Oppanna.com

'ಅಡಿಗೆ ಸತ್ಯಣ್ಣ°' – 36 (ಕಲ್ಲುಗುಂಡಿ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   14/11/2013    10 ಒಪ್ಪಂಗೊ

ಚೆನ್ನೈ ಬಾವ°

ಈ ಸರ್ತಿ ಕಲ್ಲುಗುಂಡಿ ಆಟ ಬಂದ್ಸು ದೀಪಾವಳಿ ಪಟಾಕಿ ಹೊಟ್ಟುಸುತ್ತ ದಿನಾವೆ ಆದಕಾರಣ, ಕಲ್ಲುಗುಂಡಿಲಿ ಚೆಂಡೆಪೆಟ್ಟು ಬೀಳ್ವ ಹೊತ್ತಿಂಗೆ ನವಗೆ ಮನೆ ಎದುರೆ ಪಟಾಕಿಗೆ ಕಿಚ್ಚು ಕೊಡ್ತರ ನೋಡ್ಳೆ ಇತ್ತಿದ್ದ ಕಾರಣ  ನವಗೆ ಈ ಸರ್ತಿ ಕಲ್ಲುಗುಂಡಿ ಆಟಕ್ಕೆ ಹೋತಿಕ್ಕಲೆ ಎಡಿಗಾಯ್ದಿಲ್ಲೆ. ಹಾಂಗೇದು ಕಲ್ಲುಗುಂಡಿ ಆಟಕ್ಕೆ ಅಡಿಗೆ ಸತ್ಯಣ್ಣನೂ ಈ ಸರ್ತಿ ಹೋಪಲೆ ಇದ್ದು ಹೇದು ಓ ಅಂದೇ ಹೇದ ಕಾರಣ ಕಲ್ಲುಗುಂಡಿಲಿ ಅಡಿಗೆ ಸತ್ಯಣ್ಣನ  ಶುದ್ದಿ ನವಗೆ ಇಲ್ಲದ್ದಪ್ಪಲೆ ಎಡಿಗೊ?!. ಇದಕ್ಕೆ ಆರ ಏಲ್ಪುಸುತ್ತು ಹೇದು ಅಂಜನ ಹಾಕಿ ನೋಡಿಯಪ್ಪಗ ಕಣ್ಣಿಂಗೆ ಕಂಡದು ಬೈಲ ಕಿಟ್ಟಣ್ಣ°. ಕಲ್ಲುಗುಂಡಿ ಆಟದ ಕಾಗತ ಪ್ರಿಂಟು ಆಗಿ ಬರೆಕ್ಕಾರೆ ಮದಲೇ ಕಿಟ್ಟಣ್ಣನ ಡೈರಿಲಿ ನವಂಬ್ರ 2 ಕಲ್ಲುಗುಂಡಿ ಹೇದು ಬರದು ಹಾಕಿ ಆಗಿದ್ದತ್ತು. ಹಾಂಗಾದ ಕಾರಣ ನವಗೂ ಕೆಲಸ ರಜ ಎಳ್ಪ ಆತು. ವಿಷ್ಯ ಹೀಂಗೀಂಗೆ ಇದ್ದು ಬಾವಯ್ಯ , ರಜ ಅಲ್ಯಾಣ ಸುದ್ದಿ ಸಂಪಾಲುಸಿ ಕೊಡೆಕು ಹೇದಪ್ಪಗ ಸಂತೋಷಂದ ಒಪ್ಪಿಗೊಂಡು ಅಲ್ಯಾಣ ವರದಿ ಒಪ್ಪಿಸಿದ್ದವು ಬೈಲ ಕಿಟ್ಟಣ್ಣ.
ಹಾಂಗಾಗಿ ಈ ವಾರದ ‘ಅಡಿಗೆ ಸತ್ಯಣ್ಣ – ಕಲ್ಲುಗುಂಡಿ ವಿಶೇಷಾಂಕ’ದ ಸಂಪಾದಕರು – ಬೈಲ ಕಿಟ್ಟಣ್ಣ.
ಬನ್ನಿ, ಕಲ್ಲುಗುಂಡಿಲಿ ಅಡಿಗೆ ಸತ್ಯಣ್ಣನ ಒಗ್ಗರಣೆ ಹೇಂಗೆಲ್ಲ ಇದ್ದತ್ತು ಹೇದು ಕಿಟ್ಟಣ್ಣ ಹೇದ್ದರ ನೋಡ್ವೊ° –
~~
1
ಅಡಿಗೆ ಸತ್ಯಣ್ಣನಲ್ಲಿ ಮನ್ನೆ ದೀಪಾವಳಿ ಮುಗಿಶಿಕ್ಕಿ ರಮ್ಯನ ಪ್ರೆಂಡುಗಳ ಕಳ್ಸಿಕೊಟ್ಟಿಕ್ಕಿ, ಇನ್ನೆಂತ ತಾನೂ ಹೆರಡುದು ಹೇದು ಗ್ರೇಶಿಯಪ್ಪಗ ರಂಗಣ್ಣನ ಕಣ್ಣಿಂಗೆ ಬಿದ್ದತ್ತು ಕಲ್ಲುಗುಂಡಿ ಆಟದ ಹೇಳಿಕೆ ಕಾಗತ.
ಸುರುವಿಂದ ಅಕೇರಿವರೆಂಗೆ ಎರೆಡರಡು ಸರ್ತಿ ಓದಿ ನೋಡಿದ ರಂಗಣ್ಣ ಹೇದ° – ಇದರ ನೆಂಪು ಮಡಿಕ್ಕೊಂಬಲೆ ಎಡಿಯ. ಇದರ ಕೈಲಿ ತೆಕ್ಕೊಂಡೋಪದೇ  ಒಳ್ಳೆದು. 😀
ಹೇಳಿಕೆ ಕಾಗತಲ್ಲಿ ಇಪ್ಪದರೆಲ್ಲ ಒದಿಕ್ಕಿ ಒಂದರಿ ಮನಸ್ಸಿಲ್ಲಿಯೇ ಗ್ರೇಶಿ ನೋಡಿಗೊಂಡ° ರಂಗಣ್ಣ – “ ಅಲ್ಲಿಗೆ ಹೋದರೆ  ರಮ್ಯ, ಭವ್ಯ ಎಲ್ಲವೂ ಕಾಂಬಲೆಡಿಗು” 😀
ಕಾಗದಲ್ಲಿ ಮೂರು ಮೂರು ಸ್ವಾಮೀಜಿಗೊ ಕೂರ್ತ ಸಭೆ, ಬೋಳಂತಕೋಡಿ ಬಟ್ಟಮಾವಂಗೆ ಸಮ್ಮಾನ…, ಶೇಣಿ ಪ್ರಶಸ್ತಿ ಪ್ರದಾನ …ಹ್ಹು! ಎಲ್ಲವೂ ಚೆಂದ ಚೆಂದ. ಅದರೊಟ್ಟಿಂಗೆ ಚೆಂಡೆಪೆಟ್ಟೂ ಚೆಂದ !!
ಕಾಗದ ಎರಡ್ನೇ ಸರ್ತಿ ಓದಿಗೊಂಡಿದ್ದಾಂಗೆ ರಂಗಣ್ಣ° ಮೆಲ್ಲಂಗೆ ಸತ್ಯಣ್ಣನತ್ರೆ ಕೇಟ° – “ಅಪ್ಪೋ ಮಾವ°, ವೈದಿಕ ಸಮ್ಮಾನ ಆವ್ತಾಂಗೆ ಪಾಕಶಾಸ್ತ್ರ ಪ್ರವೀಣ ಸಮ್ಮಾನ ಏನಾರು ಇಕ್ಕೋ ಬಪ್ಪೋರಿಶ ಮಣ್ಣ?!”
ಸತ್ಯಣ್ಣ ಹೇದ° – “ರಂಗೋ !, ಅದು ಕೊಂಕಣಿಗಳ ಗಣೇಶೋತ್ಸವ ಸಮಿತಿ ಅಲ್ಲ ಮಿನಿಯ°. ನಿನಗೆ ಬೇಕಾರೆ ವಲಲ ಪ್ರಶಸ್ತಿ ಆನೇ ಕೊಟ್ಟಿಕ್ಕುತ್ತೆ” 😀
ರಂಗಣ್ಣ ಹೇದ° – ಮಾವ°, ಅನು ರಪಕ್ಕನೆ ಹೋಗಿ ಡ್ರೆಸ್ಸು ತೆಕ್ಕೊಂಡು ಬತ್ತೆ. ನಿಂಗೊ ಹೆರಟು ರೆಡೀ ಆಗಿರಿ 😀
**

ಕಿಟ್ಟಣ್ಣ°-ಸತ್ಯಣ್ಣ° ಸಂವಾದ
ಕಿಟ್ಟಣ್ಣ°-ಸತ್ಯಣ್ಣ° ಸಂವಾದ

2
ರಂಗಣ್ಣನೂ ಹೆರಟು ನಡದಪ್ಪದ್ದೆ ಅಡಿಗೆ ಸತ್ಯಣ್ಣಂಗೆ ಚಾಯೆ ಕುಡುದಾದರೂ ಸಣ್ಣಕೆ ಒಳ್ಳೆತ ಒರಕ್ಕು ತೂಗಲೆ ಸುರುವಾಗಿ ಕಣ್ಣಡ್ಡ ಹೋಪಲೆ ಸುರುವಾತು.
ಮನಸ್ಸಿನ ಒಳಾದಿಕ್ಕೆ ರಂಗಣ್ಣ ಹೇದ ಪಾಕಶಾಸ್ತ್ರ ಪ್ರವೀಣ ಪ್ರಶಸ್ತಿ ವಿಷಯವೂ ಕೊರವಲೆ ಸುರುವಾತು. ಅದೇ ದೃಶ್ಯಂಗೊ ಕಣ್ಣಿಲ್ಲಿ ಕಾಂಬಲೆ ಸುರುವಾತು.
ಸ್ಟೇಜು – ಸಮ್ಮಾನ – ನಳಪ್ರಶಸ್ತಿ – ಶಾಲು – ಮುಸುಂಬಿ – ತಟ್ಟೆ…. ಚೆಂದಕೆ ಅನುಭವಿಸಿದ° ಅಡಿಗೆ ಸತ್ಯಣ್ಣ° ಅಲ್ಲ್ಯೆ.
ಪಚ್ಚೆ ಬಣ್ಣದ ದೊಡ್ಡ ಶಾಲು ಹೊದೆಶಿ, ದೊಡ್ಡ ತಟ್ಟೆಲಿ ಫಲ ತಾಂಬೂಲ ಕೊಟ್ಟು ಗೌರವಿಸಿದವು. ಮನೆಗೆ ಬಂದು ಶಾರದೆ ಕೈಲಿ ಮಡಗಿದ° ಅಡಿಗೆ ಸತ್ಯಣ್ಣ° ತಟ್ಟೆಯ.
ಗಡಿಬಿಡಿಲಿ ತಟ್ಟೆ ಕೆಳ್ಳ ಬಿದ್ದತ್ತು – ಠಠಂಟ ಠಣ್ ಠಣ್ ಠಣ ಠಂಟ ಠಣ್ ಠಣ್
ಶಬ್ಧ ಕೆಮಿಗೆ ಕೇಟಪ್ಪಗ ಸತ್ಯಣ್ಣಂಗೆ ಎಚ್ಚರಿಕೆ ಆತು. ಗಡಿಬಿಡಿಲಿಯೇ ಎದ್ದು ನೋಡಿರೆ… –  “ಓಯ್..ಇದು ಬರೇ ಕನಸೋ?” – ಸತ್ಯಣ್ಣ ನೆಗೆಮಾಡ್ಯೊಂಡೇ ಕಣ್ಣುದ್ದಿಯೊಂಡು ಎದ್ದ°.  😀
**
3
ಕಲ್ಲುಗುಂಡಿ ಆಟದ ವಿಮರ್ಶೆ ಹೇದರೆ ಅದು ಹೇದು ಮುಗಿವಂದೊಳಿಕೆ ಮತ್ತಾಣ ವೊರಿಶದ ಆಟವೇ ಬಂದಿಕ್ಕಿಗು. 
ಆಟ ಸುರುವಾಗಿ ನೆಡು ಇರುಳಿಂಗೆ ಎತ್ತಿದ್ದು.
ಜನಸಾಗರ, ವಿದ್ಯುದ್ವೀಪಲಂಕಾರ, ಝಗಜಗಿಸುವ ವೇಷಭೂಷಣ, ಅದ್ಭುತ ಚೆಂಡೆವಾದನ, ಮೃದಂಗ ಬಡಿಯಾಣ ಚಾಯೆ ಕಡ್ಳೆ, ಮನೋಹರ ಚಕ್ರತಾಳ ಹೆಟ್ಟಾಣ, ಅಂಗುಡಿಗೊ, ಕೇಂಟೀನು, ಕೇಂಟಿನಿನೊಳ ಐಟಮ್ಮು…
ಇದರೆಲ್ಲವ ನೋಡಿದ ಸತ್ಯಣ್ಣ ರಂಗಣ್ಣನತ್ರೆ ಹೇದ° – “ಅಪ್ಪೋ ರಂಗೋ ಇದು ನೋಡಿರೆ ಅದ್ರಾಮನ ಹೆಣ್ಣು ಬ್ಯಾರ್ತಿ ಪಾತುಮ್ಮ ಹೇದಾಂಗೆ ಇದ್ದನ್ನೇ?!”
ರಂಗಣ್ಣಂಗೆ ಪಾತುಮ್ಮ ಹೇದ್ದೆಂತರ ಹೇದು ಎಲ್ಲಿಂದ ಗೊಂತು!. ಕೇಟ° – ಪಾತುಮ್ಮ ಎಂತ ಹೇಯ್ದು ಮಾವ°?
ಸತ್ಯಣ್ಣ° – “ಅದೇಯೋ..  ಅಂದು ಪಡ್ರೆ ಕೇಶವ ಭಟ್ಟನ ಮಗಳ ಮದುವೆಲಿ ಬತ್ತೋರ ನೋಡಿಕ್ಕಿ ಅಲ್ಲಿಯಾಣ ತೋಟದ ಕೆಲಸದ ಅದ್ರಾಮನ ಹೆಣ್ಣು ಬ್ಯಾರ್ತಿ ಪಾತುಮ್ಮ ಹೇದ್ದು – “ಚಾರುಮ್ ಚೋರುಮ್ ಬಸ್ಸುಮ್ ಲೋರಿಯಿಮ್ ಮೋಟರ್ ಸೈಕ್ಕಲುಂ ಪಾಯಸಂ ಅಪ್ಪಳಂ… ಯಾರಬ್ಬೆ ಎಂದು ಕಲ್ಯಾಣಂ!.. ಎಂದು ಕಲ್ಯಾಣಂ!!” 😀
**
4
ಅಡಿಗೆ ಸತ್ಯಣ್ಣ° ಹಾಂಗೆ ಹೀಂಗೆ ಹೇದು ಒಂದೊಡೆಲಿ ದೋಸೆ ಎರಕ್ಕೊಂಡು ಮತ್ತೊಂದೆಡೆಲಿ ಆಟವನ್ನೂ ನೋಡ್ಯೋಂಡು ದ್ವಂದ್ವ
ಅಷ್ಟಪಗಾತು ವಿಟ್ಳ ಕಿಟ್ಟಣ್ಣ° ಅಲ್ಲೆ ಕಾಂಬಲೆ ಸಿಕ್ಕಿದ್ದದು. ಕಪ್ಪು ಜುಬ್ಬಲ್ಲಿ ಕಪ್ಪು ಕಿರು ಮೀಸೆ ಗೆಡ್ಡ ಮಡಿಕ್ಕೊಂಡು ಕಿಟ್ಟಣ್ಣ° ಜಿಗ್ಗ!
ಅದರ ಕಂಡಪ್ಪದ್ದೆ ಸತ್ಯಣ್ಣ ಕೇಟ° ಇದೆಂತ್ಸು ಅಮಾಸೆ ಹೇದೊಂಡೋ ನಿಂಗೊ ಕಪ್ಪು ಜುಬ್ಬ ಹಾಕಿದ್ಸು ಇಂದು?!
ಕಿಟ್ಟಣ್ಣ ಹೇದ° – ಇಲ್ಲೆಪ್ಪ ಇದಕ್ಕೆ ಎಷ್ಟು ಮಸಿ ಧೂಳಿ ಕರಿ ಹಿಡುದರೂ ಗೊಂತಾಗ. ಬೆಳಿಜುಬ್ಬ ಹಾಕಿರೆ ನಾಳಂಗೆ ಹೆರಡ್ವಾಗ ಬಣ್ಣ ಬದಲುಗು. ಮತ್ತೆ ಆನೇ ತೊಳೇಕ್ಕಟ್ಟೆ  😀
ಸತ್ಯಣ್ಣ ಹೇದ° – ಆಗಲಿಪ್ಪ , ನಿನ ತೊಳೆತ್ತ ಮಿಶನು ಬೇಗನೆ ಬರಳಿ. ನೋಡಿಗೊ.. ಜಾಗ್ರತೆ ಆಯ್ಕೆ ಮಾಡುವಾಗ 😀
**
5
ಕಲ್ಲುಗುಂಡಿ ಆಟ ರೈಸಿಗೊಂಡಿತ್ತು. ಒಂದು ಪ್ರಸಂಗದ ಕೂಡ್ಳೆ ಮತ್ತೊಂದು.. ಒಂದು ವೇಶದೊಟ್ಟಿಂಗೆ ಮತ್ತೊಂದು.. ಭರ್ಜರಿ ಹಿಮ್ಮೇಳ. ಏವುದರ ಹೇಳ್ಸು!  ಏವುದರ ಬಿಡ್ಸು!!
ಅಷ್ಟಪ್ಪಗ ಬೆಡಿ ಹೊಟ್ಟುವ ಅಜನೆಯೂ ಕೇಟತ್ತು
ಕೂದೊಂಡು ಎಂತದೋ ಗುರುಟ್ಯೊಂತ್ತಿದ್ದ ರಂಗಣ್ಣ ಹೇದ° – ಅಪ್ಪೋ ಮಾವ° ವೊರ್ಷ ವೊರ್ಷ ಹೀಂಗೆ ದೀಪಾವಳಿ ದಿನಾಕ್ಕೆ ಇಲ್ಯಾಣ ಆಟ ಆದರೆ ಜೆನ ಇನ್ನೂ ಹೆಚ್ಚಿಗೆ ಸೇರುಗಪ್ಪೋ!
“ಅದೆಂತ್ಸೋ?! , ಎಂತ ಊರ್ಲಿ ಆರಿಂಗೂ ಹಬ್ಬ ಇಲ್ಲೇಳಿ ಗ್ರೇಶಿದಿಯೋ??! “– ಸತ್ಯಣ್ಣಂಗೇ ಅಶ್ಚರ್ಯ
ರಂಗಣ್ಣ ಹೇದ° – ಅಲ್ಲ ಮಾವ°, ಆರಿಂಗೂ ಮತ್ತೆ ದೀಪಾವಳಿಗೆ ಪಟಾಕಿ ತೆಗೆತ್ತ ಕೆಲಸ ಇಲ್ಲೆ ಇದಾ. ಎಲ್ಲ ಇಲ್ಲಿ ಬಂದು ಬೆಡಿ ಹೊಟ್ಟುದರ ನೋಡ್ಯೊಂಡ್ರೆ ಆತು
ಸತ್ಯಣ್ಣಂಗೂ ‘ಚೆಲ ಇವನ ತಲೆಯೇ’ ಹೇದು ಆತು. ಹೇದ° – ಅಪ್ಪಪ್ಪು ನಮ್ಮ ಹಸಿ ಹಾಳೆ ಹಿಡ್ಕೊಂಡು ಚಿಟ್ಟಗೆ ಬಡಿತ್ತ ಶಬ್ದ ಇದಕ್ಕೆ ನಾಟ 😀
**
6
ಕಲ್ಲುಗುಂಡಿ ಆಟಕ್ಕೆ ವಿಟ್ಲ, ಕುಂಬಳೆ, ಪುತ್ತೂರು, ಕನ್ಯಾನ ಇತ್ಲಾಗಿಯಾಣವು ಹೋದವು ಹೇದಾದರೆ ಹೋಳಿಗೆ ಕೆರೆಶಿ ಕೆರೆಶಿ ಮುಗಿಗು.
“ಎಷ್ಟು ಸೇರಿಂದು ಬೇಕಾರು ಮಾಡಿರೂ ವ್ಯವಸ್ಥಾಪಕರ ಕೈಯಿಂದ ಬೈಗುಳ ತಿನ್ನೆಕ್ಕೇದು ಇಲ್ಲೆ” – ಸತ್ಯಣ್ಣ° ಹೇಳಿಕೊಂಡೆ ಇತ್ತಿದ್ದ°.
ಕಾನಕ ಕಟ್ಟುವಾಗ ಬಾಯಿಂದ ಕೆಂಪು ನೀರು ಬೀಳದ್ದೆ ಹೇದೂ ಅಂಬಗಂಬಗ ಎಚ್ಚರಿಕೆ ಹೇದೊಂಡೇ  ಇತ್ತಿದ್ದ ಅಡಿಗೆ ಸತ್ಯಣ್ಣ°.
ಹಾಂಗೆ ಅವನ ಸೆಟ್ಟಿನವಂಗೆ ಒಬ್ಬಂಗೆ ಜೋರು ಚಳಿ ಆದಪ್ಪಾಗ ಸತ್ಯಣ್ಣ ಹೇದ..“ಏ.. ಗೋಪಾಲ!, ನೀನು ಹಂಚು ಮಡುಗಿ ಅದರ್ಲಿ ಕೂದುಗೋ. ಚಳಿ ಎಲ್ಲಾ ಬಿಟ್ಟು ಹೋವ್ತು ನೋಡು”
ಆ ಚಳಿಗೂ ಅತ್ಲಾಗಿ ಐಸುಕೇಂಡಿ ತಿಂದುಗೊಂಡಿತ್ತಿದ್ದ ಎರಡು ಹೆಮ್ಮಕ್ಕ ಕಿಸಕ್ಕ ಹೇದು ನೆಗೆ ಮಾಡಿಯಪ್ಪಾಗಳೆ ಗೊಂತಾದ್ದು ನಮ್ಮ ಗೋಪಾಲಂಗೆ ಅಡಿಗೆ ಸತ್ಯಣ್ಣ ಹೇದ್ದು ಎಂತರ ಹೇದು 😀
**
7
ಕಲ್ಲುಗುಂಡಿ ಆಟ ಹೇದರೆ ಮತ್ತೆ ಕೇಳೆಕೋ!!
ಆಟವೂ ಊಟವೂ ತಿಂಡಿಯೂ ತೀರ್ಥವೂ ತಿರ್ಗಾಣವೂ ಭರ್ಜರಿಯೇ ಅಲ್ಲಿ.
ಊಟಕ್ಕೆ ಸುರುವಿಂಗೆ ಗೀರೈಸು ಬಳುಸಿದವು.
ಚೂರು ಖಾರ ಆತು ಹೇಳಿ ಸತ್ಯಣ್ಣಂಗೆ ಗೊಂತಾಪ್ಪಾಗ ಸತ್ಯಣ್ಣ° ಹೇದ° – “ಅದು ಬೇಖೆಳಿಯೇ ಮಾಡಿದ್ದು. ಏಕೆ ಹೇದರೆ ಇಲ್ಲದ್ರೆ ಇವು ಆಟ ನೋಡವು.  ಮೂಗಿನ ಕೊಡಿಯವರೆಗೆ ತಿಂದು ಮತ್ತೆ ದರುಬುರು ಬಿಟ್ಟರೆ ಆಟ ನೋಡುವವಕ್ಕೆ  ಭಂಙ. ಮತ್ತೆ ಇವು ಒರಗಿರೆ ಬಪ್ಪ ಸರ್ತಿ ಇಲ್ಲಿ ಹಾಸಿಗೆ, ತಲೆಗೊಂಬು ಬೇಕಾಕ್ಕು. ಮತ್ತೆದೆ ಇವು ಬಪ್ಪದು ಆಟ ನೋಡ್ಲೆಯೆ ಅಲ್ಲದೋ? 😀
~~
8
ಸತ್ಯಣ್ಣ ಎಷ್ಟು ಪಾಪವೋ ಅಷ್ಟೇ ಎದುರುಮಾತಾಡುಗದ. ಕುಶಾಲು ಅಲ್ಲದ್ದೆಯೂ ಇಲ್ಲೆ.
ಕಲ್ಲುಗುಂಡಿಲಿ ಲಾಯಿಕದ ಖರ್ಜೂರದ ಪಾಯಸ ಎಲ್ಲೋರ ಬಾಯಿಲು ಸುರು ಸುರು ಶಬ್ಧ ಮಾಡಿಗೊಂಡಿತ್ತಿದ್ದು.
ಸಾಲದ್ದಕ್ಕೆ ಒಂದೊಂದು ಸರ್ತಿ ಬಾಯಿಗೆ ಹಾಕುವಾಗಳುದೆ ಎರಡು ಮೂರು ಬೀಜಬೊಂಡು ದ್ರಾಕ್ಶೆ ಬಾಯಿಯ ಎಡೆಕ್ಕಿಲಿ ಸಿಕ್ಕಿಕೊಂಡಿತ್ತಿದ್ದು.
ಪಾಯಸ ಸುರಿವಾರ ಹಂತಿಲಿ  ನಮ್ಮ ಸುಳ್ಯದ ಗೋವಿಂದಣ್ಣನೂ ಇತ್ತಿದ್ದವು.
ಸುಳ್ಯದ ಗೋವಿಂದಣ್ಣಂಗೆ ಹಲ್ಲಿಲ್ಲೆ. ಸಾಲದ್ದಕ್ಕೆ ಪ್ರಾಯದೋಷ.
ಈ ಪಾಚ ಸೊರುಕ್ಕೊಂಡಿಪ್ಪಾಗ ಬಾಯಿಗೆ ಸಿಕ್ಕಿದ ಬೀಜಬೊಂಡಿನ ಅವು ತಪ್ಪುಗ್ರೇಶಿ – “ರಾಂಭಾವ! ಖರ್ಜೂರದ ಬಿತ್ತು ಸರಿ ತೆಗದ್ದವಿಲ್ಲೆ ಹೇಳಿ ಕಾಂತು. ಬಾಯಿಗೆ ಸಿಕ್ಕುತ್ತಿದಾ” – ಹೇದವು .
ಅಲ್ಲೆ ಹೋಳಿಗೆ ಅಗುಕ್ಕೊಂಡಿತ್ತಿದ್ದ ಸತ್ಯಣ್ಣ ಹೇದ° –  “ಅದು ಬೀಜಬೊಂಡು ಭಾವ. ಬೇಕಾರೆ ಟೇಪಿನ ನೀರಿಲಿ ತೊಳಕ್ಕೊಂಡು ಬನ್ನಿ. ಬೊದುಲಿ ಅಗಿವಲೆ ರಜ್ಜ ಸುಲಭ ಅಕ್ಕು” 😀
~~
9
ಕಲ್ಲುಗುಂಡಿಲಿ ನವಂಬರ 2 ಕ್ಕೆ ಕಿಚ್ಚಾಕುಲೆ ಶುರು ಮಾಡಿದ್ದದು ಮುಗುದ್ದದು 3ಕ್ಕೆ ಹೊತ್ತೋಪಗಳೆ.
ಅಡಿಗೆ ಸತ್ಯಣ್ಣಂಗೆ ಒಲೆ ಬುಡಲ್ಲಿ ಕೂದು ಬಚ್ಚೆಲು, ಸೆಕೆ ಎಲ್ಲವುದೆ ಇಪ್ಪಾಗ ಈ ರಂಗಣ್ಣಂದು ಹೊಸ ರಾಗ ಶುರು ಆತು.
ಜಿಲೆಬಿ ತಟ್ಟೆಯ ಮೇಲೆ ಕೂದುಗೊಂಡು ‘ತಟ್ಟೆ ಎಲ್ಲಿದ್ದು?’ ಹೇದು  ಕೇಟ° ರಂಗಣ್ಣ°.
ಅಂಬಗ ಸತ್ಯಣ್ಣ° ಹೇದ°- “ಅದು ಕಲ್ಲುಗುಂಡಿಯ ಶಾಮಿಯಾನದ ಅಂಗಡಿಲಿ ಇದ್ದು. ಅಲ್ಲೇ ಮುಗಿಶಿಕ್ಕಿ ಬಾ. ಮತ್ತೆ ಅಲ್ಲೇ ಶಾಲೆಯ ಮೇಲೆ ಹೋಗಿ ನಿನ್ನ ಸೇಮಗೆ ಒತ್ತು.”
ಇನ್ನಿಲ್ಲಿ ಕೂಪಲೆಮಣ್ಣ ಆವ್ತಿಲ್ಲೆ ಹೇದಪ್ಪಗ ರಂಗಣ್ಣ ಕೂದಲ್ಲಿಂದಲೇ ಒಂದ ಬೆಶೀಗೆ ಕಾಸಿ ಬಿಟ್ಟ° 😀
~~
10
ಕಲ್ಲುಗುಂಡಿ ಆಟಕ್ಕೆ ಆರೆಲ್ಲ ಹೋಯ್ದವು ಹೇದು ಲೆಕ್ಕ ಹಾಕಲೆ ಮಣ್ಣ ಎಡಿಯ. ಅಟ್ಟೂ ಜೆನ.
ಹೋದೋರ ಪೈಕಿ ನಮ್ಮ ಹಸಂತಡ್ಕ ಕಿಟ್ಟಣ್ಣನೂ ಒಬ್ಬ°
ಹಸಂತಡ್ಕ ಕಿಟ್ಟಣ್ಣಂಗೂ ಕಲ್ಲುಗುಂಡಿ ಡಾಕುಟ್ರಣ್ಣಂಗೂ ಮುಖತಾ ಗುರ್ತ ಇಲ್ಲದ್ರೂ ನೆಟ್ಟಿಲಿ ಗುರ್ತ ಆಯ್ದು.
ಹೇಂಗಾರು ಈ ಸರ್ತಿ ಕಲ್ಲುಗುಂಡಿಲಿ ಹೋದ್ದರ್ಲಿ ಮುಖತಾ ಭೇಟಿ ಆಯೇಕೆ ಹೇದು ಸಂಕಲ್ಪಂದ ಹೆರಟು ಬಂದ ಕಿಟ್ಟಣ್ಣ ಗ್ರೌಂಡಿಗೆ ಮೂರು ಮೂರ ಸುತ್ತ ಬಂದು ಕೊರಳೆಕ್ಕಳಿಸಿ ನೋಡಿ ಹುಡ್ಕಿದ° . ಇಲ್ಲೆ ಕಾಣುತ್ತಿಲ್ಲೆ.
ಸರಿ ಎಲ್ಯಾರು ಕೇಂಟಿನ ಹೊಡೆಲಿ ಕಾಣುತ್ತೋದು ನೋಡ್ತೆ ಹೇದು ಒಳಹೋಗಿ ಬೇಡದ್ರೂ ಎರೆಡೆರಡು ಸರ್ತಿ ಬೆಶಿ ಬೆಶಿ ಪೋಡಿ ಚಳಿಗೆ ತಿಂದಾತು. ಉಹುಮ್ಮ್ ಕಾಣುತ್ತಿಲ್ಲೆ.
ಫೋನು ಮಾಡುವೋ ಹೇದು ಗ್ರೇಶಿರೆ ಮೊಬೈಲಿಂಗೆ ಸರಿಗಟ್ಟು ರೇಂಜು ಇಲ್ಲೆ ಗ್ರಾಚಾರ ಒಂದು. ಫೋನ್ ಮಾಡ್ಳೆ ಅಲ್ಲಿಯಾಣ ಆಟದ ಬೊಬ್ಬಗೆ ಎಡಿಯಕ್ಕನ್ನೆ
ಅಂಬಗಂಬಗ ಬಿಟ್ಟುಬಟ್ಟು ರೇಂಜು ಬಂದೊಡಿತ್ತಿದ್ದು. ಮೆಸೇಜು ಕಳ್ಸುಲೆ ತಕ್ಕಿತ.
ಕಿಟ್ಟಣ್ಣಂಗಂತೂ ನಿಗಂಟು ಈ ಡಾಕುಟ್ರಣ್ಣ ಕಲ್ಲುಗುಂಡಿ ಆಟಕ್ಕೆ ಬಾರದ್ದೆ ಇರ°
ಮತ್ತೆ ನೋಡ್ಳೆ ಎಂತ ಇದ್ದು. ಮೆಸೇಜು ಸುರುಮಾಡಿದ – ಕಲ್ಲುಗುಂಡಿ ಆಟ ಹೇದರೆ ಬಾರೀ ರೈಸುತ್ತಪ್ಪೋ
ಆಚಿಗಂದ ಉತ್ತರ – ಅಪ್ಪಪ್ಪು
ಚೆಂಡೆ ಮದ್ದಳೆ ಬಾಗವತಿಗೆ ಅದ್ಭುತ ಅಪ್ಪೋ
ಆಚಿಗಂದ – ಅಪ್ಪಪ್ಪು
ಜೆನ ವಿಪರೀತ ಸೇರಿತ್ತವಪ್ಪೋ
ಅಪ್ಪಪ್ಪು
ಊಟ ಭರ್ಜರಿ ಅಪ್ಪೋ
ಅಪ್ಪಪ್ಪು
ಅಪ್ಪು ಡಾಕುಟ್ರಣ್ಣ ನಿಂಗೊ ಎಲ್ಲಿ ಕೂದುಗೊಂಡಿದ್ದಿ ?? !
“ಕ್ಲಿನಿಕ್ಕಿಲ್ಲಿ!!” – ಡಾಕುಟ್ರಣ್ಣನ ಉತ್ತರ ಬಂತು 😀
ಹಸಂತಡ್ಕಣ್ಣಂಗೆ ಚಳಿಗೂ ಬೆಗರು ಬಿಚ್ಚಿತ್ತು, ತಲೆ ತಿರುಗಿತ್ತು. ಸರಿಯಾಯೆಕ್ಕಾರೆ ಇನ್ನೊಂದು ಈಡು ಹಾಕದ್ದೆ ಕಳಿಯ ಹೇದು ಸತ್ಯಣ್ಣನ ಹತ್ರಂಗೆ ಬಂದು ಎಲೆ ಸಂಚಿಗೆ ಕೈ ಹಾಕ್ಯೊಂಡು ಹೀಂಗಿಂಗೆ ಆತಿದ ಸತ್ಯಣ್ಣ ಈ ಡಾಕುಟ್ರಣ್ಣನ ಕತೆ” – ಹೇದು ಹೇದ°
ಸತ್ಯಣ್ಣ ಹೇದ° – ಅಪ್ಪು ಭಾವ!, ಮತ್ತೆ ಎಲ್ಲೋರು ಇಲ್ಲಿ ಬಂದು ಕೂದರೆ, ಇಲ್ಲಿ ಆರಿಂಗಾರು ಏನಾರು ಆದರೆ ತುರ್ತು ಚಿಕಿತ್ಸೆಗೆ ಆರಾರು ಬೇಕನ್ನೇ. ಹಾಂಗೆ ದಾಕುಟ್ರಣ್ಣ ಕ್ಲಿನಿಕ್ಕಿಲ್ಯೇ ಬಾಕಿ ಆದ್ದಾಯ್ಕು. ಆಟ ಮುಗಿವಲಪ್ಪಗ ಬಕ್ಕು ನೋಡಿ ಮತ್ತೆ ನಾಳಂಗೆ. 😀
“ಹೋ! ದಾಕುಟ್ರಣ್ಣಂಗೆ ಇದೇ ದಾರಿಲೆ ಹೋಗಿಬರೆಕ್ಕಪ್ಪದೋ” – ಕಿಟ್ಟಣ್ಣ ಹೊಗೆಸಪ್ಪ ಪೀಂಟಿದ°  😀
**
11
ಕಲ್ಲುಗುಂಡಿಲಿ ಆಟ ಬೆಶಿ ಬೆಶಿ ರೈಸಿಗೊಂಡಿದ್ದತ್ತು. ಕೇಂಟೀನ್ ಬೆಶಿ ಬೆಶಿ ತಿಂಡಿ ಬೆಂದೊಂಡಿದ್ದತ್ತು.
ಅಪರೂಪಕ್ಕೆ ಆಟ ನೋಡ್ಳೆ ಬಂದ ಕುಂಟಾಂಗಿಲ ಬಾವಂಗೆ ರಂಗಸ್ಥಳಲ್ಲಿ ಸೌಮ್ಯ ಪದ ಬಂದಪ್ಪಗ ಒರಕ್ಕು ತೂಗುತ್ತಾಂಗೆ ಇದ್ದತ್ತು.
ಒಟ್ಟಿಂಗೆ ಬಂದವನ ಕರಕ್ಕೊಂಡು ಕೇಂಟೀನಿಂಗೆ ಬಂದ° ಕುಂಟಾಂಗಿಲ ಬಾವ°
“ಸತ್ಯಣ್ಣ, ಒಂದೊಂದು ಬೆಶಿ ಬೆಶಿ ಚಾಯಕೊಡಿ ನೋಡ್ವ” ಹೇದ° ಕೇಂಟೀನಿಂಗೆ ಬಂದ ಕುಂಟಾಂಗಿಲ ಬಾವ°
ಸತ್ಯಣ್ಣ° ಚಾಯ ತೋಡ್ಳೆ ಸುರುಮಾಡಿ ಚಾಯದ ಪುಂಟೆ ಹಿಂಡಿ ಹಾಲೆರದು ಅತ್ತಿತ್ತೆ ಎತ್ತರಂದ ಸೊರಿಗ್ಯೊಂಡಿತ್ತಿದ್ದ°
ಅಷ್ಟಪ್ಪಗ ರಂಗಸ್ಥಳಂದ ಅಮ್ಮಣ್ಣಾಯನ ಪದ ಕೇಟತ್ತು
ಚಾಯಕುಡಿವಲೆ ಬಂದ ಕುಂಟಾಂಗಿಲ ಬಾವನೊಟ್ಟಿಂಗೆ ಬಂದವ° – “ಅದ.. ಕಾಪಿ ಕಾಪಿ, ಕೇಳು” –  ಹೇದ° ಕುಂಟಾಂಗಿಲ ಬಾವನತ್ರೆ
ಸತ್ಯಣ್ಣಂಗೆ ಇದರ ಕೇಳ್ಯಪ್ಪಗ ಪಿಸುರು ಎಳಗಿತ್ತು.
“ನಿಂಗ ಮತ್ತೆ ಆಗಳೇ ಹೇಳೇಕ್ಕಾತಿಲ್ಯ. ಈಗ ಚಾಯ ಮಾಡಿಯಪ್ಪಗ ಕಾಪಿ ಕಾಪಿ ಹೇದರೆ ಈ ಚಾಯ ಆರಿಂಗೆ ಮಾಡಿದ್ದಂಬಗ?!”
ಇವ್ವು ಹೇದ್ದು ಕಾಪಿ ರಾಗ ಹೇದು ವಿವರ್ಸಿ ಹೇದಮತ್ತೆ ಹೆಗಲ ತುಂಡಿಲ್ಲಿ ಹೊಟ್ಟೆ ಉದ್ದಿಗೊಂಡ° ಸತ್ಯಣ್ಣ° 😀
**
12
ಕಲ್ಲುಗುಂಡಿ ಆಟಕ್ಕೆ ಅಡಿಗೆ ಸತ್ಯಣ್ಣನೊಟ್ಟಿಂಗೆ ಸಕಾಯಿ ರಂಗಣ್ಣನೂ ಇತ್ತಿದ್ದ ಹೇದು ಪ್ರತ್ಯೇಕ ಹೇಳೇಕ್ಕಾದ್ದು ಇಲ್ಲೆ.
ರಂಗಣ್ಣ ಸತ್ಯಣ್ಣನೊಟ್ಟಿಂಗೆ ಕಾಯಂ ಅಡಿಗ್ಗೆ ಹೋಪದಾರೂ ಆಟಕ್ಕೆ ಹೋಪದು ಮಾಂತ್ರ ಅಡಿಗೆ ಸತ್ಯಣ್ಣನ ದಾಕ್ಷಿಣ್ಯಕ್ಕೆ.
ಹೇದರೆ ರಂಗಣ್ಣಂಗೆ ಆಟ ಹೇದರೆ ಅಟ್ಟಕ್ಕಟ್ಟೇ. ಅದರ ತಲೆಬುಡ ಅರಡಿಯ. ಹೋದರೆ ಅಂತೇ ರಜಾ ಹೊತ್ತು ಸತ್ಯಣ್ಣನೊಟ್ಟಿಂಗೆ ದಾಕ್ಷಿಣ್ಯಕ್ಕೆ ನೋಡಿಕ್ಕಿ ಬೇಗ ಪದ್ರಾಡು ಹೆಟ್ಟುಸ್ಸು.
ರಂಗಣ್ಣ ನೋಡ್ಸು ಹಿಮ್ಮೇಳ ಚೆಂಡೆ ಮದ್ದಳೆ ಚಕ್ರತಾಳ ಎಲ್ಲ ಗಮ್ಮತ್ತು ಎಳಗುತ್ತ ಭಾಗವ ಮಾಂತ್ರ.
ಗಂಟೆ ಸುಮಾರು ಮೂರು ದಾಂಟಿಕ್ಕು
ಒಂದು ಮಟ್ಟಿನವು ಕೇಂಟೀನಿಂಗೆ ಬಪ್ಪವು ತೆಳ್ಳಂಗಾತು. ಎಲ್ಲೋರು ಆಟದ ಎದುರೆ ಇದ್ದವು. ಅಂತೇ ಕೂದರೆ ರಂಗಣ್ಣಂಗೂ ಒರಕ್ಕು ತೂಗುತ್ತಿಲ್ಯ!
ರಂಗಣ್ಣ ಒಂದರಿ ಚೀಲಲ್ಲಿತ್ತಿದ್ದ ಆಟದ ಕಾಗದವ ಒಂದರಿ ಓದಿ ನೋಡಿದ. ಗಟಾನುಗಟಿ ಭಾಗವತಕ್ಕೊ, ಚೆಂಡೆಮದ್ದಳೆ ಹೆಟ್ಳೆ ದೊಡದೊಡ ಹೆಸರು ಹೋದೋರ ಹೆಸರೆಲ್ಲ ಕಂಡತ್ತು
ಮೆಲ್ಲಂಗೆ ಒಂದರಿ ಆಟದತ್ರಂಗೆ ಹೋಯ್ಕಿ ಬತ್ತೆ ಹೇದು ಸಭೆ ಹತ್ರೆ ಹಾಂಗೆ ಬಂದ ಆರಾರು ಗುರ್ತದೋರು ಕಾಣ್ತೋ ಹೇದೂ ನೋಡ್ಯೊಂಡು
ರಂಗಸ್ಥಳಲ್ಲಿ ಕಯಾದು ಪ್ರಹ್ಲಾದ ಸನ್ನಿವೇಶ ಆಗಿಯೊಂಡಿತ್ತಿದ್ದು.
ಅಲ್ಲಿಂದ ರಫಕ್ಕನೆ ಬಂದವನೇ ಸೀದ ಕೇಂಟೀನು ಒಳ ಬಂದು ಬೈರಾಸ ಕುಡಿಗಿ ಒಂದುಕಾಲ ಅಡ್ಡ ಮಡುಸಿ , ಇನ್ನೊಂದು ಕಾಲ ಕುತ್ತ ಮಡಿಸಿ ತಲಗೆ ಕೈ ಮಡಿಕ್ಕೊಂಡು ಕೂದ°
ಇವನ ಗಾಬರಿ ನೋಡಿ ಸತ್ಯಣ್ಣಂಗೇ ಒಂದಾರಿ ಕಂಗಾಲು ಆತು.
ಏಯ್ ಎಂತ ಆತು ಮಾರಾಯನೇ! ಹೇದು ಅಡಿಗೆ ಸತ್ಯಣ್ಣ ವಿಚಾರ್ಸಿದ°
“ಅಲ್ಲ ಮಾವ°, ಅಟ್ಟು ಜೆನ ದೊಡ್ಡ ದೊಡ್ಡ ಚೆಂಡೆ ಬಾರುಸುತ್ತವೆಲ್ಲ ಇದ್ದವು. ಚೆಂಡೆ ರಂಗಸ್ಥಳಲ್ಲಿ ಮಡಿಗಿಕ್ಕಿ ಅವೆಲ್ಲ ಎಲ್ಲಿಗೋ ಹೋಯ್ದವು. ಬರೇ ಮದ್ದಳೆ ಮಾಂತ್ರ ಒಬ್ಬ ಬಾರ್ಸ್ಯೊಂಡು ಕೂಯ್ದ ಬಾಗವತ ಪದ ಹೇಳ್ವಾಗ..”
ಸತ್ಯಣ್ಣಂಗೆ ವಿಷಯ ಎಂತ್ಸರ ಹೇದು ಗೊಂತಾತು.
ಸತ್ಯಣ್ಣ ಹೇದ° – ಅಲ್ಲ ರಂಗೋ!, ನೀನು ಹೋಳಿಗ್ಗೆ ಕಾಯಾಲು ಕಡದ್ದೆ ಹೇಳ್ತಕೆ ಬೇಕಾಗಿ ಸಾರು ಕೊದಿಲು ಮೇಲಾರ ಪಾಚ ಹೋಪಾಗಳೂ ಕಾಯಾಲು ಕೊಂಡೋವ್ತ ಕ್ರಮ ಇದ್ದೋ. ಬರೇ ಹೋಳಿಗೆ ಹೋಪಗ ಮಾತ್ರ ಅಲ್ಲದೋ°. ಹಾಂಗೇ , ಚೆಂಡೆ ಇದ್ದು ಹೇದು ಕತ್ತಲೆಂದ ಉದಿವರೇಂಗೆ ಹೇಟ್ಯೊಂಡೇ ಕೊಣಿತ್ತ ಕ್ರಮ ಇಲ್ಲೆ ಆತ°.
ಸತ್ಯಣ್ಣ ಹೇದಪ್ಪಗ ರಂಗಣ್ಣಂಗೂ ಅಂದಾಜಿ ಆತು. “ಓ.. ಅಪ್ಪೋ .. ಹಾಂಗೋ ಪೆರ್ಲದಾಟಲ್ಲಿಯೂ ಕೆಲವು ಸರ್ತಿ ಮಾತ್ರ ಚೆಂಡೆ ಹೆಗಲಿಂಗೆ ಹಾಕಿ ನಿಂದೊಂಡು ಹೆಟ್ಟುಸ್ಸು . ಆತಂಬಗ”  😀
**
13
ಕಲ್ಲುಗುಂಡಿಲಿ ಚಂದ್ರಧ್ವಜನ ಮತ್ತಾಣ ಪ್ರಸಂಗ ತ್ರಿಪುರಮಥನ. ಹೊತ್ತು ನೆಡು ಇರುಳು ದಾಂಟಿದ್ದು ಸುರುವಪ್ಪಗ
ಒರಕ್ಕು ತೂಗುತ್ತ ಹೊತ್ತಿಂಗೆ ರಸವತ್ತಾದ ಹಾಸ್ಯ ಸನ್ನಿವೇಶವೂ ಸೇರಿ ಚೆಂಡೆ ಹೊದಳು ಹೊಟ್ಟುವ ಕಥಾಭಾಗ
ತ್ರಿಪುರ ಮಥನಲ್ಲಿ ಆಟದೊಳಗಿನ ಆಟ ಇದ್ದದಾ
ಮೇಳ ಕರಕ್ಕೊಂಡು ಬಪ್ಪದು… ಇತ್ಯಾದಿ ಇತ್ಯಾದಿ
ಹಾಂಗೆ ಪ್ರಸಂಗದ ಎಡೆಲಿ – “ಇತ್ತೀಚೆಗೆ ಮೇಳದ ವ್ಯವಸ್ಥಾಪಕರು ಪೆಟ್ಟು ತಿಂಬದು ಸಾಮಾನ್ಯ” ಹೇದು ಹಾಸ್ಯರಸಾಯನ ಆಗ್ಯೊಂಡಿತ್ತಿದ್ದು ರಂಗಸ್ಥಳಲ್ಲಿ.
ಅದು ಕೇಟಪ್ಪಗ ಅತ್ಲಾಗಿಂದ ಸತ್ಯಣ್ಣ ಹೇದ° “ಅವ ಅಲ್ಲಿ ಪೆಟ್ಟು ತಿನ್ನಲಿ, ನಾವಿಲ್ಲಿ ಬಡಿವ ಹಂಗರೆ. “ಏ ಗೋಪಾಲ! ಇದ, ನಾಕು ದಾಣೆ, ಆರು ಸೌಟು ತೆಕ್ಕೊಂಬಾ. ನಾವು ಬಡಿಯದ್ರೆ ಅವಂಗೆ ಬೇಜಾರಾಗದ” ಹೇದು
ಸತ್ಯಣ್ಣ ಹೇದ್ದಂತರ ಹೇದು ರಂಗಣ್ಣಂಗೆ ಅರ್ಥ ಆಗದ್ದೆ ಗೆಬ್ಬಾಯ್ಸಿ ನೋಡಿದಲ್ಲೇ ಟೆಟ್ಟೆಟ್ಟೇ 😀
**
14
ನಾವಡರ ಹಾಂಗೆ ಪದ ಹೇಳ್ತ ಮತ್ತೊಬ್ಬ° ಭಾಗವತ° ಹೇದರೆ ಅದು ರಾಘವೇಂದ್ರ ಆಚಾರ್ ಹೇದು ಹೇಳ್ಸು ಬಡಗಿಲಿ ಮನೆಮಾತು.
ಹಾಂಗೆ ಶುರುವಾಣ ಪ್ರಸಂಗಲ್ಲಿ ಭಾಗವತ° ಪದ ಹೇಳ್ತಾ ಇಪ್ಪಾಗ ರಂಗಣ್ಣಂದೆ ‘ಆನೆಂತ ಕಮ್ಮಿ!’ ಹೇದು ಸತ್ಯಣ್ಣನತ್ರೆ ‘ಮುಂದಾಣ ಪ್ರಸಂಗಲ್ಲಿ ಆಂದೇ ಪದ ಹೇಳಿಯೇ ಶುದ್ದಾ’ದು ಹೇದಪ್ಪಾಗ ಸತ್ಯಣ್ಣ ಹೇದಾ°- “ಕಾಯಿ ಕೆರವದೆ ಬಂಙಲ್ಲಿ ನೀನು. ಇನ್ನು ನೀ ಇಲ್ಲಿ ಕೊರವಲೆ ಶುರು ಮಾಡಿರೆ ನಿನ್ನ ಉದ್ದಕ್ಕೆ ಕೊರಗು. ನಾಡದ್ದಿಂಗೆ ಮತ್ತೆ ನಿನ್ನ ಹೆಂಡತ್ತಿಗೆ ಅಡುಗೆ ಮಾಡ್ಲೆ ಜನ ಇಲ್ಲದ್ದ ಹಾಂಗೆ ಅಕ್ಕು. 😀
“ವೀರಚಂದ್ರ ಧ್ವಜದಲ್ಲಿ ವೀರಮರಣವನ್ನಪ್ಪಿದ ರಂಗಣ್ಣ” ಹೇದು ಬಕ್ಕು ನಾಳಂಗೆ ಪೇಪರ್ಲಿ. ಇದೆಲ್ಲಾ ಬೇಕೋ ನಿನಗೆ?!”
ಸತ್ಯಣ್ಣ ಹೇದ್ದು ಕೇಟಪ್ಪಗ ರಂಗಣ್ಣಂಗೆ ಇಂಗು ತಿಂದ ಮಂಗನ ಹಾಂಗೆ ಆತು ಒಂದರಿ ಮೋರೆ 😀
**
15
ಕಲ್ಲುಗುಂಡಿಲಿ ಸತ್ಯಣ್ಣನ ಉಸ್ತುವಾರಿಲಿ ರಂಗಣ್ಣ ಸುಮಾರು 2 ಘಂಟಂದ “ಚೊಯ್…ಚೊಯ್” ಹೇಳಿ ದೋಸೆ ಹೊಯ್ಕೊಂಡಿತ್ತಿದ್ದ°.
ರಂಗಸ್ಥಳಲ್ಲಿ ಚೆಂಡೆಪೆಟ್ಟಿಂಗೆ ಕೆಲಸ ಇಲ್ಲದ್ದ ಅಷ್ಟತ್ತೊಂಗೆ ನಮ್ಮ ಕೋಳ್ಯೂರು ಭಾವ° ಹೊಟ್ಟೆಲಿ ತಾಳ ಹಾಕಲೆ ಸುರುವಾಗಿ ದೋಸೆ ತಿಂಬಲೆ ಬಂದವ° ದೋಸೆ ತಿಂದುಗೊಂಡು ಅಲ್ಲಿಂದ ಹೆರಡ್ಳಪ್ಪಗ ಸತ್ಯಣ್ಣನತ್ರೆ ಕೇಟವು “ಎಂತ ಸತ್ಯಣ್ಣ? ದೋಸೆ ಹೊಯ್ತಾ ಇದ್ದೀರೋ? ” ಆಚಿಗೆ ದೋಸೆ ಹೊಯ್ತಾ ಇಪ್ಪದರ ನೋಡಿಯೊಂಡೇ ಇದು ಸತ್ಯಣ್ಣನತ್ರೆ ಪ್ರಶ್ನೆ ಬೇರೆ!
ಸತ್ಯಣ್ಣ ಹೇದ° –  “ಇದಾ.. ಆರಿಂದುದೆ ಚೆಂಡೆ ಪೆಟ್ಟು ಸಾಲ. ಹಾಂಗಾದ ಕಾರಣ ನಿಂಗೊಗುದೆ ಹೊಟ್ಟೆಯೊಳ ಚೆಂಡೆ ಬಾರ್ಸುಲೆ ಬೇಕಾಗಿ ಗೆಂಣಂಗಿನ ಪೋಡಿ ಕಾಶುತ್ತಾ ಇದ್ದೆ. ಬೆಶಿ ಬೆಶಿ ಇದ್ದು ಈಗ, ನಾಕು ತಿಂದರೆ ನಿಂಗೊಗೆ ನಾಕು ಗಂಟಗೆ ರೈಸುಗು ಚೆಂಡೆಪೆಟ್ಟು” 😀
**
16
ಕಲ್ಲುಗುಂಡಿಲಿ ತ್ರಿಪುರ ಮಥನದ ಆಟದೊಳಗಿನ ಆಟ. “ಭಕ್ತ ಪ್ರಹ್ಲಾದ” ಪ್ರಸಂಗ.
ಹಿರಣ್ಯಕಶಿಪು ವಾಗಿ ಭಾಗಮಂಡ್ಲ ಮಾಬಲಣ್ಣ (ಮಹಾಬಲಣ್ಣ).
ಅಂಬಗ ಅವ° ನೋಡ್ಲೆ ಹೇಂಗೇದು ನಿಂಗೊ ಕೇಟ್ರೆ ಅವ° ಇಪ್ಪದು ನಾಕು ಫೀಟು ಹತ್ತು ಇಂಚು.
ಅವನ ಮಗ ಪ್ರಹ್ಲಾದ ಆರು ಫೀಟು ಎರಡು ಇಂಚು.
ಮಾಬಲಣ್ಣಂಗೆ ದೊಡ್ಡ ಪಾತ್ರವೇ ಆಯೆಕ್ಕು ಹೇಳ್ತದು ಆಟದೊಳಗಾಟದ ಮೇಳದ ವ್ಯವಸ್ಥಾಪಕ° ನಿಘಂಟು ಮಾಡಿದ್ಸು.
ಅದರಲ್ಲೊಂದು ಸ್ತ್ರೀ ವೇಷ ಇದ್ದದ. ಅದು ವ್ಯವಸ್ಥಾಪಕನ ಹೆಂಡತಿ ಶ್ರೀಮತಿ ಇಂದಿರಾ.
ವ್ಯವಸ್ಥಾಪಕ° ಅಟ್ಟಪ್ಪಗ “ಈಗ ಶ್ರೀಮತಿ ಹೇದು ಹಾಕಿರೆ ಆರುದೆ ಆಟ ನೋಡ್ಲೆ ಬಾರವು.  ಹಾಂಗಾದ ಕಾರಣ ‘ಕುಮಾರಿ ಇಂದಿರಾ’ ಹೇದು ಪ್ರಕಟಣೆ ಮಾಡ್ವೋ ಹೇದು ಹೇದ್ದು ರಂಗಣ್ಣಂಗೆ ಕೇಟತ್ತು.
ರಂಗಣ್ಣ° ಸತ್ಯಣ್ಣನತ್ರೆ ಬಂದು ಎರಡೂ ಸೊಂಟಕ್ಕೆ ಕೈ ಮಡಿಕ್ಕೊಂಡು ನಿಂದೊಂಡು ಹೇದ° – “ಮಾವ°, ನಮ್ಮ ರಮ್ಯನ ಕಳುಸುಲಾವ್ತಿತ್ತಪ್ಪೋ?!”
ಕೈಲಿಪ್ಪ ಸೌಟ ಹಾಂಗೆ ನೆಗ್ಗಿದವನೇ ಸತ್ಯಣ್ಣ ಹೇದ “ಈ ಪಂಚಾತಿಗೆ ಎಲ್ಲ ಬೇಡ ಆತ. ಅದು ತೊಡಗೆ ತಟ್ಟಿಗೊಂಡು ಸಂಗೀತ  ಕಲಿತ್ತ ಇಪ್ಪದೇ ಸಾಕು. ಅದಿನ್ನು ಇಲ್ಲಿ ಬಂದು ಕೊಣಿಯದ್ರೆ ಅಕ್ಕು.” 😀
**
 

***  😀 😀 😀  ***

 

10 thoughts on “'ಅಡಿಗೆ ಸತ್ಯಣ್ಣ°' – 36 (ಕಲ್ಲುಗುಂಡಿ ವಿಶೇಷಾಂಕ)

  1. ಕಥೆ ಹೇಳಿದ ಕಿಟ್ಟಣ್ಣ ಒರಕ್ಕು ಆಯಿದಿಲ್ಲೆ ಹೇಳಿ ಎರಡು ದಿನ ಒರಗಿದ್ದ..

  2. ಇನ್ನಾಣ ಕಲ್ಲುಗುಂಡಿ ಆಟಲ್ಲಿ ರಂಗಣ್ಣನ ‘ಪಾಕಶಾಸ್ತ್ರ ಪ್ರವೀಣ’ ಪ್ರಶಸ್ತಿ ಕನಸು ನನಸಾಗಲಿ… ಕಲ್ಲುಗುಂಡಿ ಆಟದ ರುಚಿ ಸಿಕ್ಕಿತು .ಲಾಯಕ್ಕಾಯಿದು.

  3. ಆಟದೊಳಗೊಂದಾಟಲ್ಲಿ ಸತ್ಯಣ್ಣನ ಪಾತ್ರವೂ ರಂಗಣ್ಣನ ಪಾತ್ರವೂ ರೈಸಿದ್ದು. ಸತ್ಯಣ್ಣಂಗೆ ಎನ್ನ ಲೆಕ್ಕಲ್ಲಿ ಒಂದು” ಜಿಗ್ಗ!” ಹೇಳಿಕ್ಕಿ.

  4. ಹಾಂಗೆ ನಮ್ಮ ಸತ್ಯಣ್ಣ ಬೈಲಿನ ನೆಂಟ್ರುಗಳೆಲ್ಲೊರನ್ನು ಕೇಳಿದ್ದಾಗಿ ತಿಳಿಶೆಕ್ಕೇಳಿ ಹೇಳಿದ್ದವು. ಮನೆಗೆ ಬಪ್ಪಾಗ ೧೦ ಹೋಳಿಗೆ ಕಟ್ಟಿಕೊಟ್ಟವು. ನಿಂಗಳ ಲೆಕ್ಕಲ್ಲಿ ನಾವೇ ತಿಂದತ್ತು.

    1. ಛೆ… ಹೋಳಿಗೆ ತಿನ್ನೆಕ್ಕು ಹೇಳಿ ಅಲ್ಲಿ ಕ್ಯೂ ಲಿ ನಿಂದರೂ ಎನಗೆ ಹೋಳಿಗೆ ಸಿಕ್ಕಿದ್ದಿಲ್ಲೆ… ಈ ಕಿಟ್ಟಣ್ಣಂಗೆ ಕಟ್ಟಿ ಕೊಟ್ಟ ಕಾರಣವೇ ಎನಗೆ ಸಿಕ್ಕದ್ದದು….
      ‘ತಿಂದೂ ಹೋದ – ಕೊಂಡೂ ಹೋದ’ ಹೇಳಿ ಇದಕ್ಕೇ ಹೇಳುದು…

  5. ಕಲ್ಲುಗುಂಡಿಗೆ ಹೊಗಿ ಆತ ನೋಡ್ಲೆ ಎಡಿಗಾಗದ್ರೂ ಬೈಲಿಲಿ ಕೂದೊಂಡು ಚೆಂಡೆ ಪೆಟ್ಟು, ಸತ್ಯಣ್ಣನ ಕೇಂಟೀನಿಲಿ ಪೋಡಿ,ಚಾಯ ಕುಡುದ ಅನುಭವ ಆತು.

  6. ವಲಲ ಪ್ರಶಸ್ತಿ ತೆಕ್ಕೊಂಡಪ್ಪಗ ಕೀಚಕ ಬಂದರೆ ಹೇಳಿ ಹೆದರಿಯೇ ವಸ್ತ್ರ ತತ್ತೆ ಹೇಳಿ ಅಲ್ಲಿಂದ ಪೀಂಕಿದ್ದೋ?
    ತೊಳವ ಮಿಶನಿನ ವಸ್ತ್ರವನ್ನೂ ತೊಳೆಯಕ್ಕಾದ ಗತಿ ಬಾರನ್ನೆ ಕಿಟ್ಟಣ್ಣಂಗೆ?
    ಇನ್ನಾಣ ಪ್ರಸಂಗಲ್ಲಿ ಪದ ಹೇಳ್ತೆ ಹೇಳಿದ್ದದಲ್ದಾ ರಂಗಣ್ಣ- ಮತ್ತೆ ಮನೆಗೆ ಹೋದಮೇಲೆ ಮಾಡುವ ‘ಕುಂಭಕರ್ಣ ಒಡ್ಡೋಲಗ’ಲ್ಲಿ ಪದ ಹೇಳುದಾದಿಕ್ಕು ಅವ°.’ಡುರ್….ಡುರ್…’ ಆಲಾಪನೆಲಿ ಒಳ್ಲೆತ ಏರಿಳಿತ ಇಕ್ಕಪ್ಪೋ …!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×