Oppanna.com

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-2)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   12/07/2016    8 ಒಪ್ಪಂಗೊ

..ಅರುಂಧತಿ.. ಕತೆಯ ಭಾಗ-1 ಓದಿ ಆಗದ್ದರೆ, ಇಲ್ಲಿದ್ದು: ಸಂಕೊಲೆ

ಸುರಭಿಯ ರೂಪದ ಬಗ್ಗೆ ಒಂದೇ ಮಾತಿಲ್ಲಿ ಹೇಳ್ತರೆ ಕೈ ತೊಳದು ಮುಟ್ಟುವ ಹಾಂಗಿಪ್ಪ ಚೆಂದದ ಕೂಸದು.
ಎಲ್ಲೋರೂ “ಚೆಂದದ ಒಪ್ಪಕ್ಕೋ…” ಹೇಳಿ ಹೇಳಿ ಒಪ್ಪಕ್ಕ ಹೇಳ್ತ ಅಡ್ಡ ಹೆಸರೇ ಅದಕ್ಕೆ ಖಾಯಾಂ ಆತು. ಸುರಭಿ ಹುಟ್ಟುವಾಗಳೇ ಒಳ್ಳೆ ಆರೋಗ್ಯವಂತ ಹಿಳ್ಳೆ. ಬೆಣ್ಣೆ ಮುದ್ದೆಯ ಹಾಂಗಿಪ್ಪ ಕೂಸಿನ ಹೇಂಗೆ ಕೊಂಗಾಟ ಮಾಡಿಯರೂ ಅಬ್ಬೆ ಅಪ್ಪಂಗೆ ತೃಪ್ತಿ ಇಲ್ಲೆ. ಸ್ಮಾರ್ಟ್ ಫೋನೊಂದು ಕೈಲಿದ್ದರೆ ಬೇಕಾರೂ ಬೇಡದ್ರೂ ಜೀವನದ ಪ್ರತಿ ಘಟನೆಯನ್ನೂ ದಾಖಲ್ಸಿಯೊಂಬ ಹೇಳ್ತ  ಮರುಳು ಸಹಜ ಅಲ್ಲದೋ? ಕಾದು….ಕಾದು, ಬೇಡಿ…ಬೇಡಿ ಹುಟ್ಟಿದ ಮಗು ಹೇಳಿರೆ ಮತ್ತೆ ಕೇಳೇಕೋ? ಹಿಳ್ಳೆ ನೆಗೆ ಮಾಡಿದ್ದಕ್ಕೊಂದು ಪಟ, ಕೂಗಿದ್ದಕ್ಕೊಂದು ಪಟ, ಹೊಟ್ಟೆ ಎಳವಾಗ ಒಂದು ಪಟ…, ಒರಗಿಯರೂ ಪಟ, ಎದ್ದರೂ ಪಟ…, ಹೀಂಗೆ ಮೊಬೈಲಿಲ್ಲಿ ಸೆರೆಯಾದ ರಾಶಿ ರಾಶಿ ಪಟಂಗೊ ಅಲ್ಲೇ ಇದ್ದರೆ ಸಾಕೋ? ಅದರೆಲ್ಲಾ ಮೋರೆ ಪುಟ (ಫೇಸ್ ಬುಕ್) ಲ್ಲಿ ಹಾಕುತ್ತದು, ಸಾವಿರಾರು ಲೈಕುಗೊ ಬಪ್ಪಾಗ ಹಿರಿ ಹಿರಿ ಹಿಗ್ಗುತ್ತದು, ಮನೆಗೆ ಬಂದ ನೆಂಟ್ರುಗೊಕ್ಕೆ ಅದರೆಲ್ಲ ತೋರ್ಸುತ್ತದು…., ಹರಿಣಿಗೆ ಇದುವೇ ಒಂದು ದಿನಚರಿ ಆಗಿ ಹೋತು.

ಸಾಂದರ್ಭಿಕ ಚಿತ್ರ । ಚಿತ್ರಕೃಪೆ: ಅಂತರ್ಜಾಲ
ಸಾಂದರ್ಭಿಕ ಚಿತ್ರ । ಚಿತ್ರಕೃಪೆ: ಅಂತರ್ಜಾಲ

ಸುರಭಿಗೆ ಮೂರು ವರ್ಷ ಅಪ್ಪದ್ದೆ ಶಾಲೆಗೆ ಸೇರ್ಸಿದವು. ಆರಾರದ್ದೋ ಮಕ್ಕಳೊಟ್ಟಿಂಗೆ ಚೆರಕ್ಕಿಯೊಂಡು, ಅಸಬಡುಕ್ಕೊಂಡು ರಿಕ್ಷಲ್ಲಿಯೋ ವ್ಯಾನಿಲ್ಲಿಯೋ ಎಂತಕೆ ಶಾಲೆಗೆ ಹೋವುತ್ತದು ಹೇಳಿ ಮಗಳ ಶಾಲೆಗೆ ಕರಕ್ಕೊಂಡು ಹೋಪಲೆ ಹೇಳಿಯೇ ಮೋಹನ ಹೆಂಡತ್ತಿಗೆ ಹೊಸಾ ಕಾರು ತೆಗದುಕೊಟ್ಟಂ. ಉದಿಯಪ್ಪಾಗಳೇ ಬುತ್ತಿ ತುಂಬ್ಸಿ ಕೊಟ್ರೆ ಮಧ್ಯಾಹ್ನಕ್ಕಪ್ಪಗ ತಣುದು ಕೋಡ್ತು ಹೇಳಿ ಹರಿಣಿ ಬೆಶಿ ಬೆಶಿ ಊಟ ತೆಕ್ಕೊಂಡು ಮಧ್ಯಾಹ್ನವೂ ಶಾಲೆಗೆ ಹೋವುತ್ತು…, ಹೇಂಗೂ ಕಾರು ಇದ್ದನ್ನೆ? ಎಲ್.ಕೆ.ಜಿ….ಯು.ಕೆ.ಜಿ….ಒಂದನೇ ಕ್ಲಾಸು,…ಎರಡ್ನೇ….,ಮೂರ್ನೇ…,ಹೀಂಗೆ ಕಾಲಚಕ್ರ ಉರುಳ್ತಾ ಸುರಭಿ ದೊಡ್ಡಾತು. ಶಾಲೆಲಿ ಸುರಭಿಗೆ ವಿಶೇಷ ಸ್ನೇಹಿತರು ಆರೂ ಇಲ್ಲೆ ಹೇಳ್ತದರಿಂದ ಹೆಚ್ಚಿಗೆ ಹರಿಣಿಗೆ ಮಗಳು “ಸಿಕ್ಕಿ ಸಿಕ್ಕಿದ” ಮಕ್ಕಳೊಟ್ಟಿಂಗೆ ಸೇರಿಯೊಂಡು ಮೈಗೆ ಕೈಗೆ ಮಣ್ಣು ಮಾಡಿಯೋಳ್ತದು, ಬೆಶಿಲಿಂಗೆ ಲಾಗ ಹಾಕುತ್ತದು ಎಲ್ಲ ಇಷ್ಟ ಅಲ್ಲ. ಹಾಂಗಾದ ಕಾರಣ ಸುರಭಿ ಮದ್ದಿನ ಕೊಂಬಿನ ಹಾಂಗೆ ಒತ್ತೆಪೋಕಿಯಾಗಿಯೇ ಬೆಳದತ್ತು. ಮಗಳ ಹತ್ತನೇ ವರುಷದ ಹುಟ್ಟುಹಬ್ಬದ ದಿನ ಹರಿಣಿಯ ಕನಸು ನನಸಾತು. ಸುರಭಿಯ ಡ್ಯಾನ್ಸು ಕ್ಲಾಸಿಂಗೆ ಸೇರ್ಸಿಯಾತು. ಹತ್ರಾಣ ಮನೆಯ ಮಗು ಚೆಸ್ಸ್ ಕ್ಲಾಸಿಂಗೆ ಹೋವುತ್ತು ಹೇಳಿ ಇದರನ್ನೂ ಸೇರ್ಸಿತ್ತು. ಕೂಸುಗೊಕ್ಕೆ ಆತ್ಮ ರಕ್ಷಣೆಗೆ ಕರಾಟೆ ಗೊಂತಿದ್ರೆ ಒಳ್ಳೇದು ಹೇಳಿ ಕರಾಟೆ ಕ್ಲಾಸಿಂಗೂ ಸೇರ್ಸಿತ್ತು. ಈ ಎಲ್ಲಾ ಕ್ಲಾಸುಗೋಕ್ಕೆ ಹರಿಣಿಯೇ ಮಗಳ ಕರಕ್ಕೊಂಡ್ಹೋಗಿ ಅಲ್ಲಿ ಅದರೊಟ್ಟಿಂಗೆ ಕೂದು ಎಲ್ಲ ಮುಗಿದಪ್ಪದ್ದೆ ವಾಪಾಸು ಕರಕ್ಕೊಂಡು ಬಪ್ಪದು.

ಮೋಹನ ಬ್ಯಾಂಕಿಲ್ಲಿ ಕೆಲಸ ಮಾಡ್ತ ಕಾರಣ ಮೂರು ವರ್ಷಕ್ಕೊಂದಾರಿ ವರ್ಗ ಅಪ್ಪಲಿದ್ದಲ್ದೋ? ಸುರಭಿಯ ಭವಿಷ್ಯದ ದೃಷ್ಟಿಂದ ಹರಿಣಿ ಅವನೊಟ್ಟಿಂಗೆ ಪಡಿಬಿಡಾರ ಕಟ್ಟಿಯೊಂಡು ಎಲ್ಲಿಗೂ ಹೋಯಿದಿಲ್ಲೆ. ಮೋಹನಂಗೂ ಅದು ಸರಿ ಹೇಳಿಯೇ ಕಂಡತ್ತು. ಬಾಕಿಪ್ಪ ಚಟುವಟಿಕೆಗಳೇ ಹೆಚ್ಚಾದ ಕಾರಣಂದಲೋ ಎಂತ್ಸೋ ಸುರಭಿಗೆ ಶಾಲೆಯ ಪಾಠಂಗಳಲ್ಲಿ ಆಸಕ್ತಿ ಅಷ್ಟಕ್ಕಷ್ಟೆ. “ಇನ್ನು ಇದು ಕಲ್ತು ಸಂಪಾದನೆ ಮಾಡಿ ನಮ್ಮ ಸಾಂಕೇಕೋ…? ನಾವು ಮಾಡಿದ ಬದ್ಕೇ ಬೇಕಾಷ್ಟಿದ್ದು… ಊರವರ ಕಣ್ಣಿಂಗೆ ಮಣ್ಣು ಹಾಕಲೆ ಪಾಸಾಗೇಂಡು ಹೋದರೆ ಸಾಕು…” ಹೇಳ್ತ ಅಭಿಪ್ರಾಯ ಮೋಹನ, ಹರಿಣಿದು. ಅದರ ಮುದ್ದು ಮಾತುಗೊ, ಕೊಂಗಾಟದ ನಡವಳಿಕೆಯೇ ಅವಕ್ಕೆ ಜೀವನಾಧಾರ.

ಸುರಭಿಯ ಜೀವನಲ್ಲಿ ಹದಿಹರೆಯ ಕಾಲುಮಡುಗಿತ್ತು. ಈಗ ಸುರಭಿ ಹತ್ತನೇ ಕ್ಲಾಸು ಕಲಿತ್ತ ಜವ್ವಂತಿ. ಜನ್ಮತಃ ಸುಂದರಿ. ಇನ್ನು ವಸಂತನ ಆಗಮನವೂ ಆದರೆ ಮತ್ತೆ ಕೇಳೇಕೋ? “….ಬ್ರಹ್ಮ ಪುರುಸೋತ್ತಿಲ್ಲಿ ಕೂದೊಂಡು ಕೆತ್ತಿದ ಶಿಲ್ಪ ನಮ್ಮ ಮಗಳು…,ಇಷ್ಟು ಚೆಂದದ ಕೂಸು ನಾಟ್ಯರಾಣಿ ಆಯೇಕಾದ್ದದೇ ಸರಿ..” ಹೇಳಿ ಹರಿಣಿ ಗೆಂಡನತ್ರೆ ಒಂದೊಂದಾರಿ ಹೇಳ್ಲೆ ಇದ್ದು.

“ಅಪ್ಪಾ, ಎನಗೆ ಮಾಷ್ಟ್ರಕ್ಕೊ ಈಗ ತುಂಬಾ ಪ್ರಾಜೆಕ್ಟ್ ಕೆಲಸಂಗಳ ಕೊಡ್ತವು. ದೊಡ್ಡ ಪರೀಕ್ಷೆಯ ಮಾರ್ಕಿನೊಟ್ಟಿಂಗೆ ಇದರ ಮಾರ್ಕನ್ನೂ ಸೇರ್ಸುತ್ತವಾಡ. ಹಾಂಗಾಗಿ ಪ್ರಾಜೆಕ್ಟು ಚೆಪ್ಡಿ ಮಾಡ್ಲೆ ಎಡಿಯ. ಅದಕ್ಕೆ ಬೇಕಾಗಿ ನೆಟ್ಟಿಂದ ಸುಮಾರು ವಿಷಯಂಗಳ ತೆಗೇಕಾವುತ್ತು, ಎನ್ನತ್ರಿಪ್ಪ ಮೊಬೈಲು ಬರೀ ಮಾಮೂಲಿಂದಲ್ದಾ? ಅದರಲ್ಲಿ ಹೀಂಗಿದ್ದ ಕೆಲಸ ಎಂತ್ಸೂ ಮಾಡ್ಲೆಡಿತ್ತಿಲ್ಲೆ. ಮತ್ತೇ ಆಫೀಸು ರೂಮಿಲ್ಲಿಪ್ಪ ಕಂಪ್ಯೂಟರು ನಿಂಗೊಗಿಬ್ರಿಂಗೆ ಬೇಕಾವುತ್ತನ್ನೇ? ಎನ್ನ ಉಪಯೋಗಕ್ಕೆ ಒಂದು ಐ ಪ್ಯಾಡ್ ತೆಗದುಕೊಡುವಿರಾ…? ಕ್ಲಾಸಿಲ್ಲಿ ಎಲ್ಲೋರತ್ರೂ ಐ ಪ್ಯಾಡು ಇದ್ದು. ಎನ್ನತ್ರೆ ಮಾಂತ್ರ ಇಲ್ಲೆ..” ಹೇಳಿ ಸುರಭಿ ಒಂದು ದಿನ ಮೋರೆ ಚೆಪ್ಪೆ ಮಾಡಿಯೊಂಡು ಅಪ್ಪನತ್ರೆ ಬೇಡಿಕೆ ಮಡುಗಿತ್ತು. ಮಗಳ ಮನಸ್ಸರ್ತೇ ಅದಕ್ಕೆ ಬೇಕಾದ್ದರ ತಂದು ಕೊಡ್ತ ಮೋಹನ ಇನ್ನು ಅದು ಬಾಯಿ ಬಿಟ್ಟು ಕೇಳಿಯಪ್ಪಗ ಎಡಿಯ ಹೇಳುಗೋ? ಸಾಲದ್ದಕ್ಕೆ ಎಲ್ಲೋರತ್ರೆ ಇಪ್ಪದು ತನ್ನ ಮಗಳತ್ರೆ ಇಲ್ಲೆ ಹೇಳಿದ್ರೆ ಅದು ಬರೀ ತಾಪು ಆತಿಲ್ಲಯೋ? ಮರುದಿನವೇ ಸುರಭಿಯ ಕೈಗೆ ಆ ಮಾಯಾ ಪೆಟ್ಟಿಗೆ ಬಂತು. ಅದರ ಕಲಿವ ಉತ್ಸಾಹಲ್ಲಿ ಅದು ಅಬ್ಬೆಯ ಸೆರಗು ಹಿಡ್ಕೊಂಡು ತಿರುಗುತ್ತದು ಕಡಮ್ಮೆ ಆತು.

ಮೊದಲು ಅದರದ್ದೊಂದು ಕ್ರಮ ಇದ್ದತ್ತು. ಮನುಗೇಕಾರೆ ಮದಲೆ ಅಬ್ಬೆಯತ್ರೆ ಕಥೆ ಹೇಳ್ಸುತ್ತದು. ಇರುಳಾಣ ಊಟ ಕಳುದಿಕ್ಕಿ ಅಬ್ಬೆ ಮಗಳು ಯೇವಾಗಳು ಟೇರೇಸಿಂಗೆ ಹೋಗಿ ಕೂರುಗು. ಬೇಸಗೆಯ ಶುಭ್ರ ಆಕಾಶ, ಫಳ ಫಳ ನಕ್ಷತ್ರ, ಬಟ್ಲಿನ ಹಾಂಗಿಪ್ಪ ಚಂದ್ರ, ಅದರೊಳ ಇಪ್ಪ ಮೊಲ ಇದೆಲ್ಲದ್ರ ಬಗ್ಗೆಯೂ ಅದಕ್ಕೆ ದಿನಾಗ್ಳೂ ಕಥೆ ಹೇಳೇಕು. ದೂರಲ್ಲಿ ಕಾಂಬ ಸಪ್ತರ್ಷಿ ಮಂಡಲ ಹೇಳಿದ್ರೆ ಅದಕ್ಕೆ ಯೇವಾಗ್ಳೂ ವಿಶೇಷವಾದ ಒಂದು ಸೆಳೆತ. ಆ ಋಷಿಗಳ ಕಥೆ, ಅವು ನಕ್ಷತ್ರ ಆದ್ದದು, ವಸಿಷ್ಠ ಮಹರ್ಷಿಯ ಹೆಂಡತ್ತಿ ಅರುಂಧತಿ, ಅದರ ಗಟ್ಟಿಗತನ, ಪಾತಿವೃತ್ಯದ ವೃತ್ತಾಂತ…. ಹೀಂಗೆ ಬೇರೆ ಬೇರೆ ಪುರಾಣಂಗಳ ಕಥೆ ಕೇಳ್ತದು ಹೇಳಿರೆ ಸುರಭಿಗೆ ಮೈಯೆಲ್ಲಾ ಕೆಮಿಯೇ. ಅಂದರೆ ಈ ಹದಿಹರೆಯ ಹೇಳ್ತ ಒಂದು ಘಟ್ಟ ಇದ್ದನ್ನೇ? ಹೇಂಗಿರ್ತ ಸಾಮಾನ್ಯ ಮಕ್ಕಳೂ ಕಾಮನಬಿಲ್ಲಿನ ಮೇಗೆ ಕೂದು ಆಕಾಶಲ್ಲಿ ಸವಾರಿ ಮಾಡ್ತ ಹಾಂಗೆ ಕನಸು ಕಾಂಬ ಪ್ರಾಯ. ರಾಜಕುಮಾರಿಯ ಹಾಂಗೆ ಬೆಳೆತ್ತಾ ಇಪ್ಪ ಸುರಭಿ, ಪ್ರಾಯಕ್ಕೆ ತಕ್ಕ ಒಡನಾಡಿಗೊ ಇಲ್ಲದ್ದ ಚುರುಕಿನ ಮಾತಿನ ಮಲ್ಲಿ ಕೂಸು, ಕೈಲಿ ಐ ಪ್ಯಾಡೂ ಇದ್ದೊಂಡು ಬರೀ ಅಬ್ಬೆಯೊಟ್ಟಿಂಗೇ, ಅಬ್ಬೆ ಹೇಳಿದ್ದರನ್ನೇ ಕೇಳಿಯೊಂಡು ಇರೇಕು ಹೇಳಿದ್ರೆ ಅಕ್ಕೋ? ಅಬ್ಬೆ ಹೇಳ್ತದರಿಂದಲೂ ಹೆಚ್ಚು ರಂಗು ರಂಗಿನ ಕಥೆಗಳ ಆ ಐ ಪ್ಯಾಡಿನೊಳ ನೋಡ್ಲೆ ಎಡಿತ್ತು. ಬೇರೆಯೂ ಎಷ್ಟೆಷ್ಟೋ ಖುಷಿ ಖುಷಿ ಆವುತ್ತಾಂಗಿರ್ತ ಸಂಗತಿಗೊ ಅದರೊಳ ಇದ್ದು. ಹಂಗಿಪ್ಪಾಗ ಅಬ್ಬೆ ಹೇಳ್ತ ಯೇವದೋ ಕಾಲದ ಕಣ್ಣಿಂಗೆ ಕಾಣದ್ದ ಕಥೆಲಿ ಎಂತ ಸ್ವಾರಸ್ಯವೂ ಇಲ್ಲೆ ಹೇಳಿ ಸುರಭಿಗೆ ಕಾಂಬಲೆ ಸುರುವಾದ್ದದ್ರಲ್ಲಿ ಆಶ್ಚರ್ಯ ಇಲ್ಲೆ. “ಮಗಳು ದೊಡ್ಡ ಆವುತ್ತಾ ಇದ್ದು, ಹಾಂಗಾಗಿ ಅದಕ್ಕೆ ಕಟ್ಟು ಕಥೆಲಿ ಇಂಟ್ರೆಸ್ಟು ಕಡಮ್ಮೆ ಆದ್ದದು…, ಮತ್ತೆ ಓದ್ಲೂ ಬೇಕಾಷ್ಟು ಇಪ್ಪಾಗ ಕಥೆ ಕೇಳಿಯೊಂಡು ಕೂಬಲೂ ಪುರುಸೋತ್ತು ಬೇಕನ್ನೇ…” ಹೇಳಿ ಹರಿಣಿ ಅದರಷ್ಟಕೇ ಸಮಾದಾನ ಮಾಡಿಯೋಂಡತ್ತು.

ಸುರಭಿಯ ಅರಂಗೇಟ್ರಂ ಭಾರಿ ಗೌಜಿಲಿ ಕಳುದತ್ತು. ಈಗೀಗ ಶಾಲೆಯ, ಊರ ದೇವಸ್ಥಾನಂಗಳ ವಿಶೇಷ ಸಂದರ್ಭಂಗೊಕ್ಕೆ ಸುರಭಿಯ ನೃತ್ಯ ಇಪ್ಪಲೇಬೇಕು ಹೇಳ್ತಷ್ಟು ಅದು ಡ್ಯಾನ್ಸಿಲ್ಲಿ ಪಳಗಿತ್ತು. ಎಸ್.ಎಸ್.ಎಲ್.ಸಿ. ಗೆ ಎತ್ತಿಯಪ್ಪದ್ದೆ ಚೆಸ್ಸು, ಕರಾಟೆ ಕ್ಲಾಸುಗಳ ಸಾಕು ಮಾಡಿರೂ ಡ್ಯಾನ್ಸ್ ಕ್ಲಾಸಿನ ಮಾಂತ್ರ ಬಿಟ್ಟಿದಿಲ್ಲೆ. ಪಬ್ಲಿಕ್ ಪರೀಕ್ಷೆಯ ತಯಾರಿಯೊಟ್ಟಿಂಗೆ ನೃತ್ಯ ಅಭ್ಯಾಸ ಒಳ್ಳೇತ ಕಷ್ಟ ಹೇಳಿ ಕಂಡ್ರೂ ಸುರಭಿ ಸೋತಿದಿಲ್ಲೆ. ಮಗಳ ಹಿಂದೆ ನಿಂದು ಬೆನ್ನು ತಟ್ಲೆ ಹರಿಣಿ ಹೇಂಗಾರೂ ಇದ್ದನ್ನೇ?

ಪಬ್ಲಿಕ್ ಪರೀಕ್ಷೆ ಕಳುದತ್ತು. ಇನ್ನು ಮೂರು ತಿಂಗಳಿಂಗೆ ಪುಸ್ತಕ ಮುಟ್ಟುವ ಕೆಲಸ ಇಲ್ಲೆ ಹೇಳಿ ಸುರಭಿಗೆ ಸಂತೋಷವೇ ಸಂತೋಷ. ಕೈಲೇ ಇಪ್ಪ ಮಾಯಾ ಪೆಟ್ಟಿಗೆಲಿ ಲೋಕ ಸುತ್ಲೆ ಸುರು ಮಾಡಿತ್ತು. ಊಟಕ್ಕೂ ಕಾಪಿಗೋ ಅಬ್ಬೆಗೆ ಮಗಳ ದಿನುಗೋಳೀ ದಿನುಗೋಳೀ ಸಾಕಾವುತ್ತು. “ಎಂತ ಒಪ್ಪಕ್ಕೋ…ಇಡೀದಿನ ಆ ಐಪ್ಯಾಡಿನ ಹಿಡ್ಕೊಂಡು ಕೂದ್ರೆ ಮನೆಯ ಮಾಡು ಹರುದು ಬಿದ್ರೂ ಗೊಂತಾಗ… ಯೇವದಕ್ಕೂ ಒಂದು ಮಿತಿ ಬೇಕು ಮಿನಿಯಾ…” ಹೇಳಿ ಹರಿಣಿ ಪರಂಚಿರೆ ಸುರಭಿಯೂ ಪರಂಚುತ್ತು, “ಅಬ್ಬೇ, ನೀನು ಬರೀ ಓಲ್ಡ್ ಫ್ಯಾಶನ್ಡ್… ಇದರ ಬಗ್ಗೆ ಎಂತ ಗೊಂತಿದ್ದು ನಿನಗೆ…? ಎನ್ನ ಊಟ ಅಲ್ಲಿ ಟೇಬಲಿಲ್ಲಿ ಮಡುಗು. ಆನು ಬೇಕಪ್ಪಗ ತೆಕ್ಕೋಂಬೆ….” ಹೇಳುಗು. ಒಬ್ಬನೇ ಉಂಬಲೆ ಕೂದ್ರೆ ಹರಿಣಿಗೆ ದೊಂಡೆಲಿ ಅಶನ ಇಳಿಯೇಕನ್ನೇ? ಅದು ಮಗಳಿಂಗೆ ಅರ್ಥ ಆಯೇಕನ್ನೇ? ವಾರಕ್ಕೊಂದಾರಿಯೋ ಹದ್ನೈದು ದಿನಕ್ಕೊಂದಾರಿಯೋ ಬತ್ತ ಮೋಹನಂಗೆ ಇದ್ಯಾವುದೂ ಗೊಂತೇ ಆಯಿದಿಲ್ಲೆ. ಸಣ್ಣ ಸಣ್ಣ ವಿಷಯಂಗಳ ಹೇಳಿ ಯೇವಗಾದ್ರೂ ಕಾಣ್ತ ಗೆಂಡನ ತಲೆ ಹಾಳು ಮಾಡ್ತೆಂತಕೆ ಹೇಳಿ ಹರಿಣಿಯೂ ಮಗಳ ದೂರ್ಲೆ ಹೋಯಿದಿಲ್ಲೆ.

ಮಂಗ್ಳೂರಿನ ಪುರಭವನಲ್ಲಿ ಸುರಭಿಯ ಡ್ಯಾನ್ಸ್ ಕಾರ್ಯಕ್ರಮ ಮಡುಗಲಿದ್ದು ಹೇಳಿ ಅದರ ಟೀಚರು ಹೇಳಿಯಪ್ಪಗ ಹರಿಣಿಗೆ ಸ್ವರ್ಗಕ್ಕೆ ಮೂರೇ ಗೇಣು. ಆ ದಿನ ಸಭಿಕರೊಟ್ಟಿಂಗೆ ಕೂದ ಹರಿಣಿ, ಮೋಹನಂಗೆ ಮಗಳ ನೋಡ್ಲೆ ಎರಡು ಕಣ್ಣು ಸಾಲ ಹೇಳುವ ಹಾಂಗಾತು. ನೃತ್ಯ ಮಾಡುವಾಗ ಸುರಭಿ ಸಾಕ್ಷಾತ್ ಅಪ್ಸರೆಯೇ. ಒಳ್ಳೆ ಎತ್ತರದ ದಷ್ಟಪುಷ್ಟ ನಿಲುವು, ಒಂದು ಹೆಚ್ಚಿಲ್ಲೆ, ಒಂದು ಕಡಮ್ಮೆ ಇಲ್ಲೆ ಹೇಳ್ತಾಂಗಿದ್ದ ಅಂಗಾಂಗೊ. ನಾಟ್ಯಕಲೆಲಿಪ್ಪ ತಾದ್ಯಾತ್ಮತೆಂದಾಗಿ ಶರೀರಂದ ಹೊರಹೊಮ್ಮುತ್ತ ಭಾವಭಂಗಿಗೊ, ದುಂಡು ಮೋರೇಲಿ ಮೂಡಿ ಮರೆಯಪ್ಪ ನವರಸ ಭಾವಂಗೋ, ನೀಳ್ರೆಪ್ಪೆಯೊಳ ಬಂಧಿಯಾದ ದುಂಬಿ ಕಣ್ಣುಗಳ ಚಂಚಲತೆ, ಸತತ ಅಭ್ಯಾಸಂದಾಗಿ ಮೈಗೂಡ್ಸಿಯೊಂಡ ಮೀನಿನ ಚಲನೆ….ಇದೆಲ್ಲವೂ ಭವಿಷ್ಯಲ್ಲಿ ಸುರಭಿ ದೊಡ್ಡ ನೃತ್ಯಗಾತಿ ಅಕ್ಕು ಹೇಳುವದ್ರ ತೋರ್ಸಿಕೊಟ್ಟತ್ತು. ಸಭಿಕರಂತೂ ಕೆಮಿಯೇ ಹೊಟ್ಟಿ ಹೋಪ ಹಾಂಗೆ ಚಪ್ಪಾಳೆ ಹಾಕಿ ಒಪ್ಪಕ್ಕನ ಪ್ರೋತ್ಸಾಹಿಸಿದವು.

ಮನೆಗೆ ಬಂದಪ್ಪದ್ದೆ ಹರಿಣಿ ಮಾಡಿದ ಮದಾಲಾಣ ಕೆಲಸ ಎಂತರ ಹೇಳಿರೆ ಮಗಳ ಒಲೆಯ ಮುಂದೆ ಕೂರ್ಸಿ ಉಪ್ಪು ಸಾಸಮೆ ತಲೆಗೆ ಸುಳುದು ಒಲೆಗೆ ಹಾಕಿ ಒಲೆಂದ ಮಸಿ ತೆಗದು ಅದರ ಕೆಪ್ಪಟೆಗೆ ಮೆತ್ತಿದ್ದದು. (ಬೈಲಿನ ನೆಂಟ್ರುಗಳೇ: ಈ ಗ್ಯಾಸಿನ ಯುಗಲ್ಲಿ ಒಲೆಯೂ ಇದ್ದೋಪ್ಪಾ ಹೇಳಿ ಜಾನ್ಸಿದಿರೋ? ನಮ್ಮ ಒಪ್ಪಕ್ಕಂಗೆ ಕೆಂಡಲ್ಲಿ ಉಬ್ಬುಸಿದ ರೊಟ್ಟಿ ಹೇದರೆ ಬಾರೀ ಪ್ರೀತಿ. ಅದರ ಮಾಡ್ಲೆ ಬೇಕಾಗಿಯೇ ಹರಿಣಿಯ ಅಡಿಗೆ ಕೋಣೆಲಿ ಒಂದು ಸೌದಿ ಒಲೆಯೂ ಇದ್ದು) “ಛಿ..,ಎಂತಬ್ಬೆ ಇದೂ…,ನಿನ್ನ ಪೊಡುಂಬು…? ಇದೆಲ್ಲ ಬರೀ ಮೂಢನಂಬಿಕೆ…” ಹೇಳಿ ಮಗಳು ಪರಂಚಿಯೋಂಡ್ರೂ ಹರಿಣಿಗೆ ಅದು ತುಂಬಾ ಸಂತೋಷದ ಕೆಲಸವೇ. ಆ ಕಾರ್ಯಕ್ರಮ ಆದ ಮತ್ತೆ ಸುರಭಿಗೆ ದೊಡ್ಡ ದೊಡ್ಡ ಸಾರ್ವಜನಿಕ ವೇದಿಕೆಲಿ ನೃತ್ಯ ಮಾಡೇಕು ಹೇಳ್ತ ಬೇಡಿಕೆ ಬಪ್ಪಲೆ ಸುರುವಾತು. ಹರಿಣಿಗಂತೂ ಜಂಬಾರಕ್ಕೆ ಹೋದಲ್ಲೆಲ್ಲಾ ಮಗಳ ಹೊಗಳ್ಲೆ ಒಂದು ನಾಲಗೆ ಸಾಲ, ಮೊಬೈಲಿಲ್ಲಿ ಕೂಡ್ಸಿ ಮಡುಗಿದ ಅದರ ನೃತ್ಯದ ವಿವಿಧ ಭಂಗಿಗಳ ಫೋಟೋ ತೋರ್ಸಲೆ ಎರಡು ಕೈ ಸಾಲ ಹೇಳುವ ಸ್ಥಿತಿ ಆತು.

ಹೊಗಳಿ ಹೊಗಳಿ ಅಗಳು ಹಾರದ್ರೆ ಸಾಕು ಇದರ ಮಗಳು…” ಹೇಳಿ ಊರವು ಹರಿಣಿಗೆ ಕೇಳ್ತ ಹಾಂಗೇ ಹೇಳಿಯೋಂಡವು. “ನಮ್ಮ ಮಗಳ ಕಂಡ್ರೆ ಊರವಕ್ಕೆಲ್ಲಾ ಹೊಟ್ಟೆಯೊಳ ಮೆಣಸು ಹಾಕಿ ಮೆರುದ ಹಾಂಗೆ ಆವುತ್ತು…, ದೇವರು ಅವಕ್ಕೆ ಹಾಂಗಿಪ್ಪ ಮಗಳ ಕೊಟ್ಟಿದಾಂಯಿಲ್ಲೆ ಹೇಳ್ತ ಹೊಟ್ಟೆ ಕಿಚ್ಚು…, ಆರು ಎಂತ ಬೇಕಾರೂ ಹೇಳ್ಲಿ.., ಎನ್ನ ಮಗಳ ಆನು ವರ್ಲ್ಡ್ ಫೇಮಸ್ ಡ್ಯಾನ್ಸರ್ ಮಾಡದ್ದೆ ಬಿಡೆ….., ನೋಡಿ ಬೇಕಾರೆ..” ಗೆಂಡನತ್ರೆ ಹೀಂಗೆಲ್ಲಾ ಹೇಳಿ ಅದರಷ್ಟಕೆ ಅದು ಸಮಾಧಾನ ಮಾಡಿಯೋಂಬಲಿದ್ದು.

(ಇನ್ನೂ ಇದ್ದು)

8 thoughts on “ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-2)

  1. ತನಗೆ ಕಲಿವಲೆ ಆಗದ್ದರ ಮಕ್ಕೊಗೆ ಕಲುಶಿ ಕೊಶಿ ಪಡುವ ಅಮ್ಮ, ಎಲ್ಲದರಲ್ಲಿಯೂ ಈಗಾಣ ಕಾಲಕ್ಕೆ ಸರಿಯಾಗಿ ಇರೆಕು ಹೇಳ್ತ ಹದಿಹರೆಯದ ಮಗಳು, ಮಗಳ ಬೇಕು ಬೇಡಂಗಳ ಪೂರೈಸುವದೇ ಎನ್ನ ಕರ್ತವ್ಯ ಹೇಳಿ ತಿಳ್ಕೊಂಡ ಅಪ್ಪ°,ಅಪರೂಪಕ್ಕೆ ಬಪ್ಪ ಗಂಡನತ್ರೆ ಮಗಳ ಬಗ್ಗೆ ದೂರು ಹೇಳ್ತದು ಬೇಡ ಹೆಂಡತಿ…..
    ಮುಂದೆ ಎಂತಾವ್ತು ಕಾದು ನೋಡುವೊ

  2. ವಿಜಯಕ್ಕ, ಧನ್ಯವಾದಂಗೊ. ಮೀನಿಂಗೆ ಈಜಲೆ ಹೇಳಿ ಕೊಡೆಕೊ? ಕಥೆಗಾರಿಕೆಲಿ ಎನ್ನಂದ ಎಷ್ಟೋ ಹೆಚ್ಚು ಅನುಭವ ಇಪ್ಪ ನಿಂಗೊಗೆ ಅಂದಾಜಾಗದ್ದೆ ಇಕ್ಕೋ ?

    1. ಪಟ್ಟಾಜೆ ಅಣ್ಣಾ, ಓದುಗರೇ ಎನ್ನ ಬರೆವಣಿಗೆಯ ಸರಸ್ವ. ಹಾಂಗಾದ ಕಾರಣ ಅವು ಓದಿಗೊಂಡು ಹೋಪಾಗ ಎಂತ ಅಭಿಪ್ರಾಯ ವ್ಯಕ್ತ ಪಡುಸುತ್ತ ಇದ್ದವು ಹೇಳುದ್ರ ಸೂಕ್ಷ್ಮವಾಗಿ ಗಮನಿಸುತ್ತಾ ಇರ್ತೆ. ಬಹುಮತದ ಅಭಿಪ್ರಾಯಕ್ಕೆ ತಕ್ಕ ಹಾಂಗೆ ಕಥೆಯ ನಿಂಗಳ ಮುಂದೆ ಮಡುಗುತ್ತಾ ಹೋಪದು. ಮೊದಲೇ ಕಥೆ ಬರದು ಮಡುಗುತ್ತಿಲ್ಲೆ. ಅಥವಾ ಬರೆದಿದ್ದರು ಬದಲಾಯಿಸುತ್ತ ಹೋವುತ್ತೆ. ನಿಂಗಳ ಅದೇ ಅಭಿಪ್ರಾಯವ ಸುಮಾರು ಓದುಗರೂ ವೈಯಕ್ತಿಕವಾಗಿ ವ್ಯಕ್ತಪಡಿಸಿದ್ದವು. ಹಂಗಾದ ಕಾರಣ ಓದುಗರ ಅಭಿಪ್ರಾಯವೇ ಎನ್ನ ಆಭಿಪ್ರಾಯವೂ….

  3. ಇನ್ನು ಹೆಚ್ಚು ದಿನ ಇಲ್ಲೇ ಗೋಪಾಲಣ್ಣ, ಬರೇ ಆರು ದಿನ…..

  4. ಸುರಭಿ ಸಕಲಕಲಾವಲ್ಲಭೆ ಆದರುದೆ, ಗುಣಲ್ಲಿ ರಜ್ಜ ಪೆರಂಟು ಕಾಣ್ತಾ ಇದ್ದಾನೆ. ನೋಡೋ. ಕೂಸು ಹಾರುಂಗಾಲಿ ಆಗ ಹೇಳಿ ಜಾನುಸೆಂಬೊ. ಶೀಲಕ್ಕಾ, ಇನ್ನಾಣ ವಾರಕ್ಕೆ ಕಾಯ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×