ಹಸುಗಳ ಒಡಲು ಕರುಣೆಯ ಕಡಲು

ಶ್ರೀಮತಿ ಸರಸ್ವತಿ ಬಡೆಕ್ಕಿಲ, ಇವು ದಿವಂಗತ ಡಾ| ಬಡೆಕ್ಕಿಲ ಕೃಷ್ಣ ಭಟ್ಟರ ಧರ್ಮಪತ್ನಿ.

ಸೇಡಿಯಾಪು ಕೃಷ್ಣ ಭಟ್ಟರು ಹೇಳಿದರೆ ಗೊಂತಿಲ್ಲದ್ದವು ಆರೂ ಇರವು. ಕನ್ನಡ ಸಾಹಿತ್ಯ ಕ್ಷೇತ್ರಲ್ಲಿ ಛ೦ದಸ್ಸಿನ ಆಳ ಅಧ್ಯಯನ ಮಾಡಿದ ಹೆಸರಾಂತ ವಿದ್ವಾಂಸರು. ಅವರ ಮಗಳು ಈ ಬಡೆಕ್ಕಿಲ ಅತ್ತೆ. ಪ್ರಾಯ ೮೬ ಕ್ಕೆ ಹತ್ತರೆ ಹೇಳುವ ಅವು, ಬರವಣಿಗೆಯ ಹವ್ಯಾಸ ಮಾಡಿಗೊಂಡಿದವು. ಇವರ ಲೇಖನಂಗೊ, ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟ ಆಯಿದು.
ಈ ಹಿಂದೆ ನಮ್ಮ ಬೈಲಿಲ್ಲಿ ಶಿಲ್ಪಿ ಬಡೆಕ್ಕಿಲ ಶ್ಯಾಮಣ್ಣನ ಪರಿಚಯ ಮಾಡಿದ್ದು ನಿಂಗೊಗೆ ನೆಂಪಿಕ್ಕು. ಅವು ಈ ಅತ್ತೆಯ ಮಗ°.
ಬೈಲಿಲ್ಲಿ ಈ ಹಿಂದೆ ಅವು ಬರದ ಕತೆ ಧೃತಿಯೊಂದಿದ್ದರೆ ನಾವು ಪ್ರಕಟ ಮಾಡಿದ್ದು. . ಇವರಿಂದ ಇನ್ನೂ ಹಲವಾರು ಲೇಖನ ಕತೆಯ ನಿರೀಕ್ಷೆಲಿ ಇಪ್ಪೊ°

-ಶರ್ಮಪ್ಪಚ್ಚಿ

ಹಸುಗಳ ಒಡಲು ಕರುಣೆಯ ಕಡಲುಬಡೆಕ್ಕಿಲ ಸರಸ್ವತಿ

ಸೂಕ್ತಿ: ಇಟ್ಟರೆ ಸಗಣಿಯಾದೆ| ತಟ್ಟಿದರೆ ಬೆರಣಿಯಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ| ನೀನಾರಿಗಾದೆಯೋ ಎಲೆ ಮಾನವಾ

ಎಲ್ಲೋರು ಸಣ್ಣಾದಿಪ್ಪಾಗಳೇ ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆಯ ಓದಿದೋರೇ, ಹಾಡಿದೋರೇ. ಆದರೆ ನಮ್ಮ ಮನೆಲೆ ಸಾಂಕುವ ದನಗಳಲ್ಲಿ ಅಂಥಾ ತ್ಯಾಗ ಬಲಿದಾನಂಗಳ ನಿರೀಕ್ಷಿಸುಲೆಡಿಯ. ಇವು ಮೂಕ ಪ್ರಾಣಿಗೊ-ಹೇಳಿದರೆ ಬಾಯಿ ಬಾರದ್ದೊವು-ಹಾಂಗಿದ್ದರೂ ಮನುಷ್ಯರಲ್ಲಿರೆಕ್ಕಾದ ಮಾನವೀಯ ಗುಣ ಹೇಳಿ ಯಾವದರ ನಾವು ಜಾಸ್ತಿ ಹೇಳುತ್ತೋ ಅಂಥ ಕರುಣೆ, ಸ್ನೇಹ, ಕೃತಜ್ಞತೆ, ಪ್ರೀತಿಸಿದೊರ, ಸಾಂಕಿದೊರ ಮರೆಯದ್ದ, ಎಷ್ಟುವರ್ಷ ಕಳುದರೂ ಗುರ್ತಹಿಡಿವ ಶಕ್ತಿ, ಇತ್ಯಾದಿಯಾಗಿ ಮನುಷ್ಯರನ್ನೂ ಮೀರ್ಸುವಂಥ ಗುಣ ವಿಶೇಷಂಗಳ ಕಾಂಬಲೆಡಿತ್ತು. ಅದಕ್ಕೆ ನಿದರ್ಶನವಾಗಿ ಕೆಲವು ಘಟನೆಗಳ ಹೇಳುಲೆ ಹೆರಟಿದೆ ಆನು. ಒಂದು ವೇಳೆ ನಿಂಗೊ ಗಮನಿಸಿಪ್ಪಲೂ ಸಾಕು, ಸಾಮಾನ್ಯವಾಗಿ ಮನುಷ್ಯರೆಲ್ಲ ನಮ್ಮ ಕುಟುಂಬದೊರು, ಬಂಧುವರ್ಗದೊರು ಇಷ್ಟರ ಒಳವೇ ಯೋಚನೆ ಮಾಡ್ತವು. ಆದರೆ ದನಗೊ ಎಂಥ ಕರುಣಾಳುಗೊ ಹೇಳಿ ನವಗೆ ಗ್ರೇಶುಲೇ ಸಾಧ್ಯ ಇಲ್ಲೆ. ಮುಂದೆ ಕರುಣೆಯ ವಿಶಯಕ್ಕೆ ಬತ್ತೆ. ಮೊದಲನೇದಾಗಿ ಗುರುಬಿಯ ಸಾಹಸ ಯಾತ್ರೆಯ ನೋಡಿ.

ಸುಮಾರು 78-79 ವರ್ಷ ಹಿಂದಾಣ ಒಂದು ಆದಿತ್ಯವಾರ. ಎಂಗೊ ಇಪ್ಪದು ಕೊಡೆಯಾಲದ ಒಂದು ಬಾಡಿಗೆ ಮನೆಲಿ. ಇಲ್ಲಿಂದ 28-29 ಮೈಲು ದೂರಲ್ಲಿ ವಿಟ್ಳಕ್ಕೆ ಹತ್ತರೆ ಹಳ್ಳಿಲಿ ಗೆದ್ದೆ, ತೋಟ, ದನಕರುಗೊ, ಅವಕ್ಕೆ ಮೇವಲೆ ಸೊಪ್ಪಿನ ಗುಡ್ಡೆ, ಹುಲ್ಲುಕಾಡು ಎಲ್ಲವೂ ಇದ್ದು.. ಅಲ್ಲಿ ದೊಡ್ಡಪ್ಪ, ದೊಡ್ಡಬ್ಬೆ, ದೊಡ್ಡಣ್ಣ, ಅಜ್ಜಿ, ಎಲ್ಲೋರು ಇದ್ದವು. ಪ್ರತಿ ವರ್ಷ ಒಂದು ಕರವ ದನವ ಕೊಡೆಯಾಲದ ಮನಗೆ ನಡೆಶಿಗೊಂಡು ಕರಕ್ಕೊಂಡು ಬಪ್ಪದು. ಅದು ಹಾಲು ಕಮ್ಮಿ ಆಗಿ ಬತ್ತುಲಪ್ಪಗ ಇನ್ನೊಂದು ದನವ ಇಲ್ಲಿಗೆ ತಂದು, ಬತ್ತಿದ ದನ ಕಂಜಿಗಳ ಊರಿಂಗೆ ಕರಕ್ಕೊಂಡು ಹೋಪದು. ಹೀಂಗೆ ಎಂಗೊಗೆ ಬೇಕಾದ ಹಾಲು, ಮಜ್ಜಿಗೆಗೆ ಅನುಕೂಲ ಮಾಡಿಗೊಂಬದು. ಹೀಂಗಿತ್ತು.

ಆದಿತ್ಯವಾರ ಶಾಲೆಗೆ ರಜೆ ಇದ್ದನ್ನೆ? ಆ ದಿನ ಅಬ್ಬೆ ಎಂಗೊಗೆ ತಲೆಗೆ ಎಣ್ಣೆ ಎರದು ’ತಲೆಕಸವು’ ಕೂಡಾ ಎಣ್ಣೆ ಎಳಕ್ಕೊಂಬ ಹಾಂಗೆ ತಿಕ್ಕಿ ಆಮೇಲೆ ತಲಗೆ ಮೀಶುತ್ತ°. ಅಕ್ಕಂಗೆ ಎಂಟೋ ಒಂಬತ್ತೋ ವರ್ಷ. ಎನಗೆ ಆರು ಏಳರ ನಡುಗೆ ಇದ್ದಿಕ್ಕು. ಅಕ್ಕ° ಮೀಯಾಣ ಮುಗುಶಿಕ್ಕಿ  ತಲಗೆ ಬೈರಾಸಿನ ಮುಂಡಾಸು ಕಟ್ಟಿಗೊಂಡು ಹೆರಾಣ ಜೆಗುಲಿಗೆ ಬಂದು ಮುಟ್ಟುವಾಗ ಗೇಟಿನ ಹತ್ತರಂದ ಗಣಗಣ ಗಂಟೆ ಶಬ್ದ ಕೇಳಿತ್ತು. ಶಬ್ದ ಕೇಳಿ ಆನೂದೇ ಓಡಿಗೊಂಡು ಬಂದೆ. ಅಷ್ಟರಲ್ಲೇ ಅಕ್ಕ° ಗೇಟಿನ ಹತ್ತರಂಗೆ ಓಡಿ ಆಯಿದು. “ಅಬ್ಬೇ ಗುರುಬಿ ಬಯಿಂದು ! ಗುರುಬಿ ಬಯಿಂದು!”

ಅಬ್ಬಗೆ ಆಶ್ಚರ್ಯವೇ ಆಶ್ಚರ್ಯ! ಓಡಿಗೊಂಡೇ ಹೋದ°. ನೋಡಿರೆ ಗುರುಬಿಯೇ! ಆದರೆ ರಾಶಿ ಬಚ್ಚಿದ್ದು. ಕೊಂಬಿಲಿ ಗೇಟಿಂಗೆ ಕುಟ್ಟಿ ಕುಟ್ಟಿ ತೆಗವಲೆ ನೋಡ್ತಾ ಇದ್ದು. ಕಣ್ಣಿಂದ ನೀರಧಾರೆ ಇಳಿತ್ತಾ ಇದ್ದು. ಅದರ ಅಬ್ಬೆಯ ಮನಗೆ ಬಂದು ಮುಟ್ಟಿದ ಸಂತೋಷವೋ, ಕಷ್ಟ ಅನುಭವಿಸಿದ ವ್ಯಥೆಯೋ, ಕಣ್ಣೀರಾಗಿ ಉಕ್ಕಿ ಹರುದು ಹೋವ್ತಾ ಇತ್ತು. ಕೊರಳು ನೆಗ್ಗಿ ಅಬ್ಬೆಯ ಹತ್ತರೆ ಎಂತದೋ ಹೇಳು ಹಾಂಗೆ ಕಂಡತ್ತು. ಅಬ್ಬೆ ಕೂಡ್ಳೆ ಗೇಟಿನ ಬಾಗಿಲು  ತೆಗದು ಒಳ ಬಿಟ್ಟಿಕ್ಕಿ “ಅದರೊಟ್ಟಿಂಗೆ ಆರು ಬಯಿಂದವು”? ಹೇಳಿ ಮಾರ್ಗದ ಉದ್ದಕ್ಕೆ ನೋಡಿದ°. ಆರೂ ಕಾಣ್ತವಿಲ್ಲೆ. ಗುರುಬಿ ಅಬ್ಬೆಯ ಹತ್ತರಂಗೆ ಬಂದು ಭುಸ್ ಭುಸ್ಸನೆ ಉಸಿರು ಬಿಡುವದರ ನೋಡಿ ಅದರ ಜಾಲಿನೊಳಂಗೆ ಮನೆಯ ಹನಿಕ್ಕಾಲ ಕರೆಯಾಣ ನೆರಳಿಂಗೆ ಕರಕ್ಕೊಂಡು ಬಂದ°. ಗುರುಬಿ ತಲೆ ಆಡ್ಸಿಗೊಂಡು ಅಬ್ಬೆಯ ಕೈಯ ನಕ್ಕುಲೆ ಸುರುಮಾಡುವಾಗ ಕೊರಳಗಂಟೆಯ ಗಣಗಣ ಶಬ್ದ ಆತು. ಅಬ್ಬೆಕೂಡ್ಳೇ ಒಳ ಹೋಗಿ ತೆಳಿಗೆ ಉಪ್ಪು ಹಾಕಿ ನೀರು ಬೆರುಸಿ ಒಂದು ತಾಮ್ರದ ಅಡಿಗೇಲಿಲಿ ಗುರುಬಿಯ ಎದುರು ಮಡುಗಿದ°. ಅದರ ಗುರುಬಿ ಕುಡಿತ್ತಾ ಇಪ್ಪಾಗ ಆನುದೇ ಅಕ್ಕನುದೇ ಅದರ ಗಂಟೆಯ ಮಣಿ ಆಡ್ಸಿ ಆಡ್ಸಿ ಆಟ ಆಡಿದೆಯೊ°. ಅಬ್ಬೆ ಅದರ ಕೊರಳ ಅಪ್ಪಿಗೊಂಡು ಕೊರಳಮಾಲೆ, ಬೆನ್ನು, ಮೋರೆ ಉದ್ದಿ ಕೊಂಡಾಟ ಮಾಡಿದ°. ಮುದಿ ಆಯ್ಕೊಂಡು ಬಂದ ದನ ಮಯ್ಯೆಲ್ಲ ಒಣಗಿ ಎಲುಬು ಗೂಡಿನ ಹಾಂಗೆ ಕಂಡುಗೊಂಡಿತ್ತು.  ಕಣ್ಣೀರು ಹಾಯ್ಕೊಂಡು ಅಬ್ಬೆಯ ಹತ್ತರೆ ಎಂತದೋ ಹೇಳ್ತಾ ಇಪ್ಪಹಾಂಗೆ ಅದರ ಕಣ್ಣು ಮಾತಾಡ್ತಾ ಇತ್ತು. ಅಬ್ಬೆ ಪುನಃ ಮಾರ್ಗದ ಹೊಡೆಂಗೆ ಹೋಗಿ ನೋಡಿಗೊಂಡು ಬಂದ°. ಆರೂ ಕಾಣ್ತವಿಲ್ಲೆ. ಇದೆಂಥ ವಿಚಿತ್ರ! ಅಷ್ಟು ದೂರಂದ – ಇಪ್ಪತ್ತೆಂಟು ಮೈಲು- ಒಂದು ಚೂರು ದಾರಿ ತಪ್ಪದ್ದೆ ಇಲ್ಲಿಗೆ ಮನೆಬಾಗಿಲವರೇಗೆ ಹೇಂಗೆ ಬಂತು ಒಂದೇ ಆಗಿ! (ಒಬ್ಬನೇ). ಆ ಮೇಲೆ ಮನೆ ಹಿಂದಾಣ ಕೆದೆ ಅಟ್ಟಂದ ಬೆಳ್ಹುಲ್ಲು ತಪ್ಪಲೆ ಹೋದ°. ಅಬ್ಬೆಯ ಕಣ್ಣಿಲಿ ನೀರು ಬತ್ತಾ ಇತ್ತು ಗುರುಬಿಯ ಸಾಹಸಯಾತ್ರೆಯ ಗ್ರೇಶಿಗೊಂಡು, ಅದರ ಕೈ ಕಾಲು ಎಷ್ಟು ಬಚ್ಚಿಕ್ಕು, ಇಷ್ಟು ಲಾಚಾರಿ ಆಗಿಪ್ಪಲಾಗ?

ಅಷ್ಟು ಹೊತ್ತಿಂಗೆ ಅಪ್ಪನುದೇ ಮಿಂದಿಕ್ಕಿ ಹೆರ ಬಂದ°. ಎಂತ ಸಂಗತಿ ಹೇಳಿ ನೋಡುಲೆ. ದನವ ನೋಡಿ ಅಪ್ಪಂಗೆ ಕೋಪವೂ ಬೇಜಾರೂ ಒಟ್ಟಿಂಗೆ ಬಂತು. ಮರುದಿನವೇ ಊರಿಂಗೆ ದೊಡ್ಡಪ್ಪಂಗೆ ಕಾರ್ಡು ಬರದು ಹಾಕಿದ°. “ನಿಂಗೊ ಅಲ್ಲಿ ಊರೆಲ್ಲ ಹುಡ್ಕುದು ಬೇಡ, ಗುರುಬಿ ಇಲ್ಲಿದ್ದು, ಅದು ನಾಲ್ಕಾರು ದಿನ ಇಲ್ಲಿಯೇ ಇರಲಿ, ಆ ಮೇಲೆ ಕರಕ್ಕೊಂಡು ಹೋದರಾತು” ಹೇಳಿ.

ಅಬ್ಬೆ ಗುರುಬಿಯ ಬಾಬಿಕಟ್ಟೆ ಹತ್ತರೆ ಕರಕ್ಕೊಂಡು ಹೋಗಿ ಮೀಶಿ ಅದರ ಕೈಕಾಲಿಂಗೆ ಎಣ್ಣೆ ಕಿಟ್ಟಿ ಅದಕ್ಕೆ ಹೊಟ್ಟೆ ತುಂಬಾ ಬೆಳ್ಹುಲ್ಲು ಹಿಂಡಿ ಎಲ್ಲ ಕೊಟ್ಟು ಆರೈಕೆ ಮಾಡಿದ°. ಅದರ ಬಾಯಿಗೆ ಬೆಲ್ಲ ಕೊಟ್ಟು ಬಚ್ಚಿಹೋದ ದನಕ್ಕೆ ರಜ ತ್ರಾಣ ಬಪ್ಪ ಹಾಂಗೆ ಉಪಚಾರ ಮಾಡಿದ°. ಒಂದು ವಾರ ಕಳಿವಾಗ ದನ ರಜ ನೋಡುವ ಹಾಂಗಾತು. ಮತ್ತೆರಡೇ ದಿನಲ್ಲಿ ಚೋಮನೂ ವೆಂಕಪ್ಪನೂ ಬಂದವು.

ಅಲ್ಲಿ ಊರಿಲ್ಲಿ ಗುರುಬಿಯ ಕಾಣದ್ದೆ ಗುಡ್ಡೆ ಕಾಡು ಎಲ್ಲ ಹುಡ್ಕಿ ಕಡೆಂಗೆ ಯಾವದಾರೂ ಗಂಡಿಗೋ ಗಣ್ವೆಗೋ ಬಿದ್ದು ಹೋತೋ, ನಾಯ್ಪಿಲಿ ಎಳಕ್ಕೊಂಡು ಹೋತೋ ಹೇಳಿ ತುಂಬಾ ಕರಕರೆ ಮಾಡಿಗೊಂಡಿತ್ತಿದ್ದವೊಡೊ. ಕಾಗದ ಸಿಕ್ಕಿದ ಮೇಲೆ ಎಲ್ಲೊರಿಂಗೂ ಸಮಾಧಾನ ಆತೊಡೊ. ಅಜ್ಜಿ ಅಲ್ಲಿ ಹರಕ್ಕೆ ಕೂಡಾ ಹೇಳಿತ್ತಿದ್ದಡೊ ಮನೆ ಬಾಗಿಲ ’ಕೊರತ್ತಿ’ ಕಲ್ಲಿಂಗೆ.

ಹಳ್ಳಿಲಿ ಆದ್ದಿಷ್ಟೆ. ದನಗಳ ಸಾಂಕಾಣದ ಎಂಕಪ್ಪ-“ಕಂಜಿ ಇಲ್ಲದ್ದ ಕರೆಯದ್ದ ದನಕ್ಕೆ ಹಿಂಡಿ ಎಂತಗೆ? ಒಂದಿಷ್ಟು ಅಕ್ಕಚ್ಚೋ ನೀರೋ ಕುಡುಶಿದರಾತು. ಮತ್ತೆ ಒಳುದೆಲ್ಲ ದನಗಳೊಟ್ಟಿಂಗೆ ಗುಡ್ಡಗೆ ಮೇವಲೆ ಹೋಪಲೆ ಎಬ್ಬಿತ್ತು.” ಇದು ಎಂಕಪ್ಪನ ಲೆಕ್ಕಾಚಾರ. ಬೇಸಗೆ ಬಂದ ಹಾಂಗೆ ಗುಡ್ಡೆಲಿ ಹುಲ್ಲು ಸೊಪ್ಪು ಕಮ್ಮಿ ಆವುತ್ತು. ಮೇದಲ್ಲೇ ಮೇದರೆ ಎಂತ ಸಿಕ್ಕುತ್ತು? ದನಗಳ ಹೊಟ್ಟೆ ತುಂಬುದು ಹೇಂಗೆ? ಗುರುಬಿ ತನೆ ಅಪ್ಪದು ನಿಂದ ಮೇಲೆ ಕೊಡೆಯಾಲಕ್ಕೆ ಕರಕ್ಕೊಂಡು ಬಪ್ಪ ಪ್ರಶ್ನೆಯೇ ಇಲ್ಲೆ. ಪೇಟೆಲಿ ಎಲ್ಲವೂ ಕ್ರಯಕ್ಕೇ ಆಯೆಕ್ಕಲ್ಲದೋ. ಹಾಂಗಿದ್ದರೂ ಒಂದು ದನ, ಕಂಜಿಯ ಲಾಯಕಲ್ಲಿ ಸಾಂಕುದು. ಅವುಗಳ ಹೊಟ್ಟೆಗೆ ರಜವೂ ಕಮ್ಮಿ ಅಪ್ಪಲೆಡಿಯ. ಅಬ್ಬೆಯ ಪ್ರೀತಿಯ ಆರೈಕೆ ಇದರ ಗುರುಬಿ ಮರದ್ದಿಲ್ಲೆ. ಗುಡ್ಡಗೆ ಹೋದ ಗುರುಬಿ ಸೊಪ್ಪು ಸಿಕ್ಕುತ್ತೋ ನೋಡಿಗೊಂಡು ಗುಡ್ಡೆಯ ಪಡುವ ಹೊಡೆಂಗೆ ಇಳ್ದು. ಇಳಿತ್ತಾ ಹೋದ ಹಾಂಗೆ ತಾನು ಐದಾರು ಸರ್ತಿ ನಡಕ್ಕೊಂಡು ಹೋದ ದಾರಿಯೇ! ಹೋದ ಜೀವ ಬಂದ ಹಾಂಗಾತು. ಉತ್ಸಾಹಲ್ಲಿ ಓಡಿಗೊಂಡೇ ಹೋತು. ಬಚ್ಚುವಾಗ ಮಾರ್ಗದ ಕರೆಯಾಣ ಮರಂಗಳ ನೆರಳಿಲಿ ಮನಿಕ್ಕೊಂಬದು ಹೀಂಗೆಲ್ಲ ಮಾಡಿಗೊಂಡು ಎರಡು ದಿನ ಕಳಿವಾಗ ಕೊಡೆಯಾಲದ ಮನಗೆ ಅದರ ಅಬ್ಬೆ ಮನಗೆ ಬಂದು ಮುಟ್ಟಿತ್ತು.!

ಬತ್ತಾ ಇಪ್ಪ ದಾರಿಲಿ ಪಾಣೆಮಂಗ್ಳೂರಿಲಿ ಕೆಲವು ಪೋಲಿ ಹುಡುಗರು ಅದರ ಕೊರಳಿನ ಗಂಟೆಮಣಿಯ ಎಳದು ತೆಗವಲೆ ನೋಡಿದವೊಡೊ. ಆದರೆ ನಮ್ಮ ಗುರುಬಿ ಸಾಮಾನ್ಯದ್ದಾ? ಬಚ್ಚಿ ಹೆಣಪ್ಪಟೆ ಕಟ್ಟಿದರೂ ಆರಿಂಗೂ ಹೆದರುವ ದನ ಅಲ್ಲ! ಅವಕ್ಕೆತಾಡಿ, ಅಟ್ಟಿಸಿಗೊಂಡು ಹೋಗಿ ಓಡ್ಸಿತ್ತೊಡೊ. ದುಷ್ಟ ಬುದ್ಧಿಯ ಹುಡುಗರಿಂಗೆ ಪಾಠ ಕಲಿಸಿದ ದನದ ಧೈರ್ಯಕ್ಕೆ ಮೆಚ್ಚಿದ ಒಬ್ಬ ಬೀಡಾಬೀಡಿ ಬಾಳೆಹಣ್ಣು ಮಾರುವ ಅಂಗಡಿಯೊನು ಅದಕ್ಕೆ ಬಾಳೆಹಣ್ಣು ತಿನ್ಸಿ ಅವನ ಹತ್ತರೆ ಇದ್ದ ನೀರಿನ ಕುಡಿವಲೆ ಮಡುಗಿದ°ಡೊ (ಇದು ಆ ಮೇಲೆ ಚೋಮ, ವೆಂಕಪ್ಪ ಗುರುಬಿಯ ವಾಪಾಸು ಅದೇ ದಾರಿಲಿ ಕರಕ್ಕೊಂಡು ಹೋಪಾಗ ಹೀಂಗೆ ಪೇಟೆಯೊರು ಹೇಳಿದವೊಡೊ. ಗುರುಬಿಯ ಸ್ವಾಭಿಮಾನ ಧೈರ್ಯ ಸಾಹಸವ! ಹೊಗಳಿಗೊಂಡು)

ಚೋಮ, ಎಂಕಪ್ಪರೊಟ್ಟಿಂಗೆ ಗುರುಬಿಯ ಕಳ್ಸುವಾಗ ಅಪ್ಪ ಹೇಳಿದ°- ಅಲ್ಲಿ ಕೆದೆ ತುಂಬಾ ಇಪ್ಪ ದನಗಳ ಹೆತ್ತು ಕೊಟ್ಟ ಅಬ್ಬೆ ಅದು! ಶಾರದೆ, ದಾಸಿ, ಗುಡ್ಡ° ಹೋರಿ, ಗೋಪಿ, ಗಂಗೆ, ಗೌರಿ ಅಖೇರಿಯಾಣದ್ದು, ಇಷ್ಟೂ  ಇದರ ಮಕ್ಕಳೇ ಗೊಂತಿದ್ದಾ? ಇದರ ಕಣ್ಣಿಲಿ ನೀರು ಬರ್ಸಿದರೆ ನವಗೆ ಒಳ್ಳೆದಾವುತ್ತಾ? ಹೋಗಿ ಅದಕ್ಕೆ ಹೊಟ್ಟೆ ತುಂಬಾ ಹುಲ್ಲು,-ಅಲ್ಲಿ ತೋಟಲ್ಲಿ ಹುಲ್ಲಿರ್ತಲದಾ? ಎಲ್ಲವಕ್ಕೂ ಕೊಡುದರಿಂದ ಹೆಚ್ಚಾಗಿ ಇದಕ್ಕೆ ಹಸಿ ಹುಲ್ಲು ಹಾಕು, ಲಾಯಿಕಲ್ಲಿ ನೋಡಿಗೊ! ಮುಂದಾಣ ತಿಂಗಳ ರಜೆಲಿ ಅಲ್ಲಿಗೆ ಬತ್ತೆನ್ನೆ? ಅವಗ ನೋಡ್ತೆ ನೀನು ಹೇಂಗೆ ಸಾಂಕಿದ್ದೆ ಹೇಳಿ. ಗುರುಬಿ ನಮ್ಮ ಮನೆಯ ಭಾಗ್ಯದೇವತೆ ಗೊಂತಾತಾ?” ಹೀಂಗೆ ಎರಡು ಎಚ್ಚರಿಕೆಯ ಮಾತುಗಳ ಹೇಳಿದ°.

ಗುರುಬಿಗೆ ಎಂಕಪ್ಪ ಚೋಮರೊಟ್ಟಿಂಗೆ ಹೋಪಲೆ ರೆಜವೂ ಮನಸ್ಸಿಲ್ಲೆ. ಅದರ ಕೊರಳಿಂಗೆ ಬಳ್ಳಿಹಾಕಿ ಎಳಕ್ಕೊಂಡು ಹೋಪಾಗ ಅದು ಕೊರಳು ತಿರುಗಿಸಿ ಎಂಗಳ ನೋಡಿಗೋಂಡು ಮಾರ್ಗದ ತಿರುಗಾಸಿನವರೆಗೂ ಹಾಂಗೇ ಹೋತು- ಎನಗೂ ಅಕ್ಕಂಗೂ ದುಃಖವೇ ಬಂದು ಬಿಟ್ಟತ್ತು. ಅಬ್ಬೆ ಉಕ್ಕಿ ಬಂದ ಕಣ್ಣೀರಿನ ಸೆರಗಿಲಿ ಉದ್ದಿಗೊಂಡು ಒಳ ಹೋದ°

*****

ದನಗೊಕ್ಕೆ ತಮ್ಮ ಸಾಂಕಿದೋರ ಮೇಲೆ ಮಾಂತ್ರ ಪ್ರೀತಿ ಅಲ್ಲ. ಅವುಗಳೊಟ್ಟಿಂಗೆ ಕೆದೆಲಿ, ಮೇವಲೆ ಬಿಟ್ಟಿಪ್ಪಾಗ, ಗುಡ್ಡೆ ಪಡ್ಪುಗಳಲ್ಲಿ ಸಂಗಾತಿಗಳಾಗಿಪ್ಪ ದನಗಳ ಮೇಲೆಯೂ ಮಮಕಾರ, ಸಹವೇದನೆ, ಸಹಾನುಭೂತಿ, ಪ್ರೀತಿ ಇರ್ತು. ಕಷ್ಟಕಾಲಲ್ಲಿ ಒಂದಕ್ಕೊಂದು ಸಹಾಯ, ಕಾವಲು ಕಾವದು, ಶತ್ರುಗಳ ಓಡ್ಸುದು ಕೂಡಾ ಮಾಡ್ತವು.

ಇದು ಸುಮಾರು ಐವತ್ತೈದು ವರ್ಷ ಹಿಂದೆ ಎಂಗೊ ವಿಟ್ಲಲ್ಲಿಪ್ಪಾಗ ನಡದ ಎರಡು ದನಗಳ ಕಥೆ. ಎಂಗಳ ಹಿತ್ತಿಲುಮನೆಯ ಪಾಗಾರದ ಹೆರ ಒಂದೆರಡು ಎಕ್ರೆಯಷ್ಟು ಖಾಲಿ ಅಡ್ಕ, ಅದರ ಆಚಕೋಡಿಲಿ ಒಂದು ಸಣ್ಣ ಗುಡ್ಡೆ-ಗುಡ್ಡೆ ಹೇಳುದರಿಂದಲೂ ದಿಬ್ಬ ಹೇಳಿದರೂ ಸಾಕು. ಎಂಗಳ ಮನೆಲಿ ಎರಡು ದನಗೊ. ಒಂದು ಸಿಂಧಿ ಬೆರಕ್ಕೆಯ ಕಾವೇರಿ ಇನ್ನೊಂದು ಸಾಹಿಲ್ವಾಲ್ ಯಮುನೆ. ಕಾವೇರಿಗೆ ತಿಂಗಳು ತುಂಬಿದ್ದು. ಯಮುನೆಯ ದಿನಾಗಳೂ ಆನು ಕರದಿಕ್ಕಿ ಬಪ್ಪಾಗ ಕಾವೇರಿಯ ನೋಡ್ತ ಇರ್ತೆ-ಕಂಜಿ ಹಾಕುವ ಲಕ್ಷಣ ಕಾಣ್ತೋ ಹೇಳಿ. ಎರಡೂ ದನಗಳ ರಜ ಕೈಕಾಲು ಆಡ್ಸಿಗೊಂಡು ಬರಲಿ ಹೇಳಿ ಒಂದು ಗಳಿಗೆ ಹೆರ ಬಿಡ್ಳಿದ್ದು. ಕಟ್ಟಿಯೇ ಹಾಕಿದರೆ ಅವಕ್ಕೆ ಆರೋಗ್ಯ ಸಂತೋಷ ಇರ್ತಿಲ್ಲೆ. ಕೆದೆ ಕೆಲಸ ಮಾಡುವ ಹುಡುಗ ಸಂಜಯನ ಹತ್ತರೆ “ರಜ ನೋಡಿಗೊಂಡು ಹೆರ ಬಿಡು” ಹೇಳ್ತಾ ಇತ್ತಿದ್ದೆ.

ಆ ದಿನ ಯಾವಾಗಾಣ ಹಾಂಗೆ ಹಿಂಡಿ ಅಕ್ಕಚ್ಚು ಕೊಟ್ಟಾಗಿ ಸುಮಾರು ಎಂಟು-ಎಂಟುವರೆ ಗಂಟೆಗೆ ಸಂಜಯ ದನಗಳ ಹೆರ ಬಿಟ್ಟಿದು. ಸುಮಾರು ಒಂಬತ್ತು ಗಂಟೆ ಆದಿಕ್ಕಷ್ಟೆ. ಕರವ ದನ ಯಮುನೆ ಗುಡ್ಡೆ ಹೊಡೆಂದ ಜೋರಿಲಿ ಭೋಂ ಭೋಂ ಹೇಳಿಗೊಂಡು ಓಡಿಗೊಂಡು ಮನೆಯ ಕಂಪೌಂಡಿನ ಹತ್ತರಂಗೆ ಬಂತು. ಎಂತ ಬೊಬ್ಬೆ ಹೇಳಿ ನೋಡುಲೆ ಬಂದೆ. ಎನ್ನ ನೋಡಿದ ಕೂಡ್ಳೆ ಪುನಃ ದೊಡ್ಡ ಸ್ವರಲಿ ಕೂಗಿಕ್ಕಿ ಗುಡ್ಡೆಯ ಹತ್ತರಂಗೆ ಓಡಿತ್ತು. ಎರಡು ನಿಮಿಷ ಕಳುದು ಪುನಃ ಅದೇ ತರ ಬೊಬ್ಬೆ ಹೊಡಕ್ಕೊಂಡು ಪಾಗಾರದ ಹತ್ತರಂಗೆ ಬಂದು ಇನ್ನೂ ಜೋರಾಗಿ ಕೂಗಿಕ್ಕಿ ಪುನಃ ಅಲ್ಲಿಗೇ ಓಡಿಹೋತು. ಎಂತದೋ ಆಯಿದು, ಇಲ್ಲದ್ದರೆ ಹೀಂಗೆ ಮಾಡ ಹೇಳಿ ಸಂಜಯನ ಹೋಗು ಬೇಗ, ನೋಡಿಗೊಂಡು ಬಾ ಹೇಳಿ ಕಳ್ಸಿದೆ. ಅದು ಕೂಡಾ ಓಡಿಗೊಂಡೇ ಹೋತು. ಹತ್ತು ನಿಮಿಷ ಕಳಿವಾಗ ಸಂಜಯ° ಆವಗಷ್ಟೆ ಹುಟ್ಟಿದ ಕಂಜಿಯ ಎರಡೂ ಕೈಲಿ ಅಪ್ಪಿ ಹಿಡ್ಕೊಂಡು ನಗೆ ಮಾಡಿಗೊಂಡು ಬತ್ತಾ ಇದ್ದು. ಅದರ ಹಿಂದಂದ ಎರಡೂ ದನಗೊ ಜೋರಾಗಿ ನಡಕ್ಕೊಂಡು ಭಾಂ ಭಾಂ ಹೇಳಿಗೊಂಡು ಬಂದವು. ಬಾಯಿ ಬಾರದ್ದರೂ ಈ ಜೀವನ ನಾಟಕಲ್ಲಿ ಯಮುನೆಯ ಪಾತ್ರ ಎಷ್ಟು ಅದ್ಭುತ!. ತನ್ನ ಜತೆಗಾತಿಯ ಪ್ರಸವ ಕಾಲಲ್ಲಿ ಅದರ ಹತ್ತರೆಯೇ ಇದ್ದುಗೊಂಡು ಮಧ್ಯೆ ಮಧ್ಯೆ ತನ್ನ ಸಾಂಕುವೊರಿಂಗೆ ಸುದ್ದಿ ಮುಟ್ಸುಲೆ, ಹುಟ್ಟಿದ ಕಂಜಿಗೆ ಅಪಾಯ ಬಾರದ್ದ ಹಾಂಗೆ, ಮುಖ್ಯವಾಗಿ ನಾಯಿಗಳ ಹೆದರಿಕೆ. ಇದೆಲ್ಲ ಕಾರಣಕ್ಕೆ ಅದರ ರಕ್ಷಿಸುವ ಜವಾಬ್ದಾರಿಯನ್ನೂ ವಹಿಸಿಗೊಂಡ ಯಮುನೆಯ ಎಷ್ಟು ಹೊಗಳಿದರೂ ಸಾಲ. ಇಷ್ಟೆಲ್ಲ ಅದು ಮಾಡೆಕ್ಕಾರೆ ಅದರ ಹೃದಯದಲ್ಲಿದ್ದಂಥ ಸಹಬಾಳ್ವೆಯ ಕರ್ತವ್ಯ ಪ್ರಜ್ಞೆ, ಅದರ ಉದ್ವೇಗ, ಸಹಾನುಭೂತಿ, ಮನಮಿಡಿತ, ಅದಕಾಗಿ ಮಾಡಿದ ಪ್ರಯತ್ನ ಎಲ್ಲವೂ ಮನುಷ್ಯರು ಕೂಡಾ ನಾಚುವಂಥದ್ದು.

ಜೀವ ಜಗತ್ತಿಲಿ ಮನುಷ್ಯರೇ ಸರ್ವಶ್ರೇಷ್ಠ ಹೇಳಿ ನಾವು ತಿಳ್ಕೊಂಡಿರ್ತು. ಆದರೆ ದನಗಳ ಜೀವನವ ಹತ್ತರಂದ ನೋಡುವಾಗ ದನಗಳ ಯಾವ ದೃಷ್ಟಿಕೋನಲ್ಲಿ ನೋಡಿದರೂ ಮನುಷ್ಯರಿಂದ ಕಡಮ್ಮೆ ಅಲ್ಲ, ಬೇಕಾರೆ ಮನುಷ್ಯರಿಂದವೂ ಹೆಚ್ಚು ನಿಸ್ವಾರ್ಥ ಬುಧ್ಧಿಲಿ ಪರಸ್ಪರ ಸಹಾಯ ಸೇವೆ ಮಾಡ್ತವು. ಇದು ನಿಜಕ್ಕೂ ಸಂಗಾತಿ ಪ್ರೀತಿ, ಅಕ್ಕ ತಂಗೆಯರ ಪ್ರೀತಿ. ಆ ಪ್ರೀತಿಗೆ ಯಾವ ರಕ್ತ ಸಂಬಂಧವೂ ಬೇಕಾಗಿಲ್ಲೆ ಅವಕ್ಕೆ (ಸ್ವಜನ ಪ್ರೇಮವನ್ನೂ ಮೀರುವಂಥ ಇನ್ನೊಂದು ಪ್ರಸಂಗವ ಮುಂದೆ ಹೇಳ್ತೆ)

ಇಂಥಾದ್ದೇ ಒಂದು ಘಟನೆ ಎನ್ನ ಅತ್ತಿಗೊರ ಮನೆಲಿ ನಡದ್ದು. ಅತ್ತಿಗೆ ಮನೆ ಹಳ್ಳಿಲಿ. ಕೆದೆ ತುಂಬಾ ದನಗೊ. ಮೇವಲೆ ಬೇಕಾದಷ್ಟು ಸೊಪ್ಪು, ಹುಲ್ಲಿನ ಗುಡ್ಡೆ ಕಾಡುಗೊ. ನಿತ್ಯಾಣ ಹಾಂಗೆ ಎಲ್ಲವನ್ನೂ ಕೆದೆಂದ ಹೆರಮಾಡಿ ಗುಡ್ಡಗೆ ಎಬ್ಬಿದವು. ದಿನಾಗಳೂ ಹೊತ್ತೋಪಗ ಐದು ಗಂಟೆಯೊಳ ಕೆದಗೆ ಬಂದು ಕೂಡುವ ದನಗೊ, ಇಂದು ಗಂಟೆ ಆರಾತು, ಆರೂವರೆ ಆತು, ದನಗಳ ಸುದ್ದಿಯೇ ಇಲ್ಲೆ. ಕೆದೆಲಿಪ್ಪ ಸಣ್ಣ ಕಂಜಿಗೊ ಅಂಬೇ ಅಂಬೇ…. ಹೇಳಿಗೊಂಡು  ಅವರವರ ಅಬ್ಬೆಕ್ಕಳ ದಿನಿಗೇಳ್ತಾ ಇದ್ದವು. ಮನೆಯೋರಿಂಗೆಲ್ಲಾ ಚಿಂತೆ ಆತು. ಗಾಬರಿಯೂ ಆತು. “ಆಷ್ಟೂ ದನಗೊ  ಎಲ್ಲಿಗೆ ಹೋದವು?” ಎರಡು ಮೂರು ಆಳುಗಳ ಕರಕ್ಕೊಂಡು ಅತ್ತಿಗೆಯ ಮಗಂದ್ರು ಆಸುಪಾಸಿಲೆಲ್ಲಾ ಹುಡ್ಕಿದರೂ ದನಗಳ ಪತ್ತೆಯೇ ಇಲ್ಲೆ.

ಮತ್ತೆ ನೋಡಿದರೆ ಎರಡು ಗುಡ್ಡೆಗಳ ಸಂದಿಲಿ ಮರಂಗಳ ಅಡಿಲಿ ಎಲ್ಲಾ ದನಗಳೂ ಸುತ್ತುಕಟ್ಟಿ ನಿಂದಿದವು. ನಡೂಗೆ ಒಂದು ದನ ಕಂಜಿ ಹಾಕಿದ್ದು. ಕಂಜಿ ನಿಂಬಲೆ, ನಡವಲೆ ಪ್ರಯತ್ನ ಮಾಡ್ತಾ ಇದ್ದು. ಕಾಡು, ಗುಡ್ಡಗಳಲ್ಲಿ ಕುದ್ಕಂಗೊ, ಕಾಟುನಾಯಿಗೊ ಇಂಥ ಸಂದರ್ಭಕ್ಕೆ ಕಾದು ಕೂದುಗೊಂಡಿರ್ತವು. ದನಂಗೊಕ್ಕೆ ಈ ಪರಿಜ್ಞಾನ ಇಪ್ಪ ಕಾರಣವೇ ಅವು ಅಬ್ಬೆ, ಮಗನ ಸಂರಕ್ಷಣೆಗೆ ಆ ರೀತಿಲಿ ನಿಂದುಗೊಂಡವು. ತಮ್ಮ ಸಂಗಾತಿಯ ಕಷ್ಟ ಸುಖಲ್ಲಿ ತಾವೂ ಹೊಣೆ ಹೊರೆಕ್ಕು, ಇದು “ನಮ್ಮ ಜವಾಬ್ದಾರಿ” ಎಂಬಂಥ ಕರ್ತವ್ಯಜ್ಞಾನ ಅವಕ್ಕೆ ಇರೆಕ್ಕಾರೆ ಅವುಗಳ ಬುಧ್ಧಿಯ ಮಟ್ಟ ಎಷ್ಟು ಉನ್ನತವಾಗಿದ್ದು? ಅಂಥ ದನಗಳ ಯೋಗ್ಯತೆಯ ತಿಳಿವ ಶಕ್ತಿ ಮನುಷ್ಯರೆನಿಸಿಗೊಂಡ ನವಗಿಲ್ಲೆ.

ಇಂಥ ಕರ್ತವ್ಯನಿಷ್ಠೆಯ ಇನ್ನೊಂದು ಕಥೆ ಹೇಳ್ತೆ. ಇದು ಮದಲೇ ಹೇಳಿದಂಥ ಯಮುನೆದೇ ಕಥೆ. ಯಾವಾಗಾಣ ಹಾಂಗೆ ಯಮುನೆ ಅದೇ ಪಡ್ಪಿಲಿ ಮೇಯ್ತಾ ಇತ್ತು ಸುಮಾರು ದಿನಂದ. ಒಂದು ಸಣ್ಣ ಏಡುದೇ ಅದೇ ಜಾಗೆಗೆ ಬಂದು ಮೇದುಗೊಂಡಿತ್ತು. ಆ ದಿನ ಎರಡು ದೊಡ್ಡ ನಾಯಿಗೊ ಏಡಿನ ಹಿಡಿವಲೆ ಅದರ ಮೇಲಂಗೆ ಹಾರಿದವು. ಒಂದರಿಯಂಗೆ ಏಡು ಛಂಗನೆ ಹಾರಿ ತಪ್ಸಿಗೊಂಡತ್ತು. ಆದರೆ ಅದರ ಸುತ್ತ ಎರಡೂ ನಾಯಿಗೊ ಅಡ್ಡಕಟ್ಟಿಗೊಂಡು ಸುತ್ತು ಹಾಕಿಗೊಂಡು ಇಪ್ಪಾಗ ಅವುಗಳ ಚಕ್ರವ್ಯೂಹಂದ ಏಡಿಂಗೆ ಹೆರ ಓಡುಲೆ ಎಡಿತ್ತಿಲ್ಲೆ. ಇದರ ನೋಡಿ ರಜವೇ ದೂರಲ್ಲಿದ್ದ ಎಂಗಳ ಯಮುನೆ ಓಡಿಗೊಂಡು ಬಂತು ಏಡಿನ ಹತ್ತರಂಗೆ, ನಾಯಿಗಳ ಅಟ್ಸುಲೆ! ಅದರೆ ನಾಯಿಗೊ ಏಡಿನ ಬಿಟ್ಟುಕೊಡ್ತವಿಲ್ಲೆ. ಯಮುನೆ ನಾಯಿಗಳ ಅಟ್ಸಿಗೊಂಡು ಸುತ್ತ ಬಂದದೇ ವಿನಃ ನಾಯಿಗೊ ಓಡ್ತವಿಲ್ಲೆ. ನೋಡಿತ್ತು ನೋಡಿತ್ತು ದನ, ತನ್ನ ತಲೆ ಓಡ್ಸಿತ್ತು! ನಾಯಿಗಳ ಅಟ್ಟುದಕ್ಕೆ ಬದಲಾಗಿ ಏಡನ್ನೇ ತನ್ನ ಮುಸುಡಿಲಿ ನೂಕಿ ನೂಕಿ, ಹುಲಿಗಳ ಹಾಂಗಿದ್ದ ನಾಯಿಗಳ ಸೆರೆಮನೆಂದ ಹೆರ ಓಡ್ಸಿತ್ತು. ಅಲ್ಲಿಗೇ ಬಿಟ್ಟಿದಿಲ್ಲೆ. ಏಡಿನನ್ನೇ ಅಟ್ಟಿಗೊಂಡು ಅಟ್ಟಿಗೊಂಡು ಓಡಿ ಅದರ ಮನೆಯ ಗೂಡಿಂಗೇ ಸೇರ್ಸಿಕ್ಕಿ ಬಂತು. ಮಾರ್ಗಲ್ಲಿ ನಿಂದುಗೊಂಡು ಎರಡು ಜನ ದಾರಿಲಿ ಹೋವ್ತಾ ಇದ್ದೊರು ಏಡು ನಾಯಿಗೊ ಮತ್ತೆ ಎಂಗಳ ದನದ ರುದ್ರನಾಟಕವ ನೋಡ್ತಾ ಇತ್ತಿದ್ದವು. ಎಲ್ಲೊರು ಯಮುನೆಯ ಬುಧ್ಧಿವಂತಿಕೆಗೆ ವಾಹ್ ವಾಹ್ ಹೇಳಿದೋರೇ. ಈ ನಾಯಿಗೊ ಮಾಂತ್ರ ಬೆಪ್ಪುಕಟ್ಟಿ ನಿಂದುಗೊಂಡು ಕಡೆಂಗೆ ಬೀಲಮಡುಸಿಗೊಂಡು ಓಡಿ ಹೋದವು. ಹೇಂಗಿದ್ದು ದನದ ’ಚಾತುರ್‍ಪಾಯ’! (ಚತುರೋಪಾಯ?)

ಇಷ್ಟೆಲ್ಲಾ ದನಗಳ ವಿಷಯ ಬರದ ಮೇಲೆ ಒಂದು ಕಣ್ಣೀರಿನ ಕಥೆಯ ನಿಂಗಳ ಹತ್ತರೆ ಹೇಳಿ ಮನಸ್ಸು ಹಗುರ ಮಾಡ್ಲೆಡಿತ್ತೋ ಹೇಳಿ ನೋಡದ್ದೆ ಈ ಲೇಖನವ ಮುಗಿಶುಲೆ ಮನಸ್ಸಾವುತ್ತಿಲ್ಲೆ. ಎಂಗಳದ್ದೊಂದು ಚೆಂದದ ಗಡಸು ಕಂಜಿ. ಮೆಯ್ಯೋ ಅಷ್ಟೂ ನೊಂಪು, ಪಟ್ಟೆ ವಸ್ತ್ರದ ಹಾಂಗೆ, ಹೆಸರು ಬೆಳ್ಳಿ. ಕಂಜಿ ದೊಡ್ಡ ಆಯಿಕೊಂಡು ಬಂತು. ಇನ್ನು ರಜ ಹೊತ್ತಿಂಗಾದರೂ ಮೇವಲೆ ಬಿಡೆಕ್ಕು ಹೇಳಿ ಆಲೋಚನೆ ಮಾಡಿದೆಯೊ°. ಅಲ್ಲಿಯೇ ಹತ್ತರಾಣೋರ ಸಣ್ಣ ಕಂಜಿಯೊಂದು ಅದೇ ಪಡ್ಪಿಂಗೆ ಮೇವಲೆ ಬತ್ತಾ ಇತ್ತು. ಬೆಳ್ಳಿಂದ ಸಣ್ಣದು. ಎರಡೂ ಜತೆಗೂಡಿದವು. ಒಟ್ಟಿಂಗೆ ಮೇವಲೆ ಹೋಪದು, ಒಟ್ಟಿಂಗೆ ಬಪ್ಪದು. ಶಾಲೆಗೆ ಹೋಪ ಮಕ್ಕೊ ತಮ್ಮ ಸ್ನೇಹಿತರ ಒಟ್ಟಿಂಗೆ ಹೋಪಲೆ ಅವರ ಮನೆಯ ಗೇಟಿನ ಹತ್ತರೆ ಕಾದುಗೊಂಡು ನಿಲ್ಲುತ್ತವನ್ನೆ? ಹಾಂಗೆ ಈ ಸಣ್ಣ ಕಂಜಿ ಕಪ್ಪು ಬಣ್ಣದ್ದು ಬೆಳ್ಳಿಯ ಒಟ್ಟಿಂಗೆ ಹೋಪಲೆ ಗೇಟಿನ ಹತ್ತರೆ ಕಾದು ನಿಂಬದು. ಮತ್ತೆ ಎರಡೂ ಒಟ್ಟಿಂಗೆ ಪಡ್ಪಿಂಗೆ ಹೋಗಿ ವಾಪಾಸು ಬಪ್ಪದೂ ಒಟ್ಟಿಂಗೇ!. ಹೀಂಗೆ ಅನ್ಯೋನ್ಯ ಪ್ರೀತಿಲಿ ಸಂತೋಷಲ್ಲಿ ಇತ್ತಿದ್ದವು. ಎರಡು ಮೂರು ತಿಂಗಳು ಹೀಂಗೇ ಕಳುದತ್ತು.

ಒಂದು ದಿನ ಬೆಳ್ಳಿಯ ಹೆರ ಬಿಡ್ಲೆ ನೋಡ್ತು ಸಂಜಯ- ಅದು ಹೆರಡುಲೇ ಒಪ್ಪುತ್ತಿಲ್ಲೆ. ಎಳಕ್ಕೊಂಡು ಗೇಟಿನವರೆಗೆ ಹೋದರೂ ಕೈ ತಪ್ಸಿಗೊಂಡು ಕೆದಗೇ ಓಡಿಗೊಂಡು ಬಂತು. ಕೆಟ್ಟ ಸಂಗತಿಗೊ ಒಟ್ಟೊಟ್ಟಾಗಿ ಸೇರಿಗೊಂಡು ಬತ್ತವು ಹೇಳಿ ಕಾಣ್ತು. ಆದರೆ ಮನುಷ್ಯರಾದ ನವಗೆ ಅರ್ಥ ಆವುತ್ತಿಲ್ಲೆ. ವಿಧಿ ಬಲೆಬೀಸುವ ರೀತಿ ಅದುವೇ. ಕೆದೆ ಅಟ್ಟಲ್ಲಿ ಬೆಳ್ಹುಲ್ಲು ಮುಗುದು ಹೋಗಿತ್ತು. ಎಂತ ಮಾಡುದು. ಪೇಟೆ ಅಲ್ಲದಾ? ತರ್ಸಿ ಆಯೆಕ್ಕಷ್ಟೆ. ಅಲ್ಲಿವರೆಗೆ ಹೀಂಗೇ ಮೇವಲೆ ಬಿಡೆಕ್ಕಾವುತ್ತು, ಹೇಳಿ ಮನಸ್ಸು ಕಲ್ಲು ಮಾಡಿಗೊಂಡು ಅದರ ಹೆರ ಬಿಟ್ಟೆಯೊ°. ಅಲ್ಲಿ ಅದರ ಸ್ನೇಹಿತೆ ಕಾದುಗೊಂಡು ಇತ್ತು. ಎರಡುದೇ ರಜ ಹೊತ್ತು ಅತ್ತಿತ್ತು ಸುತ್ತಿಕ್ಕಿ ಗೇಟಿನ ಹತ್ತರಂಗೆ ಬಂದು ನಿಂದುಗೊಂಡವು. ಎಂಗೊಗೆ ಆರಿಂಗೂ ಅದರ ಒಳ ಕರಕ್ಕೊಂಡು ಬರೆಕ್ಕು ಹೆಳುವ ಜ್ಞಾನವೇ ಬಯಿಂದಿಲ್ಲೆ. ಮತ್ತೊಂದು ಗಳಿಗೆಲಿ ನೋಡುವಾಗ ಎರಡು ಕಂಜಿಗೊ ಅಲ್ಲಿ ಇತ್ತಿದ್ದವಿಲ್ಲೆ. ಸರಿ ಮೇವಲೆ ಹೋಗಲಿ ಹೇಳಿಗೊಂಡು ಆನು ಎನ್ನ ಕೆಲಸಂಗಳಲ್ಲಿ ಮಗ್ನಳಾದೆ. ಮನೆಯ ಕೆಲಸಂಗಳಲ್ಲಿ ಹೊತ್ತು ಹೋಪದೇ ಗೊಂತಾವುತ್ತಿಲ್ಲೆ. ಕಂಜಿಯ ವಿಷಯವನ್ನೇ ಮರದೆ. ಹೊತ್ತೋಪಲಪ್ಪಗ ಸಂಜಯ ಹೇಳ್ತು ಬೆಳ್ಳಿ ಬಯಿಂದೇ ಇಲ್ಲೆ ಹೇಳಿ. ಎನಗೆ ಆಶ್ಚರ್ಯ ಆತು. ಆರಾದರೂ ಕದ್ದುಗೊಂಡು ಹೋದವೋ ಹೇಳಿಯೂ ಆಲೋಚನೆ ಬಂತು. ಸಂಜಯ ಸುತ್ತುಮುತ್ತೆಲ್ಲಾ ಹುಡುಕ್ಕಿದರೂ ಕಂಜಿ ಎಲ್ಲಿಯೂ ಇಲ್ಲೆ. ಕಡೇಂಗೆ ಗೊಂತಾದ ಸಂಗತಿಲಿ ಎಂಗಳೆಲ್ಲೋರ ಎದೆ ಒಡದು ಹೋತು. ಕನಸು ಮನಸಿಲಿಯೂ ಗ್ರೇಶದ್ದದು ನಡದು ಹೋಯಿದು. ಎಂಗಳ ಮನೆಯ ಮುಂದೆ ಮಾರ್ಗಂದಾಚಿಕೆ ಒಂದು ಕಂಪೌಂಡ್ ಇಪ್ಪ ಹಿತ್ತಿಲು. ಅದರ ಗೋಡೆ ಒಂದು ಅಡಿ ಅಗಲದಷ್ಟು ಜೆರುದು ಬಿದ್ದು ಹೋಯಿದು. ಈ ಎರಡೂ ಕಂಜಿಗೊ ಇಷ್ಟರವರೆಗೆ ಆರೂ ಹೋಗದ್ದ ಆ ಬಿರುಕಿನ ಸೆರೆಲಿ ಹೋಗಿ ಅಲ್ಲಿ ಎತ್ತರೆತ್ತರೆಕ್ಕೆ ಬೆಳದ ಹುಲ್ಲಿನ ಹಿಂದೆ ಒಂದು ಕಟ್ಟೆ ಇಲ್ಲದ್ದ ಬಾಬಿಗೆ ಬಿದ್ದು ಎನ್ನ ಬೆಳ್ಳಿ ಸತ್ತೇ ಹೋಯಿದು! ಆ ಸಣ್ಣ ಕಪ್ಪು ಕುರುಂಟು ಕಂಜಿ ಅಲ್ಲಿಯೇ ಬಾಬಿಯ ಹತ್ತರೆಯೇ ಸುತ್ತುಹಾಯಿಕೊಂಡು ಮೂರುಸಂದಿ ಆದರೂ ಮನೆಗೆ ಹೋಗದ್ದೆ ಅಲ್ಲಿಯೇ ಇದ್ದು. ಅದರ ಸ್ನೇಹಿತೆಯ ಬಿಟ್ಟಿಕ್ಕಿ ಹೇಂಗೆ ಮನಗೆ ಹೋಕು ಅದು? ಅದರ ಮೌನಶೋಕ ಎಲ್ಲೋರ ಕಣ್ಣಿಲಿಯೂ ನೀರು ಬರ್ಸ್ತಿತ್ತು.ಎಂಥ ಅಚಾತುರ್ಯ ನಡದು ಹೋತು ಎನ್ನಂದ!. ಮನೆಂದ ಹೆರ ಹೋವುತ್ತಿಲ್ಲೆ ಹೇಳಿ ಮೂರು ಮೂರು ಸರ್ತಿ ಹೇಳಿದರೂ ಕೇಳದ್ದೆ ಅದರ ಮೃತ್ಯುಕೂಪಕ್ಕೆ ತಳ್ಳಿ ಬಿಟ್ಟೆನ್ನೆ ಆನು! ಎನ್ನ ಕೈಲಿ ಎಂಥ ಘೋರ ಅಪರಾಧ ಆಗಿ ಹೋತು! ಬೆಳ್ಳಿಯ ಸಾವಿಂಗೆ ಆನೇ ಹೊಣೆಗಾರ್ತಿ! ಈ ಪಾಪಪ್ರಜ್ಞೆಂದ ಎನಗೆ ಬಿಡುಗಡೆ ಇಲ್ಲೆ. ವರ್ಷ ಐವತ್ತರ ಮೇಲೆ ಆತು ಈ ದುರಂತ ನಡದು. ಇಂದಿಂಗೂ ಆನು ಪಶ್ಚಾತ್ತಾಪಲ್ಲಿ ಬೇಯುತ್ತಲೇ ಇದ್ದೆ, ಬೆಂದುಗೊಂಡೇ ಇದ್ದೆ

****

ಇಲ್ಲಿ ಮುಖ್ಯವಾಗಿ ಗಮನಿಸೆಕ್ಕಾದ ಅಂಶ ಎಂತ ಹೇಳಿದರೆ ದನಗೊಕ್ಕೆ ತಮ್ಮ ಮೃತ್ಯುವಿನ ಪೂರ್ವಾನುಮಾನ, ಮೃತ್ಯುವಿನ ನೆರಳು ಕಾಣುತ್ತೋ ಹೇಳಿ? ಇಷ್ಟು ಸಣ್ಣ ಕಂಜಿ ಬೆಳ್ಳಿಗೆ ಖಂಡಿತವಾಗಿಯೂ ತನ್ನ ಅಂತ್ಯಕಾಲದ ಕರಿನೆರಳು ಕಂಡಿಕ್ಕು. ಇಲ್ಲದ್ದರೆ ಹೆರಹೋಪಲೇ ಇಷ್ಟ ಇಲ್ಲೆ ಹೇಳಿ ಎಂತಗೆ ಹಠಮಾಡಿತ್ತು? ಎಂತಗೆ ಹೆರಬಿಟ್ಟಮೇಲೂ ಗೇಟಿನ ಹತ್ತರಂಗೆ ವಾಪಾಸು ಬಂದು ನಿಂದತ್ತು? ಕಡೆಂಗೂ ಆರೂ ಇಲ್ಲದ್ದ, ಆರೂ ಹೋಗದ್ದ ಖಾಲಿ ಹಿತ್ತಿಲಿಂಗೆ ಎಂತಕೆ ಹೋತು? ಆದರೆ ಮೃತ್ಯುದೇವತೆ ಅಲ್ಲಿಯೆ ಕಾದುಕೂದುಗೊಂಡದು ಅದಕ್ಕೆ ಗೊಂತಾಗದ್ದೆ ಹೋತೋ? ಆ ವಿಧಿಯೇ ಅಲ್ಲಿಗೆ ಅದರ ಎಳಕ್ಕೊಂಡು ಹೋದ್ದೋ???

****

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ
ರೂಪಾನಗರ
ಮೈಸೂರು

9019274678

ಶರ್ಮಪ್ಪಚ್ಚಿ

   

You may also like...

9 Responses

 1. ಬೊಳುಂಬು ಗೋಪಾಲ says:

  ಓಹ್, ಮನಸ್ಸಿಂಗೆ ತಟ್ಟಿದ ಐದು ಕಥೆಗೊ ಒಂದೇ ಶುದ್ದಿಲಿ, ಲಾಯಕಿತ್ತು. ಕಡೇಣ ಕತೆಯಂತೂ ಕಣ್ನೀರು ಹರುಶಿತ್ತ್ತು.
  ಅಲ್ಲ, ಗುರುಬಿಗೆ ಪೇಟೆ ಮನೆಯ ಎಡ್ರೆಸ್ಸು ಹೇಂಗೆ ಸಿಕ್ಕಿತ್ತ್ತು ಹೇಳಿ. ಎಂಭತ್ತು ವರ್ಷ ಹಿಂದಾಣ ಕತೆ ಆದ ಕಾರಣ ತೊಂದರೆ ಇಲ್ಲೆ, ಮನಗೊ ಕೆಲವೇ ಇದ್ದಿಕಷ್ಟೆ. ಅಂತೂ ಎಲ್ಲವುದೆ ಸೂಪರ್.

 2. ಗೋಮಾತೆಯ ವಿವಿಧ ಭಾವನೆಗಳ ಬಹಳ ಮನೋಜ್ಞವಾಗಿ ಬರದ್ದಿ ಅತ್ತೆ. ಮೂಕಪ್ರಾಣಿಗಳಿಂದ ನಾವು ಕಲಿವಲೆ ತುಂಬಾ ಇದ್ದು ಹೇಳಿ ಅನಿಸಿತ್ತು!

 3. ಶ್ರೀಶ says:

  ಗುರುಬಿಯ ಸಾಹಸ, ಯಮುನೆಯ ಬುಧ್ಧಿವಂತಿಕೆ ಇದರೆಲ್ಲಾ ಓದಿಯಪ್ಪಗ ದನಗಳ ಲೋಕಕ್ಕೆ ಕರಕ್ಕೊಂಡು ಹೋದಾಂಗಾತು. ಅಕೇರಿಯಾಣ ಬೆಳ್ಳಿಯ ಕತೆ ಓದಿಯಪ್ಪಗ ಬೇಜಾರು ಆತು.
  ಅತ್ತೆ ಎದುರು ಕೂದೊಂಡು ಕತೆ ಹೇಳಿದ ಹಾಂಗೆ ಅನುಭವ ಆತು.

 4. ಬಡೆಕ್ಕಿಲ ಸರಸ್ವತಿ ಅಕ್ಕಾ, ಕತೆ, ಬರಕ್ಕೊಂಡು ಹೋದ ರೀತಿ, ಚೊಕ್ಕ ಆಗಿ;ಕಲವು ದಿಕೆ ಮನಮುಟ್ಟಿತ್ತು.ಮತ್ತೊಂದು ಕಡೆ ಮನ ಕರಗಿತ್ತು. ಮನುಷ್ಯರಿಂಗೆ ದನಗೊ ಬುದ್ಧಿವಾದ ಪರೋಕ್ಷವಾಗಿ ಹೇಳಿದೊವು. ಈ ಕತೆಯ ಹಾಂಗೇ ಇದ್ದ ಕತೆ ಒಂದು ಅದುದೆ ನೆಡದ ಸಂಗತಿ!.ಎನ್ನಜ್ಜನಮನೆಲಿ.ಗುಡ್ಡೆಲಿ ಕಂಜಿ ಹಾಕಿದ ದನ, ಹೀಂಗೆ ಗೇಟಿನ ಹತ್ರೆ ಬಂದು ಕೂಗಿ ಮನೆಯವರ ಕರಕ್ಕೊಂಡು ಹೋಗಿ ಗಂಡಿಯ ಬಲ್ಲಗೆ ಬಿದ್ದ ಕಂಜಿಯ ರಕ್ಷಣೆ ಮಾಡಿದ ಕತೆ. ಅದರ ಎರಡು ವರ್ಷಮೊದಲೇ ಇದೇ ಬಯಲಿಲ್ಲಿ ಬರದ್ದೆ.ಹಾಂಗೇ ಇದ್ದ ಕತೆ ಮತ್ತೊಂದು ಮನೆ ಹಿರಿ ಅಜ್ಜಿ ಹಟ್ಟಿ ಹತ್ರೆ ಬಿದ್ದದರ ವಿಕಾರವಾಗಿ ಕೂಗಿ,ಕೂಗಿ, ಮನೆಯವರ ದೆನಿಗೇಳಿದ ಕತೆ, ಅದುದೆ ಸ್ವರಚಿತ ಕತೆ. ಇನ್ನೂ ಇನ್ನೂ ಬರೆಯಿ ಅಕ್ಕಾ.

 5. ಮನಮುಟ್ಟವ ಬರವಣಿಗೆ
  ಆ ಕಾಲಲ್ಲಿ ಆದಕಾರಣ ಇಪ್ಪತ್ತೆಂಟು ಮೈಲು ದೂರಕ್ಕೂ ಸೌಖ್ಯಲ್ಲಿ ತಲ್ಪಿತ್ತು
  ಈಗ ಆಗಿಧ್ದರೆ ಎರಡು ಮೈಲು ಹೋಯೆಕ್ಕಾರೆ ಕೈಕಾಲಿಂಗೆ ಬಳ್ಳಿ ಬಿದ್ದು ಕಾಸ್ರೋಡಿಂಗೆ ಹೋವ್ತಿತ್ತು.

 6. ಚೆನ್ನೈ ಬಾವ says:

  ಭಾವನಾತ್ಮಕ ಹೃದಯಸ್ಪರ್ಶೀ ಪ್ರಬುದ್ಧ ಶುದ್ದಿಗೊಂದೊಪ್ಪ

 7. ಲಾಯಿಕ ಆಯಿದು ಅತ್ತೆ. ಹೀಂಗಿಪ್ಪಕಥೆಗೊ ನಿಂಗೊಗೆ ಇನ್ನೂ ಗೊಂತಿಕ್ಕು. ಇನ್ನೂ ಬರೆಯಿ.

 8. ಪಟ್ಟಾಜೆ ಶಂಕರ ಭಟ್ says:

  ಎಲ್ಲ ನೈಜ ಘಟನೆ ಅತ್ತೆ. ನಿಂಗಳ ವಿಟ್ಳ ಮನೆಯ ಕೇಳಿ ಗೊಂತಿದ್ದು ಅತ್ತೆ. ಏವಗಳಾಣ ಹಾಂಗೆ ಚೆಂದಕೆ ಬರದ್ದಿ.

 9. S.K.Gopalakrishna Bhat says:

  ಮನ ಮುಟ್ಟುವ ಬರವಣಿಗೆ.ಮಾತು ಮರೆತು ಮೂಕ ಮಾಡುವ ಹಾಂಗೆ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *