Oppanna.com

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 11

ಬರದೋರು :   ಚೆನ್ನೈ ಬಾವ°    on   23/05/2013    7 ಒಪ್ಪಂಗೊ

ಚೆನ್ನೈ ಬಾವ°

ಮೌಢ್ಯ ಏವತ್ತೇ ಬಿರುದ್ದು.. , ಬೈಲಿಲಿ ಅನುಪ್ಪತ್ಯ ಸುರುವಾಯ್ದು.., ಆದರೆ ರಮ್ಯಂಗೆ ಕೋಲೇಜು ಸುರುವಾಯೇಕ್ಕಷ್ಟೆ.

ಸತ್ಯಣ್ಣಂಗೂ ಜೆಂಬ್ರಂದ ಮೇಗೆ ಜೆಂಬ್ರಂಗೊ..,  ಪುರುಸೊತ್ತಿಲ್ಲದ್ದ ತೆರಕ್ಕು..

ಅಂದರೂ ಬೈಲಿಗೆ ಅಡಿಗೆ ಸತ್ಯಣ್ಣನ ಶುದ್ದಿ ಇದ್ದು ಇದಾ –

 

1.

ಅಡಿಗೆ ಸತ್ಯಣ್ಣ° ಲೋಕಾಭಿರಾಮ ಮಾತಾಡ್ಳೆ ಸಿಕ್ಕುವದು ಅಪರೂಪ..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಸಿಕ್ಕಿರೆ ತನಗೊಂತಿಪ್ಪ ಶುದ್ದಿಯ ಹೇಳದ್ದೆ ಕೂಪದೂ ಅಪರೂಪ..

ಕನ್ಯಾನಕ್ಕೆ ಅನುಪ್ಪತ್ಯ ಅಡಿಗ್ಗೆ ಹೋದ ಸತ್ಯಣ್ಣ° ಹೋಳಿಗೆ ಮಾಡ್ಳೆ ಬೇಳೆ ಕುಟ್ಟುಗಲ್ಲಿ ಮಡಿಗಿ ಬೇವಲೆ ಕಾದೊಂಡಿತ್ತಿದ್ದ°..

ಮನೆ ಯೆಜಮಾಂತಿ ಮನೆಯೊಳಂದ ಆಸರಿಂಗೆ ಹೇದು ಚಾಯ ಮಾಡಿತಂದುಗೊಟ್ಟು, “ಮತ್ತೆಂತ ಸತ್ಯಣ್ಣ ಶುದ್ದಿ” ಹೇದು ಪಟ್ಟಾಂಗಕ್ಕೆ ಕೂದತ್ತು..

ಅದೂ ಇದೂ ಮಾತಾಡಿಯಪ್ಪಗ ಅಡಿಗೆ ಸತ್ಯಣ್ಣ° ಹೇದ°- “ಮೂಡಂಬಿಕಾನ ಅತ್ತೆಯ ಮಗಳು ಆದಿತ್ಯವಾರ ಹೆತ್ತಿದಡೋ., ಮಾಣಿಯಡೋ..”

ಮನೆ ಯಜಮಾಂತಿ ಹೆಮ್ಮಕ್ಕ – “ಅಂಬಗ ಅದು ಬಸರಿಯೋ?!”

ಸತ್ಯಣ್ಣಂಗೆ ಬೆಗರು ಬಿಚ್ಚಿತ್ತು, ಹೆಗಲ ಹರ್ಕಿಲ್ಲಿ ಮೋರೆ ಉದ್ದಿಗೊಂಡು ಬೇಳೆ ಬೆಂತೋ ನೋಡ್ಳೆ ಸೌಟು ಹುಡ್ಕಲೆ ಹೆರಟ°. 😀

 

~~

2.

ಅಡಿಗೆ ಸತ್ಯಣ್ಣಂಗೆ ಅಡಿಗೆ ಶ್ರದ್ಧೆ ಇದ್ದಷ್ಟು ಬೇರೆ ಎಂತರ್ಲಿಯೂ ಇಲ್ಲೆ..

“ಹತ್ತು ಜೆನ ಹೊಟ್ಟೆತುಂಬ ಸಂತೋಷಲ್ಲಿ ಉಣ್ಣೆಕು, ಮನೆಯಜಮಾನಂಗೆ ಒಳ್ಳೆದಾಯೇಕು” – ಇದುವೇ ಸತ್ಯಣ್ಣನ ಅಂತರಂಗ.

ಅದು ಮಳೆಗಾಲ., ಪೆರಿಯಡ್ಕಲ್ಲಿ ಅನುಪ್ಪತ್ಯ.. ಅಡಿಗೆ ಸತ್ಯಣ್ಣನೇ ಅಲ್ಲಿಗೆ..

ಗ್ರೈಂಡರು ಇದ್ದು  – ಕರೆಂಟು ಇಲ್ಲೆ., ಸ್ಟೌ ಇದ್ದು – ಗೇಸು ಹಂಡೆ ಕಾಲಿ.

ಪಾತ್ರೆ ಅಲ್ಪ ಇದ್ದು.., ಬೇಶುವಾಂಗಿಪ್ಪದು ನೇರ್ಪದ್ದು ಒಂದೂ ಇಲ್ಲೆ..

ಬಾವಿ ಇದ್ದು ., ಓ ಅಷ್ಟು ದೂರಂದ ನೀರು ಎಳದು ಹೊರೆಕು..

ಅಕ್ಕಿ ಬೇಳೆ ಇದ್ದು .,  ಜಾಳಿಸಿ ಆಯ್ದಿಲ್ಲೆ

ಸೌದಿ ಇದ್ದು .,  ಹನಿಕ್ಕಲ ಕರೇಲಿ ಓಶಿ ಮಡಿಗಿದ್ದು ಅರೆಚೆಂಡಿ..

ಮರೆ ಕಟ್ಟಿದ್ದವು.,  ಹೊಗೆ ಏನೂ ಹೆರಹೋಗ..

ಉಫ್ಹ್ .. ಸತ್ಯಣ್ಣಂಗೆ ಸಾಕೋ ಸಾಕಾತು.. ಅಂದರೂ ಕೆಲಸಲ್ಲಿ ಶ್ರದ್ಧೆ ಏನೂ ಕಮ್ಮಿ ಇಲ್ಲೆ.

ಸತ್ಯಣ್ಣ ಅಡಿಗೆ ಮಗ್ನನಾಯ್ದ.. ಅಂತೆ ಈಗ ಚೆರೆಪೆರೆ ಮಾತಾಡ್ಸುವಾಂಗೆ  ಇಲ್ಲೆ..

ಸತ್ಯಣ್ಣನ ಪರಿಸ್ಥಿತಿಯ ನೋಡಿಗೊಂಡಿದ್ದ ಬಂದೋರ ಪೈಕಿ ಒಬ್ಬ° ಬೆಳಿ ಅಂಗಿ ಭಾವ° ಅಡಿಗೆ ಕೊಟ್ಟಗೆ ಹತ್ರಂಗೆ ಬಂದು ಸುರುಮಾಡಿದ° –

“ಏ ಸತ್ಯಣ್ಣೋ.. ಭಗವದ್ಗೀತೆಲಿ ಕೃಷ್ಣ ಎಂತ ಹೇಳಿದ್ದ° ಗೊಂತಿದ್ದೋ?”

ಸತ್ಯಣ್ಣ° ಹೇದ°- ಕೃಷ್ಣ°ಎಂತದೇ ಹೇಳಿದ್ದಿರ್ಲಿ.., ನಿಂಗೊಗೆಂತಾಯೇಕೀಗ? ಮಜ್ಜಿಗೆ ನೀರೋ?..  ಓ ಆ ಕವಂಗಲ್ಲಿ ಇದ್ದು. ಗ್ಲಾಸು ತಂದರೆ ಎರೆಶಿ ಕೊಡುವೆ” 😀

 

~~

3.

ತೂಕ ಜಾಸ್ತಿ ಆದ್ದರ ಇಳುಶಲೆ ಅಡಿಗೆ ಸತ್ಯಣ್ಣ ತನ್ನ ಖಾಯಂ ಆಯುರ್ವೇದ ಡಾಕುಟ್ರತ್ರೆ ಹೋದ°..

“ತೂಕ ಕಮ್ಮಿ ಮಾಡ್ಳೆ ಎಂತಾರು ಮದ್ದಿದ್ದೋ ಡಾಕುಟ್ರೆ” ಹೇದು ಕೇಟ..

ಡಾಕುಟ್ರು – “ಅಶನ, ಸ್ವೀಟು, ಮೊಸರು, ಎಣ್ಣೆ ತುಪ್ಪ ಐಟಂಗಳ ಬಿಡೆಕು” ಹೇದು ಹೇದವು..

ಸತ್ಯಣ್ಣಂಗೆ ಮಂಡೆ ಬೆಶಿ ಆತು – “ಪಾಕಶಾಸ್ತ್ರಜ್ಞನಾಗಿ ಸಾವಿರಾರು ಜೆನಂಗೊಕ್ಕೆ ಅಶನ ಬೇಶಿ ಹಾಕುವ ಎನಗೇ ಹೀಂಗೆ ಹೇಳೊದೋ!., ಒಳ್ಳೆ ಕತೆ ಆತನ್ನೆ ಇದು ನಿಂಗಳದ್ದು”.

“ಅಂಬಗ ಈಗ ಬೇಡ ಇನ್ನೊಂದು ರಜ ಸಮಯ ಕಳುದು ನೋಡ್ವೋ” ಹೇದು ಡಾಕುಟ್ರಿಂಗೆ ಹೇಳಿಕ್ಕಿ ಮೆಟ್ಳು ಇಳುದ° ಅಡಿಗೆ ಸತ್ಯಣ್ಣ°. 😀

~~

4.

ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಇಲ್ಲದ್ರೆ ಮನೆಲಿ ಸಾವಕಾಶ.

ಅಂದು ಹಾಂಗೆ ಬಿಡುವಿನ ದಿನ. ಆದಿತ್ಯವಾರವೂ ಕೂಡ.

ಉದಿಯಪ್ಪಗಳೇ ಅಡಿಗೆ ಸತ್ಯಣ್ಣಂಗೂ ಶಾರದೆಗೂ ರಮ್ಯಂಗೂ ಪಂದ್ಯ ಆತು.

ಪಂದ್ಯ ಎಂತರ ಹೇಳಿರೆ “ದೋಸೆ ಬೇಶಲೆ ರಮ್ಯಂಗೆ ಅರಡಿಗು ಹೇದು ರಮ್ಯ., ಅರಡಿಯ ಎಡಿಯಾ ಹೇಳಿ ಅಮ್ಮ° ಅಪ್ಪ°.

ಸರಿ ಇಂದು ದೋಸೆ ರಮ್ಯನೇ ಮಾಡುವದು ಹೇದು ಒಲೆಬುಡಕ್ಕೆ ಹೋತು ರಮ್ಯ. ಬಟ್ಳು ಮಡಿಕ್ಕೊಂಡು ಕೂದವು ಸತ್ಯಣ್ಣ°, ಶಾರದೆ.

ಕಾವಲಿಗೆ ಒಲೆಲಿ ಮಡಿಗಿ ಆತು … ಕಾವಲಿಗೆಲಿ ದೋಸೆ ಎರದಾತು… ಕಾವಲಿಗೆ ಮುಚ್ಚಿ ಆತು …

ರಜಾ ಹೊತ್ತಾತು.. ದೋಸೆ ಬೆಂದಪ್ಪಲಾತು..

ದೊಡ್ಡ ಹೋಟ್ಳ ಅಡಿಗೆ ಭಟ್ಟನಾಂಗೆ ಎಳಕ್ಕುವ ಸೌಟಿನ ಕೈಲಿ ಹಿಡ್ಕೊಂಡು ಮೋರೆಲೆ ದೋಸೆ ಮಾಡ್ತೆಂತ ಮಹಾ ಕೆಲಸವೋ ಹೇಳ್ವಾಂಗೆ ಪೌರುಷವ ತೋರ್ಸಿಯೊಂಡು ಕಾವಲಿಗೆ ಮುಚ್ಚಳ ತೆಗದತ್ತು..

ಸಟ್ಟುಗಲ್ಲಿ ಎಳಕ್ಕಲೆ ಸುರುಮಾಡಿತ್ತು….

ಕಾವಲಿಗೆಲಿ ಇಪ್ಪದೆಲ್ಲ ಎಳಕ್ಕುವ ಸೌಟಿಂಗೆ ಅಂಟಿತ್ತು. ಹರ್ಕಟೆ ಹಸಿ ದೋಸೆ ಎಳಕ್ಕಲೆ ಬೈಂದಿಲ್ಲೆ..

ಬೇಡ ಮಗಳು., ನೀನು ಮಾಡಿದ ದೋಸೆ ಸಾಕು, ಅಪ್ಪಂಗೆ ಹಶು ಆವ್ತು ಹೇದು ರಮ್ಯನ ಅಲ್ಲಿಂದ ಏಳ್ಸಿತ್ತು.

ಶಾರದೆ ಮತ್ತೆ ಒಲಗೆ ಕಿಚ್ಚು ಹಾಕಿ ಕಾವಲಿಗೆ ಮಡಗಿತ್ತು. 😀

 

~~

5.

ಕಾಸ್ರೋಡಿಂಗೆ ಹೋದ ಅಡಿಗೆ ಸತ್ಯಣ್ಣಂಗೆ ವಾಪಾಸು ಬಪ್ಪಲೆ ಬೆಂಗಳೂರು ಬಸ್ಸು ಕಂಡತ್ತು.

ಬಸ್ಟೇಂಡಿಂಗೆ ಎತ್ತುವದೂ ಬಸ್ಸು ಹೆರಡುವದೂ ಒಂದೇ ಸಮಯ ಆತು..

ನಿಲ್ಲು ನಿಲ್ಲು ಹೇದು ಕೈ ಭಾಷೆ ಮಾಡ್ಯೊಂಡು ಹಿಂದಂದಲೇ ಓಡಿಗೊಂಡು ಬಪ್ಪ ಅಡಿಗೆ ಸತ್ಯಣ್ಣನ ಕಂಡು ಬಸ್ಸು ಡ್ರೈವರ ಬಸ್ಸ ನಿಲ್ಸಿತ್ತು..

ಬಾಗಿಲ ಬುಡಲ್ಲಿ ಇದ್ದ ಕಂಡೆಕ್ಟ್ರ ಎಲ್ಲಿಗೆ ಹೋಯೇಕು ಕೇಳಿತ್ತು..

“ಇದು ಬೆಂಗಳೂರಿಂಗೆ ಹೋಪ ಬಸ್ಸೋ?”

“ಅಪ್ಪು .. ಬನ್ನಿ”

“ಇದು ಹಾಸನ ಆಗಿ ಬೆಂಗಳೂರು ಹೋಪದ”?

“ಅಪ್ಪು ..ಬನ್ನಿ”

“ಇದು ಸಕ್ಲೇಶಪುರ ಆಗ್ಯೊಂಡು ಹಾಸನ ಹೋಪದ”?

“ಅಪ್ಪು.. ಬನ್ನಿ”

ಸತ್ಯಣ್ಣ ಬಸ್ಸ ಏರಿ ಕಾಲಿ ಇತ್ತ ಸೀಟಿಲ್ಲಿ ಕೂದುಗೊಂಡ.

“ಟಿಕೆಟು ಟಿಕೇಟು….”- ಕಂಡೆಕ್ಟ್ರ ಬಂತು.

ಸತ್ಯಣ್ಣ ಕೇಳಿದ° – “ಇದು ಉಪ್ನಂಗಡಿಯಾಗಿ ಹೋವ್ತಲ್ಲದ”?

“ಅಪ್ಪು … ಹೋವ್ತು.., ಟಿಕೆಟ್ ಟಿಕೆಟ್”

“ಇದು ಪುತ್ತೂರು ಬಸ್ಟೇಂಡಿನೊಳ ಹೋವ್ತಾ”

“ಅಪ್ಪು ಹೋವ್ತು. ನಿಂಗೊಗೆ ಎಲ್ಲಿಗೆ ಈಗ ಟಿಕೇಟು?”

“ಎನ ಪೆರ್ಲಕ್ಕೆ. ಒಂದು ಇಡೀ ಟಿಕೇಟು ಕೊಟ್ಟಿಕ್ಕಿ ಸಾಕು”

ಕಂಡೆಕ್ಟ್ರಂಗೆ ಬೆಗರು ಬಿಚ್ಚಿದ್ದೋ ಮೈಂದ ಹೋದ್ದೋ ಗೊಂತಾಯ್ದಿಲ್ಲೆ. 😀

~~

6.

ಅಡಿಗೆ ಸತ್ಯಣ್ಣನ ಹೋಳಿಗಿಯೇ ರಂಗಣ್ಣನ ಅಂದು ವಿಟ್ಲ ಪೋಲಿಸು ಹತ್ರಂದ ಬಚಾವ್ ಮಾಡಿದ್ದದು ಹೇಳ್ವದು ರಂಗಣ್ಣಂಗೆ ಮರದಿಕ್ಕು ಆದರೆ ಸತ್ಯಣ್ಣಂಗೆ ಅದೆಲ್ಲ ಮರೆಯ..

ಕಾನಾವು ಮನೆ ಒಕ್ಕಲು ಕಳ್ಸಿ ಹೆರಡುವಾಗ ಕಾನಾವಕ್ಕ ಐದರ ಒಂದು ಕಟ್ಟು ಹೋಳಿಗೆ ಕೂಡ ಕೊಟ್ಟಿತ್ತವು ಅಡಿಗೆ ಸತ್ಯಣ್ಣಂಗೆ ಮನಗೆ ಆತು ಹೇದು..

ಕೆಲಸ ಮುಗ್ಸಿ ಅಡಿಗೆ ಸೆಟ್ಟಿನವೂ ಒಟ್ಟಿಂಗೆ ನಡಕ್ಕೊಂಡು ಹೆರಟವು ಬಸ್ಸಿನತ್ರಂಗೆ..

ಸತ್ಯಣ್ಣ° ಬೀಸ ನಡೆತ್ತ ಜೆನ ಮುಂದೆ ಬೀಸ ಬೀಸ ನಡಕ್ಕೊಂಡಿತ್ತಿದ್ದ..

ಹಿಂದಂದ ಕೆಕೆಪೆಕೆ ನೆಗೆಮಾಡ್ಯೊಂಡು ಮಾತಾಡ್ಯೊಂಡು ಬೀಸ ಬೀಸ ನಡವ ರಂಗಣ್ಣನ ಸೆಟ್ಟು..

ರಂಗಣ್ಣ ಹಿಂದಂದಲೇ ಹೇಳೋದು ಕೇಳಿತ್ತು – “ಸತ್ಯಣ್ಣ.., ಇಂದ್ರಾಣ ಹೋಳಿಗೆ ಮನಗೆ ಎತ್ತುಗೋ?”

ಅಂತೇ ಏನಾರು ಹೇಳಿರೆ ಆರಿಂಗಾರು ಪಿಸುರು ಬಾರದ್ದಿಕ್ಕೋ..

ಸತ್ಯಣ್ಣ° ಅಲ್ಲೇ ತಿರಿಗಿ ರಂಗಣ್ಣನ ನೋಡಿ ಹೇದ° – “ಇದಾ ರಂಗಣ್ಣೋ.. ನೀ ಗ್ರೇಶುತ್ತಷ್ಟು ಹೆಬಗ°  ಅಲ್ಲ ಆತ ಆನು”.

ಬೇಕಾತೋ ರಂಗಂಗೆ ಇದು !!  😀

~~

7.

ಈಗೀಗ ಹಳ್ಳಿ ಮನೆಗಳಲ್ಲಿ ಅನುಪ್ಪತ್ಯ ಮಾಡಿಗೊಂಬದು ಕಷ್ಟ , ಪೇಟೆ  ಮನೆಗಳಲ್ಲೂ ಅನುಪ್ಪತ್ಯ ಅಡಿಗೆ ಮಾಡೋದು ಕಷ್ಟ..

ಹಾಂಗಾಗಿ ಪೇಟೆ ಮನೆಗಳಲ್ಲಿ ಹೋಟ್ಳುಗಳಿಂದಲೋ, ಆರಾರು ಕಂಟ್ರಾಟುದಾರರತ್ರವೋ ‘ಲಂಚ್’ ಏರ್ಪಾಡು ಮಾಡುಸ್ಸು..

ಓ ಮನ್ನೆ ಮನ್ನೆ ಬೆಂಗಳೂರು ಭಾವನ ಮನೆಲಿ ಒಂದು ಅನುಪ್ಪತ್ಯ..

ಪೇಟೆಂದ ಎಲ್ಲ ತತ್ಸು ಬೇಡ ಹೇದು ಅಡಿಗೆ ಸತ್ಯಣ್ಣನನ್ನೇ ಬರ್ಸಿದ್ದವಲ್ಲಿಗೆ..

ಬೆಂಗಳೂರ ಭಾವನಲ್ಲಿ ಅಡಿಗೆ ಲಾಯಕ, ಎಂತ ಕೊರತೆಯೂ ಅಪ್ಪಲಾಗ ಹೇದು ಅಡಿಗೆ ಸತ್ಯಣ್ಣನೇ ಖುದ್ದಾಗಿ ಹೋದ್ಸುದೆ.

ಊಟ ಎಲ್ಲ ಆತು.. ಊಟ ಎಲ್ಲ ಪಷ್ಟು ಪಷ್ಟು ಆಗಿತ್ತು..

ಬಂದಪೈಕು ಪೇಂಟು ಬಾವ ಒಬ್ಬ ಅಡಿಗೆ ಕೊಟ್ಟಗೆಲಿ ಒತ್ತರೆ ಮಾಡಿಗೊಂಡಿದ್ದ ಸತ್ಯಣ್ಣನತ್ರೆ – “ಇದು.. ಊಟ ಎಲ್ಲ  ನಿಂಗಳೇ  ಇಲ್ಲಿ ಮಾಡಿದ್ಸೋ ಸತ್ಯಣ್ಣ°?”

ಸತ್ಯಣ್ಣ° ನೇರಕ್ಕೆ ಸತ್ಯಕ್ಕೆ ಮಾತಾಡುವ ವ್ಯೆಕ್ತಿ.. ಹೇದ° – “ಅಪ್ಪು ಭಾವ. ಹೋಟ್ಳಿಂದ ತರ್ಸಿದ್ದದು ಅಲ್ಲ.”  😀

 

~~

8.

ಅಡಿಗೆ ಸತ್ಯಣ್ಣ ಹೇಳಿರೆ ಅನುಪ್ಪತ್ಯ ಅಡಿಗೆ ಮಾಡುವವ° ಹೇದು ಅಪ್ಪಾರೂ, ಅನುಪ್ಪತ್ಯ ಆವ್ತಲ್ಯೆಲ್ಲ ಅಡಿಗೆ ಸತ್ಯಣ್ಣಂದೇ ಅಡಿಗೆ ಹೇದೇನೂ ಲೆಕ್ಕ ಅಲ್ಲ..

ಸತ್ಯಣ್ಣನ ಹತ್ರಾಣ ನೆಂಟ್ರ ಮನೇಲಿಯೂ ಅಡಿಗ್ಗೆ ಜೆನ ಬೇರೆಯೇ ..

ಹೀಂಗಿಪ್ಪಗ ಓ ಮೊನ್ನೆ ಒಂದಿನ ಸತ್ಯಣ್ಣನ ಭಾವನ ಮನೇಲಿ ಗ್ರಾಶಾಂತಿ..

ಅಡಿಗೆ ಸತ್ಯಣ್ಣನೂ ನೆಂಟ್ರ ಲೆಕ್ಕಲ್ಲಿ ಹೋಗಿ ಸುಧಾರಿಕೆ ಮಾಡಿಗೊಂಡಿತ್ತದ್ದ°..

ಗ್ರಾಶಾಂತಿ ಹೋಮ ಆತು.. ದಾನದ ಸಮಯ ಆತು..

ಬಟ್ಟಮಾವ ಇಂತ ದಾನ ಇಂತವಂಗೆ ಹೇದು ಹೇಳ್ವ ಕ್ರಮ ಇಲ್ಲೆ. ಯಜಮಾನನೇ ನೋಡಿ ಅಂದಾಜಿ ಮಾಡಿ ಕೊಟ್ರೆ ಆತು. ಮತ್ತೂ ಅರಡಿಯದ್ರೆ ಬಟ್ಟಮಾವನತ್ರೆ ಕೇಳಿಗೊಂಡ್ರೆ ಅವು ಸೂಚನೆ ಕೊಡ್ತವು.. ಅಷ್ಟೆ.

ಹಾಂಗೆ ಎಳ್ಳು ದಾನಕ್ಕೆ ದತ್ತ ಮಾಡಿ ಆತು, ಯಜಮಾನ° ಕೇಳಿದ್ದಕ್ಕೆ ಬಟ್ಟಮಾವ° ಅಡಿಗೆಯವಂಗೆ ಕೊಡು ಹೇದವು..

ಅಡಿಗೆ ಕೊಟ್ಟಗ್ಗೆ ಹೋದಪ್ಪಗ ಅಡಿಗೆಯಂವ ಹೇದ° ಎನ ದಾನ ಬೇಡ., ಆನು ದಾನ ತೆಕ್ಕೊಳ್ತಿಲ್ಲೆ..

ಬಟ್ಟಮಾವನ ಮೋರಗೆ ಬಡುದಾಂಗೆ ಆತು.. ಸತ್ಯಣ್ಣಂಗೆ ವಿಷಯ ಗೊಂತಾತು..

ಸತ್ಯಣ್ಣ° ಹೇದ° – “ಅಂಬಗ ಆ ಅಡಿಗೆಯಂವ ಮಾಡಿದ ಅಡಿಗೆ ಬಟ್ಟಮಾವ ಉಣ್ತವಿಲ್ಲೆ, ಬಟ್ಟಮಾವಂಗೆ ಆಗ”

ಇದು ಕೇಳಿಯಪ್ಪದ್ದೆ  ಅಡಿಗೆಯಂವ° ಪಕ್ಕ ಮಣೆ ಮಡಿಕ್ಕೊಂಡು ಕೈ ಒಡ್ಡಿ ಕೂದ°!! 😀

 

~~

9.

ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇತ್ತಿಲ್ಲೆ. ಮನೇಲಿಯೆ ರೆಸ್ಟು..

ಮೇ ತಿಂಗಳ ರಣ ಸೆಕೆ ಬೇರೆ..

ಮಧ್ಯಾಹ್ನವರೇಂಗೆ ಅಲ್ಲೇ ಅವನ ಹಿತ್ತಲಿಲಿ ಇಪ್ಪ ಬೀಜ ಎಲ್ಲ ಕುರ್ವೆಲಿ ಕೊಯ್ಕೊಂಡು  ಬಂದ°

ಬೆಶಿಲಿಂಗೆ ಅಲ್ಲೆ ಹೋದ್ದು ಆತಿಲ್ಯೋ ಏನೋ ವಿಪರೀತ ತಲೆಬೇನೆ, ಮೋರೆ ಎಲ್ಲ ಬೀಗಿದ್ದು, ಕಣ್ಣ ಕರೆ ಶೆಳಿತ್ತು..

ಸತ್ಯಣ್ಣ ಚೆಂಡಿಹರ್ಕು ಚೆಂಡಿ ಮಾಡಿ ಬಿಗಿದ್ದು ಕಟ್ಟಿ ಅಲ್ಲೇ ಮನೆಲಿ ಜೆಗಿಲ್ಲಿ ಚಿಟ್ಟೆ ಕರೆಲಿ ನೆಲಕ್ಕಲಿ ಮನಿಕ್ಕೊಂಡು ಹೊರಳ್ಯೊಂಡಿತ್ತಿದ್ದ°..

ಹೊತ್ತೋಪಗ ಚಾಯದ ಹೊತ್ತಿಂಗೆ ರಂಗಣ್ಣ° ಮನಗೆ ಬಪ್ಪಗ ‘ಅಯ್ಯೋ ಉಳ್ಳೋ ತಲೆ ಶೆಳಿತ್ತು’ ಹೇದು ನರಕ್ಯೊಂಡಿತ್ತಿದ°..

“ಎಂತಾದು ಸತ್ಯಣ್ಣ?” ಹೇದು ರಂಗಣ್ಣ ಶೋಕವಿಚಾರಣೆ ಮಾಡಿದ°..

ಸತ್ಯಣ್ಣನ ಕಷ್ಟವ ನೋಡಿ ರಂಗಣ್ಣ ಹೇದಾ.. “ಅಪ್ಪು ಸತ್ಯಣ್ಣ°, ಎನ್ನ ಅಜ್ಜಂಗೂ ಹೀಂಗೇ ಅಗ್ಯೊಂಡಿತ್ತಿದ್ದು ಅಕೇರಿ ಅಕೇರಿಗೆ. ಹೀಂಗೇ ಮತ್ತೆ ಮೂರು ದಿನ ಇತ್ತಿದ್ದವು”.. 🙁 😀 😀

~~

10

ಅಡಿಗೆ ಸತ್ಯಣ್ಣಂಗೆ ಬೆಂಗಳೂರ್ಲಿ ಅನುಪ್ಪತ್ಯ..

ಸತ್ಯಣ್ಣ ಅನುಪ್ಪತ್ಯ ಕಳಿಶಿಕ್ಕಿ ದೊಡ್ಡ ಮಗಳ ಮನಗೆ ಹೋದ°..

ಕಾಯಿಕಡವಲೆ ಹೋದ ರಂಗಣ್ಣನೂ ಒಟ್ಟಿಂಗೇ ಇತ್ತಿದ್ದ°..

ಬೆಂಗಳೂರ್ಲಿ ಅಂತೂ ಈಗ ನೀರಿನ ದೊಡಾ ಸಮಸ್ಯೆ..,  ಹೇಳಿ ಗುಣ ಇಲ್ಲೆ..

ಮಗಳು ಅಳಿಯನೂ ಅದೇ ನೀರಿನ ಸಮಸ್ಯೆಲಿ ಹಸಬಡಿತ್ತ ಇದ್ದವುದೆ.. 

ಸತ್ಯಣ್ಣಂಗೆ ಈ ಅವಸ್ಥೆ ನೋಡಿ ಬೇಜಾರಾಗಿ ತಡೆಯ°..

  “ಒಂದು ತೊಟ್ಟು ನೀರಿಂಗೂ ತತ್ವಾರ.., ಬೆಂಗ್ಳೂರ ಮಾಣಿಯೇ ಆಗ್ಬೇಕು ಹೇದು ಹಠಮಾಡ್ತವನ್ನೇ ನಮ್ಮ ಕೂಸುಗೋ..!” …

  “ಎಂತಾರು ಆಗಲಿ, ರಮ್ಯನ ಮಾತ್ರ ಬೆಂಗ್ಳೂರ ಮಾಣಿಗೆ ಕೊಡ್ಳೇ ಕೊಡೆ”.

ರಂಗಣ್ಣಂಗೆ ಅಂತೂ ಸತ್ಯಣ್ಣನ ಈ ಮಾತು ಕೇಳಿ ಕೊಶಿಯಾಗಿ ತಡೆಯ! ನೆಗೆಮಾಡಿಗೊಂಡೇ ಸತ್ಯಣ್ಣಂಗೆ ಹೇಳಿದ°-

        “ನಿಜವೇಯೋ!, ಒಳ್ಳೆ ನಿರ್ಧಾರ ಇದು ಸತ್ಯಣ್ಣ.”

ಇವನ ನೆಗೆಯ ಮರ್ಮ ಸತ್ಯಣ್ಣಂಗೂ ಅರ್ಥ ಆತು. ಸತ್ಯಣ್ಣನೂ ನೆಗೆಮಾಡಿಗೊಂಡೇ ಹೇಳಿದಾ° –

       “ಹಾಂಗೇಳಿ ಬರೇ ಗೋಣಸಂಬಾಯಂಗೆ ರಮ್ಯನ ಕೊಡೆ ಆತ!!” 😀

ರಂಗಣ್ಣ° ಕವುಂಚಿ ಬಿದ್ದರೂ ಮೂಗು ಮೇಗೆ ಆಯೆಕು ಹೇದು ಗ್ರೇಶಿದವನೇ ಕೇಳಿದ°-ಅದಿರ್ಲಿ.., ನಾವಿಂದು ಎಷ್ಟು ಗಂಟೆ ಬಸ್ಸಿಂಗೆ ಹೆರಡುಸ್ಸು?” 🙁   😀

~~~ 😀 😀 😀 ~~~

 

ಅಡಿಗೆ ಸತ್ಯಣ್ಣನ ಬಗ್ಗೆ ನಿಂಗೊ ಎಷ್ಟು ತಿಳ್ಕೊಂಡಿದಿ ?-

ಕಳುದವಾರದ ಪ್ರಶ್ನಗೆ ಉತ್ತರ  –           ○ ಕೋಲೇಜಿಂಗೆ ಹೋವ್ತ°

 

ಓದುಗರಿಂಗೆ   ಈ ವಾರದ ಪ್ರಶ್ನೆ –

ಅಡಿಗೆ ಸತ್ಯಣ್ಣ ಪೂಜಗೆ ಹೋದ ದೇವಸ್ಥಾನ ?

○ ಶಿವ           ○ ವಿಷ್ಣು              ○ ದುರ್ಗೆ                ○ ಕೃಷ್ಣ

 

7 thoughts on “‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 11

  1. “ಎನ ಪೆರ್ಲಕ್ಕೆ. ಒಂದು ಇಡೀ ಟಿಕೇಟು ಕೊಟ್ಟಿಕ್ಕಿ ಸಾಕು”

    ಮನೆ ಯಜಮಾಂತಿ ಹೆಮ್ಮಕ್ಕ – “ಅಂಬಗ ಅದು ಬಸರಿಯೋ?!”
    ಸತ್ಯಣ್ಣಂಗೆ ಬೆಗರು ಬಿಚ್ಚಿತ್ತು,

    ಓಹ್ಹ್ಹೋ ಓಹ್ಹ್ಹೋ ಹ್ಹೋ ಹ್ಹೂ ಹ್ಹೋ

  2. ಸತ್ಯಣ್ಣ ಮಾಡಿದ ಅಡಿಗೆಗೆ ಜೋಕುಗಳ ಒಗ್ಗರಣೆ (12ನೇ ಕ೦ತಿಗೆ ಕಾಯ್ತಾ ಇದ್ದೆಯೊ)

  3. ಸತ್ಯಣ್ಣ ಹೆಸರಿಗೆ ತಕ್ಕ೦ಗೆ ಸತ್ಯವಾಗಿಪ್ಪ ವಿಶಯ ಹೇಳಿರೂ ಅದು ನೆಗೆ ತಪ್ಪ ಹಾ೦ಗೇ ಇರ್ತು..

  4. ಅಡಿಗೆ ಸತ್ಯಣ್ಣ ಹೇಳ್ತ ವ್ಯಕ್ತಿಗೆ/ವೃತ್ತಿಗೆ ಸಂಬಂಧ ಪಟ್ಟು ಬತ್ತಾ ಇಪ್ಪ ತಮಾಶೆಗೊ ಲಾಯಿಕಲಿ ಮೂಡಿ ಬತ್ತಾ ಇದ್ದು.
    ತಮಾಷೆಯೊಟ್ಟಿಂಗೆ ವಿಚಾರ ಮಾಡುವ ಅಂಶಂಗಳೂ ಇದ್ದು ಹೇಳುವದೇ ಇದರಲ್ಲಿಪ್ಪ ವಿಶೇಷತೆಗೊ.
    ಆಡಿಗೆಯವು ಅಷ್ಟು ಕಷ್ಟಲ್ಲಿ ಕೆಲಸ ಮಾಡ್ತಾ ಇಪ್ಪಗ ಒಬ್ಬ ಹೋಗಿ ಭಗವದ್ಗೀತೆ ವಿಷ್ಯ ಕೇಳಿರೆ ಅವಂಗೆ ಹೇಂಗಕ್ಕು?
    ಲಾಯಿಕಲಿ ಅಡಿಗೆ ಮಾಡಿ ಕೊಟ್ಟವನತ್ರೆ, ಇದು ನಿಂಗಳೇ ಮಾಡಿದ್ದೋ ಅಲ್ಲ ಹೋಟ್ಲಿಂದಲೋ ಕೇಳಿರೆ?
    ದಾನ ತೆಕ್ಕೊಳ್ತಿಲ್ಲೆ ಹೇಳ್ತವನ ಆಡಿಗೆ ಭಟ್ಟ ಮಾವಂಗೆ ಆಗ ಹೇಳುವಲ್ಲಿ ಎಷ್ಟು ವಿಚಾರ ಇದ್ದು ಅಲ್ಲದಾ?
    ಪೇಟಿಲಿಪ್ಪವಂಗೆ ಮಗಳ ಕೊಡ್ತಿಲ್ಲೆ ಹೇಳಿರೆ, ಆರಿಂಗೋ ಕೊಟ್ಟು ಜೆವಾಬ್ದಾರಿ ತಪ್ಪಿಸಿಗೊಂಬಲೆ ತಯಾರಿಲ್ಲೆ ಹೇಳ್ತದು [ “ಹಾಂಗೇಳಿ ಬರೇ ಗೋಣಸಂಬಾಯಂಗೆ ರಮ್ಯನ ಕೊಡೆ ಆತ!!]” ಹೇಳ್ತಲ್ಲಿ ಎದ್ದು ಕಾಣ್ತಲ್ಲದಾ?
    ಶರೀರದ ತೂಕ ಇಳುಸಲೆ ಮನಸ್ಸು ಮಾಡಿರೂ, ಹೆಚ್ಚಿನವು ಅದರ ಕಾರ್ಯರೂಪಕ್ಕೆ ತಪ್ಪಲೆ ಮನಸ್ಸು ಮಾಡ್ಲೆ ದಿನ ಮುಂದೆ ಹಾಕುವದು ಸಾಮಾನ್ಯ. [“ಅಂಬಗ ಈಗ ಬೇಡ ಇನ್ನೊಂದು ರಜ ಸಮಯ ಕಳುದು ನೋಡ್ವೋ”] ಡಾಕ್ಟ್ರ ಹತ್ರೆ ಹಾಂಗೆ ಹೇಳಿ ಅಲ್ಲಿಂದ ಜಾರುವದು ಇಲ್ಲಿ ಕಾಣ್ತು.

  5. ಎಲ್ಲ ಜೋಕುಗು ಪಸ್ಟ್ ಕ್ಲಾಸ್.ಪ್ರತಿ ಜೋಕಿನ ಕೊನೆಗೆ ಒಂದು ತಿರುವು. ಭಾರಿ ಕುಶಿ ಆವ್ತು ಓದುಲೆ. 😀 😀 😀

  6. ಮೂಡಂಬಿಕಾನ ಅತ್ತೆಯ ಮಗಳು ಬಸರಿ ಅಲ್ಲ, ಬಾಳಂತಿ ಹೇಳಿ ಹೇಳಿದ್ದಾಯಿಲ್ಲೆಯೋ?
    ರಮ್ಯನ ದೋಸೆ ಬೇಯಿಶಾಣ ಭಾರೀ ಲಾಯ್ಕ ಆಯಿದು. ಪಚ್ಚೆಗೆರೆ ಬಪ್ಪನ್ನಾರವೂ ಅದರಲ್ಲಿಪ್ಪ ‘ಜೋಕ್ ‘ ಎಂತರ ಹೇಳಿ ಗೊಂತೇ ಆಯಿದಿಲ್ಲೆ. ಸರ್ಪ್ರೈಸ್ ಜೋಕ್ !!
    ಸತ್ಯಣ್ಣ ರಂಗಣ್ಣನ ಅಜ್ಜನ ಹಾಂಗೆ ಮೂರು ದಿನ ಇದ್ದರೆ ಸಾಲ- ಅವನೇ ಇಲ್ಲದ್ರೆ ಅವನ ‘ಜೋಕ್ಳುಗೊ’ [ಜೋಕಿನ ಬಹುವಚನ] ಹೇಂಗೆ ಬಕ್ಕು ? ಜೋಕುಗೊ ಮೆಗಾ ಧಾರಾವಾಹಿಯಾಗಿ ನಿರಂತರ ಬರುತ್ತಾ ಇರಲಿ – ಪೇಟೆಯ ಕಿರಿಕಿರಿಯ ನಡುವಿಲಿ ಹೀಂಗಿಪ್ಪ ಹಾಸ್ಯಂಗೊ ಮನಸ್ಸಿನ ಆರೋಗ್ಯ ಕಾಪಾಡಿಗೊಂಬಲೆ ಸಹಾಯ ಆವುತ್ತು . ಆರೋಗ್ಯಪೂರ್ಣ ಹಾಸ್ಯೋತ್ಸವಕ್ಕಾಗಿ ಅಭಿನಂದನೆಗೊ ಚೆನ್ನೈಭಾವ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×