Oppanna.com

ಚೈನು- ಭಾಗ ಹನ್ನೊಂದು

ಬರದೋರು :   ಶ್ಯಾಮಣ್ಣ    on   12/11/2013    32 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
—————————————————————————————
ಇಲ್ಯಾಣವರೇಗೆ…..
ಮಾಣಿ ಮನೆಯವು ಕೂಸು ನೋಡ್ಳೆ ಬತ್ತವಡಾ ಹೇಳಿ ಹೇಳ್ಲೆ ಬುರುಡೆ ಜೋಯಿಷರು ಬಂದದು…
ಮುಂದೆ ಓದಿ…..
—————————————————————————————
ನಿಂಗೊಗೆ ಮಾಣಿ ಕೂಸು ನೋಡ್ಳೆ ಬಂದದು, ಕೂಸು ಮಾಣಿ ಮನೆ ನೋಡ್ಳೆ ಹೋದ್ದು ಇದರ ವಿಶಯ ಎಲ್ಲ ತಿಳ್ಕೊಳ್ಳೆಕ್ಕು ಹೇಳಿ ಬಯಂಕರ ಕುತೂಹಲ ಇದ್ದು ಹೇಳಿ ಎನಗೆ ಗೊಂತಿದ್ದು. ಆದರೆ ಆ ಎಲ್ಲ ಪುರಾಣ ಬಿಚ್ಚುಲೆ ಹೆರಟರೆ ಈ ಕತೆಯ ಮುಗುಶುದು ಏವಗ?
ಕೂಸಿನ ಜಾತಕ ಮಾಣಿಯ ಜಾತಕಕ್ಕೆ ಭಾರಿ ಲಾಯಿಕಕ್ಕೆ ಹೊಂದಿಕೊಳ್ತು ಹೇಳಿ ಜೋಯಿಷರು ಹೇಳಿದ್ದವು. ಹಾಂಗೆ ಮಾಣಿ ಗಣೇಶ°, ಅವನ ಅಪ್ಪ° ಕೃಷ್ಣ ಬಟ್ರಿನ ಒಟ್ಟಿಂಗೆ ಇನ್ನುದೆ ಎರಡು ಜೆನ, ಮಾಣಿಯ ಒಬ್ಬ ಅಕ್ಕ ಎಲ್ಲ ಸವಿತನ ನೋಡ್ಳೆ ಬಂದವು. ನೋಡಿಕ್ಕಿ ಹೋದವು.
ಈ ಕೃಷ್ಣ ಬಟ್ರಿಂಗೆ ರಜ ಪೈಶೆ ಆಶೆ ಜಾಸ್ತಿಯಾ ಕಾಣ್ತು. ಹಾಂಗೆ ಮಗಂಗೆ ಬದಿ ಎಷ್ಟು ಹೇಳಿ ಮೊದಲೇ ತೀರ್ಮಾನ ಮಾಡಿ ಮಡುಗಿದ್ದವು. ಎಷ್ಟು? ಹತ್ತು ಸಾವಿರ ನಗದು, ಎಂಟು ಪವನು ಚಿನ್ನ…..
ಕೂಸಿನ ನೋಡಿಕ್ಕಿ ಮನೆಗೆ ಎತ್ತಿದ ಮೇಲೆ ಮಾಣಿಯ ಮನೆಲಿ ಒಂದು ಸಣ್ಣ ಕದನವೇ ಆತಡ. ಗಣೇಶ° ಸವಿತನ ನೋಡಿ “ಇದೇ ಕೂಸಿನ ಆನು ಮದುವೆ ಅಪ್ಪದು” ಹೇಳಿ ನಿರ್ದಾರ ಮಾಡಿ ಆಯಿದು. ಕಾರಣ ಇದ್ದು ಅದಕ್ಕೆ. ಕೂಸು ನೋಡ್ಳೆ ಹೋದಿಪ್ಪಗ ಕೂಸಿನ ಅಪ್ಪ ಎಂಕಣ್ಣ ಮಗಳ ಹೆಸರು ಹೇಳುವಗ “ಸವಿತಾ ವೆಂಕಟಲಕ್ಷ್ಮಿ” ಹೇಳಿ ಹೇಳಿದ°. “ವೆಂಕಟ ಲಕ್ಷ್ಮಿ” ಹೇಳಿದ್ದಕ್ಕೆ ಸವಿತಂಗೆ ಪಿಸುರು ಬಂತು. ಗೊಂತಿದ್ದಲ್ಲದಾ… ಅದಕ್ಕೆ ಪಿಸುರು ಬಂದರೆ ಅದರ ಮೂಗು ಕೆಂಪಪ್ಪದು? ಆಷ್ಟಪ್ಪಗ ಅದು ಇನ್ನುದೇ ಚೆಂದ ಕಾಂಬದು? ಈ ಮೂಗು ಕೆಂಪಾದ ಚೆಂದದ ಕೂಸಿನ ನೋಡಿದ ಗಣೇಶ° ಅಲ್ಲಿಯೇ ಫ್ಲಾಟು. ಮನೆಲಿ “ನಿಂಗ ಎಂತ ಬೇಕಾರೂ ಮಾಡಿಕೊಳ್ಳಿ, ಎನಗೆ ಮಾಂತ್ರ ಅದೇ ಕೂಸು ಆಯೆಕ್ಕು” ಹೇಳಿ ಅಪ್ಪನ ಹತ್ತರೆ ಕಡಾಕಡಿ ಹೇಳಿದ°ಡ. ಅಪ್ಪಂಗೆ ಬದಿ ಆಶೆ… ಮಾಣಿಗೆ ಕೂಸಿನ ಆಶೆ. “ನಿನಗೆಂತ ಬೇಕಷ್ಟು ಕೂಸು ಸಿಕ್ಕುಗು” ಹೇಳಿ ಅಪ್ಪ°. “ಆರು ಸಿಕ್ಕಿದರೆಂತ? ಈ ಕೂಸಿನ ಹಾಂಗಿಕ್ಕ?” ಹೇಳಿ ಮಗ°. “ಇದಲ್ಲದ್ರೆ ಇದರ ಅಜ್ಜಿಯ ಹಾಂಗಿಪ್ಪದರ ಹುಡ್ಕುವಾ” ಹೇಳಿ ಅಪ್ಪ°…”ಅಜ್ಜಿ ಎಂತಕೆ ಎನಗೆ? ಎನ್ನ ಕರ್ಮಕ್ಕಾ?” ಹೇಳಿ ಮಗ°… ಸರಿ ಅಪ್ಪಂಗೂ ಮಗಂಗು ಸಣ್ಣ ಕದನವೇ ಆತಡ. ಕಡೇಂಗೆ ಅಪ್ಪ° ಇನ್ನು ಎಲ್ಲಿಯಾದರೂ ಮಗ ಕೈತಪ್ಪಿದರೆ ಹೇಳಿ ಐದು ಸಾವಿರ ನಗದು ಆರು ಪವನು ಚಿನ್ನಕ್ಕೆ ಒಪ್ಪಿದ್ದ°ಡ. ಹಾಂಗೇಳಿ ಇನ್ನೂ ಎಂಕಣ್ಣಂಗೆ ಹೇಳಿದ್ದಿಲ್ಲೆ… ಮತ್ತೆ ಚೌಕಾಸಿ ಚರ್ಚೆ ಮಾಡ್ಳೆ ಇದ್ದಲ್ಲದಾ…
ಹಾಂಗೆ ಸವಿತಂಗೂ ಮಾಣಿ ಒಪ್ಪಿಗೆ ಆಯಿದು. ಹಾಂಗೆ ಮಾಣಿ ಮನೆಗೆ ಹೋಗಿ ಎಲ್ಲ ಆತು. ಮಾತುಕತೆ ನಡತ್ತು. ಸುರುವಿಂಗೆ ಮಾಣಿಯ ಅಪ್ಪ° ಬದಿ ಹತ್ತುಸಾವಿರ ನಗದು, ಎಂಟು ಪವನು ಚಿನ್ನ ಹೇಳಿಯೇ ಹೇಳಿದ್ದು…ಕೇಳಿ ಅಪ್ಪಗ ಎಂಕಣ್ಣಂಗೆ ಒಂದು ಸಲ ತಲೆ ಬೆಶಿ ಆತು… ಅಲ್ಲ… ಇದೆಂತ ತಲೆ ಒಡವ ವ್ಯಾಪಾರ? ಕೇಳುದಕ್ಕೂ ಒಂದು ಕ್ರಮ ಇಲ್ಲೆಯಾ? ಹತ್ತು ಸಾವಿರ… ಎಲ್ಲಿಂದ ತಪ್ಪದು? ಸಾಲದ್ದಕ್ಕೆ ಎಂಟು ಪವನು ಚಿನ್ನ…. ಹಾಂಗೇಳಿ ಬಿಡ್ಳುದೇ ಮನಸ್ಸಿಲ್ಲೆ. ಒಳ್ಳೆ ಕುಳವಾರು. ತಪ್ಪಿದರೆ ಇನ್ನೊಂದು ಹೀಂಗಿಪ್ಪ ಕುಳವಾರು ಬಕ್ಕು ಹೇಳಿ ಹೇಳ್ಲೆ ಬತ್ತಿಲ್ಲೆ. ಕೂಸಿಂಗೊಂದು ಮಾಣಿ ಹುಡ್ಕುದು ಎಷ್ಟು ಕಷ್ಟ ಹೇಳಿ ನಾಕು ಹೋಡೇಲಿ ನೋಡುವಗಳೆ ಕಾಣ್ತು. ಎಂತ ಮಾಡುದು ಈಗ? ಕಡೆಂಗೆ ಚೌಕಾಸಿ ಚರ್ಚೆ ಎಲ್ಲಾ ಆಗಿ, ತೌಡೂರು ರಾಮಣ್ಣನ ಮಧ್ಯಸ್ತಿಕೆಲಿ ಐದು ಸಾವಿರ ನಗದು, ಆರು ಪವನು ಚಿನ್ನಕ್ಕೆ ಒಪ್ಪಿಗೆ ಆತು. ನಗದು ಬದ್ದದ ದಿನ ಕೊಡೆಕ್ಕು… ಚಿನ್ನ ಮದುವೆ ದಿನ ಹಾಕೆಕ್ಕು ಹೇಳಿ ತೀರ್ಮಾನ ಆತು.
ಒಂದು ಮದುವೆ ಏಳ್ಸುದು ಹೇಳಿರೆ ಸುಮ್ಮನೆ ಆವುತ್ತಿಲ್ಲೆ. ಸುಮಾರು ಕೆಲಸಂಗ ಇದ್ದು. ಮೊದಲಿಂಗೆ ಈಗ ಬದ್ದಕ್ಕೆ ತಯಾರು ಮಾಡಿಕೊಳ್ಳೆಕ್ಕು. ಇನ್ನೀಗ ಕರ್ಚು ಹೇಂಗೆ ಬತ್ತು ಹೇಳಿ ಗೊಂತಾಗ. ಎಂಕಣ್ಣ ಮನೆಲಿತ್ತಿದ್ದ ಅಡಕೆ ಎಲ್ಲ ಸೀತಾರಾಮಣ್ಣನ ಅಡಕ್ಕೆ ಮಂಡಿಗೆ ಹಾಕಿದ°. ಮೊದಾಲಿಂಗೆ ಐದು ಸಾವಿರ ತಯಾರು ಮಾಡಿ ಮಡಿಕ್ಕೊಳ್ಳೆಕ್ಕು. ಬದ್ದದ ದಿನ ಮಾಣಿಯ ಅಪ್ಪಂಗೆ ಕೊಡೆಕ್ಕಲ್ಲದಾ? ಮೇಲಂದ ಬದ್ದದ ದಿನ ಎಷ್ಟು ಜೆನ ಬತ್ತವೂಳಿ ಗೊಂತಿಲ್ಲೆ… ಒಂದು ಚೆಪ್ಪರ ಆದ್ರೂ ಹಾಕ್ಸೆಡದೋ?. ಜಾಲು ತಯಾರು ಮಾಡೆಕ್ಕು. ಜಾಲಿಂಗೆ ತೆಳ್ಳಂಗೆ ಮಣ್ಣು ಹರುಗಿ, ನೀರು ಹಾಕಿ, ಮಟ್ಟಿ ತೆಕ್ಕೊಂಡು ಜಾಲಿಡೀಕ ಗುದ್ದೆಕ್ಕು, ಮತ್ತೆ ಹೊಳಿಮಣೆ ತೆಕ್ಕೊಂಡು ಹೊಳುದು ಹೊಳುದು, ಜಾಲು ಸಮ ಮಾಡೆಕ್ಕು ಮತ್ತೆ ಸಗಣ ಉಡುಗೆಕ್ಕು. ಕೆಲಸ ಇದ್ದೆಷ್ಟು? ಕೆಲಸದೋರ ಒಟ್ಟಿಂಗೆ ಎಂಕಣ್ಣನೂ ಸೇರಿಕೊಂಡು ಈ ಕೆಲಸ ಮಾಡ್ತ°. ಮತ್ತೆ ಕಿಟ್ಟಣ್ಣನು ಇದ್ದನ್ನೆ? ಒಟ್ಟಿಂಗೆ ನಾಣಿದೆ ಬತ್ತ°. ಅವಂಗೆ ಇದು ಒಂತರಾ ಆಟದ ಹಾಂಗೆ.
ಅಂತು ಇದೆಲ್ಲ ಆಗಿ ಬದ್ದವುದೆ ಕಳುತ್ತು ಹೇಳಿ ಮಡಿಕ್ಕೊಳ್ಳಿ. ಮದುವೆಗೆ ಎರಡು ತಿಂಗಳ ನಂತ್ರಕ್ಕೆ ಮೂರ್ತ ಸಿಕ್ಕಿದ್ದು. ಒಂದು ಲೆಕ್ಕಲ್ಲಿ ಒಳ್ಳೆದೇ ಆತು. ಪೈಶೆ ಜೋಡ್ಸಿಕೊಂಬಲೆ ರಜಾ ಸಮೆಯ ಸಿಕ್ಕಿತ್ತದಾ. ನೀರಿಂಗೆ ರಜಾ ಒತ್ತಾಯ ಬಕ್ಕು, ತೊಂದರೆ ಇಲ್ಲೆ ಸುದರ್ಸುಲೆ ಎಡಿಗು. ಮಾಣಿಯ ಅಪ್ಪಂಗೆ ಐದು ಸಾವಿರ ಕೊಟ್ಟಾತು. ಇನ್ನು ಒಳುದ ಕರ್ಚಿಂಗೆ ವ್ಯೆವಸ್ತೆ ಮಾಡಿಕೊಳ್ಳೆಕ್ಕು. ಬದ್ದ ಮುಗಿವಗಳೇ ಒಂದು ಸರ್ತಿಯಾಣ ಪೈಶೆ ಎಲ್ಲ ಮುಗುತ್ತು. ಇನ್ನು? ಪೈಶೆ ಬೇಕಪ್ಪದೇ ಇನ್ನು. ಸೊಸೈಟಿಗೆ ಹೋಗಿ ಕೇಳಿನೋಡಿದ°. ಜಾಗೆ ಅಡವು ಮಡುಗಿದರೆ ರಜಾ ಸಿಕ್ಕುಗು ಹೇಳಿ ಗೊಂತಾತು. ಮದುವೆ ಕರ್ಚಿಗೆ ಆತು. ಚಿನ್ನಕ್ಕೆ ಎಲ್ಲಿಂದ ತಪ್ಪದು?
ಎಂಕಣ್ಣ ಪರಡಿಕೊಂಡೇ ಇದ್ದ°. ಎಂತ ಮಾಡುದು ಹೇಳಿ. ಹಾಂಗೆ ತೌಡೂರು ರಾಮಣ್ಣ ಇದ್ದ°. ಎಲ್ಲಿಯೂ ಎಂತದೂ ವ್ಯೆವಸ್ತೆಯೂ ಆಗದ್ರೆ ರಾಮಣ್ಣ ತಾಂಗುಗು. ಹಾಂಗೇಳಿ ಅವನನ್ನೇ ನಂಬುಲೆ ಆವುತ್ತ..? ಎಂತ ಮಾಡುದು ಹೇಳಿ ಯೋಚನೆ ಮಾಡಿಕೊಂಡು ಇಪ್ಪಗಳೆ ಒಂದು ತಿಂಗಳು ಕಳುತ್ತು. ಇನ್ನು ಒಂದು ತಿಂಗಳು ಇಪ್ಪದು ಮದುವೆಗೆ. ಸಮೆಯ ಹೇಂಗೆ ಕಳಿತ್ತು ಹೇಳಿ ಗೊಂತಾವುತ್ತಿಲ್ಲೆ, ಇಂತಾ ಸಮೆಯಲ್ಲಿ.
———————————————————————
ಎಲ್ಲ ಮನೆಗೊಕ್ಕು ಪುರೊಹಿತ ಬಟ್ರು ಇಪ್ಪಾಂಗೆ ಅಡಿಗೆ ಬಟ್ರುದೆ ಇರ್ತವು. ಹಾಂಗೆ ಎಂಕಣ್ಣನ ಮನೆಯವಕ್ಕೆ ಅಡಿಗೆಗೆ ಯಾವಗಳೂ ಮಾಲಿಂಗಣ್ಣ°. ಎಂಕಣ್ಣನ ಕುಟುಂಬಲ್ಲಿ ಹೇಳಿರೆ, ಎಂಕಣ್ಣನ ಅಣ್ಣಂದ್ರ ಮನೇಲಿ, ದೊಡ್ಡಪ್ಪ, ಅಪ್ಪಚ್ಚಿ ಮನೆಲಿ, ಎಂತ ಅನುಪ್ಪತ್ಯ, ಜೆಂಬ್ರಂಗ ಇದ್ದರೂ ಅಡಿಗೆಗೆ ಮಾಲಿಂಗಣ್ಣನನ್ನೇ ಹೇಳುದು. ಹಾಂಗೆ ಮಾಲಿಂಗಣ್ಣನ ಕಂಡಿಕ್ಕಿ ಬಪ್ಪ ಹೇಳಿ ಎಂಕಣ್ಣ ಹೆರಟ°. ವಿಚಾರ್ಸುವಗ ಇತ್ಲಾಗಿ ಒಂದು ಹತ್ತು ದಿನಂದ ಮಾಲಿಂಗಣ್ಣ ಏವ ಜೆಂಬ್ರಲ್ಲಿಯೂ ಕಂಡಿದಾಯಿಲ್ಲೆ ಹೇಳಿ ಸುದ್ದಿ ಸಿಕ್ಕಿತ್ತು. ಎಂತಕೆ ಇಕ್ಕಪ್ಪ? ಇನ್ನು ಮಾಲಿಂಗಣ್ಣನ ಮನೆಗೇ ಹೋಗಿ ತಿಳಿಯೆಕ್ಕಷ್ಟೆ.
ಎಂಕಣ್ಣ ಪೆರ್ಲಕ್ಕೆ ಹೆರಟ°. ಕಾಸರಗೋಡಿಂಗೆ ಹೋಪ ಮಾರ್ಗಲ್ಲಿ ಹೋಯೆಕ್ಕಿದ. ಮದ್ಯಾನ್ನ ಪುತ್ತೂರಿಂದ ಬದಿಯಡ್ಕಕ್ಕೆ ಕೇಬೀಟಿ ಬಸ್ಸು ನಾಕೂವರೆಗೆ ಇದ್ದಡ. ನಡಕ್ಕೊಂಡು ಹೋದರೆ ಎತ್ತುವಗಳೇ ಕಸ್ತಲೆ ಅಕ್ಕು. ಮತ್ತೆ ಈ ಮಾಲಿಂಗಣ್ಣ ಮನೆಲಿ ಇಲ್ಲದ್ದರೆ ಹೋದ್ದೂ ದಂಡ. ಹಾಂಗೆ ಕೇಬೀಟಿ ಬಸ್ಸಿಲಿ ಹೋಪದು ಹೇಳಿ ಎಂಕಣ್ಣ ಹೆರಟ°. ಅದೊಂದು ಪಚ್ಚೆ ಕಲರಿನ ಬಸ್ಸು. ಆ ಬಸ್ಸಿಲಿ ಹೋರ್ನು ಒಂದು ಬಿಟ್ಟು ಬೇರೆ ಎಲ್ಲ ಪಾರ್ಟುದೆ ಶಬ್ದ ಮಾಡ್ತು. ಗಡಗಡಾ ಗುಡುಗುಡೂ ಹೇಳಿ. ಎಡ ಹೊಡೇಲಿ ಉದ್ದಕ್ಕೆ ಶಾಲೆ ಬೆಂಚಿಯ ಹಾಂಗೆ ಕೂಪಲೆ ಸೀಟು. ಬಲದ ಹೊಡೇಲಿ ಮೂರು ಮೂರು ಜೆನಕ್ಕೆ ಕೂಪ ಹಾಂಗಿಪ್ಪ ಸೀಟುಗ ಒಂದರ ಹಿಂದೆ ಒಂದು. ಮುಂದಾಣ ಹೊಡೇಲಿ ಶೂದ್ರ ಹೆಣ್ಣುಗ ಒಂದೊಂದು ಸೀಟಿಲುದೆ ಆರಾರು ಜೆನಂಗ ಉಪ್ಪಿನ ಕಾಯಿ ಹಾಕಿದ ಹಾಂಗೆ ಕೂರುಗು. ಅಂತೂ ಈ ಕೇಬೀಟಿ ಬಸ್ಸಿಲಿ ಐದೂವರೆ ಗಂಟೆ ಅಪ್ಪಗ ಎಂಕಣ್ಣ ಪೆರ್ಲಕ್ಕೆ ಎತ್ತಿದ°.
ಪೆರ್ಲಲ್ಲಿ ಬಲತ್ತಿಂಗೆ ಹೋಪ ಮಾರ್ಗ ಇದ್ದದ? ಅದೆಲ್ಲಿಯೇ ರಜಾ ಮುಂದೆ ಹೋಗಿ ಪುನ ಬಲತ್ತಿಂಗೆ ತಿರುಗಿ, ಎಡತ್ತಿಂಗೆ ಜೇರದ ನಡೂವಿಲಿ ಇಪ್ಪ ಕಾಲು ದಾರಿಲಿ ಹೋದರೆ ಮಾಲಿಂಗಣ್ಣನ ಮನೆ ಸಿಕ್ಕುತ್ತು. ಎಂಕಣ್ಣ ಮಾಲಿಂಗಣ್ಣನ ಮನೆಗೆ ಎತ್ತುವಗ ಮಾಲಿಂಗಣ್ಣ ಮನೆ ಜೆಗಿಲಿಲಿ ಮರದ ಆರಾಮ ಕುರ್ಶಿಲಿ ಕೂದ್ದು ಕಂಡತ್ತು. ಸದ್ಯ… ಪುಣ್ಯಾತ್ಮ ಮನೆಲೇ ಇದ್ದ°.
“ಏ ಮಾಲಿಂಗಣ್ಣ, ಇದ್ದಿರೋ?” ಎಂಕಣ್ಣ ಮನೆ ಮೆಟ್ಳು ಹತ್ತಿದ°.
“ಓ.. ಎಂಕಣ್ಣ…ಬನ್ನಿ ಬನ್ನಿ… ಎಂತ ಬಾರೀ ಅಪ್ರೂಪ? ಎನು ಮತ್ತೆ… ಇಲ್ಲಿ ಬಂದದು? …” ಹೇಳಿದ ಮಾಲಿಂಗಣ್ಣ ಎಂಕಣ್ಣಂಗೆ ಕೂಪಲೆ ಇನ್ನೊಂದು ಕುರ್ಶಿ ಎಳದು ಮಡುಗಿದ°. ಎಂಕಣ್ಣ ಕುರ್ಶಿಲಿ ಕೂದ°. ಮಾಲಿಂಗಣ್ಣ ಒಳ ಹೋಗಿ ಒಂದು ಸಣ್ಣ ಗಿಣ್ಣಾಲಿಲಿ ಎರಡು ತುಂಡು ಬೆಲ್ಲದೇ, ಒಂದು ಸಣ್ಣ ಹಿತ್ತಾಳೆ ಚೆಂಬಿಲಿ ನೀರುದೆ, ಲೋಟೆದೆ ತಂದು ಮಡುಗಿದ°.
ಎಂಕಣ್ಣ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿ, ರಜಾ ನೀರು ಕುಡುದು ಅತ್ತಿತ್ತ್ತೆ ನೋಡಿದ°. ಮಾಲಿಂಗಣ್ಣ ಒಬ್ಬನೇ ಇಪ್ಪದು ಎಂಕಣ್ಣಂಗೆ ಕಂಡತ್ತು.
“ಎಂತ…? ಆರೂ ಕಾಣ್ತವಿಲ್ಲೆ? ಒಬ್ಬನೆಯಾ? ಅತ್ತಿಗೆ ಎಂತ ಕಾಣ್ತಿಲ್ಲೆ.? ಏವ ಜೆಂಬ್ರಲ್ಲಿಯೂ ನಿಂಗಳ ಕಂಡಿದಿಲ್ಲೆನ್ನೆ..?”
“ಓ.. ನಿಂಗೊಗೆ ವಿಶಯ ಗೊಂತಿಲ್ಲೆಯ? ಎನ್ನ ಹೆಂಡತ್ತಿ ಹೆರ್ಲೆ ಅದರ ಅಪ್ಪನ ಮನೆಗೆ ಹೋದ್ದು? ಮೊನ್ನೆ ಮೊನ್ನೆ ಅದರ ಹೆರಿಗೆ ಆತಿದಾ. ಹಾಂಗಾಗಿ ಸೂತಕ ಅಲ್ಲದೋ? ಏವ ಜೆಂಬ್ರವನ್ನುದೆ ಒಪ್ಪಿಗೊಂದಿದಿಲ್ಲೆ ಇದಾ”
“ಅತ್ತಿಗೆಗೆ ಹೆರಿಗ ಆತಾ? ಅಂಬಗ ಅದೆಂತ ಬಸರಿಯೋ?”
“ನಿಂಗೊಗೆ ಕುಶಾಲು! ಬಸರಿ ಅಲ್ಲದ್ರೆ ಹೆರಿಗೆ ಆವ್ತಾ? ಈಗ ಬಸರಿ ಅಲ್ಲ…ಬಾಣಂತಿ…”
ಎಂಕಣ್ಣ ಪೆದ್ದನ ಹಾಂಗೆ “ಹೆ ಹೆ …” ಹೇಳಿ ಹಲ್ಲು ಬಿಟ್ಟ°.
“ಇಂದಿಂಗೆ ಹನ್ನೊಂದು ದಿನ ಆತಿದಾ. ಶುದ್ದಿ ಆಗಿ, ಪುಣ್ಯಾಹ ಕಳುಶಿಕ್ಕಿ ಎನ್ನ ಮಾವಗಳ ಮನೆಂದ ಈಗಷ್ಟೆ ಬಂದದು…” ಮಾಲಿಂಗಣ್ಣ ಹೇಳಿದ°.
“ಒಂದು ಚಾಯ ಮಾಡಿಕ್ಕುತ್ತೆ. ಕುಡ್ಕೊಂಡು ಮಾತಾಡುವೋ ಆಗದೋ?” ಮಾಲಿಂಗಣ್ಣ ಎರಡು ಚಾಯ ಮಾಡಿ, ಒಂದು ತಟ್ಟೆಲಿ ಎರಡು ಹೋಳಿಗೆ, ಬಾಳೆ ಹಣ್ಣು ತಂದು ಮಡುಗಿದ°, ಮಾವಗಳ ಮನೆಂದ ಬಪ್ಪಗ ತಂದದು.
“ಅಂಬಗ ಮಾಣಿಯೋ? ಕೂಸೋ? ನಾಮಕರಣವೂ ಮಾಡಿ ಆತೋ?” ಎಂಕಣ್ಣ ಹೋಳಿಗೆ ಮುರುದು ಬಾಯಿಗೆ ಹಾಯ್ಕೊಂಡು ಕೇಳಿದ°.
“ಮಾಣಿ… ಎಂಕಣ್ಣ… ಜೋಯಿಷರು ಜಾತಕ ನೋಡಿ ಹೇಳಿದ್ದವು… ಜಾತಕ ಬಾರಿ ಒಳ್ಳೆದಿದ್ದಡಾ…” ಮಾಲಿಂಗಣ್ಣಂಗೆ ಬಾರಿ ಕುಶಿ ಆಯಿದು ಹೇಳಿ ಮೋರೆ ನೋಡುವಗಳೆ ಗೊಂತಾವುತ್ತು
“ಅಪ್ಪೋ…”
“ಮಾಣಿ ದೊಡ್ಡ ಅಪ್ಪಗ ಬೈಲಿಲಿ ಬಾರಿ ಹೆಸರು ಮಾಡ್ತ° ಅಡ್ಡ… ಜೋಯಿಷರು ಹೇಳಿದವು… ಎಲ್ಲೋರ ಬಾಯಿಲಿಯೂ ಅವನ ಹೆಸರೇ ಇರ್ತಡಾ…” ಮಾಲಿಂಗಣ್ಣ ಹೇಳಿದ°.
“ಎಲ್ಲೋರ ಬಾಯಿಲಿಯಾ? ಹಾಂಗೇಳಿದರೆ ಎಂತ?”
“ಬಹುಶ ಅವಂದೆ ಎನ್ನ ಹಾಂಗೆ ಅಡಿಗೆಲಿ ಒಳ್ಳೆ ಹೆಸರು ಮಾಡಿ, ಅವನ ಹೆಸರಿಲಿಯೇ ಎಂತಾರೂ ಹೊಸಾ ನಮೂನೆ ಬಕ್ಷ್ಯ ತಯಾರು ಮಾಡುಗೊ ಏನೋ… ಆ ಬಕ್ಷ್ಯ ಎಲ್ಲೋರ ಬಾಯಿಲಿ ಇದ್ದರೆ ಅವನ ಹೆಸರೇ ಎಲ್ಲೋರ ಬಾಯಿಲಿ ಇದ್ದಾಂಗೆ ಆತಲ್ಲದಾ?” ಮಾಲಿಂಗಣ್ಣ ವಿವರ್ಸಿದ°.
“ಹೋ… ಅದಪ್ಪು… ಅದಪ್ಪು…. ಹೇಳಿದಾಂಗೆ ಎಂತ ಹೆಸರು ಮಡುಗಿದ್ದಿ ಮಗಂಗೆ?” ಎಂಕಣ್ಣ ಕೇಳಿದ°.

“ಹೆಸರಾ? ಸತ್ಯ ಹೇಳಿ ಮಡುಗಿದ್ದೆ ಎಂಕಣ್ಣ… ಎನ್ನ ಅಪ್ಪನ ಹೆಸರು ಸತ್ಯನಾರಾಯಣ ಹೇಳಿ ಅಲ್ಲದೋ…”

———————————————————————————-
ಮಾಲಿಂಗಣ್ಣಂಗೆ ಮದುವೆಗೆ “ಅಡಿಗೆಗೆ ನಿಂಗಳೆ ಬರೆಕ್ಕು” ಹೇಳಿ ಹೇಳಿಕ್ಕಿ ಅಡಿಗ್ಗೆ ಸಾಮಾನಿಂಗೆ ಚೀಟಿ ತೆಕ್ಕೊಂಡು ಎಂಕಣ್ಣ ವಾಪಾಸು ಪೆರ್ಲಕ್ಕೆ ಎತ್ತುವಗ ಪುನಾ ಇತ್ಲಾಗಿ ಬಪ್ಪ ಶಂಕರ ವಿಟ್ಟಲ ಬಸ್ಸು ರೆಡೀ ಇತ್ತು.
ದಿನ ಕಳಿತ್ತಾ ಇದ್ದು. ಇನ್ನು ಹದಿನೈದು ದಿನ ಇಪ್ಪದು. ಜಾಲು ಸರಿಮಾಡಿ ಸಗಣ ಉಡುಗಿ, ಚೆಪ್ಪರ ಹಾಕಿ ಆಯಿದು. ನಾಂದಿಯ ದಿನವುದೆ ಹತ್ತರೆ ಬಂತು. ಎಂಕಣ್ಣಂಗೆ ಒಂದೇ ಬೆಶಿ. ಎಲ್ಲ ತಯಾರಾದರೂ ಆರು ಪವನು ಚಿನ್ನಕ್ಕೆ ಇನ್ನೂ ದಾರಿ ಆಯಿದಿಲ್ಲೆ. ಅಡಕ್ಕೆ ಪೈಶೆ ಎಲ್ಲಾ ಐದು ಸಾವಿರ ಬದಿ ಕೊಡ್ಳೇ ಹೋತು…. ಸೊಸೈಟಿಲಿ ಜಾಗೆ ಅಡವು ಮಡುಗಿ ತೆಕ್ಕೊಂಡ ಪೈಶೆ ಅಡಿಗೆ ಸಾಮಾನು, ಜಾಲು, ಚೆಪ್ಪರ, ಮತ್ತೊಂದು, ಮಣ್ಣು ಮಸಿ ಹೇಳಿ ಮುಗಿತ್ತಾ ಇದ್ದು. ಇನ್ನು ನಾಳಂಗೆ ಮದುವೆ ದಿನಕ್ಕೆ ಬೇಕಪ್ಪ ಕರ್ಚಿಗೂ ಅದೇ ಬರೆಕ್ಕು. ಚಿನ್ನಕ್ಕೆ ಎಲ್ಲಿಂದ ಹಾಕುದು? ದೊಡ್ಡ ಅಣ್ಣನ ಹತ್ತರೆ ಕೇಳಿರೆ ಅಕ್ಕಾ? ಅವಂಗೇ ಬೇಕಷ್ಟು ಇಲ್ಲೆ… ಎರಡ್ಣೇ ಅಣ್ಣ ಪಿಟ್ಟಾಸಿ… ಅವನ ಪೈಶೆಯನ್ನೆ ಕಟ್ಟಿ ಮಡುಗಿ ಭಾವನ ಪೈಶೆಲಿ ಹೋಟ್ಳು ನಡೆಶುವೋನು…
ಎಲ್ಲೋರಿಂಗುದೆ ಜೆಂಬ್ರದ ಗಮ್ಮತ್ತಾದರೆ ಎಂಕಣ್ಣಂಗೆ ತಲೆ ಬೆಶಿ. ಮದುವೆ ದಿನಕ್ಕೆ ಚಿನ್ನದ ಏರ್ಪಾಟು ಆಗದ್ರೆ ಮರ್ಯಾದೆ ಹೋಕನ್ನೆ… ಮಾಣಿಯ ಅಪ್ಪ ಮದುವೆ ಮಂಟಪಲ್ಲೆ “ಚಿನ್ನ ಎಲ್ಲಿದ್ದು” ಹೇಳಿ ಕೇಳಿದರೆ? ಎಂತ ಮಾಡುದು? ಹೆಂಡತ್ತಿ ಹೇಳುತ್ತು “ನಿಂಗ ತಲೆ ಬೆಶಿ ಮಾಡುದು ಎಂತಕೆ? ದೇವರು ಎಂತಾರೂ ದಾರಿ ತೋರ್ಸುಗು” ಅದಪ್ಪು ದೇವರೇ ದಾರಿ ತೋರ್ಸೆಕ್ಕಷ್ಟೆ.
ಉದಿಯಪ್ಪಗ ಹೊತ್ತು ಮೂಡ್ಳೆ ಇನ್ನು ರಜಾ ಹೊತ್ತಿದ್ದು ಹೇಳಿ ಅಪ್ಪಗ, ಎಮ್ಮೆ ಕರದು ಆದ ಮೇಲೆ, ಎಮ್ಮೆಗೂ ದನಂಗೊಕ್ಕೂ ಬೆಳುವೆಲು ಹಾಕಿಕ್ಕಿ ಎಂಕಣ್ಣ ತೋಟಕ್ಕೆ ಹೆರಟ°. ಒಂದು ಕೈಲಿ ಕುರುವೆ ಇದ್ದು, ಬಿದ್ದ ಅಡಕ್ಕೆ ಹೆರ್ಕುಲೆ. ತೋಟಕ್ಕೆ ಇಳುದು, ಬಿದ್ದ ಅಡಕ್ಕೆಯ ಹೆರ್ಕಿ ಕುರುವೆಗೆ ಹಾಯ್ಕೊಂಡು, ಬಿದ್ದ ಸೋಗೆಯ ಎಳದು ಒಂದು ಹೊಡೇಲಿ ರಾಶಿ ಹಾಕಿಕ್ಕಿ ಮುಂದೆ ಹೋದ°. ಹೋಗಿ ಎತ್ತಿದ್ದು ತ್ಯಾಂಪ ಸೆಟ್ಟಿ ಬಿದ್ದು ಸತ್ತ ಗುರ್ಮೆಯ ಹತ್ತರೆ.
ಗುರ್ಮೆ ಹತ್ತರೆ ಎತ್ತುವಗ ಮೂಡುದಿಕ್ಕಿಲಿ ಸೂರ್ಯಂದೆ ಹುಟ್ಟಿ ಬೆಶಿಲು ಬೀಳ್ಲೆ ಸುರು ಆತು. ಕಸ್ತಲಪ್ಪಗ ಇಡೀ ತೋಟಲ್ಲಿ ಅಡಕ್ಕೆ ಮರದ ಮೇಲೆ ಬಿದ್ದ ಮೈಂದು “ಟಪ್ ಟಪ್” ಹೇಳಿ ನೀರಿನ ಹನಿ ಹನಿ ಆಗಿ ಕೇಳ ಬೀಳ್ತಾ ಇದ್ದು. ಗುರ್ಮೆ ಹತ್ತರೆ ಎತ್ತಿ ಅಪ್ಪಗ ಎಂಕಣ್ಣಂಗೆ ತ್ಯಾಂಪ ಸೆಟ್ಟಿಯ ನೆಂಪಾತು. ಪಾಪ ಮುದುಕ್ಕ°, ಅಷ್ಟು ಎತ್ತರಂದ ಕೆಳ ಬೀಳುವಗ ಹೇಂಗಾದಿಕ್ಕು… ಗುರ್ಮೆ ಕರೆಲಿ ಪೇರಳೆ ಮರದ ಬುಡಲ್ಲಿ ನಿಂದು ಒಂದು ಸಲ ಕೆಳಂಗೆ ಇಣ್ಕಿದ°… ಮತ್ತೆ ಮೇಲಂಗೆ ಬರೆಯ ಎತ್ತರವ ನೋಡಿದ°…
ಮೇಲೆ ಪೇರಳೆ ಮರದ ಗೆಲ್ಲುಗ ಹಬ್ಬಿದ್ದು… ಹಣ್ಣು ಹಣ್ಣು ಎಲೆಗ ಹಳದಿ ಬಣ್ಣಲ್ಲಿ ಉದಿಯಪ್ಪಗಾಣ ಸೂರ್ಯನ ಬೆಶಿಲಿಲಿ ಹೊಳೆತ್ತಾ ಇದ್ದು. ಇದ್ದಕ್ಕಿದ್ದ ಹಾಂಗೆ ಎಂಕಣ್ಣಂಗೆ ಪೇರಳೆ ಮರದ ಗೆಲ್ಲಿಲಿ, ಸೂರ್ಯನ ಬೆಶಿಲಿಂಗೆ ಎಂತದೋ ಹೊಳದ ಹಾಂಗೆ ಕಂಡತ್ತು. ಬಹುಷ ನೀರಿನ ಹನಿ ಇಕ್ಕು ಹೇಳಿ ಗ್ರೇಶಿದ°. ಆದರೆ ಪುನ ಹಣೆಗೆ ಕೈ ಮಡುಗಿ ನೋಡಿದ°… ಅಲ್ಲ… ನೀರಿನ ಹನಿ ಅಲ್ಲ… ಬೇರೆ ಎಂತದೋ ಇದ್ದ ಹಂಗೆ ಕಂಡತ್ತು. ಎಂತ ಇಕ್ಕು?
ತೋಟಲ್ಲಿ ಒಂದು ಉದ್ದದ ಬೆದುರಿನ ಕೊಕ್ಕೆ ಇದ್ದು… ಎಂತಾರು ಕೊಯ್ವಲೆ ಬೇಕಾರೆ ಹೇಳಿ ಮಡುಗಿದ್ದು. ಹೋಗಿ ಅದರ ತೆಕ್ಕೊಂಡು ಬಂದ°. ಪೇರಳೆ ಮರದ ಆ ಗೆಲ್ಲಿಂಗೆ ಕೊಕ್ಕೆ ಸಿಕ್ಕುಸಿ ರಪಕ್ಕ ಎಳದ°. ಆ ಗೆಲ್ಲಿಂಗೆ ಸಿಕ್ಕಿ ಹಾಕಿಕೊಂಡಿತ್ತ ವಸ್ತು ಟಪ್ಪನೆ ಎಂಕಣ್ಣನ ಕಾಲಿನ ಬುಡಕ್ಕೆ ಬಂದು ಬಿದ್ದತ್ತು. ಎಂತದದು?

ಅದೊಂದು “ಚೈನು!!!”

ಎಂಕಣ್ಣ ಅದರೆ ಕೈಲಿ ಎತ್ತಿ ನೋಡಿದ°. ಅಪ್ಪು ಅದೊಂದು ಚೈನು! ಚಿನ್ನದ ಚೈನು! ಒಳ್ಳೆತ ಭಾರ ಇದ್ದು. ಪವನಿನ ಮಾಲೆಯ ಹಾಂಗೆ ಕಾಣ್ತು. ಸಣ್ಣ ನಾಣ್ಯದ ಹಾಂಗಿಪ್ಪ ಪದಕಂಗೋ… ಉದ್ದ ಇದ್ದು… ಎಷ್ಟಿಕ್ಕು..? ಕಮ್ಮಿಲಿ ಹತ್ತು ಹನ್ನೆರಡು ಪವನಿಂಗೆ ಕಂಡಿತಾ ಕಮ್ಮಿ ಇರ.

ಅದೇಂಗೆ ಅಲ್ಲಿ ಬಂತು? ತ್ಯಾಂಪ ಸೆಟ್ಟಿ ಅದರ ಹೆಂಡತ್ತಿಯ ಚಿನ್ನ ಎಲ್ಲ ಅದರ ಚಡ್ಡಿ ಕಿಸೆಲಿ ಹಾಕಿಕೊಂಡು ತಿರುಗಿಗೊಂಡು ಇತ್ತದು ನಿಂಗೊಗೆ ಗೊಂತಿದ್ದಲ್ಲದಾ? ಅದು ಗುರ್ಮೆಗೆ ಬೀಳುವಗ ಈ ಚೈನು ಅದರ ಕಿಸೆಂದ ರಟ್ಟಿ ಪೇರಳೆ ಮರದ ಗೆಲ್ಲಿಂಗೆ ಸಿಕ್ಕಿ ಹಾಕಿಕೊಂಡದು. ಆ ದಿನ ಆರುದೇ ಪೇರಳೆ ಮರ ಹತ್ತಿ ನೋಡಿದ್ದವಿಲ್ಲೆ. ಆರ ಕಣ್ಣಿಂಗೂ ಅದು ಕಂಡಿದಿಲ್ಲೆ. ಅದರ ಚಡ್ಡಿಲಿ ಇತ್ತಿದ್ದ ಬೇರೆ ಚಿನ್ನವ ಎಲ್ಲ ಸಬ್ಬಿನಿಸ್ಪೇಟಂದೆ ಅದರ ಚೇಲಂಗಳುದೆ ಒಳ ಹಾಕಿದ್ದವು. ಇದು ಅವರ ಕಣ್ಣಿಂಗೆ ಬಿದ್ದಿದಿಲ್ಲೆ. ಈಗ ಎರಡು ತಿಂಗಳು ಕಳುದು ಎಲೆ ಹಣ್ಣಾಗಿ ಬಿದ್ದಪ್ಪಗ ಅದು ಎಂಕಣ್ಣನ ಕಣ್ಣಿಂಗೆ ಈಗ ಕಂಡತ್ತು.
——————————————————————–
ಎಂದಿನಂತೆ ಬೇತಾಳನು ವಿಕ್ರಮಾದಿತ್ಯನ ಶವವನ್ನು ಹೆಗಲಿಗೆ….. ಅಲ್ಲ.. ಅಲ್ಲ..ತಪ್ಪಿತ್ತು…. ವಿಕ್ರಮಾದಿತ್ಯನು ಬೇತಾಳನ ಶವವನ್ನು…. ಇಲ್ಲೆ… ಪುನಾ ತಪ್ಪಿತ್ತು…. ಎಂದಿನಂತೆ ವಿಕ್ರಮಾದಿತ್ಯನು ಮರದಲ್ಲಿ ನೇತಾಡುತ್ತಿದ್ದ ಶವವನ್ನು ಹೆಗಲಿಗೇರಿಸಿ ದಕ್ಷಿಣಾಭಿಮುಕವಾಗಿ ನಡೆಯತೊಡಗಿದನು. ಆಗೆ ಶವದಲ್ಲಿ ಸೇರಿಕೊಂಡಿದ್ದ ಬೇತಾಳನು “ಎಲೈ ರಾಜನೇ… ನೀನು ಯಾಕಾಗಿ ಇಷ್ಟು ಕಷ್ಟ ಪಡುತ್ತಿದ್ದೀಯೋ ಎಂದು ನನಗೆ ಅರ್ಥವಾಗುತ್ತಿಲ್ಲ. ಆದಾಗ್ಯೂ ನಿನಗೆ ಮಾರ್ಗಾಯಾಸವಾಗಂತೆ ಒಂದು ಕಥೆಯನ್ನು ಹೇಳುವೆನು, ಕೇಳು” ಎಂದು ಶವವನ್ನು ಹೊತ್ತು ನಡೆಯುತ್ತಿದ್ದ ವಿಕ್ರಮಾದಿತ್ಯ ರಾಜನಿಗೆ ಈ “ಚೈನು” ಎಂಬ ಕತೆಯನ್ನು ವಿಶದವಾಗಿ ಹೇಳಿದನು. ಎಲ್ಲ ಕತೆಯನ್ನೂ ಹೇಳಿದ ಅನಂತರ “ಎಲೈ ರಾಜನೇ, ಈ ಕತೆಯ ಅಂತ್ಯದಲ್ಲಿ ನನಗೊಂದು ಸಂಶಯವು ಕಾಡುತ್ತಿದೆ. ಅದೇನೆಂದರೆ ಈಗ ಎಂಕಣ್ಣನಿಗೆ ಅನಾಯಾಸವಾಗಿ ಒಂದು ಚೈನು ದೊರಕಿದೆ. ಎಂಕಣ್ಣನು ಈ ಚೈನನ್ನು ಏನು ಮಾಡಬೇಕು? ಇದನ್ನು ತ್ಯಾಂಪಸೆಟ್ಟಿಯ ಮಕ್ಕಳಿಗೆ ನೀಡಬೇಕೇ? ತ್ಯಾಂಪಸೆಟ್ಟಿಯ ಯಾವುದೇ ವಸ್ತುಗಳೂ ತಮಗೆ ಬೇಡವೆಂದು ಅವರು ನಿರ್ದರಿಸಿ, ತ್ಯಾಂಪಸೆಟ್ಟಿಯ ಬೊಜ್ಜವನ್ನೂ ಸಹಾ ಮಾಡದೆ ಆತನಿಗೆ ಸದ್ಗತಿಯು ಸಿಗದಂತೆ ಮಾಡಿದ್ದಾರೆ.
ಪೋಲೀಸರಿಗೆ ತಲುಪಿಸಬೇಕೆ? ಅವರು ಅದನ್ನು ಒಳಗೆ ಹಾಕಿಯೇ ಹಾಕುತ್ತಾರೆ…. ಎಂಕಣ್ಣನೇ ಇರಿಸಿಕೊಳ್ಳಬಹುದೇ? ಹಾಗೆ ಇರಿಸಿಕೊಂಡಲ್ಲಿ ಪರರ ವಸ್ತುವನ್ನು ಇರಿಸಿಕೊಂಡಂತಾಗುವುದಲ್ಲವೇ? ನೈತಿಕವಾಗಿ ಇದು ಸರಿಯೇ? ರಾಜನೇ, ನನ್ನ ಈ ಸಂಶಯಕ್ಕೆ ನೀನು ಸರಿಯಾದ ಉತ್ತರವನ್ನು ತಿಳಿದಿದ್ದೂ ಹೇಳದೇ ಹೋದಲ್ಲಿ ಬೋಚಬಾವನ ಎಲೆಯಲ್ಲಿ ಹಾಕಲ್ಪಟ್ಟ ಲಾಡು ಯಾವ ರೀತಿಯಲ್ಲಿ ಪುಡಿ ಪುಡಿಯಾಗುವುದೋ ಅದೇ ರೀತಿ ನಿನ್ನ ತಲೆಯೂ ಪುಡಿ ಪುಡಿಯಾದೀತು” ಎಂದು ಎಚ್ಚರಿಸಿದನು.
——————————————————————-
ವಿಕ್ರಮಾದಿತ್ಯ ಎಂತ ಉತ್ತರ ಕೊಟ್ಟಿದ° ಹೇಳಿ ಎನಗೊಂತಿಲ್ಲೆ….. ಆದರೆ ನಿಂಗ ಉತ್ತರ ಎಂತ ಹೇಳ್ತಿ?
————————————————————————
ಎಂಬಲ್ಲಿಗೆ ಈ “ಚೈನು” ಎಂಬ ಪುರಾಣ ಪುಣ್ಯ ಕಥಾಶ್ರವಣವು ಮುಗಿದುದು. ಈಷ್ಟರವರೆಗೆ ಈ ಕತೆಯ ಓದಿ ಒಪ್ಪ ಕೊಟ್ಟವಕ್ಕೂ, ಕಥೆಯ ಓದಿಯೂ, ಒಪ್ಪ ಕೊಡದ್ದೆ ಹಾಂಗೇ ಅತ್ಲಾಗಿ ಪದ್ರಾಡು ಹೆಟ್ಟಿದವಕ್ಕೂ ಅನಂತಾನಂತ ಧನ್ಯವಾದಂಗೋ.
ಒಪ್ಪ ಕೊಡದ್ದೋರು ಇನ್ನಾದರೂ ಒಪ್ಪ ಕೊಟ್ಟರೆ ಆನು ಕಥೆ ಬರದ್ದಕ್ಕೆ ಧನ್ಯ….. ಒಪ್ಪಣ್ಣ ಕೇಳಿತ್ತೋ? (ಇಷ್ಟು ಕಂತು ಬಂದರೂ ಒಪ್ಪಣ್ಣನ ಒಪ್ಪ ಬೈಂದಿಲ್ಲೆ….)

32 thoughts on “ಚೈನು- ಭಾಗ ಹನ್ನೊಂದು

  1. ಚೈನು ಎಂತಾತು ಹೇಳುದು ಯಕ್ಶ್ಹಪ್ರಶ್ನೆ ಅಲ್ಲ… ಸಿಕ್ಕಿದ ಚೈನಿನ ಎಂತ ಮಾಡೆಕ್ಕು ಹೇಳುದು ಬೇತಾಳ ಪ್ರಶ್ಣೆ…. 😉

  2. ಶ್ಯಾಮಣ್ಣ,
    ಕಥೆ ಲಾಯಿಕಾಯಿದು. ಚೈನು ಎಂತಾತು ಹೇಳುದು ಯಕ್ಶ್ಹಪ್ರಶ್ನೆಯೋ?

    1. ಹಹ… ಎಂಕಣ್ಣಂಗೆ ಸಿಕ್ಕಿದ್ದು ಹತ್ತು- ಹನ್ನೆರಡು ಪವನಿನ ಚೈನು ಭಾವ… ನಿಂಗೊಗೆ ಸಿಕ್ಕಿದ್ದು ಹನ್ನೊಂದು ಪವನಿಂದು… 🙂
      ಹತ್ತು – ಹನ್ನೆರಡು ಹೇಳಿರೆ “ಹತ್ತಾಗಿ ಹನ್ನೆರಡು” ಹೇಳುದರ ತುಳುವಿಲಿ ಹೇಳಿದಾಂಗೆ ಅಲ್ಲ…. 😉

  3. ಚೈನು ಮುಗುದತ್ತೋ….
    ಛೆ…
    ಕಥೆ ಇಷ್ಟು ಬೇಗ ಮುಗುದತ್ತೋ ಹೇಳಿ ಅನುಸುತ್ತಾ ಇದ್ದು.
    ಕಾದಂಬರಿ ಓದದ್ದೆ ಸುಮಾರು ಸಮಯ ಆಗಿದ್ದತ್ತು,
    ಈ ಕಥೆ ಧಾರಾವಾಹಿಯ ಹಾಂಗೆ ಬಂದ ಕಾರಣ ಓದುಸಿಗೊಂಡು ಹೋತು.
    ಕೊಶಿ ಆತು ಶ್ಯಾಮಣ್ಣಾ, ಒಳ್ಳೆ ಒಂದು ಕಥೆ ಕೊಟ್ಟದಕ್ಕೆ ಥ್ಯಾಂಕ್ಸ್.
    ಇನ್ನೂ ಹೀಂಗಿಪ್ಪ ಒಳ್ಳೆ ಒಳ್ಳೆ ಕಥೆಗೊ ಬತ್ತಾ ಇರಳಿ…

    1. ಒಪ್ಪ ಕೊಟ್ಟದಕ್ಕೆ ತ್ಯಾಂಕ್ಸ್… ಹಾಂಗೇ ಹರಿಕೃಷ್ಣ ಭರಣ್ಯರಿಂಗೆ ಇನ್ನು ಪ್ರಿಂಟು ತೆಗದು ಕೊಡ್ಳಕ್ಕದಾ… ಅವರ ಪ್ರತಿಕ್ರಿಯೆ ಬಗ್ಗೆ ಕುತೂಹಲ ಇದ್ದು….

  4. ನಿಂಗಳ ಒಪ್ಪ ಲಾಯ್ಕಿದ್ದು…. ನಿಂಗ ಎಲ್ಲ ಸೇರಿಕೊಂಡು ಎಂಕಣ್ಣಂಗೇ ಚೈನು ಕೊಡೆಕ್ಕು ಹೇಳಿ ತೀರ್ಮಾನ ಮಾಡಿರೆ ಎನ್ನದೆಂತ ಅಬ್ಯಂತರ ಇಲ್ಲೆ… 🙂
    (ಶ್ಯಾಮಣ್ಣ ಆದರೆ ಎಂತ ಹೇಳುವಿ … ?) ಇದು ವಿಕ್ರಮಾದಿತ್ಯ ಬೇತಾಳನ ಹತ್ತರೆ “ನಿನ್ನ ಉತ್ತರ ಎಂತ?” ಹೇಳಿ ತಿರುಗಿ ಕೇಳಿದ ಹಾಂಗೆ ಆತು… 🙂

  5. ಆರ್ಥಿಕ ವ್ಯವಹಾರವ ಬಿಟ್ಟು ೫೦ ವರ್ಷದ ಹಿಂದಾಣ ಚಿತ್ರಣ ಹೆಚ್ಹಿನ ಕಡೆಲಿ ವ್ಯಕ್ತ ಆಯಿದು .
    ಆನು ವೆಂಕ್ಕಣ್ಣನ ಸ್ಥಾನಲ್ಲಿತ್ತಿದ್ದರೆ ನೈತಿಕವಾಗಿ ಚೈನು ಮಡಿಕ್ಕೊoಬದು ಸರಿ ಅಲ್ಲ ಹೇಳಿ ರಾಮಣ್ಣನತ್ತರೆ ಎಂತ ಮಾಡ್ಲಕ್ಕು ಹೇಳಿ ಕೇಳ್ತಿತೆ . ಅದೇ , ರಾಮಣ್ಣನ ಸ್ಥಾನಲ್ಲಿದ್ದರೆ ವೆಂಕಣ್ಣ ಕೇಳುವಾಗ , ಅದರ ನೀನೆ ನಿನಗೆ ಬೇಕಾದ ಹಾಂಗೆ ಉಪಯೊಗಿಸಿಗೊ ; ಬೇರೆ ಆರಿ೦ಗೂ ಗೊಂತಾಗದ್ದ ಹಾಂಗೆ ನೋಡಿಗೊ . ಪೋಲಿಸುಗೊಕ್ಕೆ ಕೊಟ್ಟರೆ ಅವು ಅದನ್ನೇ ಮಾಡುದು . ನಿನ್ನದಲ್ಲದ್ದ ತಪ್ಪಿಂಗೆ ನೀನು ಬೇಕಾದಷ್ಟು ಕಷ್ಟ ಬಯಿಂದೆ .ಭಗವಂತ (ತ್ಯಾಂಪ ) ನಿನಗೆ ಕರುಣಿಸಿದ ”ಶಾದಿ ಭಾಗ್ಯ” ಹೇಳಿ ತಿಳ್ಕೊ ಹೇಳ್ತಿತೆ .
    ಶ್ಯಾಮಣ್ಣ ಆದರೆ ಎಂತ ಹೇಳುವಿ … ?

  6. ಶ್ಯಾಮಣ್ಣಾ ….. ನಿಂಗಳ ಕಥಾ ಶೈಲಿ ತುಂಬಾ ಲಾಯ್ಕಿದ್ದು…
    ಎನ್ನ ಪ್ರಕಾರ ವೆಂಕಣ್ಣ ಸಿಕ್ಕಿದ ಚೈನಿಲಿ ಅವಂಗೆ ಅಗತ್ಯ ಇಪ್ಪ ೬ ಪವನಿನ ಮಗಳಿಂಗೆ ತೆಗದು ಕೊಟ್ಟು ಒಳುದ್ದದರ ಆ ಊರಿನ ಗ್ರಾಮದೇವತೆಗೆ ಕಾಣಿಕೆ ಮಾಡ್ಯೊಂಡು ಬೈಲಿನ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತ….
    ಎಂತ ಹೇಳ್ತಿ? 🙂

  7. ಚೈನಿನ ಎಂತ ಮಾಡಿದ? ಬೇತಾಳನ ಪ್ರಶ್ನೆಗೆ ಉತ್ತರ ಎಂತರ? ಇದರ ಹೊರತಾಗಿ ಎನ್ನ ಒಪ್ಪ. ಎಂತಗೆ ಹೇಳಿರೆ ಬೇತಾಳಂಗೆ ಸಮಾಧಾನ ಆಗದ್ದರೆ ಎನ್ನ ತಲೆ ಹೋಕು !!!
    ಶ್ಯಾಮಣ್ಣ ೧೧ ಕೊಂಡಿ ಹಾಕಿ ಚೈ ನೇಯ್ದದು ಭಾರೀ ಲಾಯಿಕ ಆಯಿದು.
    ಪ್ರತಿಯೊಂದು ಕಂತನ್ನೂ, ಒಂದು ಕುತೂಹಲ ಘಟ್ಟಲ್ಲಿ ನಿಲ್ಲುಸಿ, ಮುಂದೆಂತಾತು ಹೇಳಿ ಕಾಯ್ತ ಹಾಂಗೆ ಮಾಡಿದವು.
    ಕತೆಯೊಳ ಪೂರಕವಾದ ಉಪಕಥೆ, ಮತ್ತೆ ಪ್ರತಿಯೊಂದು ಘಟನೆಯನ್ನೂ ಸೂಕ್ಷ್ಮವಾಗಿ ವಿವರಿಸಿ ನಿರೂಪಣೆ ಕೊಶೀ ಕೊಟ್ಟತ್ತು.
    ನಮ್ಮ ಭಾಷೆಲಿ ಸದ್ಯಕ್ಕೆ ಬಳಕೆಲಿ ಇಲ್ಲದ್ದ ಕೆಲವು ಶಬ್ದಂಗಳ ಪರಿಚಯ ಕೂಡಾ ಆತು.
    ಕತೆಯ ಎಡೆಕ್ಕಿಲಿ ಕತೆಗಾರ ತಾನು ಇದ್ದೆ ಹೇಳಿ ತೋರಿಸಿದ ಶೈಲಿ ಒಳ್ಳೆದಾಯಿದು.
    ಒಟ್ಟಾರೆ ಒಳ್ಳೆ ಅನುಭವ ಕೊಟ್ಟ ಕಥಾ ಪ್ರಸಂಗ.

    1. ಶರ್ಮಪ್ಪಚ್ಚಿಯ ಒಪ್ಪಕ್ಕೆ ಧನ್ಯವಾದಂಗೋ.
      (ಬೇತಾಳನ ಪ್ರಶ್ನೆಗೆ ಉತ್ತರ ಎಂತರ? ಇದರ ಹೊರತಾಗಿ)
      ಎಂತ? ಹೆದರಿದಿರೋ ಹೇಂಗೆ? ಬೇತಾಳ ಎಚ್ಚರಿಕೆ ಕೊಟ್ಟದು ವಿಕ್ರಮಾದಿತ್ಯಂಗೆ ಮಾಂತ್ರ ಆತಾ… 🙂

  8. ಹ.ಹಾ.. ಅಕೇರಿಯವರೆಗೆ ಸ್ವಾರಸ್ಯಲ್ಲಿ ಓದುಸಿದವು ಶ್ಯಾಮಣ್ಣ.
    ಈ ವೆ೦ಕಣ್ಣ೦ಗೆ ತನ್ನ ತೋಟಲ್ಲಿ ಮರದ ಗೆಲ್ಲಿಲಿ ಬೆಳದು ನಿ೦ದ ಫಲವ ಕೊಯ್ವ ಹಕ್ಕಿಲ್ಲೆಯೋ? ಅದು ಪೇರಳೆಯೋ,ಅಡಕ್ಕೆಯೋ,ತೆ೦ಗಿನಕಾಯಿಯೋ ಅಲ್ಲ ಪವನಿನ ಮಾಲೆಯೋ..
    ಅ೦ತೂ ಚಿನ್ನ ಬೆಳೆತ್ತ ತೋಟ ಹೇಳಿ ಆತನ್ನೆ.
    ಮು೦ದಾ..

    1. ಇದ್ದಪ್ಪ ಇದ್ದು…. ಫಲವ ಕೊಯ್ವ ಹಕ್ಕು ಎಂಕಣ್ಣಂಗೆ ಕಂಡಿತಾ ಇದ್ದು…. 🙂
      (ಮು೦ದಾ..)
      ಎನ್ನ ಎಂತ “ರಾಮ -ಶಾಮ -ಭಾಮ”ದ ಕಮಲಹಾಸನು ಹೇಳಿ ತಿಳ್ಕೊಂಡಿರೋ ಹೇಂಗೆ?

  9. ಅಪ್ಪಟ ಬಂಗಾರದ್ದೇ ಆ ” ಚೈನು”! ಹಾಂಗಾದ ಕಾರಣ ಕೊಕ್ಕೆಲಿ ಎಳದು ತೆಗವಾಗಲುದೇ ಕಡುದ್ದಿಲ್ಲೆ , ಆ ಎಂಕಣ್ಣನ ಪುೞಿಯ ಮದುವೆಗೆ ಸತ್ಯಣ್ಣಂದೇ ಅಡಿಗೆ ಆಡ! ಹೇಳಿಕೆ ಇತ್ತು. ಹೋಪಲೆ ಎಡಿಗಾಯಿದಿಲ್ಲೆ!
    *ಎಬ್ಬೋ! ಶಾಮಣ್ಣನೇ ! ಕತೆ ಭಾರೀ ಲಾಯಕ್ಕಾಯಿದು ಮಿನಿಯಾ….ಇನ್ನಾಣದ್ದು ಕಾದಂ… ..ಬರಿಯೋ?

    1. “ಚೈನು” ಹೇಳಿ ಕತೆಗೆ ಎಂತಕೆ ಹೆಸರು ಮಡುಗಿದ್ದು ಹೇಳಿ ಬಾಲಣ್ಣಂಗೆ ಅಂದಾಜಾತಿದ…. 🙂

  10. ಸವಿತಂಗೆ ಕೋಪ ಬಂದ ಮೋರೆಯ ಕಂಡು ಗಣೇಶ ಲವ್ವು ಮಾಡ್ಳೆ ಸುರು ಮಾಡಿದ್ದು, ಮಗಂಗೂ ಅಪ್ಪಂಗೂ ಮದುವೆ ವಿಷಯಲ್ಲಿ ಲಡಾಯಿ ಆದ್ದದು, ಪೈಸೆ ಹೊಂದುಸಲೆ ಎಂಕಣ್ಣ ತಲೆ ಬೆಶಿ ಮಾಡಿದ್ದು ಎಲ್ಲವುದೆ ನೈಜವಾಗಿ ಬಯಿಂದು. ಎಡೆಲಿ ಸತ್ಯಣ್ಣನ ಜನ್ಮಕತೆಯುದೆ ಚೈನಿಂಗೆ ಲಿಂಕಾದ್ದು ಲಾಯಕಿತ್ತು. ಇನ್ನು ಬೇತಾಳನ ಪ್ರಶ್ಣೆಗೆ ಉತ್ತರ ಕೊಡ್ತರೆ, ಚೈನಿನ ಸವಿತಂಗೆ ಉಡುಗೊರೆ ಕೊಟ್ಟರೆ ತಪ್ಪಿಲ್ಲೆ. ಆ ತ್ಯಾಂಪಣ್ಣನಿಂದಾಗಿ ಎಂಕಣ್ಣಂಗೆ ಎಷ್ಟು ಪಜೀತಿ ಆಯಿದು, ಎಷ್ಟು ಕಷ್ಟ ಆಯಿದು. ಪೋಲೀಸಿಂಗೆ ಕೊಡ್ಳೆ
    ಎಷ್ಟು ಖರ್ಚು ಮಾಡೆಕಾಗೆ ಬಯಿಂದು. ಎಲ್ಲ ನೋಡಿರೆ, ಎಲ್ಲೋರು ಮರದು ಬಿಟ್ಟ, ಲೆಕ್ಕಕ್ಕೆ ಸಿಕ್ಕದ್ದ ಆ ಚೈನು ಎಂಕಣ್ಣಂಗೆ ಒಂದು
    ಸತ್ಕಾರ್ಯ ಮಾಡ್ಳೆ , ಒಳ್ಳೆ ಉಪಯೋಗಕ್ಕೆ ಸಿಕ್ಕುತ್ತ ಹಾಂಗಾತಾನೆ. ದೈವಾನುಕೂಲ ಹೇಳಿ ಇದಕ್ಕೇ ಹೇಳುವನೋ ?

    1. ಆಂತೂ ನಿಂಗ ಎಲ್ಲ ಸೇರಿಕೊಂಡು ಚೈನು ಎಂಕಣ್ಣಂಗೆ ಸೇರೆಕ್ಕು ಹೇಳಿ ಠರಾವು ಪಾಸು ಮಾಡಿದಾಂಗೆ ಕಾಣ್ತನ್ನೇ…. 🙂

  11. ಅಂತೂ ಅಡಿಗೆ ಸತ್ಯಣ್ಣ ನ ಜಾತಕಲ್ಲಿ ಇದ್ದ ಹಾಂಗೆ ಆವ್ತಾ ಇದ್ದು!! ಬೈಲಿಲಿ ಹೆಸರು ರೈಸುತ್ತಾ ಇದ್ದು ಇದಾ!!
    ಎಂಕಣ್ಣ ಟೇಶನ್ಂಗೆ ಹೋದರೂ, ಈಗ ಚೈನು ಸಿಕ್ಕಿ ಎಲ್ಲವೂ ಸುಖಾಂತ್ಯ!!! ಆಗಲಿ!
    ಧನ್ಯವಾದ ಶ್ಯಾಮಣ್ಣ!

    1. ನಿಂಗೊಗೂ ಧನ್ಯವಾದಂಗ…. ಕತೆ ಓದಿದ್ದಕ್ಕೂ, ಒಪ್ಪ ಕೊಟ್ಟದಕ್ಕೂ….

  12. ತ್ಯಾಂಪಶೆಟ್ಟಿಗೆ ಯಾವುದೋ ಒಂದು ಋಣಸಂದಾಯ ಮಾಡ್ಳೆ ಇದ್ದಿಕ್ಕು ಎಂಕಣ್ಣನ ಹತ್ತರೆ- ಅಲ್ಲದ್ರೆ ಇವನ ತೋಟದ ಗುರ್ಮೆಗೆ ಬಂದು ಬೀಳೆಕ್ಕೋ ಅದು. ಅದೂ ಅಲ್ಲದ್ದೆ ಬೀಳುವಾಗ ಚೈನು ಮರಕ್ಕೆ ಸಿಕ್ಕಿಹಾಕಿಗೊಂಡತ್ತನ್ನೆ. ಇವಂಗೆ ಬೇಕಾಗಿಯೇ ಅದು ಮರಲ್ಲಿ ಒಳುದ್ದು- ಕೆಳ ಬಿದ್ದಿದ್ದರೆ ಪೋಲೀಸರು ಲಪಟಾಯಿಸುತ್ತಿದ್ದವು. ತ್ಯಾಂಪಶೆಟ್ತಿಯ ಮನೆಯವಕ್ಕಾಗಲೀ ಪೋಲೀಸಿನವಕ್ಕಾಗಲೀ ಆ ಚೈನಿನ ತೆಕ್ಕೊಂಬ ಅರ್ಹತೆ ಇಲ್ಲೆ. ಪೇರಳೆಹಣ್ಣಿನ ಮರಂದ ಪೇರಳೆ ಕೊಯ್ದ ಹಾಂಗೆ ಈ ಚೈನನ್ನೂ ಎಂಕಣ್ಣ ಕೊಯ್ಕೊಂಡದು ಅಷ್ಟೆ. ಪೇರಳೆ ಹೇಂಗೆ ಅವಂದೊ ಹಾಂಗೆ ಚೈನೂ ಅವಂದೇ ಆತು. ಅದನ್ನೆ ಮಗಳಿಂಗೆ ಕೊಡ್ಳೆ ಮನಸ್ಸಿಲ್ಲದ್ದರೆ ಅದರ ಮಾರಿ ಬೇರೆ ಚೈನು ತೆಕ್ಕೊಂಡ್ರಾತನ್ನೆ. ಬೇತಾಳಂಗೆ ಈ ಉತ್ತರ ಸಮಾಧಾನ ಕೊಡುಗೋ?
    ಹೊಡಿಯಾಗದ್ದೆ ಒಳುದ ವಿಕ್ರಮಾದಿತ್ಯನ ತಲೆಗೆ ಹುಳು ಬಿಡ್ಳೆ ಇನ್ನೊಂದು ಕಥೆಯ ಬೇತಾಳ ರೆಡಿಮಾಡಿ ಆಯಿದೋ? ಅಲ್ಲ, ಮತ್ತೆ ಮರಲ್ಲಿ ಕೂದುಗೊಂಡು ಆಲೋಚನೆ ಮಾಡಿ ಆಯೆಕ್ಕಷ್ತೆಯೋ?

    1. ಇಂದಿರತ್ತೆ ಹೇಳುದೂ ಸರಿಯೇ ಆದರೂ ಪೇರಳೆ ಮರಲ್ಲಿ ಚಿನ್ನದ ಚೈನು ಬೆಳೆತ್ತು ಹೇಳಿರೆ ಆರಾದ್ರೂ ಎಂತ ಹೇಳುಗು?
      ಇದಾ… ಬೇತಾಳಂಗೆ ಸರಿ ಉತ್ತರ ವಿಕ್ರಮಾದಿತ್ಯ ಕೊಟ್ಟರೆ ಬೇತಾಳ ವಾಪಾಸು ಹೋಗಿ ಮರಲ್ಲಿ ಹೋಗಿ ನೇಲುಗು… ಹಾಂಗೆ ನೇತರೆ ಮುಂದಾಣ ಕತೆಗೆ ರೆಡಿ ಆತು ಹೇಳಿ ಲೆಕ್ಕ…

  13. ಆ ಚೈನಿನ ಎಂಕಣ್ಣ ಸವಿತನ ಮದುವೆ ದಿನ ಉಡುಗೊರೆ ಮಾಡಿ ಒಪ್ಪಿದ ಮಾತಿನಾಂಗೆ ನಡಕ್ಕೊಂಡ. ಪರರ ವಸ್ತುವಿನ ಮಡಿಕ್ಕೊಂಡ ಪಾಪವೂ ತಟ್ಟಿದ್ದಿಲೆ, ಅಪಾತ್ರರಿಂಗೆ ದಾನ ಮಾಡಿದ ದೂರೂ ಬಯಿಂದಿಲೆ. ಎನ್ನ ತಲೆ ಬೋಚಭಾವನ ಎಲೆಲಿಪ್ಪ ಲಾಡೊ ಆಯಿದಿಲ್ಲೆ. – ಈ ಉತ್ತರಕ್ಕೆ ಆ ಜೋಯಿಶರು ಎಂತ ಹೇಳ್ತವು..?

    1. ಪರರ ವಸ್ತುವಿನ ಮಗಳಿಂಗೆ ಉಡುಗೊರೆ ಮಾಡಿರೆ ಅದು ಸ್ವಾರ್ಥ ಆತಿಲ್ಯೋ ಭಾವ?

      1. ಅಲ್ಲ… ಎಂಕಣ್ಣ ಎಂತ ಮಾಡಿದನೋ ಎನಗಂತೂ ಗೊಂತಿಲ್ಲೆ… ಆದರೆ ಬೇತಾಳನ ಪ್ರಶ್ಣೆಗೆ ಅದು ಸರಿಯಾದ ಉತ್ತರ ಅಕ್ಕೋ? ಎನಗೆ ಸಂಶಯ ಇದ್ದು….

  14. ಅಂತೂ ಈ ಕತೆ ಸತ್ಯಣ್ಣನ ಬುಡಕ್ಕೆ ಬಂದು ನಿಂದತ್ತು. ಭಾರೀ ಲಾಯ್ಕ ಆಯಿದು ಚೈನು. ಇನ್ನೊಂದು ಕತೆಯ ನಿರೀಕ್ಷೆಲಿ ಇದ್ದೆ.

    1. ಎಲ್ಲ ಸರಿ ಗೋಪಾಲ ಭಾವ… ಆದರೆ ಬೇತಾಳನ ಪ್ರಶ್ಣೆಗೆ ಉತ್ತರ ಎಂತ?

  15. ಇದು ಕತೆ ಸುಮಾರು ಐವತ್ತು ವೊರುಶಾಣ ಮದಲಾಣದ್ದು ಹೇದಮತ್ತೆ ಬದಿ ಕೊಡ್ತ ತೆಕ್ಕೊಳ್ತ ವಿಷಯಲ್ಲಿ ಬಾಯೆಂತುವಾಂಗೆ ಇಲ್ಲೆ. – ಚಿತ್ರಣ ಪಷ್ಟಾಯ್ದು.
    ಶ್ಯಾಮಣ್ಣ… ಆ ಪಚ್ಚೆ ಕೆಬಿಟಿ ಬಸ್ಸಿನ ಕೆಂಪು ಕಣ್ಣಡಕದ ಸಪೂರ ಕುಳ್ಳ ಎಲೆಚಕ್ಕ ಮಣಿಯಾಣಿ ಡ್ರೈವರನ ಗೋಷ್ಟಿ ಮಾಡಿದ್ದಿಲ್ಲೀರಾ ನಿಂಗ!!
    ಹೋ!ಹೋ!! ಸತ್ಯ° ಹೇದರೆ ಅವನೆಯೋ!!! ಸಮ ಸಮ. ಗ್ರೇಶಿದೆ… ಎಂತ ಇದು ಅಡಿಗೆ ಮಾಲಿಂಗಣ್ಣನ ಮನಗೆ ಹೋವ್ತ ಮಾರ್ಗ ಅಡಿಗೆ ಸತ್ಯಣ್ಣನಲ್ಲಿಗೆ ಹೋವ್ತಾಂಗೆ ಇದ್ದನ್ನೇದು!!
    ಎಲ! ಚೈನು ಎಲ್ಲಿಂದ ಎಲ್ಲಿಗೆ ಜೋಡಿತ್ತಪ್ಪೋ !
    😀 ಬೇತಾಳ ವಿಕ್ರಮಾದಿತ್ಯ ರೈಸಿದ್ದು
    ಶ್ಯಾಮಣ್ಣೋ ಚೈನು ಅಕೇರಿಗೆ ಚೋದ್ಯವನ್ನೇ ಉಂಟುಮಾಡಿತ್ತನ್ನೇ!! ಎಂತ ಮಾಡುಸ್ಸಪ್ಪ! ಆರಿಂಗೂ ಹೇಳದ್ದೆ ಎಂಕಣ್ಣ ಒಳಹಾಕಿರೆ ಬೇತಾಳ ನಾಳಂಗೆ ಆರಿಂಗಾರು ಈ ಕತೆ ಹೇದರೆ!!
    ಎನಗೊಂತಿದ್ದು. ಎಂಕಣ್ಣ ಹಾಂಗೆಲ್ಲ ತೆಕ್ಕೊಳ್ಳ. ಅಲ್ಲದ್ದೇ ಅವಂಗೆ ಸಾಕೋ ಬೇಕೋ ಆಯ್ದು ಈಗಳೇ. ಅವನ ಅದರ ತಳಿಯದ್ದೆ ಆ ತೌಡೂರ ರಾಮಣ್ಣನ ಕೈಲಿ ಕೊಂಡೋಗಿ ಮಡುಗಲಿದ್ದು ನೋಡಿ ಬೇಕಾರೆ.

    1. (ಮಣಿಯಾಣಿ ಡ್ರೈವರನ)
      ಗೋಷ್ಟಿ ಮಾಡಿದ್ದೆ ಭಾವ… ಆದರ ಅದರ ಮಾತಡ್ಸುಲೆ ಹೋದರೆ ಇನ್ನು ಆ ಗುಂಡಿ ಗುರುಂಪಿನ ಮಾರ್ಗಲ್ಲಿ ಅದಕ್ಕೆ ಗಮನ ತಪ್ಪಿದರೆ ಹೇಳಿ ಮಾತಾಡ್ಸಿದ್ದಿಲ್ಲೆ.
      (ಸತ್ಯ° ಹೇದರೆ ಅವನೆಯೋ!!!)
      ಉಮ್ಮಪ್ಪ… ನಿಂಗ ಸತ್ಯಣ್ಣನ ಹತ್ತರೆ ಕೇಳಿದರೆ ಗೊಂತಕ್ಕೋ ಕಾಣ್ತು… 😀
      (ತೌಡೂರ ರಾಮಣ್ಣನ ಕೈಲಿ )
      ಎಂಕಣ್ಣ ಹಾಂಗೆ ಮಾಡ್ಳು ಸಾಕು… ಆದರೆ ಅದು ಬೇತಾಳನ ಪ್ರಶ್ಣೆಗೆ ಸರಿಯಾದ ಉತ್ತರ ಆಗದೋ ಹೇಳಿ ಕಾಣ್ತು…..
      ಎಂತ ಹೇಳ್ತಿ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×