ಕಾಣದ್ದ ಕೈ

ಶ್ರೀಮಾನ್ ಶ್ರೀಕೃಷ್ಣ ಶರ್ಮರಿಂಗೂ, ಒಪ್ಪಣ್ಣ ಪ್ರತಿಷ್ಠಾನಕ್ಕೂ, ಸನ್ಮಾನ್ಯ ಹವಿಕ ಬಂಧುಗೊಕ್ಕೆ, ಹವಿಕ ಭಾಷೆಯ ಒಳಿಶೆಕ್ಕು ಬೆಳೆಶೆಕ್ಕು ಹೇಳಿ ಸಾಧನೆ ಮಾಡ್ತಾ ಇಪ್ಪ ಎಲ್ಲ ಒಪ್ಪಣ್ಣ ಒಪ್ಪಕ್ಕಂಗೊಕ್ಕೆ, ಬಡೆಕ್ಕಿಲ ಸರಸ್ವತಿಯ ಅಂತಃಕರಣಪೂರ್ವಕ ಪ್ರಣಾಮಂಗೊ.

ನಿಂಗೊ ಎಲ್ಲ ಎನ್ನ ಮೇಲೆ ಪ್ರೀತಿಯ ಪನ್ನೀರ ಮಳೆಯನ್ನೇ ಹರಿಶಿದ್ದಿ!. ನಿಜ ಹೇಳೆಕ್ಕು ಹೇಳಿದರೆ ಆನು ಈ ವರೆಗೆ ನಿಂಗಳ ಯಾವ ಕಥೆಗಳನ್ನೂ ಓದಿದ್ದಿಲ್ಲೆ, ಶುದ್ದಿಯ ಒಪ್ಪಂಗಳನ್ನೂ  ನೋಡಿದ್ದಿಲ್ಲೆ. ಎನ್ನ “ಧೃತಿಯೊಂದಿದ್ದರೆ” ಸಣ್ಣ ಕಥೆಯ ಸ್ವೀಕರಿಸಿ, ಎನಗೆ ಸ್ವಾಗತ ಕೊಟ್ಟಿದಿ. ಹಾಂಗಾಗಿ ಓದುವ ಪ್ರಯತ್ನ ಮಾಡಿದೆ. ಅದರಲ್ಲಿ ಬಂದ ಪ್ರತಿಕ್ರಿಯೆ, ಅಭಿಪ್ರಾಯಂಗಳ ನೋಡಿ ಉಬ್ಬಿ ಹೋದೆ. ಈ ಪ್ರಶಂಸೆಗೊ ಎನ್ನ ಯೋಗ್ಯತೆಗೆ ಮೀರಿದ್ದೋ ಹೇಳಿ ರಜ ಸಂಕೋಚವೂ ಇದ್ದು. ಎನ್ನ ಎರಡೂ ಕಥೆಗಳ ನಿಂಗೊ ಮೆಚ್ಚಿದ್ದಿ, ಎನ್ನ ಭಾವನೆಗೊಕ್ಕೆ ಸ್ಪಂದಿಸಿದ್ದಿ. ಇದೆಲ್ಲ ಎನ್ನ ಸೌಭಾಗ್ಯ ಹೇಳಿ ಗ್ರೇಶುತ್ತೆ.

ಗುರುಹಿರಿಯರು “ಸೌಭಾಗ್ಯವತೀ ಭವ” ಹೇಳಿ ಆಶೀರ್ವದಿಸಿದ್ದು ಇಂದಿಂಗೆ ಸಾರ್ಥಕ ಆತು. ಇನ್ನೂ ಒಂದು ಸತ್ಯ ಕಥೆಯನ್ನೇ ಕೊಡ್ತಾ ಇದ್ದೆ. ಕಾಲಗರ್ಭಲ್ಲಿ ಎಂಥೆಂಥ ಜನಂಗಳ ಸುಖ ದುಃಖಂಗಳ ಕಥೆಗೊ ಅಡಗಿ ಹೋಯಿದವೋ! ಒಂದೊಂದೂ ನವಗೆ ಪಾಠ ಕಲಿಶುಗು. ಹೃದಯ ಕರಗುಸುಗು. ಹೆಮ್ಮೆ ಉತ್ಸಾಹಂಗಳ ತರ್ಸುಗು. ಆದರೆ ನಮ್ಮ ಸೀಮಿತ ಆಯುಷ್ಯಲ್ಲಿ ಸಿಕ್ಕುವಷ್ಟನ್ನೇ ಅಪ್ಪಿಗೊಳ್ಳೆಕಷ್ಟೆ,

ಇತಿ ಧನ್ಯವಾದಂಗೊ, ನಿಂಗೊಗೆಲ್ಲ ಆನು ಚಿರ ಋಣಿ

-ನಿಂಗಳ ಪ್ರೀತಿಯ ಸರಸ್ವತಿ

ಬಡೆಕ್ಕಿಲ ಸರಸ್ವತಿ

 

ಕಾಣದ್ದ ಕೈ

ಸೂಕ್ತಿ: ಹರಿಚಿತ್ತ ಸತ್ಯ, ನಮ್ಮ ಅರಿವಿಂಗೆ ಬಾರ

ನಮ್ಮ ಜೀವನಲ್ಲಿ ನಮ್ಮ ಅನುಭವಕ್ಕೆ ಬಂದ ವಿಶೇಷ ಘಟನೆಗೊ ನಮ್ಮ ಮನಸ್ಸಿನ ಒಳ ಆಳಲ್ಲಿ ಪದರುಪದರಾಗಿ ಹೆಪ್ಪುಕಟ್ಟಿಗೊಂಡಿರ್ತು. ಎಷ್ಟೋ ವರ್ಷ ಕಳುದರೂ ಒಂದರಿ ಒಳ ಹೊಕ್ಕು ನೋಡಿದರೆ ಚಲಚ್ಚಿತ್ರದ ಹಾಂಗೆ ನಮ್ಮ ಕಣ್ಣೆದುರು ಸುರುಳಿಸುರುಳಿಯಾಗಿ ಬಿಚ್ಚಿಗೊಳ್ತು. ಆ ಕಾಲಲ್ಲಿ ನಮ್ಮ ಮನೋಬುಧ್ಧಿಗಳ ಮೇಲೆ ಬೀರಿದ ಪರಿಣಾಮವೇ ಪುನರಾವರ್ತನೆಗೊಳ್ಳುತ್ತು. ಇಂಥ ಒಂದು ದಿನ-

ಸುಮಾರು ಅರುವತ್ತೆಂಟು ವರ್ಷ ಹಿಂದಾಣ ಒಂದು ದಿನ…….ಆ ಕರಾಳ ಇರುಳು- ಗಂಟೆ ಹನ್ನೆರಡಾದರೂ ಅಪ್ಪ° ಮನಗೆ ಬಯಿಂದಾಯಿಲ್ಲೆ. ಅಬ್ಬೆ ತಮ್ಮ ತಂಗೆಕ್ಕೊ ರಜೆಗೆ ಊರಿಂಗೆ ಹೋಯಿದವು. ಮನೆಲಿ ಆನೊಬ್ಬನೇ! (ಆ ಕಾಲಲ್ಲಿ ಕೊಡೆಯಾಲದ ಮನಗೊ ಹೇಳಿದರೆ ಕಾಲು ಎಕ್ರೆ, ಅರ್ಧಎಕ್ರೆ ಕಡೆಂಗೆ ಒಂದೆಕ್ರೆ ಇದ್ದರೂ ಆತು. ಅಂಥ ಹಿತ್ತಿಲು ಮನಗೊ. ತೆಂಗಿನ ಮರ, ಬಾಳೆ, ಬಪ್ಪಂಕಾಯಿ, ಸೀತಾಫಲ, ಕೆಲವದ್ದರಲ್ಲಿ ಮಾವು, ಹಲಸಿನ ಮರಂಗಳೂ ಇರ್ತವು. ಈಗಾಣ ಹಾಂಗೆ ಸಾಲುಸಾಲಾಗಿ ಬೆಂಕಿಪೆಟ್ಟಿಗೆ ಮಡುಗಿದ ಹಾಂಗಿಪ್ಪ ಬಡಾವಣೆ ಮನಗೊ ಅಲ್ಲ)

ಅಪ್ಪ° ಒಂದಾರಿಯೂ ಹೀಂಗೆ ತಡವು ಮಾಡಿದೋನಲ್ಲ. ಎನ್ನಎದೆ ಡಗ್ ಡಗ್ ಹೇಳಿ ಜೋರಾಗಿ ಬಡಿವಲೆ ಸುರುವಾತು. “ಅಪ್ಪಂಗೆಂತಾತೋ! ದೇವರೇ ಕಾಪಾಡು”! ಗೇಟಿಂದತ್ಲಾಗಿ ದೊಡ್ಡ ಬೆಟ್ಟುಗೆದ್ದೆ. ಅಲ್ಲಿಂದ ಒಂದು ಸಣ್ಣ ಓಣಿಲಿ ಹೋದರೆ ದೊಡ್ಡ ಮಾರ್ಗ. ಆನು ಗಿಳಿಬಾಗಿಲಿಂದ ಓಣಿಯವರೇಗೆ ಕಣ್ಣು ನೆಟ್ಟುಗೊಂಡು ನಿಂದುಗೊಂಡಿಪ್ಪಾಗ ಗೋಡೆ ಗಡಿಯಾರ ಹನ್ನೆರಡೂವರೆ, ಒಂದು, ಒಂದೂವರೆ ಹೀಂಗೆ ಮೂರು ಸರ್ತಿ ಬಡುದಾತು. ಗಡಿಯಾರದ ಟಿಕ್ ಟಿಕ್ ಶಬ್ದದೊಟ್ಟಿಂಗೆ ಎನ್ನ ಎದೆಬಡಿತ ಇನ್ನೂ ಜೋರಾಗಿ ಎನ್ನ ಕೆಮಿಗೇ ಬಡಿತ್ತಾ ಇದ್ದು. ಅಷ್ಟಪ್ಪಗ ಅಪ್ಪನ ಬೆಳೀ ಖಾದಿ ಟೊಪ್ಪಿ, ಬೆಳಿ ಜುಬ್ಬಾ ದೂರಲ್ಲಿ ಓಣಿಲಿ ಕಂಡತ್ತು. ಅಬ್ಬ! ಒಂದು ದೊಡ್ಡ ಉಸಿರು ಬಂದ ಹಾಂಗಾತು. ಮೋಡ ಮುಸ್ಕಿದ ತಿಂಗಳು ಬೆಣ್ಚಿಲಿ ಅಪ್ಪ ನಡಕ್ಕೊಂಡು ಬತ್ತಾ ಇದ್ದ°. ಅಪ್ಪನೇ! ಆದರೆ ಅಷ್ಟು ಬೇಗ ಬಾಗಿಲು ತೆಗವದು ಹೇಂಗೆ? ಈ ನಡಿರುಳಿಲಿ? ಹತ್ತರೆ ಬಂದ ಹಾಂಗೆ ಅಪ್ಪನ ಚರ್ಮದ ಮೆಟ್ಟಿನ ಚರ್ ಚರ್ ಶಬ್ದ ಕೇಳ್ತಾ ಇದ್ದು. ಆದರೆ ಯಾವಾಗಣ ಹಾಂಗೆ ಏಕ ಲಯಲ್ಲಿಲ್ಲೆ. ಎಂತಾದರೂ ಬಂದದು ಅಪ್ಪನೇ! ಓಡಿಗೊಂಡೇ ಮುಂಬಾಗಿಲಿಂಗೆ ಬಂದು ಬಾಗಿಲು ತೆಗದೆ. ಒಳ ಇದ್ದ ’ಮೂನ್‍ಲ್ಯಾಂಪಿ’ನ ತಂದು ಮೇಜಿನ ಮೇಲೆ ಮಡುಗಿದೆ. ಅಪ್ಪಂಗೆ ತುಂಬಾ ಆಯಾಸ ಆವ್ತಾ ಇಪ್ಪ ಹಾಂಗೆ ಕಂಡತ್ತು. ’ಸ್ಸು’ ಹೇಳಿ ’ಈಸಿಚೇರ್’ಲಿ ಕೂದು ಟೊಪ್ಪಿ ತೆಗದು ಮೇಜಿನ ಮೇಲೆ ಮಡುಗಿದ°. “ಕುಡಿವಲೆಂತಾರು ತರೆಕ್ಕಾ” ಕೇಳಿದೆ.

“ಹೂಜಿ ನೀರು ಕೊಡು”,

ನೀರು ತಪ್ಪಲೆ ಒಳ ಹೋವ್ತಾ ಕೇಳಿದೆ “ಇಷ್ಟು ತಡವಾದ್ದೆಂತ?”

“ವಾರಿಜನ ಮನೆಯೊರೆಲ್ಲ ಹೊಳೆಲಿ ಬೆಳ್ಳಕ್ಕೆ ಹೋದವು”.

ಎನಗೆ ನಿಂದ ನೆಲವೇ ಜಾರಿಹೋದ ಹಾಂಗೆ ಕಾಲು ಕುಸ್ಕಿ ಬೀಳುವ ಹಾಂಗೆ ಆಗಿ ಹೋತು. ಉಸಿರಿನ ವೇಗ ಹೆಚ್ಚಾಗಿ ಸೇಂಕುಲೆ ಸುರುವಾತು. ಒಳ ಹೋದೋಳಿಂಗೆ ನೀರಿನ ಹೂಜಿಂದ ಗಿಂಡಿಗೆ ಎರೆಶುಲೆಡಿಯ! ಹೇಂಗೋ ಮಾಡಿ ನಡುಗುವ ಕೈಲಿ ಅಪ್ಪಂಗೆ ನೀರು ತಂದು ಕೊಟ್ಟೆ.

ಎನ್ನ ನೋಡಿ ಅಪ್ಪ° “ಎಷ್ಟು ಕಂಗಾಲಾಯಿದೆ ನೀನು! ಆ ವಾರಿಜ ಎಂಥ ಧೈರ್ಯಸ್ಥೆ! ಅದರ ಗೆಂಡ ಸಾವು ಬದುಕಿನ ನಡುಗೆ ಅತ್ತೋ ಇತ್ತೋ ಗೊಂತಿಲ್ಲದ್ದ ಸ್ಥಿತಿಲಿ ’ವೆನ್‍ಲಾಕ್’ ಆಸ್ಪತ್ರೆಲಿದ್ದ°. ವಾರಿಜ ಅಲ್ಲಿ ಗಂಡಂಗೆ ಆಯೆಕ್ಕಾದ ಸೇವೆ ಉಪಚಾರಂಗಳ ಮಾಡ್ತಾ ಇದ್ದು. ನರ್ಸಿನೊಟ್ಟಿಂಗೆ ಸೇರಿಗೊಂಡು ಕೈ ಕಾಲಿಂಗೆ ಶಾಖ ಕೊಡುವದು, ಬೆನ್ನುದ್ದುದು ಇತ್ಯಾದಿ ಬಾಹ್ಯೋಪಚಾರ ಮಾಡಿಗೊಂಡಿದ್ದು. ಅದರ ತಂಗೆ ಹದಿನೇಳೋ ಹದಿನೆಂಟು ವರ್ಷದ್ದು, ತಮ್ಮ ಒಬ್ಬ ಹದಿನಾಲ್ಕು ವರ್ಷದೋನು, ಎರಡು ಜನರ ಪತ್ತೆಯೇ ಇಲ್ಲೆ. ಅದರ ಎರಡು ಜನ ಸೋದರ ಮಾವಂದ್ರೂ, ದೊಡ್ಡೋನ ಹೆಂಡತ್ತಿ ಇವು ಮೂರು ಜನ ಬದ್ಕಿ ಒಳುದ್ದವಿಲ್ಲೆ”

ಇಷ್ಟು ಹೇಳಿಕ್ಕಿ ಅಪ್ಪ° ದೀರ್ಘವಾಗಿ ಉಸಿರು ಬಿಟ್ಟು ಕಣ್ಮುಚ್ಚಿ ಈಸಿಚೇರಿಲಿ ಹಿಂದಂಗೆರಗಿದ°. ನೀರು ಕುಡುದಾದ ಮೇಲೆ ಕೇಳಿದೆ-ಇಷ್ಟೆಲ್ಲ ಅನಾಹುತ ಹೇಂಗಾತಪ್ಪಾ°?

“ಆನು ಸೇಡಿಗುಡ್ಡೆಂದ ಕೊಡಿಯಾಲ್‍ಬೈಲು ದಾಂಟಿಕ್ಕಿ ಲಾಲ್‍ಬಾಗಿನ ಹತ್ತರಂಗೆ ಬಪ್ಪಾಗ ವಾರಿಜ ಗೇಟಿನ ಹತ್ತರೆ ನಿಂದುಗೊಂಡಿತ್ತು. ಎನ್ನ ನೋಡಿ ಗೇಟು ತೆಗದು ಹೆರ ಮಾರ್ಗಕ್ಕೆ ಬಂತು. ಮಧ್ಯಾಹ್ನ ಮೂರುಗಂಟೆಗೆ ರಾಮರಾಯ° ಮನೆಂದ ಹೆರಟು ಕಂಬ್ಳ ಕ್ರಾಸಿಲ್ಲಿ ಇಪ್ಪ (ವಾರಿಜನ)ಸೋದರವಾವನ ಮನೆಗೆ ಹೋಗಿ ಮನೆಯೋರೆಲ್ಲೋರೊಟ್ಟಿಂಗೆ ಸಮುದ್ರದ ಕರೆಂಗೆ ಹೋಯಿದ°, ಇಷ್ಟು ಹೊತ್ತಾದರೂ ಏಕೆ ಬಯಿಂದಾ°ಇಲ್ಲೆ? ಒಂದೂ ಗೊಂತಾವ್ತಿಲ್ಲೆ” ಹೇಳಿತ್ತು. ಗಂಟೆ ಒಂಬತ್ತೂವರೆ ಆಗಿತ್ತು.

ಹಾಂಗಾರೆ ನಾವು ನಿನ್ನ ಮಾವನ ಮನಗೇ ಹೋಪೊ° ಅಲ್ಲಿಗೆ ಎಲ್ಲೋರು ಬಂದಿಕ್ಕು ಹೇಳಿ ’ಮಣ್ಣಗುಡ್ಡೆ ಮೈನ್ ರೋಡಿ’ಲಿ ನಡಕ್ಕೊಂಡು ಹೋದೆಯೊ°. (ಜನ ಸಂಚಾರ ತುಂಬಾ ಕಮ್ಮಿ ಇಪ್ಪ ಮಾರ್ಗ, ಅದೂ ಇರುಳಾಣ ಹೊತ್ತಿಲಿ ಹೆಮ್ಮಕ್ಕೊ ಒಬ್ಬೊಬ್ಬನೇ ಹೋಪದು ಸರಿ ಅಲ್ಲ) ಎಂಗೊ ಕಂಬ್ಳ ಕ್ರಾಸಿನ ಮನಗೆ ಬಂದು ಮುಟ್ಟುವಾಗ ರಾಮರಾಯನ ತುರ್ತು ಚಿಕಿತ್ಸೆಗೆ ’ವೆನ್‍ಲಾಕ್’ ಆಸ್ಪತ್ರಗೆ ಕರಕ್ಕೊಂಡು ಹೋಯಿದವು ಹೇಳಿ ಗೊಂತಾತು. ಮನೆಲಿ ಆರೂ ಇತ್ತಿದ್ದವಿಲ್ಲೆ. ಇದು ಹತ್ತರಾಣೊರು ಹೇಳಿ ಗೊಂತಾದ ವಿಷಯ. ದೇವರ ದಯಲ್ಲಿ ಅಲ್ಲಿ ಒಂದು ಜಟಕಾ ಸಿಕ್ಕಿತ್ತು (ಆಟೋರಿಕ್ಷಾ ಎಂಬ ಹೆಸರೇ ಹುಟ್ಟದ್ದ ಕಾಲ ಅದು. ಫೋನ್ ಕೂಡಾ ಆರ ಮನೆಲಿಯೂ ಇಲ್ಲೆ. ಪೋಸ್ಟ್ ಆಫೀಸಿಲಿ ಮಾಂತ್ರ ಸುರುವಾಗಿತ್ತಷ್ಟೆ)

ಅಲ್ಲಿ ಆಸ್ಪತ್ರೆಲಿ ರಾಮರಾಯನ ಹೊಟ್ಟೆ, ಶ್ವಾಸಕೋಶಂದ ನೀರು ಖಾಲಿ ಮಾಡ್ಸಿ, ಉಸಿರಾಟಕ್ಕೆ ಆಮ್ಲಜನಕದ ವ್ಯವಸ್ಥೆ ಮಾಡಿದ ಮೇಲೆ ಹೋದ ಜೀವ ಬಂದ ಹಾಂಗಾತು. ಮೆಯ್ಗೆ ಶಾಖವೂ ಕೊಟ್ಟಿತ್ತಿದ್ದವು. ಮುನ್ನೆಚ್ಚರಿಕೆಯಾಗಿ, ನ್ಯುಮೋನಿಯಾ ಬಾರದ್ದ ಹಾಂಗೆ ಇಂಜೆಕ್ಷನ್ನೂ ಕೊಟ್ಟಿತ್ತಿದ್ದವು. ವಾರಿಜನ ದೊಡ್ಡಮ್ಮ ಇಲ್ಲದ್ದೆ ಇರ್ತಿದ್ದರೆ ರಾಮರಾಯನ ಒಳಿಶುವೋರೇ ಇಲ್ಲೆ, ಹೊಳೆಕರೆಲಿ ಮನಿಶಿಗೊಂಡಿದ್ದ ನಾಲ್ಕು ಶರೀರಂಗಳಲ್ಲಿ ಇವನ ಎದೆ ರಜಾ ಬೆಶಿ ಇದ್ದ ಹಾಂಗೆ ದೊಡ್ಡಮ್ಮಂಗೆ ಕಂಡತ್ತೊಡೊ. ಬೆಸ್ತರು ’ಜೀವ ಹೋಯಿದು’ ಹೇಳಿ ಕೈಚೆಲ್ಲಿತ್ತಿದ್ದವು. “ಏನೇ ಆಗಲಿ ಒಂದು ಪ್ರಯತ್ನ ಮಾಡಲೇ ಬೇಕು” ಹೇಳಿ ಆ ಮಕ್ಕಳೇ ಇಲ್ಲದ್ದ ವಿಧವೆ ದೊಡ್ಡಮ್ಮ ಸೀದಾ ವೆನ್‍ಲಾಕ್ ಆಸ್ಪತ್ರೆಗೆ ಸಾಗ್ಸಿದ ಕಾರಣ ಅವನ ಜೀವ ಒಳಿಶುಲಾತು. ಹುಷಾರಿ ಡಾಕ್ಟ್ರ ಸಿಕ್ಕಿದ್ದು ಇನ್ನೊಂದು ಮುಖ್ಯ ಸಂಗತಿ.

ಡಾಕ್ಟ್ರ “ಇನ್ನು ರಾಮ ರಾಯರಿಂಗೆ ಪ್ರಾಣಾಪಾಯ ಇಲ್ಲೆ” ಹೇಳಿದ ಮೇಲೆಯೂ ಒಂದರ್ಧ ಗಂಟೆ ಅಲ್ಲಿಯೇ ಕೂದಿಕ್ಕಿ ಆ ಮೇಲೆ ನಡಕ್ಕೊಂಡು ಬಂದೆ. ಇಷ್ಟು ಹೊತ್ತಿಂಗೆ ಜಟಕಾ ಸಿಕ್ಕುದು ಹೇಂಗೆ? (ಜಟಕಾ ಹೇಳಿದರೆ ಕುದುರೆಗಾಡಿ)

*****

ವಾರಿಜ ರಾಮರಾಯ ಎಂಗಳ ಪರಮ ಸ್ನೇಹಿತರು. ರಾಮರಾಯರು ಕೊಡೆಯಾಲದ ಕ್ರಿಮಿನಲ್ ಕೋರ್ಟಿಲಿ ಪಬ್ಲಿಕ್ ಪ್ರೊಸೆಕ್ಯೂಟರ್-ಹೇಳಿದರೆ ಸರಕಾರೀ ವಕೀಲ°. ವಾರಿಜ ಎನಗೆ, ಅಕ್ಕಂಗೆ ಹಿಂದೀ ’ಪ್ರಥಮಾ’ ಪರೀಕ್ಷೆಗೆ ಪಾಠ ಮಾಡಿದ ಆತ್ಮೀಯ ಸ್ನೇಹಿತೆ, ಹೆರಿ ಅಕ್ಕ° ಎಲ್ಲವೂ. ವಾರಿಜನ ತಮ್ಮಂದ್ರು ಸುಂದರೇಶ°, ಸದಾನಂದ ಖರಗ್‍ಪುರಲ್ಲಿ ಇಂಜಿನಿಯರಿಂಗ್ ಕಲಿವ ಜವ್ವನಿಗರು. ರಜೆಲಿ ಊರಿಂಗೆ ಬಯಿಂದವು. ಸಮುದ್ರದ ಕರೆಂಗೆ ಹೋಪ ಆಲೋಚನೆ ಇವರದ್ದೇ. “ಮನೆಯೊರೆಲ್ಲೋರು ಹೋಪದು, ಸೋದರ ಮಾವಂದ್ರು ಅತ್ತೆಕ್ಕೊ, ಅಮ್ಮ ದೊಡ್ಡಮ್ಮಂದ್ರು, ತಂಗೆ ತಮ್ಮಂದ್ರು, ಅಕ್ಕ ಭಾವ ಎಲ್ಲೊರು, ಹೀಂಗೆ ಒಂದು ಲಾಯಿಕಿನ ಪಿಕ್‍ನಿಕ್ ಮಾಡೆಕ್ಕು” ಹೇಳಿಗೊಂಡು ಒತ್ತಾಯಿಸುವಾಗ ’ಬೇಡ’ ಹೇಳಿ ಮಕ್ಕಳ ಉತ್ಸಾಹ ಭಂಗ ಮಾಡುಲೆಡಿತ್ತೋ? ಜವ್ವನಿಗರೊಟ್ಟಿಂಗೆ ಒಳುದೋರೂ ಜವ್ವನಿಗರಾಯೆಕ್ಕಲ್ಲದಾ? ಕುರುಕುರು ತಿಂಡಿಗಳ ಮಾಡಿ ಡಬ್ಬಿಲಿ,  ತುಂಬ್ಸಿ, ಬೆಶಿ ಬೆಶಿ ಕಾಫಿಯ ’ಫ್ಲಾಸ್ಕ್’ಗೊಕ್ಕೆ ಹಾಕಿ, ಭಾರೀ ಸಂಭ್ರಮಲ್ಲಿ ಹೆರಟವು.

ಹತ್ತರೆ ಸಿಕ್ಕುವ ಸಮುದ್ರಕರೆ ಹೇಳಿದರೆ ಕುದ್ರೋಳಿ. ಅಲ್ಲಿ ಟಿಪ್ಪು ಸುಲ್ತಾನ್ ಬತ್ತೇರಿಯೂ ಇದ್ದು ನೋಡ್ತರೆ. ಆದರೆ ಸಮುದ್ರ ಸಿಕ್ಕೆಕ್ಕಾರೆ ಅಡ್ಡವಾಗಿ ಹೊಳೆ ಇದ್ದು. ದೋಣಿಲಿ ಕೂದು ದಾಂಟೆಕ್ಕು. ದೋಣಿ ಪ್ರಯಾಣದ ಮಜವೂ ಸಿಕ್ಕಿದ ಹಾಂಗಾವ್ತು. ಒಳ್ಳೆದೇ ಆತನ್ನೇ? ಗುರುಪುರ ಹೊಳೆ ನೇತ್ರಾವತಿಗೆ ಸೇರುಲೆ ಹರುದು ಹೋವ್ತಾ ಇರ್ತು. ಆದರೆ ಆ ದಿನ ಇವರ ದುರದೃಷ್ಟವೋ ವಿಧಿಲಿಖಿತವೋ! ದೋಣಿಲಿ ಹೊಳೆ ದಾಟ್ಸುವ ಮೊಗವೀರಂಗೊ ಆರೂ ಹೊಳೆ ಕರೆಲಿ ಕಾಣ್ತವಿಲ್ಲೆ. ಇಷ್ಟೆಲ್ಲ ಗೌಜಿಕಟ್ಟಿಕೊಂಡು ಬಂದೋರಿಂಗೆ ಹೇಂಗಾಗೆಡ? ಇನ್ನೆಂತ ಮಾಡುದು? ಹಾಂಗೇ ವಾಪಾಸು ಮನೆಗೆ ಹೋಪಹಾಂಗಾವ್ತನ್ನೆ? ಜವ್ವನಿಗರ ಸಾಹಸ ಪ್ರಜ್ಞೆ ಮೇಲೆ ಬಂತು!. “ನಾವೇ ದೋಣಿ ಒಚ್ಚುವೊ°. ಅಲ್ಲಿದ್ದದು ಎರಡು ದೋಣಿಗೊ. ಆದರೆ ಹುಟ್ಟು ಒಂದೇ. ಎಂತ ಮಾಡುದು? ಹಾಂ ಐಡಿಯಾ! ಅಲ್ಲಿ ದೋಣಿಯ ಒಳ ಹಾಯಿಕಟ್ಟುವ ತೋರದ ಹುರಿಬಳ್ಳಿ ಇದ್ದು. ಹುಂ. ಎರಡನ್ನೂ ಒಂದಕ್ಕೊಂದು ಸೇರುವ ಹಾಂಗೆ ದೋಣಿಗಳ ಜೋಡ್ಸಿ ಬಿಗಿಯಾಗಿ ಕಟ್ಟಿದವು. ಆ ಮೇಲೆ ಎಲ್ಲೋರು-ಒಂದರಲ್ಲಿ ಆರು ಜನ, ಇನ್ನೊಂದರಲ್ಲಿ ಐದು ಜನ-ಹೀಂಗೆ ಮಾಡಿ ಕೂದುಗೊಂಡವು. ಸದಾನಂದ, ಸುಂದರೇಶ ಒಬ್ಬ ಆದ ಮೇಲೊಬ್ಬ ಒಚ್ಚುದು ಹೇಳಿ ತೀರ್ಮಾನವೂ ಆತು. ಹೊಳೆಯ ಕಿನಾರೆಲಿ ಸಲೀಸಾಗಿ ದೋಣಿಗೊ ಮುಂದೆ ಸಾಗಿದವು. ಹೊಳೆಯ ನಡುಗಂಗೆ ಬಪ್ಪಾಗ, ತೆಕ್ಕೊ! ಗಾಳಿ ಬೀಸುದು ಜೋರಾತು. ಹೊಳೆ ಹರಿವ ವೇಗವೂ ಹೆಚ್ಚಾತು. ನದಿಪಾತ್ರದ ಆಳ ಹೆಚ್ಚಾವುತ್ತಾ ಹೋತು. ಹೊಳೆಯ ಅಡ್ಡಕ್ಕೆ ದಾಂಟೆಕ್ಕಾದ ಕಾರಣ ಒಯಿಲಿಂಗೆ ಸಿಕ್ಕಿ ದೋಣಿಗೊಕ್ಕೆ ಕಟ್ಟಿದ ಹುರಿಬಳ್ಳಿಯ ಕಟ್ಟ ಸಡಿಲಿತ್ತು. ನೋಡ್ತಾ ಇದ್ದ ಹಾಂಗೆ ಒಂದು ದೋಣಿ ಎಡತ್ತಿಂಗೆ, ಇನ್ನೊಂದು ಬಲತ್ತಿಂಗೆ ಹೊಡೆಚ್ಚಿ, ಹೊರಳಿ ಕವುಂಚಿ ಬಿದ್ದುಹೋದವು!. ದೋಣಿಲಿದ್ದೋರೆಲ್ಲ ರಭಸಲ್ಲಿ ಹರುದು ಹೋಪ ನೀರಿಲಿ ಕೊಚ್ಚಿಹೋದವು. ಸುಂದರೇಶ, ಸದಾನಂದ ಎರಡು ಜನ ಹೇಂಗೋ ಎಲ್ಲ ಉರುಡಪತ್ತು ಮಾಡಿ ಕವುಂಚಿದ ದೋಣಿಯ ಮೇಲಂಗೆ ಹತ್ತಿ ಕೂದವು. ಸುತ್ತೂ ನೋಡುವಾಗ ಆರೊಬ್ಬನೂ ಇಲ್ಲೆ. ಪರಿಸ್ಥಿತಿಯ ಭಯಂಕರವ ಅರ್ಥ ಮಾಡಿಗೊಂಡ ಹುಡುಗರು ತಮ್ಮ ಅತಿ ಬುದ್ಧಿವಂತಿಕೆಯ ಪರಿಣಾಮವ ನೋಡಿ ಹೆದರಿ ಕಂಗಾಲಾಗಿ “ಕಾಪಾಡೀ ಕಾಪಾಡೀ” ಹೇಳಿ ಬೊಬ್ಬೆ ಹಾಕಿದವು, ಆರ್ಭಟೆ ಕೊಟ್ಟವು. “ಎಂಗಳದ್ದು ಬರೀ ಮಕ್ಕಳಾಟಿಕೆ ಆತನ್ನೇ” ಹೇಳಿ ಕಣ್ಣು ಬಾಯಿ ಬಿಟ್ಟುಗೊಂಡು ಆರಾರೂ ಸಹಾಯಕ್ಕೆ ಬನ್ನೀ ಬನ್ನೀ ಹೇಳಿ ಕೂಗುದರ ಹೊರತು ಇನ್ನೆಂತ ಮಾಡ್ಳೆ ಸಾಧ್ಯ ಅವಕ್ಕೆ? ಪಿಕ್‍ನಿಕ್ ಪಾರ್ಟಿಯೊರಲ್ಲಿ ಒಬ್ಬಂಗಾದರೂ ಹೊಳೆಲಿ ಮೀಶುಲರಡಿತ್ತಾ? ಆದರೆ ಆಶ್ಚರ್ಯದ  ವಿಷಯ ಹೇಳಿದರೆ ವಾರಿಜನ ಅಮ್ಮ-ಶಾರದಮ್ಮ ತನ್ನ ಅಖೇರಿಯಾಣ ಮಕ್ಕಳ ಎದಗೆ ಅಪ್ಪಿಗೊಂಡು-ಅವರ ಹೆಸರು ಮೀರಾ, ಮುರಲೀಧರ-ಯಾವ ಮಾಯಕಲ್ಲಿಯೋ ಹೊಳೆಲಿ ತೇಲಿಗೊಂಡು ಹೋಗಿ ಹೊಳೆಯ ಕರೇಂಗೆ ತಳ್ಳಿದ ಹಾಂಗಾಗಿ ಒಂದು ಪುದೆಲಿ ಸಿಕ್ಕಿಗೊಂಡವು! ಇದು ದೈವಕೃಪೆಯೋ? ಅಬ್ಬೆ ತನ್ನ ಮಕ್ಕಳ ರಕ್ಷಣೆ ಮಾಡುಲೆ ಕೈಗೊಂಡ ಪರಮಾವಧಿ ಪ್ರಯತ್ನಕ್ಕೆ ಸಿಕ್ಕಿದ ಉಡುಗೊರೆಯೋ? ಕಲ್ಪನೆ ಕೂಡ ಮಾಡುಲೆಡಿಯದ್ದ ಈ ಚಮತ್ಕಾರ ನಡೇಕಾರೆ ಕಾಣದ್ದ ಕೈಯೊಂದು ಅಲ್ಲಿ ಕೆಲಸ ಮಾಡಿರೆಕ್ಕು(ಕಾಕಣ್ಣ ಗುಬ್ಬಕ್ಕನ ಕಥೆಲಿ-ಕಾಕೆ ಒಂದು ಮುಂಡೆಂಗಿ ಬಲ್ಲೆಲಿ ಸಿಕ್ಕಿಗೊಂಡದು ನೆನಪಾವುತ್ತೋ). ಇದು ಹರಿಚಿತ್ತ, ನಮ್ಮ ಅರಿವಿಂಗೆ ಬಾರ.

’ಕಾಪಾಡೀ ಕಾಪಡೀ’ ಹೇಳಿ ಬೊಬ್ಬೆ, ಆಕ್ರೋಶ, ಚೀತ್ಕಾರ, ಕೂಗಾಟ ಕೇಳಿ ಹೊಳೆಕರೆಯಾಣ ಬೆಸ್ತರ ಜೋಪಡಿಂದ ಹೆಂಗಸರೂ,ಕೆಲವು ಮುದ್ಕರೂ ಹೆರ ಬಂದವು. ಇವರ ನೋಡಿ ಓಡಿಗೊಂಡು ಬಂದವು ಗೆಂಡುಗೊ. ಮುದ್ಕರೇ ಆದರೂ ಹೊಳೆಲಿ ಪಳಗಿದೋರೇ. ಅವು ಈಜಿಗೊಂಡು ಮುಳುಗು ಹಾಯ್ಕೊಂಡು ಹುಡ್ಕಿದವು. ನಾಲ್ಕು ಶರೀರಂಗಳ ಹೊತ್ತುಗೊಂಡು ಹೊಳೆಕರೆಂಗೆ ಈಜಿಗೊಂಡು ಬಂದು ಹೊಯಿಗೆ ನೆಲಲ್ಲಿ ಕವುಂಚಿ ಮನುಶಿ ನೀರೆಲ್ಲಾ ಕಾರಿಸಿದವು. ಆದರೆ ಉಸಿರಾಡುವ ಲಕ್ಷಣ ಏನೂ ಕಾಣ್ತಿಲ್ಲೆ. ಈ ಮಧ್ಯೆ ಸದಾನಂದ, ಕಂಬ್ಳ ಕ್ರಾಸಿಂಗೆ ಹೋಗಿ ಮನೆಲಿಯೇ ಇದ್ದ ದೊಡ್ಡಮ್ಮಂಗೆ ಸುದ್ದಿ ಮುಟ್ಟಿಸಿದ°

ಅಪ್ಪ° ಇಷ್ಟೆಲ್ಲ ಹೇಳಿದ ಮೇಲೆ, ಹೊಟ್ಟೆಲಿ ಉಂಟಾದ ತಳಮಳಲ್ಲಿ ಉಂಬಲೆ ಆರಿಂಗೆಡಿಗು? ಹಶು ಯಾವಾಗಳೇ ಸತ್ತು ಹೋಗಿತ್ತು. ಒಂದಿಷ್ಟು ನೀರು ಕುಡುದು ಮನುಗಿದೆಯೊ°. ಮರುದಿನ ಉದಿಯಪ್ಪಗಳೇ ಎದ್ದು ಒಂದೊಂದು ಗ್ಲಾಸ್ ಕಾಪಿಕುಡ್ಕೊಂಡು ರಾಮರಾಯನ ನೋಡ್ಳೆ ಹೋದೆಯೊ°. ಆಸ್ಪತ್ರೆಯ ಬೆಡ್ಡಿಲಿ ಮನ್ಕೊಂಡೇ ಎಂಗಳ ನೋಡಿ ಸಣ್ಣಕ್ಕೆ ನೆಗೆಮಾಡಿ, ’ಯಮರಾಯ’ ಎನಗೆ ಗೇಟ್‍ಪಾಸ್ ಇಲ್ಲೆ ಹೇಳಿ ವಾಪಾಸು ಕಳ್ಸಿಬಿಟ್ಟ° ಹೇಳಿದ°.

ಡಾಕ್ಟ್ರ, ಅಪ್ಪನ ಹತ್ತರೆ “ ಇಲ್ಲಿಯೇ ಒಂದು ವಾರ ಇರಲಿ ವಿಶ್ರಾಂತಿಲಿ, ಆ ಮೇಲೆ ಕರಕ್ಕೊಂಡು ಹೋಪಲಕ್ಕು. ಒಣ ಹವೆ ಇಪ್ಪ ಊರಿಂಗೆ ಅವನ ಕರಕ್ಕೊಂಡು ಹೋಗಿ, ಅಲ್ಲಿ ಕೆಲವು ತಿಂಗಳು ಇದ್ದರೆ ತುಂಬಾ ಒಳ್ಳೆದು” ಹೇಳಿದ°. ಎಂಗೊ ರಜವೇ ಹೊತ್ತು ಅಲ್ಲಿದ್ದದು. ದುರಂತದ ಯಾವ ಸುದ್ದಿಯನ್ನೂ ಅಲ್ಲಿ ಅವನ ಹತ್ತರೆ ಪ್ರಸ್ತಾಪ ಮಾಡಿದ್ದಿಲ್ಲೆಯೊ°. ಮುಂದೆ ನಿಧಾನಲ್ಲಿ ಗೊಂತಾವುತ್ತು. ವಿಧಿಯ ಆಟದ ಎದುರು ಮನುಷ್ಯ ಯಾವ ಲೆಕ್ಕ? ಆಹಾ! ನಿನ್ನ ಮಹಿಮೆಯೇ! ಹೇಳಿ ಶಿರಬಾಗಿ ಕಣ್ಣೀರು ಹರಿಶೆಕ್ಕಷ್ಟೆ.

ಆದರೆ ಈ ದೈವೇಚ್ಛೆಯ ಇನ್ನೊಂದು ಮಗ್ಗುಲಿನ ಹೇಳದ್ದೆ ಸಮಾಧಾನ ಸಿಕ್ಕ-ವಾರಿಜನೂ ಎಲ್ಲೋರೊಟ್ಟಿಂಗೆ ಹೋಪದು ಹೇಳಿ ನಿಶ್ಚಯ ಆಗಿತ್ತು. ಆ ದಿನ ಮಧ್ಯಾಹ್ನ ಉಂಡಿಕ್ಕಿ ಹೆರಡುವ ಸನ್ನಾಯಲ್ಲಿಪ್ಪಾಗ ಅದಕ್ಕೆ ಎಲ್ಲಿಲ್ಲದ್ದ ಹೊಟ್ಟೆಬೇನೆ ಸುರುವಾತು. “ನಿಂಗೊ ಹೋಗಿ, ಎನಗೆ ಬಪ್ಪಲೆಡಿಯ, ಮುಂದೆ ಯಾವಗಾದರು ಹೋಪಾಗ ನೋಡುವೊ°” ಹೇಳಿ ಅದು ಮನೆಲಿಯೇ ಕೂತು. ಇತ್ಲಾಗಿ ಕಂಬ್ಳಕ್ರಾಸಿನ ಮನೆಲಿ ಸಣ್ಣ ಸೋದರಮಾವನ ಹೆಂಡತ್ತಿ ಮನೋರಮಂಗೆ ತಿಂಗಳ ರಜೆ, ಅಲ್ಲದ್ದೆ ದೊಡ್ಡ ಮಾವನ ಐದು ವರ್ಷದ ಮಗಂಗೆ ಶೀತ ನೆಗುಡಿ ಆಗಿತ್ತು. “:ಸಮುದ್ರ ಕರೆಯಾಣ ಶೀತಗಾಳಿಗೆ ಜ್ವರವೇ ಬಂದು ಬಿಡುಗು, ಅವನ ಆನು ನೋಡಿಗೊಳ್ತೆ, ನಿಂಗೊ ಎಲ್ಲ ಹೋಗಿ “ ಹೇಳಿ ಅದು ಮನೆಲಿಯೇ ಒಳುದತ್ತು. ಮಾಣಿಯೂ ಅಪಾಯಕ್ಕೆ ಸಿಕ್ಕಿದ್ದಾ° ಇಲ್ಲೆ.

ಕಾಣದ್ದ ಕೈ ಅಲ್ಲಿ ಸುತ್ತಿಗೊಂಡು ಇದ್ದಿಕ್ಕಲ್ಲದಾ? ವಾರಿಜನ ಅಮ್ಮ ಮಾತೃಶಕ್ತಿಯ ಉತ್ಕೃಷ್ಟ ಉಜ್ವಲ ಪ್ರತೀಕವಾಗಿ ಬೆಳಗಿತ್ತು. ತನ್ನ ಮಕ್ಕಳ ರಕ್ಷಣೆ ಮಾಡುವ ಹೆತ್ತೊಡಲ ಹೋರಾಟ ಎಷ್ಟು ಹೊಗಳಿದರೂ ಕಡಮ್ಮೆಯೇ. ದಯಾಸಾಗರ ಪರಮಾತ್ಮನ ಕಾಣದ ಕೈ ಈ ಅಬ್ಬೆಯ ಸಹಾಯಕ್ಕೆ ಖಂಡಿತವಾಗಿಯೂ ಬಂದಿಕ್ಕು.

ಇನ್ನೊಂದು ಆಶ್ಚರ್ಯದ ವಿಷಯವ ಹೇಳದ್ದರೆ ಹೇಂಗೆ?

ರಾಮರಾಯ ವಾರಿಜರ ಮದುವೆ ಆಗಿ ಹನ್ನೆರಡು ವರ್ಷ ಆಗಿದ್ದರೂ ಮಕ್ಕೊ ಇಲ್ಲೆ. ಈ ದುರ್ಘಟನೆ ಕಳುದು ಒಂದೇ ವರ್ಷಲ್ಲಿ ವಾರಿಜ ರಾಮರಾಯ ಒಂದು ಚೆಂದದ ಕೂಸಿನ ಅಬ್ಬೆ ಆಪ್ಪ° ಆದವು. ಮತ್ತೆರಡು ವರ್ಷ ಕಳುದು ಮಾಣಿ ಹುಟ್ಟಿದ°. ಒಂದು ಸುಮನ, ಇನ್ನೊಂದು ಪ್ರಸನ್ನ. ಮುಳುಗಿ ಹೋದ ತಂಗೆ, ತಮ್ಮ ಮತ್ತೊಂದರಿ ಹುಟ್ಟಿ ಬಂದಿಕ್ಕಾ?

ಈಗ ಹೇಳಿ ಸಾವು ಗೆದ್ದತ್ತೋ –ಅಲ್ಲ-ಜೀವನ ಗೆದ್ದದೋ?    

(ಇನ್ನೂ ರಜಾ ಬಾಕಿ ಇದ್ದು- ಮುಂದುವರಿದ ಭಾಗ ಇಲ್ಲಿದ್ದು)

~~~***~~

ಇವು ಬರದ ಇನ್ನೊಂದು ಕತೆ ಓದಲೆ ಇಲ್ಲಿದ್ದು ಲಿಂಕ್  ಹಸುಗಳ ಒಡಲು ಕರುಣೆಯ ಕಡಲು

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ
ರೂಪಾನಗರ
ಮೈಸೂರು

9019274678

ಶರ್ಮಪ್ಪಚ್ಚಿ

   

You may also like...

9 Responses

 1. ಡಾ ಪಿ ಕೆ ಭಟ್ಟ says:

  ಹವಿ ಭಾಷೆ ಸೊಗಡು ಸೂಪರು,ದೈವೇಚ್ಛೆಗಿಂತ ಮಿಗಿಲಾದ್ದು ಯಾವುದೂ ಇಲ್ಲೆ ಹೇಳ್ತ್ತದು ಈ ಕತೆಂದ ವೇದ್ಯ ಆವುತ್ತು.

 2. ಬೊಳುಂಬು ಗೋಪಾಲ says:

  ಯಬ್ಬಾ. ಕತೆಯ ಒಂದೇ ಬಿಟ್ಟಿಂಗೆ ಉಸಿರು ಬಿಡದ್ದೆ ಓದಿದೆ. ನಿಜ. ದೈವ ಲೀಲೆಯ ಎದುರ ನಾವೆಲ್ಲ ಎಂತ. ಛೆ. ಜವ್ವನಿಗರ ಕಾರ್ಬಾರಿಲ್ಲಿ ಒಂದು ಕುಟುಂಬಕ್ಕೆ ಎಂತಾ ಕಷ್ಟ ಒದಗಿ ಬಂತು.
  ಅರುವತ್ತೆಂಟು ವರ್ಷ ಹಿಂದಾಣ ಕೊಡೆಯಾಲದ ಚೆಂದದ ಚಿತ್ರಣ ಸಿಕ್ಕಿತ್ತು. ಸೇಡಿಗುಡ್ಡೆ, ಕೊಡಿಯಾಲ ಬೈಲು, ಲಾಲ್ ಬಾಗ್, ಮಣ್ಣಗುಡ್ಡೆ, ವೆನ್ಲಾಕ್ , ಈಗ ಆದರೆ ರಿಕ್ಷಾಲ್ಲೇ ಹೋಯೆಕಷ್ಟೆ.

 3. ಬರವಣಿಗೆಯ ಧಾಟಿ ಬಾಯಿಮುಚ್ಚಿಸಿತ್ತು . ಒಪ್ಪ ಹೇಳ್ತ ಒಂದೇ ಶಬ್ದಲಿ ಮುಗುಶೆಕ್ಕಷ್ಟೇ ಒಪ್ಪ.

 4. ಪಟ್ಟಾಜೆ ಶಂಕರ ಭಟ್ says:

  ಚೆಂದಕೆ ಬರದ್ದಿ ಅತ್ತೆ. ಘಟನೆ ದುಃಖ ದಾಯಕ. ಅಂಬಗ ಅಜ್ಜಿ ಇದ್ದಿರೆಕನ್ನೆ. ಇದಕ್ಕೆ ಹತ್ತರೆ ಹತ್ತರೆ ಇಪ್ಪ ಘಟನೆ ಬಹುಷಃ 60 ವರ್ಷಗಳ ಹಿಂದೆ ಎನ್ನ ಜೀವನಲ್ಲಿ ನಡದ್ದು ಪಟ್ಟಾಜೆ ಹೊಳೇಲಿ. ಶ್ರೀ ರಾಮ ಎಂಗಳ ರಕ್ಶಿಸಿದ್ದ ಹೇಳೋಗ ಎನಗೆ ಕಣ್ಣೀರು ಬತ್ತು.

 5. ಹಳೆಯ ಕಥೆ
  ಆದರೂ ನೆನಪ್ಪು ಹೊಸತ್ತೆನ ಹಾಂಗೇ ಇದ್ದು
  ಕಣ್ಣಿಂಗೆ ಕಟ್ಟಿದ ಹಾಂಗೆ ಇದ್ದು ಚಿತ್ರಣ

 6. S.K.Gopalakrishna Bhat says:

  ಹಳೆ ಕೊಡೆಯಾಲದ ಚಿತ್ರ,ಹೊಳೆನೀರಿಲಾದ ದುರಂತ ಮನಕರಗುವ ರೀತಿ ಇದ್ದು

 7. ಆತು, ಚವರ್ಕಾಡು ಶಿವರಾಮ ಭಟ್ಟರೇ, ತಮ್ಮದೋ , ವಿಜಯ ಪಳ್ಳಂದೋ ಇದ್ದರೆ ಕಳಿಸಿ ಹೇದು ಹೇಳುತ್ತೆ. ಧನ್ಯವಾದಗಳು ಶಿವರಾಮ ಜೋಯಿಷರೆ.

 8. ಅತ್ತೆ, ಬರದು ಆಯಿದಿಲ್ಲೆಯೊ ? ಎಲ್ಲೋರು ಕಾದು ಕೂಯಿದವು ಓದುಲೆ. ಎಂಗಳ ಶಿವರಾಮಂದೆ ಕಾದು ಕಾದು ಕೂಯಿದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *