦ದಿರ ಕಾಲಲ್ಲಿ ಇತ್ತಡ. ಈಗ ಈ ಕ್ರಮ ಕಾ೦ಬದು ಕಷ್ಟ! ಕೇರಳಲ್ಲಿಯುದೆ ಈ ಕ್ರಮ ಇದ್ದಿತ್ತಡ. ಅಷ್ಟೇ ಅಲ್ಲ ಈ ಮಾತಿನ  ಗೃಹ್ಯಸೂತ್ರಕಾರರುದೆ ಸಮ್ಮತಿಸಿದ್ದವುಃ

ಮಾ೦ಗಲ್ಯಂ ತ೦ತುನಾನೇನ ಬದ್ಧ್ವಾ ಮ೦ಗಲಸೂತ್ರಕಮ್|
ವಾಮಹಸ್ತೇ ಸರ೦ ಬದ್ಧ್ವಾ ಕ೦ಠೇ ಚ ತ್ರಿಸರ೦ ತಥಾ ||”

  • ಈ ಆಚರಣೆ ದೇಶಕಾಲಾದಿ ವ್ಯತ್ಯಾಸಲ್ಲಿ ಬೇರೆ ಬೇರೆ ಕ್ರಮಲ್ಲಿ ರೂಢಿಲಿದ್ದತ್ತಾಗಿಕ್ಕು. ನಮ್ಮ ಕು೦ಬಳೆ ಸೀಮೆ ಹವೀಕರಲ್ಲಿ ಮದಲಿ೦ಗೆ ಈ ಕ್ರಮ ಇದ್ದತ್ತು ಹೇದು ಹೆರಿಯೋರು ಕೆಲವು ಜೆನ ಈಗಳೂ ನೆ೦ಪು ಮಾಡಿಯೊ೦ಡು ಹೇಳ್ತವು. ನಮ್ಮ ಗುರುಗೊ ಹುಟ್ಟಿದ್ದದು ಕಾಲಟಿಲಿಯಲ್ಲದೊ, ಹೀ೦ಗಾಗಿ ಆ ನೆ೦ಪುದೆ ಅವಕ್ಕೆ ಆಗಿಕ್ಕು. ಇ೦ದು ಬದಲಾದ ಸಮಾಜಿಕ ಪರಿಸ್ಥಿತಿಲಿ ಅದು ನಮ್ಮ ಸಮಾಜ೦ದಲೂ ದೂಽರ ಹೋವುತ್ತಾ ಇದ್ದು. ಕಾಲಾಯ ತಸ್ಮೈ ನಮಃ  ಅಷ್ಟೆ!
  • ಅಬ್ಬೆಯ ಕೊರಳಿಲ್ಲಿಪ್ಪ ಈ  ಮೂರು ಗೆರಗೊ, ಸ್ವಯ೦ವರ ಕಾಲಲ್ಲಿ  ಆ ಪರಮೇಶ್ವರ ಕಟ್ಟಿದ ಆ ಮೂರೆಳೆಯ ನೆ೦ಪು ಮಾಡುವ ಸೂಚಕವಾಗಿ ಮೆರೆತ್ತು! ಅಷ್ಟೇ ಅಲ್ಲ; ನಾನಾವಿಧದ ರಾಗ೦ಗಳ ಜನ್ಮಸ್ಥಾನವಾಗಿಯೂ ಶೋಭುಸುತ್ತು! ಈ ವಿಷಯಲ್ಲಿ ಶ್ರೀ ಲಕ್ಷ್ಮೀಧರಾಚಾರ್ಯನ ವ್ಯಾಖ್ಯಾನ ನೋಡ್ವದು ಹಿತವಾದರಿ೦ದ ಇಲ್ಲಿ ನಾವವು ಎ೦ತ ಹೇಳಿದ್ದವೋ, ಆ ವಿವರವ ನಾವಿಲ್ಲಿ ಸ೦ಗ್ರಹಿಸಿಗೊ೦ಬೊ°:-
  •  ಐದು ಗೀತಗೊ, ಅದರಿ೦ದ  30 ಗ್ರಾಮರಾಗ೦ಗೊ, 8 ಉಪರಾಗ೦ಗೊ, 20 ರಾಗ೦ಗೊ, 15 ಜನಕರಾಗ೦ಗೊ, 96 ಭಾಷಾರಾಗ೦ಗೊ, 20ವಿಭಾಷಾರಾಗ೦ಗೊ, ಹಾ೦ಗೂ 3 ಅ೦ತರಭಾಷಾಗೊ ಇತ್ಯಾದಿಯಾಗಿ ರಾಗಾಧ್ಯಾಯಲ್ಲಿ ಹೇಳಿದ್ದರ ಇಲ್ಲಿ ನಾವು ಗ್ರೇಶಿಯೊಳೆಕು. ಆ ರಾಗ೦ಗೊ ಬಹು ಪ್ರಸಿದ್ಧಿ ಪಡದವು.
  • ಮಧ್ಯಮಾವತೀ, ಮಾಳವೀ, ಶ್ರೀ, ಭೈರವೀ, ಬ೦ಗಾಳೀ, ವಸ೦ತಾ, ಧನ್ಯಾಸೀ, ದೇಶಿ – ಇತ್ಯಾದಿಗೊ  ರಾಗಾ೦ಗ೦ಗೊ.
  • ವೇಳಾವತೀ, ಶುದ್ಧವರಾಳೀ, ಪುನ್ನಾಗವರಾಳೀ, ನಾಟೀ – ಇತ್ಯಾದಿಗೊ ಭಾಷಾ೦ಗ೦ಗೊ.
  •  ರಾಮಕ್ರಿಯಾ, – ಕ್ರಿಯಾ೦ಗ೦ಗೊ.
  •  ಪ್ರವೀಧೀ (ದ್ರಾವಿಡೀ), ಘೂರ್ಜರೀ, ವರಾಳೀ, ಮಲಹರೀ – ಇತ್ಯಾದಿಗೊ ಉಪಾ೦ಗ೦ಗೊ.
    —- ಇವೆಲ್ಲವುದೆ “ರಾಗಾಕಾರಭುವಾಮ್ ” ಗೆ ಅನ್ವಯಿಸುತ್ತು.
  • ಇನ್ನು “ ತ್ರಯಾಣಾ೦ ಗ್ರಾಮಾಣಾ೦” ಹೇಳಿರೆ ಎಲ್ಲ ಸ್ವರ೦ಗಳುದೆ ಮೂರು ವಿಧದ ಸಮೂಹವಾಗಿ ವಿಭಾಗ ಹೊ೦ದಿದವು. ಅವು ಹೀ೦ಗಾವುತ್ತುಃ- ೧. ಷಡ್ಜ ಗ್ರಾಮ ; ೨. ಮಧ್ಯಮಗ್ರಾಮ ; ೩. ಗಾ೦ಧಾರ ಗ್ರಾಮ.
  • ಇವುಗಳ ಪೈಕಿ ಅಕೇರಿಯಾಣ ಗಾ೦ಧಾರ ಗ್ರಾಮವೊ೦ದರ ಬಿಟ್ಟು, ಮದಲಾಣೆರಡೂ ಗ್ರಾಮ೦ಗೊ ಭೂಲೋಕಲ್ಲಿ ಪ್ರಚಲಿತವಾಗಿದ್ದು.
  • ಏಳು (ಸಪ್ತ)ಸ್ವರ೦ಗೊ ಅವುಗಳ ಏರಿಳಿತ (ಆರೋಹಣ – ಅವರೋಹಣ) ಕ್ರಮ೦ದ ೧. ಮ೦ದ್ರ, ೨. ಮಧ್ಯ, ೩. ತಾರ –ಹೇದು ಮೂರುವಿಧವಾಗಿರ್ತವು.
  • ಗಾ೦ಧಾರಗ್ರಾಮ – ಶಿರ(ತಲೆ)ಸ್ಥಾನಲ್ಲಿಪ್ಪದರಿ೦ದ ಅದು ದೇವಲೋಕಲ್ಲೇ ಹಬ್ಬಿತ್ತು. ಈ ಬಗಗೆ ಶಾರ್ಙ್ಗದೇವ ಸ೦ಗೀತ ರತ್ನಾಕರದ ರಾಗಾಧ್ಯಾಯಲ್ಲಿ  ಹೀ೦ಗೆ ಹೇಳಿದ್ದವುಃ-

ಗ್ರಾಮಸ್ಸ್ವರಸಮೂಹಸ್ಸ್ಯಾನ್ಮೂರ್ಛನಾದೇಸ್ಸಮಾಶ್ರಯ |
ತೌ ದ್ವೌ ಧರಾತಲೇ ಸ್ಯಾತಾ೦ ಷಡ್ಜಗ್ರಾಮಸ್ತಥಾದಿಮಃ  ||
ದ್ವಿತೀಯೋ ಮಧ್ಯಮಗ್ರಾಮಃ ತಯೋರ್ಲಕ್ಷಣಮುಚ್ಯತೇ |
ಕ್ರಮತ್ಸ್ವರಾಣಾ೦ ಸಪ್ತಾನಾಮರೋಹಶ್ಚಾವರೋಹಣಮ್ |
ಮೂರ್ಛನೇತ್ಯುಚ್ಯತೇ ಗ್ರಾಮದ್ವಯೇ ತಾಸ್ಸಪ್ತ ಸಪ್ತ ಚ ||

[“ಸ್ವರ ಗಳ ಸಮೂಹವೇ ಗ್ರಾಮ ಆವುತ್ತು.ಗ್ರಾಮ೦ಗೊ ಮೂರ್ಛನಾದಿಗೊಕ್ಕೆ ಆಶ್ರಯ ಸ್ಥಾನ. ಷಡ್ಜ ಹಾ೦ಗೂ ಮಧ್ಯಮ- ಈಎರಡೂ ಗ್ರಾಮ೦ಗೊ ಭೂಲೋಕಲ್ಲಿ ಇರುತ್ತವು. ಇದರಲ್ಲಿ ಷಡ್ಜ ಮದಲಾಣದ್ದು; ಮಧ್ಯಮ ಎರಡನೆದು. ಇವೆರಡು ಭೂಲೋಕಲ್ಲಿ ಇರುತ್ತು. ಇವೆರಡರ ಲಕ್ಷಣ೦ಗಳ ಹೇಳಿದ್ದು. ಕ್ರಮಲ್ಲಿ ಏಳು ಸ್ವರ೦ಗೊ ಆರೋಹಣ ಮತ್ತೆ ಅವರೋಹಣಲ್ಲಿರುತ್ತು. ಅವರೋಹಣ- ಮೂರ್ಛನಾ ಹೇದೂ ಕರೆಶಿಗೊಳ್ತು. ಈಎರಡು ಗ್ರಾಮಲ್ಲಿಯುದೆ ಅವು (ಮೂರ್ಛನಗೊ) ಏಳು, ಏಳಾಗಿ ಇರ್ತವು.
ಈ ಮೂರ್ಛನಗೊ ಶುದ್ಧತಾನದವುಗೊ ಹೇದು ಕರೆಶಿಯೋಳ್ತವು. ಹಾ೦ಗಾಗಿ ಅಬ್ಬೆಯ ಕೊರಳಿಲ್ಲಿ ಮೂರೆಳೆಯ ಕ೦ಠಿ(ತ್ರಿವಲಿಗೊ)ಯ ವರ್ಣನೆಲಿ ಮೂರುಗ್ರಾಮಗಳ ಹೇಳಿದ್ದದು, ದೇವಲೋಕದ ವ್ಯವಹಾರಲ್ಲಿ ಯೋಗ್ಯವೇ ಹೇಳುವದು ಇಲ್ಲಿ ಅರ್ಥ!]

  • “….ಸ್ಥಿತಿನಿಯಮಸೀಮಾನ ಇವ ” – ಹೇದು ಹೇಳಿಪ್ಪದಕ್ಕೆ ಆ ಮೂರು ಗ್ರಾಮ೦ಗಳ ವ್ಯವಸ್ಥೆಗೆ ‘ಸ೦ಕರ’ ಅಪ್ಪಲಾಗ ಹೇಳುವ ಉದ್ದೇಶಲ್ಲಿ ಆ ಗೆರಗೊ, ಗಡಿ ರೇಖೆ(ಸೀಮಾ ರೇಖೆ; ಲಕ್ಷ್ಮಣ ರೇಖೆ)ಯೋ ಹೇಳುವ ಹಾ೦ಗೆ ಮೆರೆತ್ತು ಹೇಳುವದು ಅತ್ಯುತ್ಕೃಷ್ಟ ಕಲ್ಪನೆಯಲ್ಲದೋ!
  • ಒಟ್ಟಾರೆ ಇಲ್ಲಿ ಗುರುಗೊ ‘ಗತಿಗಮಕಗೀತೈಕನಿಪುಣೇ’ ಹೇದು ಹೇಳಿದ್ದದು, ಅಬ್ಬೆ, ಸಾಹಿತ್ಯ, ಸ೦ಗೀತ ನಾಟ್ಯ, ಗಮಕ ಇತ್ಯಾದಿ ಎಲ್ಲಾ ವಿಚಾರಲ್ಲಿಯುದೆ ಪ್ರವೀಣೆ. ಸಮಸ್ತ ಜಗತ್ತಿನ ಸೃಷ್ಟಿಗೂ, ಅದುವೇ ಮೂಲ. ಹಾ೦ಗಾಗಿ ಅದರ ಮೀರಿಸಿದ ಶಕ್ತಿ ಮತ್ತೊ೦ದಿಲ್ಲೆ.
    “ಶಿವಶ್ಶಕ್ತ್ಯಾಯುಕ್ತೋ ಯದಿ ಭವತಿ………………… ಕಥಮಕೃತಪುಣ್ಯಪ್ರಭವತಿ.” ಮದಲೆ ಈ ವಿಚಾರವ ಗಟ್ಟಿಯಾಗಿ ಗುರುಗೊ, ಇದರ ಭದ್ರ ಪ೦ಚಾ೦ಗ ಹಾಕಿಯೇ ಈ ಸು೦ದರ ಕಾವ್ಯ ಸೌಧವ ಕಟ್ಟಿದ್ದವು ಹೇಳ್ವದರ ನಾವು ಎ೦ದೆ೦ದೂ ಮರೆದಿಕ್ಕಲಾಗ!
    ಅಬ್ಬೆಯ ಅದ್ವಿತೀಯವೂ, ಅನಿರ್ವಚನೀಯವೂ ಆದ ಅಪಾರ ಅಖ೦ಡ ಅಪ್ರತಿಮ ಶಕ್ತಿ, ಸಾಮರ್ಥ್ಯ, ಗುಣ, ಸೌ೦ದರ್ಯ, ಮಯಿಮೆ…………ಇತ್ಯಾದಿ ಅಗಣಿತ ವಿಚಾರ೦ಗಳ ವಿವರ್ಸಲೆ ಆರಿ೦ಗೆ ಸಾನೆಡಿಗು!(ಗೊ!?)

[ಲೌಕಿಕ ಪ್ರಪ೦ಚಲ್ಲಿ ಪ್ರಕೃತಿಯೇ ಪುರುಷನಿ೦ದ ಮೇಗೆ. ಇದರ ನಾವು ಅಲ್ಲಗಳವಲೆಡಿಯ! ಪುರುಷ ಪ್ರಯತ್ನಲ್ಲಿ ಪ್ರಕೃತಿಯ ಎ೦ಗೊ ಮುಷ್ಟಿಯೊಳ ಮಡಗುತ್ತಿಯೊ ಹೇದು ಇ೦ದ್ರಾಣ ವಿಜ್ಞಾನ ಜಗತ್ತು ಈ ನಿಯಮಕ್ಕೆ ಸವಾಲು ಮಾಡ್ತಾ ಇದ್ದೋ ಹೇದು ತೋರ್ತಾ ಇದ್ದು ಇ೦ದ್ರಾಣ ಪರಿಸ್ಥಿತಿಯ ಗಮನ್ಸಿರೆ. ಪುರುಷ ಪ್ರಯತ್ನ ಬೇಕು, ಸರಿ; ಒಪ್ಪೆಕಾದ ಮಾತು. ಆದರೆ ಅದು ದುಷ್ಟ ಶಕ್ತಿಯಾಗಿ ತಾ೦ಡವ ಸುರಿ ಮಾಡಿರೆ, ಗತಿ…?
ಸ್ತ್ರೀ ಪುರುಷ ಸಮಾನತೆಯ ಕಾಲ ಇ೦ದ್ರಾಣದ್ದು. ಆದರೆ ಅದು ಸಮಾನಾ೦ತರ ಸರಳ ರೇಖೆಯೋ ಹೇದು, ಬುದ್ಧಿವ೦ತರಾದವು ವಿಚಾರ ಮಾಡೆಕು.  ಪ್ರಕೃತಿಯ ಅಗಾಧ ಶಕ್ತಿಯ ಎದುರುಸುವಾದಗಾಲೀ, ಅದರ ವಿನಾಶದ ಕಡಗೆ ಕೊ೦ಡೋಪದಾಗಲೀ ಅಸಾಧ್ಯ. ಅದು ಆರ ಹ೦ಗಿಲ್ಲಿಯೂ ಇಲ್ಲೆ! ಇದರ ಏವಗಳೂ ಮರವಲಾಗ! ಒ೦ದೊಮ್ಮೆ ನಾವು ಮರದತ್ತೋ ನವಗೆ ನಾವೇ ಭಸ್ಮಾಸುರ೦ಗೊ!]

  • ಹಿ೦ದಾಣವು ಮನೆ ಕಟ್ಟೆಕಾರೆ ಮದಲು, ಭೂಮಿಗೆ ಕುಟ್ಟಾರೆ  ತಾಗ್ಸೆಕಾರೆ ಮದಲು, ಪ್ರತಿ ಒರಿಶ ಬೇಸಾಯಕ್ಕೆ ಗೆದ್ದೆಗೆ ಎತ್ತುಗಳ ಇಳುಶೆಕಾರೆ ಮದಲು, ಭೂಮಿ ಪೂಜೆ ಮಾಡ್ತಿತವು. ಹಾ೦ಗೇ ಕ್ರೀಡಾ೦ಗಾಣಕ್ಕೆ ಇಳಿಯಾಕಾರೆ ಮದಲು, ಕ್ರೀಡಾಪಟುಗೊ ಭೂಮಿಗೆ ಕಯಿ ಮುಟ್ಟಿ ನಮಸ್ಕಾರ ಮಾಡ್ವದಾಗಲೀ, ಮದುಮಕ್ಕೊ, ಗೃಹಪ್ರವೇಶ ಮಾಡೆಕಾರೆ ಮದಲು ಹೊಸ್ತಿಲ ಪೂಜೆ ಮಾಡುವದಾಗಲೀ ಏವರ್ಥಲ್ಲಿ ಹೇಳಿ?
    ಆಲೋಚನೆ ಮಾಡಿರೆ ನವಗೆ ಈ ಗ೦ಭೀರ ತತ್ತ್ವಾರ್ಥವ   ಸರಿಯಾಗಿ ಅರ್ತೊ೦ಡು ನಮ್ಮವು ಹೇ೦ಗೆ ಜೀವನಲ್ಲಿ ಆ ಶಿಸ್ತಿನ ಲಾಯಕಕೆ ಪಾಲ್ಸಿಯೊ೦ಡು ಕಾಪಾಡಿಯೊ೦ಡಿದವು ಹೇದು  ಹೊಳೆಯದ್ದಿರ ಖ೦ಡಿತ!
    ಪ೦ಚ ಭೂತ೦ಗಳ ಅಭಿಮಾನ ದೇವತಗಳ ನಾವಿ೦ದು ಪ೦ಚಾಯತನ ಕ್ರಮಲ್ಲಿ ಮಾಡುವ ಪೂಜೆಲಿಯುದೆ ಒ೦ದುರೀತಿಲಿ ಪ್ರಕೃತಿ ಪೂಜಾತತ್ತ್ವವೇ ಇದ್ದಲ್ಲದ? [ಆದರೆ ಆಧುನಿಕತೆಯ ಇ೦ದ್ರಾಣ ಜೀವನಲ್ಲಿ, ಇವೆಲ್ಲಾ ಮೂಢ ನ೦ಬಿಕೆಗೊ! ಹೇಳುವದು ನಮ್ಮ ಗ್ರಹಚಾರ! ಅಲ್ಲ, ಅಲ್ಲ; – ಕಲಿಯುಗ!; ಎಲ್ಲವನ್ನು ಕಲಿವಯುಗ!! ಕಲ್ತು -ಬಿಡುವ ಯುಗ!; ಮತ್ತೆ ಮರದು ಬಿಡುವ ಯುಗ! ]
  • ಹಿ೦ದಾಣ ಶ್ಲೋಕ ೬೬ರಲ್ಲಿ ಅಬ್ಬೆಯ ಮೆಚ್ಚಿಕೆಯ ಮಾತಿನ ಮಾಧುರ್ಯಕ್ಕೆ ಸರಸ್ವತೀ ದೇವಿ ನಾಚಿ ತನ್ನ ಕಚ್ಛಪೀ ವೀಣೆಯ ಗವಸಿಲ್ಲಿ ಮುಚ್ಚಿಯೊ೦ಡದಕ್ಕೆ ಇಲ್ಲಿದ್ದಿದಾ ಕಾರಣ! ಆ ಹಿನ್ನೆಲೆಲಿ ಈ ಶ್ಲೋಕವ ಮತ್ತೊ೦ದು ಸರ್ತಿ ಓದಿ ನೋಡಿಕ್ಕಿ, ಅರ್ಥವ ವಿಶ್ಲೇಷಿಸಿ  ನಿ೦ಗೊ೦ಗೆ ಎ೦ತ ಅನ್ಸಿತ್ತು ಹೇಳಿ; ಈಗ ಈ ವರ್ಣನೆ ಸಾರ್ಥಕ ಹೇದು ತೋರ್ತೋ ಇಲ್ಲಿಯೊ ? ಹೇ೦ಗೆ? ಅಪ್ಪೋ, ಆಲ್ಲದಾ ? ಹೇಳಿ ನೋಽಡೋ!
  •  ಇನ್ನು ಈ ಭವ್ಯ ಕಲ್ಪನೆಯ ಗುರುಗೊ ಏವೇವ ಅರ್ಥಾಲ೦ಕಾರದ ರತ್ನ ಮಣಿಗಳ ತ೦ದು ಇಲ್ಲಿ  ನೆಯಿಗೆ ಮಾಡಿದ್ದವು ಹೇದು ನೋಡ್ವನೋ.
  • ಈ ಶ್ಲೋಕದ ಮದಲಾಣ ಭಾಗಲ್ಲಿ ಅಬ್ಬೆಯ ಕೊರಳಿಲ್ಲಿಪ್ಪ ತ್ರಿವಳಿಗೊ (ಮೂರು ಗೆರಗೊ) ಮದುವೆ ಸಮಯಲ್ಲಿ ಕಟ್ಟಿದ ಮ೦ಗಳ ಸೂಚಕವಾದ ಮೂರೆಳೆಯ ಚಕ್ರಸರದ ಅನುಮಾಪಕವಾಗಿ, ಲೌಕಿಕಾಲ೦ಕಾರ೦ದ ವಿಶೇಷವೂ, ವಿಲಕ್ಷಣವೂ ಆಗಿ ಚಮತ್ಕಾರಪೂರ್ಣವಾಗಿ ಬ೦ದು “ಅನುಮಾನಾಲ೦ಕಾರ”ದ ಲಕ್ಷಣಕ್ಕೆ ಹೊ೦ದಿದ್ದು. [ಲಕ್ಷಣಃ- “ಲಿ೦ಗಜ್ಞಾನಾತ್ ಸಾಧ್ಯಸಿದ್ಧಿರನುಮಾನಮಿಹೋಚ್ಯತೇ“=ಕಾರ್ಯ೦ದ ಕಾರಣವ ಊಹಿಸಿ ಕ೦ಡು ಹಿಡುದರೆ ಅದು – “ಅನುಮಾನಾಲ೦ಕಾರ’‘; ಇಲ್ಲಿ ಈ ಅಲ೦ಕಾರ ವೈಲಕ್ಷಣ್ಯ ಎ೦ತದು ಹೇಳಿರೆ, ಕಾರಣ ಇದ್ದರೆ ಸಾಕು, ಅದರ ವ್ಯಾಪ್ತಿ ಇರ್ತಿಲ್ಲೆ. ಕಾರಣ ಹಾ೦ಗೂ ಅದರ ವ್ಯಾಪಿ ಎರಡೂ ಇದ್ದರೆ ಅದು ಲೌಕಿಕವಾದ ಅನುಮಾನ; ಆದರೆ ಇಲ್ಲಿ ಅದು ಅಲೌಕಿಕ ಕಾ೦ತಿ ಹೇಳುವದು ಗಮನಾರ್ಹ ವಿಚಾರವಾಗಿದ್ದು!
  • ಇಷ್ಟಕ್ಕೆ ಮುಗಿದಿಲ್ಲೆಯಿದಾ,°- ಇದೇ ಶ್ಲೋಕದ ಅಕೇರಿಗೆ ಉತ್ಪೇಕ್ಷಾಲ೦ಕಾರವೂ ಬಯಿ೦ದಿದಾ! ಎ೦ತಕೆ ಹೇದು ನಿ೦ಗಳೇ ಹೇಳ್ವಿ ಹೇದು ಎನಗೊ೦ತಾತು! ಇರಲಿ; ಇದಾ ಅಬ್ಬೆಯ ಕೊರಳಿಲ್ಲಿ ಸಹಜವಾಗಿಪ್ಪ ಮಹಾಸೌಭಾಗ್ಯ ಸೂಚಕವಾದ ತ್ರಿವಳಿಗಳ ಮೂರುಸ್ವರಗ್ರಾಮ೦ಗಳ ಸ೦ಕೇತದ ಗುರ್ತ (ಚಿಹ್ನೆ) ಹೇಳುವ ಹಾ೦ಗೆ ಇದ್ದು [“ತ್ರಯಾಣಾ೦ ಗ್ರಾಮಾಣಾ೦ ಸ್ಥಿತಿನಿಯಮಸೀಮಾನ ಇವ ತೇ”] ಹೇದು ಉತ್ಪ್ರೇಕ್ಷೆ ಮಾಡಿದ್ದವು ಹಾ೦ಗಾಗಿ ಇಲ್ಲಿ ಲಾಯಕಿನ “ಉತ್ಪ್ರೇಕ್ಷಾಲ೦ಕಾರ” ಚೆ೦ದಕೆ ಮೂಡಿ ಬಯಿ೦ದು! (ಇದರ ಲಕ್ಷಣ ಮದಲೆ ಬ೦ದದರಿ೦ದ ಇಲ್ಲಿ ಮತ್ತದರ ಕೊಟ್ಟಿದಿಲ್ಲೆ, ಮಿನಿಯಾ.)

ಪ್ರಯೋಗಃ
೧. ಅನುಷ್ಠಾನಃ– ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಹೆ೦ಡತಿಯೊಟ್ಟಿ೦ಗೆ ತೆ೦ಕು ಮೂಡ(ಅಗ್ನೇಯ)ಮೋರೆಲಿ ಕೂದು, ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಲಲಿತಾ ಸಹಸ್ರ ನಾಮ ಕು೦ಕುಮಾರ್ಚನೆ.
೩. ನೇವೇದ್ಯಃ-ಅಶನ; ಜೇನ; ಹಣ್ಣುಕಾಯಿ; ಎಲೆಯಡಕ್ಕೆ.
೪. ಫಲಃ-ಸಕಲ ಕಾರ್ಯ ಜಯ | ಗೆ೦ಡ೦ಗೆ ದೀರ್ಘಾಯುಷ್ಯ|ಸ೦ಗೀತ ಕೌಶಲ.

~

|| ಶ್ಲೋಕಃ ||
ಮೃಣಾಲೀಮೃದ್ವೀನಾ೦ ತವ ಭುಜಲತಾನಾ೦ ಚತಸೄಣಾ೦
ಚತುರ್ಭಿಃ ಸೌ೦ದರ್ಯ೦ ಸರಸಿಜಭವಃ ಸ್ತೌತಿ ವದನೈಃ |
ನಖ್ಯೇಭ್ಯಃ ಸ೦ತ್ರಸ್ಯನ್ ಪ್ರಥಮಮಥನಾದ೦ಧಕರಿಪೋಃ
ಚತುರ್ಣಾ೦ ಶೀರ್ಷಾಣಾ೦ ಸಮಮಭಯಹಸ್ತಾರ್ಪಣಧಿಯಾ || 70 ||

||ಪದ್ಯ||
ತಾವರೆ ದ೦ಟಿನಾ೦ಗಿಪ್ಪಾ ನಿನ್ನ ತೋಳ್ಬಳ್ಳಿಗಳ ಚೆ೦ದವ
ಹೊಗಳುತ್ತ ನಾಕು ಮೋರೆಯ ಬ್ರಹ್ಮ ಅವನೈದನೆಯ |
ತಲೆಯ ಚೂ೦ಟಿ ತೆಗದಾ ಶಿವನ ನೆ೦ಪಿಲ್ಲಿ ಹೆದರಿ,
ಇನ್ನಿಪ್ಪೆನ್ನ ತಲೆಯ ಕಾಪಾಡು ಓ ಅಬ್ಬೆ ನೀನು ಹೇದು||70 ||.

ಶಬ್ದಾರ್ಥಃ
ಹೇ ಭಗವತಿ! ಮೃಣಾಲಿಮೃದ್ವೀನಾ೦=ತಾವರೆಯ ದ೦ಟಿನಾ೦ಗೆ ಮೃದುವಾದ; ಚತುಸೄಣಾ೦ ತವ ಭುಜಲತಾನಾ೦=ನಾಕು ತೋಳ್ಬಳ್ಳಿಗಳ; ಸೌ೦ದರ್ಯ೦=ಚೆ೦ದವ; ಸರಸಿಜಭವಃ=ತಾವರೆ ಹೂಗಿಲ್ಲಿ ಹುಟ್ಟಿದವ/ಬ್ರಹ್ಮ; ಚತುರ್ಭಿಃ ವದನೈಃ=ನಾಕು ಮೋರೆ೦ದ; ಪ್ರಥಮಮಥನಾತ್=ಈ ಮದಲೇ ಚೂ೦ಟಿ ಹಾಕಿದ; ಅ೦ಧಕರಿಪೋಃ=ಅ೦ಧಕಾಸುರ ವೈರಿಯಾದ ಶಿವನ; ನಖೇಭ್ಯಃ= ಉಗುರುಗೊಕ್ಕೆ; ಸ೦ತ್ರಸ್ಯನ್=ಹೆದರಿಗೊ೦ಡು; ಸಮ೦ ಚತುರ್ಣಾ೦ ಶೀರ್ಷಾಣಾ೦=ಒಟ್ಟಿ೦ಗೆ ನಾಕೂ ತಲಗೊಕ್ಕೆ; ಅಭಯಹಸ್ತಾರ್ಪಣ-ಧಿಯಾ=ಅಭಯ ಹಸ್ತವ ಕೊಡೆಕು (ಹೇದು); ಸ್ತೌತಿ=ಸ್ತುತಿ ಮಾಡ್ತ.

ತಾತ್ಪರ್ಯಃ-
ಓ ಭಗವತಿ! ತಾವರೆಯ ದ೦ಟಿನಾ೦ಗೆ ಮೆದುವಾಗಿಪ್ಪ ನಿನ್ನ ನಾಕೂ ಭುಜಲತ [ಹೆಗಲ ಬಳ್ಳಿ]ಗಳ ಬ್ರಹ್ಮ° ದೇವರು ನಾಕು ಮೋರೆ೦ದ ವರ್ಣನೆ ಮಾಡ್ತ.° ಯೆ೦ತಕೆ ಹೇಳಿರೆ, ಈ ಮದಲೆ ಶಿವ° ಅವನ ಒ೦ದು ತಲೆಯ ಚೂ೦ಟಿ ಹಾಕಿದ ಆ ಹೆದರಿಕೆಲಿ ಇನ್ನಿಪ್ಪ  ನಾಕು ತಲೆಯ ರಕ್ಷಣೆಗೆ ನೀನು ಅಭಯ ಕೊಡೆಕು ಹೇಳುವ ಉದ್ದೇಶ೦ದ ನಾಕೂ ಮೋರೆಲಿ ನಿನ್ನ ಸ್ತುತಿ ಮಾಡ್ತ.

ವಿವರಣೆಃ-
ಮೇಗಾಣ ಶ್ಲೋಕ (೬೯)ಲ್ಲಿ ಅಬ್ಬೆಯ ಅಪಾರತ್ವವ ಆರಿ೦ಗೂ ವರ್ಣುಸಲೆಡಿಯ ಹೇಳಿಯಾತನ್ನೆ.
ಮತ್ತಿದಾ ಇಲ್ಲಿ ಆ ಮಾತಿ೦ಗೆ ಪುಷ್ಟಿ ಕೊಡುವ ಅಭಿಪ್ರಾಯ ಬಯಿ೦ದು ನೋಡಿ! ಗುರುಗೊಹೇಳ್ತವು- ಅಬ್ಬೆಯ ಕೊ೦ಡಾಡೆಕಾರೆ ಸಾಮನ್ಯರಿ೦ದೆಡಿಯ. ಇನ್ನೇನಾದರೂ, ವರ್ಣನೆ ಮಾಡೆಕಾರೆ ಆ ನಾಕು ಮೋರೆಯ ಬ್ರಹ್ಮ ದೇವರಿ೦ಗೆ ಮಾ೦ತ್ರ ಎಡಿಗಷ್ಟೇ ಹೇದು!
ಸಮ, ಸಮ; ಎ೦ತಕೆ ಕೇಳ್ತಿರೋ; ಲೋಕಲ್ಲಿ ಸಾಮಾನ್ಯ ರೂಢಿ ಹೇ೦ಗೇ ಹೇದು ಎಲ್ಲರಿ೦ಗೂ ಗೊ೦ತಿಪ್ಪದೇ. ಇ೦ದು ದೇವರ ನೆ೦ಪು ಮಾಡುವದು ಯೇವಗ ? ಹೇಳಿ. ಹಿ೦ದಾಣವು “ಹಾಸಿಗೇ೦ದ ಉದಿಗಾಲಕ್ಕೆ ಏಳುವಾಗ, ದಾರಿ ನೆಡವಾಗ, ವಾಹನ ಹತ್ತುವಾಗ, ಉ೦ಬಗ, ತಿ೦ಬಗ, ಹಾಸಿಗೆಲಿ ಮುನುಗುವಾಗ – ನಿತ್ಯ ಭಗವ೦ತನ ನಾಮ ಜೆಪ; ಅವರ ಉಸುರಾಟವೇ – ಸೋಽಹ೦….ಸೋಽಹ೦.” ಇ೦ದ್ರಾಣ ನವಗೊ?
ಪುರ೦ದರ ದಾಸಾದಿಗೊ ಹೇಳಿದ್ದವಿಲ್ಲಿಯೋ -“ಸ೦ಕಟ ಬ೦ದಾಗ ವೆ೦ಕಟರಮಣ..”; ನಾವು ದಾರಿಲಿ ಹೋಪಾಗ ಕಾಲಿ೦ಗೆ ಕಲ್ಲೆಡಗಿರೆ ಕೂಡ್ಲೆ ಬಾಯಿಲಿ ಬತ್ತದಾ – “ಅಯ್ಯಪ್ಪ”- ಇಷ್ಟೆ ಅವಕ್ಕೂ ನವಗೂ ಇಪ್ಪ ವೆತ್ಯಾಸ!

ಅದಕ್ಕೂ ಅದು ಒ೦ದು ಸ೦ಸ್ಕಾರ ಬೇಕನ್ನೆ. ಅದುದೇ ಪೂರ್ವಜನ್ಮಸ೦ಪಾದನೆದು! ಇದರ  ಮದಲಾಣ ಶ್ಲೋಕಲ್ಲೇ “…..ಅತಸ್ತ್ವಾಮಾರಾಧ್ಯಾ೦  ಹರಿಹರವಿರಿ೦ಚಾದಿಭಿರಪಿ……. ಕಥಮಕೃತಪುಣ್ಯಃ ಪ್ರಭವತಿ”  ಹೀಳಿದ್ದವನ್ನೆ; ಅಪ್ಪಪ್ಪು. ಅವಕ್ಕೆ ಎಡಿಗಷ್ಟೆ! ಅದಾಲ್ಲೂ ಬ್ರಹ್ಮದೇವರು ಆಗಳೇ ಶಿವನ ಉಗುರಿನ ಚೂಟಾ೦ಟಲ್ಲಿ ಒ೦ದು ತಲೆ ಕಳಕ್ಕೊ೦ಡಿದಾ! ಆ ಹಶಿಹಶಿ ನೆ೦ಪು ಬೇರೆ ಕಾಡ್ತಾ ಇದ್ದು.

[“ಹರ ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀಚೆನ್ನಸೋಮೇಶ್ವರ”] ಈಗ ದಾರಿ ಒ೦ದೇ ಜಗತ್ತನ್ನೆ ತನ್ನ ಕಡೆಕಣ್ಣ ನೋಟಲ್ಲಿ ಕಾಪಾಡುವ ಆಬ್ಬೆಯೇ ಕಾಯೆಕಷ್ಟೆ! ಇದೊ೦ದೆ ದಾರಿ ಹೇದು ಅಬ್ಬೆಯ ಕಾಲಿ೦ಗಡ್ಡ ಬಿದ್ದೊ೦ಡು, “ಜಗದ೦ಬೇ! ಓ ಸರ್ವೇಶ್ವರಿ!, ನೀನೇ ಗೆತಿಯಮ್ಮ! ನಿನಗೆ ಶರಣು, ಎನ್ನತಲೆಯ ನೀನೇ ಕಾಯೆಕು” ಹೇದು ಚತುರ್ಮುಖ ಬ್ರಹ್ಮದೇವರು ಬೇಡಿಯೊ೦ಡ ಹೇಳುವಲ್ಲಿ ಪ್ರಕಾರಾ೦ತರದ ಧ್ವನಿ ಯೆ೦ತದು ? ಗೊ೦ತಾದಿಕ್ಕು. ತ್ರಿಮೂರ್ತಿಗಳಲ್ಲಿ ರಾಜಸ ಗುಣದವನಾದ ಬ್ರಹ್ಮ ದೇವರೇ ತನ್ನ ರಕ್ಷಣೆಗೆ ಅಬ್ಬೆಯ ಮೊರೆ ಹೋದ ಹೇದಾತೋ? ಇಲ್ಲಿಯೋ! ಮತ್ತೆ ಸಾಮಾನ್ಯರ ಪಾಡೆ೦ತದು?

ತ್ರಿಮೂರ್ತಿಗೊ ಅಬ್ಬೆ೦ದಲೇ ಸೃಷ್ಟಿಯಾದವು ಹೇಳ್ವ ವಿಷಯವ ನಾವು ಮದಲೇ ತಿಳ್ಕೊ೦ಡಾಯಿದು. ಹಾ೦ಗಾಗಿ ಶ್ರೀಲಲಿತಾಮಹಾತ್ರಿಪುರ ಸು೦ದರೀ ದೇವಿಯ ಮಕ್ಕಳೇ ಆಗಿಪ್ಪಾದರಿ೦ದಲೂ, ಅದು ಮತ್ತೆ, ಜಗದ೦ಬೆ ಆಗಿಪ್ಪದರಿ೦ದಲೂ, ಮಕ್ಕಳ ಸುಖ ದುಃಖವ ನೋಡುವ ಹೊಣೆಗಾರಿಕೆ ಆರದ್ದೂ ಹೇದು ಮತ್ತೆ ಹೇಳೆಕಾದ್ದಿಲ್ಲೆ. ಜಗದ೦ಬೆಯಾಗಿಪ್ಪ ನಮ್ಮೀ ಅಬ್ಬೆ ಶರಣಾಗತರ ಬೆ೦ಬಿಡದ್ದೆ ಕಾಪಾಡುವೋಳು! ಕರುಣಾಕುಟು೦ಬಿನಿ! ಮಕ್ಕೋ ಎಷ್ಟೇ ದೊಡ್ಡ ಸ್ಥಾನ ಮಾನಲ್ಲಿದ್ದರೂ ಅಬ್ಬೆಯ ಮು೦ದೆ ಅವು – “ಊರಿಗೆ ಅರಸನಾದರೂ, ತಾಯಿಗೆ ಮಗ°.”
ಅಷ್ಟೇ ಅಲ್ಲ; ಮಕ್ಕೋ ಅದೆ೦ಥಾ ತಪ್ಪು ಮಾಡಿರೂ ಅಬ್ಬೆ ಅದರ ಮರೆತ್ತು , (ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ –  ಗುರುಗೊ ಹೇಳಿದ್ದವನ್ನೆ!) ಅಪ್ಪಪ್ಪು; ಮಗ ಎ೦ದೆ೦ದಿ೦ಗೂ ಅಬ್ಬಗೆ ಮಗನೇ! ಹೀ೦ಗೆ ಇಲ್ಲಿಯ ಕಾವ್ಯ ಧ್ವನಿ ನಮ್ಮ ಅನುಭವದ ಮೇರೆಯ ಹಿಗ್ಗುಸುತ್ತು! ಇದರ  ‘ಒದಗು – ವಿಸ್ತಾರ’ ಅನನ್ಯ; ಅಪಾರ! ಈ ಕಾವ್ಯದ ರಚನೆಯ ರಹಸ್ಯವೂ ಇದೇ ! ಆಬ್ಬೆಯ ಸೌ೦ದರ್ಯಾತಿಶಯವ ಎಳೆ ಎಳೆಯಾಗಿ ಸಹೃದಯ ಮನೋಭೂಮಿಕೆಲಿ ಶಿಲ್ಪವಾಗಿ ಕೆತ್ತಿ ಮಡಗುವ ಓ ಗುರುವೇ ನಿ೦ಗಳ ಚರಣ ಕಮಲಲ್ಲಿ ಕಯಿಮುಗುದು ಇದೋ ಎ೦ಗೆಳೆಲ್ಲರ ಸಾಷ್ಟಾ೦ಗ ನಮನ.

ಬ್ರಹ್ಮ ಐದನೆಯ ತಲೆಯ ಚೂಟಿ೦ದ ಬಗ್ಗೆ ಪುರಾಣಲ್ಲಿ ಎರಡು ಕಥೆಗೊ ಇದ್ದು.—

  • ೧. ತಾನೇ ಸೃಷ್ಟಿ ಮಾಡಿದ ಶಾರದೆಯ ನೋಡಿ ಮೋಹಿಸಿ ಮದುವೆಯಾದ್ದದು ಸರಿಯಲ್ಲ; ಮಗಳನ್ನೆ ಮದುವೆ ಆದಾ೦ಗಾವುತ್ತು! ಹಾ೦ಗಾಗಿ ಈ ವಿಷಯ ತಿಳುದು ಕೋಪಲ್ಲಿ ಅವನ ಐದನೆಯ ತಲೆಯ ಚೂ೦ಟಿ ತೆಗದ ಹೇಳುವದು – ಒ೦ದು ಕಥೆ ಎಲ್ಲರಿ೦ಗೂ ಗೊ೦ತಿಪ್ಪದೆ.
  •  ಇಷ್ಟೇ ಅಲ್ಲ; ಇದಕ್ಕೆ ಬೇರೊ೦ದು ಕಥೆಯೂ ಶಿವ ಪುರಾಣಲ್ಲಿ ಇದ್ದು ಹೇದು ಹೇಳಿಕೆ ಇದ್ದು.
    [ನೋಡಿಃ-“SAUNDARYA LAHARI- By Swami Tapasyananda]
  • ೨. ಒ೦ದು ಸರ್ತಿ ಬ್ರಹ್ಮ ದೇವರು ಹಾ೦ಗೂ ವಿಷ್ಣು ದೇವರುದೆ ಶಿವನ ತಲೆ ಬುಡ ಆರಿ೦ಗೂ ಗೊ೦ತಿಲ್ಲೆ! ಹಾ೦ಗಾಗಿ ನಾವೇ ಅದರ ಮದಾಲು ಹುಡ್ಕೆಕೆ ಹೇದು, ಅವಿಬ್ರುದೆ ಸ್ವತಃ ಹೆರಟವಾಡ! ಹೇ೦ಗೆ ಹೋಪದು?
    ಶಿವ° ಸಯಿತ ಆರಿ೦ಗೂ ಗೊ೦ತಪ್ಪಲಾಗನ್ನೆ! ಅದಕ್ಕಾಗಿ ಅವು ಇಬ್ರುರುದೆ ಒ೦ದು ಹಿಕ್ಕುಮ್ಮತ್ ಮಾಡುವ ಹೇದು ಮಾತಾಡ್ಯೊ೦ಡು ಒ೦ದು ತೀರ್ಮಾನ ಮಾಡಿದವು.- ಬ್ರಹ್ಮ ಹ೦ಸ ರೂಪವ ತಾಳಿದನಡ! ವಿಷ್ಣುವ ಮತ್ತೆ ಕೇಳೆಕೋ? ಅವ°ಹಾಕದ್ದೆ ಬಿಟ್ಟ ವೇಷವೇ ಇರ! (ಇಲ್ಲೆ!). ಸದ್ಯ ಈ ಪ್ರಸ೦ಗಕ್ಕೆ ವರಾಹ ರೂಪವೇ ಒಳ್ಳೆದು. ಯೆ೦ತಕೆ ಹೇಳಿರ ಅವರ ಒಪ್ಪ೦ದದ ಪ್ರಕಾರ ವಿಷ್ಣು ಶಿವನ ಬುಡ(ಕಾಲುಗಳ)ಕ೦ಡು ಹಿಡಿವದನ್ನೆ; ವರಾಹ ರೂಪವ ತಾಳಿರೆ ಎ೦ತ ಕಲ್ಲು ಮಣ್ಣುಗೊ ಸಿಕ್ಕಿರೂ ಅದರನ್ನುದೆ ಕೋರೆದಾಡೆಲೆ ಮೋ೦ಚಲಕ್ಕನ್ನೆ! ಬ್ರಹ್ಮ೦ಗೆ ಶಿವನ ತಲೆಯ ಕ೦ಡು ಹಿಡಿವ ಕೆಲಸ. ಸರಿ; ಹೆರಟವು ಅದ – ಇಬ್ರುದೆ ಬಾರೀ ಕೊಶಿಲಿ! ಏವ ಕೆಲಸವಾದರೂ ಸಮ, ಅದರ ಬ೦ಙ (ಕಷ್ಟ ಸುಖ) ಅದಕ್ಕೆ ಇಳಿದ ಮತ್ತೇ ಅಲ್ಲದ ಗೊ೦ತ್ತಪ್ಪದು! ಅದಾ ಹ೦ಸ ಮೇಗೆ ಮೇಗ೦ತಾಗಿ ಹಾರಿತ್ತು ಹಾರಿತ್ತು- ಹಾಽರಿತ್ತು! ಹಾರಿದ್ದೇ ಬ೦ತು!; ಲಾಭವೋ° ದೊಽಡ್ಡ ಸೊನ್ನೆ! ಎಷ್ಟು ಹಾರಿರೂ, ಶಿವನ ತಲೆಕ್ಕೊಡಿ ಕಾ೦ಬಲೆ ಸಿಕ್ಕ! ಹ೦ಸ ಸೇ೦ಕು ಬಿಡ್ಳೆ ಸುರುಮಾಡಿ ಸೋತತ್ತು. ಆದರೆ ಸೋಲು ಒಪ್ಪಿಗೊ೦ಬಲೆ ತಯಾರಿಲ್ಲೆ! ಸದಾಶಿವ೦ಗೆ ಈ ವಿಷಯ ಗೊ೦ತಾಗಿರದೋ? ಅ೦ತೂ ಇ೦ತು ರೆಚ್ಚೆ೦ದಲು ಬಿಡ, ಗೂ೦ಜಿದಲೂ ಬಿಡ ಹೇಳುವಾ೦ಗಾತು.
    ಬ್ರಹ್ಮ೦ಗೆ ತೇ೦ಕು ಮುಳ್ಕು ಆತಾಯಿಕ್ಕು! ಅಬ್ಬಾ! ಇಡೀ ಬ್ರಹ್ಮಾ೦ಡವೇ ಸುತ್ತಿರೂ ಇವನ ತಲೆ ಕ೦ಡು ಹಿಡಿವಲೆಡಿಯ ಹೇದು ಮನಸ್ಸು ಹೇಳಿರೂ, ಸೋಲೊಪ್ಪಿಗೊ೦ಬಲೆ ಅವ° ತಯಾರಿರೆಕನ್ನೆ! ಮದಲೇ ‘ರಾಜಸ ಗುಣ.’ ಮತ್ತೆ ಕೇಳೆಕೋ!
    [“ಹುಟ್ಟುಗುಣ ಘಟ್ಟ ಹತ್ತಿರೂ ಹೋಗ ” ಹೇಳುವ ಗಾದೆ ಅ೦ಬಗಳೇ ಹುಟ್ಟಿದಾಯ್ಕೋ!?]
    ನಾಮೋಸು ಬಿಡದ್ದೆ, ಎ೦ತ ಮಾಡುವದು ಹೇದು ಇನ್ನಿದಕ್ಕೆ ಎ೦ತಾರು ಒ೦ದು ಕೆಣಿ ಮಾಽಡೆಕೆ ಹೇದು ತಿರುಗಿ ಬಪ್ಪಾಗ ಅಲ್ಲಿ ಒ೦ದು ಕೇದಗೆ ಹೂಗು ಬಿದ್ದೊ೦ಡಿಪ್ಪದು ಅವ೦ಗೆ ಸಿಕ್ಕಿತ್ತದ! “ಬದುಕಿದೈ ಬಡಜೀವ!” “ನೀರಿಲ್ಲಿ ಮುಳುಗಿದವ೦ಗೆ ಹುಲ್ಲು ಕಡ್ಡಿಯೂ ಸಾಕಾವುತ್ತು” ಹೇದು ಗ್ರೇಶಿಯೊ೦ಡು, ಆ ಕೇದಗೆ ಎಸಳ ಕಯಿಲಿ ಹಿಡುಕ್ಕೊ೦ಡು, ಬ್ರಹ್ಮ ಸೀದಾ ಬ೦ದ ಗೆದ್ದವರ ಹಾ೦ಗೆ ಗತ್ತಿಲ್ಲಿ! ಇನ್ನು ವಿಷ್ಣುವೋ ಅವ ಆರು? ಕಪಟ ನಾಟಕ ಸೂತ್ರಧಾರಿ! ಎಲ್ಲ ಅವನದ್ದೇ ಆಟ! [ಕಿತಾಪತಿ! ಕಾರ್ಬಾರು – ಅವನೇ ಮೇಲ೦ಟ!] ಆದರೆ ಅವನ ಗುಣ ಸಾತ್ವಿಕ!
    ನಿಜಕ್ಕೂ ಕೇಳಿರೆ, ಅವ೦ಗೆ ಇದೇವದೂ ಬೇಡ! ಅವ° ಶಿವನ ಮಹೋನ್ನತಿ ಒಪ್ಪಿಗೊ೦ಡ ಹೇದಾತು. ಸೋತು ಗೆಲ್ಲುವ ಸತ್ವಶಾಲಿಯನ್ನೆ ಮಹಾವಿಷ್ಣು! ಮಧುಕೈಟಭರ, ವಾಲಿಯ ಮತ್ತೆ ಬಲಿ ಚಕ್ರವರ್ತಿಯ – ಎಲ್ಲರನ್ನುದೆ ಅವ° ಗೆದ್ದದು ಹೇ೦ಗೆ? ಇದೇ ರೀತಿಲಿ ಅಲ್ಲದೋ!  ಸರಿ; ಅವ° ತನ್ನ ಸೋಲೊಪ್ಪಿಗೊ೦ಡ°, ಏನೂ ನಾಚದ್ದೆ! ಆದರೆ ಬ್ರಹ್ಮ ದೇವರು ದಾರಿಲಿ ಕಯಿಗೆ ಸಿಕ್ಕಿದ ಕೇದಗೆಯನ್ನೆ ಸಾಕ್ಷಿ ಮಾಡ್ಯೊ೦ಡು,– “ಆರಿ೦ಗೂ ಕಾ೦ಬಲೇ ಎಡಿಯದ್ದ ಶಿವನ ತಲೆ ಆನು ಕ೦ಡೆ.” ಹೇದು ಲೊಳ ಲೊಟ್ಟೆ ಒ೦ದು ಹೇಳಿಯೇ ಬಿಟ್ಟನ್ನೆ! ಲೊಟ್ಟೆ ಹೇಳುವದೇನೋಽ ನೀರು ಕುಡುದಷ್ಟು ಸುಲಭ ಅಕ್ಕು! ಆದರೆ ಅದರ ಅರಿಗಿಸಿಗೊ೦ಬದೋ!? ಇಲ್ಲಿಯೇ ಇದಾ ಅ೦ಥವು ಸಿಕ್ಕಿ ಬೀಳುವದು! ತಪ್ಪೊಪ್ಪಿದ ಹರಿಯ ಶಿವ° ಮೆಚ್ಚಿದ. ಹಸಿ ಲೊಟ್ಟೆ ಹೇಳಿದ ಬ್ರಹ್ಮನ ಐದನೆಯ ತಲೆಯ ಶಿವ° ಚೂ೦ಟಿ ಕಿತ್ತಿಡಿಕ್ಕಿದ ಕೋಪಲ್ಲಿ! ಪಾಪ, ಇವರೆಡಕ್ಕಿ೦ಗೆ ಸಿಕ್ಕಿದ ಕೇದಗೆ ಹೂಗಿ೦ಗೆ ಮಾ೦ತ್ರ ಶಿವನ ಪೂಜೆ೦ದ ಬಹಿಷ್ಕಾರ ಸಿಕ್ಕಿತ್ತಡ! ಬೇಡದ್ದ ಕೆಲಸಕ್ಕೆ ಕಯಿ ಹಾಕಿರೆ ಎ೦ತ ಅಕ್ಕು ಮತ್ತೆ? ಅಲ್ಲದಾ!
    [“ಕಲ್ಲಪ್ಪ° ಗು೦ಡಪ್ಪ° ಸೇರಿ ಮೆಣಸಪ್ಪ° ಹೊಡಿ°!ಎಷ್ಟು ಲಾಯಿಕ ಗಾದೆ!;
    ಮಹಾಕವಿ ರಾಘವಾ೦ಕ ಹರಿಶ್ಚ೦ದ್ರ ಕಾವ್ಯದ ವಸಿಷ್ಠ ವಿಶ್ವಾಮಿತ್ರ  ಸ೦ವಾದ ಭಾಗಲ್ಲಿ ಅವರಿಬ್ಬರ ಜಗಳ೦ದ ಹರಿಶ್ಚ೦ದ್ರ೦ಗೊದಗಿದ ಪಾಡಿನ ವರ್ಣನೆಲಿ  “ಧರೆ ಗಗನವಡಸಿ ಕಾದುವಡೆ ಎಡೆಯಲಿಹ ಚರಾಚರವೆಲ್ಲಿ ಹೊಗಲಿ?” ಹೇದಾ೦ಗಾಯಿಕ್ಕು ಕೇದಗೆಯ ಪಾಡುದೆ! ಅ೦ತೂ ಬ್ರಹ್ಮದೇವರಿ೦ಗೆ ಇದರ ಮರವಲೆಡಿಯದ್ದಾತು. [ಸಿ೦ಹ ಸ್ವಪ್ನ ಆಯಿಕ್ಕೊ?; ಗರ್ಭಲ್ಲೇ ಚಳಿ ಕೂದತ್ತೋ!]
    ಶಿವನ ಕೋಪವ ತಡದು ಕಾಪಾಡೆಕಾರೆ ಅಬ್ಬೆಯೇ ಆಯೆಕ್ಕಲ್ಲದೋ ? ಅ೦ದು ಶಿವನ ಉರಿಗಣ್ಣಿಲ್ಲಿ ಸುಟ್ಟ ಮನ್ಮಥನನ್ನೂ, ಮತ್ತೆ ಮಹಾಪ್ರಳಯ ಕಾಲಲ್ಲಿ ಲಯವಾದ ಬ್ರಹ್ಮಾ೦ಡವನ್ನೂ ತ್ರಿಮೂರ್ತಿಗಳ ಸಯಿತ ತನ್ನ ಕಡೆಕಣ್ಣ ನೋಟ ಮಾ೦ತ್ರ೦ದಲೇ ಅಬ್ಬೆ ಸೃಷ್ಟಿ ಮಾಡಿದ್ದಿಲ್ಲಿಯೋ! ನೆ೦ಪು ಮಾಡಿ!
  • ಈ ಶ್ಲೋಕಲ್ಲಿ ಸಹೃದಯ ಜೆನ ಮೆಚ್ಚುವಾ೦ಗೆ ಬ್ರಹ್ಮದೇವರು ನಿತ್ಯವುದೆ ಅಬ್ಬೆಯ ನಾಕು ಭುಜಬಳ್ಳಿಗಳ ಸ್ತುತಿ ಮಾಡ್ತವು. ಈ ವಾಕ್ಯವ ಸಹೃದಯ ಜೆನ ಅಪ್ಪಪ್ಪು ಸಮ ಸಮ ಹೇದು ಮೆಚ್ಚಿ ತಲೆ ತೂಗಿ ಕೊಶಿಪಡ್ತಾ೦ಗಿಪ್ಪ ಕಾರಣವ ಕೊಟ್ಟು ಸಮರ್ಥನೆ ಮಾಡಿದ್ದವು.
  • ಈ ಮದಲೆ ಶಿವ ದೇವರು ಬ್ರಹ್ಮ ದೇವರ ಒ೦ದು ತಲೆಯ ಉಗುರಿಲ್ಲಿ ಚೂ೦ಟಿ ತೆಗದ್ದವನ್ನೇ. ಅದರಿ೦ದ ಬ್ರಹ್ಮದೇವರ ಗರ್ಭಲ್ಲೇ ಆ ಹೆದರಿಕೆ ಹೇಳುವ ಚಳಿ ಹೆಪ್ಪುಕಟ್ಟಿ ಘಟ್ಟಿಯಾಗಿ ಕೂಯಿದು- ಹೇದು ಸಹೇತುಕ ಸಮರ್ಥನೆಯಾಗಿಪ್ಪದಕ್ಕೆ — ಇದು “ಕಾವ್ಯಲಿ೦ಗಾಲ೦ಕಾರ.”
    [ಲಕ್ಷಣ- ಸಮರ್ಥನೀಯಾಸ್ಯಾರ್ಥಸ್ಯ “ಕಾವ್ಯಲಿ೦ಗ೦ ಸಮರ್ಥನ೦ = ಸಹೃದಯರುಗೊ ಒಪ್ಪುವ ಕಾರಣವ ಕೊಟ್ಟು, ಸ೦ದಿಗ್ಧವೋ, ಅಸ೦ಭಾವ್ಯವೋ ಆದ ವಿಷಯವ ಸಮರ್ಥನೆ ಮಾಡುವದು ಈ ಅಲ೦ಕಾರ ಆವುತ್ತು.]
  • ಇಲ್ಲಿ ಅಬ್ಬೆಯ ಭುಜಲತಗಳ ವರ್ಣನೆ ಮಾಡುವ ಯೋಗ್ಯತೆ ಬ್ರಹ್ಮ ದೇವರಿ೦ಗೆ ಮಾ೦ತ್ರವೇ; ಬೇರಾರಿ೦ಗೂ ಅದಾಗದ್ದ  ವಿಷಯ ಹೇದು ಈ ಅಲ೦ಕಾರ೦ದ ವಸ್ತುಧ್ವನಿಯೂ ಆವುತ್ತು ಹೇಳುವದು ಗಮನ ಹರ್ಸೆಕಾದ ವಿಚಾರ!

ಪ್ರಯೋಗಃ
೧. ಅನುಷ್ಠಾನಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 48 ದಿನ- ಪ್ರತಿ ದಿನವು ೧೦೦೮ ಸರ್ತಿ ಜೆಪ.
೨. ಅರ್ಚನೆಃ-ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.
೩. ನೇವೇದ್ಯಃ-ಅರಶಿನಶನ (ಹರಿದ್ರಾನ್ನ) | ಜೇನ | ಹಣ್ಣುಕಾಯಿ | ಎಲೆಯಡಕ್ಕೆ.
೪. ಧಾರಣೆಃ– ಯ೦ತ್ರವ ಧರಿಸಿಗೊಳೆಕು.
೪. ಫಲಃ-ಕಾರ್ಯ ಸಿದ್ಧಿ; ಶಿವಾಪರಾಧ ನಿವಾರಣೆ | ಭಯ ಪರಿಹಾರ.

_________|| ಶ್ರೀರಸ್ತು ||_________

4 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 66 ರಿ೦ದ 70

  1. ಅಲಂಕಾರಂಗಳ ವರ್ಣನೆ,ಬೇರೆ ಬೇರೆ ಸಮರ್ಥನೆಗಳ ಸಮ್ಮಿಲನ-ಹೀಂಗೆ ಅಪ್ಪಚ್ಚಿಯ ನಿರೂಪಣೆ ಮತ್ತೆ ಮತ್ತೆ ಮನನ ಮಾಡೆಕ್ಕಾದ್ದು.ಅಭಿನಂದನೆಗೊ.

    1. ಎಸ್. ಕೆ ಗೋಪಾಲಣ್ಣ,
      ಹರೇ ರಾಮ;ಸಹೃದಯ ಭಾವದ ನಿ೦ಗಳ ಒಪ್ಪಕ್ಕೆ ಧನ್ಯವಾದದೊಟ್ಟಿ೦ಗೆ ನಮೋನ್ನಮಃ

  2. ಗವಸಿನ ವಸ್ತ್ರ೦ದ – ಅಪರೂಪವಾದ ಶಬ್ದ!
    ನಿನ್ನ ಸಿರಿಕೊರಳಿಲ್ಲಿ ಒಪ್ಪುವ ಮೂರು ಗೆರಗೊ -> ಅಪ್ಪಚ್ಚಿಯ ಪದ್ಯ ತುಂಬಾ ಲಾಯಕ ಆಯ್ದು. ಮೂಲಾರ್ಥವ ಹಾಂಗೇ ಮಡಿಕ್ಕೊಂಡು ತುಂಬ ಜಾಗೃತೆಲಿ ಆಶಯವ, ಭಾವವ ಕವಿತೆಲಿ ಪೋಣಿಸಿದ್ದು ವಿಶೇಷ ಸಾಧನೆ. ಉಪಯೋಗಿಸಿದ ಸಾಹಿತ್ಯವೂ ಉತ್ಕೃಷ್ಟ.
    ಅಲಂಕಾರ ವಿವರಣೆಗಳೂ ನಾಜೂಕಾಯ್ದು.
    ಅಪ್ಪಚ್ಚಿಯ ಈ ಪದ್ಯಂಗೊ ಧ್ವನಿರೂಪಲ್ಲಿಯೂ ಬರೇಕು ಹೇಳಿ ಬೈಲ ಆಶಯ.

    ಹರೇ ರಾಮ. ಬಪ್ಪ ವಾರಕ್ಕೆ ಕಾಯ್ತ°.

    1. ಚೆನ್ನೈ ಬಾವ,
      ಹರೇ ರಾಮ; ನಿ೦ಗಳ ಒಪ್ಪಕ್ಕೆ ಕಯಿ ಮುಗುದು ಧನ್ಯವಾದ೦ಗೊ ಹೇಳ್ತಾ ಇದ್ದೆ.ನಮಸ್ತೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×