2014ನೇ ಸಾಲಿನ ಗೌರಮ್ಮ ಪ್ರಶಸ್ತಿ ಬಂದ ಕತೆ “ಕಿಟ್ಟಣ್ಣ”–ಮುಂದುವರುದಭಾಗ

December 14, 2014 ರ 6:24 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

2014ನೇ ಸಾಲಿನ ಗೌರಮ್ಮ ಪ್ರಶಸ್ತಿ ಬಂದ ಕತೆ “ಕಿಟ್ಟಣ್ಣ”—ಮುಂದುವರುದ ಭಾಗ
ಲೇಖಿಕೆಃ-ಶ್ರೀಮತಿ ಪಾರ್ವತಿ,ಕೂಳಕ್ಕೋಡ್ಳು.

ಈ ಹೊತ್ತಿಂಗೆ ಕಿಟ್ಟಣ್ಣಂಗೆ ನೆಂಪಾದ್ದು ದೂರದ ಊರಿಲ್ಲಿದ್ದ ದೂರದ ನೆಂಟ ಗಜಾನನ ಭಟ್ಟನ. ಕೂಡ್ಳೇ ಕಿಟ್ಟಣ್ಣನ ಮನಸ್ಸಿಂಗೆ ಕಂಡದು ’ಒಂದು ವೇಳೆ ಗಜಾನನ ಎನಗೆ ಆಶ್ರಯ ಕೊಟ್ಟರೆ;ಮತ್ತೆಂದೂ ಆನು ಈ ಊರಿಂಗೆ ಕಾಲು ಮಡಗೆ. ಹುಟ್ಟುತ್ತಾ ’ಅಣ್ಣ-ತಮ್ಮಂದ್ರು,ಬೆಳೆಯುತ್ತಾ ದಾಯಾದಿಗೊ’ ಹೇಳುವ ಗಾದೆಯ ಮಾತಿನ ಹೆರಿಯೋರು ಸುಮ್ಮನೆ ಮಾಡಿದ್ದೊವಿಲ್ಲೆ!.ಸಣ್ಣಾದಿಪ್ಪಾಗ ಇದ್ದ ಆ ಪ್ರೀತಿ ದೊಡ್ಡಪ್ಪಗ ಎಲ್ಲಿಗೆ ಹೋವುತ್ತು!?. ಈಗ ಇವಕ್ಕೆಲ್ಲಾ ಅವರವರ ಸಂಸಾರ ಹೇಳಿ ಆದ ಮತ್ತೆ ಆನು ’ಮೂರನೆಯವ’ ಆಗಿ ಬಿಟ್ಟೆ!. ಎಂತಾ ಸ್ವಾರ್ಥಿಗೊ!!.ಅವಕ್ಕೆ ಆನು ಬೇಡದ್ರೆ ಎನಗೆ ಅವುದೆ ಬೇಡ” ಹೇಳಿ ತೀರ್ಮಾನ ಮಾಡಿದ.
ಸಾಗರಲ್ಲಿಪ್ಪ ಗಜಾನನ ಭಟ್ಟ ಕಿಟ್ಟಣ್ಣನ ಸೋದರತ್ತೆಯ ಮೈದುನ. ಅವಂಗೂ ಕಿಟ್ಟಣ್ಣನ ಪ್ರಾಯವೆ. ಸಣ್ಣಾದಿಪ್ಪಗ ಸೊದರತ್ತೆಯ ಮನಗೆ ಹೋಗಿ ತಿಂಗಳುಗಟ್ಳೆ ಕೂದುಗೊಂಡಿಪ್ಪಗ ಕಿಟ್ಟಣ್ಣನೂ ಗಜಾನನೂ ಒಟ್ಟಿಂಗೇ ಆಡಿದೊವು.ಮುಂದೆ ಕಿಟ್ಟಣ್ಣನ ಅತ್ತೆ ತೀರಿ ಹೋದಮೇಲೆ ಅವಕ್ಕೆ ಮಕ್ಕಳೂ ಇಲ್ಲದ್ದಕಾರಣಂದ ಅವರ-ಇವರ ಸಂಬಂಧ ದೂರ ಆತು.ಹಿಂದೆ ಅಲ್ಲಿಗೆ ಹೋಗಿಯೊಂಡಿಪ್ಪಗ ಅವರ ಆದರಾತಿಥ್ಯ ಕಂಡು ಕಿಟ್ಟಣ್ಣಂಗೆ ತುಂಬಾ ಸಂತೋಷ ಆಗಿಯೊಂಡಿದ್ದತ್ತು. ಆ ಕಾರಣಂದಲೂ ಅಖೇರಿಗೆ ಒಂದರಿ ಅವನ ಹತ್ತರೆ ಮಾತಾಡಿಕ್ಕಿ ಬಪ್ಪ ಹೇಳಿ ಕಿಟ್ಟ್ಟಣ್ಣ ಸೀದಾ ಸಾಗರದ ಬಸ್ಸು ಹತ್ತಿ ಗಜಾನನ ಮನೆಬಾಗಿಲಿಲ್ಲಿ ಇಳುದ.
ನೋಡಿದಕೂಡ್ಳೆ ಗಜಾನನಂಗೆ ಕಿಟ್ಟಣ್ಣನ ಗುರ್ತ ಸಿಕ್ಕದ್ರು ರಜಹೊತ್ತಿಲ್ಲೇ ಅಂದಾಜಾತು. “ನೀನು ಕಿಟ್ಟ ಅಲ್ಲದೋ?.ಎಷ್ಟು ವರ್ಷಾತು ನಿನ್ನ ನೋಡಿ! ಈಗಾದರೂ ಬದೆನ್ನೆ” ಹೇಳಿ ಅವನ ಒಳ ಕರಕ್ಕೊಂಡು ಹೋದ.ಅವನ ಯೋಗ-ಕ್ಷೇಮ ಎಲ್ಲ ವಿಚಾರ್ಸಿ,ಅವನ ಸುದ್ದಿ ಎಲ್ಲ ಸವಿಸ್ತಾರವಾಗಿ ಕೇಳಿದ ಮತ್ತೆ; “ನೋಡು ಕಿಟ್ಟಾ,ಈಮನಗೆ ವರ್ಷಕ್ಕೆಷ್ಟು ಜೆನ ಅತಿಥಿಗೊ,ಅಭ್ಯಾಗತರು,ದಾರಿಹೋಪೊವು,ಬೇಡುವವು ಬಂದು ಉಂಡಿಕ್ಕಿ,ತಿಂದಿಕ್ಕಿ ಹೋವುತ್ತವು. ಅದಕ್ಕೆ ತಕ್ಕ ಸಂಪತ್ತು,ದಾನಮಾಡುವ ಮನಸ್ಸೂ ದೇವರು ಎಂಗೊಗೆ ಕೊಟ್ಟಿದ.ಹಾಂಗಾಗಿ ನಿನಗೆ ನೆಲೆ ಇಲ್ಲೆ ಹೇಳಿ ಆದರೆ ಇಲ್ಲೇ ನಿನ್ನ ನೆಲೆ ಕಂಡುಗೊ. ನಿನಗೇನಾದರೂ ಎಡಿಗಾದ್ದರ ಮಾಡಿಗೊಂಡು ಇನ್ನುಮುಂದೆ ಇದೇ ನಿನ್ನಮನೆ ಹೇಳಿ ಗ್ರೇಶಿಗೊಂಡು ಇಲ್ಲೇ ಇದ್ದುಗೊ. ದೇವರು ಮಡಗಿದ ಹಾಂಗಾವುತ್ತು.” ಹೇಳುವಗ ಕಿಟ್ಟಣ್ಣಂಗೆ ಬಾಯಿಂದ ಮಾತೇ ಬಾರದ್ದೆ ಅವನ ಕಾಲಿಂಗೆ ಬಿದ್ದ. ಗಜಾನನ ಅವನ ಕಣ್ಣಿಂಗೆ; ಕುಚೇಲನ ಆದರ್ಸಿದ ಶ್ರೀಕೃಷ್ಣನ ಹಾಂಗೆ ಕಂಡ. ಅಂಬಗ ಗಜಾನನ.., “ಏಳು.ಏಳು, ಇದಾ ನೋಡು .ಇದಕ್ಕೆಲ್ಲಾ ಎನ್ನ ಈ ಮನೆಯ, ಮನದೊಡತಿ ಸೀತೆಯೇ ಕಾರಣ.ಇದರ ನಿನಗೆ ಗೊಂತಿಲ್ಲೆಯಾ?” ಹೇಳುವಗ ಕಿಟ್ಟಣ್ಣ ತಲೆ ಎತ್ತಿ ನೋಡಿದ. ಅವನ ಕಣ್ಣಿಂದ ನೀರು ಧಾರಾಕಾರವಾಗಿ ಹರುದತ್ತು. “ಓ…ಇವನಾ!?ಇವ ನಾವೆಲ್ಲಾ ಸಣ್ಣದಿಪ್ಪಗ ಇಲ್ಲಿಗೆ ಬಂದೊಂಡಿದ್ದಿದ್ದ ಕಿಟ್ಟಣ್ಣ ಅಲ್ಲದಾ?. ನಾವೆಲ್ಲಾ ಒಟ್ಟಿಂಗೇ ಆಡಿದ್ದು ಎನಗೆ ಈಗಳೂ ನೆಂಪಿದ್ದು”. ಹೇಳಿ ಅವನ ಸುಖ,ದುಃಖ ವಿಚಾರ್ಸಿಕ್ಕಿ ಒಳ ಹೋತು.
ಹೀಂಗೇ ಕಿಟ್ಟಣ್ಣಂಗೆ ’ಊರು ಹೋಗಿ ಕಾಡು ಬಾ’ ಹೇಳುವ ಹೊತ್ತಿಂಗಾದರೂ ಒಂದು ನೆಲೆ ಹೇಳುದು ಸಿಕ್ಕಿತ್ತು. ಅವ ಅಲ್ಲಿ ಉದಿಯಪ್ಪಗಳೇ ಎದ್ದು ಪೂಜಗೆ ಹೂಗು ಕೊಯಿದು ಮಡಗುದು,ಬೆಶಿನೀರಿಂಗೆ ಕಿಚ್ಚಾಕುದು,ತೋಟಕ್ಕೆ ಹೋಗಿ ಅಡಕ್ಕೆ ಹೆರ್ಕುದು,ಅಡಕ್ಕೆ ಸೊಲಿವದು,ದನಗಳ ಚಾಕ್ರಿಯೋ ಮಾಡಿಗೊಂಡಿಕ್ಕು.ಮಾತ್ರ ಅಲ್ಲ. ಮನೆ ಒಳ ಸೀತಗೂ ಅಡಿಗಗೆ ಬೇಕಾದರೆ ಸಹಾಯವನ್ನೂ ಮಾಡುಗು,ಆಳುಗಳೂ ಸಿಕ್ಕದ್ದ ಈ ಕಾಲಲ್ಲಿ; ಕಿಟ್ಟಣ್ಣಂದಾಗಿ ಗಜಾನನಂಗೂ ಸೀತಗೂ ಈಗ ಕೆಲಸದ ಹೊರೆ ಅರ್ಧಕ್ಕರ್ಧ ಕಮ್ಮಿ ಆತು.
’ಕೋಲು ಕಡುದರೆ ತುಂಡಕ್ಕು ನೀರು ಕಡುದರೆ ತುಂಡಾಗ’ ಹೇಳುವ ಗಾದೆಯ ಹಾಂಗೆ ಎಂತಾದರೂ ಕಿಟ್ಟಣ್ಣಂಗೆ ತನ್ನ ಒಡಹುಟ್ಟುಗಳ ಮರವಲೆ ಎಡಿಗಾತಿಲ್ಲೆ.ಅವರ ಮಕ್ಕಳ ಹತ್ರೆಲ್ಲಾ ಕಿಟ್ಟಣ್ಣಂಗೆ ಮದಲೇ ಭಾರೀ ಪ್ರೀತಿ,ಅದರಲ್ಲೂ ಸಣ್ಣ ತಂಗೆಯ ಸಣ್ಣ ಮಗಳು ಸೌಮ್ಯ ಹೇಳಿರೆ ಅವಂಗೆ ಅತೀ ಮಮತೆ.ಅದುದೆ ’ಚೆಂದದ ಮಾವ’ ಹೇಳಿಗೊಂಡು ಅವನ ಹಿಂದೆಯೇ ತಿರುಗ್ಯೊಂಡಿಕ್ಕು.ಅದು ಎಂತದೇ ಹೇಳಿರೂ ಕಿಟ್ಟಾಣ್ಣ ಸಾಲ ಮಾಡಿಯಾದರೂ ತಂದುಕೊಡದ್ದೆ ಇರ.ಅದೂಹೇಳಿ ಅಲ್ಲ ಒಳುದ ಮಕ್ಕಳ ಕಣ್ಣಲ್ಲೇ ಆಗಲಿ ಒಂದು ಹನಿ ನೀರು ಕಂಡರೂ ಕಿಟ್ಟಣ್ಣ ಸಹಿಸ. ಅವನ ಅಣ್ಣ-ತಮ್ಮಂದ್ರ ಮಕ್ಕೊಗೆ ಬಡಿವದು,ಬೈವದು ಕಂಡ್ರೆ ಅವರ ಹತ್ರೆ ಲಡಾಯಿ ಮಾಡ್ಳೆಹೋಗಿ ಅವರತ್ರಂದ ಬೈಗಳು ತಿಂದದದಕ್ಕೆ ಲೆಕ್ಕ ಇರ.
ಕಿಟ್ಟಣ್ಣ ಊರನ್ನೇ ಬಿಟ್ಟು ಹೋದ್ದು ಅವಕ್ಕೆಲ್ಲಾ ಸಂತೋಷದ ಸಂಗತಿಯೆ.ಅವೀಗ ಕಿಟ್ಟಣ್ಣನ ವಿಚಾರಲ್ಲೇ ಇಲ್ಲೆ. ಅವರವರ ಮಕ್ಕಳದೊಡ್ದ ಜೆಂಬರಂಗಿಕ್ಕೆ ಮಾತ್ರ ಅವು ಕಿಟ್ಟಣ್ಣಂಗೆ ಕಾಗದ ಹಾಕುಗು.ಅಂಬಗ ಎಲ್ಲಾ ಕಿಟ್ಟಣ್ಣ ಉತ್ಸಾಹಲ್ಲಿ ನಾಲ್ಕು ದಿನ ಮದಲೇಹೋಗಿ ಎಡಿಗಾದಷ್ಟು ಸಹಾಯ ಮಾಡುಗು.ಆದರೆ ಜೆಂಬ್ರ ಕಳುದ ಮರದಿನವೇ ಹೆರಟು ನಿಂದು ಮತ್ತೊಂದರಿ ಮನೆ ಹೊಡೆಂಗೆ ತಿರುಗಿ ನೋಡೀರೂ “ಇನ್ನು ಎರಡು ದಿನ ನಿಲ್ಲು” ಹೇಳುವವು ಮಾತ್ರ ಆರೂ ಇರವು. ಗಜಾನನ-ಸೀತಗೆ ಒಬ್ಬನೇ ಮಗ ಗಣೇಶ. ಅವ ಬೆಂಗ್ಳೂರಿಲ್ಲಿ ’ಇಂಜಿನಿಯರಿಂಗ್’ ಅಕೇರಿಯಾಣ ವರ್ಷ ಕಲಿತ್ತಾ ಇದ್ದ. ’ಬಿತ್ತಿದಂತೆ ಬೆಳೆ’ ಹೇಳುವ ಹಾಂಗೆ ಅವನೂ ಅಬ್ಬೆಪ್ಪನ ಹಾಂಗೆ ಸದ್ಗುಣಿ. ಗಜಾನನ ಕಿಟ್ಟಣ್ಣನತ್ರೆ ಯಾವಾಗಳೂ ಹೇಳುಗು,”ಎನ್ನ ಮಗ ಎಷ್ಟು ಬೇಕಾದರೂ ಕಲ್ತು,ಕೆಲಸಕ್ಕೆ ಎಲ್ಲಿಗೆ ಬೇಕಾದರೂ ಹೋಗಲಿ.ಆದರೆ ಅವನ ಹತ್ತರೆ “ನೀನು ಎಂಗಳ ನಂತ್ರಕ್ಕೆ ಆಸ್ತಿಯ ಮಾತ್ರ ಮಾರಿಕ್ಕೆಡ” ಹೇಳಿದ್ದೆ.ಮುಂದೊಂದು ದಿನ ಅವಂಗೆ ಹುಟ್ಟೂರಿಂಗೆ,ಕೃಷಿಗೇ ಬರೆಕಾದ ಅನಿವಾರ್ಯತೆ ಬಂದರೆ;ಅಥವಾ ನಮ್ಮೂರೇ ಬೇಕು ಕಂಡರೆ, ಸೀತಾ ಎಲ್ಲ ಬಿಟ್ಟಿಕ್ಕಿ ಎದ್ದು ಬಪ್ಪ ಹಾಂಗಿರೆಕ್ಕು.ಆರು ಎಂತದೇ ಹೇಳಿರೂ ಕೃಷಿ ಕೆಲಸಲ್ಲಿಪ್ಪ ನೆಮ್ಮದಿ, ನಿಶ್ಚಿಂತೆ ಬೇರೆ ಯಾವುದರಲ್ಲೂ ಇಲ್ಲೆ. ಇಲ್ಲಿ ನಾವು ಆರ ಅಡಿಯಾಳಾಗಿ ಇರೆಡ.ನವಗೆ ನಾವೇ ’ಭಾಸ್’ಗೊ.ಅಂಬಗೆಲ್ಲಾ ಕಿಟ್ಟಣ್ಣಂಗೆ ಅವರ ನೆಮ್ಮದಿಯ ಸಂಸಾರವ ಕಂಡು ಹೃದಯ ತುಂಬಿ ಬಕ್ಕು. ದೇವರೇ ಇವು ಎಂದೆಂದಿಂಗು ಹೀಂಗೇ ಸುಖ-ಸಂತೋಷಲ್ಲಿರಲಿ ಹೇಳಿ ನಿತ್ಯವೂ ದೇವರತ್ರೆ ಬೇಡಿಗೊಂಗು.
ಆದರೆ!? ಕಿಟ್ಟಣ್ಣನ ಮೊರೆ ದೇವರಿಂಗೆ ಕೇಳಿದ್ದೇ ಇಲ್ಲಿಯೋ, ಅಥವಾ ’ಅವ ಎಲ್ಲಾ ಸುಖ-ಸಂತೋಷಂಗಳನ್ನೂ ಒಟ್ಟಿಂಗೇ ಒಬ್ಬಂಗೇ ಕೊಡ್ತಾಯಿಲ್ಲ’ ಹೇಳುವ ಮಾತೇ ಇಲ್ಲಿ ನಿಜ ಆತೋ ಗೊಂತಿಲ್ಲೆ!.ನೆಮ್ಮದಿಯೇ ಅಟ್ಟಿ ಒಯಿಶಿಗೊಂಡಿದ್ದ ಆಮನೆಲಿ ಇದ್ದಕ್ಕಿದ್ದ ಹಾಂಗೆ ಅತೀವ ಆತಂಕ ,ಬೇಜಾರ ಕಾಂಬಲೆ ಸುರುವಾತು.ಎಂತಾತು ಹೇಳಿ ಅರಡಿಯೆಕ್ಕಾದರೆ; ಗಜಾನನ ಸುಮಾರು ಸರ್ತಿ ಬೆಂಗಳೂರಿಂಗೆ ಹೋಗಿ ಬಂದವ ಕಡೇಂಗೆ ಒಂದರಿ ಮಗನ ಮನಗೆ ಕರಕ್ಕೊಂಡೇ ಬಂದ. ಇಪ್ಪತ್ತೆರಡು ವರ್ಷದ ಜವ್ವನಿಗ ಮಾಣಿ ಬಚ್ಚಿ ಕಡ್ಡಿಯ ಹಾಂಗಾಯಿದ.ಅವನ ಎರಡೂ ಕಿಡ್ನಿ ’ಫೈಲ್’ ಆಯಿದಡ. ಮುಂದೆ ಒಳ್ದು ಒಂದೇ ದಾರಿ. ಅದುವೇ ’ಕಿಡ್ನಿಕಸಿ’. ಗಜಾನನ-ಸೀತೆ ಕಂಗಾಲಾದೊವು.ಅವರ ಕಿಡ್ನಿ ಮಗಂಗೆ ಹೊಂದಿಕೆ ಅಕ್ಕೊ ಹೇಳಿ ನೋಡ್ಸೀರು ಅದು ಸರಿ ಆಗ ಹೇಳಿ ಡಾಕ್ಟ್ರು ಹೇಳಿದೊವು.ಅಂಬಗ ಕಿಟ್ಟಣ್ಣ ಕಿಡ್ನಿ ಕೊಡ್ಳೆ ತಯಾರಾದ.ಆದರೆ ಗಜಾನನ “ನಿನ್ನ ಕಿಡ್ನಿ ಸರಿ ಆವುತ್ತರೂ ಎಂಗೊ ತೆಕ್ಕೊಳೆಯೊ ಕಿಟ್ಟ,ನಿನ್ನೊವು ಹೇಳಿ ಆರೂ ನಿನಗೀಗ ಇಲ್ಲೆ.ಕಿಡ್ನಿಗೆ ಬೇಕಾಗಿ ಆನು ಆಶ್ರಯ ಕೊಟ್ಟದು ಹೇಳಿ ಅಕ್ಕು” ಹೇಳಿದ. ಆದರೂ ಕಿಟ್ಟಣ್ಣನ ಕಿಡ್ನಿಯನ್ನೂ ಪರೀಕ್ಷೆ ಮಾಡಿದ ಡಾಕ್ಟ್ರು ಅದುದೆ ಆವುತ್ತಿಲ್ಲೆ ಹೇಳಿದೊವು.
ಮುಂದಾಣದ್ದು ಸಾರ್ವಜನಿಕರಿಂದ ಸಂಗ್ರಹಿಸುವಂತಾದ್ದು. ಹಾಂಗೆ ’ಕಿಡ್ನಿ ಬೇಕು ’ ಹೇಳಿ ಪೇಪರಿಲ್ಲಿ, ಇಂಟರ್ನೆಟ್ಟಿಲ್ಲೆಲ್ಲ ಹಾಕ್ಸಿದೊವು.ಆದರೂ ಒಬ್ಬನೇ ಒಬ್ಬ ಕಿಡ್ನಿ ಕೊಡ್ಳೆ ಮುಂದೆ ಬಂದೊವಿಲ್ಲೆ.ಅಂಬಗ ಗಜಾನನ ಮಗನ ಟ್ರೀಟ್ ಮೆಂಟ್ಸ್ ಡಯಾಲಿಸಿಸ್ ಮಾಡ್ಳೆ ಹೇಳಿಗೊಂಡು ಬೆಂಗಳೂರಿಂಗೆ ಕರಕ್ಕೊಂಡು ಹೋಪಲೆ ಹೆರಟು ನಿಂದ. ಹೆರಟು ನಿಂದವ ಕಿಟ್ಟಣ್ಣನತ್ರೆ “ಕಿಟ್ಟಣ್ಣಾ, ಆನೀಗ ಬೆಂಗಳೂರಿಂಗೆ ಹೋಗಿ ಅಲ್ಲಿ ಏನಾದರೊಂದು ಮಗಂಗೆ ವ್ಯವಸ್ಥೆ ಮಾಡ್ತೆ. ಅಲ್ಲಿ ಎಂಗಳ ಸಂಬಂಧಿಕರು ತುಂಬಾ ಜೆನ ಇದ್ದೊವು ಅವು ಸಹಾಯ ಮಾಡುಗು, ಮಾತ್ರ ಅಲ್ಲ ಕೆಲವುಜೆನ ಕಿಡ್ನಿಕೊಡ್ಳೂ ಮುಂದೆ ಬಕ್ಕು. ಆನು ಪುನಃ ಬಪ್ಪನ್ನಾರಕ್ಕೆ ಮನೆಲಿ ಸೀತೆ ಒಂದೇ ಆವುತ್ತು.ನೀನು ರಜ ಮನೆಯ ಜವಾಬ್ದಾರಿ ತೆಕ್ಕೊಳೆಕ್ಕು” ಹೇಳಿದ.ಅಂಬಗ ಕಿಟ್ಟಣ್ಣ, ನಿನ್ನ ಕಷ್ಟ ಎನಗೂ ಅರ್ಥ ಆವುತ್ತು ಗಜಾನನ.ಆದರೆ ಆನೆಂತ ಮಾಡಲಿ? ಎನ್ನ ಸಣ್ಣ ತಂಗೆ ಮಗಳು ಸೌಮ್ಯನ ಮದುವಗೆ, ಇನ್ನು ಕೆಲವೇ ದಿನ ಇಪ್ಪದು.ಅದು “ನೀನು ಬಾರದ್ರೆ ಎನಗೆ ಮದುವೆಯೇ ಬೇಡ ಮಾವ” ಹೇಳಿದ್ದು.ಅದಕ್ಕೆ ಎನ್ನತ್ರೆ ಎಷ್ಟು ಪ್ರೀತಿ ಹೇಳಿ ನಿನಗೂ ಗೊಂತಿದ್ದನ್ನೆ!.ಹಾಂಗಾಗಿ ಆನು ನಾಳೆಯೇ ಹೋಯೆಕ್ಕು ಹೇಳಿ ಇದ್ದೆ.ಆದರೆ ಆನು ಆದಷ್ಟು ಬೇಗ ಮದುವೆ ಮುಗಿಶಿಕ್ಕಿ ಬತ್ತೆ.ಮತ್ತಾಣದ್ದೆಲ್ಲ ಆನು ನೋಡಿಗೊಂಬೆ.ಅಷ್ಟರವರೆಗೆ ನೀನಾದರೂ ಬೇರೆ ವ್ಯವಸ್ಥೆ ಮಾಡು ಆಗದೋ?” ಹೇಳಿದ.
ಅವನ ಮಾತು ಕೇಳುವಗ ಗಜಾನನಂಗೆ ’ಶಾಖ್ ’ ಬಡುದ ಹಾಂಗಾತು. ಅವ ಕನಸು-ಮನಸ್ಸಿಲ್ಲಿಯೂ ನಿರೀಕ್ಷೆ ಮಾಡದ್ದ ಉತ್ತರ ಅದಾಗಿತ್ತು. “ಎಂತದು!!?” ಮದುವೆಯೋ!!! ನಿನಗೆ ಎನ್ನ ಮಗನ ಜೀವ ಮುಖ್ಯವೋ ಅಲ್ಲಾ ಸೊಸೆಯ ಮದುವೆಯೋ?. ನೀನೆಂತ ಅಂದಾಜು ಮಾಡಿದ್ದೆ?ನೀನಿಲ್ಲದ್ರೆ ಎಂಗೊಗೆ ಬದುಕ್ಕಲೆಡಿಯ ಹೇಳಿಯಾ? ಆದರೂ ಈ ಸಂದರ್ಭಲ್ಲಿ ’ಎಡಿಯ’ ಹೇಳುವ ಮಾತು ನಿನ್ನ ಬಾಯಿಂದ ಹೇಂಗೆ ಬಂತು?. ನಿನ್ನ ಸಂಸಾರದೊವು ಮೂಸಿಯೂ ನೋಡದ್ದಿಪ್ಪಗ ’ಅನಾಥ’ ನ ಹಾಂಗಿದ್ದ ನಿನಗೆ ಆನು ಆಶ್ರಯ ಕೊಟ್ಟದು ಮರದತ್ತೋ?. ಹೀಂಗಿಪ್ಪ ಕಷ್ಟಕಾಲಲ್ಲಿ ಎನಗೊಂದು ಸಣ್ಣ ಸಹಾಯ ಮಾಡದ್ದೆ ಅವರ ಹಿಂದೆ ತಿರುಗಲೆ ನಿನಗೆ ನಾಚಿಗೆ ಆವುತ್ತಿಲ್ಲೆಯಾ?. ನಿನಗೆ ಉಪಕಾರ ಮಾಡಿದ್ದು ಹಾವಿಂಗೆ ಹಾಲೆರದ ಹಾಂಗೆ ಆತನ್ನೆ. ನಿನ್ನಂದ ಇಲ್ಲಿಗೆ ಕೆಲಸಕ್ಕೆ ಬಪ್ಪ ’ಚನಿಯ’ ಕಳ್ಳುಕುಡಿಯನೆ ಆದರೂ ಎಷ್ಟಕ್ಕು ಅಕ್ಕು.ಇಷ್ಟು ಹೇಳಿದ ಮೇಲೆ ನಿನಗಿನ್ನು ಎನ್ನ ಮನೆಲಿ ಸ್ಥಾನ ಇಲ್ಲೆ.ಈಗಳೇ ನಿನ್ನ ಗಂಟು ಮೂಟೆ ಕಟ್ಟಿಗೊಂಡು ಹೆರಡು.ಮಾತ್ರ ಅಲ್ಲ ಈ ನಿನ್ನ ದರಿದ್ರ ಮೋರೆಯ ಎನಗೆ ತೋರ್ಸಲೆಡಿಯ.ಹಾಂಗೆಲ್ಲಿಯಾದರೂ ತೋರ್ಸಿದರೆ ಎನ್ನ ಮೇಲಾಣೆ” ಹೇಳಿದ ಗಜಾನನ ಮಗನ ಕರಕ್ಕೊಂಡು ಬೆಂಗಳೂರಿಂಗೆ ಹೆರಟ.
ನಾವು ಇನ್ನೊಬ್ಬರಿಂಗೆ ಉಪಕಾರ ಮಾಡಿದರೆ; ದೇವರು ಮತ್ತೊಂದು ರೂಪಲ್ಲಿ ಖಂಡಿತಾ ಸಹಾಯ ಮಾಡಿಯೇ ಮಾಡುತ್ತವಡ.ಹಾಂಗೆಯೇ ಗಜಾನನ ಮಗಂಗೆ ರಜ ಸಮಯಲ್ಲೇ ಆರೋ ಒಬ್ಬ ಅನಾಮಧೇಯ ಕಿಡ್ನಿ ಕೊಡ್ಳೆ ಮುಂದೆ ಬಂದ.ಅದೂದೆ ’ಫ್ರೀ’ಯಾಗಿ. ಕಿಡ್ನಿ ಕಸಿ ಆಪರೇಶನ್ ಎಲ್ಲಾಸರಿಯಾಗಿ ಚೆಂದಕೆ ನಡದತ್ತು.ಮುಂದೆ ರಜ ದಿನಲ್ಲಿ ಗಣೇಶ ಹುಶಾರಾದ.ಕೆಲವು ದಿನಲ್ಲಿ ಗಜಾನನ ಮಗನ ಕರಕ್ಕೊಂಡು ಮನಗೆ ಬಂದ.ಮತ್ತೆ ಕೆಲವು ದಿನಲ್ಲಿ ಗಣೇಶ ಕಾಲೇಜಿಂಗೆ ಹೋಪಲೂ ಸುರುಮಾಡಿದ.ಈಗ ಆಮನೆಲಿ ಮದ್ಲಾಣ ಸಂತೋಷ-ಸಂಬ್ರಮ ವಾತಾವರಣ ಕಾಂಬಲೆ ಸುರುವಾತು.
ಇದೆಲ್ಲಾ ನಡದು ಒಂದು ವರ್ಷವೇ ಕಳುದತ್ತು. ಒಂದುದಿನ ಮತ್ತೆ ಕಿಟ್ಟಣ್ಣ ಅಲ್ಲಿಗೆ ಬಂದ.ಅವನ ನೋಡಿ ಗಜಾನನಂಗೆ ಪಿತ್ತ ನೆತ್ತಿಗೇರಿತ್ತು. ”ನೀನಿಗ ಎಂತಕಪ್ಪ ಬಂದದು?ಎನ್ನ ಮಗ ಸತ್ತಿದನಾ ಅಲ್ಲ ಇನ್ನೂ ಜೀವಲ್ಲಿದ್ದನಾ ನೋಡ್ಳೊ?.ಇನ್ನುದೆ ಆನು ನಿನಗೆ ಆಶ್ರಯ ಕೊಡುವೆ ಹೇಳುವ ದೂರದ ಆಶೆ ನಿನ್ನಲ್ಲಿ ಒಳುಕ್ಕೊಂಡಿದ್ದೊ ಹೇಂಗೆ?.ನೀನೆಲ್ಲಿಯಾದರೂ ಎನ್ನ ಮನೆ ಮೆಟ್ಟು ಕಲ್ಲು ಹತ್ತಿದರೆ ಜಾಗ್ರತೆ.ನಿನಗೆ ಮದುವೆಯನ್ನೂ ಮಾಡದ್ದೆ ನಿನ್ನ ಒಡಹುಟ್ಟುಗೊ ಮನೆಂದ ಹೆರಹಾಕಿದ್ದೆಂತಕೆ ಹೇಳುದು ಎನಗೆ ಅಂದೇ ಅರ್ಥ ಆಯಿದು.ಹಾಂಗಿಪ್ಪ ಮೂರು ಕಾಸಿನವ ನೀನು.ನೀನೊಬ್ಬ ಕುಟುಂಬ ದ್ರೋಹಿ, ಮಿತ್ರದ್ರೋಹೊ”. ಹೇಳಿ ಬಾಯಿಗೆ ಬಂದ ಹಾಂಗೆ ಬೈದ.
ಆದರೆ ಕಿಟ್ಟಣ್ಣಂಗೆ ಅದಲ್ಲಿ ಎಷ್ಟು ಕೇಳಿದ್ದು? ಬಿಟ್ಟಿದು ಗೊಂತಿಲ್ಲೆ.ಗಜಾನನ ಬಡ ಬಡ್ಸಿಗೊಂಡಿದ್ದ ಹಾಂಗೇ ಕಿಟ್ಟಣ್ಣ ಅವನ ಮೆಟ್ಟುಕಲ್ಲ ಬುಡಲ್ಲೇ ಕುಸುದು ಬಿದ್ದ.ಮುಟ್ಟಿ ನೋಡಿರೆ ಮೈ ಜ್ವರಲ್ಲಿ ಕೊದುಕ್ಕೊಂಡಿದ್ದತ್ತು.ಅಂಬಗ ಗಾಬರಿ ಆದ ಗಜಾನನ ಕೂಡ್ಳೇ ಅವನ ಹತ್ತರಾಣ ಆಸ್ಪತ್ರಗೆ ಸೇರ್ಸಿದ. ಪರೀಕ್ಷೆ ಮಾಡಿದ ಡಾಕ್ಟ್ರು “ಇವನ ಪರಿಸ್ಥಿತಿ ಸೀರಿಯಸ್ಸ್ ಇದ್ದ ಹಾಂಗೆ ಕಾಣುತ್ತು. ಇವನ ದೊಡ್ಡ ಆಸ್ಪತ್ರಗೆ ಕರಕ್ಕೊಂಡು ಹೋಪದೊಳ್ಳೆದು ಹೇಳಿದೊವು. “ಒಳ್ಳೆ ಗ್ರಹಚಾರ ಆತನ್ನೆ. ಹೋದೆಯಾ ಪಿಶಾಚಿ ಹೇಳಿರೆ ಬಂದೆ ಗವಾಕ್ಷಿಲಿ ಹೇಳುವ ಹಾಂಗಾತನ್ನೆ.ಇವ ಪುನಃ ಇಲ್ಲಿಗೇ ಬಂದು ಬೀಳೆಕ್ಕಾ!. ಇನ್ನಿವಂಗೆ ಎಷ್ಟು ಖರ್ಚು ಮಾಡೆಕ್ಕೊ!. ಬಹುಶಃ ಹಿಂದಾಣ ಜನ್ಮಲ್ಲಿ ನಮ್ಮ ವೈರಿಯಾಗಿರೆಕ್ಕಿವ. ಆ ಸೇಡು ತೀರ್ಸಲೆ ಈಗ ಈ ರೂಪಲ್ಲಿ ಬಂದದೊ ಏನೋ!” ಗಜಾನನ ಆವೇಶಲ್ಲಿ ಸೀತೆಯ ಹತ್ತರೆ ಹೇಳಿದ. ನಮ್ಮ ಮಗನ ಕಿಡ್ನಿ ಹಾಳಾದಿಪ್ಪಗ ಒಂದು ಸಣ್ಣ ಸಹಾಯ ಕೂಡಾ ಮಾಡದ್ದವ ಅದರ ಫಲ ಅನುಭವಿಸುತ್ತಾಇದ್ದ. ಎಂತದಕ್ಕೂ ನಾಲ್ಕು ದಿನ ಇಲ್ಲೇ ಇರ್ಲಿ. ಕಮ್ಮಿ ಆಗದ್ರೆ ಮತ್ತೆ ದೊಡ್ಡ ಆಸ್ಪತ್ರೆಗೆ ಸೇರ್ಸಿದರಾತು.ಹೇಳಿದ ಗಜಾನನ ಅವನ ನೋಡಿಗೊಂಬಲೆ ಚನಿಯನ ಆಸ್ಪತ್ರೆಲಿ ನಿಲ್ಲುಸಿಕ್ಕಿ ಬಂದ.
ಮರುದಿನ ಉದೆಕಾಲಕ್ಕೇಕಿಟ್ಟಣ್ಣ ತೀರಿ ಹೋದ ಹೇಳಿ ಆಸ್ಪತ್ರೆಂದ ಗಜಾನನಂಗೆ ಫೋನು ಬಂತು.ಗಾಬರಿ, ಗಡಿಬಿಡಿಲಿ ಗಜಾನನನೂ ಸೀತೆಯೂ ಆಸ್ಪತ್ರಗೆ ಹೋದೊವು.ಅಲ್ಲ.., ವರ್ಷ ಎಪ್ಪತ್ತಾದರೂ ಮನ್ನೆ ಮನ್ನೆ ವರೆಗೆ ಗಟ್ಟಿಮುಟ್ಟಾಗಿದ್ದ ಜೀವ ಒಣಗಿ ಹಾಳೆಯ ಹಾಂಗಾಯಿದು. ಇಷ್ಟು ಪಕ್ಕ ಎಂತಾತಿವಂಗೆ! ಹೇಳಿ ಅವು ಮಾತಾಡಿಗೊಂಡಿದ್ದಹಾಂಗೆ, ಅಲ್ಲಿ ನಿಲ್ಸಿದ ಚನಿಯ ಒಂದುಕಾಗದ ಕೊಟ್ಟಿಕ್ಕಿ “ಆನು ಸತ್ತ ಮತ್ತೆ ಅವಕ್ಕೆ ಕೊಡು ಹೇಳಿ ಕಿಟ್ಟ ಭಟ್ರು ಕೊಟ್ಟವು ಹೇಳಿತ್ತು. ಗಜಾನನ ಅದರ ಬಿಡ್ಸಿ ನೋಡಿರೆ ಅದಲ್ಲಿ ಹೀಂಗಿತ್ತು.
“ಪ್ರೀತಿಯ ಗಜಾನನಂಗೆ, ಎನ್ನ ಆನಂತಾನಂತ ನಮಸ್ಕಾರಂಗೊ.ನಿನಗೆ ನಿನ್ನ ಮಗನ ಅಸೌಖ್ಯದ ಸಮೆಲಿ ಆನು ಸಹಾಯ ಮಾಡಿದ್ದಿಲ್ಲೆ ಹೇಳುವ ಕೋಪ ಇನ್ನೂ ಹೋಗಿರ ಅಲ್ಲದಾ?ಹೇಂಗೆ ಹೋಕು ಹೇಳು.ಆನು ಮಾಡಿದ್ದೂ ಹಾಂಗೆ ಅಲ್ಲದಾ?ಆದರೆ ನೀನು ಗ್ರೇಶಿದ ಹಾಂಗೆ ಆನು ಹೋದ್ದು ಯಾವ ಮದುವಗೂ ಅಲ್ಲ. ನಿನ್ನ ಮಗಂಗೆ ಕಿಡ್ನಿ ಕೊಡ್ಳೆ!.ನಿನ್ನ ಋಣವ ತೀರ್ಸಲೆ ಅದು ಮಾತ್ರ ಒಳ್ಳೆ ಅವಕಾಶ ಹೇಳಿ ಎನ ಕಂಡತ್ತು. ಅಂದಾನು ಕಿಡ್ಣಿ ಕೊಡ್ತೆ ಹೇಳುವಗ ನೀನು ಒಪ್ಪದ್ದ ಕಾರಣಂದ ನಿನ್ನ ಹತ್ತರೆ ಎನ್ನ ಕಿಡ್ನಿ ಮ್ಯಾಚ್ ಆಗ ಹೇಳೆಕ್ಕೂಳಿ ಡಾಕ್ಟ್ರನ ಹತ್ತರೆ ಹೇಳಿದೆ.ಆದರೆ ಯಾವಾಗ ನಿನ್ನ ಮಗಂಗೆ ಕಿಡ್ನಿ ಫೈಲ್ ಹೇಳಿ ಗೊಂತಾತೋ ಅಂಬಗಳೇ ಆನು ಡಾಕ್ರನತ್ತರೆ ತೋರ್ಸಿ ಆನೇ ಕಿಡ್ನಿ ಕೊಡುದು ಹೇಳಿ ನಿಘಂಟು ಮಾಡಿತ್ತಿದ್ದೆ.ಕೊಟ್ಟರೆಂತಾತು? ಎನ್ನದು ಇಂದೋ ನಾಳೆಯೋ ಬಿದ್ದೋಪ ಜೀವ.ಆದರೆ ಅವ ಇನ್ನು ಎಷ್ಟೋ ವರ್ಷ ಬದುಕ್ಕಿ ಬಾಳೆಕ್ಕಾದವ. ಒಬ್ಬಂಟಿಯಾದ ಆನು ಸತ್ತರೆ ಆರಿಂಗು ಯಾವ ನಷ್ಟವೂ ಇಲ್ಲೆ ಅಲ್ಲದಾ?.
ಎನ್ನತ್ರೆ ನೀನೇಕೆ ಕಿಟ್ಟಣ್ಣ ಮದುವೆ ಆಯಿದಿಲ್ಲೆ ? ಹೇಳಿ ಕೇಳಿಗೊಂಡಿತ್ತಿದ್ದಿ .ಅಂಬಗೆಲ್ಲಾ ಆನು ಉತ್ತರ ಕೊಡದ್ದೆ ಮಾತು ಮರೆಶಿಗೊಂಡಿತ್ತಿದ್ದೆಲ್ಲೋ? ಅದರ ಈಗ ಹೇಳ್ತೆ. ಆನು ಸಣ್ಣ ಪ್ರಾಯಲ್ಲಿ ಇಲ್ಲಿಗೆ ಬಂದುಗೊಂಡಿಪ್ಪಗ; ಈಗ ನಿನ್ನಹೆಂಡತ್ತಿಯಾಗಿಪ್ಪ ಸೀತೆಯ ನೋಡಿ ಇಷ್ಟ ಪಟ್ಟಿತ್ತಿದ್ದೆ.ಆದರೆ ಆ ವಿಷಯ ಮಾಂತ್ರ ಆರಿಂಗೂ ಗೊಂತಿಲ್ಲೆ.ಸ್ವತಃ ಸೀತಗೆ ಕೂಡಾ.ನಾವೆಲ್ಲಾ ಒಟ್ಟಿಂಗೆ ಆಡುವಗ ನಿನಗೆ ನೆಂಪಿದ್ದೋ ಸೀತೆ ಎನ್ನತ್ರೆ ಅಂಬಗಂಬಗ ಹೇಳುಗು. “ಕಿಟ್ಟಣ್ಣ, ನಿನಗೆ ದೊಡ್ಡಪ್ಪಗ ಆರನ್ನೂ ಮದುವೆ ಅಪ್ಪಲೆಡಿಯ!. ನೀನು ಎಲ್ಲೋರಿಂಗು ಅಣ್ಣ ಅಲ್ಲದಾ? ಅಣ್ಣನ ಆರಾರು ಮದುವೆ ಆವುತ್ತೊವೋ?” ಹೇಳಿ.ಎನಗೆ ಆಸಮಯಲ್ಲೆಲ್ಲ ಭಾರೀ ಬೇಜಾರಕ್ಕು. ಹಾಂಗೆ ಹೇಳೆಡ ಸೀತೆ.ಆನು ಎಲ್ಲೋರಿಂಗು ಕಿಟ್ಟಣ್ಣ ಆದಿಕ್ಕು ಆದರೆ ನಿನಗೆ ಆನು ಬರೀ ’ಕಿಟ್ಟ’ ಮಾತ್ರ.ನೀನೆನ್ನ ಕಿಟ್ಟಣ್ಣ ಹೇಳೆಡ. ಒಂದಲ್ಲ ಒಂದು ದಿನ ಖಂಡಿತವಾಗಿಯೂ ಹೇಂಗಾರೂಮಾಡಿ ಆನೇ ನಿನ್ನ ಮದುವೆ ಅಪ್ಪದು ಹೇಳಿ ಮಾತು ಬಾಯಿವರೆಗೆ ಬಂದರೂ ಅದರ ಕಷ್ಟಲ್ಲಿ ಹೇಂಗೋ ತಡದು ನಿಲ್ಸುವೆ.ಆದರೆ ಪ್ರಾಯಕ್ಕೆ ಬಂದ ಮೇಲೆ ಆನು ಸೀತಗೆ ಯೋಗ್ಯ ಮಾಣಿಯಾ? ಹೇಳಿ ಎನ್ನನ್ನೇ ಕೇಳಿಗೊಂಬಲೆ ಸುರುಮಾಡಿದೆ. ಅವು ಶ್ರೀಮಂತರು.ಆನು ಬರೀ ಬಡವ. ಸೀತಗೆ ಕೊಡ್ಳೆ ಎನ್ನತ್ರೆ ಪ್ರೀತಿ ಬಿಟ್ಟರೆ ಬೇರೆಂತೂ ಸಂಪತ್ತಿಲ್ಲೆ.ಅದರ ಜೀವನವ ಹಾಳು ಮಾಡುದು ಬೇಡ.ಅದಕ್ಕೆ ಸರಿಯಾದ ವರನನ್ನೇ ನೋಡಿ ಮದುವೆ ಆಗಲಿ. ಅದು ಎಲ್ಲಿದ್ದರೂ ಸುಖವಾಗಿರಲಿ ಹೇಳಿ ಎನ್ನ ಆಶಗೆ ತಿಲಾಂಜಲಿ ಕೊಟ್ಟೆ. ಆದರೂ ಮೊದಲ ಪ್ರಿತಿಯ ಎಂದಿಂಗು ಮರವಲೆಡಿತ್ತಿಲ್ಲೇಡ.ಹಾಂಗೆ ಆನುದೆ ಸೀತೆಯ ನೆಂಪಿಲ್ಲಿ ಒರಗದ್ದೆ ಇರುಳು ದೂಡಿದ ದಿನಂಗೊಕ್ಕೆ ಲೆಕ್ಕವೇ ಇರ.ಅದರ ಕಂಡು ಎನ್ನ ಅಬ್ಬೆಪ್ಪ “ನಿನ ಎಂತಾವುತ್ತು ಕಿಟ್ಟಾ?. ನೀನೇಕೆ ಇರುಳು ಒರಗುತ್ತಿಲ್ಲೆ ?” ಕೇಳುವಗ ಆನೆಂತಾರೂ ಕಾರಣ ಕೊಟ್ಟು ತಪ್ಪುಸುವೆ.ಮುಂದೆ ಎನ್ನ ಮನಸ್ಸಿಂಗೆ ಬೇರೆ ಯಾವ ಕೂಸುಗಳ ಕಲ್ಪನೆಯನ್ನೂ ಮಾಡ್ಳೆಡಿಯದ್ದೆ ಮದುವೆಯ ಆಶೆಯನ್ನೇ ಬಿಟ್ಟೆ.ಆದರೆ ಗಜಾನನಾ, ನೀನು ಸೀತೆಯ ಮದುವೆ ಆದ ಸಂಗತಿ ಆನಿಲ್ಲಿಗೆ ಬಂದ ಮೇಲೆಯೇ ಗೊಂತಾದ್ದು.ಆದರೆ ನೀನು ಸೀತೆಯ ಮೇಗೆ ಯಾವ ಸಂಶಯವನ್ನೂ ಮಡುಗೆಡ. ಈ ಯಾವ ಸಗತಿಯೂ ಅದಕ್ಕೆ ಗೊಂತಿಲ್ಲೆ.ನಿನ್ನ ಹೆಂಡತಿಯಾಗಿ ಆನದರ ನೋಡಿಅಪ್ಪದ್ದೇ ಅದಕ್ಕೆ ಎನ್ನ ತಂಗೆಯ ಸ್ಥಾನ ಕೊಟ್ಟಿದೆ.ಎನಗಿನ್ನು ರಜ ಸಮಯ ಬದುಕ್ಕಿದ್ದು ನೀನು ಬಪ್ಪಲೆ ಬಿಡದ್ದರೂ ಅನಾಮಧೇಯವಾಗಿದ್ದುಗೊಂಡೇ ನಿಂಗೊ ಸಂತೋಷಲ್ಲಿಪ್ಪದರ ಕಣ್ಣು ತುಂಬಾ ನೋಡೆಕ್ಕು ಹೇಳಿ ಆಶೆ ಇದ್ದತ್ತು.ಆದರೆ ಎನಗೆ ಹಾಳಾದ ’ಡೆಂಗ್ಯುಜ್ವರ’ ಬಂದ ಕಾರಣಂದ ಎನ್ನ ಇನ್ನೊಂದು ಕಿಡ್ನಿಯೂ ಹೋತು!.ಇನ್ನು ಆನು ಹೆಚ್ಚುದಿನ ಬದುಕ್ಕುದು ಕಷ್ಟ ಹೇಳಿ ಡಾಕ್ಟ್ರು ಹೇಳಿದ್ದೊವು.ಅದರಿಂದ ಎನಗೇನೂ ಬೇಜಾರಿಲ್ಲೆ.ಆದರೆ ಸಾವಂದ ಮದಲೇ ಒಂದರಿ ನಿಂಗಳ ನೋಡಿಕ್ಕಿ ಹೋಯೆಕ್ಕುನಿಂಗಳ ಮೋರೆಲಿ ಮತ್ತೆ ಬಂದ ಸಂತೋಷದ ಕಳೆ ಕಾಣೆಕ್ಕು ಹೇಳಿ ಬಂದೆ.ಅದರ ಕಂಡಾತು.ಈಗ ಎನ್ನ ಜೀವನ ಸಾರ್ಥಕ ಆತು ಹೇಳಿ ಎನಗೆ ಕಾಣ್ತು. ಆನು ಎಲ್ಲಿಯಾದರೂ ಇಲ್ಲಿಯೇ ಸತ್ತರೆ ನೀನು ಎನ್ನ ಕ್ರಿಯಾಕರ್ಮ ಹೇಳಿ ಎಂತದೂ ಮಾಡೆಕ್ಕು ಹೇಳಿ ಇಲ್ಲೆ.ಜೀವಲ್ಲಿಪ್ಪಗ ನೀನೆನಗೆ ಕೊಟ್ಟ ಆಸರೆಂದ ಹೆಚ್ಚಿಗೆ ಏವದಿದ್ದು ಹೇಳು?.ನಿಂಗಳ ನೆಂಪಿಲ್ಲೇ ಆನು ಹೋವುತ್ತಾ ಇದ್ದೆ. ನಿಂಗೊಗೆ ಒಳ್ಳೆದಾಗಲಿ.”
ಇಂತೀ ನಿನ್ನ ಮಿತ್ರ, ಕಿಟ್ಟಣ್ಣ.
ಉಸಿರು ಬಿಗಿ ಹಿಡುಕ್ಕೊಂಡು ಕಾಗದ ಓದಿ ಮುಗುಶಿದ ಗಜಾನನನೂ ಸೀತೆಯೂ ಅವನ ಮೇಲೆ ಬಿದ್ದು ಗೋಳೋ ಹೇಳಿ ಕೂಗಿದೊವು.ಎಂಗೊಗೆಬೇಕಾಗಿ ನಿನ್ನ ಬಾಳನ್ನೇ ಬಲಿಕೊಟ್ಟ ನೀನೆಷ್ಟು ದೊಡ್ದ ಮನುಷ್ಯ ಕಿಟ್ಟಣ್ಣಾ!? ಕಡೇಂಗೂ ಎಂಗೊ ನಿನ್ನ ಅರ್ಥ ಮಾಡಿಗೊಳದ್ದೆ ಹೋದೆಯನ್ನೇ.ಇಷ್ಟು ಸಮಯ ನಿನಗೆ ಆಸರೆ ಕೊಟ್ಟು, ಕಡೆಂಗೆ ನಿನ್ನ ಬಾಳನ್ನೇ ಬಲಿಕೊಟ್ಟ ಹಾಂಗಾತು.ಅದಕ್ಕೇ ನೀನು ಕಿಡ್ನಿ ಕೊಡುದು ಬೇಡ ಹೇಳಿ ಆನು ಹೇಳಿದ್ದು.ಆದರೆ ನೀನು ಡಾಕ್ಟ್ರ ಹತ್ತರೆ ಲೊಟ್ಟೆ ಹೇಳ್ಸಿ ಎಂಗಳ ನಂಬ್ಸಿದೆ!.ನಿನ್ನ ಈ ಋಣವ ಎಂಗೊ ಹೇಂಗೆ ತೀರ್ಸಲಿ ಹೇಳು?.ಇನ್ನು ನಿನಗಾಗಿ ಎಂಗೊಗೆ ಬೇರೆಂತಮಾಡ್ಳೆ ಒಳಿಯದ್ರೂ ನಿನ್ನ ದಿನಮಾನಂಗಳ ಮಾಂತ್ರ ಚಾಚೂ ತಪ್ಪದ್ದೆ ಮಾಡುವೆಯೊ.” ಹೇಳಿಗೊಂಡು ಗೆಂಡ-ಹೆಂಡತಿ ಭಾರವಾದ ಮನಸ್ಸಿಲ್ಲಿ ಕಿಟ್ಟಣ್ಣನ ಹೆಣವ ತೆಕ್ಕೊಂಡು ಮನಗೆ ಬಂದವು. —–೦——
{ ಕತೆ ಮುಗಾತು}

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ವಿಜಯತ್ತೆ

  ಈ ಸರ್ತಿಯಾಣ [೨೦೧೪] ಕೊಡಗಿನ ಗೌರಮ್ಮ ಪ್ರಶಸ್ತಿ ಬಂದ ಕತೆಯ ಓದುಗರಿಂಗೆ ಸುಲಭ ಅಪ್ಪಲೆ ಬೇಕಾಗಿ; ಎರಡು ಸರ್ತಿಯಾಗಿ ಬಯಲಿಲ್ಲಿ ಹಾಕಿದೆ.ಓದಿ ಅಭಿಪ್ರಾಯ ಹೇಳಿ. ಇತಿ, ವಿಜಯತ್ತೆ, ಈ ಕತಾಸ್ಪರ್ಧೆಯ ಕಾರ್ಯದರ್ಶಿ

  [Reply]

  VN:F [1.9.22_1171]
  Rating: 0 (from 0 votes)
 2. parvathimbhat
  parvathimhat

  ಕಥೆ ಹಾಕುಲೆಅನುಮತಿ ಕೊಟ್ಟ ಒಪ್ಪಣ್ಣಬಳಗಕ್ಕೂ , ಹಾಕಿದ ವಿಜಯಕ್ಕ೦ಗೂ ಆನು ಆಭಾರಿ .ಹಾ೦ಗೇ ಎಲ್ಲೋರೂ ಓದಿ ಅಭಿಪ್ರಾಯ ತಿಳಿಶೆಕ್ಕಾಗಿ ವಿನ೦ತಿಸುತ್ತೆಯೊ .

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಕಥೆ ಭಾರಿ ಲಾಯಕ ಆಯಿದು ಅತ್ತಿಗೆ.ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 4. parvathimbhat
  parvathimhat

  ಕಥೆಯ ಓದಿ ಅಭಿಪ್ರಾಯ ತಿಳಿಶಿದ್ದಕ್ಕೆ ಧನ್ಯವಾದ ಭಾವ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಶರ್ಮಪ್ಪಚ್ಚಿಕೇಜಿಮಾವ°ಸಂಪಾದಕ°ಸುಭಗಶಾಂತತ್ತೆನೆಗೆಗಾರ°ಕಾವಿನಮೂಲೆ ಮಾಣಿಅನುಶ್ರೀ ಬಂಡಾಡಿಪುಟ್ಟಬಾವ°ಅನು ಉಡುಪುಮೂಲೆಡಾಗುಟ್ರಕ್ಕ°ಚುಬ್ಬಣ್ಣಗಣೇಶ ಮಾವ°ಬೋಸ ಬಾವಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿಶಾ...ರೀದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣಅಕ್ಷರದಣ್ಣಅಕ್ಷರ°ಚೂರಿಬೈಲು ದೀಪಕ್ಕಪ್ರಕಾಶಪ್ಪಚ್ಚಿಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ