Oppanna.com

ಜಾತಿ ನಾಯಿ ಸಾಂಕಾಣ..

ಬರದೋರು :   ಅನಿತಾ ನರೇಶ್, ಮಂಚಿ    on   30/07/2013    10 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

 

ಎನ್ನಲ್ಲಿಗೆ ಉದಿ ಉದಿಯಪ್ಪಗಳೇ ಬಂದ ಈಚಣ್ಣನ ಮೋರೆ ಕುಂಞಿ ಆಗಿತ್ತು. ಬಂದಾಂಗೆ ‘ಎಂತಾತು ಮಾರಾಯ’ ಹೇಳಿ ಕೇಳುಲಾವ್ತಾ?  ಹೆಂಡತಿಯ ದಿನಿಗೇಳಿ ಆಸರಿಂಗೆ ಕೊಡ್ಲೆ ಹೇಳಿದೆ.  ಕುಡುದಪ್ಪವರೆಗೆ ಸುಮ್ಮನೆ ಕೂದೆ, ಅವಾಗಿಯೇ ಸುರು ಮಾಡಲಿ ಹೇಳಿ.
ಆನು ಗ್ರೇಶಿದಾಂಗೆ ಎಲೆ ಪೆಟ್ಟಿಗೆಯ ಹತ್ತರೆ ಎಳಕ್ಕೊಂಡು ಮಾತು ಸುರು ಮಾಡಿದ.
“ಅಪ್ಪೋ .. ನಿನ್ನತ್ತರೆ ಒಂದೆರಡು ತಿಂಗಳ ಹಿಂದೆ  ಒಂದು ನಾಯಿ  ಮರಿ ಇದ್ದರೆ ಬೇಕಿತ್ತು ಹೇಳಿತ್ತಿದ್ದೆ ನೆಂಪಿದ್ದಾ?ಅಂದು ಇಲ್ಲಿಂದ ಕೊಂಡೋಗದ್ದೆ ಹೆಡ್ಡ ಆದ್ದಿದ ಈಗ..ಸುತ್ತ ಎಂತದನ್ನೋ ಹುಡ್ಕುತ್ತಾ ಹೇಳಿದ
ಎನ್ನ ನಾ ಕುಂಞಿಗಳ ಕಂತ್ರಿ ನಾಯಿಗ  ಹೇಳಿ  ಬುರೂಸ್ ಮಾಡಿ ಹೋದ್ದಕ್ಕೆ ಎನಗೆ ಕೋಪ ಬಂದಿತ್ತು. ಈಗ ವಿಷಯ ಕೇಳಿ  ಕುಷಿ  ಆದರೂ ಎದುರಂದ ತೋರ್ಸಿಕೊಂಬಲೆ ಎಡಿತ್ತಾ? ಸಂಭಾವಿತನ ಹಾಂಗೆ ಮತ್ತೆ ಕೇಳಿದೆ.
“ಅಯ್ಯೋ .. ಹಾಂಗೆಂತಕೆ ಹೇಳ್ತೆ.. ಎಂತಾತೀಗ.. ನಾಯಿ  ಲಾಯ್ಕಿಲ್ಲೆಯಾ? ಮಣ್ಣು ಗಿಣ್ಣು ತಿಂತಾ? ಹುಳುವಾ ಮಣ್ಣೋ ತುಂಬಿಕ್ಕು ಹೊಟ್ಟೆಲಿ.. ಒಂದರಿ ಗೋಡಾಕ್ಟ್ರನ ಬಪ್ಪಲೆ ಮಾಡು ಮನೆಗೆ” ಹೇಳಿ ಬಿಟ್ಟಿ ಸಲಹೆ ಕೊಟ್ಟೆ.
ಎನ್ನ ಮಾತು ಕೆಮಿಗೆ ಹಾಯ್ಕೊಳ್ಳದ್ದೆ ಅವ ಕಥೆ ಸುರು ಮಾಡಿದ. “ಇದಾ ಮನೆಲಿ ಪುಳ್ಯಕ್ಕಳ ಹಠಕ್ಕೆ  ಒಂದು ಲಾಯ್ಕದ ನಾಯಿ  ಕುಂಞಿಯನ್ನೇ ತಲಾಶ್ ಮಾಡಿ ಎಂಗಳ ಗೋಪಣ್ಣ ಕೊಟ್ಟಿತ್ತಿದ್ದ. ಅದೆಂತದೋ ಜಾತಿಯ ಹೆಸರುದೇ ಹೇಳಿತ್ತಿದ್ದ ಮಾರಾಯ .. ಎನ್ನ ನಾಲಗೆಲಿ ಅದು ಮೊಗಚ್ಚುತ್ತಿಲ್ಲೆ..ಇರಲಿ.. ಹೇಳಿರೆ ನಿನಗೂ ಗೊಂತಾಗ .. ನೀನು ಎನ್ನ ಹಾಂಗೇ ಅನ್ನೆ..  ಆ ನಾಯಿ  ಕುಂಞಿಂದಲೇ ಆದ್ದು ಈಗ ಉಪದ್ರ”
 ಅಲ್ಲಾ ಇವ ಎಂತಾ ಪಟಿಂಗ.. ಎನ್ನನ್ನುದೇ ಇವನ ಸಾಲಿಂಗೇ ಸೇರ್ಸುತ್ತನ್ನೆ.. ರಜ್ಜ ಉರಿವಲೆ ಸುರು ಆತೆನಗೆ.., ಅದಕ್ಕೆ ಚೂರು ಜೋರಿಲಿ  “ನೀನು ಹೀಂಗೆ  ಒಗಟಿನಾಂಗೆ ಹೇಳಿರೆ ಎನಗೆ ಗೊಂತಾಗ.. ಸರಿ ಬಿಡ್ಸಿ ಹೇಳ್ತರೆ ಹೇಳು. ಮತ್ತೆ ಎನಗೆ ಒಂದರಿ ಉಪ್ರಂಗಡಿಗೆ ಹೋಪಲಿದ್ದು, ತಡ ಆವ್ತು” ಹೇಳಿ ಹೇಳಿದೆ.
ಈಗ ಅವ ನಿಧಾನಕ್ಕೆ ಅಡಕ್ಕೆ ಗುದ್ದುಲೆ ಉಜುಡೆಯ ಹತ್ತರೆ ಎಳಕ್ಕೊಂಡ. ಆಗಲೇ ನೋಡಿದ್ದು ಆನು ಅವನ ಹಲ್ಲಿನ.. ಎಂತ ಗಟ್ಟಿ ಅಡಕ್ಕೆ ಆದರೂ ಕಟುಂ ಕುಟುಂ ಹೇಳಿ ಪುಳಿಂಕಟೆಯ ಹಾಂಗೆ ಅಗುಕ್ಕೊಂಡು ಇತ್ತಿದ್ದ. ಎನ್ನನ್ನೇ ತಮಾಶೆ ಮಾಡುಗು ಯಾವಾಗಲೂ.. ಎಂತರ ಎಪ್ಪತ್ತು ದಾಂಟೆಕ್ಕಾರೆ ಹೀಂಗೆ  ಉಜುಡೆಲಿ ಗುದ್ದಿ ಅಡಕ್ಕೆ ಹೊಡಿ ಮಾಡ್ತೆನ್ನೆ ಹೇಳಿ.. ಈಗ ನೋಡಿರೆ ಅವನ ಒಂದೂ ಹಲ್ಲು ಇಲ್ಲೆ ಬಾಲಿ..
“ದೇವಾ ಇದೆಂತಾತಾ ನಿನ್ನ ಹಲ್ಲಿಂಗೆ .. ಅಷ್ಟು ಲಾಯ್ಕ ಚಿತ್ರಲ್ಲಿ ಬಿಡ್ಸಿದ ಹಾಂಗೆ ಇತ್ತನ್ನೆ ಮಾರಾಯಾನೇ..” ಹೇಳಿ ಕೇಳಿದೆ.
“ಅದೇ ಮಾರಾಯ ಆನು ಹೇಳುಲೆ ಹೆರಟದು.. ಇದಾ ನೋಡು ಈ ನಾಯಿ  ಕುಂಞಿ ಬಂದ ಹಾಂಗೆ ಪುಳ್ಯಕ್ಕಳ ಅವತಾರದೇ ಸುರು ಆತು. ಅದಕ್ಕೆ ನಾವು ತಿಂಬ ಅಶನ ಎಲ್ಲಾ ಆಗ ಹೇಳಿ ಎಂತದೋ ‘ಪೆಡಿಗ್ರೀ’ ಹೇಳಿ ಒಂದರ ತಂದು ಹಾಕಿದವು. ಈಗ ಅದು ಎಂತ  ಸಂಕಪಾಷಾಣ ತಿನ್ನೆಕ್ಕಾರು ಪೆಡಿಗ್ರಿ ಹಾಕಿದ್ದಾ ಹೇಳಿ ನೋಡ್ತು ಮಾರಾಯ. ಗೋಡಾಕ್ಟ್ರ ಅಂತೂ ಮೂರು ದಿನಕ್ಕೊಂದರಿ ಮನೆಗೆ ಬರೆಕ್ಕಾವ್ತು. ಅದು ಬಿಡು.. ಹೇಂಗಾರು ಸಾಂಕೆಕ್ಕನ್ನೆ ಹೇಳಿ ಆನುದೇ ಸುಮ್ಮನಿತ್ತಿದ್ದೆ. ಅಷ್ಟಪ್ಪಗ ತೆಕ್ಕೋ ಪುಳ್ಯಕ್ಕಳ ಹೊಸ ಕೋಲ.. ಅದಕ್ಕೆ ಪಾಠ ಕಲುಶುಲೆ ಸುರು ಮಾಡಿದವು.ಅದೂ ನಮ್ಮ ಭಾಷೆಲಿ ಅಲ್ಲ .. ಇಂಗ್ಲೀಷಿಲಿ ಮಾರಾಯ.ಅದು ಭಾರೀ ಲಾಯ್ಕಲ್ಲಿ ಕಲ್ತು  ‘ಕಮ್ಮು’ ಹೇಳಿರೆ ಬಪ್ಪದು ‘ಗೋ’ ಹೇಳಿರೆ ಹೋಪದು ಮಾಡಿಕೊಂಡಿತ್ತು. ಆನುದೇ ಅದರೊಟ್ಟಿಂಗೆ ಅಷ್ಟು ಇಂಗ್ಲೀಷು ಕಲ್ತೆ ಹೇಳುವ..
” ಆದರೆ ಕಥೆ ಪಚೀತಿ ಆದ್ದು ಮೊನ್ನೆ.. ಎಂಗಳ ಕೆದೆ ಬಾಗಿಲು ಸಮಾ ಹಾಕದ್ದೆ ಆರೋ ಹೋಗಿತ್ತಿದ್ದವಿದಾ..  ಅದನ್ನೇ ಕಾದು ನಿಂದ ಹಾಂಗೇ ಹಟ್ಟಿಂದ ದೊಡ್ಡ ಹೋರಿ ಬಳ್ಳಿ ಬಿಡ್ಸಿಕೊಂಡು ಜಾಲಿಲಿ ನಿಂದಿತ್ತು. ಈ ನಾಯೂ ಬಿಟ್ಟುಕೊಂಡಿತ್ತು. ಆನು ಹೋರಿಯ  ಕಟ್ಟುವ ಹೇಳಿ  ಬಾಲ್ದಿಲಿ ರಜ್ಜ ಹಿಂಡಿ ಕೈಲಿ  ಹಿಡ್ಕೊಂಡು   ‘ರನ್ನಾ ಬಾ ಕಟ್ಟುತ್ತೇ’ ಹೇಳಿದೆ. ಅದು ಕೆಪ್ಪನಾಂಗೆ ಮಾಡಿತ್ತು. ಪುನಃ ಜೋರಿಲಿ ‘ರನ್ನಾ’ ಹೇಳಿದೆ. ಅಷ್ಟಪ್ಪಗ ಈ ನಾ ಕುಂಞಿ ಓಡ್ಲೆ ಸುರು ಮಾಡಿತ್ತು ಮಾರಾಯ. ಅದರ ನೋಡಿ ಹೋರಿಯೂ ಪೆರ್ಚಿಕಟ್ಟಿ ಓಡಿತ್ತು. ಪುಳ್ಯಕ್ಕ ಬೊಬ್ಬೆ ಹಾಕಿದವು. ನಿಂಗ ‘ರನ್’ ಹೇಳಿದ್ದೆಂತಕೆ. ಅದಕ್ಕೆ ಅದು ಓಡಿದ್ದು. ಬೇಗ ಕರಕ್ಕೊಂಡು ಬನ್ನಿ. ಎಲ್ಲಿಗಾರೂ ಹೋಕ್ಕದು ಹೇಳಿ. ಇನ್ನೆಂತ ಮಾಡುದು .. ಆನುದೇ ಅದರೊಟ್ಟಿಂಗೆ ಓಡಿದೆ. ಮುಂದಂದ ನಾ ಕುಂಞಿ ನಡುಗಿಲಿ ಹೋರಿ ಹಿಂದಂದ ಆನು.. ರಜ ಮುಂದೆ ಕಾಲಿಂಗೆ ಬಳ್ಳಿ ಡಂಕಿ ಆನು ಡಮಾರನೇ ಕಂಪಾರ ಬಿದ್ದೆ. ಆ ಶಬ್ಧಕ್ಕೆ ನಾಯಿ  ಕುಂಞಿದೇ ಹೋರಿದೇ ತಿರುಗಿದವು.  ಆನು ಬೀಳ್ವಾಗ ಎನ್ನ ಹಲ್ಲು ಸೆಟ್ಟುದೇ ಜಾರಿ ನೆಲಕ್ಕೆ ಬಿದ್ದತ್ತು. ನಾಯಿ  ಹತ್ತರೆ ಬಪ್ಪಗ ಆನು ‘ಥಕ್ ಹೋಗಾ..’ ಹೇಳಿದೆ.. ಈ ಹಲ್ಲಿಲ್ಲದ್ದೆ ಅದಕ್ಕೆ ಎಂತ ಕೇಳಿತ್ತೋ ಏನೋ.. ಹಲ್ಲಿನ ಸೆಟ್ಟಿನ ಹಿಡ್ಕೊಂಡು ನಾಯಿ ಕುಂಞಿ ಮನೆಗೆ ಪುಡ್ಚ ಮಾರಾಯ.ಪುಣ್ಯಕ್ಕೆ ಹೋರಿ ಇಂಗ್ಲೀಷು ಕಲಿಯದ್ದ ಕಾರಣ ಕೆಮಿ  ಹಿಂಡಿ ‘ಬಾ  ಮನೆಗೆ’ ಹೇಳುವಾಗ ಬಂತು. ಪುಳ್ಯಕ್ಕಳತ್ರೆ ಹೇಳಿರೆ ನಿಂಗ ‘ಪಿಕ್.. ಗೋ’ ಹೇಳಿದ್ದು ಹೇಳಿ ಅದು ಗ್ರೇಶಿಕ್ಕು ಅಜ್ಜ.. ಹೇಳಿ ಹೇಳ್ತವು ಮಾರಾಯ.  ಇನ್ನು ಅದು ಅಗುದ ಹಲ್ಲು ಸೆಟ್ಟಿನ  ಆನು ಮಡಿಕ್ಕೊಂಬಲೆ ಎಡಿತ್ತಾ? ಇಷ್ಟರವರೆಗೆ ಎನ್ನದು ಹಲ್ಲು ಸೆಟ್ಟು ಹೇಳಿ ಎನ್ನ ಹೆಂಡತಿಗಲ್ಲದ್ದೇ ಆರಿಂಗೂ ಹೇಳಿತ್ತಿದ್ದಿಲ್ಲೆ. ಈಗ ಎಲ್ಲೋರಿಂಗೂ ಗೊಂತಾತು. ಜಾತಿನಾಯಿ  ಸಾಂಕುಲೆ ಹೋಗಿ ಎನ್ನ ಮರ್ಯಾದೆ ಹರಾಜಾತೀಗ..”
ಬಾಯಿಲಿ ತುಂಬ್ಸಿದ ಎಲೆ ಅಡಕ್ಕೆಯ ಪಿಚ್ಕನೆ ಜಾಲಿನ ಕೊಡೀಲಿ ಉಗುದಿಕ್ಕಿ ಬಂದು ಪುನಃ ಹೇಳಿದ. “ಕರ್ಮ ಎಲೆ ರಜ್ಜ ಕೂಡಾ ಹೊಡಿ ಆದಿಲ್ಲೆ. ಎಲಡಕ್ಕೆಯ ರುಚಿಯೇ ಸಿಕ್ಕಿದ್ದಿಲ್ಲೆ. ಹೇಂಗೂ ನೀನು ಉಪ್ರಂಗಡಿಗೆ ಹೋವ್ತೆನ್ನೆ. ಆನುದೇ ಬತ್ತೆ ನಿನ್ನೊಟ್ಟಿಂಗೆ. ಹಲ್ಲಿನ ಡಾಕ್ಟರನತ್ರೆ ಹೋಗಿ ಬೇರೆ ಹಲ್ಲು ಕಟ್ಸಿಕೊಳ್ಳೆಕ್ಕು ಮಾರಾಯ.. ಏಳು ಬೇಗ ಹೆರಡು” ಹೇಳಿ ಗಡಿಬಿಡಿ ಸುರು ಮಾಡಿದ ಈಚಣ್ಣ.

Anitha Naresh Manchi

10 thoughts on “ಜಾತಿ ನಾಯಿ ಸಾಂಕಾಣ..

  1. ಜಾತಿ ನಾಯಿಯ ಸಾಂಕಿದ ರೀತಿ, ಈಚಣ್ಣನ ಪರಿಪಾಟಲು ಲಾಯಿಕಕೆ ನಿರೂಪಣೆ ಆಯಿದು

  2. ಲಾಯ್ಕ ಆಯಿದು.ನಾಯಿ,ಹೋರಿ,ಈಚಣ್ಣ ಓಡಿದ್ದು ರೈಸಿದ್ದು.
    ಈ ಕೆಳಾಣ ಸಾಲು ಇಲ್ಲದ್ದರೂ ಆವುತ್ತಿತ್ತು,ಅಥವಾ ಜಾಗೆ ಬದಲಿದ್ದು.
    “ಅಯ್ಯೋ .. ಹಾಂಗೆಂತಕೆ ಹೇಳ್ತೆ.. ಎಂತಾತೀಗ.. ನಾಯಿ ಲಾಯ್ಕಿಲ್ಲೆಯಾ? ಮಣ್ಣು ಗಿಣ್ಣು ತಿಂತಾ? ಹುಳುವಾ ಮಣ್ಣೋ ತುಂಬಿಕ್ಕು ಹೊಟ್ಟೆಲಿ.. ಒಂದರಿ ಗೋಡಾಕ್ಟ್ರನ ಬಪ್ಪಲೆ ಮಾಡು ಮನೆಗೆ” ಹೇಳಿ ಬಿಟ್ಟಿ ಸಲಹೆ ಕೊಟ್ಟೆ.

    1. ಒಳಂದ ಖುಷಿ ಆದರೂ ಹೆರಂದ ಸಂಭಾವಿತನ ಹಾಂಗೆ ಸಮಾಧಾನ ಮಾಡುವ ಸೋಗಿಲಿ ಕೇಳಿದ್ದಷ್ಟೇ ಅದು 🙂

      1. ಸರಿ,ಆದರೆ ಈಚಣ್ಣ ನಾಯಿ ತ೦ದ ಪ್ರಸ್ತಾಪ ಮತ್ತೆ ಬಪ್ಪ ಕಾರಣ ಒ೦ದು ಸ೦ಶಯ ಬ೦ತು.

  3. ಭಾರೀ ಲಾಯಕ ಆಯಿದು.

  4. 😀 ಸಂಗತಿ ಪಷ್ಟಾಯ್ದು ಅದು 😀
    ಆ ನಾಯಿ ಅಡಿಗೆ ಸತ್ಯಣ್ಣನಲ್ಲಿರ್ತಿದ್ರೆ ಸಂಸ್ಕೃತ ಕಲ್ತುಬಿಡ್ತಿತ್ತೋ ಏನೋ!!

  5. ಈಚಣ್ಣ ಹಲ್ಲು ಶೆಟ್ ಮಾತ್ರ ಕಳ್ಕೊಂಡ ಆನು ನಾಯಿ ದೊದ್ದದಾಗ್ಬೇಕಾದ್ರೆ ಹತ್ತು ಜತೆ ನೈಕೆ ಷೂ ಕಳ್ಕೊಂಡಿದ್ದೆ! ಈಚಣ್ಣನೇ ಪುಣ್ಯವಂತ!

  6. ಹ. ಹ್ಹಾ…. ಬಾರೀ ಲಾಯ್ಕಿದ್ದು… ಈ ಕಥೆ… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×