Oppanna.com

ಚೈನು – ಭಾಗ ನಾಲ್ಕು

ಬರದೋರು :   ಶ್ಯಾಮಣ್ಣ    on   13/08/2013    17 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ…..
ಈಗ ಹೋಗದ್ದೆ ಉಪಾಯ ಇಲ್ಲೆ. ಹೋಯೆಕ್ಕೆ. ಎಂತ ಮಾಡುದು? ವಸ್ತ್ರ ಸುತ್ತಿ, ಅಂಗಿ ಹಾಕಿ ಹೆರಟ°. ಪೋಲೀಸು ಟೇಶನು ಇಪ್ಪದು ಪೇಟೆಯ ಹತ್ತರೆಯೇ. ಒಂದು ಇಪ್ಪತ್ತೈದು ಮೂವತ್ತು ಮೆಟ್ಳು ಮೇಲಂಗೆ ಹತ್ತಿಕ್ಕಿ ಹೋಯೆಕ್ಕು. ಈ ಟೇಶನಿನ ಮೇಲೆ ನಿಂದು ನೋಡಿರೆ ಇಡೀ ಪೇಟೆ ಕಾಣ್ತು.
ಮುಂದೆ ಓದಿ
—————————————————————
ಎಂಕಣ್ಣ ಪೇಟೆಗೆ ಬಂದ°.
ಟೇಶನಿನ ಬುಡಕ್ಕೆ ಬಂದ°. ಒಂದ್ಸರ್ತಿ ಮೇಲೆ ನೋಡಿದ°. ಹತ್ತಿ ಹೋಯೆಕ್ಕಲ್ಲದಾ? ಎವರೆಷ್ಟು ಬೆಟ್ಟ ಆದರೂ ಸುಲಾಬಲ್ಲಿ ಹತ್ತಿಕ್ಕುಲಕ್ಕು, ಈ ಟೇಶನಿನ ಮೆಟ್ಳು ಹತ್ತುಲೆ ತುಂಬ ಕಷ್ಟ ಇದ್ದು ಹೇಳಿ ಕಂಡತ್ತು ಎಂಕಣ್ಣಂಗೆ. ಮಾರ್ಗಲ್ಲಿ ಉದ್ದಾಕೆ ಮುಂದೆ ಹೋದ°. ಮುಂದೆ ಹೋದರೆ ಎಲ್ಲಿ ಹೋವುತ್ತು? ನಾಣಿಯ ಎಲಿಮೆಂಟ್ರಿ ಶಾಲೆ ಹತ್ತರಂಗೆ ಎತ್ತುತ್ತು. ಅಷ್ಟೆ! ಪುನಾ ಹಿಂದೆ ತಿರುಗಿದ°. ಪುನ ಟೇಶನಿನ ಬುಡಕ್ಕೆ ಬಂದ°. ಮೇಲೆ ಹತ್ತುಲೆ ಪುಕು ಪುಕು ಆವುತ್ತಾ ಇದ್ದು. ಸೀದಾ ಪೇಟೆಲಿ ಮುಂದೆ ಹೋದ°. ಬಸ್ಸುಶ್ಟೇಂಡುವರೆಗೆ ಹೋಗಿ ಪುನಾ ಹಿಂದೆ ತಿರುಗಿದ°. ಬಂದದು ಪೊಲೀಸು ಟೇಶನಿಂಗೆ ಹೇಳಿ. ಮೇಲೆ ಹತ್ತುಲೆ ಪುಕು ಪುಕು ಆಗಿ ಅತ್ಲಾಗಿ ಇತ್ಲಾಗಿ ತಿರುಗುದು. ಹೀಂಗೆ ಮೂರ್ನಾಲ್ಕು ಸರ್ತಿ ಒಂದ್ಸಲ ಶಾಲೆ ಹೊಡೇಂಗೆ, ಪುನಾ ಬಸ್ಸುಶ್ಟೇಂಡು ಹೊಡೇಂಗೆ, ಅತ್ಲಾಗಿ ಇತ್ಲಾಗಿ ತಿರುಗುದೇ ಆತು.
ರಾಮಣ್ಣ ಒಟ್ಟಿಂಗೆ ಇತ್ತಿತ್ತರೆ ಕಷ್ಟ ಇತ್ತಿತ್ತಿಲ್ಲೆ. ದೈರ್ಯಲ್ಲಿ ಮೇಲೆ ಹತ್ತಿ ಹೋತಿಕ್ಕುಲಾವುತ್ತಿತ್ತು. ಅವ ‘ಮತ್ತೆ ಬತ್ತೆ’ ಹೇಳಿ ಕಳ್ಸಿದ್ದ°. ಈಗ ಒಬ್ಬನೇ ಹೋಯೆಕ್ಕನ್ನೆ. ಕಿಟ್ಟಣ್ಣನ ಆದ್ರೂ ಒಟ್ಟಿಂಗೆ ಕರಕ್ಕೊಂಡು ಬಪ್ಪಲಾವುತಿತ್ತು. ಆದರೆ ಇನ್ನು ತೋಟಲ್ಲಿ ಎಲ್ಲವೂ ಸೇರಿ ಗುರ್ಮೆಗೆ ಇಳುದು ಮುಟ್ಟಿಗಿಟ್ಟಿ ಮಾಡಿರೆ ಅದೊಂದು ತಾಪತ್ರಯ ಮತ್ತೆ. ಹಾಂಗೆ ನೋಡಿಕೊಂಬಲೆ ಅವನ ಅಲ್ಲಿ ನಿಲ್ಸಿ ಬಂದದು.
ಅತ್ಲಾಗಿ ಇತ್ಲಾಗಿ ಎಷ್ಟು ತಿರುಗುಲಾವುತ್ತು? ಟೇಶನು ಮೆಟ್ಳು ಹತ್ತದ್ದೆ ಉಪಾಯ ಇಲ್ಲೆ. ಕಡೆಂಗೂ ಮೆಟ್ಳು ಹತ್ತಿದ°. ಮೇಲಾಣ ಮೆಟ್ಳು ಹತ್ತಿ ಆದ ಕೂಡ್ಳೆ ಒಂದು ಜಾಲು. ಅದರ ಆಚಿಗೆ ಇಂಗ್ಳೀಶಿನ “L” ಶೇಪಿಲಿ ಟೇಶನು ಕಟ್ಟೋಣ.
ಎಂಕಣ್ಣ ಜಾಲಿಂಗೆ ಕಾಲು ಮಡುಗಿದನೋ ಇಲ್ಲೆಯೋ “ನಿಂತ್ಕೊಳ್ಳ ಬೋಳಿ ಮಗ್ನೆ, ಒದೀತೇನೆ ನೋಡು ನಿನ್ನ ಕುಂಡೆಗೆ” ಹೇಳಿ ಗರ್ಜನೆ ಕೇಳಿತ್ತು. ಎಂಕಣ್ಣಂಗೆ ಒಂದೇ ಸಲಕ್ಕೆ ದೊಂಡೆ ಪಸೆ ಆರಿತ್ತು. ತೆಗಲೆ ದಡ ದಡ ಹೇಳಿತ್ತು. ವಾಪಾಸು ಹಿಂದಂಗೆ ತಿರುಗಿ ಓಡಿರೆಂತ ಹೇಳಿ ಕಂಡತ್ತು. ಕಣ್ಣು ಬಿಟ್ಟು ಮುಂದೆ ನೋಡಿರೆ ಎದುರು ಆರೂ ಇಲ್ಲೆ!. ‘ಆರಿಂಗಪ್ಪ ಇದು ಬೈಗಳು’ ಹೇಳಿ ನೋಡಿರೆ ಒಳಂದ ಕೇಳ್ತಾ ಇದ್ದು. ‘ಬೇರೆ ಆರಿಂಗೊ ಬೈವದು, ಎನಗಲ್ಲ’ ಹೇಳಿ ರಜ ದೈರ್ಯ ಬಂತು.
ಟೇಶನಿನ ಎದುರಾಣ ಹೊಡೆಲಿ ಮುಕಮಂಟಪದ ಹಾಂಗೆ ಇದ್ದು. ಅಲ್ಲಿಯೇ ಒಂದು ಬೆಂಚು ಮಡಿಕ್ಕೊಂಡು ಇದ್ದು. ನಾಲ್ಕೈದು ಜೆನಂಗ ಮೋರೆ ಒಣಗಿಸಿಕೊಂಡು ಅದರಲ್ಲಿ ಕೂಯಿದವು. ಎದುರಿಲಿ ಒಂದು ಪೋಲಿಸು ಒಂದು ಬೆಡಿ ಹಿಡ್ಕೊಂಡು ನಿಂದಿದು. ಮೂರ್ನಾಲ್ಕು ಪೋಲೀಸುಗ ಅತ್ಲಾಗಿ ಇತ್ಲಾಗಿ ತಿರುಗುತ್ತಾ ಇದ್ದವು.
ಅಲ್ಲೆ ಒಂದು ಮೇಜಿದೆ ಕುರ್ಶಿದೆ ಮಡುಗಿದ್ದವು. ಆರುದೆ ಕೂದುಗೊಡಿದವಿಲ್ಲೆ . ಎಂಕಣ್ಣ ಮೆಲ್ಲಂಗೆ ಬಾಗಿಲವರೆಗೆ ಹೋಗಿ ಒಳ ಇಣ್ಕಿದ°. ಬೆಂಚಿಲಿ ಕೂದೋರಲ್ಲಿ ಆರಾದ್ರೂ ಗುರ್ತದವು ಇದ್ದವಾ ಹೇಳಿ ನೋಡಿದ°. ಆರುದೇ ಇಲ್ಲೆ. ಬೆಡಿ ಹಿಡುದ ಪೋಲೀಸು ಇವನನ್ನೇ ನೋಡುತ್ತಾ ಇದ್ದು. ಎಂಕಣ್ಣಂಗೆ ಎಂತ ಮಾಡುದು ಹೇಳಿ ಗೊಂತಾಯಿದಿಲ್ಲೆ. ಆಸರ ಅಪ್ಪಲೆ ಸುರು ಆತು. ಅಲ್ಲೆ ಕರೇಲಿ ಒಂದು ಹಳೇ ಸ್ಟೂಲಿನ ಮೇಲೆ ಒಂದು ಮಣ್ಣಿನ ಹೂಜಿ ಮಡಿಗಿದ್ದವು. ನೀರಿಂದು, ಶಾಲೆಲಿ ಮಕ್ಕೊಗೆ ನೀರು ಕುಡಿವಲೆ ಮಡುಗಿರ್ತವಲ್ಲದಾ, ಹಾಂಗಿಪ್ಪದು. ಹಾಂಗೇಳಿ ಅದರಂದ ನೀರು ಕುಡಿವಲಕ್ಕಾ, ಆಗದಾ ಹೇಳಿ ಗೊಂತಪ್ಪದು ಹೇಂಗೆ? ಹೆರ ಒಂದು ಕಂಬ ಇತ್ತು ಅದ್ರ ಹತ್ತರೆ ನಿಂದ°. ಆರೂ ಮಾತಾಡ್ಸುವವು ಇಲ್ಲೆ.
ಇದ್ದಕ್ಕಿದ್ದ ಹಾಂಗೆ ಒಳಂದ ಆರೋ ಬೊಬ್ಬೆ ಹೊಡವದು ಕೇಳಿತ್ತು.
“ಅಯ್ಯಯ್ಯೋ ಹಾಕೋಡ್ಚಿ… ಏನ್ ಕಂಡುದಿಜ್ಜೀ… ಇಜ್ಜೀ… ಅಯ್ಯಯ್ಯೋ… ಓ…….”
ಒಟ್ಟಿಂಗೆ ರಪ್ ರಪ್ ಹೇಳಿ ಶಬ್ದ. ಒಳಾಣ ರೂಮಿಲಿ ಆರಿಂಗೋ ಸರೀ ಪೆಟ್ಟು ಬೀಳ್ತಾ ಇದ್ದು ಹೇಳಿ ಎಂಕಣ್ಣಂಗೆ ಅಂದಾಜಿ ಆತು. ಒಳಾಣ ಗಲಾಟೆ ಬೊಬ್ಬೆ ಕೇಳಿದಾಂಗೆ ಎಂಕಣ್ಣನ ಆಸರ ಜಾಸ್ತಿ ಆತು. ದೊಂಡೆ ಪಸೆ ಆರಿತ್ತು. ಏ ದೇವರೆ, ಎನಗುದೆ ಇನ್ನು ಹೀಂಗೆ ಪೆಟ್ಟು ಬೀಳುಗೋ ಎಂತ? ಕಾಲು ಸಣ್ಣಕ್ಕೆ ದರುಸುಲೆ ಸುರು ಆತು.
ಕಂಬದ ಹತ್ತರೆ ಹಾಂಗೇ ನಿಂದ°. ಹಾಂಗೇ ಒಂದು ಹತ್ತು ನಿಮಿಷ ಕಳ್ತು. ಒಳಂದ ಒಂದು ದೊಣೆಯ ಪೋಲೀಸು ಕೈಲಿ ಒಂದು ಲಾಟಿ ಹಿಡ್ಕೊಂಡು ಬಂದು ಹೆರಾಣ ಕುರ್ಶಿಲಿ ಕೂದತ್ತು. ಒಳುದ ಪೋಲೀಸುಗಳಂದ ದೊಡ್ಡ ಪೋಲೀಸಿನ ಹಾಂಗೆ ಕಾಣ್ತು. ಕೂದ್ದದೇ ಅಲ್ಲಿ ಕೂದೋರಿನ ಒಂದರಿ ನೋಡಿತ್ತು. ಎಲ್ಲವುದೇ ಅಲ್ಲಲ್ಲೇ ಮುರುಟಿ ಕೂದವು.chainu5
ಕಿಷ್ಣಪ್ಪ, ಹೆಡ್ಡು ಕಾನಿಷ್ಟೇಬಿಲ್ ಹೇಳಿರೆ ಇದುವೇ. ಸಬ್ಬಿನಿಸ್ಪೇಟ ಮರಿಯಪ್ಪನ ಬಲಗೈ ಬಂಟ ಇದು. ಮೋರೆಲಿ ಎಲ್ಲ ಕಜ್ಜಿ ಬಿದ್ದಾಂಗೆ ಇದ್ದು. ದಪ್ಪಕ್ಕೆ ಮೀಶೆ ಇದ್ದು. ಕಣ್ಣು ಯಾವಗಳೂ ಕುಡುದೋರ ಹಾಂಗೆ ಕೆಂಪು ಕೆಂಪು.ಕೈಲಿ ಕಾಲಿಲಿ ಎಲ್ಲ ಕರಡಿಯ ಹಾಂಗೆ ಕಪ್ಪು ರೋಮ. ಹೊಟ್ಟೆ ದೊಡ್ಡ. ನೋಡುವಗಳೆ ಆರುದೇ ಹೆದರಿ ಸಾಯೆಕ್ಕು, ಹಾಂಗಿದ್ದು.
ಒಳುದ ಎಲ್ಲೋರಿನ ವಿಚಾರಣೆ ಆಯಿದಾ ಹೇಳಿ ಕಾಣ್ತು. ಅದರ ಕಣ್ಣು ಎಂಕಣ್ಣನೆ ಮೇಲೆ ಬಿದ್ದತ್ತು. ಒಂದು ರಜಾ ಹೊತ್ತು ಅವನನ್ನ್ನೆ ನೋಡಿತ್ತು. ಬಕ್ರೀದಿಂಗೆ ಕಡಿವಲೆ ಕಟ್ಟಿದ ಏಡಿನ ಹಾಂಗೆ ನಿಂದಿದ° ಎಂಕಣ್ಣ, ಕಂಬದ ಹತ್ರೆ.
“ಏಯ್ ಬಾ ಇಲ್ಲಿ…”
ಎಂಕಣ್ಣ ಮೇಜಿನ ಹತ್ತರೆ ಬಂದ°.
“ಯಾರು ನೀನು? ಯಾಕೆ ಬಂದದ್ದು ಇಲ್ಲಿ?”
“ಎ…ಎಂಟ್ರಮಣ ಬಟ್ಟ” ಸ್ವರ ಬಾವಿ ಒಳಾಂದ ಬಂದ ಹಾಂಗೆ ಬಂತು ಎಂಕಣ್ಣನ ಬಾಯಿಂದ.
“ಎಂಟು ಮಣ ಬಟ್ಟನಾ?”
“ಅ.. ಅಲ್ಲ.. ಅಲ್ಲ.. ನ… ನಾನು ಎಂಕಟ್ರಮಣ ಬ… ಬಟ್ಟ”
“ಓ.. ಬಟ್ರಾ? ಏನು ಯಾಕೆ ಬಂದದ್ದು?” ರಜ ಸೌಮ್ಯಲ್ಲಿ ಕೇಳಿತ್ತು. ಬಟ್ಟ ಹೇಳಿ ಅಪ್ಪಗ ರಜ್ಜ ಗೌರವ ತೋರ್ಸೆಕ್ಕನ್ನೆ.
ಎಂಕಣ್ಣಂಗೆ ರಜ ದೈರ್ಯ ಬಂತು. ಪೆಟ್ಟು ಬೀಳ ಹೇಳಿ ಕಾಣ್ತು.
“ಅದು… ಅದು.. ಎಂತಾ ಹೇಳಿದ್ರೆ….”
“ಹೇಳಿ ಹೇಳಿ… ಎಂತ ಆಗ್ಬೇಕಿತ್ತು ನಿಮಗೆ? ಕೂತ್ಕೊಳ್ಳಿ ”
ಎಂಕಣ್ಣ ಕುರ್ಶಿಯ ಕೊಡೀಲಿ ಕೂದ°.
ನಿದಾನಕ್ಕೆ ಕತೆ ಎಲ್ಲ ಹೇಳಿದ°, ತ್ಯಾಂಪ ತೋಟದ ಗುರ್ಮೆಲಿ ಬಿದ್ದ ಕತೆ.
“ಹೋ… ಹಾಗೆಲ್ಲ ಉಂಟು ಅಲ್ವ?” ಕೇಳಿತ್ತು ಕಿಷ್ಣಪ್ಪ.
“ಹೂ…”
“ಹೇಗೆ ಸತ್ತದ್ದು ಅಂತ ಗೊತ್ತಿಲ್ವ?”
“ಇಲ್ಲ”
“ಏಳ್ರೀ ಮೇಲೆ….” ಕಿಷ್ಣಪ್ಪ ಗರ್ಜಿಸಿತ್ತು.
“ಬೆ ಬ್ಬೆ…” ಎದ್ದು ನಿಂದ ಎಂಕಣ್ಣಂಗೆ ಉಚ್ಚು ರಟ್ಳೆ ಬಾಕಿ.
“ಏನ್ರೀ… ನೀವೆ ಯಾಕೆ ಕೊಂದು ಹಾಕಿರ್ಬಾರ್ದು? ಸತ್ಯ ಹೇಳಿ”
“ಇ… ಇ… ಇಲ್ಲ… ನಾವು ಕೊಂದದ್ದಲ್ಲ… ಇವತ್ತು ನೋಡುವಾಗ್ಳೆ ನಮಿಗೆ ಗೊ…ಗೊ… ಗೊತ್ತಾದದ್ದು…”
“ಕೂತ್ಕೊಳ್ಳಿ”
ಎಂಕಣ್ಣ ಪುನಾ ಕೂದ°. ಪುಚ್ಚೆಗೆ ಆಟ, ಎಲಿಗೆ ಪ್ರಾಣ ಸಂಕಟ ಆಡ… ಹಾಂಗಾತಿದು.
“ಈಗ ನೀವು ಒಂದು ಕಂಪ್ಲೇಂಟು ಕೊಡ್ಬೇಕು”
“ತ್ಯಾಂಪನ ಮೇಲೆಯಾ?”
“ಮಂಡೆ ಸಮ ಉಂಟಾ ಬಟ್ರೆ? ಅವ್ನ ಮೇಲೆ ಎಂತ ಕಂಪ್ಲೇಂಟು ಕೊಡ್ತೀರಿ?”
“ನಮ್ಮ ತೋಟದಲ್ಲಿ ಬಂದು ಬಿದ್ದು ಸತ್ತದ್ಯಾಕೆ ಅಂತ ಅಲ್ವಾ?”
“ಸತ್ತವ್ನ ಮೇಲೆ ನಿಮ್ಮ ಕಂಪ್ಲೇಂಟಾ?”
“ಮತ್ತೆಂತದುಂತ ಕೊಡೂದು?”
“ನಿಮ್ಮ ಮಂಡೆಗಿಷ್ಟು…! ಹಾಗೆಲ್ಲ ಅಲ್ಲ. ವಿಶಯ ಹೀಗೀಗೆ ಉಂಟು ಅಂತ ಒಂದು ಕಂಪ್ಲೇಂಟು ಕೊಡ್ಬೇಕು”
“ಸಾಯೇಬ್ರೆ… ನಂಗೆ ಅದೆಲ್ಲ ಗೊತ್ತಗುದಿಲ್ಲ….”
“ಏಯ್… ಬಟ್ರೆ… ನನ್ನನ್ನು ಸಾಯಿಬ ಅಂತ ಕರೀತಿರಾ? ನಾನೆಂತ ನಿಮಿಗೆ ಬ್ಯಾರಿಯ ಹಾಗೆ ಕಾಣ್ತೇನಾ?”
“ಬ್ಬೆ…ಬ್ಬೆ…ಬ್ಬೆ….”
“ನಾನು ಇಲ್ಲಿದ್ದು ಹೆಡ್ಡು ಕಾನಿಷ್ಟೆಬಿಲ್ಲು ಗೊತ್ತಾಯ್ತಾ?”
“ಕಮ್ಮಿನಿಷ್ಟೆಯಾ?” ಎಂಕಣ್ಣಂಗೆ ‘ಕಾನಿಷ್ಟೆಬಿಲ್ಲು ‘ ಹೇಳಿದ್ದು ‘ಕಮ್ಮಿನಿಷ್ಟೆ’ ಹೇಳಿದಾಂಗೆ ಕೇಳಿತ್ತು. ಹೋ… ಕಮ್ಮಿನಿಷ್ಟೆ ಆದರೆ ಇದುದೆ, ದಾಸಪ್ಪ ಮಾಷ್ಟನುದೆ ಒಂದೆ ಪುಂಡು ಹೇಳಿ ಆತು. ಮೊನ್ನೆ ಮೊನ್ನೆ ಶಾಲೆಲಿ ದಾಸಪ್ಪ ಮಾಷ್ಟಂಗುದೆ ನಾಣಿಗುದೆ ಎಂತದೋ ಕಟಿಪಿಟಿ ಆಗಿ ಈಗ ದಾಸಪ್ಪ ಮಾಷ್ಟ ಬಾರೀ ಪಾಪ ಆಯಿದಡ. ಅದರ ಹತ್ತರೆ ಮಾತಾಡಿದರೆ ಸುಲಾಬ ಅಕ್ಕಾಯ್ಕು… ಎಂಕಣ್ಣಂಗೆ ಮನಸ್ಸಿಲೇ ಜಾನ್ಸಿಹೋತು.
“ಎಂತದ್ದು ಕಮ್ಮಿನಿಷ್ಟೆ? ಅದೆಲ್ಲ ಅಲ್ಲ… ನಾನು ಇಲ್ಲಿದ್ದು ಹೆಡ್ಡು ಪೋಲಿಸು” ಕಿಷ್ಣಪ್ಪಂಗೆ ಪಿಸುರು ಬಂತು.
“ಸಬ್ಬಿನಿಸ್ಪೇಟ್ರಾ?”
“ಏಯ್… ಅದಲ್ಲ…. ಅವ್ರಿಗಿಂತ ಸ್ವಲ್ಪ ಕೆಳಗೆ… ಪೋಲೀಸಿಗಿಂತ ಸ್ವಲ್ಪ ಮೇಲೆ. ಗೊತ್ತಾಯ್ತ?”
“ಆಯ್ತು ಸಾರ್…”
“ಹಾ°… ಹಾಗೆ. ಸಾರು ಅಂತ ಕರೀಬೇಕು. ಸಾಯಿಬ ಅಂತ ಹೇಳೂದಲ್ಲ… ಗೊತ್ತಾಯ್ತ?”
“ಸರಿ ಸಾರು”
“ಅಲ್ಲಿ ಒಳಗೆ ನೋಡಿ… ಒಬ್ರು ಕೂತಿದ್ದಾರಲ್ಲ.. ಅವ್ರತ್ರ ಹೋಗಿ. ಅವ್ರು ಎಂತ ಬರೀಬೇಕು ಅಂತ ಹೇಳ್ತಾರೆ. ಹೋಗಿ.”
“ಸರಿ ಸಾರು” ಬಚ್ಚಾವು…. ಇದರ ಕೈಂದ ತಪ್ಪಿಸಿಕೊಂಡ ಹಾಂಗೆ ಆತು. ಎಂಕಣ್ಣ ಒಳಂಗೆ ಕಾಲು ಮಡುಗಿದ°.chainu6
ಎಡತ್ತಿಂಗೆ ಒಂದು ರೂಮು. ಕಬ್ಬಿಣದ ಸರಳಿನ ಬಾಗಿಲು ಹಾಕಿದ್ದವು. ಅದರ ಒಳ ಮೂರು ಜನ ಗೀಟು ಗೀಟಿನ ಚಡ್ಡಿ ಹಾಕಿದವು ಇದ್ದವು. ಬಾಗಿಲಿನ ಎದುರಾಣ ಹೊಡೆಲಿ ಒಂದು ಮೇಜುದೆ ಕುರ್ಶಿದೆ ಇದ್ದು. ಮೇಜಿನ ಆಚ ಹೊಡೇಲಿ ಒಂದು ಪೋಲೀಸು ಕೂಯಿದು. ತಲೆ ಬೋಳು. ಬೆಳಿ ಮೀಸೆ ಇದ್ದು. ಅದರ ಹಿಂದಾಣ ಹೊಡೇಲಿ ಗೋಡೆಲಿ ಒಂದು ಹಳೆ ಪಟ ಇದ್ದು. ಗಾಂದಿ ಅಜ್ಜಂದು. ಅದರಂದ ಆಚಿಗೆ ಇನ್ನೊಂದು ನೇರುವಿನ ಪಟ. ಈ ಕುರ್ಶಿಲಿ ಕೂದ ಪೋಲಿಸುದೆ ಆ ಗಾಂದಿ ಅಜ್ಜನ ಹಾಂಗೇ ಕಾಣ್ತು.
ರಂಗಣ್ಣ ಹೇಳಿ ಅದರ ಹೆಸರು. ರೈಟ ರಂಗಣ್ಣ ಹೇಳಿಯೂ ಅದಕ್ಕೆ ಹೆಸರು ಇದ್ದು. ಟೇಶನಿಲಿ ಬರವಣಿಗೆ ಕೆಲಸ ಎಲ್ಲ ಅದೇ ಮಾಡುದು. ಎಂಕಣ್ಣ ಅದರ ಎದುರು ಬಂದು ನಿಂದ°.
ಅಲ್ಲಿ ಕಾಲಿ ಕುರ್ಶಿ ಒಂದು ಇದ್ದು. ಆದರೆ ಕೂಪಲಕ್ಕಾ ಆಗದಾ? ಹೇಳಿ ಎಂಕಣ್ಣಂಗೆ ಅಂದಾಜಿ ಆಯಿದಿಲ್ಲೆ. ಹೇಳದ್ದೆ ಕೂದರೆ ಮತ್ತೆ ಏಳ್ಸಿದರೆ? ಹಾಂಗೆ ಅಲ್ಲೆ ಸುಮ್ಮನೆ ನಿಂದ°. ರಂಗಣ್ಣ ಎಂತದೋ ಬರೆತ್ತಾ ಇದ್ದು. ತಲೆ ಎತ್ತಿ ನೋಡಿದ್ದಿಲ್ಲೆ.
ಎರಡು ನಿಮಿಷ ಆದ ಮತ್ತೆ ತಲೆ ಎತ್ತಿ ಎಂಕಣ್ಣನ ನೋಡಿತ್ತು.
“ಏನು…? ಕೂತ್ಕೊಳ್ಳಿ” ಹೇಳಿದ ಮತ್ತೆ ಎಂಕಣ್ಣ ಕೂದ°.
“ಏನು? ಏನಾಗ್ಬೇಕಿತ್ತು?” ಮನುಷ್ಯ ಸೌಮ್ಯ ಹೇಳಿ ಕಾಣ್ತು. ಹೆದರುಸುವ ಹಾಂಗೆ ಕಾಣ್ತಿಲ್ಲೆ.
ಎಂಕಣ್ಣ ಪುನಾ ಕತೆ ಎಲ್ಲ ಉರುಂಬಿದ°.
“ಹೂಂ… ಈಗ ಎಂತ? ಕಂಪ್ಲೇಂಟು ಬರೀಬೇಕ?”
“ಹೌದಂತೆ… ಅವ್ರು ಹೇಳಿದ್ರು…” ಎಂಕಣ್ಣ ಕಿಷ್ಣಪ್ಪನ ತೋರ್ಸಿದ°.
“ಸರಿ, ಬರಿವ… ಆಯ್ತಾ…” ರಂಗಣ್ಣ ಒಂದು ತಾಮು ಕಾಗದ ತೆಗದು, ಅದಲ್ಲಿ ಒಂದು ಕಾಗದದ ಎಡದ ಹೊಡೇಂಗೆ ಉದ್ದಾಕೆ ರಜಾ ಮಡಿಸಿ, ಮಾರ್ಜಿನು ಗುರ್ತ ಮಾಡಿ ಬರವಲೆ ಸುರುಮಾಡಿತ್ತು. ಆವಗಾವಗ ಎಂಕಣ್ಣನ ಹತ್ತರೆ ವಿವರ ಎಲ್ಲ ಕೇಳಿಗೊಂಡು ಬರಕ್ಕೊಂಡು ಹೋತು, (ಶ್ಯಾಮಣ್ಣ ಚೈನು ಕತೆಯ ಬರದ ಹಾಂಗೆ).
ಎಲ್ಲ ಬರದು ಆದ ಮತ್ತೆ “ನೋಡಿ… ಓದಿ ಹೇಳ್ತೇನೆ, ಸರೀ ಉಂಟಾ ಹೇಳಿ” ಹೇಳಿಕ್ಕಿ ಓದಿ ಹೇಳಿತ್ತು. ಎಂಕಣ್ಣಂಗೆ ಎಷ್ಟು ಅರ್ತಾತೋ, ಬಿಟ್ಟತ್ತೋ… “ಸರಿ ಉಂಟು” ಹೇಳಿ ತಲೆ ಆಡ್ಸಿದ°.
“ನಿಮಿಗೆ ರುಜು ಮಾಡ್ಳಿಕ್ಕೆ ಬರ್ತದೋ?” ರಂಗಣ್ಣ ಕೇಳಿತ್ತು.
ಎಂಕಣ್ಣ ನಾಲ್ಕನೇ ಕ್ಳಾಸುವರೇಗೆ ಓದಿದ್ದು. ಅದರುದೆ ರುಜು ಮಾಡ್ಳೆ ಕಲ್ತಿದ°.
“ಬರ್ತದೆ…” ಹೇಳಿದ°.
“ಹಾಗಾದ್ರೆ ಇಲ್ಲಿ ರುಜು ಮಾಡಿ…..” ಹೇಳಿ ಬೆರಳಿಲಿ ಎಲ್ಲಿ ರುಜು ಮಾಡೆಕ್ಕು ಹೇಳಿ ಗುರ್ತ ಮಾಡಿ ತೋರ್ಸಿತ್ತು.
‘ಎಂಕಟ್ಮರನ ಬಟ್ಟನ ರುಜು’ ಹೇಳಿ ಅದು ಹೇಳಿದ ಜಾಗೆಲಿ ಮೋಡಿ ಅಕ್ಷರಲ್ಲಿ ರುಜು ಮಾಡಿದ°. ಅದರ ಹತ್ತರೆ ಅವನ ಎಡಗೈ ಹೆಬ್ಬೆಟಿನ ಗುರ್ತು ಹಾಕಿಸಿತ್ತು ರಂಗಣ್ಣ.
“ಹುಂ.. ಇದನ್ನು ಅವರಿಗೆ ಕೊಡಿ” ಹೇಳಿ ಕಿಷ್ಣಪ್ಪನ ತೋರ್ಸಿತ್ತು.
ಎಂಕಣ್ಣ ಆ ಕಾಗದವ ಹಿಡ್ಕೊಂಡು ಎದ್ದ°.
“ಕೂತ್ಕೊಳ್ಳಿ…..” ಹೇಳಿತ್ತು. ” ಇಪ್ಪತ್ತೈದು ರೂಪಾಯಿ ಕೊಡಿ”
“ದುಡ್ಡಾ?” ಅಲ್ಲ, ಇದಕ್ಕೆ ಪೈಶೆಯೂ ಕೊಡೆಕ್ಕಾ?
“ಮತ್ತೆಂತ? ಹೊರಗೆ ಬರೆಸಿದ್ರೆ ನೂರು ರುಪಾಯಿ ಆಗ್ತದೆ…. ಕೊಡಿ ಕೊಡಿ…”
ಎಂಕಣ್ಣಂಗೆ ಮಂಡೆ ಬೆಶಿ ಆತು. ಇಪ್ಪತ್ತೈದು ರೂಪಾಯಿ!!!, ಸುಮ್ಮನೆ ಆವುತ್ತ? ಆದರೆಂತ ಚರ್ಚೆ ಮಾಡ್ಳೆ ಆವುತ್ತಾ?
ಪುಣ್ಯಕ್ಕೆ ಇರ್ಲಿ ಹೇಳಿ ನೂರು ರುಪಾಯಿ ಮಡಿಕ್ಕೊಂಡಿತ್ತಿದ್ದ° ಕಿಸೆಲಿ…ಮೊನ್ನೆ ಅಡಕ್ಕೆ ಮಾರಿದ್ದು ಇತ್ತು….
ಇಪ್ಪತ್ತೈದು ರೂಪಾಯಿ ತೆಗದ°…
“ಮೇಜಿನ ಅಡಿಂದ ಕೊಡಿ…” ಸಣ್ಣ ಸ್ವರಲ್ಲಿ ಹೇಳಿತ್ತು ರಂಗಣ್ಣ.
“ಮೇಜಿನ ಅಡಿಂದಲಾ?..” ಎಂಕಣ್ಣಂಗೆ ಆಶ್ಚರ್ಯ….
“ಹೌದು… ಅದು ಹಾಗೇ… ಬೇಗ ಕೊಡಿ”
ಸರಿ… ಮೇಜಿನ ಅಡಿಂದ ಇಪ್ಪತ್ತೈದು ರೂಪಾಯಿ ಕೊಟ್ಟ° ರಂಗಣ್ಣಂಗೆ, ಮತ್ತೆ ಕಾಗದ ಹಿಡ್ಕೊಂಡು ಕಿಷ್ಣಪ್ಪನ ಹತ್ತರಂಗೆ ಹೋದ°.
ಕಿಷ್ಣಪ್ಪ ಒಂದು ದಪ್ಪದ ಪುಸ್ತಕ ತೆಗದು, ಎಂತೆತದೋ ಎಲ್ಲ ಬರದತ್ತು. ಆಪುಸ್ತಕಲ್ಲಿ ಎಂಕಣ್ಣನ ರುಜು ತೆಕ್ಕೊಂಡತ್ತು. ಮತ್ತೆ ಎಂಕಣ್ಣ ಕೊಟ್ಟ ಕಂಪ್ಲೇಂಟಿನ ಕಾಗದವ ಒಂದು ರಟ್ಟಿನ ಪುಸ್ತಕದ ಹಾಂಗಿಪ್ಪದರ ಒಳ ಮಡುಗಿತ್ತು. ‘ಫೈಲು’ ಹೇಳಿ ಹೆಸರಡ ಅದಕ್ಕೆ. ಎಂಕಣ್ಣಂಗೆ ಶಾಲೆಯ ಪಾಸು- ಪೈಲು ಮಾಂತ್ರ ಗೊಂತಿಪ್ಪದು.
“ಹೂಂ… ಇಪ್ಪತ್ತೈದು ರೂಪಾಯಿ ಕೊಡಿ…” ಕೆಂಪು ಕಣ್ಣು ಬಿಟ್ಟುಕೊಂಡು ಎಂಕಣ್ಣಂನನ್ನೆ ನೋಡಿಕೊಂಡು ಹೇಳಿತ್ತು.
“ಆಂ….” ಎಂಕಣ್ಣ ಬಾಯಿ ಬಿಟ್ಟುಗೊಂಡು ಅಲ್ಲೇ ಬಾಕಿ….
“ಬೇಗ ಬೇಗ ಕೊಡಿ….”
ಈ ಸರ್ತಿ “ಎಂತಕೆ” ಹೇಳಿ ಕೇಳುವಷ್ಟೂ ದಮ್ಮಿಲ್ಲೆ ಎಂಕಣ್ಣಂಗೆ.
ಸರಿ.. ಮತ್ತೆ ಇಪ್ಪತ್ತೈದು ತೆಗದ°.
“ಮೇಜಿನ ಅಡಿಯಿಂದ ಕೊಡ್ಬೇಕ?” ಕೇಳಿದ°.
“ಪ್ರತ್ಯೇಕ ಹೇಳ್ಬೇಕ?…ಬೇಗ ಕೊಡಿ..”
ಕಿಷ್ಣಪ್ಪಂಗೆ ಮೇಜಿನ ಅಡಿಂದ ಇಪ್ಪತ್ತೈದು ರುಪಾಯಿ ಸಮರ್ಪಣೆ ಆತು. ಒಟ್ಟು ಐವತ್ತು ಹೋತು.
“ನಾನು ಹೊಗ್ಬೌದಾ?” ಇನ್ನು ಇಲ್ಲಿದ್ದರೆ ಎಷ್ಟು ಬಿಚ್ಚೆಕಕ್ಕೋ?
“ಎಲ್ಲಿಗೆ ಹೋಗೂದು… ಅಲ್ಲಿ ಬೆಂಚಿನಲ್ಲಿ ಕೂತ್ಕೊಳ್ಳಿ… ಸಬ್ಬಿನಿಸ್ಪೇಟರು ಬರುವವರೇಗೆ ಕಾಯ್ಬೇಕು…” ಕಿಷ್ಣಪ್ಪ ಹೇಳಿತ್ತು.
ಎಂಕಣ್ಣ ಬೆಂಚಿನ ಹತ್ತರೆ ಹೋದ°. ನಾಲ್ಕು ಜೆನ ಕೂಪ ಬೆಂಚು ಅದು… ಐದು ಜೆನಂಗ ಈಗಳೆ ಕೂಯಿದವು. ಎಲ್ಲೋರುದೆ ಎಂಕಣ್ಣನ ಮಿಕಿಮಿಕಿ ನೋಡಿದವು. ಜಾಗೆ ಬಿಟ್ಟಿದವಿಲ್ಲೆ.
“ಸೇರಿ ಸೇರಿ ಕೂತ್ಕೊಳ್ಳಿ…” ಕಿಷ್ಣಪ್ಪನ ಗರ್ಜನೆ ಕೇಳಿದ ಮತ್ತೆ ರಜಾ ಜಾಗೆ ಮಾಡಿಕೊಟ್ಟವು ಎಂಕಣ್ಣಂಗೆ. ಅರ್ದ ಕುಂಡೆ ಕೂಪಷ್ಟು.
ಒಂದು ಅರ್ಧ ಗಂಟೆ ಆತು. ಕೂಪ ಬದಲಿಂಗೆ ನಿಂದರೇ ಅಕ್ಕು ಹೇಳಿ ಕಂಡತ್ತು ಎಂಕಣ್ಣಂಗೆ, ಬೆಂಚಿಲಿ ಅರ್ದ ಕುಂಡೆಯ, ಅದೂ ಕರೇಲಿ ಮಡುಗಿ ಕೂಪದು ಹೇಳಿರೆ ಎಷ್ಟು ಕಷ್ಟ ಹೇಳಿ ನಿಂಗೊಗೆ ಗೊಂತಿದ್ದ? ಸಾಲದ್ದಕ್ಕೆ ಆಗಂದಲೇ ಆಸರ ಆವುತ್ತಾ ಇದ್ದು. ಎದುರಿಲೇ ನೀರಿನ ಹೂಜಿ ಇದ್ದು. ಆದರೆ ಅದರಂದ ನೀರು ಕುಡಿವಲೆ ಅಕ್ಕಾ? ಆಗದಾ? ಹೇಳಿ ಗೊಂತಿಲ್ಲೆ. ಒಟ್ಟಿಂಗೆ ಉಚ್ಚು ಬಂದು ಎರ್ಕಿದ್ದು…..ಯಾವಾಗ ಬತ್ತೋ ಈ ಸಬ್ಬಿನಿಸ್ಪೇಟ…?
ಇದ್ದಕ್ಕಿದ್ದ ಹಾಂಗೆ ಪೋಲೀಸುಗೊಕ್ಕೆ ಎಲ್ಲ ಜೀವ ಬಂದಾಂಗೆ ಆತು. ಎಲ್ಲ ಚಕ ಚಕ ಡ್ರೆಸ್ಸು ಟೊಪ್ಪಿ ಸರಿ ಮಾಡಿ ಸರ್ತ ನಿಂದವು.
“ಟಕ ಟಕ” ಹೇಳಿ ಬೂಡ್ಸು ಶಬ್ದ ಮಾಡಿಗೊಂಡು ಸಬ್ಬಿನಿಸ್ಪೇಟ ಮರಿಯಪ್ಪ ಮೆಟ್ಳು ಹತ್ತಿ ಮೇಲೆ ಬಂತು.
ಎಲ್ಲ ಪೋಲೀಸುಗ ಅದಕ್ಕೆ ಸಲಾಮು ಮಾಡಿದವು. ಈ ಪೋಲೀಸುಗಳ ಸಲಾಮಿಂಗೆ ‘ಸೆಲ್ಯುಟು’ ಹೇಳಿ ಹೇಳುದಡ. ಎಂತ ಸೆಲ್ಯುಟೋ?
ಆಚ ಬಾಗಿಲಿಂದಾಗಿ ಒಳ ಬಂದು ಅದಕ್ಕೆ ಇಪ್ಪ ಬೇರೆ ರೂಮಿಲಿ ಕೂದತ್ತು.
ಮತ್ತೆ ಒಬ್ಬೊಬ್ಬನೇ ಒಳ ಹೋಪದು…. ಅವಕ್ಕೆ ಈ ಮರಿಯಪ್ಪ ಬೈವದು…. ಜೋರು ಮಾಡುದು… ಒಂದೆರಡಕ್ಕೆ ಪೆಟ್ಟುದೇ ಬಿದ್ದತ್ತೋ ಕಾಣ್ತು. ನಿದಾನಕ್ಕೆ ಬೆಂಚು ಎಲ್ಲ ಕಾಲಿ ಆತು. ಎಂಕಣ್ಣ ಒಬ್ಬನೇ ಬಾಕಿ….
ಕಿಷ್ಣಪ್ಪ ದಿನಿಗಿತ್ತು ಒಳಂದ.. ಎಂಕಣ್ಣನ, ಸಬ್ಬಿನಿಸ್ಪೇಟನ ರೂಮಿಂಗೆ.
ಎಂಕಣ್ಣ ಒಳ ಹೋದ°. ಒಳ, ಹುಬ್ಬು ಗಂಟು ಹಾಯ್ಕೊಂಡು ಸಬ್ಬಿನಿಸ್ಪೇಟ ಮರಿಯಪ್ಪ ಕೂಯಿದು.ಈಚ ಹೊಡೆಲಿ ಕಿಷ್ಣಪ್ಪ ನಿಂದಿದು.
ಎಂಕಣ್ಣ ಮರಿಯಪ್ಪನ ಎದುರು ನಿಂದ°. ಕೆಲವು ಸರ್ತಿ ಈ ಕೈ ಮಡುಗುದು ಹೇಂಗೆ ಹೇಳಿ ಗೊಂತಪ್ಪಲಿಲ್ಲೆ…ಎದುರು ಮಡುಗುದೋ, ಹಿಂದೆ ಕಟ್ಟುದೋ, ಎದೆ ಮೇಲೆ ಕೈಕಟ್ಟುದೋ.. ಎಂತ ಮಾಡುದು ಹೇಳಿ ಗೊಂತಪ್ಪಲಿಲ್ಲೆ… ಎಂಕಣ್ಣಂಗೂ ಹಾಂಗೇ ಆತು. ಕಡೇಂಗೆ ಎದುರಾಣ ಹೊಡೆಂಗೆ ಕೈ ಮೇಲೆ ಕೈ ಮಡುಗಿ ನಿಂದ°, ದೇವರ ಎದುರು ನಿಂದಾಂಗೆ.
“ಎಂತದಾ ನಿಂದು?…” ಕರ್ಕಶವಾಗಿ ಕೇಳಿತ್ತು ಮರಿಯಪ್ಪ. ಅದಕ್ಕೆ ಬ್ರಾಮ್ಮರ ಕಂಡ್ರೆ ಆವುತ್ತಿಲ್ಲೆ…. ಏಕವಚನಲ್ಲೇ ಮಾತಾಡ್ಸುದು…
“ಬ್ಬೆ… ಬ್ಬೆ.. ಬ್ಬೆ…” ಎಂಕಣ್ಣಂಗೆ ಪುನಾ ಪುಕು ಪುಕು ಅಪ್ಪಲೆ ಸುರು ಆತು….
ಕಿಷ್ಣಪ್ಪ ಎಲ್ಲ ಕತೆ ಹೇಳಿತ್ತು ಮರಿಯಪ್ಪಂಗೆ…..
ಇದ್ದಕ್ಕಿದ್ದ ಹಾಂಗೆ ಸಬ್ಬಿನಿಸ್ಪೇಟ ಮರಿಯಪ್ಪನ ಕಪ್ಪು ಮೋರೆ ಕೆಂಪು ಕೆಂಪು ಆತು… ಕಣ್ಣು ಕೆಂಪು ಆತು….
ಪಟಕ್ಕ ಎದ್ದು ನಿಂದು ಕೈಲಿ ಲಾಟಿ ಹಿಡುದು…ಎಂಕಣ್ಣನನ್ನೆ ದುರುಗುಟ್ಟಿ ನೋಡಿಕೊಂಡು…

“ಏಯ್… ನೀನೆ ಕೊಂದು ಹೊಂಡದಲ್ಲಿ ಹಾಕಿ, ಈಗ ಇಲ್ಲಿ ಬಂದು ಕತೆ ಕಟ್ತಿಯಾ… ಬೋಳಿ ಮಗ್ನೆ…. ಬಟ್ಟೆ ಬಿಚ್ಚಿಸಿ ಏರೋಪ್ಲೇನ್ ಹತ್ತಿಸಿದ್ರೆ ಎಲ್ಲ ಸತ್ಯ ಹೊರಗೆ ಬರ್ತದೆ…. ಏ…ಫೋರ್ಟ್ವೆಂಟಿ… ಹಾಕಾ ಇವ್ನನ್ನು ಲಾಕಪ್ಪಿಗೆ… ಕಲಿಸ್ತೇನೆ ಇವ್ನಿಗೆ…” ಹೇಳಿ ಆರ್ಬಟೆ ಕೊಟ್ಟು, ಲಾಟಿಯ ಪಟಾರ್ ಹೇಳಿ ಮೇಜಿಂಗೆ ಬಡುತ್ತೋ ಇಲ್ಲೆಯೋ…….

——————————————————————————————-
ಇನ್ನಾಣ ಕತೆ ಮುಂದಾಣ ವಾರ……
 
 

17 thoughts on “ಚೈನು – ಭಾಗ ನಾಲ್ಕು

  1. ಶ್ಯಾಮಣ್ಣ..ಈ ಎಂಕಣ್ಣಂಗೆ ಹಾಂಗೆ ಅಪ್ಪಲಾಗ ಅಲ್ಲದೋ..? ಆರಾರು ಗುರ್ತದವು, ಮೇಲಾಣ ಆಫೀಸರಕ್ಕೊ ಇದ್ದವೋ ನೋಡಿ ಇಂಪ್ಲೆನ್ಸು ಮಾಡ್ಸಿ ಕೆಲಸ ಸುಲಾಭ ಮಾಡೆಕ್ಕಾತು, ಛೆ..ಪಾಪ.

  2. ಪೋಲೀಸು ಸ್ಟೇಶನು ದರ್ಶನ ಆತು.. ವೆ೦ಕಣ್ಣ ಮೂರ್ನಾಲ್ಕು ಸರ್ತಿ ಅತ್ತಿ೦ದಿತ್ತೆ ಸುತ್ತು ಬ೦ದದು ಕಣ್ಣಿ೦ಗೆ ಕಟ್ಟಿತ್ತು.
    ಶ್ಯಾಮಣ್ಣ, ಐವತ್ತು ವರುಷ ಹಿ೦ದೆ ರೈಟ೦ಗೆ , ಕಾನ್ ಸ್ಟೇಬಲ೦ಗೆ ಇಪ್ಪತ್ತೈದು ರುಪಾಯಿ ರಜಾ ಹೆಚ್ಚಾತಿಲ್ಲೆಯೋ? ಚರ್ಚೆ ಮಾಡಿರೆ ರಜಾ ಕಮ್ಮಿ ಮಾಡಿಕ್ಕುಗೋ ಹೇ೦ಗೆ?ತಿ೦ಗಳ ಸ೦ಬಳ ನೂರು ರೂಪಾಯಿ ಸಿಕ್ಕಿಗೊ೦ಡಿದ್ದ ಕಾಲಲ್ಲಿ ಇಷ್ಟು ಕೊಟ್ರೆ ಹೊಟ್ಟೆಗೆ೦ತರ!

    1. ಭಾವ… ಪೋಲೀಸುಗೋ ಭಾವ ಪೋಲಿಸುಗೋ… ಕೇಳಿದ್ದು ಕೊಡೆಕ್ಕಾವುತ್ತು… ಇದು ಸತ್ತ ಕೇಸಿಂಗೆ ಸಂಬಂದ ಪಟ್ಟದಲ್ಲದೋ…

      1. ಹು.ಅಡಕ್ಕೆದು ಕಟ್ಟಿ ಮಡಗಿದ್ದು ಸುಮಾರು ಹೋತನ್ನೆಪ್ಪಾ..ಅದು ಹೋಗಲಿ..ಪೈಸೆ ಕೊಟ್ಟು ಇಲ್ಲಿ ಎರೋಪ್ಲೇನು ಹತ್ತೆಕ್ಕಾವುತ್ತೋ ಆ ತ್ಯಾ೦ಪನ ದೆಸೆಲಿ?

  3. ಹ ಹಾ.. ಪವನು ಎಷ್ಟೂ ಸೇರ್ಸುಲಕ್ಕು… ಈಗ ಹೇಂಗಾರು ಚಿನ್ನಕ್ಕೆ ರಜ ಕಮ್ಮಿ ಆಯಿದು ಅಲ್ಲದಾ ಇಂದಿರಕ್ಕೋ? 🙂

  4. ಮೊದಲೇ ಎಂಕಣ್ಣಂಗೆ ಅರ್ಜೆಂಟಾಗಿತ್ತು- ಎಸ್ ಐ ಲಾಟಿಯ ಪಟಾರ್ ಹೇಳಿ ಮೇಜಿಂಗೆ ಬಡುದಪ್ಪಗ ಎಂತಾತೋ!
    ಪೋಲೀಸ್ ಸ್ಟೇಶನ್ನಿನ ಒಳ ಹೋಪಲೆ ಹೆದರಿ ಮಾರ್ಗಲ್ಲೇ ಅತ್ಲಾಗಿತ್ಲಾಗಿ ಹೋದ್ದದು, ಅದರ ಒಳಾಣ ಚಿತ್ರಣ, ಎಂಕಣ್ಣಂಗೆ ಹೆದರಿ ದೊಂಡೆಪಸೆ ಆರಿದ್ದು, ಮೇಜಿನ ಅಡಿಲಿ ಪೈಸೆ ಕೊಡುದು, ಕಂಪ್ಲೈಂಟು ಕೊಡ್ಳೆ ಬಂದವರನ್ನೇ ಕೊಲೆಗಾರ ಹೇಳಿ ಬಯ್ಯುವ ಪೋಲೀಸುಗಳ ಧಿಮಾಕು- ಹೀಂಗೆ ಪ್ರತಿಯೊಂದೂ ಕಣ್ಣಿಂಗೆ ಕಟ್ಟಿದ ಹಾಂಗೆ- ಅಲ್ಲ ಟಿವಿಲಿ ನೋಡಿದ ಹಾಂಗೆ ಆಯಿದು.
    ಎಂಕಣ್ಣಂಗೆ ಹೆದರಿ ಉಚ್ಚುರಟ್ಟಿ ಪೋಲೀಸ್ ಸ್ಟೇಷನ್ನಿಂಗೆ ಬಂದದೆಂತಕೆ ಹೇಳಿ ಮರದು ಹೋಗಾಯ್ಕು.
    ನಾಲ್ಕು ಪವನಿನ ಚೈನು ಗಟ್ಟಿಗೆ ಲಾ….ಯ್ಕ ಆಯಿದು- ಇನ್ನೆಷ್ಟು ಪವನು ಸೇರುಸುಲೆ ಇದ್ದು? ಎಷ್ಟಾದರೂ ಸೇರ್ಸಿ ಹೆಚ್ಚಾದಷ್ಟೂ ಗಟ್ಟಿ ಅಕ್ಕನ್ನೆ.
    ಶ್ಯಾಮಣ್ಣಾ, ಇನ್ನಾಣ ವಾರಕ್ಕೆ ಕಾಯ್ತಾ ಇರ್ತೆ.

  5. ಯಬ್ಬ, ಪೋಲೀಸ್ ಸ್ಟೇಶನ್ನಿನ ವರ್ಣನೆ ಲಾಯಕಾಯಿದು. ಆನು ಅಂದೊಂದರಿ ಪೋಲೀಸ್ ಸ್ಟೇಶನಿಂಗೆ ಹೋದ ಕತೆ ನೆಂಪು ಮಾಡಿತ್ತು.
    ಎಂಕಣ್ಣ ಮೇಜಿನ ಅಡಿಯಲ್ಲಿ ಕೊಡ್ಬೇಕಾ ಹೇಳಿ ಕೇಳಿದ್ದು ಕೇಳಿ ನೆಗೆ ಬಂದು ತಡೆಯ.
    ಎಸ್ ಐ ಕೆಂಪಾಗಿ ಗರ್ಜಿಸಿದ್ದು ಕಂಡಪ್ಪಗ ಎಂಕಣ್ಣಂಗೆ ಪಸೆ ಆರಿತ್ತೊ ಹೇಳಿ. ಇನ್ನಾಣ ವಾರಕ್ಕೆ ಕಾಯ್ತಾ ಇದ್ದೆ ಶಾಮಣ್ಣ.

    1. ಭಾವ… ಪಸೆ ಆರದ್ದೆ ಇಕ್ಕ? ಆ ಸಬ್ಬಿನಿಸ್ಪೇಟ ಹಾಂಗೆ ಜೋರು ಮಾಡಿರೆ… ಎಂತಾತು ಹೇಳಿ ಇನ್ನಾಣ ವಾರಕ್ಕೇ ಕಾಯೆಕ್ಕಷ್ಟೆ…

  6. *ಈ ಟೇಶನಿಲಿ ,ಗೋರ್ಮೆಂಟು ಆಪೀಸಿಲಿ ಎಲ್ಲಾ ಪೈಸೆ ಕೊಡುವಾಗ ಮೇಜಿನ ಅಡಿಲೇ ಕೊಡುತ್ಸು ಹಳೇ ಸಂಪ್ರದಾಯ. ಈಗ ಪುಸ್ತಕದ ಎಡೆಲಿ ಮಡುಗಲೆ ಹೇಳುತ್ತವಾಡ ಅಲ್ಲದೋ? ಅಂತೂ ಆ ಎಂಕಣ್ನ ವಾಪಾಸು ಬಚಾವಾಗಿ ಬಂದರೆ ಸಾಕು ಹೇದು ಕಾಣ್ತು. ಎಬ್ಬೋ ಶಾಮಣ್ಣ ,ಕತೆ ಲಾಯಕ ಬರತ್ತಾ ಇದ್ದಿ .(ಈ ಚೈನಿಂಗೆ ಒಂದು ಪದಕವುದೇ ನೇಲುಸಲಕ್ಕು )

    1. ಬಾಲಣ್ಣ… ಎಂಕಣ ಹಳೇ ಸಂಪ್ರದಾಯದೋನು ಅಲ್ಲದೋ? ಆದರೆ ಪಾಪ ಅವ ಒಂದರಿಯೂ ಟೇಶನಿಂಗೆ ಹೋದವ ಅಲ್ಲ… ಪಾಪ…

  7. ಕಥೆ ಲಾಯಕ ಓದುಸಿಗೊಂಡು ಹೋತು. ಏವುದೂ ಸಂಶಯಕ್ಕೆ ಎಡೆಯಿಲ್ಲೆ. ಲಾಯಕ ಬಿಡಿಸಿ ಬಿಡಿಸಿ ಹೇಳಿದ್ದದು ಸ್ಪಷ್ಟ ಅರ್ತ ಆತು. ಎಂಕಣ್ಣನಾಂಗೆ ಆಯ್ದಿಲ್ಲೆ ಎನಗೆ.
    ಆದರೆ ಆ ಪೋಲೀಸು ಹತ್ರೆ ಬಂದಪ್ಪಗ ಕೈ ನಿಂದತ್ತು. ಮುಂದೆ ಹೋತಿಕ್ಕಲೆ ರಜಾ ಹೊತ್ತು ಹಿಡುದತ್ತು ಅದರ ನೋಡಿದಲ್ಲೇ ಬಾಕಿಯಾಗಿ.
    ಆ ಕೆಂಪು ಸಹಸ್ರನಾಮಾರ್ಚನೆ… ಯಬ್ಬೋ!…. ಬಿದ್ದತ್ತೋ ಕಡೇಂಗೆ?! ಉಮ್ಮಾ ಬಪ್ಪ ವಾರ ಎಂಕಣ್ಣ ಬಂದಪ್ಪಗ ಗೊಂತಕ್ಕಷ್ಟೇ ಮ್ಮ್.

    1. ಭಾವ … ಆನುದೆ ಕಾದು ಕೂಯಿದೆ ಎಂಕಣ್ಣ ವಾಪಾಸು ಬಪ್ಪಲೆ…. ಮುಂದಾಣ ಕತೆ ಗೊಂತಾಯೆಕ್ಕನ್ನೆ ಬರವಲೆ… ಎಲ್ಲಿಯಾದರೂ ಆ ಸಬ್ಬಿನಿಸ್ಪೇಟ ಅವನ ಲೋಕಪ್ಪಿಂಗೆ ಹಾಕಿರೆ, ಅವನ ಬಿಡಿಸಿಕೊಂಡು ಬಪ್ಪಲೆ ಹೋಯೆಕ್ಕಾವುತ್ತು. ನಿಂಗ ಒಟ್ಟಿಂಗೆ ಬತ್ತಿರನ್ನೆ, ಟೇಶನಿಂಗೆ…

  8. ಅಯ್ಯೋ ಪಾಪವೇ ಕಾಣ್ತಾ ಇಪ್ಪಗ ಕತೆ ನಿಂದತ್ತು, ಇನ್ನು ಇನ್ನಾಣ ವಾರಕ್ಕೊರೆಗೆ ಕಾಯೆಕನ್ನೇ?
    ಎಂಕಣ್ಣ ಹೆದರಿದ ವರ್ಣನೆ ಓದುವಗ ಕೆಲವು ಕಡೆ ಕಿಸಿಕ್ಕನೆ ನೆಗೆದೆ ಬಂತು (ಮನಸಿಲ್ಲಿ ಬೇಜಾರ ಇದ್ದು, ಪಾಪ ಕಾಣ್ತು, ಆದರುದೆ ಅವ ಹೆದರಿದ ರೀತಿ ಬರದ್ದರ ಓದುವಾಗ ನೆಗೆ)…

    1. ಚೆ… ಎಂಕಣ್ಣನ ಅವಸ್ತೆ ನೋಡಿ ನಿಂಗೊಗೆ ನೆಗೆ ಅಲ್ಲದಾ? ಆಗ ಆತ…

    1. ಸಮಾದಾನ ಮಾಂತ್ರ ಆದ್ದಾ? ಈ ಸರ್ತಿ ಹೇಂಗಿದ್ದು ಕತೆ? ಟೇಶನಿಂಗೆ ಹೋಪನಾ ಎಂತಾತು ನೋಡ್ಲೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×