Oppanna.com

ರಾಮಾಯಣ ಅಲ್ಲ ಪಿಟ್ಕಾಯನ

ಬರದೋರು :   ತೆಕ್ಕುಂಜ ಕುಮಾರ ಮಾವ°    on   04/04/2015    3 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಧರ್ಮಾರಣ್ಯದ ಹತ್ತರೆ ಎನ್ನ ಚೆಂಙಾಯಿ  ಒಬ್ಬನ ಮನೆಲಿ ತ್ರಿಕಾಲ ಪೂಜೆ ಕಳುತ್ತು. ಎನಗೆ ಹೋಪಲೆ ಪುರ್ಸೊತ್ತಿಲ್ಲೆ ಹೇಳ್ಯೊಂಡು ಆನು ಪಾರುವ ಕಳ್ಸಿದ್ದು. ಮುನ್ನಾಣ ದಿನ ಇರುಳು ಮೆಜಿಸ್ಟಿಕ್ಕಿಲಿ ಬಸ್ಸುಹತ್ತಿಸಿರೆ ಮರದಿನ ಉದೆಗಾಲಕ್ಕೆ ಮನೆ ಎದುರೇ ಇಳುದರಾತು. ಮನೆಂದ ಧರ್ಮಾರಣ್ಯಕ್ಕೆ ಹೋಪಲೆ ಹೆಚ್ಛಿಗೆ ಆವುತ್ತಿಲೆ. ಹೋಗಿ ಬಪ್ಪಲೆ ಬಂಙ ಇಲ್ಲೆ. ಹಾಂಗಾಗಿ ಪಾರು ಒಬ್ಬನನ್ನೆ ಕಳುಸಿದ್ದು. ವಾಪಾಸು ಬಂದು ಪೂಜೆ ಎಲ್ಲ ಹೇಂಗಾತು ಹೇಳಿ ವಿಚಾರ್ಸಿರೆ,

“ನಿಂಗಳ ಚೆಂಙಾಯಿ ಮನೆಲಿ ಎನ್ನ ಚೆಂಙಾಯಿಯ  ಕಾಂಬಲೆ ಸಿಕ್ಕಿತ್ತು.ಮದುವೆ ಕಳುದ ಮತ್ತೆ ಎಂಗೊ ಇದೇ ಶುರು ಕಾಂಬದು” ಹೇಳಿ ಶುರು ಮಾಡಿತ್ತು. ಪೂಜೆ ವಿಷಯ ಹೇಳುಗು ಗ್ರೇಶಿರೆ ಇದರ ಚೆಂಙಾಯಿ ಕತೆ ಶುರು ಮಾಡಿತ್ತು. ರಾಮಾಯಣದೆಡೆಲಿ ಪಿಟ್ಕಾಯನ ಕೇಳಿದಾಂಗಾತೆನಗೆ. ಬೇರೆ ನಿವೃತ್ತಿ ಇಲ್ಲೆ, ಮಾತಿಲ್ಲದ್ದೆ ಕೇಳುಲೆ ಕೂದೆ. ನಿಂಗಳೂ ಪಾರುವ ಮಾತಿಲಿಯೇ ಕೇಳಿ…

ಮನೆಗೆತ್ತಿದೋಳು ಕಾಪಿ ತಿಂಡಿ ಆಗಿ, ಮೀಯಾಣ ಮುಗುಶಿ  ಬೇಗಬೇಗ ಹೆರಡೆಕ್ಕು ಗ್ರೇಶಿರೂ ,ಹೆರಟು ನಿಂಬಗ ಘಂಟೆ ಒಂಬತ್ತು ಕಳುದ್ದು. ತಡವಾಗಿ ಹೋಕ್ಕೋ ಹೇಳ್ಯೊಂಡು ಗಡಿಬಿಡಿ ಮಾಡಿ ಬಂದಪ್ಪಗ ಪೂಜೆ ಮನೆಲಿ ಉದಿಯಪ್ಪಗಾಣ ಮಂಗಳಾರತಿಗೆ ಆವ್ವುತ್ತಷ್ಟೆ.ಉಪ್ಪರಿಗೆ ಮನೆ ಅಲ್ಲದ್ದರೂ ಸಣ್ಣದೇನಲ್ಲ ಮನೆ. ಒಳ ಕೋಣೆಲಿ ಕಾಲು ನೀಡಿ ಕೂದೊಂಡು ಉಸುಲು ಬಿಡುವಗ ಎನ್ನ ಹೆಸರೇಳಿ ದೆನುಗೇಳುದು ಕೇಳಿತ್ತು.

ಯೇ ಪಾರು.! ಇದಾ ಇಲ್ಲಿ, ಬಾ ಇತ್ತ”.ಎನಗೆ ಈಚಿಕೆ ಕೂದೋಳಿಂಗೆ ಆರು ಹೇಳಿ ಗೊಂತಾಯಿದಿಲ್ಲೆ. ಎದ್ದು ಅತ್ತ ಹೋಗಿ ನೋಡ್ತೆ ಸಕು, ಎನ್ನ ಸಣ್ಣಗಿಪ್ಪಗಾಣ ಚೆಂಙಾಯಿ.!

“ಅಂಬಗ ಪೂರ್ಣ ಹೆಸರು ಶಕುಂತಳೆ ಆಗಿಕ್ಕು ಅಲ್ಲದೋ..?” ಹೇಳಿ ಆನು ಎಡೆಲಿ ಬಾಯಿ ಹಾಕಿದೆ.

“ಅಲ್ಲಪ್ಪ…!ಕುಮಾರಿ ಹೇಳಿ ಹೆಸರು.ಸರಳಿ ಮನೆಕೂಸು, ಎಂಗೊಗೆಲ್ಲ ಸಕು…”

“ನಿಂಗೊಎಡೆಲಿ ಮಾತಾಡೆಡಿ. ಎನಗೆ ಬಾಯಿ ಕಟ್ಟುತ್ತು.” ಹೇಳಿ ಎನ್ನ ಬಾಯಿ ಕಟ್ಟಿ ಹಾಕಿತ್ತು. ತಳಿಯದ್ದೆ ಹೂಂ ಕುಟ್ಟಿದೆ . ಕತೆ ಮುಂದುವರುಸುಲೆ ಸಿಗ್ನಲ್ಲು ಹೇಳಿ ಗ್ರೇಶಿತ್ತು ಪಾರು …

ಸುಮಾರು ಸಮಯಂದ ಕಾಣದ್ದೆ ಕಾಂಬದಲ್ಲದೋ ಸಕುವ, ಮೋರೆ ವಜಾಯಲ್ಲಿ ಗೊಂತಾಯೆಕ್ಕಷ್ಟೆ ಅಲ್ಲದ್ದೆ ಫಕ್ಕನೆಗೆಲ್ಲ ಗುರ್ತ ಸಿಕ್ಕ. ಮದುವೆಗೆ ಮದಲು ಸಣಕ್ಕಟೆ ಇದ್ದದು ಈಗ ಗುಂಡ್ರುಮೆ ಆಯಿದು. ಆಚಿಕೆ ಈಚಿಕೆ ಎರಡು ಕೂಚಕ್ಕಂಗೊ, ಬಹುಶಃ ಮಗಳಕ್ಕ ಆಗಿರೆಕ್ಕು ಹೇಳಿ ಗ್ರೇಶಿದೆ. ಪೂಜೆ ಮನೆಲಿ ಬಂದೋರ ನೋಡ್ಯೊಂಡು ಆರಾರು ಗುರ್ತದೋರ ಮೋರೆ ಕಾಣುತ್ತೋ ಹೇಳಿ  ಹುಡ್ಕಿಗೊಂಡಿಪ್ಪಗ ಸಕು ಎನ್ನ ದೆನುಗೇಳಿದ್ದು ಹಶುದೋಳಿಂಗೆ ಪರಮಾನ್ನ ಸಿಕ್ಕಿದ ಹಾಂಗಾತಿದ. ಎದ್ದು ನಡೆದೆ ಸಕು ಕೂದಲ್ಯಂಗೆ. ಎಂಗೊಶಾಲೆಗೆ ಒಟ್ಟಿಂಗೆ ಹೋಗ್ಯೊಂಡಿದ್ದದಿದಾ. ಕುಮಾರಿಗೆ ಮಾತಾಡ್ಲೆ ಶುರು ಮಾಡಿರೆ ಮುಗುಶುಲೆ ಅರಡಿವಲಿಲ್ಲೆ. ವಿಷಯ ಎಂತ್ಸೂ ಬೇಡ, ಅಂದರೂ ಮಾತಾಡುಗು. ಎಂಗೊ ಒಟ್ಟಿಂಗೆ ಶಾಲೆಗೆ ಹೋಗಿ ಬಂದುಗೊಂಡಿದ್ದದು. ಕೆಲವು ದಿನ ಹೊತ್ತೋಪಗ ಶಾಲೆ ಬಿಟ್ಟಿಕ್ಕಿ ಬಪ್ಪಗ  ಮಾತಾಡ್ಲೆ ಬೇಕಾಗಿ ನೀರ್ಚಾಲಿಂದ ಮನೆವರೆಗೆ ನಡಕ್ಕೊಂಡು ಬಂದದೂ ಇದ್ದು. ಕಲ್ಲಾರಿಮೂಲೆ ತಿರುಗುವಲ್ಲಿ ಇರುಳು ಕಸ್ತಲೆ ಅಪ್ಪನ್ನಾರ ಇದರ ಮಾತು ಮುಗಿಯ. ಅಕೇರಿಗೆ  “ಇನ್ನು ಸಾಕು ಮಾಡುವೊ, ತಡವಾತು” ಹೇಳಿ ಆನು ಓಡೆಕ್ಕು ಮನೆಗೆ . “ಎಂಗಳ ಕುಮಾರಿಗೆ ಆರೂ ಸಿಕ್ಕದ್ರೆ ಕೈಲೊಂದು ಕಡ್ಡಿ ಸಾಕು, ಮಾತಾಡ್ಯೊಂಡೇ ಬಕ್ಕಿದಾ”, ಹೇಳುಗಡ ಸರಳಿಮಾವ. ಕೆಲವು ಸರ್ತಿ ಕ್ಲಾಸಿಲಿಯೂ ಗುಸುಗುಸು, ಪಿಸಪಿಸ ಹೇಳಿ ಶುರು ಮಾಡುಗು. ಅದೊಂದರಿ ಚೇತನಡ್ಕ ಮಾಷ್ಟ್ರು”ಇನ್ನು ಸಾಕು ಮಾಡು ಸಕು “ಹೇಳಿ ಗೌಜಿ ಮಾಡಿತ್ತಿದ್ದವಡ. ಅಂದಿಂದ ಮತ್ತೆ ಸರಳಿ ಕುಮಾರಿ ಎಂಗೊಗೆಲ್ಲ ಸಕು ಆದ್ಸು.

“ಮದುವೆ ಕಳುದು ಗೆಂಡನ ಮನೆ ಬಂದ ಮತ್ತೆ ಸಕು ಹೇಳುಲೆ ಗೊಂತಿಲ್ಲೆ ನಿನಗೆ.ಈಗ ಕುಮಾರಿ ಸರಳಿ ಕೂಸಲ್ಲನ್ನೆ…?” ಹೇಳಿ ಒಂದು ಕೊಕ್ಕೆ ಹಾಕಿದೆ. ಒಂದರಿ ಪಾರುವ ಆಲೋಚನಾ ಲಹರಿ ತುಂಡಾದ ಹಾಂಗೆ ಕಂಡತ್ತು. ರಜ್ಜ ಕಳುದು ಮತ್ತೆ ಹೇಳಿತ್ತು.

“ಇಲ್ಲೆ ಈಗಳೂ ಸಕುವೇ….ಸರಳಿಕುಂಜ ಕುಮಾರಿ  – ಈಗ ಅವು ಇಪ್ಪ ಜಾಗೆ ಹೆಸರು ಸರಳಿಕುಂಜ, ನಿಂಗಳ ಚೆಂಞಾಯಿಯ ಮನೆ ಇಪ್ಪ ಜಾಗೆ ಹತ್ತರೆಯೆ ಅವರ ಮನೆ” ಒಂದರಿ ಸೆರಗಿನ ಎಳದು ಸೊಂಟಕ್ಕೆ ಸಿಕ್ಕುಸಿ ಎನ್ನ ಮೋರೆ ನೋಡಿತ್ತು ಪಾರು.ತಳಿಯದ್ದೆ ಕೂಪಲೆ  ಕೊಟ್ಟ  ಸಂಕೇತ ಅದು.

– ಆತನ್ನೆ ಆನು ಬಂದು ಕೂದ ಕೂಡ್ಲೆ ಶುರು ಮಾಡಿತ್ತು,ಮಾತಾಡ್ಲೆ. ಮಾತಾಡ್ಯೊಂಡೇ ಎಡೆಲಿ ಎನ್ನ ಶುದ್ದಿ ವಿಚಾರ್ಸೊದು, ತಿಳ್ಕೊಂಬದು. ಆನು ಪ್ರಶ್ನೆ ಹಾಕಿಯಪ್ಪಗ ಅದರ ಮನೆ ಶುದ್ದಿಗಳ ಹೇಳೊದು. ಅಂತೂ ಮಂಗಳಾರತಿಗಾತು ಹೇಳಿದ್ದು ಕೆಮಿಗೆ ಬಿದ್ದಪ್ಪಗಳೇ ಒಂದರಿಯಾಣ ಮಾತುಕತೆ ನಿಲ್ಲುಸಿದ್ದು.

ತಳಿಯದ್ದೆ ಕೂದೊಂಡು ಕತೆ ಕೇಳುಲೆ ಎನಗೆ ಎಡಿಗಾಯೆಕ್ಕೆ, ಹಾಂಗಾಗಿ ಎಡೆಲಿ ಬಾಯಿ ಹಾಕಿದೆ. “ನಿನಗೆ ಗುರ್ತ ಸಿಕ್ಕದ್ದರೂ ನಿನ್ನ ಗುರ್ತ ಹಿಡುದತ್ತನ್ನೆ ಸಕು.! ಅದಿರಲಿ, ನೀನು ಮದುವೆ ಕಳುದ ನಂತ್ರದ ಶುದ್ಧಿಗಳ ಎಲ್ಲ ಹೇಳಿಪ್ಪೆ, ಏಂ.! ಕೆಲಸ ಬಿಟ್ಟು ಬೊಂಬಾಯಿಗೆ ಹೋದ್ಸು, ಅಲ್ಲಿಂದ ನಾಸಿಕಕ್ಕೆ ಬಂದದು, ಮತ್ತೆ ಬೆಂಗ್ಳೂರು, ಈಗ ಇಲ್ಯಾಣ ಕತೆ ಎಲ್ಲವನ್ನುದೆ ಹೇಳಿ ಮುಗುಶಿಪ್ಪೆ ಅಲ್ಲದೋ.?”

“ಅಪ್ಪು, ಮಂಗಳಾರತಿ ಆಗಿ ಎಂಗೊ ಒಂದು ಮೂಲೆಲಿ ಕುರ್ಶಿ ಮಡಿಕ್ಕೊಂಡು ಕೂದೆಯೊ. ಎನಗೂ ಸುಮಾರೆಲ್ಲ ಶುದ್ಧಿಗಳ ಹೇಳುಲೆ ಇತ್ತನ್ನೆ. ಸಕುವ ಕತೆಯನ್ನೂ ಒಕ್ಕಿ ಒಕ್ಕಿ ತಿಳ್ಕೊಳ್ಳೆಕ್ಕು ಹೇಳ್ತ ಏವುರ ಎನಗೂ ಇತ್ತಿದ್ದು. ಬೊಂಬಾಯಿಲಿಯೋ, ನಾಸಿಕಲ್ಲಿಯೋ ಇರ್ತಿದ್ದರೆ ಹೀಂಗೆ ಊರಿನ ಜೆಂಬ್ರಂಗೊಕ್ಕೆ ಬಪ್ಪಲೆ ಎಡಿಗಾವುತ್ತಿತ್ತೊ. ಎನಗೆ ಸಕು ಸಿಕ್ಕುಲಿತ್ತೋ.? ಎಷ್ಟು ಕೊಶಿ ಆತು ಗೊಂತಿದ್ದೋ ನಿಂಗೊಗೆ ” ಹೇಳಿ ಮತ್ತೂ ಒಂದು ಮಾತು ಸೇರ್ಸಿತ್ತು, ಪಾರು –

ಮನಸ್ಸು ಹಗುರಾತೆನಗೆ”.

ಅದಪ್ಪು…

ಹಲವು ವರ್ಷ ಕಳುದು ಎನಗೆ ಬೆಂಗ್ಳೂರಿಲಿ ಕೆಲಸ ಸಿಕ್ಕಿ ಇತ್ಲಾಗಿ ಬಪ್ಪದು ನಿಘಂಟು ಆದ ಮತ್ತೆ ಪಾರುಗೆ ಆದ ಕೊಶಿ ಅಷ್ಟಿಷ್ಟಲ್ಲ. ಬೊಂಬಾಯಿ, ನಾಸಿಕ ಹೇಳಿ ಕೆಲಸ ಬದಲ್ಸಿ ಬದಲ್ಸಿ ಊರೂರು ಸುತ್ತೊದು ಬೊಡುದೇ ಹೋಯಿದು, ಪಾರುಗೆ ಮಾಂತ್ರ ಅಲ್ಲ ಮಕ್ಕೊಗುದೆ. ಇನ್ನು ಮುಂದೆ ಇವಕ್ಕೆ ಕೆಲಸ ಬದಲ್ಸುತ್ತ ಸನ್ನಿವೇಶ ಬಾರದ್ದ ಹಾಂಗೆ ಹೇಳಿಗೊಂಡೊ ಏನೋ, ನಾಸಿಕಲ್ಲಿ ಇಪ್ಪಗಳೇ ದಿನಾಗಿಳೂ ಗೆಣವತಿಗೆ ತುಪ್ಪದೀಪ ಹೊತ್ತುಸುತ್ತೆ ಹೇದು ಮನಸ್ಸಿಲೇ ಹರಕೆ ಹೇಳಿದ್ದತ್ತು. ಹಾಂಗೆ ನಡೆಶಿಗೊಂಡು ಬಯಿಂದುದೆ, ಅದು ಬಿಡಿ. ಪಾರುಗೆ ಕೊಶಿಯಪ್ಪಲೆ ಕಾರಣ ಎಂತ ಕೇಳಿರೆ ಊರಿಂಗೆ ಹೋಗಿ ಬಪ್ಪದು ಹತ್ತರೆ ಆವುತ್ತು ಹೇಳ್ತದು ಒಂದು, ದಿನನಿತ್ಯಲ್ಲಿ ಕನ್ನಡ ಮಾತಾಡ್ಲಕ್ಕನ್ನೆ ಹೇಳ್ತದು ಎರಡ್ನೆದು. ಒಟ್ಟಿಂಗೆ ನೆರೆಕರೆಲಿ ನಮ್ಮೋರು ತುಂಬ ಜೆನ ಸಿಕ್ಕುಗು ಹೇಳ್ತದೂ ಕೊಶಿಯ ಸಂಗತಿಯೆ. ವಿಜಯನಗರಲ್ಲಿ ಶ್ಯಾಮಲಕ್ಕನ ಮನೆ, ಮಲ್ಲೇಶ್ವರಲ್ಲಿ ತೊಂಡುಮಾವನ ಮಗನ ಮನೆ ಇದ್ದಡ ಹೇಳ್ಯೊಂಡಿತ್ತು. ಆನು ಎನ್ನ ಆಫೀಸಿಂಗೆ ಹತ್ತರೆ ಆಗಲಿ ಹೇಳಿ ವೈಟುಫೀಲ್ಡಿಲಿ ಮನೆ ತೆಕ್ಕೊಂಡದು. ವಿಜಯನಗರ, ಮಲ್ಲೇಶ್ವರ ಇಲ್ಲಿಂದ ಎರಡು ಘಂಟೆ ದಾರಿ ಹೇಳ್ಯಪ್ಪಗ ಪಾರುಗೆ ನಾಮೋಸು ಆದ್ದೂ ಅಪ್ಪು.”ಕೊಡೆಯಾಲಂದ ಜಾಲ್ಸೂರಿಂಗೆ ಹೋವುತ್ತಷ್ಟು ದೂರ ಇದ್ದಂಬಗ” ಹೇಳ್ಯೊಂಡಿದ್ದದು ಎನಗೆ ಇನ್ನೂ ನೆಂಪಿದ್ದು. ಅಷ್ಟು ದೂರ ಆವುತ್ತಿಲೆ, ಆದರೆ ಅಲ್ಲಿಗೆ ಹೋಯೆಕ್ಕಾರೆ ಅಷ್ಟು ಸಮಯ ಬೇಕು ಹೇಳಿ ಇಲ್ಯಾಣ ಟ್ರಾಫಿಕ್ಕಿನ ಬಗ್ಗೆ ವಿವರಣೆ ಕೊಡೆಕ್ಕಾಗಿ ಬಂದದು, “ಛೆ..! ನವಗೆ ಬೊಂಬಾಯಿಯೇ ಆವುತಿತ್ತು ಅಂಬಗ ” ಹೇಳಿ ಪಾರು ಮೋರೆ ಸಣ್ಣ ಮಾಡಿದ್ದು, ಇನ್ನಂಬಗ ಗೆಣವತಿಯ ತುಪ್ಪದೀಪ ಸೇವೆ ಕೃಷ್ಣಾರ್ಪಣ ಅಪ್ಪಲಾಗ ಹೇಳಿ ಮನಸ್ಸಿಲಿಯೇ ಜಾನ್ಸಿ, “ನಾವು ಗ್ರೇಶಿದ್ದು ಎಲ್ಲ ಸರಿಯಪ್ಪಲೆ ಇದ್ದೋ.? ಊರಿಂಗೆ ಹೋಗಿ ಬಪ್ಪದು ಸುಲಭ ಆತಿಲ್ಯೋ.!” ಹೇಳಿ ಸಮದಾನ ಮಾಡಿದ್ದು, ಎಲ್ಲ ಮನ್ನೆ ಮನ್ನೆ ನಡದ ಹಾಂಗಿದ್ದು.

ಬೆಂಗ್ಳೂರು ಹೇಳಿರೆ ನವಗೆ ಗೊಂತಿಪ್ಪದು ವಿಜಯನಗರ, ಜಯನಗರ, ಮಲ್ಲೇಶ್ವರ, ಸದಾಶಿವನಗರ ಹೇಳಿ ಬಸ್ಸುಸ್ಟೇಂಡಿಂದ ಹತ್ತರಾಣ ಜಾಗೆಗೊ.ಬೇಕಾರೆ ಆಚೀಚಿಕೆ ಇಪ್ಪ ಪೇಟೆಗಳೂ ಸೇರುಗು. ಆದರೆ, ವೈಟುಫೀಲ್ಡಿನ ಬೆಂಗ್ಳೂರಿಂಗೆ ಸೇರ್ಸೊದು ಕಷ್ಟ. ಎನ್ನ ಭಾವ ಒಬ್ಬ ಶುರೂ ಬೆಂಗ್ಳೂರಿಂಗೆ ಬಂದ ಸಮೆಯಲ್ಲಿ ಎನ್ನ ಮನೆಗೂ ಬಂದಿತ್ತಿದ್ದ. ಮಾತ್ತಾಣ ಸರ್ತಿ ಬಂದಿಪ್ಪಗೆಲ್ಲ ಫೋನಿಲಿಯೇ ಸುಧಾರಣೆ. ಮಲ್ಲೇಶ್ವರ ಹೊಡೆಂದ ಫೋನು ಮಾಡಿ ಎನ್ನತ್ರೆ, “ನೀನು ಯಾವಾಗ ಬತ್ತೆ ಮಾರಾಯ, ಬೆಂಗ್ಳೂರಿಂಗೆ” ಹೇಳಿ ಬಾಯಿಗೆ ಕೋಲು ಹಾಕುತ್ತ ಕ್ರಮ ಇದ್ದು.! ಆನಿಪ್ಪ ಜಾಗೆ ಬೆಂಗ್ಳೂರಲ್ಲ ಹೇಳಿ ಅವನ ಲೆಕ್ಕಾಚಾರ. ಐಟಿ ಬಿಟಿ ಕಂಪೆನಿಗೊ ಹೆಚ್ಚಿದಷ್ಟೂ ಇಲ್ಲಿ ಹೆರಂದ ಬಂದೋರೆ ಹೆಚ್ಚಿಗೆ. ಅವರ ಬಿಟ್ರೆ ಇಲ್ಲಿಯೇ ಇತ್ತಿದ್ದ ತೆಲುಗಂಗೊ. ಬಾಕಿ ಒಳುದೋರು ಠಸ್ಸು ಠುಸ್ಸು ಇಂಗ್ಲೀಶು ಮಾತಾಡ್ತ ಪೊರ್ಬುಗೊ. ಹಾಂಗಾಗಿ ಕನ್ನಡ ಮಾತಾಡೊರು ಕಮ್ಮಿಯೆ. ಇಲ್ಯಾಣ ಬಸ್ಸಿಲಿಯೂ ಕೆಲವು ಸರ್ತಿ ಕಂಡೆಟ್ರ ಹಿಂದಿಲಿಯೇ ಟಿಕೆಟು ವಿಚಾರ್ಸುತ್ತ ಕ್ರಮ ಇದ್ದು. “ನನಗೆ ಕನ್ನಡ ಬರ್ತದೆ, ನೀವು ಯಾಕೆ ಹಿಂದಿ ಮಾತನಾಡೊದು” ಹೇಳಿ ಒಂದೆರಡು ಸರ್ತಿ ಕಂಡೆಟ್ರನ ಗೌಜಿ ಮಾಡಿದ್ದೂ ಇದ್ದು, ಪಾರು.” ನಾವಾಗಿಯೇ ಮಾತಾಡ್ಸದ್ದೆ ಕನ್ನಡ ಗೊಂತಿಪ್ಪೋರು, ಗೊಂತಿಲ್ಲದ್ದೋರು ಹೇಳಿ ಮೋರೆ ನೋಡಿ ನಿಘಂಟು ಮಾಡ್ಲೆಡಿಗೊ.! ನಿನಗೆಂತ ಹಿಂದಿ ಅರಡಿಯದ್ದೆ ಇಲ್ಲೆನ್ನೆ” ಹೇಳಿರೆ,  “ನಾವು ಅಲ್ಲಿಪ್ಪಗ ಮರಾಠಿ ಕಲ್ತ ಹಾಂಗೆ ಇವಕ್ಕೆ ಇಲ್ಲಿ ಕನ್ನಡ ಕಲಿವಲೆ ಎಂತ ದಾಢಿ.” ಹೇಳಿ ಅಸಮದಾನ ಹೆರ ಹಾಕುಗು. ನಮ್ಮ ಊರು ಹೇಳ್ಯೊಂಡು ಬಂದು ಬೆಂಗ್ಳೂರು ಅಲ್ಲದ್ದ ಬೆಂಗ್ಳೂರಿಲಿ ಇಪ್ಪದುದೇ, ಕನ್ನಡ ಮಾತಾಡೋರು ಇದ್ದರೂ ಕನ್ನಡ ಮಾತಾಡ್ಲೆಡಿಯದ್ದ ಅವಸ್ಥೆಯನ್ನುದೇ ಗ್ರೇಶಿರೆ ಮರಾಠಿಗರ ನಾಡಿಂದ ಇತ್ಲಾಗಿ ಬಂದರೂ ಊರಿಂಗೆ ಬಂದ ಸಂಬ್ರಮ ಇತ್ತಿಲೆ. ಈ ಒಂದು ಅಸಮದಾನ ಪಾರುವ ಮನಸ್ಸಿನೊಳ ಒಳಂದೊಳವೇ ಒಳುದಿದ್ದತು.

ಮದಲೆಲ್ಲ ಊರಿಂಗೆ ಬಪ್ಪದು ಹೇಳಿರೆ ಒಂದು ಹಗಲು ಒಂದು ಇರುಳು ರೈಲಿಲಿ ಕೂರೆಕ್ಕು. ಆದರೆ ಈಗ ಹಾಂಗಲ್ಲ, ಮಕ್ಕಳ ಕರಕ್ಕೊಂಡು ಪಾರು ಒಬ್ಬನೇ ಹೋವುತ್ತರೂ ಇರುಳಾ ಬಸ್ಸಿನ ಅನುಕೂಲ ಇದ್ದು.  ಇರುಳು ಉಂಡಿಕ್ಕಿ ಮೆಜೆಸ್ಟಿಕ್ಕಿಲಿ ಬಸ್ಸು ಹತ್ತಿರೆ ಉದೆಗಾಲಕ್ಕೆ ಸುಳ್ಯಲ್ಲಿ ಬಸ್ಸು ಇಳುದು ಕಾಫಿಗಪ್ಪಗ ಮನೆಲಿರ್ತು. ಶುರೂ ಮಕ್ಕಳ ಒಟ್ಟಿಂಗೆ ಹೋಗಿಪ್ಪಗ  “ಇಷ್ಟು ಬೇಗ ಎತ್ತಿತ್ತ…?” ಹೇಳಿ ಸಣ್ಣ ಮಗಂಗೆ ಆಶ್ಚರ್ಯ ಆಗಿತ್ತಡ. ಅಂತೂ ಏನಿದ್ದರೂ ಕಡಮ್ಮೆಲಿ ಎರಡು ತಿಂಗಳಿಂಗೊಂದರಿ ಊರಿಂಗೆ ಹೋಗಿ ಬಪ್ಪಲೆ ಆವುತ್ತು. ಪಾರುಗೆ ಅದೊಂದೇ ಸಮದಾನ ಈಗ. ಹಾಂಗೆ ಹೇಳಿಯೂ ತೋರ್ಸಿದ್ದು –

“ಮನಸ್ಸು ಹಗುರಾತೆನಗೆ”

“ಓಯಿ, ಆನು ಎಂತ್ಸರ ಹೇಳಿದ್ದು ಕೇಳಿದ್ದೋ ನಿಂಗೊಗೆ ಏಂ.?”

ರಾಮಾಯಣದೆಡೆಲಿ ಪಿಟ್ಕಾಯನದ ಹಾಂಗೆ ಪಾರುವ ಈ ಕತೆ ಎಡೆಲಿ ಎನಗೆ ಹಳೆ ವಿಷಯಂಗೊ ನೆಂಪಾಗಿ ಅದನ್ನೆ ಆಲೋಚನೆ ಮಾಡ್ಯೊಂಡಿತ್ತಿದ್ದೆ. ಬಹುಶಃ ಪಾರುಗೂ ಅಂದಾಜಿ ಆಗಿರೇಕು. ಮಕ್ಕೊ ಆಡ್ತ ಕಳ್ಳ ಪೋಲೀಸಾಟಲ್ಲಿ ಪೋಕಣಕೆಟ್ಟು ಕಳ್ಳನ ಹಿಡುದಪ್ಪಗ ಪೋಲೀಸನ ಮೋರೆಲಿ ಕಾಂಬ ನಮುನೆ,ಪಾರುವ ಮೋರೆಲಿ ಗೆಲವಿನ ಸಂಬ್ರಮ ಕಂಡತ್ತು.

“ಹುಂ, ಅದೇ ಮನಸ್ಸು ಹಗುರಾತನ್ನೆ ನಿನ್ನದು” ಹೇಳಿ ಆನು ಹುಳಿಹುಳಿ ಮಾಡಿದೆ.

ಇರಲಿ, ಸಕು ಒಂದು ಸಂಗತಿ ಹೇಳಿತ್ತು, ಎನಗೆ ಗೊಂತಿತ್ತಿಲೆ ಇದಾ. ಆನು ಎನ್ನ ಕಲಿವಿಕೆ ಒಂದು ಹಂತಕ್ಕೆ ಬಪ್ಪನ್ನಾರ ಮದುವೆ ಅಪ್ಪಲಿಲ್ಲೆ ಹೇಳಿದೋಳು. ಆದರೆ ಸಕುವ ಮದುವೆ ಮಾಡಿ ಕೊಡೊದು ಹೇಳಿ ಮನೆಯೊರು ನಿಘಂಟು ಮಾಡಿದ್ದಕ್ಕೆ ಕೊಲೇಜಿಂಗೆ ಹೋಪದು ನಿಲ್ಸಿದ್ದತ್ತು. ಕೂಸು ನೋಡ್ಲೆ ಹೇಳಿ ಬಂದೋರು ಸಜ್ಜಿಗೆ ಸಾಟು ತಿಂದು ನಡದ್ದಲ್ಲದ್ದೆ ಮಾತುಕತೆ ಮುಂದುವರಿದ್ದೇ ಇಲ್ಲೆಡ. ಹಾಂಗೆ ಸುಮಾರು ದಿಕ್ಕಂದ ಕುಳವಾರುಗೊ ಬಂದು ಹೋಗಿತ್ತವಡ. ಹೀಂಗೇ ಸಮಯ ಹೋದ್ದಲ್ಲದ್ದೆ ಸರಿಗಟ್ಟು ಸಂಬಂದ ಕೂಡಿ ಬಯಿಂದಿಲ್ಲೆಡ. ಅಕೇರಿಗೆ ಕೂಸು ನೋಡ್ಲೆ ಬಪ್ಪದು ಹೇಳಿರೆ ಸಕುವಿಂಗೆ ಪಿಸುರು ಬಪ್ಪಲೆ ಶುರುವಾಗಿತ್ತಡ, ಮದುವೆಯೇ ಬೇಡ ಹೇಳ್ತ ಹಾಂಗೆ…ಪಾಪ.!

ಮತ್ತೆಂತರ ಮಾಡೊದು, ಮನೆಯೋರು ಹೇಳಿದ ಹಾಂಗೆ ಸಿಕ್ಕಿದ ದೇವಸ್ಥಾನಕ್ಕೆ ಹೋಪದು, ಹರಕ್ಕೆ ಪ್ರಾರ್ಥನೆ ಎಲ್ಲ ಮಾಡಿಕ್ಕಿ ಬಪ್ಪದು. ಅಕೇರಿಗೆ ಈ ಜೆನ ಬಂದವು. ಯೇವುದೋ ಫೈನಾನ್ಸು ಕಂಪೆನಿಲಿ ಕೆಲಸ, ದೊಡ್ಡದೇನಲ್ಲ. ಎನಗೂ ಅಕ್ಕು ಹೇಳಿ ಕಂಡತ್ತು. ಅಕೇರಿಗೆ ಇವು ಅಕ್ಕು ಹೇಳಿ ಮತುಕತೆ ಮುಂದುವರುಸುದು ಹೇಳ್ಯಪ್ಪದ್ದೆ, ತೆಕ್ಕೋ ಮತ್ತೆ ಮೂರು ಜೆನ ಎಂಗೊಗೆ ಕೂಸು ಅಕ್ಕು ಹೇಳ್ಯೊಂಡು ಬಂದವು. ಮದುವೆ ತಡವಾತು ಹೇಳಿ ಆನೆಂತ ನಾಕು ನಾಕು ಮದುವೆ ಮಾಡಿಗೊಳ್ಳೆಕ್ಕೋ..? ಅಲ್ಲ,ಇವ್ವುದೆ ಅಜಪ್ಪಿ ಅಜಪ್ಪಿ ಅಕೇರಿಗೆ ಎನ್ನನ್ನೇ ಒಪ್ಪಿದ್ದು. ” – ಸಕು  ಈಗಳೂ ಮಾತಾಡೊದು ಮದಲಾಣ ಹಾಂಗೆ ಹೇಳಿ ಆತೆನಗೆ.

“ಅದು ಹೋಗಲಿ, ನಿನ್ನ ಸಕುವ ಯೆಜಮಾನ್ರು ಎಲ್ಲಿ ಕೆಲಸಲ್ಲಿಪ್ಪದಡ.?” ಅಲ್ಲದ್ದರೆ ಈ ಕತೆ ಎಲ್ಲಿಂದ ಎಲ್ಲಿಗೋ ಹೋಕ್ಕು ಹೇಳಿ ಗ್ರೇಶಿ ಕೇಳಿದೆ, ಆನು.

ಅದನ್ನೇ ಹೇಳ್ಳೆ ಹೆರಟದು ಆನು, ನಿಂಗೊ ಮಾತು ತಪ್ಸುತ್ತಿ. ಅದಿರಲಿ, ಇವರ ಮದುವೆ ಆಯೆಕ್ಕಾರೆ ಒಂದು ಫೈನಾನ್ಸು ಕಂಪೆನಿಲಿ ಕೆಲಸ ಇತ್ತಡ. ಮದುವೆ ಕಳುದು ಸುಮಾರು ಸಮೆಯ ಚೆಂದಕ್ಕೆ ನಡಕ್ಕೊಂಡು ಬಂತಡ. ಈಗ ಎಂಟತ್ತು ವರ್ಷಕ್ಕೆ ಮದಲು ಫೈನಾನ್ಸು ಕಂಪೆನಿಯೇ  ಮುಚ್ಚಿತ್ತಡ . ಮತ್ತೆ ಬೇರೆ ಎಲ್ಲಿಯೂ ಕೆಲಸ ಸಿಕ್ಕಿದ್ದಿಲೆ. ಒಂದು ಪ್ರಾಯ ಕಳುದ ಮತ್ತೆ ಕೆಲಸ ಸಿಕ್ಕುದು ಸುಲಭವೋ.? ಯೇವತ್ರಾಣ ನಿಘಂಟಿನ ಸಂಪಾದನೆ ನಿಂದ ಮತ್ತೆ ಕೈಲಿದ್ದ ಪೈಸೆಲಿ ಸಂಸಾರ ನಡೆಶುದು ಎಷ್ಟು ಕಷ್ಟ ಹೇಳೊದು ತಿಳ್ಕೊಳ್ಳೆಕ್ಕಾರೆ ಸಕು ಹೇಳಿಯೇ ಆಯೆಕ್ಕೋ.? ಆರಿಂಗಾರೂ ಅರ್ಥ ಅಕ್ಕದು. ಸುಮಾರು ಸಮಯ ಹಾಂಗೆ ಕಷ್ಟಲ್ಲಿತ್ತಿದ್ದವಡ. ಅಕೇರಿಗೆ ಒಂದರಿ ಅಡಿಗೆ ಸತ್ಯಣ್ಣ ಕಾಂಬಲೆ ಸಿಕ್ಕಿದೋನು, ಎನ್ನೊಟ್ಟಿಂಗೆ ಬಾ ಹೇಳಿದನಡ. ಹಾಂಗೆ ಹೋಪಲೆ ಶುರು ಮಾಡಿದ್ದು ಈಗ ನಿತ್ಯ ಉದ್ಯೋಗವೇ ಆಯಿದಡ. ಈಗ ಪುರ್ಸೊತ್ತಿಲ್ಲದ್ದೆ ಹೋಪಲೆ ಸಿಕ್ಕುತ್ತಡ. ಎಬ್ಬಿದಾಂಗೆ ಹೋಗದ್ದರೆ ಹೋದಾಂಗೆ ಎಬ್ಬುದು, ಅಲ್ಲದೋ.? ಈಗ ಒಳ್ಳೆ ಹೆಸರಿದ್ದು ಹೇಳ್ಯೊಂಡು “ಇಲ್ಲಿ ಇಂದ್ರಾಣ ಅಡಿಗೆ ಇವರದ್ದೆ,ಪಾರು” ಗುಟ್ಟಿಲಿ ಎನ್ನ ಕೆಮಿಲಿ ಉರ್ಪಿತ್ತು ಸಕು.”ನಿನ್ನ ಎಜಮಾನ್ರಿಂಗೆ ರಜೆ ಸಿಕ್ಕುತ್ತ ಹಾಂಗೆ ಮೌಢ್ಯ ಸಮೆಯಲ್ಲಿ ಇವಕ್ಕೂ ರಜೆ. ಅಷ್ಟಪ್ಪಗ ಎಂಗಳೂ ತಿರುಗಾಟ ಹೇಳಿ ಹೋಪಲಿದ್ದು.” ಸಕು ಅಷ್ಟು ಹೇಳ್ವಗ ಎನಗೆ ನಿಜವಾಗಿಯೂ ತುಂಬ ಕುಶೀ ಆತಿದ. ಹಾಂಗೆ ಹೇಳಿಯೂ ಹೇಳಿದೆ ಸಕುವಿನತ್ತರೆ. ಅಡಿಗೆಯೋನಿಂಗೆ ಎಂತ್ಸಕೆ ಉಪ್ಪರಿಗೆ ಮನೆ ಹೇಳ್ತ ಮಾತು ಮದಲಿಂಗಾತು. ಈಗ ಆರು ಗುಮಾನ ಮಾಡ್ತವು ಇದರೆಲ್ಲ.? ಹಾಂಗೆ ಮಾಡೊದೂ ಸರಿ ಅಲ್ಲ. ಈಗ ಯೇವ ಕೆಲಸ ಆದರೂ ಗೌರವ ಇದ್ದು.ಆ ಗೌರವವ ಮಡಿಕ್ಕೊಂಬದು ನಮ್ಮ ಕೈಲಿಪ್ಪದು ಸಕು, ಎಂತ ಹೇಳ್ತೆ..?

ಹಾಂಗೆ ಹೇಳ್ಯಪ್ಪದ್ದೆ ಸಕುವ ಕಣ್ಣಿಲಿ ಮಿಂಚು ಕಂಡತ್ತೆನಗೆ.

~~<>~~

3 thoughts on “ರಾಮಾಯಣ ಅಲ್ಲ ಪಿಟ್ಕಾಯನ

  1. ಅಪ್ಪೋ ಭಾವ, ಈ “ಮನಸ್ಸು ಹಗುರಾತೆನಗೆ” ಹೇಳ್ತದರ ನೋಡುವಗ ಒಂದು ಜಿಜ್ಞಾಸೆ ಸುರು ಆಯಿದು.
    ಮನಸ್ಸು ಹೇಳ್ತದು ಇದ್ದು ಹೇಳಿ ಅನುಭವಕ್ಕೆ ಬತ್ತು. ಆದರೆ ಕಾಂಬಲೆ ಸಿಕ್ಕುತ್ತಿಲ್ಲೆ. ಅದಕ್ಕೆ ಹಗುರ ಅಪ್ಪ ಗುಣವು ಇದ್ದು ಹೇಳಿ ಗೊಂತಾತದ. ಈ ಗ್ಯಾಸು ಇದ್ದಲ್ದ… ಹೀಲಿಯಮ್ , ಮತ್ತೆ ಜಲಜನಕ, ಈ ಗ್ಯಾಸುಗೊಕ್ಕು ಅದೇ ಗುಣ ಇದ್ದು. ಅಂಬಗ ಮನಸ್ಸು ಹೇಳಿರು ಒಂದು ನಮೂನೆ ಗ್ಯಾಸೇ ಇಕ್ಕೋ. ?
    ಅದು ನಮ್ಮ ದೇಹದೊಳ ಇಪ್ಪ ಕಾರಣ ಅದು ಹಗುರ ಅಪ್ಪಗ ಅದರ ಸಹಾಯಂದ ನವಗೆ ಗಾಳಿಲಿ ಹಾರ್ಲೆ ಎಡಿಗೋ?

  2. ತೆಕುಮಾವ° ಎಡೆಡೆಲಿ ಟೀಕೆ ಮಾಡಿದ್ದು ಪಷ್ಟಾಯ್ದು. ಹ್ಹೋ! ಅಡಿಗೆ ಸತ್ಯಣ್ಣನೊಟ್ಟಿಂಗೆ ಎಡೆಡೆಲಿ ಕಂಡೊಂಡಿತ್ತಿದ್ದು ಓ ಅವ್ವೇ ಸಕುಅಕ್ಕನ ಗೆಂಡನೋ! ಓಹ್ಹ್ ಪಷ್ಟಾಯ್ದದು ಶುದ್ದಿ ಹೇದ್ದು. ಹರೇ ರಾಮ

  3. kumara bhavange abhinandanego. olle layakina ondu harate odide. aanude ade kuntikana , kajemoole , nirchal shaleli kaltava . oorina hesaru , maashtrakkala hesaru yella nodi ooringe hodangathu. kumara bhava paaruvina moolaka kathe heluva shaili thumba ollediddu.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×