Oppanna.com

ಕೈಕ್ಕೆ ಬೆಂಡೆಕಾಯಿ

ಬರದೋರು :   ಶ್ರೀಶಣ್ಣ    on   24/04/2017    16 ಒಪ್ಪಂಗೊ

ಕೈಕ್ಕೆ ಬೆಂಡೆಕಾಯಿ

ಕಥಾನಾಯಕನ ಮನಗೆ ದೆನುಗೊಳಿತ್ತಿದ್ದೆ. ಎಂಗೊಗೆ ಇಬ್ರಿಂಗೂ ಅದೆಂತದೋ ಆತ್ಮೀಯತೆ.  ಮನಸ್ಸಿಂಗೆ ಹತ್ತರೆ ಆದವನ ಒಟ್ಟಿಂಗೆ ಕೂದು ಸುಖ ದುಃಖ ಹಂಚುವದೂ ಒಂದು ಕೊಶಿಯೇ. ಒಬ್ಬನ ಕಷ್ಟಕ್ಕೆ ಅಪ್ಪವನೇ ನಿಜವಾದ ಗೆಳೆಯ. ದುಃಖವ ಹಂಚಿದಷ್ಟೂ ಅದರ ಆಳ, ವಿಸ್ತಾರ ಕಮ್ಮಿ ಅಗಿಂಡು ಹೋವ್ತು. ಹಾಂಗೇಳಿಂಡು ಎಲ್ಲರ ಹತ್ರೆ ಹೇಳಿಂಡು ಬಪ್ಪ ಹಾಂಗಿಲ್ಲೆ. ಕೆಲವು ಜೆನಂಗೊಕ್ಕೆ ಅದು ತಮಾಷೆಯ ವಸ್ತು ಅಕ್ಕು, ಇನ್ನು ಕೆಲವರಿಂಗೆ ಅದು ಕೊಶಿ ಕೊಡುವ ವಸ್ತುವೂ ಆಗಿಕ್ಕು. ನಿರ್ಮಲ ಹೃದಯದವರೊಟ್ಟಿಂಗೆ ಹಂಚಿಗೊಂಡರೆ ಮಾತ್ರ  ಕಲಂಕಿದ ಮನಸ್ಸೂ ನಿರ್ಮಲ ಅಪ್ಪದು.

ಮಧ್ಯಾಹ್ನದ ಊಟಕ್ಕೆ ಬೆಂಡೆಕಾಯಿ ಮೇಲಾರ, ಕುಜುವೆ ತಾಳು, ಇಬ್ರಿಂಗೂ ಇಷ್ಟದ ತಾಳು ಬೆಂದಿಗೊ. ಇದಾ ಇದರ ಉಂಡಪ್ಪಗ ಒಂದು ಹಳೆ ನೆನಪು ತೇಲಿ ಬತ್ತಾ ಇದ್ದು ಹೇಳಿ ಸುರುಮಾಡಿದ.

****

ಅಕ್ಕಂಗೆ ಮಾಣಿ ನಿಶ್ಚಯ ಆದ್ದು, ಮದುವೆ ನಿಘಂಟು ಆದ್ದು ಎಲ್ಲಾ ಗೊಂತಾದ ಮಾಣಿ ಅವನ ಕಾಲೇಜಿಲ್ಲಿ ಕಲಿತ್ತ ಚೆಂಙಾಯಿಗೊಕ್ಕೆ ಹೇಳಿ ಸಂಭ್ರಮಪಟ್ಟ

ಅ ದಿನ ಬಂದೇ ಬಂತು. ಮಾಣಿಗೆ ಅಂದು ಸಂಭ್ರಮದ ದಿನ. ಬಂದವರ ಸ್ವಾಗತ ಮಾಡುವದು, ಆಸರಿಂಗೆ ಕೊಡುವದು, ಅಡಿಗೆಯವಕ್ಕೆ ಬೇಕಾದ್ದರ ಒದಗುಸುವದು, ಚೆಪ್ಪರಲ್ಲಿ ವ್ಯವಸ್ಥೆ ಮಾಡುವದು ಇನ್ನೂ ಹಲವಾರು ಕೆಲಸಂಗೊ. ಇದರ ಎಡೆಲಿ  ಮದುವೆಯ ಕಾರ್ಯಕ್ರಮ ನೋಡ್ಲೆ ಎಡಿಗಾತಿಲ್ಲೆ. ಆದರೂ ಒಂದು ಅವ್ಯಕ್ತ ಸಂತೋಷ ಹೇಳಿರೆ ಅಕ್ಕಂಗೊಂದು ಬಿಡುಗಡೆ ಆತನ್ನೇ ಹೇಳಿ.

ಅಕ್ಕಂಗೆ ವಿದ್ಯೆ ಸರೀ ಹತ್ತದ್ದೆ ಹತ್ತನೇ ಕ್ಲಾಸ್ ಫೈಲ್ ಆಗಿ ಶಾಲೆಗೆ ವಿದಾಯ ಹೇಳೆಕ್ಕಾಗಿ ಬಂತು. ಅಲ್ಲದ್ರೂ ಆ ಕಾಲಲ್ಲಿ ಹತ್ತನೇ ಕ್ಲಾಸು ಮುಗುದಪ್ಪಗ ಕೂಸಿಂಗೆ ಮನೆ ಹುಡ್ಕಲೆ ಸುರು ಮಾಡುವದೇ. ಜಾತಕ ಕೊಂಡೋವ್ತವು, ಮಾಣಿ ಕೂಸಿನ ನೋಡ್ಲೆ ಮನೆಗೆ ಬತ್ತ, ಮತ್ತೆಂತದೋ ಸರಿ ಬಾರದ್ದೆ, ಜಾತಕಲ್ಲಿ ಸರಿ ಆವ್ತಿಲ್ಲೆ ಹೇಳಿ ಜಾರುತ್ತವು. ಇಲ್ಲಿಯೂ ಹೀಂಗೇ ಆತು. ಉಪಚಾರ ಮಾಡಿದ್ದು ದಕ್ಕಿತ್ತು. ನಾಲ್ಕು ವರ್ಷದ ಹುಡ್ಕಾಟಕ್ಕೆ ಅಕೇರಿಗೆ ಒಬ್ಬ ಮಾಣಿ ಸಿಕ್ಕಿ ಮದುವೆ ನಿಶ್ಚಯ ಆತು ಹೇಳುವದೇ ಸಂತೋಷದ ಸುದ್ದಿ

ಬೇಂಡು, ವಾದ್ಯ, ಗೌಜಿ ಗದ್ದಲ ಎಲ್ಲಾ ಇಲ್ಲದ್ರೂ ಸಾಮಾನ್ಯ ರೀತಿಲಿ ಶಾಸ್ತ್ರ ಪ್ರಕಾರ ಮದುವೆ ಕಳಾತು.

****

ಮರುದಿನ ಸಟ್ಟುಮುಡಿ, ಮದಿಮ್ಮಾಯನ ಮನೆಲಿ. ದಿಬ್ಬಾಣ ಮದುಮ್ಮಾಳಿನ ಮೆನೆಂದ. ಕಥಾನಾಯಕಂಗೆ ಯಾವ ಅಂಗಿ ಹಾಕುವದು, ಸಟ್ಟುಮುಡಿ ಮನೆಲಿ ಮದುಮ್ಮಾಳ ತಮ್ಮ ಹೇಳಿ ಪರಿಚಯ ಆಗ್ಯೊಂಬದು, ಅಲ್ಲಿ ಎಂತೆಲ್ಲಾ ಸುದರಿಕೆ ಮಾಡುವದು, ಅಕ್ಕ ಭಾವನೊಟ್ಟಿಂಗೆ ಮರುವಾರಿ ಕರಕ್ಕೊಂಡು ಬಪ್ಪದು,  ಇನ್ನೂ ಏನೇನೋ ಯೋಚನೆಲಿ ಮಾಣಿ ಸಂಭ್ರಮಪಟ್ಟ.

ಹಳ್ಳಿ ಮನೆ. ಕರವಲೆ ದನಗೊ, ತೋಟ ಕಾವಲಿಂಗೆ ಸಾಂಕು ನಾಯಿ, ಮನೆಯೊಳದಿಕೆ ಪುಚ್ಚೆ. ಇವರೆಲ್ಲಾ ಬಿಟ್ಟಿಕ್ಕಿ ಮನೆ ಖಾಲಿ ಮಾಡಿ ಹೋಪಾಂಗಿಲ್ಲೆ. ಇವಕ್ಕೆಲ್ಲಾ ವ್ಯವಸ್ಥೆ ಆಯೆಕ್ಕನ್ನೆ. ಮನೆಲಿ ಒಬ್ಬ ನಿಂಬಲೇ ಬೇಕು. ಆರ ನಿಲ್ಸುವದು?

ಮಾಣಿ ಹತ್ತರೆ ಅವನ ಅಪ್ಪ ಹೇಳಿದ “ನೀನು ಮನೆಕಾವಲಿಂಗ ಕೂರು”. ಮನಸ್ಸಿರಲಿ, ಇಲ್ಲದ್ದಿರಲಿ ಹೆರಿಯೋರಿಂಗೆ ಎದುರು ಉತ್ತರ ಕೊಡುವ ಹಾಂಗಿಲ್ಲೆ. ನಾವು ಬೆಳದ್ದದೇ ಹಾಂಗೆ, ನವಗೆ ಸಿಕ್ಕಿದ ಸಂಸ್ಕಾರ ಹಾಂಗಿಪ್ಪದು

ಮಾಣಿಯ ಆಲೋಚನೆಗೆ ತಣ್ಣೀರು ಚೆಲ್ಲಿದಾಂಗಾತು. ಆರತ್ರೆ ಹೇಳುವದು. ಹೀಂಗಿಪ್ಪ ಸಂದರ್ಭ ಬಂದಪ್ಪಗ ಸಲಹೆ ಕೊಡಲೆ ಒಂದೋ ನಮ್ಮ ಆತ್ಮೀಯರು ಆಯೆಕ್ಕು, ಇಲ್ಲದ್ರೆ ನವಗೆ ಮಾರ್ಗದರ್ಶನ ಮಾಡುವ ಹಿರಿಯರು ಆಯೆಕ್ಕು. ಅಜ್ಜಿ ಅಜ್ಜನ ಪ್ರೀತಿ ಮತ್ತೆ ಮಾರ್ಗದರ್ಶನಲ್ಲಿ ಬೆಳದ ಮಾಣಿಗೆ ಅಲ್ಲಿ ಇತ್ತಿದ್ದು ಅಜ್ಜಿ ಮಾತ್ರ. ಮೆಲ್ಲಂಗೆ  ಅಜ್ಜಿ ಹತ್ರೆ ವಿಶಯ ಹೇಳಿದ.

ಅಳಿಯನತ್ರೆ ಅಜ್ಜಿ ಹೇಳಿದವು “ಅವಂಗಿಪ್ಪದು ಒಂದೇ ಅಕ್ಕ. ಅಕ್ಕನ  ಸಟ್ಟುಮುಡಿಗೆ ಅವನೇ ಇಲ್ಲದ್ರೆ ಹೇಂಗೆ? ಮನೆಲಿ ನಿಂಬಲೆ ಆರಾರೂ ಅಳುಗಳೋ ಮಣ್ಣೋ ಸಿಕ್ಕವೋ. ಬೇರೆಂತಾರೂ ವ್ಯವಸ್ಥೆ ಮಾಡಿ”

ಮಾಣಿಯ ಅಪ್ಪಂಗೆ ಅದೆಂತ ಅನಿಸಿತ್ತೋ, ಕೋಪ ನೆತ್ತಿಗೇರಿತ್ತು. “ವಕಾಲತ್ತು ಮಾಡ್ಲೆ ನಿಂಗೊ ಬರೆಕೂಳಿ ಇಲ್ಲೆ. ಹಾಂಗಿದ್ದರೆ ಅವನೇ ದಿಬ್ಬಾಣ ತೆಕ್ಕೊಂಡು ಹೋಗಲಿ, ಎಂಗೊ ಮನೆಲಿ ಕೂರ್ತೆಯೊ°” ಮಾತಿಂಗೆ ಮಾತು ಬೆಳದರೆ ಸಂಬಂಧ ಹಾಳು ಅಪ್ಪದು. ಹಾಂಗಾಗಿ ಮುಂದೆ ಆ ವಿಶಯ ಮಾತಾಡದ್ದೆ, “ಅವ° ನಿನ್ನ ಮಗ, ಹೇಂಗೆ ಬೇಕೋ ಹಾಂಗೇ ಏರ್ಪಾಡು ಮಾಡು. ಆನು ಅಲ್ಲಿಂದಲೇ ಮನೆಗೆ ಹೋವ್ತೆ. ನಾಡಿದ್ದು ಅಜ್ಜನ ಮನೆ ಸಮ್ಮಾನಕ್ಕೆ ಮಗಳು ಅಳಿಯನ ಕರಕ್ಕೊಂಡು ಬಾ” ಹೇಳಿ ಮಾತು ಮುಗುಶಿದವು

ಒಂದೇ ಒಂದು ಆಸೆ ಇತ್ತಿದ್ದು, ಅದೂದೆ ಬತ್ತಿ ಹೋದಪ್ಪಗ ಮಾಣಿಗೆ ದುಃಖ ಒತ್ತರಿಸಿ ಬಂತು. ಕಣ್ಣೀರು ಒರೆಸಲೆ ಅಂಬಗ ಅಲ್ಲಿ ಇತ್ತಿದ್ದವು ಅವನ ಅಜ್ಜಿ.

**

ಜಂಬರದ ಮನೆ,ಎಲ್ಲಾ ಸಾಮಾನುಗೊ ಚೆಲ್ಲಾಪಿಲ್ಲಿ. ಹೋವ್ತ ಅಂಬ್ರೆಪ್ಪಿಂಗೆ ಅಲ್ಲಲ್ಲೇ ಬಿಟ್ಟಿಕ್ಕಿ ಹೋದ  ಹಸೆ, ತಲೆದಿಂಬು, ಸುತ್ತಿ ಬಿಡುಸಿದ ವಸ್ತ್ರಂಗೊ, ಅಡಿಗೆ ಶಾಲೆಲಿ ತೊಳವಲಿಪ್ಪ ಪಾತ್ರಂಗೊ, ಒಂದೋ ಎರಡೋ. ಮಾಣಿಗೆ ಕೆಲಸ ಮಾಡದ್ದೆ ಸುಮ್ಮನೆ ಕೂಬಲೆ ಅರಡಿಯ.  ಒತ್ತರೆ ಮಾಡ್ಲೆ ಸುರು ಮಾಡಿದ. ಹತ್ರಾಣ ಮನೆಂದ ತಂದ ಪಾತ್ರ ಸಾಮಾನುಗಳ ತೊಳಶಿ, ಒಟ್ಟು ಮಾಡಿ ಆಳಿನತ್ರೆ ಕಳ್ಸಿದ. ಆಚೀಚೆ ಇಪ್ಪ ಕಸವಿನ ಉಡುಗಿಸಿ ಜಾಲಿನ ಸ್ವಚ್ಛ ಮಾಡಿಸಿದ. ಇದರೆಡೆಲಿ ಎನಗೆ ಚಾಯ ಮಾಡಿಕೊಡಿ ಹೇಳಿದ ಕೆಲಸದ್ದಕ್ಕೆ ಚಾಯ ಮಾಡಿ, ಅದಕ್ಕೆ ಕೂಡಲೆ ರೆಜ ಅವಲಕ್ಕಿಯೂ ಬೆರುಸಿ ಕೊಟ್ಟ. ಹಶು ಆಸರು ಎಲ್ಲರಿಂಗೂ ಒಂದೇ ಅಲ್ಲದಾ

ಮಧ್ಯಾಹ್ನದ ಊಟಕ್ಕೆ ಅಶನ ಮಡುಗಿದ. ಬೆಂದಿ ಎಂತ ಮಾಡುವದಪ್ಪಾ. ಮದುವೆಗೆ ತಂದ ನೆಟ್ಟಿಕಾಯಿಗೊ ಒಂದೂ ಒಳುದ್ದಿಲ್ಲೆ. ಜಾಲ ಕೊಡಿಲಿ ಬೆಂಡೆ ಸೆಸಿಲಿ ಹಸಿರು ಹಸಿರಾಗಿ ಹದಾಕೆ ಬೆಳಾದ ಬೆಂಡೆಕಾಯಿ. ತುಂಬಾ ಇಷ್ಟದ ತರಕಾರಿ. ಮೇಲಾರ ಆದರೂ ಸರಿಯೇ, ಕೊದಿಲು ಆದರೂ ಸರಿಯೇ, ಕಾಯಿರಸವೂ ಇಷ್ಟವೇ, ತಾಳು ಆದರೂ ಲಾಯಿಕವೇ. ಇದೊಂದು ಬಗೆ ಇದ್ದರೆ ಹೊಟ್ಟೆ ತುಂಬಾ ಉಂಬದಕ್ಕೆ ತೊಂದರೆ ಇಲ್ಲೆ. ಗೆಡುವಿಲ್ಲಿ ಇತ್ತಿದ್ದ ತನ್ನಿಷ್ಟದ ಬೆಂಡೆಕಾಯಿ ಕೊರದು ಒಲೆಲಿ ಮಡುಗಿದ, ಒಂದು ಕಡಿ ಕಾಯಿಯ ಕೆರದು ಕಲ್ಲಿಲ್ಲಿ ಕಡದು ಮೇಲಾರ ಮಾಡಿದ. ತಾನೂ ಉಂಡ,ಆಳಿಂಗೂ ಬಳುಸಿದ. ಅಣ್ಣ ಮಾಡಿದ ಅಡಿಗೆ ಲಾಯಿಕ ಆಯಿದು ಹೇಳಿ ಶಿಫಾರಸು ತೆಕ್ಕೊಂಡ ಆಳಿಂದ.

ದಿಬ್ಬಣಲ್ಲಿ ಹೋದ ಮನೆಯವೆಲ್ಲಾ ಹೊತ್ತೋಪಗ ವಾಪಾಸು ಬಂದವು. ಮನೆ ಎಲ್ಲಾ ಒತ್ತರೆ ಆಯಿದು. ಇನ್ನು ರೆಜಾ ಹೊತ್ತು ಕಾಲು ನೀಡಿ ಆರಾಮ ಆಗಿ ಇಪ್ಪಲಕ್ಕು ಹೇಳಿ ಒಳಾಂದ ಕೊಶಿ ಆದರೂ ಅದರ ಹೇಳುವ ಸೌಜನ್ಯತೆ ಇತ್ತಿದ್ದಿಲ್ಲೆ. ಮಾಣಿ ಆದ ಕೆಲಸಂಗಳ ವರದಿ ಒಪ್ಪಿಸಿದ. ಇರುಳಿಂಗೆ ಇಪ್ಪ ವ್ಯವಸ್ಥೆ ಆಯೆಕ್ಕಷ್ಟೆ ಹೇಳಿದ.

ಅಷ್ಟು ಹೊತ್ತು ಸುಮ್ಮನೆ ಇದ್ದವು ಸುರುಮಾಡಿದವದ

“ಆಳಿಂಗೆ ಊಟ ಹಾಕಿದ್ದೆಂತಕೆ, ಅದು ಅದರ ಮನೆಗೆ ಹೋಯೆಕ್ಕಾತು. ಕಸ್ತಲೆವರೆಗೆ ಅದಕ್ಕೆಂತ ಕೆಲಸ ಇತ್ತಿದ್ದು ಇಲ್ಲಿ?  ನಾಕು ಬೆಂಡೆ ನಾಳೆ ಮರುವಾರಿ ಸಮ್ಮಾನಕ್ಕೆ ಆತು ಹೇಳಿ ಮಡುಗಿರೆ ಅದನ್ನೂ ಕೊಯಿದು ಮುಗುಶಿದ್ದೆಂತಕೆ ? ಮನೆಯ ಇವನತ್ರೆ ಬಿಟ್ಟಿಕ್ಕಿ ಹೋದರೆ ಎಲ್ಲಾ ಅಂಪುಕ ಮಾಡುಗು”….. ಹೇಳಿದ್ದು ಅವನ ಚಿಕ್ಕಮ್ಮ ಆಗಿತ್ತು.

ಈಗ ಮಾಣಿಯ ಕಣ್ಣೀರು ಒರಸಲೆ ಅಜ್ಜಿಯೂ ಇತ್ತಿದ್ದವಿಲ್ಲೆ

****

ಇಷ್ಟು ಹೇಳಿದ ಕಥಾನಾಯಕ ಒಂದು ಉಸಿರು ಬಿಟ್ಟು ಹೇಳಿದ, ಈ ಘಟನೆಗೊ ನೆಡದಪ್ಪಗ ನವಗೆ ಸಿಕ್ಕಿದ್ದು ಕೈಕ್ಕೆ ಅನುಭವ. ಈಗ ಅದರ ನೆಂಪು ಮಾಡುವಾಗ ಅಂದ್ರಾಣ ಚಿತ್ರ ಕಣ್ಣ ಮುಂದೆ ಬಂದಪ್ಪಗ, ಹೋ ಎಂತೆಲ್ಲಾ ಅನುಭವಿಸಿದ್ದುಹೇಳಿ ಅನಿಸುತ್ತು. ಎಲ್ಲವೂ ಜೀವನಲ್ಲಿ ಮುಂದೆ ಬಪ್ಪಲೆ ಒಂದೊಂದು ಪಾಠಂಗೊ. ಇಲ್ಲಿ ಆರೂ ಆರನ್ನೂ ದೂರಲೆ ಇಲ್ಲೆ. ಎಲ್ಲವೂ ಮೇಗಂದ ನಿಶ್ಚಯ ಆದ ಹಾಂಗೇ ಅಪ್ಪದು. ಯಾವುದೋ ಕರ್ಮದ ಫಲವ ಅನುಭವಿಸಲೆ ಬಪ್ಪ ಘಟನೆಗೊ ಹೇಳಿಯೇ ತಿಳ್ಕೊಳೆಕ್ಕಷ್ಟೆ

ಘಟನೆಗೊ ಕಹಿ ಆದರೆ ಆದರ ನೆನಪು ಸಿಹಿ

~~~***~~~

 

16 thoughts on “ಕೈಕ್ಕೆ ಬೆಂಡೆಕಾಯಿ

  1. ಕೈಕ್ಕೆ ಬೆಂಡೆಕಾಯಿ ಕತೆ ಭಾವಪೂರ್ಣ ಆಗಿ ಬಯಿಂದು.

  2. ಕಹಿ ಘಟನೆ….ಕೆಲವೊಂದು ಇನ್ನೂ ಕಹಿಯಾಗಿ ಒಳುದ್ದದೂ ಇಕ್ಕಪ್ಪೋ, ದರ್ಮದಂಡಕ್ಕೆ ಬೈಗಳ ಅಲ್ಲದ್ದೆ ಪೆಟ್ಟು ತಿಂದದೂ ಇಕ್ಕಪ್ಪೋ

    ಕಥೆ ಲಾಯಕ ಆಯಿದು. ಅಪ್ಪು ಶ್ರೀಶಣ್ಣನ ಇಲ್ಲಿ ಕಾಣದ್ದೆ ಕೆಲವು ವೊರಿಶವೇ ಆತು

  3. ಓದಿಯಪ್ಪಗ ಮನಸ್ಸು ಭಾರ ಆತು. ಒಳ್ಳೆಯ ಶೈಲಿ. ಕೈಕೆ ಅನುಭವಂಗೊ ನಮಗೆ ತುಂಬಾ ಪಾಠಂಗಳ ಕಲುಸುತ್ತು

  4. ಶ್ರೀಶ ಒಪ್ಪಣ್ಣ ಬೈಲಿಂಗೆ ಬಾರದ್ದೆ ವರ್ಷವೇ ಕಳಾತೊ ಹೇಳಿ !! ಅವನ ಪದ್ಯಂಗೊ, ತಮಾಷೆ ಕತೆಗೊ ಎಲ್ಲ ಬೈಲಿನ ಅವಿಭಾಜ್ಯ ಅಂಗ ಆಗಿತ್ತು. ಕೈಕ್ಕೆ ಬೆಂಡೆಕ್ಕಾಯಿ ನೈಜವಾಗಿದ್ದು, ಕಡೆಂಗಪ್ಪಗ ಮನಸ್ಸಿಂಗೆ ಚುರುಕ್ಕು ಮುಟ್ಟುಸಿತ್ತು. ಕೈಕ್ಕೆ ಹೇಳುವ ಶಬ್ದ ರಾಮಾಯಣದ ಕೈಕೇಯಿಯನ್ನುದೆ ನೆಂಪು ಮಾಡಿತ್ತು.
    ಶ್ರೀಶ, ಬೈಲಿಂಗೆ ಬತ್ತಾ ಇರು. ಜವ್ವನಿಗರೆಲ್ಲ ವಾಟೆಸೊಪ್ಪು ಉದ್ದುತ್ತರ ರಜ್ಜ ಕಡಮ್ಮೆ ಮಾಡಿ ಬೈಲಿಂಗೆ ಬನ್ನಿ, ನಮ್ಮ ಬೈಲು, ಎರಡು ವರ್ಷ ಹಿಂದಾಣ ಹಾಂಗೆ ಮತ್ತೆ ಸಮೃದ್ಧಿ ಹೊಂದಲಿ.

    1. ಗೋಪಾಲ ಮಾವ ಹೇಳಿದ ಹಾಂಗೆ ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತು. ಕೆಲಸದ ತೆರಕ್ಕಿಂದ ಪುರುಸೊತ್ತು ಆಗದ್ದು.
      ಇನ್ನು ಸರಿಯಾಗಿ ಬಪ್ಪಲೆ ಪ್ರಯತ್ನ ಮಾಡ್ತೆ.
      ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗೊ

  5. ಕೆಲವು ಕಹಿ ಘಟನೆಗೊ ನಮ್ಮ ಮನಸ್ಸಿoದ ಬೇಗ ಮಾಸುತ್ತಿಲ್ಲೆ. ಸರಿಯಾದ ವಾಖ್ಯ “ಎಲ್ಲವೂ ಜೀವನಲ್ಲಿ ಮುಂದೆ ಬಪ್ಪಲೆ ಒಂದೊಂದು ಪಾಠಂಗೊ”. ಭಾವಪೂರ್ಣ ಬರವಣಿಗೆ.

    1. ನಿನ್ನ ವಿಮರ್ಷೆ ಸರಿ ಇದ್ದು.
      ಪ್ರೋತ್ಸಾಹಕ್ಕೆ ಧನ್ಯವಾದಂಗೊ

  6. ಮನಸಿಂಗೆ ತಟ್ಟುವ ನಿರೂಪಣೆ. ಅಕ್ಕನ ಸಟ್ಟುಮುಡಿಗೆ ಹೋಪಲೆಡಿಯದ್ದ ಮಾಣಿಗೆ ಪ್ರೀತಿಯ ಬೆಂಡೆಕಾಯಿ ಕೂಡಾ ಕೈಕ್ಕೆ ಆತನ್ನೇ….ಕೆಲವು ಘಟನೆಗೊ ಎಷ್ಟು ವರ್ಷ ಕಳ್ದರೂ ಮನಸಿಂದ ಮಾಸಿ ಹೋಗ.ಓದಿಯಪ್ಪಗ ಮನಸು ಭಾರ ಆತು

    1. ನಿರೂಪಣೆ ಬಗ್ಗೆ ಪ್ರೋತ್ಸಾಹದ ಮಾತು ಹೇಳಿದ್ದಕ್ಕೆ ಧನ್ಯವಾದಂಗೊ.
      ಕೆಲವು ಘಟನೆಗೊ ಮನಸ್ಸಿಂದ ಮಾಸಿ ಹೋವ್ತಿಲ್ಲೆ. ಗಾಯ ಒಣಗಿದರೂ, ಗುರ್ತ ಹಾಂಗೇ ಇರ್ತು ಅಲ್ಲದಾ?

  7. ಲೇಖನ ತುಂಬಾ ಚೆಂದಕೆ ಮೂಡಿ ಬಯಿಂದು. ಆತ್ಮೀಯ ನಿರೂಪಣೆ ಎನ್ನ ಬಾಲ್ಯಕಾಲದ ಒಂದು ಅನುಭವವ ನೆನಪಿಸುವ ಹಾಂಗೆ ಮಾಡಿತ್ತು. ಅಬ್ಬೆ ಕಸ್ತಲಪ್ಪಗಾಣ ತಿಂಡಿಗಾತು ಹೇಳಿ ಉಂಡೆ ಮಾಡಿ ಮಡುಗಿಕ್ಕಿ ಮನೇಕಾವಲಿನ್ಗೆ ಅಣ್ಣನನ್ನು ಎನ್ನನ್ನು ಕುರ್ಸಿಕ್ಕಿ ಚಿಕ್ಕಮ್ಮನೊಟ್ಟಿಂಗೆ ಮದುವೆಗೆ ಹೋದ್ದದು. ಮಧ್ಯಾಹ್ನದ ಹೊತ್ತಿಂಗೆ ಎರಡು ಭಿಕ್ಷುಕರು ಬಂದವಕ್ಕೆ ಎಂಗೊ ಆ ಉಂಡೆಯ ಪೂರ್ತಿ ಕೊಟ್ಟದು ಮಾತ್ರ ಅಲ್ಲ, ಅದರೊಟ್ಟಿಂಗೆ ಕೂಡ್ಸಿ ತಿಂಬಲೆ ಹೇಳಿ ಸಕ್ಕರೆ ತುಪ್ಪವನ್ನೂ…. ಪರಿಣಾಮ…? ನಿಂಗಳ ಊಹೆಗೆ ಬಿಟ್ಟದು. ನಿಂಗೊ ಹೇಳಿದ ಹಾಂಗೆ ಅನುಭವ ತುಂಬಾ ಕಹಿ, ನೆನಪು ಅಷ್ಟೇ ಸಿಹಿ.

    1. ನಿರೂಪಣೆ ಬಗ್ಗೆ ಪ್ರೋತ್ಸಾಹದ ಮಾತು ಹೇಳಿದ್ದಕ್ಕೆ ಧನ್ಯವಾದಂಗೊ.
      ಇದರ ಓದಿಯಪ್ಪಗ ನಿಂಗಳ ಬಾಲ್ಯ ನೆಂಪಾದ್ದದು ಸಂತೋಷ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×