ಪಾರೂ ..

ಅಲ್ಲಾ .. ಈ ಪಾರು ಎಂತ ಮಾಡ್ತು ಹೇಳಿ ಒಳ ಕೂದೊಂಡು.. ಆಗಲೇ ಹೇಳಿದ್ದೆ. ಬೇಗ ಹೆರಡು.. ಬಸ್ಸು ಎನ್ನ ಸೋದರ ಮಾವಂದಲ್ಲಾ ಕಾವಲೆ ಹೇಳಿ.. ಇಷ್ಟೊತ್ತಾದರೂ ಹೆರ ಬಪ್ಪ ಅಂದಾಜಿಲ್ಲೆ. ಈ ಹೆಮ್ಮಕ್ಕಳೇ ಹೀಂಗೆ  ಆನೊಬ್ಬನೇ ಹೋಗಿ ಬತ್ತೆ ಹೇಳಿರೆ ಕೇಳ್ತಿಲ್ಲೆ.ಅಲ್ಲಾ.. ಇಬ್ರಿಬ್ರೂ ಮನೆಂದ ಹೆರಡುದು ಹೇಳಿರೆ ಎಷ್ಟೆಲ್ಲಾ ತಯಾರಿ ಆಯೆಕ್ಕು..   ಮನೆ ಬೀಗ ಹಾಕಿ ಹೋಪಲೇ ಧೈರ್ಯ ಇಲ್ಲೆ. ಇದಕ್ಕೊಂದು ಹೇಳಿರೆ ಅರ್ಥ ಆವ್ತಿಲ್ಲೆ.. ಅಲ್ಲಾ .. ಅಡಕ್ಕೆ ಪೂರಾ ಜಾಲಿಲಿಪ್ಪಗ ಖಾಲಿ ಮನೆಗೆ ಬೀಗ ಹಾಕಿ ಮಾಡ್ಲೆಂತ ಇದ್ದು..
ಅದಪ್ಪು ಆ  ದೊಡ್ಡ ಬೀಗ ಎಲ್ಲಿದ್ದು ? ಮೊನ್ನೆ ತಂದದು ಹೊಸತ್ತು.. ಇಲ್ಲಿ ಹೆರಾಣ ಜೆಂಗಲ್ಲಿ ಮಡುಗಿತ್ತಿದ್ದೆನ್ನೆ…. ಆನು ಮೊದಲಾಣ ಕ್ರಮದ ಬೀಗ ಅಕ್ಕು ಹೇಳಿರೆ ಇದು ಬಾರೀ ದೊಡ್ಡ ಜನದ ಹಾಂಗೇ ಹೊಸ ನಮೂನೆ ಬೀಗ ತೆಕ್ಕೊಂಡತ್ತು.ಅದರ ಕ್ರಯ ಗೊಂತಿದ್ದಾ ಎಷ್ಟು ಹೇಳಿ.. ಒಂದು ಬೀಗಕ್ಕೆ ಐನೂರೈವತ್ತು ರೂಪಾಯಿ ..  ಅಲ್ಲಾ ಅಪುರೂಪಕ್ಕೆ ಮನೆ ಬೀಗ ಹಾಕುಲೆ ಬೇಕಪ್ಪದು.. ಅಷ್ಟು ಕ್ರಯದ್ದು ಬೇಡ ಹೇಳಿರೆ ಕೇಳ. ಅಂಗಡಿಯ ಜನವುದೇ ಇದು ನಿಂಗಳ ಮರಿ ಮಕ್ಕಳ ಕಾಲದವರೆಗೆ ಹಾಳಾಗ.. ಒಳ್ಳೇ ಬೀಗ ಹೇಳಿ ತಲೆಗೆ ತಿರುಪಲೆ ಮೆತ್ತಿತ್ತು. ಅದರ ಎದುರು ಲಡಾಯಿ  ಮಾಡ್ಲೆ ಗೊಂತಿದ್ದಾ.. ತಂದಾತು ಮನೆಗೆ .. ಬೀಗ ಎದುರೇ ಇರೆಕ್ಕು .. ಬೇಕಪ್ಪಗ ಕೈಗೆ ಸಿಕ್ಕೆಕ್ಕು ಹೇಳಿ ಎದುರೇ ಮಡುಗಿರೆ ಇದು ಅದರ ತೆಗದು ಎಲ್ಲೋ ಜಾಗ್ರತೆಲಿ ಹುಗುದು ಹಾಕಿದ್ದು. ಅಲ್ಲಾ ಇದಕ್ಕೆ ಒಂದರಿ ಹೇಳಿರೆ ತಲೆಗೆ ಹೊಗ್ಗುದು ಹೇಳಿಯೇ ಇಲ್ಲೆ..  ಬೇಕದ್ದಕ್ಕೆ ಜಾಗ್ರತೆ ಮಾಡ  ಇದು..
ಇಲ್ಲದ್ದರೆ ಆರಾರು ತಲೆಲಿ ರಜ್ಜ ಸಾಮಾನು ಇಪ್ಪವು ಹೀಂಗೆ  ಮಾಡುಗೋ.. ನಿಂಗಳೇ ಹೇಳಿ.. ಕಳುದ ತಿಂಗಳು ಲಾಯ್ಕದ ಮರದ ಕಾಲಿನ ದೊಡ್ಡ ಕೊಡೆ ಸಿಕ್ಕಿತ್ತು ಹೇಳಿ ಮುನ್ನೂರು ರುಪೈ ಕೊಟ್ಟು ತಂದದು. ನಾಲ್ಕು ಮಳೆಗಾಲಕ್ಕೆ ಇನ್ನು ಕೊಡೆಯ ಚಿಂತೆ ಇಲ್ಲೆ ಹೇಳಿ  ಆನು ಸಮಾಧಾನಲ್ಲಿ ಇತ್ತಿದ್ದೆ. ಆ ದಿನ ಮಳೆಗೆ ಚೆಂಡಿ ಆಯ್ದು ಹೇಳಿ ಹೆರಾಣ ಜೆಗಿಲಿಲಿ ಬಿಡ್ಸಿ ಮಡುಗಿದ್ದಿದಾ ಇದು.. ಅಷ್ಟಪ್ಪಗ ಮನೆಗೆ ಆರೋ ನೀರು ಕೇಳುಲೆ ಬಂದವು ಹೇಳಿ ಒಳ ಹೋಗಿ ಹೆರ ಬಂತಡ.  ಬಪ್ಪಗ ಕೊಡೆಯೂ ಇಲ್ಲೆ .. ಅವುದೇ  ಕಾಣೆ. ಅಲ್ಲಾ.. ಇದಕ್ಕೆ ದೇವರು ಹುಟ್ಟುವಾಗಲೇ ಬುದ್ಧಿ ಹೇಳುದರ ತಲೆಲಿ ತುಂಬ್ಸುಲೆ ಬಿಟ್ಟೋದನೋ ಎಂತ.. ಇಲ್ಲದ್ರೆ ಇಷ್ಟೆಲ್ಲಾ ಪೇಪರ್ ಓದ್ತು, ಟಿವಿ  ನೋಡ್ತು. ಹೀಂಗಿಪ್ಪ  ಸುದ್ದಿ ದಿನಲ್ಲಿ ನಾಲ್ಕು ಹಾಕುತ್ತವು. ಅದರೆಲ್ಲಾ ಓದಿಯೂ ಇದು ಕಲ್ತದು ಇಷ್ಟೇ.. ಒಟ್ಟಿಲಿ ಎನ್ನ ಹಣೆ ಬರಹ ಹೇಳೆಕ್ಕು..
ಇಷ್ಟಾದರೇ ಸುಮ್ಮನಿಪ್ಪಲಕ್ಕು.. ಮೊನ್ನೆ ಇದು ಮಾಡಿದ್ದರ ಗ್ರೇಶಿರೆ ತಲೆ ತಿರುಗುತ್ತು. ಆನಲ್ಲದ್ದೆ ಬೇರೆ ಆರಾರು ಇದರ ಗೆಂಡ ಆಗಿದ್ದರೆ ಮನೆ ಬಿಟ್ಟು ಓಡ್ಸುತ್ತಿತ್ತವು. ಅಡಕ್ಕೆ ಮಂಡಿಗೆ ಹೋಗಿ ಬಂದದು.. ಕೈಕಾಲು ತೊಳದು ಒಳ ಹೊಗ್ಗಿದ್ದಷ್ಟೇ.. ಎನಗೆ ಆಸರಿಂಗೆ ಬೇಕಾ ಹೇಳಿ ಕೇಳುದು ಬಿಟ್ಟು ಇದು ಹೆರ ಜಾಲಿನ ಕರೇಂಗೆ ಹೋಗಿ ಬೊಬ್ಬೆ ಹೊಡೆತ್ತು.  “ಇದಾ ಕೂಸಾ, ಅಣ್ಣೇರ್ ಬಂದವು. ನಿನಗೆ ಪೈಸೆ ಬೇಕು ಹೇಳಿದ್ದಲ್ಲದಾ. ಈಗ ಕೇಳು .. ಇದ್ದವರತ್ರೆ. ಅಡಕ್ಕೆ ಕೊಟ್ಟಿಕ್ಕಿ ಬಂದದಷ್ಟೇನ್ನೆ..”
ಅಲ್ಲಾ.. ಆ ಕೂಸ ಅಂದು ಕೊಟ್ಟ ಸಾವಿರದೈನೂರು ರುಪಾಯ ಇಂದಿನವರೆಗೂ ತೀರ್ಸಿದ್ದಿಲ್ಲೆ. ಅದರ ಮೇಲೆ ಈಗ ಮತ್ತೆ ಸಾಲಕ್ಕೆ ಬೈಂದು. ಎನಗೆ ಸುರುವಿಂಗೆ  ಇದು ಹೇಳ್ತಿತ್ತರೆ ಅನು ಹೇಂಗಾರು ಮಾಡಿ ತಪ್ಪುಸ್ತಿತ್ತೆ.. ಇದಷ್ಟು ಹೇಳಿದ ಮೇಲೆ ಅದರೆದುರು ಪೈಸೆ ಇಲ್ಲೆ ಹೇಳಿ ಹೇಳುಲೆ ಎಡಿತ್ತಾ..  ಇದರ ಹರ್ಕು ಬಾಗೆ ಸಿಕ್ಕಿ  ಮತ್ತೆ ಸಾವಿರ ರುಪಾಯಿಗೆ ನಾಮ ಹಾಕ್ಸಿಕೊಂಡೆ. ಇಂದಿನವರೆಗೂ ಪೈಸೆ ಬೈಂದಿಲ್ಲೆ. ಇದರತ್ತರೇ ಒಂದರಿ ಕೋಪಲ್ಲಿ ಹೇಳಿತ್ತಿದ್ದೆ. ‘ಆ ಕೂಸಂಗೆ ಶಿಪಾರಸ್ಸು ಮಾಡಿ ಪೈಸೆ ಕೊಡ್ಸಿದೆನ್ನೆ.. ನೀನೇ ಈಗ ವಾಪಾಸ್ಸು ಕೊಡ್ಲೆ ಹೇಳು..’ ಹೇಳಿ
ಅದಕ್ಕೆ ಇದೆಂತ ಹೇಳಿತ್ತು ಗೊಂತಿದ್ದಾ ‘ಎಂತರ ಇದು ಹುಟ್ಟಿದ ಮೇಲೆ ಪೈಸೆ ಕಾಣದ್ದವರ ಹಾಂಗೆ ಮಾಡುದು ನಿಂಗಾ..  ಅಲ್ಲಾ ಅದೆಂತ ಊರು ಬಿಟ್ಟು ಓಡ್ತಾ? ಈ ಊರಿಲೆನ್ನೆ ಇಪ್ಪದು. ಎಂತದೋ ಕಷ್ಟಕ್ಕೆ ಹೇಳಿ ಕೇಳಿತ್ತಪ್ಪ.ಎಷ್ಟಾರೂ ಇಲ್ಲಿಗೇ ಕೆಲಸಕ್ಕೆ ಬಪ್ಪ ಜನ ಅಲ್ಲದೋ.. ಇಂದಲ್ಲ ನಾಳೆ ಕೊಡುಗು.  ಹಾಂಗೆಲ್ಲ ಕೇಳುಲೆಂತ ಎನಗೆ ಮರ್ಯಾದೆ ಇಲ್ಲೆಯಾ..’
ಅಲ್ಲಾ.. ಇದಕ್ಕೆ ಅಲ್ಲದಾ ಹೇಳ್ವದು ದೊಡ್ಡೋರು.. ‘ಕೊಟ್ಟವ ಕೋಡಂಗಿ ಹೇಳಿ..’ ಆ ಕೂಸ ಕೂಡಾ ಅಷ್ಟೇ ಹೇಳಿ.. ಮನೆಗೆ ಎಂತಾರು ಕೆಲಸಕ್ಕೆ ಬಂದರೆ ಸಾಕು.. ಎನ್ನ ಎದುರು ಕಂಡರೂ ‘ಅಕ್ಕೇರ್ ಇಲ್ಲೆಯಾ.. ಇಂದೆಂತ ಕೆಲಸ ಮಾಡೆಕ್ಕಪ್ಪದು’ ಹೇಳಿಯೇ ಕೇಳುಗು. ಅಲ್ಲಾ.. ಆನೊಬ್ಬ ಮನೆಯ ಯಜಮಾನ ಎದುರೇ ಇದ್ದರೂ ಕೆಲಸ ಹೇಳಿ ಮಾಡ್ಸುಲೆ ಅದುವೇ ಆಯೆಕ್ಕು ಹೇಳ್ತನ್ನೆ ಇದು.
ಆತೂ.. ಆನು ಹಠಲ್ಲಿ ಎಂತಾರು ಕೆಲಸ ಕಂಡದರ ಹೇಳಿರೆ ಇದು ಕೂಡ್ಲೇ ಒಳಂದ ಬಂದು ‘ಇದಾ ಆ ಕೂಸನತ್ತರೆ ಬೈಲಿಂದ  ಬಾಳೆಗೊನೆ ಕಡುದು ತಪ್ಪಲೆ ಹೇಳಿ’ ಹೇಳಿ ಅದಕ್ಕೆ ಕೇಳುವ ಹಾಂಗೆ ಹೇಳುಗು.
ಅದುದೇ ಹಾಂಗೇ.. ‘ಆನು ಅದನ್ನೇ ಮಾಡೆಕ್ಕು ಹೇಳಿತ್ತಿದ್ದೆ.. ಈಗಲೇ ಹೋವ್ತೆ ಹೇಳಿ ಕತ್ತಿ ಕೂಟುಲೆ ಸುರು ಮಾಡುಗು.’ ಮತ್ತೆ ನಡುಗೆ ಅನೊಬ್ಬ ಅಬ್ಬೇಪಾರಿಯ ಹಾಂಗೆ ಬಾಕಿ.
ಹೋಯ್.. ಅದೆಲ್ಲ ಅಪ್ಪು .. ಆನೀಗ ಹೆರಟದು  ಪೇಟೆಗೆ ..ಇದಾ ನಿಂಗಳೇ ನೋಡಿ.. ಈ ವೇಷ್ಟಿಯ  ಆರಾದರೂ ತಲೆ ಶುದ್ಧ ಇಪ್ಪವ ಪೇಟೆಗೆ ಸುತ್ತಿಕೊಂಡು ಹೋಕ್ಕಾ.. ಲಾಯ್ಕದ ವೇಷ್ಟಿ  ಇಲ್ಲದ್ದೆ ಅಲ್ಲಾ.. ಎಲ್ಲಾ ಹೆರ ಹಾಕಿರೆ ನಿಂಗ ಎಲ್ಲದಕ್ಕೂ ಕಲೆ ಮೆತ್ತಿ ಹಾಳು ಮಾಡ್ತಿ .. ಜಂಬ್ರದ ಮನೆಗೆ ಹೋಪಗ ಸುತ್ತುಲೆ ಒಂದೆರಡಾರು ಒಳ ಇರ್ಲಿ ಹೇಳ್ತು. ಅಲ್ಲಾ..  ಎನ್ನ ಕಾಣದ್ದ ಯಾವ ಹೊಸಬ್ಬ ಇರ್ತ ಜಂಬ್ರಲ್ಲಿ.. ವರ್ಷ ಇಡೀ ಈ ನೀಲಿ ಹಾಕದ್ದ ಮಸ್ಕಟೆ ವೇಷ್ಟಿ, ಅಂಗಿ ಹಾಯ್ಕೊಂಡು ತಿರ್ಗಿ ಆ ದಿನ ಒಂದು ನೆಲಲ್ಲಿ ದೂಳು ಮೆತ್ತಿಕೊಂಡು ಕೂದು ಉಂಬಲೆ ಒಳ್ಳೇ ವೇಷ್ಟಿ  ಸುತ್ತಿ ಎಂತಪ್ಪಲಿದ್ದು ಎನಗೆ.. ಹೇಳಿರೆ ಇದರದ್ದು ಬಾಣದ ಹಾಂಗೆ ಉತ್ತರ ಬತ್ತು.. ” ನಿಂಗ ರಜ್ಜ ಲಾಯ್ಕಲ್ಲಿ ಡ್ರೆಸ್ಸು ಮಾಡಿಕೊಂಡು ಬರದ್ದರೆ ಎನಗೆ ಹೋಪಲೆ ಎಡಿಯ. ನಿಂಗಳೊಟ್ಟಿಂಗೆ ಆನು ಬರೆಕ್ಕಾರೆ ಲಾಯ್ಕದ್ದನ್ನೇ ಸುತ್ತೆಕ್ಕು”
ಆನಲ್ಲಿಗೆ ಇದರ ಬಿಟ್ಟಿಕ್ಕಿ ಹೋದನಾ? ಅಲ್ಲಿ ನಿಂದವರದ್ದು ಕೂದವರದ್ದು ಎಲ್ಲಾ ಒಂದೇ ಪ್ರಶ್ನೆ.. ‘ಪಾರಕ್ಕ ಬೈಂದಿಲ್ಲೆಯಾ ಗೋವಿಂದಣ್ಣ.. ಅದೆಂತ ಬಾರದ್ದದು ..’ ಹೇಳಿ.. ಬಂಙಲ್ಲಿ ಹೋದ ಎನ್ನ ಕೇಳುವವ ಆರೂ ಇಲ್ಲೆ.. ಬರದ್ದ ಇದರ ವಿಚಾರ್ಸಿಯೇ ಇಡೀ ದಿನ ಕೊಲ್ಲುತ್ತವು.ಕರಕ್ಕೊಂಡು ಹೋದನಾ..ಇದು ಒಳ ನುಗ್ಗುವಾಗಲೇ ರಾಜೋಪಚಾರ..
ಮೊನ್ನೆ ಹೀಂಗೇ ಆದ್ದಿದ. ಆ ಮೇಗಾಣ ಮನೆ ತಿಮ್ಮಣ್ಣನಲ್ಲಿ ಸತ್ಯನಾರಾಯಣ ಪೂಜೆ.. ಹೇಳಿಕೆಗೆ ಬಪ್ಪಗಳೇ ಇದಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಎರಡೆರಡು ಸರ್ತಿ ಹೇಳಿಕ್ಕಿ, ‘ನಿಂಗಳೂ ಬನ್ನಿ ಬಾವ’ ಹೇಳಿ ಎನಗೊಂದು ಕಾಟಾಚಾರದ ಹೇಳಿಕೆ ಹೇಳಿ ಹೋಗಿತ್ತಿದ್ದ. ಹತ್ತರಾಣ ಮನೆಯವನ್ನೇ .. ಹೋಗದ್ದರೆ ಸುಮ್ಮನೆ ನಿಷ್ಟುರ ಅಪ್ಪದು. ಮತ್ತೆ ಸಿಕ್ಕಿದಷ್ಟು ಸರ್ತಿಯೂ ಎಲ್ಲರೆದುರು ಇವಂಗೊಂದು ಇಷ್ಟತ್ತರೆ ಎನ್ನ ಮನೆಗೆ ಬಪ್ಪಲಾಯ್ಡಿಲ್ಲೆ ಹೇಳಿ ಹಂಗ್ಸುದು .. ಇದೆಲ್ಲ ಎಂತಕೆ ಹೇಳಿ ಆನುದೇ ಹೆರಟೆ. ಅಲ್ಲಿ ಎಂಗಳ ಕಾಂಬಗಳೇ ಅವನ ಹೆಂಡತಿ ಓಡಿ ಬಂತು. ಎನ್ನತರೆ ‘ಏನಣ್ಣಾ’ ಹೇಳಿ ಕೇಳಿದಾಂಗೆ ಮಾಡಿ ಇದರ ಕೈ ಹಿಡ್ಕೊಂಡು  ಪಾರಕ್ಕಾ ನಿಂಗಳನ್ನೇ ಕಾದುಕೊಂಡಿದ್ದದು ಆನು.. ಬೇರೆ ಆರುದೇ ಸತ್ಯನಾರಾಯನ ಪೂಜೆಯ ಸಪಾದಭಕ್ಷ ಕಾಸಿರೂ ನಿಂಗ ಕಾಸಿದ ಹಾಂಗೆ ಆವ್ತಿಲ್ಲೆ. ಬಾಳೆ ಹಣ್ಣು , ಶೆಕ್ಕರೆ, ತುಪ್ಪ, ಗೋಧಿ ಹೊಡಿ ಎಲ್ಲಾ ಅಳದು ಮಡುಗಿದ್ದೆ. ನಿಂಗ ಸುರು ಮಾಡಿರಾತು. ಭಟ್ಟ ಮಾವಂದೇ ಹೇಳಿದವು ಪಾರಕ್ಕ ಬರೆಕ್ಕನ್ನೆ ಪೂಜೆ ಸುರು ಆಯೆಕ್ಕಾರೆ ಹೇಳಿ’
ಅಲ್ಲಾ ಈ ಹೆಮ್ಮೊಕ್ಕಗೆ ಇಷ್ಟು ವರ್ಷ ಆಗಿ ಒಂದು ಪ್ರಸಾದ ಕಾಸುಲೆ ಬಾರದಾ.. ? ಸುಮ್ಮ ಸುಮ್ಮನೇ ಇದರ ಕಂಡ ಕೂಡ್ಲೇ ಹೊಗಳಿ ಅಟ್ಟಕ್ಕೆ ಏರ್ಸಿ ಕೆಲಸ ಮಾಡ್ಸುದು. ಇದಕ್ಕೆಲ್ಲಿ ಅರ್ಥ ಆವ್ತು ಅದೆಲ್ಲ..ಅವು ಹೇಳೆಕ್ಕಾರೆ ಮೊದಲೇ ಅಡುಗೆ ಕೋಣೆಗೆ ನುಗ್ಗಿ ಆವ್ತು.
ಇದಾದರೆ ಬಿಡಿ..ಹೆರಾಣವರ ಕತೆ ಆತು .. ಆದರೆ ಮನೆ ಒಳಾಣವುದೇ ಹೀಂಗೇ ಹೇಳಿ  ..  ಮನೆಗೆ ಎನ್ನ ತಂಗೆಕ್ಕ ಎಲ್ಲಾ ಬಂದರೆ ಸಾಕು ಒಬ್ಬನೇ ಅಣ್ಣ ಹೇಳಿ ಎನ್ನತ್ತರೆ ರಜ್ಜ ಕೂದು ಪ್ರೀತಿಲಿ ಮಾತಾಡವು. ಇದರತ್ತರೇ ಏನು ಪಟ್ಟಾಂಗ.. ಹಗಲಿಡೀ ಸಾಕಾಲ್ಲೆ ಹೇಳಿ ಇರುಳುದೇ ಎಲ್ಲರೂ ಚಾವಡಿಲಿ ಹಸೆ ಹಾಕಿ ಒಟ್ಟಿಂಗೆ ಸಾಲಾಗಿ ಮನಿಕ್ಕೊಂಡು ಹರಟೆ ಕೊಚ್ಚುತ್ತವು. ಅದು ಮಾತಾಡುದಾದರೂ ಎಂತರ.. ಅತ್ತಿಗೆ ನೀನು ಮಾಡಿದ ಮೇಲಾರ ಲಾಯ್ಕಾಗಿತ್ತು. ಆನು ಎಷ್ಟು ಸಾಮಾನು ಹಾಕಿರೂ ಆ ರುಚಿ , ಪರಿಮಳ ಬಾರ.. ನಿನ್ನ ಕೈಲಿ ಎಂತದೋ ಇದ್ದಾ.. ಅಲ್ಲಾ.. ಇದರ ಕೈಲೆಂತ ಇಪ್ಪದು ಅಬ್ಬಿ ಒಲೆಂದ ಹಿಡುದ ಮಸಿ ಇಕ್ಕಷ್ಟೇ.. ಇದಾದರೂ ಸಾಯಲಿ.. ಹೆಮ್ಮಕ್ಕಳ ಅಡುಗೆ ಮನೆ ಕಥೆ ಆತು.. ಆದರೆ ಮೊನ್ನೆ ಇದು ಹರಟೆ ಮಾಡಿತ್ತು ಹೇಳಿ ತಂಗ್ಯೆಕ್ಕೊಗೆಲ್ಲಾ ಅಂಗಡಿಗೆ ಹೋಗಿ ಸೀರೆ ತಂದತ್ತು.  ಆ ಅಂಗಡಿ  ಕುಡ್ವ ಕೂಡಾ ಹಾಂಗೇ.. ಆನು ಯಾವುದಾದರೂ ಸೀರೆ ತೋರ್ಸಿ ಹೇಳಿರೆ ಓರೆ ಮೋರೆಲಿ ನೆಗೆ ಮಾಡಿ ‘ ಸೀರೆ ವಿಚಾರ ಎಲ್ಲ ಅಕ್ಕಂಗೆ ಬಿಟ್ಟಿಕ್ಕಿ ಅಣ್ಣಾ.. ನಿಂಗೊಗೆಂತಕೆ ಅದು.. ಸುತ್ತುದು ಅವ್ವೆ ಅನ್ನೆ’ ಹೇಳಿ ಎನಗೇ ಬುದ್ಧಿ ಹೇಳುಲೆ ಬತ್ತು.ಅದಕ್ಕು ಗೊಂತಿದ್ದು ಇದು ವ್ಯಾಪಾರ ಮಾಡಿರೇ ಲಾಭ ಇಪ್ಪದು ಹೇಳೀ.. ಕ್ರಯ ಎಲ್ಲಾ ನೋಡ್ಲಿಲ್ಲೆ ಇದಾ.. ಬೇಕಾದ ಬಣ್ಣ ಕಣ್ಣಿಂಗೆ ಬಿದ್ದರಾತು .. ಇದಕ್ಕು ಹೇಳ್ಯೊಂಡು ತೆಗದತ್ತು. ಮತ್ತೆಂತ ಮಾಡುದು..ಆನು ಮಾತಾಡದ್ದೇ ಹೇಳಿದಷ್ಟು ಪೈಸೆ ಕೊಟ್ಟಿಕ್ಕಿ ಮನೆಗೆ ಬಂದೆ.
 ಮನೆಗೆ ತಂದದರ ತಂಗ್ಯೆಕ್ಕೊಗೆ ದೇವರೊಳ ದಿನಿಗೇಳಿ ಎಲೆ ಅಡಕ್ಕೆ ಕಾಯಿ  ಮಡುಗಿ ಕೊಟ್ಟತ್ತು ನೋಡಿ.. ಅವೆಲ್ಲಾ ಕಣ್ಣಿಲಿ ನೀರು ತುಂಬ್ಸಿಕೊಂಡು ಅತ್ತಿಗೆಗೆ ನಮಸ್ಕಾರ ಮಾಡಿದ್ದೇ ಮಾಡಿದ್ದು. ಇದು ಎನ್ನ ತೋರ್ಸಿ ಅಣ್ಣಂಗೂ ಹೊಡೆಯಾಡಿಕ್ಕಿ ಹೇಳಿದ ಮೇಲೆ ಮೆಲ್ಲಂಗೆ ಬೇಕೋ ಬೇಡದೋ ಹೇಳಿ ಬಗ್ಗಿದಾಂಗೆ ಸೇಲೆ ಮಾಡಿ ಹೋದವು.
ಮಕ್ಕಳ ಕಥೆ ಅಂತೂ ಕೇಳುದೇ ಬೇಡ.. ಅಪ್ಪಾ.. ಹೇಳಿ ಒಂದು ದಿನ ಪ್ರೀತಿಲಿ ದಿನಿಗೇಳ.. ಅಮ್ಮಂಗೆ ದಿನಕ್ಕೆ ಆರು ಸರ್ತಿ ಫೋನ್ ಮಾಡಿ ವಿಚಾರ್ಸುಲಿದ್ದು..ಅವರ ಮದುವೆ, ಪುಳ್ಯಕ್ಕಳ ಉಪನಯನ ಎಲ್ಲದರ್ಲೂ ಆನು ಬರೀ ತಟ್ಟೀರಾಯನಾಂಗೆ ಹೋದ್ದು.. ಸುದರಿಕೆ, ಗೌಜಿ ಎಲ್ಲಾ ಇದರದ್ದೇ..
ಅದಪ್ಪು ಇಂದೆಂತಕೆ ಇಲ್ಲಿ ಇಷ್ಟು ಜನ ಬಂದದು.. ಎಂತ ಇದ್ದಪ್ಪ ಮನೇಲಿ.. ಅಲ್ಲಾ.. ಒಂದೊಂದರಿ ಇದು ಎನಗೇ ಹೇಳದ್ದೆ ಭಟ್ರ ಬಪ್ಪಲೆ ಹೇಳಿ ಮೂರು ಕಾಯಿ  ಗೆಣ ಹೋಮ, ಶಿವಪೂಜೆ ಎಲ್ಲಾ ಮಾಡ್ಸುಲಿದ್ದು. ಆನು ಜೋರಿಲಿ ಕೇಳಿರೆ ಇದು ಕಳುದ  ತಿಂಗಳೇ ನಿಂಗಳತ್ರೆ ಹೇಳಿದ್ದೆ ಹೇಳಿಕ್ಕಿ  ಎನ್ನ ಬಾಯಿ  ಮುಚ್ಸುತ್ತು.. ಎಲ್ಲರೂ ಅತ್ತಿಂದಿತ್ತ ಇತ್ತಂದತ್ತ ಹೋಪದಲ್ಲದ್ದೇ ಎಂತ ಮಂತ್ರ ಕೇಳ್ತಿಲ್ಲೆನ್ನೆ. ಅಲ್ಲ ಈ ಪಾರು ಎಲ್ಲಿಗೆ ಹೋತು.. ಆನುದೇ ಬತ್ತೆ ನಿಂಗಳೊಟ್ಟಿಂಗೆ ಹೇಳಿದ ಜನ ಇಷ್ಟು ಜನರ ಮನೆಗೆ ಬರ್ಸಿದ್ದೆಂತಕೆ .. ಇನ್ನು ಹೋಪದಾದರೂ ಹೇಂಗೆ..
“ಅಪ್ಪೋ ಕುಮಾರ .. ಅಜ್ಜಿಯ ದಿನಿಗೇಳು ಮಗಾ.. ಅದು ಎನ್ನೊಟ್ಟಿಂಗೆ ಪೇಟೆಗೆ ಬತ್ತೆ ಹೇಳಿ ಆಗಲೇ ಸೀರೆ ಸುತ್ತುಲೆ ಹೋದು.. ಇನ್ನು ಕಾಣ್ತಿಲ್ಲೆ..ಬಪ್ಪಲೆ ಹೇಳದರ..”
 ” ಇನ್ನು ಅಜ್ಜಿ ಎಲ್ಲಿದ್ದಜ್ಜಾ.. ಇಂದು ಅಜ್ಜಿಯ ಬೊಜ್ಜ ಅಲ್ಲದಾ..”
ಆರೋ ದೊಡ್ಡಕ್ಕೆ ಇನ್ನೊಬ್ಬನತ್ರೆ ಹೇಳುದು ಕೆಮಿಗೆ ಬಿತ್ತು.. ಪಾರಕ್ಕ ಹೋದ ಮೇಲೆ ಗೋವಿಂದಣ್ಣಂಗೆ  ಹೀಂಗೆ ಭಾರೀ ಪ್ರೀತಿ ಇತ್ತು ಹೆಂಡತ್ತಿ ಹೇಳಿ..  ಈಗ ಪಾಪ   ಪೂರಾ ಅರುಳು ಮರುಳು ಆಯ್ದು..

ಅನಿತಾ ನರೇಶ್, ಮಂಚಿ

   

You may also like...

22 Responses

  1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಕತೆ ಲಘು ಹಾಸ್ಯಲ್ಲಿ ತೊಡಗಿ ಗಾಂಭೀರ್ಯಕ್ಕೆ ತಿರುಗಿತ್ತು…ಲಾಯ್ಕ ಆಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *