ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-1)

ವರ್ಮುಡಿ ಶೀಲತ್ತೆ ಬರದ ನೀಳ್ಗತೆ ನಮ್ಮ ಬೈಲಿಲಿ – ಹುಂಡು ಹುಂಡಾಗಿ ಬತ್ತು. ಎಲ್ಲೋರುದೇ ಓದಿ, ಶುದ್ದಿಗೊಂದೊಪ್ಪ ಕೊಟ್ಟು ಪ್ರೋತ್ಸಾಹಿಸುವೊ.

ಮೋಹನ, ಹರಿಣಿ ದಂಪತಿಗೆ `ಯೋ…,ದೇವರೇ…, ಜೀವನ ಎಂತಕಪ್ಪಾ ಇಷ್ಟು ಉದ್ದ…?’ ಹೇಳಿ ಕಂಡೊಂಡಿತ್ತಿದ್ದದು  `…ಛೆ, ಎಷ್ಟು ಬೇಗ ಸಮಯ ಕಳುದೋತು..’ ಹೇಳಿ ಕಾಂಬಲೆ ಸುರುವಾದ್ದದು ಸುರಭಿ ಹುಟ್ಟಿದ ಮೇಗೆ.  ಮದುವೆಯಾಗಿ ಹತ್ತಹದಿನೈದು ವರ್ಷಂಗೊ ಆದ್ರೂ ಮಕ್ಕೊ ಆಗದ್ದಿಪ್ಪಾಗ ಆರಿಂಗಾರೂ ತಲೆಬೆಶಿ ಅಪ್ಪದೇ ಹೇಳುವೋಂ. ನಮ್ಮ ತಲೆಬೆಶಿ ಯಾವಾಗಲೂ ಹೆಚ್ಚಾವುತ್ತದು ಊರವು ಅದಕ್ಕೆ ಒಗ್ಗರಣೆ ಹಾಕುವಾಗಳೇ ಅಲ್ಲದೋ ಹೇಳಿ? ಇವರ ವಿಷಯಲ್ಲಿಯೂ ಅದೇ ಆದ್ದದು, “…ಉಮ್ಮಾ.., ಮದುವೆಯಾಗಿ ಇಷ್ಟನ್ನಾರವೂ ಬಸರಿ ಆಯಿದಿಲ್ಲೆಪ್ಪ…, ಎಂತಾರು ದೋಷ ಇದ್ದಾಯಿಕ್ಕು…, ಅದರ ಸೋದರಮಾವಂಗೆ ಒಬ್ಬಂಗೆ ಮಕ್ಕಳೇ ಇಲ್ಲೆ…, ಅದೇ ಸಾಜ ಇದಕ್ಕೂ ಬಂತಾಯಿಕ್ಕು.., ಅಲ್ಲ ಇನ್ನು ನಾಗದೋಷವೋ ಮಣ್ಣೊ ಇದ್ದೋ ಎಂತ್ಸೋ…? ಆರಿಂಗೆ ಗೊಂತು..? ಹುಗಿತ್ತಷ್ಟು ಆಸ್ತಿ ಬದ್ಕು ಇದ್ದು.., ನಂದನ ಬದ್ಕು ನರಿ ನಾಯಿ ತಿಂದು ಹೋತಾಡ… ಹೇಳ್ತಾಂಗೆ ಅಪ್ಪಲಿದ್ದು…” ಹೀಂಗಿರ್ತ ಮಾತುಗಳೆಲ್ಲಾ ಕೇಳಿ ಕೇಳಿ ಪಾಪದ ಹರಿಣಿ ಮೋಹನಂಗೆ ದೇಶಾಂತರ ಓಡಿ ಹೋಪೋ ಹೇಳಿಯೋ ಆತ್ಮಹತ್ಯೆ ಮಾಡಿಯೊಂಬೋ ಹೇಳಿಯೋ ಕಂಡಿದ್ದಿದ್ರೆ ಅದು ಸಹಜವೇ.

ಆದರೆ ಅವರ ಹಿರಿಯವು ಮಾಡಿದ ಪುಣ್ಯದ ಫಲವೋ ಅಥವಾ ಇವರ ಬೇಡಿಕೆ ದೇವರಿಂಗೆ ಎತ್ತಿಯೋ ಗೊಂತಿಲ್ಲೆ, ಅಂತೂ ಹರಿಣಿ ಬಸರಿ ಆತು. ಊರವರ ಬಾಯಿಗೆ ಬೀಗ ಬಿದ್ದತ್ತು. ಮೂವತ್ತೈದು ವರ್ಷ ಕಳುದ ಮೇಗೆ ಹರಿಣಿ ಬಸರಿ ಆದ ಕಾರಣ ರಜ್ಜ ಸಮಸ್ಯೆಯೂ ಆತು. ನಲುವತ್ತು ದಿನ ಅಪ್ಪಾಗಳೇ ಇನ್ನು ಹೆರಿಗೆವರೆಂಗೂ ಬೆಡ್ ರೆಸ್ಟಿಲ್ಲಿರೇಕು ಹೇಳಿ ದಾಕುದಾರಕ್ಕೊ ಹೇಳಿದವು. ಕೈಗೊಂದು ಆಳು, ಕಾಲಿಂಗೊಂದು ಆಳು ಹೇಳ್ತಾಂಗೆ ಮೋಹನ ಹೆಂಡತ್ತಿಯ ನೋಡಿಯೋಂಡ. “ಯಬ್ಬ…ಇಂವ ಮಾಡ್ತ ಕೋಲ ಕಂಡ್ರೆ ಸಾಕಾವುತ್ತು…, ಊರಿಲ್ಲಿಲ್ಲದ್ದ ಬಸರೋ ಇವನ ಹೆಂಡತ್ತೀದು…” ಹೇಳಿಯೆಲ್ಲ ಊರವು ಅವರವರ ನಾಲಗೆಯ ತೀಟೆ ತೀರ್ಸಿಯೊಂಡವು. ಅಪ್ಪನ ಪಟ್ಟ ಸಿಕ್ಕುತ್ತ ನಿರೀಕ್ಷೆಲಿತ್ತದ್ದ ಮೋಹನ ಹಾಂಗಿದ್ದರೆಲ್ಲ ಗಣ್ಯವೇ ಮಾಡಿದ್ದಾಯಿಲ್ಲೆ.

ಸುರಭಿ ಹುಟ್ಟಿದ ಲಾಗಾಯ್ತು ಅವರಿಬ್ರ ಜೀವನ ವಿಧಾನವೇ ಬದಲಾಗಿ ಹೋತು. ಅಷ್ಟ್ರವರೆಂಗೂ ಅಭಾವ ವೈರಾಗ್ಯದ ಮನಸ್ಥಿತಿಲಿತ್ತಿದ್ದವು ಈಗ ಪೂರಾ ಲೌಕಿಕರಾದವು. ಗೆಂಡ, ಹೆಂಡತ್ತಿಯ ಪ್ರತಿಯೊಂದು ಕ್ರಿಯೆಯ ಹಿನ್ನೆಲೆಯೂ ಸುರಭಿ, ಪ್ರತಿ ಮಾತೂ ಅದರ ಬಗ್ಗೆಯೇ, ಪ್ರತಿ ನೋಟವೂ ಅದಕ್ಕೆ ಬೇಕಾಗಿ ಹೇಳಿ ಆತು. ಹೀಂಗೆ ಮಗಳ ಮೇಲಾಣ ಮೋಹದ ಅಲೆಲಿ ತೇಲಿ ಸುಖಿಸಿದವು. ಕೆಳ ಮಡುಗಿರೆ ಎರುಗು ಕಚ್ಚಿಯೊಂಡೋಕು, ಮೇಗೆ ಮಡುಗಿರೆ ಕಾಕೆ ಕಚ್ಚಿಯೊಂಡೋಕು ಹೇಳ್ತ ಹಾಂಗೆ ಸುರಭಿ ಅಬ್ಬೆ ಅಪ್ಪನ ಅಪ್ಪುಗೆಯೊಳವೇ ಬೆಳದತ್ತು. ಕೂಸಿನ ಬಾಯಿಲಿ ಎಂತ ಬೇಡಿಕೆ ಬಂದರೂ ಅದು ಕ್ಷಣಲ್ಲಿ ಪೂರೈಕೆ ಅಕ್ಕು. `ಎನ್ನ ಹಾಂಗೆ ಮಗಳಿಂಗೆ ಅಪ್ಪಲೆಡಿಯ…’ ಹೇಳ್ತ ತುಡಿತ ಅಬ್ಬೆಗಾದ್ರೆ `ಪಾಪ ಹೆಂಡತ್ತಿ ಒಂದು ಮಗುವಾಯೇಕಾರೆ ಎಷ್ಟು ಬಂಙ ಬಯಿಂದು..,ಅದರ ಮನಸ್ಸಿಂಗೆ ಬೇಜಾರು ಅಪ್ಪಲೆಡಿಯ..’ ಹೇಳ್ತ ಕಾತರ ಅಪ್ಪಂಗೆ. ಒಟ್ಟಾರೆ ಸುರಭಿ ರಾಜ ಮರ್ಜಿಲಿ ದೊಡ್ಡಾತು.

ಹರಿಣಿ ಹುಟ್ಟಿ ಬೆಳದ್ದದು ಸಾಮಾನ್ಯ ಮಧ್ಯಮ ತರಗತಿಯ ಕೂಡು ಕುಟುಂಬಲ್ಲಿ. ಮನೆ ತುಂಬಾ ಜೆನ ಇಪ್ಪಲ್ಲಿ ಪ್ರತಿಯೊಬ್ಬನ ಆಶೆಗೂ ಕೆಮಿ ಕೊಟ್ಟು ಪೂರೈಶುಗೋ ಹೇಳಿ? ಹರಿಣಿಯ ಅಪ್ಪನ ಮನೆಯವೂ ಇದಕ್ಕೆ ಹೊರತಲ್ಲ. ಸಣ್ಣಾದಿಪ್ಪಾಗ ಡೇನ್ಸು ಕಲಿಯೇಕು ಒಳ್ಳೇತ ಆಶೆ ಇದ್ದತ್ತು ಅದಕ್ಕೆ. ಮನೆ ಹತ್ರಾಣ ಎರಡು ಕೂಸುಗೊ ಡೇನ್ಸು ಕಲಿವಲೆ ಹೋಗಿಯೋಂಡಿತ್ತಿದ್ದವು. ಅವರ ಜೆತೆಲಿ ಹೋಪಲಕ್ಕನ್ನೇ ಹೇಳಿ ಇದರ ಕನಸು. `ಅಬ್ಬೇ, ಆನು ಡೇನ್ಸು ಕಲಿತ್ತೆ ಆಗದೋ?’ ಕೇಳಿತ್ತು ಕೂಸು. ಅಬ್ಬೆಗೆ ಝಿಮ್ ಹೇಳಿತ್ತು. ಅಡಕ್ಕೆ ರೇಟು ಪಾತಾಳಕ್ಕಿಳಿದ ಕಾಲ. ಮನೆಲಿ ಎಂಟ್ಹತ್ತು ಜೆನಂಗೋ. ನಿತ್ಯ ಕರ್ಚು, ಕೃಷಿ, ಜಾನುವಾರುಗೊ, ಮಾಣಿಯಂಗಳ ಕೋಲೇಜು ಕರ್ಚು, ಪೂಜೆ ಪುನಸ್ಕಾರಂಗೊ….ಇದೆಲ್ಲ ಅಡಕ್ಕೆ ಪೈಸೇಲೇ ಆಗೇಡದೋ ಹೇಳಿ..? ಇದಕ್ಕೊಬ್ಬಂಗಿಂದು ಡೇನ್ಸು ಕಲಿಶೀರೆ ಸಾಕೋ? ಭಾವನೋರ ಎರಡು ಕೂಸುಗೊ ಇದ್ದವು. ಅವೂದೆ ಕಲುಶೇಕು ಹೇಳಿದರೋಂ…? ಅದೆಲ್ಲ ನಮ್ಮಿಂದ ಪೂರೈಸ…’ ಹೇಳಿ ಜಾನ್ಸಿದ ಅಬ್ಬೆ, `ಇದಾ ಪುಟ್ಟಕ್ಕೋ, ನಮ್ಮ ಜಾತೀಲಿ ಡೇನ್ಸು, ಗೀನ್ಸು ಹೇಳಿಯೊಂಡು ತಿರುಗುವ ಕ್ರಮ ಇಲ್ಲೆ…, ನಾಳೆ ಮದುವೆಗಪ್ಪಗ ಮಾಣಿ ಸಿಕ್ಕ, ಎನಗೆ ಬೇಡಪ್ಪಾ ಆ ಹಾರುಂಗಾಲಿ ಕೂಸು ಹೇಳುಗು…,ತಳಿಯದ್ದೆ ಮನೆ ಕೆಲಸ, ಅಡಿಗೆ ಕೆಲಸ ಕಲ್ತುಗೋ ಸಾಕು…,ಇನ್ನು ಇದರ ಅಪ್ಪನತ್ರೆ ಕೇಳ್ಲೆ ಹೋಗಿ ಬೈಗಳು ತಿನ್ನೇಡ ಮಿನಿಯಾ…’ಹೇಳಿತ್ತು. ಅಬ್ಬೆಯ ಮಾತಿಂಗೆ ಹಾಂಗಲ್ಲ, ಹೀಂಗೆ ಹೇಳಿರೆ ದೊಡ್ಡ ರಾಮಾಯಣವೇ ಅಕ್ಕು ಹೇಳಿ ಹರಿಣಿ ತಳಿಯದ್ದೆ ಕೂದತ್ತು. ಮುಂದೆಯೂ ಹಾಂಗೇ ಆತು. ಕೂಸಿಂಗೆ ಎಸ್.ಎಸ್.ಎಲ್.ಸಿ. ಮುಗಿವಲೆ ಪುರುಸೋತ್ತಿಲ್ಲೆ. ಮಾಣಿ ಹುಡ್ಕಲೆ ಸುರು ಮಾಡಿದವು. ಆದರೆ ಎಲ್ಲಿಯೂ ಜಾತಕಲ್ಲಿ ಸರಿಗಟ್ಟಾದ್ದ ಕಾರಣ ಅಂತೆ ಮನೆಲಿ ಕೂರ್ತಕ್ಕಾತು ಹೇಳಿ ಕೋಲೇಜಿಂಗೆ ಹೋಪಲೆ ಹಿರಿಯವು ಒಪ್ಪಿಗೆ ಕೊಟ್ಟವು. ಪಬ್ಲಿಕ್ ಪರೀಕ್ಷೆಲಿ ಒಳ್ಳೇತ ಮಾರ್ಕೂ ಇತ್ತಿದ್ದು. ಸೈನ್ಸ್ ತೆಕ್ಕೊಂಡು ಮುಂದೆ ಕಲ್ತು ಎಮ್.ಎಸ್ಸಿ. ಮಾಡೇಕು, ಲೆಕ್ಚರರ್ ಆಯೇಕು ಹೇಳ್ತ ಅದರ ಆಶೆಯ ಆರು ಕೇಳ್ತಂ? `ಏ ಪುಟ್ಟಕ್ಕೋ, ನೀನು ಮದಾಲು ಗೆಂಡ ಮಕ್ಕೊಗೆ ಬೇಶಿ ಹಾಕಲೆ ಕಲಿ….,ಸೈನ್ಸು ತೆಕ್ಕೊಂಡು ಬಿ.ಎಸ್ಸಿ, ಎಮ್ಮೆಸ್ಸಿ ಕಲ್ತು ಕೆಲಸಕ್ಕೆ ಸೇರಿ ಮನೆಯೋರ ಸಾಂಕಲೆ ನೀನೆಂತ ಮಾಣಿಯೋ…? ಪೀ.ಯೂ.ಸಿ.ಗೆ ಹಿಸ್ಟ್ರಿ, ಎಕನಾಮಿಕ್ಸ್ ತೆಕ್ಕೊ ಸಾಕು…, ಒಳ್ಳೆ ಮನೆ ಬಂದ್ರೆ ನಿನ್ನ ಡಿಗ್ರಿ ಆಯೇಕು ಹೇದೆಲ್ಲ ಕಾವಲೆ ಇಲ್ಲೆ.., ಮದುವೆ ಮಾಡಿ ಕೊಡ್ತದೇ…’ ಹೇಳಿಯೇ ಅದರ ಕೋಲೇಜಿಂಗೆ ಕಳ್ಸಿದವು. ಅದರ ಪುಣ್ಯಕ್ಕೆ ಬಿ.ಎ.ಕಡೆಯಾಣ ವರ್ಷಕ್ಕೊರೆಗೂದೆ ಅದಕ್ಕೆ ಮದುವೆ ಯೋಗ ಕೂಡಿ ಬಯಿಂದೇ ಇಲ್ಲೆ.

ಪರೀಕ್ಷೆಂದ ರಜಾ ಮದಲೇ ಮೋಹನನ ಸಂಬಂಧ ಕೂಡಿ ಬಂತು. ಮಾಣಿಯ ಮನೆಯವಕ್ಕೆ ಒಳ್ಳೇತ ಬಗೆ ಇದ್ದಾಡ, ಮಾಣಿಯೂ ಬೇಂಕಿಲ್ಲಿ ಆಫೀಸರಂ, ಜಾತಕವೂ ತಕ್ಕ ಮಟ್ಟಿಂಗೆ ಕೂಡಿ ಬತ್ತು ಹೇಳಿ ಮಾಣಿ ಕಡೆಯವು ಹೇಳಿದ್ದವು ಹೇಳಿ ಹರಿಣಿಯ ಮದುವೆ ನಿಶ್ಚಯ ಮಾಡಿಯೇ ಬಿಟ್ಟವು. ಮದುವೆಂದ ಮದಲೇ ಒಂದಾರಿಯಾದ್ರೂ ಮೋಹನನತ್ರೆ ಮನಸ್ಸು ಬಿಚ್ಚಿ ಮಾತ್ನಾಡೇಕು ಹೇಳ್ತ ಅದರ ಆಶೆಗೂ ಕಲ್ಲಾಕಿದವು. `ಮದುವೆಂದ ಮದಲೇ ಮಾಣಿಯಂಗಳತ್ರೆ ಹಾಂಗೆಲ್ಲ ಮಾತಾಡ್ತ ಕ್ರಮ ಇಲ್ಲೆ ಪುಟ್ಟಕ್ಕೋ.., ಹರಿಗಿಣಿ ಮಲ್ಲಕ್ಕ ಹೇಳುಗು ನಿನ್ನ…,ಮದುವೆ ಆದ ಮತ್ತೆ ಎಷ್ಟು ಬೇಕಾರೂ ಮಾತಾಡಿಯೋಳಿ…ಆರು ಕೇಳ್ತಂ…?’ ಹೇಳಿತ್ತು ಅಬ್ಬೆ.

ಅಂದರೆ ಹರಿಣಿಯ ಹಣೆಬಾರ ಒಳ್ಳೇದಿತ್ತಿದ್ದು. ಹೆಂಡತ್ತಿಯ ಸ್ನೇಹಿತೆಯ ಹಾಂಗೆ ನೋಡಿಯೋಂಬ ಗೆಂಡನೇ ಸಿಕ್ಕಿದ. ಸೌಮ್ಯ ಪ್ರಕೃತಿಯ ಹೊಂದಾಣಿಕೆ ಸ್ವಭಾವದ ಮೋಹನನ ಅದು ತುಂಬಾ ಇಷ್ಟಪಟ್ಟತ್ತು. ಆದರೆ ಸಣ್ಣ ಪ್ರಾಯಲ್ಲಿ ಅದರ ಯಾವುದೇ ಆಶೆ ಆಕಾಂಕ್ಷೆಗೊಕ್ಕೆ ಸಿಕ್ಕದ್ದ ಬೆಲೆ, ಡಿಗ್ರಿ ಕಡೇಯಾಣ ವರ್ಷದ ಪರೀಕ್ಷೆಯ ಉಪೇಕ್ಷಿಸಿ ಮಾಡ್ಸಿದ ಮದುವೆ, ಒಂದೊಂದು ಆಶೆ ಮಣ್ಣುಗೂಡಿಯಪ್ಪಾಗಳೂ ಹಾಕಿದ ಕಣ್ಣು ನೀರು ಇದೆಲ್ಲ ಅದಕ್ಕೆ ಮರೆವಲೇ ಎಡಿಗಾಯಿದಿಲ್ಲೆ. ಮೇಲಂದ ಮೇಲೆ ಬಿದ್ದ ಪೆಟ್ಟು ಮನಸ್ಸಿನ ಎಷ್ಟು ಕಲ್ಲು ಮಾಡಿತ್ತು ಹೇಳಿರೆ ಮದುವೆ ಆದ ದಿನವೇ ಅದು ಮನಸ್ಸಿಲ್ಲೇ ಒಂದು ವಿಷಯ ಗಟ್ಟಿ ಮಾಡಿಯೊಂಡತ್ತು, `ಆನು ಒಂದೇ ಹೆರುವದು, ಅದಕ್ಕೆ ಬೇಕು ಬೇಕಾದ್ದರ ತೆಗದು ಕೊಡುವೆ.., ಅದು ಕೂಸಾಗಲೀ ಮಾಣಿಯಾಗಲೀ ಒಂದೋ ಅದು ದೊಡ್ಡ ಡ್ಯಾನ್ಸರ್ ಆಯೇಕು ಇಲ್ಲದ್ರೆ ಪ್ರೊಫೆಸರ್ ಆಯೇಕು… ಎಂತಾದ್ರೂ ಸಮ, ಅದು ಎಷ್ಡು ಕಲಿತ್ತೋ ಅಷ್ಟು ಕಲಿಶಿಕ್ಕಿಯೇ ಮದುವೆ ಮಾಡ್ಸುತ್ತದು…, ಎನ್ನ ಹಾಂಗೆ ಎನ್ನ ಮಗುವಿಂಗೆ ಅಪ್ಪಲೆಡಿಯ…’ ಅದರ ಈ ಎಲ್ಲಾ ಅಲೋಚನೆಗೊಕ್ಕೆ ಮೋಹನನೂ `ಸೈ…ಸೈ’ ಹೇಳಿದ ಹೇಳುವೋಂ. ಅಂದರೆ ಅದು ಬಸರಿಯೇ ಆಗದ್ದಿಪ್ಪಾಗ ಕನಸುಗೊ ಎಲ್ಲ ಕನಸಾಗಿಯೇ ಒಳಿತ್ತೋ ಹೇಳಿ ತುಂಬಾ ಬೇಜಾರಲ್ಲಿತ್ತಿದ್ದು. ಈಗ ಎಲ್ಲ ಕನಸುಗಳೂ ಕೈಗೂಡುವ ಕಾಲ ಬಂತನ್ನೇ ಹೇಳುವ ಸಂತೋಷಲ್ಲಿ ಅದರ ಹಿಡಿವವೇ ಇಲ್ಲೆ.

ಆದರೆ ನಮ್ಮ ಅರೆಬೆಂದ ಆಶೆ ಆಕಾಂಕ್ಷೆಗಳ ಮಕ್ಕಳ ಮೂಲಕ ಪೂರ ಬೇಶಲೆ ನೋಡಿರೆ ನಾವೇ ಬೇಯೇಕಕ್ಕು ಹೇಳ್ತ ವಿಚಾರ ಮಾಂತ್ರ ಗಟ್ಟಿಗೆತ್ತಿ ಹರಿಣಿಯ ತಲೆಗೆ ಹೋಯಿದೇ ಇಲ್ಲೆ!

(ಸಶೇಷ)

ಶೀಲಾಲಕ್ಷ್ಮೀ ಕಾಸರಗೋಡು

   

You may also like...

4 Responses

  1. ಶೀಲಾ , ಕತೆ ಕುತೂಹಲ ಹುಟ್ಟುವ ನಮುನೆಲಿ ಅದರ ಶಿರೋನಾಮೆಲಿ ,ನಿರೂಪಣೆಲಿ , ಸಶೇಷಲ್ಲಿ ಇದ್ದು. ನೋಡುವೊಂ ಮುಂದಾಣ ಹಂತ!.

  2. ಗೋಪಾಲ ಬೊಳುಂಬು says:

    ಶೀಲಕ್ಕಾ, ಕತೆ ಒಳ್ಳೆ ಓದುಸೆಂಡು ಹೋವ್ತಾ ಇದ್ದು. ವಿಜಯಕ್ಕ ಹೇಳಿದ ಹಾಂಗೆ ಶೈಲಿ, ಕಥೆಯ ಶೀರ್ಷಿಕೆ ಎಲ್ಲವೂ ಲಾಯಕಿದ್ದು. ನಿಜವಾಗಿಯೂ ಧಾರಾವಾಹಿಗೆ ಒಪ್ಪುತ್ತ ಕತೆ.

  3. N S JAYALAXMI says:

    ಕಥೆ ಒಳ್ಳೆ ಲಾಯಿಕಲ್ಲಿ ತೆಕ್ಕೊಂಡು ಹೋವುತ್ತ ಇದ್ದೆ.

  4. ಧನ್ಯವಾದಂಗೊ ಎಲ್ಲೋರಿಂಗೂ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *