ಅನುಭವ ಕಥನ

July 17, 2017 ರ 12:36 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಡೆಕ್ಕಿಲ ಸರಸ್ವತಿ ಅತ್ತೆ ಕಳ್ಸಿದ ಈ ಅನುಭವ ಕಥನವ ಓದಿ, ನಿಂಗಳ ಅಭಿಪ್ರಾಯ ತಿಳುಶಿ, ಒಪ್ಪ ಕೊಟ್ಟು ಪ್ರೋತ್ಸಾಹ ಕೊಡಿ

ಅನುಭವ ಕಥನಬಡೆಕ್ಕಿಲ ಸರಸ್ವತಿ

ನಮ್ಮ ಈ  ಭರತ ಖಂಡಲ್ಲಿ ಅರುವತ್ತನಾಲ್ಕು ವಿದ್ಯೆ ಕಲ್ತೊರು ಇತ್ತಿದ್ದವೊಡೊ. ಆ ವಿಷಯಲ್ಲಿ ಕಥಾಸರಿತ್ಸಾಗರಲ್ಲಿ, ನಮ್ಮ ಹೆರಿಯೊರು ಹೇಳಿಗೊಂಡಿದ್ದ ಕಥೆಗಳಲ್ಲಿ ಕೂಡಾ ಇದ್ದು. ನಿಂಗೊಳೂ ಕೇಳಿಪ್ಪಿ, ಓದಿಪ್ಪಿ. ವಿದೇಶೀ ಆಕ್ರಮಣ ಬಂದ ಮೇಲೆ ಅವೆಲ್ಲಾ ಒಂದೊಂದಾಗಿ ನಾಶ ಆದವು ಹೇಳಿ ಕಾಣ್ತು. ಅಂಥಾ ವಿದ್ಯೆಗಳಲ್ಲಿ ವಶೀಕರಣವೂ ಒಂದು. ಕಳುದ ಶತಮಾನದ ವರೆಗೆ ಅಲ್ಲಲಿ ಒಬ್ಬ°, ಇಬ್ಬ° ಅಂಜನ ಹಾಜುದು, ಕಣ್‍ಕಟ್ಟು, ಇತ್ಯಾದಿ ಮಾಡುವೋರು ಇತ್ತಿದ್ದವು. ಪಾಶ್ಚಾತ್ಯರ ’ಮೆಸ್ಮೆರಿಸಂ’ ಕೂಡಾ ಇದೇ ಜಾತಿಗೆ ಸೇರಿದ ವಿದ್ಯೆ. ಇತ್ತಿತ್ಲಾಗಿ ಅದು ಕೂಡಾ ಎಲ್ಲಿಯೂ ಕಂಡ ಹಾಂಗೆ ಇಲ್ಲೆ. ’ಮೆಜಿಶಿಯನ್’ ಗೊ ಕೂಡಾ ಟಿ.ವಿ ಬಂದ ಮೇಲೆ ಬೆಲೆ ಕಳಕ್ಕೊಂಡಿದವು ಹೇಳಿ ಕಾಣ್ತು. ಆದರೆ ಆನು ಈಗ ಹೇಳುವ ಸತ್ಯಕತೆಯ ಓದಿದರೆ ನಿಂಗೊ ’ಹೀಂಗೂ ಇದ್ದಾ’ ಹೇಳಿ ಮೂಗಿನ ಮೇಲೆ ಬೆರಳು ಮಡ್ಕೊಂಬಿ.

ಸುಮಾರು 1918-19 ರ ಕಾಲಘಟ್ಟ. ಇದರ ಪ್ರತ್ಯಕ್ಷದರ್ಶಿಯಾಗಿ ಎನ್ನ ಅಪ್ಪ°. ಪುತ್ತೂರಿನ ಪೇಟೆಲಿ ಹವಿಕ ಒಂದು ಹೋಟ್ಳು. ಊಟ, ತಿಂಡಿ, ಕಾಪಿ, ಮತ್ತೆ ಆರಾರೂ ಒಬ್ಬಿಬ್ರಿಂಗೆ ತತ್ಕಾಲಕ್ಕೆ ಇಪ್ಪಲೆ, ಮನಿಕ್ಕೊಂಬಲೆ ಜಾಗೆ; ಅದು ಹೋಟ್ಳಿನ ಉಪ್ಪರಿಗೆಲಿ; ಇಷ್ಟು ಇಪ್ಪ ಒಂದು ಹಳೇ ಕಟ್ಟೋಣ. ಉಪ್ಪರಿಗೆಯ ಕೋಣೆಗೆ ಹೋಯೇಕ್ಕಾರೆ ಒಂದು ಸಪೂರದ ಜೆಗುಲಿ ಇದ್ದು. ಅದುವೇ ಪುತ್ತೂರು ಬೋರ್ಡ್ ಶಾಲೆಲಿ ಕಲಿವ ಮಕ್ಕಳ ಹೊತ್ತೋಪಗಾಣ ಪಟ್ಟಾಂಗದ ಚಾವಡಿ. ಅದರ ಕಪ್ಪು ಮಸಿ ಹಿಡುದ ಗೋಡೆ ಅಲ್ಲಲ್ಲಿ ಸೆರೆಬಿಟ್ಟುಗೊಂಡು ಮಣ್ಣ ಹೊಡಿ ಹೆಂಟಗೊ ಈಗ ಬೀಳುದೋ ಮತ್ತೆ ಬೀಳುದೋ ಹೇಳಿ ಸಮಯ ಕಾವ ಹಾಂಗೆ ಇದ್ದು. ಜೆಗುಲಿಂದತ್ಲಾಗಿ ಇಪ್ಪ ಕೋಣೆಲಿ ’ವಿಟ್ಲದ ಬಾಬುಮಾಷ್ಟ್ರ° ಎಂಬೊನು ಬಾಡಿಗೆಗೆ ಇದ್ದ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಒಳಸುತ್ತಿನ ಪ್ರಾಕಾರಲ್ಲಿ ದೇವಿ, ದೇವತೆಕ್ಕಳ ಚಿತ್ರ ಬಿಡುಸುವ ಕೆಲಸ ಅವಂಗೆ. ಮನೆ ವಿಟ್ಳಲ್ಲಿ. ಅವಗವಗ ಆ ಕೋಣೆಗೆ ಬಂದು ಹೋಗಿ ಮಾಡಿಗೊಂಡಿರ್ತ. (ಇವ° ಮಾಡಿದ ಚಿತ್ರಂಗಳೇ ದೇವಸ್ಥಾನಲ್ಲಿ ಈಗಳೂ ಇದ್ದು, ಅಲ್ಲಲ್ಲಿ ಇತ್ತು. ಇದೀಗ ದೇವಸ್ಥಾನದ ಪುನರ್ನಿರ್ಮಾಣ ಮಾಡಿದ್ದವೊಡೊ. ಈ ಬಾಬು ಮಾಷ್ಟ್ರನ ಆನು ನೋಡಿದ್ದೆ-ಅವ° ಮುದ್ಕ ಆದ ಮೇಲೆ. ಎಂಗಳ ಮನೆಯ, ವಿಟ್ಳದ ಸುತ್ತಮುತ್ತ ಇಪ್ಪ ಮನೆಗಳಲ್ಲಿ ನಡವ ಮದುವೆ, ಉಪ್ನಾಯನಕ್ಕೆ ಚೆಂದದ ಝಗ ಝಗ ಬಂಗಾರಿನ ಹೊಳೆವ ಮಂಟಪ ಕಟ್ಟುವೋನು ಅವನೇ. ಅವನ ಹತ್ತರೆ ಗೋಪುರ ಇಪ್ಪ ಅಂತರ್ಮಾಡಿನ ಮಂಟಪವೂ ಇರ್ತು. ಒಳ್ಳೆ ಸಜ್ಜನ)

****

ಶಾಲೆ ಮಕ್ಕೊ ಹೊತ್ತೋಪಗ ಅಲ್ಲಿ ಸೇರುವಾಗ, ಇವನೂದೆ ಒಂದೊಂದಾರಿ ಪಟ್ಟಾಂಗಕ್ಕೆ ಬತ್ತ°. ಮಕ್ಕೊ ಹೇಳಿದರೆ ಬರೀ ಸಣ್ಣ ಮಕ್ಕೊ  ಅಲ್ಲ. ಹದಿನಾರು ಹದಿನೆಂಟು ವರ್ಷದೋರು. ಏಕೆ ಹೇಳಿದರೆ ಆ ಕಾಲಲ್ಲಿ ಸುತ್ತಮುತ್ತಾಣ ಗ್ರಾಮಂಗಳಲ್ಲಿ ಶಾಲೆಗಳೇ ಇಲ್ಲೆ. ಇದ್ದರು ಕೂಡಾ ನಾಲ್ಕನೇ ಕ್ಲಾಸಿನ ವರೆಗಾಣ ಶಾಲೆ, ಒಬ್ಬನೇ ಮಾಷ್ಟ್ರ°. ದೂರದ ಪುತ್ತೂರಿಂಗೆ ನಡಕ್ಕೊಂಡು ಬರೆಕ್ಕಾರೆ ರಜಾ ದೊಡ್ಡಾದ ಮಕ್ಕಳೇ ಆಯೆಕ್ಕಷ್ಟೆ. ಶಾಲೆಗೆ ಕಳ್ಸುವ ಅಪ್ಪಂದ್ರೂ ಕಡಮ್ಮೆ, ಶಾಲಗೆ ಹೋಯೆಕ್ಕು, ಕಲಿಯೆಕ್ಕು, ಹೇಳಿ ಹಟಮಾಡಿ ಬಪ್ಪೊರು, ಈ ಎಲ್ಲಾ ಕಾರಣಂದ ಐದನೇ ಕ್ಲಾಸಿಂಗೆ ಬಪ್ಪಾಗಳೇ ಹದಿನೈದೋ ಹದಿನಾರೋ ಆಗಿರ್ತು.

ಈ ಬಾಬು ಮಾಷ್ಟ್ರಂಗೆ ’ವಶೀಕರಣ ವಿದ್ಯೆ ಗೊಂತಿದ್ದು’ ಹೀಂಗೊಂದು ಶುದ್ದಿ ಇದ್ದು. ಶಾಲೆ ಮಕ್ಕೊ ಅವನ ಹತ್ತರೆ “ನಿನ್ನ ವಿದ್ಯೆ ಒಂದರಿ ತೋರ್ಸೆಕ್ಕು” ಹೇಳಿ ಅವನ ಒತ್ತಾಯಿಸುತ್ತಾ ಇಪ್ಪದು. ಅವ° ಇಂದು ನಾಳೆ ಹೇಳಿಗೊಂಡು ತಪ್ಸಿಗೊಂಬದು. ಒಂದು ದಿನ ಮಕ್ಕೊ ಎಲ್ಲಾ ಸೇರಿಗೊಂಡು “ಇಂದು ತೋರ್ಸಲೇ ಬೇಕು” ಹೇಳಿ ಪಟ್ಟಾಗಿ ಕೂಯಿದವು. ಈ ಪೈಕಿ ಎನ್ನ ಅಪ್ಪನೂ ಅವನ ಸ್ನೇಹಿತನೂ ನೆಂಟನೂ ಆಗಿಪ್ಪ ನಾರಾಯಣನೂ ಇದ್ದವು. (ಈ ವಿಷಯ ಎಷ್ಟೋ ವರ್ಷ ಕಳುದರೂ ಮರೆಯದ್ದೆ ಇತ್ತಿದ್ದ°. ಹಾಂಗಾಗಿ ಎನ್ನ ಹತ್ತರೆ ಒಂದು ದಿನ ಸತ್ಯ ಕಥೆಯ ಹೇಳಿದ್ದ°)

ಅಪ್ಪ° ಃ- ಆ ದಿನ ನಾರಾಯಣ, ಶಂಭು, ಆನು, ಮೂರು ಜೆನವುದೇ ನಿತ್ಯಾಣ ಹಾಂಗೆ ಪಟ್ಟಾಂಗ ಗೋಷ್ಠಿಗೆ ಬಂದು ಕೂಯಿದೆಯೊ°. ಕೂಪಲೆ ಅಲ್ಲಿ ಎಂತದೂ ಇರ್ತಿಲ್ಲೆ. ನೆಲಲ್ಲಿಯೇ ಕೂಪದು. ಎಂಗಳೆಲ್ಲೋರ ಒತ್ತಾಯ ತಡೆಯದ್ದೆ, ಮಾಷ್ಟ್ರ ಒಪ್ಪಿಗೊಂಡ°. ಕಣ್ಣು ಮುಚ್ಚಿ ಪದ್ಮಾಸನ ಹಾಯ್ಕೊಂಡು, ತೊಡಿ ಮಾತ್ರ ಹನ್ಸಿಗೊಂಡು ಯಾವುದೋ ಮಂತ್ರವ ಹೇಳ್ತಾ ಇಪ್ಪ ಹಾಂಗೆ ಕಂಡತ್ತು. ಅವನ ಗುರುವನ್ನೋ ಅಥವಾ ಇಷ್ಟದೇವತೆಯನ್ನೋ ಧ್ಯಾನಿಸಿಗೊಂಡಿದ್ದ ಹೇಳಿ ಗ್ರೇಶಿದೆಯೊ°. ರಜ ಹೊತ್ತಿಲಿ ಕಣ್ಣೊಡದು ಎಂಗಳೆಲ್ಲೋರ ನೆಟ್ಟ ದೃಷ್ಟಿಲಿ ಪರೀಕ್ಷೆ ಮಾಡುವ ಹಾಂಗೆ ನೋಡಿದ°. ಆ ಮೇಲೆ ಅವ° ಕೂದ ಹಿಂದಾಣ ಗೋಡೆಂದ, (ಕೈ ಹಿಂದೆ ಹಾಕಿ) ಒಂದು ಮಣ್ಣಗಟ್ಟಿಯ ಎಳಕ್ಸಿ ತೆಗದ°. (ಅವ° ಎಂತ ಮಾಡ್ತಾ ಇದ್ದ ಹೇಳಿ ಆನು ಕಣ್ಣು ತೆಗೆಯದ್ದೆ ನೋಡಿಗೊಂಡೇ ಇತ್ತಿದ್ದೆ) “ ಏ ನಾರಾಯಣ, ಇದ ಕಲ್ಲು ಶೆಕ್ಕರೆ, ಲಾಯಿಕಿದ್ದು, ತಿಂದು ನೋಡು” ಹೇಳಿ ಅವಂಗೆ ಕೊಟ್ಟ°. ನಾರಾಯಣ ಅದರ ಕರಕರನೆ ಅಗುದು ತಿಂದ°. “ಹೇಂಗಿದ್ದು ಹೇಳು” ಮಾಷ್ಟ್ರ° ಕೇಳಿದ°. ನಾರಾಯಣ ’ಲಾಯಿಕಿದ್ದು’ ಹೇಳಿದ°! ಅಲ್ಲಿ ಕೂದುಗೊಂಡಿದ್ದ ಬಾಕಿ ಒಳುದ ಮಕ್ಕೊಗೆ ’ತಮಗೂ ಕೊಟ್ಟಿದ್ದರಾವುತ್ತಿತ್ತು’ ಹೇಳಿ ಗ್ರೇಶುತ್ತಾ ಇಪ್ಪ ಹಾಂಗೆ ಕಂಡತ್ತೆನಗೆ. ಆದರೆ ಅವು ಆರೂ ಬಾಯಿಬಿಟ್ಟು ಕೇಳಿ ತಿಂಬ ಮಕ್ಕೊ ಅಲ್ಲ. ಎನಗೆ ಎಷ್ಟು ಆಶ್ಚರ್ಯ ಆತು ಹೇಳಿದರೆ ಒಬ್ಬ ಮನುಷ್ಯನ ಇಷ್ಟರ ಮಟ್ಟಿಂಗೆ ವಶ ಮಾಡುಲೆಡಿತ್ತೋ? ಹೇಳಿ. ಇನ್ನೊಂದು ಆಶ್ಚರ್ಯದ ಸಂಗತಿ, ಎನ್ನ ಕಣ್ಣಿಂಗೇಕೆ ಅವನ ಮಾಯೆ ಮುಸುಕಿದ್ದಿಲ್ಲೆ? ಹಾಂಗೆಲ್ಯಾರು ಆವುತ್ತಿದ್ದರೆ ಬಾಬು ಮಾಷ್ಟ್ರನ ’ಸತ್ಯ’ ಎನಗೆ ಗೊಂತೇ ಆವುತ್ತಿತ್ತಿಲ್ಲೆ. (ಇದರಲ್ಲಿ ಧೃಢ ಮನಸ್ಸಿನೊರ ಮೇಲೆ ವಶೀಕರಣಾ ನಡೆತ್ತಿಲ್ಲೆ ಹೇಳಿಯೂ ಇದ್ದು)

***

ಹದಿನಾರು ವರ್ಷದ ರಾಮ ಅಲ್ಲಿ ಕೂಯಿದ°. ಮಾಷ್ಟ್ರ° ಅವನನ್ನೇ ಕಣ್ಣು ರೆಪ್ಪೆ ಮುಚ್ಚದ್ದೇ ಒಂದೇ ಹಾಂಗೆ ನೋಡಿದ°. ಆ ಮೇಲೆ “ ಏ ರಾಮ! ಅಲ್ಲಿ ಕೆಳ ಹೋಟ್ಳಿಂಗೆ ಎಷ್ಟು ಜೆನ ಬಂದು ಕೂದುಗೊಂಡಿದ್ದವು? –ಹೇಳು ನೋಡೊ°”. ರಾಮ ಕೂಡ್ಲೆ ಹೇಳಿದ “ಎಂಟು ಜೆನ”“ಆರಾರು? ಅವರ ಹೆಸರು ಹೇಳು!”. ರಾಮ ಅವರೆಲ್ಲೊರ ಒಂದೊಂದಾಗಿ ಹೆಸರು ಹೇಳಿದ°. ರಾಮಂದಾಚಿಕ್ಕೆ ನರಸಿಂಹ ಕೂದುಗೊಂಡಿತ್ತಿದ್ದ. “ಹೋಗಿ ನೋಡಿಗೊಂಡು ಬಾ ನರಸಿಂಹ!, ರಾಮ ಹೇಳಿದ್ದು ಸರಿಯೋ ತಪ್ಪೋ-ಹೇಳು”. ನರಸಿಂಹ ಕೆಳ ಇಳುದು ನೋಡಿಕ್ಕಿ ಬಂದು “ರಾಮ ಹೇಳಿದ್ದೆಲ್ಲಾ ಸತ್ಯವೇ, ಸರಿಯಾಗಿ ಹೇಳಿದ್ದ°-ಈಗ ಬಾಬು ಮಾಷ್ಟ್ರ° ರಾಮಂಗೆ ಇನ್ನೊಂದು ಪ್ರಶ್ನೆ ಹಾಕಿದ°. “ಇಲ್ಲಿಂದ ಮೂರು ಮೈಲಿ ದೂರಲ್ಲಿ ಪಂಜಿಗುಡ್ಡೆಲಿ ಎಂತ ನಡೆತ್ತಾ ಇದ್ದು? ಹೇಳು ನೋಡೊ°!. ರಾಮ:- ಅಲ್ಲಿ ಶಂಭಣ್ಣನ ಅಬ್ಬೆ ಅವನ ತಮ್ಮ ಶ್ರೀಧರನ ತೊಟ್ಳಿಲ್ಲಿ ಮನಿಶಿ ತೂಗುತ್ತಾ ಇದ್ದ°, ಮಾಣಿಗೆ ಜ್ವರ ಬತ್ತಾ ಇದ್ದು. ಏನು ಮಾಡಿದರೂ ಕೂಗುದು ನಿಲ್ಸುತ್ತಾ° ಇಲ್ಲೆ. ಅದಕ್ಕೆ ಆಚಮನೆ ವೆಂಕಟ್ರಮಣನ ಸೈಕಲ್ಲಿ ಜಂಗ್ಲಿ ಗುಮಾಸ್ತನಲ್ಲಿಂದ ಮದ್ದು ತಪ್ಪಲೆ, ಶಂಭಣ್ಣನನ್ನೂ ಬೇಗ ಕರಕ್ಕೊಂಡು ಬಪ್ಪಲೆ ಕಳ್ಸುತ್ತಾ ಇದ್ದ°. (ಈ ಜಂಗ್ಲಿ ಗುಮಾಸ್ತ° ಹೇಳಿದರೆ ಅರಣ್ಯ ಇಲಾಖೆಲಿ ಕೆಲಸಲ್ಲಿದ್ದು ರಿಟಾಯರ್ ಆದ ಮೇಲೆ ನಾಡವೈದ್ಯ ಆಗಿ ಪುತ್ತೂರಿಲಿದ್ದ°. ಮುಂದೆ ಅವನ ಮಗ° ಸುಂದರಾಯ ಆರ್.ಎಮ್.ಪಿ ಮಾಡಿ ಪುತ್ತೂರಿಲಿಯೇ ಪ್ರಸಿದ್ಧ ಡಾಕ್ಟ್ರ ಆಯಿದ°. ಅವನ ತಮ್ಮ ಶ್ರೀಧರಾಯ° ಡೆಂಟಿಸ್ಟ್ ಆದ°). ಒಂದು ಹತ್ತು ನಿಮಿಷ ಕಳಿವಾಗ ವೆಂಕಟ್ರಮಣ ಉಪ್ಪರಿಗೆ ಮೆಟ್ಳು ಹತ್ತಿ ಬಂದೇ ಬಿಟ್ಟ°! “ಶಂಭಣ್ಣ, ನೀನು ಬೇಗ ಹೆರಡೆಕ್ಕೀಗ, ನಿನ್ನ ತಮ್ಮಂಗೆ ಜೋರು ಜ್ವರ, ಮದ್ದು ತೆಕ್ಕೊಂಡು ಹೋಪಲಿದ್ದು”! ಹೇಳಿದ°. ಎಂಗೊಗೆಲ್ಲ ದಂಗಾಗಿ ಹೋತು!. ಈ ಬಾಬು ಮಾಷ್ಟ್ರನ ಶಕ್ತಿ ಎಂತದು?, ಎಂತ ಕಥೆ?

ಮತ್ತೆ ಪುನಃ ರಾಮನ ಹತ್ರೆ ಇನ್ನೊಂದು ಪ್ರಶ್ನೆ ಕೇಳಿದ°- ಅಲ್ಲಿ ಕೆಳ ಅಡಿಗೆ ಶಾಲೆಲಿ ಎಂತ ತಯಾರಾವ್ತಾ ಇದ್ದು ಹೇಳುವೆಯಾ?“ಹಲಸಿನ ಕಾಯಿ ತಾಳ್ಳು, ಬಾಳೆಕಾಯಿ ಕೊದಿಲು, ಮತ್ತೆ ಮಜ್ಜಿಗೆ ನೀರಿಂಗೆ ಶುಂಠಿ ಗುದ್ದಿ ಹಾಕ್ತಾ ಇದ್ದವು”. ಬಾಬು ಮಾಷ್ಟ್ರ ನರಸಿಂಹನ ಹತ್ತರೆ ’ಇನ್ನೊಂದರಿ ಹೋಗಿ ನೋಡಿಗೊಂಡು ಬಾ’ ಹೇಳಿ ಕಳ್ಸಿದ°. ಅವ° ಕೆಳ ಇಳುದು ಅಡಿಗೆ ಶಾಲಗೆ ಹೋಗಿ ನೋಡಿಗೊಂಡು ಬಂದು “ರಾಮ ಹೇಳಿದ ಹಾಂಗೆ ಎಲ್ಲ ತಯಾರಾಯಿದು” ಹೇಳಿದ°.

***

ಆನು ಸಣ್ಣಾದಿಪ್ಪಾಗ ’ಮೆಸ್ಮರಿಸಂ’ ಮಾಡುದರ ಕಣ್ಣಾರೆ ನೋಡಿದ್ದೆ. 1937-38 ರ ಸಮಯಲ್ಲಿ, ಆನು ಎರಡನೆಯೊ ಮೂರನೆಯೋ ಕ್ಲಾಸಿಲ್ಲಿ ಇತ್ತಿದ್ದೆ. ಎಲ್ಲ ಮಕ್ಕಳೂ ಒಂದೊಂದು ಮುಕ್ಕಾಲು ತೆಕ್ಕೊಂಡು ಬರೆಕ್ಕು ಹೇಳಿ ಟೀಚರ್ ಹೇಳಿತ್ತು. ಮಧ್ಯಾಹ್ನ ಮೇಲೆ 4 ಗಂಟೆಗೆ ಪ್ರಾರ್ಥನಾ ಮಂದಿರಲ್ಲಿ ಕಾರ್ಯಕ್ರಮ ಸುರುವಾತು. ಅಲ್ಲಿ ಮುಖ್ಯವಾಗಿ ಎನಗೆ ನೆನಪಿಪ್ಪ  ’ಇಂದ್ರಜಾಲ’ ಹೇಳಿದರೆ ಒಂದು 12-14 ವರ್ಷದ ಹುಡುಗಿಯ ಎತ್ತರದ ಸ್ಟೂಲಿನ ಮೇಲೆ ನಿಲ್ಸುದು; ಅದರ ಶರೀರ ಚೂರೂ ಹಂದುತ್ತಿಲ್ಲೆ ಅವಗ. ಆ ಮೇಲೆ ಅಡ್ಡಕ್ಕೆ ಮನಿಶುದು, ಹೀಂಗೆ ಅದೊಂದು ಆಶ್ಚರ್ಯ ಆಪ್ಪಂಥ ಒಂದು ಆಟ. ಎನಗೆ ಆ ಹುಡುಗಿಯ “ಅಯ್ಯೋ ಪಾಪವೇ” ಹೇಳಿ ಕಂಡಿದು ಆವಗ. ಏಕೆ ಹೇಳಿದರೆ ಅದರ ಮೋರೆಲಿ ಜೀವಕಳೆಯೇ ಇಲ್ಲೆ. ರೆಜ ನೆಗೆಯಾಗಲೀ ಕಣ್ಣಿಲ್ಲಿ ಹೊಳಪಾಗಲೀ ಇಲ್ಲೆ. ವಶೀಕರಣ ಮಾಡಿ ಮಾಡಿ ಆಗಿರೆಕ್ಕು, ಅದು ತನ್ನ ಅಸ್ಥಿತ್ವವನ್ನೇ ಕಳಕ್ಕೊಂಡ ಹಾಂಗೆ ’ಪ್ರೇತಕಳೆ” ಹೇಳಿ ಹೇಳ್ತವಲ್ಲದಾ?-ಹಾಂಗಿತ್ತು. ಅದರ ಮೋರೆ ಈಗಳೂ ಕಣ್ಣಿಂಗೆ ಕಟ್ಟುತ್ತು. ಇದು ಸ್ವಲಾಭಕ್ಕೋಸ್ಕರ ಮಾಡುವ ವಿದ್ಯೆ ಎಂಬುದರಲ್ಲಿ ರಜವೂ ಸಂಶಯ ಇಲ್ಲೆ.

ಆದರೆ, ಅಪ್ಪ° ನೋಡಿದ, ಹೇಳಿದ, ವಿಷಯ ಮಾಂತ್ರ ಅದ್ಭುತ ಹೇಳಿ ಕಾಣ್ತೆನಗೆ. ಕೂದಲ್ಲಿಂದಲೇ ಒಬ್ಬ ಮನುಷ್ಯನ ಪಂಚಜ್ಞಾನೇಂದ್ರಿಯಂಗಳ ಮೂರು ಮೈಲು ದೂರಕ್ಕೆ ಕಳ್ಸಿ ಅಲ್ಲಿಯಾಣ ವಿದ್ಯಮಾನಂಗಳ  ಸಶರೀರವಾಗಿ ಪ್ರತ್ಯಕ್ಷ  ನೋಡಿದೊನ ಹಾಂಗೆ ಹೇಳೆಕ್ಕಾರೆ ಇದು ಎಂಥ ಯೋಗ ಸಿಧ್ಧಿ ಆದಿಕ್ಕು. ಇಂಥೊರ ಆನು ಈ ವರೆಗೂ ನೋಡಿದ್ದಿಲ್ಲೆ. ನಿಂಗೊ ಆರಾರು ನೋಡಿದ್ದೆ ಆದರೆ ಹೇಳಿ. (ಈ ಬಾಬು ಮಾಷ್ಟ್ರ, ನಾಥ ಸಂಪ್ರದಾಯದೊನು. ನಮ್ಮಲ್ಲಿ ಅವರ ಬೋವಿ ಪುರುಷರು ಹೇಳ್ತವು- ಇವು ಮಚ್ಚೇಂದ್ರನಾಥನ ಶಿಷ್ಯ ಪರಂಪರೆಯೊರು. ಗೋರಖನಾಥ ಹುಟ್ಟಿದ ಕಥೆಯನ್ನೂ ನಿಂಗೊ ಕೇಳಿಪ್ಪಿ. ಅವರ ಜೋಗಿ ಅರಸುಗೊ ಹನ್ನೆರಡು ವರ್ಷಕ್ಕೊಂದರಿ ಮಠ ಬದಲಾವಣೆ ಮಾಡ್ಳಿದ್ದು. ಒಂದು ಜೋಗಿ ಮಠ ವಿಟ್ಳಲ್ಲಿ, ಇನ್ನೊಂದು ಮಠ ಕೊಡೆಯಾಲದ ಕದ್ರಿ ದೇವಸ್ಥಾನದ ಬೆನ್ನಾರೆ ಇಪ್ಪ ಕದ್ರಿಗುಡ್ಡೆಲಿ. ಕದ್ರಿ ಆಯನದ ರಥೋತ್ಸವದ ದಿನ, ಈ ಜೋಗಿ ಅರಸು ಕೆಂಪು, ಕೇಸರಿ ಪಟ್ಟೆ ವಸ್ತ್ರದ ಮುಂಡಾಸು, ದುಪ್ಪಟ್ಟಾ, ಶೇರ್ವಾನಿ ದುಸ್ತಿಲಿ ಕುದುರೆಲಿ ಕೂದುಗೊಂಡು ಶಿವಾಜಿ ಮಹಾರಾಜನ ಹಾಂಗೆ ಕದ್ರಿ ಗುಡ್ಡೆಂದ ರಭಸಲ್ಲಿ ಇಳ್ಕೊಂಡು ಬಪ್ಪಾಗ ಗರ್ನಾಲು, ವಾದ್ಯಘೋಷ ನಡೆತ್ತು. ಜೋಗಿ ಅರಸು ದೇವಸ್ಥಾನಕ್ಕೆ ಬಾರದ್ದೆ ರಥ ಎಳವ ಕ್ರಮ ಇಲ್ಲೆ. (ಇದೀಗ ವಿಷಯ ಎಲ್ಲೆಲ್ಲೋ ಹೋವ್ತಾ ಇದ್ದು, ಕ್ಷಮಿಸಿ). ನಿಂಗೊ ಮಾಯಾ ಮಚ್ಛೇಂದ್ರ ಸಿನೆಮಾ ನೋಡಿದ್ದೀರಾ? ಅದರ ನೋಡುಲೆ ಜೆನ ಮರುಳು ಕಟ್ಟಿಗೊಂಡು ಹೋವ್ತಾ ಇತ್ತಿದ್ದವು. ಆನುದೇ ಹೋಯಿದೆ ಬಿಡಿ! ಮುಖ್ಯ ವಿಷಯಕ್ಕೆ ಬತ್ತಾ ಇದ್ದೆ…..

ಈಗ ಈ ವಶೀಕರಣ ವಿದ್ಯೆಂದ ನಾವು ಎಂತ ತಿಳ್ಕೊಂಬಲಕ್ಕು? ಇದರ ಒಳ ಹೆರ ನೋಡುವಾಗ ಆತ್ಮ ಅಥವಾ ಮನಸ್ಸಿನ ಶಕ್ತಿಯ ಇತಿಮಿತಿಗಳ ನವಗೆ ಊಹೆ ಮಾಡುಲೂ ಸಾಧ್ಯ ಇಲ್ಲೆ ಹೇಳಿ ಅರ್ಥ ಆವುತ್ತು. ಒಬ್ಬ ಸಾಮಾನ್ಯ ವ್ಯಕ್ತಿಯ ಜ್ಞಾನೇಂದ್ರಿಯಂಗಳ ಶರೀರಂದ ಬೇರ್ಪಡಿಸಿ-ಏಕೆ ಹೇಳಿದರೆ ಶರೀರ ಇಲ್ಲಿಯೇ ಇದ್ದು- ತನಗೆ ಬೇಕಾದಲ್ಲಿಂಗೆ ಸ್ಥಳಾಂತರ ಮಾಡಿ, ಅಲ್ಯಾಣ ವಿದ್ಯಮಾನಂಗಳ ಚಾಚೂ ತಪ್ಪದ್ದೆ ಹೇಳೆಕ್ಕಾರೆ-ಮಾಷ್ಟ್ರ° , ರಾಮನ ಮೇಲೆ ಬರೀ ’ದೃಷ್ಟಿಪಾತ” ಮಾಂತ್ರವೇ ಮಾಡಿದ್ದ°- ಹೀಂಗಿರೆಕ್ಕಾರೆ,ಮಾಷ್ಟ್ರನ ಸಾಧನೆ ಎಷ್ಟು ಪ್ರಬಲ ಶಕ್ತಿಯ ಸಂಪಾದನೆ! ಆದರೆ ಒಂದು ನವಗೆ ಕಾಂಬ ವಿಷಯ ಹೇಳಿದರೆ ಇವ° ಬಹುಶಃ ಯೋಗಸಾಧನೆ ಮಾಡಿ ಕುಂಡಲಿನೀ ಶಕ್ತಿಯ ಎಚ್ಚರಿಸಿ ಆನಾಹತಕ್ಕೆ ಮುಟ್ಟುವ ಮದಲೇ ದೈವೀ ಶಕ್ತಿಗಳ ಆಮಿಷಕ್ಕೊಳಗಾದ ನತದೃಷ್ಟನೋ ಹೇಳಿ ಕಾಣ್ತು. ಅವಂಗೆ ಆ ಬಗ್ಗೆ ಪಶ್ಚಾತ್ತಾಪವೂ ಇದ್ದಿರೆಕ್ಕು. ಹಾಂಗಾಗಿ ಅವ° ತನ್ನ ವಿದ್ಯೆಯ ತೋರ್ಸುದರಲ್ಲಿ ಉತ್ಸಾಹ ತೋರ್ಸುತ್ತಾ ಇಲ್ಲೆ ಹೇಳಿ ಎನ್ನ ಮನಸ್ಸಿಂಗೆ ಕಾಣ್ತು.

ಇನ್ನೊಂದು ವಿಚಾರ ಎಂತ ಹೇಳಿದರೆ-ವೇದ ಉಪನಿಷತ್ತುಗಳ ಸಾರವೇ ಆದ –“ನಾನೆಂಬುದು ನಾನಲ್ಲ, ಈ ಮನುಷ್ಯ ಜನ್ಮವು ನಾನಲ್ಲ” ಶರೀರ ಆತ್ಮನ ವಾಸಸ್ಥಾನ ಅಷ್ಟೆ. ಈ ತತ್ವವ ವಶೀಕರಣಾ ವಿದ್ಯೆಲಿ ಬಹಿರಂಗ ಪಡಿಸಿದ್ದ° ಹೇಳಿ ಎನಗೆ ಕಾಣ್ತು. ಇದೇ ಕಳುದ ಇಪ್ಪತ್ತನೇ ಶತಮಾನಲ್ಲಿ ಕೇವಲ ನೂರು ವರ್ಷ ಹಿಂದೆ ನಡೆದ ಈ ಸತ್ಯಘಟನೆಯ ವಿಷಯ ಓದಿದರೆ, ಎಂಥ ನಿರೀಶ್ವರವಾದಿ, ಭೌತಿಕವಾದಿಗೊ ಕೂಡ ತಮ್ಮ ಸಿದ್ಧಾಂತ ಸರಿಯೋ ತಪ್ಪೋ ಹೇಳಿ ಚಿಂತನೆ ಮಾಡುಗಲ್ಲದಾ? ಹಾಂಗೇನಾರೂ ಆದರೆ ಅದೊಂದು ದೊಡ್ಡ ಉಪಲಬ್ಧ ಅಕ್ಕಲ್ಲದಾ?

~~~***~~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ
ಮೈಸೂರು
9019274678

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶಿವರಾಮ, ವಿಷಾದಾಂತ ಘಟನೆ ಗಳ ಬರವ ಮೈಸೂರಿನ ಅತ್ತೆ ಬಹುಷಃ ನಿನಗಾಗಿ ವಿಷಾದಾಂತವಲ್ಲದ ನೈಜ ಘಟನೆಯ ಬರದ್ದವು. ಓದಿ ಸಂತೋಷ ಪಡು ಮಾರಾಯ. ನೈಜಘಟನೆಯ ವಿವರ ಅದ್ಭುತವಾಗಿ ದ್ದು ಅತ್ತೆ.

  [Reply]

  VA:F [1.9.22_1171]
  Rating: 0 (from 0 votes)
 2. pattaje shivarama bhat

  ಹೀಂಗಿಪ್ಪ ನೈಜ ಘಟನೆಗಳ ಲೇಖನಂಗೊ ಇನ್ನಷ್ಟು ಬರಲಿ ಅತ್ತೆ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹೀಂಗಿದ್ದ ಶಕ್ತಿ, ಅದ್ಭುತ!!. ಒಂದು ಅನುಪತ್ಯಲ್ಲಿ, ಒಬ್ಬಂಗೆ ಸಾಕು ಹೇಳಿರೂ ಕೇಳದ್ದೆ; ಹೋಳಿಗೆ ಬೆಲಕ್ಕಿದವಾಡ. ಆತು ಬಳುಸಿ ಹೇಳಿದವ ತಿಂದನಾಡ ಬಳುಸಿದಾಂಗೆ!!. ಮತ್ತೆ ಅವರ ಕೆರಿಶಿಲಿ, ಮಾಡಿದ ಸ್ಟೋಕ್, ಮುಗುದತ್ತಾಡ.ತಪ್ಪಾತೂಳಿ ಒಪ್ಪಿಗೊಂಡವಾಡ ಬಳುಸಿದೊವು. ಅಕೇರಿಗೆ ಅವ ತಿಂದಿಕ್ಕಿ ಎದ್ದ ಮತ್ತೆ ನೋಡಿರೆ; ಎಂಜಲು ಹೊಂಡಲ್ಲಿ ಅವ ತಿಂದ ಹೋಳಿಗೆ ರಾಶಿ ಇದ್ದತ್ತಾಡ!!!. ಕೂಲಂಕುಶ ನೋಡಿರೆ ಅವಂಗೆ ಹನುಮನ ಭಜನೆ ಇದ್ದಾಡ!!.ಹೀಂಗಿಪ್ಪದೆಲ್ಲ ಹನುಮನ ಒಲಿಸಿಗೊಂಡವಕ್ಕೆ ಎಡಿಗಷ್ಟೆ ಹೇಳಿ, ಎನ್ನ ಮಾವನೋರು ಹೇಳುದು ಕೇಳಿದ್ದೆ..

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಗೋಪಾಲ

  ನಂಬಲೆಡಿಯದ್ದ ಸತ್ಯಂಗಳ ಚೆಂದಕೆ ವಿವರುಸಿದ್ದವು ಅತ್ತೆ. ಲಾಯಕಿತ್ತು. ಈಗ ಆಗಿದ್ರೆ, “ಹೀಗೂ ಉಂಟೆ” ಹೇಳಿ ಟಿವಿಲಿ ಬತ್ತಿತು ಈ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಲಾಯಕ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 6. ಶಿವರಾಮ, ಅಲ್ಲಿ ರಜ ಅಕ್ಶರ ತಪ್ಪಾಗಿ ಎಡವಟ್ಟು ಆಯಿದು. ದ್ ಸೆಂಡರ್ ಡೀಪ್ಲೀ ರಿಗರೆಟ್ಸ್ ದ್ ಎರರ್. ಯು ಮೆ ಬಿ ರೆಸ್ಟ್ ಎಸ್ಯೂರ್ಡ್ ಇಟ್ ವಾಸ್ ಓನ್ಲೀ ಎನ್ ಎರರ್. ಕೀಪ್ ಇಟ್ ಅಪ್ ಶಿವರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಶರ್ಮಪ್ಪಚ್ಚಿಪಟಿಕಲ್ಲಪ್ಪಚ್ಚಿದೊಡ್ಡಭಾವಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿವೇಣಿಯಕ್ಕ°ಬೊಳುಂಬು ಮಾವ°ದೊಡ್ಮನೆ ಭಾವಪುಣಚ ಡಾಕ್ಟ್ರುಗೋಪಾಲಣ್ಣಜಯಗೌರಿ ಅಕ್ಕ°ಬಂಡಾಡಿ ಅಜ್ಜಿಪುತ್ತೂರುಬಾವಅಕ್ಷರ°ಚುಬ್ಬಣ್ಣಚೂರಿಬೈಲು ದೀಪಕ್ಕವಿಜಯತ್ತೆಮಾಷ್ಟ್ರುಮಾವ°ಡಾಗುಟ್ರಕ್ಕ°ಚೆನ್ನಬೆಟ್ಟಣ್ಣಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ