ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9)

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ
ಭಾಗ 7 : ಸಂಕೊಲೆ
ಭಾಗ 8 : ಸಂಕೊಲೆ

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9)

ಮೋಹನ ಮೊದಲೇ ಮಿತಭಾಷಿ. ಈಗಂತೂ ತೀರಾ ಮೌನಿಯೇ ಆಗಿ ಹೋದಂ. ಅಂದು ಹರಿಣಿ ಮಗಳ ಮದುವೆ ವಿಷಯವ ಹೇಳಿಯಪ್ಪಗ ಮೋಹನ ಸಾವಕಾಶಕ್ಕೆ ಎಲ್ಲ ಮಾತುಗಳನ್ನೂ ಕೇಳಿಕ್ಕಿ ಹೇಳಿದ್ದದು ಒಂದೇ ವಾಕ್ಯ,

“ಹರಿಣಿ…,ನಿನಗೆ ಆನು, ಎನಗೆ ನೀನು….ಇದು ಸತ್ಯ ಅಪ್ಪೋ ಅಲ್ದೋ? ಒಳುದ್ದದೆಲ್ಲ ಬರೀ ಮಿಥ್ಯೆ ಹೇಳಿ ತಿಳ್ಕೋ….”

ಗೆಂಡನತ್ರೆ ಹೇಂಗಪ್ಪಾ ವಿಷಯವ ಸುರು ಮಾಡ್ತದು…? ಅವನ ಪ್ರತಿಕ್ರಿಯೆ ಹೇಂಗಿಕ್ಕೇನೋ…?ವಾಕಿಂಗು ಹೋಪೋಂ ಹೇಳಿ ಅವನ ಹೆರಡ್ಸಿದ್ದದಪ್ಪು…ವಿಷಯ ಕೇಳಿದ ಆಘಾತಲ್ಲಿ ಅವಂಗೆ ವಾಪಾಸು ಬಪ್ಪಲೆಡಿಯದಿದ್ರೆ…? ಹೀಂಗಿದ್ದ ಯೋಚನೆಗಳ ಭಾರಲ್ಲಿ ಹರಿಣಿಯ ತಲೆ ಹೂಡಿ ಹಾಕಿದ ಗೆದ್ದೆಯ ಹಾಂಗೆ ಆಗಿತ್ತಿದ್ದು. ಅಂದರೆ ಅದರ ನೀರೀಕ್ಷೆಗೆ ವಿರುದ್ಧವಾಗಿ ಇತ್ತಿದ್ದು ಮೋಹನನ ಪ್ರತಿಕ್ರಿಯೆ! ಮನುಷ್ಯನ ಮನಸ್ಸಿನೊಳ ಅತಿಯಾದ ಒತ್ತಡ ಉಂಟಾಗಿಯಪ್ಪಗ ಅದು ಒಂದೋ ಮಾತಿನ ರೂಪಲ್ಲಿ ಇಲ್ಲದ್ರೆ ಕಣ್ಣೀರಿನ ರೂಪಲ್ಲಿ ಹೆರಾಂಗೆ ಬರೇಕು. ಇದೆರಡೂ ಆಗದ್ರೆ ಎಂತಕ್ಕು? ಅಣೆಕಟ್ಟಿಲ್ಲಿ ಲೆಕ್ಕಂದ ಹೆಚ್ಚು ನೀರು ತಂಬಿಯಪ್ಪಗ ಎಂತ ಮಾಡ್ತವು? ಕೆಲವು ಗೇಟುಗಳ ತೆಗದು ಮಡುಗಿ ಹೆಚ್ಚಿಪ್ಪ ನೀರು ಹೆರ ಹರುದು ಹೋಪಲೆ ಅನುವು ಮಾಡಿ ಕೊಡ್ತವಲ್ದೋ? ಇಲ್ಲದ್ರೆ ಅಣೆಕಟ್ಟು ಒಡೆದು ಅನಾಹುತ ಆಗಿ ಹೋಗದೋ? ಮನುಷ್ಯನ ಸ್ಥಿತಿಯೂ ಇದರಿಂದ ಬೇರೆ ಅಲ್ಲ….,ಅಂದರೆ ಮೋಹನ ಎರಡೂ ಮಾಡದ್ದೆ ಹರಿಣಿಗೇ ಸಮಾಧಾನ ಮಾಡಿಯಪ್ಪಗ ಅದಕ್ಕೆ ಎದೆ ಝಿಗ್ ಹೇಳಿತ್ತು…ಹಾಂಗಾದ್ರೆ ಗೆಂಡಂಗೆ ಮೊದಲೇ ಅದರ ಅಂದಾಜಿತ್ತಿದ್ದೊ…?ಉಮ್ಮಪ್ಪ…,ಕೇಳ್ಲೆ ಹರಿಣಿಗೆ ನಾಲಗೆಯೇ ಮೊಗಚ್ಚ….ಇಷ್ಟು ದೊಡ್ಡ ಎಡವಟ್ಟಿಂಗೆ ಗೆಂಡ ತೋಸರ್ಿದ ಸಾತ್ವಿಕ ಪ್ರತಿಕ್ರಿಯೆ ಹರಿಣಿಯ  ಇಂಚಿಂಚಾಗಿ ಕರಗ್ಸಿ ಬಿಟ್ಟತ್ತು. ಹೀಂಗಿಪ್ಪ ತೇಕು ಮುಟ್ಟುತ್ತ ಸಂದರ್ಭಲ್ಲಿಯೂ ಅಂವ ಕಾಳಜಿ ತೋಸರ್ಿದ್ದದು ಎನ್ನ ಬಗ್ಗೆ….? ಆ ದುಃಖದ ಅಗ್ನಿಕುಂಡವ ಎನಗೆ ಬೇಕಾಗಿ ನುಂಗಿಯೊಂಡನೋ…?

ಮಗಳ ಫೊನು ಬಂದ ಲಾಗಾಯ್ತಿಂದ ಮೋಹನನ ಹತ್ರೆ ಮಾತಾಡುವವರೆಂಗೂ ಆತ್ಮ ವಿಮಶರ್ೆಯ ಹೆಳೇಲಿ ಮನಸ್ಸಿನ ಕಲ್ಲು ಮಾಡಿಯೊಂಡಿತ್ತಿದ್ದ ಹರಿಣಿಗೆ ಇನ್ನು ತಡಕ್ಕೋಂಬಲೆ ಸಾಧ್ಯವೇ ಇಲ್ಲೆ ಹೇಳುವ ಹಾಂಗಾತು. ಮನಸ್ಸಿನ ಸುತ್ತ ಕಟ್ಟಿಯೋಂಡಿತ್ತಿದ್ದ ಕೃತಕ ಕಲ್ಲಿನ ಕೋಟೆಲಿ ಬಿರುಕು ಬಿಟ್ಟತ್ತು, ದುಃಖದ ಆವೇಗ ಆ ಬಿರುಕುಗಳ ಎಡೆಂದ ಧುಮ್ಮಿಕ್ಕಿ ಕೋಟೆಯ ನುಚ್ಚು ನೂರು ಮಾಡಿತ್ತು. ಹರುದತ್ತದಾ ಹರಿಣಿಯ ಕಣ್ಣಿಂದ ಧಾರೆ ಧಾರೆ ಕಣ್ಣೀರು….ಮೋಹನ ಹೆಂಡತ್ತಿಯ ಹತ್ರೆ ಬಂದು ಆ ಕಲ್ಲು ಬೆಂಚಿನ ಮೇಗೆ ಮೌನವಾಗಿ ಕೂದಂ.

`ಪಾಪ…ಎಷ್ಟೋ ದಿನಂದ ಎನಗೆ ಬೇಜಾರು ಅಪ್ಪಲಾಗ ಹೇದು ಕಟ್ಟಿ ಕಟ್ಟಿ ಮಡುಗಿದ ಕಣ್ಣೀರು ಇಂದಾದ್ರೂ ಪೂತರ್ಿಯಾಗಿ ಹರಿದು ಹೋಗಲಿ…ಇನ್ನಾದ್ರೂ ಹರಿಣಿಯ ಮನಸ್ಸಿಂಗೆ ಶಾಂತಿ ಸಿಕ್ಕಲಿ….,ದೇವರೇ…,ಮಗಳು ಹೋತು…ಹೆಂಡತ್ತಿಯನ್ನೂ ಎನ್ನ ಕೈಂದ ಎಳಕ್ಕೋಳೇಡ…’ ಮೋಹನನ ಮನಸ್ಸು ಮೌನವಾಗಿ ದೇವರತ್ರೆ ಬೇಡಿಯೊಂಡತ್ತು. ಅಂವನ ಕಣ್ಣಿಂದ ಎರಡೇ ಎರಡು ಹನಿ ನೀರು ಕೆಳ ಬಿದ್ದತ್ತು. ಹೆಂಡತ್ತಿಗೆ ಅದು ಕಾಂಬದು ಬೇಡ ಹೇದು ಮೋರೆ ತಿರುಗಿಸಿದಂ. ಎಷ್ಟೋ ಹೊತ್ತು ಕಳುದತ್ತು. ಮೂರುಸಂಧಿ ಆತು. ಹರಿಣಿಯ ಕಣ್ಣೀರಿನ ರಭಸ ರಜ್ಜ ಕಡಮ್ಮೆ ಆತೇನೋ? ಮೋಹನ ಬಹು ಮೆಲ್ಲಂಗೆ ಹರಿಣಿಯ ಕೈಯ್ಯ ಹಿಡಿದು ಏಳ್ಸಿದಂ. “ಹರಿಣಿ…,ಹೋಪನೋ…? ಹೊತ್ತು ಕಸ್ತಲೆ ಆತಿದಾ…ದಾರಿ ಹೋಪವು ನೀನು ಕೂಗುತ್ತದ್ರ ನೋಡಿ ಆನು ನಿನಗೆ ಎಂತದೋ ಉಪದ್ರ ಕೊಡ್ತಾ ಇದ್ದೆ ಹೇದು ಪೋಲಿಸು ಕಂಪ್ಲೈಂಟು ಕೊಟ್ರೆ ಕಷ್ಟ ಆಗಿ ಹೋಕು ಮಿನಿಯಾ…? ಬಾ..,ಇನ್ನು ನೆಡವದು ಬೇಡ, ರಿಕ್ಷಲ್ಲಿ ಹೋಪೋಂ ಆಗದೊ?” ಹೇಳಿದ ಮೋಹನ. ದಾರಿಯುದ್ದಕ್ಕೂ ಅವರಿಬ್ರೊಳ ಬರಿ ಮೌನವೇ ಇತ್ತಿದ್ದದು. ಆ ಮೌನಲ್ಲಿ ಪರಸ್ಪರರ ಕ್ಷೇಮಕ್ಕೆ ಬೇಕಾಗಿ ಅಂತರಾಳದ ಬೇಡಿಕೆ ಮಾತ್ರವೇ ಇತ್ತಿದ್ದದು.

ಅಂದಿಂದ ಮೋಹನನ ಮಾತು, ಕ್ರಿಯೆ ಎಲ್ಲವೂ ಎಷ್ಟು ಬೇಕೋ ಅಷ್ಟಕ್ಕೆ ಸೀಮಿತ ಆತು. ಒಂದೇ ಒಂದು ಸತರ್ಿಯೂದೆ ಮಗಳ ಫೋನು ಬಯಿಂದೋ ಹೇದು ಕೇಳಿದ್ದನೂ ಇಲ್ಲೆ. ಅಂವ ಅದಕ್ಕೆ ಫೋನು ಮಾಡ್ಲೆ ಹೋಯಿದನೂ ಇಲ್ಲೆ. ದಿನಲ್ಲಿ ಒಂದ್ಸತರ್ಿಯಾದ್ರೂ ಹರಿಣಿಯ ಫೋನಿಂಗೆ ಮಗಳ ಕರೆ ಬತ್ತು. ಹರಿಣಿ, ಕೆಮಿ ತನ್ನದು ಅಲ್ಲಲೇ ಅಲ್ಲ, ಮೊಬೈಲು ಪರದೆಲಿ ಕಾಂಬ ನಂಬರು ಆರದ್ದೋ ಏನೋ….ಹೇಂಳ್ತಾಂಗೆ ಇಪ್ಪಲೆ ಕಲ್ತತ್ತು. ಜೆಂಬಾರಕ್ಕೆ ಹೋದಲ್ಲೆಲ್ಲಾ ಹರಿಣಿಗೆ ಕೇಳ್ತ ಹಾಂಗೆ `ಉಮ್ಮಾ…ಇದರ ಮಗಳು ಯೇವದ್ರೊಟ್ಟಿಂಗೋ ಓಡಿ ಹೋಯಿದಾಡ…’ ಹೇಳ್ತ ಕೊಂಕು ಅಥವಾ ಅದರ ಹತ್ರೇ `ಅಪ್ಪೋ ಹರಿಣಿ…,ನಿನ್ನ ಅಳಿಯ ಯೇವ ಜಾತಿಯಂವ…?, ಅಂಬಗ ಈಗ ನಿನ್ನ ಮಗಳು ಡೇನ್ಸು ಮಾಡ್ತಿಲ್ಲ್ಯೋ…?’ ಹೇಳಿಯೆಲ್ಲಾ ಕೊಕ್ಕೆ ಮಡುಗಿ ಮಾತಾಡ್ತದ್ರ ಕೇಳಿ ಕೇಳಿ ಜಿಗುಪ್ಸೆ ಬಂದ ಹರಿಣಿ ಈಗೀಗ ನೆಂಟ್ರ ಮನೆಗೆ ಹೋಪದ್ರನ್ನೇ ಕಡಮ್ಮೆ ಮಾಡಿದ್ದು. ಇನ್ನು ಮೋಹನ ಹೇಂಗಿಪ್ಪ ಮಾತುಗಳೆಲ್ಲ ಕೇಳೇಕಾಗಿ ಬತ್ತು ಹೇಳ್ತದ್ರ ಅಂವ ಹೇಳಿರೆ ಅಲ್ದೋ ಹರಿಣಿಗೆ ಗೊಂತಪ್ಪದು? ಅಂವ ಹೇಳಿದ್ದನೂ ಇಲ್ಲೆ, ಅದು ಕೇಳಿದ್ದೂ ಇಲ್ಲೆ. ಹರಿಣಿ, ಮೋಹನಂಗೆ ಮದುವೆಯಾಗಿ ಹದಿನೈದು ವರ್ಷವರೆಂಗೂ ಜೀವನ ಬರೀ ಕೊರಡು, ಬರಡು ಹೇಳಿ ಕಂಡೊಂಡಿತ್ತಿದ್ದರೂ ಆ ಕೊರಡಿನ ಕೊಡಿಲಿ ಎಂದಾದ್ರೂ ಚಿಗುರೆಲೆ ಕಾಂಗು, ಬರಡು ಬಾಳು ಹಸನು ಅಕ್ಕು ಹೇಳ್ತ ಒಂದು ನಿರೀಕ್ಷೆ ಇತ್ತಿದ್ದು. ಮನುಷ್ಯನ ಜೀವನ ಇಪ್ಪದೇ ನಿರೀಕ್ಷೆಲಿ ಅಲ್ಲದೋ ಹೇಳಿ? ಹಾಂಗೆ ಅವರ ನಿರೀಕ್ಷೆ ನಿಜ ಆತು. ಕೊರಡು ಕೊನರಿತ್ತು. ಸುರಭಿ ಬಂತು, ಬದುಕು ಲಕಲಕಿಸಿತ್ತು. ಅಂದರೆ ಇಂದು….? ಚಿಗುರೆಲೆ ಬೆಳದು ಮುಕುಟು ಬಿಟ್ಟು ಹೂಗು, ಕಾಯಿ, ಹಣ್ಣು ಅಪ್ಪ ಮೊದಲೇ ತೊಟ್ಟು ಕಳಚಿ ಬಿದ್ದು ಹೋತು. ಇನ್ನೆಲ್ಲಿಯ ನಿರೀಕ್ಷೆ…? ಇನ್ನೆಲ್ಲಿಯ ಬದುಕು….? ದಿನ ಹೋದ ಹಾಂಗೆ ಹರಿಣಿ ಪೂತರ್ಿಯಾಗಿ ಅಧ್ಯಾತ್ಮದ ಕಡೇಂಗೆ ತಿರುಗಿತ್ತು. ಮೋಹನ ಯಂತ್ರ ಮಾನವ ಆಗಿ ಹೋದಂ.

ಹೀಂಗೇ ಸುಮಾರು ಐದಾರು ತಿಂಗಳು ಕಳುದತ್ತು. ಒಂದು ದಿನ ಕಸ್ತಲಪ್ಪಗ ಮೋಹನ ಬಂದಂವ ಹೇಳಿದಂ,

“ಹರಿಣಿ…, ಆನು ವಿ.ಆರ್.ಎಸ್.(ಸ್ವಯಂ ನಿವೃತ್ತಿ) ತೆಕ್ಕೊಂಡೆ….”

ಹರಿಣಿ ಮರಕಟ್ಟಿದ ಹಾಂಗೆ ನಿಂದು ಅವನನ್ನೇ ನೋಡಿತ್ತು. ಹೇಂ…? ಎಂತ ಕಥೆ ಇದು…? ಇನ್ನು ಬರೇ ಆರೆಂಟು ತಿಂಗಳಿಲ್ಲಿ ಮೋಹನಂಗೆ ರಿಟೈರ್ಮೆಂಟು ಆವುತಿತು.  ಹಾಂಗಿಪ್ಪಾಗ ಪೂರ್ವ ಸೂಚನೆಯೇ ಇಲ್ಲದ್ದೆ ಇದೆಂತಕೆ ದಿಢೀರಾಗಿ ಈ ವಿ.ಆರ್.ಎಸ್…? ಅದೂ ಎನ್ನತ್ರೆ ಒಂದು ಮಾತೂ ಹೇಳದ್ದೆ…? ಮಗಳ ವಿಷಯಲ್ಲಿ ಎಂತಾರೂ ಅವಮಾನ ಅಪ್ಪ ಹಾಂಗಿಪ್ಪ ಮಾತುಗಳ ಕೇಳೇಕಾಗಿ ಬಂತೋ…? ಸಮಾಜಲ್ಲಿ ಇನ್ನು ತಲೆ ಎತ್ತಿ ನೆಡೆವದು ಹೇಂಗೆ ಹೇಳ್ತ ನಾಚಿಕೆಯೋ…? ಅಂದು ಮೋಹನನ ಕೈಂದ ಸಾಲ ತೆಕ್ಕೋಂಡ ಆರೋ ಒಬ್ಬ ಗ್ರಾಹಕ ಹೇಳಿದ ವ್ಯಂಗ್ಯ ಮಾತುಗಳನ್ನೇ ಸುಮಾರು ಸಮಯ ಮನಸ್ಸಿಂಗೆ ಹಚ್ಚಿಯೋಂಡವಂಗೆ ಇನ್ನು ಸುರಭಿಯ ಬಗ್ಗೆ ಆರಾರು ಎಂತಾರು ಹೇಳಿಯಪ್ಪಗ ಸೈಸಲೆ ಎಡಿಗಾಗದ್ದದ್ರಲ್ಲಿ ಎಂತ ಆಶ್ಚರ್ಯವೂ ಇಲ್ಲೆ..? ಅಥವಾ ಇನ್ನು ಎಂತಕೆ ಬೇಕಾಗಿ ಗೈವದು ಹೇಳಿ ಕಂಡತ್ತೋ…? ಉಮ್ಮಾ…,ಅಂವನತ್ರೆ ಎಂತ ಕೇಳ್ಲೂ ಒಂದು ರೀತಿಯ ಅಂಜಿಕೆ….ಒಂದು ರೀತಿಯ ಅಪರಾಧೀ ಮನೋಭಾವ….ಎನ್ನಂದಾಗಿ ಸುರಭಿ ಹಾಂಗಾತೋ….? ಹಾಂಗಾದ ಕಾರಣ ಮೋಹನ ಇಂದು ಇಷ್ಟು ಕಂಗಾಲಾದನೋ…? ಒಟ್ಟಿಲ್ಲಿ ತಮ್ಮಿಬ್ರೊಳ ಇಷ್ಟು ವರ್ಷವೂ ಇರದ್ದ ಒಂದು ಮಾನಸಿಕ ಅಂತರ ಈಗ ಬೆಳವಲೆ ಸುರುವಾಯಿದೋ ಹೇಳ್ತ ಸಂಶಯ ಹರಿಣಿಗೆ…,ಹಾಂಗಾದ ಕಾರಣ ಮೋಹನ ಹಾಂಗೆ ಹೇಳಿಯಪ್ಪಗ ಅಂತೇ ತಲೆಯಾಡ್ಸಿಬಿಟ್ಟತ್ತು.

“ಹರಿಣಿ ಇಂದು ರಜ್ಜ ಬೇಗ ಉಂಬೋ…,ಊಟಕ್ಕೆ ರೆಡಿ ಮಾಡು, ಆನು ಮಿಂದಿಕ್ಕಿ ಬತ್ತೆ, ಇನ್ನು ಮುಂದೆ ಬ್ಯಾಂಕಿನ ಜವಾಬ್ದಾರಿ ಇಲ್ಲೆ ಅಲ್ದೋ….?ಇಂದು ಬೇಗ ಒರಗಿ ನಾಳಂಗೆ ತಡವಾಗಿ ಏಳ್ತೆ ಮಿನಿಯಾಂ…” ಹೇಳಿಕ್ಕಿ ಮೋಹನ ಮೀವಲೆ ಹೋದಂ. ಮಿಂದಿಕ್ಕಿ ಹೆರ ಕಾಲು ಮಡುಗಿದ್ದನೋ ಇಲ್ಲ್ಯೋ ದಢಾರನೆ ಅಲ್ಲೇ ಬಿದ್ದ. ಶಬ್ದ ಕೇಳಿತ್ತು ಹೇಳಿ ಹರಿಣಿ ಓಡಿ ಹೋಗಿ ನೋಡಿರೆ ಮೋಹನ ಬಾತ್ ರೂಮಿನ ಬಾಗಿಲ ಬುಡಲ್ಲೇ ಬಿದ್ದಿದ, ಬಾಯಿಲಿ ನೊರೆ ಬಂದೊಂಡಿತ್ತಿದ್ದು. ತಲೆ ಕಾಲುದ್ದುತ್ತ ಮೇಟಿಯ ಮೇಗೆ, ಶರೀರ ನೆಲಕ್ಕಲ್ಲಿ….ಒಂದು ವಿಚಿತ್ರ ರೀತಿಯ ಕಂಪನ ಅಂವನ ಮೈಲಿ ಕಂಡು ಹರಿಣಿಗೆ ಕಣ್ಣು ಕಸ್ತಲೆ ಹೋದ ಹಾಂಗಾತು. ಆ ಕ್ಷಣಲ್ಲಿ ಅದಕ್ಕೆ ನೆಂಪಾದ್ದು ಗುರುಗಳ ಆ ನೆಗೆ ಮೋರೆಯ, ಆ ಅಭಯ ಹಸ್ತವ….,  ಎಲ್ಲಿಂದ ಹೇಂಗೆ ಧೈರ್ಯ ಬಂತೋ ಅದಕ್ಕೇ ಗೊಂತಿಲ್ಲೆ….,ಮೋಹನ ಯೇವಾಗಳೂ ಆರೋಗ್ಯ ತಪಾಸಣೆಗೆ ಹೋಪ ನಸರ್ಿಂಗ್ ಹೋಮಿನ ಡಾಕ್ಟ್ರಂಗೆ ಫೋನು ಮಾಡಿ ಪರಿಸ್ಥಿತಿಯ ಚುಟುಕಾಗಿ ಹೇಳಿ ಅಂಬ್ಯೂಲೆನ್ಸ್ ಕಳುಸಲೆ ಹೇಳಿತ್ತು. ಅಂಬ್ಯೂಲೆನ್ಸೂ ಬಂತು. ಆಸ್ಪತ್ರೆಗೂ ಎತ್ತಿ ಆತು. ಆಸ್ಪತ್ರೆಯ ದಾಕುದಾರಕ್ಕೊ ಈ ಆಸ್ಪತ್ರೆಲಿ ಮೋಹನನ ಚಿಕೆತ್ಸೆಗೆ ಬೇಕಾದ ವ್ಯವಸ್ಥೆ ಇಲ್ಲ ಹೇದು ಮುಂದೆ ಒಂದು ಘಂಟೆಯೊಳ ಅವನ ಮಂಗ್ಳೂರಿಂಗೆ ಎತ್ಸಿದವು. ಎಮ್.ಆರ್.ಐ.(ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) ಮಾಡಿ ನೋಡಿದವು. ಮೋಹನಂಗೆ ಆದ್ದದು ಬ್ರೈನ್ ಎನ್ಯೂರಿಸಮ್ ಹೇಳಿ ಗೊಂತಾತು. ಪುಣ್ಯಕ್ಕೆ ಆ ತೊಂದರೆ ಬಹಳ ಸಣ್ಣ ಮಟ್ಟಿಂಗೆ ಆದ್ದದು ಹೇಳಿಯೂ ತಡ ಮಾಡದ್ದೆ ತಂದ ಕಾರಣ ಮೋಹನ ಚಿಕಿತ್ಸೆಗೆ ಸರಿಯಾಗಿಯೇ ಸ್ಪಂದಿಸುಗು ಹೇದೂ ಹೇಳಿದವು. ನರ ರೋಗ ತಜ್ಙಂಗೊ ಕೂಡ್ಲೇ ಓಪರೇಷನ್ ಮಾಡಿದವು.

(ಕಥೆ ಸರಾಗವಾಗಿ ಓದ್ಸಿಯೊಂಡು ಹೋಯೇಕಾದ್ರೆ ಅದರಲ್ಲಿ ಬಪ್ಪ ವಿಷಯಂಗೊ ಸುಲಭಲ್ಲಿ ಗ್ರಹಿಕೆಗೆ ನಿಲುಕೇಕು ಅಲ್ದೋ? ಮೋಹನಂಗೆ ಬಂದ ಅಸೌಖ್ಯತೆ ಎಂತರಪ್ಪಾ ಹೇಳಿ ಕಂಡತ್ತೇನೋ ನಿಂಗೋಗೆ? ನಮ್ಮ ಶರೀರದೊಳ ಇಪ್ಪ ರಕ್ತನಾಳಂಗೊ ಗೆಲ್ಲುಗಳ ಹಾಂಗೆ ಕವಲಾಗಿ ಹೋವುತ್ತಲ್ದೋ? ಹಾಂಗಿಪ್ಪ ಕವಲುಗಳ ಸಂಧಿ ಜಾಗೆಲಿ ರಕ್ತನಾಳಾಂಗಳ ಒಳ ಗುಳ್ಳೆಯ ಹಾಂಗೆ ಅಪ್ಪ ಸಂದರ್ಭಂಗಳೂ ಇದ್ದು. ಇದರ ಭಾರಂದಾಗಿ ರಕ್ತನಾಡಿಗೊ ಕ್ರಮೇಣ ಶಕ್ತಿ ಕಳಕ್ಕೊಂಡು ನೇತ ಹಾಂಗೆ ಇತರ್ು. ಅದುವೇ ಎನ್ಯೂರಿಸಮ್. ರಕ್ತ ನಾಳದ ಒಳಾಣ ಆ ಗುಳ್ಳೆ ಒಡದು ರಕ್ತಸ್ರಾವ ಅಪ್ಪದೂ ಇದ್ದು. ಶರೀರದ ಯೇವ ಭಾಗಲ್ಲಿ ಬೇಕಾರೂ ಹೀಂಗೆ ಅಪ್ಪಲಕ್ಕು. ಅಂದ್ರೆ ಹೆಚ್ಚಾಗಿ ಮೆದುಳಿಲ್ಲಿ ಇದರ ಕಾರುಬಾರು ಜೋರು. ಹತೋಟಿಲಿ ಇಲ್ಲದ್ದ ಬಿ.ಪಿ., ಅತಿಯಾದ ಮಾನಸಿಕ ಒತ್ತಡ, ಕಳ್ಳುಕುಡುಕತನ ಅಥವಾ ಪರಂಪರೆಲಿ ಇದ್ರೆ…,ಹೀಂಗಿಪ್ಪ ಕಾರಣಂಗಳಿಂದಾಗಿ ಈ ತೊಂದರೆ ಬಪ್ಪ ಸಾಧ್ಯತೆ ಇದ್ದು. ಸೈಸಲೆ ಎಡಿಯದ್ದ ತಲೆಬೇನೆ, ವಾಂತಿ, ಫಿಟ್ಸ್ ಇವು ಆ ತೊಂದರೆಯ ಮುನ್ಸೂಚನೆಯಾಗಿ ಬಪ್ಪ ಕ್ರಮವೂ ಇದ್ದು. ಯಾವುದೇ ಮುನ್ಸೂಚನೆ ಇಲ್ಲದ್ದೆ ದರೋಡೆಕೋರನ ಹಾಂಗೆ ಒಂದೇ ಪೆಟ್ಟಿಂಗೆ ಇದು ದಾಳಿ ಮಾಡ್ತದೂ ಇದ್ದು. ಮೋಹನನ ವಿಷಯಲ್ಲಿ ಆದ್ದದು ಅದುವೇ. ಈ ತೊಂದರೆ ದಾಳಿ ಮಾಡುವಾಗ ಒಟ್ಟೊಟ್ಟಿಂಗೇ ಪಕ್ಷವಾತ, ಫಿಟ್ಸ್ಗಳೂ ಬಪ್ಪ ಸಾಧ್ಯತೆಗೊ ಇದ್ದು. ಕೆಲವು ಸತರ್ಿ ಅಂತೆ ಬೋದ ತಪ್ಪಿ ಬೀಳುವದೂ ಇದ್ದು. ಅಂಬಗಂಬಾಗಳೇ ರೋಗ ಎಂತರ ಹೇಳಿ ಕಂಡು ಹಿಡಿದು ಸರಿಯಾದ ಚಿಕಿತ್ಸೆ ಕೊಟ್ಟರೆ ಈ ತೊಂದರೆಯ ನೂರಕ್ಕೆ ನೂರು ಸರಿ ಪಡ್ಸಲೆ ಎಡಿತ್ತು. ರಕ್ತ ನಾಳಲ್ಲಿ ಒಡದ ಜಾಗೆಯ ಕೂಡ್ಸಿ ಕ್ಲಿಪ್ಪಿನ ಹಾಂಗಿದ್ದ ಒಂದು ವಸ್ತುವಿನ ಜೋಡಣೆ ಮಾಡಿ ಮುಂದೆ ಹಾಂಗೆ ಆಗದ್ದ ಹಾಂಗೆ ಮಾಡುವದೇ ಇದಕ್ಕಿಪ್ಪ ಚಿಕಿತ್ಸೆ.)

ಹರಿಣಿ ಆ ಆಸ್ಪತ್ರೆಯ ಐ.ಸಿ.ಯು. ವಿಭಾಗದ ಹೆರ ಇಪ್ಪ ಕುಚರ್ಿಲಿ ಕೈಕಟ್ಟಿ ಕೂಯಿದು. ನಸರ್ುಗೊ ಬಂದು ಈ ಮದ್ದು ತಂದು ಕೊಡಿ…,ಈ ಮದ್ದು ತಂದು ಕೊಡಿ ಹೇದಪ್ಪಗ ಹೋಗಿ ಅದರ ತಂದು ಕೊಡ್ತದು, ಪುನಃ ಅಲ್ಲಿ ಸ್ಥಾಪನೆ ಅಪ್ಪದು…ಇದಿಷ್ಟೇ ಅದರ ಶರೀರಲ್ಲಿ ಅಪ್ಪ ಚಲನೆಗೊ. ಊಟ, ಕಾಪಿ, ಮೀಯಾಣ…ಯಾವುದರ ನೆನಪೂ ಅದಕ್ಕಿಲ್ಲೆ.

 

 

ಶೀಲಾಲಕ್ಷ್ಮೀ ಕಾಸರಗೋಡು

   

You may also like...

6 Responses

 1. ಶೀಲಕ್ಕ ಡಾಕ್ಟ್ರೋ?

 2. sheelalakshmi says:

  ಅಲ್ಲ ಶಿವರಾಮಣ್ಣ.

 3. ಬೊಳುಂಬು ಗೋಪಾಲ says:

  ಚೆ. ಕಥೆ ಹೀಂಗೆ ಆಗಿ ಹೋತಾನೆ. ವಿಷಯ ಗೊಂತಾಗಿ ತುಂಬಾ ಬೇಜಾರಾತು. ಮೋಹನ ಉಷಾರಕ್ಕು.
  ನಿನಗೆ ಆನು ಎನಗೆ ನೀನು, ಅಜ್ಜ ಅಜ್ಜಿಯಕ್ಕೊ ಹಾಂಗೇ ಹೇಳೆಕಷ್ಟೆ. ಬೇರೆ ನಿವೃತ್ತಿಯಿಲ್ಲೆ. ಹುಂ.

  • sheelalakshmi says:

   ಅಪ್ಪು ಗೋಪಾಲಣ್ಣ, ಎಂತ ಮಾಡ್ತದು…? ವಿಧಿಯಾಟ ಬಲ್ಲವರಾರು…?

 4. S.K.Gopalakrishna Bhat says:

  ಕತೆಯ ಓಟ ಅದ್ಭುತ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *