ಪಾರುವ ಸ್ವಗತ

ಮಕ್ಕೊಗೆ ದೊಡ್ರಜೆ ಮುಗಾತು.ಶಾಲೆ ಶುರುವಾತು, ಹೇದರೆ ಎನಗೆ ಯೇವತ್ರಾಣ ತಲೆಬೆಶಿಯೂ ಶುರುವಾತು.ಉದಿ ಉದೀಯಪ್ಪಗ ಎದ್ದು ಮಕ್ಕಳ ಮದ್ಯಾನ್ನಕ್ಕೆ ಊಟಕ್ಕಿಪ್ಪದರ – ಚಪಾತಿಯೋ,ಲೆಮನ್ ರೈಸೋ,ಪುಲಾವೋ ಯೇನಾರೊಂದು ಮಾಡೆಕ್ಕು.  ಮಕ್ಕೊಗಿಪ್ಪದು ಮಕ್ಕಳ ಅಪ್ಪಂಗಾಗ,ಅವಕ್ಕೆ ಪ್ರತ್ಯೇಕ ಅಶನ ಸಾಂಬಾರೋ, ಮೇಲಾರವೋ ಆಯೆಕ್ಕಾವುತ್ತು.ಎಡೆಲಿ ಮಕ್ಕಳ ಎಬ್ಬುಸಿ, ಅವಕ್ಕಿಪ್ಪ ಬೆಶಿ ನೀರು ಬಿಟ್ಟು,ನಾಕು ನಾಕು ಸರ್ತಿ ಮೀವಲೆ ಹೇಳೆಕ್ಕು.ಊದುವ ಶಂಖ ಊದದ್ರೆ ಆರೂ ಹಂದುತ್ತವಿಲ್ಲೆ, ಹ್ಹು. ಎಡೆ ಹೊತ್ತಿಲಿ ಎನಗೂ ಒಂದು ಚಾ ಮಾಡಿ ಕುಡಿಯದ್ರೆ ಕೈ ಕಾಲು ದರುಸುಲೆ ಶುರುವಾವುತ್ತು. ಓ ಅಂದು ಲಾಗಾಯ್ತು ಇವರದ್ದು ವ್ಯಾಯಾಮ ಶುರುವಾಯಿದು. ಶುರು ಮಾಡೆಕ್ಕಾರೆ ಮದಲೊಂದು ಗ್ಲಾಸು ನಿಂಬೆಹುಳಿ ಜ್ಯೂಸು ಉಪ್ಪು ಹಾಕಿ  ಕುಡುದರೆ ಬೊಜ್ಜು ಕರಗಲೆ ಒಳ್ಳೆದು ಹೇಳಿ ಆರೋ ಒಬ್ಬ ಪುಣ್ಯಾದಿಗ ಇವರ ಕೆಮಿ ಕುತ್ತಿದ್ದ. ಇವಕ್ಕದು ದಿನಾ ಆಯೆಕ್ಕು. ಹತ್ತರೊಟ್ಟಿಂಗೆ ಹನ್ನೊಂದರ ಹಾಂಗೆ, ಎನಗೆ ಕೆಲಸ ಕಮ್ಮಿ ಆಗದ್ದಕ್ಕೆ ಇದೊಂದು ಸೇರಿಗೊಂಡಿದು ಈಗ. ಆನು ಹಿಡುದ ಕೆಲಸವ ಬಿಟ್ಟು ಇನ್ನೊಂದಕ್ಕೆ ಕೈ ಹಾಕೆಕ್ಕು, ಅದು ಮುಗಿವಾಗ “ಬೈರಾಸಿಲ್ಲ್ಲೆ” ಹೇಳಿ ಸಣ್ಣವ ಮೀವಲ್ಲಿಂದ ಕೂಗಿರೆ ಎದ್ದು ಬಂದು ಕೊಡೆಕ್ಕು. ಎಲ್ಲವನ್ನೂ ಮಾಡಿ ಪೂರೈಸುವಗ ಎನಗೆ ಬೊಡಿಯಪ್ಪ ಆವುತ್ತು. ಇವರ ವ್ಯಾಯಾಮ ಆಗಿ,ಮೀಯಾಣ ಮುಗುದು, ಜೆಪ ಶುರುವಾದರೆ ಬೇರೆ ಎಂತದಕ್ಕೂ ಪುರ್ಸೊತ್ತೇ ಇಲ್ಲೆ. ಸ್ಟೋವಿಲಿಪ್ಪದರ ಒಂದರಿ ತೊಳಸುಲೋ,ಹಾಲು ಕೊದ್ದರೆ ಕಿಚ್ಚು ಹದ ಮಾಡುಲೋ ಯೇವುದಕ್ಕೂ ತಲೆ ಹಾಕವು. ಪುರ್ಸೊತ್ತು ಇದ್ದು ಹೇಳಿ ಗ್ರೇಶಿ ಈಚಿಕೆ ಕೂದೊಂಡು ಚಪಾತಿ ಲಟ್ಟುಸುತ್ತಲ್ಲಿಂದ ಹಾಂಗೆ ಹೇಳಿದನೋ,ಎನ್ನ ಕೆಮಿಯೇ ಅಲ್ಲ ಹೇಳಿ ಪೇಪರು ಬಿಡುಶಿ ಸೋಫಲ್ಲಿ ಕೂರ್ತವು – ಆರ ಅಂಡೆ ಬೆದುರ ದಾಣೆ . ಅಕೇರಿಗೆ ಆನೇ ಕಾಪಿ ತಿಂಡಿಯ ಕೈಗೆ ಹಿಡುಶೆಕ್ಕಿದ.

ಮಕ್ಕೊ ಶಾಲೆಗೆ ಹೋದ ಬೆನ್ನಾರೆ ಇವುದೇ ಆಫೀಸಿಂಗೆ ಹೆರಡ್ತವು. ಮತ್ತೆ ಆನು ಎನ್ನಷ್ಟಕ್ಕೆ ನಿತ್ಯ ಕೆಲಸ ಎಲ್ಲ ಮುಗುಸೆಕ್ಕಿದ.ಮಕ್ಕಳೂ, ಇವುದೇ ಇಪ್ಪಗ ಯೇನಾರೊಂದು ಬಾಯಿ ಆಡ್ಸಿಗೊಂಡಿದ್ದರೆ ಕೆಲಸ ಮುಂದೆ ಹೋವುತ್ತದೇ ಗೊಂತಾವುತ್ತಿಲೆ. ಒಬ್ಬನೇ ಇಪ್ಪಗ ಎಷ್ಟೇ ನಿಧಾನಲ್ಲಿ ಕೆಲಸ ಮಾಡಿರೂ ಸಮಯ ಹೋವುತ್ತೇ ಇಲ್ಲೆ. ಸಣ್ಣಾಗಿಪ್ಪಗ ಮಕ್ಕೊ “ಅಮ್ಮ…ಅಮ್ಮ” ಹೇಳ್ಯೊಂಡು ಸುತ್ತು ಬಂದುಗೊಂಡಿತ್ತಿದ್ದವು, ಈಗ ಅವಕ್ಕೂ ಅಪ್ಪನ ಗಾಳಿ ತಾಗಿದ್ದು. ಹಾಂಗೇಳಿ ಸುಮ್ಮನೆ ಕೂಪಲಿಲ್ಲೆ, ಮಕ್ಕೊ ಶಾಲೆಗೆ ಹೋಪನ್ನಾರ ಅವರ ಬಾಯಿಗೆ ಕೋಲು ಹಾಕಿಗೊಂಡಿಪ್ಪದು.  ಇವರ ಬಾಯಿ ಬಿಡುಸೆಕ್ಕಾರೆ ಇಪ್ಪ  ಕೆಣಿ ಎನ ಗೊಂತಾಯಿದು.ಮಾಂತ್ರ ಅಲ್ಲ, ಕೆಲಾವು ಸರ್ತಿ ಪ್ರಯೋಗ ಮಾಡಿಯೂ ಆಯಿದು.ಚಾಯಕ್ಕೆ ಸಕ್ಕರೆ ಕಮ್ಮಿ ಹಾಕಿ ಕೊಟ್ರಾತು,ದೆನುಗೇಳ್ತವು. ಒಂದರಿ ಇವರತ್ತರೆ ಹೇಳಿಯೂ ಬಿಟ್ಟಿದೆ, ಒಂದಕ್ಷರ ಎನ್ನತ್ರೆ ಮಾತಾಡಿ ಹೇಳಿಯೇ ಹಾಂಗೆ ಮಾಡೊದು ಹೇಳಿ. “ಯೆಪ್ಪ, ನಿನ್ನ ಎರಟೆ ಬೆಳವೇ.!?” ಹೇಳಿ ಕೋಪುಸಿ ಹಾರ್ತವು. ಅಷ್ಟಪ್ಪಗ ಪೇಪರು ಓದೊದೂ ನಿಲ್ತು.ಮತ್ತೆ ಹೋಪನ್ನಾರ ಏನಾರೊಂದು ಮಾತು ಹೆರಡ್ತು!!! ಅಲ್ಲದ್ದರೆ,” ಎಂತ ಇದ್ದು ಬೇಕನ್ನೆ ಮಾತಾಡ್ಲೆ..?” ಹೇಳಿ ಗುಮಾನ ಇಲ್ಲದ್ದೆ ಕೂರ್ತವು.

ಇದರ್ಲಿ ಅಪ್ಪಲೆ ಹೋಪಲೆ ಎಂತ್ಸೂ ಇಲ್ಲೆ – ಇವೆಲ್ಲೋರು ಹೆರಟು ಹೋಪನ್ನಾರ ಹೊತ್ತು ಹೋಪದೇ ಗೊಂತಾಗ, ಒಬ್ಬನೇ ಇಪ್ಪಗ ಹೊತ್ತೇ ಹೋಗ. ಹಾಂಗಾಗಿ, ಕೆಲವು ಸಣ್ಣ ಸಣ್ಣ ಕೆಲಸ -ಕರೆಂಟು ಬಿಲ್ಲು ಕಟ್ಟೊದು,ಬೇಂಕಿನ ಕೆಲಸ,ಪೋಸ್ಟಾಫೀಸಿಂಗೆ ಹೋಪದು – ಹೀಂಗಿರ್ಸದರ ಮಾಡ್ಲೆ ಇವಕ್ಕೆ ಕಾವಲಿಲ್ಲೆ ಆನೇ ಪೂರೈಸೊದು, ಆಚಾರಕ್ಕೂ ಆತು ಸುಖಕ್ಕೂ ಆತು ಹೇಳಿ ಸಮಯ ಕಳವಲೆ ಹೋದ್ದರಲ್ಲಿ ಒಂದು ಕೆಲಸ ಮಾಡಿ ಮುಗಿತ್ತನ್ನೆ. ಕೆಲವು ಸರ್ತಿ ಅಂತೆ ಒಂದರಿ ಹೋಗಿ ಬರೆ ಲಾಯಿಲೋಟು ಸಾಮಾನು ತಂದದೂ ಇದ್ದು.ಮತ್ತೆ ವಾಪಾಸು ಮನೆಗೆತ್ತಿರೆ ಮಾಡ್ಲೆ ಕೆಲಸ ಎಂತ ಇರ್ತಿಲೆ.ಉಡುಗಿ ಉದ್ದೊದು ಹೇಳಿ ಎಷ್ಟು ಸರ್ತಿ ಮಾಡ್ಲಿರ್ತು? ಬೇರೆಂತ ಇದ್ದು, ಕೂದೊಂಡು ಟೀವಿ ನೋಡೊದು.

ಸಾಮಾನು ಅಲ್ಪ ಇದ್ದತ್ತು ಹೇಳಿ ಆದರೆ ಇವರೊಟ್ಟಿಂಗೆ ಕಾರಿಲಿ ಹೋಪದು.ಅಲ್ಲಿಯೂ ಎನಗೆ ಯೇವಾಗಳೂ ಹಿಂದಾಣ ಸೀಟೇ ಗೆತಿ. ದೊಡ್ಡವ ದೊಡ್ಡ ಅಪ್ಪಲ್ಲಿವರೆಗೆ ಅದು ಅವನದ್ದಾಗಿತ್ತು, ಈಗ ಅವ ದೊಡ್ಡ ಆಯಿದ,ನಮ್ಮೊಟ್ಟಿಂಗೆ ಪೇಟೆ ತಿರುಗುಲೋ, ಸಾಮಾನು ತಪ್ಪಲೋ ಹೆರಡ್ತನೇ ಇಲ್ಲೆ. ಒಂದರಿ ಬಾ,ಎಂಗೊಗೆ ಉಪಕಾರ ಆವುತ್ತು ಹೇಳಿರೆ ಕೇಳೆಕ್ಕೆ.ಅವಂಗೆ ಅನವದ್ದೆ ಮರ್ಜಿ.ತನ್ನಿಚ್ಛೆಗೂ ಚಾಣೆ ತಲೆಗೂ ಮದ್ದಿಲೆಡ.ಹಾಂಗಾಗಿ ಆನೀಗ ಹೇಳೊದು ಬಿಟ್ಟಿದೆ.ಆದರೆ ಸಣ್ಣವ ಹೆರಡ್ತ, ಹಾಂಗಾಗಿ ಎದುರಾಣ ಸೀಟು ಈಗ ಅವನದ್ದು.ಇವು ಎಂತ ಮಾತಾಡ್ತವಿಲ್ಲೆ.ನಿಂಗೊ ಗೆಂಡು ಮಕ್ಕೊ ಎಲ್ಲ ಸೇರಿ ಎನ್ನ ಸಸಾರ ಮಾಡ್ತಿ ಹೇಳಿ ಒಂದೊಂದರಿ ಒದರುಲೆ ಇದ್ದು ಆನು.ಅದರಂದ ಎಂತ ಪ್ರಯೋಜನ ಇಲ್ಲೆ. ಹಿತ ಆಗದ್ದ ಮಾತು ಹೇಳಿದರೆ ಇವರ ಕೆಮಿಗೆ ಬೀಳ್ತೇ ಇಲ್ಲೆ ಇದಾ.

ನಿತ್ಯ ಹನ್ನೊಂದು ಗಂಟೆ ಕಳುದ ಮತ್ತೆ ಬೇರೆ ಯೇವ ಕೆಲಸವೂ ಬಾಕಿ ಇರ್ತಿಲೆ. ಕಾಲಕ್ಷೇಪ ಮಾಡ್ಲೆ ಏನಾದರೊಂದು ಆಯೆಕ್ಕನ್ನೆ. ಟೀವಿ ಎದುರು ಕೂದೊಂಡು ಆ ಚಾನೆಲ್ಲು, ಈ ಚಾನೆಲ್ಲು ಬದಲ್ಸಿಗೊಂಡೇ ಇಪ್ಪದು.ಯೇವುದಲ್ಯಾರು ಲಾಯ್ಕದ ಪ್ರೋಗ್ರಾಮು ಇದ್ದರೆ ನೋಡಿತ್ತು. ಎಂತ್ಸೂ ಇಲ್ಲದ್ದರೆ ಸಿನೆಮಂಗೊ ಇರ್ತನ್ನೆ ನೋಡ್ಲೆ, ಅದನ್ನೇ ಹಾಕಿ ನೋಡೊದು. ಒಂದು ಗ್ಲಾಸು ಚಾಯ ಮಾಡಿಕ್ಕಿ ಹಿಡ್ಕೊಂಡು ಕಾಲು ನೀಡಿ ಸೋಫಲ್ಲಿ ಕೂದೊಂಡು ಟೀವಿ ನೋಡ್ಲೆ ಲಾಯಕಾವುತ್ತಿದ. ಒಬ್ಬನೇ ಇಪ್ಪಗ ಎನಗೆ ಬೇಕಾದ್ದರ ಮಡಗುಲೂ ಆವುತ್ತು, ಅಲ್ಲದ್ದರೆ ಇವಕ್ಕೆ ನ್ಯೂಸು ನೋಡೆಕ್ಕಾವುತ್ತು, ಬಾಕಿ ಸಮಯ ಒಳುದರೆ ಮಕ್ಕೊಗೆ ಅವರದ್ದೇ ಇರ್ತು. ಮನ್ನೆ ಹೀಂಗೆ ಊರಿಂಗೆ ಹೋದಲ್ಲಿ ಅಪ್ಪನೊಟ್ಟಿಂಗೆ ಕೂದೊಂಡು ನೋಡೊಗ ಅವು ಹೇಳಿತ್ತಿದ್ದವು, ಮಲೆಯಾಳ ಸಿನಿಮಂಗೊ ಹೆಚ್ಚಿನದ್ದು ಬಾಯಿಪಾಠ ಆಯಿದಡ.ಒಂದು ಚಾನೆಲ್ಲಿಲಿ ನೋಡಿದ ಸಿನೆಮವೇ ಮರದಿನ ಮತ್ತೊಂದು ಚಾನೆಲ್ಲಿಲಿ ಬತ್ತು. ಬದಲ್ಸಿ ಬದಲ್ಸಿ ನೋಡುವಾಗ ನೋಡಿದ್ದದೇ ಎಷ್ಟು ಸರ್ತಿ ನೋಡಿದ್ದು ಹೇಳಿ ಲೆಕ್ಕ ಇರ್ತಿಲೆ.ಅಪ್ಪು, ಬೇರೆ ಎಂತರ ತೋರ್ಸೊದು ಹೇಳಿ ಬೇಕನ್ನೆ ಈ ಚಾನೆಲ್ಲಿನವಕ್ಕೆ.? ತೋರ್ಸಿದ್ದನ್ನೇ ತೋರ್ಸೊದು, ಹೇಳಿದ್ದನ್ನೇ ಹೇಳೊದು. ನ್ಯೂಸು ಚಾನೆಲ್ಲಿನವರ ಕತೆ ಹೇಳೊದು ಬೇಡ, ಎಲ್ಲೋರು ಕಿಸಬಾಯಿ ದಾಸಂಗಳೆ.!!!

ಅವಗುಣಲ್ಲಿ ಗುಣ ಎಂತ ಕೇಳಿರೆ ಆನು ಯೇವುದಾರೊಂದು ಚಾನೆಲ್ಲು ಮಡಗಿ ಕೂದರೆ ಎನಗೆ ಎನ್ನ ಹಳೆ ಸಂಗತಿಗಳ ಒಂದರಿ ನೆಂಪು ಮಾಡ್ಯೊಂಡು ಕೂಪಲಾವುತ್ತಿದ. ಹಳೆ ನೆಂಪುಗಳ ಜಾನ್ಸಿಗೊಂಬದು ಹೇಳಿರೆ ಅದರ ಅನುಭವಿಸಿದ್ದರಿಂದಲೂ ಹೆಚ್ಚಿಗೆ ಸುಖ ಆವುತ್ತಿದ.ಎನ್ನಷ್ಟಕ್ಕೆ ನೆಗೆ ಮಾಡಿರೂ ಆರೂ ಎನ್ನ ನೆಗೆ ಮಾಡ್ಲಿಲ್ಲೆ. ಮನ್ನೆ ದೊಡ್ರಜೆಲಿ ಊರಿಂಗೆ ಬಂದಿಪ್ಪಗ ಮನೆಲಿ ಸಣ್ಣಕ್ಕ ಹೇಳಿದ್ದದು ನೆಂಪಾವುತ್ತು.ಎನ್ನ ಸಣ್ಣಕ್ಕನ ಒತ್ತಿನ ಅಕ್ಕ ಇಪ್ಪದು ಎನ್ನ ಅಪ್ಪನ ಮನೆ ಹತ್ತರೆ. ಮನ್ನೆ ಇತ್ಲಾಗಿ ಸಣ್ಣಕ್ಕ ಅಲ್ಲಿಗೆ ಹೋದಲ್ಲಿ ಇವರ ಪೈಕಿ, ಹತ್ತರಾಣವೇನೂ ಅಲ್ಲ, ಅಂದರೂ ಇವಕ್ಕೆ ದೊಡ್ಡತ್ತೆ ಆಯೆಕ್ಕಡ – ಸಣ್ಣಕ್ಕನ ಮದುವೆಲಿ ನೋಡಿತ್ತಿದ್ದವಡ ಮತ್ತೆ ಈಗ ಕಾಂಬದು.ಹಾಂಗೆ ಕಂಡು “ಯೇ…ನಿನ್ನ ಗುರ್ತವೇ ಸಿಕ್ಕಿದ್ದಿಲೆ ಮೋಳೆ. ನಿನ್ನ ಬೆಂಡು ನೋಡಿ ನೀನೇ ಹೇದು ಗುರ್ತ ಹಿಡುದೆ” ಹೇಳಿದವಡ.ಮತ್ತೆ ಬಂದಿಕ್ಕಿ,ಆ ಶುದ್ಧಿಯೊಟ್ಟಿಂಗೆ ಇನ್ನು ಎನ್ನ ಬೆಂಡು ಬದಲ್ಸೆಕ್ಕಷ್ಟೆ ಹೇಳಿ ಸಣ್ಣ ಭಾವನೋರತ್ರೆ ಹೊಸ ಬೆಂಡಿಂಗೆ ಅರ್ಜಿ ಹಾಕಿದ್ದವಡ. ಆನು ಹಳತ್ತಾಯಿದೆ ಅದು ಬಿಡಿ,ಎನ್ನ ಬೆಂಡೂ ಹಳತ್ತಾಯಿದು ಹೇಳಿ ಎನ್ನ ಗಾಳಿಗೆ ಹಿಡಿವಲಕ್ಕೋ ಅವು.?. ಹಾಂಗೆ ಹೇಳುವಾಗ ಎನಗೆ ನೆಗೆ ತಡೆಯ.! ಗ್ರೇಶಿರೆ ಈಗಳೂ ನೆಗೆ ಬತ್ತು.

ಸಣ್ಣಕ್ಕನ ತಮ್ಮ,ವೆಂಕಟಣ್ಣ ಇದ್ದರೆ ಕುಶಾಲು ಗೌಜಿ ಮತ್ತಷ್ಟು ಜೋರಿರ್ತು.ಆರನ್ನು ಬೇಕಾರು ನಕಲು ಮಾಡುಗು.ಒಂದರಿ ಎನ್ನ ಮಂಗ ಮಾಡಿತ್ತಿದ್ದ, ಹಾಂಗೇಳಿ ಜೆನ ಗ್ರಾಸ್ತನೇ. ನಾಕು ವರ್ಷಕ್ಕೆ ಮದಲು ಸಣ್ಣ ಭಾವನೋರ ಮಗನ ಉಪ್ನಾನಲ್ಲಿ.ಸಭೆಲಿ ಆನು ಬಂದ ನೆಂಟ್ರುಗಳೊಟ್ಟಿಂಗೆ ಮಾತಾಡಿಗೊಂಡಿತ್ತಿದ್ದೆ. ಎನ್ನ ಹತ್ತರೆ ಖಾಲಿ ಕುರ್ಶಿಲಿ ಒಂದು ಅಜ್ಜಿ ಬಂದು ಕೂದತ್ತು. ಎನಗೆ ಗುರ್ತ ಇತ್ತಿಲೆ, ಕಾಂಬಲೆ ಕೆಂಪಜ್ಜಿದೇ ವಜಾಯ. ಕಾಫಿ ಬಣ್ಣದ ಮಗ್ಗ ಸೀರೆ ಸುತ್ತಿಗೊಂಡು ಸೆರಗಿನ ತಲೆವರೇಗೆ ಹಾಕಿ, ಬಾಯಿ ತುಂಬ ಎಲೆ ತುಂಬುಸಿಗೊಂಡು ಬಂದು “ಏನು ಪಾರು..?” ಹೇಳಿ ಎನ್ನ ಮಾತಿಂಗೆ ಎಳದತ್ತು. ಒಬ್ಬನೆಯೋ, ಗೆಂಡ ಬಯಿಂದನೊ,ಉಪ್ನಾನದ ಮಾಣಿ ಎಂತಾಯೆಕ್ಕು ನಿನಗೆ, ಅಪ್ಪನ ಮನೆ ಎಲ್ಲಿ – ಏನು ತಾನು ಹೇಳಿ ಒಕ್ಕುಲೆ ಶುರು ಮಾಡಿತ್ತು. ಅಪ್ಪನ ಹೆಸರು ಕೇಳಿಯಪ್ಪದ್ದೆ “ಬೇನೆಣ್ಣೆ ಮಾಡ್ತವಲ್ಲದ ಅವು, ಎನಗೆ ಗೊಂತಿದ್ದಪ್ಪ ಅವರ. ಎನಗೊಂದು ಸೊಂಟ ಬೇನೆ ಇದಾ ಓ ಇಲ್ಲಿ, ಸುಮಾರು ಸಮಯಂದ ಇದ್ದು.ನಿನ್ನ ಅಪ್ಪ ಒಂದಾರಿ ಎಣ್ಣೆ ಉದ್ದಿ ಗುಣ ಮಾಡ್ತವೋ ಏನೋ.?” ಹೇಳಿ ಶುರು ಮಾಡಿತ್ತು. ಈ ಅಜ್ಜಿದು ಮುಗಿತ್ತಿಲ್ಲೆ ಹೇಳಿ ಕಂಡತ್ತು.ಪಿಸುರುದೆ ಬಂತೆನಗೆ,ಎದ್ದಿಕ್ಕಿ ಆನು ನಡದೆ ಅಲ್ಲಿಂದ. ಇಷ್ಟೆಲ್ಲ ಆಗಿಯೊಂಡಿಪ್ಪದರ ಸಣ್ಣ ಭಾವನೋರು,ಇವು ಎಲ್ಲ ದೂರಂದಲೆ ನೋಡಿಯೊಂಡು ನೆಗೆ ಮಾಡ್ತವು.ಅದು ವೆಂಕಟಣ್ಣ ಅಜ್ಜಿ ವೇಷ ಹಾಕಿ ಸಭೆಲಿ ಸುತ್ತು ಬಂದು ಬಂದ ಹೆಮ್ಮಕ್ಕಳ ಮಾತಾಡ್ಸಿಗೊಂಡಿಪ್ಪದು ಹೇಳಿ ಸಣ್ಣಕ್ಕ ಸಣ್ಣಕ್ಕೆ ಎನ್ನ ಕೆಮಿಲಿ ಹೇಳಿದ ಮತ್ತೆ ಎನ್ನ ಪಿಸುರು ಕಮ್ಮಿ ಆದ್ದದು. ಆ ಹೊತ್ತಿಲಿ ಎನಗೆ ಪಿಸುರು ಬಂದರೂ ಈಗ ಅದರ ಜಾನ್ಸಿರೆ ನೆಗೆ ತಡವಲೆಡಿತ್ತಿಲೆ.

ಟೀವಿಲಿ ಅದರಷ್ಟಕ್ಕೆ ಎಂತದೋ ಆಯಿಕ್ಕೊಂಡಿದ್ದತ್ತು.ಎಡೆಲಿ “ಗೊರಿ ತೆರ ಗಾಂವು ಬಡಾ ಪ್ಯಾರಾ…”ಪದ್ಯ ಬಂತು.  ಹಿಂದಿ ಪದ್ಯಂಗಳಲ್ಲಿ ಎನಗೆ ಸರೀ ನೆಂಪಿಪ್ಪದು ಇದೊಂದೆ – ಮಾಳಿಗೆ ಮನೆ ದೂಮಾವತಿಗೂ ಈ ಪದ್ಯ ಆಯೆಕ್ಕಿದ,ಹಾಂಗಾಗಿ. ಪ್ರತೀ ವೊರಿಶವೂ ಅಲ್ಲಿ ದೂಮಾವತಿ ಕೋಲಲ್ಲಿ ವಾದ್ಯದ ಜೆನ ಪಾತ್ರಿಗೆ ದರ್ಸನ ಬಪ್ಪಲಪ್ಪಗ ಇದೇ ಪದ್ಯವ ಉರುಗೊದು. ಮದುವೆಗೆ ಮದಲು ಪ್ರತೀ ಸರ್ತಿಯೂ ಎನಗೆ ಹೋಪಲೆ ಸಿಕ್ಕಿಗೊಂಡಿದ್ದತ್ತು.ಮದುವೆ ಕಳುದ ಮತ್ತೆ ಮನ್ನೆ ರಜೆಲಿ ಹೋಗಿಪ್ಪಗ ಶುರೂ ಹೋದ್ದದು ಆನು.ಅಂದೆಲ್ಲ ಹೋಪಗ ಒಟ್ಟಿಂಗೆ ಶೋಬತ್ತಿಗೆ ಎನ್ನೊಂಟ್ಟಿಂಗೆ ಇಕ್ಕು.ಈ ಸರ್ತಿಯೂ ಹೋಗಿಪ್ಪಗ ಅತ್ತಿಗೆ ಇದ್ದತ್ತು, ಎನ್ನ ತಲೆಕೊಡಿ ಕಂಡಪ್ಪದ್ದೆ ಎದ್ದು ದೆನುಗೇಳಿತ್ತು.. ಗೊರಿ ತೆರ ಪದ್ಯ ಈಗಳೂ ದೂಮಾವತಿಗೆ ಇಷ್ಟವೋ ಕೇಳಿದೆ. ಈಗ ನಲಿಕ್ಕೆ ಜೆನವೂ ಬದಲಿದ್ದು,ವಾದ್ಯ ಉರುಗುತ್ತದೂ ಹೊಸಬ್ಬನಡ. ಹಾಂಗಾಗಿ ದೂಮಾವತಿಗೆ ಹೊಸ ಹೊಸ ಪದ್ಯವೇ ಆಯೆಕ್ಕಡ – ಹೇಳಿಗೊಂಡು ಶೋಬತ್ತಿಗೆ ನೆಗೆ ಮಾಡಿತ್ತು.ಬೊಸುಂಬಟೆ ಹಾಂಗೆ ಕಂಡ್ರೂ, ಕೈಲಿಯೂ ಬಾಯಿಲಿಯೂ ಎಷ್ಟು ಚುರುಕು. ಊರಿಂಗೆ ಬಂದಷ್ಟು ಸರ್ತಿ ಆನು ಶೋಬತ್ತಿಗೆಯ ಕಾಣದ್ದೆ ಹೆರಡ್ತ ಕ್ರಮ ಇಲ್ಲೆ, ಮಾತು ಶುರು ಮಾಡಿರೆ ಎಲ್ಲ ಶುದ್ಧಿಗಳೂ ಎಲ್ಲೋರ ಶುದ್ಧಿಗಳೂ ಬಕ್ಕು. ಶಾಲೆಗೆ ಹೋಗಿಗೊಂಡಿಪ್ಪಗಳೆ ಹಾಂಗೆ,ಎಂಗೊ ನಾಕು ಜೆನ ಒಟ್ಟಿಂಗೆ ಇದ್ದರೂ ಮಾತಾಡೊದು ಅದೊಂದೆ. ಬಾಕಿಪ್ಪೋರಿಂಗೆ ಬಾಯಿ ಬಿಡ್ಲೆ ಚಾನ್ಸೇ ಇಲ್ಲೆ. ಅಂದರೂ ಎಂಗೊ ಇಬ್ರು ತುಂಬಾ ಹತ್ತರೆ, ಒಂದೇ ಜನ್ಮ ನಕ್ಷತ್ರ ಹೇಳಿ ಅಪ್ಪ ನೆಗೆ ಮಾಡುಗು.

ಶ್ಯೋ..! ಊಟದ ಹೊತ್ತಾತನ್ನೆ.ಇನ್ನು ಉಂಡಿಕ್ಕಿ ಒಂದು ಮುಷ್ಟಿ ಒರಗೆಕ್ಕು.ಅಲ್ಲದ್ದರೆ ಮಕ್ಕೊ ಶಾಲೆಂದ ಬಪ್ಪಲಗ ಅವಕ್ಕೆ ತಿಂಬಲೆ ಬೇಕಾದ್ದರ ಮಾಡ್ಲೆ ಸಮಯ ಇರ್ತಿಲೆ.ಹ್ಸು,ಸೌತೆಕಾಯಿ ಕೊದಿಲು ಕೊಟಂಕನೆ ಆಯಿದು.ಇವಕ್ಕೆ ಖಾರ ಜಾಸ್ತಿ ಆವುತ್ತೋ ಎನೋ..? ಮಕ್ಕೊಗಿಂದು ಬೆಂಡೆ ಹೊರುದು ಬಾಜಿ ಮಾಡಿ ಕೊಟ್ಟದು ಸರಿ ಇದ್ದಪ್ಪ. ಪಾತ್ರ ಎಲ್ಲ ಮತ್ತೆಯೇ ತೊಳದು ಒತ್ತರೆ ಮಾಡುದು. ಈಗ ಒಂದು ಒರಕ್ಕು ಒರಗುತ್ತೆ.

~~~<>~~~

ತೆಕ್ಕುಂಜ ಕುಮಾರ ಮಾವ°

   

You may also like...

13 Responses

 1. ಬೊಳುಂಬು ಗೋಪಾಲ says:

  ವಾಹ್, ಪಾರು ಅಕ್ಕನ ಸ್ವಗತ ನೈಜವಾಗಿದ್ದು. ಇದು ಪಾರು ಅಕ್ಕನದ್ದು ಮಾಂತ್ರ ಅಲ್ಲ, ಎಲ್ಲಾ ಗೃಹಿಣಿಯರದ್ದುದೆ.
  ಕಾರಿಲ್ಲಿ ಮುಂದಾಣ ಸೀಟಿನ ಬುಕ್ಕಿಂಗು ಎಲ್ಲೋರ ಅನುಭವದ ಮಾತು. ಶಾಲೆಯ ಸ್ಪೋರ್ಟ್ಸ್ ಡೇ ಗೆ “ಕರಿ ಪ್ಲೇಟ್”ನ ಹಳೆ ಪದ್ಯ ಕೇಳಿದ್ದು ನೆಂಪಾತು. ಮೂಷಿಕ ವಾಹನ ಮೋದಕ ಹಸ್ತಾ ಹೇಳಿ ಸುರುವಾದರೆ, ಎಕ್ಕಸಕ್ಕ, ಕಾಂಚೀರೆ, ಎಲ್ಲವುದೆ ಕೇಳುವ ಸೌಭಾಗ್ಯ. ಕೆಲವೊಂದರಿ ಪ್ಲೇಟಿಲ್ಲಿ ಗೆರೆ ಬಿದ್ದು ಎಕ್ಕಸಕ್ಕ, ಎಕ್ಕ ಸಕ್ಕ ಎಕ್ಕಸಕ್ಕ ಆಗೆಂಡಿದ್ದಿದ್ದೂ ನೆಂಪಾತು.
  ಸಭೆ ಎಡೆಲಿ ಎಂಕಟನ ಅಜ್ಜಿ ವೇಶ ಬಂದದು ಲಾಯಕಿತ್ತು.
  ಕುಮಾರಣ್ಣಾ, ಸೂಪರ್ ಆಯಿದು ಸ್ವಗತ.

 2. ಸುಭಗ says:

  ಓಯ್ ಪಾರುವತ್ತೇ,
  ಈಗ ಬ್ರೆಜಿಲಿಲ್ಲಿ ಫುಟುಬೋಲು ಸುರುವಾದಮತ್ತೆ ಮಾವ° ನೆಡಿರುಳು ಎರಡು ಗಂಟೆ ವರೆಗೆ ಆಟ ನೋಡಿಂಡು ಕೂರ್ತವಡ?
  ಮಧ್ಯೇ ಮಧ್ಯೇ ಚಾಯ ಪಾನೀಯಂ ತೆಯಾರುಮಾಡಿ ಕೊಡ್ತ ಕೆಲಸವೂ ನಿಂಗೊಗೇ ಬಯಿಂದೋ ಅಂಬಗ..?!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *