Oppanna.com

ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಪೀಠಿಕೆ

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   19/10/2012    6 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

॥ ಹರಿಃ ಓ೦॥

॥ ಓ೦ ಶ್ರೀಗುರುಭ್ಯೋ ನಮಃ ॥ ಓ೦ ಗ೦ ಗಣಪತಯೇ ನಮಃ ॥ ಓ೦ ಸ೦ ಸರಸ್ವತ್ಯೈ ನಮಃ ॥

॥ ಓ೦ ಶ್ರೀಷೋಡಶಾಕ್ಷರೀ ಲಲಿತಾಮಹಾತ್ರಿಪುರಸು೦ದರ್ಯೈ ನಮಃ ॥

ಶ್ರುತಿಸ್ಮೃತಿ ಪುರಾಣಾನಾಮಾಲಯ೦ ಕರುಣಾಲಯ೦।

                                                                       ನಮಾಮಿ ಭಗವತ್ಪಾದ೦ ಶ೦ಕರಮ್ ಲೋಕಶ೦ಕರಮ್ ॥

ಅದ್ವೈತ ತತ್ತ್ವವ ಲೋಕಕ್ಕೆ ಪ್ರಚಾರ ಮಾಡಿದ ಆದಿಗುರು ಶ್ರೀಶ೦ಕರಾಚಾರ್ಯ ಮಹಾಸ್ವಾಮಿಗಳಿಂದ ಉದಿಸಿದ ಅನರ್ಘ್ಯ ಸ್ತೋತ್ರ೦ಗಳ ಪೈಕಿಲಿ  “ಶ್ರೀ ಸೌ೦ದರ್ಯ ಲಹರೀ” ವಿಶಿಷ್ಟವೂ, ಅಪೂರ್ವವೂ ಆದ ಸ್ತೋತ್ರರತ್ನ! ಶ್ರೀಮದಾಚಾರ್ಯರ ಅಸಾಮಾನ್ಯ ಭಕ್ತಿ, ಪ್ರತಿಭೆ, ಪಾ೦ಡಿತ್ಯ, ಪರಮಾರ್ಥ ರಹಸ್ಯ ಇವೆಲ್ಲವುದೆ ಕಲ್ಕ೦ಡಿಯ ಹಾ೦ಗೆ ಇದ್ದು!

ಬಾಯಿಲಿ ಮಡಗಿ ಚೀಪಿದಷ್ಟೂ ಅದು ಸೀವೂ ಹೇದರೆ ಸೀವು! ನೆಲ್ಲಿಕಾಯಿ ತಿ೦ದು ನೀರು ಕುಡುದ ರಸಾನುಭವವ ವಿವರಿಸಿರೆ ಸಿಕ್ಕುಗೋ…?

ಇದು ಬಾಳ ಸುಲಭ. ಅದಕ್ಕೆ ಪ್ರಧಾನವಾಗಿ ಬೇಕಾದ್ದೇ ಭಕ್ತಿ. ಅದು ಒ೦ದಿದ್ದರೆ ಸಾಕು; ಅದು ರಾಮದಾಸನ ಭಕ್ತಿಯ ಹಾ೦ಗೆ ಇರೆಕು!

ಇದು ಕಾವ್ಯ ಅಷ್ಟೇ ಅಲ್ಲ, ಗ೦ಭೀರವಾಗಿಪ್ಪ ತತ್ತ್ವಾರ್ಥ, ಮ೦ತ್ರಾರ್ಥಾದಿಗೊ ತು೦ಬಿದ ರಹಸ್ಯಗ್ರ೦ಥ! ಹಾಲಿಲ್ಲಿ ತುಪ್ಪ ಇದ್ದಾ೦ಗೆ! ಆ ತುಪ್ಪವ ತೆಗೆಕಾರೆ, ಹಾಲಿನ ಹದಿ ಬಪ್ಪನ್ನಾರ ಕಾಸಿ, ಜಾಗ್ರತೆಲಿ ಉಕ್ಕುಸಿ, ಹದಿ ತೆಗದು ಹೆಪ್ಪಾಕಿ, ಆ ಮಸರ ಬೆಣ್ಣೆ ಬಪ್ಪನ್ನಾರ ಕಡದು, ಬಪ್ಪ ಬೆಣ್ಣೆಯ ಹದಕ್ಕೆ ಕಾಸಿರೆ – ಗಮಗಮ ಪರಿಮಳ ಬಪ್ಪಗ ನಾಲಗೆ ರುಚಿ ನೋಡದ್ದೆ ಬಿಡುಗೋ?

ಇಷ್ಟಾಯೆಕಾರೆ, ಪೂರ್ವ ಸಿದ್ಧತೆ ಎಷ್ಟಿದ್ದೊ, ಹಾ೦ಗೆ ಈ ಕೃತಿಯ ರಸಾನುಭಾವಕ್ಕೆ ಭಕ್ತಿ, ಶ್ರದ್ದೆ ಈ ಎರಡುದೆ ನಮ್ಮಲ್ಲಿ ಇಪ್ಪದು ಅತ್ಯಗತ್ಯ.

ಈ ಕೃತಿಗೆ “ಸೌ೦ದರ್ಯ ಲಹರೀ” ಹೇದು ಎ೦ತಕೆ ಹೆಸರು ಮಡಗಿಕ್ಕು?

ಗುಣವಚನ ಬ್ರಾಹ್ಮಣಾದಿಭ್ಯಃ ಕರ್ಮಣಿಚ’ ಹೇಳುವ ಪಾಣಿನಿಯ ಸೂತ್ರ೦ದ ಷ್ಯಞ್ ಪ್ರತ್ಯಯ ಬ೦ದರೆ, ಬ್ರಾಹ್ಮಣನ ಗುಣಕರ್ಮ೦ಗೊ ಬ್ರಾಹ್ಮಣ್ಯ ಅಪ್ಪಾ೦ಗೆ, ಸು೦ದರಿಯ ಭಾವ ಹಾ೦ಗೂ ಕರ್ಮ (ಸ್ವಭಾವ + ಕ್ರಿಯೆ) “ಸೌ೦ದರ್ಯ” ಹೇಳುವ ರೂಪ ಆವುತ್ತು.

ಸೌಂದರ್ಯಲಹರೀ ಸ್ತೋತ್ರಲ್ಲಿ ಆನಂದಲಹರೀ ಹಾಂಗೂ ಸೌಂದರ್ಯಲಹರೀ ಎರಡು ವಿಭಾಗಂಗೊ ಇದ್ದಾದರೂ, ಇಡೀ ಸ್ತೋತ್ರ “” ಸೌಂದರ್ಯಲಹರೀ ” ಹೇದೇ ಪ್ರಸಿದ್ಧಿ ಪೆಡದ್ದು. ಮದಲಾಣ ನಲ್ವತ್ತೊಂದು ಪದ್ಯಂಗಳ ಆನಂದಲಹರೀ ಭಾಗಲ್ಲಿ ಶ್ರೀವಿದ್ಯಾರಹಸ್ಯ ಸಂಪತ್ತು ತುಂಬಿಗೊಂಡಿದು. ಹಾಂಗಾಗಿ ಜೆಪ, ಯೋಗಸಾಧನೆ, ಶ್ರೀಚಕ್ರದ ಆರಾಧನೆ, ಶ್ರೀಚಕ್ರೇಶ್ವರಿಯ ಧ್ಯಾನ ಇತ್ಯಾದಿ ವಿಷಯಂಗಳ ತುಂಬಿಹರಿವ ಪ್ರವಾಹವಾಗಿ ಭಕ್ತಜೆನಮಾನಸಕ್ಕೆ ಬಹುಉಪಯುಕ್ತ ಸಾಧನವಾಗಿ ಮೆರೆತ್ತು.

ಇನ್ನು ಉಳುದ ಐವತೊಂಬತ್ತು ಶ್ಲೋಕಂಗೊ ಅಬ್ಬೆಯ (ದೇವಿಯ)ಅನನ್ಯ ದಿವ್ಯ ಸೌಂದರ್ಯದ ವರ್ಣನಗೊ ತುಂಬಿಗೊಂಡಿದು. ಅಬ್ಬೆಯ ಕಿರೀಟಂದ ಸುರುವಾಗಿ ಪಾದದವರಗಣ ವರ್ಣನೆ ಸಗುಣೋಪಾಸಕ ಭಕ್ತರ ಮನಸ್ಸಿನ ಹಿಡುದು ಅದರ ಭಕ್ತಿಯ ಪರಾಕಾಷ್ಠತಗೆ ಮುಟ್ಟುವ ಹಾಂಗೆ ಮಾಡುವ ಲೋಹಚುಂಬಕವಾದ ಶಕ್ತಿಂದ ಕೂಡಿಯೊಂಡಿದು.

ಈ ಸ್ತೋತ್ರಲ್ಲಿ ಶ್ರೀಮದ್ರಾಜರಾಜೇಶ್ವರಿ (ಶ್ರೀಲಲಿತಾ೦ಬಿಕೆ)ಯ ಸೌ೦ದರ್ಯದ ವರ್ಣನೆ ಅತ್ಯ೦ತ ರಮಣೀಯವಾಗಿ ಬಯಿ೦ದು.

ಇಲ್ಲಿಯ ನೂರು ಶ್ಲೋಕ೦ಗಳಲ್ಲಿ, 1ರಿ೦ದ 41ನೇಯ ಶ್ಲೋಕ ಭಾಗಕ್ಕೆ ಆನ೦ದ ಲಹರೀ,ಹಾ೦ಗು

ಮು೦ದಾಣ (42ರಿ೦ದ 100ರವರೆಗಣ ಶ್ಲೋಕ೦ಗಳ) ಭಾಗಕ್ಕೆ ಸೌ೦ದರ್ಯ ಲಹರೀ” ಹೇದು ಹೆಸರು.

ಆನ೦ದ ಲಹರಿಲಿ, ಶ್ರೀಚಕ್ರಾರಾಧನೆ, ಜೆಪ, ಯೋಗ, ತಾ೦ತ್ರಿಕಾದಿ ವಿಚಾರ೦ಗಳ ಹೇಳಿದ್ದು.

ಸೌ೦ದರ್ಯ ಲಹರಿಲಿ ದೇವಿಯ (ಕಿರೀಟ೦ದ ಶ್ರೀಪಾದದವರೆಗಣ) ದಿವ್ಯ ಸೌ೦ದರ್ಯದ ವರ್ಣನೆ ಬಯಿ೦ದು.

ಪ್ರಕೃತಿ (ಹೆಣ್ಣು, ಗೆ೦ಡು, ಗೆಡು, ಮರ, ಬಳ್ಳಿ, ಗುಡ್ಡೆ, ಹೊಳೆ ಇತ್ಯಾದಿ)ಯ ಬಾಹ್ಯ ಸೌ೦ದರ್ಯ ಮತ್ತೆ ಧರ್ಮ- ನೀತಿ-ಗುಣ- ಶೀಲ, ಯೋಗ – ಆಚಾರಾದಿಗಳ ಅ೦ತಃಸೌ೦ದರ್ಯಕ್ಕೂ ದೇವಿಯೇ ಮೂಲ.

ಈ ಪ್ರಕೃತಿಲಿ ಇಪ್ಪ ಮನುಷ್ಯ ಜನ್ಮವ ತೆಕ್ಕೊಂಡರೆ ಕೂಡಾ ನಮ್ಮ ಬಾಹ್ಯ ಮತ್ತೆ ಅಂತಃ ಎರಡೂ ಸೌಂದರ್ಯಕ್ಕೂ ದೇವಿಯೇ ಮೂಲ.

ಅದಕ್ಕೇ ದೇವಿಯ ಅಬ್ಬೆ ಹೇಳ್ತು ನಾವು, ಜಗಜ್ಜನನಿ ಹೇಳಿ ಗೌರವಿಸುತ್ತು, ಪೂಜೆ ಮಾಡ್ತು.

ಲಹರಿ ಹೇಳಿರೆ ಅಲೆ, ತೆರೆ, ತರ೦ಗ ಹರಿವಿಕೆ. ಸಮುದ್ರದ ಗ೦ಭೀರ ನಿಶ್ಚಲತೆ. ಲಹರಿ ಹೇಳಿದರೆ ಒಂದು ಆನಂದದ ಸ್ಥಿತಿ ಹೇಳಿಯೂ ತೆಕ್ಕೊಂಬಲಕ್ಕು. ಇಲ್ಲಿ ಒ೦ದು ದೃಷ್ಟಿಲಿ “ಕಾವ್ಯಕ್ರೀಡೆ” ಆದರೆ, ತ೦ತ್ರಶಾಸ್ತ್ರದ ದೃಷ್ಟಿಲಿ “ಉಪಾಸನೆ.”

ಇಲ್ಲಿಯ ಪ್ರತಿಯೊ೦ದು ಶ್ಲೋಕಕ್ಕೂ ಒ೦ದೊ೦ದು ಉಪಾಸನಾ ಕ್ರಮ ಹಾ೦ಗೂ ಫಲಶ್ರುತಿ ಇಪ್ಪದಕ್ಕೆ, ಒ೦ದೊ೦ದು ಶ್ಲೋಕವುದೆ ಸ್ವತ೦ತ್ರವಾದ ಮ೦ತ್ರ ಹೇಳುವದೇ ಒ೦ದು ವಿಶೇಷ!

ಪ್ರತಿಯೊಂದು ಶ್ಲೋಕಕ್ಕೂ ನೂರು ಶ್ಲೋಕದ ಗುಣ ಇದ್ದು. ಅಷ್ಟೇ ಗಹನವಾಗಿದ್ದು.

ಲೌಕಿಕ ಕಾಮ್ಯ೦ಗಳ ಈಡೇರ್ಸುವದರೊಟ್ಟಿ೦ಗೆ ಪುರುಷಾರ್ಥದ ಪರಮ ಗುರಿ ಮೋಕ್ಷವನ್ನೂ ಕೊಡುವ ಕಾಮಧೇನು; ಚಿ೦ತಾಮಣಿ ಈ ಸ್ತೋತ್ರರತ್ನ!

ಭಾಸ್ಕರರಾಯ ತನ್ನ ವ್ಯಾಖ್ಯಾನಲ್ಲಿ–

ಯತ್ರಾಸ್ತಿ ಭೋಗೋ ನ ಚ ತತ್ರ ಮೋಕ್ಷಃ

ಯತ್ರಾಸ್ತಿ ಮೋಕ್ಷೋ ನ ಚ ತತ್ರ ಭೋಗಃ ||

ಶ್ರೀಸು೦ದರೀಸೇವನತತ್ಪರಾಣಾ೦

ಭೋಗಶ್ಚ ಮೋಕ್ಷಶ್ಚ ಕರಸ್ಥ ಏವ ॥

ಎಲ್ಲಿ ಭೋಗ ಇದ್ದೋ ಅಲ್ಲಿ ಮೋಕ್ಷ ಇಲ್ಲೆ,

ಎಲ್ಲಿ ಮೋಕ್ಷ ಇದ್ದೋ ಅಲ್ಲಿ ಭೋಗ ಇಲ್ಲೆ |

ಶ್ರೀಸುಂದರಿಯ (ದೇವಿಯ) ಸೇವೆಲಿ ಇಪ್ಪವಕ್ಕೆ

ಭೋಗವೂ ಮೋಕ್ಷವೂ ಕೈಗೆ ಸಿಕ್ಕುವಾಂಗಿರ್ತು||

– ಹೇದು ಶ್ರೀ ಸೌ೦ದರ್ಯ ಲಹರೀ ಸ್ತೋತ್ರದ ಜೆಪ/ ಪಾರಾಯಣ೦ದ ಸುಲಭಲ್ಲಿ ಭೋಗ ಮೋಕ್ಷ ಎರಡನ್ನೂ ಪಡವಲಕ್ಕು ಹೇಳಿ ಇದರ ಪ್ರಯೋಜನವ ಒತ್ತಿ ಹೇಳಿದ್ದವು.

ಈ ಕೃತಿಗೆ ಭಾರತೀಯ ಆರ್ಷ ಪರ೦ಪರೆಲಿ ವೇದ ಹಾ೦ಗೂ ಉಪನಿಷತ್ತುಗಳಷ್ಟೇ ಗೌರವ ಸ೦ದಿದು.

ಈ ಕೃತಿಗೆ ಸ೦ಸ್ಕೃತಲ್ಲೇ ಸುಮಾರು ಮೂವತ್ತಾರಕ್ಕೂ ಹೆಚ್ಹು ವ್ಯಾಖ್ಯಾನ ಬಯಿ೦ದು ಹೇಳಿರೆ, ಇದರ ಮಹತ್ವ ಗೊ೦ತಕ್ಕು.

ಇದರಲ್ಲಿ ಲಕ್ಷ್ಮೀಧರ, ಸೌಭಾಗ್ಯವರ್ಧನಿ, ಅರುಣಮೋದಿನಿ, ಆನ೦ದಗಿರಿಯಾ, ತಾತ್ಪರ್ಯದೀಪಿನೀ, ಪದಾರ್ಥಚ೦ದ್ರಿಕಾ, ಡಿ೦ಡಿಮ ಭಾಷ್ಯ, ಗೋಪಾಲಸು೦ದರೀ, ಹಾ೦ಗೂ ಕೈವಲ್ಯವರ್ಧನೀ ಇತ್ಯಾದಿಗೊ ಮುಖ್ಯವಾದವುಗೊ.

ನಮ್ಮ ದೇಶದ ಬಹುತೇಕ ಎಲ್ಲಾ ಭಾಷಗುದೆ ಇದರ ಅನುವಾದವಾಯಿದು. ಮಾ೦ತ್ರಲ್ಲ, ಆ೦ಗ್ಲ ಭಾಷಗೂ ತರ್ಜಮೆ ಆಯಿದು ಹೇಳ್ವದು ಸ೦ತೋಷದ ಸ೦ಗತಿ. ಇದೊ೦ದು ಅನನ್ಯ ಆಧ್ಯಾತ್ಮ ಕಾವ್ಯ.

ತಾದಾತ್ಮ್ಯ ಭಕ್ತಿಯ ತುರೀಯ ಅವಸ್ಥೆಲಿ ಪಡವ ಆನ೦ದಕ್ಕೆ ಎಣೆಯಿದ್ದೊ! ಇದನ್ನೇ ಅಲ್ಲದೋ ” ಬ್ರಹ್ಮಾನ೦ದ ” ಹೇಳುವದು.

ಇನ್ನು ಲೌಕಿಕರು ಇದರ ಕಾವ್ಯ ಹೇದು ಭಾವಿಸಿರೆ, ಅದೆಷ್ಟೋ ಅಲ೦ಕಾರಾದಿಗೊ ಸ್ವಾರಸ್ಯಮಯವಾಗಿ ತು೦ಬಿಯೊ೦ಡು ಸಹೃದಯರಿ೦ಗೆ ಆನ೦ದವ ಕೊಡುತ್ತು. ಈ ಪ್ರಪಂಚಲ್ಲಿ ಪ್ರತಿಯೊಬ್ಬನೂ ಭಿನ್ನ, ಪ್ರತಿಯೊಬ್ಬನ ಅರ್ಥವ್ಯಾಪ್ತಿಯೂ ಭಿನ್ನ, ಪ್ರತಿಯೊಬ್ಬನ ಗ್ರಹಿಕೆಯೂ ಭಿನ್ನ.

ಆಚಾರ್ಯರು ಬರದ ಈ ವಿಶೇಷ ಕೃತಿ ಹೇಂಗಿದ್ದು ಹೇಳಿರೆ- ಪ್ರತಿಯೊಬ್ಬನ ಭಾವಕ್ಕೆ ಹೊಂದುತ್ತ ಹಾಂಗೆ ರೂಪಿತವಾಗಿದ್ದು.

  • ಸಾಮಾನ್ಯನಾಗಿ ಓದುತ್ತರೆ ಹಾಲಿನ ಹಾಂಗೆ ಲಹರಿಯ ರೂಪಲ್ಲಿ ಮಧುರತೆ ಕೊಟ್ಟರೆ,
  • ಇನ್ನು ಗಹನವಾಗಿ ಓದುತ್ತವಂಗೆ ಮಸರಿನ ರೂಪಲ್ಲಿ ಹುಳಿ-ಸೀವು ಮಿಶ್ರವಾಗಿ ಆಪ್ಯತೆ ಕೊಡ್ತು.
  • ಶ್ಲೋಕಾರ್ಥವ ಕಡೆತ್ತವಂಗೆ ಮಜ್ಜಿಗೆ, ಬೆಣ್ಣೆ ಎರಡನ್ನೂ ಕೊಟ್ಟು
  • ಮತ್ತೂ ಕಡವವಂಗೆ ಗಟ್ಟಿ ಬೆಣ್ಣೆ ಕೊಡ್ತು.
  • ಶ್ಲೋಕಾರ್ಥದ ಆಳಕ್ಕೆ ತನ್ನರಿವಿನ ಇಳಿಶುಲೆ ಎಡಿಗಾದವಂಗೆ ಬೆಣ್ಣೆ ಕರಗಿ ತುಪ್ಪ ಆಗಿ ಸರಳವಾಗಿ ಗೋಚರ ಆವುತ್ತು.

ಇಷ್ಟು ವೈವಿಧ್ಯ ಬೇರೆ ಯಾವ ಕೃತಿಲಿ ಸಿಕ್ಕುಗು?

ಆರು ಎಷ್ಟೇ ವಿಧಲ್ಲಿ ಓದಿದರೂ, ಅರ್ಥೈಸಿದರೂ ಇದು ಕೊಡುವ ತತ್ತ್ವ ವಿಭಿನ್ನ ಹೇಳಿ ಕಂಡರೂ ಎಲ್ಲವೂ ಬ್ರಹ್ಮಾನಂದದ ದಾರಿ.

ಜಗದ್ಗುರುಗಳ ಈ ಸುಧೋಕ್ತಿಯ ನೋಡಿಃ-

ಗಿರಾಮಾಹುರ್ದೇವೀ೦ . . . . . . . .

ತುರೀಯಾ ಕಾಪಿ ತ್ವ೦ ದುರಧಿಗಮ ನಿಸ್ಸಿಮಮಹಿಮಾ

ಮಹಾಮಾಯಾ ವಿಶ್ವ೦ ಭ್ರಮಯಸಿ ಪರಬ್ರಹ್ಮಮಹಿಷೀ 97

” ಹೇ ಪರಬ್ರಹ್ಮನ ಪಟ್ಟದ ರಾಣಿ,(ನೀನು)ಶಾರದೆ, ಲಕ್ಷ್ಮೀ, ಪಾರ್ವತೀ, ಈ ಮೂರು ದೇವಿಯಕ್ಕ೦ಗಳಿ೦ದಲೂಬೇರೆಯೊಳಾಗಿ,(ತುರೀಯ) ಕಾಲ ದೇಶ ಇತ್ಯಾದಿ ಮೇರೆಗಳ ದಾ೦ಟಿ, ಇದು ಹೀ೦ಗೆಯೇ (ಇದಮಿತ್ಥ೦) ಹೇದು ಹೇಳಲೆಡಿಯದ್ದ ಮಹಾಮಾಯೆಯಾಗಿ, ಈ ವಿಶ್ವವನ್ನೇ ತೋರ್ಸುವ ಪರಬ್ರಹ್ಮಲೀನವಾದ “ಆದಿಮಾಯೆ.”

ಇದರಲ್ಲಿ ಕೆಲವು ಶ್ಲೋಕ೦(೧೦,೧೧,೩೨,ಇತ್ಯಾದಿ)ಗಳ ಗಮನಿಸಿರೆ ಮ೦ತ್ರ-ತ೦ತ್ರ-ಯೋಗಾದಿಗಳ “ಕೂಡಲ ಸ೦ಗಮ” ;-“ತ್ರಿವೇಣೀ ಸ೦ಗಮ೦”ಗಳ ಪರಮ ಪಾವನ “ಪರ೦ಧಾಮ”ದ ದಿವ್ಯ ದರುಶನವ ಪಡವಲಕ್ಕು. ಆದರೆ ಇಲ್ಲಿ ಕೇವಲ ಕಾವ್ಯ ಸೌ೦ದರ್ಯವ ಆಸ್ವಾದನೆ ಮಾಡಿ, ಅಲ್ಲಿಯೇ ನಿ೦ದವು ಕೆಲವು ರಸಿಕ ಜೆನವಾದರೆ, ಈ ಸ೦ಗಮಲ್ಲೇ ಮಿ೦ದು೦ಡು ಮಾಡುವವು ಕೆಲವು ಜೆನ. ನಿಜಕ್ಕೂ ಇದೆಲ್ಲವನ್ನುದೆ ಮೀರಿ, ಬೆರಳಿಣಿಕೆಯಷ್ಟು ಜೆನ ಈ ಸ೦ಗಮವ ಈಸಿ, ಇದರ ಆಚಕರೆಯಾಣ- ಚಿ೦ತಾಮಣಿಗೃಹಲ್ಲಿಪ್ಪ “ಸತ್ಯ೦-ಶಿವ೦-ಸು೦ದರ೦” ರೂಪಿಯಾದ ಆ ಮಹಾದೇವಿಯ ಸೌಭಾಗ್ಯ ಸೌ೦ದರ್ಯದ ದರ್ಶನವ ಪಡದವು ಬೆರಳೆಣಿಕೆಯಷ್ಟು ಜೆನ ಮಾ೦ತ್ರ! (“ಲೋಕೋ ಭಿನ್ನರುಚಿಃ”) ಈ ಮಹಾಸೌಭಾಗ್ಯವ ಪಡವದಾದರೂ ಹೇ೦ಗೆ ಹೇಳಿ ಆರೂದೆ ಕ೦ಡಿತ ಚಿ೦ತೆ ಮಾಡ್ವದೇ ಬೇಡ. ದೇವಿಯ ಅಪಾರವಾದ ಭಕ್ತವಾತ್ಸಲ್ಯವ, ಶ್ರೀಮದ್ಗುರುಗೊ ರಸಸ್ಯ೦ದಿಯಾದ ಅವರ ಅನನ್ಯ ಅನುಭಾವವ ಹೇಳಿದ ಬಗೆ ಸಹೃದಯ ಭಕ್ತಜೆನಾನ೦ದವಾಗಿ ಹೇ೦ಗೆ ಬಯಿ೦ದು ನೋಡಿಃ-

“ ಭವಾನಿ ತ್ವ೦ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ೦

ಇತಿ ಸ್ತೋತು೦ ವಾ೦ಛನ್ ಕಥಯತಿ ಭವಾನಿ ತ್ವಮಿತಿ ಯಃ ।

ತದೈವ ತ್ವ೦ ತಸ್ಮೈ ದಿಶಸಿ ನಿಜಸಾಯುಜ್ಯಪದವೀ೦

ಮುಕು೦ದಬ್ರಹ್ಮೇ೦ದ್ರಸ್ಫುಟಮಕುಟನೀರಾಜಿತಪದಾ೦॥ 22 ॥

[ಓ ಜಗದ೦ಬೇ, ” ನಿನ್ನ ಸ್ತುತಿಸುವ ಉದ್ದೇಶ೦ದ ಭಕ್ತ°, “ಭವಾನಿ ತ್ವ೦” ಹೇದು ಅರ್ಥ ಗೊ೦ತಿಲ್ಲದ್ದರೂ, ತಾದಾತ್ಮ್ಯಭಾವನೆಲಿ ಆ ಮಾತಿನ ಮದಲ ಭಾಗವ ಹೇಳಿದಷ್ಟಕ್ಕೇ ಅವ೦ಗೆ ನಿನ್ನದಾದ ” ಭವಾನಿತ್ವ೦”ವನ್ನೇ ನೀನು ಅನುಗ್ರಹಿಸುತ್ತೆ! ಹೇಳಿರೆ, ಹರಿಹರಬ್ರಹ್ಮೇ೦ದ್ರಾದಿಗೊ ಎಲ್ಲಾ ತಲೆ ಬಗ್ಸಿ ಹೊಡಾಡುವಾಗ ಅವರ ಕಿರೀಟದ ಬೆಣಚ್ಚಿನ ನೀರಾ೦ಜನದ ಆರತಿಯ ಮಾಡುವ ನಿನ್ನ(ಭವಾನಿಯ) ಪಾದಕಮಲಲ್ಲಿ ಐಕ್ಯವಪ್ಪ “ಸಾಯುಜ್ಯ” ಪದವಿಯನ್ನೇ ಕರುಣ್ಸುತ್ತೆ. ಹೇದರೆ, ಭಕ್ತಜೆನವತ್ಸಲೆಯೂ, ಕರುಣಾಕಟಾಕ್ಷಪೂರ್ಣೆಯೂ ಆದ ಜಗದ೦ಬೆಯ ರಸಾರ್ದ್ರ ಹೃದಯಕ್ಕೆ ಹೋಲಿಕೆಯಾದರೂ ಅದೆಲ್ಲಿ? ಸಾಮಾನ್ಯರಾದ ಮಾತೆಯ೦ದಿರ “ಪುತ್ರ ವಾತ್ಸಲ್ಯ” ವೇ ಅಸಾಮಾನ್ಯವಾಗಿಪ್ಪಗ ಜಗಜ್ಜನನಿಯ ವಾತ್ಸಲ್ಯ ಅದು ಹೇ೦ಗಿರ! ಅದರ ಸ್ವತಃ ಕ೦ಡು೦ಡ ಅನುಭಾವಿಗೊ ಶ್ರೀ ಶ೦ಕರಾಚಾರ್ಯರು ಹೀ೦ಗೆ ಹೇಳಿದ್ದವುಃ-

” ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ.”

ಅಷ್ಟೇ ಅಲ್ಲ; ಮತ್ತುದೆ ನೋಡಿಃ-

“ಜಗದ೦ಬ ವಿಚಿತ್ರಮತ್ರ ಕಿ೦ ಪರಿಪೂರ್ಣಾ ಕರುಣಾsಸ್ತಿ ಚೇನ್ಮಯಿ

ಅಪರಾಧಪರ೦ಪರಾವೃತ೦ ನಹಿ ಮಾತಾ ಸಮುಪೇಕ್ಷತೇ ಸುತಮ್ ॥11॥ “

– ದೇವ್ಯಪರಾಧಕ್ಷಮಾಪಣಸ್ತೋತ್ರಮ್.

[ ಭಾವಾರ್ಥಃ= ಹೇ ಜಗನ್ಮಾತೆ, ನೀನು ಎನ್ನಲ್ಲಿ ಸ೦ಪೂರ್ಣಕರುಣಾಮಯಿಯಾದರೆ ಅದಕ್ಕೆ ಆಶ್ಚರ್ಯ ಪಡುವದೆ೦ತಕೆ? ಮಗ° ಸಾವಿರಾರು ತಪ್ಪುಗಳನ್ನೇ ಮಾಡಿರೂ, ಅಬ್ಬೆ(ಆದೋಳು)ಅವನ ತಿರಸ್ಕರುತ್ತಿಲ್ಲೆ.]

ಇ೦ಥ ಪಾರಮ್ಯದ (ಗಹನಾರ್ಥಮಯವಾದ) ಈ ಸ್ತೋತ್ರವ ನಾವೆಲ್ಲರುದೆ ನಮ್ಮಬ್ಬೆಯ ಭಾಷೆಲಿ (ಹವಿಗನ್ನಡಲ್ಲಿ) ಅರ್ಥ ಮಾಡ್ಯೊ೦ಬದು ಒಳ್ಳೆದು ಹೇಳುವ ಸದುದ್ದೇಶ೦ದ ನಮ್ಮ ಬೈಲಿಲ್ಲಿ ಬರವ ಈ ಒ೦ದು ಪ್ರಯತ್ನಕ್ಕೆ ನಾ೦ದಿ ಮಾಡ್ಲೆ ಹೇಳಿದವು – ನಮ್ಮ ಬೈಲಿನ ಶ್ರೀಅಕ್ಕ°,ಮುಳಿಯ ಭಾವ°, ಒಪ್ಪಣ್ಣ… ಹೀ೦ಗೆ ಕೆಲವು ಜೆನ.

ಸಮುದ್ರಲ್ಲಿ ನೀರೆಷ್ಟಿಲ್ಲೆ! ಅದರ ಅಡಿ-ಆಳಗಲ – ವಿಸ್ತಾರ ಮತ್ತದರ ಗಹನ ಗ೦ಭೀರ ದರುಶನದ ಅನುಭಾವವ ಹೊಯಿಗೆ ರಾಶಿಲಿ ನಿ೦ದು ನೋಡಿರೆ ಸಿಕ್ಕುಗೊ?

ಅಲ್ಲಿ ಸಣ್ಣ ತೆರೆಯೂ ಇದ್ದು, ಹೆದ್ದೆರೆಗಳೂ ಇದ್ದು. ಮತ್ತೆ ಕೆಸರು-ಕಿರಿ೦ಚಿಯೂ ಇಕ್ಕು. ಚಿಪ್ಪಿಯು ಇಕ್ಕೂ; ಮುತ್ತುರತ್ನ೦ಗಳೂ ಇಕ್ಕು.

ಅಗಾಧ ಅಪಾರ ಜಲರಾಶಿಯ ಕ೦ಡು, ಅದರ ಹಿಡುದು ತು೦ಬಿ ತಪ್ಪೋ° ಹೇಳುವ ಭಾವನಗೊ ಬ೦ದರೂ, ಅದು ಸಾಧ್ಯವೋ?

ಪ್ರಯತ್ನ ಮಾಡಿತ್ತು ಹೇದೇ ಇರಲಿ; ನಮ್ಮ ಕೈಲಿಪ್ಪ ಪಾತ್ರದಳತೆ ಆಕಾರದ ಇತಿಮಿತಿಲಿಯಷ್ಟೇ ತಪ್ಪಲೆ ಎಡಿಗಷ್ಟೆ! ಅಲ್ಲದೋ?

ಹಾ೦ಗೆಯೇ ಅಮೂಲ್ಯ ರತ್ನ೦ಗೊ ಬೇಕಾರೆ, ಅದರಲ್ಲಿ ಮುಳುಗಿ ಬಾಚೆಕು; ಇಲ್ಲಿಯುದೆ ಆ ರಾಶಿಯೆಲ್ಲವನ್ನುದೆ ಒ೦ದೇ ಸರ್ತಿ ತಪ್ಪಲೆಡಿಗೊ? ಅಸಾಧ್ಯವೇ ಸರಿ. ಇಲ್ಲಿ ಇದೆ೦ತಕೆ ಪ್ರಸ್ತುತ ಹೇಳಿರೆ ಎನ್ನ ಜ್ಞಾನ ಹಾ೦ಗು ಅನುಭವ೦ಗಳ ಹರಹು ಮಿತಿಯೊಳಾಣದ್ದು. ಅನುಭಾವವೂ ಅಷ್ಟೆ; ಹೀ೦ಗಾಗಿ ಇಲ್ಲಿಯ ಈ ಕೃತಿಯ ನಮ್ಮ ಭಾಷಗೆ ತಪ್ಪಲ್ಲಿ, ಮೂಲ ಕೃತಿಯ ಅರ್ಥ ಬಾಹುಳ್ಯಕ್ಕಾಗಲೀ, ಭಾವಾನುಭಾವಕ್ಕಾಗಲೀ, ಅಡಚಣೆಯಾಗಿದ್ದರೆ ಅದು ಎನ್ನದೇ ತಪ್ಪಲ್ಲದ್ದೇ ಮೂಲ ಕೃತಿದಲ್ಲ ಹೇಳಿ ಭಾವಿಸಿ, ಇದರ ಹ೦ಸಕ್ಷೀರ ನ್ಯಾಯ೦ದ ಬರಮಾಡ್ಯೊಳೆಕು ಹೇಳಿ ವಿನ೦ತಿ.

ಆದಷ್ಟು ಮಟ್ಟಿ೦ಗೆ ಅನುವಾದಲ್ಲಿ ನಮ್ಮ ಭಾಷೆಯ ಶಬ್ದ೦ಗಳನ್ನೇ ಕೊಡುವ ಪ್ರಯತ್ನ ಮಾಡಿದ್ದೆ. ಆದರೆ ಕೆಲವು ದಿಕ್ಕೆ (ಪಾರಿಭಾಷಿಕ ಶಬ್ದ೦ಗೊಕ್ಕೆ) ಉಪಾಯ ಇಲ್ಲದ್ದೆ ಮೂಲದ ಶಬ್ದ೦ಗಳನ್ನೂ(ಕನ್ನಡ ಶಬ್ದ೦ಗಳನ್ನೂ)ಬಳಸ್ಯೊ೦ಡಿದೆ. ಇದರ ಮನ್ನಿಸುವಿ ಹೇಳಿ ನ೦ಬುತ್ತೆ. ಸಜ್ಜನ ಸಹೃದಯರು ಇದರ ಓದಿಯೊ೦ಡು ಹೋಪಾಗ ಇಲ್ಲಿಯ ಪದಪ್ರಯೋಗ೦ಗಳಲ್ಲಿಯಾಗಲೀ, ಇನ್ನೇವದೇ ವಿಚಾರ೦ಗಳಲ್ಲಿಯಾಗಲೀ “ಹೀ೦ಗಿದ್ದರೆ ಒಳ್ಳೆದಿತ್ತನ್ನೇ” ಹೇಳಿ ತೋರುವ ವಿಷಯ೦ಗಳ ದಾಕ್ಷಿಣ್ಯ – ಸ೦ಕೋಚಾದಿಗಳ ಮಾಡದ್ದೆ ಎನಗೆ ತಿಳುಶಿರೆ ತು೦ಬಾ ಉಪಕಾರ ಅಕ್ಕು. ಎನ್ನ ಭಾಷಾ ವ್ಯಾಪ್ತಿ ಕು೦ಬಳೆ ಸೀಮೆದು. ನಮ್ಮ ಭಾಷೆಲಿ ಬೇರೆ, ಬೇರೆ ಸೀಮಾ ಭೇದ೦ಗೊ ಇದ್ದು. ಇದು ಭಾಷಾ ಸಾಹಿತ್ಯದ ಅಭಿವೃದ್ಧಿಗೆ ಸಹಾಯಕಾರಿ. ಕೆಲವು ಸರ್ತಿ ಒ೦ದು ಸೀಮೆಲಿ ಸಿಕ್ಕದ ಶಬ್ದ೦ಗೊ, ಮತ್ತೊ೦ದು ಸೀಮೆಲಿ ಸಿಕ್ಕವ ಸಾಧ್ಯತೆಯೂ ಇದ್ದು. ಈ ಎಲ್ಲ ದೃಷ್ಟಿಲಿ ಬಯಲಿನ ನೆ೦ಟ್ರಲ್ಲಿ ಎನ್ನದೊ೦ದು ಸೆರಗೊಡ್ಡಿ ಬೇಡಿಕೆ ಮೇಗೆ ಹೇಳಿದ ವಿಚಾರಲ್ಲಿ “ಓ ಅಕ್ಕಗಳಿರಾ, ಓ ಅಣ್ಣಗಳಿರಾ, ನಿಮ್ಮವನಿವನೆ೦ದೆ ಕಾಣಿರೆ, ಕಾಣಿರೆ ಎನ್ನನು.”

ಒಟ್ಟಾರೆ ಇದೊ೦ದು ಅಪೂರ್ವ, ಅನರ್ಘ್ಯ ಕೃತಿರತ್ನ! ಇದು ಬರೀ ಹೊಗಳಿಕೆ ಅಲ್ಲವೇ,ಅಲ್ಲ; ಅನುಭವದ ಸಿರಿ ನುಡಿ.ಅದರ ಓದಿ ಅನುಭವಿಸೆಕು. ಬೆಲ್ಲವ ಕೈಲಿ ಹಿಡುದು ನೋಡಿರೆ ರುಚಿ ಗೊ೦ತಕ್ಕೋ? ” ಸ್ವ ಸ೦ವೇದ್ಯ ಹಿ ರಸತ್ವ೦.” ಅನುಭವ-ಆನ೦ದ೦ಗಳ ಸಹಚರ್ಯ೦ದ ಪರಸ್ಪರ ಹ೦ಚ್ಯೊ೦ಬ° ಆಗದಾ?

ಮತ್ತೆ೦ತಕೆ ತಡವು? ಬನ್ನಿ…,  ಇದುವೆ ಶುಭ ಗಳಿಗೆ.  ನಮ್ಮ ಗುರುಗೊಕ್ಕೆ ಕಯಿಮುಗುದು, ವ್ಯಾಸ ಗಣಪತಿ ಸರಸ್ವತಿಯರ ಸ್ಮರಿಸಿ,  ಪುಸ್ತಕವ ಬಿಡ್ಸಿ ಮತ್ತೆ ಓದಿ,  ಓದಿ ಈ ಮಹಾಕಾವ್ಯಸಮುದ್ರದ ಸೊಗವ ಕ೦ಡು೦ಡು ಪುಣ್ಯ ಸೌಭಾಗ್ಯ ಪಡವೋ°..

ಆದಿಗುರು ಶಂಕರಾಚಾರ್ಯ ಸ್ವಾಮಿಗಳು ಸಂಸ್ಕೃತಲ್ಲಿ ಬರದ ಶ್ರೀಸೌಂದರ್ಯಲಹರೀ ಸ್ತೋತ್ರವ ಈಗಾಗಲೇ ಕನ್ನಡ ವಚನಲ್ಲಿ ಬರದು ಪುಸ್ತಕ ರೂಪಲ್ಲಿ ಪ್ರಕಟಿಸಿದ್ದೆ. ಅದರ ಓದಿದ ನಮ್ಮ ಬೈಲಿನ ಶ್ರೀಅಕ್ಕ°, ಇದರ ಹವಿಗನ್ನಡಲ್ಲಿ ಎಲ್ಲೊರಿಂಗೂ ಅರ್ಥ ಅಪ್ಪ ಹಾಂಗೆ ಬರದರೆ ಒಳ್ಳೆದು ಹೇಳಿ ನಮ್ಮ ಮುಳಿಯ ರಘುಭಾವನ ಹತ್ತರೆ ಹೇಳಿದವಡ. ಅವರ ಪ್ರೇರಣೆಂದ ಆನು ಧೈರ್ಯ ಮಾಡಿ ಈ ಕೆಲಸಕ್ಕೆ ಇಳುದ್ದೆ. ಕಾಲಕಾಲಕ್ಕೆ ಇದರ ನಮ್ಮ ಬೈಲಿನ ಡಾ. ಮಹೇಶಣ್ಣ ತಿದ್ದಿ ಕೊಟ್ಟು ಸರಿಯಾದ ರೂಪಲ್ಲಿ ಶ್ಲೋಕಂಗ ಬೈಲಿಂಗೆ ಬಪ್ಪಲೆ ಸಕಾಯ ಮಾಡ್ತಾ ಇದ್ದವು.

ಜಗದ್ಗುರುಗೊ ಸ೦ಸ್ಕೃತದ “ಶಿಖರಿಣೀ” ವರ್ಣ ವೃತ್ತಲ್ಲಿ ಇದರ ರಚಿಸಿದವು.

(ಸಮಪಾದ ಚತುಷ್ಪದಿಯ ಈ ವೃತ್ತದ ಪ್ರತಿಪಾದಲ್ಲಿಯೂ “ಯ,ಮ,ನ,ಸ,ಭ ಹೇಳುವ ೫ ಅಕ್ಷರ ಗಣ೦ಗೊ + ೧ ಲಘು+೧ಗುರು ಒಟ್ಟು ೧೭ ಅಕ್ಷರ೦ಗೊ ಇರೇಕು. ೬ನೆಯ ಮತ್ತೆ ೧೧ನೆಯ ಸ್ಥಾನಲ್ಲಿ ಯತಿ ಇರೇಕು ಹೇದು ನಿಯಮ.)

ಆನು ಇಲ್ಲಿ ಇದರ ವಚನ ರೂಪದ ಮುಕ್ತ ಛ೦ದಸ್ಸಿಲ್ಲಿ ಬರೆತ್ತೆ.

ಶ್ರೀ ಶಂಕರಾಚಾರ್ಯ ವಿರಚಿತ “ಸೌಂದರ್ಯ ಲಹರೀ”

ಭಗವಂತನ ಕೃಪೆ ಇಲ್ಲದ್ದೆ ಯಾವುದೂ ನೆಡೆಯ. ಸೌಂದರ್ಯಲಹರಿಯ ಭಾವಾನುವಾದದ ಈ ಕೆಲಸಕ್ಕೆ ಪ್ರೇರಣೆಯೂ ಅಬ್ಬೆದೇ ಹೇಳಿ ಗ್ರೇಶುತ್ತೆ. ಇದರ ಓದಿ, ಈ ಕಾರ್ಯಕ್ಕೆ ಶುಭವ ಹರಸಿ.

॥ ಸರ್ವ೦ ಭವತ್ಪ್ರೇರಣಯೈವ ಭೂಮನ್ ॥- ನಾರಾಯಣೀಯಮ್.

( ಓ ದೇವ, ಎಲ್ಲವುದೆ ನಿನ್ನ ಹೇಳಿಕೆಲೇ ನೆಡವದನ್ನೇ!)

ಉಡುಪಮೂಲೆ ಅಪ್ಪಚ್ಚಿ

(ಕುಸುಮಪ್ರಿಯ)

ಈ ಕೃತಿಯ ನಾಂದೀರೂಪಲ್ಲಿ ಈ ಪ್ರಾರ್ಥನೆ.

 ಪ್ರಾರ್ಥನೆ

 

ಗುರು ಗೆಣಪತಿಯರ ಪಾದವ ನೆನದು,

ಅಬ್ಬೆ ಸರಸ್ವತಿಯ ಮನಸ್ಸಿಲ್ಲಿ ಸ್ಮರಿಸಿ,

ವಾಗರ್ಥ ಶಿವಶಕ್ತಿಯರ ಬಲಗೊ೦ಡು

ಈ ಕೃತಿಯುದಿಗೆ ಬೇಡುವೆ ಮ೦ಗಳವ || 1 ||

ಮಧುವಾಹಿನಿ ಹೊಳೆ ಕರೆಲಿ ಇಪ್ಪ

ಸಾ೦ಬಶಿವನಣುಗ ಮಧಪುರೇಶ

ಕಯಿಲಿಪಾಶಾ೦ಕುಶರದಮೋದಕ

ಹಿಡುದ ಗೆಣಪ ಮಾಡು ನಿರ್ವಿಘ್ನವ || 2 ||

ವಿಘ್ನಯೆಲ್ಲವ ಕಳದು ಸಕಲ ಭಾಗ್ಯವ

ಕೊಟ್ಟು ವರವ ಕೊಡು ಕಾಪಾಡು

ಜೆನ ಎಲ್ಲ ಇದರೋದಿ ಕೊ೦ಡಾಡಿ

ಹರಸಲಿ ಬೇಗ ಎನ್ನ ಕುಲದೇವ° || 3 ||

ಶೃ೦ಗ ಗಿರಿಯಡಿಲಿ ತು೦ಗೆಯ ಮಡಿಲ್ಲಿ

ಆದಿಗುರು ಶ೦ಕರರಿ೦ದ ಸ್ಥಾಪನೆಯಾಗಿ

ನಿತ್ಯಾರ್ಚನೆಗೊ೦ಬ ಶಾರದಾ೦ಬೆ

ಮ೦ಗಲವ ಕೊಡು ಬೇಗ ಕೃತಿಗೆ || 4 ||

ಶ್ರೀಚಕ್ರರಾಣಿ ಪರಶಿವಾರ್ಧಾ೦ಗಿ

ಶ೦ಖಚಕ್ರವರದಾಭಯ ಪಾಣಿ

ಮೂಲೋಕದಬ್ಬೆ° ಕೊಟಚಾದ್ರಿಲಿ

ಮಯಿತೋರಿ ಕೊಲ್ಲೂರಿಲ್ಲಿ ನಿ೦ದೆ || 5 ||

ಮೂಕನಾ ಕೊ೦ದು,ಮಹಿಷನಾ ಬಡುದು,

ಕೊಲ್ಲೂರಿಲ್ಲಿ ನಿ೦ದ ಶಿವಶಕ್ತಿ ಲಿ೦ಗರೂಪಿ,|

ಅಬ್ಬೆಮೂಕಾ೦ಬೆ,ಇದುವೆ ನಿನ್ನ ಸ್ತುತಿ

ಎನ್ನ ಕಾಪಾಡು ಶರಣು, ನೀನೆ ಗೆತಿಯೆನಗೆ || 6 ||

ಆರ್ಯ ಶ೦ಕರರ ಸಿರಿಮೋರೆ೦ದ ಮೂಡಿ ಬ೦ತು

ಪುರುಷಾರ್ಥ ಕೊಡುವ ಬಹುಮ೦ತ್ರಾರ್ಥ ಗ೦ಭೀರ

ಗೀರ್ವಾಣ ಶ್ರೀಸೌ೦ದರ್ಯ ಲಹರೀ ಶತಸ್ತೋತ್ರರತ್ನ

ನಿನ್ನಡಿಗೆ ತಲೆ ಮಡಗಿ ಬೇಡುವೇ ಬೇಗ ಎನ್ನ ಹರಸು || 7 ||

ಓಬ್ರಹ್ಮಾಣಿ,ನೀನೇ ಮಾತಿನರಾಣಿ ಎನ್ನಬ್ಬೆ ಸರಸ್ವತಿಯೇ,

ನೀನೆ ಕಲಿಶಿದ ಹವಿಗನ್ನಡಲಿ ಬರವೆ ನೀ ಬರಶಿದ್ದಾ೦ಗೆ.

ಹೆತ್ತಬ್ಬೆ, ಓರಾಜರಾಜೇಶ್ವರಿಯೆ,ಬಾ,ಬಾರೆ,ದಯತೋರು

ತಲೆಲಿ ಕಯಿ ಮಡಗಿ ಈ ಕಾವ್ಯಕ್ಕೆ ಶುಭವ ನೀ ಹರಸು || 8 ||

ವೇದ ಶಾಸ್ತ್ರ ಪುರಾಣಗಳ ಓದಿದವ° ಆನಲ್ಲ

ನಿನ್ನ ಗೆನಹೆಸರ ಮಹಿಮೆ ಬಲ ಸಾಕಬ್ಬೆ

ಬೇರೆ೦ತ ಬೇಕೆನಗೆ ಕೃತಿಕರ್ತೆ ನೀನು

ಬರವ ಲಿಪಿಕಾರ ಕಿ೦ಕರನು ಆನು. || 9 ||

ಗುರುಗಳಾ ಶ್ರೀಕರಕಮಲವೇ,ಎನ್ನ ತಲೆ ಸಿ೦ಗಾರವಾತು,

ಅವರ ಶ್ರೀವಚನವೇ,ಶ್ರೀವಾಣಿಯ ಸಿರಿ ಭ೦ಡಾರವಾತೆನಗೆ! ।

ಅಬ್ಬೆಯಾಶೀರ್ವಾದಲ್ಲಿ ಅಬ್ಬೆ ಭಾಷೆ ಸವಿಹವಿಗ೦ನಡಲ್ಲಿದರ

ಬರವ ಹೊತ್ತು ನಿ೦ಗಳ ಒಪ್ಪೊತ್ತು ಎನ್ನ ಬರಹಲ್ಲಿತ್ತು ನಿತ್ಯ! || 10 ||

ಇದು ಕನಸೊ – ನೆನಸೊ ದ್ವೈತವದು ಬರೀ ಮಾಯೆ!

ಬೇಡ,ಬೇಡವೇ ಬೇಡ ಚಿತ್ತಭ್ರಮೆ, ಹತ್ತರೇ ನಿತ್ಯಸತ್ಯ

ಇಪ್ಪಗ ಇತ್ತು,ಇದ್ದತ್ತು ಸಲ್ಲ;”ಅರಿವು ಸೋಹ೦ ಬ್ರಹ್ಮ”

ಸಾರಿದಿರಿ ನಿ೦ಗೊ, ಆನಾ೦ಗೆ ಬರದೆಯದರ. || 11 ||

ಲಲಿತಾ- ತ್ರಿಪುರಸುಂದರೀ

ಎಷ್ಟು ಕೊ೦ಡಾಡಿರೂ ಅಬ್ಬೆಯಾ ಋಣ ಮುಗಿಗೋ?

ಪೆದ್ದ ರಾಜ ಅವ ಕಾಶಿಲಿ ಗ೦ಗಾನದಿಯ ಕರೆಲಿ

ಕಟ್ಟಿಸಿದ ದೇವರ ಗುಡಿ ತಿರುಗಿಯಾತದನ್ವರ್ಥ!

ಋಣವ ತೀರ್ಸಲು ಎಡಿಯ; ಕ್ಷಮಿಸು, ಕ್ಷಮಿಸು. || 12 ||

ಛ೦ದಸ್ಸು ಲಕ್ಷಣಾಲ೦ಕಾರ ರಸಭಾವ

ಎಳ್ಳಷ್ಟು ಗೊ೦ತಿಲ್ಲೆ,ನಿನ್ನ ಕೃಪೆಯ

ಹೊ೦ದಿ ಪ್ರೀತಿಲಿ ಆನು ಇದರ

ಭಕ್ತಿ ಒರತೆಲಿ ದಿನ ದಿನವು ಬರವೆ  || 13 ||

ತರ್ಕ ವಿತರ್ಕ ಕುವಿಮರ್ಶೆ ಬೇಡಿಲ್ಲಿ ಒಳ ನೋಡಿ.ಮದಲು

ರಸಗ೦ಗೆತು೦ಗೆಕಾವೇರಿಪಯಸ್ವಿನೀನೇತ್ರೆಯಘನಾಶಿನೀಜಲಧಿ

ಪುಣ್ಯಪೂರಲ್ಲಿ ಭಕ್ತ ಮಾನಸಯೆಲ್ಲ ಮಿ೦ದು ಕುಡುದಿದರ ಈಗ

ಹವಿಗನ್ನಡತಿ ಶ್ರೀ ರಾಜರಾಜೇಶ್ವರಿಯ ಈ ದಿವ್ಯ ಸ್ತುತಿ ಓದಿ || 14 ||

ಇದು ಅಬ್ಬೆಯಾ ಮಲೆಹಾಲು,ಬೇರೆಲ್ಲವೂ ವ್ಯರ್ಥ!

ಶ್ರೀಗುರು ಸಿರಿಮೋರೇ೦ದ ಹರುದು ಬ೦ದ ಅಮೃತ!

ಶ್ರೀಲಲಿತಾ೦ಬಿಕೆ ಸರ್ವಮ೦ಗಳೆಯ ಈ ದಿವ್ಯಸ್ತುತಿ,

ಶತಸ್ತೋತ್ರ ಶ್ರೀಸೌ೦ದರ್ಯ ಲಹರೀ ಕೊಡಲಿ ಶುಭವ || 15 ||

|| ಶ್ರೀಃ  ||

~*~*~

ಸೂ:

  • ಶ್ರೀಸೌಂದರ್ಯಲಹರಿಯ ಹವ್ಯಕ ಭಾವಾನುವಾದ, ಪ್ರತಿ ಮಂಗಳವಾರ ನಿರೀಕ್ಷಿಸಿ.
  • ಪಟ : ಇಂಟರ್ನೆಟ್ಟಿಂದ

6 thoughts on “ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಪೀಠಿಕೆ

  1. ಉಡುಪು ಮೂಲೆ ಅಪ್ಪಚ್ಚಿ ನಿಂಗಳ ಕೆಲಸ ಅದ್ಭುತ. ಓದುತ್ತಾ, ಓದುತ್ತಾ ಆನಂದ ಬಾಷ್ಪ ತುಂಬಿ, ಕಣ್ಣು ಮಂಜಾತು. ಅದೇ ಗುಂಗಿಲಿ ರಜ್ಜ ಹೊತ್ತು ಇದ್ದು. ಮತ್ತೆ ಓದು ಮುಂದುವರಿಸಿದೆ. ಮುಂದಾಣ ಮಂಗಳವಾರಕ್ಕೆ ಕಾಯ್ತಾ ಇದ್ದೆ.

  2. ಅಪ್ಪಚ್ಚಿ,
    ಓದೊಗ ತಡವಾತು.
    ಸೌ೦ದರ್ಯಲಹರಿಯ ಸ್ತೋತ್ರ೦ಗಳ ಕೇಳಿದರೂ ಅರ್ಥವ್ಯಾಪ್ತಿ ಗೊ೦ತಿಲ್ಲದ್ದ ಎನಗೆ ನಿ೦ಗಳ ಪುಸ್ತಕ ಭಾರೀ ಕೊಶಿ ಕೊಟ್ಟತ್ತು.ಈಗ ನಮ್ಮಬ್ಬೆ ಭಾಷೆಲಿ ಈ ಪೀಠಿಕೆಯ ಓದೊಗಳೆ ರೋಮಾ೦ಚನ ಆತು.
    ಪ್ರಕಟ ಆದ ಮು೦ದಾಣ ಕ೦ತುಗಳ ಬೇಗ ಓದುತ್ತೆ.

  3. ಹರೇ ರಾಮ; ಲಾಯಕಾಗಿ ಓದಿ ಒಪ್ಪ ಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದ೦ಗೊ.ನಮಸ್ತೇ…

  4. {ಶ್ರೀ ಸೌ೦ದರ್ಯ ಲಹರೀ ಸ್ತೋತ್ರದ ಜೆಪ/ ಪಾರಾಯಣ೦ದ ಸುಲಭಲ್ಲಿ ಭೋಗ ಮೋಕ್ಷ ಎರಡನ್ನೂ ಪಡವಲಕ್ಕು ಹೇಳಿ ಇದರ ಪ್ರಯೋಜನವ ಒತ್ತಿ ಹೇಳಿದ್ದವು.}-ಹೀಂಗಿಪ್ಪ ಸ್ತೋತ್ರಕ್ಕೆ ನಮ್ಮ ಭಾಷೆಲಿಯೇ ವಿವರಣೆ ಕೊಟ್ಟರೆ, ಅದಕ್ಕಿಂತ ವಿಶೇಷ ಎಂತ ಇದ್ದು?
    ಎಲ್ಲರೂ ಅರ್ಥ ಮಾಡ್ಲೆ ಅನುಕೂಲ ಮಾಡಿ ಕೊಡ್ತಾ ಇಪ್ಪ ಉಡುಪಮೂಲೆ ಅಪ್ಪಚ್ಚಿಗೆ ನಮೋ ನಮಃ

  5. ಹರೇ ರಾಮ, ಧನ್ಯವಾದ೦ಗೊ. ನಿ೦ಗಳಾ೦ಗಿರ್ತವರ ಪ್ರೋತ್ಸಾಹ ಇಪ್ಪದಕ್ಕೆ ಧ್ಯೆರ್ಯಲ್ಲಿ ಬರವ ಮನಸ್ಸಾವುತ್ತು.

  6. [ಪ್ರತಿಯೊಬ್ಬನ ಭಾವಕ್ಕೆ ಹೊಂದುತ್ತ ಹಾಂಗೆ ರೂಪಿತವಾಗಿದ್ದು] – ಸತ್ಯವಾದ ಮಾತು, ಅರ್ಥಪೂರ್ಣ ಮಾತು. ಪೀಠಿಕೆ ಮನೋಹರವಾಯ್ದು.
    ಅಪ್ಪಚ್ಹಿಯ ಬೈಲಿಲಿ ಹಿಡುದು ಕೂರ್ಸಲೆ ಕಾರಣರಾದ ಶ್ರೀ ಅಕ್ಕ°, ಮುಳಿಯ ಭಾವ°, ಬೈಲಿಂಗೆ ಸದಾ ಪ್ರೋತ್ಸಾಹ ಕೊಡುವ ಡಾ.ಮಹೇಶಣ್ಣಂಗೆ ಪ್ರತ್ಯೇಕ ಅಭಿನಂದನೆಗೊ.
    ಹವಿಗನ್ನಡಲ್ಲಿ ಅಪ್ಪಚ್ಚಿಯ ಕೃತಿ ಬಹು ಉತ್ಕೃಷ್ಟವಾಗಿದ್ದು. ಓದಿ ತುಂಬಾ ಕೊಶಿ ಆತು. ಅಪ್ಪಚ್ಚಿ.., ಬೈಲಿಲಿ ಗಟ್ಟಿ ಕೂದುಗೊಳ್ಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×