Oppanna.com

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-5)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   02/08/2016    6 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ

“ಸುರೀ.., ಇಂದು ಕೇಚಪ್ಪಜ್ಜ ಬಂದಿತ್ತಿದ್ದ, ನಿನಗೆ ಇಷ್ಟ ಹೇದು ದೊಡ್ಡ ಮಾವ ಅವನತ್ರೆ ಕಣಿಲೆಯ ಕೊಟ್ಟು ಕಳಿಗಿದ್ದ…”
“ಓ…ಅಪ್ಪಾ? ಅಬ್ಬೇ, ಎನ್ನ ಫ್ರೆಂಡು ರೂಪಾ ಕಿಣಿಯ ಮನೆಲಿ ಆನು ಕಣಿಲೆ ಗಸಿ ತಿಂದಿತ್ತಿದ್ದೆ…,ನೀನೂ ಹಾಂಗಿರ್ತ ಬೆಂದಿಯನ್ನೇ ಮಾಡೇಕಾತೋ…?”
“ಹೋ..,ಮಾಡ್ಲಕನ್ನೆ…,ಅದರ ಅಬ್ಬೆಗೆ ಫೋನು ಮಾಡಿ ಆ ಗಸಿಯ ಮಾಡ್ತೇಂಗೆ ಹೇದು ಕೇಳಿಯೋಳ್ತೆ ಆಗದೋ…?”
“ಹೂಂ…ಅಕ್ಕಬ್ಬೆ… ಅಲ್ಲಾ.., ಕೇಚಪ್ಪಜ್ಜ ಎಂತ ಬಂದೀದ್ದದು…?”
“ಅವನ ಜಾಗೆಯ ಗಡಿ ತಕರಾರಿಂದೊಂದು ವಿಷಯ ವಕೀಲನತ್ರೆ ಕೇಳ್ಲೆ ಇತ್ತಿದ್ದಾಡ. ನಿನ್ನೆ ಅಂವ ದೊಡ್ಡ ಮಾವನಲ್ಲಿಗೆ ಹಲಸಿನಕಾಯಿ ಬೇಕು ಹೇದು ಹೋಗಿತ್ತಿದ್ದನಾಡ. ಇಂದು ಪೇಟೆಗೆ ಬಪ್ಪ ವಿಷಯ ಹೇಳಿಯಪ್ಪಗ ದೊಡ್ಡತ್ತೆ ಕೇಳಿತ್ತಾಡ, ಕಣಿಲೆ ಇದ್ದು, ಸುರಭಿಗೆ ಭಾರಿ ಪ್ರೀತಿಯ ವಸ್ತು, ತೆಕ್ಕೊಂಡೋಗಿ ಕೊಡುವಿರೋ ಹೇದು. ಹಾಂಗೆ ಅಜ್ಜನ ಮನೆಯ ಕಣಿಲೆ ಇಲ್ಲಿಗೆತ್ತಿತ್ತದ. ಮತ್ತೊಂದು ಸಂಗತಿ ಗೊಂತಿದ್ದೊ..? ಅವನ ಪುಳ್ಳಿ ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪ ಕೂಸು ಬೇರೆ ಜಾತಿಯವನ ಮದುವೆ ಆಯಿದಾಡ….ಅಜ್ಜ ಸಂಗತಿಯೆಲ್ಲ ಹೇಳಿ ತುಂಬ ಅಸಪಡ್ಕೊಂಡ…, ಎನಗೂದೆ ಛೆ…ಛೆ ಹೇಳಿ ಆತು ಮಗಳೋ….” ಹರಿಣಿ ಮಗಳ ಮೋರೆಯ ಸೂಕ್ಮ್ಷವಾಗಿ ಗಮನಿಸಿಯೊಂಡೇ ಹೇಳಿತ್ತು. ಮೊನ್ನೆ ಮೋರೆ ಪುಟಲ್ಲಿ ಆ ಮಾಣಿ ಸುರಭಿಯ ಬಗ್ಗೆ ಬರದ್ದರ ಓದಿದ ಲಾಗಾಯ್ತಿಂದ ಹರಿಣಿಯ ತಲೆಲಿ ಅದೊಂದೇ ವಿಷಯ ಕೆಜಳ್ತಾ ಇಪ್ಪದು. ಮಗಳತ್ರೆ ವಿಷಯವ ಹೇಂಗೆ ಎತ್ತುತ್ತದು ಹೇಳಿ ಅರಡಿಯದ್ದೆ ಕಾಲು ಸುಟ್ಟ ಪುಚ್ಚೆಯ ಹಾಂಗಾಗಿತ್ತಿದ್ದು ಅದರ ಸ್ಥಿತಿ. ಉದಿಯಪ್ಪಗ ಅದರ ಅಪ್ಪನ ಮನೆಯ ಆಚ ಕರೆಲಿಪ್ಪ ಕೇಚಪ್ಪಜ್ಜ ಬಂದು ಕಷ್ಟ ಸುಖ ಮಾತಾಡೇಂಡು ಪುಳ್ಳಿಯ ವಿಷಯ ಹೇಳಿ ಪೇಚಾಡಿಯೊಂಡಪ್ಪಗ ಹರಿಣಿಗೆ ಒಂದ್ಸತರ್ಿ ಎದೆ ಧಸಕ್ ಹೇಳಿದ್ದದಪ್ಪು. ಈಗಾಣ ಮಕ್ಕೋಗೆ ಹೇಳ್ತವು ಕೇಳ್ತವು ಆರೂ ಇಲ್ಲೆ ಹೇದೋ ಹೀಂಗೆಲ್ಲ ಮಾಡುತ್ಸು…ಹೇಳಿ ಅಂವ ಪರಂಚಿಯಪ್ಪಗ ಹರಿಣಿಗೂ ಅದು ಹಾಂಗಲ್ಲ, ಹೀಂಗೆ ಹೇಳುವ ಧೈರ್ಯ ಬಯಿಂದಿಲ್ಲೆ. ಅಂವ ಹೋದ ಮತ್ತೆಯೂ ಆ ವಿಷಯನ್ನೇ ಕವುಂಚಿ ಮೊಗಚ್ಚಿ ಹಾಕಿ ವಿಶ್ಲೇಷಣೆ ಮಾಡಿಯೊಂಡೇ ಇದ್ದತ್ತು. ಈಗ ಮಗಳು ಕಾಪಿ ಬೇಕು ಹೇದೊಂಡು ಒಳ ಬಂದಪ್ಪದ್ದೆ ಮೋರೆ ಪುಟದ ವಿಷಯ ಕೇಳಿಯೆ ಬಿಟ್ಟಿಕ್ಕುವೋಂ ಹೇಳ್ತ ಉದ್ದೇಶಂದಲೇ ಕೇಚಪ್ಪಜ್ಜನ ವಿಷಯ ತೆಗದ್ದದು.

“ಅದು ಬೇರೆ ಜಾತಿಯವನ ಮದುವೆಯಾದ್ರೆ ನಿನಗೆಂತ್ತಪ್ಪಾ ಅಷ್ಟು ತಲೆಬೆಶಿ….ಅದು ಅದರ ಜೀವನ…, ಅದಕ್ಕೆ ಬೇಕಾದ ಹಾಂಗೆ ಮಾಡಿಯೋಳ್ತಪ್ಪ....” ಸುರಭಿ ಗಣ್ಯವೇ ಇಲ್ಲದ್ದ ಹಾಂಗೆ ಹೇಳಿಯಪ್ಪಗ ಹರಿಣಿಗೆ ಇಷ್ಟ್ರವರೆಂಗೂ ಮಗಳತ್ರೆ ಬಾರದ್ದ ಕೋಪ ಉಕ್ಕಿ ಉಕ್ಕಿ ಬಂತದ.
“ಹೇಂ…? ಇದೆಂತ ಸುರೀ ನೀನು ಹೀಂಗೆ ಹೇಳ್ತದು?…? ಜೀವನ ನಿಂಗಳದ್ದಾದಿಕ್ಕು…ಅಂದ್ರೆ ನಿಂಗಳ ಮೇಲೆ ಜೀವ ಮಡುಗಿಯೊಂಡಿಪ್ಪದು ಎಂಗೋ ಅಲ್ದೋ…? ನಿಂಗೊ ಒಂದೊಂದು ಬೇಡಂಕೆಟ್ಟದು ಎಳದು ಹಾಕಿಯೋಂಡ್ರೆ ಎಂಗಳ ಗತಿ ಎಂತಾಯೇಕು ಹೇಳಿ ನಿಂಗೊ ಆಲೋಚನೆ ಮಾಡೇಕೋ ಬೇಡದೋ…?”

“ಅಯ್ಯೋ ಅಬ್ಬೇ…ಆರದ್ದೋ ಪುಳ್ಳಿ ಎಂತದೋ ಮಾಡಿತ್ತಾಡ ಹೇಳಿ ನೀನೆಂತಕೆ ಅದರ ಅಷ್ಟು ವೈಯ್ಯಕ್ತಿಕವಾಗಿ ತೆಕ್ಕೋಳ್ತೆ…?”

“ಇದ ಮಗಳೋ…,ಆನು ಹೀಂಗೆ ಕೇಳ್ತದು ಎಂತೆಕೆ ಜಾನ್ಸೇಡ…ಆ ಮೋರೆ ಪುಟಲ್ಲಿ ನೀನೆಂತಕೆ ಏನು ತಾನು ಗೊಂತಿಲ್ಲದ್ದ ಒಂದು ಹುಡುಗನೊಟ್ಟಿಂಗೆ ಆ ನಮುನೆ ಮಾತಾಡ್ತದು…? ಅದೆಲ್ಲ ಸಭ್ಯತೆ ಅಲ್ಲ ಗೊಂತಾತೋ…? ನಾವು ನಮ್ಮ ಘನಸ್ತಿಕೆಲಿ ಇರೇಕು…”

ಹರಿಣಿ ಇಷ್ಟು ಹೇಳಿಯಪ್ಪದ್ದೆ ಸುರಭಿಯ ಪಿತ್ತ ನೆತ್ತಿಗೇರಿತ್ತಯ್ಯ… “ಇದಾ ಅಬ್ಬೇ…,ಆನು ಈಗಳೇ ಹೇಳ್ತೆ…ಎನ್ನ ವೈಯಕ್ತಿಕ ವಿಷಯಕ್ಕೆ ಆರೂ ತಲೆ ಹಾಕಲೆ ಬರೇಡಿ ಗೊಂತಾತಾ…?ಆನೀಗ ಕುಂಞಿ ಕೂಸಲ್ಲ…ಹದಿನೆಂಟು ವರ್ಷ ಪ್ರಾಯ ಆತು. ಓಟು ಹಾಕುವ ಹಕ್ಕು ಬಯಿಂದು ಎನಗೆ….,ಎಂತ ಮಾಡೇಕು,ಎಂತ ಮಾಡ್ಲಾಗ ಹೇಳ್ತದ್ರ ನೀನು ಹೇಳಿ ಕೊಟ್ಟಾಗೇಡ ಎನಗೆ…,ಅಂದಿಂದಲೇ ನಿನಗೆ ಬೇಕಾದ ಹಾಂಗೆ ಎನ್ನ ಕೊಣುಶಿ ಕೊಣುಶಿ ಅದೇ ಅಭ್ಯಾಸ ಆಯಿದು ನಿನಗೆ…,ಇನ್ನೂ ಇನ್ನೂ ನೀನು ಹೇಳಿದ ಹಾಂಗೆ ಕೊಣಿವಲೆ ಆನು ನಿನ್ನ ಕೈಗೊಂಬೆ ಅಲ್ಲ ಗೊಂತಾತೋ…?ಎನಗೆ ಸಾವಿರಾರು ಅಭಿಮಾನಿಗೊ ಇದ್ದವು…,ಒಬ್ಬೊಬ್ಬ ಒಂದೊಂದು ರೀತಿಲಿ ಅವರ ಮೆಚ್ಚುಗೆಯ ವ್ಯಕ್ತಪಡ್ಸುತ್ತವು…ಅದರಲ್ಲಿ ಅಷ್ಟೆಲ್ಲ ಅಪಾರ್ಥ ಮಾಡ್ಲೆ ಎಂತ ಇದ್ದು…? ಮದಾಲು ಲೋಕ ಹೇಳಿದ್ರೆ ಎಂತರ ಹೇಳ್ತದ್ರ ನೀನು ಗೊಂತು ಮಾಡಿಗೋ…ಮತ್ತೆ ಎನಗೆ ಉಪದೇಶ ಕೊಡ್ಲೆ ಬಾ…ಒಟ್ಟಾರೆ ಈ ಮನೆಲಿ ಎನಗೆ ಯೇವದಕ್ಕೂ ಸ್ವಾತಂತ್ರ್ಯವೇ ಇಲ್ಲೆ…” ಹೇಳಿಯೊಂಡು ಹೇಳಿಯೊಂಡೇ ಕೂಗಿಯೊಂಡು ಸೀತಾ ಅದರ ಕೋಣೆಗೆ ಓಡಿ ಹೋತು ಸುರಭಿ.

ಮಗಳ ಮಾತುಗಳ ಕೇಳಿ ಹರಿಣಿಗೆ ಅದರ ಪಂಚೇಂದ್ರಿಯಂಗಳೂ ಒಂದಾರಿಯಂಗೆ ಕೆಲಸವೇ ನಿಲ್ಸಿ ಬಿಟ್ಟತ್ತೋ ಹೇಳ್ತ ಸಂಶಯ ಬಂತು. ಕಣ್ಣೆದುರು ಪೂತರ್ಿ ಕಸ್ತಲೆ…,ಕೆಮಿಯೇ ಇಲ್ಲೆ ಹೇಳ್ತ ಹಾಂಗೆ ಮೌನದ ರಾಶಿ…,ಮನಸ್ಸಿಲ್ಲಿ ಒಂದೇ ಒಂದು ಯೋಚನೆಯೂ ಹೊಗ್ಗಲೆ ಸಾಧ್ಯವೇ ಇಲ್ಲೆ ಹೇಳ್ತಾಂಗಿರ್ತ ಸ್ಥಬ್ಧತೆ….ಗೊಂಬೆಯ ಹಾಂಗೆ ಹಂದಾಡದ್ದೇ ಕುತ್ತ ನಿಂದೊಂಡೇ ಎಷ್ಟು ಹೊತ್ತು ಕಳುದತ್ತೋ…? ಎಂತೋ ಕರಂಚಿದ ಘಾಟು ವಾಸನೆ ಮೂಗಿಂಗೆ ಬಡಿದಪ್ಪಗಳೇ ಅದು ಇಹಲೋಕಕ್ಕೆ ಬಂದದು. ಗ್ಯಾಸ್ ಒಲೆಯ ಎದುರೇ ನಿಂದೊಂಡು ಮಗಳಿಂಗೆ ಕಾಪಿ ಮಾಡ್ಲೆ ಹೇದು ಹಾಲು ಕೊದಿವಲೆ ಮಡುಗಿದ್ದದು ಕೊದುದು ಕೊದುದು ಬತ್ತಿ ಹೋಗಿ ಪಾತ್ರ ಅಡಿ ಹಿಡಿದು, ಕರಂಚಿದ ಆ ವಾಸನೆಯೇ ಹರಿಣಿಯ ಎಚ್ಚಸರ್ಿದ್ದದು. ಸುತ್ತಲೂ ನೋಡಿತ್ತು…,ಮನೆ ಪೂತರ್ಿ ಮೌನಲ್ಲಿದ್ದು. ಹಾಂಗಾರೆ ರಜಾ ಮದಲು ಆದ ಘಟನೆ ಎನ್ನ ಭ್ರಮೆ ಆದಿಕ್ಕೋ…? ಅಥವಾ ಒಂದೊಂದಾರಿ ಮಧ್ಯಾಹ್ನ ಕೂದಲ್ಲೇ ಒರಗುತ್ತ ಕ್ರಮ ಇದ್ದು. ಅಂಬಗ ಎಂತೆಂತೋ ಅಸಂಬದ್ಧ ಕನಸು ಬೀಳ್ತ ಕ್ರಮವೂ ಇದ್ದು…,ಇದೂ ಹಾಂಗೇ ಆದಿಕ್ಕೋ…? (ಬೈಲಿನ ನೆಂಟ್ರೇ, ಹೆತ್ತಬ್ಬೆಯ ಮನಸ್ಥಿತಿ ನೋಡಿದಿರೋ…? ಯಾವುದೇ ಕಾರಣಕ್ಕೂ ಸ್ವಂತ ಮಕ್ಕಳ ತಪ್ಪಿನ ಸ್ವೀಕರ್ಸಲೆ ಮನಸ್ಸು ಒಪ್ಪುತ್ತಿಲ್ಲೆ…ಅಸ್ವೀಕಾರ ಮನೋಭಾವದ ಸಮರ್ಥನೆಗೆ ಎಂತೆಂತ ಕಾರಣವ ಮನಸ್ಸು ಹುಡ್ಕುತ್ತು ನೋಡಿ…) ಅಂದರೆ ಘಟನೆ ನೆಡದ್ದದು ಅಪ್ಪು ಹೇಳ್ತದಕ್ಕೆ ಸಾಕ್ಷಿಯಾಗಿ ಎದುರು ಕಾಪಿಗೆ ಮಡುಗಿದ ಹಾಲಿನ ಪಾತ್ರ ಇದ್ದಲ್ದೋ…? ಹೊತ್ತು ಮಧ್ಯಾಹ್ನವೂ ಅಲ್ಲ. (ಆನು ನಿಂಗಳತ್ರೆ ಅಂದೇ ಹೇಳಿದ ಹಾಂಗೆ ಹರಿಣಿ ಅಷ್ಟು ಸುಲಭಲ್ಲಿ ಸೋಲೊಪ್ಪಿಯೋಂಬ ಹೆಮ್ಮಕ್ಕಳೂ ಅಲ್ಲ, ಮನಸ್ಸು ಹದ ತಪ್ಪಿತ್ತು ಹೇಳಿ ಅದರ ಮಾತಿಲ್ಲಿ ತೋಸರ್ುತ್ತ ಜೆನವೂ ಅಲ್ಲ.) ಮೌನವಾಗಿಯೇ ಅಡಿಗೆ ಕೋಣೆಯ ಒತ್ತರೆ ಮಾಡಿಕ್ಕಿ ಕಂಪ್ಯೂಟರು ತೆಗದತ್ತು. ಮಗಳ ಮೋರೆ ಪುಟ ತೆಗೆವಲೆ ನೋಡಿತ್ತು. ಊಹೂಂ…ಹಾಂಗಿದ್ದ ಕೂಸೇ ಇಲ್ಲೆ ಹೇದು ಬಂತು! ಸ್ವಂತದ ಪುಟ ತೆಗದು ಮೇಲೆ ಮಗಳ ಹೆಸರು ಹಾಕಿ `ಹುಡ್ಕಿ ಕೊಡು’ ಹೇಳಿ ಹಾಕಿತ್ತು. ಫಲಿತಾಂಶ ಸೊನ್ನೆ. ತನ್ನ ಸ್ನೇಹಿತರ ಪಟ್ಟಿ ತೆಗದತ್ತು. ಅಲ್ಲಿ ಸುರಭಿ ಇತ್ತಿದ್ದೇ ಇಲ್ಲೆ! ಓ..ಹೋ..ಈಗ ಹರಿಣಿಗೆ ಅಂದಾಜಾತು, ಮಗಳು ಅದರ ಜಾಲಿಂದ ಅಬ್ಬೆಯ ಹೆರಕ್ಕೆ ಅಟ್ಟಿದ್ದು(Block ಮಾಡಿದ್ದದು)…ಅಥವಾ ಅಬ್ಬೆಯ ಸ್ನೇಹಿತರ ಪಟ್ಟಿಂದ ತನ್ನ ಹೆಸರಿನ ಅಳಿಶಿ ಹಾಕಿಯೋ ಬೇರೇ ಹೆಸರಿಲ್ಲಿ ಪುಟ ಮೊಗಚ್ಚಿಯೋ ಎಂತೋ ಮಾಡಿದ್ದು ಹೇಳಿ.

ಕಂಪ್ಯೂಟರು ಮುಚ್ಚಿ ಹರಿಣಿ ಸ್ವಸ್ಥ ಕೂದತ್ತು. ಮನಸ್ಸು ಸಾವಿರ ಸಾವಿರ ಪ್ರಶ್ನೆಗಳ ಸುತ್ತಿ ಸುತ್ತಿ ಹರಿಣಿಯ ಮೋರೆಗೆ ಇಡ್ಕಲೆ ಸುರುಮಾಡಿತ್ತು.

`ಅಲ್ಲಾ…,ಅಂಬಾಗ ಹೆತ್ತಬ್ಬೆಗೆ ಒಂದೆರಡು ಒಳ್ಳೆ ಮಾತು ಹೇಳ್ತ ಅಧಿಕಾರವೂ ಇಲ್ಲ್ಯೋ…? ತೀರ್ಥ ಕುಡುದ್ರೆ ಶೀತ ಆಗಿ ಹೋಕು…ಮಂಗಳಾರತಿ ತೆಕ್ಕೋಂಡ್ರೆ ಉಷ್ಣ ಆಗಿ ಹೋಕು ಹೇಳ್ತಾಂಗೆ ಮುಚ್ಚಟೆ ಮಾಡಿ ಬೆಳಶಿದ್ದದಕ್ಕೆ ಅದರ ಬಾಯಿಂದ ಇಂದು ಬಂದ ಮಾತು ಎಂತರ…`ಈ ಮನೇಲಿ ಸ್ವಾತಂತ್ರ್ಯವೇ ಇಲ್ಲೇ’ ಹೇದು…ಒಂದು ದಿನ ಆದ್ರೂ ಅದರ ಮನಸ್ಸಿಂಗೆ ಬೇಜಾರು ಆವುತ್ತ ಹಾಂಗೆ ಆನಾಗಲೀ ಇವು ಆಗಲೀ ನೆಡಕ್ಕೋಂಡದು ಇದ್ದೋ…? ಬೇರೆಲ್ಲ ಬಿಡಿ…ಅದಕ್ಕೆ ಎನ್ನ ಅಪ್ಪನ ಮನೆಯ ಹಳೇ ಕ್ರಮ ಸರಿ ಹೋವುತ್ತಿಲ್ಲೆ ಹೇದೇ ಆನು ಅಲ್ಲಿಗೆ ಹೋಪದೇ ತುಂಬ ಕಮ್ಮಿ.

ಅಂದು ಆಣ್ಣನ ಮಗಳ ಮದುವೆ ನಿಶ್ಚಯ ಆದಪ್ಪದ್ದೆ ಒಡಹುಟ್ಟುಗೊ ಎಷ್ಟು ಒತ್ತಾಯ ಮಾಡಿತ್ತಿದ್ದವು,`ನಾಕು ದಿನಕ್ಕೆ ಮದಲೇ ಬಾ ಪುಟ್ಟಕ್ಕೋ….,ಅಷ್ಟು ದಿನ ಆದ್ರೂ ಎಲ್ಲೋರೂ ಒಟ್ಟಿಂಗೆ ಇಪ್ಪೋಂ…’ಹೇಳಿ. ಇವೂದೇ ಹೋವುತ್ತರೆ ಹೋಗು ಹೇಳಿತ್ತಿದ್ದವು. ಇಡೀ ಸಂಸಾರ ಒಟ್ಟು ಸೇರ್ತದು ಹೇಳಿರೆ ಜೆನಂಗೊ ಜಿಮಿಗುಟ್ಟುತ್ತದು ಅಲ್ದೋ ಹೇಳಿ…? ಒಂದೇ ಬೆಶಿನೀರ ಕೊಟ್ಟಗೆ, ಒಂದೇ ಪಾಯಿಖಾನೆ, ನೆಲಕ್ಕಲ್ಲಿ ಕೂದೊಂಡು ಉಣ್ತದು…ಹೀಂಗೆಲ್ಲ ಹಲವು ವಿಷಯಂಗೋ ಸುರಭಿಗೆ ಇಷ್ಟ ಆಗದ್ದದು ಇಪ್ಪಾಗ ಅಲ್ಲಿಗೆ ಹೋಗಿ ಅದಕ್ಕೆ ಬೊಡಿಯಪ್ಪು ಆವುತ್ತದು ಬೇಡ ಹೇದೇ ಅಲ್ಲದೋ ಎಷ್ಟೇ ಆಶೆ ಆದ್ರೂ ಅಲ್ಲಿಗೆ ಮದಲೇ ಹೋಗದ್ದೆ ಮದುವೆಗೇ ಸೀತಾ ಹೋದ್ದದು, ಪುನಃ ಇಲ್ಲಿಗೇ ಬಂದು ಮರುದಿನ ಸಟ್ಟುಮುಡಿಗೂ ಇಲ್ಲಿಂದಲೇ ಹೋದ್ದದು…ಸುರಭಿ ಹುಟ್ಟಿದ ಲಾಗಾಯ್ತು ಆನು ಗೆಂಡಂಗೆ ಪ್ರಾಮುಖ್ಯತೆ ಕೊಟ್ಟದು ಇಂತಿಷ್ಟೇ ಹೇಳಿ ಇದ್ದು…,ಇವಕ್ಕೂ ಅದರಲ್ಲಿ ಎಂತ ತಪ್ಪೂ ಕಂಡಿದಿಲ್ಲೆ ಹೇಳುವೋಂ….,ಇವಕ್ಕೆ ಬ್ಯಾಂಕಿನ ಕೆಲಸ ಹೇಳೀರೆ ಎಲ್ಲೆಲ್ಲಿಗೋ ವರ್ಗ ಆವುತ್ತಾ ಇರ್ತದಲ್ದೋ…? ಸುರಭಿ ಬಂದ ಮತ್ತೆ ಒಂದೇ ಒಂದು ಜಾಗೆಗೂ ಆನು ಇವರೊಟ್ಟಿಂಗೆ ಹೋವುತ್ತ ಮನಸ್ಸೇ ಮಾಡಿತ್ತಿದ್ದಿಲ್ಲೆ….,ಮಗಳ ಕಲಿವಿಕೆ ಹಾಳಾವುತ್ತು, ಅದರ ಭವಿಷ್ಯ ರೂಪ್ಸೇಕಾದ ಜವಾಬ್ದಾರಿ ಎನ್ನ ಮೇಗೆ ಇದ್ದು ಹೇದೇ ಅಲ್ದೋ ಆನು ಹಾಂಗೆ ಮಾಡಿದ್ದದು…? ಪಾಪ…ಇವು ಒಂದು ದಿನವೂ ಆ ಬಗ್ಗೆ ಕಮ್ಕ್ ಕಿಮ್ಕ್ ಹೇಳಿದ ಜೆನ ಅಲ್ಲ. ಅಡಿಗೆ, ಊಟ, ಉಪಚಾರ ಎಲ್ಲ ಅವರಷ್ಟಕೇ ಎಂತೆಂತದೊ ಮಾಡಿಯೊಂಡಿತ್ತಿದ್ದವು….,ಹಸಿಯಾದ್ರೆ ಹಸಿ…ಅರೆಬೆಂದಾದ್ರೆ ಅರೆಬೆಂದದು….ಅದೂದೆ ಮಾಡ್ಲೆ ಪುರುಸೊತ್ತೋ ಮನಸ್ಸೋ ಇಲ್ಲದ್ರೆ ಹೋಟ್ಲಿನ ಊಟ…ಹೀಂಗೆಲ್ಲ ಆಗಿಯೇ ಅಲ್ದೋ ಅವಕ್ಕೆ ವರ್ಷ ನಲುವತ್ತೈದು ಅಪ್ಪಾಗಳೇ ಬಿ.ಪಿ., ಶುಗರು ಎರಡೂ ಬಂದದು…,ಒಂದಾರಿ ಆ ರೋಗ ನಮ್ಮೊಳಾಂಗೆ ಕಾಲು ಮಡಗಿತ್ತೋ ಮತ್ತೆ ಅದರಿಂದ ಬಿಡುಗಡೆ ಇದ್ದೋ ಹೇಳಿ…?ಅದಕ್ಕೆ ಇನ್ನೂ ಎಂತೆತದೋ ರೋಗಂಗೊ ಕೂಡಿಯೊಂಡೇ ಹೋಪದು…,ಇವಕ್ಕೂ ಆದ್ದದು ಅದುವೇ…ಮಾತ್ರೆಗಳ ತಿಂಬಾಗ ಎದೆ ಉರಿ, ಹೊಟ್ಟೆ ಉರಿ, ಅದರ ಡೋಸು ಕಡಮ್ಮೆ ಮಾಡಿತ್ತೋ ಬಿ.ಪಿ. ಆಕಾಶಕ್ಕೇರ್ತು. ಸುಮಾರು ವರ್ಷ ಹಿಂದೆಯೇ ದಾಕುದಾರ ಹೇಳಿತ್ತಿದ್ದ…,`ನಿಮ್ಮ ಗಂಡನ ಮೈಯೊಳಗೆ ಸಕ್ಕರೆ ಕಾಖರ್ಾನೆಯೇ ಇದೆ ಅಮ್ಮಾ..’ ಹೇದು. ಅಂದರೂ ಇವು ಎನ್ನ ಬಗ್ಗೆಯಾಗಲೀ ಮಗಳ ಬಗ್ಗೆಯಾಗಲೀ ಒಂದೇ ಒಂದು ಸತರ್ಿಯೂ ಸುಡುಂಪಿದ್ದದು ಇಲ್ಲೆ…ಮಗಳು ಒಳ್ಳೇದಾಗಿ ದೊಡ್ಡದಾಗಲಿಯಪ್ಪಾ ಹೇಳ್ತದೇ ಅವರ ಉದ್ದೇಶವೂ ಆಗಿತ್ತಿದ್ದಲ್ದೋ…? ಎನಗೂದೆ ಹಾಂಗೆ…, ಜೀವಂದ ಹೆಚ್ಚಿಗೆ ಪ್ರೀತಿ ಮಾಡ್ತ ಗೆಂಡನ ನೋಡದ್ದೆ, ಮಾತಾಡದ್ದೆ ತಿಂಗಳು ಕಟ್ಲೆ ಇರೇಕು ಹೇದರೆ ಅದೆಂತಾ ಹಿಂಸೆಯಾಗಿತ್ತಿದ್ದು? ಸಾಲದ್ದಕ್ಕೆ ಆಚೀಚ ಮನೆಯವು, ಊರವು ಎಲ್ಲ ಎನ್ನದೇ ಎಂತೋ ತಪ್ಪು ಇಕ್ಕು, ಹಾಂಗಾಗಿಯೇ ಆನು ಗೆಂಡನೊಟ್ಟಿಂಗೆ ಹೋಗದ್ದದು ಹೇಳ್ತ ರೀತೀಲಿ ಹಿಂದಂದ ಟೀಕೆ ಮಾಡಿಯೊಂಡಿತ್ತಿದ್ದದ್ರ ಆನು ಗಣ್ಯ ಮಾಡಿದ್ದನೋ…? ಒಂಟಿ ಹೆಮ್ಮಕ್ಕೊ ಮಾಂತ್ರ ಇಪ್ಪದು ಹೇಳುವಾಗ ಅದಕ್ಕೆ ಹೇದೇ ಕಾದು ಕೂರ್ತ ಗೆಂಡು ಮಕ್ಕಳೂ ಇರ್ತವನ್ನೇ…ಅದರೆಲ್ಲ ಆನು ಎದುರಿಸಿದ ಬಗೆ…ಅದೂ ಇವಕ್ಕೆ ಗೊಂತಪ್ಪಲಾಗ ಹೇದು….(ಇವಕ್ಕೆ ಹಾಂಗಿತರ್ೆಲ್ಲ ಗೊಂತಾದ್ರೆ ಕೆಲಸ ಬಿಟ್ಟೇ ಮನೆಲಿ ಕೂರುಗು, ಅಷ್ಟೂದೆ ಮಯರ್ಾದೆಗೆ ಬೆಲೆ ಕೊಡ್ತ ಜೆನ)) ಆನು ಪೇಚಾಡಿದ್ದದು…ಹೆರಿಗೆಯ ನಂತ್ರ ಎನಗೊಂದು ಸೊಂಟಬೇನೆ ಖಾಯಾಂ ಆತಿದ…ಒಂದೊಂದಾರಿಯಂತೂ ಒಂದಿಂಚೂ ಹಂದ್ಲೆ ಎಡಿಯದ್ದಂತಾ ಯಮ ಯಾತನೆ…ಅಂದ್ರೂ ಕೂಡಾ ಸುರಭಿಯ ಕೈಂದ ಕೆಳ ಮಡುಗದ್ದೇ ಕೈಕುಂಞಿಯಾಗಿಯೇ ಸಾಂಕಿದ್ದದು…ಗರ್ಭಕೋಶ ತೆಗೇಕು ಹೇದು ದಾಕುದಾರಕ್ಕೋ ಹೇದಪ್ಪಗ ಎನಗೆ ಜೀವ ಹಾರಿದ್ದದು ಚಿಕಿತ್ಸೆಯ ಹೆದರಿಕೆಗೆ ಅಲ್ಲ…ಸುರಭಿಯ ಆರು ನೋಡಿಯೋಳ್ತದು ಹೇಳಿ…,ಎನ್ನ ಅಬ್ಬೆ ಬಂದು ಎನ್ನೊಟ್ಟಿಂಗೆ ನಿಂದಿದ್ರೂ ಇವು ಎರಡು ತಿಂಗಳು ರಜೆ ಹಾಕಿ ಕಣ್ಣಿಂಗೆ ಎಣ್ಣೆ ಹಾಕಿ ಸುರಭಿಯ ನೋಡಿಯೋಂಡದಲ್ದೊ…? ಮುಂದೆ ಅವಕ್ಕೆ ಒಂದು ಕಣ್ಣಿನ ಓಪ್ರೇಶನು ಆಯೇಕಾಗಿ ಬಂದಪ್ಪಗ ರಜೆಯೇ ಸಿಕ್ಕದ್ದೆ ಅದಕ್ಕೆ ಬೇಕಾಗಿ ಅವು ಬಂದ ಕಷ್ಟ…ಹೀಂಗಿರ್ತ ವಿಷಯಂಗೋ ಒಂದೋ ಎರಡೋ ಅಲ್ಲ…,ಎನ್ನ ಸಂಸಾರ ಹೇದರೆ ಬರೇ ಹೀಂಗಿರ್ತ ಜಂಜಾಟಂಗಳೇ…ಅಂದರೆ ಎಂಗೊ ಇಬ್ರೂ ಎಲ್ಲವನ್ನೂ ನುಂಗಿಯೊಂಡು ಸಂತೋಷಲ್ಲೇ ಇದ್ದೆಯೋಂ ಹೇಳ್ತ ಭಾವನೇಲೇ ಇತ್ತಿದ್ಯೋಂ….ಎಂತಕೆ ಹೇದರೆ ಎಂಗಳ ಜೀವನಲ್ಲಿ ಸುರಭಿಯ ಪ್ರವೇಶ ಆತು. ಎಂಗಳ ಪ್ರತಿ ರೋಮದ ಕಣ ಕಣವೂ, ಉಸಿರಿನ ಪ್ರತಿ ತಿದಿಯೂ ಸುರಭಿಗಾಗಿಯೇ ಇಪ್ಪದು ಹೇಳ್ತ ತಿಳುವಳಿಕೆ ಎಂಗಳದ್ದು…, ಅಂದರೆ ಇಂದು ಅದು ಹೇಳಿದ್ದದು ಎಂತರ…`ಎನ್ನ ವೈಯಕ್ತಿಕ ವಿಷಯ…’ ಹೇಳಿ ಹೇಳಿತ್ತನ್ನೇ…? ಅಂಬಗ ಎಂಗಳ ವೈಯಕ್ತಿಕ ಬದುಕಿನ ಬಲಿ ಕೊಟ್ಟದು ಆರಿಂಗೆ ಬೇಕಾಗಿ…ಎಂತಕೆ ಬೇಕಾಗಿ…??? ಫಲಾಫಲದ ನಿರೀಕ್ಷೆಯಿಲ್ಲದ್ದೆ ಕರ್ತವ್ಯ ಮಾಡ್ತಾ ಇರೇಕು ಹೇಳ್ತದೆಲ್ಲ ಸರಿಯೇ. ಎಂಗೊಗೆ ಮಗಳಿಂದಾಗಿ ಅದು ಸಿಕ್ಕೇಕು, ಇದು ಸಿಕ್ಕೇಕು ಹೇಳ್ತ ನಿರೀಕ್ಷೆ ಖಂಡಿತಕ್ಕೂ ಇಲ್ಲೆ. ಎಂಗೋಗೆ ದೇವರು ಕೊಟ್ಟ ಬದ್ಕೇ ಬೇಕಾಷ್ಟು ಇದ್ದು…,ಇನ್ನು ಎಂಗಳ ಮುದಿ ಪ್ರಾಯಲ್ಲಿ ಅದು ಬಂದು ಎಂಗಳ ಚಾಕ್ರಿ ಮಾಡೇಕು ಹೇಳ್ತ ಆಶೆಯೂ ಎಂಗೊಗಿಲ್ಲೆ. ಅಂದರೆ ಸ್ವಂತ ಮಗಳು ಎನ್ನತ್ರೆ ಪ್ರೀತಿಲಿ ಮಾತಾಡೇಕು ಹೇಳಿ ನಿರೀಕ್ಷೆ ಮಾಡ್ತದೂ ತಪ್ಪಾವುತ್ತೋ? ಅದು ಎಂತ ಬೇಡಂಕೆಟ್ಟದೂ ಮಾಡ ಹೇಳತ್ತ ಧೈರ್ಯ ಎನಗಿದ್ದು. ಅಂದರೂ ಆನು ಅಷ್ಟು

ಮಂಡೆ ಬೆಶಿ ಮಾಡಿಯೊಂಡು ಕೇಳುವಾಗ `ಹಾಂಗೆಂತೂ ಇಲ್ಲೆಬ್ಬೆ…ಆನು ಹಾಂಗೆಲ್ಲ ಮಾಡ್ತೋಳಲ್ಲ…ನೀನೆಂತ ತಲೆಬೆಶಿ ಮಾಡೇಡ….’ ಹೇಳಿ ಸಮಾಧಾನಕೆ ಹೇಳ್ಲಾವುತಿತನ್ನೆ….? ಈ ರೀತಿಯ ನಡವಳಿಕೆಯ ಹಿಂದಾಣ ಕಾರಣಾದ್ರೂ ಎಂತಾದಿಕ್ಕು…? ಎನ್ನದೇ ಎಂತಾರು ತಪ್ಪಿದ್ದೋ ಕಡೇಂಗೆ…?”

ಹರಿಣಿಯ ತಲೆ ಹುಳುವಾದ ಉಪ್ಪಿನ ಕಾಯಿಯ ಹಾಂಗಾಗಿ ಹೋತು. ಅದರ ಕಣ್ಣಿಂದ ನಿಧಾನಕೆ ದಪ್ಪ ದಪ್ಪ ಹನಿ ಉದುರ್ಲೆ ಸುರುವಾತು. ಅದರ ತಡೆತ್ತದು ಆರು..? ಹೇಂಗೆ…?ಒಂದೋ ಮೋಹನ ಬರೇಕು…,ಅಂವ ಆಪೀಸಿನ ಕೆಲಸಕ್ಕೆ ಹೇದು ದೂರದ ಊರಿಂಗೆ ಹೋಯಿದ. ಬಪ್ಪಾಗ ಎರಡು ದಿನ ಕಳಿಗು. ಅಲ್ಲದ್ರೆ ಸುರಭಿ ಬಂದು ಅಬ್ಬೆಯ ಸಮಾಧಾನ ಮಾಡೇಕಾತು…ಅದು ಕೋಣೆಯೊಳ ಅದರದ್ದೇ ಲೋಕಲ್ಲಿ ತಿರುಗಾಟ ಮಾಡ್ತಾ ಇದ್ದು. ಅಂದರೆ ಹರಿಣಿಯ ಕಣ್ಣೀರು ಭೂಮಿಗೆ ಬಿದ್ದು ಇಂಗಿ ಹೋಪ ಬದಲು ಒಂದು ಚಿಪ್ಪಿಯೊಳಾಂಗೆ ಬಿದ್ದತ್ತು. ಅದು ಸ್ವಾತಿ ಮುತ್ತು ಆಗಿ ಹೋತು. ಸ್ವಾತಿ ನಕ್ಷತ್ರದ ದಿನ ಚಿಪ್ಪಿಯೊಳಾಂಗೆ ಅಕಸ್ಮಾತ್ತಾಗಿ ಬಿದ್ದ ನೀರ ಹನಿ ಫಳ ಫಳ ಮುತ್ತಾಗಿ ಬದಲಾಯೇಕಾರೆ ಅಲ್ಲಿ ಎಷ್ಟೆಷ್ಟೋ ಕ್ರಿಯೆಗೊ ಎಷ್ಟೋ ದಿನ, ತಿಂಗಳು, ವರ್ಷಂಗಳ ಕಾಲ ಆದ ಮತ್ತೆಯೇ ಅನಘ್ರ್ಯ ಸ್ವಾತಿ ಮುತ್ತು ಅಪ್ಪದಲ್ದೋ…?

ಹಾಂಗೇ ಹರಿಣಿಯ ಕಣ್ಣೀರು ಪಾಕ ಬಂದು ಹರಳುಕಟ್ಟಿ ಅಮೂಲ್ಯವಾದ ಮುತ್ತಾಗಿ ಬೆಳಗಲೆ ರಜ್ಜ ಸಮಯ ತೆಕ್ಕೊಂಡತ್ತು…,
ಬೇನೆಯೇ ಹೆಪ್ಪುಗಟ್ಟಿ ಕೆಪ್ಪಟೆಂದ ಜಾರಿದ ಆ ಕಣ್ಣೀರು ಯಾವ ಚಿಪ್ಪಯೊಳಾಂಗೆ ಬಿದ್ದತ್ತು…?
ಅದರೊಳ ನಡೆದಂತಹ ಕ್ರಿಯೆಗೊ ಎಂತರ…?
ಮುಂದೆ ನೋಡುವೋಂ.

 

(ಇನ್ನೂ ಇದ್ದು)

 

6 thoughts on “ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-5)

  1. ಕಥೆ ತುಂಬಾ ಇಂಟೆರೆಸ್ಟಿಂಗ್ಲಿ ಇದ್ದು.

  2. ಏನೋ ಒಂದು ಒಳ್ಳೆದಿದ್ದು ,ನೋಡುವೊ

  3. ಟ್ರೈನು ಟ್ರೇಕು ತಪ್ಪುತ್ತ ಹಾಂಗೆ ಕಾಂಬಗ, ಕಡೆಂಗೆ ಅದೆಂತದೊ ಒಳ್ಳೆಯ ಬೆಣಂಚು ಕಂಡ ಹಾಂಗಾತು. ಮುಂದೆ ನೋಡುವೊ.
    ಧಾರಾವಾಹಿ ಕತೆ ಒಳ್ಳೆ ಆಸಕ್ತಿ ಹುಟ್ಟುಸಿ ಮುಂದುವರಿತ್ತಾ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×