Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ – ಶ್ಲೋಕ 76 ರಿ೦ದ80.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   05/02/2013    9 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

|| ಶ್ಲೋಕಃ ||[ರೋಮಾವಳಿಯ ವರ್ಣನೆ]

ಹರಕ್ರೋಧಜ್ವಾಲಾವಲಿಭಿರವಲೀಢೇನ ವಪುಷಾ

ಗಭೀರೇ ತೇ ನಾಭೀಸರಸಿ ಕೃತಸ೦ಗೋ ಮನಸಿಜಃ |

ಸಮುತ್ತಸ್ಥೌ ತಸ್ಮಾದಚಲತನಯೇ ಧೂಮಲತಿಕಾ

ಜನಸ್ತಾ೦ ಜಾನೀತೇ ತವ ಜನನಿ ರೋಮಾವಲಿರಿತಿ || 76 ||

|| ಪದ್ಯ ||

ಓ ಪರ್ವತನ ಮಗಳೆ, ಹರನ ಕೋಪದಾ ಕಿಚ್ಚಿ೦ಗೆ

ದೇಹವದು ಸುಡುವಾಗ ನಿನ್ನ ಹೊಕ್ಕುಳ ಕೆರೆಲಿ ಮುಳುಗಿ

ಕಿಚ್ಚಾರಿಯಲ್ಲಿ ಹೊಗೆ ಬಳ್ಳಿ ರೂಪಲ್ಲಿ ರೋಮರಾಜಿಯಾಗಿ

ಆ ಅನ೦ಗ ಮೂಡಿದನೊ ಹೇದು ಜೆನ ತಿಳಿಗು ||76 ||

ಶಬ್ದಾರ್ಥಃ-

ಹೇ ಅಚಲತನಯೇ! = ಓ ಪರ್ವತನ ಮಗಳೆ; ಓ ಜನನಿ! = ಓ ಅಬ್ಬೆ; ಮನಸಿಜಃ = ಮನ್ಮಥ; ಹರಕ್ರೋಧಜ್ವಾಲಾವಲಿಭಿಃ = ಶಿವನ ಕೋಪದಳ್ಳುರಿಗೆ; ಅವಲೀಢೇನ = ತುತ್ತಾದ; ವಪುಷಾ = ಶರೀರ೦ದ; ಗಭೀರೇ = ಆಳವಾದ; ತೇ = ನಿನ್ನ; ನಾಭೀಸರಸಿ = ಹೊಕ್ಕುಳ ಕೆರೆಲಿ; ಕೃತಸ೦ಗಃ = ಮುಳುಗಿದ°; ತಸ್ಮಾತ್ = ನಿನ್ನ ಹೊಕ್ಕುಳ ಕೆರಯ ದೆಶೆಲಿ; ಧೂಮಲತಿಕಾ = ಹೊಗೆ ಬಳ್ಳಿ; ಸಮುತ್ತಸ್ಥೌ = ಮೇಗೆದ್ದತ್ತು/ಮೂಡಿತ್ತು ; ಹೇ ಜನನಿ = ಓ ಅಬ್ಬೆ; ತಾ೦ = ಆ ಹೊಗೆ ಬಳ್ಳಿಯ; ಜನಃ = ಜೆನ೦ಗೊ ಎಲ್ಲವುದೆ; ರೋಮವಲಿಃ ಇತಿ = ರೋಮರಾಶಿಗೊ; ಜಾನೀತೇ = (ಹೇದು) ಗ್ರೇಶುಗು/ಜಾನ್ಸುಗು.

ತಾತ್ಪರ್ಯಃ-

ಓ ಅಬ್ಬೆ (ಪಾರ್ವತೀ),ಮನ್ಮಥ ಶಿವನ ತಪಸ್ಸಿನ ಕೆಡುಸಲೆ ಹೋಗಿ ಅವನ ಕೋಪಲ್ಲಿ ಹಣೆಕಣ್ಣ ದಳ್ಳುರಿಗೆ ಸಿಕ್ಕಿ, ಉರಿಯ ತಡವಲೆಡಿಯದ್ದೆ[ಶಿವನ ಒಲುಶಲೆ ಹೆರಟ]ನಿನ್ನ “ಹೊಕ್ಕುಳ ಕೆರೆಲಿ” ಮುಳುಗಿದ°.  ಅಲ್ಲಿ ನಿನ್ನಾ ಕಾರುಣ್ಯಾಮೃತಲ್ಲಿ ಮಿ೦ದು,ಮೆಯಿಗೆ ಹಿಡುದ,ಕಿಚ್ಚು ಆರಿರೂ, ಅದರ ಕರಿ ಹೊಗೆ ಬಳ್ಳಿಯ ಹಾ೦ಗೆ ಮೇಗೆದ್ದತ್ತು.ಇದರನ್ನೆ ನಿನ್ನ `ರೋಮಾವಳಿ’ ಹೇದು ಜೆನ೦ಗೊ ಜಾನ್ಸುತ್ತವು.

ವಿವರಣೆಃ-

ಈ ಕಾವ್ಯದುದ್ದಕ್ಕೂ ಏವ ಶ್ಲೋಕವನ್ನೇ ನೋಡಿರೂ  ‘ನವನವೋನ್ಮೇಷತ್ವ ‘ದ ಒ೦ದು ಕಲ್ಪನ ವಿಲಾಸ, ಎದ್ದು ತೋರುತ್ತು!

ಇಲ್ಲಿಯ ಕಾವ್ಯ ಸೌ೦ದರ್ಯ ಲೌಕಿಕವ ಮೀರಿ ನಿ೦ದದು; ಎಲ್ಲದರಲ್ಲೂ ಒ೦ದು ದಿವ್ಯಾನುಭೂತಿ ಆಗದ್ದಿರ!

ಲೋಕೋತ್ತರವಾದ ಒ೦ದು ಅನುಭವ ಓದುಗರಿ೦ಗೆ ಕಟ್ಟಿಕೊಡುವ ಈ ಕೃತಿ ಭಕ್ತಿಭಾವ ತು೦ಬಿ ಹರಿವ ಶೃ೦ಗಾರ ರಸಗ೦ಗೋತ್ರಿಯ ಲಹರಿಯಾಗಿ ಮೆರೆತ್ತು! ಇಲ್ಲಿ ಬಪ್ಪ ಆರ್ಥಾಲ೦ಕಾರ೦ಗೊ ಒ೦ದ೦ದುದೆ ಅಷ್ಟು ಅನನ್ಯ, ಸಾರ್ಥಕ; ಔಚಿತ್ಯಪೂರ್ಣ! ಎಲ್ಲಿಯೂ ಇದು ಅನೌಚಿತ್ಯ ಹೇದು ಹೇಳ್ಳೆ ಸಾಧ್ಯವೇ ಇಲ್ಲೆ! ಇಲ್ಲಿ ಭಾವಾವೇಶಕ್ಕೆ ಒ೦ದಿಷ್ಟೂ ಎಡೆಯೂ ಇಲ್ಲೆ; ಆದರೆ ಭಕ್ತಿಯ ಒದಗು ಅಸಾಧಾರಣ; ಮತ್ತದರ ಆಳಗಲ – ವಿಸ್ತಾರ ಹೇಳಲೆಡಿಯ! ಕಾ೦ಬಲೆಡಿಯ! [ಸಾಧಿಸಿರೆ]ಅನುಭವಿಸಲೆಡಿಗು. ಆದೂ ಬಹಳ ಎಳ್ಪಲ್ಲಿ! ಹೇ೦ಗೇ ಹೇದು ಹೇಳ್ವದು ಮಾ೦ತ್ರ ರಜಾ ಕಷ್ಟವೆ!

ಭಾವನಗೊ ಕಟ್ಟಿ ಕೊಡುವ ವಸ್ತುಗೊ ಅಲ್ಲನ್ನೆ! ಉಕ್ಕುವ ಹಾಲ ಹದಿಯಾ೦ಗೆ ಅದು ಹೃದಯದ ಮಿಡಿತ – ತುಡಿತ೦ಗೊಕ್ಕೆ ಉಕ್ಕುವ ಅ೦ತರಾಳದ ಅನುಭಾವ ಹಾಲಿನ ಹದಿ! ಭಕ್ತಿಯ ಒಳಹರಿವು ಹೆಚ್ಚಿದಾ೦ಗೆಲ್ಲ ಇದರ ಅನುಭವ ವಿಸ್ತಾರವಾಗಿ ಮಾಗಿ, ಅನುಭಾವದೊರತೆ ತಾನಾಗಿ ಮೂಡುತ್ತು; ರಸದ ಬೆಳ್ಳವಾಗಿ ಹರಿತ್ತು! ಆದರೋ° ಈ ಬೆಳ್ಳದ ಹರಿವಿಲ್ಲಿ ಎಲ್ಲಿಯೂ ಕಾ೦ಬಲಿಲ್ಲೆ ಕೆಸರು- ಕೊಚ್ಚೆ! ಇದೇ ಇದರ ಹಿರಿಮೆ; ಭವ್ಯತೆ! ಅದರ ಸಿದ್ಧಿಗೆ ಒ೦ದು ಸ೦ಸ್ಕಾರವೂ ಬೇಕೇ ಬೇಕು!ಅ೦ಥ ಒ೦ದು ಅನುಭೂತಿಯ ಈ ಕಾವ್ಯ ಕಟ್ಟಿ ಕೊಡುತ್ತು ಭಕ್ತ ಮಾನಸಕ್ಕೆ! ಈ ಕೃತಿಗೆ ಬ೦ದ ದೇಶ್ಯ ಹಾ೦ಗೂ ಅನ್ಯದೇಶೀಯ ವ್ಯಾಖ್ಯಾನವೇ ಇಲ್ಲಿ ಋಜುವಾತು ಹೇಳುತ್ತಿದಾ!

ಇಲ್ಲಿ ಅದೆಷ್ಟು ಅಲ೦ಕಾರ೦ಗೊ ಬಯಿ೦ದು ನೋಽಡಿ.

ನೂರಾರು ಮಣಭಾರದ ಬ೦ಗಾರದ ಮಾಲಗಳ ಹಾಕುವದರಿ೦ದ ಕೊರಳಿ೦ಗೆ ಹೊರೆ ಹೊರ್ಸಿದೇ ಬಕ್ಕಲ್ಲದ್ದೆ, ಪ್ರಯೋಜನವಾದರೂ ಎ೦ತದು? ಅದಕ್ಕೆ ಬದಲಾಗಿ ಇಪ್ಪದು ನಾಕೇ ಮಾಲಗೊ, ಆದರೂ ಅದರಲ್ಲೇ ಲಾಯಿಕಿಲ್ಲಿ ಹೊಳವ ನವ ನವರತ್ನ೦ಗೊ ಕೆಲವು ಇದ್ದತ್ತು ಹೇಳಿಯಾದರೆ ಅದರ ಸೊಬಗೇ ಬೇರೆ ಅಲ್ಲದೋ! ಇಲ್ಲಿಯೂ ಹಾ೦ಗೆ! ಎಲ್ಲವುದೆ ಸಾಽರ್ಥಪೂರ್ಣ! ಅರ್ಥಾಲ೦ಕಾರ೦ಗೊ!

ಇಲ್ಲಿ ಬ೦ದ ಅಲ೦ಕಾರ೦ಗೊ ಒ೦ದೆರಡು ಮಣ್ಣೊ ಅಲ್ಲ; ಅದೆಷ್ಟು ಹೇದು ನಿ೦ಗಳೆ ನೋಡಿ ಲೆಕ್ಕ ಮಾಡಿಗಿಯೋಳಿ. ಆಗದಾ?

• ಇಲ್ಲಿ ರೋಮಾವಳಿಯ ಹೊಗೆ ಬಳ್ಳಿ ರೂಪಲ್ಲಿ ಉತ್ಪ್ರೇಕ್ಷೆ ಮಾಡಿದ್ದರಿ೦ದ – “ಉತ್ಪ್ರೇಕ್ಷಾಲ೦ಕಾರ” ಬಯಿ೦ದು.

• ಜೆನ ಅದರ ಹೊಗೆ ಬಳ್ಳಿ ಹೇದು ಜಾನ್ಸುಗು ಹೇಳ್ವದರಿ೦ದ – ಇಲ್ಲಿ ರೋಮದ ಸಾಲುಗೊ ನೋಡುವವಕ್ಕೆ – ಹೊಗೆ ಬಳ್ಳಿಯ ಭ್ರಮೆ ಹುಟ್ಟುಸುವದರಿ೦ದ – “ಭ್ರಾ೦ತಿಮದಲ೦ಕಾರ.

• ಹಾ೦ಗೇ ಈ ರೋಮಾವಳಿಯ ಹೊಗೆ ಬಳ್ಳಿ ಹೇದು ಜೆನ ಅಧ್ಯವಸಾನ ಮಾಡುವದರಿ೦ದ – “ಅತಿಶಯೋಕ್ತಿಯೂ” ಇದ್ದು.

• ಮತ್ತೆ ಅಕೇರಿಗೆ ಅದರ ರೋಮಾವಳಿಯೇ ಹೇದು ಜೆನ ತಿಳಿಗು ಹೇದು ತೀರ್ಮಾನಕ್ಕೆ ಬಪ್ಪದರಿ೦ದ – ನಿಶ್ಚಯಾ೦ತವಾದ “ಸ೦ದೇಹಾಲ೦ಕಾರ“ವೂ ಇದ್ದು.

• ಈ ನಾಕು ಅಲ೦ಕಾರವುದೆ ಜಾನೀತೇ [ಜಾನ್ಸುತ್ತವು] ಹೇಳುವ ಒ೦ದೇ ಶಬ್ದ೦ದ ಉ೦ಟಪ್ಪದರಿ೦ದ ಇಲ್ಲಿ “ಏಕವಾಚಕಾನುಪ್ರವೇಶ ಸ೦ಕರ“ವೂ ಆಯಿದು.

• [ಈ ಎಲ್ಲಾ ಅಲ೦ಕಾರ೦ಗಳ ಲಕ್ಷಣ೦ಗೊ ಮದಲೇ ಕೊಟ್ಟದರಿ೦ದ ಮತ್ತೆ ಇಲ್ಲಿ ಕೊಡುತ್ತಿಲ್ಲೆ.]

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರ ರಚನೆ. ಬಡಗ – ಮೂಡ(ಈಶಾನ್ಯ) ಮೋರೆಲಿ ಕೂದು, 12ದಿನ ನಿತ್ಯವೂ ೧೦೦೧ ಸರ್ತಿ ಜೆಪ.

೨. ಅರ್ಚನೆಃ-ಲಲಿತಾ ತ್ರಿಶತಿ ಕು೦ಕುಮಾರ್ಚನೆ.

೩.ನೇವೇದ್ಯಃ-ಮಸರಶನ | ಪಾಯಸ | ಹಣ್ಣುಕಾಯಿ.

೪.ಫಲಃ-ಆರ್ಥಿಕ,  ಕಾನೂನು – ವ್ಯವಹಾರ ಜೆಯ; ಆತ್ಮಜ್ಞಾನ ಪ್ರಾಪ್ತಿ.

~

|| ಶ್ಲೋಕಃ ||[ರೋಮವಾಳಿಯ ವರ್ಣನೆ.]

ಯದೇತತ್ಕಾಲಿ೦ದೀತನುತರತರ೦ಗಾಕೃತಿ ಶಿವೇ

ಕೃಶೇ ಮಧ್ಯೇ ಕಿ೦ಚಿಜ್ಜನನಿ ತವ ತದ್ಭಾತಿ ಸುಧಿಯಾಮ್ |

ವಿಮರ್ದಾನ್ಯೋನ್ಯ೦ ಕುಚಕಲಶಯೋರ೦ತರಗತ೦

ತನೂಭೂತ೦ ವ್ಯೋಮ ಪ್ರವಿಶದಿವ ನಾಭಿ೦ ಕುಹರಣೀಮ್ || 77 ||

|| ಪದ್ಯ ||

ಓ ಅಬ್ಬೆ ಶಿವೇ, ಯಮುನೆಯಾ ಕಿರು ಸುಳಿಯ ರೂಪಲ್ಲಿಪ್ಪ

ರೋಮದಾ ಸಾಲುಗೊ ಅಲ್ಲಿ ನಿನ್ನಾ ತೆಳುನೆಡುವಿಲ್ಲಿ ಎರಡು |

ಮಲೆಯೆಡೆಯ ಬಾನು ಅವರ ತಿಕ್ಕಾಟಲ್ಲಿ ನಿ೦ಬಲೆಡಿಯದ್ದಲ್ಲಿ

ಹೊಕ್ಕತ್ತು ಕೆಳ ಇಳುದು ಹೊಕ್ಕುಳ ಹೇದಾ ಜ್ಞಾನಿಗೊ ತಿಳಿಗು. ||77||

ಶಬ್ದಾರ್ಥಃ-

ಹೇ ಜನನಿ ಶಿವೇ! = ಓ ಅಬ್ಬೆ ಪಾರ್ವತಿ!; ತವ = ನಿನ್ನ; ಕೃಶೇ ಮಧ್ಯೇ = ಸಪೂರವಾಗಿಪ್ಪನೆಡುಸೆರೆ(ಲ್ಲಿ); ಕಾಲಿ೦ದೀತನುತರತರ೦ಗಾಕೃತಿ = ಯಮುನಾ ನದಿಯ ಸಣ್ಣ ಅಲೆ[ಸುಳಿ]ಯಾ೦ಗಿಪ್ಪ; ಯದೇತತ್ ಕಿಂಚಿತ್= ಈ ಯೇವದೊಂದು [ಎದುರಿ೦ಗೆ ಕಾ೦ಬ]; [ರೋಮಾವಲಿಃ = ರೋಮಾವಳಿ] (ಇದ್ದೋ ಅದು);  ಸುಧಿಯಾ೦ = ವಿದ್ವಾ೦ಸರಿ೦ಗೆ; ಭಾತಿ = ತೋರ್ತಾ ಇದ್ದು. [ಕಥಮ್? = ಹೇಂಗೆ?]; ಕುಶಕಲಶಯೋಃ = ಎರಡು ಮಲೆಗಳ; ಅನ್ಯೋನ್ಯ೦ ವಿಮರ್ದಾತ್= ಪರಸ್ಪರ ತಿಕ್ಕಾಟ೦ದ/ಒ೦ದಕ್ಕೊ೦ದು ಒರಸಿಯೊ೦ಡಿಪ್ಪದರಿ೦ದ; ಅ೦ತರಗತ೦ = ನೆಡುಸರೆ ಇಪ್ಪ; ತನೂಭೂತ೦ = ಸೂಕ್ಷ್ಮವಾದ/ಅತೀ ಸಣ್ಣದಾಗಿಪ್ಪ; ವ್ಯೋಮ = ಬಾನು/ಆಕಾಶ; ನಾಭಿಕುಹರಿಣೀ೦ = ಹೊಕ್ಕುಳಗುಳಿಯ; ಪ್ರವಿಶತ್ ಇವ = ಹೊಗುತ್ತಾ ಇದ್ದೋ ಹೇಳುವಾ೦ಗೆ.

ತಾತ್ಪರ್ಯಃ-

ಓ ಅಬ್ಬೆ, ಪಾರ್ವತಿ! ನಿನ್ನ ಸಪೂರದ ನೆಡುವಿಲ್ಲಿ, ನೀಲಿ ಬಣ್ಣದ ರೋಮಾವಳಿ ಕಾಣ್ತು. ಇದು ಯಮುನಾ ನದಿಯ ಕರಿಯ ಸಣ್ಣ ಸಣ್ಣ ಸುಳಿಗಳಾ೦ಗೆ ಕಾಣುತ್ತು. ಅದೇ ಕವಿಗೊಕ್ಕೆ ನಿನ್ನೆರಡು ಮಲಗಳ ನೆಡುಸರೆ ಸಿಕ್ಕಿ ಹಾಕ್ಯೊ೦ಡಿಪ್ಪ ಆಕಾಶ ಆ ಎರಡು ಮಲಗಳ ತಿಕ್ಕಾಟಲ್ಲಿ ಅಲ್ಲಿ ನಿ೦ಬಲಾಗದ್ದೆ, ಬಚ್ಚಿ ಸಪೂರಾಗಿಪ್ಪ ನಿನ್ನ ನಡುವಿಲಿ ಹರದು, ಮಲೆಯ ಕೆಳದಿಕ್ಕೆ ಗುಡೆಯಾ೦ಗಿಪ್ಪ ಹೊಕ್ಕುಳಗುಳಿಯ ಹೊಕ್ಕತ್ತೋ ಹೇಳ್ವಾ೦ಗೆ ತೋರುತ್ತು.

ವಿವರಣೆಃ-

ಇಲ್ಲಿ ಅಬ್ಬೆಯ ಮೈಯ್ಯ ವರ್ಣನೆಯ ಆಚಾರ್ಯರು ತುಂಬಾ ಲಾಯ್ಕಲ್ಲಿ ವರ್ಣನೆ ಮಾಡಿದ್ದವು. ಸಂಪೂರ್ಣ ಕಾವ್ಯಮಯವೇ ಆದರೂ ಕೂಡಾ ಅಬ್ಬೆಯ ಶರೀರದ ಸೌಂದರ್ಯದ ವರ್ಣನೆ ಮಾಡಿ ನಾವು ಧನ್ಯತೆಯ ಪಡಕ್ಕೊಂಡು ನೆಮ್ಮದಿಲಿ ಇರೆಕ್ಕು ಹೇಳ್ತ ಭಾವನೆ ಇದ್ದು. ಸ್ತ್ರೀ ಶರೀರ ಸೃಷ್ಟಿ ಆದ್ದದೇ ಇನ್ನೊಂದು ಸೃಷ್ಟಿಗೋಸ್ಕರ! ಇಲ್ಲಿ ಪ್ರಕೃತಿಯೇ ಅಬ್ಬೆಯ ಮೈಲಿ ಸಮಾಗಮಗೊಂಡಿದು ಹೇಳುವ ಅರ್ಥಲ್ಲಿ ಆಚಾರ್ಯರು ಶ್ಲೋಕ ರಚನೆ ಮಾಡಿದ್ದವು.

• ಅಬ್ಬೆಯ ನೆಡುವಿಲ್ಲಿ ಇಪ್ಪ ನೀಲಿ ಬಣ್ಣದ ಬಾನ, ಮಲೆ ಕಲಶ ಎರಡರ ತಿಕ್ಕಾಟದ ಕಾರಣ೦ದ ಅಲ್ಲಿ ನಿ೦ಬಲಾಗದ್ದೆ ಅಲ್ಲಿ೦ದ ಸಪೂರಕ್ಕೆ ಕೆಳದಿಕ್ಕೆ ಹರುದು ಗುಡೆಯಾ೦ಗಿಪ್ಪ ಹೊಕ್ಕುಳ ಗುಳಿಯ ಹೊಕ್ಕತ್ತು.

ಅದನ್ನೇ “ರೋಮಾವಳಿ “ ಹೇದು ಜೆನ ಹೇಳ್ತವು ಹೇದು ಹೇಳಿದ್ದರಿ೦ದ ಇಲ್ಲಿ “ಉತ್ಪ್ರೇಕ್ಷಾಲ೦ಕಾರ “ ಇದ್ದು. ಎ೦ತಕೆ ಹೇದರೆ, ಇಲ್ಲಿ ರೋಮಾವಳಿಯ ಸಣ್ಣ ಬಾನದ ಸಾಲುಗೊ ಹೇದು ಉತ್ಪ್ರೇಕ್ಷೆ ಮಾಡಿದ್ದವು.

• ಇಲ್ಲಿ ಸುರುವಿಲ್ಲಿ ಯಮುನೆಯ ಕಿರು ಸುಳಿಯ ರೂಪಲ್ಲಿಪ್ಪ[ತನುತರತರ೦ಗಾಕೃತಿ]ಆಕೃತಿ ಹೇದು ವರ್ಣಿಸಿದ್ದರಿ೦ದ ಇಲ್ಲಿ  “ನಿದರ್ಶನಾಲ೦ಕಾರ ” ಇದ್ದು

• ಈ ಎರಡೂ ಅಲ೦ಕಾರ೦ಗೊಕ್ಕೆ  “ಸ೦ಸ್ಕೃಷ್ಟಿ” ಯೂ ಆಯಿದು.

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರವ ಕೆ೦ಪು ತಾವರೆ ಎಸಳ ಸುಟ್ಟ ಕರಿಕ್ಕಿಲ್ಲಿ ಕಪಿಲೆ ದನದ ತುಪ್ಪಲ್ಲಿ ಸೇರುಸಿ, ಯ೦ತ್ರದ ಮೇಗದಿಕ್ಕೆ ಎರಡು ಸಾಲು ಹಾ೦ಗೂ ಕರೆಲಿ ಒಳದಿಕ್ಕೆ ಎರಡು ಸಾಲಿನ ಹಾ೦ಗೆ  ಬರೆದು, ಮೂಡ ಮೋರೆಲಿ ಕೂದು, 15ದಿನ ೨೦೦೧ ಸರ್ತಿ ಜೆಪ.

೨. ಅರ್ಚನೆಃ– ಕೆ೦ಪು ಹೂಗಿಲ್ಲಿ ಲಲಿತಾಷ್ಟೋತ್ತರಾರ್ಚನೆ.

.ನೇವೇದ್ಯಃ-ಅಶನ; ಪಾಯಸ; ಜೇನ; ಹಣ್ಣುಗೊ.

೪.ಫಲಃ-ರಾಜವಶ್ಯ; ಉದ್ಯೋಗಲ್ಲಿ ಜೆಯ.

~

|| ಶ್ಲೋಕಃ ||[ನಾಭಿಯ ವರ್ಣನೆ]

ಸ್ಥಿರೋ ಗ೦ಗಾವರ್ತಃ ಸ್ತನಮುಕುಲರೋಮಾವಲಿಲತಾ

ಕಲಾವಾಲ೦ ಕು೦ಡ೦ ಕುಸುಮಶರತೇಜೋಹುತಭುಜಃ ।

ರತೇರ್ಲೀಲಾಗಾರ೦ ಕಿಮಪಿ ತವ ನಾಭಿರ್ಗಿರಿಸುತೇ

ಬಿಲದ್ವಾರ೦ ಸಿದ್ಧೇರ್ಗಿರಿಶನಯನಾ೦ ವಿಜಯತೇ  ॥ 78 ||

|| ಪದ್ಯ ||

ಓ ಗಿರಿಜೆ,ನಿನ್ನಾ ಹೊಕ್ಕುಳು ಗ೦ಗಾನದಿಯ ಶಾಶ್ವತದ ಸುಳಿ,

ಮಲೆಮುಕುಟ ರೋಮಾಳಿ ಬಳ್ಳಿಯ ಬುಡದ ಸಾಲು ಪಾತಿ, |

ಕಾಮನಾ ಕಾ೦ತಿಗಗ್ನಿಕು೦ಡ, ಅವನರಸಿ ರತಿಗಾಟದಾ ಶಾಲೆ

ಗೆಲುಗಿದು ನಿನ್ನ ಗೆ೦ಡ ಸದಾಶಿವನ ತಪಃಸಿದ್ಧಿಯ ಬಿಲದ್ವಾರ || 78 ||

ಶಬ್ದಾರ್ಥಃ-

ಹೇ ಗಿರಿಸುತೇ! = ಪರ್ವತನ ಮಗಳೇ; ತವ = ನಿನ್ನ; ನಾಭಿಃ = ಹೊಕ್ಕುಳು; ಸ್ಥಿರೋ=ಶಾಶ್ವತವಾದ; ಗ೦ಗಾವರ್ತಃ = ಗ೦ಗಾನದಿಯ ಸುಳಿಯ ಹಾ೦ಗೆ; ಸ್ತನಮುಕಲರೋಮಾವಲಿಲತಾಕಲಾವಲ೦ = ಮಲೆಯೇ ಮುಕುಟುಗಾಗಿಪ್ಪ   ರೋಮಾವಳಿಗಳ ಬಳ್ಳಿಗೆ ಸಾಲು ಪಾತಿಯ ಹಾ೦ಗೆ; ಕುಸುಮಶರತೇಜೋಹುತಭುಜಃ ಕು೦ಡ೦=ಮನ್ಮಥನ ಕಾ೦ತಿ ಹೇಳುವ ಕಿಚ್ಚಿ೦ಗೆ ಹೋಮಕು೦ಡದಾ೦ಗೆ; ರತೇಃ = ರತಿಯ; ಲೀಲಾಗಾರ೦ = ವಿಲಾಸ ಕೋಣೆ/ಸ೦ತೋಷದ ಕಯಿಸಾಲೆ; ಗಿರಿಶನಯನಾನಾ೦ = ಸದಾಶಿವನ ಕಣ್ಣು; ಸಿದ್ಧೇಃ = ತಪಸ್ಸಿನ ಸಿದ್ಧಿಗೆ; ಬಿಲದ್ವಾರ೦ = ಗುಹೆಯ ದ್ವಾರ [ಬಾಗಿಲು]ದ ಹಾ೦ಗೆ; ಕಿಮಪಿ = ಹೇಳಲೇ  ಎಡಿಯದ್ದ ಹಾ೦ಗೆ/ಬಾಯಿ ಮಾತಿಲ್ಲಿ ಹೇಳಲೆಡಿಯದ್ದ ಹಾ೦ಗೆ [ಅನಿರ್ವಚನೀಯವಾಗಿ]; ವಿಜಯತೇ = ಗೆಲ್ಲುತ್ತು/ಮೆರೆತ್ತು/ಜಯಶಾಲಿ ಆವುತ್ತು.

ತಾತ್ಪರ್ಯಃ-

ಓ ಗಿರಿರಾಜನ ಮಗಳೇ, ನಿನ್ನ ಹೊಕ್ಕುಳು ಗ೦ಗಾನದಿಯ ಶಾಶ್ವತವಾದ ಸುಳಿಯಾ೦ಗೆ ಇದ್ದು. ಮತ್ತೆ ನಿನ್ನ ಮಲೆಮುಕುಟ ರೋಮಾವಲಿಗಳ ಬಳ್ಳಿಯ ಬುಡಲ್ಲಿ ಸಾಲು ಪಾತಿಗಳಾ೦ಗೆ ಇದ್ದು. ಮತ್ತೆ ಮನ್ಮಥನ ಕಾ೦ತಿ ಹೇಳುವ ಅಗ್ನಿಗೆ ಹೋಮಕು೦ಡದಾ೦ಗೆ ಇದ್ದು. ಕಾಮನ ಹೆ೦ಡತ್ತಿ ರತೀ ದೇವಿಯ ಲೀಲಗೆ ಆಟದ ಕಯಿಸಾಲೆಯಾ೦ಗಿದ್ದು. ಇಷ್ಟೇ ಅಲ್ಲ; ಮತ್ತೆ ನಿನ್ನಾ ಗೆ೦ಡ ಸದಾಶಿವನ ಕಣ್ಣುಗಳ ತಪಃಸ್ಸಿದ್ಧಿಯ ಅತೀ ಮನೋಹರದ ಗುಹಾದ್ವಾರವೂ ಆಯಿದು. [ಶಿವನ ಅನುರಾಗದ ನೋಟಕ್ಕೆ ಸ೦ತೋಷವ ಕೊಡುವ ಮು೦ಬಾಗಿಲು [ಮುಖ್ಯ ದ್ವಾರ]ವೂ ಆಯಿದು. ಹೀ೦ಗೆ ನಿನ್ನ ಹೊಕ್ಕುಳು ಬಾರೀ ಲಾಯಕಕ್ಕೆ ಶೋಭುಸುತ್ತು.

ವಿವರಣೆಃ-

• ಇಲ್ಲಿ ಒ೦ದೇ ಹೊಕ್ಕುಳವ ಬೇರೆ ಬೇರೆ ಪ್ರಕಾರಲ್ಲಿ ಹೇಳಿದ್ದರಿ೦ದ ಇದು “ಉಲ್ಲೇಖಾಲ೦ಕಾರ” ಇದ್ದು.

ಮತ್ತೆ ಇದು ಅತಿಶಯೋಕ್ತಿಯೂ ಅಲ್ಲ; ಕಿಮಪಿ [ಹೇಳಲೇ ಎಡಿಯದ್ದ ಹಾ೦ಗೆ] ಯೆ೦ತದು ಹೇದು ಅಧ್ಯವಸಾನ ಮಾಡ್ಳೆ ಆಗದಿಪ್ಪದರಿ೦ದ ಮಾಲಾರೂಪವನ್ನುದೆ ಹೇಳ್ವದು ಸರಿಯಾವುತ್ತಿಲ್ಲೆ.

[ಲಕ್ಷಣಃ-1. ಬಹುಭಿರ್ಬಹುಧೋಲ್ಲೇಖಾದೇಕಸ್ಯೋಲೇಖ ಇಷ್ಯತೇ”

ಸೌ೦ದರ್ಯಾದಿ ಅನೇಖ ಧರ್ಮ೦ದ ಕೂಡಿದ ಒ೦ದು ವಸ್ತುವಿ೦ಗೆ ನಾನಾ ಬಗೆಲಿ ಗ್ರೇಶಿ ವರ್ಣುಸುವದು ಒ೦ದು ಬಗೆಯ ಉಲ್ಲೇಖಾಲ೦ಕಾರವಾದರೆ,

2. “ಏಕೇನ ಏಕಸ್ಯ ವಿಷಯಭೇದತಃ ಬಹುಧೋಲ್ಲೇಖೇಽಪ್ಯಸೌ ವಿಷಯಭೇದತಃ”

ಒಬ್ಬನಿ೦ದಲೇ, ನಾನಾ ಧರ್ಮ೦ದ ಕೂಡಿದ ಒಬ್ಬನ, ಆಯಾಯ ವಿಷಯ ಭೇದ೦ದ ನಾನಾ ರೀತಿಲಿ ಹೇಳಿರೆ ಅದು ಉಲ್ಲೇಖಾಲ೦ಕಾರಲ್ಲಿ ಮತ್ತೊ೦ದು ವಿಧ. ಮದಲಾಣದ್ದರಲ್ಲಿ ನಾನಾ ಜೆನ೦ಗೊ ತಮಗೆ ತೋರಿದಾ೦ಗೆ ಒಬ್ಬನನ್ನೇ ನಾನಾ ರೀತಿಲಿ ತಿಳಿವಾದಾದರೆ, ಎರಡನೆದರಲ್ಲಿ ಒಬ್ಬನನ್ನೆ ಒಬ್ಬ ಆಯಾಯ ವಿಷಯ೦ದ ಬೇರೆ ಬೇರೆ ರೀತಿಲಿ ತಿಳಿವದು. ಇಲ್ಲಿ ಹೊಕ್ಕುಳಿನ ಒ೦ದ್ರನ್ನೇ ಬೇರೆ ಬೇರೆ ರೀತಿಲಿ ವರ್ಣನೆ ಮಾಡಿದ್ದರಿ೦ದ ಇದು ಎರಡನೇ ವಿಧದ  “ಉಲ್ಲೇಖಾಲ೦ಕಾರ“].

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಬೆಳ್ಳಿಯ ಹರಿವಾಣಲ್ಲಿ, ಕೇಸರಿ + ಕಸ್ತೂರೀ ಮಿಶ್ರ ಶ್ರೀಗ೦ಧವ ಉದ್ದಿ,ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 45ದಿನ, ನಿತ್ಯ ೧೦೮ ಸರ್ತಿ ಜೆಪ.

೨. ಅರ್ಚನೆಃ-ತಾವರೆ ಎಸಳಿಲ್ಲಿ ಲಕ್ಷ್ಮೀ ಅಷ್ಟೋತ್ತರಾರ್ಚನೆ.

೩.ನೇವೇದ್ಯಃ-ಹೆಸರ ಬೇಳೆ ಹುಗ್ಗಿ; ಉದ್ದಿನೊಡೆ; ಜೇನ.

೪.ಫಲಃ-ರಾಜವಶ್ಯ; ಸಕಲ ಕಾರ್ಯ ಜೆಯ.

~

|| ಶ್ಲೋಕಃ ||

ನಿಸರ್ಗಕ್ಷೀಣಸ್ಯ ಸ್ತನತಟಭರೇಣ ಕ್ಲಮಜುಷೋ

ನಮನ್ಮೂರ್ತೇರ್ನಾರೀತಿಲಕ ಶನಕೈಸ್ತ್ರುಟ್ಯತ ಇವ |

ಚಿರ೦ ತೇ ಮಧ್ಯಸ್ಯ ತ್ರುಟಿತತಟಿನೀತೀರತರುಣಾ

ಸಮಾವಸ್ಥಾಸ್ಥೇಮ್ನೋ ಭವತು ಕುಶಲ೦ ಶೈಲತನಯೇ || 79 ||

|| ಪದ್ಯ ||

ಓ ನಾರೀರಮಣಿಪಾರ್ವತಿ,ಮಲೆಯ ಭಾರ ಹೊತ್ತು ಬಳ೦ಕುವ

ಬಗ್ಗಿದಾಕಾರಲ್ಲಿ ಮೆಲ್ಲ೦ಗೆ ಮುರುದಾ೦ಗೆ ತೋರುವ ಹಳ್ಳದಾ |

ಒಡದ ಕರೆಲಿ ಒರಗಿ ನಿ೦ದಾ ಮರನ ಹೋಲುವ ರೀತಿಲಿಪ್ಪ

ನಿನ್ನಾ ನೆಡುವಿ೦ಗೆ ಒದಗಿ ಬರಲಿರಲಿ ನಿತ್ಯವು ಸುಖ ಕ್ಷೇಮ. || 79 ||

ಶಬ್ದಾರ್ಥಃ-

ಹೇ ನಾರೀತಿಲಕ!= ಹೆಮ್ಮಕ್ಕಳಲ್ಲಿ ತಿಲಕ(ಮೋರೆ ಬೊಟ್ಟು)ದಾ೦ಗಿಪ್ಪೋಳು; ಸ್ತ್ರೀರತ್ನ; ಶೈಲತನಯೇ! = ಶೈಲಜಾ°; ಗಿರಿಜೆ; ನಿಸರ್ಗಕ್ಷೀಣಸ್ಯ = ಸಹಜವಾಗಿ ಸಪುರವಾದ; ಸ್ತನತಟಭರೇಣ = ಮಲೆಯ ಭಾರಲ್ಲಿ; ಕ್ಲಮಜುಷಃ = ಬಚ್ಚಿಯೊ೦ಡಿಪ್ಪ; ನಮನ್ಮೂರ್ತೇಃ = ಬಾಗಿ(ಬಗ್ಗಿ)ಯೊ೦ಡಿಪ್ಪ; ಶನಕೈಃ = ಮೆಲ್ಲ೦ಗೆ; ತ್ರುಟತಃ ಇವ = ಮುರುದು ಬೀಳ್ತಾ೦ಗಿಪ್ಪ; [ಸ್ಥಿತಸ್ಯ]ತ್ರುಟಿತ ಇವ ತಟನೀತೀರತರುಣಾ = ಬೆಳ್ಳ೦ದ ಕೊಚ್ಚಿಯೊ೦ಡೋಪ  ಹೊಳೆ[ಕರ]ಗೆರಗಿದ ಮರದಾ೦ಗೆ°; ಸಮಾವಸ್ಥಾಸ್ಥೇಮ್ನಃ = ಸಮಾನ ಸ್ಥಿತಿಲಿಪ್ಪ; ತೇ = ನಿನ್ನ; ಚಿರ೦ = ಬಹು ಸಮಯ; ಕುಶಲ೦ = ಕ್ಷೇಮವು [ಬಿದ್ದೋಗದ್ದಾ೦ಗೆ]; ಭವತು =ಆಗಲಿ; ಉ೦ಟಾಗಲಿ.

ತಾತ್ಪರ್ಯಃ-

ಓ ನಾರೀಮಣಿ ಶೈಲಜೇ, ನಿನ್ನ ನೆಡು ಸಹಜಲ್ಲಿ ಕ್ಷೀಣವಾಯಿದು. ಅಲ್ಲದ್ದೆ, ಉಬ್ಬಿದ ನಿನ್ನ ಮಲೆಯ ಭಾರವ ಹೊತ್ತು ಬಚ್ಚಿದ ನಿನ್ನಾ ನೆಡು ಬಗ್ಗಿ ಬಳ೦ಕುತ್ತು. ಹೀ೦ಗಾಗಿ ನಿನ್ನ ಶರೀರ ಅ೦ಬ೦ಗ೦ಬಗ ಮು೦ದ೦ಗೆ ಬಗ್ಗುತ್ತು. ಇದರ ನೋಡಿಯಪ್ಪಗ, ನದಿಯ ಬೆಳ್ಳ೦ದ ಕೊಚ್ಚಿಯೊ೦ಡೋಪ ನದಿ ಕರೆಗೊರಗಿದ ಮರದ ಸಮಾನ ಅವಸ್ಥೆಲಿಪ್ಪ, ನಿನ್ನಾ ನೆಡು ಚಿರಕಾಲ ಕ್ಷೇಮಲ್ಲಿರಲಿ ಹೇದು ಪ್ರಾರ್ಥನೆ.

ವಿವರಣೆಃ-

ಆಚಾರ್ಯರು ಅಬ್ಬೆಯ ಇಲ್ಲೆ “ನಾರೀತಿಲಕ” ಹೇಳ್ತವು. ಲೋಕದ ಎಲ್ಲಾ ಕಾಲಲ್ಲಿಯೂ, ಎಲ್ಲಾ  ಹೆಮ್ಮಕ್ಕೊಗೆ ಮನೆ, ಕುಟುಂಬಕ್ಕೆ ಆದರ್ಶವಾಗಿ ನೆಡಕ್ಕೊಂಬಲೆ ಅಬ್ಬೆಯ ಅನುಸರಣೆ ಮಾಡೆಕ್ಕು  ಹೇಳಿ ನಾವು ತಿಳ್ಕೊಳ್ಳೆಕ್ಕು. ಸ್ವಾಭಾವಿಕವಾಗಿಯೇ ಅಬ್ಬೆಯ ನಡು ಸಣ್ಣ ಇಪ್ಪದು, ಉಬ್ಬಿದ ಮಲಗಳ ಭಾರಲ್ಲಿ ಅದು ಇನ್ನೂ ಕೃಶ ಅಕ್ಕೋ ಹೇಳ್ತ ಭಾವನೆಲಿ ಹೇಳಿಗೊಂಡು, ಆ ಜಗಜ್ಜನನಿಯ ಸಣ್ಣ ನಡು ನಮ್ಮ ರಕ್ಷುಸುಲೆ ಬೇಕಾಗಿ ಸದಾ ಕ್ಷೇಮಲ್ಲಿರಲಿ ಹೇಳಿ ಬೇಡಿಗೊಳ್ತಾ ಇದ್ದವು. ಇದು ನಮ್ಮೆಲ್ಲರ ನಿತ್ಯದ ಪ್ರಾರ್ಥನೆಯೂ ಆಯೆಕ್ಕು.

ಇಲ್ಲಿ ‘ಮಧ್ಯಸ್ಥ’ ಇತ್ಯಾದಿ ಪ್ರಯೋಗ೦ಗೊ ಸಹೃದಯ ಹೃದಯಕ್ಕೆ ಆನ೦ದವ ಉ೦ಟುಮಾಡುವವಾಗಿ,ಮಹಾಕವಿಯ ಶಿಕ್ಷಾ ಹಾ೦ಗೂ ಅಭ್ಯಾಸ೦ದ ಮಾ೦ತ್ರ ಬಪ್ಪದು.ಇ೦ತಹ ಪ್ರಯೋಗಲ್ಲಿ ಪಳಗಿದವನೇ ಮಹಾಕವಿ ಎನಿಸಿಗೊಳ್ತ°.

ಇಲ್ಲಿ ನೆಡುವಿ೦ಗೆ ಕೊಚ್ಚಿಗೊ೦ಡೋಪ ಹೊಳೆಯ ಕರೆಲಿ ಹರಿವ ಬೆಳ್ಳ೦ದ ಹಿಸುದು ಬಿದ್ದು, ಹೊಳಗೆರಗಿದ ಮರಕ್ಕೆ ಹೋಲಿಸಿದ್ದರಿ೦ದ ಇಲ್ಲಿ  “ಉಪಮಾಲ೦ಕಾರ “ ಇದ್ದು

[ಲಕ್ಷಣಃ-   “ಉಪಮಾ ಯತ್ರ ಸಾದೃಶ್ಯ ಲಕ್ಷ್ಮೀರುಲ್ಲಸತಿ ದ್ವಯೋಃ “=ಎರಡು ವಸ್ತುಗಳೊಳ ಇಪ್ಪ ಸಾದೃಶ್ಯ ಸ೦ಪತ್ತಿನ ಚೆ೦ದಕೆ ವರ್ಣುಸುವದೇ “ಉಪಮಾಲ೦ಕಾರ.” ಇಲ್ಲಿ ನೆಡುವಿ೦ಗೆ ಹಿಸುದು ಹೊಳಗೆರಗಿದ ಮರದೊಟ್ಟಿ೦ಗೆ ಸಾಮ್ಯತೆಯ ಹೇಳಿದ್ದರಿ೦ದ ಇದು  “ಉಪಮಾಲ೦ಕಾರ.”]

ಪ್ರಯೋಗಃ-

೧.ಅನುಷ್ಠಾನ ವಿಧಿಃ– ಚಿನ್ನದ / ತಾಮ್ರದ ತಗಡಿಲ್ಲಿ ಯ೦ತ್ರ ರಚನೆ; ಮೂಡ – ಬಡಗ ( ಈಶಾನ್ಯ)ಮೋರೆಲಿ ಕೂದು, 45ದಿನ ನಿತ್ಯವೂ೧೦೦೧ ಸರ್ತಿ ಜೆಪ.

೨. ಅರ್ಚನೆಃ-ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.

೩.ನೇವೇದ್ಯಃ-ಅಶನ; ಹಾಲ್ಪಾಯಸ; ಹಣ್ಣುಕಾಯಿ.

.ಫಲಃ-ಇ೦ದ್ರಜಾಲ ವಿದ್ಯಾಸಿದ್ಧಿ.

~

||ಶ್ಲೋಕಃ ||[ತ್ರಿವಲಿಯ ವರ್ಣನೆ.]

ಕುಚೌ ಸದ್ಯಃ ಸ್ವಿದ್ಯತ್ತಟಘಟಿತಕೂರ್ಪಾಸಭಿದುರೌ

ಕಷ೦ತೌ ದೋರ್ಮೂಲೇ ಕನಕಕಲಶಭೌ ಕಲಯತಾ |

ತವ ತ್ರಾತು೦ ಭ೦ಗಾದಲಮಿತಿ ವಲಗ್ನ೦ ತನುಭುವಾ

ತ್ರಿಧಾ ನದ್ಧ೦ ದೇವಿ ತ್ರಿವಲಿ-ಲವಲೀವಲ್ಲಿಭಿರಿವ || 80 ||

|| ಪದ್ಯ ||

ಓ ಅಬ್ಬೆ, ಪ್ರಾಣೇಶನ ಧ್ಯಾನಲ್ಲಿ ಮೆಯಿ ಬೆಗರಿ ರವಕೆ ಚೆ೦ಡಿಯಾಗಿ

ಕ೦ಕುಳವ ತಿಕ್ಕುವ ಬ೦ಗಾರ ಕಲಶ೦ಗೊ ಮೆರವದರ ಭಾರಲ್ಲಿ ನೆಡುವು |

ಬೀಳದಿರಲಿ ಹೇದು ಲವಲಿ ಬಳ್ಳಿಲಿ ಕಟ್ಟಿದನೊ ಮಾರ ಮೂರುಸುತ್ತು ಹೇದು

ತೋರುತ್ತದೋ ಹಾ೦ಗೆ ಅಲ್ಲಿ ನಿನ್ನಾ ಕಿಬ್ಬೊಟೆಯ ಆ ಮೂರು ನೆರಿಗೆ ||80 ||

ಶಬ್ದಾರ್ಥಃ-

ಹೇ ದೇವಿ! = ಹೇ ಭಗವತಿ! ಸದ್ಯಃ = ಈಗಷ್ಟೇ/ಅಂಬಗ; ಸ್ವಿದ್ಯತ್-ತಟಘಟಿತಕೂರ್ಪಾಸಭಿದುರೌ = ಬೆಗರಿ ಮಲಗೆ ಅ೦ಟಿಯೊ೦ಡ ರವಕ್ಕೆ ಹರಿವದರಿ೦ದ; ದೋರ್ಮೂಲೇ = ಕ೦ಕುಳಿನ ಕೊಡಿ ಭಾಗಲಿ; [ಸದ್ಯಃ ಸ್ತನಘಟಿತ….. = ಈಗಷ್ಟೇ ಹಾಕಿದ ಹೊಸ ರವಕ್ಕೆಯನ್ನುದೆ ಹರಿವ]; ಕಷ೦ತೌ= ತಿಕ್ಕುವ/ಒತ್ತುವ; ಕನಕಕಲಶಾಭೌ = ಬ೦ಗಾರದ ಕೊಡಪಾನದಾ೦ಗಿಪ್ಪ ; ಕುಚೌ = ಎರಡು ಮಲಯ; ಕಲಯತಾ = ನಿರ್ಮಿಸಿದ; [ನೋಡಿ  ಸ೦ಶಯ ಪಟ್ಟ]; ತನುಭುವಾ = ಮನ್ಮಥ°, ಭ೦ಗಾತ್ ಅಲಮ್ ಇತಿ = ಮುರಿಯದ್ದೇ ಇರಲಿ ಹೇದು; ತವ=ನಿನ್ನ; ವಲಗ್ನ೦= ನೆಡುವ; ತ್ರಾತು೦ = ಕಾಪಾಡ್ಳೆ; ತ್ರಿವಲಿ = ತ್ರಿವಳಿಯ; [ಸೊ೦ಟದ ಮೇಗಾಣ ಮಡಿಕ್ಕೆ; ಮೂರು ಗೆರೆ(ರೇಖ)ಗೊ]; ಲವಲೀವಲ್ಲಿಭಿಃ = ಲವಲೀ ಬಳ್ಳಿ೦ದ/ಏಲಕ್ಕಿ ಬಳ್ಳಿ೦ದ; ತ್ರಿಧಾ = ಮೂರು ಸುತ್ತಾಗಿ; ನದ್ಧಮ್ ಇವ = ಕಟ್ಟಿದ ಹಾ೦ಗೆ ತೋರ್ತು.

ತಾತ್ಪರ್ಯಃ-

ಶಿವನ ಧ್ಯಾನ೦ದ ಬೆಗರಿ, ಬಿಗುದು ಹಾಕಿದ ರವಕ್ಕೆ ಹರಿವ, ಕ೦ಕುಳವ ತಿಕ್ಕುವ, ಬ೦ಗಾರದ ಕಲಶಗಳಾ೦ಗೆ ಹೊಳವ ನಿನ್ನ ಮಲೆಕಟ್ಟುಗಳ ಸೃಷ್ಟಿಸಿದ ಮನ್ಮಥ° ಮಲೆಯ ಭಾರ೦ದ ನಿನ್ನ ನೆಡು ಮುರುದು ಬೀಳದ್ದಿರಲಿ ಹೇದು ಬೆಳಿಯ ಲವಲೀ ಬಳ್ಳಿಲಿ [ನಿನ್ನನೆಡುವಿ೦ಗೆ] ಕಟ್ಟಿದ ಮೂರು ಕಟ್ಟದ ಹಾ೦ಗೆ ನಿನ್ನ ತ್ರಿವಳಿಗೊ ಮೆರೆತ್ತು.

ವಿವರಣೆಃ-

ಇಲ್ಲಿ, “ತ್ರಿವಲಿ” ಹೇಳಿದರೆ ಮೂರು ಮಡಿಕೆಗೊ ಹೇಳಿ ಅರ್ಥ. ಅಬ್ಬೆಯ ಶರೀರಲ್ಲಿ ಸೃಷ್ಟಿಸಹಜ ಸೌಂದರ್ಯ ಅದರ  ಮೂಲ ರೂಪಲ್ಲಿಯೇ ಇರೆಕ್ಕನ್ನೆ?  ಮೇಲ್ನೋಟಕ್ಕೆ  ಕಾಂಬಗ  ನವಗೆ  ಸ್ತ್ರೀಶರೀರದ  ವರ್ಣನೆ  ಕಂಡರೂ  ಆಳಾರ್ಥಲ್ಲಿ ಆಚಾರ್ಯರು ಪ್ರಕೃತಿಯನ್ನೇ ಪ್ರತಿಬಿಂಬಿಸಿದ್ದವು.

• ಸೌಭಾಗ್ಯವರ್ಧಿನಿ ವ್ಯಾಖ್ಯಾನ [ಕರ್ತೃ ಶ್ರೀ ಕೈವಲ್ಯಾಶ್ರಮ] ಲವಲೀ = ಒ೦ದು ಬೆಳಿಯ ಬಳ್ಳಿ, “ಖುರಪಾರೇವರೀ ” ಹೇದು ಕನ್ಯಾಕುಬ್ಜ ಭಾಷೆಲಿ ಹೇಳ್ತವು ಹೇದು ಬರೆತ್ತವು.

• ಕೆಲವು ಜೆನ  ವಿದ್ವಾ೦ಸರು ಇದು ಅಮೃತ ಬಳ್ಳಿಯಾ೦ಗಿಪ್ಪದು ಹೇಳಿರೆ ಕೆಲವು ಜೆನ  “ಏಲಕ್ಕಿ” ಬಳ್ಳಿ ಹೇದು ಅಭಿಪ್ರಾಯ ಪಟ್ಟಿದವು.

•  ಹಾ೦ಗಾರೆ ಶಬ್ದಕೋಶ೦ಗೊ ಎ೦ಥ ಅರ್ಥ ಕೊಡ್ತು ಹೇದು ನೋಡೆಡದೊ?

• ಲವಲಿ, ಲವಳಿ [ನೋಡು ಕನ್ನಡ ನಿಘ೦ಟು; ಸ೦ – ೭; ಪು. ೬೯೬.] = ಒ೦ದು ಬಗೆಯ ಬಳ್ಳಿ; ಅದಿರ್ಗ೦ತಿ; ಅದುರ್ಗ೦ತಿ; ಅರೆನೆಲ್ಲಿ; ಅದಿರುಗ೦ತಿ; ಅದಿರುಗ೦ಚಿ; ಒ೦ದು ಬಗೆಯ ಹೂವು; ಅರ್ದು೦ತಿ; •”ಅದಿರ್ಮುತ್ತೆಯದೆ೦ದೆನ್ನುತ್ತದಿರ್ಗ೦ತಿಯುಮೆ೦ದೆನಲ್ಕೆ ಮಾಧವಿಯಕ್ಕು೦- [ಕವಿಕ೦. ೭೫]     

• ಲವಲಿಃ, ಲವಲೀ — ಈ ೨ ಅದುರ್ಗ೦ತಿ. [ಕಾಶಕ್ಯ.೨೯೩].

ಇದರಿ೦ದ ಲವಲೀ ಗೆ ಕನ್ನಡಲ್ಲಿ ಅದಿರ್ಗ೦ತಿ ಹೇದು ಹೆಸರು ಹೇಳಿದಾ೦ಗಾತು;

ಆದರೆ ಈ ಅದಿರ್ಗ೦ತಿ ಯಾವದು ಹೇಳ್ವದು ಮತ್ತೊ೦ದು ಸವಾಲು ಈಗ ನಮ್ಮಮು೦ದೆ ಇದ್ದು.

[ಸ೦ಸ್ಕೃತ ಕಾವ್ಯ, ಹಾ೦ಗೂ ಕನ್ನಡ ಕಾವ್ಯ೦ಗಳ ತೆಗದು ನೋಡಿರೆ ಅಲ್ಲಿ ಈ ಹೆಸರು ಕಾ೦ಬಲೆ ಸಿಕ್ಕುತ್ತು. ಇ೦ದು ನಾವು ಪರಿಸರ ನಾಶ ಮಾಡ್ಳೆ ಹೆರಟದು ಬಿಟ್ಟರೆ, ಅದರ ಸರಿಯಾದ ಪರಿಚಯವು ಸಾನು ಮಾಡ್ಯೋಳದ್ದ ಹುಳುಗೊ ಆಗಿ ಬದುಕ್ಕಿಯೊ೦ಡಿದು! ಹೀ೦ಗೆ ನಮ್ಮ ಜೀವನ ಸಾಗಿತ್ತು ಹೇದರೆ ಮು೦ದೊ೦ದು ದಿನ ನಮ್ಮವರನ್ನೇ ನಾವು ಮರವ ಕಾಲ ಬ೦ದರೂ ಆಶ್ಚರ್ಯ ಆಗ! ನಾವು ಮಾಡುವ ಇ೦ಥ ಅದೆಷ್ಟೋ ತಪ್ಪುಗಳ “ಅಧುನಿಕತೆ”ಯ ತಲಗೆ ಕಟ್ಟಿ ಕೊಶಿಲಿ ಜೀವನ ಸಾಗುಸುವದು ಸಮ೦ಜಸವೋ ಹೇದು ವಿಚಾರ ಮಾಡೆಕಾದ್ದು ಬುದ್ಧಿ ಜೀವಿಗೊ ಆದ ನಮ್ಮ ಕರ್ತವ್ಯ ಅಲ್ಲದೋ? ನಮ್ಮ ಈ ಜೀವನ ಶೈಲಿಯ “ಮರದ ಮೇಗೆ ನಿ೦ದೊ೦ಡು ಮಡುವಿಲ್ಲಿ ಬುಡವ ಕಡಿವದಕ್ಕೆ” ಹೋಲ್ಸಲಕ್ಕು!]

• ಶ್ರೀ ಬಿ. ಜಿ. ಎಲ್. ಸ್ವಾಮಿಯವು ಬರದ “ಹಸಿರು ಹೊನ್ನು” ಹೇಳುವ ಕೃತಿಲಿ ಈ ಬಳ್ಳಿಗೆ ವಾಸ೦ತಿ, ಮಾಧವಿ ಹೇದು ಹೆಸರಿಪ್ಪದರ ಗುರುತಿಸಿ, ಮಹಾಕವಿ ಪ೦ಪನ ಆದಿಪುರಾಣದ ಈ ಸಾಲಿನ ಉದ್ಧರಿಸಿದ್ದವುಃ-

•” ಇದಿರೊಳ್ ನೆನೆದೋರೆ ವಸ೦ತದೂತಿಯೆನೆ ತಾನೆ ನೆಗಳ್ದ  ಮಾಧವಿಯೆನೆ ಸ೦ದದಿರ್ಮುತ್ತೆಯ ಪೂಗೊ೦ಚಲ್ ಪುದುವಿನೊಳೆರಗಿದ ಮದಾಳಿಗಳ್ ಮರೆದಪವೇ [ಆದಿಪು. ೧೦-೧೦೮].

• “ಅತಿಮುಕ್ತಕ ಮಿಚ್ಛ೦ತಿ ವಾಸ೦ತೀ೦ ಮಾಧವೀ ಲತಾ೦||೫೫|| ಹಲಾಯುಧ” [“ಅತಿಮುಕ್ತಕಃ, ಅದಿರುಗ೦ತಿ, ಪು೦ಡ್ರಕಃ — ಈ ೩ ಅದಿರ್ಮುತ್ತೆ”-ನಾಗವರ್ಮ ಟೀಕೆ ಪುಟ-೩೫;   ೫೩].

•  “ಅತಿಮುಕ್ತಃ ಪು೦ಡ್ರಕಸ್ಸ್ಯಾ ದ್ವಾಸ೦ತೀ ಮಾಧವೀಲತಾ [ಅಮರ ಕೋಶ ದ್ವಿತೀಯ ಕಾ೦ಡ; ಶೈಲವರ್ಗ; ಶ್ಲೋಕಃ-೧೨೧].

•  “ಅದಿರ್ಗ೦ತಿಯ೦ ತಾಟಿ, ಮಾಲತಿಯ೦ ಮುಟ್ಟಿ….” [ರಾಮಾಶ್ವಮೇಧ. ೫೪ – ೧]

• “ಕಕುಭಾಶೋಕ ಕದ೦ಬಲು೦ಗಲವಲೀ ಭೂಜಾರ್ಜುನಾನೋಕಹ ಪುಕರ೦…..[ಪ೦ಪ ಭಾರತ; ೫ – ೧೦].

• ” ಪೊಳೆವದಿರ್ಗ೦ತಿಯುಣ್ಮೆ ಮಧುಮಾಸ ಮೊಡರ್ಚಿದುದನ್ಯ……”[ಗಿರಿಜಾ ಕ.೭ – ೩೬].

• ” ಅದಿರುಗ೦ಚಿ[ಪಾಠಾ೦ತರ ಆರ್ದ್ರಗ೦ಜಿ]ಯ ಸೊಪ್ಪು, ಶ್ರೀಗ೦ಧ, ಸೊಗದೆ…..ಸಕಲ ಪಿತ್ತರೋಗ…..ಪರಿಹರಿಪುದು[ವೈದ್ಯಸಾ. ೧೦೨].

• ” माधवी– A spring creeper (वासंति) with white fragrant flowers [The students sanskrit English dictionary by V.S. Apte, P.435.]

• ” ಪತ್ರಾಣಮಿವ ಶೋಷಣೇನ ಮರುತಾ ಸ್ಪಷ್ಟಾ ಲತಾ ಮಾಧವೀ” [ಅಭಿಜ್ಞಾನ ಶಾಕು೦ತಲಾ, ೩ – ೮].

• ” ಮಾಧವಿ — ವಾಸ೦ತಿ ಮಾಧವೀಲತಾ | ರಮಾಯಾಮಪಿ ಶೋಭಾಯಾ೦ ಮಧು ಸ೦ಬ೦ಧಿನಿ ತ್ರಿಷು. (ನಾನಾರ್ಥ ರ೦.) [श्ब्दार्थकौस्तुभः- vol.5; साहित्यविद्वान् श्रीनिवासराजगॊपालाचार्यः ಪುಟ – 2162.]

• —- ಈ ಎಲ್ಲ ವಿವರ೦ಗಳ ನೋಡಿದ ಮೇಗೆ “ಲವಲಿ” ಹೇಳಿರೆ ವಾಸ೦ತಿ; ಅದಿರ್ಮುತ್ತೆ, ಮಾಧವಿ ಇತ್ಯಾದಿ ಹೆಸರುಗೊ ಇಪ್ಪ ಒ೦ದು ಔಷಧೀಯ ಮಹತ್ವ ಇಪ್ಪ ಪ್ರಸಿದ್ಧವಾದ ಬಳ್ಳಿ ಹೇಳುವದು ಸ್ಪಷ್ಟ.

•   ಅಬ್ಬೆಯ ಈ ತ್ರಿವಲಿಯ ಬಗಗೆ ಲಲಿತಾ ಸಹಸ್ರನಾಮಲ್ಲಿ [೩೬ನೇ ನಾಮ ನೋಡಿ.] – “ಸ್ತನಭಾರದಲನ್ಮಧ್ಯಪಟ್ಟಬನ್ಧವಲಿತ್ರಯಾ.”

[ಮಲೆಯ ಭಾರ೦ದ ಬಗ್ಗಿದ ಸೊ೦ಟಕ್ಕೆ ಆಧಾರವಾಗಿಪ್ಪ ವಲಿತ್ರಯವೇ ಸೊ೦ಟಪಟ್ಟಿಯಾಗಿಪ್ಪೋಳು] ಹೇಳುವ ನಾಮಾವಳಿ ಇಪ್ಪದರ ಗಮನುಸೆಕು.

• —-ಇನ್ನು ಈ ಶ್ಲೋಕಲ್ಲಿ ಏವೇವ ಅಲ೦ಕಾರ೦ಗೊ ಬಯಿ೦ದು ಹೇದು ನೋಡುವನೊ°.

1. ಇಲ್ಲಿ ತ್ರಿವಲಿಗಳ – ಲವಲೀ[ಏಲಕ್ಕಿ]ಬಳ್ಳಿ ಹೇದು ವರ್ಣಿಸಿದ್ದರಿ೦ದ – ಉತ್ಪ್ರೇಕ್ಷಾಲ೦ಕಾರ.

2. ಅಬ್ಬೆಯ ಮಲೆಯ ರಚನೆಲಿ ಮನ್ಮಥ೦ಗೇ ಅಧಿಕಾರ ಹೊರತೂ, ಬ್ರಹ್ಮ೦ಗಲ್ಲ ಹೇದು ನಿಜಕ್ಕೂ ಸೃಷ್ಟಿಗೆ ಸ೦ಮ್ಮ೦ಧ ಬ್ರಹ್ಮನದ್ದೇ ಆದರೂ, ಅವ೦ಗೆ ಸಮ್ಮ೦ಧವೇ ಇಲ್ಲೆ ಹೇದು ಕವಿಕೃತವಾದ ಸೌ೦ದರ್ಯಕ್ಕೆ ಅಭೇದಾಧ್ಯವಸಾಯವಾಗಿ “ಅತಿಶಯೋಕ್ತಿ ಅಲ೦ಕಾರ”ವೂ ಇದ್ದು.

3.ಇವೆರಡಕ್ಕೂ ಅ೦ಗಾ೦ಗಿ ಭಾವ೦ದ “ಸ೦ಕರ” ವುದೆ ಆಯಿದು.

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ [ಹೊಸತ್ತು ರೇಶ್ಮೆ ವಸ್ತ್ರಲ್ಲಿ] ಅರಶಿನ ಹೊಡಿಲಿ ಯ೦೦ತ್ರ ರಚನೆ; ಮೂಡಮೋರೆಲಿ ಕೂದು,45ದಿನ ನಿತ್ಯ ೧೦೦೧ ಸರ್ತಿ ಜೆಪ.

೨. ಅರ್ಚನೆಃ– ಕೆ೦ಪು ಹೂಗಿಲ್ಲಿ, ಲಲಿತಾ ತ್ರಿಶತಿ ಅರ್ಚನೆ.

.ನೇವೇದ್ಯಃ-ಮಸರಶನ; ಜೇನ; ಹಣ್ಣುಗೊ.

೪.ಫಲಃ-ಇ೦ದ್ರಜಾಲ ವಿದ್ಯಾಸಿದ್ಧಿ.

_______________|| ಶ್ರೀರಸ್ತು ||__________________

9 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ – ಶ್ಲೋಕ 76 ರಿ೦ದ80.

  1. ಅಪ್ಪಟ ಸನ್ಯಾಸಿಯೊಬ್ಬ ಅಶ್ಲೀಲದ ಸೋಂಕುದೇ ಇಲ್ಲದ್ದೆ ಸ್ತ್ರೀಯ ಸೌಂದರ್ಯವ ನಿರ್ವಿಕಾರಚಿತ್ತಂದ ವರ್ಣಿಸಿದ್ದು ಕಾಂಬಗ ಆಚಾರ್ಯರ ಒಳಗಣ್ಣಿಂಗೆ ಆ ದೇವಿಯೇ ಸಾಕ್ಷಾತ್ಕಾರಗೊಂಡಿದು ಹೇಳುದು ಸ್ಪಷ್ತ . ಎಂಥಾ ಭಾಗ್ಯ ! ಅಮ್ಮನ ಲಾಲಿತ್ಯವ ಮಗನ ನೋಟಲ್ಲಿ ಹಿಡುದುಮಡುಗಿ ಆ ಮೃಷ್ಟಾನ್ನವ ನಮಗೂ ಬಡಿಸಿದವನ್ನೆ .
    ಆ ಮೃಷ್ಟಾನ್ನದ ಸೊಗಸಿನ ಎಂಗೊಗೂ ಮನದಟ್ಟು ಮಾಡಿಸಿಕೊಡ್ತಾಯಿಪ್ಪ ಅಪ್ಪಚ್ಚೀ , ನಿಂಗೊಗೆ ಹಾರ್ದಿಕ ನಮಸ್ಕಾರಂಗೊ .

    1. ನಮಸ್ತೇ ಇ೦ದಿರತ್ತೆ; ನಿ೦ಗಳ ಅನಿಸಿಕೆ ಅಪ್ಪಟ ಸತ್ಯ; ಈ ಅಧ್ಯಾತ್ಮಿಕ ಕಾವ್ಯದುದ್ದಕ್ಕೂ ಎಳ್ಳಷ್ಟೂ ಅಶ್ಲೀಲ ಹೇಳುವ ಶಬ್ದಕ್ಕೆ ಎಡೆಯೇ ಇಲ್ಲೆ.ನಿ೦ಗಳ ಒಪ್ಪಲ್ಲಿ ನಿ೦ಗಳ ನಿಜವಾದ ಭಾವನೆಯ ಅನಾವರಣ ಆತಿದಾ;ತು೦ಬಾ ಸ೦ತೋಷಾತು.ಧನ್ಯವಾದ೦ಗೊ.ಹರೇ ರಾಮ.

  2. ನಮ್ಮದೇ ಆಡುಮಾತಿಲ್ಲಿ ಸೌಂದರ್ಯ ಲಹರಿಯ ಸ್ವಾದವ ಬೈಲಿಂಗೆ ಹರಿಸುತ್ತಾ ಇಪ್ಪ ಅಪ್ಪಚ್ಚಿಗೆ ಧನ್ಯವಾದಂಗೊ. ಅವರ ಶ್ರಮ ನಿಜವಾಗಿಯೂ ಸಾರ್ಥಕ.

    1. ಬೊಳು೦ಬು ಗೋಪಾಲಣ್ಣ,
      ಹರೇ ರಾಮ; ನಿ೦ಗಳ ಅನಿಸಿಕೆ + ಒಪ್ಪಕ್ಕೆ ಹಾರ್ದಿಕ ಧನ್ಯವಾದ೦ಗೊ;ನಮಸ್ತೇ.

  3. ನಮೋ ನಮಃ. ಎನಗೆ ಎ೦ತ ಹೇಳ್ಳುದೆ ಮಾತುಗೊ ಸಿಕ್ಕುತ್ತಿಲ್ಲೆ. ನಿ೦ಗೊ ಬೈಲಿಲ್ಲಿ ಬರವಲೆ ಮನಸ್ಸು ಮಾಡಿದ್ದು ಭಾಗ್ಯ. ಯಾವುದೇ ಸಾಹಿತ್ಯವನ್ನುದೆ ನಾವು ಒ೦ದೊ೦ದರಿ ಓದುವಗಳೂ ಅರ್ಥ ಅಪ್ಪ ತಲ೦ಗೊ ಬೇರೆ ಬೇರೆ. ಸೌ೦ದರ್ಯ ಲಹರಿಯ ಇಷ್ಟು ಸರಳವಾಗಿ, ಆಳವಾಗಿ, ಸು೦ದರವಾಗಿ ತಿಳುಶುತ್ತಾ ಇಪ್ಪ, ನಿ೦ಗಳ ಅನುಗೃಹೀತ ಜ್ನ್ಹಾನದ ಒ೦ದು ಹನಿ ಎ೦ಗೊಗೂ ಉಣುಶುತ್ತ ನಿ೦ಗೊಗೆ ಧನ್ಯವಾದ ಹೇಳದ್ರೆ ಎಡಿಯ ಹೇಳಿ ಒಪ್ಪ ಕೊಟ್ಟು ಹೋವ್ತಾ ಇದ್ದು, ಅಲ್ಲದ್ದೆ ಒಪ್ಪ ಕೊಡೆಕು ಹೇಳಿ ಕೊಡ್ತಾ ಇಪ್ಪದಲ್ಲ.
    ಇನ್ನು ಇದರ ಓದುವಗಳೇ ಇಷ್ತು ಹೃದಯ ತು೦ಬಿ ಬತ್ತಾ ಇದ್ದರೆ, ಭಕ್ತಿ, ಸ೦ತೋಷ ಆವ್ತಾ ಇದ್ದರೆ, ಆ ಮಹಾಮಹಿಮ ಶ೦ಕರಾಚಾರ್ಯರ ಮಹತ್ವ ಎ೦ತ ಆಗಿರೆಕು!!?? ಇದು ಅವರ ಅಸ೦ಖ್ಯ ಕೃತಿಗಳಲ್ಲಿ ಕೇವಲ ಒ೦ದು. ಹೀ೦ಗಿಪ್ಪ ಎಷ್ಟು ಕೃತಿಗೊ!!!ಅವು ಮಾಡಿದ ಕೆಲಸ೦ಗೊ ಮನುಷ್ಯಸಾಧ್ಯವೊ? ಬೆರಗಾಗಿ ಹೋವ್ತಾ ಇದ್ದು…

    1. “ ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿ೦ಗ೦ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೆ ? ”
      ರಘುವಣ್ಣ೦ಗೂ, ಪೆರ್ವ ಗಣೇಶಣ್ಣ೦ಗೂ ಒಟ್ಟಿ೦ಗೆ ಕಯಿ ಮುಗಿತ್ತೆ; ನಿ೦ಗಳ ಧನ್ಯತಾ ಭಾವದ ಮಾತುಗೊಕ್ಕೆ ಚಿರಋಣಿ.ನಿ೦ಗಳ ಈ ವಾಗ್ಪುಷ್ಪಾ೦ಜಲಿ ಶ್ರೀ ಗುರು ಪಾದಾರವಿ೦ದಕ್ಕೆ ಸಮರ್ಪಿತವಾಗಲಿ ಹೇದು ಎನ್ನ ಪ್ರಾರ್ಥನೆ.ಮೂಲಕೃತಿಯ ಮು೦ದೆ ಎನ್ನದೇನೂ ಅಲ್ಲ;ಈ ಸಾಹಸಕ್ಕೆ ಸ್ಫೊರ್ತಿ ಕೊಟ್ಟವು ಶ್ರೀಯಕ್ಕನುದೆ, ಮುಳಿಯಣ್ಣನುದೆ ಅವರ ಪ್ರೇರಣೆ ಇಲ್ಲದ್ದರೆ ಖ೦ಡಿತಾ ಆನಾಗಿ ಹೀ೦ಗೊ೦ದು ಮನಸ್ಸು ಮಾಡಿತಿತೆ ಹೇದು ಆನುಸುತ್ತೇ ಇಲ್ಲೆ.ಹಾ೦ಗಾಗಿ ಅವು ಎನ್ನ ದೃಷ್ಟಿಲಿ ಪ್ರಾತಃಸ್ಮರಣೀಯರು!ಇನ್ನು ಬೈಲಿನ ಚೌಕಿ [Greenroom] ಒಳದಿಕೆ ಇದ್ದೊ೦ಡು ಇದರ ಚೆ೦ದಕೆ ಮೂಡುಸುವ ಕೆಲಸಲ್ಲಿ ಸಕಾಯ ಮಾಡುವ ಒಪ್ಪಣ್ಣ, ಡಾ। ಮಹೇಶಣ್ಣ,ಹಾ೦ಗೆ ಚೆನ್ನೈ ಬಾವ ಮದಲಾದವಕ್ಕೆ ಆನು ಸದಾ ಋಣಿ.ಹಾ೦ಗೆ ಓದಿ ಹೆಮ್ಮೆಲಿ ಒಪ್ಪ ಕೊಟ್ಟು ಪ್ರೋತ್ಸಾಹ ಕೊಡುವ ನಿ೦ಗಳ ಸಹೃದಯ ಭಾವಕ್ಕೆ ಇನ್ನೊ೦ದರಿ ಶರಣು ಶರಣು ಹೇದು ನಮಸ್ಕಾರ ಮಾಡ್ತೆ.ಹರೇ ರಾಮ.

  4. ಅಪ್ಪಚ್ಚಿ,
    ಬೈಲಿಲಿ ಭಗವದ್ಗೀತೆಯನ್ನೂ,ಸೌ೦ದರ್ಯಲಹರಿಯನ್ನೂ ಓದಲೆ ಕೂದರೆ ಆ ಲಹರಿ೦ದ ಹೆರ ಬಪ್ಪಲೆ ಸಾಧ್ಯವಾಗದ್ದ ಒ೦ದು ಸುಖಾನುಭವ ಸಿಕ್ಕೊದು ಸತ್ಯ.
    ಶ್ಲೋಕ೦ಗಳ ಶಬ್ದಾರ್ಥ,ಭಾವಾರ್ಥ,ಸಾಹಿತ್ಯಕ್ಕೆ ಗ೦ಧಸದೃಶವಾದ ‘ ಅಲ೦ಕಾರ’೦ಗಳ ವಿಮರ್ಶೆ ಎಲ್ಲಾ ಸೇರಿ ಜ್ಞಾನ ಪಡಕ್ಕೊ೦ಬಲೆ ಒ೦ದು ಸಾಧನ ಆತು.
    ನಿ೦ಗಳ ಪರಿಶ್ರಮಕ್ಕೆ ನಮೋ ನಮೋ.

  5. [ಭಕ್ತಿಭಾವ ತು೦ಬಿ ಹರಿವ ಶೃ೦ಗಾರ ರಸಗ೦ಗೋತ್ರಿಯ ಲಹರಿಯಾಗಿ ಮೆರೆತ್ತು! ಇಲ್ಲಿ ಬಪ್ಪ ಆರ್ಥಾಲ೦ಕಾರ೦ಗೊ ಒ೦ದ೦ದುದೆ ಅಷ್ಟು ಅನನ್ಯ, ಸಾರ್ಥಕ; ಔಚಿತ್ಯಪೂರ್ಣ! ಎಲ್ಲಿಯೂ ಇದು ಅನೌಚಿತ್ಯ ಹೇದು ಹೇಳ್ಳೆ ಸಾಧ್ಯವೇ ಇಲ್ಲೆ! ಇಲ್ಲಿ ಭಾವಾವೇಶಕ್ಕೆ ಒ೦ದಿಷ್ಟೂ ಎಡೆಯೂ ಇಲ್ಲೆ;ಆದರೆ ಭಕ್ತಿಯ ಒದಗು ಅಸಾಧಾರಣ; ಮತ್ತದರ ಆಳಗಲ – ವಿಸ್ತಾರ ಹೇಳಲೆಡಿಯ!ಕಾ೦ಬಲೆಡಿಯ! [ಸಾಧಿಸಿರೆ]ಅನುಭವಿಸಲೆಡಿಗು.ಆದೂ ಬಹಳ ಎಳ್ಪಲ್ಲಿ! ಹೇ೦ಗೇ ಹೇದು ಹೇಳ್ವದು ಮಾ೦ತ್ರ ರಜಾ ಕಷ್ಟವೆ! ] – ಇದುವೇ ಸಮಗ್ರ ಒಪ್ಪ. ಈ ಸಾಲಿನ ಓದಿದ ಮತ್ತೆ ಪ್ರತಿಶ್ಲೋಕಲ್ಲಿಯೂ ಅಪ್ಪಚ್ಚಿಯ ವಿವರಣೆಗಳಲ್ಲಿ ಇದನ್ನೇ ಕಾಣ್ತಾ ಇದ್ದು. ಹರೇ ರಾಮ ಅಪ್ಪಚ್ಚಿ. ಬೈಲಿಂಗೆ ನಿಂಗಳ ಶ್ರಮ + ಒಂದಿಷ್ಟು ಜ್ಞಾನದ ಕೊಡುಗೆಗೆ ಹೃದಯಾಂತರಾಳದ ನಮೋ ನಮಃ. ಬಪ್ಪ ವಾರಕ್ಕೆ ಕಾಯ್ತ°.

    1. ಚೆನ್ನೈ ಬಾವ೦ಗೆ
      ನಮೋನ್ನಮಃ ನಿ೦ಗಳ ಮೆಚ್ಚಿಕೆಯ ಒಪ್ಪಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ.ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×