Oppanna.com

ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..!

ಬರದೋರು :   ತೆಕ್ಕುಂಜ ಕುಮಾರ ಮಾವ°    on   12/07/2011    30 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

“ಅಪ್ಪಾ…. ಇಂದು ಪೇಪರಿಲಿ ಅಮ್ಮನ ಹೆಸರು ಬಯಿಂದು”

ಆಫೀಸಿಂದ ಬಂದು ಕೂದಪ್ಪಗ ಸಣ್ಣ ಮಗ ವರದಿ ಒಪ್ಪಿಸಿದ.

“ಹೆಸರು ಮಾಂತ್ರವಾ , ಫೊಟೊದೆ ಇದ್ದಾ..?'” ಆನು ಉದಿಯಪ್ಪಗ ಓದಿತ್ತಿದ್ದೆ, ಇವ ಅಂತೆ ಬಾಯಿಗೆ ಕೋಲು ಹಾಕುದು ಗ್ರೇಶಿಗೊಂಡು ಹೇಳಿದೆ. ಎರಡನೆ ಕ್ಲಾಸಿಂಗೆ ಹೋಪಲೆ ಶುರು ಮಾಡಿದ ಮೇಲೆ ಕೆಲವು ದಿನ ಪೇಪರು ಓದುವ ಅಭ್ಯಾಸ ಇದ್ದು ಮಗಂಗೆ.

“ಒಂದರಿ ನೋಡಿ ನಿಂಗೊ”  ಪೇಪರು ಕೈಲಿ ಹಿಡ್ಕೊಂಡು ಎನ್ನ ಹಿಂದೆಯೆ ಬಂದ. ಇನ್ನು ಪೇಪರು ನೋಡುವಲ್ಲಿವರೆಗ ಆನು ಹೋದಲ್ಲೆಲ್ಲ ಹಿಂದೆಯೆ ಬಕ್ಕು ಮಾಣಿ – ಬಾತ್ ರೂಮಿಂಗೂ ನುಗ್ಗುಗು, ಎನ್ನ ಯೂರಿನರಿ ಬ್ಲಾಡರ್ ಖಾಲಿ ಮಾಡ್ಲೂ ಬಿಡ.

” ಶಾಲಾ ವಾಹನ  ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ –  ವಿದ್ಯಾರ್ಥಿಗಳೆಲ್ಲಾ ಅಪಾಯದಿಂದ ಪಾರು !” ಎರಡನೆ ಪುಟಲ್ಲಿದ್ದ ಹೆಡ್ ಲಾಯಿನ್ ತೋರ್ಸಿದ.

“ಓ.! ಅಪ್ಪನ್ನೆ.. ಇದಾ ಏ ಪಾರೂ , ನಿನ್ನ ಹೆಸರು ಪೇಪರಿಲಿ ಬಂದದು… ಕಂಡಿದೆಯಾ.?”  ಆನು ಒಂದರಿ ದೊಡ್ಡಕ್ಕೆ ಓದಿದೆ.

ಅಡಿಗ್ಗೊಳ ಎನಗೆ ಚಾಯ ಮಾಡಿಗೊಂಡಿತ್ತು, ಅಲ್ಲಿಂದಲೆ ಹೇಳಿತ್ತು. ‘ನಿಂಗೊ ಅವಂಗೆ ಏನಾರು ಹೇಳಿಕೊಡೆಡಿ. –  ಪುಟ್ಟಾ..ಅದು ಸ್ಕೂಲ್ ಬಸ್ಸು ಗುಂಡಿಗೆ ಬಿದ್ದು, ಎಲ್ಲ ಸ್ಟೂಡೆಂಟ್ಸ್  ಆಕ್ಸಿಡೆಂಟ್ ಆಗದ್ದೆ ಎಸ್ಕೇಪ್ ಆದ್ದು.. ಹಾಂಗೆ, ”

ಶುದ್ದ ಕನ್ನಡಲ್ಲಿ ಬಂದ ವರದಿಯ ಚೊಕ್ಕಲ್ಲಿ  ಬಿಡಿಸಿ ಹೇಳಿತ್ತು, !

“ಅಂಬಗ ನಿನ್ನ ಹೆಸರು ಇದ್ದು ಇಲ್ಲಿ..?” ಪೂರ ಸಮಾಧಾನ ಆಯಿದಿಲ್ಲೆ ಮಾಣಿಗೆ –  ಸಮಾಧಾನ ಅಪ್ಪಲ್ಲಿವರೆಗೆ ಪ್ರಶ್ನೆಗಳೂ ನಿಲ್ಲ. “ಎನ್ನ ಹೆಸರು ಗೊಂತಿಲ್ಲೆಯಾ ನಿನಗೆ ಹೆಂ..”

” ಅಂಬಗ ಅಪ್ಪ ಎಂತಕೆ ನಿನ್ನ ಪಾರು ಹೇಳಿ ದೆನುಗೇಳುದು ?”

“ಅಪ್ಪುದೇ.. ಮನೆಲಿ ಅಜ್ಜ ಚೆಂದಕ್ಕೆ ಪಾರ್ವತಿ ಹೇಳಿ ದೆನುಗೇಳಿಗೋಂಡಿತ್ತಿದ್ದವು, ನಿನ್ನ ಅಪ್ಪಂಗೆ ಎಂತ ಗೊಂತಪ್ಪಲಿಲ್ಲೆ.”

“ಅದು ಹಾಂಗಲ್ಲ” ಹೇಳಿ ಪಾರು ಮಗಂಗೆ ಅರ್ಥ ಅಪ್ಪ ಹಾಂಗೆ ವಿವರುಸುಲೆ ಶುರು ಮಾಡಿತ್ತ್ತು.

ಅಬ್ಬೆ ಮಗನ ಪಂಚಾತಿಗೆ ಆಗಿಗೊಂಡಿಪ್ಪಗ ಆನು ಬಾತ್ ರೂಮು  ಹೊಕ್ಕೆ.

“ಕೇಳಿತ್ತ  ನಿಂಗಳ ಮಗ ಹೇಳಿದ್ದು..?”  ಸುಮಾರೆಲ್ಲ ಕೇಳಿದ್ದು, ಆದರೆ ಪಾರು ಎನಗೆ ಎಂತರ ಕೇಳ್ಸುಲೆ ಹೆರಟದು ಹೇಳಿ ಗೊಂತಾಯಿದಿಲ್ಲೆ. ನಿಂಗೊಗೆಲ್ಲಾ “ಜಾಣ ಕಿವುಡು” – ಇಡೀ ಗೆಂಡು ಸಮುದಾಯವ ಸೇರ್ಸಿ ದೂರಿತ್ತು. ಎಂಥಾ ಸಂದರ್ಭವೇ ಆಗಲಿ ಗೆಂಡನ ಒಂದರಿ ದೂರಿ ಹೆಟ್ಟುವ “ಜಾಣತನ” ಕೊರಳಿಂಗೆ ತಾಳಿ ಬಿದ್ದ ಮೇಲೆ ಈ ಕೂಸುಗೊಕ್ಕೆ ಹೇಂಗೆ.. ಎಲ್ಲಿಂದ ಬತ್ತು ಹೇಳುದು ಇನ್ನೂ ಅರ್ಥ ಆಯಿದಿಲ್ಲೆ ಎನಗೆ.

ಬಾತ್ ರೂಮಿನ ಏಕಾಂತಲ್ಲಿ ನಿಷ್ಚಲ ಮನಸ್ಸಿಲಿ ಯೇವ  ಚಿತ್ತ ಚಾಂಚಲ್ಯ ಇಲ್ಲದೆ ಗಂಭೀರ ಯೊಚನೆ ಮಾಡಿಗೊಂಡು ಇಪ್ಪಗ ಆರು ಎಂತ ಹೇಳಿರೂ ಕೆಮಿಗೆ ಬಿಳುತ್ತಿಲೆ. ಹಲವು ವಿಜ್ಞಾನಿಗೊಕ್ಕೆ ಮುಖ್ಯ ಆವಿಷ್ಕಾರಂಗೊ ಹೊಳೆದ ಜಾಗೆ ಅಲ್ಲದೊ ಇದು.  ವೆತ್ಯಾಸ  ಇಷ್ಟೆ, ಆನು “ಯುರೇಕಾ” ಹೇಳಿಗೊಂಡು ಅರ್ಧಂದ ಹೆರ ಬತ್ತಿಲೆ. ಪಾರುವ ಕೆಲವು  “ಅಸಂಬದ್ದ” ಪ್ರಶ್ನೆಗ ಬಪ್ಪದು ಇದೇ ಸಮಯಲ್ಲಿ.

“ಬೇಡದ್ದ ವಿಷಯ ಆದರೆ ಎಷ್ಟು ಘಟ್ಟಿಗೆ ಹೇಳಿರೂ ಕೆಮಿಗೆ ಬೀಳುಲೇ ಇಲ್ಲೆ, ಅದೇ… ನಿಂಗೊಗೆ ಬೇಕಾದ ವಿಷಯವ  ದೊಂಡೆ ಒಳಾಂದ ಹೇಳಿರೂ ಕೇಳುತ್ತು, …ಅದು ಹೇಂಗೆ..?”

“ಅದು ಗೊಂತಾದ ಘಳಿಗೆಲಿ “ಯುರೇಕಾ” ಹೇಳಿಗೊಂಡು ಎದ್ದು ಬಪ್ಪೆ ಕೂಸೆ, ಈಗ ಸುಮ್ಮನೆ ಚಾಯ ಕೊಡು ”

“ನಿಂಗೊಗೆ ಒಂದೂ ಗೊಂತಪ್ಪಲಿಲ್ಲೆ ಹೂಂ…!”  ತೀರ್ಮಾನ ಕೊಟ್ಟು ನಡದತ್ತು, ಪಾರು.

ಬೀಸುವ ದೊಣ್ಣೆಯ ಪೆಟ್ಟಿನ ಹೀಂಗೆ ಅಸಂಬದ್ದ ಉತ್ತರ ಕೊಟ್ಟು ತಪ್ಪುಸುವ ಉಪಾಯ ಎನಗೆ ಅನುಭವಂದ ಬಂದದು, ಮದುವೆ ಕಳುದ ಮೇಲೆ.!

“ಬರೇ ಬೋಸನಾಂಗೆ, ಎಂತ ಗೊಂತಪ್ಪಲಿಲ್ಲೆ” – “ಇಂಜಿನಿಯರಡ, ಎಂತರ..” ಹೀಂಗಿಪ್ಪ ವಿಶೇಷಣಂಗ ಸಾಮಾನ್ಯ ಸಂದರ್ಭಲ್ಲಿಯೂ ಬಕ್ಕು. ಒಂದರಿ ಎನ್ನ ಕೂಟದ ಮದುವೆ ಆಗದ್ದ ದೋಸ್ತಿಗ ಮನೆಗೆ ಊಟಕ್ಕೆ ಬಂದಿಪ್ಪಗ, ಆನು ಲೊಟ್ಟೆ ಮಾತಾಡಿಗೊಂಡು ಹೇಳಿದ್ದಿತ್ತು – ಅಬ್ದುಲ್ ಕಲಾಮ್ ಮದುವೆ ಆಗದ್ದು ಎಂತಕೆ ಗೊಂತಿದ್ದ ಮಾರಾಯ. ಮಿಸೈಲು, ರಾಕೆಟ್ಟು ಡಿಸೈನು ಮಾಡಿದ ಜನ, ಮನೆಲಿ “ನಿಂಗೊಗೆ ಏನು ಗೊಂತಿಲ್ಲೆ”  ಹೇಳಿ ಕೇಳ್ಸಿಗೊಂಬಲೆ ತಯಾರಿಕ್ಕೊ. ಬುದ್ದಿವಂತ, ಮದುವೆಯೇ ಬೇಡ ಹೇಳಿ ಕೂದತ್ತು. ಇದಾ ನಿಂಗೊ ಮದುವೆ ಆಯೆಕ್ಕಾರೆ ಒಂದರಿ ಯೋಚನೆ ಮಾಡಿಕ್ಕಿ –  ಮದುವೆ ಆದವು ಆಗದ್ದವಕ್ಕೆ ಬೇಡದ್ದರೂ ಕೊಡುವ ದರ್ಮದ ಸಲಹೆಯ ಆನು ಕೊಟ್ಟಿತ್ತಿದ್ದೆ.. ಅವೆಲ್ಲೊರೂ ಈಗ ಮದುವೆ ಕಳುದು “ಸುಖ”ಲ್ಲಿ ಇದ್ದವು, ಆ ಸಂಗತಿ ಬೇರೆ. !

” ಅದಿರಳಿ,…, ಕಲಾಂ ಮದುವೆ ಅಗದ್ದೆ ಕೂದ ವಿಷಯ ನಿಂಗೊಗೆ ಹೇಂಗೆ ಗೊಂತು ಹೇಳಿ” ಎಲ್ಲೋರು ಉಂಡಿಕ್ಕಿ ಹೋದ ಮೇಲೆ ಎನ್ನ ಹತ್ತರೆ ಕೂದೊಂಡು ಪಂಚಾತಿಕೆ ಶುರು ಮಾಡಿತ್ತು. ಪಾರು ತಮಾಶೆಗೆ ಕೇಳುದು ಅಲ್ಲ ಹೇಳ್ತದು ಅದರ ಮೊದ್ದು ಮಾತಿಲಿಯೇ ಗೊಂತಾತು . ಕಲಾಂ  ಬರದ  “Wings Of Fire ” ಪುಸ್ತಕ ತಂದು, “ನೋಡುವಾ ಇದರಲ್ಲಿ ಸಿಕ್ಕಿಗು ವಿಷಯ” ಹೇಳಿ ಬಿಡಿಸಿ ಓದುಲೆ ಕೂದೆ, ಪಾರು ಒಟ್ಟಿಂಗೆ ಕೂದತ್ತು. ಪಾರುಗೆ ತುಂಬ ಇಷ್ಟ ಅಪ್ಪ ಹವ್ಯಾಸ ಇದು , ಪುಸ್ತಕ ಓದುದು – ಒಂದರಿ ಕೂದರೆ ಹತ್ತರೆ ಬಾಂಬು ಹೊಟ್ಟಿರೂ ಗೊಂತಾಗ, ಅಷ್ಟು ತನ್ಮಯತೆಲಿ ಓದುಗು. ಮತ್ತೆ ಎರಡು ದಿನ ಅದರದ್ದೇ ಗುಂಗಿಲಿ ಇರ್ತು.  ಆನು ಲೊಟ್ಟೆ ಬಿಟ್ಟದಕ್ಕೆ ವಿವರಣೆ ಕೊಡೆಕ್ಕಾದ ಅಗತ್ಯ ಮತ್ತೆ ಬಯಿಂದಿಲೆ. ಪಾರು ಪುಸ್ತಕದ ಒಳ ಬಿದ್ದತ್ತನ್ನೆ !

ಹಾಂಗೇಳಿ ಕೆಲವು ಸರ್ತಿ, ವಿಷಯ ಸಣ್ಣ ಹೇಳಿ ಗೋಶ್ಪಾರಿ ಮಾಡಿ ಅಕೇರಿಗೆ ‘ಬೋಸು’ ಆದ್ದದು ಇದ್ದು.

ಬೆಂಗ್ಳೂರಿಂಗೆ ಬಂದು ಕೈ ತುಂಬ ಸೋಲದ್ದ ನಮುನೆಲಿ ಸಾಲ ಮಾಡಿ ಮನೆ, ಮಠ ಹೇಳಿಗೊಂಡು ಒಂದು ಮಟ್ಟಕ್ಕೆ ಸೆಟ್ಟ್ಲುಆತು ಹೇಳಿ ಇಪ್ಪಗ, ಮಕ್ಕಳ ಅಗತ್ಯಂಗ ಏರಿಗೊಂಡು ಬಂತು. ಇಲ್ಯಾಣ ಸಿಮೆಂಟ್ ಕಾಡಿನ ನಡುಗೆ ಆಟಕ್ಕೆ ಮೈದಾನ ಹುಡುಕಿದರೂ ಸಿಕ್ಕದ್ದೆ ಇಪ್ಪಗ, ಅದು ಇಪ್ಪಲ್ಲಿ ಜತೆಗೆ ಆಡುವವು ಇಲ್ಲೆ ಹೇಳಿ ಅಪ್ಪಗ, ಸೈಕಲ್ ಬೇಕು ಹೇಳಿ ಆತು. ರಜ್ಜ ಸಮಯ ಕಳಿಯಲಿ ಹೇಳಿ ಅವರ ಒಪ್ಪುಸುವ ಪ್ರಯತ್ನ ಸರಿ ಬಯಿಂದಿಲೆ. ಪಾರುಗುದೆ ಮಕ್ಕೊಗೆ ಆಟಕ್ಕೆ ಬೇಕಪ್ಪದರ ಕೊಡುಸುಲೆ ಆನು ಮುಂದೆ ಹಾಕುದು ಇಷ್ಟ ಆಯಿದಿಲ್ಲೆ. ಕಿಸೆ, ಕೈ ಖಾಲಿ ಅಪ್ಪಗ ಸುಲಭಲ್ಲಿ ಕೊಡುಲೆ ಸಿಕ್ಕುವ ‘ಉಪಾಯಾಸ್ತ್ರ’ –  ಉಪದೇಶ   – ಶುರು ಮಾಡಿದೆ

“ಪಾರು…ನವಗೆ ತ್ರಾಣ ಇಪ್ಪಷ್ಟೇ ಮಾಡ್ಲೆ ಹೆರಡೆಕ್ಕು, – ಹಾಸಿಗೆ ಇದ್ದಷ್ಟು ಕಾಲು ಬಿಡುಸೆಕ್ಕು, ಹೇಳಿ ಹೆರಿಯೋರು ಅಂತೆ ಹೇಳಿದ್ದಾವಿಲ್ಲೆ.”

“ಅದು ಸರಿಯೇ, ಆದರೆ ಕಾಲು ಬಿಡಿಸಿದಷ್ಟಕ್ಕೆ ಹೆಚ್ಚಿಗೆ ಹಾಸಿಗೆಯ ಉದ್ದ  ಯೆಳೆಯಕ್ಕಾವುತ್ತು. ”

“ಹಾಂಗೆ ಹಾಸಿಗೆ ಯೆಳವಲೆ ಹೆರಟರೆ ಅದಕ್ಕೆ ಮಿತಿ ಇಲ್ಲೆ ಪಾರು, ಹೆಚ್ಚಿಗೆ ಉದ್ದ ಯೆಳೆದರೆ ಹೊಸ್ತಿಲ ಹೆರಂಗೆ ಹೋಕ್ಕು, ಒಳ್ಳೆದಲ್ಲ ಅದು”

“ನಿಂಗೊಗೆ ಎಂತ ಗೊಂತಪ್ಪಲಿಲ್ಲೆ, ಮಕ್ಕೊ ಉದ್ದ ಬೆಳವದು ಬೇಗ. ಅವರ ಹಾಸಿಗೆಯ ಸಮಯಕ್ಕಪ್ಪಗ ಉದ್ದ ಯೆಳೆಯದ್ದರೆ ಕಾಲು ಹೆರ ಬೀಳುಗು. ಮನೆ, ಮಠ ಹೇಳಿ ನಮ್ಮ ಅಗತ್ಯದೊಟ್ಟಿಂಗೆ ಅವರ ಅಗತ್ಯವನ್ನೂ ನೋಡೆಡದಾ.? ನಾವು ಇನ್ನು ಉದ್ದ ಬೆಳದ್ದದು ಸಾಕು, ಮಕ್ಕಳ ವಿಷಯ ಆನು ಹೇಳುದು ”

” ನೋಡೆಕ್ಕಾದ್ದೆ…ಆದರೆ..” ಹೇಳಿ ಆನು ಮಾತು ನಿಲ್ಸಿದೆ. ಪಾರು ಬಲದ ಕೈಲಿ ಬೆಂಡೋಲೆಯೊಟ್ಟಿಂಗೆ ಆಟ ಆಡ್ಲೆ ಶುರು ಮಾಡಿತ್ತು, ಎಂತದೋ ಉಪಾಯ ಹಾಕಿರೆಕ್ಕು.. . ಅದು ಖಂಡಿತ. ಮಾಂತ್ರ ಸುಲಭಲ್ಲಿ ಗುಟ್ಟು ಬಿಡ.

” ಹೂಂ….ನೀನು ಎಂತರ ಆಲೋಚನೆ ಮಾಡ್ತದು’

“ಯೇಯ್..ಎಂತ ಇಲ್ಲೆ” ಕಿಸಕ್ಕನೆ ನೆಗೆಮಾಡಿಗೊಂಡು ಒಳ ಹೋತು. ರಜ ಹೊತ್ತಿಲಿ ಬಂದಪ್ಪಗ ಕೈಲಿ ಒಂದು ಹಳೆ ಪರ್ಸು- ಮುಳಿಯದವರ ಅಂಗಡಿದು, ಕಂಡತ್ತು. ಒಳಂದ ಸಾವಿರದ ನೋಟುಗ ಎಣುಸಿ ಕೊಟ್ಟತ್ತು, “ಎರಡು ಸೈಕಲಿಂಗೆ ಸಾಕಕ್ಕು,  ಹೆಚ್ಚಿಗೆ ಬೇಕಾರೆ ಕೈಯಿಂದ ಹಾಕಿ, ಎಂತಾವುತ್ತು.”

ಅಪ್ಪಲೆ ಎಂತದೂ ಇಲ್ಲೆ. ಆದರೆ ಇಷ್ಟು ಪೈಸೆ ಎಲ್ಲಿಂದ ಬಂತು ನಿನ್ನ ಹತ್ತರೆ. ಈ ಪರ್ಸು ನಿನ್ನ ಅಮ್ಮನತ್ತರಂದ ಪೀಂಕಿಸಿದ್ದಲ್ಲದಾ,ಈಗ ಪೈಸೆದೇ ಕೇಳುಲೆ ಶುರು ಮಾಡಿದೆಯಾ ಹೇಂಗೆ.?”

” ಶೆಃ…ನಿಂಗೊಗೆ ಎಂತ ಗೊಂತಪ್ಪಲಿಲ್ಲೆ. ಇದು ಆನು ತಿಂಗಳ ಖರ್ಚಿಲಿ ಒಳುಸಿದ್ದದು, ನಾಕು ವರ್ಷ ಲಾಗಾಯ್ತು. ನಿಂಗೊಗೆ ನೆಂಪಿದ್ದ, ಆನು ಊರಿಂದ ಬಪ್ಪಗ ಈ ಪರ್ಸು ತೆಕ್ಕೊಂಡು ಬಂದದು, ಕಸವು ಮಾಡ್ಲೆ ತಪ್ಪದು ಹೇಳಿಗೊಂಡು ನಿಂಗೊ ಬೈದ್ದದು ,  ಅದೇ ಪರ್ಸು ಇದು”

“ಅಂಬಗ ಎಂತ, ನಾಕು ವರ್ಷ ನೀನು ಒಪ್ಪೊತ್ತು…. ಮಣ್ಣು ಕೂಯಿದೆಯ ಹೇಂಗೆ ,ಒಳುಸುಲೆ ಬೇಕಾಗಿ ”

“ಇಲ್ಲೆಪ್ಪಾ…ನಾಲ್ಕೈದು ವರ್ಷಂದ ಆನೂ, ಮಕ್ಕಳೂ ಮಾಂತ್ರ ಆಗಿ ಊರಿಂಗೆ ಹೋಯಿಕ್ಕೊಂಡು ಇತ್ತಿಲ್ಲೆಯ, ಅವಗ ಖರ್ಚಿಗೆ ಕೊಟ್ಟದರಲ್ಲಿ ಒಳುದ್ದೂ ಸೇರಿತ್ತು. ”

“ಸರಿ..ಸರಿ, ಇದರ ಬೇಕಾರೆ ಮಡಿಕ್ಕೊಈಗ, ಸೈಕಲ್ಲಿಂಗೆ ಬೇರೆ ಆಲೋಚನೆ ಮಾಡುವಾ..”

“ನಿಂಗೊ ಆಲೋಚನೆ ಮಾಡಿದ್ದರ ಎನಗೆ ಮತ್ತೆ ಕೊಡಿ, ಈಗ ಸಮಯಕ್ಕೆ ಬೇಕಪ್ಪಗ ಇದರ ಉಪಯೋಗುಸುದು. ಅಗತ್ಯ ಇಪ್ಪಗ ಉಪಯೋಗುಸುದೂ ಒಂದೆ, ಆಪತ್ತಿಂಗಪ್ಪಗ ಉಪಯೋಗಿಸಿದರೂ ಒಂದೇ.”

” ಆತು, ಒಪ್ಪಿದೆ.  ಅಂತೆ ಅಲ್ಲ ಪಾರು ಆನು ನಿನ್ನ ಬಂಗಾರು ಹೇಳುದು, ಹೇಮಾರ್ಸಿ ಮಡಿಗಿದ ಚಿನ್ನ- ಹೆರಿಯೋರು ಹೇಳ್ತಾಂಗೆ ಆಪಧ್ಧನ.!  ಅದಿರ್ಲಿ, ಈ ಪರ್ಸು ಮಡುಗುತ್ತ ಜಾಗೆ ಯೇವುದು ನೋಡ. ಸತ್ಯಕ್ಕಾರೆ ಎನಗೆ ಈ ಸಂಗತಿ ಗೊಂತೇ… ಆಯಿದಿಲ್ಲೆ ನೋಡು.” ಹೇಳಿಗೊಂಡು ಆನು ಕೋಣೆ ಒಳ ಬಂದೆ.

“ಹೋಗಿ ನೋಡ  ಹೆರ” ಹೇಳಿ ನೂಕಿ ಬಿಟ್ಟತ್ತು.!

30 thoughts on “ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..!

  1. ಕುಮಾರ ಭಾವನ ಲಲಿತ ಬರಹಂಗಳ ಓದುವಗ ಮುದ್ದಣನ ನೆಂಪಾವುತು. ಲವಲವಿಕೆ , ಜೀವಂತಿಕೆ ಚೆಂದಕೆ ಓದಿಸಿಕೊಂಡು ಹೋವುತು. ದೂರದ ಸೌದಿ ಅರಬಿಯಲ್ಲಿದ್ದರೂ ಊರಿಂಗೆ ಬಂದಾಂಗವುತು.

  2. ಆತು..ಪ್ರಯತ್ನಲ್ಲಿ ಯಶಸ್ಸು ಸಿಕ್ಕಿತ್ತದ..

  3. ಅಕ್ಕು..
    ಇನ್ನಾಣ ಒಪ್ಪವ ಕನ್ನಡಲ್ಲಿ ಬರವಲೆ ಪ್ರಯತ್ನ ಮಾಡು, ಎನಗೆ ಇಂಗ್ಲೀಷು ಓದುಲೆ ಎಡಿತ್ತಿಲೆ ಆತೋ..

    1. ಕುಮಾರ ಮಾವ°,
      { ಎನಗೆ ಇಂಗ್ಲೀಷು ಓದುಲೆ ಎಡಿತ್ತಿಲೆ}
      ಅಷ್ಟೆಯೋ? ನಿಂಗೊಗೆ ಸರೀ ಅರಡಿತ್ತಾಯಿಕ್ಕು ಹೇಳಿ ಆನು ನಿಂಗಳ ಮಾತಾಡುಸದ್ದು! 😉
      ಇದೂ – ಒಂದರಿ ಕಲಿಯಲೆ ಕಷ್ಟ, ಅಷ್ಟೇ. ಮತ್ತೆ ಸರೀ ಓದಲೆ ಬತ್ತು.
      ಬೇಕಾರೆ, ಆ° ಹೇಳಿಕೊಡ್ತೆ, ಅಕ್ಕಲ್ದಾ? 😎

        1. { ಓಕೆ}
          ಅಕ್ಕಾರೆ ಅಕ್ಕು ಹೇಳಿಮಾವ, ಆಗದ್ರೆ ಆಗ ಹೇಳಿಯೇ ಹೇಳಿ.
          ಹೀಂಗೆ “ಕೊಕ್ಕೆ” ಎಂತಕೆ ಹೇಳ್ತಿ? 😉

          1. ಯೇವಾಗ ಬತ್ತೆ..ನಿನ್ನ ಕೈಲಿ ಕಲಿವಲೆ ಕಾಯ್ತಾ ಇದ್ದೆ.

          2. ಏ ನೆಗೆಮಾಣಿ,
            ‘ಕೊಕ್ಕೆ’ ಹೇಳಿ ಕೊಕ್ಕು ಉದ್ದಮಾಡಿ ಹೀ೦ಗೆ ಒಕ್ಕುಲೆ ಅಕ್ಕೋ ? ನಿನ್ನ ಸೊಕ್ಕೇ ! ಹಪ್ಪ..

  4. enna mava estu oppakke baretta heli gontaddu ee barahangala odiyappagale! baravanigeya shaili tumba esta aatu. ennanaddakke kaita edde.. hange ninage puttiya abhinandanego..

  5. ನವರಸ ಸೇರ್ಸಿ ವಾಸ್ತವಿಕತೆಯ ಬರದ್ದು ಲಾಯಕ ಆಯ್ದು …ಬರೆತ್ತಾ ಇರಿ …ಇನ್ನೊಂದು ಲೇಖನ ಯಾವಾಗ ಬತ್ತು ಹೇಳಿ ಕಾಯ್ತಾ ಇದ್ದೆ ಓದುಲೆ..

  6. ಎಲ್ಲೋರಿಂಗೂ ಧನ್ಯವಾದಂಗೊ.

  7. ‘ಪಾರುಪತಿ’ಯ ಪಾರುಪತ್ಯ ಸ್ವಗೃಹಲ್ಲಿ ಏವ ರೀತಿ ನೆಡೆತ್ತಾ ಇದ್ದು ಹೇಳುದರ ಚಿತ್ರಣವ ಬೈಲಿಂಗೆ ಚೆಂದಕೆ ಕೊಟ್ಟಿದಿ ಕುಮಾರಣ್ಣಾ.. ಸರಸ ಸಾಂಗತ್ಯಲ್ಲಿ ಸುಗಮವಾಗಿ ಸಾಗುತ್ತಾ ಇಪ್ಪ ಸಂಸಾರಕ್ಕೆ ಅಭಿನಂದನೆಗೊ 🙂

  8. ಬರವಣಿಗೆಯ ಶೈಲಿ ಲಾಯ್ಕಿದ್ದು 🙂 ವಾಸ್ತವಿಕತೆ ಇದ್ದು 🙂

  9. ಕುಮಾರಣ್ಣನ ಸಂಸಾರದ ಸರಿಗಮ ಎರಡನೇ ಕಂತುದೆ ಚೆಂದಕೆ ಬಂತು. ಚಿಕ್ಕ ಚೊಕ್ಕ ಮನೆಯ ನೈಜ ಚಿತ್ರಣ ಇದು. ಬರದ ಶೈಲಿಲಿ ಓದುಸೆಂಡು ಹೋವುತ್ತು. ಮಕ್ಕಳ ತುಂಟತನ, ಹೆಮ್ಮಕ್ಕಳ ಗೆಂಟುತನ, ಗೆಂಡು ಮಕ್ಕಳ ಜಾಣಕಿವುಡು ನೀತಿ ಎಲ್ಲವುದೆ ಎಲ್ಲೋರ ಮನೆಯ ಕತೆಯೆ. “ಪಾರು”ವ ಹೆಸರು ಆ ರೀತಿಲಿ ಬಂದದು ಕೇಳಿ ತುಂಬಾ ನೆಗೆ ಬಂತು.

  10. ಕುಮಾರಣ್ಣ,
    ಭಾರಿ ಲಾಯ್ಕ ಆಯಿದು.. ಎನ್ನ ಅಬ್ಬೆ ಅಪ್ಪನ ಹತ್ತರೆ ಹೇಳಿಗೊಂಡಿತ್ತ ಮಾತುಗೊ ನೆನಪಾತು..
    ಒಂದು ಒಪ್ಪ ಃ)

  11. ಕುಮಾರ ಮಾವಾ,
    ಪ೦ಚಾತಿಗೆಯ ಶೈಲಿ ಸುಲಲಿತವಾಗಿ ಓದುಸಿತ್ತು.ತಿಳಿಹಾಸ್ಯದ ಕ್ಷಣ೦ಗೊ ಮನಸ್ಸಿ೦ಗೆ ಭಾರೀ ಹತ್ತರೆ ಆತು.ಕಲಾ೦ ಮದುವೆ ಆಗದ್ದದರ ರಹಸ್ಯ ಗೊ೦ತಾಗಿಯಪ್ಪಗ ನೆಗೆ ತಡೆಯ.
    ಮು೦ದುವರಿಯಲಿ ಹೇಮಾರ್ಸಿ ಮಡುಗಿದ ಅಮೂಲ್ಯ ವಸ್ತುಗೊ,ನಿ೦ಗಳ ಚಿತ್ತಭಿತ್ತಿ೦ದ… ನೆನಪಿನ ಬುತ್ತಿ೦ದ..

    1. ಭಾವಯ್ಯ,, ಎಂತಕೆ ಕುಂಬಳಕಾಯಿ ಕಳ್ಳನ ಹಾಂಗೆ ಮಾಡ್ತದು..?
      ಬೇಜಾರು ಮಾಡೆಡಿ…. ಇದು, ಬರೇ ಕಾಕತಾಳೀಯ.

      1. ಇದಾ..! ಕುಮಾರಣ್ಣೊ 🙂
        ಕು೦ಬಳ ಕಾಯಿ ಮಣ್ಣು ನವಗೆ ಬೇಡ… 😛
        ಆನು ಹೇಳ್ತೆ ಹಾ೦ಗೆ ಮಾಡಿ.. ಅದರ ಲಾಯಕೆಲಿ ದೊಡ್ಡ ದೊಡ್ಡ ಹೋಳಾಗಿ ಕೊರದು.. 😉
        ಹುಳಿ ಮಜ್ಜೆಗೆಲಿ ಮೇಲಾರ ಮಾಡಿ..!! 😀
        ಒಟ್ಟಿ೦ಗೆ ಕಾರ ಸೊನೆ ಇಪ್ಪ ಮಡಿ ಇದ್ದರೆ ಮತ್ತೆ ಎ೦ದದೂ ಬೇಡ.. 😉
        ಸರೀ ಅಶನಕ್ಕೆ ಕಲಸಿ ತಿ೦ತ್ಸು.. ಆಗದೋ?? 🙂
        ಹೀ೦ಗಿಪ್ಪಗ ಬೇಜಾರು ಮಾಡೆಡಿರಕ್ಕೊ?? ಏ..!! 😉

  12. ನಿಂಗೊಗೆ ಎಂತ ಗೊಂತಪ್ಪಲಿಲ್ಲೆ ಹೇಳಿ, ಉಪಾಯಲ್ಲಿ ಹಣ ಒಳುಶಿ ಅದರ ಮಕ್ಕಳ ಅಗತ್ಯಕ್ಕೆ ಕೊಟ್ಟದು ಲಾಯಿಕ ಆಯಿದು.
    ಶುದ್ದಿಯ ಓಟ ತಿಳಿ ಹಾಸ್ಸದೊಟ್ಟಿಂಗೆ ಓದುವಾಗ ಕೊಶಿ ಕೊಡುತ್ತ್ತು.
    ಬಹುಷಃ ಎಲ್ಲರ ಮನೆಯ ಕತೆಯೂ ಸರಿ ಸುಮಾರು ಹೀಂಗೆ ಇಪ್ಪದು. ಅಲ್ಲದಾ?
    ಗೃಹಿಣಿ, ಮನೆಯ ಹೇಂಗೆ ನಿಭಾಯಿಸಿಂಡು ಹೋವುತ್ತು ಹೇಳ್ತದರ ಚಿತ್ರಣ ಚೆಂದಕೆ ಬಯಿಂದು.

  13. ಒಳ್ಳೇದಾಯಿದು.
    ಸುರು ಸುರುವಿ೦ಗೆ ದೂರುತ್ತಾ, ತಮಾಷೆ ಮಾಡುತ್ತಾ ಸುರು ಮಾಡಿರುದೆ, ಕಡೇ೦ಗೆ ಸೂಪರ್ ಆಗಿ ಮುಕ್ತಾಯ ಮಾಡಿದ್ದು ಭಾರೀ ಲಾಯಿಕಾಯಿದು.
    ಒಪ್ಪ೦ಗೊ.

  14. ಕುಮಾರಣ್ಣ , ಲಾಯಕ್ಕಾಯ್ದು. ಒಳ್ಳೇ ವಿಷಯ. ಎಡೆ ಎಡೆಲಿ ಎಡೆ ಉಳಿತಾಯ ಮರ್ಯಾದಿ ಕಾಪಾಡಲೂ ಒದಗುತ್ತು, ಆಪತ್ಕಾಲ ಪರಿಹಾರಕ್ಕೂ ಆವ್ತು.

    ಆದರೆ ಆ ಪಾರು ಆ ಹೇಮರ್ಸಿ ಮಡಿಗಿದ ಪೈಸೇಲಿ ಚಿನ್ನ ತೆಗವಲೆ / ಪಟ್ಟೆ ಸೀರೆ ತೆಗವಲೋ ಏಕೆ ಮನಸ್ಸು ಮಾಡಿದ್ದಿಲ್ಲೇ?! – ಉಮ್ಮಾ, ಅಬ್ದುಲ್ ಕಲಾಂ ಏಕೆ ಮದುವೆ ಆಯ್ದಿಲ್ಲೇ ಹೇಳುವಷ್ಟೇ ರಹಸ್ಯ. ಅರ್ಥವೇ ಆವ್ತಿಲ್ಲೆ!

    1. ಚಿನ್ನ, ಪಟ್ಟೆಸೀರೆ ಬೇಕಾವುತ್ತಿಲ್ಲೆ, ಅದು ಗಾಂಧಿಕುಟ್ಟಿ…ಹಾಂಗೆ ಬೇಕಾರೆ ಗೆಂಡ ತಂದು ಕೊಡೆಕ್ಕಷ್ಟೆ.

  15. ಒಳ್ಲೆ ಬರವಣಿಗೆ. ಲಾಯ್ಕ ಷೈಲಿ ನಿಂಗಳದ್ದು. ಇನ್ನುದೆ ಹೀಂಗಿಪ್ಪ ಲೇಖನಂಗೊ ಬರಲಿ.

  16. {ನಿಂಗೊ ಆಲೋಚನೆ ಮಾಡಿದ್ದರ ಎನಗೆ ಮತ್ತೆ ಕೊಡಿ, ಈಗ ಸಮಯಕ್ಕೆ ಬೇಕಪ್ಪಗ ಇದರ ಉಪಯೋಗುಸುದು.} – ಹೆ ಪಷ್ಟಾಯಿದು..
    ಕಥೆಯೂ ಲಾಯಕಿದ್ದು ಅಣ್ಣೋ..!!

    ಅದಪ್ಪು ಈ ಮನೆಯವರ ಹೆಸರು ಹಿಡುದು ಹೇಳ್ತವೋ?
    ಅಪ್ಪ, ಅಬ್ಬೆಯ ಹೆಸರು ಹೇಳುದು ಆನು ಇಷ್ಟರವರೆಗೆ ಕೇಳಿದ್ದಿಲ್ಲೆ.
    ಒಂದರಿ ಅಪ್ಪ ಹೇಳಿತ್ತಿದ್ದವು, ” ಹೆಂಡತ್ತಿ ಹೇಳಿರೆ ಮನೆಯ ಲಕ್ಷ್ಮಿ.. ಹೆಸರು ಹಿಡುದು ಹೇಳ್ಲಾಗ ಹಾಂಗೆಲ್ಲ” ಹೇಳಿ..

    1. ಹಾಂಗೆ ಹೆಸರು ಹೇಳ್ತ ಕ್ರಮ( ?) ಇತ್ತಿಲ್ಲೆ ಕಾಣ್ತು, “ಕೇಟತ್ತೋ”,” ಕೂಊ..” ಹೇಳಿಗೊಂಡು ದೆನುಗೇಳ್ತದರ ಆನು ಕೇಳಿದ್ದಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×