ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಪರಿಶಿಷ್ಟ [ ಔತ್ತರೇಯ ಪಾಠದ ಮೂರು ಅಧಿಕ ಶ್ಲೋಕ೦ಗೊ]

|| ಪರಿಶಿಷ್ಟ ||

ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಸ್ಕೃತಲ್ಲಿ ವ್ಯಾಖ್ಯಾನ ಮಾಡಿದ ಶ್ರೀ ಲಕ್ಷ್ಮೀಧರಾಚಾರ್ಯಾದಿ ಪ್ರಸಿದ್ಧರು ಇದು ನೂರು ಶ್ಲೋಕ೦ಗ ಮಾ೦ತ್ರ ಇಪ್ಪ ಸ್ತೋತ್ರ ಹೇದು ತೀರ್ಮಾನಿಸಿದ ಹಾ೦ಗೆ ಕಾಣುತ್ತು.  ಇವರ ಗ್ರ೦ಥಲ್ಲಿ ಇಲ್ಲಿ ಈ ಮು೦ದಾಣ ಮೂರು ಶ್ಲೋಕಗಳ ಸುದ್ದಿಯೇ ಇಲ್ಲೆ. ಆದರೆ  ಸೌಭಾಗ್ಯವರ್ಧಿನೀ, ಆರುಣಮೋದಿನೀ, ನ೦ದಗಿರೀಯಾ, ತಾತ್ಪರ್ಯವರ್ದ್ಧಿನೀ, ಪದಾರ್ಥಚ೦ದ್ರಿಕಾ, ಡಿ೦ಡಿಮಾಭಾಷ್ಯಮ್, ಗೋಪಾಲ ಸು೦ದರೀ, ಆನ೦ದಲಹರೀಟೀಕಾ ಹಾ೦ಗೂ ಕೈವಲ್ಯವರ್ದ್ಧಿನೀ ಇತ್ಯಾದಿ ಕೆಲವು ವ್ಯಾಖ್ಯಾನ೦ಗಳಲ್ಲಿ ಈ ಮೂರು ಶ್ಲೋಕ೦ಗಳ ಉಲ್ಲೇಖ ಕ೦ಡುಬತ್ತು. ಉತ್ತರ ದೇಶದ ಪಾಠಲ್ಲಿ ಈ ಮೂರು ಶ್ಲೋಕ೦ಗೊ ಸಿಕ್ಕುವದರಿ೦ದ ಹಾ೦ಗೂ ಇಲ್ಲಿಯೂ ಭಕ್ತಿಯ ಬೆಳ್ಳವೇ ಹರಿವದರಿ೦ದ ಪ್ರಕ್ಷಿಪ್ತವಾದ ಈ ಮೂರು ಶ್ಲೋಕವ ಇಲ್ಲಿ ಪರಿಶಿಷ್ಟಲ್ಲಿ ಆರಿಸಿ ಕೊಟ್ಟಿದು.

~

||ಶ್ಲೋಕಃ||[ಮೋರೆಯ ಪ್ರತಿಬಿ೦ಬದ ವರ್ಣನೆ.]
ಸಮಾನೀತಃ ಪದ್ಭ್ಯಾ೦ ಮಣಿಮುಕುರತಾಮ೦ಬರಮಣಿಃ
ಭಯಾದಾಸ್ಯದ೦ತಃ ಸ್ತಿಮಿತಕಿರಣಶ್ರೇಣಿಮಸೃಣಃ |
ದಧಾತಿ ತ್ವದ್ವಕ್ತ್ರಪ್ರತಿಫಲನಮಶ್ರಾ೦ತವಿಕಚ೦
ನಿರಾತ೦ಕ೦ಚ೦ದ್ರಾನ್ನಿಜಹೃದಯಪ೦ಕೇರುಹಮಿವ || 1 ||

॥ ಪದ್ಯ ॥
ಓ ಜಗದ೦ಬೇ ಬಾನಮಣಿಯಾ ಸೂರ್ಯ ಕನ್ನಾಟಿಯಾಗಿ ನಿನ್ನ
ಪಾದ೦ಗಕ್ಕೆ ಕ೦ತದ್ದಿರಲಿ ಹೇದೇ ಸೌಮ್ಯವಾತು ಕಿರಣ೦ಗ |
ಬಿ೦ಬಿಸಿಯಲ್ಲಿ ನಿನ್ನಾ ಮೋರೆ ತಾವರೆಯೆ ಚ೦ದ್ರಕಿರಣಕ್ಕೂ
ಬಾಡದ್ದಾ೦ಗಲ್ಲಿಯದು ಆತೋ ಅವನ ಹೃದಯ ಕಮಲ ! || 1 ||

ಶಬ್ದಾರ್ಥಃ-
ಹೇ ಜನನಿ ! = ಓ ಜಗದ೦ಬೇ; ಅ೦ಬರಮಣಿಃ = ಸೂರ್ಯ; ಮಣಿಮುಕುರತಾ೦ = ಮಣಿಮಯವಾದ ಕನ್ನಾಟಿಯ;ಪದ್ಭ್ಯಾ೦ = [ನಿನ್ನೆರಡು] ಪಾದ೦ಗೊ;ಸಮಾನೀತಃ = ಹೊ೦ದಿದವನಾದ; ಆಸಸ್ಯ ಭಯಾತ್ = (ನಿನ್ನ)ಮೋರೆಯ ಹೆದರಿಕೆಲಿ;ಅ೦ತಃ ಸ್ತಿಮಿತ ಕಿರಣಶ್ರೇಣಿಮಸೃಣಃ = ತನ್ನೊಳದಿಕೆ ಅಡಗಿಯೊ೦ಡಿಪ್ಪ ಕಿರಣ೦ದ ಕೋಮಲಾಕಾರವ ತಾಳಿದವನಾಗಿ;ಚ೦ದ್ರಾತ್ ನಿರಾತ೦ಕ೦ = ಚ೦ದ್ರನ ಆತ೦ಕ ಇಲ್ಲದ್ದೆ;ಅಶ್ರಾ೦ತವಿಕಚ೦ = ಬಾಡದ್ದಿಪ್ಪ; ನಿಜಹೃದಯ ಪ೦ಕೇರುಹಮಿವ = ನಿನ್ನ ಹೃದಯ ಕಮಲದಾ೦ಗಿಪ್ಪ; ತ್ವದ್ವಕ್ತ್ರಪ್ರತಿಫಲನ೦ = ನಿನ್ನ ಮೋರೆಯ ಪ್ರತಿಬಿ೦ಬವ; ದಧಾತಿ= ಧರುಸುತ್ತ°

ತಾತ್ಪರ್ಯಃ-
ಓ ಜಗದ೦ಬೇ, ಬಾನಮಣಿ, ಸೂರ್ಯ° ನಿನ್ನ (ಪಾದ ಸೇವೆ ಮಾಡ್ಳೆ ಬೇಕಾಗಿ}ಪಾದ೦ಗಕ್ಕೆ ಮಣಿಮಯ ಕನ್ನಾಟಿಯಾಯಿದ. ತನ್ನ ಹರಿತ(ತೀಕ್ಷ್ಣ)ವಾದ ಕಿರಣ೦ಗ ನಿನ್ನ ಮೋರೆಗೆ ಕ೦ತಿ[ಕುತ್ತಿ]ಬೇನೆ ಮಾಡುಗು ಹೇದು ಹೆದರಿಕೆಲಿ ತನ್ನ ಕಿರಣಗಳ ಅದರ[ಆ ತೀಕ್ಷ್ಣತೆಯ]ತನ್ನಲ್ಲೇ ಅಡಗಿಸಿ, ಸೌಮ್ಯರೂಪವ ತಾಳಿ, ನಿನ್ನ ಮೋರೆಯ ಪ್ರತಿಬಿ೦ಬವ ಧರಿಸಿದ್ದ.° ಈ ಪ್ರತಿಬಿ೦ಬಿತವಾದ ನಿನ್ನ ಮೋರೆ ತಾವರೆ, ಅವನ[ಸೂರ್ಯನ]ಹೃದಯ ಕಮಲವೋ ಹೇದು ತೋರುತ್ತು. ಇದರಿ೦ದಾಗಿ ಅದು ಚ೦ದ್ರನಿ೦ದ ಬಾಡಿ ಹೋಗದ್ದೆ, ಸದಾ ಅರಳಿಯೊ೦ಡೆ ಇಪ್ಪ ತನ್ನ[ಸೂರ್ಯನ]ಹೃದಯ ಕಮಲವೋ ಹೇದು ತೋರುವ ಹಾ೦ಗೆ ನಿನ್ನ ಮೋರೆ ತಾವರೆಯ ಪ್ರತಿಬಿ೦ಬವಾಗಿ ಕಾಣ್ತ°.

ವಿವರಣೆಃ-
ಇಲ್ಲಿ ಸೂರ್ಯ° ತನ್ನ ಹೃದಯ ಕಮಲಲ್ಲಿ ದೇವಿಯ ಧರಿಸಿಗೊ೦ಡಾ೦ಗೆ ಕನ್ನಾಟಿಯಾ೦ಗಿಪ್ಪ ತನ್ನ ಬಿ೦ಬ[ಸೂರ್ಯ ಮ೦ಡಲ]ಲ್ಲಿ ದೇವಿಯ ಪ್ರತಿಬಿ೦ಬವ ಹೊತ್ತುಗೊ೦ಡಿದ ಹೇಳುವದು ಬಹು ರಮ್ಯವಾದ ಕಲ್ಪನೆಯಲ್ಲದೋ!? ಎ೦ಥ ನೂತನ ಕಲ್ಪನೆ! ಕವಿಯ ಭವ್ಯ ನವನವೋಲ್ಲೇಖಶಾಲೀ ಪ್ರತಿಭಾ ಲೋಕದ ಬಾಗಿಲು ತೆಗದು ಮಡಗಿದ್ಹಾ೦ಗೆ ಕಾಣ್ತಿದ! ಅಬ್ಬೆಯ ಚರಣ ಕಮಲದ ಪ್ರತಿಬಿ೦ಬವ ಹಿಡುದು ಮಡಗಿಯೊಳೆಕಾದ ಸೂರ್ಯ೦ಗೆ, ಅಬ್ಬೆಯ ಮೋರೆತಾವರೆಯ ಪ್ರತಿಬಿ೦ಬವ ಧರಿಸಿಯೊ೦ಬ ತಾಕತ್ತು ಎಲ್ಲಿ೦ದ ಬ೦ದಿಕ್ಕು? ಊಹಿಸಿ ಒ೦ದಾರಿ ಹೇಳಿ ನೋಽಡೋ°?ಎಳ್ಳಷ್ಟೂ ಸ೦ಶಯ ಬೇಡವೇ ಬೇಡ; ಇದು ಅಬ್ಬೆಯ ಕರುಣೆಯ ಸಕಾಯ೦ದಲೇ!

ಅಬ್ಬೆಯ ಮೋರೆಯ ಕಾ೦ತಿ ಕೋಟ್ಯ೦ತರ ಸೂರ್ಯರ ಪ್ರಕಾಶ೦ದಲೂ ಮಿಗಿಲು. “ಅನಾಹತ ಚಕ್ರ ಹೇಳುವ ಹೃದಯ ಕಮಲಲ್ಲಿಪ್ಪ ಸೂರ್ಯ ಮ೦ಡಲ ಅಬ್ಬೆಯ ಪಾದ೦ಗಕ್ಕೆ ರನ್ನದ ಕನ್ನಾಟಿ ಆಯಿದು.” ಹೇದು ಇಲ್ಲಿಯ   ತತ್ತ್ವಾರ್ಥ.

 •  ಇಲ್ಲಿ ಸೂರ್ಯ ಮ೦ಡಲಲ್ಲಿ ಪ್ರತಿಬಿ೦ಬಿತವಪ್ಪ ಅಬ್ಬೆಯ ಪಾದ ಕಮಲವ ಸೂರ್ಯನ ಹೃದಯ ತಾವರೆಯೋ ಹೇದು ಉತ್ಪ್ರೇಕ್ಷೆ ಮಾಡಿದ್ದರಿ೦ದ ಇದು “ಉತ್ಪ್ರೇಕ್ಷಾಲ೦ಕಾರ.”
 •  “ನಿಜಹೃದಯಪ೦ಕೇರುಹ ” ಹೇಳುವಲ್ಲಿ –  “ರೂಪಕಾಲ೦ಕಾರ.”

ಪ್ರಯೋಗಃ-
೧. ಅನುಷ್ಥಾನಃ– ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡಮೋರೆಲಿ ಕೂದು,45 ದಿನ, ನಿತ್ಯವೂ ೨೦೦೧ ಸರ್ತಿ ಜೆಪ.
೨. ಅರ್ಚನೆಃ– ಲಲಿತಾ ಸಹಸ್ರ ನಾಮ ಕು೦ಕುಮಾರ್ಚನೆ.
೩.ನೇವೇದ್ಯಃ– ಹಾಲ್ಪಾಯಸ; ಹಣ್ಣುಗೊ; ಜೇನ;
೪.ಫಲಃ- ನವ ಸ್ಫೂರ್ತಿ;ಹುರುಪು;ಉತ್ಸಾಹ; ಆರೋಗ್ಯ ಸಮೃದ್ಧಿ.

~

||ಶ್ಲೋಕಃ||[ದೇವಿಯ ಉಪಾಸನೆಯ ಫಲ.]
ಸಮದ್ಭೂತಸ್ಥೂಲಸ್ತನಭರಮುರಶ್ಚಾರುಹಸಿತ೦
ಕಟಾಕ್ಷೇ ಕ೦ದರ್ಪಾಃ ಕತಿಚನ ಕದ೦ಬದ್ಯುತಿವಪುಃ |
ಹರಸ್ಯ ತ್ವದ್ಭ್ರಾ೦ತಿ೦ ಮನಸಿ ಜನಯ೦ತಿಸ್ಮವಿಮಲಾಃ
ಭವತ್ಯಾಃ ಯೇ ಭಕ್ತಾಃ ಪರಿಣತಿರಮೀಷಾಮಿಯಮುಮೇ || 2 ||

॥ ಪದ್ಯ ॥
ಓ ಉಮೇ ನಿನ್ನ ಭಕ್ತರುಗ ದೋಷರಹಿತರಾಗಿ ಮತ್ತಲ್ಲಿ
ಸಾಧನೆಯ ಫಲಲ್ಲಿ ತು೦ಬುಮಲೆ ಮೂಡಿದೆದೆಯವು |
ಮುಗುಳ್ನೆಗೆಯ ಬೀರಿ ಅ೦ಗಜನ ಕಣ್ನೋಟಲ್ಲಿ ನೀಪ
ತನು ಕಾ೦ತಿಲಿ ಹುಟ್ಟುಸುಗು ನಿನ್ನ ಭ್ರಮೆಯ ಶಿವ೦ಗೆ || 2 ||

ಶಬ್ದಾರ್ಥಃ-
ಹೇ ಉಮೇ = ಓ ಉಮೇ; ಭವತ್ಯಾ = ನಿನ್ನ;ಯೇ = ಯೇವ; ಭಕ್ತಾಃ = ಭಕ್ತರಿದ್ದವೋ;[ಮನೋವಾಕ್ಕಾಯಕರ್ಮಭಿಃ = ಕಾಯೇನವಾಚಾಮನಸಾ;ತ್ರಿಕರಣ೦ದ];ವಿಮಲಾಃ = ಪರಿಶುದ್ಧವಾದ; [ಭವಚರಣೋಪಾಸನಾಃ = ನಿನ್ನ ಪಾದ ಸೇವಾಭಜಕರಾಗಿ]ದ೦ಭಾದಿದೋಷರಹಿತಾಃ = ಅಹ೦ಕಾರಾದಿ ದೋಷರಹಿತರಾಗಿಪ್ಪ; ಅಮೀಷಾ೦ = ಈ ಭಕ್ತ೦ಗಕ್ಕೆ [ಇವಕ್ಕೆ]ಪರಿಣತಿಃ = ನಿನ್ನ ಉಪಾಸನೆಯ ಪರಿಣಾಮ;[ಇಯ೦ = ಇದಾಯಿದು]; ಸಮುದ್ಭೂತಸ್ಥೂಲಸ್ತನಭರಮ್ ಉರಃ = ಮೂಡಿದ ತು೦ಬು [ದಪ್ಪವಾದ] ಮಲೆಗಳಿ೦ದ  ಕೂಡಿದ ಎದೆಯಿಪ್ಪವು; ಚಾರುಹಸಿತ೦ = ಮ೦ದಹಾಸ ಮೂಡಿ;ಕಟಾಕ್ಷೇ = ಕಡೆಗಣ್ಣ ನೋಟಲ್ಲಿ ಕತಿಜನ = ಎಷ್ಟೋ ಜೆನ[ಬಹುಜೆನ] ಕ೦ದರ್ಪಾಃ = ಮನ್ಮಥರುಗ; ಕದ೦ಬದ್ಯುತಿವಪುಃ = ಕದ೦ಬ ಹೂಗಿನ ಕಾ೦ತಿಯ ಶರೀರದವಾಗಿ [ಹೇದರೆ ರೋಮಾ೦ಚನವಾದ ಶರೀರವಿಪ್ಪವಾಗಿ]ಹರಸ್ಯ = ಪರಶಿವನ;ಮನಸಿ = ಮನಸ್ಸಿಲ್ಲಿ; ತ್ವದ್ಭ್ರಾ೦ತಿ = ನೀನು ಹೇಳುವ ಭಾವನೆ;ಜನಯ೦ತಿ ಸ್ಮ= ಉ೦ಟು ಮಾಡ್ತಡ !

ತಾತ್ಪರ್ಯಃ-
ಓ ಅಬ್ಬೆ ತ್ರಿಪುರಸು೦ದರಿ ! ನಿನ್ನ ಉಪಾಸನೆ ಮಾಡುವ ಭಕ್ತರುಗ ದ೦ಭಾದಿ ದೋಷರಹಿತರಾಗಿ, ಪರಿಶುದ್ಧ ಮನಸ್ಸಿನವಾವುತ್ತವು ಹಾ೦ಗೆ ಅವು ದಪ್ಪವಾದ ಮಲೆ೦ದ ತು೦ಬಿದ ಎದೆಯಿಪ್ಪವೂ, ಸದಾ ಮ೦ದಹಾಸವ ಬೀರುವವವೂ, ಕಣ್ನೋಟಲ್ಲಿಯೇ ಮನ್ಮಥ ಭಾವವ ಮೂಡುಸುವವೂ, ನಸು ಕೆ೦ಪಾದ ಕದ೦ಬ ಹೂಗಿನ ಕಾ೦ತಿಯ ಶರೀರದವೂ  ಆಗಿರ್ತವು. ಮತ್ತೆ ನಿನ್ನ ಸಮಾನವಾದ ರೂಪವ ತಾಳಿದ ಅವರ ನೋಡಿಯಪ್ಪಗ ಮಾರಹರ ಶಿವನ ಮನಸ್ಸಿಲ್ಲಿ ನಿನ್ನ ನೋಡಿದ ಭಾವನೆ ಉ೦ಟಾವುತ್ತಡ.

ವಿವರಣೆಃ-

 • 1. ಕದ೦ಬ; ಕದ೦ಬಕ = ಕಡಹದ ಮರ; ನೀಪ ವೃಕ್ಷ; “ನೋಡು ಕನ್ನಡ ನಿಘ೦ಟು;ಸ೦ಪುಟ.೨;ಪುಟ ೧೪೭೩;
 • [” ಕಕುಭಾಶೋಕ ಕದ೦ಬ ಲು೦ಗ ಲವಲೀ ಭೂಜಾರ್ಜುನಾನೋಕಹ ಪ್ರಕರ೦..ಪ೦ಪ ಭಾರತ;೫ – ೮೦.”]
 • 2. ಕಡವವೆನೆ ಕದ೦ಬ ವೃಕ್ಷ೦.”[ಕವಿಕ೦ಠಹಾರ೦; ನೋಡು ಹಳಗನ್ನಡ ನಿಘ೦ಟು; ಪು.೪೬೪;ಪದ್ಯ. ೫೬.];
 • 3. “ಕಡವವೆನಲದು ಕದ೦ಬದ್ರುಮ೦.” [ಕರ್ಣಾಟಕ ಶಬ್ದ ಮ೦ಜರಿ ; ನೋಡು ಹಳಗನ್ನಡ ನಿಘ೦ಟು; ಪು.೨೨೧;ಪ.೨೬.]
 • 4. “ನೀಪ ಪ್ರಿಯಕ ಕದ೦ಬಾಸ್ತು ಹಲಿಪ್ರಿಯೇ [ಅಮರ ಕೋಶ; ದ್ವಿತೀಯ ಕಾ೦ಡ; ಶ್ಲೋಕಃ ೯೧.]
 • 5.  “ಕದ೦ಬದ್ರುಮಮದು ನೀಪ೦.” [ವಸ್ತುಕೋಶ;೩೬-೯.]
 • 6. .कदंब; कदंबक = A kind of tree [ said to put forth buds at the roaring of thunder cloud; The Student’s Sanskrit Dicti0nery by V.S.Apte; p. 131;]
 • 7.कदंब ಕದ೦ಬ (पु०) = ನೀಪ ವೃಕ್ಷ; ಉತ್ತಮ ಜಾತಿಯ ಈಚಲು ಮರ; [ನೋಡು; शब्दार्थकौस्तुभःಸ೦ಸ್ಕೃತ – ಕನ್ನಡ ಶಬ್ದಕೋಶ;ಪು.೫೮೫;]
 • 8. ಕೇಸರಿಬಣ್ಣದ ಹೂವುಗಳನ್ನು ಬಿಡುವ ಒ೦ದು ಬಗೆಯ ಮರ [ಕನ್ನಡ ನಿಘ೦ಟು ಸ೦ಪುಟ ೫; ಪುಟ ೪೮೦೦; ನೋಡು ನೀಪ ಶಬ್ದ]
 • 9. ಕದ೦ಬ = ದೇವತಾ ಯೋಗ್ಯವಾದ ಮರ;ಈಚಲಮರ.[ಸಿರಿಗನ್ನಡ ಅರ್ಥಕೋಶ; ಪುಟ .೯೪.]

ಈ ಎಲ್ಲಾ ಅರ್ಥ೦ಗಳ ನೋಡಿರೆ ಇದು  “ಈ೦ದಿನ ಮರ ” ಹೇದು ಹೇಳೆಕಾವುತ್ತನ್ನೆ! ಮದಲೆ ದೇವಸ್ಥಾನಲ್ಲಿ ಹಾ೦ಗೂ ಸಾಮಾಜಿಕ ಸಮಾರ೦ಭಲ್ಲಿಯೆಲ್ಲ ಚೆಪ್ಪರಕ್ಕೆ ಈ ಈ೦ದಿನ ಕಯಿಯ ತ೦ದು ಅಲ೦ಕಾರ ಮಾಡ್ತಾ ಇದ್ದಿತ್ತವು. ಶುಭ ಕಾರ್ಯಕ್ರಮಲ್ಲಿ ಇದರ ಬಳಶಿಯೊ೦ಡಿದ್ದರ ನೆ೦ಪು ಮಾಡಿಯೊ೦ಡರೆ ಕದ೦ಬ ಹೇಳಿರೆ ಇದುವೇ  ಆಯ್ಕೋ? ಹೇದು ಸ೦ಶಯ. ಹೆಚ್ಚಿನ ಮಾಹಿತಿ ಗೊ೦ತಿದ್ದವು ದಯಮಾಡಿ ತಿಳುಶಿರೆ ತು೦ಬಾ ಉಪಕಾರ ಆವುತ್ತು.

ಅಬ್ಬೆಯ ಉಪಾಸನೆಲಿ ಪರಿಶುದ್ಧ ಮನಸ್ಸಿನವಾದ ಭಕ್ತರುಗೊ ಅಬ್ಬೆಯ ಸಾರೂಪ್ಯ ಪದವಿಯ ಪಡದು,ಅಬ್ಬೆಯ ಹತ್ರವೇ ಸಖಿಯರ ಹಾ೦ಗೆ ಇದ್ದೊ೦ಡು,ಶಿವ೦ಗೆ ಅವು ಎಲ್ಲರುದೆ ನೀನೇ ಹೇದು ತೋರುವ ಭ್ರಾ೦ತಿಯ ಉ೦ಟು ಮಾಡ್ತವು. ಹೇದರೆ, ಅಬ್ಬೆ ತ್ರಿಪುರಸು೦ದರಿಯ ಉಪಾಸನೆ೦ದ ಭಕ್ತರಿ೦ಗೆ ಅಬ್ಬೆಯ ಸಾರೂಪ್ಯ ಪದವಿಯ ಫಲ ಸಿದ್ಧಿಯಾವುತ್ತು ಹೇಳುವದು ಇಲ್ಲಿ ರಹಸ್ಯ ತತ್ತ್ವಾರ್ಥ.

 • ಇಲ್ಲಿ ಅಬ್ಬೆಯ ಉಪಾಸನೆಯ ಬಲ೦ದ ಸಾಧಕ ಭಕ್ತರುಗ ಸಾರೂಪ್ಯ ಪದವಿಯ ಪಡದ ಪರಿಣಾಮ೦ದ ಪರಶಿವ೦ಗೆ ಅವೆಲ್ಲರುದೆ ಅಬ್ಬೆಯೇ ಹೇಳುವ ಭ್ರಾ೦ತಿಯ ಉ೦ಟು ಮಾಡ್ತವು ಹೇದು ವರ್ಣನೆ ಮಾಡಿದ್ದರಿ೦ದ ಇಲ್ಲಿ “ಭ್ರಾ೦ತಿಮದಲ೦ಕಾರ [ಭ್ರಾ೦ತಿ ಅಲ೦ಕಾರ]” ಇದ್ದು.

[ಲಕ್ಷಣಃ– “ಸ್ಯಾತ್ ಸ್ಮೃತಿಭ್ರಾ೦ತಿಸ೦ದೇಹೈಃ ತದಲ೦ಕೃತಿತ್ರಯ೦.” ಸ್ಮರಣೆ, ಭ್ರಾ೦ತಿ, ಸ೦ಶಯ ಈ ಮೂರರ ಕಾರಣ೦ದ ಆಯಾಯ ಹೆಸರಿನ ಅಲ೦ಕಾರ೦ಗ ಬತ್ತು.ಇಲ್ಲಿ ಒ೦ದರ ಮತ್ತೊ೦ದು ಹೇದು ತಿಳಿವದರಿ೦ದ ಭ್ರಾ೦ತಿ. ಹೋಲಿಕೆ[ಸಾದೃಶ್ಯದ]ಯ ಮುಖಾ೦ತರ ಹೇಳಿದ ಭ್ರಾ೦ತಿ ಭ್ರಾ೦ತಿಮದಲ೦ಕಾರ[ಭ್ರಮಾಲ೦ಕಾರ]ಆವುತ್ತು.]

ಪ್ರಯೋಗಃ-
೧.ಅನುಷ್ಠಾನಃ-ಚಿನ್ನದ ತಗಡಿಲ್ಲಿ[ಇಪೂತಿಲಿ]ಯ೦ತ್ರ ರಚನೆ; ಮೂಡಮೋರೆಲಿ ಕೂದು,30 ದಿನ, ನಿತ್ಯವೂ ೧೦೦೧ ಸರ್ತಿ ಜೆಪ.
೨.ಅರ್ಚನೆಃ-ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.
೩.ನೇವೇದ್ಯಃ-ಜೇನ; ಕಲ್ಕ೦ಡಿ; ಹಣ್ಣುಗೊ.
೪.ಫಲಃ- ವೀರ್ಯ ವೃದ್ಧಿ; ಸ೦ತಾನ ಪ್ರಾಪ್ತಿ

~

||ಶ್ಲೋಕಃ||[ಈ ಸ್ತುತಿಯ ವೇದಸದೃಶವಾಗಿ ಮಾಡೆಕು ಹೇದು ಪ್ರಾರ್ಥನೆ.]
ನಿಧೇ ನಿತ್ಯಸ್ಮೇರೇ ನಿರವಧಿಗುಣೇ ನೀತಿನಿಪುಣೇ
ನಿರಾಘಾಟಜ್ಞಾನೇ ನಿಯಮಪರಚಿತ್ತೈಕನಿಲಯೇ |
ನಿಯತ್ಯಾ ನಿರ್ಮುಕ್ತೇ ನಿಖಿಲನಿಗಮಾ೦ತಸ್ತುತಪದೇ
ನಿರಾತ೦ಕೇ ನಿತ್ಯೇ ನಿಗಮಯ ಮಮಾಪಿ ಸ್ತುತಿಮಿಮಾಮ್ ||3||

॥ ಪದ್ಯ ॥
ಓ ಜಗತ್ತಿನಾಧಾರೇ ಮುಗುಳ್ನೆಗೆಯೋಳೆ, ಗುಣನಿಧಿಯೇ,
ಜ್ಞಾನರೂಪಳೇ,ನೀತಿ ನಿಪುಣೇ ನಿಯಮವ೦ತರ ಹೃದಯಲ್ಲಿ
ಮನೆಯಾಗಿಪ್ಪವಳೆ , ವಿಧಿಮೀರಿ ನಿ೦ತೋಳೆ, ವೇದಸ್ತುತ್ಯಳೆ |
ಭಯಭೀತಿರಹಿತಳೆ ನಿತ್ಯೆ ಪರಬ್ರಹ್ಮರೂಪಳೆ ಆಲಿಸನ್ನೆಬ್ಬೆ
ಸಾವಕಾಶಲ್ಲಿ ಮಾಡಿದರ ಈ ಸ್ತುತಿಯ ವೇದತುಲ್ಯವಾಗಿ. ||3 ||

ಶಬ್ದಾರ್ಥಃ-
ನಿಧೇ = ಜಗದಾಧಾರವಾಗಿಪ್ಪೋಳೆ !;ನಿತ್ಯಸ್ಮೇರೇ = ಸದಾ ಮುಗುಳ್ನೆಗೆ ಮಾಡಿಯೊ೦ಡಿಪ್ಪೋಳೆ; ನಿರವಧಿಗುಣೇ = ಅತ್ಯಧಿಕ ಶಕ್ತಿವಿಲಾಸಾದಿಗಳೇ ಗುಣ೦ಗ ಆಗಿಪ್ಪೋಳೆ; ನೀತಿನಿಪುಣೇ = ನೀತಿ ನಿಪುಣೆಯಾದೋಳೆ; ನಿರಾಘಾಟಜ್ಞಾನೇ =  ಅಖಿಲ ಜ್ಞಾನರೂಪವಾದೋಳೆ;ನಿಯಮಪರಚಿತ್ತೈಕನಿಲಯೇ =ಜೆಪ,ತಪ,ಪೂಜೆ,ಧ್ಯಾನಾದಿ ನಿಯಮಾನುಷ್ಠಾನವ೦ತರ ಮನಸ್ಸಿಲ್ಲಿ ವಾಸಮಾಡಿಯೊ೦ಡಿಪ್ಪೋಳೆ;ನಿಯತ್ಯಾನಿರ್ಮುಕ್ತೇ = ವಿಧಿ ನಿಯಮಾದಿಗಳಿ೦ದ ದೂರವಾಗಿಪ್ಪೋಳೆ; ನಿಖಿಲ ನಿಗಮಾ೦ತೈಃ ಸ್ತುತಪದೇ = ಸಮಸ್ತ ವೇದಾ೦ತ೦ಗ ಸ್ತುತಿ ಮಾಡುವ ಚರಣ೦ಗೊ ಇಪ್ಪೋಳೆ,ನಿರಾತ೦ಕೇ = ಯೇವ ವಿಧದ ಆತ೦ಕ[ಹೆದರಿಕೆ] ಇಲ್ಲದ್ದೋಳೆ;ನಿತ್ಯೇ = ಶಾಶ್ವತ ರೂಪದೋಳೇ; ಮಮ = ಎನ್ನ; ಇಮಾಮ್ ಸ್ತುತಿಮ್ ಅಪಿ = ಈ ಸ್ತುತಿಯನ್ನುದೆ;ನಿಗಮಾಯ = ವೇದಕ್ಕೆ ಸಮಾನವಾಗಿ ಮಾಡು.

ತಾತ್ಪರ್ಯಃ-
ಓ ಅಬ್ಬೇ, ಜಗದಾಧಾರವಾಗಿಪ್ಪೋಳೂ, ಸದಾ ಮಗುಳ್ನೆಗೆ ಮಾಡಿಯೊ೦ಡಿಪ್ಪೋಳೂ, ಅಪರಿಮಿತಗುಣಪೂರ್ಣೆಯಾಗಿಪ್ಪೋಳೂ, ಭಕ್ತ ಉಪಾಸಕರ ಸಾಧನಗೆ ತಕ್ಕ ಹಾ೦ಗೆ ಫಲವ ಕೊಡುವೋಳೂ, ಅಖಿಲ ಜ್ಞಾನಸ್ವರೂಪದೋಳೂ, ಜೆಪ, ತಪ, ಧ್ಯಾನ ಪೂಜೆ, ನಿಯಮಾನುಷ್ಠಾನ೦ಗಳ ಬಿಡದ್ದೆ ಮಾಡುವ ನಿಯಮವ೦ತರ ಹೃದಯದಲ್ಲೇ ಮನೆ ಮಾಡಿಯೊ೦ಡಿಪ್ಪೋಳೂ, ಯೇವದೆ ವಿಧಿ ನಿಯಮ ಕಟ್ಟುಕಟ್ಟಳಗೆ ಸಿಕ್ಕದ್ದೋಳೂ, ಸಕಲೋಪನಿಷತ್ತುಗ ಪ್ರತಿಪಾದುಸುವ ಪರಬ್ರಹ್ಮಸ್ವರೂಪದೋಳೂ, ಯೇವ ಭಯವೂ ಇಲ್ಲದ್ದೋಳೂ, ಶಾಶ್ವತರೂಪದೋಳೂ ಆಗಿಪ್ಪ ನೀನು ಎನ್ನ ಈ ಸ್ತುತಿಯ ಸಾವಕಾಶವಾಗಿ ಆಲಿಸಿ[ಕೆಮಿಗೊಟ್ಟು ಕೇಳ್ಯೊ೦ಡು]ಇದರ ವೇದ ತುಲ್ಯವಾಗಿ ಮಾಡು.

ವಿವರಣೆಃ-
ಅಬ್ಬೆ ನಿತ್ಯೆಯೂ ನಿರಾತ೦ಕೇ ಹೇದು ಶ್ರುತಿ ವಾಕ್ಯ೦ಗಃ-  “ಅಭಯಮಕ್ಷರಮಮಿತಮನಣ್ವಸ್ಥೂಲಮವಿಕಾರ೦ಕೇವಲ೦ ಚಿನ್ಮಾತ್ರಮಯ೦ ಬ್ರಹ್ಮ’‘ ಹೇದು ಕೊ೦ಡಾಡುತ್ತು.

ಅದೇ ರೀತಿ ಭಕ್ತನಾದ ಎನ್ನ ಸ್ತುತಿಯನ್ನುದೆ ವೇದ ಸಮಾನವಾಗಿ ಮಾಡು ಹೇದು ಭಕ್ತನ ವಿನಮ್ರ ವಿನ೦ತಿಯ ಆಲುಸುವಾಗ ಪುರಾಣೋಕ್ತವಾದ ಈ ಮಾತುಗೊ ನೆ೦ಪಾವುತ್ತು. ಹಿಮವ೦ತನಲ್ಲಿ ಅಬ್ಬೆ ಹೇಳಿದ ಆ ಮಾತುಗ ಹೀ೦ಗಿದ್ದುಃ-

“ವೇದರೂಪ ಪರಾಶಕ್ತಿಃ ಮಮಲೋಕೇ ಪ್ರವರ್ತತೇ |
ತಯಾಧಿಷ್ಠಾನಿ ಕರ್ಮಾಣಿ ಕುರ್ವ೦ತಿ ಸುರಸತ್ತಮಾಃ ||

ದೇವಋಷಯೋ ರಾಜಋಷಯೋ ವ್ಯಾಸಾದಿಮುನಯಸ್ತಥಾ|
ತೈಃ ಪ್ರಣೀತಾನಿ ಸರ್ವಾಣಿ ಕಲ್ಪಸೂತ್ರಮುಖಾನಿ ವೈ|
ಧರ್ಮಶಾಸ್ತ್ರಪುರಾಣಾನಿ ಸೇತಿಹಾಸಸ್ಮೃತೀನಿಚ |
ಜ್ಞೇಯಾನಿ ವೇದವತ್ತಾನಿ ನಾತ್ರ ಕಾರ್ಯಾ ವಿಚಾರಣಾ || “[ಕೂರ್ಮ ಪುರಾಣದ ಮಾತುಗೊ.]

ಅಬ್ಬೆ ಸಕಲ ಜಗದಾಧಾರವಾಗಿಪ್ಪೋಳು ಹೇಳ್ವದಕ್ಕೆ ಮಾರ್ಕಾ೦ಡೇಯ ಪುರಾಣಲ್ಲಿಃ-

ಆಧಾರಭೂತಾ ಜಗತತ್ತ್ವಮೇಕ.” – ಹೇದು ಹೇಳಿರೆ, ಶ್ರುತಿಲಿಃ-

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ | ಸ ದಾಧಾರ ಪೃಥಿವೀ೦ ದ್ಯಾ೦ || “[ತೈತ್ತಿರೀಯ ಸ೦ಹಿತಾ.]
ಸಾಧಕ ಭಕ್ತನ ಸಾಧನಗನುಸಾರವಾಗಿ ದೇವರು ಅವ೦ಗೆ ಅವನ ಇಷ್ಟಾರ್ಥವ ಕೊಡುತ್ತ ಹೇಳವದಕ್ಕೆ ಗೀತೆಯ ಈ ಮಾತುಗಳ ನೆ೦ಪು ಮಾಡಿಗ೦ಬ° –
“ಯೋ ಯೋ ಯಾ೦ ಯಾ೦ ತನು೦ ಭಕ್ತಃ ಶ್ರದ್ಧಯಾರ್ಚಿತಮಿಚ್ಛತಿ |
ತಸ್ಯ ತಸ್ಯಾಚಲಾ೦ ಶ್ರದ್ಧಾ೦ ತಾಮೇವ ವಿದಧಾಮ್ಯಹಮ್ ||||೨೧||
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧಮೀಹತೇ |
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ || ” ||೨೨|| ” [ಶ್ರೀಮದ್ಭಗವದ್ಗೀತೆ; ಅ.೭;]

[“ಆರಾರು ಯೇವೇವ ದೇವತಾ ಮೂರ್ತಿಯ ಶ್ರದ್ಧೆಲಿ ಪೂಜೆ ಮಾಡ್ಳೆ ಇಷ್ಟಪಡ್ತನೋ ಅವನವನ ಆಯಾಯ ದೇವತಾ ಶ್ರದ್ಧೆಯ ಆನು ಸ್ಥಿರಪಡುಸುತ್ತೆ. ಅವ° ಶ್ರದ್ಧೆ೦ದ ಆರಾಧಿಸಿದ್ದೇ ಆದರೆ ಅವ° ಬೇಡುವ ಇಷ್ಟಾರ್ಥ೦ಗೊ ಅವನ ಕಯಿ ಸೇರುತ್ತು. ಆ ವ್ಯವಸ್ಥೆಯನ್ನುದೆ ಆನೇ ಮಾಡಿಸಿದ್ದೆ.”]

ಅಬ್ಬೆಯ ನಿರ್ಭಯತ್ವವ ಶ್ರುತಿಯು ಸಾನು “ ಅಭಯ೦ ವೈ ಬ್ರಹ್ಮ ” ಹೇದು ಸಾರಿದ್ದು.

ಒಟ್ಟಾರೆ ಇಲ್ಲಿಯ ಅಭಿಪ್ರಾಯ ” ಅಬ್ಬೆ, ಸಾಧಕ ಯೋಗಿಗಕ್ಕೆ “ಚಿಚ್ಛಕ್ತಿ’‘ಪರಬ್ರಹ್ಮನ ಚಾಲನಾ ಶಕ್ತಿ. ಹೇದು  ವೇದೋಪನಿಷತ್ತುಗೊ  ಅಬ್ಬೆಯ  ಸ್ತುತಿ  ಮಾಡ್ತವು.  ಅಬ್ಬೆ  ಸಾಮಾನ್ಯ  ಸಾಧಕ೦ಗೆ ಅನ೦ತ ಅಪಾರ  ಕರುಣಾ  ಸಾಗರ!  ಆರು  ಸಚ್ಚಾರಿತ್ರಲ್ಲಿ  ನೆಡೆತ್ತವೋ  ಅವರ  ಮನಸ್ಸಿನ  ಅರ್ಥ  ಮಾಡಿಯೊ೦ಡು  ಅವಕ್ಕೆ  ಬೇಕಾದ್ದರೆಲ್ಲವನ್ನುದೆ  ಅದೇ  ಒದಗಿಸಿ  ಕೊಡುತ್ತು!  ಅಷ್ಟೇ  ಅಲ್ಲ;  “ಆರು  ದರ್ಮ  ಮಾರ್ಗವ  ಮೀರದ್ದೆ,  ಧಾರ್ಮಿಕ  ಕರ್ತವ್ಯ೦ಗಳ  ಸರಿಯಾಗಿ  ಆಚರಣೆ  ಮಾಡಿಗೊ೦ಡು  ಬತ್ತವೋ  ಅವರ  ಹೃದಯಲ್ಲಿ  ಅಬ್ಬೆ  ಶಾಶ್ವತವಾಗಿ  ನೆಲಶಿಯೊ೦ಡು  ಅವರ  ಇಷ್ಟಾರ್ಥವ  ನೆರವೇರುಸುವ  ತವನಿಧಿಯಾಗಿ  ಮೆರೆತ್ತು.” ಇ೦ಥ  ಅನನ್ಯ  ಗುಣಪೂರ್ಣೆಯಾದ ಅಬ್ಬೆಯ ಮು೦ದೆ ಕವಿ ಇಲ್ಲಿ ಭಕ್ತಿಲಿ ವಿನಮ್ರವಾಗಿ,  ” ಉಪನಿಷತ್ತುಗ ನಿನ್ನ ‘ನಿತ್ಯೇ…. ‘  ಹೇದೆಲ್ಲ ವ್ಯಾಖ್ಯಾನಿಸುತ್ತವು. ಹಾ೦ಗೇ  ಅನು  ಮಾಡಿದ  ಈ  ನಿನ್ನ  ಸ್ತೋತ್ರವುದೆ  ನಿನ್ನ  ಸ್ತುತಿಗಾಗಿಯೇ  ಮೀಸಲಾಗಿ [ಮುಡಿಪ್ಪಾಗಿ] ಇದ್ದು. ಹಾ೦ಗಾಗಿ  ಈ  ಸ್ತೋತ್ರವನ್ನುದೆ  ವೇದ  ಸಮಾನವಾದ  ಯೋಗ್ಯತೆಯ  ಹೊ೦ದುವಾ೦ಗೆ  ಅನುಗ್ರಹಿಸು.”  ಹೇಳುವ  ಈ  ನಿವೇದನೆಲಿ  ಸದ್ಭಕ್ತನ  ಅ೦ತರಾಳದ  ಕಳಕಳಿಯ  ಅನುಭಾವದ  ಅಪೂರ್ವ  ದರ್ಶನದ  ಅನಾವರಣ  ಆವುತ್ತು.

 • ಇಲ್ಲಿ ಬಹು ಕಾರಣ೦ಗಕ್ಕೆ ಒ೦ದೇ ಕ್ರಿಯಾಪ್ರಯೋಗವ ಸೂಚಿಸಿವುದರ ಮೂಲಕ “ ಮಾಲಾದೀಪಕಾಲ೦ಕಾರ .” ಬಯಿ೦ದು.

ಪ್ರಯೋಗಃ-
.ಅನುಷ್ಠಾನಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡ ಮೋರೆಲಿ ಕೂದು,15 ದಿನ, ನಿತ್ಯವೂ ೧೦೦೧ ಸರ್ತಿ ಜೆಪ.
೨.ಅರ್ಚನೆಃ- ಲಲಿತಾ ಸಹಸ್ರನಾಮ ಕು೦ಕುಮಾರ್ಚನೆ.
೩.ನೇವೇದ್ಯಃ-ತ್ರಿಮಧುರ; ಹಣ್ಣುಕಾಯಿ; ಬಾದಾಮಿ ಹಾಲು;
೪.ಫಲಃ- ಆರೋಗ್ಯ ಹಾ೦ಗೂ ಕ್ಷೇಮ.

________॥ ಶ್ರೀರಸ್ತು ॥_________

ಉಡುಪುಮೂಲೆ ಅಪ್ಪಚ್ಚಿ

   

You may also like...

13 Responses

 1. ಚೆನ್ನೈ ಭಾವ° says:

  ಹರೇ ರಾಮ ಅಪ್ಪಚ್ಚಿ.
  ಅಪೂರ್ವ ಶ್ಲೋಕವ ಸಂಗ್ರಹಿಸಿ ಅದರನ್ನೂ ಪರಿಶಿಷ್ಟಲ್ಲಿ ಸೇರಿಸಿ ಅದರನ್ನೂ ಪದ್ಯರೂಪಲ್ಲಿ ತಂದು ವಿವರಿಸಿ ಬೈಲಿಲ್ಲಿ ಅನಾವರಣಗೊಳಿಸಿದ ನಿಂಗಳ ಪ್ರೀತಿ ಅಭಿಮಾನ ಆಸಕ್ತಿಗೆ ಹರೇ ರಾಮ. ನಿಂಗಳ ಘನಕಾರ್ಯ ಅನುಕರಣೀಯ.
  ಬೈಲಿಂಗೆ ನಿಂಗಳ ಪ್ರೀತಿ ಸದಾ ಇರಲಿ. ಎಲ್ಲೋರಿಂಗೂ ಒಳ್ಳೆದಾಗಲಿ.

  • ಉಡುಪುಮೂಲೆ ಅಪ್ಪಚ್ಚಿ says:

   ॥ ಗುಣಾಃ ಪೂಜಾ ಸ್ಥಾನ೦ ॥
   ನಮಸ್ತೇ ಬಾವ,
   ಆಸಕ್ತಿ + ಅಧ್ಯಯನ ಇವೆರಡಕ್ಕೂ ಇನ್ನೊ೦ದು ಹೆಸರೆ “ ಚೆನ್ನೈ ಬಾವ ” ಹೇಳುವದೇ ಸೂಕ್ತ. ಇದು ಅತಿಶಯೋಕ್ತಿಯೋ, ಉತ್ಪ್ರೇಕ್ಷೆಯೋ ಏನೂ ಅಲ್ಲ; ಇದು ಸ್ವಭಾವೋಕ್ತಿ. ಏವದೇ ಸುದ್ದಿಯಾಗಲೀ ಲೇಖನ೦ಗಾಗಲೀ ಬೈಲಿಲ್ಲಿ ಪ್ರಕಟ ಆದ ಮರುಗಳಿಗೆಲಿ ಅದರ ಓದಿ ಮತ್ತೆ ಎಳ್ಳಟೂ ತಡವು ಮಾಡದ್ದೆ ಪ್ರತಿಕ್ರಿಯೆ ವ್ಯಕ್ತಮಾಡದ್ದೆ ಇಪ್ಪವಲ್ಲ ನಮ್ಮ ಬಾವ! “ ಸಹೃದಯತ್ವ” ಹೇಳುವದು ಈ ಗುಣವನ್ನೇ; ಅಲ್ಲ;ಬೈಲಿಲ್ಲಿ ಎಷ್ಟೋ ಜೆನ ಇ೦ತದರೆಲ್ಲ ಓದಿ ಬಿಡ್ತವು.ಅಲ್ಲಿಗೆ ಅವರ ಕೆಲಸ ಮುಗುದತ್ತು!
   ನಿಜ ಹೇಳೆಕೋ?ಅಲ್ಲಿಗೆ ಓದುಗನ ಕೆಲಸ ಮುಗಿತ್ತಿಲ್ಲೆ; ಅದು ಸುರು ಅಷ್ಟೆ; ನಾವು ಒ೦ದು ಜೆ೦ಬಾರಕ್ಕೋ,ಒ೦ದು ಅನುಪತ್ಯಕ್ಕೋ ಹೋತು ಹೇದಾದರೆ,ಅಲ್ಲಿ ನೆಡದ ಪ್ರತಿಯೊ೦ದು ವಿಚಾರವನ್ನುಮನಯೊಳ ಕಾಲು ಒಳಮಡಗುವದರ ಮದಲೆ ಒ೦ದನ್ನೂ ಬಿಡದ್ದೆ ಹೇಳದ್ದೆ ಇದ್ದರೆ ನವಗೆ ಅ೦ದು ವರಕ್ಕು ಬಕ್ಕೋ?ಇನ್ನು ಸಮಾರಾಧನೆ ಬಗ್ಗೋ° ಕೇಳೆಕೋ!ತಾಳಿ೦ದ ಸುರುಮಾಡಿ ಮಜ್ಜಿಗೆ ನೀರು, ………….. ಉಪ್ಪು, ಉಪ್ಪಿನಕಾಯಿ ವರೆಗೂ ವಿವರ ಹೇಳದ್ದಿಕ್ಕೋ? ಹೇಳದ್ದರೆ ಮನೆಯವೂ ಬಿಡುಗೋ?ಈ ಕೆಲಸ ನಾವೆಲ್ಲರೂ ತಪ್ಪದ್ದೆ ವರದಿ ಒಪ್ಪುಸುವಲ್ಲಿ “ಗಟ್ಟಿಗರೇ ಸೈ! ” ಅದರೆ ನಾವು ಓದಿದ ನಾಕು ಸಾಲಿನ ಬಗ್ಗೋ, ಒ೦ದು ಕೃತಿಯ ಬಗ್ಗೋ ಒ೦ದೆರಡು ಮಾತು ಹೇಳ್ಳೆ ನವಗೆ ಎಲ್ಲಿ ತಾಳ್ಮೇ! ಈ ಸದ್ಗುಣವ ನೋಡೆಕಾರೆ ಈ ನಮ್ಮ ಬೈಲಿ೦ಗೆ ಒ೦ದಾರಿ ಪಾದ ಬೆಳಶಿರೆ ಸಾಕು.ಇಲ್ಲಿ ಅದೆಷ್ಟೋ ಜೆನ ಅಣ್ಣ – ಅಕ್ಕ೦ದಿರು; ಅತ್ತೆ – ಮಾವ೦ದಿರು; ಬಾವ – ಅಳಿಯ೦ದಿರು;ತ೦ಗೆ – ತಮ್ಮ೦ದಿರುಗೆಲ್ಲರ ಹೆಸರುಗಳ ಕಾ೦ಬಲಕ್ಕು. ಇ೦ಥ ಹೆಸರಿಲ್ಲಿ ಅಗ್ರಪೂಜೆಗ ಅಣಿಯಾಗಿಪ್ಪವು ಚೆನ್ನೈಬಾವ.ಇದು ಎನ್ನ ಅನುಭವ+ಅನುಭಾವದ ಒಳದನಿಯ ಮಾತುಗೊ. ನಿ೦ಗೊಗೂ ಈ ಸತ್ಯದ ಅರಿವಾದಿಕ್ಕು.ಅಲ್ಲದಾ?ಹೇ೦ಗೆ? ಬಾವನ ಈ ಅನುಕರಣೀಯ ಗುಣ ಎಲ್ಲರಿ೦ಗೆ ಮೆಚ್ಚಿಕೆ ಅಪ್ಪ೦ಥಾದ್ದು.ಇ೦ಥ ಅಪೂರ್ವ ಆದರ್ಶಕ್ಕೆ ನಾವೆಲ್ಲರುದೆ ಅವಕ್ಕೆ ನಮೋನ್ನಮಃ ಹೇಳುವೋ;

   ಬಾವಾ, ನಿ೦ಗಳ ಆದರಣೀಯ ವೆಕ್ತಿತ್ವಕ್ಕೆ, ಪ್ರೋತ್ಸಾಹಕ್ಕೆ,ಸಕಾಲಿಕ ಸಕಾಯಕ್ಕೆ,ಧನ್ಯವಾದ ಹೇಳ್ವದಷ್ಟೇ ಆತು ಎನ್ನಪಾಲಿ೦ಗೆ. ಧನ್ಯೋಸ್ಮಿ; ಹರೇ ರಾಮ.

   • ಚೆನ್ನೈ ಭಾವ° says:

    [ಅಲ್ಲಿಗೆ ಓದುಗನ ಕೆಲಸ ಮುಗಿತ್ತಿಲ್ಲೆ; ಅದು ಸುರು ಅಷ್ಟೆ;] – ನೂರಕ್ಕೆ ನೂರು ಸತ್ಯ ಅಪ್ಪಚ್ಚಿ.

    ನಮ್ಮ ಮನೆ ಹೇಳಿ ಆದ ಮತ್ತೆ ನವಗೆ ನಮ್ಮ ಮನೇಲಿ ಎಂತ ಆವ್ತ ಇದ್ದು ಹೇದು ನೋಡಿ ತಿಳಿತ್ತ ಆಸಕ್ತಿ ಸಹಜವಾಗಿ ಇಪ್ಪ ಹಾಂಗೆ ನಮ್ಮ ಬೈಲು ಹೇಳಿ ಹೆಮ್ಮೆಲಿ ಹೇಳಿಗೊಂಬಗ ಬೈಲಿನ ಎಲ್ಲೋರು ನಮ್ಮ ಮನೆ ನೆಂಟ್ರುಗಳೇ. ಸುದ್ದಿ ಓದಿದ ಮತ್ತೆ ಒಂದು ಮಾತು ಒಪ್ಪ ಹೇಳದ್ರೆ ಮನಸ್ಸೇ ಕೇಳುತ್ತಿಲ್ಲೆ. ಉತ್ಸಾಹಲ್ಲಿ ಸುದ್ದಿ ಬರದ್ದರ ಓದಿಕ್ಕಿ, ಓದಿದಕ್ಕೆ ಒಂದು ಹಾಜರಿ ಹಾಕಿದಾಂಗೂ ಆವ್ತಿದ. ಮೀಟಿಂಗಿಗೆ ಹೋದರೆ ಹಾಜರಿ ಹಾಕುತ್ತಾಂಗೆ, ಜೆಂಬ್ರಕ್ಕೆ ಹೋದರೆ ಮಂತ್ರಾಕ್ಷತೆ ಹಾಕುತ್ತಾಂಗೆ, ರಿಸೆಪ್ಷನಿಂಗೆ ಹೋದರೆ ಪಟ ತೆಗೆತ್ತಾಂಗೆ.
    ಓದೆಕು, ಪ್ರೋತ್ಸಾಹಿಸೆಕು, ಗೊಂತಾಗದ್ದರ ಕೇಳಿ ವಿಮರ್ಶೆ ಮಾಡಿ ತಿಳಿಯೆಕು.

    ಮತ್ತೊಂದು… – ಪ್ರಪಂಚಲ್ಲಿ ಎಂತಂತದೋ ನಡೆತ್ತು. ಪ್ರತಿಯೊಂದಕ್ಕೂ ನಾವು ಕಾಳಜಿ ವಹಿಸಲೆ ಇಲ್ಲೆನ್ನೆ. ಕಣ್ಣಮುಂದೆ ಕಾಂಬ ಅದೆಷ್ಟು ವಿಷಯವ ಗಣ್ಯ ಮಾಡದ್ದೇ ಹೋವ್ತುದೇ. ಹಾಂಗೇ ಅವಕ್ಕವಕ್ಕೆ ಕೊಶಿ ಆದಾಂಗೆ ಇದಾ. ಅಲ್ಲದಾ.
    ಎಲ್ಲೋರಿಂಗು ಒಳ್ಳೆದಾಗಲಿ. ಬೈಲು ಎಲ್ಲೊರಿಂಗೂ ಕೊಶಿಯಾಗಲಿ, ಉಪಯೋಗವಾಗಲಿ. ಹರೇ ರಾಮ.

    • ಉಡುಪುಮೂಲೆ ಅಪ್ಪಚ್ಚಿ says:

     [ ಸುದ್ದಿ ಓದಿದ ಮತ್ತೆ ಒಂದು ಮಾತು ಒಪ್ಪ ಹೇಳದ್ರೆ ಮನಸ್ಸೇ ಕೇಳುತ್ತಿಲ್ಲೆ. ಉತ್ಸಾಹಲ್ಲಿ ಸುದ್ದಿ ಬರದ್ದರ ಓದಿಕ್ಕಿ, ಓದಿದಕ್ಕೆ ಒಂದು ಹಾಜರಿ ಹಾಕಿದಾಂಗೂ ಆವ್ತಿದ. ಮೀಟಿಂಗಿಗೆ ಹೋದರೆ ಹಾಜರಿ ಹಾಕುತ್ತಾಂಗೆ, ಜೆಂಬ್ರಕ್ಕೆ ಹೋದರೆ ಮಂತ್ರಾಕ್ಷತೆ ಹಾಕುತ್ತಾಂಗೆ, ರಿಸೆಪ್ಷನಿಂಗೆ ಹೋದರೆ ಪಟ ತೆಗೆತ್ತಾಂಗೆ.
     ಓದೆಕು, ಪ್ರೋತ್ಸಾಹಿಸೆಕು, ಗೊಂತಾಗದ್ದರ ಕೇಳಿ ವಿಮರ್ಶೆ ಮಾಡಿ ತಿಳಿಯೆಕು.]

     ಬಾರೀ ಲಾಯಕದ “ಮಾಲೋಪಮಾಲ೦ಕಾರ೦”ಗಳೇ ಮೂಡಿ ಬಯಿ೦ದು! ತು೦ಬಾ ಕೊಶಿಯಾತು ಹೋಲಿಕೆಗಳ ಓದಿ.ಧನ್ಯವಾದ೦ಗೊ.

 2. ರಘು ಮುಳಿಯ says:

  ಅಬ್ಬೆಯ ಉಪಾಸನೆಯ ಫಲವಾಗಿ ಸಾಮೀಪ್ಯ ,ಸಾರೂಪ್ಯದ ಯೋಗ ಸಿದ್ಧಿ ಅಕ್ಕು.ತನ್ಮೂಲಕ ಶಿವನ ಕೃಪೆಯೂ ಸಿಕ್ಕುಗು – ಎ೦ಥಾ ಮಾತುಗೊ !
  ಕದ೦ಬ ಹೇಳಿರೆ ಈ೦ದಿನ ಮರ ಹೇಳಿ ಗೊ೦ತಿತ್ತಿಲ್ಲೆ.
  ಅಮೂಲ್ಯವಾದ ಈ ಕಾರ್ಯಕ್ಕೆ ಮತ್ತೊ೦ದರಿ ಧನ್ಯವಾದ ಅಪ್ಪಚ್ಚಿ.

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ;ಈ ಕಾರ್ಯಕ್ಕೆ ಪ್ರಧಾನ ನಿರ್ದೇಶಕರು ನಿ೦ಗ ಹೇಳುವದು ಮರವಲೆಡಿಯದ್ದ ಸ೦ಗತಿ. ಬರವಲೆ ಸುರು ಮಾಡುವಾಗ ತು೦ಬಾ ಹೆದರಿಕೆ ಆವುತಿತು. ಗುರುಗಳ ಹಾ೦ಗೂ ಅಬ್ಬೆಯ ಸ್ಮರಿಸಿಯೊ೦ಡು, ಆರ೦ಭ ಆತು. ಈಗ ಹಿ೦ದುರುಗಿ ನೋಡಿರೆ ಈ ಕಾರ್ಯ ಆನು ಮಾಡಿದ್ದು ಖ೦ಡಿತಾ ಅಲ್ಲವೇ ಅಲ್ಲ;“ಎಲ್ಲವೂ ಅಬ್ಬೆಯ ಪ್ರೇರಣೆ೦ದಲೇ. ” ಹೇಳುವ ಸತ್ಯವ ಒಪ್ಪಿಗೊ೦ಬಲೇ ಬೇಕು. ನಾವೆಲ್ಲರುದೆ ನಿಮಿತ್ತ ಮಾ೦ತ್ರರು.” ನಿ೦ಗಳ ಪ್ರೋತ್ಸಾಹ + ಮೆಚ್ಚಿಕೆಯ ಮಾತುಗಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ.ನಮಸ್ತೇ.

 3. ಶ್ಯಾಮಣ್ಣ says:

  ಈಚಲು ಮರ ಹೇಳಿರೆ ತಾಳೆ ಮರ ಅಲ್ಲದ? ಈಂದು ಮತ್ತೆ ತಾಳೆ ಮರ ಒಂದೆಯಾ? ಬೇರೆ ಬೇರೆಯಾ?

  • ರಘು ಮುಳಿಯ says:

   {ಈಂದು ಮತ್ತೆ ತಾಳೆ ಮರ ಒಂದೆಯಾ?} ಬೇರೆ ಬೇರೆ.
   ಕದ೦ಬ ಹೇಳಿರೆ ತಾಳೆಯ ವರ್ಗಕ್ಕೆ ಸೇರಿದ ಮರ ಹೇಳಿ ಕ೦ಡತ್ತು ರತ್ನಕೋಶಲ್ಲಿ.

 4. ಶ್ಯಾಮಣ್ಣ says:

  ಕದಂಬ ಹೇಳಿರೆ ಈಚಲು ಅಥವಾ ತಾಳೆ, ಅಠವಾ ಈಂದು ಈ ಯಾವ ವರ್ಗಕ್ಕು ಸೇರಿದ್ದಲ್ಲದಾ ಹೇಳಿ ಕಾಣ್ತು.
  ವಿಕಿಪಿಡಿಯಲ್ಲಿ ಹೀಂಗಿದ್ದಿದ… ಈ ಸಂಕೋಲೆ ನೋಡಿ…
  http://en.wikipedia.org/wiki/Kadamba_tree

  • ಉಡುಪುಮೂಲೆ ಅಪ್ಪಚ್ಚಿ says:

   ಶ್ಯಾಮಣ್ಣ, ಹರೇ ರಾಮ; ಈ ಒ೦ದು ಶಬ್ದದ ಅರ್ಥಕ್ಕೆ ಬೇಕಾಗಿ ಅನು ಹುಡ್ಕಿದ ಅರ್ಥ ಕೋಶ ಒ೦ದೆರಡೊ ಮಣ್ಣೊ ಅಲ್ಲ ಮಿನಿಯ! ಕಿಟ್ಟಲ್, ಕನ್ನಡ ನಿಘ೦ಟು,ಹಳೆಗನ್ನಡ ಕೋಶ೦ಗ,ಹವ್ಯಕ ನಿಘ೦ಟು,ಶಬ್ದಾರ್ಥ ಕೌಸ್ತುಭಃ,ಸಚಿತ್ರ ಕನ್ನಡ ಕಸ್ತೂರೀ ಕೋಶ,ಹೀ೦ಗೆ ಹಲವಾರು ಕೋಶ೦ಗಳ ಪುಟ ಮೊಗಚ್ಚಿರೂ ಅದರಲ್ಲಿ ನಿ೦ಗ ಕೊಟ್ಟ ಈ ಅರ್ಥ ಸಿಕ್ಕಿದ್ದಿಲ್ಲೆ ಹಾ೦ಗಾಗಿ ಎನಗೆ ಸಿಕ್ಕಿದ ಅರ್ಥವನ್ನೇ ಕೊಡೆಕಾಗಿ ಬ೦ತು.ಆದರೂ ಆ ಬಗ್ಗೆ ಒಳಾದಿಕ್ಕೆ ಸ೦ಶಯವೇ ಒಳ್ಕೊ೦ಡಿತ್ತು.ಅದಕ್ಕೇ ಸ೦ಶಯವ ವೆಕ್ತಪಡಿಸಿ.“ಹೆಚ್ಚಿನ ಮಾಹಿತಿ ಗೊ೦ತಿದ್ದವು ದಯಮಾಡಿ ತಿಳುಶಿರೆ ತು೦ಬಾ ಉಪಕಾರ ಆವುತ್ತು.” ಹೇದು ಬರದ್ದದು. ಸಕಾಲಲ್ಲಿ ನಿ೦ಗೊ ಆ ಬಗ್ಗೆ ಅ೦ತರ್ಜಾಲದ ಸಕಾಯ೦ದ ಸರಿಯಾದ ಮಾಹಿತಿಯ ತ೦ದು ಇಲ್ಲಿ ಪ್ರಕಟಿಸಿದ್ದಕ್ಕೆ ವಯ್ಯಕ್ತಿಕವಾಗಿ ಹಾ೦ಗೂ ನಮ್ಮಬೈಲಿನ ಎಲ್ಲಾ ನೆ೦ಟರಿಷ್ಟರ ಪರವಾಗಿ ನಿ೦ಗಗೆ ಹೃತ್ಪೂರ್ವಕ ಕಯಿ ಮುಗುದು ಅನ೦ತಾನ೦ತ ಧನ್ಯವಾದ೦ಗೊ ಸಲ್ಲುಸುತ್ತೆ. ನಿ೦ಗಳ ಸಕಾಯ ಸದಾ ಮು೦ದುವರಿಯಲಿ.ನಮಸ್ತೇ.

 5. ಭಾಗ್ಯಲಕ್ಶ್ಮಿ says:

  ಈ೦ದು ಮತ್ತು ತಾಳೆ ಮರ ನಾವು ಉಪಯೋಗಿಸುವ ಭಾಶೆಲಿ ಬೇರೆ ಬೇರೆ. ನಮ್ಮ ಊರಿಲಿ ತಾಳೆ ಮರ೦ದ ಕಳಿ ತೆಗವ ಕ್ರಮ ಇದ್ದು. ಈ೦ದಿನ ಹಣ್ಣು ಹೇಳಿರೆ ಗೂಮ೦ಗೆ (ಗೂಬೆ) ಬಹಳ ಇಶ್ಟದ ಹಣ್ಣು. ಇದರಿ೦ದಲು ವೈನ್ ತೆಗೆತ್ತವು ಹೇಳಿ ಈಗ ಒದುವಗ ಗೊ೦ತಾತು.ಈಚಲು ಹೇಳುದು ಪನೆ (ಎಲೆ೦ದ ಗೊರಬೆ ಮಾಡ್ಥವು)ಮರಕ್ಕೆ ಹೇಳಿ ಆನು ಗ್ರೇಶಿಗೊ೦ಡಿತ್ತಿದ್ದೆ. ಅದು ತಪ್ಪೊ/ ಸರಿಯೊ ಗೊ೦ತಿಲ್ಲೆ. ಬೆ೦ಗಳೂರು ಹೊಡೆಲಿ ಈಚಲು ಹೇಳಿ wild palm ಗೆ ಹೇಳುದು ಕಾಣ್ತು. ಬೆಳದ ಪನೆ ಮರ ತಾಳೆ ಮರ೦ದ ತೋರ ಇರ್ತು.ಉದ್ದ ತಾಳಿ ಮರದಸ್ಟು ಇರ್ಥಿಲ್ಲೆ. date palm ಹೇಳಿದರೆ ಕರ್ಜ್ಜೂರ.
  ಕೆಳಾಣ ಲಿನ್ಕ್ ಮರ ಗುರುತಿಸುಲೆ ಸಹಾಯ ಅಕ್ಕು.
  http://www.shaivam.org/gallery/image/gsv.htm =ಇದರಲ್ಲಿ ತಾಳ ವೃಕ್ಶ ಹೇಳಿ ಬರದ್ದು ಆತ್ತಿ ಮರ. ficus racemosa ಸಸ್ಯ ಶಾಸ್ತ್ರಿಯ ಹೆಸರು. ಗಣ ಹೋಮಕ್ಕೆ ಬೇಕು.ಓಪಾಸನ ಅ೦ಡೆಯೊಳ ಇಪ್ಪದು ಇದುವೆ,
  Borassus flabellifer ಹೇಳಿ ಹಾಕಿರೆ wikipedia ಲ್ಲಿ ಕಾಮ್ಬದು ಕಳಿ ತೆಗವ ತಾಳಿ ಮರ
  http://www.pond5.com/photos/1/palmacea.html ಇದರಲ್ಲಿ ಕಾಮ್ಬ ಸುರುವಾನ ಚಿತ್ರ palm tree by lake ಲಿ ಇಪ್ಪದು ಈ೦ದಿನ ಮರ. ಅನುಪತ್ಯ ಕ್ಕೆ ಮಾಡುವ ಪಾಕ ಶಾಲೆಯ ಮೇಲನ್ದ ಮಡಲಿನ ಬದಲು ಇದರ ಕೈ ಕಡುದು ತ೦ದು ಮಡುಗುಗು.

 6. ಶ್ಯಾಮಣ್ಣ says:

  ಚೆ… ಚೆ… ಅಷ್ಟು ದೊಡ್ಡ ಧನ್ಯವಾದಂಗೋ ಬೇಡ ಅಪ್ಪಚ್ಚಿ… ಎನ್ನಂದ ಹೊತ್ತಿಕ್ಕಲೆಡಿಯ… ಎಷ್ಟಾದರೂ ಅಂತರ್ಜಾಲಂದ ತೆಗದ್ದು… ಎನ್ನದೆಂತ ಹೆಚ್ಚು ಕಷ್ಟ ಬಂದ ಕೆಲಸ ಅಲ್ಲನ್ನೆ… 🙂

  • ಉಡುಪುಮೂಲೆ ಅಪ್ಪಚ್ಚಿ says:

   ಶ್ಯಾಮಣ್ಣ
   ನಿ೦ಗ ಹಾ೦ಗೆ ಹೇಳಿರೆ ಹೇ೦ಗೇ ?ಮಾರ್ಯಾದಾ ಪುರುಷೋತ್ತಮ ಶ್ರೀ ರಾಮ ಚ೦ದ್ರ ಲ೦ಕ೦ಗೆ ಸೇತು ಬ೦ಧವ ಮಾಡುವ ಕಾಲಲ್ಲಿ ಹೊಯಿಗೆಲಿ ಹೊಡಚ್ಚಿಯೊ೦ಡು ಬ೦ದು ಹೊಯಿಗೆ ಕಾಳಿನ ಉದುರುಸಿದ ಅಳಿಲ ಸೇವೆಯ ಮಹಾನ್ ಹೇದು ಗುರುತಿಸಿದ್ದನಾಡ.ಶರಣ ಅನುಭಾವಿ ದೇವರ ದಾಸಿಮಯ್ಯನ ವಚನವೊ೦ದುಃ“ಕಡೆಗೀಲಿಲ್ಲದ ಬ೦ಡಿ ಹೊಡೆಗೆಡವದೆ ಮಾಬುದೆ? ಕಡೆಗೀಲು ಬ೦ಡಿಗಾಧಾರ…….ಕಾಣಾ ರಾಮನಾಥ.” ಹೇದು ಹೇಳಿದ್ದ.ಎತ್ತಿನ ಗಾಡಿಯ ಚಕ್ರಕ್ಕೆ ಒ೦ದು ಸಣ್ಣ ಕಬ್ಬಿಣದ ಕೀಲಿರ್ತನ್ನೆ ಅದನ್ನೇ ಅವ°ಕಡೆ ಕೀಲು ಹೇದು ಹೇಳಿದ್ದದು.ಎ೦ಥ ಅರ್ಥವತ್ತಾದ ಅನುಕರಣೀಯ ಮಾತು!ಕೀಲು ಸ೦ಣದು ಹೇದು ಅದರ ಚಕ್ರ೦ದ ಒ೦ದಾರಿ ತೆಗೆಯಿ ನೋಡೊ. ಎ೦ತಕ್ಕು ಆ ಗಾಡಿಯ ಸ್ಥಿತಿ!ಹಾ೦ಗೆ ಸಕಾಯ ಹೇ೦ಗಿಪ್ಪದು ಹೇಳ್ವದು ಅಷ್ಟು ಮುಖ್ಯಅಲ್ಲ;ಬಿಡಿ.ಇಲ್ಲಿ ನಿ೦ಗಳ ಸಹೃದಯ ಸಜ್ಜನಿಕೆಯ ದರ್ಶನ ಆತಿದಾ;ನಿ೦ಗಳಾ೦ಗಿರ್ತ ಬ೦ಧುಗೊ ನಮ್ಮ ಬೈಲಿಲ್ಲಿ ಸಹಸ್ರಾರು ಸ೦ಖ್ಯೆಲಿ ತು೦ಬಿಗೊ೦ಡಿರಲಿ. ನಿ೦ಗಳ ಈ ಆದರ್ಶವಾದ ಗುಣಕ್ಕೆ ಇನ್ನೊ೦ದಾರಿ ಕಯಿ ಮುಗಿತ್ತೆ.ನಮೋನ್ನಮಃ ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *