Oppanna.com

ನೆಂಪು: ಹವ್ಯಕ ಭಾವಗೀತೆ

ಬರದೋರು :   ಬಾಲಣ್ಣ    on   06/09/2012    25 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಬಾಲ್ಯವ ತಿರುಗಿ ನೋಡುವ ಹವ್ಯಕ ಭಾವಗೀತೆ – ಬಾಲಮಾವ ಬರದ್ದು.
ಭಾವಪೂರ್ಣವಾಗಿ ಹಾಡಿ ಬೈಲಿಂಗೆ ಕೊಟ್ಟದು – ಹೊಸಬೆಟ್ಟು ಶ್ರೀಶಣ್ಣ!

 

ನೆಂಪು: ಹವ್ಯಕ ಭಾವಗೀತೆ

ರಚನೆ: ಬಾಲ ಮಧುರಕಾನನ
ಧ್ವನಿ: ಶ್ರೀಶ ಹೊಸಬೆಟ್ಟು

ಸಣ್ಣದಿಪ್ಪಗ ನಾವು
ನೆಲ್ಲಿಮರದಡಿಲೆಲ್ಲ
ಆಡಿ ಹೊಡಿಮಾಡಿದ್ದು ನೆಂಪಿದ್ದೊ ನಿನಗೆ |
ನಮ್ಮ ಒಟ್ಟಿಂಗಿದ್ದ
ಸೋದರತ್ತೆಯ ಮಗನ
ನಿನ್ನೆ ಕಂಡಿದೆ ಆನು ಬೈಂದ ಮನಗೆ || 1 ||

ಕೆರೆ ತೋಡು ಕಟ್ಟದಾ
ನೀರಿಲೆಲ್ಲಾ ಸೊಕ್ಕಿ
ಹಸೆ ಹಿಡುದು ಮನುಗಿದ್ದ ಒಂದು ಸರ್ತಿ |
ಕುಡಿಯಲೊಪ್ಪದ್ದರೂ
ಹಿಡುದು ಮದ್ದಿನ ಕುಡುಶಿ
ಅರೈಕೆ ಎನ್ನದೇ ವಾರ ಪೂರ್ತಿ || 2 ||

ಎಂಗೊ ಹತ್ತದ್ದಿಪ್ಪ
ಮರ ಒಂದೂ ಒಳುದ್ದಿಲ್ಲೆ
ಹೂ ಕಾಯಿ ಹಣ್ಣೆಲ್ಲ ಮರದ ಬುಡಲ್ಲೆ |
ಹತ್ತಿ ಜಾರಿದ ಗುರ್ತ
ಇನ್ನು ಹೋಯಿದೆ ಇಲ್ಲೆ
ಈಗ ಹಾಂಗೆಯೆ ಇದ್ದು ಎನ್ನ ತೊಡೆಲಿ || 3 ||

ಎರಡು ತಿಂಗಳ ರಜೆಲಿ
ತೋಟಲ್ಲಿ ತಿರುಗಿದ್ದು
ಮಾಡು ಹಾರುತ್ತಾಂಗೆ ಬೊಬ್ಬೆ ಹಾಕಿದ್ದು |
ಅಪ್ಪನೋ ಅಣ್ಣನೋ
ಅಜ್ಜಿಯೋ ಎಲ್ಲರುದೆ
ಕೆಮಿ ಹಿಡುದು, ಬೆನ್ನಿಂಗೆ ಗುದ್ದು ಹಾಕಿದ್ದು || 4 ||

ಮೂಲೆ ಕಂಬವ ಹಿಡುದು
ಮುಟ್ಟಾಟ ಅಡಿದ್ದು
ಚೆನ್ನೆಮಣೆ ಕೇರಮ್ಮು ಮದುವೆ ಆಟ |
ಈಗವನ ಕಾಂಬಗಳೆ
ಎನಗೆ ನಾಚಿಕೆ ಬತ್ತು
ತಲೆ ನೆಗ್ಗಿ ನೋಡಲೆಡಿತ್ತಿಲ್ಲೆ ನೋಟ || 5 ||

ಸುಟ್ಟ ಹಪ್ಪಳ ಬಾಳ್ಕು
ಶಾಂತಾಣಿ ಬೇಳೆಗಳ
ಕಾದಿಂಡೆ ತಿಂಬದದ ಮಳೆಬಪ್ಪಗ |
ಕುಂಟಾಂಗಿಲದ ಹಂಣ್ಣು
ಜೇಡೆ ಕರುಗಳ ಕಾಯಿ
ತಿನ್ನದ್ದೆ ಇಪ್ಪಲೆ ಮನಸ್ಸೊಪ್ಪುಗ ? || 6 ||

ತಲೆ ತುಂಬ ಕ್ರೋಪಿದ್ದು
ಚೆಂದ ಚೆಂದಕೆ ಇದ್ದ
ಅವಂಗೀಗ ಬೈಂದದಾ ಚಿಗುರು ಮೀಸೆ |
ಆನು ಕೂಡಾ ಹಾಂಗೆ
ಸೀರೆ ಸುತ್ತುದು ಈಗ
ಕದ್ದುಕದ್ದೇ ಅವನ ನೋಡಲಾಶೆ || 7 ||

ದೂರದೂರಿಲಿ ಎಲ್ಲೋ
ಕಾಲೇಜು ಕಲಿತ್ತಾಡ
ಅಂಬಗಂಬಗ ಇತ್ತೆ ಬಪ್ಪಲೆಡಿಯಾಡ |
ಒಪ್ಪಕುಂಞಿಯ ಹಾಂಗೆ
ಅಬ್ಬೆತ್ರೆ ಮಾತಾಡ್ತ
ಎನಗೆ ಕೊಶಿ ಇಂದಿಲ್ಲೆ ನಿಲ್ಲುತ್ತನಾಡ || 8 ||

ಅಂದ್ರಾಣ ಹಾಂಗೀಗ
ತಿರುಗಲೊಟ್ಟಿಂಗೆಡಿಗೊ
ಪ್ರಾಯ ಎಂದಿಂಗು ನಿಂದಲ್ಲೆ ನಿಲ್ಲ |
ಮಕ್ಕಳಾಟಿಕೆಯಾಟ-
ಪಾಟಂಗೊ ಕಳುದತ್ತು
ಸವಿ ನೆಂಪು ಒಳಿಗದುವೆ ಮಾಂತ್ರ ಎಲ್ಲ || 9 ||

~*~*~

havyaka bhaava geete

 
NEMPU-Havyaka Bhavageethe


25 thoughts on “ನೆಂಪು: ಹವ್ಯಕ ಭಾವಗೀತೆ

  1. ಅಣ್ಣಯ್ಯ,“ನೆ೦ಪು”ಪದ್ಯವ ಓದಿ
    ನೆ೦ಪಾತು ಎನ್ನ ಆ ಬಾಲ್ಯ,
    ಅದು ಒ೦ದು ದಿನ ಇರುಳು
    ಆನು ಎನ್ನಣ್ಣ ಗೋಪಾಲ
    ಕೂಡ್ಲು ಮೇಳದ ಆಟವ ನೋಡಿ,
    ಬ೦ದು ಮರದಿನ ಜಾಲಕೊಟ್ಟಗೆಯ
    ಬಯಲಿಲ್ಲಿ- ಸುಣ್ಣ ಮಸಿ ಬೂದಿಯ ಬಳ್ದು
    ಮಣ್ಣು ಅರುಶಿನ ಎಲ್ಲ ಮೋರಗೆ ಮೆತ್ತಿ,
    ತಿರಿಮಡ್ಳು, ಸೊಪ್ಪು ಸೌದಿಯ ಕಟ್ಟಿ,
    ಡಬ್ಬಿ ಜಾಗಟೆ ಬಡುದು, ಹಾಳೆ, ಮು೦ಡಾಸು
    ಕಿರೀಟವ ಮಡಗಿ, ಅಬ್ಬೆಯ ಸೀರೆಯ ಸುತ್ತಿ
    ಕೊಣಿವಾಗ ಶ೦ಭು ಮಾವನ ಬಣ್ಣ ವೇಷದರ್ಭಟೆಲಿ
    ಮೆಣಸಿನ ಗೆದ್ದೆಲಿ ಕೆಲಸ ಮಾಡ್ಯೊ೦ದಿದ್ದಜ್ಜ ಕೇಟದರ
    ಕೋಲಡ್ರು ಹಿಡುದು ಬಪ್ಪಾಗ
    ಅವರುಗ್ರ ನರಸಿ೦ಹ ಕೋಪಕ್ಕೆ ಹೆದರ್ಯೆ೦ಗೊ
    ಕು೦ಡಗೆ ಕಾಲ್ಕೊಟ್ಟು ಓಡ್ವಾಗ ಅಲ್ಲಿ ಆ ಮಾವ ಕಾಲ್ಜಾರಿ
    ಬಿದ್ದವು ಕೊಳ್ಕೆಯ ಕೆಸರಿ೦ಗೆ!
    ಮತ್ತೆ೦ಗೊ ಮನಗೆತ್ತಿ ಬಣ್ಣವ ತೊಳವ ನೋಡಿದ
    ಅಜ್ಜಿಗೆ ಗುಟ್ಟಿಲ್ಲಿ ಎಲ್ಲವ ಹೇಳ್ಯೊ೦ಡು ದಮ್ಮಯ ನೀನೆ ಕಾಯೆಕು
    ಹೇದು ಕಣ್ಣೀರು ಬಿಡುವಾಗ, ಮರುಗಿದ ಆ ಅಜ್ಜಿ ಕರುಣೆಲಿ
    ಎ೦ಗೆಲ್ಲ ಅಲ್ಲಿ ಬಚಾವಾದ್ಯೊ°.
    —- ಬಾಲ್ಯದ ಸವಿಯ ಭಾವ೦ಗಕ್ಕೆ ಪ್ರಚೋದನೆ ಕೊಟ್ಟ ನಿ೦ಗಳ ಈ ಕಾರ್ಯಕ್ಕೆ ನಮೋನ್ನಮಃ

    1. ಇದೇ ರೀತಿಯ ಘಟನೆಯ ಪದ್ಯ ಬರದ್ದೆನ್ನೆ ಅಪ್ಪಚ್ಚೀ,ಎಲ್ಲಾ ಮಕ್ಕಳೂ ಆಟ ನೋಡಿಕ್ಕಿ ಬಂದು ಮನೆಲಿ ಕೊಣಿಗು ಆಲ್ಲದೋ? ನಿಂಗಳ ಒಪ್ಪಕ್ಕೆ ಧನ್ಯವಾಂಗೊ.

  2. ಹಾಂಗೆ ಆದರೆ ಭಾರೀ ಲಾಯಕ ಆತು ಭಾವಯ್ಯಾ.ಸೂಚನೆಗೆ ಧನ್ಯವಾದಂಗೊ.

  3. ೫ನೆ ಸೊಲ್ಲು ಮತ್ತೆ ಆರನೆಯ ಸೊಲ್ಲು ಆಚೀಚೆ ಆಯೆಕ್ಕಾತೊ ತೋರುತ್ತು.

    1. ಗೋಪಾಲಣ್ಣನ ಅಬಿಪ್ರಾಯ ಸರಿ ಇದ್ದು. ನಡೆ ಇನ್ನೂ ಲಾಯ್ಕ ಆವುತ್ತು.

  4. ಸಾಹಿತ್ಯ, ಹಾಡಿದ್ದು ಎಲ್ಲಾ ಸುಪರ್ ಆಯಿದು.

  5. ಮಧುರ ಭಾವವ ಮೀಟುವ ಕವನ. ಬಾಲ್ಯದ ಆಟಂಗಳ ಯೌವನಲ್ಲಿ ನೆಂಪು ಮಾಡಿಕೊಂಡ ರೀತಿ,ಹಾಡಿನ ಕ್ರಮ ಎಲ್ಲಾ ಲಾಯ್ಕ ಆಯಿದು.

    1. ಮಧುರ ಭಾವವ ಮೀಟುವ ಮಧುರಕಾನ ಭಾವನ ಕವನ ಹೇಳಿ ಭಾವಯ್ಯ.

  6. ಬಾಲಣ್ಣನ ಸಾಹಿತ್ಯ ತುಂಬ ಒಪ್ಪ ಆಯಿದು. ಹೀಂಗಿರ್ತ ರಚನೆಗೊ ಮುಂದುವರಿಯಲಿ, ನಮ್ಮ ಭಾಷೆಯ ಸಾಹುತ್ಯ ಇನ್ನೂ ಬೆಳೆಗು.
    ಶ್ರೀಶಣ್ಣ ಹಾಡಿದ್ದು ಪಷ್ಟಾಯಿದು.
    ಇಬ್ರಿಂಗೂ ಧನ್ಯವಾದಂಗೊ.

  7. ಕಲ್ಲಾಟ ಆಡಿ ಅಪ್ಪಗ, ಗು೦ಪಿಲಿ ಎದುರು ಕೂದದ್ದು ,ಗೆದ್ದಪ್ಪಗ,ಒಪ್ಪಲ್ಲೆ ಮನ್ಸ್ಸೆ ಆಗದ್ದೇ,,ಸಣ್ಣ್ ಜಲ್ಲಿಕಲ್ಲುಗಳ ಬಾಯಿಯೋ೦ಳಗೆ ಹಾಕಿಕೊ೦ಡು, ಆಟವನ್ನೆ ,ನಿಲ್ಸಿದ್ದು ,—- ಹಾಡ ಕೇಳಿದರೂ, ಗೆಲುವ ಇ೦ದಿ೦ಗೂ ಮನ್ಸ್ ಒಪ್ಪಲೆ ತಯಾರಿಲ್ಲೆ ನ್ನೆ?

  8. ಬಾಲಣ್ಣನ ಭಾವಪೂರ್ಣ ರಚನೆ ನಮ್ಮ ಭಾಷೆಲಿ ಸತ್ವಯುತ ಸಾಹಿತ್ಯ ಸಾಧ್ಯ ಹೇಳ್ತದಕ್ಕೆ ಒ೦ದು ಉದಾಹರಣೆ.ಇ೦ತಾ ಸಾಹಿತ್ಯ ಬೆಳೆಯಲಿ.
    ಶ್ರೀಶಣ್ಣನ ಸ್ವರ ಸೇರಿಯಪ್ಪಗ ಶಬ್ದ೦ಗೊಕ್ಕೆ ಭಾವನೆಗೊ ಸೇರಿ ಹಾಲಿ೦ಗೆ ಜೇನು ಸೇರ್ಸಿದ ಹಾ೦ಗೆ ರುಚಿಯಾತು.( ಬಳ್ಳಮೂಲೆ ಗೋವಿ೦ದಣ್ಣನ ಶೈಲಿಯೂ ಲಾಯ್ಕಿತ್ತು)
    ಅಭಿನ೦ದನೆಗೊ .

  9. ಸಾಹಿತ್ಯ ಭಾರಿ ಲಾಯಿಕ ಇದ್ದು . ಬೊಳು೦ಬು ಮಾವ ಹೇಳಿದಾಂಗ ನರಸಿಂಹಸ್ವಾಮಿಯ ಮೈಸೂರು ಮಲ್ಲಿಗೆ ಪದ್ಯಂಗೊ ನೆಂಪಾವ್ತು. ಶೀಶಣ್ಣನ ಹಾಡುಗಾರಿಕೆಯು ಚಲೊ ಬೈನ್ದು

  10. ಸಂಪ್ರದಾಯ ಮನೆತನದ ಹವ್ಯಕ ಕೂಸಿನ ಭಾವನೆಗಳ ತುಂಬಾ ಚೆಂದಕೆ ಕವನ ರೂಪಲ್ಲಿ ಕೊಟ್ಟ ಬಾಲಣ್ಣಂಗೆ ವಂದನೆಗೊ.
    ತುಂಬಾ ಕೊಶೀ ಆತು. ಎಲ್ಲೋರಿಂಗೂ ಒಂದಲ್ಲ ಒಂದು ದಿನ ಇದಲ್ಲಿ ಬರದ್ದು ಅನುಭವಲ್ಲಿ ಆಗಿಕ್ಕು ಹೇಳ್ತಲ್ಲಿ ಸಂಶಯವೇ ಇಲ್ಲೆ.
    ಇನ್ನೂದೆ ಹೀಂಗಿಪ್ಪ ಭಾವ ಗೀತೆಗೊ ಬಾಲಣ್ಣನ ರಚನೆ ಮತ್ತೆ ಶ್ರೀಶಣ್ಣನ ಧ್ವನಿಲಿ ಬೈಲಿಂಗೆ ಒದಗಲಿ

  11. ವಾಹ್ ವಾಹ್. ಬಾಲಣ್ಣರ ಕಲ್ಪನೆ ಶೀಶಣ್ಣರ ರಾಗ ಸ೦ಯೋಜನೆ ಎರಡೂ ರಾಶೀ ಚೊಲೋ ಬ೦ಜು.
    ನ೦ಗೋಕೆಲ್ಲಾ ಖುಷಿ ಪಡ್ಸಿದ್ದಕ್ಕೆ ಧನ್ಯವಾದಗಳು… ಮು೦ದಿನ ಹಾಡಿಗೆ ಕಾಯ್ತಾ ಇದ್ದೆ 🙂

    1. ಮಾನೀರ್ ಮಾಣಿಗೆ ಧನ್ಯವಾದಂಗೊ.
      ಮುಂದಿನ ಹಾಡಿಂಗೆ ಆನೂ ಕಾಯ್ತಾ ಇದ್ದೆ.

  12. ಕಂಡಾಬಟ್ಟೆ ಚೆಲೋ ಆಜು, ಮನೆಮದ್ದಿನ ಬಾಲಣ್ಣ ಆವೊತ್ತೇ ಫೇಸ್ ಬುಕ್ಕಲ್ಲಿ ವಿಡಿಯೋ ಮಾಡಿ ಹಾಕಿದ್ವಾಗಿತ್ತು ನಾನು ಕೇಳಿದ್ದೆ. ಇಲ್ಲಿ ಶ್ರೀಶ ಹಾಡಿದ್ದು ಲೈಕಿದ್ದು.

  13. ಹವ್ಯಕ ಕೂಸೊಂದು ಅದರ ಸೋದರತ್ತೆ ಮಗ ಮನೆಗೆ ಬಪ್ಪ ಹೊತ್ತಿಲ್ಲಿ , ಹಿಂದಾಣ ಬಾಲ್ಯದ ಮಧುರ ನೆಂಪುಗಳ ಮಾಡ್ಯೊಂಡ ಕಲ್ಪನೆಲಿ ಬಂದ ಬಾಲಣ್ಣನ ಪದ್ಯ ಭಾರೀ ಶೋಕು ಆಯಿದು. ದೂರದ ಊರಿಲ್ಲಿ ಕಲಿತ್ತಾ ಇಪ್ಪ ಚಿಗುರು ಮೀಸೆಯ ಭಾವಯ್ಯ ಮನಗೆ ಬಪ್ಪಗ, ಆ ಕೂಸಿನ ಮನಸ್ಸಿಲ್ಲಿ ಬಂದ ಭಾವನೆಗೊ ನೈಜವಾಗಿ ಇದ್ದು. ಓದುವಗ ನರಸಿಂಹಸ್ವಾಮಿಯ ಮೈಸೂರು ಮಲ್ಲಿಗೆ ಪದ್ಯಂಗೊ ನೆಂಪಾವ್ತು. ಒಳ್ಳೆ ಸಾಹಿತ್ಯ ಬಾಲಣ್ಣ. ಬಳ್ಳಮೂಲೆ ಅಣ್ಣನ ಧ್ವನಿಲಿ ಈ ಪದ್ಯವ ಕೇಳಿದ್ದೆ. ಶ್ರೀಶಣ್ಣನ ಧ್ವನಿಲಿ ಮನಗೆ ಹೋಗಿ ಕೇಳೆಕಷ್ಟೆ. ಖಂಡಿತಾ ಚೆಂದ ಆಯಿಕ್ಕು.

    1. ಭಾವಪೂರ್ಣವಾಗಿ ಶ್ರೀಶಣ್ಣ ಹಾಡಿದ್ದರನ್ನೂ ಕೇಳಿದೆ, ಲಾಯಕಾಯಿದು. ಗೋವಿಂದ ಬಳ್ಳಮೂಲೆ ಅಣ್ಣನ ಶೈಲಿ ರಜ ಬೇರೆ ಇದ್ದು, ಅದುದೆ ಲಾಯಕಾಗಿತ್ತು.

  14. ಒಪ್ಪಕ್ಕಾ, ಅನು, ವಾಣಿವಿಜಯ ದ ಶಿಬಿರ ನೆಂಪಿದ್ದು, ಆನಂತರ ಎಷ್ತೋ ಆದಿಕ್ಕು. ಹೀಂಗೇ ಮಕ್ಕೊ ಸಿಕ್ಕುವಾಗ ಹೇಳ್ತವು, ಉತ್ತಮ ಅಭಿಪ್ರಾಯ ಕೊಟ್ಟದಕ್ಕೆ ಧನ್ಯವಾದಂಗೊ.

  15. ಪದ್ಯ ತುಂಬ ಲಾಯ್ಕ ಆಯ್ದು. ಸಣ್ಣಾದಿಪ್ಪಗಾಣ ಆಟಂಗ ಎಲ್ಲ ಒಂದರಿ ಕಣ್ಣ ಎದುರಂಗೆ ಬಂತು.

    ಮಾವ(ಬಾಲಣ್ಣ) 1996 ರಲ್ಲಿ ದೈಗೋಳಿ ವಾಣಿವಿಜಯ ಶಾಲೆಲಿ ಬೇಸಗೆ ಶಿಬಿರ ಆಗಿತ್ತು. ನಿಂಗ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂದಿತ್ತಿದ್ದಿ. ಹನಿಗವನ ಬರವಲೆ, ಚಿತ್ರ ಮಾಡ್ಳೆ ಹೀಂಗಿಪ್ಪ ಚಟುವಟಿಕೆಗೊ ಇದ್ದತ್ತು. ಆನು ಅಲ್ಲಿ ಶಿಬಿರಕ್ಕೆ ಬಂದಿತ್ತಿದ್ದೆ. ನೆಂಪಿದ್ದಾ…..? ತುಂಬ ಮಕ್ಕ ಇದ್ದ ಕಾರಣ ಎನ್ನ ನೆಂಪಿಲ್ಲದ್ದರೂ ಶಿಬಿರ ನೆಂಪಿಕ್ಕಲ್ಲದಾ…….

  16. ಶ್ರೀಶಣ್ಣಾ, ಭಾರೀ ಲಾಯಕ್ಕಾಯಿದು ಪದ್ಯವ ಅನುಭವಿಸಿ ಹಾಡುದು ಹೇಳಿದರೆ ಹೀಂಗೆ…ಹಾಡಿ ಯೆಲ್ಲೋರ ಕೆಮಿಗೆ ಮುಟ್ಟುಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಂಗೊ.

    1. ಧನ್ಯವಾದಂಗೊ. ನಿಂಗೊಗೆ ಕೊಶೀ ಆದರೆ ಎನಗೂ ಕೊಶಿಯೇ.

  17. ಬಾಲಣ್ಣ – ಶ್ರೀಶಣ್ಣ ಜೋಡಿಯ ಇನ್ನೊಂದು ಕೊಡುಗೆ ಬೈಲಿಂಗೆ ನೈಜತೆ ಮತ್ತು ಭಾವಪೂರ್ಣವಾಗಿ ಮೂಡಿಬೈಂದು. ಅಭಿನಂದನಾಪೂರ್ವಕ ಶ್ಲಾಘನೆಯೊಡಗೂಡಿ -‘ಚೆನ್ನೈವಾಣಿ’.

    1. ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ.
      ನಿಂಗಳೆಲ್ಲರ ಪ್ರೋತ್ಸಾಹ ಹೀಂಗೆ ಮುಂದುವರಿಯಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×