Oppanna.com

ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ)

ಬರದೋರು :   ವಿಜಯತ್ತೆ    on   07/12/2016    13 ಒಪ್ಪಂಗೊ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ನಡೆದ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿಯ ಶ್ರೀಮತಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಇವರ ಕಥೆ ಗೆದ್ದುಗೊಂಡಿದು.  

ಗಾಲಿ ಕುರ್ಚಿಲಿ ಜೀವನ ಚಕ್ರಅನುಪಮಾ ರಾಘವೇಂದ್ರ ಉಡುಪಮೂಲೆ

ದೊಡ್ಡ ರಜೆಲಿ ಅಜ್ಜನ ಮನಗೆ ಹೋಗಿ ಬಂದ ಮೇಲೆ ಪುಟ್ಟಂಗೆ ಕಥೆ ಕೇಳ್ತ ಮರ್ಲು ಸುರುವಾಯ್ದು. ರಜೆಲಿ ಅಜ್ಜ ದಿನಾ ಕಥೆ ಹೇಳಿ ಹೇಳಿ ಅಭ್ಯಾಸ ಮಾಡ್ಸಿ ಬಿಟ್ಟಿದವು. ರಜೆ ಮುಗುದು ಮನಗೆ ಬಂದ ಮೇಲೂ  “ಅಮ್ಮ ಕಥೆ ಹೇಳು, ಅಮ್ಮ ಕಥೆ ಹೇಳು” ಹೇಳಿ ತಲೆ ತಿಂಬದೇ ಆಯ್ದು. ‘ಕಥೆ ಕೇಳ್ತ ಮರ್ಲು’ ಹೇಳಿ ಹೇಳುಲಾಗಪ್ಪಾ. ಅದು ಒಳ್ಳೆ ಅಭ್ಯಾಸವೇ. ಈಗಾಣ ಮಕ್ಕೊ ಮೊಬೈಲ್ , ಕಂಪ್ಯೂಟರ್ , ಟಿವಿ ಎದುರು ಕೂದರೆ ಊಟ ತಿಂಡಿಯೂ ಬೇಡ , ನೆಂಟ್ರಿಷ್ಟರೂ ಬೇಡ . ವಾಟ್ಸಾಪ್ ಲಿ ಎಷ್ಟು ಬೇಕಾದರೂ ಪಟ್ಟಾಂಗ ಹೊಡಗು , ಎದುರು ಕಂಡರೆ ಮಾತಾಡವು. ಎಂಗ ಸಣ್ಣಾದಿಪ್ಪಗಾಣ ಕಥೆ ನೆಂಪಾವುತ್ತು. ಅಪ್ಪನ ಆಫೀಸಿಂಗೆ ಒಂದು ದಿನ ರಜೆ ಇದ್ದರೂ ಆನೂ ಅಣ್ಣನೂ ಕಥೆ ಕೇಳುಲೆ ಅಪ್ಪನ ಅಂಟಿಗೊಂಡು ಕೂಪದೇ. ಅಪ್ಪನತ್ತರೆ ಕಥೆಗಳ ದೊಡ್ಡ ಭಂಡಾರವೇ ಇದ್ದತ್ತು. ಅಪ್ಪಂಗೆ ಇತ್ತಿದ್ದ ಓದುವ ಅಭ್ಯಾಸವ ಎಂಗೊಗೂ ಕಲಿಶಿ ಬಿಟ್ಟಿದವು. ಹೋದಲ್ಲಿ  ಬಂದಲ್ಲಿ ಚಂದಮಾಮ , ಬಾಲಮಿತ್ರ , ಬಾಲಮಂಗಳ ಯಾವ ಪುಸ್ತಕ ಸಿಕ್ಕಿದರೂ ಸರಿ ಓದುದೇ. ಕೂಡು ಕುಟುಂಬ ಆದ ಕಾರಣ ಎಲ್ಲವನ್ನೂ ತರ್ಸಿ ಓದುತ್ತಷ್ಟು ಅನುಕೂಲ ಇದ್ದತ್ತಿಲ್ಲೆ. ಸಾಮಾನು ಕಟ್ಟಿಗೊಂಡು ಬಂದ ಕಾಗದ  ಚೂರು ಸಿಕ್ಕಿದರೂ ಅದರಲ್ಲಿಪ್ಪ ವಿಷಯಂಗಳ ಓದುತ್ತ ಅಭ್ಯಾಸ ಬೆಳದ್ದು. ಒಂದು ಕ್ಷಣ ಹಳೆ ನೆಂಪಿಲಿ ಕರಗಿದರೂ ಮಗ “ಅಮ್ಮ ಅಮ್ಮ ಕಥೆ ಹೇಳು” ಹೇಳಿ ಗಿರ್ಗಣ್ಸುವಾಗ ಈ ಲೋಕಕ್ಕೆ ಬಂದೆ. ಯಾವ ಕಥೆ ಸುರು ಮಾಡಿದರೂ ಅದು ಗೊಂತಿದ್ದು ಬೇರೆ ಹೇಳು ಹೇಳ್ತ. ಅವನ ಅಜ್ಜನ ಭಂಡಾರ ಪೂರಾ ಅವಂಗೆ ಸಿಕ್ಕಿದ್ದು . ಇನ್ನು ಹೊಸ ಕಥೆ ಎಲ್ಲಿಂದ ತಪ್ಪದು…….. “ಇಂದು ಒರಗು ಪುಟ್ಟ ನಾಳೆ ಹೊಸ ಕಥೆ ಹೇಳ್ತೆ” ಹೇಳಿ ಒಪ್ಪುಸಿ ಅವನ ಒರಗ್ಸಿಗೊಂಡು ಕೂಪಗ ನೆಂಪಾದ್ದು  ಆಚೆಕರೆ  ‘ಭಾರ್ಗವಣ್ಣ’ .

ಶಂಕರ ಭಟ್ರು  ಶಾಲೆಯ ಅಟೆಂಡರ್. ಸಾಧು ಸ್ವಭಾವದ ಸರಳಜೀವಿ . ನಮ್ಮ ತೋಟ ಕಳುದರೆ ಬೈಲು. ಬೈಲಿನ ಕರೆಲಿ ತೋಡು. ತೋಡಿನ ಆಚೆಕರೆಲಿ ಅವರ ಮನೆ. ಅಪ್ಪನ ಕಾಲದ ಆಸ್ತಿ ಎಂತದೂ ಇಲ್ಲೆ. ಬಪ್ಪ ಸಣ್ಣ ಸಂಬಳಲ್ಲಿ ದಿನ ನೂಕ್ಯೊಂಡು ಕುಂಞಿ ಜೋಂಪ್ಡಿ ಮನೆಲೂ ಚೆಂದಕೆ ಸಂಸಾರ ನಡೆಶುತ್ತ ಸಹನಾಮಯಿ ಹೆಂಡತಿ ಲಕ್ಷ್ಮಿ. ಎರಡು ಕಣ್ಣುಗಳ ಹಾಂಗಿಪ್ಪ ಮಕ್ಕ ಭಾರ್ಗವ , ಭಾರತಿ  . ಇಪ್ಪದರಲ್ಲಿ ತೃಪ್ತಿ ಪಡುವ ಸುಖೀ ಸಂಸಾರ. ಅಣ್ಣ ತಂಗೆಯ ಅನ್ಯೋನ್ಯತೆಯ ವಿವರ್ಸುದು ಕಷ್ಟ. ತಂಗೆಯ ಲೂಟಿ ಮಾಡ್ಳೆ ಭಾರ್ಗವಂಗೆ ಭಾರೀ ಕೊಶಿ. ಅದರ ‘ಬಾಯಿಗೆ ಕೋಲು’  ಹಾಕ್ಯೊಂಡು ಅದರ ಬೊಬ್ಬೆ ಹೊಡೆಶದ್ದರೆ ಅವಂಗೆ ತಿಂದ ಅಶನ ಕರಗ. ಭಾರತಿಗೂ ಹಾಂಗೆ ಅಣ್ಣನ ಕೆಣಕ್ಯೊಂಡೇ ಇರೆಕ್ಕು. ಒಂದು ಹೊತ್ತು ಅವ ಇಲ್ಲದ್ದರೂ ಆಗ. ಇಬ್ರೂ ಕಲಿವಲೆ ಭಾರೀ ಹುಶಾರಿ . ಭಾರ್ಗವಂಗೆ ಕಲಿವದರೊಟ್ಟಿಂಗೆ ಬೇರೆ ಕಾರ್ಬಾರೇ ಜಾಸ್ತಿ . ಯಾವಾಗಲೂ ಅವನೇ ಕ್ಲಾಸ್ ಲೀಡರ್ . ನಾಟಕ , ಭಾಷಣ , ಪ್ರಬಂಧ ಎಲ್ಲದರಲ್ಲೂ ಮುಂದೆ. ಆಟೋಟಲ್ಲಿ ಅವನ ಮೀರ್ಸುತ್ತ ಮಗನೇ ಇಲ್ಲೆ. ಅವನ ಚುರುಕುತನವ ಕಟ್ಟಿ ಹಾಕುತ್ತ ಬಳ್ಳಿ ಇಕ್ಕೋ….

ಬೆಳದು ನಿಂದ ಭಾರ್ಗವನ ಕಣ್ಣಿಂಗೆ ಕಂಡದು ಅಪ್ಪನ ಬಂಙ. ಹರುದು ಬೀಳುಲಾದ ಮನೆ , ತಂಗೆಯ ಮದುವೆ. ಚೆಂದದ ಭವಿಷ್ಯದ ಕಟ್ಟಡಕ್ಕೆ ಗಟ್ಟಿ ಅಡಿಪಾಯ ಬೇಡದಾ….. ಎಲ್ಲದಕ್ಕೂ ಮುಖ್ಯ ಪೈಸೆ . ಪಿಯುಸಿ ಮುಗಿವದ್ದೆ ಯಾವುದೋ ಸಣ್ಣ ಕೆಲಸಕ್ಕೆ ಸೇರಿದ. ಆದರೂ ಮನಸ್ಸಿಂಗೆ ಸಮಾಧಾನ ಇಲ್ಲೆ. ಹಾರುವ ಹಕ್ಕಿಯ ಗೂಡಿಲಿ ಕೂಡಿ ಹಾಕಿದ ಅನುಭವ. ಬೆಣಚ್ಚಿನ ಕರಡಿಗೆಯೊಳ ತುಂಬುಸಿ ಮಡುಗಿದರೆ ಆ ಬೆಣಚ್ಚು ಒಳ ಕೂರುಗಾ…….?  ರಭಸಲ್ಲಿ ಹಾರುವ ಜಲಪಾತಕ್ಕೆ ಅಡ್ಡ ಕಟ್ಟುಲೆಡಿಗಾ…..?  ಹರಿವ ನೀರಿಂಗೆ ಕಟ್ಟ ಕಟ್ಟಿದರೆ ಆ ನೀರಿಂಗೆ ಹೆರ ಬಪ್ಪ ಆಸೆ ಇರದಾ……?  ಪುಟ್ಟು ಮಾಣಿಯ ತಲೆಲಿ ಇದ್ದದು ದೊಡ್ಡ ಕನಸು. ‘ಸೈನ್ಯಕ್ಕೆ ಸೇರೆಕ್ಕು…..!’ ಅವಕಾಶ ಕೂಡಿ ಬಂತು . ಸೈನ್ಯಕ್ಕೆ ಸೇರುವ  ಟ್ರೈನಿಂಗ್ ಕೋರ್ಸಿಂಗೆ ಸೀಟು ಸಿಕ್ಕಿತ್ತು.

ಮಗ ಸೈನ್ಯಕ್ಕೆ ಸೇರುವ ಸುದ್ದಿ ಕೇಳಿದ ದಿನಂದ ಲಕ್ಷ್ಮಕ್ಕನ ‘ಕಣ್ಣಿಂಗೆ ಒರಕ್ಕು ಹಿಡಿಯ , ದೊಂಡೆಲಿ ನೀರು ಇಳಿಯ’.  ಆದರೂ ಮಗನ ಎದುರಂದ ನೆಗೆಯ ಮುಖವಾಡ . ‘ಮಗ ಒಳ್ಳೆ ನಿರ್ಧಾರ ತೆಕ್ಕೊಂಡಿದ’ ಹೇಳಿ ಶಂಕರಣ್ಣ ಎಲ್ಲೋರ ಹತ್ತರೆ ಹೇಳ್ಯೊಂಡರೂ, ಧೈರ್ಯವಂತ ಮಗನ ಅಪ್ಪ ಹೇಳ್ತ ಹೆಮ್ಮೆ ಇದ್ದರೂ ಒಳ ಮನಸ್ಸಿಲಿ ಹೇಳುಲೆ ಎಡಿಯದ್ದ ಹೆದರಿಕೆ. ‘ದೇಶ ಸೇವೆ ಮಗನ ಆಸೆ’. ಬೇಡ ಹೇಳಿದರೂ ಕೇಳುವ ಮಾಣಿ ಅಲ್ಲ. ಬೇಡ ಹೇಳಿ ನಿಷ್ಠುರ ಮಾಡ್ಯೊಂಬದರಂದ ಸಮಾಧಾನಲ್ಲೇ ಕಳುಸಿ ಕೊಡುದು ಒಳ್ಳೆದು ಹೇಳಿ ಶಂಕರಣ್ಣನೂ ಲಕ್ಷ್ಮಕ್ಕನೂ ತೀರ್ಮಾನ ಮಾಡಿದವು. ಎರಡು ಕಣ್ಣಿಲಿ ಒಂದು ಕಣ್ಣಿನ ಕಳಕ್ಕೊಂಬಲೆ ಮಾನಸಿಕವಾಗಿ ತಯಾರಾಗಲೇ ಬೇಕು. ಭಾರತಿಯಂತೂ ಅಣ್ಣನ ಹತ್ತರಂದ ಒಂದು ನಿಮಿಷವೂ ಕದಲದ್ದೆ ಅಂಟಿಗೊಂಡೇ ಬಾಕಿ. “ ಎಂತ ಕೂಸೇ ಇದು ……?” ಹೇಳಿ ಅಮ್ಮ ಪರಂಚಿದರೆ  “ ಇನ್ನು ಅಣ್ಣ ಸಿಕ್ಕುದು ಯಾವಾಗ ಹೇಳಿ ನಿನಗೆ ಗೊಂತಿದ್ದಾ … ಸುಮ್ಮನೇ ಕಿರಿಕಿರಿ ಮಾಡೆಡ”  ಹೇಳಿ  ಅಮ್ಮನನ್ನೇ  ಸುಮ್ಮನೆ ಕೂರ್ಸಿಗೊಂಡಿತ್ತು.

ಭಾರ್ಗವನ ಮಾನಸಿಕ ಸ್ಥಿತಿ ಹೇಂಗಿದ್ದಿಕ್ಕು ……? ಎಷ್ಟೇ ಧೈರ್ಯ ಇದ್ದರೂ ಮನೆಯವರ ಬಗ್ಗೆ ಇದ್ದ ಪಾಶವ ಕಡ್ಕೊಳ್ಳಲೇ ಬೇಕಲ್ಲದಾ……! ಹೆಚ್ಚು ಸ್ಥಿತಿವಂತರಲ್ಲದ್ದ ಕಾರಣ ಮಕ್ಕಳ ಆಸೆಯ ಪೂರೈಸುಲೆ ಇರುಳೂ ಹಗಲೂ ದುಡಿವ ಅಪ್ಪನ ಬಿಟ್ಟು ದೂರ ಹೋಪಲೆಡಿಗೋ….?  ಮಕ್ಕೊಗೆ ಬೇಕಾಗಿ ಜೀವವನ್ನೇ ಅರದೂ ಅರದೂ ಕುಡಿಶುತ್ತ ಅಮ್ಮನ ಮರವಲೆ ಎಡಿಗೋ………?  ಅಣ್ಣಾ …. ಅಣ್ಣಾ… ಹೇಳಿ ಹಿಂದೆ ಮುಂದೆ ಸುಳಿವ ತಂಗೆಯ ಪ್ರೀತಿ ಮರವಲೆಡಿಗೋ…….?  ಭಾರ್ಗವ ಶಾಲೆಂದ ಟೂರು ಹೋಪಗಲೇ ‘ಅಲ್ಲಿ ಊಟ ತಿಂಡಿ ಹೇಂಗಿರ್ತೋ …. ? ಇರುಳಂಗೆ ಉಳ್ಕೊಂಬಲೆ ಎಂತ ವ್ಯವಸ್ಥೆ ಮಾಡ್ತವೋ………..? ಹಾಸಿಗೆ , ಹೊದಕ್ಕೆ ಎಲ್ಲ ಇಕ್ಕೋ… ಇಲ್ಲದ್ದರೆ ನಿನಗೆ ಸರಿ ಒರಕ್ಕು ಬಾರ.  ಚಳಿ ಇಪ್ಪಲೂ ಸಾಕು . ಸ್ವೆಟರ್ ತೆಕ್ಕೋ’. ಇದು ಲಕ್ಷ್ಮಕ್ಕನ ಮನಸ್ಸು . ಇನ್ನು ಮುಂದೆ ಸೈನ್ಯಕ್ಕೆ ಹೋದರೆ ಅಲ್ಲಿ……..! ಲಕ್ಷ್ಮಕ್ಕಂಗೆ ಅದರ ಕಲ್ಪನೆ ಮಾಡ್ಳೂ ಎಡಿಯ.

ಅಂತೂ ಇಂತೂ ಭಾರ್ಗವ ಹೋಪ ದಿನ ಬಂದೇ ಬಿಟ್ಟತ್ತು . ಉದೆಕಾಲ 6 ಗಂಟೆಗೆ ರೈಲು . ಭಾರ್ಗವ 3 ಗಂಟೆಗೇ ಎದ್ದು ಮಿಂದು ಜಪ ಮಾಡಿ ಕಾಪಿ – ತಿಂಡಿ  ಮುಗಿಶಿ ತಯಾರಾಗಿ ಕೂದ . 5 ಗಂಟೆಗೆ ಸರಿಯಾಗಿ ರೈಲ್ವೇ ಸ್ಟೇಷನ್ ಹೋಪಲೆ ಕಾರು ಬಂತು. ಅಪ್ಪ ಅಮ್ಮನ ಕಾಲು ಹಿಡುದು , ತಂಗೆಯ ಕೊಂಗಾಟ ಮಾಡಿ ಕಾರಿಂಗೆ ಹತ್ತಿದ. ಸ್ಟೇಷನ್ ವರೆಗೆ ಎಲ್ಲರೂ ಹೆರಟವು . ಕಾರಿಲಿ ಆರದ್ದೂ ಉಸ್ಕು ಡಮ್ಮಿಲ್ಲೆ.  ರೈಲು ಬಂತು . ಭಾರ್ಗವ ಬ್ಯಾಗ್ ಹಿಡ್ಕೊಂಡು ಹೆರಟ. ಇವೆಲ್ಲ ಕೈ ಬೀಸ್ಯೊಂಡು ನೋಡಿದಲ್ಲೇ ಬಾಕಿ .  ಅವ  ತಿರುಗಿ ನೋಡಿದ್ದನೇ ಇಲ್ಲೆ . ಸೀದಾ ರೈಲು ಹತ್ತಿದ . ರೈಲು ಹೆರಟತ್ತು. ಕಣ್ಣೀರು ತುಂಬಿ ಎದುರು ಇಪ್ಪದು ಮಸುಕು ಮಸುಕಾದರೂ , ಎಲ್ಲರೂ ಕಂಬದ ಹಾಂಗೆ ನಿಂದಲ್ಲೇ ಬಾಕಿ ! ಕಣ್ಣಿಂದ ಮರೆಯಾದರೂ ಮನಸ್ಸಿಂದ ಮರೆ ಅಕ್ಕಾ…. ಆರಿಂಗೂ ಮರವಲೆ ಎಡಿತ್ತಿಲ್ಲೆ. ಆದರೂ ಬದುಕು ಅನಿವಾರ್ಯ.

ಭಾರ್ಗವನ ಸೈನಿಕ ಜೀವನ ಶುರುವಾತು. ಅದೊಂದು ತಪಸ್ಸು : ದಾರಿ ಒಂದು ಸಾಧನೆ. ಆಹಾರ ಇಲ್ಲದ್ದೆ  , ಒರಕ್ಕೂ ಇಲ್ಲದ್ದೆ , ಬೆಶಿಲು , ಮಳೆ , ಚಳಿ , ಗಾಳಿ , ಇರುಳು , ಹಗಲು ಯಾವುದನ್ನೂ ಗಣ್ಯ ಮಾಡದ್ದ ಜೀವನ . ದೇಹ ದಂಡಿಸಿ ಪಳಗುಸೆಕ್ಕು. ಎಲ್ಲಾ ವಾತಾವರಣಕ್ಕೂ ಹೊಂದಿಗೊಳ್ಳೆಕ್ಕು. ಎಷ್ಟೋ ದಿನ ಅಹಾರ , ನೀರು ಇಲ್ಲದ್ದ ಪರಿಸ್ಥಿತಿಗೂ ಒಗ್ಗೆಕ್ಕು. ಯಾವ ಆಹಾರ ಸಿಕ್ಕಿದರೂ ತಿಂಬಲೆ ಕಲಿಯೆಕ್ಕು. ಕಲ್ಲು , ಮಣ್ಣು ಎಲ್ಲಿ ಅವಕಾಶ ಸಿಕ್ಕಿದರೂ ಮನುಗಿ ಒರಗೆಕ್ಕು. ಈ ಪರಿಸ್ಥಿತಿಯ ಚಿಂತೆ ಮಾಡಿರೆ ಯಾವ ಅಬ್ಬೆ ಅಪ್ಪನೂ ತಮ್ಮ ಮಕ್ಕಳ ಸೈನ್ಯಕ್ಕೆ ಸೇರ್ಲೆ ಬಿಡವು .  ದೇಹ ದಂಡ್ಸುದರಿಂದಲೂ ಕಷ್ಟದ ಕೆಲಸ ಹೇಳಿರೆ ಮಾನಸಿಕವಾಗಿ ಗಟ್ಟಿ ಅಪ್ಪದು. ತನ್ನ ಸ್ವಂತ ಮನೆಯವರ ಬಿಟ್ಟು ಇಡೀ ದೇಶದ ಜನ ತನ್ನೋರು ಹೇಳುವ ಭಾವನೆ ಬೆಳೆಶ್ಯೊಂಡು ಅವಕ್ಕೆ ಬೇಕಾಗಿ ಜೀವನ ಮುಡಿಪಾಗಿ ಮಡುಗುದು ಸಣ್ಣ ವಿಷಯ ಅಲ್ಲ. ಭಾಷಣಲ್ಲಿ ಹೇಳಿದ ಹಾಂಗಲ್ಲ, ಅಕ್ಷರ ರೂಪಲ್ಲಿ ಬರದ ಹಾಂಗೂ ಅಲ್ಲ. ಕಾರ್ಯ ರೂಪಕ್ಕೆ ತಪ್ಪದು ಭಾರೀ ಬಂಙ . ಒಬ್ಬ ದೇಶ ಪ್ರೇಮಿ ಸೈನಿಕ ತನ್ನ ಸಂಸಾರದ ವಿಷಯಲ್ಲಿ ‘ತಾವರೆ ಎಲೆಯ ಮೇಲಿಪ್ಪ ನೀರ ಹನಿಯ ಹಾಂಗೆ’ ಇರೆಕ್ಕಷ್ಟೆ. ದೊಡ್ಡ ದೊಡ್ಡ ಗುರಿ ಮಡುಗ್ಯೊಂಡು ಬಂದರೂ ಪರಿಸ್ಥಿತಿಗೆ ಹೊಂದಿಗೊಂಬಲೆ ಎಡಿಯದ್ದೆ ಅರ್ಧಂದ ತಿರುಗಿ ಓಡ್ತ ಜನ ಅದೆಷ್ಟೋ…..

ಭಾರ್ಗವ ಸುರುವಾಣ ಹಂತದ ಟ್ರೈನಿಂಗ್ ನ ಉತ್ಸಾಹಲ್ಲೇ ಮುಗಿಶಿದ . ಒಳ್ಳೆ ಮಾರ್ಕ್ ಸಿಕ್ಕಿ ಇನ್ನಾಣ ಹಂತಕ್ಕೆ ಆಯ್ಕೆ ಆದ.  ಎರಡನೇ ಹಂತದ ಟ್ರೈನಿಂಗ್ ಮೂರು ರೀತಿಲಿ ಮೂರು ಬೇರೆ ಬೇರೆ ರಾಜ್ಯಲ್ಲಿ ನಡವದು. ಭಾರೀ ಬಂಙದ ದೈಹಿಕ ಪರೀಕ್ಷೆಗ ಇರ್ತು. ಪಾಸಾದರೆ ಮಾತ್ರ ಸೈನಿಕನ ಪಟ್ಟ. ಭಾರ್ಗವ ಅದರಲ್ಲೂ ಜಯಶಾಲಿಯಾಗಿ ಒಳ್ಳೆ ಸ್ಥಾನಕ್ಕೆ ಏರಿದ. ದೇಶಸೇವೆಯ ಕಾರ್ಯ ಶುರುವಾತು. ಭಾರ್ಗವ ಸ್ನೇಹ ಜೀವಿ. ಸೈನ್ಯಕ್ಕೆ ಸೇರಿದ ಮೇಲೆ ಅವನ ತಂಡಲ್ಲಿ ಎಲ್ಲರಿಂಗೂ ಬೇಕಾದ ಜೆನ ಅವನೇ. ಎಲ್ಲಿ ಸ್ಟ್ರಿಕ್ಟ್ ಇರೆಕ್ಕೋ ಅಲ್ಲಿ ಹಾಂಗೇ ಇಕ್ಕು. ಬಾಕಿ ಹೊತ್ತಿಲಿ  ತಮಾಶೆ ಮಾಡ್ಯೊಂಡು , ಎಲ್ಲರ ಕಾಲೆಳಕ್ಕೊಂಡು ಗಮ್ಮತ್ತು ಮಾಡುಗು. ಇಡೀ ತಂಡಕ್ಕೆ ಜೀವಕಳೆ ತತ್ತ ಮಾಣಿ ಹೇಳಿರೆ ಭಾರ್ಗವ. ಒಂದು ದಿನವೂ ಅವನ ಮೋರೆಲಿ ಬೇಜಾರವೋ , ಬಚ್ಚೇಲೋ ಕಂಡದಿರ . ಆರಾದರೂ ಮನೆ ನೆಂಪಾಗಿಯೋ , ಸಂಸಾರ ತಾಪತ್ರಯಂದಲೋ ಬೇಜಾರಿಲಿದ್ದರೆ ಅವರ ಸಮಾಧಾನ ಮಾಡಿ ಅವರ ಮೋರೆಲಿ ನೆಗೆ ಬಪ್ಪನ್ನಾರ ಬಿಡ.

ಕಾಲ ಸುಮ್ಮನೆ ಕೂರುಗೋ….. ಬೆಳ್ಳ ಬಂದು ಊರು ಮುಳುಗಿದಲ್ಲಿ, ಗುಡ್ಡೆ ಜರುದು ಬಿದ್ದಲ್ಲಿ , ಗಡಿ ಕಾವಲು ಕಾಯ್ತಲ್ಲಿ …….ಎಲ್ಲಾ ಕಡೆ ಈ ಸೈನಿಕರದ್ದೇ ಕಾರ್ಬಾರು. ಭಾರ್ಗವನ ಸೈನಿಕ ಜೀವನದ ಅಮೂಲ್ಯವಾದ ಆರು ವರ್ಷ ಕಳುದತ್ತು.  ಆರು ವರ್ಷಲ್ಲಿ ಆರು ಜನ್ಮದ ಅನುಭವ ಆತು. ಮೊಬೈಲು ಹೆಚ್ಚು ಪ್ರಚಾರಕ್ಕೆ ಬಂದ ಕಾಲ ಅಲ್ಲ.  ಲ್ಯಾಂಡ್ ಫೋನ್ ಮಾತ್ರ ಇದ್ದದು. ಅಪರೂಪಕ್ಕೊಂದು ಫೋನ್. ತಿಂಗಳಿಂಗೋ ಎರಡು ತಿಂಗಳಿಂಗೋ ಒಂದು ಕಾಗದ. ಸಂಪರ್ಕ ಇಪ್ಪದು ಇಷ್ಟೇ .  ಇಷ್ಟು ಸಮಯಲ್ಲಿ 3 ಸರ್ತಿ ಊರಿಂಗೆ ಬಂದಿಕ್ಕಿ ಹೋಯ್ದ. ಸ್ವಂತ ಮನೆ ಆತು. ಭಾರತಿಯ ಪೋಸ್ಟ್ ಗ್ರ್ಯಾಜುಯೇಶನ್ ಮುಗಿವ ಹೊತ್ತಿಂಗೆ ಒಳ್ಳೆ ಪೊದು ಬಂದು ಮದುವೆ ನಿಶ್ಚಯವೂ ಆತು. ಭಾರ್ಗವ ಫೋನ್ ಮಾಡಿ ‘ಮದುವೆ ಕಾರ್ಯಂಗ ನಿರ್ವಿಘ್ನವಾಗಿ ಮುಂದುವರಿಯಲಿ . ಯಾವ ವಿಷಯಕ್ಕೂ ಚಿಂತೆ ಬೇಡ . ಮದುವೆ ಸಮಯಕ್ಕೆ ರಜೆ ತೆಕ್ಕೊಂಡು ಬತ್ತೆ’ ಹೇಳಿದ . ಮದುವೆಗೆ ಬೇಕಾಗಿ ಒಂದು ತಿಂಗಳು ರಜೆ ತೆಕ್ಕೊಂಡು ಮನೆಗೆ ಬರೆಕ್ಕು ಹೇಳಿ ಆಲೋಚನೆ ಮಾಡಿದರೂ  ರಜೆ ಸಿಕ್ಕಿದ್ದು ಹದಿನೈದೇ ದಿನ. ಭಾರ್ಗವ ಇದ್ದರೆ ಶಂಕರಣ್ಣಂಗೆ ನೂರಾನೆ ಬಲ ಬಂದ ಹಾಂಗೆ. ಎಲ್ಲಾ ಜವಾಬ್ದಾರಿಯೂ ಅವನದ್ದೇ… ಈಚೆಯವಕ್ಕೆ ತಲೆಬೆಶಿ ಇಲ್ಲೆ. ಕಾಲಿಂಗೆ ಚಕ್ರ ಕಟ್ಯೊಂಡ ಹಾಂಗೆ ಓಡಾಡ್ತ. ಮದುವೆ ಚೆಂದಕೆ ಕಳುದತ್ತು . ತಂಗೆಯ ಜೀವನ ಒಂದು ಹಂತಕ್ಕೆ ಎತ್ತಿತ್ತು. ಅಣ್ಣನಾಗಿ ಮಾಡೆಕ್ಕಾದ ಕರ್ತವ್ಯ ಮಾಡಿದ.

ಶಂಕರಣ್ಣಂಗೂ ಲಕ್ಷ್ಮಕ್ಕಂಗೂ ಮಗಳ ಒಳ್ಳೆ ಮನೆ ಸೇರ್ಸಿದ ತೃಪ್ತಿ ಇದ್ದರೂ ಮಗಂಗೆ ಮದುವೆ ಆಗಿ ಸೊಸೆ ಮನಗೆ ಬಾರದ್ದೆ ಸಮಾಧಾನ ಇಕ್ಕಾ…….. ಅಪ್ಪಂಗೂ ಅಬ್ಬೆಗೂ ಏಚನೆ ಶುರುವಾತು. ಭಾರ್ಗವ ಹೆರಡ್ತ ಮುನ್ನಾಣ ದಿನ ಅಟ್ಟುಂಬೊಳ ಲಕ್ಷ್ಮಕ್ಕ ಎಂತೋ ಕೆಲಸಲ್ಲಿ ಇತ್ತು . ಭಾರ್ಗವ ಅಲ್ಲೇ ಸುಳುಕ್ಕೊಂಡು ಇತ್ತಿದ್ದ. ಲಕ್ಷ್ಮಕ್ಕ ಮೆಲ್ಲಂಗೆ ಭಾರ್ಗವನ ದಿನಿಗೇಳಿ ಪೀಠಿಕೆ ಹಾಕಿತ್ತು “ ಇದಾ ಮಗಾ , ನಿನಗೊಂದು ಮದುವೆ ಆಗೆಡದಾ… ಮನೆಗೊಂದು ಸೊಸೆ ಬರೆಡದಾ……” . ಭಾರ್ಗವಂಗೆ ನೆಗೆ ಬಂತು . “ಆನು ಮಿಲಿಟ್ರಿ ಸೇರಿ ಆತನ್ನೇ … ಎನ್ನ ಜೀವನ ದೇಶ ಸೇವೆ. ಎನ್ನ ಬದುಕೇ ಅತಂತ್ರ. ಇನ್ನು ಇನ್ನೊಂದು ಕೂಸಿನ ಜೀವನವನ್ನೂ ಅತಂತ್ರ ಮಾಡ್ಳೆ ಎಡಿಗಾ ….? ಅಷ್ಟಕ್ಕೂ ಮಿಲಿಟ್ರಿಲಿ ಇಪ್ಪವಂಗೆ ಆರು ಕೂಸು ಕೊಡುಗು…..ಯಾವ ಕೂಸು ಮದುವೆ ಅಪ್ಪಲೆ ಒಪ್ಪುಗು….?  ಒಳ್ಳೆ ಕೂಸು ಒಪ್ಪಿದರೆ ಮದುವೆ ಅಪ್ಪಲಕ್ಕು .  ಇನ್ನಾಣ ಸರ್ತಿ ರಜೆ ಸಿಕ್ಕುವ ಸಮಯಕ್ಕೆ ನೋಡುವ . ಆಲೋಚನೆ ಮಾಡಿ….” ಹೇಳಿದ . ಮರದಿನ ಭಾರ್ಗವ ರೈಲು ಹತ್ತಿದ. ದಿನಂಗ ಉರುಳಿತ್ತು. ಶಂಕರಣ್ಣಂಗೂ , ಲಕ್ಷ್ಮಕ್ಕಂಗೂ ಮಗಂಗೆ ಕೂಸು  ಹುಡುಕುತ್ತ ಕೆಲಸ . ಅಷ್ಟು ಸುಲಭಕ್ಕೆ ಆವುತ್ತೋ….. ಪ್ರಯತ್ನ ಮುಂದುವರುದತ್ತು. ‘ಏವದಕ್ಕೂ ಕಾಲ ಕೂಡಿ ಬರೆಕ್ಕು…’

ಕಾಲಚಕ್ರ ಉರುಳಿತ್ತು. ಅದೊಂದು ದಿನ ಮಿಲಿಟ್ರಿ ಕ್ಯಾಂಪಿಂದ  15 ಕಿ.ಮೀ ದೂರ , ಭಾರತ ಪಾಕ್ ಗಡಿ ಜಾಗೆಲಿ ಉಗ್ರಗಾಮಿಗ ನುಗ್ಗಿದ ಸುದ್ಧಿ ಗೊಂತಾಗಿ ಭಾರ್ಗವನೂ ಸೇರಿ 15 ಜನ ಯೋಧರ ತಂಡ ಅಲ್ಲಿಗೆ ಹೆರಟತ್ತು . ಸತತ 48 ಗಂಟೆಗಳ ಕಾರ್ಯಾಚರಣೆ . ತಮ್ಮ ಪ್ರಾಣದ ಆಶೆ ಇಲ್ಲದ್ದೆ ವೀರಾವೇಶಲ್ಲಿ ಹೋರಾಡಿದವು . ನಮ್ಮ ಸೈನಿಕರು ಯುದ್ಧಕ್ಕೆ ಹೆರಟರೆ ಕೇಳೆಕ್ಕಾ……! ಜಯ ನಮ್ಮದೇ….. ಗೆದ್ದ ಸಂತೋಷಲ್ಲಿ ವಾಹನ ಕ್ಯಾಂಪಿನ ಕಡೆಂಗೆ ಹೆರಟತ್ತು. ಸೈನಿಕರು ಯಾವಾಗಲೂ ಎಚ್ಚರಲ್ಲೇ ಇರ್ತವು. ಆದರೆ ಎರಡು ದಿನಂದ  ವರಕ್ಕು , ಆಹಾರ ಇಲ್ಲದ್ದೆ ಚೂರು ಜಡ ಇದ್ದರೂ ಭಾರ್ಗವ ಒಂದೊಂದೇ ಪಟಾಕಿ ಹಾರ್ಸಿ ಎಲ್ಲರ ನೆಗೆ ಮಾಡ್ಸಿಗೊಂಡಿತ್ತಿದ್ದ.

ಭೂಊಊಊಊಊಊಊಊಊಊಊಊಂ೦೦೦೦೦೦೦೦೦೦೦೦! ಭೀಕರ ಶಬ್ದ. ಸೈನಿಕರಿದ್ದ ವಾಹನ ಆಕಾಶದೆತ್ತರಕ್ಕೆ ಹಾರಿ ಚೂರು ಚೂರಾಗಿ ಬಿದ್ದತ್ತು . ಎಲ್ಲರ ಬೊಬ್ಬೆ . ಎಲ್ಲೆಲ್ಲೂ ಧೂಳು. ಕಸ್ತಲೆ. ಅಷ್ಟೇ……….! ಕ್ಯಾಂಪಿಂಗೆ  ಸುದ್ಧಿ ಗೊಂತಾಗಿ ರಕ್ಷಣಾ ಕಾರ್ಯ ಸುರುವಾತು . ಎಲ್ಲಾ ಸೈನಿಕರ ದೇಹವೂ ಛಿದ್ರ ಛಿದ್ರ. ಇಡೀ ತಂಡವೇ ಸರ್ವ ನಾಶ ! ದೇಶಕ್ಕೆ ಬೇಕಾಗಿ ಹದಿನೈದು ಜನ ಸೈನಿಕರ ಪ್ರಾಣ ತ್ಯಾಗ . ವಿರೋಧಿಗ ಭೂಮಿಯ ಅಡಿಲಿ ಹುಗುದು ಮಡುಗಿದ ಬಾಂಬ್ ಹೊಟ್ಟಿದ್ದದೇ ಇದಕ್ಕೆ ಕಾರಣ. ಎಲ್ಲಾ ಸೈನಿಕರ ಮನೆಗೊಕ್ಕೆ ವಿಷಯ ತಿಳಿಸಿ ಆತು. ಈ ಆಘಾತವ ಸಹಿಸುವ ಶಕ್ತಿ ಆರಿಂಗಿಕ್ಕು…….?  . ಹೀಂಗಿಪ್ಪ ಒಂದು ಸುದ್ಧಿ ಯಾವಾಗ ಬೇಕಾದರೂ ಬಕ್ಕು ಹೇಳ್ತ ನಿರೀಕ್ಷೆಲೇ ಕಾಲಹರಣ ಮಾಡ್ಯೊಂಡಿಪ್ಪ ಈ ಸೈನಿಕರ ಮನೆಯವ್ವು ಕೂಡ್ಳೇ ಹೆರಟು ಬಂದವು. ಅವರ ಕಣ್ಣಿಲಿ ಬಂದದು ಕಣ್ಣೀರಲ್ಲ : ನೆತ್ತರು. ಸೈನಿಕರ  ದೇಹವ ಹುಡುಕಿ ಶ್ರೀನಗರಲ್ಲಿ ಇಪ್ಪ ಮುಖ್ಯ ಆಸ್ಪತ್ರೆಗೆ ಎತ್ತುಸುವ ವ್ಯವಸ್ಥೆ ಮಾಡಿದವು.  ಆದರೆ ಒಂದು ಆಶ್ಚರ್ಯ……! ಅಲ್ಲಿ ಒಟ್ಟು ಸಿಕ್ಕಿದ್ದು ಹದಿನಾಲ್ಕೇ ದೇಹ…… ಆ ಕ್ಷಣ ಮಿಲಿಟ್ರಿ ಪಡೆ ಆ ಜಾಗೆಲಿ ಹುಡುಕುಲೆ ಶುರು ಮಾಡಿದವು.  ಬಾಂಬ್ ಹೊಟ್ಟಿದ ಜಾಗೆಂದ ಚೂರು ದೂರಲ್ಲಿ  ಒಂದು ದೊಡ್ದ ಪ್ರಪಾತ . ಆ ಪ್ರಪಾತಲ್ಲಿ ನೋಡುವ ಹೇಳಿ ಸೈನಿಕರು ಇಳಿವಗ ಅಲ್ಲಿ ಪೊದೆಗೆ ಸಿಕ್ಕಿ ಒಂದು ದೇಹ ನೇಲ್ತಾ ಇದ್ದು.  ನೋಡಿದರೆ ಸಣ್ಣ ಜೀವ ಇದ್ದು . ಗಾಡಿ ಆಕಾಶಕ್ಕೆ ಹಾರುವಾಗ ಅದರೊಳಂದ ಹೆರ ರಟ್ಟಿದ  ಯೋಧ ಅದೃಷ್ಟವಶಾತ್ ಒಳುದ್ದ. ಮೊದಲೇ ಆಹಾರ ನೀರು ಇಲ್ಲದ್ದೆ ದೇಹ ಕಂಗಾಲಾಗಿತ್ತು .ಅಲ್ಲದ್ದೆ  ಬಾಂಬ್ ಹೊಟ್ಟುವಾಗ ಶರೀರಕ್ಕೆ  ಪೆಟ್ಟಾಯ್ದು  ಆ ಕೂಡ್ಳೇ ಆಸ್ಪತ್ರೆಗೆ ಎತ್ತಿಸಿದವು. ಶರೀರ ಹೊಡಿ ಹೊಡಿ ಆದ ಕಾರಣ  ಬದುಕಿ ಒಳಿವ ಆಶೆ ಇಲ್ಲೆ. ಮತ್ತೆ ದೈವೇಚ್ಛೆ.

ಮಗನ ಸಾವಿನ ಸುದ್ಧಿ ಗೊಂತಪ್ಪದ್ದೆ  ಶಂಕರಣ್ಣಂಗೂ ಲಕ್ಷ್ಮಕ್ಕಂಗೂ ಎದೆ ಒಡದೇ ಹೋದ ಹಾಂಗೆ ಆತು. ಗಡಿಬಿಡಿಲಿ ಹೆರಟು ರೈಲು ಹತ್ತಿದವು. ನಂಬಿದ ದೇವರು ನಡು ನೀರಿಲಿ ಕೈ ಬಿಟ್ಟ ಹೇಳಿ ಕಣ್ಣೀರು ಹಾಕಿ ಹಾಕಿ ಅಲ್ಲಿಗೆ ಎತ್ತುವಾಗ ಕಣ್ಣೀರು ಬತ್ತಿಯೇ  ಹೋಗಿತ್ತು. ಅಲ್ಲಿ ಹೋಗಿ ನೋಡುವಾಗ  ಪವಾಡ ನಡದ್ದು ಗೊಂತಾತು. ವಿಚಿತ್ರವಾದ ರೀತಿಲಿ ಭಾರ್ಗವ ಬದುಕಿ ಒಳುದ್ದ . ಭಾರ್ಗವನ ಜೀವ ಹೋಗದ್ದರೂ ಪ್ರಪಂಚದ ಅರಿವೇ ಇಲ್ಲದ್ದೆ ಜೀವಛ್ಛವವಾಗಿ ಮನುಗ್ಯೊಂಡಿದ್ದ . ಜೀವ ಒಳುದ್ದನ್ನೆ ಹೇಳಿ ಕೊಶಿ ತಡವಲೆಡಿಯದ್ದೆ ‘ಮಗ ಬೇಗ ಹುಶಾರಾಗಲಿ . ಮಧೂರು ಗಣಪತಿಗೆ ಸಹಸ್ರ ಅಪ್ಪ ಮಾಡ್ಸುತ್ತೆ’ ಹೇಳಿ ಗ್ರೇಶ್ಯೊಂಡ. ಆ ಕ್ಷಣಲ್ಲೂ  ಶಂಕರಣ್ಣಂಗೆ ನೆಂಪಾದ್ದು ಬೊಡ್ಡಜ್ಜನ !

“ ಅಮ್ಮಾ…. ಆನು ಕಥೆ ಕೇಳಿದ್ದಕ್ಕೆ ಕೂಗುದಾ . ಕೂಗೆಡಾ.. ಎನಗೆ ಕಥೆ  ಬೇಡ . ನಿನಗೆ ಕಥೆ ಗೊಂತಿಲ್ಲದ್ದರೆ ಆನು ನಿನಗೆ ಕಥೆ ಹೇಳುವೆ ಆತಾ… ಅಮ್ಮಾ ಕೂಗೆಡ….”  ಹೇಳಿ ಎನ್ನ ಮಗ ಎನ್ನ  ಕಣ್ಣೀರು ಉದ್ದುವಾಗ ಎನಗೆ ಎಚ್ಚರ ಆದ್ದು. “ ನೀನು ಕಥೆ ಕೇಳಿದ್ದಕ್ಕೆ ಕೂಗಿದ್ದಲ್ಲ ಪುಟ್ಟಾ. ಈಗ ಒರಗು. ನಾಳೆ ಒಳ್ಳೆ ಕಥೆ ಹೇಳುವೆ “ ಹೇಳಿದೆ. ೨೫ ವರ್ಷದ ಬೆಶಿ ನೆತ್ತರಿನ ಮಾಣಿ ಭಾರ್ಗವ. ಅವನ ಅವಸ್ಥೆ ನೆಂಪಾಗಿ ಕಣ್ಣೀರು ಹರುದ್ದು. ಎನ್ನ ಕಣ್ಣೀರು ಮಗನ ಮೋರೆಗೆ ಬಿದ್ದು ಅವಂಗೆ ಎಚ್ಚರ ಆದ್ದು. ಒರಗಿಸಿದೆ.  ಆದರೆ ಎನ್ನ ಒರಕ್ಕು ದೂರ ಹೋತು .

ಒಳ್ಳೆ ಚಿಕಿತ್ಸೆ ಕೊಡ್ತಾ ಇದ್ದವು . ಆದರೆ ಭಾರ್ಗವಂಗೆ ಲೋಕದ ಅರಿವೇ ಇಲ್ಲೆ. ಹದಿನೈದು ದಿನ ದೊಡ್ಡಾ ಒರಕ್ಕು. ಕಣ್ಣು ಬಿಟ್ಟು ನೋಡುವಾಗ ಭಾರ್ಗವಂಗೆ ತಾನೆಲ್ಲಿದ್ದೆ ಹೇಳಿಯೇ ಗೊಂತಾವುತ್ತಾ ಇಲ್ಲೆ. ತಲೆ ಒಡದು ಹೋವ್ತ ಅನುಭವ. ನೆಂಪು ಮಾಡ್ಯೊಂಬಲೆ ಪ್ರಯತ್ನಪಟ್ಟಪ್ಪಗ ನೆಂಪಾದ್ದು ‘ದೊಡ್ಡ ಶಬ್ದ ,  ಕಸ್ತಲೆ…… ಮತ್ತೆಂತಾತು……? ಆನು  ನರಕಲ್ಲಿದ್ದನಾ…..?  ಇಲ್ಲೇ….!  ಆಸ್ಪತ್ರೆಯ ವಾಸನೆ , ಯಾವುದೋ ಮೆಶಿನ್ ಶಬ್ದ . ಹೋ ….! ಆನು ಸತ್ತಿದಿಲ್ಲೆ….  ಅತ್ಲಾಗಿ ಇತ್ಲಾಗಿ ನೋಡ್ಳೆ ಹೆರಟರೆ ತಲೆ ಹಂದ್ಸುಲೆ ಎಡಿತ್ತಿಲ್ಲೆ. ಕೈ ಕಾಲು ಯಾವ್ದೂ ಆಡ್ತಿಲ್ಲೆ…….. ಒಂದು ನರ್ಸು ನಿಂದೊಂಡು ಇದ್ದತ್ತು. ಅಸ್ಪತ್ರೆಲಿದ್ದೆ. ಮಾತಾಡ್ಳೆ ಹೆರಟರೆ ನಾಲಗೆ ಹೊಡಚ್ಚುತ್ತೇ ಇಲ್ಲೆ.  ಕಣ್ಣು ಗುಡ್ಡೆ ಬಿಟ್ಟು ಬೇರೆ ಎಂತದೂ ಹಂದುತ್ತಿಲ್ಲೆ. ದೇವರೇ……! ಇದೆಂತ ಅವಸ್ಥೇ…….! ಎನ್ನ ಎಂತಕೆ ಬದುಕ್ಸಿದೆ….. ?  ಬೇಡ . ಇಂಥಾ ಜೀವನ ಬೇಡಲೇ ಬೇಡ.’ ಅಪ್ರಯತ್ನವಾಗಿ ಭಾರ್ಗವನ ಕಣ್ಣಿಲಿ ನೀರು ಹರುದತ್ತು. ಅವ  ಕಣ್ಣು ಬಿಟ್ಟದು ನೋಡಿ ಆ ನರ್ಸು ಡಾಕ್ಟ್ರ ಕರಕ್ಕೊಂಡು ಬಂತು . ಅಪ್ಪ ಅಮ್ಮನೂ ಬಂದು ಆಸೆ ಕಣ್ಣಿಲಿ ನೋಡುವಾಗ ಭಾರ್ಗವಂಗೆ ಕರುಳಿಂಗೆ ಪೀಶತ್ತಿ ಕುತ್ತಿದ ಹಾಂಗಾತು. ಚಿಕಿತ್ಸೆ ಫಲ ಕೊಡ್ತಾ ಇಪ್ಪದು ನೋಡಿ ಎಲ್ಲರಿಂಗೂ ಸಮಾಧಾನ. ಮೂಲಾಧಾರಕ್ಕೇ ಪೆಟ್ಟಾದ ಕಾರಣ ಗುಣ ಅಪ್ಪಲೆ ತುಂಬಾ ಕಾಲ ಹಿಡಿಗು ಹೇಳಿ ಗೊಂತಾತು. ಕೆಲವು ತಿಂಗಳ ಚಿಕಿತ್ಸೆಯ ಫಲ ಮೆಲ್ಲಂಗೆ ಕೈ ಹಂದ್ಸುತ್ತಷ್ಟು ಹುಶಾರಾದ. ಸುಮ್ಮನೆ ಕೂಪ ಜಾಯಮಾನ ಅವನದ್ದಲ್ಲ. ಮನಸ್ಸಿಂಗೆ ತುಂಬಾ ಬೇಜಾರಿದ್ದತ್ತು. ಆ ಪರಿಸ್ಥಿತಿಲೂ ಭಾರ್ಗವನ ಹಾಸ್ಯ ಪ್ರವೃತ್ತಿ ಬಿಟ್ಟು ಹೋಯ್ದಿಲ್ಲೆ. ಡಾಕ್ಟ್ರುಗಳೂ , ನರ್ಸ್ ಗಳೂ ಅವನ ಹತ್ತರೆ ಬಂದಿಕ್ಕಿ ಹೋಪಗ ನೆಗೆ ಮಾಡ್ಯೊಂಡೇ ಹೋಕಷ್ಟೆ. ಮಿಲಿಟ್ರಿ ಅಧಿಕಾರಿಗಳೋ , ಸ್ನೇಹಿತರೋ ಆರು ಬಂದರೂ ಅವರೊಟ್ಟಿಂಗೆ ಗಮ್ಮತ್ತಿಲಿ ಪಟ್ಟಾಂಗ ಹೊಡದು ಅವರ ಕೊಶಿ ಪಡ್ಸಿ ಕಳುಸುಗು. ಮುಂದೊಂದು ದಿನ ಹುಶಾರಾಗಿ ಸೈನ್ಯಕ್ಕೆ ವಾಪಾಸು ಹೋಪೆ ಹೇಳ್ತ ಧೈರ್ಯ ಇದ್ದತ್ತು.   ಆದರೆ ಯಾವ ಕಾಲಕ್ಕೂ ಸೊಂಟದ ಕೆಳಾಣ ಭಾಗ ಸರಿ ಹೋಗ ,  ಸ್ವಂತ ಕಾಲಿಲಿ ಓಡಾಡ್ಳೆ ಎಡಿಯ , ಪೆನ್ ಹಿಡಿವಲೂ ಕಷ್ಟ ಆವ್ತ ಕೈಲಿ ಗನ್ ಹಿಡುದು ಹೋರಾಟ ಮಾಡ್ಳೆ ಎಡಿಯ ಹೇಳುವ ಸತ್ಯ ಗೊಂತಪ್ಪಗ ಭಾರ್ಗವನ ತಲೆಯೊಳ ಜ್ವಾಲಾಮುಖಿ ಸ್ಫೋಟ ಆತು! ಆ ಸತ್ಯವ ಜೀರ್ಣ ಮಾಡ್ಯೊಂಬದು ಹೇಂಗೆ…..? ಎನ್ನ ಸ್ಥಿತಿ ‘ಆಟಕ್ಕಿದ್ದು ಲೆಕ್ಕಕ್ಕಿಲ್ಲೆ ಹೇಳಿ ಆತನ್ನೇ….….’  ಹೇಳಿ ಕೊರಗಿದ. ಸಂಪೂರ್ಣ ಸೋತು ಬದುಕುವ ಆಸಕ್ತಿಯನ್ನೇ ಕಳಕ್ಕೊಂಡ . ಎಷ್ಟೋ ಸರ್ತಿ ಸಾವ ಏಚನೆ ಬಂದರೂ ಅಬ್ಬೆಪ್ಪನ ನೆಂಪಾಗಿ ತಳಿಯದ್ದೆ ಕೂದ.

‘ಬೆಂದಷ್ಟು ಹೊತ್ತು ತಣಿವಲೆ ಬೇಡ.’ ಅಲ್ಪ ಕಾಲ ಚಿಕಿತ್ಸೆ ಮುಗಿವದ್ದೆ ಆಸ್ಪತ್ರೆಂದ ಮನಗೆ ಕರಕ್ಕೊಂಡು ಹೋಪಲಕ್ಕು ಹೇಳಿದವು. ಸರ್ಕಾರಂದ ಮನೆ ಕೊಟ್ಟವು. ಗಾಲಿ ಕುರ್ಚಿ ಅವನ ದೇಹದ ಒಂದು ಅವಿಭಾಜ್ಯ ಅಂಗವೇ ಆತು.  ಅಂದರೂ ಸಹಾಯಕ್ಕೆ ಒಬ್ಬ ಬೇಕೇ ಬೇಕು. ಆಸ್ಪತ್ರೆಲಿ ಅವನ ನೋಡ್ಯೊಂಡಿದ್ದ ನರ್ಸ್ ಶಾಂತಿ ಮನಗೂ ಬಂತು.  ಅವನ ಎಲ್ಲಾ ಚಾಕ್ರಿ ಮಾಡುವ ಶಾಂತಿ ಮಲೆಯಾಳಿ ಹೆಣ್ಣು . ಹೆಸರಿಂಗೆ ತಕ್ಕ ಹಾಂಗೆ ಶಾಂತ ಸ್ವಭಾವದ್ದು. ಮನೆಯವರ ಒಟ್ಟಿಂಗೆ  ಮನೆಯವರ ಹಾಂಗೇ ಆಗಿ ಹೋಗಿತ್ತು. ಬಡತನಲ್ಲಿ ಬೆಳದ ಕಾರಣ ಅದಕ್ಕೂ ಕಷ್ಟ ಸುಖ ಗೊಂತಿದ್ದು. ಸಮಾಜ ಸೇವೆ ಮಾಡೆಕ್ಕು ಹೇಳುವ ಒಳ್ಳೆ ಉದ್ದೇಶ ಮಡುಗ್ಯೊಂಡೇ ಈ ವೃತ್ತಿಗೆ ಇಳುದ್ದು. ಭಾರ್ಗವ ಈ ಸ್ಥಿತಿಲೂ ಲವಲವಿಕೆಲಿ ಇಪ್ಪದು  ನೋಡಿ ಅದಕ್ಕೆ ಕೊಶಿಯೂ……..… ಆಶ್ಚರ್ಯವೂ…………! ಕೈ ಕಾಲು ಸರಿ ಕೆಲಸ ಮಾಡದ್ದರೂ ಭಾರ್ಗವನ ತಲೆ ಕೆಲಸ ಮಾಡ್ಯೊಂಡೇ ಇರ್ತು.  ಭಾರ್ಗವನ ಆಲೋಚನೆಗಳ ಕಾರ್ಯರೂಪಕ್ಕೆ ತಪ್ಪದು ಶಾಂತಿಯ ಕೈ .  ಆ ಸಮಯಕ್ಕೆ  ಭಾರ್ಗವಂಗೆ ಒಂದು ಸಂಸ್ಥೆಲಿ ಕಂಪ್ಯೂಟರ್ ಎದುರು ಕೂದೊಂಡು ಮಾಡುವ ಕೆಲಸವೂ ಸಿಕ್ಕಿತ್ತಿದ್ದು.  ಐದಾರು ವರ್ಷಂಗಳ ದೀರ್ಘ ಒಡನಾಟ…….. ಅವನ ಚುರುಕು ಬುದ್ಧಿ  , ಆತ್ಮವಿಶ್ವಾಸ , ಮನೋಧೈರ್ಯ , ತಮಾಷೆ , ಮಕ್ಕಳಾಟಿಕೆ ಎಲ್ಲ ಕಾರಣಂದ ಇಬ್ರೂ ಮಾನಸಿಕವಾಗಿ ತುಂಬಾ ಹತ್ತರೆ ಆದವು.  ದೇಹ ಎರಡಾದರೂ  ಒಂದೇ ಆತ್ಮ ಹೇಳ್ತ ಭಾವ. ಭಾರ್ಗವಂಗೆ ಶಾಂತಿ ಇಲ್ಲದ್ದೆ ಜೀವನ ಇಲ್ಲೆ . ಶಾಂತಿಗೂ ಅವ ಇಲ್ಲದ್ದ ಬದುಕಿನ ಕಲ್ಪನೆ ಮಾಡ್ಳೂ ಎಡಿಯದ್ದ ಸ್ಥಿತಿ.  ಇದು ದೈಹಿಕ ಆಕರ್ಷಣೆ ಅಲ್ಲ. ಪ್ರಬುದ್ಧ ಮನಸುಗಳ  ಮಿಲನ. ಭಾರ್ಗವಂಗೆ ತನ್ನಂದಾಗಿ ಶಾಂತಿಯ ಭವಿಷ್ಯ ಹಾಳಕ್ಕೋ ಹೇಳ್ತ ಭಾವನೆ . ನಾಳೆ ಅದೇ ಒಂದು ಕೊರಗಾಗಿ ಕಾಡಿದರೆ..…..? ಅದಕ್ಕೆ ಅರ್ಥ ಮಾಡ್ಸುಲೆ ಪ್ರಯತ್ನ ಪಟ್ಟ . ಆದರೆ ಅವನ ದೈಹಿಕ ಪರಿಸ್ಥಿತಿ ಹೇಂಗೇ ಇದ್ದರೂ ಶಾಂತಿ ಎಲ್ಲಾ ತ್ಯಾಗಕ್ಕೂ ಮಾನಸಿಕವಾಗಿ ಸಿದ್ಧವಾಗಿತ್ತು. ಒಟ್ಟಿಂಗೆ ಜೀವನ ನಡೆಶುವ ನಿರ್ಧಾರಕ್ಕೆ ಬಂದವು.  ದೇವರು ಆಡ್ಸಿದ ಹಾಂಗೆ ಆಡುವ ಗೊಂಬೆಗ ನಾವೆಲ್ಲ……. ಹಿರಿಯರ ಒಪ್ಪಿಗೆ ಪಡದು ಮದುವೆಯೂ ಆತು. ಊರಿಲಿ ಹಲವು ಜನಂಗ ಬೇರೆ ಬೇರೆ ರೀತಿಲಿ ನೊಟ್ಟಿದವು. ‘ ಇರುಳು ಕಂಡ ಬಾವಿಗೆ ಹಗಲು ಹಾರಿದ ಹಾಂಗೆ ಅಕ್ಕು.  ಆ ನರ್ಸ್ ಸರ್ಕಾರಂದ ಸಿಕ್ಕುವ ಎಲ್ಲಾ ಸವಲತ್ತುಗಳ ನುಂಗಿ ನೀರು ಕುಡಿಗು. ಮಲೆಯಾಳಿ ಕೂಸಲ್ಲದಾ ಮನೆಯವಕ್ಕೆ ಉಪ್ಪು ನೀರು ಕುಡಿಶುಗು . ಎಂತದೋ ಕಿತಾಪತಿ ಮಾಡುವ ಉದ್ದೇಶಲ್ಲೇ ಮದುವೆ ಆಗಿಕ್ಕು………’ ಹೀಂಗೆ .  ಈ ಕಾಲಲ್ಲೂ ಒಳ್ಳೆ ಹೃದಯವಂತರು ಇದ್ದವು ಹೇಳ್ತ ಸತ್ಯ ಈ ಕಾಟುಗೊಕ್ಕೆ ಗೊಂತಿಲ್ಲೆ.

ಮದುವೆ ಆಗಿ ಸುಮಾರು ಹತ್ತು ವರ್ಷ ಆಗ್ಯೊಂಡು ಬಂತು . ಜೀವನ ನಿಂದ ನೀರಲ್ಲ .  ಹರಿವ ನದಿ…… ಗಾಲಿ ಕುರ್ಚಿಲಿ ಕೂದೊಂಡೇ ಜೀವನವಾದರೂ ಅವನ ಮನೋಸ್ಥೈರ್ಯ ಎಲ್ಲರಿಂಗೂ ಮಾದರಿ. ಅವನೊಳ ಇಪ್ಪದು ಬತ್ತದ್ದ ಉತ್ಸಾಹದ ಒರತೆ . ಸೈನ್ಯಕ್ಕೆ ಸೇರಿದವಕ್ಕೂ , ಸೇರುವವಕ್ಕೂ ಅವನೇ ಸ್ಫೂರ್ತಿ. ಆದರ್ಶ ವೆಗ್ತಿ. ಭಾರ್ಗವನ  ಮಗಳು ‘ಅವನಿ’ ಈಗಾಣ ತಂತ್ರಜ್ಞಾನದ ಕೊಡುಗೆ. ಈಗ ಎರಡನೇ ಕ್ಲಾಸ್ಸಿಂಗೆ ಎತ್ತಿದ್ದು . ಭಾರ್ಗವನನ್ನೇ ಚೊಲ್ಯೊಂಡು ಬಯಿಂದು. ಡೇನ್ಸು , ಸಂಗೀತ, ಕರಾಟೆ ಎಲ್ಲಾ ಕಲಿತ್ತು.  ಶಾಂತಿ ಮತ್ತೆ ಕಲ್ತು ಒಳ್ಳೆ ಉದ್ಯೋಗಕ್ಕೆ ಸೇರಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿದು. ತನಗೆ ಎಡಿತ್ತಷ್ಟು ಸಮಾಜಕಾರ್ಯಲ್ಲೂ ತೊಡಗಿಸ್ಯೊಂಡು ಭಾರ್ಗವನ ಉದ್ದೇಶಂಗಳ ಕಾರ್ಯ ರೂಪಕ್ಕೆ  ತಪ್ಪ ಪ್ರಯತ್ನ ಮಾಡ್ತಾ ಇದ್ದು. ಶಂಕರಣ್ಣ . ಲಕ್ಷ್ಮಕ್ಕ ಮಗ , ಸೊಸೆ ,ಪುಳ್ಳಿಯ ಒಟ್ಟಿಂಗೆ ನೆಮ್ಮದಿಯ ಜೀವನ ನಡೆಶುತ್ತಾ  ಇದ್ದವು.

ನಾಳೆ ಪುಟ್ಟಂಗೆ ಈ ಕಥೆ ಹೇಳೆಕ್ಕು. ನಮ್ಮ ಹವ್ಯಕ ಸಮಾಜಲ್ಲಿ ಇಪ್ಪ ಭಾರ್ಗವಣ್ಣನ ಹಾಂಗಿಪ್ಪ ವೀರ ಯೋಧನ ಕಥೆಯ ನಮ್ಮ ಮಕ್ಕೊಗೆ ಹೇಳೆಕ್ಕಾದ್ದು ನಮ್ಮ ಕರ್ತವ್ಯ. ಅರ್ಹತೆ ಇಲ್ಲದ್ದ ಎಷ್ಟೋ ಜನರಿಂಗೆ ಗೌರವ ಸಿಕ್ಕುತ್ತು . ಆದರೆ ಅರ್ಹತೆ ಇಪ್ಪವಕ್ಕೆ ಸಿಕ್ಕುತ್ತಿಲ್ಲೆ.  ನಮ್ಮ ಭಾರ್ಗವಣ್ಣಂಗೆ ಸಿಕ್ಕೆಕ್ಕಾದ ಗೌರವ ಸಿಕ್ಕೆಕ್ಕು. ಅದೇ ಏಚನೆಲಿ ಒರಕ್ಕು ಬಂದದೇ ಗೊಂತಾಯ್ದಿಲ್ಲೆ.

~~~***~~~

13 thoughts on “ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ)

  1. ಪ್ರಶಸ್ತಿ ವಿಜೇತೆ ಅನುಪಮಾ, ಅಭಿನಂದನೆಗೊ. ಪ್ರಸ್ತುತ ವಿಷಯವ ಆಧರಿಸಿ ಬರೆದ ಕಥೆ. ವಿಷಯ ಬೇಜಾರಿಂದು, ಹಾಂಗಾದ ಕಾರಣ ಓದಿ ಖುಷಿಯಾತು ಹೇಳಿರೆ ಸಮ ಆಗ. ನಿರೂಪಣೆ ಲಾಯ್ಕಾಯಿದು ಹೇಳ್ತೆ ಆಗದಾ?

  2. ಈ ಸರ್ತಿ ಗೌರಮ್ಮ ಪ್ರಶಸ್ತಿ ತೆಕ್ಕೊಂಡ ಅನುಪಮಂಗೂ ಕತೆಯ ಬಯಲಿಂಗೆ ಹಾಕುವಲ್ಲಿ ಸಹಕರಿಸದ ಶರ್ಮಭಾವಂಗೂ ಮನಸಾ ಧನ್ಯವಾದಂಗೊ

  3. ದೇಶವ ಕಾಯ್ತಾ ಇಪ್ಪ ವೀರ ಸೈನಿಕರಿಂಗೆ ನಮಿಸುತ್ತೆ. ಇದು ಕಥೆಯಲ್ಲ ನಿಜ ಜೀವನವೇ. ಬರದ ಶೈಲಿಯುದೆ ಲಾಯಕಿದ್ದು. ಪ್ರಥಮ ಪ್ರಶಸ್ತಿ ಪಡದ ಅನುಪಮಕ್ಕಂಗೆ ಅಭಿನಂದನೆಗೊ.

    1. ಧನ್ಯವಾದಂಗೊ……
      ಅಪ್ಪು ಇದು ಬರೆ ಕಥೆ ಅಲ್ಲ. ನಮ್ಮ ಹವ್ಯಕ ಸಮಾಜದ ಒಬ್ಬನ ಜೀವನ ಚರಿತ್ರೆ. ಆ ವ್ಯಕ್ತಿಯ ಬಗ್ಗೆ ಕೇಳಿ ಗೊಂತಿತ್ತು. ಪರಿಚಯ ಇತ್ತಿಲ್ಲೆ. ಇತ್ತೀಚೆಗೆ ಭೇಟಿ ಆತು . ಆನು ಕಥೆಲಿ ವಿವರ್ಸಿದ್ದರಿಂದಲೂ ಮೇಲಿನ ವ್ಯಕ್ತಿತ್ವ. ನೋಡಿ , ಭೇಟಿಯಾಗಿ ತುಂಬ ಕೊಶಿ ಆತು.

  4. ಹರೇ ರಾಮ ,ಸಮಯೋಚಿತ ಕಥೆ, ಸರಾಗವಾಗಿ ಓದ್ಸಿಯೊಂಡು ಹೋವುತ್ತು, ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×