Oppanna.com

ಚೈನು – ಭಾಗ ಎರಡು

ಬರದೋರು :   ಶ್ಯಾಮಣ್ಣ    on   29/07/2013    10 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೆಗೆ….
ಎಂಕಣ್ಣ ಇನ್ನೊಂದರಿ ಪೇರಳೆ ಮರ ಹಿಡುದು ಬಗ್ಗಿ ನೋಡಿದ°. ಜೆನ ಆರು ಹೇಳಿ ಗೊಂತಾಗದ್ರುದೆ ಬಿದ್ದ ಮನುಷ್ಯ° ಕಾಕಿ ಚಡ್ಡಿದೆ ಬೆಳಿ ಅಂಗಿದೆ ಹಾಕಿದ್ದು ಗೊಂತಾವುತ್ತು.
‘ಆರಿಕ್ಕು, ಕೆಳ ಇಳುದೇ ನೋಡೆಕ್ಕಷ್ಟೆ…’ ಎಂಕಣ್ಣ ಮನಸ್ಸಿಲೇ ಗ್ರೇಶಿಕೊಂಡು, ಇತ್ಲಾಗಿ ತಿರುಗುವಗ ಬಲ್ಬು ಹೊತ್ತಿದಾಂಗೆ ರಪಕ್ಕ ತಲೆಯೊಳ ನೆಂಪಾತು….. ಕಿಟ್ಟಣ್ಣಂದೇ ಕಾಕಿ ಚಡ್ಡಿ ಬೆಳೀ ಅಂಗಿ ಹಾಕುದು.
ನಿನ್ನೆ ಹೋತ್ತೋಪಗ ಜಗಳ ಮಾಡಿ “ಅಪ್ಪಪ್ಪು, ಕೈಗೆ ಸಿಕ್ಕಿದ ಮದ್ದು ಕೊಡೆಕ್ಕು, ಕಂಜಿ ಸತ್ತರೆ? ಅದರೆ ಅಬ್ಬಗೆ ಕಂಜಿ ಇಲ್ಲದ್ರೆ ಹೇಂಗಾವುತ್ತು? ಆನು ಸತ್ತರೆ ನಿಂಗೊಗೆ ಹೇಂಗಕ್ಕು?” ಹೇಳಿ ಅಟ್ಟ ಹತ್ತಿಕ್ಕಿ ಹೋದ ಕಿಟ್ಟಣ್ಣನ ನೆಂಪಾತು. ಅಷ್ಟಪ್ಪಗ ಅವ° ಹಾಕಿಕೊಂಡಿತ್ತದು ಕಾಕಿ ಚಡ್ಡಿ ಬೆಳಿ ಅಂಗಿ.
ಮುಂದೆ ಓದಿ….
————————————————————————————————-
ವೆಂಕಣ್ಣನ ಮೈ ಎಲ್ಲ ದರುಸುಲೆ ಸುರು ಆತು. ಒಂದು ಸಲ ಬಾಯಿಂದ “ಕಿಟ್ಟಣ್ಣಾ….” ಹೇಳಿ ಬೊಬ್ಬೆ ಹೆರಟತ್ತ್ತು.
“ನಿಂಗ ಬೊಬ್ಬೆ ಎಂತರ ಹೊಡವದು? ಎನಗೆ ಕೇಳ್ತು. ಆನಿಲ್ಲಿಯೇ ಇದ್ದೆ. ಎಂತರ ನಿಂಗ ಗುಂಡಿಲಿ ನೋಡುದು?” ಹಿಂದಂದ ಕಿಟ್ಟಣ್ಣನ ಸ್ವರ ಕೇಳಿತ್ತು!!
ಎಂಕಣ್ಣ ರಪಕ್ಕ ಹಿಂದೆ ತಿರುಗಿ ನೋಡಿದ°. ಕಿಟ್ಟಣ್ಣಾ ಅಲ್ಲಿಯೇ ನಿಂದುಗೊಂಡು ಇದ್ದ°. ಅವಂಗೆ ಕುತೂಹಲ! ಈ ಅಪ್ಪ° ಗುಂಡಿಯೊಳ ಎಂತರ ನಿಲ್ಕಿ ನಿಲ್ಕಿ ನೋಡುದು?
“ನೀ ಉದಿ ಉದಿಯಪ್ಪಗಳೇ ಎಲ್ಲಿ ಕಾಣೆ ಆದ್ದು? ಎನಗೆ ಜೀವ ಹೋದಾಂಗೆ ಆಯಿದು ಇಲ್ಲಿ…” ಎಂಕಣ್ಣನ ಆಕ್ಷೇಪಣೆ ಬಂತು.
“ಅದು… ನಾಣಿಗೆ ನಮ್ಮ ಹತ್ತರೆ ಚಂದಮಾಮದ ಪುಸ್ತಕ ಬುಕ್ ಬೈಂಡು ಮಾಡಿದ್ದು ಇತ್ತಲ್ಲದಾ? ಅದು ಓದುಲೆ ಕೊಡ್ತೆಯ ಹೇಳಿ ಕೇಳಿತ್ತಿದ್ದ°. ನಿನ್ನೆಯಾಣ ಗಲಾಟೆಗೆ ಕೇಳ್ಲೆ ಅವಂಗೆ ಹೆದರಿಕೆ ಆತಾಯ್ಕು. ಹಾಂಗೇ ಉದಿಯಪ್ಪಗಳೇ ಅವಂಗೆ ಕೊಟ್ಟಿಕ್ಕಿ ಬತ್ತೆ ಹೇಳಿ ಹೋಗಿತ್ತಿದ್ದೆ.” ಕಿಟ್ಟಣ್ಣ ಹೇಳಿದ°.
“ಆ ಗುರ್ಮೆಲಿ ಎಂತರ ನೋಡುದು? ಎಂತ ಇದ್ದು ಅಲ್ಲಿ? ತೆಂಗಿನ ಕಾಯಿ ಬಿದ್ದಿದಾ?”
“ಅವು ಅಣ್ಣೇರೆ ಏರೋ ಬೂರ್ದೇರು ಅಯಿಟ್ಟು….” ಲಿಂಗಪ್ಪ° ಬಾಯಿ ಹಾಕಿತ್ತು ಕೂಡ್ಲೇ.
ಕಿಟ್ಟಣ್ಣ ಕೂಡ್ಲೇ ಪೇರಳೆ ಮರ ಹಿಡುದು ಬಗ್ಗಿ ಗುರ್ಮೆಯೊಳ ಬಗ್ಗಿ ನೋಡಿದ°.
“ಆರದು? ಆರು ಬಿದ್ದದು?” ಕಿಟ್ಟಣ್ಣಂಗೆ ರಜ ಹೆದರಿಕೆ ಆತು.
“ಆರು ಹೇಳಿ ಎನಗುದೆ ಗೊಂತಿಲ್ಲೆ. ಇಳುದು ನೋಡೆಕ್ಕಷ್ಟೆ….” ಎಂಕಣ್ಣ ಹೇಳಿದ°.
ಗುರ್ಮೆಗೆ ಇಳಿವದು ಆರು? ಎಂಕಣ್ಣಂಗೆ ಕಾಲುಗೆಂಟಿಲಿ ಒಂದು ಬೇನೆ ಇದ್ದು. ಕಡೆಂಜದ ಎಣ್ಣೆ ದಿನಾಗ್ಲು ಕಸ್ತಲಪ್ಪಗ ಉದ್ದದ್ರೆ ಮಾರ್ಣೇದಿನ ಉದಿಯಪ್ಪಗ ಏಳ್ಲೆ ಎಡಿಯ. ಕಿಟ್ಟಣ್ಣ ಸಣ್ಣವ°. ಮತ್ತೆ ಆರು ಇಳುದು ನೋಡುದು?
“ಯಾನ್ ಜತ್ತು ತೂಪೆ ಆಣ್ಣೇರೆ…” ಲಿಂಗಪ್ಪ° ವೊಲಂಟಿಯರು.
“ಆವು ಜಪ್ಪುಲ… ಆಂಡ ಎಂಚಿನೆನ್ಲಾ ಮುಟ್ಟೋಡ್ಚಿ. ಜನ ಸೈತ್ತಂಡ ಬೊಕ್ಕ ತಾಪತ್ರಯ…” ಎಂಕಣ್ಣ ಹೇಳಿದ°.
ಲಿಂಗಪ್ಪ ಮೆಲ್ಲಂಗೆ ಕಾಲು ಮಡುಗಿ, ಪೊದೆಯ ಎಡಕ್ಕಿಲಿ ಪೊದೆ, ಬೇರು ಹಿಡ್ಕೊಂಡು ಕೆಳ ಇಳುತ್ತು.
ಎಂಕಣ್ಣ ಪೇರಳೆ ಮರ ಕೈಲಿ ಹಿಡುದು ಕೆಳಂಗೆ ಬಗ್ಗಿ ನೋಡುಲೆ ಸುರು ಮಾಡಿದ°.
ಕೆಳ ಇಳುದ ಲಿಂಗಪ್ಪ° ಹತ್ತರಂದ ಬಿದ್ದ ಮನುಷ್ಯನ ನೋಡಿತ್ತು. ಕತೆ ಕೈಲಾಸ!!! ನೋಡುವಗಳೇ ಗೊಂತಾವ್ತು, ಬಿದ್ದುಗೊಂಡಿಪ್ಪ ಜೆನ ಪರಂಧಾಮ ಸೇರಿ ಆಯಿದು.
ಕೊರಳು ಅಡಿಯಂಗೆ ತಿರ್ಪಿದ್ದು. ಕೈಕ್ಕಾಲುದೆ ತಿರ್ಪಿದ್ದು. ಕಾಕಿ ಚಡ್ಡಿ, ಬೆಳಿಅಂಗಿ ಹಾಕಿದ್ದು. ಲಿಂಗಪ್ಪ° ಮುಟ್ಟುಲೆ ಹೋಯಿದಿಲ್ಲೆ. ಮೆಲ್ಲಂಗೆ ಅಲ್ಲೆ ಇತ್ತಿದ್ದ ಒಂದು ಕೋಲು ತೆಗದು ಮೆಲ್ಲಂಗೆ ಬಿದ್ದ ಮನುಷ್ಯನ ತಲೆ ಅಡಿಯಂಗೆ ತುರ್ಕಿಸಿ, ತಿರುಗಿಸಿ ನೋಡ್ಲೆ ಪ್ರಯತ್ನ ಮಾಡಿತ್ತು.
“ಓ ದೇವೆರೆ, ಇಂಬ್ಯೆನಾ ಮಾರಾಯ್ರೆ…!!!” ಲಿಂಗಪ್ಪನ ಉದ್ಗಾರ ಮೇಲೆ ಇತ್ತಿದ್ದ ಎಂಕಣ್ಣಂಗೂ ಕೇಳಿತ್ತು.
“ಎಂಚಿನ ಮಾರಾಯ? ಏರವು? ಸೈತೆನಾ? ಬದ್ಕುದೆನಾ?”
“ಅಣ್ಣೇರೆ ಉಂದು ಇಂಬ್ಯೆ ಮಾರಯ್ರೆ ಸೈತ್ತೇ ಪೋತೆ…”
“ಇಂಬ್ಯೆ ಪಂಡ?”
“ಇಂಬ್ಯೆ ಪಂಡ ಆಯೆ ಅಣ್ಣೇರೆ… ಗೊತ್ತಾಯಿಜ್ಜ ಇರೆಗ್?”
“ಎಂಚಿನಯಾ? ಆಯೆ – ಇಂಬ್ಯೆ ಪಂಡ ಏರ್?”
“ಆಯೆ ಇಂಬ್ಯೆ ಪಂಡ ಆಯೆನೆ…”
“ಒರ ಪಣ್ ಮಾರಾಯ”
“ಈರೆಗ್ ಗೊತ್ತಾಯಿಜ್ಜ?”
“ತೆಕ್… ವಾ ಕರ್ ಕರಿ ಮಾರಾಯಾ ನಿನ್ನ… ಒರ ಏರು ಪಂಡುದ್ ಪಣ್… ಇಜ್ಜಂಡ ಮಿತ್ತ್ ಬಲ… ಕಿಟ್ಟಣ್ಣ… ನೀ ಇಳಿಯೋ ಕೆಳ… ಇಳುದು ನೋಡು ಆರು ಹೇಳಿ…” ಎಂಕಣ್ಣಂಗೆ ಲಿಂಗಪ್ಪನ ಮೇಲೆ ಪಿಸುರು ಎಳಗುಲೆ ಸುರು ಆತು.
“ಇರೆಗ್ ಆತ್ ಬೆಚ್ಚ ಆಪಿನೆ ದಾಯೆಗ್? ಉಂದು ತ್ಯಾಂಪ ಸೆಟ್ಟಿ ಅಣ್ಣೇರೆ…” ಲಿಂಗಪ್ಪ° ಕೆಳಂದಲೇ ಒದರಿತ್ತು.
———————————————————————–
ತೋಡಿಂದ ರಜ ಮೇಗಂಗಾಗಿ ಬರೆ ಕರೇಲಿ ಮೇಲೆ ಹತ್ತಿ ಹೋಪಲೆ ಮೆಟ್ಳುಗ ಇದ್ದು. ಗುಡ್ಡೆಯ ಅಲ್ಲಿಂದಲ್ಲಿಗೆ ಕೆತ್ತಿ ಮಾಡಿದ ಮೆಟ್ಳುಗ. ಮಳೆಗಾಲಲ್ಲಿ ಜಾರುಗು. ಈ ಮೆಟ್ಳುಗಳ ಹತ್ತಿ ಮೇಲೆ ಹೋದರೆ ಮೇಲೆ ಗುಡ್ಡೆ ಕರೆಲಿ ನಾಣಿಯ ಮನೆ ಸಿಕ್ಕುತ್ತು. ಮನೆ ಮುಂದೆ ಸಣ್ಣ ಜಾಲು. ಜಾಲಿಂದ ಆಚಿಗೆ ನಡಕ್ಕೊಂಡು ಹೋಪಲೆ ಒಂದು ಕಾಲು ದಾರಿ ಇದ್ದು. ಈ ದಾರಿಲಿ ಪಡುವಕ್ಕೆ ಹೋದರೆ ರಜಾ ಮುಂದೆ ಹೋದಪ್ಪಗ ಪುನ ಅದು ತೋಡ ಕರೇಲಿ ಹೋವುತ್ತು. ಹಾಂಗೆ ಒಂದು ಐದಾರು ಪರ್ಲಾಂಗು ಮುಂದೆ ಹೋದಪ್ಪಗ ಒಂದು ಅಡಕ್ಕೆ ತೋಟ ಸಿಕ್ಕುತ್ತು. ಈ ಅಡಕ್ಕೆ ತೋಟದ ಒಳಂದಾಗಿ ಒಂದು ದಾರಿ ಇದ್ದು. ಅದಲ್ಲೇ ಹೋದರೆ ಒಂದು ಮನೆ ಸಿಕ್ಕುತ್ತು. ಈ ಮನೆ ತ್ಯಾಂಪ ಸೆಟ್ಟಿದು.
ತ್ಯಾಂಪ ಸೆಟ್ಟಿ ಹೇಳಿರೆ ಒಂದು ವಿಶಿಷ್ಟ ವ್ಯೆಗ್ತಿತ್ವ. ಇದರ ಪ್ರಾಯ ಸುಮಾರು ಎಪ್ಪತ್ತು ಅಕ್ಕು. ಐದು ಫೀಟು ಎತ್ತರದ ಮನುಷ್ಯ. ಮಂಡೆ ಬೋಳಾಯಿದು. ತಲೆಯ ಹಿಂದಾಣ ಹೊಡೆಲಿ ಒಂದು ನಾಲ್ಕು ಬೆಳಿತಲೆಕಸವು ಇಪ್ಪದು. ಮೋರೆಯ ಚರ್ಮ ಎಲುಬಿಂಗೆ ಅಂಟಿದ ಹಾಂಗೆ.ಕಣ್ಣು ಎರಡುದೆ ಗುಳಿ ಬಿದ್ದು ಒಳಂದ ಮಿಣಿ ಮಿಣಿ ನೋಡಿದ ಹಾಂಗೆ ಕಾಂಬದು. ಎಲ್ಕೊಟೆ ಕುಟ್ಟ ಹೇಳಿ ಹೇಳ್ಲಕ್ಕು, ಅಸ್ತಿಪಂಜರದ ಹಾಂಗೆ.
ತ್ಯಾಂಪ ಸೆಟ್ಟಿಗೆ ನಾಲ್ಕು ಮಕ್ಕ. ಎರಡು ಹೆಣ್ಣು, ಎರಡು ಗೆಂಡು. ಎರಡು ಹೆಣ್ಣುಗೊಕ್ಕು ಮದುವೆಯೂ ಆಯಿದು, ಗೆಂಡಗಳ ಒಟ್ಟಿಂಗೆ ಸರಿ ಆಗದ್ದೆ ವಾಪಾಸು ಬಂದು ಅಪ್ಪನ ಮನೆಲಿ ಬಂದು ಕೂಯಿದವು. ತ್ಯಾಂಪ ಸೆಟ್ಟಿಯ ಹೆಂಡತ್ತಿ ಲಚ್ಚುಮಿ ಎರಡು ವರ್ಷದ ಹಿಂದೆ ಸತ್ತಿದು. ಅದು ಸಾಯಿವಲ್ಲಿವರೆಗೆ ತ್ಯಾಂಪ ಸೆಟ್ಟಿ ಸರಿಯಾಗಿಯೇ ಇತ್ತು. ಹೆಂಡತ್ತಿ ಸತ್ತ ಮೇಲೆಯೇ ಅದಕ್ಕೆ ಗಿರ್ಮಿಟ್ಟು ಸುರು ಆದ್ದು.
ಹೆಂಡತ್ತಿ ಇಪ್ಪಗ ಮಕ್ಕ ಎಲ್ಲ ಹೇಳಿದಾಂಗೆ ಕೇಳಿಕೊಂಡು ಇತ್ತಿದ್ದವು. ಅದು ಸತ್ತ ಕೂಡ್ಲೆ ಅದರ ಹೆಣ ಸುಡುವ ಮೊದಲೇ ಮನೆಲಿ ಲಡಾಯಿ ಸುರು ಆತು. ವಿಷಯ ಎಂತ ಹೇಳಿ ಆರಿಂಗೂ ಸ್ಪಷ್ಟ ಇಲ್ಲೆ. ಬಹುಷ ಹೆಂಡತ್ತಿಯ ಹತ್ತರೆ ಇತ್ತಿದ್ದ ಚಿನ್ನದ ವಿಷಯಯಲ್ಲಿ ಹೇಳಿ ಹೇಳ್ತವು. ಸುಮಾರು ಇತ್ತಡ, ಅದು ಸತ್ತ ಕೂಡ್ಲೆ ಕಾಣೆ ಆಯಿದಡ. ಆರು ತೆಗದು ಮಡುಗಿದ್ದವು ಹೇಳಿ ಆರಿಂಗೂ ಗೊಂತಿಲ್ಲೆ. ಕಡೆಂಗೆ ಲಡಾಯಿ ಎಲ್ಲಿವರೆಗೆ ಎತ್ತಿತ್ತು ಹೇಳಿರೆ, ಲಚ್ಚುಮಿಯ ಹೆಣ ಸುಡ್ಳೆ ಕೂಡಾ ಮಕ್ಕ ಸೇರದ್ದೆ ತ್ಯಾಂಪ ಸೆಟ್ಟಿ ಆರಾರಿಂಗೋ ದಮ್ಮಯ್ಯ ಹಾಕಿ, ಹೆಣವ ನಾಲ್ಕು ಮೈಲು ದೂರದ ಪಳಿಕ್ಕೆಗೆ ಹೊತ್ತು, ಸುಡೆಕ್ಕಾಗಿ ಬಂತು. ತ್ಯಾಂಪಸೆಟ್ಟಿ ಕಣ್ಣಿಲಿ ನೀರು ಹಾಕಿಕೊಂಡು, ಪಳಿಕ್ಕೆಲಿ ಹೆಂಡತ್ತಿಯ ಒಂದೇ ಸುಟ್ಟತ್ತು. ಕಣ್ಣಿಲಿ ನೀರು ಬಂದದು ಎಂತಕೆ ಹೇಳಿರೆ ಕಾಷ್ಟಕ್ಕೆ ಹಾಕಿದ ಸೌದಿ ರಜ ಹಸಿ ಇತ್ತು, ಹಾಂಗೆ ಸರಿ ಹೊತ್ತದ್ದೆ ಹೊಗೆ ಜಾಸ್ತಿ ಬಂತಲ್ಲ, ಅದಕ್ಕೆ.
ಪಳಿಕ್ಕೆ ಹೇಳಿರೆ ನಿಂಗೊಗೆ ಗೊಂತಿದ್ದಲ್ಲದ? ನಿಂಗೊ ಯವಾಗಾದರೂ ಹೋಯಿದಿರಾ? ಪಳಿಕ್ಕೆ ಹೇಳಿರೆ ‘ಸುಡುಕ್ಕಿರಿ’… ಊರಿಲಿ ಸತ್ತೋರಿನ ಸುಡ್ಳೆ ಬೇರೆ ಎಲ್ಲಿಯೂ ಜಾಗೆ ಸಿಕ್ಕದ್ರೆ ಇಲ್ಲಿಗೆ ತಂದು ಸುಡ್ತವು. ಕನ್ನಡಲ್ಲಿ ಇದಕ್ಕೆ ‘ಹಿಂದೂ ರುದ್ರ ಭೂಮಿ’ ಹೇಳಿ ಹೆಸರು. ತುಂಬಾ ಪ್ರಾಕಿಂದಲೇ ಈ ಪಳಿಕ್ಕೆ ಇದ್ದು ಹೇಳಿ ಜೆನಂಗ ಹೇಳ್ತವು. ತುಂಬ ಹಿಂದೆ ಪರಶುರಾಮ ಬಾರ್ಗವಲಿಂಗೇಶ್ವರ ದೇವಸ್ತಾನ ಸ್ತಾಪನೆ ಮಾಡಿದ ದಿನಂದಲೂ ಈ ಪಳಿಕ್ಕೆ ಇದ್ದು ಹೇಳಿ ಮುದ್ಕಂಗ ಹೇಳ್ತವು… ಅದರ ಕೇಳಿಕೊಂಡು ಮಕ್ಕಳೂ ಹೇಳ್ತವು. ಈ ಮಕ್ಕ ದೊಡ್ಡ ಆಗಿ ಮುದ್ಕಂಗ ಅಪ್ಪಗ ಪ್ಳುಳ್ಯಕ್ಕೊಗೆ ಇದರನ್ನೇ ಹೇಳ್ತವು. ಹಾಂಗಾಗಿ ಆರುದೇ ಇದರ ಅಪ್ಪಾ ಅಲ್ಲದಾ ಹೇಳಿ ಸಂಶೋದನೆ ಮಾಡ್ಳೆ ಹೋಯಿದವಿಲ್ಲೆ. ಬಾರ್ಗವಲಿಂಗೇಶ್ವರ ಹೇಳಿರೆ ಈಶ್ವರ ದೇವರಲ್ಲದಾ? ಬೂತ ಪ್ರೇತ ಹೇಳಿರೆ ಈ ದೇವರ ಗಣಂಗ. ಹಾಂಗೆ ಬಾರ್ಗವಲಿಂಗೇಶ್ವರನ ಗಣಂಗೊಕ್ಕೆ ಬೂತ ಪ್ರೇತಂಗಳ ಸಪ್ಲೈ ಅಪ್ಪದು ಈ ಪಳಿಕ್ಕೆಂದಲೇ ಹೇಳಿ ಜೆನಂಗ ನಂಬಿದ್ದವು. ಸಾದಾರಣ ಎರಡು ಎಕ್ರ್ರೆಯಷ್ಟು ಜಾಗೆ ಇದ್ದು ಈ ಪಳಿಕ್ಕೆಗೆ. ಸುತ್ತ ಕಲ್ಲಿನ ಪಾಗಾರ ಇದ್ದು. ಕಲ್ಲು ಹೇಳಿರೆ ಮುರ ಕಲ್ಲಿನ ಗೋಡೆ ಅಲ್ಲ. ಅಲ್ಲೆ ಗುಡ್ಡೆಲಿ ಸಿಕ್ಕುವ ಕಾಟು ಕಲ್ಲುಗಳ ಓಯಿಶಿ ಮಾಡಿದ ಕಲ್ಲಿನ ಪಾಗಾರ.
ತ್ಯಾಂಪ ಸೆಟ್ಟಿಯ ಮನೆಂದ ಹೆರಟ ಕಾಲು ದಾರಿ ನಾಣಿಯ ಮನೆ ಎದುರು ಬತ್ತನ್ನೆ…map ಅದೇ ದಾರಿ ಮುಂದೆ ಹೋದಾಂಗೆ ಎಂಕಣ್ಣನ ತೋಟದ ಕರೆಯಾಣ ಬರೆಗೆ ತಾಗಿದ ಹಾಂಗೆ, ಮೇಲಾಣ ಹೊಡೆಲಿ ಮೂಡು ದಿಕ್ಕಿಂಗೆ ಹೋವುತ್ತು. ಬಲದ ಹೊಡೆಲಿ ಕೆಳ ಇಪ್ಪ ತೋಟ ದಾಂಟಿ ಮುಂದೆ ಹೋಪಗ ಎಡತ್ತಿಂಗೆ ಒಂದು ಕಲ್ಮಾರು ಕಾಡು ಸಿಕ್ಕುತ್ತು. ಈ ಕಲ್ಮಾರು ಕಾಡಿನ ಒಳಂದಾಗಿ ಹೋಪ ದಾರಿ, ಕಲ್ಮಾರು ಕಾಡು ಕಳುದ ಕೂಡ್ಲೆ ಇಪ್ಪ ಮೀನು ಅದ್ರಾಮನ ಮನೆ ಹತ್ತರಂಗೆ ಎತ್ತುತ್ತು. ಅಲ್ಲಿಂದ ಮುಂದೆ ಒಂದು ಕಾಡು ಇದ್ದು. ಈ ಕಾಡಿಂಗೆ ಬೀಜದಕಾಡು ಹೇಳಿ ಹೆಸರು. ಅಲ್ಲಿ ಬೀಜದ ಮರಂಗ ಇಪ್ಪ ಕಾರಣ ಅದಕ್ಕೆ ಬೀಜದಕಾಡು ಹೇಳಿ ಹೆಸರು.ಈ ಬೀಜದಕಾಡಿನ ಒಳಂದಾಗಿ ಹೋದರೆ, ಮತ್ತೆ ಸಿಕ್ಕುವ ಪದವಿಂಗೆ ಪಳಿಕ್ಕೆ ಪದವು ಹೇಳಿ ಹೆಸರು. ಈ ಪದವು ಬರೀ ಮುರಕಲ್ಲಿನ ಪದವು. ಇಲ್ಲಿ ನಿಂಗೊಗೆ ಅಲ್ಲಲ್ಲಿ ಇಪ್ಪ ಒಂದು ನಾಲ್ಕಾರು ಕಾಸರ್ಕನ ಗಿಡಂಗಳ ಬಿಟ್ರೆ, ಬೇರೆ ಯಾವುದೇ ಗಿಡ ಮರಂಗ ಕಾಂಬಲೆ ಸಿಕ್ಕ. ಈ ಪದವು ಸಾದಾರಣ ಒಂದು ಮೈಲು ದೂರದಷ್ಟಕ್ಕೆ ಇದ್ದು. ಹಗಲು ಹೋದರೆ ಬೆಶಿಲಿಂಗೆ ನಟ ತಿರುಗ್ಗು. ಕಸ್ತಲಪ್ಪಗ ಹೋದರೆ ಕಾರ್ಗಾಂಡ ಕಸ್ತಲೆ. ದಾರಿಲಿ ಒಂದು ನರಪ್ರಾಣಿ ಎದುರು ಸಿಕ್ಕ. ಈ ಪದವಿನ ನಡೂವಿಲಿ ಇಪ್ಪದು ಪಳಿಕ್ಕೆ. ಪಳಿಕ್ಕೆ ನಡೂಗೆ ಒಂದು ಸಿಮೆಂಟಿನ ಕಟ್ಟೆ ಇದ್ದು. ಹೆಣ ಸುಡ್ಳೆ ಹೇಳಿ ಪಂಚಾಯ್ತಿನವು ಕಟ್ಟಿಸಿದ ಕಟ್ಟೆ. ಇದಕ್ಕೆ ನಾಲ್ಕು ಕಂಬ ಹಾಕಿ ಎತ್ತರಕ್ಕೆ ಓಡಿನ ಮಾಡು ಹಾಕ್ಸಿದ್ದವು. ದೂರಕ್ಕೆ ನೋಡ್ಳೆ ಇದು ಯಕ್ಷಗಾನ ಬಯಲಾಟಕ್ಕೆ ಹಾಕಿದ ರಂಗ ಸ್ಥಳದ ಹಾಂಗೆ ಕಾಣ್ತು.
ಕಾಲುದಾರಿ ಪಳಿಕ್ಕೆಯ ಪಾಗಾರದ ಕರೆಂದಾಗಿ ಮುಂದೆ ಹೋವುತ್ತು. ಮತ್ತುದೆ ಐದು-ಆರು ಪರ್ಲಾಂಗು ಮುಂದೆ ಹೋದ ಮತ್ತೆ ದಾಸಪ್ಪ ಮಾಷ್ಟನ ಮನೆ ಎದುರಾಣ ಮಾರ್ಗಕ್ಕೆ ಸೇರ್ತು.ಈ ಮಾರ್ಗಲ್ಲಿ ನಿಂಗ ಅಂದೊಂದರಿ ಬೈಂದಿ. ನೆಂಪಿದ್ದಾ?
ಹೆಂಡತ್ತಿ ಸತ್ತ ದಿನಂದಲೆ ತ್ಯಾಂಪ ಸೆಟ್ಟಿ ಒಂದು ತರಾ ವರ್ತನೆ ಮಾಡ್ಳೆ ಸುರುಮಾಡಿತ್ತು. ಅದರದ್ದೊಂದು ಹಳೇ ಕಾಕಿ ಚಡ್ಡಿ ಇತ್ತು, ಪೋಲೀಸು ಚಡ್ಡಿಯ ಹಾಂಗಿಪ್ಪ, ದೊಡ್ಡ ದೊಡ್ಡ ಕಿಸೆ ಇತ್ತಿದ್ದ ಜೋಂಗ್ಳೀಸು ಚಡ್ಡಿ, ಅದರ ಹಾಕಿಕೊಂಡು, ಅದರ ಮೇಲೆ ಬೆಳೀ ವೇಷ್ಟಿ ಸುತ್ತಿಕೊಂಡು, ಬೆಳೀ ಅಂಗಿ ಹಾಕಿಕೊಂಡು ಇಪ್ಪದು. ಎಲ್ಲಿಯೂ ಕೂದಲ್ಲಿ ಕೂರ. ಆರು ಹತ್ತರೆ ಬಂದರೂ ಇದು ದೂರ ಹೋಗಿ ಒಬ್ಬನೇ ಕೂಪದು. ಆರತ್ರೂ ಮಾತಾಡ. ಮನೆಲಿ ಇಪ್ಪದು, ಮನೆಗೆ ಬಪ್ಪದು ಕಮ್ಮಿ ಮಾಡಿತ್ತು. ಮಕ್ಕ ಇದರ ಹತ್ತರೆ ಮತಾಡ್ತವಿಲ್ಲೆ. ಒಬ್ಬಕ್ಕೊಬ್ಬ ಮಾತಾಡ್ತವಿಲ್ಲೆ. ಮನೆಯೊಳ ಇದರ ಕಂಡ್ರೆ ಅದಕ್ಕಾಗ, ಅದರ ಕಂಡ್ರೆ ಇದಕ್ಕಾಗ.
ಅದರ ಒಟ್ಟಿಂಗೆ ತ್ಯಾಂಪ ಸೆಟ್ಟಿಗೆ ಒಂದು ಹೊಸ ಅಬ್ಯಾಸ ಸುರು ಆತು. ಯಕ್ಶಗಾನದ ಪದ್ಯಂಗಳ ಬಾಗವತನ ಹಾಂಗೆ ಹೇಳುದು. ಹೊತ್ತಿಲ್ಲೆ, ಗೊತ್ತಿಲ್ಲೆ, ಎಲ್ಲಿ ಇದ್ದೆ ಹೇಳಿ ಲೆಕ್ಕ ಇಲ್ಲೆ, ಊರಿಂಗಿಡಿ ಕೇಳುವ ಹಾಂಗೆ ಯಕ್ಷಗಾನದ ಪದಂಗಳ ಹೇಳುದು. ಒಟ್ಟಿಂಗೆ ತಕತೈ ಹೇಳಿ ಕೊಣಿವದು. ಪ್ರಸಂಗ ಯಾವದೂ ಆವುತ್ತು, ಒಂದಕ್ಕೊಂದು ಮಿಕ್ಸು ಆದರೂ ಆವುತ್ತು. ದಾರಿಲಿ ಉದ್ದಕ್ಕೆ ಹೋಪಗಳೂ ಇದರದ್ದು ದೊಂಡೆ ಹರಿವ ಹಾಂಗೆ ಯಕ್ಷಗಾನ ಬಾಗವತಿಕೆ. ಕೆಲವು ಸರ್ತಿ ಅದುವೆ ದೊಡ್ಡಕೆ ತಾಳವನ್ನುದೆ ಬೊಬ್ಬೆ ಹೊಡಕ್ಕೊಂಡು, ಕೊಣ್ಕೊಂಡು ಹೋಪದು. “ತ್ಯಾಂಪ ಸೆಟ್ಟಿಗು ಬುಡೆದಿ ಸೈತ್ತಿಬುಕ್ಕ ಮರ್ಲು ಸುರುವಾತುಂಡು” ಹೇಳಿ ಜೆನಂಗ ಮಾತಾಡ್ಳೆ ಸುರು ಮಾಡಿದವು.
ತ್ಯಾಂಪ ಸೆಟ್ಟಿ ಮನೆಗೆ ಬಪ್ಪದು ಕಮ್ಮಿ ಆತು ಹೇಳಿ ಹೇಳಿದೆ ಅಲ್ಲದಾ?. ದಿನಕ್ಕೊಂದರಿ ಬಕ್ಕು. ಕೆಲವು ಸರ್ತಿ ಕಸ್ತಲಪ್ಪಗ ಬಕ್ಕು, ಹನ್ನೆರಡು ಗಂಟೆಗೋ, ಒಂದೋ-ಎರಡೋ ಗಂಟೆಗೋ ಕೂಡ ಬಕ್ಕು….. ಆದರೆ ಬಂದ ಕೂಡ್ಳೇ ಮೀವದೋ, ಅದುವೇ ಹೆಜ್ಜೆ ಬೇಶಿಕೊಂಡು ಉಂಬದೋ, ತಿಂಬದೋ ಮಾಡಿಕ್ಕಿ ಪುನಾ ಹೆರಡುಗು. ನಟ ಇರ್ಳು ಗಂಟೆ ಎರಡು ಆದರುದೆ ಹೋಕು. ಎಲ್ಲಿಗೆ? ಆರಿಂಗೊಂತು? ಕೇಳುವವು ಆರು? ಅದೇ ಕಾಕಿ ಚಡ್ಡಿ, ಬೆಳಿ ಅಂಗಿ, ಚಡ್ಡಿ ಮೇಲೆ ಬೆಳಿ ವೇಷ್ಟಿ. ಕಸ್ತಲಪ್ಪಗ ಎಲ್ಲಿಗೆ ಹೋವುತ್ತು? ರಜ ದಿನ ಕಳುದ ಮೇಲೆ ಊರಿಲಿ ಇಡೀ ಸುದ್ದಿ… ತ್ಯಾಂಪ ಸೆಟ್ಟಿ ಯಾವಾಗಳೂ ಕಸ್ತಲಪ್ಪಗ ಪಳಿಕ್ಕೆಲಿ ಇರ್ತಡ!!!
ತ್ಯಾಂಪ ಸೆಟ್ಟಿ ಈ ಪಳಿಕ್ಕೆಲಿ, ಸಿಮೆಂಟಿನ ಕಟ್ಟೆ ಮೇಲೆ, ಹೆಂಡತ್ತಿಯ ಸುಟ್ಟ ಜಾಗೆಲಿ ಇರ್ತು. ಕೆಲವು ಸರ್ತಿ ರಪಕ್ಕನೆ ಮರ್ಲು ಎಳಗಿ ಊರು ಹಾರುವಾಂಗೆ ಯಕ್ಶಗಾನ ಪದ್ಯಂಗಳ ದೊಂಡೆ ಹರಿವ ಹಾಂಗೆ ಹೇಳಿಕೊಂಡು ಬೊಬ್ಬೆ ಹೊಡಗು. ” ತಕಿಟ ತಕ್ಕಿಟ ತಕಿಟ ತಕ್ಕಿಟ ತೈಯ ತಾದಿನ್ನತ್ತ ದಿನತೋಂ” ಹೇಳಿಕೊಂಡು ಕೊಣಿಗು. ಕುಶಿ ಬಪ್ಪಗ ಅಲ್ಲಿಂದ ಎದ್ದಿಕ್ಕಿ, ಹೊತ್ತಲ್ಲದ್ದ ಹೊತ್ತಿಂಗೆ ಯಕ್ಶಗಾನ ಬಾಗವತಿಗೆ ಮಾಡಿಕೊಂಡು, ಮಾರ್ಗಲ್ಲಿ ಕೊಣ್ಕೊಂಡು, ಮನೆಗೆ ಬಕ್ಕು.
ಒಂದು ಸರ್ತಿ ಹೀಂಗಾತು.
ಮೀನು ಅದ್ರಾಮನ ಸುರ್ವಾಣ ಮಗಳ ಗೆಂಡ ಹೊಗೆಸೊಪ್ಪು ಇಬ್ರಾಯಿ ಮಾವನ ಮನೆಗೆ ಬಂದಿತ್ತು. ಅದು ಹೊಗೆಸೊಪ್ಪಿನ ವ್ಯಾಪಾರ ಮಾಡುವ ಕಾರಣ ಅದಕ್ಕೆ ಹೊಗೆಸೊಪ್ಪು ಇಬ್ರಾಯಿ ಹೇಳಿ ಹೆಸರು. ಅದ್ರಾಮನ ಸುರುವಾಣ ಮಗಳು ಪಾತಿಮಂಗೆ ಹದಿನಾರು ವರ್ಷ ಆದಕೂಡ್ಲೆ ಈ ಇಬ್ರಾಯಿಗೆ ಕೊಟ್ಟು ನಿಕಾ ಮಾಡಿದ್ದವು. ಮದುವೆ ಆಗಿ ಮೂರೋ ನಾಲ್ಕೋ ತಿಂಗಳು ಆಗಿತ್ತಷ್ಟೆ. ಮಾವನ ಮನೆಲಿ ಎಂತದೋ ಕಾರ್ಯಕ್ರಮ ಇತ್ತಿದ್ದು. ಗಮ್ಮತ್ತು ಮಾಡಿಕ್ಕಿ ಅದೇ ದಿನ ವಾಪಾಸು ಹೋಯೆಕ್ಕಿತ್ತು ಅದಕ್ಕೆ. ಮಾವನ ಮನೆಲಿ ಕಾರ್ಯಕ್ರಮ ಮುಗುದಪ್ಪಗೆ ಕಸ್ತಲೆ ಆಗಿ ನಡುರಾತ್ರಿ ಗಂಟೆ ಒಂದು. ಇಬ್ರಾಯಿಗೆ ಹೋಗದ್ದೆ ಉಪಾಯ ಇಲ್ಲೆ. ನಮ್ಮ ತ್ಯಾಂಪ ಸೆಟ್ಟಿಯ ವಿಷಯ ಅದಕ್ಕೆ ಗೊಂತಿಲ್ಲೆ, ಆರುದೇ ಹೇಳಿದ್ದವಿಲ್ಲೆ.
ಕಾಲುದಾರಿಲಿ ಪಳಿಕ್ಕೆ ಕರೆಂದಾಗಿ ಹೋಗಿ, ದಾಸಪ್ಪ ಮಾಷ್ಟನ ಮನೆ ಹತ್ರಂದಾಗಿ ಮುಂದೆ ಹೋಗಿ, ಆರತಿ ನರ್ಸಿಂಗು ಹೋಮಿನ ದಾಂಟಿ, ಬಾರ್ಗವಲಿಂಗೇಶ್ವರ ದೇವಸ್ತಾನ ದಾಂಟಿ, ಪೇಟೆಯ ಒಳಂದಾಗಿ ಮುಂದೆ ಹೋಪಗ, ಬಲತ್ತಿಂಗೆ ಶ್ರೀಕೃಷ್ಣ ಟಾಕೀಸು ದಾಂಟಿ, ಚಡವು ಹತ್ತಿ ಮುಂದೆ ಹೋದರೆ ಮೇಗಾಣ ಪೇಟೆ ಸಿಕ್ಕುತ್ತು. ಇದು ಬ್ಯಾರಿಗಳ ಕೇರಿ. ಇಲ್ಲಿಯೇ ಅವರ ಜಂಯ್ಯತ್ತುಲ್ ರಖಂಯ್ಯ ಸಿರಾಜುಲ್ ಹುದಾ ಮದ್ರಾಸು ಇಪ್ಪದು. ಅದರ ಹಿಂದೆ ಪಳ್ಳಿ. ಪಳ್ಳಿಯ ಕಂಪೋಂಡಿನ ಒಳ ಇಬ್ರಾಯಿ ಅದರ ಹರ್ಕ್ಲೀಸು ಸೈಕಲು ನಿಲ್ಸಿಕ್ಕಿ ಬೈಂದು. ಆ ಸೈಕಲು ತೆಕ್ಕೊಂಡು, ಅದರ ಬಿಟ್ಟುಕೊಂಡು ಪುತ್ತೂರು ಹೊಡೆಂಗೆ ಅದು ಹೋಯೆಕ್ಕು. ರಾಮಜ್ಜನ ಕೋಲೇಜಿನ ಹತ್ತರೆ ನೇರು ನಗರಲ್ಲಿ, ಅಲ್ಲೆಲ್ಲಿಯೋ ಅದರ ಮನೆ.
ಮಾವನ ಮನೆಂದ ಹೆರಡುವಗ ಕಸ್ತಲಪ್ಪಗ ಒಂದು ಗಂಟೆ. ಚತುರ್ದಶಿಯೋ ಅಮವಾಸ್ಯೆಯೋ ಗೊಂತಿಲ್ಲೆ. ಒಟ್ಟಾರೆ ಕಾರ್ಗಂಡ ಕಸ್ತಲೆ. ಇಬ್ರಾಯಿ ಹತ್ತರೆ ಒಂದು ಸಣ್ಣ ಟೋರ್ಚು ಇತ್ತು. ಒಂದೊಂದರಿ ಸರಿಯಾಗಿ ಅದು ಹೊತ್ತುತಿಲ್ಲೆ. ‘ಇರ್ಲಿ’ ಹೇಳಿ ಅದ್ರಾಮ ಎರಡು ಸೂಟೆ ಕಟ್ಟಿ ಕೊಟ್ಟತ್ತು . ಸೂಟೆ ಹೇಳಿರೆ ಮಡಲಿನ ಹಿಡಿಸೂಡಿಯ ಹಾಂಗೆ ಕಟ್ಟುದು. ಅದಕ್ಕೆ ನಡು ನಡೂಗೆ ನಾಲ್ಕೈದು ಕಟ್ಟಂಗ ಇರ್ತು. ಇಬ್ರಾಯಿ ಸೂಟೆಗೆ ಕಿಚ್ಚು ಹೊತ್ತಿಸಿ, ಬೀಜಿಕೊಂಡು ಹೆರಟತ್ತು. ಬೀಜಿದರೆ ಸೂಟೆ ಸರೀ ಹೊತ್ತುತ್ತು. ಬೀಜದಕಾಡಿಲಿ ಆ ಕಸ್ತಲೆಲಿ ಈ ಒಂಟಿ ಇಬ್ರಾಯಿ ಸೂಟೆ ಬೀಜಿಕೊಂಡು ಹೋಪದು ಹೇಳಿರೆ ಅದೆಂತ ಕುಶಾಲು ಅಲ್ಲ. ಒಳಂದ ಪುಕು ಪುಕು ಹೇಳ್ಲೆ ಸುರುವಾತು ಇಬ್ರಾಯಿಗೆ. ಕುಲೆಯೋ ಪ್ರೇತವೋ ಎದುರು ಸಿಕ್ಕಿರೆ? ಎರಡು ಹೊಗೆಸೊಪ್ಪು ಎಲೆ ತಿರ್ಪಿ ಕಿಸೆಯೊಳ ಮಡಿಕ್ಕೊಂಡಿದು. ಆರೋ ಹೇಳಿದ್ದವು ಅದಕ್ಕೆ, ಪ್ರೇತವೋ ಕುಲೆಯೋ ಎದುರು ಬಂದರೆ ಹೊಗೆ ಸೊಪ್ಪಿಲಿ ಆ ಪ್ರೇತದ ಮುಸುಡಿಗಿಂಗೆ ಬಡಿಯೆಕ್ಕಡ. ಅದು ಕೂಡ್ಲೆ ಹೊಗೆ ಸೊಪ್ಪಿನ ಘಾಟು ತಡೆಯದ್ದೆ ಹೆದರಿ ಓಡಿ ಹೋವುತ್ತಡ.
ಕಾಲುದಾರಿಲಿ ಬೀಜದಕಾಡು ದಾಂಟಿತ್ತು ಇಬ್ರಾಯಿ. ಮುಂದಂಗೆ ಇಪ್ಪದು ಪಳಿಕ್ಕೆ ಪದವು. ಒಂದು ಮೈಲು ಉದ್ದಕ್ಕೂ ಅಡ್ಡಕ್ಕೂ ಹರಡಿದ್ದು ಈ ಪಳಿಕ್ಕೆ ಪದವು. ಹಗಲೇ ನರ ಮನುಷ್ಯರ ಸುಳಿವು ಇರ್ತಿಲ್ಲೆ ಈ ಪದವಿಲಿ. ಇನ್ನು ಕಸ್ತಲಪ್ಪಗ ಇಕ್ಕಾ? ಬೀಜದ ಪದವಿಂಗೂ ಪಳಿಕ್ಕೆ ಪದವಿಂಗು ನಡುವಾಣ ದಾರಿಲಿ ಇಪ್ಪ ಬಾಂದುಕಲ್ಲಿನ ಹತ್ತರೆ ಒಂದರಿ ನಿಂದತ್ತು. ಈ ಬಾಂದುಕಲ್ಲು ಗಡಿ. ಇಲ್ಲಿ ನಿಂದು, ಸೂಟೆಯ ಬೆಣ್ಚಿ ಕಣ್ಣಿಂಗೆ ಬಡಿಯದ್ದ ಹಾಂಗೆ ಕೈ ಹಿಡುದು ಒಂದರಿ ಮುಂದಂಗೆ ನೋಡಿತ್ತು ಇಬ್ರಾಯಿ. ಅಕಾಶಲ್ಲಿ ಕಾಲಿ ನಕ್ಷತ್ರಂಗಳ ಬಿಟ್ಟರೆ ಇನ್ನೆಂತ ಇಲ್ಲೆ. ಆ ನಕ್ಷತ್ರಂಗಳ ಬೆಣ್ಚಿಲಿ ಹರಡಿ ಬಿದ್ದಿದು ಪಳಿಕ್ಕೆ ಪದವು. ಎಲ್ಲ ಮಸ್ಕು ಮಸ್ಕು. ಅಲ್ಲಲಿ ಇತ್ತಿದ್ದ ಕಾಸರ್ಕನ ಮರಂಗಳ ಛಾಯೆ ಮಾಂತ್ರ. ಒಂಟಿ ಕೊಲೆಯೋ ಬೂತವೋ ಹೇಳಿ ಆ ಮರಂಗಳ ನೋಡಿ ಗ್ರೇಶೆಕ್ಕು ಆರಾದ್ರು. ಆ ಹರಡಿ ಬಿದ್ದ ಕಸ್ತಲೆಯ ನೋಡುವಗ ‘ಛೆ…. ಮಾವನ ಮನೆಲೇ ನಿಂಬಲಾವ್ತಿತ್ತು’ ಹೇಳಿ ಕಂಡತ್ತು ಇಬ್ರಾಯಿಗೆ. ಪಾತಿಮನ ತರ್ಕಿಕೊಂಡು ಬೆಶ್ಚಂಗೆ ಮನಿಕ್ಕೊಂಬಲಾವ್ತಿತ್ತು. ಈಗ ಉಪಾಯ ಇಲ್ಲೆ. ಮುಂದಂಗೇ ಹೋಯೆಕ್ಕಷ್ಟೆ. ವಾಪಸು ಹಿಂದಂಗೆ ಮಾವನ ಮನೆಗೆ ಹೋದರೆ ‘ಹೆದ್ರು ಪುಕ್ಲ ಹೇಳಿ’ ಪಾತಿಮ ಗ್ರೇಶುಗು. ಪಾತಿಮ ಗ್ರೇಶಿದರೂ ತೊಂದರೆ ಇಲ್ಲೆ, ಅದರ ತಂಗೆಕ್ಕ ಇದ್ದವು ಏಳು ಹೆಣ್ಣುಗ. ಅವು ಎಂತ ಗ್ರೇಶುಗು? ಮರ್ಯಾದಿ ಪ್ರಶ್ಣೆ ಅಲ್ಲದ? ಒಂದು ಕಾಲು ಮುಂದೆ ಮಡುಗಿತ್ತೊ ಇಲ್ಲೆಯೋ ಇಬ್ರಾಯಿ, ಎಡದ ಹೋಡೆಂದ ಆರೋ “ಉಕ್ಯೋ…. ಉಕ್ಯೋ… ಉಕ್ಯೋ… ಉಕ್ಯೋ…. ಊ… ಊ…..” ಹೇಳಿ ಆಕಾಶ ಹರಿವ ಹಾಂಗೆ ಬಾಂಕು ಕೊಟ್ಟದು ಕೇಳಿತ್ತು. ತೆಗಲೆ ಧಸಕ್ಕ ಹೇಳಿತ್ತು ಇಬ್ರಾಯಿಗೆ.
ಬಾಂಕು ಕೇಳ್ತಾ ಇಪ್ಪದು ಬಡಗಂದ. ಆ ಹೊಡೇಲಿ ಒಂದು ದೊಡ್ಡ ಗುಡ್ಡೆ ಇದ್ದು, ಮಲ್ಲ ಕುಮೇರಿ ಹೇಳಿ ಹೆಸರು. ಅದರ ಬುಡಲ್ಲಿ ಕುದ್ಕ ಗುರಿ ಹೇಳಿ ಒಂದು ಜಾಗೆ ಇದ್ದು. ಊರಿನ ಕುದ್ಕಂಗ ಎಲ್ಲ ಅಲ್ಲೇ ಇಪ್ಪದಾ ಹೇಳಿ ಕಾಣ್ತು. ಕಸ್ತಲಪ್ಪಗ “ಉಕ್ಯೋ…. ಉಕ್ಯೋ… ಉಕ್ಯೋ… ಉಕ್ಯೋ…. ಊ… ಊ…..” ಹೇಳಿ ಜೋರು ಕೂಗುಲೆ ಸುರು ಮಾಡ್ತವು. ಅದರ ಕೇಳಿದ ಕೂಡ್ಲೆ ಇತ್ಲಾಗಿ ಊರ ಹೊಡೆಂದ ನಾಯಿಗ ” ಬೊವ್ವ್… ಬೊವ್ವ್… ಬೊವ್ವೋ…ಓ…ಓ… ” ಹೇಳಿ ಉತ್ತರ ಕೊಡ್ತವು. ನಾಯಿಗಳ ಸ್ವರ ಕೇಳಿದ ಕೂಡ್ಲೆ ಕುದ್ಕಂಗಳ ಸ್ವರ ನಿಲ್ತು. ರಜಾ ಹೊತ್ತು ನಾಯಿಗಳ ಬೊಬ್ಬೆ… ಮತ್ತೆ ನಿಶ್ಯಬ್ದ. ಒಂದು ಅರ್ಧವೋ ಮುಕ್ಕಾಲೋ ಗಂಟೆ ಕಳುದು ಮತ್ತೆ ಪುನಾ ಸುರು ಆವ್ತು. ಆದರೆ ಇದು ಇಬ್ರಾಯಿಗೆ ಗೊಂತಿದ್ದಾ? ಪಾಪ.
ಇನ್ನು ಇಲ್ಲೇ ನಿಂದರೆ ಈ ಕುಲೆ ಸಂತಾನ ಅಟ್ಟಿಕೊಂಡು ಬಕ್ಕು ಹೇಳಿ ಗ್ರೇಶಿ ಇಬ್ರಾಯಿ ದಾಪುದಾಲು ಹಾಕಿ ಮುಂದಂಗೆ ನಡವಲೆ ಸುರುಮಾಡಿತ್ತು. ಕೂಗುದು ಕುದ್ಕಂಗಳೆ ಇಕ್ಕು ಹೇಳಿ ಅದಕ್ಕೆ ಅಂದಾಜಿ ಆತು. ಹಾಂಗೆ ತೆಗಲೆ ಗಟ್ಟಿ ಮಾಡಿಕೊಂಡು ಮುಂದಂಗೆ ಹೆಜ್ಜೆ ಹಾಕಿತ್ತು. ಅಷ್ಟಪ್ಪಗ ಕೈಲಿತ್ತ ಒಂದು ಸೂಟೆ ಹೊತ್ತಿ ಮುಗುತ್ತು. ಮೆಲ್ಲಂಗೆ ಇನ್ನೊಂದು ಸೂಟೆಯ ಹೊತ್ತಿಸಿಕೊಂಡು ಮುಂದೆ ಹೋಪಗ ದೂರಲ್ಲಿ ಪಳಿಕ್ಕೆ ಕಂಡತ್ತು. ಪಳಿಕ್ಕೆ ನಡೂಗೆ, ಕಟ್ಟೆಲಿ ದಗ ದಗ ಹೇಳಿ ಒಂದು ಕಾಷ್ಟ ಹೊತ್ತುತ್ತಾ ಇದ್ದು. ಬಹುಶ ಅದೇ ದಿನ ಆರೋ ಸತ್ತಿದವು. ಅವರ ಹೊತ್ತೋಪಗ ಹೊತ್ಸಿದ್ದು ಇನ್ನುದೇ ಹೊತ್ತುತ್ತಾ ಇದ್ದು.
ಪಳಿಕ್ಕೆ ಹತ್ತರಂಗೆ ಎತ್ತಿದ ಹಾಂಗೆ ಇಬ್ರಾಯಿಗೆ ಹೊತ್ತುತ್ತಾ ಇಪ್ಪ ಕಾಷ್ಟದ ಹತ್ತರೆ ಒಂದು ಬೆಳಿ ಗುಡಿ ಹಾಕಿ ಕೂದ ಆಕೃತಿ ಕಂಡತ್ತು. ನಡಕ್ಕೊಂಡಿತ್ತ ಬ್ಯಾರಿ ಜಬುಕ್ಕ ನಿಂದತ್ತು. ಎಂತದದು? ಮನುಷ್ಯನಾ? ಕೊಲೆಯಾ? ಪ್ರೇತವಾ? ಆಕೃತಿ ಹಂದುತ್ತಾ ಇಲ್ಲೆ. ಬಹುಷ ಹೆಣ ಹೊತ್ಸುಲೆ ಬಂದ ಅರೋ ಬಿಟ್ಟಿಕ್ಕಿ ಹೋದ ವಸ್ತ್ರ ಇಕ್ಕು. ಛೆ… ಈ ದಾರಿಲಿ ಬಪ್ಪಲೇ ಆಗ ಇತ್ತು…”ಯೇ ಅಲ್ಲಾಹು… ಯೇ ಅಲ್ಲಾಹು…” ಮನಸ್ಸಿಲೇ ಜಾನ್ಸಿಗೊಂಡು ನಿಧಾನಕ್ಕೆ ಮುಂದಂಗೆ ಕಾಲು ಮಡುಗಿತ್ತು. ಒಂದೊ ಎರಡೊ ಹೆಜ್ಜೆ ಮುಂದೆ ಹೋತ ಇಲ್ಲೆಯಾ…. ಬಲದ ಕಾಲಿಂಗೆ ಎಂತದೋ ಸಿಕ್ಕಿದ ಹಾಂಗೆ ಆತು… ನೋಡಿರೆ…. ಬಲದ ಕಾಲಿನ ಜೋಡಿನ ಬಾರ ಕಡುದ್ದು. “ಥತ್ ಇದರ… ಇನ್ನು ಕಾಲು ಎಳಕ್ಕೊಂಡೇ ಹೋಯೆಕ್ಕನ್ನೆ….. ಸರಿ.. ಇನ್ನೆಂತ ಮಾಡುದು…” ಕುಂಟಿಕೊಂಡು ನಡವಲೆ ಸುರು ಮಾಡಿತ್ತು.
ದಗ ದಗ ಹೊತ್ತುತ್ತ ಇಪ್ಪ ಕಾಷ್ಟದ ಎದುರು ವೇಷ್ಟಿಯ ಇಡೀ ಮೈಗೆ ಗುಡಿ ಹಾಕಿ ಹೊದ್ದುಗೊಂಡು ಕೂದುಗೊಂಡಿತ್ತಿದ್ದ ತ್ಯಾಂಪ ಸೆಟ್ಟಿಗೆ ಪಳಿಕ್ಕೆಯ ಪಡ್ಳಾಗಾಣ ಹೊಡೆಂದ ಒಂದು ಕಿಚ್ಚಿನ ಬೆಣ್ಛಿ ಪಳಿಕ್ಕೆ ಹೊಡೆಂಗೆ ಮುಂದೆ ಹಿಂದೆ ಬೀಜಿಗೊಂಡು, ಕುಂಟಿಗೊಂಡು ಬಪ್ಪದು ಗುಡಿಹೆಟ್ಟಿ ಹೊದ್ದುಗೊಂಡ ವೇಷ್ಟಿಯ ಒಳಂದಲೇ ಕಂಡತ್ತು. ಎಂತದದು? ಓ ಇದು ಕೊಳ್ಳಿ ಬೂತ… ಅತವಾ ಕಡಪ್ಪು ಇಕ್ಕಾ… ಅಲ್ಲ ಕುಂಟುತ್ತಾ ಇದ್ದು… ಇದು ಅಂಬಗ ಕುಂಟುಬೂತ…. ಬಹುಷ ತಿರುಗುಲೆ ಹೋದ್ದು ವಾಪಾಸು ಪಳಿಕ್ಕೆಗೆ ಬತ್ತಾ ಇದ್ದು. ಇದರ ಬಿಡ್ಳಾಗ… ಬಿಟ್ಟರೆ ಎನ್ನ ಜಾಗೆಗೆ ಉಪದ್ರ ಹೇಳಿ ಕಂಡತ್ತು ಸೆಟ್ಟಿಗೆ.
ರಪಕ್ಕ ಎದ್ದತ್ತು ಸೆಟ್ಟಿ. ಕಾಷ್ಟಂದ ಹೊತ್ತಿಗೊಂಡಿತ್ತ ಒಂದು ಕೊಳ್ಳಿಯ ಎಳದು ಬಲದ ಕೈಲಿ ಎತ್ತಿ ಹಿಡ್ಕೊಂಡತ್ತು. ಒಂದೇ ಸಲ ಊರಿಂಗಿಡಿ ಕೇಳುವ ಹಾಂಗೆ “ಬಾ… ಬಾ… ಆ…………………. ಆ………………………………” ಹೇಳಿ ಕಿರ್ಚಿತ್ತು, ದುಶ್ಶಾಸನ ವಧೆಲಿ ದುಶ್ಶಾಸನ ಬೀಮನ ದಿನಿಗುತ್ತ ಅದಾ… ಹಾಂಗೆ. ಪುನ ಚೆಂಡೆ ಪೆಟ್ಟಿನ “ಟ್ರಿಗಡ ಟ್ರಿಂಗಡ ಟ್ರಿಗಡ ಟ್ರಿಂಗಡ ಟ್ರಿಗಡ ಡಗ ಡಗ ತಕಿಟ ಟಿತ್ತೋಂ…. ತಕಿಟ ಕಿಟತಕ ತಕಿಟ ಕಿಟತಕ…ಟ್ರಿಂಗ ಟ್ರಿಂಗಡ ಟ್ರಿಗಡ ಡಂಗ್ ಡಂಗ್…” ಹೇಳಿ ಬಾಯಿಲೇ ದೊಡ್ಡಕ್ಕೆ ಬೊಬ್ಬೆ ಹೊಡಕ್ಕೊಂಡು ಧಿಂಗಣ ಹಾಕುಲೆ ಸುರು ಮಾಡಿತ್ತು, ಇಡಿ ಪಳಿಕ್ಕೆಯ ಕಟ್ಟೆ ಮೇಲೆ. ಆ ಕಟ್ಟೆಯೇ ಅದಕ್ಕೆ ಯಕ್ಷಗಾನ ರಂಗಸ್ಥಳ.
ಪಾಗಾರದ ಕರೇಲಿ ಕಾಲೆಳಕ್ಕೊಂಡು ಸೂಟೆ ಬೀಜಿಕೊಂಡು ಹೋಯ್ಕೊಂಡಿತ್ತ ಇಬ್ರಾಯಿಗೆ ಪಳಿಕ್ಕೆಯ ಒಳಂದ ಇದ್ದಕ್ಕಿದ್ದ ಹಾಂಗೆ ಬೊಬ್ಬೆ ಕೇಳಿದ್ದೇ, ಹಾರ್ಟು ಬಾಯಿಗೇ ಬಂದಂಗೆ ಆತು… ಒಳ ನೋಡಿರೆ ಬೆಳಿ ಆಕೃತಿ ಕೈಲಿ ಕೊಳ್ಳಿ ಹಿಡ್ಕೊಂಡು, ಬೊಬ್ಬೆ ಹೊಡಕ್ಕೊಂಡು ಕೊಣಿವಲೆ ಸುರು ಮಾಡಿದ್ದು. “ಯೇ ಅಲ್ಲಾ.. ಇದೆಂದ್ರಾ ಇದು…” ಹೇಳಿ ಇಬ್ರಾಯಿ ಕಣ್ಣು ದೊಡ್ಡ ಮಾಡಿ ನೋಡಿರೆ… ಆ ಕಾರ್ಗಾಂಡ ಕಸ್ತಲೆಲಿ, ಪಳಿಕ್ಕೆಯ ಒಳ, ಹೆಣ ಸುಡುವ ಕಟ್ಟೆಯ ಮೇಲೆ, ದಗ ದಗ ಹೊತ್ತುತ್ತಾ ಇಪ್ಪ ಕಾಷ್ಟದ ಎದುರು, ಕೈಲಿ ಕಿಚ್ಚಿನ ಕೊಳ್ಳಿ ಹಿಡುದು, ಬೆಳಿ ಆಕೃತಿ ಒಂದು ಬೊಬ್ಬೆ ಹೊಡೆತ್ತಾ ಕೊಣಿತ್ತಾ ಇಪ್ಪ ಭಯಾನಕವಾದ ದೃಶ್ಯ…. 😀
ಯಾ ಅಲ್ಲಾ. ಇದು… ಕುಲೆ… ಕುಲೆ….. ಇನ್ನಿಲ್ಲಿ ಇದ್ದರೆ ಈ ಕುಲೆ ಗ್ಯಾರಂಟಿ ಎನ್ನ ಕೊಲ್ತು… “ಯಾ… ಅಲ್ಲಾ… ನಾ ಚತ್ತಿಟ್ಟು ಪೋಯೆಲ್ಲೇ…” ಹೇಳಿ ಹೆದರಿಕೆಲಿ ಬೊಬ್ಬೆ ಹೊಡದ ಇಬ್ರಾಯಿ, ಬಾರ ಕಡುದ ಜೋಡಿನ ಅಲ್ಲೇ ಬಿಟ್ಟಿಕ್ಕಿ, ಕೈಲಿದ್ದ ಸೂಟೆಯ ಇನ್ನು ಗಟ್ಟಿ ಹಿಡ್ಕೊಂಡು, ಒಂದೇ ದಮ್ಮಿಲಿ ಮುಂದಂಗೆ ಓಡ್ಳೆ ಸುರುಮಾಡಿತ್ತು.chain3
ಪಳಿಕ್ಕೆಯ ಒಳ ನಾಲ್ಕೈದು ಕಾಟು ನಾಯಿಗಳೂ ವಾಸ ಮಾಡಿಕೊಂಡು ಇದ್ದವು. ಈ ನಾಯಿಗೊಕ್ಕೆ ತ್ಯಾಂಪಸೆಟ್ಟಿ ಗೊಂತಿದ್ದು. ಸುಮಾರು ಸಮೆಯಂದ ನೋಡ್ತಾ ಇದ್ದವು. ಅವರ ಹಾಂಗೇ ಇನ್ನೊಂದು ಹೇಳಿ ತ್ಯಾಂಪ ಸೆಟ್ಟಿಯ ಗ್ರೇಶಿದ್ದವು. ಈಗ ಇದ್ದಕ್ಕಿದ್ದ ಹಾಂಗೆ ಅವಕ್ಕೆ ಪಾಗಾರದ ಹೆರಂದ ಬೊಬ್ಬೆಯೂ, ಓಡುವ ಶಬ್ದವೂ ಕೇಳೆಕ್ಕಾ…. ತೆಕ್ಕಾ… ಈ ನಾಯಿಗಳೂ ಎದಿಕ್ಕಿ “ಬೊವ್ವೋವ್ವೋ…. ಬೊವ್ವೋ…” ಹೇಳಿ ಬೊಬ್ಬೆ ಹೊಡವಲೆ ಸುರು ಮಾಡಿದವು. ಒಟ್ಟಿಂಗೆ ಪಾಗಾರದ ಒಳಂದಲೇ ಇಬ್ರಾಯಿಯ ಒಟ್ಟಿಂಗೆ ಓಡ್ಲೆ ಸುರು ಮಾಡಿದವು. ತ್ಯಾಂಪ ಸೆಟ್ಟಿಗೆ ಪಾಗಾರದ ಹೆರ ಕೈಲಿ ಸೂಟೆ ಹಿಡ್ಕೊಂಡು ಓಡ್ತಾ ಇಪ್ಪ ಇಬ್ರಾಯಿಯೂ, ಪಾಗಾರದ ಒಳಂದ ಒಡ್ಸುತ್ತ ಇಪ್ಪ ನಾಯಿಗಳೂ ಕಂಡ ಕೂಡ್ಳೆ ‘ಓ… ಈ ಕುಂಟು ಬೂತ ಎನಗೆ ಹೆದರಿ ಓಡ್ತಾ ಇದ್ದು’ ಹೇಳಿ ಗೊಂತಾತು. ಕೂಡ್ಳೆ ಇನ್ನೊಂದು ಕೈಲಿಯೂ ಒಂದು ಕಿಚ್ಚಿನ ಕೊಳ್ಳಿ ಎಳದು ಹಿಡ್ಕೊಂಡು, ಇನ್ನೆರಡು ದಿಂಗಿಣ ಹಾಕಿ, “ಹೋ…..” ಹೇಳಿ ಬೊಬ್ಬೆ ಹೊಡಕ್ಕೊಂಡು ರಂಗಸ್ಥಳಂದ ಮೈಷಾಸುರ ಕೆಳ ಹಾರಿದಾಂಗೆ ಕೆಳಂಗೆ ಹಾರಿ, ಅಲ್ಲಿಯೇ ದಿಂಗಣ ಹೊಡವಲೆ ಸುರುಮಾಡಿತ್ತು.
ಓಡ್ಳೆ ಸುರು ಮಾಡಿದ ಇಬ್ರಾಯಿಗೆ ಕಣ್ಣ ಕರೇಲಿ ಎರಡೂ ಕೈಲಿ ಕೊಳ್ಳಿ ಹಿಡ್ಕೊಂಡು ಕೆಳ ಹಾರಿದ ಬೆಳಿ ಆಕೃತಿ ಕಂಡತ್ತು. ಈ ಕುಲೆ ಎನ್ನ ನುಂಗುಲೇ ಬತ್ತ ಇದ್ದು ಹೇಳಿ ಗ್ರೇಷಿದ ಇಬ್ರಾಯಿಗೆ ದೊಂಡೆಲಿ ಬಿತ್ತು ಸಿಕ್ಕಿಹಾಕಿಕೊಂಡಾಂಗೆ ಆತು. ಚಳಿ ಸೆಕೆ ಎರಡುದೆ ಒಟ್ಟಿಂಗೆ ಆದಂಗೆ ಆಗಿ ಬೆಗರು ಬಿಚ್ಚಿತ್ತು. ಒಟ್ಟಿಂಗೆ ಓಡಿಸಿಕೊಂಡು ಬತ್ತ ಇಪ್ಪ ನಾಯಿಗೊಕ್ಕೆ ಸಿಕ್ಕಿದರೆ ಸಿಗುದೇ ಹಾಕುಗು. “ಯಾ ಅಲ್ಲಾ…………………………………” ಹೇಳಿ ಬೊಬ್ಬೆ ಹಾಕಿದ ಇಬ್ರಾಯಿ ಕುಂಡೆಗೆ ಕಿಚ್ಚುಬಿದ್ದ ರೋಕೇಟಿನ ಹಾಂಗೆ ಓಡ್ಳೆ ಸುರು ಮಾಡಿದ್ದು ಹೇಂಗೆ ಪಳಿಕ್ಕೆ ಪದವು ದಾಂಟಿತ್ತೋ, ಹೇಂಗೆ ದಾಸಪ್ಪ ಮಾಷ್ಟನ ಮನೆ ದಾಂಟಿ, ಆರತಿ ನರ್ಸಿಂಗು ಹೋಮು ದಾಂಟಿ, ಬಾರ್ಗವ ಲಿಂಗೇಶ್ವರ ದೇವಸ್ತಾನ ದಾಂಟಿ, ಪೇಟೆ ದಾಂಟಿ, ಕೃಷ್ಣ ಟಾಕೀಸು ದಾಂಟಿ, ಮದ್ರಸಿನ ಹಿಂದಾಣ ಪಳ್ಳಿಯ ಕಂಪೋಂಡಿಲಿ ಮಡುಗಿದ ಸೈಕಲು ತೆಗದು, ಅದರ ಬಿಟ್ಟುಗೊಂಡು ಕಬಕ ದಾಂಟಿ, ನೇರು ನಗರದ ಅದರ ಮನೆಗೆ ಎತ್ತಿತ್ತು ಹೇಳಿ ಅದಕ್ಕೇ ಗೊಂತಿಲ್ಲೆ. ಮನೆಗೆತ್ತಿ ಒಳ ಬಿದ್ದ ಇಬ್ರಾಯಿಗೆ ಹಿಡುದ ಚಳಿ ಜ್ವರ ಬಿಟ್ಟದು ಹದಿನೈದು ದಿನದ ಮತ್ತೆಯೇ.
ಅಳಿಯನ ಕೈಲಿ ವಿಷಯ ತಿಳ್ಕೊಂಡ ಮೀನು ಅದ್ರಾಮಂಗೆ ಇದಕ್ಕೆ ತ್ಯಾಂಪ ಸೆಟ್ಟಿಯೆ ಮೂಲ ಹೇಳಿ ಗೊಂತಾತು. ಪಿಸುರು ಏರಿದ ಅದ್ರಾಮ “ಆ ತ್ಯಾಂಪ ಸೆಟ್ಟಿ ಕೈಗೆ ಸಿಕ್ಕಲಿ, ಅದರ ಕೊರಳು ಮುರುದು, ಗುಂಡಿಲಿ ಹುಗಿತ್ತೆ” ಹೇಳಿ ಸಿಕ್ಕಿದೋರತ್ರೆ ಎಲ್ಲ ಹೇಳಿಕೊಂಡು ತಿರುಗುತ್ತ ಇದ್ದು ಹೇಳಿ ಊರಿಲಿಡಿ ಸುದ್ದಿ…
ಮತ್ತೆಂತಾತು? ಬಪ್ಪವಾರ ನೋಡುವೋ… ಆಗದಾ?

10 thoughts on “ಚೈನು – ಭಾಗ ಎರಡು

  1. ಅಬ್ಬಬ್ಬಬ್ಬಬ್ಬ್ಬಾ…..!
    ಕಥೆಯ ಇನ್ನೊಂದರಿ ಮತ್ತೊಂದರಿ ಓದುವಾ ಹೇಳಿ ಕಾಣ್ತಾ ಇದ್ದು…. 🙂
    ಮುಂದಾಣ ಭಾಗಕ್ಕೆ ಕಾದೊಂಡಿರ್ತೆ…. 🙂

  2. ಕು೦ಟುಬೂತವೂ, ಕೊಲೆಯೂ ಮುಖಾಮುಖಿಯಪ್ಪ ಸ೦ದರ್ಭ ಮತ್ತೆ ಮತ್ತೆ ಓದುಸಿತ್ತು.ಕಥಾ ನಿರೂಪಣೆಲಿ ಸಣ್ಣ ಸಣ್ಣ ಸ್ವಾರಸ್ಯ೦ಗಳನ್ನೂ ಸೇರ್ಸಿಗೊ೦ಡ ಕ್ರಮ ಭಾರೀ ಕೊಶಿ ಕೊಡ್ತಾ ಇದ್ದು . ಕಡೆ೦ಜದ ಎಣ್ಣೆ,ಬೀಜುಲೆ ಸೂಟೆ,ಬಾರ ಕಡುದ ಜೋಡು..ಒ೦ದೋ ಎರಡೋ! ಮನಸ್ಸು ಸುಮ್ಮರು ವರುಷ ಹಿ೦ದ೦ಗೆ ಓಡಿತ್ತು.
    ಗಮ್ಮತ್ತಾಯಿದು ಶ್ಯಾಮಣ್ಣ..

  3. ಯಬ್ಬ ಬಚಾವ್, ಹೇಳಿ ತೋರಿತ್ತು ಎನಗೆ,
    ಕಿಟ್ಟಣ್ಣ ಸತ್ತನೋ ಹೇಳಿ ಟೆನ್ಶನು ಮಾಡ್ಸು ಒಂದು ವಾರ ಆತು,
    ಅವ° ಸತ್ತಿದಾಯಿಲ್ಲೆ ಹೇಳಿ ಗೊಂತಾದಪ್ಪಗ ಕೊಶಿ ಆತು,
    ಕಥೆ ಮುಂದುವರಿಯಲಿ, ಕೊಶೀ ಆವ್ತು ಓದಲೆ, ಕಾಯಲೆ… 🙂
    ಹೇಳಿದಾಂಗೆ ‘ಪೆನ್ಸಿಲು’ ಎನಗೆ ಒಂದರಿ ಓದ್ಲೆ ಕೊಡೇಕು ಹೇಳಿ ಡಾ|ಹರಿಕೃಷ್ಣ ಭರಣ್ಯ ಕೇಳಿತ್ತಿದ್ದವು,
    ಅವಕ್ಕೆ ಕಂಪ್ಯೂಟ್ರು ನೋಡ್ಲೆ ಎಡಿಯ ಹೇದವು,
    ಹಾಂಗೆ ಪ್ರಿಂಟು ಮಾಡಿ ಕೊಂಡೋಗಿ ಕೊಟ್ಟಿಕ್ಕಿ ಬಯಿಂದೆ, ಮೊನ್ನೆ…
    ಅಂಬಗಳೇ ಫೋನು ಮಾಡಿ ಹೇಯಿದವು, ಕಥೆ ಭಾರೀ ಒಳ್ಳೆದಾಯಿದಡ.
    ಇನ್ನು ‘ಚೈನು’ ಕೂಡಾ ತಂದು ಕೊಡೇಕು ಹೇಯಿದವು.

  4. ಎಲೆಮೆ೦ಟ್ರಿ ಶಾಲಗೆ ಹೋಪಗ ‘ಕುಲೆ’, ಬ್ರಮ್ಹ ರಾಕ್ಶಸನ ಕತೆಗಳ ಮಕ್ಕಳ ಕೈ೦ದ ಕೇಳಿ; ಶಾಲಗೆ ನಡಕ್ಕೊ೦ಡು ಹೋಪಗ ದಾರಿಲಿ ಸಿಕ್ಕುವ ವನದ ಅಡಿಲಿ ತು೦ಬಾ ಹೆದರಿಕೆ ಆಗಿಯೊ೦ಡಿತ್ತು. ಹೊಗೆ ಸೊಪ್ಪಿನ ಎಲೆಯ ಕೆಣಿ ಆಗ ಗೊ೦ತಿತ್ತರೆ ಅಜ್ಜನ ಹೊಗೆಸೊಪ್ಪಿನ ಅ೦ಡೆಲಿಪ್ಪ ತು೦ಡುಗೊ ಎಲ್ಲಾ ಎನ್ನ ಶಾಲೆ ಚೀಲದ ಕಿಸೆಲಿ ಇರ್ತಿತ್ತು. ಛೆ !ಪ್ರೇತ ಉಚ್ಹಾಟನೆಯ ರೀತಿ (ಮೂಢ ನ೦ಬಿಕೆ) ಗೊ೦ತಾಗದ್ದೆ ಹೊತನ್ನೆ!!

  5. ಕಥೆ ಭಾರೀ ಗಮ್ಮತ್ತು ಇದ್ದು!!!…..map ಇದ್ದದು ತುಂಬಾ help ಆತು. ಇಲ್ಲದ್ರೆ ಲಿಂಕು ಅರ್ಥವೇ ಆವುತ್ತಿತ್ತಿಲ್ಲೆ…ಃ) ಭೂತದ ವರ್ಣನೆ ಫಷ್ಟಾಯಿದು….ಮುಂದೆ ಎಂತಾವುತ್ತೋ ನೋಡೆಕ್ಕು.

  6. ಸದ್ಯ ಕಿಟ್ಟಣ್ಣ ಅಲ್ಲಾನೆ. ಸಮಾದಾನ ಆತು. ತ್ಯಾಂಪಣ್ಣನ ಕತೆ ಕೇಳಿ ಬೇಜಾರಾತು. ಅದರ ಹೆಂಡತ್ತಿ ಸತ್ತಪ್ಪಗ ದಹನ ಕ್ರಿಯೆ ಅಪ್ಪಗ ಕಣ್ಣೀರು ಬಂದದಕ್ಕೆ ಕಾರಣ ಕೇಳಿ ನೆಗೆ ಬಂತು. ಇಬ್ರಾಯ್ನೆ ಓಡಿದ್ದು ಲಾಯಕಾಯಿದು. ಮದ್ರಾಸದ ಹೆಸರು ನಾಚ್ಯುರಲ್ ಆಗಿ ಇದ್ದು.
    ಅಂತೂ ಶ್ಯಾಮಣ್ಣ, ಪತ್ತೇದಾರಿ ಕತೆ ಹಾಂಗೆ ಇಂಟರೆಸ್ಟಿಂಗು ಆಗಿದ್ದು. ನಮ್ಮ ಬೈಲಿನ ಕೆಲವು ನೆಂಟ್ರಿಂಗೆ ತುಳು ಮಲೆಯಾಳವ ಮುಳಿಯ ಭಾವಯ್ಯ ವಿವರುಸಿ ಕೊಡೆಕಕ್ಕು ಈಗ. ಚೈನಿನ ಇನ್ನಾಣ ಲಿಂಕಿಂಗೆ ಕಾಯ್ತಾ ಇದ್ದೆ.

  7. Bhale shyamanna ! Enage ‘narasimhayya’ na dharavahi odida hange aathu! Super duper shamanna..

  8. [ ಕಿಟ್ಟಣ್ಣ… ನೀ ಇಳಿಯೋ ಕೆಳ ] [ಕಡೆಂಗೆ ಲಡಾಯಿ ಎಲ್ಲಿವರೆಗೆ ಎತ್ತಿತ್ತು ಹೇಳಿರೆ,] – ಒಳ್ಳೆ ಸ್ವಾಭಾವಿಕವಾಗಿ ಬೈಂದಿದು
    ಗರುಡಪುರಾಣಲ್ಲಿ ಯಮಲೋಕದ ವರ್ಣನೆ ಹಾಂಗೆ ಪಳಿಕ್ಕೆ ವರ್ಣನೆ ಅದ್ಭುತ ಆಯ್ದು.
    ಪಟ ಸೂಪರ್. ದಾರಿ ನಕ್ಷೆ ಪ್ರಿಂಟು ತೆಗದು ಮಡಿಗಿದ್ದೆ. ಅದರ ಎದುರುಮಡಿಕ್ಕೊಂಡು ಇನ್ನೊಂದರಿ ಕತೆ ಓದೆಕು.
    ಮತ್ತೆಂತಾತು…??! ಅದೀಗ ತ್ಯಾಂಪ ಸೆಟ್ಟಿಯೇ ಅಪ್ಪೋ !! ಅಲ್ಲ ಲಿಂಗಪ್ಪಂಗೆ ಅದುವೇ ಹೇದು ಬ್ರಾಂತೋ ?! ಉಮ್ಮ ಬಪ್ಪವಾರ ನೋಡಿಯೇ ನಿಗಂಟಾಯೇಕಟ್ಟೆ.
    ಶ್ಯಾಮಣ್ಣ., ಭರ್ಜರಿ ಲಾಯಕ ಆಯ್ದು.

  9. kathegalu yella thumba chennagidhu Shayamanna. ‘Malagudi days’ oorina hange Nekkare oora?

  10. ಪ್ರೇತ ಓಡ್ಸುವ ಇಕ್ಣೀಸು ಲಾಯ್ಕಿದ್ದು, ಆದರೆ ಆ ಹೊಗೆಸೊಪ್ಪು “ಕುಣಿಯ”ವೇ ಆಯೆಕ್ಕು ಹೇದು ಖಡ್ಡಾಯ ಇಲ್ಲೆನ್ನೆ , ಶ್ಯಾಮಣ್ಣ.?
    ವೆಂಕಣ್ಣ-ಕಿಟ್ಟಣ್ಣರ ಜಾಲ ಕರೆಂದ ತೊಡಗಿ ಅವರ ಕೆರೆಂತಾಗಿ, ತ್ಯಾಂಪ ಸೆಟ್ಟಿಯ ಪಳಿಕ್ಕೆ ಆಗಿ ದಾಸಪ್ಪ ಮಾಷ್ಟನ ಮನೆ ದಾಂಟಿ, ಆರತಿ ನರ್ಸಿಂಗು ಹೋಮು ದಾಂಟಿ, ಬಾರ್ಗವ ಲಿಂಗೇಶ್ವರ ದೇವಸ್ತಾನ ದಾಂಟಿ, ಪೇಟೆ ದಾಂಟಿ, ಕೃಷ್ಣ ಟಾಕೀಸು ದಾಂಟಿ, ಮದ್ರಸಿನ ಹಿಂದಾಣ ಪಳ್ಳಿಯ ಕಂಪೋಂಡು ಆಗಿ,ಕಬಕ ದಾಂಟಿ, ನೇರು ನಗರದ ವರೆಗೆ ಕತೆ ಸ್ಪೀಡಿಲಿ ಹೋತಿದ. ಪಷ್ಟಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×