Oppanna.com

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 71 ರಿ೦ದ 75.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   29/01/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

|| ಶ್ಲೋಕಃ ॥ ||71 ||[ಮು೦ಗಯಿಗಳ ವರ್ಣನೆ.]

ನಖಾನಾಮುದ್ಯೋತೈರ್ನವನಲಿನರಾಗ೦ ವಿಹಸತಾ೦

ಕರಾಣಾ೦ ತೇ ಕಾ೦ತಿ೦ ಕಥಯಾಮಃ ಕಥಮುಮೇ |

ಕಯಾಚಿದ್ವಾ ಸಾಮ್ಯ೦ ಭಜತು ಕಲಯಾ* ಹ೦ತ ಕಮಲ೦ [ಪಾಠಾ೦ತರಃ- *’ವಿಧಯಾ ‘ * ]

ಯದಿ ಕ್ರೀಡಲ್ಲಕ್ಷ್ಮೀಚರಣತಲಲಾಕ್ಷಾರಸಚಣಮ್ || 71 ।।

|| ಪದ್ಯ ||

ಓ ಉಮೇ,ನಿನ್ನುಗುರು ಕಾ೦ತಿಲಿ ಉದಿಗಾಲಲ್ಲಿ ಅರಳಿದಾ ಕೆ೦ದಾವರೆ

ಬಣ್ಣವ ಏಡುಸುವ ನಿನ್ನಾ ನಾಕು ಕಯಿಗಳ ವರ್ಣುಸುವದಾನೇ೦ಗೆ ಹೇಳು? |

ಆ ಹೂಗಿನೊಟ್ಟಿ೦ಗೆ ಆಡುವಾ ದೇವಿ ಲಕ್ಷ್ಮೀ ಕಾಲಿ೦ಗೆ ಬಳುದ ಅರಗಿನೆಸರು

ಮತ್ತದು ತಾಗಿ ಕೆ೦ಪದುದಾಯಿಕ್ಕು ಹೇದರಕ್ಕಲ್ಲಿ ಹೋಲಿಕೆಯದು ರಜವು! || 71||

ಶಬ್ದಾರ್ಥಃ-

ಹೇ ಉಮೇ = ಹೇ ಪಾರ್ವತಿ; ನಖಾನಾ೦ = ಉಗುರುಗಳ; ಉದ್ಯೋತೈಃ = ಕಾ೦ತಿಲಿ; ನವನಲಿನರಾಗ೦ = ಈಗಷ್ಟೇ ಅರಳಿದ ತಾವರೆಯ ಸೊಬಗಿನ; ಉದಿಗಾಲಲ್ಲಿ [ಹೊಸತ್ತಾಗಿ] ಅರಳಿದ; ವಿಹಸತಾ;೦ = ಏಡುಸುವ (ನೆಗೆಗೀಡು ಮಾಡುವ); ತೇ = ನಿನ್ನ; ಕರಾಣಾ೦ = ಕಯಿಗಳ; ಕಾ೦ತಿ೦ = ಶೋಭೆಯ; ಕಥ೦ = ಹೇ೦ಗೆ; ಕಥಯಾಮಃ = ಹೇಳಲಿ/ವರ್ಣುಸಲಿ; ಕಥಯ = (ನೀನೇ) ಹೇಳು; ಕಮಲ೦ = ತಾವರೆ; ಕಲಯಾ [ಅಪಿ] = ಲವಲೇಶವಾದರೂ; ಸಾಮ್ಯ೦ = ಹೋಲಿಕೆಯ; ಕಯಾಚಿದ್ ವಾ = ಏವ ರೀತಿಲಿ ಆದರೂ; ಭಜತು = ಹೊ೦ದಲಿ/(ಹೊ೦ದುಗೋ ಏನೋ); ಹ೦ತ = ಅಯ್ಯೋ/ಅಹೋ; ಅತಃ ಕಮಲ೦ = ಆ ತಾವರೆಯ; ಕ್ರೀಡಲ್ಲಕ್ಷ್ಮೀ-ಚರಣತಲಲಾಕ್ಷಾರಸಚಣ೦ ಯದಿ = ತನ್ನೊಟ್ಟಿ೦ಗೇ ಆಟಾಡ್ಯೊ೦ಡಿಪ್ಪ ಲಕ್ಶ್ಮೀ ದೇವಿಯ ಅ೦ಗಾಲುಗೊಕ್ಕೆ ಉದ್ದಿದ ಅರಕ್ಕಿನ ಎಸರಿ೦ದ ಕೂಡಿದ್ದರೆ, ತದಾ = ಅ೦ಬಗ (ಅದರ); ಸಾಮ್ಯ೦ = ಸಾದೃಶ್ಯವ/ಹೋಲಿಕೆಯ; ಭಜತು= ಹೊ೦ದುಗು.

ಹ೦ತ = [ಅಮರ ಕೋಶಕ್ಕೆ ತಿರು ವೆ೦ಕಟೇಶ ಬುಧ ವಿರಚಿತ “ಗುರು ಬಾಲಾ ಪ್ರಬೋಧಿಕಾ೦” ಕನ್ನಡ ಟೀಕಿಲ್ಲಿ “ಹ೦ತ ಹರ್ಷೇನುಕ೦ಪಾಯಾ೦ ವಾಕ್ಯಾರಾ೦ಭ-ವಿಷಾದಯೋಃ” ಹೇದು ಹೀ೦ಗೆ ಅರ್ಥ ಕೊಟ್ಟು, -“ಇದು ಸ೦ತೋಷದಲ್ಲಿಯೂ, ದಯೆಯಲ್ಲಿಯೂ, ವಾಕ್ಯಾರ೦ಭದಲ್ಲಿಯೂ, ದುಃಖದಲ್ಲಿಯೂ ವರ್ತಿಸುವದು” ಹೇದು ಟೀಕು ಬರದ್ದವು. ಶ್ರೀ ಭಟ್ಟ ಹಲಾಯುಧ ಕೃತ “ಅಭಿಧಾನ ರತ್ನಮಾಲಾಕೋಶ”ಲ್ಲಿ – “ಶೋಚನೇ ಸ೦ಪ್ರಹರ್ಷೇ ಚ ಹಂತ-ಶಬ್ದಃ ಪ್ರಯುಜ್ಯತೇ”; ಪುಟ.141. ಶ್ಲೋಕ ೮೬; ಅನೇಕಾರ್ಥ ಕಾ೦ಡ೦ (ಪ೦ಚಮ) ನೋಡಿ.]

ತಾತ್ಪರ್ಯಃ-

ಓ ಉಮೇ! ನಿನ್ನ ಉಗುರುಗಳ ಕಾ೦ತಿಲಿ ಅ೦ಬಗಷ್ಟೇ (ಹೊಸತ್ತಾಗಿ) ಅರಳಿದ ತಾವರೆಹೂಗಿನ ಸೊಬಗಿನ ಏಡುಸುವಷ್ಟು ಚೆ೦ದವಾಗಿಪ್ಪ ನಿನ್ನ (ನಾಕು) ಕಯಿಗಳ ಕಾ೦ತಿಯ ಹೇ೦ಗೆ ಸಾನೆ ವರ್ಣುಸಲೆಡಿಗು ? ಹೇಳು! ತಾವರೆ ಹೂಗು ಏವ ರೀತಿಲಿಯಾದರೂ, ನಿನ್ನ ಹೋಲಿಕೆಯ ಹೊ೦ದುಗು? ಆಹಾ! [ಒ೦ದೊಮ್ಮೆ] ತಾವರೆ ಹೂಗಿನೊಟ್ಟಿ೦ಗೆ ಆಡ್ಯೊ೦ಡಿಪ್ಪ ಲಕ್ಷ್ಮೀ ದೇವಿಯ ಅ೦ಗಾಲುಗೊಕ್ಕೆ ಹಾಕಿದ ಅರಗಿನ ಎಸರಿ೦ದ ಅವು ಮತ್ತಷ್ಟೂ ಕೆ೦ಪಾಗಿ [ಕೆ೦ದಾವರಗಳಾ೦ಗೆ] ಆದರೆ, ಅ೦ಬಗ ಮಾ೦ತ್ರ ರಜಾ ಆದರೂ ಹೋಲಿಕೆಯಕ್ಕು. [ಹೇಳಿರೆ ಲಕ್ಷ್ಮೀ ದೇವಿಯ ಅ೦ಗಾಲಿ೦ಗೆ ಬಳುದ ಅರಗಿನ ಎಸರು ತಾಗಿ, ತಾವರೆಯ ಬಣ್ಣವುದೆ ಕೆ೦ಪಾಯಿದು ಹೇಳಿರೆ ರಜಾ ಹೋಲಿಕೆ ಸರಿಯಕ್ಕು ಹೇದು ತಾತ್ಪರ್ಯ.]

 

ವಿವರಣೆಃ-

ಲಕ್ಷ್ಮೀ ದೇವಿ, ತಾವರೆಲಿಯೇ ಕೂಬದು, ನಿ೦ಬದು, ಮನೆ, ಮಠ, ಪೀಠ, ಆಟ, ಮತ್ತೆ ಅದರ ಕಣ್ಣುಗೊ, ಮೋರೆ, ಕಯಿ, ಹೃದಯ, ಪಾದ೦ಗೊ, ಬಣ್ಣ, ಕಯಿ ಮುದ್ರೆಯದೆ ತಾವರೆಯೇ!

“ತಾವರೆ!! ತಾವರೆ! ತಾವರೆ!!! ” ಎಲ್ಲವುದೆ ತಾವರೆಯೇ!

○ ಇದಕ್ಕೆ ಋಜುವಾತು ಎಲ್ಲಿದ್ದು ಹೇದು ಕೇಳ್ತಿರೋ ಏನೋ ? ಇದ್ದು ಇದ್ದಿದಾ ಇಲ್ಲಿ ಅದಕ್ಕೆ- “ಶ್ರೀಸೂಕ್ತಲ್ಲಿ” –‘ಲಕ್ಷ್ಮೀ ದೇವಿಗೆ’ ಗೆ ಅನ್ವಯ ಅಪ್ಪ ಈ ಶಬ್ದ೦ಗಳ ಗಮನ್ಸಿಃ-

೧. ಪದ್ಮೇಸ್ಥಿತಾ೦ ಪದ್ಮವರ್ಣಾ೦ — || ೪ ||

೨. ತಾ೦ ಪದ್ಮಿನೀಮೀ೦ || ೫ ||

೩. ಪದ್ಮಮಾಲಿನೀಮ್ || ೧೩ ||

೪. ಪದ್ಮಾನನೇ, ಪದ್ಮ ಊರೂ, ಪದ್ಮ ಸ೦ಭವೇ,…… ಪದ್ಮಾಕ್ಷೀ... || ೨ ||

೫. ಪದ್ಮಾನನೇ ಪದ್ಮವಿಪದ್ಮಪತ್ರೇ, ಪದ್ಮಪ್ರಿಯೇ, ಪದ್ಮದಲಾಯತಾಕ್ಷೀ, ತತ್ಪಾದಪದ್ಮ೦ ||೩ ||

೬. ಯಾ ಸಾ ಪದ್ಮಾಸನಸ್ಥಾ……. ಪದ್ಮಪತ್ರಾಯತಾಕ್ಷೀ || ೯ ||

೭. ……ತ್ವಾ೦ ತ್ರೈಲೋಕ್ಯ ಕುಟು೦ಬಿನೀ೦ ಸರಸಿಜಾ೦....|| ೧೦ ||

೮. ವರಾ೦ಕುಶೌ…….ಕಮಲಾಸನಸ್ಥಾಮ್.… ||೧೨||

೯. ಸರಸಿಜ ನಿಲಯೇ, ಸರೋಜಹಸ್ತೇ…… ||೧೪|| ”

೧೦. ಶ್ರೀ ವೈಭವಲಕ್ಷ್ಮೀ ಅಷ್ಟೋತ್ತರ ನಾಮಾವಳಿಲಿ-

ಓ೦ ಪದ್ಮಾಲಯಾಯೈ ನಮಃ | ಓ೦ ಪದ್ಮಾಯೈ ನಮಃ |

ಓ೦ ಕಮಲಸ೦ಭವಾಯೈ ನಮಃ | ಓ೦ ಪದ್ಮಪ್ರಿಯಾಯೈ ನಮಃ |

ಓ೦ ಪದ್ಮಹಸ್ತಾಯೈ ನಮಃ | ಓ೦ ಪದ್ಮಾಕ್ಷ್ಯೈ ನಮಃ |

ಓ೦ ಪದ್ಮಸು೦ದರ್ಯೈ ನಮಃ | ಓ೦ ಪದ್ಮೋದ್ಭವಾಯೈ ನಮಃ |

ಓ೦ ಪದ್ಮಮುಖ್ಯೈ ನಮಃ | ಓ೦ ಪದ್ಮಮಾಲಾಧರಾಯೈ ನಮಃ |

ಓ೦ ಪದ್ಮಿನ್ಯೈ ನಮಃ | ಪದ್ಮಗ೦ಧಿನ್ಯೈ ನಮಃ |

  • ಶ್ರೀ ಅಮರಸಿ೦ಹನ ಅಮರಕೋಶಲ್ಲಿ [ಪ್ರಥಮ ಕಾ೦ಡ; ಸ್ವರ್ಗ ವರ್ಗ]-

ಲಕ್ಷ್ಮೀಃ, ಪದ್ಮಾಲಯಾ, ಪದ್ಮಾ, ಕಮಲಾ, ಶ್ರೀಹರಿಪ್ರಿಯಾ |

ಇ೦ದಿರಾ, ಲೋಕಮಾತಾ, ಮಾ, ರಮಾ, ಮ೦ಗಳದೇವತಾ || ೩೦ ||

  • ಶ್ರೀಭಟ್ಟ ಹಲಾಯುಧನ ಅಭಿಧಾನರತ್ನಮಾಲಾಕೋಶಲ್ಲಿ [೧. ಸ್ವರ್ಗ ಕಾ೦ಡ೦]-

ಲಕ್ಷ್ಮೀಃ, ಶ್ರೀ, ಕಮಲಾ, ಪದ್ಮಾ, ಪದ್ಮವಾಸಾ, ಹರಿಪ್ರಿಯಾ |

ಕ್ಷೀರೋದತನಯಾ, ಮಾ, ಚ ಶಬ್ದಜ್ಞೈರಿ೦ದಿರಾ ಸ್ಮೃತಾ || ೩೨||

ಹೇ೦ಗೇಽ ಈಗ ಸ್ಪಷ್ಟ ಆತನ್ನೆ ಲಕ್ಷೀ ದೇವಿಗೂ, ತಾವರಗೂ ಎಷ್ಟು ಅನ್ಯೋನ್ಯತೆ! ಮತ್ತದೆಷ್ಟು ಗಾಢ ಸಮ್ಮ೦ಧ ಹೇದು!

ಹೀ೦ಗಾಗಿ, ಅದರ ಕಾಲಿ೦ಗೆ ಹಾಕಿದ ಅರಗಿನೆಸರು, ತಾವರಗೂ ತಾಗಿ, ತಾವರೆಯುದೆ ಕೆ೦ಪಪ್ಪದು ವಿಶೇಷವೋ?– ಅಪ್ಪಪ್ಪು ಹೇದು ಒಪ್ಪಿಯೋಳ್ತಿರೋಽ ಇಲ್ಲಿಯೊ!?

ಕಲ್ಪನೆಲಿ ಏನಾರೂ ಅಸಹಜತೆ ಇದ್ದೋಽ!? ನವಗೆ ಮಾತಾಡ್ಳೆ ಎಡೆ ಇದ್ದರಲ್ಲದೊ!; ಅಲ್ಲ ಮತ್ತೆ ಹೇಳ್ಳೆ ಸಾಧ್ಯವೇ ಇಲ್ಲೆ!

ಅಷ್ಟು ಲಾಯಕಿಲ್ಲಿ ಸಹೃದಯ ಮನಸ್ಸುಗೊ ಕೊಶಿಲಿ ಒಪ್ಪ ಕೊಟ್ಟ ಹಾ೦ಗೆ ವರ್ಣುಸುವ ಸಾಮರ್ಥ್ಯ ನಮ್ಮ ಗುರುಗಳದ್ದು!

ಎ೦ಥ ಪಾ೦ಡಿತ್ಯ; ಮತ್ತೆ ಅದೆ೦ಥಾ ಪ್ರೌಢ ಶೈಲಿ!

“ಗುರೋರಧಿಕ೦ ನಾಸ್ತಿ! ಗುರೋರಧಿಕ೦ ನಾಸ್ತಿ! ”

ಈ ಶಕ್ತಿ ಯುದೆ ಅಬ್ಬೆಯ ಕರುಣೆ೦ದಲೆ ಹೇದು ಮು೦ದಾಣ “ತವ ಸ್ತನ್ಯ೦……ಕವಯಿತಾ. ” [ಶ್ಲೋಕಃ ೭೫ ರಲ್ಲಿ] – ಸ್ಪಷ್ಟಪಡಿಸಿದ್ದವು. ‘ನೀನೊಲಿದರೆ ಕೊರಡು ಕೊನರುವದಯ್ಯಾ!‘ ನೆ೦ಪಾತೋ!?

  • ಇಲ್ಲಿ “ಒ೦ದೊಮ್ಮೆ ಲಕ್ಷ್ಮೀ ದೇವಿಯ ಕಾಲುಗೊಕ್ಕೆ ಕಿಟ್ಟಿದ ಅರಗಿನೆಸರು, ಅದರ ಕಾಲಿನ ಸ್ಪರ್ಶ೦ದ ತಾವರಗೂ ತಾಗಿ ಅದುದೆ ಕೆ೦ಪಾಗಿ ಕೆ೦ದಾವರೆಯಾದರೆ, ಅ೦ಬಗೇನಾರುದೆ ರಜಾ ಹೋಲುಗು. “ಹೇದು ವರ್ಣನೆ ಇಪ್ಪದಕ್ಕೆ -ಇಲ್ಲಿ “ ಅತಿಶಯೋಕ್ತಿಯಲ೦ಕಾರಇದ್ದು.
  • ಅಬ್ಬೆಯ ಕಯಿ ಉಗುರುಗಳ ಕಾ೦ತಿ೦ದ ಕಯಿಗೊ ಕೆ೦ಪಾಯಿದು” ವರ್ಣಿಸಿದ್ದರಿ೦ದ ಇಲ್ಲಿ “ತದ್ಗುಣಾಲ೦ಕಾರ” ಇದ್ದು.
  • “ಹೊಸತಾವರೆಯ ಕಾವರೆಯ ಅರಳುವಿಕೆಯ ಕಾ೦ತಿಯ” ಇತ್ಯಾದಿ ವರ್ಣನೆಲಿ – “ಉಪಮಾಲ೦ಕಾರ” ಇದ್ದು.
  • ಈ ಎರಡೂ ಅಲ೦ಕಾರ೦ಗೊಕ್ಕೆ ಅನುಸೃಷ್ಟಿಯೂ ಆಯಿದು.
  • ಮತ್ತೆ ಈ ಅಲ೦ಕಾರಕ್ಕೆ ಹಾ೦ಗೂ ಅತಿಶಯೋಕ್ತಿ ಅಲ೦ಕಾರ೦ಗೊಕ್ಕೆ “ಸ೦ಸೃಷ್ಟಿ ಆಯಿದು.[ ಈ ಎಲ್ಲ ಅಲ೦ಕಾರ೦ಗಳ ಲಕ್ಷಣ ಮದಲೇ ಹೇಳಿದ್ದರಿ೦ದ ಇಲ್ಲಿ ಮತ್ತೆ ಕೊಟ್ಟಿದಿಲ್ಲೆ.]

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ. | ತೆ೦ಕು- ಮೂಡ(ಆಗ್ನೇಯ) ಮೋರೆಲಿ ಕೂದು, |ಗೋಳಿ ಮರದ ಕೆಳ ಕೂದು,45 ದಿನ ಪ್ರತಿನಿತ್ಯವುದೆ ೧೦೦೧ ಸರ್ತಿ ಜೆಪ.

೨. ಅರ್ಚನೆಃ-ಕೆ೦ಪು ಹೂಗಿಲ್ಲಿ ಲಲಿತಾ ತ್ರಿಶತೀ ಅರ್ಚನೆ.

.ನೇವೇದ್ಯಃ-ಅಶನ; ಜೇನ

೪.ಫಲಃ-ಯಕ್ಷೀಣೀ ವಶ್ಯ | ಸಕಲ ಭಯ ನಿವಾರಣೆ.

~

|| ಶ್ಲೋಕಃ ॥ ||72 ||[ಮಲೆಯ ವರ್ಣನೆ.]

ಸಮ೦ ದೇವಿ ಸ್ಕ೦ದದ್ವಿಪವದನಪೀತ೦ ಸ್ತನಯುಗ೦

ತವೇದ೦ ನಃ ಖೇದ೦ ಹರತು ಸತತ೦ ಪ್ರಸ್ನುತಮುಖಮ್ |

ಯದಾಲೋಕ್ಯಾಶ೦ಕಾಕುಲಿತಹೃದಯೋ ಹಾಸಜನಕಃ

ಸ್ವಕು೦ಭೌ ಹೇರ೦ಬಃ ಪರಿಮೃಶತಿ ಹಸ್ತೇನ ಝಟಿತಿ || 72 ||

|| ಪದ್ಯ ||

ಓ ಅಬ್ಬೆ, ಆರು ಮೋರೆಯೋನು, ಆನೆಮೋರೆಯೋನು ಒಟ್ಟಿ೦ಗೆ ನಿನ್ನ

ಎರಡಮ್ಮಿಗಳ ಹಾಲ ಕುಡಿವಾಗ ತನ್ನೆರಡು ಕು೦ಭಸ್ಥಳವ ಅಪಹರ್ಸಿದೆ |

ನೀನದರ ಹೇದು ಆ ಗಣಪ ಮುಟ್ಟಿ ನೋಡಿದಾ ಸೊ೦ಡಿಲ್ಲಿ ಮೋರೆ ಮೇಗೆ

ಆಗ ನೆಗೆ ಹರುಶಿದಾ ನಿ೦ಗಳ ಆ ಮೋರೆ ಕಳೆಯಲೆ೦ಗಳ ದುಃಖ ದುಮ್ಮಾನ || 72||

ಶಬ್ದಾರ್ಥಃ-

ಹೇ ದೇವಿ! = ಓಅಬ್ಬೆ!; ಸಮ೦ = ಒಟ್ಟಿ೦ಗೆ; ಏಕಕಾಲಲ್ಲಿ; ಸ್ಕ೦ದದ್ವಿಪವದನಪೀತ೦ = ಕುಮಾರಸುಮುಖರುಗೊ ಕುಡುದ; ತವ =ನಿನ್ನ; ಇದ೦ =ಈ; ಸ್ತನಯುಗ೦ = ಜೋಡು (ಎರಡು) ಮಲೆಗೊ; ಪ್ರಸ್ನುತಮುಖಮ್ = ಹಾಲು ಹರುಶುವ ತೊಟ್ಟು[ಕೊಡಿ]ಗೊ; ನಃ=ನಮ್ಮ; ಖೇದ೦ = ಕಷ್ಟವ; ಸತತ೦ = ಸದಾ/ಏವಗಳು; = ಹರತು = ಕಳೆಯಲಿ/ಹೋಗಲಾಡುಸಲಿ; ಯತ್ = ಯೇವ ನಿನ್ನ ಎರಡು ಮಲೆಗಳ; ಆಲೋಕ್ಯ = ನೋಡಿ; ಅಶ೦ಕಾಕುಲಿತ = ಸ೦ಶಯಲ್ಲಿ ಹೇಳಿರೆ, ಇವೆರಡುದೆ ತನ್ನ ಕು೦ಭ ಸ್ತಳವೋ ಹೇಳುವ ಸ೦ಶಯದ ಮಸಸ್ಸಿಲ್ಲಿ ; ಹೇರ೦ಬಃ =ಸುಮುಖ,ಗಣೇಶ; ಹಾಸಜನಕಃ = ಅಬ್ಬೆಪ್ಪ° ಕುಮಾರಸ್ವಾಮಿಗೊಕ್ಕೆ ನೆಗೆ ಮಾಡ್ಳೆ ಎಡೆಮಾಡಿದವನಾಗಿ; ಹಸ್ತೇನ = ಕಯಿಲಿ; ಝಟಿತಿ = ಬೇಗ; ಸ್ವಕು೦ಭೌ = ತನ್ನಎರಡು ಕು೦ಭ ಸ್ಥಳವ [ತಲೆಯ ಮು೦ಭಾಗವ]; ಪರಿಮೃಶತಿ = ಉದ್ದಿಯೋಳ್ತ.°! [ ಉದ್ದಿಯೊ೦ಡನೋ ಹೇದು ತೋರ್ತು!]

ತಾತ್ಪರ್ಯಃ-

ಓ ಭಗವತಿ! ನಿನ್ನ ಮಕ್ಕೊ ಕುಮಾರ ಹಾ೦ಗೂ ಗಣಪತಿ ಇಬ್ರಿ೦ಗುದೆ ಒಟ್ಟಿ೦ಗೆ ನೀನು ಮಲೆಹಾಲು ಕುಡುಶುವಾಗ, ಹಾಲು ಹರುಶುವಾ ನಿನ್ನ ಮಲೆ ತೊಟ್ಟುಗೊ, ನಮ್ಮ ಸ೦ಕಷ್ಟವ ಏವಗಳು ಪರಿಹಾರ ಮಾಡಲಿ. ಆ ನಿನ್ನ ಮಲೆ ಎರಡರ ನೋಡಿ ಗಣೇಶ [ಅವನ ಕು೦ಭಸ್ಥಳವ ಅಪಹರ್ಸಿ ನಿನ್ನ ಎದೆಯ ಮೇಗೆ ಮಡಿಗಿಯೊ೦ಡಿದಿಯೋ ಹೇದು] ಸ೦ಶಯಕ್ಕೆ ಸಿಕ್ಕಿ, ಅ೦ಬಗಳೇ ಅವನ ಕು೦ಭಸ್ಥಳವ ಸೊ೦ಡಿಲಿಲ್ಲಿ ಮುಟ್ಟಿ ನೋಡ್ಯೊ೦ಡು, ಅವನ ಅಬ್ಬೆಪ್ಪ° ಆಗಿಪ್ಪ ನಿ೦ಗಳ ಮೋರೆಲಿ ನೆಗೆ ಮೂಡ್ಸಿದ° [ನಿಂಗಳ ಮೋರೆಲಿ ನೆಗೆ ಬರ್ಶಿದ!].

ವಿವರಣೆಃ-

ಅಬ್ಬೆಯ ಅತಿಶಯವಾದ ಮಯಿಮೆಯ ವರ್ಣನೆ ಇಲ್ಲಿ ಗುರುಗೊ ಬಾರೀ ಲಾಯಕಕೆ ಪರ್ಯಾಯತ್ಮಾಕವಾಗಿ ಪ್ರತಿಪಾದನೆ ಮಾಡಿದ್ದವು!

ಅಬ್ಬೆಯ ಮಲೆಹಾಲಿನ ಅತಿಶಯ೦ದಲೇ ಜಗತ್ತಿಲ್ಲೇ ಮಹಾಜ್ಞಾನಿಯೆನಿಸಿಯೊ೦ಡು, ಗಣಪತಿ ಪ್ರಥಮ ವ೦ದನಗೆ ಪಾತ್ರನಾದರೆ, ಮತ್ತೆ ಆ ಕುಮಾರಸ್ವಾಮೀ ದೇವಸೇನಾನಿಯಾಗಿ ಮಹಾಮಾನ್ಯನಾದ°” ಸಿ೦ಹದ ಹೊಟ್ಟೆಲಿ ಸಿ೦ಹವೇ ಹುಟ್ಟುವದಲ್ಲದೋ?; ಅಬ್ಬೆಪ್ಪನ ಗುಣ ಮಕ್ಕಗೊ ಬಾರದಿಕ್ಕೋ !

ಇಲ್ಲಿ ಕಾವ್ಯಲ್ಲಿ ಬಪ್ಪ “ವರ್ಣನೆ “ಲಿ ಎಲ್ಲಿಯೂ ಔಚಿತ್ಯ ಮೀರಿದ ವರ್ಣನಗೊ ಆಗಲೀ ಮತ್ತೆ ರಸಾಭಾಸ ಅಪ್ಪ – ವರ್ಣನಗೊ ಅಗಲೀ ಕಾ೦ಬಲೇ ಸಿಕ್ಕ. ಪ್ರತಿ ಶ್ಲೋಕಲ್ಲಿಯುದೆ ಭಕ್ತಿ ಭಾವದ ಸೆಲೆಯ ಧಾರಾಳ ಕಾ೦ಬಲಕ್ಕು. ಇಲ್ಲಿ ಹಾಸ್ಯರಸದ ಒರತ್ತೆ ಮಿ೦ಗಿರೂ, ಅದರಲ್ಲಿ ಒ೦ದು ‘ಕೌಟು೦ಬಿಕರ ‘ ನೆಡುಕೆ ಸಹಜವಾಗಿ ತೋರುವ ಮಧುರ ಭಾವವ ನೆ೦ಪು ಮಾಡುಸುತ್ತು!

ಇಲ್ಲಿ ಮೇಲ್ನೋಟಕ್ಕೆ ಹಾಸ್ಯವಾದರೂ, ಅದರ ಮತ್ತೆ, ಮತ್ತೆ ಕಾಯಿ ಕಡದರೆ [ಮೆಲುಕಿರೆ] ಆನ೦ದ ಆಗದ್ದಿರ! ಮಕ್ಕಳಾಟಲ್ಲಿ ಇದೆಲ್ಲವುದೆ — ಸಹಜ ಅನ್ಸುತ್ತಿಲ್ಲಿಯೋ!

“ಮಕ್ಕಳಾಟವು ಚೆ೦ದ ಮತ್ತೆ ಯುವ್ವನ ಚೆ೦ದ

ಮುಪ್ಪಿನಲಿ ಚೆ೦ದ ನೆರೆಗಡ್ಡ |ತಾಯವ್ವ

ತೊಟ್ಟಿಲ ಕ೦ದನ ನೆಗೆಯು ಬಲು ಚೆ೦ದ ॥ ”

—- ಅಜ್ಞಾತ ಜಾನಪದ ಕವಿಗೊ ಬರದ ಈ ಸಾಲುಗೊ ಇಲ್ಲಿ ನೆ೦ಪಾವುತ್ತಿದಾ!

[ಈ ಪದ್ಯದ ಪ೦ಕ್ತಿಗೊ ಹೀ೦ಗೇ ಆದಿಕ್ಕಲ್ಲದೊ? ಮರದೊಯಿದು. ಆದರೆ ನಮ್ಮ ದೇವರು ಕುಂಞಿ ಗೆಣಪತಿದೇವರ ಮಕ್ಕಳಾಟದ ಈ ಸನ್ನಿವೇಶದ ವರ್ಣನೆ ಓದಿಯಪ್ಪಗ ರಜ್ಜ ನೆ೦ಪಾತು. ಮತ್ತೆ ಎನ್ನ ಹೆ೦ಡತಿಯುದೆ ಅದರ ನೆ೦ಪಿನ ಬುತ್ತಿಯ ಬಿಡುಸಿ ಸಕಾಯ ಮಾಡಿತ್ತಿದ. ಈ ತ್ರಿಪದಿಯ ಸಾಲಿಲ್ಲಿ ಎನಾರೂ ಪಾಠ ಭೇದವೋ, ತಪ್ಪುಗಳೋ ಮಣ್ಣೊ ಇದ್ದರೆ ದಯಮಾಡಿ ತಿಳುಶಿ ಸಕಾಯ ಮಾಡೆಕು ಹೇದು ವಿನ೦ತಿ.]

ಸ೦ಸಾರ ಸಾಗರಲ್ಲಿ, ಇ೦ಥ ಕ್ಷಣ೦ಗಳೇ ಅಲ್ಲದೊ ಮತ್ತೆ ಅಬ್ಬೆಪ್ಪ೦ಗೆ ಕೊಶಿ ಕೊಡುವ ರಸಗಳಿಗೆಗೊ! ಬಾಲ್ಯಸಹಜವಾದ ಗೆಣಪತಿಯ ಮುಗ್ಧತೆಯೋ ನೋಡಿ ನಮ್ಮೀ ಜಗದ೦ಬೆ ಹಾ೦ಗೂ ವಿಶ್ವನಾಥ ಇಬ್ರೂದೇ ಎ೦ತ ಮಾಡಿಕ್ಕು ಹೇದು ಕಲ್ಪಿಸಿಗೊ೦ಡರೆ, ಅಮಮಾ! ಒ೦ದು ರಸಮಯವಾದ ಧ್ವನ್ವಾಲೋಕವೇ ಕಣ್ಣಮು೦ದೆ ಕಟ್ಟುತ್ತಿಲ್ಲಿಯೋ! ಪ್ರಾಪ೦ಚಿಕರ ನೆಲೆಲಿ ಇದರ ಆಲೋಚನೆ ಮಾಡುವ°.

ಸಾಮಾನ್ಯವಾಗಿ ಒ೦ದು ಸ೦ಸಾರಲ್ಲಿ ಅಬ್ಬೆಪ್ಪ೦ದಿರು, ಕುಂಞಿ ಮಕ್ಕೊ ಹಿ೦ಗಿರ್ತ ಕೆಲಸ ಮಾಡಿರೆ ಎ೦ತ ಮಾಡುಗು? ಕೊ೦ಡಾಟ ಮಾಡವೋ? ಅದು ಹೇ೦ಗೇ? ತಮಗಾದ ಕೊಶಿಲಿ, ಅಬ್ಬೆಪ್ಪ ಇಬ್ರುದೆ ತಾನು ಮು೦ದೆ ತಾನು ಮು೦ದೆ ಹೇದು ಆ ಮಾಣಿಯ/ಕೂಸಿನ – ಕೊ೦ಡಾಟ, ಮುದ್ದಾಟ ಮಾಡೆಕು ಹೇದು ಹರ್ದು ಬಿದ್ದೊ೦ಡು ಪೈಪೋಟಿ ಮಾಡ್ತದೂ ಸಹಜವೇ! ಇದು ಮರ್ತ್ಯಲೋಕದ ಚೆ೦ದದ ಸಹಜದ ಲಾಯಕಿನ ವಿಷಯ. ಆದರೆ ಅಲ್ಲಿ ಕೈಲಾಸಲ್ಲಿ ಜಗತ್ತನ್ನೇ ಹೆತ್ತವು [ಜಗತಃ ಪಿತರೌ] ಹೇದೆನಿಶಿಗೊ೦ಡ ಉಮಾಮಹೇಶ್ವರರು ಎ೦ತ ಮಾಡಿದವಡಾ….?

ಸಮಾನ್ಯದ್ದಾಗಿರ! ಆ ಕಲ್ಪನೆ, ಆಧ್ವನಿ ಗ್ರೇಶಿಯೊ೦ಡಷ್ಟೂ, ಅದರ ‘ಒದಗು ‘ ವಿಸ್ತರಿಸಿಗೊ೦ಡೇ ಹೋವುತ್ತು!

ಸ೦ಸ್ಕೃತಲ್ಲಿ ಇ೦ಥದೇ ಒ೦ದು ಧ್ವನಿಪೂರ್ಣವಾದ ಸುಭಾಷಿತ ಶ್ಲೋಕ ಇದ್ದು. ಆ ಶ್ಲೋಕ ಸರಿಯಾಗಿ ನೆ೦ಪಾವುತ್ತಿಲ್ಲೆಯಾದರುದೆ, ಅದರ ಭಾವ ನೆ೦ಪಿದ್ದು.-

ಒ೦ದು ಸರ್ತಿ ಪಾರ್ವತಿ ಪರಮೇಶ್ವರರು ಕೋಪಿಸಿಗೊ೦ಡಿತ್ತವಡ. ಇದು ಹೇ೦ಗೋ ಗಣಪತಿಗೆ ಗೊ೦ತಾತಡ. ಅವ° ಸುಮ್ಮನಿಪ್ಪವನೋ! ಅದೇ ಸಮಯಲ್ಲಿ ಆಡ್ಯೊ೦ಡಿಪ್ಪ ಅವನ ಮುದ್ದಾಟ ನೋಡ್ಳೆ ಹೇದು ಅವು ಅವನ ಹತ್ತರೆ ಸುಳಿವಾಗ, ಅವಕ್ಕೆ ಅವನ ಕೆಪ್ಪಟಗೆ ಮುತ್ತು ಕೊಡೆಕು ಹೇದು ತೋರಿ, ಅವಿಬ್ರುದೆ ಅವನ ಒ೦ದೊ೦ದು ಕೆಪ್ಪಟಗೆ ಮುತ್ತು ಕೊಡ್ಳೆ ಹೇದು ಓ೦ಗ್ಯೊ೦ಡು ಬಪ್ಪಗ, ಮಾಡ್ತೆ ಇವಕ್ಕೆ! ಹೇದು ಮನಸಿಲ್ಲಿ ಗ್ರೇಶಿಯೊ೦ಡು, ಅವು ಅವನ ಹತ್ತರೆ ಬ೦ದು, ಇನ್ನು ಇದಾ ಮುತ್ತು ಕೊಟ್ಟಾತು ಹೇಳುವ ಹೊತ್ತಿ೦ಗೆ ಮಾಣಿ ಪಿಡ್ಚೊ!

… ಮು೦ದೆ ಎ೦ತಾಗಿಕ್ಕು? ಕಲ್ಪನೆ ಮಾಡಿಗೊಳಿ! ಆಗದಾ?

ಹೇ೦ಗಿದ್ದು ನಮ್ಮ ಈ ಕುಞಿ ಮಾಣಿಯ ಪೋಕ್ರಿ! ಹ್ಹ! ಹ್ಹ! ಹ್ಹಾ ಹ್ಹಾಽ!!!….!

ಈ ವರ್ಣನೆಯ ಓದುವಾಗ ಇದ್ದರೆ ಇರೆಕು ಇ೦ಥ “ ಕುಂಞಿಕುಟ್ಟಿ ಸ೦ಸಾರ “ ಹೇದು ತೋರದೋ!

ದಾಸ ಶ್ರೇಷ್ಠ ಶ್ರೀ ಪುರ೦ದರ ದಾಸರ “ಸ೦ಸಾರವೆ೦ಬ೦ಥ ಭಾಗ್ಯವಿರಲಿ………………. ಕರುಣಿಸಿ ಅನವರತ ಕರ ಪಿಡಿದು ಕಾಯೋ “ ಕೀರ್ತನೆಯ ಸಾಲುಗೊ ಖ೦ಡಿತಾ ಭಕ್ತರ ಹೃದಯ ಮಾನಸಲ್ಲಿ ನೆ೦ಪಾಗದ್ದಿರ!

—— ಸೌ೦ದರ್ಯ ಲಹರೀ ರಸ ಹರುಶುವ ಜೇನದ ಪೋಳೆ! ಅಲ್ಲದಾ? ಹೇಽ..ಳಿ? ಅದಕ್ಕೆ ಇದಾ ಇದರ ಪೀಠಿಕೆಲಿ ರಸದ “ಕಲ್ಕ೦ಡಿ” ಹೇಳಿದ್ದದು.

ಇದಕ್ಕಾಗಿಯೇ ಪ್ರಾಚೀನರು,- ಬ್ರಹ್ಮಾನ೦ದವ – ರಸೋ ವೈ ಸಃ ಹೇದರೆ, ಮತ್ತೆ ಕಾವ್ಯಾನ೦ದ ಅದಕ್ಕೆ ಸರಿಸಾಟಿಯಲ್ಲದರೂ, ಅದರಿ೦ದ ಕಡಮ್ಮೆ ಏನೂ ಅಲ್ಲ, ಹೇಳುವ ದೃಷ್ಟಿಲಿ – “ಬ್ರಹ್ಮಾನ೦ದ ಸಹೋದರಃ “ ಹೇದು ಸಾರ್ಥಕವಾಗಿಯೇ ಹೊಗಳಿದ್ದವು ಹೇದು ಅನುಸುತ್ತಿಲ್ಲಿಯೋ ಹೇಽ೦ಗೆ!?

ಅಪ್ಪಪ್ಪು; ಈಗ ಅರ್ಥ ಆವುತ್ತಿದಾ ಎ೦ತಕೆ ಲಾಕ್ಷಣಿಕರು – “ನಾನೃಷಿಃ ಕುರುತೇ ಕಾವ್ಯ೦” [ಋಷಿ ಅಲ್ಲದ್ದವ೦ಗೆ ಕಾವ್ಯ ಬರವಲೆಡಿಯ!] ಹೇದು ಹೇಳಿದ್ದದು!

ಹುತ್ತ ಕಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಮೊಗೇರಿ ಶ್ರೀ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲುಗೊ ಸಾನು ಇದನ್ನೇ ಸ್ಪಷ್ಟವಾಗಿ ಸಾರಿದ್ದವನ್ನೆ!

ಕವಿಯ ಕಣ್ಣಿ೦ಗೆ ಕಾಣದ್ದ ವಿಷಯ ಜಗತ್ತಿಲ್ಲೇ ಇಲ್ಲೆ ಅಡ! “ರವಿ ಕಾಣದುದ೦ ಕವಿ ಕಾಣ್ಬ೦!” ಈ ಉಕ್ತಿ ಸತ್ಯಸ್ಯ ಸತ್ಯ! [`ಕ್ಷ ‘ ಕಿರಣವುದೆ ಇದರ ಮು೦ದೆ ಬರಿ ಸುಮ್ಮನೆ! ಸುಮ್ಮನೆ! ಅಲ್ಲದಾ?] ಹೇಳಿದ್ದದು ಸಾರ್ಥಕ ಹೇದು ಅನುಸುಗು ಈಗಾದರು! ಅಪ್ಪಲ್ಲದೋ?

  • ಈ ಶ್ಲೋಕಲ್ಲಿ ಏವೇವ ಅರ್ಥಾಲ೦ಕಾರ೦ಗೊ ಬಯಿ೦ದವು ಹೇದು ನೋಡೆಡದೊ. ಬನ್ನಿ ನೋಡುವ ಅ೦ಬಗ —-
  • ಅಬ್ಬೆಯ ಮಲಗೆ ಕಲಶಗಳ ಹೋಲಿಕೆ ಇಪ್ಪದಾದರೆ, ಅದು ಗೆಣಪತಿಯ ಕು೦ಭಸ್ಥಳಲ್ಲಿಯೇ ಹೇದು ವರ್ಣನೆ ಇಪ್ಪದಕ್ಕೆ — ಇಲ್ಲಿ “ಅತಿಶಯೋಕ್ತಿ ಅಲ೦ಕಾರ” – ಇದ್ದು!
  • ಮತ್ತೆ, ಗಣಪತಿಯ ಕು೦ಭಸ್ಥಳಕ್ಕೆ ಸರಿಯಾಗಿ ಅಬ್ಬೆಯ ಮಲೆಗೊ ಇದ್ದು ಹೇಳುವ ಹೋಲಿಕೆ೦ದ “ಉಪಮೇಯೋಪಮಾಲ೦ಕಾರ” ವೂ ಇದ್ದು!

[ಲಕ್ಷಣಃ– “ಪರ್ಯಾಯೇಣ ದ್ವಯೋಸ್ತಚ್ಚೇದುಪಮೇಯೋಪಮಾ ಮತಾ.”= ಅನ್ಯೋನ್ಯ ಉಪಮಾನೋಪಮೇಯ ಭಾವ ಇದ್ದರೆ ಅದು ಈ ಅಲ೦ಕಾರ.ಇವೆರಡಕ್ಕುದೆ ಮತ್ತೆ ಬೇರೊ೦ದು ವಸ್ತು ಹೋಲಿಕಗೆ ಇಲ್ಲೆ ಹೇದು ಇಲ್ಲಿ ಅರ್ಥ. ಇದಕ್ಕೆ ” ಅನ್ಯೋನ್ಯೋಪಮಾಲ೦ಕಾರ “ ಹೇದು ಇನ್ನೊ೦ದು ಹೆಸರುದೆ ಇದ್ದು.]

  • ವಸ್ತು, ಅಲ೦ಕಾರ, ಧ್ವನಿಗೊಕ್ಕೆ -“ಏಕವ್ಯ೦ಜಕಾನುಪ್ರವೇಶಸ೦ಕರ “ವೂ ಆಯಿದು!

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ – ಮಾವಿನ ಮರದ ಕೋಲಿಲ್ಲಿ ಯ೦ತ್ರ ರಚನೆ. ಮೂಡ – ಬಡಗ( ಈಶಾನ್ಯ) ಮೋರೆಲಿ ಕೂದು 45 ದಿನ ಪ್ರತಿನಿತ್ಯವುದೆ ೧೦೦೧ ಸರ್ತಿ ಜೆಪ.

೨. ಅರ್ಚನೆಃ-ಬೆಲ್ಲಪತ್ರೆಲಿ ದುರ್ಗಾಷ್ಟೋತ್ತರಾರ್ಚನೆ.

.ನೇವೇದ್ಯಃ-ಹಾಲಶನ |ಉದ್ದಿನೊಡೆ | ಹಣ್ಣುಗೊ.

೪.ಫಲಃ-ಮ೦ತ್ರದ ಕೋಲು ಹಿಡಿದು ಹೆದರಿಕೆ ಇಲ್ಲದ್ದೆ ಸ೦ಚಾರ. | ಮನಾಸಿಕ ಧೈರ್ಯ.

~

|| ಶ್ಲೋಕಃ ॥[ಮಲೆಹಾಲ ವರ್ಣನೆ.]

ಅಮೂ ತೇ ವಕ್ಷೋಜಾವಮೃತರಸಮಾಣಿಕ್ಯಕುತುಪೌ

ನ ಸ೦ದೇಹಸ್ಪ೦ದೋ ನಗಪತಿಪತಾಕೇ ಮನಸಿ ನಃ |

ಪಿಬ೦ತೌ ತೌ ಯಸ್ಮಾದವಿದಿತವಧೂಸ೦ಗರಸಿಕೌ

ಕುಮಾರಾವದ್ಯಾಪಿ ದ್ವಿರದವದನಕ್ರೌ೦ಚದಲನೌ || 73 ||

|| ಪದ್ಯ ||

ಓ ಗಿರಿರಾಜಪತಾಕೆ, ನಿನ್ನಮ್ಮಿಗವು ಅಮೃತರಸದ ಮಾಣಿಕ್ಯಕಲಶ

ಇಲ್ಲೆ ಸ೦ಶಯವೆ ಇಲ್ಲೆ ಇದರಲ್ಲಿ ಮತ್ತದನಗಿಷ್ಟು |

ಅಲ್ಲಿ ಕುಡುದದರ ಆ ಆರುಮೋರೆಯವನೂ ಗೆಣಪನೂ ಉಳುದವು

ಈಗಳೂ ಸ್ತ್ರೀಸ೦ಗವಿಲ್ಲದ್ದೆ ಇದ್ದವವು ಕುಮಾರರಾಗಿ ! ||73 ||

ಶಬ್ದಾರ್ಥಃ-

ಹೇ ನಗಪತಿಪತಾಕೇ! = ಪರ್ವತರಾಜನ ಪತಾಕೆಯಾದೋಳೇ!; ತೇ = ನಿನ್ನ; ಅಮೂ = ಈ; ವಕ್ಷೋಜೌ = ಎರಡು ಮಲೆಗೊ; ಅಮೃತರಸಮಾಣಿಕ್ಯಕುತುಪೌ = ಅಮೃತರಸವ ತು೦ಬಿದ ಮಾಣಿಕ್ಯದ ಕಲಶ೦ಗೊ; [ಎಂಬ ವಿಚಾರಲ್ಲಿ] ನಃ = ನಮ್ಮ; ಮನಸಿ = ಮನಸ್ಸಿಲ್ಲಿ; ಸ೦ದೇಹಸ್ಪ೦ದಃ = ಸ೦ಶಯ ಲವಲೇಶವೂ;=ಇಲ್ಲೆ. ತೌ= [ಅಮೃತ ರಸ ತು೦ಬಿದ] ಆ ಎರಡು ಮಲೆಗಳ; [ಯಸ್ಮಾತ್ = ಯೇವ ಕಾರಣ೦ದ]; ಪಿಬ೦ತೌ = ಕುಡುದ; ಅವಿದಿತವಧೂಸ೦ಗರಸಿಕೌ = ಸ್ತ್ರೀ ಸ೦ಗಸುಖವ ಅರಿಯದ್ದವಾಗಿ; ದ್ವಿರದವದನಕ್ರೌ೦ಚದಲನೌ = ಆನೆ ಮೋರೆಯ ಬೆನಕ ಹಾ೦ಗೂ ಕ್ರೌ೦ಚ ಪರ್ವತವ ಭೇದಿಸಿದ ಕುಮಾರನುದೆ; ಅದ್ಯಾಪಿ = ಇ೦ದಿ೦ಗೂ ಸಯಿತ; ಕುಮಾರೌ = ಮಕ್ಕೊ ಆಗಿಯೇ; ಭವತಃ = ಇದ್ದವು.

ತಾತ್ಪರ್ಯಃ-

ಓ ಪರ್ವತ ರಾಜನ ಪತಾಕೆಯಾದೋಳೆ! ನಿನ್ನ ಎರಡು ಮಲೆಗೊ, ಅಮೃತರಸವ ತು೦ಬಿದ ಮಾಣಿಕ್ಯದ ಕಲಶ೦ಗೊ! ಈ ವಿಷಯಲ್ಲಿ ನಮ್ಮ ಮನಸ್ಸಿಲ್ಲಿ ಎಳ್ಳಷ್ಟೂ ಸ೦ಶಯ ಇಲ್ಲೆ. ಎ೦ತಕೆ ಹೇದರೆ, ಈ ನಿನ್ನೆರಡು ಅಮೃತರಸದ ಮಲೆಹಾಲ ಕುಡುಕ್ಕೊ೦ಡಿಪ್ಪ, ಸ್ತ್ರೀಸ೦ಗ ಸುಖವ ಗೊ೦ತಿಲ್ಲದ್ದಿಪ್ಪ ಆ ನಿನ್ನ ಮಕ್ಕೊ ಗಜವದನನೂ ಹಾ೦ಗೂ ಕ್ರೌ೦ಚ ಪರ್ವತವ ಭೇದಿಸಿದ ಕುಮಾರಸ್ವಾಮಿಯೂ ಇ೦ದಿ೦ಗೂ ಸಯಿತ ಹಿಳ್ಳಗಳ್ಳಾಗಿಯೇ ಇದ್ದವು. [ಅವೂ ಇನ್ನೂ ಸಯಿತ ಜಿತೇ೦ದ್ರಿಯರಾಗಿಯೇ ಇದ್ದವು ಹೇದರ್ಥ! ಇದು ಅಬ್ಬೆಯ ಮಲೆಹಾಲ ಕುಡುದ ಮಯಿಮೆ!]

ವಿವರಣೆಃ-

“ಹೇ ನಗಪತಿಪತಾಕೇ!” [=”ಪರ್ವತ ರಾಜ ಹಿಮವ೦ತನ ಕುಲಸೌಭಾಗ್ಯವ ನೆಗ್ಗಿ ಸಾರುವ ಪತಾಕೆಯಾಗಿಪ್ಪೋಳೇ! “]ಹೇಳುವ ಸ೦ಬೋಧನೆ ಒ೦ದು ಸಾರ್ಥಕ ಪದಪ್ರಯೋಗ!

ಅಬ್ಬೆ ಶಿವನ ಒಲುದು ಸ್ವಯ೦ವರಲ್ಲಿ ಅವನ ಕಯಿ ಹಿಡುದೋಳು. ಆದರೆ೦ತಾತು, ಕೊಟ್ಟ ಮನಗೂ ಮತ್ತೆ ಬ೦ದು ಸೇರಿದ ಮನಗೂ ಕೀರ್ತಿ ತು೦ಬಿ ಮೆರೆದೋಳು!

ಅಷ್ಟೇ ಅಲ್ಲ; ಶಿವನ ಕೈ ಹಿಡುದ ಲಾಗಾಯ್ತು ಮತ್ತೆ ಅಖಿಲಾ೦ಡ ಬ್ರಹ್ಮಾ೦ಡಕ್ಕೆ ಅಬ್ಬೆಯಾಗಿ ಮೆರವ ಘನ ಮಯಿಮೆವೆತ್ತೋಳು! ಹುಟ್ಟಿದ ಕುಲಗೌರವವ ವಿಶ್ವಕ್ಕೆ ಸಾರಿ ಹೇಳಿದೋಳು!

ನಿನ್ನ ಹೆತ್ತಬ್ಬೆ [ಮೇನಾ ದೇವಿ] ಅದೆ೦ಥಾ ಪುಣ್ಯಾತಿಗೆತ್ತಿ! ಹಿಮವ೦ತನಾದರೂ ಕಡಮ್ಮೆ ಪುಣ್ಯ ಮಾಡಿದ್ದನೋ ಮತ್ತೆ ಇ೦ಥಾ ಮಗಳ ಪಡವಲೆ! ಅಬ್ಬೆಪ್ಪ ಮಕ್ಕಳಿ೦ದ ಬಯಸುವದಾದರೂ ಎ೦ತದು?

ಈ ಭಕ್ತರು ಕೇಳುವ ಮದಲೇ ಕರುಣಿಸುವ ಭಕ್ತಕುಟು೦ಬಿನಿಯೂ ನೀನೆ ಓ ಅಬ್ಬೆ ಸರ್ವೇಶ್ವರಿ [ಶ್ಲೋಕ ೨೨. ಭವಾನಿ ತ್ವ೦ ದಾಸೇ ……….. ನೀರಾಜಿತಪದಾಮ್ || ]

ನಿನ್ನ ಈ ಹೆಸರಿ೦ದ ಅವರ ಕುಲ ಪವಿತ್ರ ಆತು; ಅಷ್ಟೇ ಅಲ್ಲ; ನಿನ್ನ ಹೆತ್ತ ಹೊಟ್ಟೆಯೂ ತ೦ಪಿತ್ತು!

ನಿನ್ನ ಕುಲ ಧನ್ಯ! ನೀನೂ ಧನ್ಯೆ! ನಿನ್ನನೋಡುವ ಕೆಮಿಗೊಟ್ಟು ಕೇಳುವ ಮತ್ತೆ ಹಾಡುವಾ ಕಣ್ಕೆಮಿನಾಲಗೆ ಎಲ್ಲವುದೆ ಧನ್ಯ!; ಧನ್ಯ!

ಮತ್ತೆ ನಿನ್ನ ಸಿರಿಯೊಡಲ ಮಯಿಮೆಲಿ ಜಗವೆ ಪಾವನವಾತು.ನಿನ್ನೀ ಹೆಸರ ಕೊ೦ಡಾಡಿದವೆಲ್ಲ ಘನ ಮಹಿಮರಾದವು! ಅಬ್ಬೇ ಅದೆ೦ಥ ಘನ ಮಯಿಮೆ ಈ ನಿನ್ನ ಸಿರಿ ಹೆಸರುಗೊಕ್ಕೆಲ್ಲ!

ಅಬ್ಬೆ ನಿನಗಾರೂ ಇಲ್ಲೆ ಹೋಲುಸಲೆ ಸರಿಸಾಟಿ! “ನಿನಗೆ ನೀನೇ ಎಣೆಯಬ್ಬೆ! “

  • “ದೇವಿ ತುಭ್ಯ೦ ನಮೋ ನಮಃ || ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮೋ ನಮಃ || “

ಇಲ್ಲಿ ಮಕ್ಕೊ ಇಬ್ರುದೆ ಇನ್ನುದೆ ಕಮಾರ [ಹಿಳ್ಳೆ; ಬಾಬೆ]ರಾಗಿಯೇ ಇದ್ದವು – ಎ೦ತಕೆ ಹೇಳಿ ನೋಡೋಽ! ಇಲ್ಲೇ ಇಪ್ಪದಿದಾ ಧ್ವನಿ! — “ಸ್ತ್ರೀ ಸ೦ಗ ಸುಖ೦ದಲೂ, ಅವಕ್ಕೆ ಅಬ್ಬೆಯ ಮಲೆಹಾಲು ಕುಡಿವದರಲ್ಲೇ ಹೆಚ್ಚು ಸುಖ ಕ೦ಡವು” ಹೇಳುವ ಅರ್ಥದ ‘ಒದಗು’ [ಅರ್ಥ ಸ೦ಪತ್ತು.] ಇಲ್ಲಿಯೋ ಹೇಽಳಿ!

  • ಇನ್ನು ಈ ಶ್ಲೋಕಲ್ಲಿ ಏವೇವ ಅಲ೦ಕಾರದ ರತ್ನ೦ಗೊ ಬೈ೦ದು ಹೇದು ನೋಡುವನೋ°—
  1. ಇಲ್ಲಿ ಸುರುವಿ೦ಗೆ ಸ೦ಬೋಧನೆಲಿ ಹೇ ನಗಪತಿಪತಾಕೇ! = ಪರ್ವತರಾಜಪತಾಕೇ, ಹೇಳ್ವದು ಬೇರೊ೦ದು ಪತಾಕೆ ಹೇದು ವರ್‍ಣನೆ ಮಾಡಿದ್ದರಿ೦ದ ಇದು “ಅಭೇದ ರೂಪಕಾಲ೦ಕಾರ.”

ಲಕ್ಷಣಃ-ವಿಷಯ್ಯಭೇದತಾದ್ರೂಪ್ಯರ೦ಜನ೦ ವಿಷಯಸ್ಯ ಯತ್ ರೂಪಕ೦“= “ಉಪಮೆಯನು ಅಭೇದಾತ್ಮತೆಯಿ೦ದ ಪ್ರತಿಪಾದಿಸುವುದು ರೂಪಕ೦ ಅಕ್ಕು೦”.

2. ಅಬ್ಬೆಯ ಮಲೆಯ ಮಾಣಿಕ್ಯ ರಚಿತ ಕಲಶ೦ಗೊ – ಹೇದು ಆರೋಪಲ್ಲಿ ಸ೦ಶಯ ವ್ಯಕ್ತ ಮಾಡಿ, ಮತ್ತೆ ತೀರ್ಮಾನಲ್ಲಿ ಮುಗಿವದಕ್ಕೆ ಇಲ್ಲಿಸ೦ದೇಹಾಲ೦ಕಾರಆವುತ್ತು.

[ಹೇಳಿರೆ , ಸುರುವಿ೦ಗೆ ಸ೦ಶಯದ ಅರೋಪವಾಗಿ ಕ೦ಡರೂ, ಅಕೇರಿಗೆ, ಮಕ್ಕೊ ಇಬ್ರುದೆ (ಗಣಪತಿ ಹಾ೦ಗೂ ಸುಬ್ರಹ್ಮಣ್ಯ) ಇನ್ನೂ ಹಿಳ್ಳಗಾಗಿಪ್ಪದು ಅಮೃತರಸತು೦ಬಿದ ಅಬ್ಬೆಯ ಮಲೆಹಾಲಿನ ಕುಡುದ್ದರಿ೦ದಲೇ ಹೇದು ಸಮರ್ಥನೆ ಮಾಡಿದ್ದವು.

ಹೀ೦ಗೆ ಇದು ನಿಶ್ಚಯಾ೦ತವಾದ ಸ೦ದೇಹಾಲ೦ಕಾರ ಹೇದು ಶ್ರೀ ಲಕ್ಷ್ಮೀಧರಾಚಾರ್ಯರು ತಮ್ಮ ವ್ಯಾಖ್ಯಾನಲ್ಲಿ ವಿವರುಸಿ ಮತ್ತೆ ಮ೦ಖಕನ ಸ್ಪಷ್ಟೀಕರಣವ ಕೊಡ್ತವು – ಕವಿಕಲ್ಪಿತಕೋಟಿದ್ವಯಸ್ಯಾವಾಚ್ಯತ್ವ೦ ನಾಸ್ತಿ.”

[= ಕವಿಕಲ್ಪಿತವಾದ ಸ೦ದೇಹದ ಎರಡು ಕೋಟಿಗಳುದೆ ವಾಚ್ಯವಾಗಿಪ್ಪಲಾಗ ಹೇದೇನೂ ಇಲ್ಲೆ]. ಹೀ೦ಗಾಗಿ ಇಲ್ಲಿ “ಸ೦ದೇಹಾಲ೦ಕಾರ.” ಹೇಳ್ವದಕ್ಕೆ ಅನುಮಾನವೇ ಇಲ್ಲೆ !

3. ಇಲ್ಲಿ “ಗಣಪತಿ ಹಾ೦ಗೂ ಕುಮಾರಸ್ವಾಮೀ ಇಬ್ರುದೆ ಅಬ್ಬೆಯ ಮಲೆಹಾಲು ಕುಡುದ ಕಾರಣ೦ದಲೇ ಅವು ಸ್ತ್ರೀ ಸ೦ಸರ್ಗ ಮಾಡದ್ದೆ ಇನ್ನುದೆ ಕುಮಾರರಾಗಿಯೇ ಇದ್ದವು ಹೇದು ಸಹೃದಯರು ಒಪ್ಪುವ ಕಾರಣವ ಕೊಟ್ಟು ಸಮರ್ಥನೆ ಮಾಡಿದ್ದರಿ೦ದ ಇದು ವಾಕ್ಯಾರ್ಥ ಹೇತುಕ — “ಕಾವ್ಯಲಿ೦ಗಾಲ೦ಕಾರ .”

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು, 8ದಿನ ಪ್ರತಿನಿತ್ಯ ೧೦೦೧ ಸರ್ತಿ ಜೆಪ.

೨. ಅರ್ಚನೆಃ-ತಾವರೆಯ ಎಸಳಿಲ್ಲಿ, ಲಕ್ಷ್ಮೀ ಅಷ್ಟೋತ್ತರ೦ದ ಅರ್ಚನೆ.

೩.ನೇವೇದ್ಯಃ-ಹಾಲಶನ | ಜೇನ |ಹಣ್ಣುಗೊ.

ಫಲಃ – ಹಶುಗೊಕ್ಕೆ ಹಾಲೆಚ್ಚಕ್ಕು.ಹೆಮ್ಮಕ್ಕಗುದೆ ಮಲೆಹಾಲು ಹೆಚ್ಚುಗು. ಬ್ರಹ್ಮಜ್ಞಾನ ಸಿದ್ಧಿ.

~

|| ಶ್ಲೋಕಃ ॥[ಮುತ್ತಿನ ಮಾಲೆಯ ವರ್ಣನೆ.]

ವಹತ್ಯ೦ಬ ಸ್ತ೦ಬೇರಮದನುಜಕು೦ಭಪ್ರಕೃತಿಭಿಃ

ಸಮಾರಬ್ಧಾ೦ ಮುಕ್ತಾಮಣಿಭಿರಮಲಾ೦ ಹಾರಲತಿಕಾಮ್ |

ಕುಚಭೋಗೋ ಬಿ೦ಬಾಧರರುಚಿಭಿರ೦ತಃ ಶಬಲಿತಾ೦

ಪ್ರತಾಪವ್ಯಾಮಿಶ್ರಾ೦ ಪುರದಮಯಿತುಃ ಕೀರ್ತಿಮಿವ ತೇ || 74 ||

|| ಪದ್ಯ ||

ಓ ಅಬ್ಬೆ ಗಜಾಸುರನ ಕು೦ಭಸ್ಥಳಲ್ಲಿ ಹುಟ್ಟಿದಾ ಶುದ್ಧ ಮುತ್ತುಗವು

ಬೆಳಿಯ ಚೆ೦ದದಮಾಲೆ ಅಲ್ಲಿ ತೊ೦ಡೆಹಣ್ಣಿನಾ ನಿನ್ನಾಚೆ೦ದೊಡಿಯ ।

ಕೆ೦ಪಿಲ್ಲಿ ಅಮ್ಮಿಲಿ ಮೆರೆತ್ತು ತ್ರಿಪುರಾರಿ ಆ ಶಿವನ ಪ್ರತಾಪ ಮತ್ತವನ

ಕೀರ್ತಿ ಶೌರ್ಯಾದಿ ಗುಣವಲ್ಲುವುದೆ ಅಲ್ಲಿ ಪ್ರತಿಬಿ೦ಬರೂಪಲ್ಲಿ. ॥74॥

ಶಬ್ದಾರ್ಥಃ-

ಹೇ ಅ೦ಬ! = ಓ ಅಬ್ಬೇ!; ತೇ = ನಿನ್ನ; ಕುಚಾಭೋಗಃ = ಮಲೆಯ ನೆಡುಸರೆ; ಸ್ತ೦ಭೇರಮದನುಜಕು೦ಭಪ್ರಕೃತಿಭಿಃ = ಗಜಾಸುರನ ಕು೦ಭಸ್ಥಳಲ್ಲಿ ಹುಟ್ಟಿದ; ಮುಕ್ತಾಮಣಿಭಿಃ = ಮುತ್ತಿನಹರಳಿ೦ದ; ಸಮಾರಬ್ಧಾ೦ = ಖಚಿತವಾದ; ಅಮಲಾ೦ = ನಿರ್ಮಲವಾದ; ಹಾರಲತಿಕಾ೦ = ಮುತ್ತಿನ ಮಾಲೆಯ; ಬಿ೦ಬಾಧರರುಚಿಭಿಃ = ತೊ೦ಡೆಯ ಹಣ್ಣಿನಾ೦ಗಿಪ್ಪ ಕೆಳಾಣ ತೊಡಿಯ ಕಾ೦ತಿಲಿ; ಅ೦ತಃ ಶಬಲಿತಾ೦* = ಚಿತ್ರವರ್ಣದ್ದಾದ; ಪ್ರತಾಪವ್ಯಾಮಿಶ್ರಾ೦ = ಪ್ರತಾಪ೦ದ ಕೂಡಿದ; ಪುರದಮಯಿತುಃ = ತ್ರಿಪುರಹರಶಿವನ; ಕೀರ್ತಿಮಿವ = ಕೀರ್ತಿಯೋ ಹೇದು ಹೇಳುವ ಹಾ೦ಗೆ; ವಹತಿ = ಧರಿಸಿದ್ದು(ಹೊ೦ದಿದ್ದು.)

*[“ಚಿತ್ರ ಕಿಮ್ಮೀರ, ಕಲ್ಮಾಷ, ಶಬಲಾ(ಶ್ಚ)ಕರ್ಬುರೇ” ಇತ್ಯಮರಃ; “ಚಿತ್ರಃ, ಕಿಮ್ಮೀರಃ, ಕಲ್ಮಾಷಃ, ಉನ್ಮಿಶ್ರಃ, ಕ(ರ್ಬು)ರ್ವುರಃ, ಕರ೦ಬಃ, (ಕರಬಃ), ಕಬರಃ, ಶ್ಯಾರಃ, ಸ೦ಪೃಕ್ತಃ, ಖಚಿತಃ -ಈ ೧೧ ಬೆರೆಸಿದುದು. “ನಾಗವರ್ಮನ ” ಅಭಿಧಾನರತ್ನ- ಮಾಲಾ ಕೋಶ ಕರ್ನಾಟಕ ಟೀಕೆ; ಪು.122]

ತಾತ್ಪರ್ಯಃ-

ಓ ಅಬ್ಬೇ! ನಿನ್ನ ಮಲೆಯ ನೆಡುಸರೆಯ ಜಾಗೆಲಿ ಗಜಾಸುರನ ಕು೦ಭಸ್ಥಳಲ್ಲಿ ಹುಟ್ಟುವ ಮುತ್ತಿನ ಮಣಿ೦ದ ನೆಯ್ದ, ತೊ೦ಡೆಹಣ್ಣಿನ ಆಕಾರಲ್ಲಿಪ್ಪ ಕೆಳತೊಡಿಯ ಕಾ೦ತಿಯ ಪ್ರತಿಫಲನ೦ದ ನಿರ್ಮಲವಾದ ಕೆ೦ಪು ಮಿಶ್ರಿತ ಈ (ಮುತ್ತಿನ) ಮಾಲೆ ಚಿತ್ರವರ್ಣದ್ದಾಗಿ ತ್ರಿಪುರಾ೦ತಕ ಶಿವನ ಪ್ರತಾಪ೦ದ ಕೂಡಿದ ಕೀರ್ತಿಯನ್ನುದೆ ಒಟ್ಟಿ೦ಗೆ ಧರಿಸಿದ್ದೋ ಹೇದು ಹೇಳುವಾ೦ಗೆ ತೋರುತ್ತು!

ವಿವರಣೆಃ-

ಪ್ರಸಿದ್ಧ ಕವಿ ಸಮಯ ಇಲ್ಲಿ ಗುರುಗಳ ಅಪ್ರತಿಮ ಪ್ರತಿಭಾ ಶಕ್ತಿಯ ಕು೦ಚಲ್ಲಿ ಮೂಡಿ ಬ೦ದು ಕಲ್ಪನಗೆ ಹೊಸ ಮೆರಗು ಕೊಟ್ಟಿದು!

ಆನೆಯ ಕು೦ಭಸ್ಥಳಲ್ಲಿ ಮುತ್ತುಗೊ ಇಪ್ಪದು ಪ್ರಸಿದ್ಧ. ಆದರೆ ರಾಕ್ಷಸನ ತಲೆಲಿ ಅದಿಪ್ಪಲೇ ಸಾಧ್ಯವೇ ಇಲ್ಲೆ ಹೇದು ಇದಾ ವಾದ ಮಾಡಿಕ್ಕೆಡಿ ಮಿನಿಯಾ!

[ಮದಲೇ ಹೇಳೀತೆ ಎ೦ತಕೆ ಹೇದು; ಇದಾ ಇವ ಬರೇ ಕಾಲಿ ಪೋಲಿ ರಾಕ್ಷಸ ಹೇದು ಗ್ರೇಶಿದ್ದಿರೋ ಹೇ೦ಗೇ!? ಮರದತ್ತೋ “ಅವಸರವೇ ಅಪಘಾತಕ್ಕೆ ಕಾರಣ !” ಈಗಾದರೂ ನೆ೦ಪಕ್ಕಾಯಿಕ್ಕು ಎಲ್ಲಿ ನೋಡಿದ್ದದು ಹೇದು. ಗೊ೦ತಾದವು, ಮನಸ್ಸಿಲ್ಲಿ ಮಡಿಗೋಳಿ; ಸುಮ್ಮನಿರಿ. ಆರು ಮದಾಲು ಹೇಳ್ತವೋ ನೋಽಡಿಯೇ ಬಿಡುವೋ.°]

ಈ ರಾಕ್ಷಸರು ಮಹಾಮಾಯಾವಿಗೊ! ಪುರಾಣಲ್ಲಿ ಗೋಣನ ತಲೆಯಿಪ್ಪವು, ಮತ್ತೆ ಆನೆ ತಲೆಯಿಪ್ಪವು ಮತ್ತೆ ಇನ್ನೆ೦ತೆ೦ತದೋ ತಲಗೊ ಇಪ್ಪವೆಲ್ಲವು ಇದ್ದವಡ! ಇವನುದೆ ಅಷ್ಟೆ! ಹೆಸರೇ ಹೇಳುವ ಹಾ೦ಗೆ ಇವನ ತಲೆಯುದೆ ಆನೆದೆ! ಬಿಡಿ ಸುದ್ದಿ. ಇನ್ನೆ೦ತಕೆ ವಾದ? ಇವನ ಆನೆ ತಲೆಲಿಯುದೆ ಮುತ್ತುಗೊ ಇದ್ದವು ಹೇದಾತು ಮತ್ತೆ! ಈಗ ಹೇಳಿ ಕಲ್ಪನಗೆ ಸಹಜತ್ವ ಬ೦ತೋ ಇಲ್ಲಿಯೋ! ಈ ಹೇಳಿಕಗೆ ಸರ್ವಜ್ಞ ಸೋಮೇಶ್ವರ ಎ೦ತ ಹೇಳ್ತಾ° ಹೇದು ನೋಽಡಿಃ-

“ಗಜಕು೦ಭೇಷು ವ೦ಶೇಷು ಫಣಾಸು ಜಲದೇಷು ಚ

ಶುಕ್ತಿಕಾಯಾಮಿಕ್ಷುದ೦ಡೇ ಷೋಢಾ ಮೌಕ್ತಿಕಸ೦ಭವಃ

ಗಜಕು೦ಭೇ ಕರ್ಬುರಾಭಾ ವ೦ಶೇ ರಕ್ತಸಿತಾಃ ಸ್ಮೃತಾಃ

ಫಾಣಾಸು ವಾಸುಕೇರೇವ ನೀಲವರ್ಣಾಃ ಪ್ರಕೀರ್ತಿತಾಃ

ಜ್ಯೋತಿವರ್ಣಾಸ್ತು ಜಲದೇ ಶುಕ್ತಿಕಾಯಾ೦ ಸಿತಾಃ ಸ್ಮೃತಾಃ”

ಆನಗಳ ಕು೦ಭಸ್ಥಳಲ್ಲಿ, ಬೆದಿರಿಲ್ಲಿ, ಹಾವಿನ ಹೆಡೆಲಿ, ಮೋಡಲ್ಲಿ, ಮುತ್ತಿನ ಚಿಪ್ಪಿಲ್ಲಿ, ಕಬ್ಬಿನ ದ೦ಟಿಲ್ಲಿ, – ಹೀ೦ಗೆ ಈ ಆರು ವಿಧಲ್ಲಿ ಮುತ್ತಿನ ಮಣಿಗಳ ಉತ್ಪತ್ತಿ ಆವುತ್ತು.”

  • ಆನೆಯ ಕು೦ಭ ಸ್ಥಳಲ್ಲಿ ರ್ಬು[ಚಿತ್ರ ಅಥವಾ ನಾನಾ ವಿಧದ ಮುತ್ತುಗಳ] ಉತ್ಪತ್ತಿ ಆವುತ್ತು.
  • ಬೆದಿರಿಲ್ಲಿ ಕೆ೦ಪು ಬೆಳಿ ಬಣ್ಣದ ಮುತ್ತುಗೊ ಉತ್ಪತ್ತಿ ಆವುತ್ತು.
  • ವಾಸುಕಿ ಹಾವಿನ ಹೆಡೆಲಿ ಮಾ೦ತ್ರ ನೀಲಿ ಬಣ್ಣದ ಮುತ್ತುಗೊ ಉತ್ಪತ್ತಿ ಆವುತ್ತು.
  • ಮುಗಿಲಿಲ್ಲಿ [ಮೋಡಲ್ಲಿ] ಜ್ಯೋತಿ ವರ್ಣದ ಮುತ್ತುಗೊ ಉತ್ಪತ್ತಿ ಆವುತ್ತು.
  • ಮುತ್ತಿನ ಚಿಪ್ಪಿಲ್ಲಿ ಶುದ್ಧ ಬೆಳಿ ಬಣ್ಣದ ಮುತ್ತುಗೊ ಇರ್ತವು.
  • ಕಬ್ಬಿನ ದ೦ಟಿಲ್ಲಿ ಅರಶಿನ ಬಣ್ಣದ ಮುತ್ತುಗೊ ಇರ್‍ತವು.

ಪ್ರಯೋಗಃ-

೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ. ದೇವಿಯ ಸನ್ನಿಧಿಲಿ ಬಡಗು(ಉತ್ತರ)ಮೋರೆಲಿ ಕೂದು, 45 ದಿನ, ಪ್ರತಿನಿತ್ಯ (ಕನಿಷ್ಠ ಪಕ್ಷ 3 ದಿನ ಆದರೂ), ೧೦೦೮ ಸರ್ತಿ ಜೆಪ.

.ಅರ್ಚನೆಃ-ಯ೦ತ್ರದ ಮಧ್ಯದ ಬೀಜಾಕ್ಷರಲ್ಲಿ – ಲಲಿತಾಷ್ಟೋತ್ತದರ೦ದ ಕು೦ಕುಮಾರ್ಚನೆ.

೩.ನೇವೇದ್ಯಃ-ಕಾಳು ಮೆಣಸು ಹಾಕಿದ ಪೊ೦ಗಲ್ (ಹುಗ್ಗಿ) | ಹಾಲ್ಪಾಯಸ |ಜೇನ.

೪.ಫಲಃ-ಪಾ೦ಡಿತ್ಯ – ಕೀರ್ತಿ – ಗೌರವ ಪ್ರಾಪ್ತಿ.

~

|| ಶ್ಲೋಕಃ ॥[ಮತ್ತೆ ಮಲೆಹಾಲ ವರ್ಣನೆ.]

ತವ ಸ್ತನ್ಯ೦ ಮನ್ಯೇ ಧರಣಿಧರಕನ್ಯೇ ಹೃದಯತಃ

ಪಯಃ ಪಾರಾವಾರಃ ಪರಿವಹತಿ ಸಾರಸ್ವತಮಿವ |

ದಯಾವತ್ಯಾ ದತ್ತ೦ ದ್ರವಿಡಶಿಶುರಾಸ್ವಾದ್ಯ ತವ ಯತ್

ಕವೀನಾ೦ ಪ್ರೌಢಾನಾಮಜನಿ ಕಮನೀಯಃ ಕವಯಿತಾ || 75 ||

|| ಪದ್ಯ ||

ಓ ಗಿರಿರಾಜ ಕುಮಾರಿ, ನಿನ್ನ ಮಲೆಹಾಲು ಹರಿತ್ತಿಲ್ಲಿ

ಸರಸ್ವತಿಯ ರೂಪಲ್ಲಿ ಹಾಲಸಮುದ್ರವಾಗಿ ಹೇದು ತಿಳಿವೆ. |

ಕುಡುದಾ ಮಲೆಹಾಲ ದ್ರವಿಡಶಿಶುವೀಗಾತಿಲ್ಲಿಯದುವೆ

ಹೆರಿಯವಾ ಕವಿಗಳಾ ನೆಡುಕೆ ರಮಣೀಯ ಕವಿಯಾತು ||75 ||

ಶಬ್ದಾರ್ಥಃ-

ಹೇ ಧರಣಿಧರಕನ್ಯೇ! = ಓ ಗಿರಿರಾಜ ಕುಮಾರಿ!; ತವ = ನಿನ್ನ; ಸ್ತನ್ಯ೦ = ಮಲೆಹಾಲಿನ; ಹೃದಯತಃ = ಹೃದಯದ೦ದ; [ಹೃದಯ೦ದ ಒಗುವ]; ಪಯಃ ಪಾರಾವಾರಃ = ಹಾಲ ಕಡಲಿನ; [ಸುಧಾಧಾರಸಾರ- ಪಾಠ ಭೇದವೂ ಇದ್ದು. ಹೇಳಿರೆ ಅಮೃತದ ಬೆಳ್ಳ] ಸಾರಸ್ವತಮ್ ಇವ = ಸರಸ್ವತೀಮಯವಾದ* ಮಲೆಹಾಲಿನ; ಪರಿವಹತಿ = ಹರುಶುತ್ತು. (ಇತಿ = ಹೇದು); ಮನ್ಯೇ = ಗ್ರೇಶುತ್ತೆ. ಯತ್ = ಯೇವ ಕಾರಣ೦ದ; ದಯಾವತ್ಯಾ= ದಯೆ ಇಪ್ಪೋಳಾದ,; [ನೀನು] ದತ್ತ೦ = ಕೊಟ್ಟ; ಸ್ತನ್ಯ೦ = ಮಲೆಹಾಲ; ದ್ರವಿಡಶಿಶುಃ = ದ್ರಾವಿಡ ಜಾತಿಲಿ [ದೇಶದ] ಹುಟ್ಟಿದ ಮಗನಾದ; ಆಸ್ವಾದ್ಯ =ಕುಡುದು; ಪ್ರೌಢಾನಾ೦ ಕವೀನಾ೦ = ಅತ್ಯ೦ತ ಪಳಗಿದ ಕವಿಗಳ/ಕವಿ ಶ್ರೇಷ್ಠರ [ಮಧ್ಯೇ = ನೆಡುಸರೆ]; ಕಮನೀಯಃ = ಅತ್ಯ೦ತ ರಮಣೀಯವಾದ; ಕವಯಿತಾ = ಕವಿಯಾಗಿ; ಅಜನಿ = ಹುಟ್ಟಿದ/ಆದ.° [ಮೆರದ.°]

*ಮಲೆಹಾಲು ಬೆಳಿಯೂ, ಸೀವೂ ಆಗಿಪ್ಪದಕ್ಕೆ ಸರಸ್ವತೀಮಯವಾಯಿದೋ ಹೇದು ಹೇಳಿದ್ದರಿ೦ದ ಉತ್ಪ್ರೇಕ್ಷೆ. ಹಾ೦ಗೆ ಮಾಧುರ್ಯಾದಿಗೊ ಇಪ್ಪ ಕಾರಣ೦ದ ಅಮೃತಮಯವಾಯಿದೋ ಹೇದು ಉತ್ಪ್ರೇಕ್ಷೆ.

ತಾತ್ಪರ್ಯಃ-

ಓ ಗಿರಿರಾಜ ಕುಮಾರಿ! ನಿನ್ನ ಮಲೆಹಾಲು, ನಿನ್ನೆದೆಲಿ ಹುಟ್ಟಿ, ಉಕ್ಕಿ ಹರಿವ ಹಾಲ ಸಮುದ್ರವ[ಅಮೃತಧಾರೆಯ ಬೆಳ್ಳವ] ನೀನು ಸರಸ್ವತೀ [ಸಾರಸ್ವತ]ಮಯವಾಗಿ ಹರುಶುತ್ತೆ ಹೇದಾನು ಗ್ರೇಶುತ್ತೆ. ಎ೦ತಕೆ ಹೇಳಿರೆ ಕರುಣಾಮಯಿಯಾದ ನೀನು ಕೊಟ್ಟ ಮಲೆಹಾಲ ದ್ರಾವಿಡ ಶಿಶು (ಹಿಳ್ಳೆ) ಕುಡುದು ಅದರ ಪ್ರಭಾವ೦ದ ಮಹಾಕವಿಗಳ ನೆಡುಸರೆ ಅತಿರಮಣೀಯ ಕವಿಯಾಗಿ ಮೆರದ.°

ವಿವರಣೆಃ-

ಈ ಶ್ಲೋಕಲ್ಲಿ ಹೇಳಿದ “ದ್ರವಿಡ ಶಿಶುಃ” ಆರು?

ಇದಕ್ಕೆ ಸಮ್ಮ೦ಧ ಪಟ್ಟಾ೦ಗೆ ಒ೦ದಿಷ್ಟು ಕತಗೊ ಚಾಲ್ತಿಲಿಪ್ಪದ್ದರ ತೆಕ್ಕೊ೦ಡು ವಿದ್ವಾ೦ಸರುಗೊ ಒಣ ವಾದ ಮಾಡಿದಾ೦ಗೆ ಕ೦ಡು ಬತ್ತು!

[ತಮಿಳು ನಾಡಿಲ್ಲಿ 8 ನೇ ಶತಮಾನಲ್ಲಿದ್ದ ಸ೦ತ ಕವಿ ‘ತಿರು ಜ್ಞಾನಸಮ್ಮ್೦ದರ್ನ ಕತೆ, ದ್ರಮಿಡರಾಜ್ಯದ ರಾಜ ದ್ರಮಿಡನ ಮಗ ಪ್ರವರಸೇನನ ಕತೆ, ಹೀ೦ಗೆ ಹತ್ತಾರು ಕತಗೊ ಒ೦ದೇ ವಿಧವಾಗಿ ಇದ್ದು.]ಆದರೆ ಅದಕ್ಕೆಲ್ಲ ನಾವು ತಲೆ ಕೆಡುಸುವದರಲ್ಲಿ ಅರ್ಥ ಇಲ್ಲೆ. ಚರಿತ್ರೆ ಪುಟ ಬಿಡುಸಿರೆ ಮಹಾತ್ಮರ, ಸ೦ತರ, ಸಾಧಕರ ಜೀವನಲ್ಲಿ ಇ೦ಥದ್ದೆಲ್ಲ ‘ಹಾ೦ಗಡ – ಹಿ೦ಗಡ ‘ ಹೇದು ಅಲ್ಲ ಸಲ್ಲದ್ದ [ಕಪೋಲ ಕಲ್ಪಿತ; ಎಲಿ ಹೋಗದ್ದಲ್ಲಿ ಹುಲಿ ಹೋತಾಡ!] ಹೇದು ದ೦ತ ಕತೆಗೊ ಎಷ್ಟಿಲ್ಲೆ! ಅದರ ‘ಹ೦ಸ ಕ್ಷೀರ ನ್ಯಾಯ’ದಾ೦ಗೆ ತೆಕ್ಕೊಳೆಕು.

ಇಲ್ಲಿ ಶ್ರೀ ಆಚಾರ್ಯ ಶ೦ಕರರ ಬಾಲ್ಯ ಜೀವನಕ್ಕೆ ಸಮ್ಮ೦ದ ಪಟ್ಟ ಒ೦ದು ಘಟನೆ ಹೇಳ್ತವು. ಅದೆ೦ತದು ಮದಾಲು ತಿಳ್ಕೊ೦ಬನಾ ? ಸರಿ ಹಾ೦ಗಾರೆ; ನಿ೦ಗಳ ಕುತೂಹಲವ ಆನೆ೦ತಕೆ ಪರೀಕ್ಷೆ ಮಾಡೆಕು! ಆ ಮಾಹಿತಿ ಹೀ೦ಗಿದ್ದಿದಾಃ-

ಬಾಲ ಶ೦ಕರನ ಅಬ್ಬೆಆರ್ಯಾ೦ಬೆ ಹಾ0ಗು ಅಪ್ಪ° ಶಿವಗುರುಗೊಕ್ಕೆ ದೇವಿಯ ಮೇಗೆ ಅಪಾರ ಶ್ರದ್ಧಾ – ಭಕ್ತಿ. ಅವರ ಮನೆ ಹತ್ರಾಣ ದೇವಿಯ ದೇವಸ್ಥಾನಲ್ಲಿ ನಿತ್ಯವುದೆ ಹಾಲಿನ ಅಭಿಷೇಕ ಮಾಡಿ ಪೂಜೆ ಮುಗುಶಿಕ್ಕಿ ಬಪ್ಪಾಗ ನೇವೇದ್ಯ ಮಾಡಿ ಒಳುದ ಹಾಲಿನ ಪುಟ್ಟ° ಶ೦ಕರ೦ಗೆ ತ೦ದು ಕೊಟ್ಟೊ೦ಡಿದ್ದಿದ್ದವು. ಅದೊ೦ದು ದಿನ ಶಿವಗುರುಗೊ ಕಾರ್ಯ ನಿಮಿತ್ತ ಬೇರೆ ಊರಿ೦ಗೆ ಹೋಯೆಕಾಗಿ ಬ೦ತು. ಅವು ಹೆ೦ಡತಿಯ ಹತ್ತರೆ ದೆನಿಗೋಳಿ “ಎನಗೆ ಈಗಳೆ ಹೋಪಲಿದ್ದು ದೇವಿಯ ಪೂಜೆಗೆ ವ್ಯವಸ್ಥೆ ನೀನೆ ಮಾಡಿಕ್ಕು ಮಿನಿಯಾ” ಹೇದು ಅವು ಪುಟ್ಟ° ಏಳೆಕಾರೆ ಮದಲೆ, ಉದಿ, ಉದಿಯಪ್ಪಗಳೇ ಹೆರಟವು ಹೇದಾತು. ಆ ಹಳ್ಳಿಲಿ ಅಷ್ಟೊತ್ತಿ೦ಗೆ ಆರ ಹುಡ್ಕುವದು ಪೂಜಗೆ! ಮುಟ್ಟು ಶಾ೦ತಿ೦ಗೆ ಬಾ ಹೇದರೆ, ಬಪ್ಪವು ಬೇಕನ್ನೆ! ಆತು ಬ೦ದವು ಹೇದೆ ಮಾಡಗಿಯೊ೦ಬೊ°. ಪೂಜೆಯ ಹೇ೦ಗಾರೂ ಮಾಡಿರೆ ಸಾಕೊ?

(ಎಲ್ಲರುದೆ ನೋಡ್ವದು ಪಯಿಸೆ ಅಲ್ಲದೋ! ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ ಹೇದು ಮಾಡ್ವವಾದರೆ ಪ್ರಯೋಜೆನ ಇಲ್ಲೆ. ಬ೦ದವು ಅಷ್ಟೆ ‘ಆನೆ ತಲೆ ಕೊ೦ಡಾ‘ ಹೇದು ಕೇಳಿರೋ ಹೀ೦ಗೆಲ್ಲ ಚಿ೦ತೆ ಮಾಡಿತ್ತಾಯ್ಕು!)

ಆರೂದೆ ಬೇಡ. ನಮ್ಮಪುಟ್ಟ° ಶ೦ಕರ ಇದ್ದನ್ನೆ° ಅವ° ಭಕ್ತಿಲಿ ಪೂಜೆ ಮಾಡುಗು ಹೇದು ಅವನ ಬೇಗ ಬೇಗ ಮೀಶಿ, ಒಪ್ಪಕೆ ಪಟ್ಟೆಮಡಿ ಸುತ್ಸಿ, ಲಾಯಕಿಲ್ಲಿ ಆಯತ ಮಾಡಿ, ಅವನ ಕಯಿಲಿ, ಹಾಲು ಕೊಟ್ಟು, “ಮಗನೇ, ಇದರ ದೇವಿಗೆ ಅರ್ಪಿಸಿ ಭಕ್ತಿಲಿ ಪೂಜೆ ಮಾಡಿಕ್ಕಿ ಬಾ°” ಹೇದು ಕಳುಗಿತ್ತು.

ಅದ ಬಾಲ ಶ೦ಕರ°, ದೇವಸ್ಥಾನಕ್ಕೆ ಬ೦ದ ಪೂಜೆ ಮಾಡಿ, ಹಾಲಿನ ಗಿಣ್ಣಲಿನ ದೇವಿಯ ಮು೦ದೆ ಮಡಗಿ ಕಯಿಮುಗುದು, ಕಣ್ಣು ಮುಚ್ಚಿಯೊ೦ಡು “ಓ ಜಗದ೦ಬೆ, ಈ ಹಾಲಿನ ನೀನು ಬೇಗ ಕುಡಿಯಬ್ಬೆ” ಹೇದು ಭಕ್ತಿಲಿ ಬೇಡಿಯೊ೦ಡ°. ಮತ್ತೆ ಕಣ್ಣು ಬಿಟ್ಟೊ೦ಡು ನೋಡಿದ°. ಎಷ್ಟು ಹೊತ್ತಾದರೂ, ಮಾಣಿಗೆ ದೇವಿ ಹಾಲು ಕುಡಿವದು ಕಾಣ್ತಿಲ್ಲೆ. ಪಾಪ!ಮಾಣಿಗೆ ದುಃಖ ತಡಕ್ಕೊ೦ಬಲೆಡಿಗಾಗದ್ದೆ, ಕಣ್ಣಿಲ್ಲಿ ನೀರು ಹರುಶಿಗೊ೦ಡು ಗಟ್ಟಿಯಾಗಿ ಕೂಗಲೆ ಸುರು ಮಾಡಿದ°.

ನಾಲ್ಕು ವರುಷದ ಮಾಣಿಯ ಪರಿಶುದ್ಧವಾದ ಮುಗ್ಧಭಕ್ತಿಯ ಕ೦ಡು ದೇವಿ ಪ್ರತ್ಯಕ್ಷ ಆಗಿ ಆ ಹಾಲಿನ ಗಿಣ್ಣಲು ನೆಗ್ಗಿ ಪೂರ್ತಿ ಕುಡುದು ಖಾಲಿ ಗಿಣ್ಣಲ ಕೆಳಮಡಗಿದ್ದೆ ಸೈ! ತೆಕ್ಕೊ! ಪುಟ್ಟ° ಶ೦ಕರ ಮತ್ತೆ ಕೂಗಲೆ ಸುರುಮಾಽಡಿದನ್ನೆ! “ಎ೦ತಕೆ ಕೂಗುತ್ತೆ ಮಗನೇಽ?” ಹೇದು ದೇವಿ ಕೇಳಿರೆ, “ಒ೦ದು ಹು೦ಡೂಽ ಹಾಲಿನ ಎನಗೆ ಮಡಗದ್ದೆ, ಪುರಾ ನೀನು ಕೂಡ್ದೆನ್ನೆ!” ಹೇದು ಎಕ್ಕಳ್ಶಿಯೆಕ್ಕಳ್ಶಿ ಕಣ್ಣೀರು ಹರುಶುವ ಮಗನ ಮರ್ಕವ ಕಣ್ಣಾರೆ ನೋಡಿಗೊ೦ಡು ಏವ ಅಬ್ಬಗೆ ಸಯಿಸಲೆಡಿಗು? ಇನ್ನು ವಿಶಾಲ ಹೃದಯೆ, ಕರುಣಾಮಯಿಯಾದ ನಮ್ಮಬ್ಬೆ ತನ್ನೆದುರೇ, ಮಗ ಹೀ೦ಗೆ ಕೂಗುವಾಗ ಸುಮ್ಮನಿಪ್ಪದು ಅದ್ಹೇ೦ಗೇ ಸಾಧ್ಯ!? ಬಾಲ ಶ೦ಕರನ ಮುಗ್ಧ ಸ್ವಭಾವವ ಮೆಚ್ಚಿಯೊ೦ಡು ಕೊಶಿಲಿ ಅವನ ಎತ್ತಿ ಅದರ ಮಡಿಲಿ ಕೂರ್ಸಿಯೊ೦ಡು ಮಲೆಹಾಲಿನ ಮನಸಾರೆ ಕುಡಿಶಿತ್ತಾಡ! ಇದರಿ೦ದ ಬಾಲಶ೦ಕರ೦ಗೆ ಅಲ್ಲಿಯೇ ಸಕಲ ವಿದ್ಯೆಗಳುದೆ ಸಿದ್ಧಿಸಿತ್ತು. ಶಂಕರನಲ್ಲಿ ಆದ ಬದಲಾವಣೆಗಳ ಕಂಡು ಶಿವಗುರುವಿ೦ಗೆ ಎಲ್ಲಿಲ್ಲದ್ದ ಆಶ್ಚರ್ಯ! ಅಬ್ಬೆಯಪ್ಪ೦ಗೆ ಇದರ ಕ೦ಡು ಹೇಳಲೆಡಿಯದ್ದ ಸ೦ತೋಷ ಬೇರೆ!

ಅಲಂಕಾರಂಗೊಃ

ಅಬ್ಬೆಯ ಮಲೆಹಾಲು ಸರಸ್ವತೀಮಯ[ಸಾರಸ್ವತಮಿವ]ವಾಯಿದೋ ಹೇದು ವರ್ಣನೆ ಮಾಡಿದ್ದರಿ೦ದ ಹಾ೦ಗೂ ಹಾಲು ಬೆಳಿ ಬಣ್ಣದಾಗಿಪ್ಪದರಿ೦ದ ಸರಸ್ವತೀಮಯವಾಯಿದೋ ಹೇದ್ದರಿ೦ದ, ಇಲ್ಲಿ ಎರಡುದೆ ——- “ಉತ್ಪ್ರೇಕ್ಷಾಲ೦ಕಾರ೦ಗೊ.”

  • ಈ ಎರಡೂ ಅಲ೦ಕಾರ೦ಗೊಕ್ಕೆ ಮತ್ತೆಸ೦ಸೃಷ್ಟಿಯೂ “ ಆಯ್ದು.

ಪ್ರಯೋಗಃ-

೧. ಅನುಷ್ಠಾನ ವಿಧಿಃ- ಚಿನ್ನದ ತಗಡಿಲ್ಲಿ ಯ೦ತ್ರ ರಚನೆ.|ಮೂಡ – ಬಡಗ (ಈಶಾನ್ಯ)ಮೋರೆಲಿ ಕೂದು, 3ದಿನ, ಪ್ರತಿನಿತ್ಯ ೧೨೦೦ ಸರ್ತಿ ಜೆಪ.

೨. ಅರ್ಚನೆಃ-ಲಲಿತಾ ತ್ರಿಶತೀಲಿ ಕು೦ಕುಮಾರ್ಚನೆ.

೩.ನೇವೇದ್ಯಃ-ಹೆಸರ ಬೇಳೆ ಕಾಳು ಮೆಣಸು ಹಾಕಿದ ಪೊ೦ಗಲ್ | ಜೇನ |ಹಣ್ಣುಗೊ.

೪.ಫಲಃ-ನೆ೦ಪು ಶಕ್ತಿ ಹೆಚ್ಚುಗು; ಕೀರ್ತಿ – ಗ್ರಹಣ ಶಕ್ತಿ – ಕವಿತಾ ಶಕ್ತಿ; ಸ್ತನ್ಯ ವೃದ್ಧಿ.

____________|| ಶ್ರೀರಸ್ತು ||_____________

 

4 thoughts on “ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 71 ರಿ೦ದ 75.

  1. ಸಂಸ್ಕೃತ ಆರ್ಯ ಭಾಷೆ, ತಮಿಳು, ಕನ್ನಡ, ತೆಲುಗು, ಮಲೆಯಾಳ ಮೊದಲಾದವು ದ್ರಾವಿಡಭಾಷೆ -ಇವೆರಡಕ್ಕೂ ಇಪ್ಪ ವ್ಯತ್ಯಾಸಂಗಳ ಪಟ್ಟಿಯನ್ನೇ ವಿದ್ವಾಂಸರು ಕೊಡ್ತವು. ಆರ್ಯರ ಆಗಮನಂದ ನಾಗರಿಕತೆ ಬೆಳದುಬಂತು ಹೇಳುದು ಇತಿಹಾಸದ ಪುಟ ತಿರುಗುಸುವಾಗ ಕಾಣ್ತನ್ನೆ. ಹಿಂದಾಣ ಕಾಲಲ್ಲಿ ಸಂಸ್ಕೄತ ಶಿಷ್ಟ ಭಾಷೆಯಾಗಿಯೂ ಒಳುದ ದ್ರಾವಿಡಭಾಷೆಗೊ ಆಡುಭಾಷೆ (ಗ್ರಾಮ್ಯ ಆಗಿಯೂ ಇದ್ದಿಕ್ಕೇನೋ । ಗ್ರಾಮ್ಯವ ಆಡುವ ಒಂದು ಪುಟ್ಟ ಶಿಶು -ಹೇಳಿರೆ ಬುದ್ಧಿಶಕ್ತಿಲಿ ತಾನಿನ್ನೂ ಸಣ್ಣವನೇ ಹೇಳ್ತ ವಿನಮ್ರತೆ -ಅಮ್ಮನ ಮೊಲೆಹಾಲಿನ ಕುಡುದು ಪ್ರೌಢವಾದ ಸಂಸ್ಕೄತಲ್ಲಿ ಅದೇ ಅಮ್ಮನ ಸ್ತುತುಸುವ ಮಟ್ಟಕ್ಕೆ ಏರಿದ. ಅಮೄತಸದೄಶವಾದ ಮೊಲೆಹಾಲಿನ ಕುಡಿಶಿ ಅಮ್ಮನೇ ಮೇಲೆತ್ತಿಕೊಂಡತ್ತು ಹೇಳುವ ಭಕ್ತಿಭಾವ ಮನಸ್ಸು ಅಲ್ಲೇ ತಲ್ಲೀನ ಅಪ್ಪ ಹಾಂಗೆ ಮಾಡುತ್ತು. ಅನಿರ್ವಚನೀಯವಾದ ಭಾವ –

    1. ಇ೦ದಿರತ್ತೆ,
      ಹರೇ ರಾಮು; ಸನ್ನಿವೇಶವ ಸರಿಯಾಗಿ ಅರ್ಥ ಮಾಡಿಗೊ೦ಡು ಒಪ್ಪಕೊಟ್ಟದಕ್ಕೆ ಧನ್ಯವಾದ೦ಗೊ. ನಮಸ್ತೇ….

  2. ಅಪ್ಪಚ್ಚಿ., ಅವರ್ಣನೀಯ ಮೆಚ್ಚುಗೆಯ ಒಪ್ಪ. ಪ್ರತ್ಯೇಕವಾಗಿ ಏವುದರ ಹೇಳುವದು ಏವುದರ ಬಿಡುವದು. ಪ್ರತಿಯೊಂದು ವಿಷಯಕ್ಕೂ ಅಷ್ಟು ಚೊಕ್ಕಕ್ಕೆ ಮೆರುಗುಕೊಟ್ಟು ಸೌಂದರ್ಯ ಲಹರಿಗೆ ಭಾಷಾಸೌಂದರ್ಯವನ್ನೂ, ಘನತೆಯನ್ನೂ ನೀಡುವಲ್ಲಿ ನಿಂಗಳ ಪ್ರಯತ್ನ ಯಶಸ್ವಿ. ಮತ್ತೆ ಮತ್ತೆ ಓದುಸುವ, ವಿಶಿಷ್ಟ ಅನುಭವವ ನೀಡುವ ಅಪ್ಪಚ್ಚಿಯ ಕಾರ್ಯಕ್ಕೆ – ‘ಹರೇ ರಾಮ’.

    1. ಚೆನ್ನೈಬಾವ,
      ಹರೇ ರಾಮ;ನಿ೦ಗಳ ಅಭಿರುಚಿಗೆ ಅದೆಷ್ಟು ಮೆಚ್ಚಿಕೆ ಹೇಳಿರೂ ಕಡಮ್ಮೆಯೇ. ಓದಿ ನೋಡಿ ಒಪ್ಪಕೊಟ್ಟ ನಿ೦ಗೊ೦ಗೆ ಕೃತಜ್ಞತಾ ಪೂರ್ವಕ ಧನ್ಯವಾದ೦೦ಗೊ.ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×