Oppanna.com

ಪಾರುವ ಹ್ಯಾಪಿ ಬರ್ತ್ ಡೇ…

ಬರದೋರು :   ತೆಕ್ಕುಂಜ ಕುಮಾರ ಮಾವ°    on   22/08/2011    20 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ದೀಪಾವಳಿ ರಜೆ ಹತ್ತರೆ ಬಂತು ಅಪ್ಪಗ ಪಾರುವ ಗಡಿಬಿಡಿ, ತಳಮಳ ಶುರು ಅವುತ್ತು.
ಮಕ್ಕೊಗೆ ಶಾಲೆ ರಜಯೂ ಎನ್ನ ಕಂಪನಿಲಿ ವಾರ್ಷಿಕ ರಜೆಯೂ ಒಟ್ಟೊಟ್ಟಿಂಗೆ ಬಪ್ಪ ಕಾರಣ ಊರಿಂಗೆ ಹೆರಡ್ತ ಸಂಬ್ರಮ, ಹೋಪ ಗೌಜಿ.!
ಒಂದು ವಾರಕ್ಕೆ ಹೋಪಲೆ ಬೇಕಾಗಿ ಆಯೆಕ್ಕಾದ ತಯಾರಿಯ ನಾಲ್ಕು ವಾರ ಮದಲೆ ಶುರು ಮಾಡುಗು, ಪಾರು.

“ಈ ಸರ್ತಿ ನಾವು ಮದಾಲು ಅಡ್ಕಾರು ದೇವಸ್ತಾನಕ್ಕೆ ಹೋಗಿ ಅಲ್ಲಿಂದ ಮಧೂರಿಂಗೆ ಹೋಗಿಗೊಂಡು ಕುಂಟಿಕಾನಕ್ಕೆ ಹೋಪ°, ಆಗದೊ ?”

“ಅಕ್ಕು”  ಇದುವರೆಗೆ ಊರಿಂಗೆ ಬಂದಿಪ್ಪಗೆಲ್ಲ ಶುರೂ ಇಳಿವದು ಇದರ ಅಪ್ಪನ ಮನೆಗೆ, ನಂತ್ರ ಬಾಕಿ ದಿಕ್ಕೆ. ಈ ಸರ್ತಿ ಎಂತಕೋ ಈ ಬದಲಾವಣೆ !
ಇರಳಿ ಹೇಳಿ ಗ್ರೇಶಿಗೊಂಡು ಆನು ಹೆಚ್ಚಿಗೆ ಯೋಚನೆ ಮಾಡ್ಲೆ ಹೆರಟಿದಿಲ್ಲೆ.

“ಬೇರೆ ಎಲ್ಲಿಗೆಲ್ಲ ಹೋಪಲಿದ್ದು ಈ ಸರ್ತಿ..?” ಉತ್ತರದ ಅಪೇಕ್ಷೆ ಇಲ್ಲದ್ದೆ ಪ್ರತೀ ಸರ್ತಿ ಕೇಳುವ  ಮಾಮೂಲಿ ಪ್ರಶ್ನೆ ಇದು..!

“ಎಲ್ಲಿಗೆಲ್ಲ ಹೋಯೆಕ್ಕು.?”

“ಅದಾ… ನಿಂಗಳದ್ದು ಶುರುವಾತು, ಪ್ರಶ್ನೆಗೆ ಪ್ರಶ್ನೆ, ಹ್ಹುಂ..! ” ಈ ವಿಷಯಲ್ಲಿ ಚರ್ಚೆಗೆ ಹೆರಟರೆ ಫಕ್ಕನೆಗೆಲ್ಲ ಮುಗಿವಲಿಲ್ಲೆ.

“ನೀನು ನಿಘಂಟು ಮಾಡಿರೆ ಸಾಕನ್ನೆ ಪಾರು ” ಮದಲೇ ನಿಘಂಟು ಮಾಡಿದ್ದರ ಒಪ್ಪಿಸಿತ್ತು.
ಮತ್ತೆ ಇದರ ಬದಲುಸುಲೆ ಆರಿಂಗೂ ಎಡಿಯ, ತಾಳಿ ಕಟ್ಟಿದವಂಗೂ ಕೂಡ.

ನಾಲ್ಕು ಪ್ರತಿ ಡ್ರೆಸ್ಸು ಎನ್ನದು, ಪಾರುವಿನದ್ದು ನಾಲ್ಕು ಪ್ರತಿ, ಒಟ್ಟಿಂಗೆ ಹೊಸ ಸೀರೆಗೊ ಎರಡು, ಮಕ್ಕಳದ್ದು  ಬೇಕಾರೆ ಎರಡು ಪ್ರತಿ ಹೆಚ್ಚಿಗೆ ಬೇಕಪ್ಪದರ ಪೆಟ್ಟಿಗೆಗೆ ತುಂಬುಸುಲೆ ಶುರು ಮಾಡಿರೆ ಹೆರಡುವ ದಿನವರೆಗೂ ಮುಗಿಯ.!
ಒಂದು ಸೂಟ್ ಕೇಸಿಲಿಯೂ ಒಂದು ಕೈಚೀಲಲ್ಲಿಯೂ ಆಗಿ ಅಕೇರಿಗೆ ಎರಡಾದರೂ ಸೀರೆಗ ಹೆರ ಒಳಿಗು.!
” ಛೇ..!  ಹೇಂಗೆ ತುಂಬಿಸಿರೂ ಇದು ಹಿಡಿತ್ತಿಲೆ. ಎಂತ ಮಾಡುದು ನಿಂಗ ಹೇಳೀ.. ನಿಂಗೊಗಾದರೆ ಚೆಂದಕ್ಕೆ ಮಡಿಸಿ ಪ್ಯಾಕ್ ಮಾಡ್ಲೆ ಅರಡಿಗು. ಒಂದರಿ ನೋಡ್ತಿರಾ..! ಆನು ಬೇಕಾರೆ ಸಕಾಯ ಮಾಡುವೆ. ”

ಹೆಮ್ಮಕ್ಕೊ ಹೊಗಳಿರೆ ಉಬ್ಬದ್ದ ಗೆಂಡುಪ್ರಾಣಿ ಇಕ್ಕೊ ಈ ಲೋಕಲ್ಲಿ ! ಅದೂ ಸ್ವಂತ ಕೈ ಹಿಡಿದ ಹೆಂಡತ್ತಿ ಬೇರೆ !!.
“ನೀನು ಬಿಡು, ಆನು ಎಲ್ಲ ತುಂಬುಸುತ್ತೆ. ಬೇಕಪ್ಪದರ ಎಲ್ಲ ತೆಗದು ಮಡುಗಿರೆ ಸಾಕು, ಎಷ್ಟೊತ್ತು ಬೇಕು ಅದಕ್ಕೆ”

ಆನು ತುಂಬುಸುಲೆ ಶುರು ಮಾಡುವಗ, ಪಾರುಗೆ ಸ್ಟೋವ್ವಿಲಿ ಬೇಯ್ಸುಲೆ ಮಡಗಿದ್ದು ನೆಂಪಾತು, ನೋಡಿಕ್ಕಿ ಬತ್ತೆ ಹೇಳಿ ಎದ್ದು ನಡದತ್ತು, ಒಳ.
ಮಕ್ಕಳದ್ದುದೆ, ಪಾರುವ ಡ್ರೆಸ್ಸುಗಳನ್ನೂ ಒಂದು ಸೂಟ್ ಕೇಸಿಲಿ ಹಾಕಿ ಎನ್ನದರ ಕೈಚೀಲಲ್ಲಿ ತುಂಬಿಸುಲೆ ಘಂಟೆ ಒಂದು ಇಡೀ ಹಿಡುದತ್ತು. ಎಲ್ಲ ಮುಗುದತ್ತು ಹೇಳಿ ಅಪ್ಪಗ ಪಾರು ಪ್ರತ್ಯಕ್ಷ ಆತು.

“ಎನ್ನ ಸೀರೆಗಳ ಯೇವುದರಲ್ಲಿ ಮಡಿಗಿದ್ದಿ..?”

“ಇನ್ನುದೇ ಬಾಕಿ ಇದ್ದೊ ಸೀರೆಗೊ, ಅಂಬಗ..?”

“ಸುಮ್ಮನೆ ಪ್ರಶ್ನೆಗೆ ಪ್ರಶ್ನೆ ಕೇಳಿಗೊಂಡು ಕೂರಡಿ, ಎನಗೆ ತುಂಬ ಕೆಲಸ ಬಾಕಿ ಇದ್ದು.”

“ಸೂಟ್ ಕೇಸಿಲಿ ಇದ್ದೊ, ಅಲ್ಲ ಕೈಚೀಲಲ್ಲಿ ತುಂಬಿಸಿದ್ದಿರೋ?” ಒಂದು ವೇಳೆ ಆನು ಹಾಂಗೆ ಸೀರೆಗಳ ಕೈಚೀಲಲ್ಲಿ ತುಂಬುಸಿ ಎನ್ನ ಡ್ರೆಸ್ಸುಗಳ ಸೂಟ್ ಕೇಸಿಲಿ ಹಾಕಿದ್ದರೆ, ಪ್ಯಾಕಿಂಗಿನ ಮುದದಿಂದ ಶುರು ಮಾಡೆಕ್ಕಾಗಿ ಬತ್ತಿತ್ತು.
ಸೀರೆಗಳ ಸೂಟ್ ಕೇಸಿನ ನಡುಕೆ ತುಂಬಿಸಿ, ಒಂದೊಂದು ಸೀರೆಯ ಎಡಕ್ಕಿಲಿ, ಇಪ್ಪ ಕ್ಯಾಶಿನ ಪಾಲು ಮಾಡಿ ಮಡಿಗಿ, ಸ್ವತಃ ಲೋಕ್ ಹಾಕಿದ ಮೇಲೆಯೇ ಪ್ಯಾಕಿಂಗ್ ಸಂಪೂರ್ಣ ಅಪ್ಪದು.

“ಟಿಕೇಟುದೆ, ದಾರಿ ಖರ್ಚಿಗಿಪ್ಪದರನ್ನುದೇ ನಿಂಗ ಮಡಿಕ್ಕೊಂಡಿದಿರನ್ನೆ ” ನೆಂಪು ಕೇಳಿಗೊಂಡತ್ತು.

“ಲೋಕರಿನ ಕೀಯ ಆನು ಮಡಿಕ್ಕೊಂಡಿದೆ ” ಎಂತ ಮರದರೂ ಊರಿಂಗೆ ಹೋಪಗ ಇದರ ನೆಂಪಿಲಿ ಹಿಡ್ಕೊಂಗು, ಪಾರು.
ಸೂಟ್ ಕೇಸಿನ ಕೀ, ಮನೆ ಕೀ ಎಲ್ಲ ಅದರ ಬೇಗಿನೊಳ ಸಣ್ಣ ಪರ್ಸಿಲಿ ಮಡಿಕ್ಕೊಂಗು, ಜಾಗ್ರತೆಲಿ.

ಮರದಿನ ಉದೆಗಾಲಕ್ಕೆ ಮನೆಂದ ಹೆರಟು ಟ್ರೇನ್ ಹಿಡಿವನ್ನಾರ ಪಾರುಗೆ ಸರಿ ಒರಕ್ಕೂಇಲ್ಲೆ, ನೆಮ್ಮದಿಯೂ ಇಲ್ಲೆ.
ಒಂದರಿ ಟ್ರೇನ್ ಹತ್ತಿ ಹೆರಟ ಮೇಲೆಯೇ ಸಮಧಾನ ಅಪ್ಪದು. ಎ.ಸಿ. ಕೋಚಿನೊಳ ಸೂಟ್ ಕೇಸು, ಬೇಗುಗಳ ಬಗ್ಗೆ ಹೆಚ್ಚಿನ ಹೆದರಿಕೆ ಇರ್ತಿಲ್ಲೆ.
ಹಾಂಗಾಗಿ ಇನ್ನಾಣ ಇಪ್ಪತ್ನಾಲ್ಕು ಘಂಟೆ, ಊರಿಂಗೆ ಎತ್ತುವನ್ನಾರ ಸಂಪೂರ್ಣ ವಿಶ್ರಾಂತಿ ಪಾರುಗೆ. ಮಾತೂ ಹೆಚ್ಚಿಗೆ ಇರ. ಟ್ರೇನ್ ಓಡ್ತ ಹಾಂಗೆ ಅದರ ಮನಸ್ಸಿಲಿಯೂ ಊರಿನ, ಊರಿನವರ ನೆಂಪುಗೋ ಓಡಿಗೊಂಡು ಇಕ್ಕು. ಮರದಿನ ಮಧ್ಯಾಹ್ನಕ್ಕಪ್ಪಗ ಮನೆ ಎತ್ತಿದ ಮೇಲೆಯೇ ಸರಿಯಾಗಿ ಮಾತುಕತೆ ಶುರುವಪ್ಪದು.

ಮರದಿನಕ್ಕೆ ಹೋಪಲೆ ಬೇಕಾಗಿ ಅಣ್ಣನತ್ತರೆ ಹೇಳಿ ಒಂದು ಜೀಪು ನಿಘಂಟು ಮಾಡಿದೆ. ಇರುಳು ಪಾರು ವಿಚಾರ್ಸಿತ್ತು –

“ನಾಳಂಗೆ ಹೇಂಗೆ ಹೋಪದು ?”

“ಹೋಪ°… ಅದಕ್ಕೆಂತ ”

“ಉದಿಯಪ್ಪಗಾಣ  ಪೂಜೆಗಪ್ಪಗ ದೇವಸ್ತಾನಕ್ಕೆ ಎತ್ತೆಡೆದ.”

“ಅಲ್ಲ ಪಾರು ಒಂದು ವಿಷಯ ನೆಂಪಾತು, ದೇವಸ್ತಾನಕ್ಕೆ ಹೋಗಿ ಸುಬ್ರಮಣ್ಯಂಗೆ ನಮಸ್ಕಾರ ಮಾಡುದರಂದ ಅದೇ ಹೆಸರಿನ ಆನಿಪ್ಪಗ, ಇಲ್ಲಿಯೇ ಎನಗೆ ಮೂರು ಸುತ್ತು ಬಪ್ಪಲಾಗದ. ದೇವಸ್ತಾನಕ್ಕೆ ಹೋದ ಪುಣ್ಯವೂ ಸಿಕ್ಕುಗು, ಮತ್ತೆ ನಿನ್ನ ಇಷ್ಟಾರ್ಥ ಈಡೇರ್ಸುವ ಕೆಲಸ ಹೇಂಗಾರು ಎನ್ನದೇ ಅಲ್ಲದೋ  ?”

“ಅನು ಒಂದು ಕೇಳಿರೆ ನಿಂಗಳದ್ದು ಬೇರೆಯೇ , ಯೇವಾಗಳೂ ಹಾಂಗೆ ಹ್ಹುಂ.!. ನಾಳೆ ಹೋಪದು ಹೇಂಗೆ ಆಲೋಚನೆ ಮಾಡಿ ಮದಾಲು”

“ಜೀಪಿಂಗೆ ಹೇಳಿ ಆಯಿದು.  ಉದಿಯಪ್ಪಗಳೆ ಬಕ್ಕು”

“ಲಾಯಿಕಾತು. !  ಎಲ್ಲ ಮಾತಾಡಿ ಆಯಿದು ಅಂಬಗ ”

“ಅದಿರ್ಲಿ, ಈಗ ನಾಳೆ ನೀನು ದೇವಸ್ತಾನಕ್ಕೆ ಹೋಪದೊ, ಅಲ್ಲ ಇಲ್ಲಿಯೇ….”

“ಸಾಕು, ಸುಮ್ಮನೆ ಕೂರಿ  ನೋಡ ನಿಂಗೊ”  ಹೇಳಿಕ್ಕಿ ಪಾರು ಇರುಳಾಣ ಊಟದ ವ್ಯವಸ್ತೆಗೆ ಒಳ ನಡದತ್ತು. ಇರುಳು ಊಟ ಆದ ಮೇಲೆ ಮನುಗೆಕ್ಕಾರೆ ಪಾರು ಕೇಳಿತ್ತು, ಎನ್ನ ಕೆಣಕ್ಕುಲೆ ಬೇಕಾಗಿಯೊ ಏನೊ –

“ನಾಳೆ ಎಷ್ಟು ತಾರೀಕು ?”

“ಇಂದು ಎಷ್ಟು ತಾರೀಕು ?”

“ಹುಂ..! ಆತು ಒರಗಿ. ಪ್ರಶ್ನೆಗೆ ಪ್ರಶ್ನೆ ಕೇಳುವ ಅಭ್ಯಾಸ ನಿಂಗ ಬಿಡ್ಲಿಲ್ಲೆ ಕಾಣ್ತು.”

ಪ್ರಯಾಣದ ಆಯಾಸಂದಾಗಿ ಬೇಗ ಕಣ್ಣು ಎಳವಲೆ ಶುರುವಾದ ಕಾರಣ ಮತ್ತೆ ಮಾತು ನಿಲ್ಲುಸಿದೆ. ಒಳ್ಳೆ ಒರಕ್ಕು ಬಂದದಕ್ಕೆಯೋ ಏನೋ ಉದಿಯಪ್ಪಗ ಬೇಗ ಎಚ್ಚರವೂ ಆತು.
ಆನು ಎನ್ನ ನಿತ್ಯವಿಧಿ ತೀರ್ಸಿಕ್ಕಿ, ಫಲಾರಕ್ಕೆ ಕೂರೆಕ್ಕಾರೆ ಪಾರು ಮಕ್ಕಳನ್ನೂ ಎಬ್ಬಿಸಿ ಅವರ ಹೆರಡುಸುವ ಅಟ್ಟಣೆಲಿ ಇದ್ದತ್ತು. ಮನೆಯವರೊಟ್ಟಿಂಗೆ ತಿಂಡಿ ಕಾಫಿ ಮುಗುಶಿ ಹೆರಟು ಕೂದಪ್ಪಗ ಪಾರುದೆ ಸೀರೆ ಸುತ್ತಿ ರೆಡೀ ಅಗಿತ್ತು.

” ಪಾರು, ಈ ಸೀರೆ ನಿನಗೆ ಲಾಯ್ಕ ಒಪ್ಪುತ್ತು. ಚೆಂದ ಇದ್ದುದೆ”  ಒಳ ದೊಡ್ಡತ್ತಿಗೆ ಹೇಳಿದ್ದು ಕೇಳಿತ್ತು.

“ಇದು ಕಳುದ ಸರ್ತಿ ಪೂನಕ್ಕೆ ಹೋದಿಪ್ಪಗ ತೆಕ್ಕೊಂಡ ಸೀರೆ, ಇವಕ್ಕುದೇ ಇಷ್ಟ ಆತು ಹೇಳಿ ತೆಕ್ಕೊಂಡದು”
ಅಪ್ಪು ಕಳುದ ಸರ್ತಿ ಇದರ ಬರ್ತ್ ಡೇ ಗಪ್ಪಗ ಪೂನಲ್ಲಿ ತೆಕ್ಕೊಂಡ ಸೀರೆ, ಅದನ್ನೆ ಇಂದು ಸುತ್ತಿದ್ದದು.
ದೇವಸ್ತಾನಕ್ಕೆ ಹೋಪಗ ಇಷ್ಟು ಗೆನಾ ಸೀರೆ ಸುತ್ತುವ ಅಗತ್ಯ ಇತ್ತಿಲೆ- ಹಾಂಗೆ ಆನು ಮನಸ್ಸಿಲಿ ಗ್ರೇಶಿಗೊಂಡದು, ಬಾಯಿಬಿಟ್ಟಿದಿಲ್ಲೆ !
ಅಡ್ಕಾರು, ಮಧೂರು ದೇವಸ್ತಾನಕ್ಕೆ ಹೋಗಿ ಅಲ್ಲಿಂದ ಅಪ್ಪನ ಮನೆಗೆ ಹೋಪದನ್ನೆ, ಪಾರುವ ಈ  ಸಂಬ್ರಮಕ್ಕೆ ಆನು ಎಂತಕೆ ತಣ್ಣೀರು ಎರವದು ಹೇಳಿ ತಳಿಯದ್ದೆ ಕೂದೆ.

ಮನೆಂದ ಹೆರಟು, ದೇವಸ್ತಾನಲ್ಲಿ ಪೂಜೆ ತೀರ್ಸಿ, ಸುಳ್ಯಲ್ಲಿ ಬೇಂಕಿಂಗೆ ಎತ್ತುವಗ ಅಲ್ಲಿ ಶುರು ಆವುತ್ತಷ್ಟೆ.
ಆದರೂ ಹೆಚ್ಚು ಹೊತ್ತು ಕಾಯೆಕ್ಕಾಗಿ ಬಯಿಂದಿಲ್ಲೆ. ಲೋಕರಿಂದ ಚೈನು, ಉಂಗಿಲ ತೆಗದು,ಅಲ್ಲಿಂದ ಹೆರಟು ಮಧೂರಿಂಗೆ ಮುಟ್ಟುವಗ ಘಂಟೆ ಹನ್ನೊಂದು ಆಗಿತ್ತು. ಉದಯಾಸ್ತಮಾನದ ಚೀಟು ಮಾಡ್ಸಿ, ಗಣಪ್ಪಂಗೆ ಟೊಂಕ ಹಾಕಿಕ್ಕಿ, ಅಪ್ಪ ಪ್ರಸಾದವ ತೆಕ್ಕೊಂಡಪ್ಪಗ ಎನ್ನ ಮೊಬೈಲಿಲಿ ರಿಂಗ್ ಬಪ್ಪಲೆ ಶುರುವಾತು. ದುಬೈಲಿಪ್ಪ ಎನ್ನ ಕ್ಲಾಸ್ ಮೇಟ್, ನೆಂಟನೂ ಅಪ್ಪು- ಗೋವಿಂದನ ಫೋನು.

ಮೆನಿ ಹ್ಯಾಪ್ಪಿ ರಿಟರ್ನ್ಸ್ ಅಪ್ ದ ಡೇ, ಮಾರಾಯ

ಒಂದರಿಯಂಗೆ ಎನ್ನ ತಲೆಗೆ ಹೊಳದ್ದಿಲೆ, ಮತ್ತೆ ನೆಂಪಾತು, ಇಂದು ಪಾರುವ ಬರ್ತ್ ಡೇ. !!!
“ಥ್ಯಾಂಕ್ಸ್” ಹೇಳಿ ಮತ್ತೆ ರಜ್ಜ ಹೊತ್ತು ಮಾತಾಡಿದೆ. ಕಳುದ ವರ್ಷವೂ ಹೀಂಗೆ ಫೋನ್ ಮಾಡಿ ಪಾರುಗೆ ವಿಶ್ ಮಾಡಿತ್ತಿದ್ದ°.

ಛೇ…,!! ಕಾಣದ್ದೆ ಕಲ್ಲಿಂಗೆ ಡಂಕಿದ ಹಾಂಗೆ ಆತು ಒಂದರಿಯಂಗೆ ಎನಗೆ.!
ಪಾರುವಿನತ್ತರೆ ಕೊಡು ಫೋನು ಹೇಳಿದ್ದಕ್ಕೆ, `ಅದು ಪ್ರಸಾದ ತೆಕ್ಕೊಂಬ ಲೈನಿಲಿ ನಿಂದಿದು, ಆನು ಹೆರ ಬಯಿಂದೆ..’ ಹೇಳಿದೆ. `ಆನು ನಿನ್ನ ಫೋನು ಬಂದದರ ತಿಳುಶುತ್ತೆ’ ಹೇಳಿ ಅವಂಗೆ ಸಮಧಾನ ಹೇಳಿದೆ.

“ಆರಿಂದು ಫೋನು..?”

” ಆದು ಗೋವಿಂದಂದು, ದುಬೈಯಿಂದ.  ಎಂತಕೆ ಎನಗೆ ನೀನು ಹೇಳದ್ದದು ?”

” ಯೇವುದರ ಹೇಳೆಕ್ಕಾದ್ದದು ?”

” ಇಂದು ತಾರೀಕು ಎಷ್ಟು ? ”

” ಎಂತಕೆ….?”  ಸಣ್ಣ ಮಗ° ಎಡೇಲಿ ಬಾಯಿ ಹಾಕಿದ.  ರಜ್ಜ ಹೊತ್ತಿಲಿ ದೊಡ್ಡ ಮಗ° ಸ್ವರ ಸೇರ್ಸಿದ°, “ಎನಗೆ ಗೊಂತಾತು..! ಇಂದು ಅಮ್ಮನ ಬರ್ತ್ ಡೇ.. ಸರಿಯಾ..?”

” ಹೋ..! ಈ ಅಪ್ಪಂಗೆ ಎಂತದೂ ಗೊಂತಪ್ಪಲಿಲ್ಲೆ ಅಲ್ಲದಮ್ಮ..!”  ಹೇಳಿಗೊಂಡ° ಸಣ್ಣಮಗ°.

“ನಿಂಗೊಗೆ ನೆಂಪಾವುತ್ತೋ ನೋಡುಲೆ ಬೇಕಾಗಿಯೇ ಹೇಳದ್ದದು. ನಿನ್ನೆಯೆ ಕೇಳಿತ್ತಿದ್ದೆ – ನಾಳೆ ತಾರೀಕು ಎಷ್ಟು ಹೇಳಿ, ಗೊಂತಾಯಿದೊ ನಿಂಗೊಗೆ ?”

“ಅಲ್ಲ, ಇಂದು ಇಡೀ ಎನಗೆ ನೆಂಪೇ ಅಗದ್ದರೆ ನೀನು ಎಂತ ಮಾಡ್ತಿತ್ತೆ..?”

ಎಂತ ಮಾಡ್ಲಿಲ್ಲೆ, ನಾಳಂಗೆ ಕೇಳ್ತಿತ್ತೆ – ನಿನ್ನೆ ತಾರೀಕು ಎಷ್ಟು ?

~*~*~*~

20 thoughts on “ಪಾರುವ ಹ್ಯಾಪಿ ಬರ್ತ್ ಡೇ…

  1. ಕುಮಾರ ಮಾವ°,

    ತುಂಬಾ ಲಾಯ್ಕಾಯಿದು ಬರದ್ದದು. ನಿಂಗೊಗೆ ಅತ್ತೆ ತಾರೀಕು ಎಷ್ಟು ಹೇಳಿ ಕೇಳುವಾಗ, ಕಳುದ ಬರ್ತ್ ಡೇ ಗೆ ಹೇಳಿಯೇ ತೆಗದ ಸೀರೆ ಸುತ್ತಿ ಅಪ್ಪಗಳೂ ನೆಂಪಾಯಿದಿಲ್ಲೆಯಾ? ಛೆ! 🙁
    ಪುಣ್ಯ!! ದೇವಸ್ಥಾನಲ್ಲಿ ನೆಂಪಾದ್ದಕ್ಕೆ!! ಇಲ್ಲದ್ದರೆ ಸಹಸ್ರನಾಮಾರ್ಚನೆ ನಿಂಗಳ ಹೆಸರಿಂದೇ ಆವುತ್ತಿತ್ತು!! ಅಲ್ಲದಾ? 🙁 😉

    ಬಪ್ಪ ವರ್ಷ ಮರದಿಕ್ಕೆಡಿ ಆತೋ!! ಒಂದು ದಿನ ಮದಲೇ ಎಂಗೊಗೆ ನೆಂಪು ಮಾಡಿ, ಮತ್ತೆ ಎಂಗೋ ನಿಂಗೊಗೆ ನೆಂಪು ಮಾಡ್ತೆಯಾ° ಆಗದಾ? 😉

    ಮಾವ°, ನಿಂಗೊ ತುಂಬಾ ಲಾಯ್ಕ ಬರೆತ್ತಿ. ಬಹುಶ ನೆತ್ತರಿಲಿ ಬಯಿಂದಾಯಿಕ್ಕು ಅಲ್ಲದಾ? ಅಜ್ಜ° ಅಷ್ಟು ಬರಕ್ಕೊಂಡಿತ್ತಿದ್ದವಿಲ್ಲೆಯಾ? ಸುಮ್ಮನೇ ಅಲ್ಲ ಪುಳ್ಳಿ ಬೈಲಿಲಿ ಇಷ್ಟು ಲಾಯ್ಕಲ್ಲಿ ಬರವದು ಅಲ್ಲದೋ!!! 😉

    1. ಅಕ್ಕಾ, ಇದು ಸಂಗತಿ ಪಾರುವ ಬರ್ತ್ ಡೇ ಯ ಅದರ ಯಜಮಾನ್ರು ಮರದ್ದದು. ಎನಗೆ ಎಂತಕೆ ನೆಂಪು ಮಡಿಕ್ಕೊಂಬ ಉಸಾಬರಿ..!!!

  2. ಎಲ್ಲೋರ ಮನೆಲಿ ನೆಡೆತ್ತ ಪರಿಪಾಟಿಯ ಚೆಂದಕೆ ವಿವರುಸಿದ್ದ° ಕುಮಾರಣ್ನ. ಸುರೂವಾಣ, “ಎಲ್ಲಿಗೆ ಹೋಪದು ಹೇಳ್ತ ತೀರ್ಮಾನ”, “ಪ್ಯಾಕಿಂಗ್ ಮಾಡುವಾಗ ಅಪ್ಪ ಗಡಿಬಿಡಿ” ಎಲ್ಲವುದೆ ನೈಜವಾಗಿ ಬಯಿಂದು. ಪೂರ್ವ ನಿರ್ಧಾರವ ಬದಲುಸುಲೆ ಆರಿಂಗೂ ಎಡಿಯ, ತಾಳಿ ಕಟ್ಟಿದವಂಗೂ ಕೂಡ ! ಲಾಯಕಾಯಿದು.
    ಅಪ್ಪ ಪ್ರಸಾದವ ತೆಕ್ಕೊಂಡು ಸುತ್ತು ಬತ್ತಾ ಇಪ್ಪಗ ಬಂದ ಗೋವಿಂದನ “ಪಾರುಗೆ ವಿಶ್” ಮಾಡ್ತ ಕಾಲ್ – ( ಕಾಣದ್ದೆ ಕಲ್ಲಿಂಗೆ ಡಂಕಿದ ಹಾಂಗೆ ಆತು ಒಂದರಿಯಂಗೆ ಎನಗೆ).! ಕುಮಾರಣ್ಣ, ಎಂತ ಸಂದಿಗ್ದ ಪರಿಸ್ಥಿತಿ ಅಲ್ಲದೊ ? ಗ್ರೇಶಿ ನೆಗೆ ಬಂತದ. ಮಕ್ಕಳುದೆ ಅಮ್ಮನ ಪಾರ್ಟಿಯೇ, ಏವಗಳೂದೆ.
    ಕುಮಾರಣ್ಣನ ಬರಹದ ಶೈಲಿಯ ತುಂಬಾ “ಇಷ್ಟಾ ಪಟ್ಟೆ…. ಸಿಕ್ಕಾಪಟ್ಟೇ….!”

    1. ನಿಂಗಳ ಒಪ್ಪ ಓದಿ ಎನಗೆ ಕಂಡಾಬಟ್ಟೆ ಖುಶಿ ಆತು ಮಾವ.

    1. ಚುಬಣ್ಣ, ದೀಪಿಕ, ಸುವರ್ಣಿನಿ ಅಕ್ಕಂಗೆ ಧನ್ಯವಾದ

  3. ಕಥೆ ಲಾಯ್ಕಿದ್ದು 🙂
    “ಅಲ್ಲ, ಇಂದು ಇಡೀ ಎನಗೆ ನೆಂಪೇ ಅಗದ್ದರೆ ನೀನು ಎಂತ ಮಾಡ್ತಿತ್ತೆ..?”
    “ಎಂತ ಮಾಡ್ಲಿಲ್ಲೆ, ನಾಳಂಗೆ ಕೇಳ್ತಿತ್ತೆ – ನಿನ್ನೆ ತಾರೀಕು ಎಷ್ಟು ?”
    ಇದು ತುಂಬಾ ಲಾಯ್ಕಿದ್ದು !!

  4. ಲಾಯಿಕ ಆಯಿದು ಮಾವ ಬರದ್ದು.. ಹಾಸ್ಯಭರಿತ ಶೈಲಿ ಅ೦ತೂ ಬಾರೀ ಲಾಯಿಕ ಆವ್ತು…ಇನ್ನಾಣ ಕತೆಗೆ ಕಾಯ್ತಾ ಇದ್ದೆ 🙂

  5. ಫಸ್ಟ್ ಕ್ಲಾಸ್ ಆಯಿದು.. ಈ ರೀತಿಯ ಹಾಸ್ಯ ಬರಹಂಗೊ ತನ್ನಷ್ಟಕ್ಕೇ ಒದುಸಿಕೊಂಡು ಹೋವುತ್ತು..

    1. ಧನ್ಯವಾದ ಕಿಟ್ಟಣ್ಣ.

  6. ಲಘು ಹಾಸ್ಯದೊಟ್ಟಿಂಗೆ ನೈಜವಾಗಿ ಬಯಿಂದು ಕುಮಾರಣ್ನ.
    [” ಹೋ..! ಈ ಅಪ್ಪಂಗೆ ಎಂತದೂ ಗೊಂತಪ್ಪಲಿಲ್ಲೆ ಅಲ್ಲದಮ್ಮ..!” ಹೇಳಿಗೊಂಡ° ಸಣ್ಣಮಗ°.]- ಇದು ಎಲ್ಲಾ ಕಡೆಯೂ ನೆಡೆತ್ತ ಸಂಗತಿಯೇ ಅಲ್ಲದಾ.
    ಕಳುದ ವರ್ಷ ಎಂಗಳ ಮದುವೆಯ ವರ್ಷೋತ್ಸವವ, ಎನಗೆ ಮಕ್ಕೊ ನೆಂಪು ಮಾಡಿ ಕೊಟ್ಟು ಹೀಂಗೆ ಹೇಳಿತ್ತಿದ್ದವು !!!

    1. ಅದಪ್ಪು ಅಪ್ಪಚ್ಚಿ.

  7. ಹ್ಹಹ್ಹಹ್ಹಾ… ಲಾಯ್ಕಾಯಿದು.. ೮೫-೯೫ರ ಎಡಕ್ಕಿಲ್ಲಿ ತುಷಾರ, ಕಸ್ತೂರಿ, ತರ೦ಗ, ಸುಧಾಗಳಲ್ಲಿ ಬ೦ದ೦ಡಿತ್ತಿದ್ದ ಲಘು ಬರಹ೦ಗಳ ನೆ೦ಪಾತು. ನರಸಿ೦ಹಮೂರ್ತಿಯ ‘ವಿಶ್ವ ಮತ್ತು ವಿಶಾಲೂ’ ನೆ೦ಪಾದವು. ಒಪ್ಪ೦ಗೊ..

    1. ಅಷ್ಟರ ಮಟ್ಟಿಂಗೆ ಆಗದ್ದರೂ, ಸಣ್ಣದೊಂದು ಪ್ರಯನ್ತ, ಎನ್ನದು ಗಣೇಶಣ್ಣ.

  8. ಆಟಲ್ಲಿ ಹೇಳುವ ಹಾ೦ಗೆ – ” ನೆನಪಿಗಾಗಿ ಸೆರಗಲ್ಲಿ ಗ೦ಟಿಟ್ಟುಕೋ” ಇ೦ದು ” ಮೊಬೈಲಲ್ಲಿ ರೆಮೈ೦ಡರ್ ಮಾಡಿಕೋ” ಹೇಳಿರೆ ಮುಗಾತು.
    ಅ೦ತೂ ಪ್ರತಿವರ್ಷ ಪುನರಾವರ್ತನೆ ಅಪ್ಪ ಒ೦ದು ಕಥೆ ಇದಲ್ಲದೋ ಕುಮಾರ ಮಾವಾ?
    ತಿಳಿ ಹಾಸ್ಯ ಕೊಶಿ ಕೊಟ್ಟತ್ತು.

    1. ನಿಂಗಳಲ್ಲಿಯೂ ಇದೇ ಕತೆಯೋ ಅಂಬಗ..?

  9. [“ಎಂತ ಮಾಡ್ಲಿಲ್ಲೆ, ನಾಳಂಗೆ ಕೇಳ್ತಿತ್ತೆ – ನಿನ್ನೆ ತಾರೀಕು ಎಷ್ಟು ?”] – ಯಪ್ಪಾ ., ‘ಕ್ಷಮಯಾ ಧರಿತ್ರೀ’ ಹೇಳಿದ್ದು ಸುಮ್ಮನಲ್ಲ!. ಊರಿಂಗೆ ಹೆರಪ್ಪಾಯಣ, ಬೇಗು ತುಂಬುಸುವದು ಮರುದಿನ ಬರ್ತೆಡೆ ವಿಷಯ ನೈಜ ಹಾಂಗೂ ವಾಸ್ತವಿಕ ಚಿತ್ರಣ ಲಾಯಕ್ಕಾಯ್ದು ಕುಮಾರಣ್ಣ. ನವಗೆ ಪ್ರತಿ ವರ್ಷವೂ ಹೀಂಗೇ ಅಪ್ಪೋದೋಳಿ ಕುಮಾರಣ್ಣ!!

    ಉದಿಯಪ್ಪಗ ಎಚ್ಚರಿಗೆ ಆದ್ದು ರೈಲಿಲ್ಯೋ ಮನೇಲಿಯೋ ಹೇಳಿ ವಿಷಯ ಹಾರಿ ಹೊತನ್ನೇ.! ನಿಂಗಳ ಈ ಅರೆ ಒರಕ್ಕಿಲ್ಲಿ ರೈಲು ಇಳುದು ಮನಗೆ ಎತ್ತಿದ್ದೇ ಗೊಂತಾಯ್ದಿಲ್ಲೇ ನೋಡಿದಿರೋ!

    1. ನಿಂಗಳದ್ದು ಎಂತ್ಸೋ ಕತೆ ಆಯಿದು ಹೇಳಿ ಕಾಣ್ತು ಅಲ್ಲದೊ ಭಾವ. ಎಚ್ಚರಿಗೆ ಅಪ್ಪಗ ಕಾಸ್ರೋಡು ಸ್ಟೇಷನ್ನು ಕಳುದು ಕೊಡೆಯಾಲ ಎತ್ತಿದಿರೋ ಹೇಂಗೆ. ಬೈಲಿಂಗೆ ಈ ಕತೆ ಹೇಳ್ಲಕ್ಕು.

      1. ಇಲ್ಲೆಪ್ಪಾ… ಹಾಂಗೆ ಆಯ್ದಿಲ್ಲೇ. ಕಾಸ್ರೋಡಿಲ್ಲಿ ರೈಲು ನಿಂದಪ್ಪಗಷ್ಟೇ ಎಚ್ಚರಿಗೆ ಆಗಿ ಇದ್ದ ಹಾಂಗೇ ಬಾಚಿ ಸುರುಟಿ ರೈಲು ಇಳುದದ್ದು ಇದ್ದು ಒಂದರಿ. ಅದಲ್ಲ ಆನು ಹೇಳಿದ್ದು. ನಿಂಗೊ ರೈಲು ಹತ್ತಿ ಮನುಗಿ ಒರಗಿದ್ದು ಕಂಡತ್ತು ಶುದ್ದಿಲಿ. ರೈಲು ಇಳುದ ಪ್ರಸ್ತಾಪ ಆಯ್ದಿಲ್ಲೆ. ಮರುದಿನ ಸೀದಾ ಮನೆಂದ ಶುರುಮಾಡಿದಿ ಅದಾ ., ಅದಕ್ಕೆ ಹೇಳಿದ್ದಷ್ಟೇ. ಮತ್ತೆ ….., ತಾರೀಕು ಮರವದು ಹೆಚ್ಚಿನ ಗೆಂಡಂದ್ರಿಂಗೂ ಆವ್ತೋದು!!

        ಅಲ್ಲಾ ಕುಮಾರ ಮಾವ., ಬೊಳುಂಬು ಮಾವನ ಉಮೇದಿನ ಒಪ್ಪ ನೋಡಿತ್ತುಕಂಡ್ರೆ ಅರ್ಚನೆ ಮಂಗಳಾರತಿ ಸಹಿತ ಏನೋ ಸ್ಪೆಶಲ್ ಅಲ್ಲಿ ನಡದ್ದೋದು?!!. ಕೇಳಿ ಕೇಳಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×