ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 52

ಬೈಲಿಲ್ಲಿ ಅಡಿಗೆ ಸತ್ಯಣ್ಣನ ಮರದಿರೋ ಹೇಂಗೆ.  ಅಡಿಗೆ ಸತ್ಯಣ್ಣನ ಇಲ್ಲೆ ಕೂಡಿ ಕಾಣದ್ದೆ ಅಲ್ಪ ಸಮಯ ಆತಪ್ಪೋ.

ಅದು ಎಂತಾದ್ದು ಹೇದರೆ….. ಒ..ಟ್ಟು ಅನುಪ್ಪತ್ಯದ ತೆರಕ್ಕಿಲ್ಲಿ ಶುದ್ದಿ ಹೇಳ್ಳೆ ಅಡಿಗೆ ಸತ್ಯಣ್ಣಂಗೆ ಒಟ್ಟು ಪುರುಸೊತ್ತೇ ಇಲ್ಲೆ, ಅಡಿಗೆ ಸತ್ಯಣ್ಣನ ಕಂಡು ಶುದ್ದಿ ಮಾಡ್ಳೆ ನವಗೂ ಏನ ಪುರುಸೊತ್ತಾಯ್ದಿಲ್ಲೆ.

ಹೀಂಗಿಪ್ಪಗ ಬೈಲಿಲ್ಲಿ ವಜ್ರಾಂಗಿ ಬಾವನ ಮದುವೆ ಗೌಜಿ ಎಲ್ಲ ಕಳುದಿಕ್ಕಿ ಓ ಮನ್ನೆ ಓ ಅಲ್ಲಿ ಒಂದಿಕ್ಕೆ ಅನುಪ್ಪತ್ಯಲ್ಲಿ ಅಡಿಗೆ ಸತ್ಯಣ್ಣನ ಕಾಂಬಲೆ ಸಿಕ್ಕಿಯಪ್ಪಗ ಸಿಕ್ಕಿದ ಶುದ್ದಿಗಳ ಇಂದೇ ಹೇದಿಕ್ಕುವನೋದು-

~~

 

 1. ಓ ಮನ್ನೆ ವಜ್ರಾಂಗಿ ಭಾವಯ್ಯನ ಮದುವೆ ಕಳುತ್ತಪ್ಪೋ.

ಶ್ರೀ ಗುರುದೇವತಾನುಗ್ರಹಂದ ಎಲ್ಲ ಚೆಂದಕ್ಕೆ ಕಳುತ್ತು. ಸಂತೋಷ.adige satyanna 5

ಮಜ್ಜಾನಕ್ಕೆ ಮದುವೆ , ಇರುಳಿಂಗೆ ಸಟ್ಟುಮುಡಿ ಇದಾ

ಊಟ ಎಲ್ಲ ಆಗಿ ಹೆರಡ್ತವೂ ಹೆರಟು ಹೋಗಿ ಒರಗುತ್ತೋರಿಂಗೆ ಹಸೆ ಹೊದಕ್ಕೆ ವ್ಯವಸ್ಥೆಯೂ ಆಗಿತ್ತು.

ಸತ್ಯಣ್ಣನೂ ಹಸೆ ಹತ್ರೆ ಬಂದು ಕೂದಾಗಿತ್ತು. ಮನಿಗಿದ್ದನಿಲ್ಲೆ ಗಂಟೆ ಇರುಳು ಒಂದು ಕಳುದಾಗಿತ್ತಾದರೂ

ಹತ್ರೆಯೇ ಮನಿಗಿ ಒರಕ್ಕು ಹಿಡಿಯದ್ದೆ ಇತ್ತಿದ್ದ ಭಾವಯ್ಯ ಕೇಟವು – “ಎಂತ ಸತ್ಯಣ್ಣ, ಒರಗುತ್ತ ಅಂದಾಜಿ ಇಲ್ಯ?”

ಸತ್ಯಣ್ಣ ಹೇದ° – ಇಲ್ಲೆ.., ಎನ್ನ ಮೊಬೈಲಿಂಗೆ ಒಂದು ಮಿಸ್ ಕೋಲ್ ಬಪ್ಪಲೆ ಬಾಕಿ ಇದ್ದು. ಅದಿನ್ನು ಆನು ಒರಗಿದ ಮತ್ತೆ ಬಂದರೆ ಗೊಂತಾಗ ಇದಾ. ಅದು ಬಂದ ಮತ್ತೆ ಆನು ಒರಗುದೇ ಇನ್ನು.

ಕಂಡತ್ತೋ… ಇರುಳು ಮಿಸ್ ಕೋಲು ಕೊಡ್ತ ಅಭ್ಯಾಸ ಇಪ್ಪೋರಿಂದ ಎಷ್ಟು ಉಪದ್ರ ಆವ್ತು !! 😀

**

 1. ವಜ್ರಾಂಗಿ ಸಟ್ಟುಮುಡಿ ಎಲ್ಲ ವಿಲೆವಾರಿ ಆಯಿಕ್ಕಿ ಅಡಿಗೆ ಸತ್ಯಣ್ಣ ಒರಗಿ ಆತು.

ಉದಿಯಪ್ಪಗ ಬೆಣಚ್ಚಿಯಾಯೆಕಾರೆ ಎದ್ದಾತು.

ಕಾಪಿ ತಿಂಡಿಗೂ ರೆಡಿ ಮಾಡಿ ಕೊಟ್ಟಾತು, ಕಾಪಿ ತಿಂಡಿ ವಿಲೆವಾರಿಯೂ ಆತು.

ಮಳೆ ಇತ್ತಿದ್ದ ಕಾರಣ ಸತ್ಯಣ್ಣ ಬೈಕು ತೈಂದಾ°ಲ್ಲೆ. ಬಸ್ಸಿಲ್ಲಿ ಬಂದ್ಸು.

ಬಸ್ಸು ಹಿಡುದು ಪುತ್ತೂರಿಂಗೆ ಬಂದು ಪೆರ್ಲ ಬಸ್ಸಿಂಗೆ ಕಾದೊಂಡಿಪ್ಪಗ ಬೈಲ ಭಾವ ಒಬ್ಬ ಕಾಂಬಲೆ ಸಿಕ್ಕಿದ°

ದೂರ ಹೆರಟದು ಕೇಟಪ್ಪಗ – “ವಜ್ರಾಂಗಿ ಸಟ್ಟುಮುಡಿಗೆ ಹೆರಟದು, ಮದುವಗೆ ನಿನ್ನೆ ಹೋಪಲಾತಿಲ್ಲೆ” – ಹೇದ° ಆ ಭಾವಯ್ಯ°

ಸತ್ಯಣ್ಣ° ಹೇದಾ° – ಹ್ಹಾ°..,  ಬೇಗ ಹೋಗು ಅಂಬಗ. ಮದುಮಕ್ಕೊ ಸಮ್ಮಾನಕ್ಕೆ ಹೆರಡ್ತ ಇದ್ದವು, ಅವರೊಟ್ಟಿಂಗೆ ನಿನ ಸೇರಿಗೊಂಬಲಕ್ಕು. 😀

**

 1. ವಜ್ರಾಂಗಿ ಮದುವೆ ಸಟ್ಟುಮುಡಿ ಕಳಿಶಿಕ್ಕಿ ಪುತ್ತೂರಿಂಗೆ ಬಂದು ಪುತ್ತೂರಿಂದ ಕೇರಳ ಸ್ಟೇಟು ಬಸ್ಸಿಲ್ಲಿ ಪೆರ್ಲಕ್ಕೆ ಹೋಪದಿದಾ ಅಡಿಗೆ ಸತ್ಯಣ್ಣ°

ಒಟ್ಟಿಂಗೆ ಸಕಾಯಿ ರಂಗಣ್ಣ° ಕೂಡ ಇತ್ತಿದ್ದ° ಹೇದು ಪ್ರತ್ಯೇಕ ಹೇಳೆಕು ಹೇದು ಇಲ್ಲೆನ್ನೆ.

ಬಸ್ಸಿಲ್ಲಿ ಕೂದ ರಂಗಣ್ಣಂಗೆ ಬಸ್ಸಿಲ್ಲಿ ಕಾಯಿಕಡವಲೆ ಇಲ್ಲೆ.  ಬಾಯಿಗೆ ಹಾಕಿ ಎಲೆ ಅಡಕ್ಕೆ ಕಡವಲೂ ಇಲ್ಲೆ

ಕೈಲಿ ಒಂದು ಉದ್ದುತ್ತ ಮೊಬೈಲು ಇದ್ದನ್ನೆ.. ಅದು ಉದ್ದಿದಷ್ಟೂ ಮುಗಿವಲೆ ಇಲ್ಲೆ ಬೆಟ್ರಿ ಮುಗಿವನ್ನಾರ

ವಿಟ್ಳ ಬಪ್ಪನ್ನಾರ ಉದ್ದಿಗೊಂಡೇ ಇತ್ತಿದ್ದ ರಂಗಣ್ಣ, ವಿಟ್ಳ ಕಳುದಮತ್ತೆ ಉದ್ದಿ ಉದ್ದಿ ಕೆಮಿಗೆ ಮಡುಗುಸ್ಸು ಕಂಡತ್ತು ಅಡಿಗೆ ಸತ್ಯಣ್ಣಂಗೆ.

ಆರಿಂಗೋ ನೀನು ಹಾಂಗೆ ಆಗಂದಲೆ ಫೋನ್ ಮಾಡ್ಳೆ ಹೊಣೆತ್ತ ಇಪ್ಪದು? – ಕೇಟ° ಅಂತೇ ಸತ್ಯಣ್ಣ°

ಫೋನ್ ಮಾಡಿದ್ದಲ್ಲ ಮಾವ°. ಅಂತೇ ರಿಂಗು ಮಾಡ್ತಾ ಇಪ್ಪದು .., ಅವರ ಮೊಬೈಲ್ಲಿ ಏವುದು ರಿಂಗು ಟೋನು ಇದ್ದು ಹೇದು ಗೊಂತಪ್ಪಲೆ!

ಹೋ.. ಹಾಂಗೋ!… ಹಾಂಗಾರೆ ಇದಾ ಎನ್ನತ್ರೆ ಕೆಲವು ನಂಬ್ರಂಗೊ ಇದ್ದು, ನೆಡು ಇರುಳು ಮಿಸ್ ಕೋಲು ಕೊಡ್ತವರದ್ದು. ಅವರ ಮೊಬೈಲ್ಲಿ ಏವ ರಿಂಗು ಟೋನ್ ಇದ್ದು ಹೇದು ಚೆಕ್ಕು ಮಾಡು ಹೇದು ಮೊಬೈಲ ರಂಗಣ್ಣನತ್ರೆಂಗೆ ಒಡ್ಡಿದ° ಅಡಿಗೆ ಸತ್ಯಣ್ಣ°

ಮತ್ತೆ ಅಡಿಗೆ ಸತ್ಯಣ್ಣಂಗೆ ನೆಡು ಇರುಳು ಮಿಸ್ ಕೋಲು ಉಪದ್ರ ಇದ್ದತ್ತೋ ಹೇದು ಇನ್ನಾಣ ಸರ್ತಿ ಕಂಡಪ್ಪಗ ಕೇಟು ಅರ್ತಾಯೇಕ್ಕಟ್ಟೆ. 😀

**

 1. ವಜ್ರಾಂಗಿ ಭಾವನ ಮದುವೆಂದ ಮದಲೆ ವಜ್ರಾಂಗಿ ಭಾವನ ಸಮಾವರ್ತನಗೂ ಖುದ್ದಾಗಿ ಅಡಿಗೆ ಸತ್ಯಣ್ಣನೇ  ಹೋದ್ಸಿದಾ

ಕಾಶೀ ಯಾತ್ರೆ ಹೇಳ್ತ ಸಂದರ್ಭ ಎಲ್ಲೋರಿಂಗೂ ಒಂದು ತಮಾಷೆ ನೋಡುವ ಹೊತ್ತದಾ

ವಜ್ರಾಂಗಿ ಭಾವ° ಮುಂಡಾಸು ಕಟ್ಟಿ, ದಂಡಕಮಂಡಲ ಹಿಡ್ಕೊಂಡು, ಹಾಳೆಮೆಟ್ಟು ಸುರ್ಕೊಂಡು ನಾಕು ಮೆಟ್ಟು ಕಾಲು ಮಡಿಗಿಯಪ್ಪದ್ದೆ ಸೋದರ ಮಾವ° ‘ಮದುವೆ ಮಾಡುಸುತ್ತೆ.. ಮತ್ತೆ ಒಟ್ಟಿಂಗೆ ಹೋಪಲಕ್ಕು ಹೇದು’ ತಡದವದಾ

ಚೆಪ್ಪರಲ್ಲಿ ಹತ್ರೆ ಎಂತೆಂತ ಹೇದೊಂಡು ನೆಗೆಮಾಡಿದವೋ ನವಗರಡಿಯ.. ಅಡಿಗೆ ಸತ್ಯಣ್ಣ° ಅಡಿಗೆ ಕೊಟ್ಟಗೆಂದಲೇ ಹೇದಾ° – “ಅದಾ ಈ ಸೋದರ ಮಾವ° ಮದಲೇ ಹೇದಿದ್ರೆ ಈ ಭಾವಯ್ಯಂಗೆ ಕೂಸು ಹುಡ್ಕುತ್ತ ಕೆಲಸ ಇರ್ತಿತ್ತಿಲ್ಲೆ” 😀

ವಜ್ರಾಂಗಿ ಭಾವ ಮದುವೆ ಕಳುದಿಕ್ಕಿ ಬೆಂಗ್ಳೂರಿಂಗೆ ಹೋದನಡಪ್ಪ. ಮತ್ತೆ ಕಾಶಿದು ವರ್ತಮಾನ ಇಲ್ಲೆ! 😀

**

 1. ವಜ್ರಾಂಗಿ ಸಟ್ಟುಮುಡಿಲಿ ಅಡಿಗೆ ಸತ್ಯಣ್ಣ ಅಡಿಗೆ ತೆರಕ್ಕಿಲಿ ಇತ್ತಿದ್ದ°

ಅಡಿಗೆ ಎಲ್ಲ ಆಯಿಕ್ಕಿ ಹಪ್ಪಳ ಹೊರ್ಕೊಂಡೇ ಬಾಕಿ ಅಡಿಗೆಯೋರತ್ರೆ ಎಂತದೋ ಮಾತಾಡ್ಯೊಂಡಿಪ್ಪಗ ಆರೋ ಒಬ್ಬ ಭಾವಯ್ಯ ಅಡಿಗೆ ಕೊಟ್ಟಗೆ ಬಂದವ ಇವರ ಮಾತುಗಳ ಕೇಟೊಂಡಿದ್ದವ ಹೇದ° – “ಸತ್ಯಣ್ಣ!, ಆನು ಒಂದು ಹೇಳೆಕಾ..”

ಸತ್ಯಣ್ಣ° ಬೇರೆ ಎಂತ ಯೋಚನೆಲಿ ಇತ್ತಿದ್ದನೋ ಏನೋ … ಹೇದಾ° – “ಬೇಡ, ಒಂದು ಆನು ಹೇಳುತ್ತೆ, ನೀನು ಎರಡರಿಂದ ಸುರುಮಾಡು” 😀

**

 1. ವಜ್ರಾಂಗಿ ಮದುವೆ ಮಜ್ಜಾನಕ್ಕೆ ಕಳುದಿಕ್ಕಿ ಇರುಳಿಂಗೇ ಸಟ್ಟುಮುಡಿ ಆದಕಾರಣ ನಮ್ಮ ಸುಭಗಣ್ಣ ಬೆಂದಿಗೆ ಕೊರವಲೆ ಹೇದು ಪೀಶತ್ತಿ ಉದ್ದಿಗೊಂಡು ಸುರೂವಾಣ ಜೀಪಿಂಗೆ ಹೆರಟಿದವದಾ.

ಸುಭಗಣ್ಣ ಸಟ್ಟುಮುಡಿ ಜಾಗ್ಗೆ ಹೋದವೇ ಆಸರಿಂಗೆ ಕುಡುದಿಕ್ಕಿ ಎರಡ್ನೇ ಜೀಪು ಬಪ್ಪಲೆ ಕಾದೊಂಡಿತ್ತಿದ್ದ ಹೊತ್ತಿಂಗೆ ಒಂದಾರಿ ಮೇಗಂದ ಮೇಗೆ ಪೇಪರು ನೋಡ್ಯೊಂಡಿತ್ತಿದ್ದವು.

ಅಷ್ಟಪ್ಪಗ ಅಲ್ಲಾಂಗೆ ಬಂದ ಅಡಿಗೆ ಸತ್ಯಣ್ಣ ಸುಭಗಣ್ಣನತ್ರೆ ಕೇಟವು ಪೇಪರ್ಲಿ ಎಂತ ವಿಶೇಷ ಭಾವ?!

ಸುಭಗಣ್ಣ ಎಂತದೋ  ಸಣ್ಣಕೆ ತಲೆಬೆಶಿ ಇಪ್ಪೋರಾಂಗೆ ಮೋರೆ ಮಾಡ್ಯೊಂಡು ಹೇದವು – ಹೊಗೆಸೊಪ್ಪಿಂಗೆ ರೇಟು ಏರುತ್ತಡ ಸತ್ಯಣ್ಣ!

ಸುಭಗಣ್ಣಂಗೆ ಮಾಷ್ಟ್ರು ಮಾವನ ಹಾಂಗೆ ಎಲೆ ತಿಂದು ಆಗಿಯೇ ಅಯೇಕು ಏನೂ ಇಲ್ಲೆ ಇದಾ. ಹಾಂಗೆ ತಿಂದರೂ ಅದಿನ್ನು ಕುಣಿಯ ಹೊಗೆಸೊಪ್ಪೇ ಆಯೇಕು ಹೇದೂ ಇದಾ. ಚೆಂಡಿ ಬೆಜವಾಡವೂ ಆವ್ತು. ಚೊಗರು ಬಾಯಿಲಿ ತುಂಬಿರೆ ಆತು.

ಅಡಿಗೆ ಸತ್ಯಣ್ಣಂಗೂ ಬೆಜವಾಡ ಹೊಗೆಸೊಪ್ಪಾದರೆ ಎಲೆ ತಿನ್ನೆಕು ಹೇದೇನೂ ಆವ್ತಿಲ್ಲೆಡ. ಅಡಿಗೆ ಸತ್ಯಣ್ಣ° ಅವನ ಕರ್ಚಿಗೆ ಲಾಯಕ ಊರ ಹೊಗೆಸೊಪ್ಪು ಎಲ್ಲಿಂದಾರು ಸಂಪಾಲುಸಿ ಕಟ್ಟಿ ಸ್ಟೊಕ್ ಮದಲೇ ಮಾಡಿಮಡಿಗಿರ್ತ°.

ಸುಭಗಣ್ಣ° ಹೊಗೆಸೊಪ್ಪಿಂಗೆ ರೇಟು ಇನ್ನೂ ಏರುತ್ತು ಹೇದಪ್ಪಗ ಅಡಿಗೆ ಸತ್ಯಣ್ಣಂಗೂ ತಲೆಬೆಶಿ ಏರಿತ್ತು. “ಇನ್ನಂಬಗ ಎಲೆ ತಿಂಬದನ್ನೇ ಬಿಡೆಕು, ನಿಲ್ಸೆಕು” ಹೇದು ಎಲೆತಟ್ಟೆ ಎಲ್ಲಿದ್ದು ಹೇದು ಹುಡ್ಕಲೆ ಸುರುಮಾಡಿದನಡ° ಅಡಿಗೆ ಸತ್ಯಣ್ಣ° 😀

**

 1. ವಜ್ರಾಂಗಿ ಮದುವೆ ಸಟ್ಟುಮುಡಿ ಕಳಿಶಿಕ್ಕಿ ಅಡಿಗೆ ಸತ್ಯಣ್ಣ ಮನಗೆ ಬಂದ°.

ಅಂದು ಬೇರೆಂತದೂ ಒಪ್ಪಿದ್ದು ಇತ್ತಿಲ್ಲೆ. ಹಾಳಿತಕ್ಕೆ ಮಳೆಯೂ ಇದ್ದ ಕಾರಣ ಹದಾಕೆ ಮನೆಲಿ ಬಾಕಿ ಅಡಿಗೆ ಸತ್ಯಣ್ಣ.

ಅಡಿಗೆ ಸತ್ಯಣ್ಣನಲ್ಲಿ ಹೆಚ್ಚಾಗಿ ಇರುಳಿಂಗೆ ಕೊಚ್ಚಿಲಕ್ಕಿ ಹೆಜ್ಜೆ ಇದಾ.

ಅದೂ ಮಳೆಗಾಲಲ್ಲಿ ಬೆಶಿ ಬೆಶಿ ಹೆಜ್ಜೆ ಹೇದರೆ ಅಲ್ಲಿ ಎಲ್ಲರಿಂಗೂ ಇಷ್ಟವೆ.

ಹೆಜ್ಜೆಯೊಟ್ಟಿಂಗೆ ಮಾಯಿನಣ್ಣು ಗೊಜ್ಜಿಯೂ ಇರಳಿ ಹೇದು ಮಗಳು ರಮ್ಯ ಹೇದಪ್ಪಗ ಅಬ್ಬೆ ಶಾರದಕ್ಕ° – “ಆತಂಬಗ ನಾಕು ಮಾಯಿನಣ್ಣು ಹಸಿಮೆಣಸು ಕೊರದು ಕೊಂಡ” ಹೇದು ಹೇತು.

ಹಾಂಗೆ ಮೆಟ್ಟುಕ್ಕತ್ತಿ ಉದಾಕೆ ಮಡಿಗಿ, ಅಡಿಯಂಗೆ ಒಂದು ಹಾಳೆ ಮಡಿಗಿ ಅಬ್ಬೆ ಕೊರೆತ್ತಾಂಗೆ ಮಾಯಿನಣ್ಣು ಕೆತ್ತಿಕೊರದಿಕ್ಕಿ, ಹಸಿಮೆಣಸು ಕೊರವಗ ಹಸಿಮೆಣಸು ಕೈ ಜಾರಿ ಮೆಟ್ಟುಕತ್ತಿ ಬಲದ ಕೈ ಬೆರಳಿಂಗೆ ತಾಗಿತ್ತು, ಪಿಚಕ್ಕನೆ ನೆತ್ತರು ರಟ್ಟಿತ್ತು.

ಪುಣ್ಯ!,  ಮಾಯಿನಣ್ಣು ಕೊರದ ತಪ್ಪಲೆ ಆಚಿಗೆ ಮದಲೇ ಮಡಿಗಿ ಆಗಿತ್ತು!

“ಆ….ಊ… ಉರೀ….” ಎದ್ದತ್ತಲ್ಲಿಂದ ರಮ್ಯ.

ಸತ್ಯಣ್ಣಂಗೆ ಈ ವಿಶ್ಯ ಗೊಂತಿತ್ತಿಲ್ಲೆ.

ಇರುಳು ಊಟಕ್ಕೆ ಕೂಬಗ ರಮ್ಯನೂ ಅಪ್ಪನೊಟ್ಟಿಂಗೆ ಕೂದತ್ತು.

ಅಪ್ಪ° ಉಂಬಲೆ ಸುರುಮಾಡಿದ ಮತ್ತೆ ಮಗಳು ಮೆಲ್ಲಂಗೆ ಚಮಚಲ್ಲಿ ಬಟ್ಳಿಂದ ತೋಡಿ ಉಂಬಲೆ ಹಸಬಡ್ಕೊಂಡಿಪ್ಪದರ ನೋಡಿ ಅಡಿಗೆ ಸತ್ಯಣ್ಣ ಕೇಟ° – ಇದೆಂಸು ನಿನ್ನದಿಂದು ಸುರುವೆತಟ್ಟೆ ಮರ್ಯಾದಿ ?!! 😀

**

 1. ವಜ್ರಾಂಗಿ ಮದುವೆ ಸಟ್ಟುಮುಡಿ ಕಳ್ಸಿಕ್ಕಿ ಅಡಿಗೆ ಸತ್ಯಣ್ಣಂಗೆ ಬೆಂಗುಳೂರಿಲಿ ಒಂದು ಅನುಪ್ಪತ್ಯ.

ಬೆಂಗುಳೂರಿಂಗೆ ಹೋದರೆ ಮತ್ತೆ ಒಂದು ದಿನ ಎಕ್ಸ್ಟ್ರಾ ಬೇಕಾವ್ತು ಅಡಿಗೆ ಸತ್ಯಣ್ಣಂಗೆ. ಹೋದ್ದರ್ಲಿ ದೊಡ್ಡ ಮಗಳ ಮನಗೂ ಹೋಯ್ಕಿ ಬಪ್ಪದಿದಾ

ಈ ಸರ್ತಿ ಹೋದ್ದರ್ಲಿ ಎಂತಾತು ಕೇಟ್ರೆ .. ಮಗಳ ಮನೆ ಅಲ್ಲೆ ಆಚಿಗೆ ನಮ್ಮೋರ ಒಂದು ಮನೆ ಇದ್ದು.

ಕೆಲಾವು ವೊರುಶ ವಿದೇಶಲ್ಲೆಂಸೋ ಉದ್ಯೋಗಲ್ಲಿ ಇತ್ತಿದ್ದ ಅವು ಈಗ ಅದರ ಬಿಟ್ಟಿಕ್ಕಿ ಬೆಂಗುಳೂರಿಲ್ಲಿ ಬಂದು ಎಂಸೋ ಬಿಸಿನೆಸ್ಸಡ.

ಮಗಳು ರಾಧೆಗೆ ಅದು ಇತ್ತೀಚಗೆ ಕಂಡು ಗುರ್ತ ಅಲ್ಲದ್ದೆ ಹತ್ರೆ ಪರಿಚಯ. ಆ ಮನೆಯವು ಈ ಮನೆಯವೂ ಈಗ ಒಡನಾಟವೂ ಹತ್ರೆ.

ಹಾಂಗಾಗಿ ಅನುಪ್ಪತ್ಯ ಮುಗಿಶಿಕ್ಕಿ ಕಸ್ತಲಪ್ಪಗ ಮಗಳ ಮನಗೆ ಬಂದ ಅಡಿಗೆ ಸತ್ಯಣ್ಣನ ಮನಗೆ ಕರಕ್ಕೊಂಡು ಬರೆಕು ಹೇದು ಭಿನ್ನಹ ಆತು ಆಚ ಮನೆಯೋರದ್ದು. ಸರಿ ಅಂಬಗ, ಮರದಿನ ಉದಿಯಪ್ಪಗ ಕಾಪಿತಿಂಡಿಗೇ ನಿಂಗಳಲ್ಲಿಗೆ ಬತ್ತ್ಯೋ° ಹೇದು ತೀರ್ಮಾನ ಆತು.

ಮರದಿನ ಮಗಳ ಮನೆಲಿ ಬರೇ ಒಂದ್ಲಾಸು ಕಾಪಿ ಕುಡುದಿಕ್ಕಿ ಆಚ ಮನಗೆ ಹೋದವು ಇವ್ವು ಎಲ್ಲೋರು.

ಅಲ್ಲಿ ಆತ್ಮೀಯತೆಂದ ಸುಖದುಃಖ ಕುಶಾಲು ಪಟ್ಟಾಂಗ ಆಗ್ಯೊಂಡಿದ್ದಾಂಗೆ ಕಾಪಿ ತಿಂಡಿಗೆ ಬನ್ನಿ ಹೇದು ಉಣ್ತ ಟೇಬಲು ಹತ್ರಂದೆ ದೆನಿಗೊಂಡತ್ತು ಆಚ ಮನೆ ಹೆಮ್ಮಕ್ಕ

ಕಾಪಿಗೆ ಎಂಸರ ಕೇಟ್ರೆ …. ಬ್ರೆಡ್ಡು , ಬೆಣ್ಣೆ, ಜಾಮು .

ಅವ್ವು , ಅಳಿಯ, ಮಗಳು ರಾಧೆ ಎಲ್ಲ ಬ್ರೆಡ್ಡಿಂಗೆ ಲೇಪ ಹಾಕಿ ಒಂದರ ಮೇಗೆ ಒಂದು ಮಡುಗಿ ಕಚ್ಚಿ ಬಲುಗಿದವು

ಸತ್ಯಣ್ಣಂಗೆ ಹೀಂಗೆಲ್ಲ ಉದ್ದಿಗೊಂತಿಲ್ಲೆ ಇದಾ. ಮಗಳು – “ಬೆಣ್ಣೆ ಜಾಮು ಉದ್ದಿ ಕೊಡೆಕೋ ಅಪ್ಪ?” ಹೇದು ಕೇಟತ್ತು.

ಸತ್ಯಣ್ಣ° ಹೇದ°- ಬೇಡಾ.. ಕೊದಿಲೋ ಮಸರು ಉಪ್ಪಿನಾಯಿ ಎಸರು ಏನಾರು ಇದ್ದರೆ ಇತ್ತೆ ಮಡುಗು. 😀

**

 1. ವಜ್ರಾಂಗಿ ಮದುವೆ ಸಟ್ಟುಮುಡಿ, ಬೆಂಗ್ಳೂರ ಅನುಪ್ಪತ್ಯ ಎಲ್ಲ ಕಳಿಶಿಕ್ಕಿ ಅಡಿಗೆ ಸತ್ಯಣ್ಣಂಗೆ ಊರ ಅನುಪ್ಪತ್ಯ ತೆರಕ್ಕು.

ಅಡಿಗೆ ಸತ್ಯಣ್ಣಂಗೆ ಕುಂಟಾಂಗಿಲ ಭಾವನತ್ರೆ ಅದೆಷ್ಟು ಪ್ರೀತಿ ಕೊಂಗಾಟವೋ… ವಜ್ರಾಂಗಿ ಭಾವನತ್ರೆವುದೇ ಅಷ್ಟೇ ಕೊಂಗಾಟ ಪ್ರೀತಿ.

ಅದೆಂಸಕೆ ಹಾಂಗೆ ಹೇಳ್ಸು ನವಗರಡಿಯ, ಅಗತ್ಯವೂ ಇಲ್ಲೆ.

ಕುಂಟಾಂಗಿಲ ಭಾವ° ಅಡಿಗೆ ಸತ್ಯಣ್ಣನ ಏನಾರು ಡೋಂಗಿ ಮಾಡಿರೆ ಅಡಿಗೆ ಸತ್ಯಣ್ಣಂಗೆ ಅದರ್ಲಿ ಎಂತ ಬೇಜಾರವೂ ಇಲ್ಲೆ, ವಜ್ರಾಂಗಿ ಭಾವ° ಅಡಿಗೆ ಸತ್ಯಣ್ಣನ ಏನಾರು ತಮಾಷೆ ಮಾಡಿರೆ ಅದರ್ಲಿಯೂ ಅಡಿಗೆ ಸತ್ಯಣ್ಣಂಗೆ ಬೇಜಾರು ಇಲ್ಲೆ.

ಹಾಂಗೆ ಹೇದರೆ… ಅಡಿಗೆ ಸತ್ಯಣ್ಣ° ಏನಾರು ಅವರ ಹೇದರೆ ಅವಕ್ಕೂ ಬೇಜಾರಿ ಇಲ್ಲೆ

ಎಟ್ಟೊಳ್ಳೆ ಭಾವನಾತ್ಮಕ ಭಾವತ್ವ ಅಲ್ಲದೋ!

ಅದೆಂಸೇ ಇರಳಿ, ಈ ವಜ್ರಾಂಗಿ ಭಾವಯ್ಯ ಮನ್ನೆ ಮದುವೆ ಕಳುದಿಕ್ಕೆ ಬೆಂಗುಳೂರು ಹೋಯಿಕ್ಕಿ ಒಂದರಿಯಾಣದ್ದೆಲ್ಲ ಮುಗುಶಿಕ್ಕಿ ಮತ್ತೆ ಒಂದು ವಾರ ಊ ಆ ತೆಂಕ್ಲಾಗಿ ಮಧುಚಂದ್ರಕ್ಕೆ ಹೋಗಿತ್ತವಡೋ

ಎಲ್ಲಿ ಹೋದರೆಂತ, ಎಟ್ಟು ದೂರ ಹೋದರೆಂತ.., ಈಗ ಮೊಬೈಲು ನೆಟ್ಟು ಎಲ್ಲ ಅನುಕೂಲಂಗ ಇದ್ದಕ್ಕಾರಣ ಗಳಿಗ್ಗೆಲಿ ಅತ್ತಿತ್ತೆ ಮಾತ್ನಾಡಿ ವಿಚಾರ್ಸಿಯೊಂಡಿಪ್ಪಲಾವ್ತನ್ನೆ.

ಹಾಂಗೆ ಓ ಮನ್ನೆ ಎಲ್ಯೋ ಒಂದಿಕ್ಕೆ ಅನುಪ್ಪತ್ಯಕ್ಕೆ ಹೋದಲ್ಲಿ ಕುಂಟಾಂಗಿಲ ಬಾವ° ಅಡಿಗೆ ಕೊಟ್ಟಗೆಲಿ ಕೂದೊಂಡು ಅಡಿಗೆ ಸತ್ಯಣ್ಣನೊಟ್ಟಿಂಗೆ ಮಾತಾಡ್ಯೊಂದಿದ್ದಾಂಗೆ ಮೊಬೈಲಿಲಿ ಒತ್ತಿ ಒತ್ತಿ ಬಿಡುವದು ಕಂಡತ್ತು.

ಆರತ್ರೆ ಭಾವ ನೀನು ಆಗಂದಲೇ ಒತ್ತಿಯೊಂಡಿದ್ದೆ? – ಹೇದು ಕೇಟ ಅಡಿಗೆ ಸತ್ಯಣ್ಣ.

ವಜ್ರಾಂಗಿ ಭಾವ° ಭಾವಾ.. – ಹೇದ° ಕುಂಟಾಂಗಿಲ ಭಾವ°

ಹೋ.. ಮದಿಮ್ಮಾಯನೋ… ಎಲ್ಲಿ ಬೆಂಗಳೂರ್ಲಿದ್ದನಡವೋ?, ಕೆಲಸಕ್ಕೆ ಹೋಪಲೆ ಸುರುಮಾಡಿನಡವೋ? – ಸತ್ಯಣ್ಣನೂ ಕೊಶಿಲಿ ವಿಚಾರ್ಸಿದ°

“ಇಲ್ಲೆಪ್ಪ, ಅಂವ ಮಧುಚಂದ್ರಕ್ಕೆ ತೆಂಕ್ಲಾಗ್ಯಂಗೆ ಹೋಯ್ದ° ಒಂದು ವಾರಕ್ಕೆ” – ಹೇದ° ಕುಂಟಾಂಗಿಲ ಭಾವ°

ಮಧುಚಂದ್ರಕ್ಕೆ ಹೋದವ° ಅಲ್ಲಿ ಮೊಬೈಲು ಗುರುಟ್ಯೊಂಡು ಕೂಯ್ದನೋ!!.. ಅವಂಗೆ ತಳಿಯದ್ದೆ ಇಲ್ಯೇ ಮನೆಲಿ ಕೂಬಲಾವ್ತಿತ್ತು!- ಹೇದಿಕ್ಕಿ ಅಡಿಗೆ ಸತ್ಯಣ್ಣ ಆಚಿಗೆ ಎಂಸೋ ತೋಡ್ಳೆ ಸೌಟು ತೆಗದ°. 😀

(ಉಮ್ಮ , ಅಡಿಗೆ ಸತ್ಯಣ್ಣ ಎಂತ ಗ್ರೇಶಿದನೋ ನವಗರಡಿಯ!)

**

         10. ವಜ್ರಾಂಗಿ ಮದುವೆ ಸಟ್ಟುಮುಡಿ ಕಳಿಶಿಕ್ಕಿ ಮನಗೆ ಬಂದ ಮರದಿನ ಉದಿಯಪ್ಪಗ ಅದಾ ಅಡಿಗೆ ಸತ್ಯಣ್ಣ° ಬೆಂಗುಳೂರಿಂಗೆ ಹೆರಟದು.

ಪೆರ್ಲಂದ ಹೆರಟು ಪುತ್ತೂರಿಂಗೆ ಬಂದು ಬೆಂಗುಳೂರು ಬಸ್ಸಿಂಗೆ ಕಾದೊಂಡಿಪ್ಪಗ ಬೈಲ ಕೋಟೂರಣ್ಣ° ಎದುರೆ ಸಿಕ್ಕಿದವು.

ಏವುತ್ರಾಣಾಂಗೆ ಕೋಟೂರಣ್ಣ° ಅಡಿಗೆ ಸತ್ಯಣ್ಣನ ಮೊಬೈಲಿಲಿ ಒಂದು ಕ್ಲಿಕ್ ಮಾಡಿಕ್ಕಿ ಕೇಟವು – “ಇಂದು ಮನೆಲಿ ಕಾಪಿಗೆಂತದು ಸತ್ಯಣ್ಣ?”

ಕೋಟೂರಣ್ಣ° ಇನ್ನು ಸತ್ಯಣ್ಣನ ಮನಗೆ ಹೋಗಿ ಕಾಪಿ ತಿಂಡಿ ಕುಡಿವಲೆ  ಕೇಟದು ಅಲ್ಲ ಹೇದು ಅಡಿಗೆ ಸತ್ಯಣ್ಣಂಗೂ ಗೊಂತಿದ್ದು. ಸತ್ಯಣ್ಣ° ಹೇದಾ° – “ಉದ್ದಿನ ದೋಸೆ,  ಸಾಂಬಾರು”.

ಕೋಟೂರಣ್ಣ ಅಷ್ಟಕ್ಕೇ ಬಿಡುಗೋ!, ಏನೂ ಅರಿಡಿಯದ್ದೋರ ಹಾಂಗೆ ಕೇಟವು – “ಉದ್ದಿನ ದೋಸೆಯ ಸಾಂಬಾರು ಮಾಡ್ಳಾವ್ತೋ??”

ಸತ್ಯಣ್ಣ°  ಹೇದಾ° – “ಉದ್ದಿನ ದೋಸೆಯ ಸಾಂಬಾರು ಮಾಡ್ಳಾವ್ತೋ ಇಲ್ಯೋ ಆರೂ ನೋಡಿದ್ದವಿಲ್ಲೆ, ಆದರೆ ಉದ್ದಿನ ದೋಸಗೆ ಸಾಂಬಾರು ಹಾಕ್ಯೊಂಬಲೆ ಆವ್ತು”. 😀

ಅಡಿಗೆ ಸತ್ಯಣ್ಣಂಗೆ ಬೆಂಗುಳೂರು ಬಸ್ಸು ಬಂತು. 😀

ಚೆನ್ನೈ ಬಾವ°

   

You may also like...

16 Responses

 1. ಇಂದಿರತ್ತೆ says:

  ವಿದೇಶಲ್ಲಿ ಬಾಕಿಯಾದವರೊಟ್ಟಿಂಗೆ ಈ ಅಡಿಗೆ ಸತ್ಯಣ್ಣನೂ ಸೇರಿದ್ದನೋ ಝಾನ್ಸಿದೆ . ವಜ್ರಾಂಗಿಭಾವನ ಮದುವೆ ಹೆಳೆಲಿ ಆದರೂ ಸತ್ಯಣ್ಣ ಬಂದ° ,ಸದ್ಯ, ಬೈಲಿನ ಪುಣ್ಯ !!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *