Oppanna.com

“ದೊಡ್ಡಬ್ಬೆ”-ಕೊಡಗಿನ ಗೌರಮ್ಮ ೨೦೧೧, ದ್ವಿತೀಯ ಬಹುಮಾನ ಪಡೆದ ಕಥೆ

ಬರದೋರು :   ವಿಜಯತ್ತೆ    on   18/11/2012    15 ಒಪ್ಪಂಗೊ

“ಕೊಡಗಿನ ಗೌರಮ್ಮ ದತ್ತಿ ನಿಧಿ”ಯ ಲೆಕ್ಕಲ್ಲಿ ಕೊಡಗಿನ ಗೌರಮ್ಮನವರ ಸ್ಮಾರಕ ಕಥಾಸ್ಪರ್ಧೆಗಳ ಹತ್ತು ಹದಿನೈದು ವರ್ಷಂದ ನಮ್ಮ ವಿಜಯತ್ತೆ ಚೆಂದಕ್ಕೆ ನೆಡೆಶಿಗೊಂಡು ಬತ್ತಾ ಇದ್ದವು. ನಮ್ಮ ಹವ್ಯಕ ಕೂಸುಗೊಕ್ಕೆ, ಹೆಮ್ಮಕ್ಕೊಗೆ ಅವರವರ ಬರವಣಿಗೆಯ ಪ್ರತಿಭೆಯ ಹೆರಹಾಕುಲೆ ಇಪ್ಪ ಒಂದು ಸುವರ್ಣ ವೇದಿಕೆ ಇದು. ಈ ಸ್ಪರ್ಧೆಲಿ ನಮ್ಮ ರಾಜ್ಯದ ಎಲ್ಲಾ ಹವ್ಯಕ ಭಾಷೆ ಅರಡಿವ ಹೆಮ್ಮಕ್ಕೊ ಭಾಗವಹಿಸುತ್ತವು. ಬೈಲಿಲಿ ಈ ಕಥಾ ಸ್ಪರ್ಧೆಯ ಕಥೆಗೊ ಬಪ್ಪಲಿದ್ದು. ಪ್ರತಿವರ್ಷವೂ ಎಲ್ಲರನ್ನೂ ಸೇರ್ಸಿಗೊಂಡು ಉತ್ಸಾಹಲ್ಲಿ ಕಾರ್ಯಕ್ರಮ ಆಯೋಜಿಸುವ ವಿಜಯತ್ತೆಯ ಕೆಲಸಕ್ಕೆ ಗೌರವದ ನಮಸ್ಕಾರಂಗೊ.
~
ಬೈಲಿನ ಪರವಾಗಿ

~
ಕೊಡಗಿನ ಗೌರಮ್ಮ ಕಥಾಸ್ಪರ್ಧೆ ೨೦೧೧ನೇ ಸಾಲಿನ ದ್ವಿತೀಯ ಬಹುಮಾನಿತ ಕಥೆ
ಲೇಖಕಿ  – ಶ್ರೀಮತಿ ಪಾರ್ವತಿ ಎಮ್.ಭಟ್ .ಶಮ ನಿವಾಸ . ಕೂಳಕ್ಕೊಡ್ಲು
ಕಥೆಯ ಹೆಸರು -“ದೊಡ್ಡಬ್ಬೆ”

~

ದೊಡ್ಡಬ್ಬೆಯ ದಿನ ಕಳದತ್ತು. ನಿಂಗೊ ಬತ್ತರೆ ಬೇಗ ಹೆರಟು ಬನ್ನಿ. ಮುಂದಾಣಕಾರ್ಯ ಆದಷ್ಟು ಬೇಗ ಆಯೆಕ್ಕಡ. ಹೇಳಿ ಎಂಗಳ ಉತ್ತರಕ್ಕೂ ಕಾಯದ್ದೆ ತಮ್ಮ ಫೋನು ಮಡುಗಿದ°. ಅವನ ಮಾತಿನ ಧಾಟಿಲಿ ಎಂಗೊ ಖಂಡಿತ ಅಲ್ಲಿಗೆ ಹೋಪೆಯೊ° ಹೇಳುವ ವಿಶ್ವಾಸ ಇದ್ದ ಹಾಂಗಿತ್ತು.

ಎನಗೆ ದೊಡ್ಡಬ್ಬೆಯ ಮರಣದ ಸುದ್ದಿ ಕೇಳಿ ಬೇಜಾರ, ಸಂತೋಷ, ಆಶ್ಚರ್ಯ ಎಲ್ಲಾ ಒಟ್ಟಿಂಗೇ ಆತು. ಅಬ್ಬೆಯ ಹಾಂಗಿದ್ದ ದೊಡ್ಡಬ್ಬೆ ಇನ್ನಿಲ್ಲೆನ್ನೆ ಹೇಳಿ ಗ್ರೇಶಿ ಬೇಜಾರ ಆದರೆ ಬರೀ ಕಷ್ಟವನ್ನೇ ಅನುಭವಿಸಿದ ಆ ಜೀವಕ್ಕೆ ಮುಕ್ತಿ ಸಿಕ್ಕಿದ್ದು ಒಳ್ಳೆದೇ ಆತು ಹೇಳಿ ಸಂತೋಷವೂ ಆತು. ಆದರೆ ಇಷ್ಟು ಬೇಗ ದೊಡ್ಡಬ್ಬೆಯ ದಿನ ಕಳಿಗು ಹೇಳುದರ ಎನಗೆ ನಂಬುಲೇ ಆಯಿದಿಲ್ಲೆ. ಹಾಂಗೆ ಹೇಳಿದರೆ ದೊಡ್ಡಬ್ಬೆಗೆ ಸಾಯುವ ಪ್ರಾಯ ಆಯಿದಿಲ್ಲೆ ಹೇಳಿ ಅಲ್ಲ. ವರ್ಷ ಎಂಬತ್ತು ಆತು ಆದರೂ ಮೊನ್ನೆ ಮೊನ್ನೆ ವರೆಗೆ ಆರೋಗ್ಯಲಿದ್ದ ದೊಡ್ಡಬ್ಬೆ ಇದ್ದಕ್ಕಿದ್ದ ಹಾಂಗೇ ಹೋಪದು ಹೇಳಿದರೆ. . . . . . ??? ಏಕೋ ಎನ್ನ ಮನಸ್ಸಿನ ಸುತ್ತ ಅನುಮಾನದ ಹುತ್ತ ಬೆಳೆವಲೆ ಶುರು ಆತು.

‘ದೊಡ್ಡಬ್ಬೆಗೆ ಎಂತಾದ್ದಾಯಿಕ್ಕು?’ ಎನ್ನ ಸಂಶಯ ನಿವಾರಣೆಗೆ ಎನ್ನೊವು ಏನಾದರೂ ಸಹಾಯ ಮಾಡುಗಾ ಹೇಳುವ ಆಶೆಂದ ಕೇಳಿದೆ. ಎಂತಾ ಆದ್ದು ಹೇಳಿ ಆನು ಹೇಂಗೆ ಹೇಳುದು? ಫೋನಿಲ್ಲಿ ಮಾತಾಡಿದ್ದು ನೀನು. ನೀನು ಹೇಳಿದಷ್ಟೇ ಎನಗೆ ಗೊಂತಿಪ್ಪದು. ಇಲ್ಲಿ ಕೂದುಗೊಂಡು ಎಂತದೂ ಹೇಳಲೆ ಎಡಿಯ. ಹೋಗಿಯೇ ನೋಡೆಕಷ್ಟೆ. ಹೋಯೆಕ್ಕಾದರೆ ಹೆರಡು ಹೇಳಿದವು. ಅವು ಕೊಟ್ಟ ಉತ್ತರ ಆನು ನಿರೀಕ್ಷೆ ಮಾಡಿದ ಹಾಂಗೇ ಇತ್ತಷ್ಟೆ!

ಮನೆಲಿ ಎಂಗೊ ಇಬ್ರೆ ಇಪ್ಪ ಕಾರಣ ಸೀದಾ ಎದ್ದು ಮನೆ ಬಿಟ್ಟು ಹೋಪ ಹಾಂಗಿಲ್ಲೆ. ಎಲ್ಲಿಗೆ ಹೋಯೆಕ್ಕಾದರೂ ಮನೆಗೆ ಕೆಲ್ಸಕ್ಕೆ ಬಪ್ಪವರ ನಿಲ್ಸಿಕ್ಕಿಯೇ ಹೋಯೆಕ್ಕಷ್ಟೆ. ಹಾಂಗೆ ಇಂದುದೇ ಅವು ಬಂದ ಕೂಡ್ಲೆ ಅವಕ್ಕೆ ವಿಷಯ ಹೇಳಿಕ್ಕಿ ಆನು ಹತ್ತೇ ನಿಮಿಷಲ್ಲಿ ಹೆರಟು ಕಾರಲ್ಲಿ ಕೂದೆ. ಎನ್ನವಕ್ಕೆ ಬಹಳ ಆಶ್ಚರ್ಯ ಆತು. ಹೇ..!!! ನಿನಗೆ ಇಷ್ಟು ಬೇಗ ಹೆರಡ್ಲೂ ಅರಡಿತ್ತಾ? ಹೇಳಿ ತಮಾಷೆ ಮಾಡಿದವು. ಎಂತಕೆ ಹೇಳಿದರೆ ಎನಗೆ ಎಲ್ಲಿಗೆ ಹೋಪಗಲೂ ಬೇಗ ಹೆರಟಪ್ಪಲಿಲ್ಲೆ. ಅವು ಹೆರಟು ಕೂದು ಅರ್ಧಗಂಟೆ ಕಳುದ ಮತ್ತೆಯೇ ಆನು ಹೆರಬಪ್ಪದು.

ಇದಾ, ಇದು ತಮಾಷೆ ಮಾಡುವ ಹೊತ್ತಲ್ಲ. ನಿಂಗೊ ಒಂದರಿ ಬೇಗ ಕಾರು ಬಿಡಿ ಹೇಳಿ ಅರ್ಜೆಂಟು ಮಾಡಿದೆ. ತಮಾಷೆ ಮಾಡಿದ್ದಲ್ಲ ಮಾರಾಯ್ತಿ, ನಿನ್ನ ಬೇಜಾರ ರಜ ಕಮ್ಮಿ ಆಗಲಿ ಹೇಳಿ ಹೇಳಿದ್ದಷ್ಟೆ ಹೇಳಿ ಕಾರು ಸ್ಟಾರ್ಟ್ ಮಾಡಿದವು.

ಎಂಗಳ ಮನೆಂದ ಅಪ್ಪನ ಮನೆಗೆ ೭೦ ಕಿಲೋಮೀಟರ್ ದೂರ ಇದ್ದು. ಎಷ್ಟು ಬೇಗ ಹೋದರೂ ಮೂರು ಗಂಟೆ ಬೇಕೇ ಬೇಕು. ಮೂರು ಗಂಟೆ ಎಂತಕೆ ಹೇಳಿರೆ ಹೋಪಗ ಮಾರ್ಗ ಎಲ್ಲಿದ್ದು ಹೇಳಿ ಹುಡ್ಕಿಗೊಂಡು ಹೋಯೆಕ್ಕಾವುತ್ತು. ಅಲ್ಲದೆ ತಲೆಂದ ತಲಗೆ ಬಾಯಿ ಒಡಕ್ಕೊಂಡಿದ್ದ ಹೊಂಡಂಗೋಕ್ಕೆಲ್ಲಾ ಇಳುದು-ಹತ್ತಿ, ಹತ್ತಿ-ಇಳುದು ‘ಕೆರೆ-ದಡ’ ಆಟ ಆಡಿಗೊಂಡು ಹೋಪಗ ಅಷ್ಟು ಹೊತ್ತು ಆವುತ್ತು.

ಕಾರು ಏನೋ ಮುಂದೆ ಹೋವುತಾ ಇತ್ತು. ಆದರೆ ಇನ್ನ ಮನಸ್ಸು ಮಾತ್ರ ತುಂಬಾ ಹಿಂದೆ ಹೋವುತ್ತಾ ಇತ್ತು. ಕಾರಿನ ಚಕ್ರ ತಿರುಗಿದ ಹಾಂಗೆ ಎನ್ನ ತಲೆ ತುಂಬಾ ದೊಡ್ಡಬ್ಬೆಯೇ ತಿರುಗಲೆ ಶುರು ಆತು. ಆ°. . . ಕ್ಷಮಿಸಿ, ದೊಡ್ಡಬ್ಬೆಯ ಬಗ್ಗೆ ಆನೇ ಆಲೋಚನೆ ಮಾಡ್ತಾ ಇಪ್ಪದಲ್ಲದ್ದೆ ನಿಂಗೊಗೆ ಎಂತದೂ ಹೇಳಿದ್ದೇ ಇಲ್ಲೆ ಅಲ್ಲದಾ? ಕೇಳಿ.   ದೊಡ್ಡಬ್ಬೆ  ಹೇಳಿದರೆ ಎ೦ಗಳ ಅಬ್ಬೆಯ ಅಕ್ಕ°, ಹೆಸರು ಭಾಗ್ಯಲಕ್ಷ್ಮಿ.ಇದು ಸುಮಾರು  ಐವತ್ತು  ವರ್ಷ ಹಿಂದಾಣ ಕಾಲ. ಅಬ್ಬೆ ಹೇಳಿದ ಪ್ರಕಾರ ದೊಡ್ಡಬ್ಬೆ ಅಬ್ಬೆಂದಲೂ ಹದಿನೈದು ವರ್ಷಕ್ಕೆ ದೊಡ್ಡ. ಮಾವ° ಅಬ್ಬಗೆ ತಮ್ಮ. ಈಮೂರು ಮಕ್ಕಳ ಮದಲೆಯೂ ಮತ್ತೆಯೂ ಎಡೆಲಿಯೂ ಅಜ್ಜಿ ಒಟ್ಟು ಹದಿನೈದು ಹೆತ್ತಿದವಡ. ಆದರೆ ಅದೆಲ್ಲಾ ಒಂದಲ್ಲ ಒಂದು ಕಾರಣಂದ ತೀರಿಹೊಗಿ ಕಡೇಂಗೆ ಒಳುದ್ದು ಇವು ಮೂರೆ ಜನ. ಕಡೇಂಗೂ ಅಜ್ಜಿ ತೀರಿ ಹೋದ್ದು ಹೆರಿಗೆ ಸಮಯಲ್ಲೆಡ . ಎಂತಹ ದುರಂತ  ನೋಡಿ, ಮದಲೆಲ್ಲಾ ಹಾಂಗಿಪ್ಪದೆಲ್ಲ ಸಾಮಾನ್ಯಾಡ. ಹಾಂಗೆ ಅಜ್ಜಿ ಹೇಳುಗು. ಎಂತಕೆ ಕೇಳಿರೆ ಹತ್ತರೆ ಎಲ್ಲಿಯೂ ಆಸ್ಪತ್ರೆ ಇಲ್ಲೆ. ಹೆರಿಗೆ ಮನಗಳಲ್ಲೆ ಅಪ್ಪದು. ಏವ  ಸವುಕರ್ಯಂಗಳೂ ಇಲ್ಲೆ. ಯಾವುದೋ ಹೆಣ್ಣುಗೊ ಬಂದು ಹೆರಿಗೆ ಮಾಡ್ಸುದು. ಅವಕ್ಕೆ ಎಂತ ಗೊ೦ತಿರ್ತು? ಎನೂ ಆಗದ್ದೆ ಎಲ್ಲ ಸರಿ ಆದರೆ ಅವರವರ ಪುಣ್ಯ. ಏನಾದರು ಹೆಚ್ಹು ಕಮ್ಮಿಯಾದರೆ ಅದಕ್ಕೆ ಮದ್ದಿಲ್ಲೆ. ಬಾಳಂತಿಯೂ ಶಿಶುವು ಸಾವದೆ!

ಆದರೆ ಈಗ ವಿಜ್ಞಾನ ಎಷ್ಟು ಮುಂದುವರ್ದು ಹೇಳಿರೆ, ಅದಕ್ಕೆ ಬೇಕಾದ ಎಲ್ಲ ಸೌಕರ್ಯ೦ಗಳೂ ಆಸ್ಪತ್ರಗಳಲ್ಲಿದ್ದು. ಎಲ್ಲ ಕಡೆಯೂ ಭೇಕಾದಷ್ತು ಇದ್ದು. ಹಾ೦ಗಾಗಿ ಈಗ ಹೆರಿಗಗೊ ಸುಲಭ, ಶಿಶು ಮರಣ ಕಮ್ಮಿ ಅಲ್ಲದಾ?

ಐವತ್ತು ವರ್ಷದ ಹಿ೦ದೆಲ್ಲಾ ಕೂಸುಗೊಕ್ಕೆ ಏಳೆಂಟು ವರ್ಷಲ್ಲೇ ಮದುವೆ ಮಾಡುಗಡ. ಆದರೆ ದೊಡ್ಡಬ್ಬಗೆ ಹದಿನಾಲ್ಕು ವರ್ಷ ಆದರೂ ಮದುವೆ ಆಯಿದಿಲ್ಲೇಡ. ಹಾ೦ಗಾಗಿ ಬೇರೆ ವಿಧಿ ಇಲ್ಲದ್ದೆ ಅಜ್ಜಿ, ದೊಡ್ಡಬ್ಬೆಯ ೫೨ ವರ್ಷ ಆದ ಒಬ್ಬ ವಿದುರಂಗೆ ಮದುವೆಮಾಡಿ ಕೊಟ್ಟವಡ. ಅಂಬಗ ವರದಕ್ಷಿಣೆ ಪದ್ದತಿ ಇದ್ದತ್ತಿಲ್ಲೇಡ. ಇದ್ದದು ‘ವಧುದಕ್ಶಿಣೆ’. ಆದರೆ ನಮ್ಮ ಹವ್ಯಕರಲ್ಲಿ ಮಾತ್ರ ಈಗಲೂ ‘ವರದಕ್ಶಿಣೆ’ ಪದ್ದತಿ ಇಲ್ಲೆ ಹೇಳಿ ನಾವು ಸಂತೋಷ ಪಡೆಕು. ಅಜ್ಜಿ ಅಂಬಗ ತುಂಬಾ ಕಷ್ಟಲ್ಲಿತ್ತಿದ್ದವಡ. ಹಾಂಗಿಪ್ಪಗ ಅವು ವಧುದಕ್ಷಿಣೆ ಹೇಳಿ ಕೈತುಂಬಾ ಕೊಡ್ತೆಯೋ°, ಮದುವೆ ಖರ್ಚು ಎಂಗಳೆ ಮಾಡ್ತೆಯೊ° ಹೇಳಿ ಅಜ್ಜನ ಒಪ್ಪುಸಿ ದೊಡ್ಡಬ್ಬೆಯ ಮದುವೆ ಆದವಡ.

ಮದುವೆ ಆಗಿ ಎರಡು, ಮೂರು ಸರ್ತಿ ದೊಡ್ಡಬ್ಬೆಗೆ ಗರ್ಬಹೋದ್ದಲ್ಲದ್ದೆ ಮಕ್ಕ ಆಯ್ದವಿಲ್ಲೆಡ. ಅವರ ಮದ್ವೆ ಆಗಿ ಹದಿನೈದು ವರ್ಷ ಆಪ್ಪಗ ದೊಡ್ಡಪ್ಪ° ಒಂದು ದಿನ ಎದೆಬೇನೆ ಹೇಳಿ ಬಿದ್ದವು ಮತ್ತೆ ಎದ್ದಿದವಿಲ್ಲೆಡ. ಅಂಬಗೆಲ್ಲಾ ಮನೆಯವು ಉಷ್ಣವೋ ಕೊಳ್ಪೋ ಆದಿಕ್ಕು ಹೇಳಿ ಜೀರಿಗೆ ಕಷಾಯವೋ ಕೂವೆಹುಡಿ ಕರಡಿಯೋ ಕೊಡುಗಡ. ಒಂದರಿಯಂಗೆ ರಜ ಗುಣಸಿಕ್ಕುಗಡ.

ಆದರೆ ನಿಜವಾಗಿ ನೋಡಿರೆ ದೊಡ್ಡಪ್ಪಂಗೆ ಹಾರ್ಟಿಲಿ ಬ್ಲಾಕ್ ಇದ್ದದು ಆದಿಕ್ಕು. ಬೈಪಾಸ್ ಸರ್ಜರಿಯೋ ಆಂಜಿಯೋಗ್ರಾಂ ಮಾಡಿದ್ದರೆ ಸರಿ ಆವುತಿತ್ತು. ಆದರೆ ಅಂಬಗ ಎಲ್ಲಾ ಸೌಕರ್ಯಂಗ ಇದ್ದತಿಲ್ಲೆ. ಏನಾದರೂ ಹೆಚ್ಚುಕಮ್ಮಿ ಆದರೆ ನಾವು ಪಡಕೊಂಡು ಬಂದದೇ ಅಷ್ಟು ಹೇಳಿ ತೃಪ್ತಿ ಪಟ್ಟುಕೊಳೆಕಾದ ಕಾಲ ಅದು.

ಆದರೆ ಈಗ ನೋಡಿ ಎಷ್ಟು ಸೌಕರ್ಯಂಗಳೂ ಇದ್ದು. ಇದ್ದರೂ ಎಷ್ಟು ಜನ ಮೊದಲೇ ಹೋಗಿ ಪರೀಕ್ಷೆ ಮಾಡ್ಸಿಕೊಳ್ತವು? ಪರೀಕ್ಷೆ ಮಾಡ್ಸಲೆ ಹೋದರೆ ರೋಗ ಇದ್ದು ಹೇಳುಗು ಹೇಳಿ ಎಷ್ಟು ವಿದ್ಯಾವಂತರೂ ಕೂಡ ಆಸ್ಪತ್ರೆಗೆ ಹೋವುತ್ತವೇ ಇಲ್ಲೆ. ಎಷ್ಟು ಜನ ಅನ್ಯಾಯವಾಗಿ ದಾರಿಲಿ ಬಿದ್ದು ಸಾವದರ ನಾವು ದಿನಾ ಅಲ್ಲಿ ಇಲ್ಲಿ ಕೇಳ್ತು. ಮೊದಲಣಾ ಹಾಂಗೆ ಅಲ್ಲ, ಈಗ ಯಾವ ರೋಗಕ್ಕಾದರೂ ಮದ್ದು ಇದ್ದು. ಕೆಲವೊಂದು ರೋಗಂಗ ಪೂರ ಕಮ್ಮಿ ಆಗದ್ದರೂ ಮಾತ್ರೆ ತಿಂದುಗೊಂಡಿದ್ದರೆ ಸ್ಥಿಮಿತಲ್ಲಿ ಇರ್ತು. ಅಂಬಗ ಜೀವನ ಕಡೆವರೆಂಗು ಚಂದಕೆ ಇಪ್ಪಲಕ್ಕು. ಅದರ ನಾವು ಪ್ರತಿಯೊಬ್ಬನೂ ತಿಳ್ಕೊಳೆಕು.

ದೊಡ್ಡಪ್ಪ° ತೀರಿಹೋದ ಮೇಲೆ ದೊಡ್ಡಬ್ಬೆಗೆ ದಿಕ್ಕೇ ಕಾಣದ್ದ ಹಾಂಗೆ ಆತಡ. ಇನ್ನೆಂತ ಮಾಡುದು? ಅಪ್ಪನ ಮನೆಗೆ ಹೋದರೆ ಅವಕ್ಕೆ ಹೊರೆಯೆ. ಗಾದೆಯೇ ಇದ್ದನ್ನೆ ‘ಗಂಜಿಯ ಕುಡಿದರೂ ಗಂಡನ ಮನೆ ಲೇಸು’ ಹೇಳಿ, ಹೇಂಗೂ ಗಂಡನ ಆಸ್ತಿ ಬೇಕಾದಷ್ಟು ಇದ್ದು, ಮನೆತುಂಬಾ ಜನವೂ ಇದ್ದವು ಹೇಳಿ ದೊಡ್ಡಬ್ಬೆ ಅಲ್ಲೇ ನಿಂಬ ನಿರ್ಧಾರಕ್ಕೆ ಬಂತಡ.

***

ಆದರೆ ಅಲ್ಲಿ ದೊಡ್ಡಪ್ಪ° ಯಾವಾಗ ತೀರಿ ಹೋದವೋ ಅಂಬಗಂದ ಮನೆಯವೆಲ್ಲಾ ದೊಡ್ಡಬ್ಬೆಗೆ ತಿರುಗಿ ಬಿದ್ದವಡ. ಮೊದಲೇ ಅವು ದೊಡ್ಡಪ್ಪನ ಹೆದರಿಕೆಗೆ ಸುಮ್ಮನೆ ಇದ್ದದಡ. ಮುಂದೆ ಅಲ್ಲಿ ದೊಡ್ಡಬ್ಬೆಯ ಬದುಕು ಬರೇ ನರಕಂದ ಕಡೆ ಆತಡ. ಅಷ್ಟು ಮಾತ್ರ ಅಲ್ಲ ಮನೆಯ ಒಳವೂ ಹೆರವೂ ಕೆಲವು ಕಾಮದ ಕಣ್ಣುಗ ದೊಡ್ಡಬ್ಬೆಯ ನೋಡ್ಲೆ ಸುರುಮಾಡಿತ್ತಡ. ಇನ್ನು ಅಕ್ಕನ ಅಲ್ಲಿ ಬಿಟ್ಟರಾಗ ಹೇಳಿ ಮಾವ° ಅಜ್ಜನ ಮನೆಗೆ ಕರಕೊಂಡು ಬಂದನಡ. ಈ ವಿಷಯಲ್ಲಿ ಮಾತ್ರ ನಮ್ಮ ಸಮಾಜವ ಇನ್ನಾರಿಂಗೂ ಬದಲುಸೆಲೆ ಎಡಿಗಾಯ್ದಿಲ್ಲೆ ನೋಡಿ. ಒಂದು ಹೆಣ್ಣು ಸೂರ್ಯಾಸ್ತಮಾನಂದ ನಂತ್ರ ಒಂಟಿಯಾಗಿ ಇಂದಿಂಗೂ ಹೆರಹೋಪ ಹಾಂಗಿಲ್ಲೆ. ಸಮಾಜಲ್ಲಿ ಒಬ್ಬಂಟಿಯಾಗಿ ಬದ್ಕಲೆ ಖಂಡಿತಾ ಎಡಿಯದ್ದ ಪರಿಸ್ಥಿತಿ ಇಂದಿಂಗೂ ಇದ್ದು.

ದೊಡ್ಡಬ್ಬೆಗೆ ಸಿಕ್ಕೆಕ್ಕಾದ ಪಾಲಿಲ್ಲಿ ನಯಾಪೈಸೆಯೂ ಅವು ಕೊಡ್ಲೆ ಒಪ್ಪಿದ್ದವಿಲ್ಲೆಡ. ಅದು ಹೇಂಗೆ ಬಂತೋ ಹಾಂಗೇ ಹೋಗಲಿ. ಹೆಚ್ಚು ಮಾತಾಡಿರೆ ಎಂಗೊ ಕೊಟ್ಟ ವಧುದಕ್ಷಿಣೆಯ ಕೊಡೆಕಕ್ಕು ಹೇಳಿ ರೋಪ್ ಹಾಕಿದವಡ. ಆ ಕಾಲಲ್ಲಿ ಕೋರ್ಟು ಕಛೇರಿ ಹೇಳಿ ಹೋಪ ತಾಕತ್ತು ಮಾವಂಗೂ ಇಲ್ಲದ್ದ ಕಾರಣ ಆದಕ್ಕೆಲ್ಲಾ ಎಳ್ಳುನೀರು ಬಿಟ್ಟು ದೊಡ್ಡಬ್ಬೆಯ ಕರಕೊಂಡು ಬಂದವಡ.

***

ದೊಡ್ಡಬ್ಬೆಯ ಕರಕೊಂಡು ಬಂದು ರಜ ಸಮಯ ಅತ್ತೆ, ಮಾವ°, ಮಕ್ಕೊ ಎಲ್ಲಾ ಕನಿಕರಲ್ಲಿ ನೋಡಿಗೊಂಡವಡ. ಮತ್ತೆ ಮತ್ತೆ ಅವಕ್ಕೆ ದೊಡ್ಡಬ್ಬೆ ‘ಹೊರೆ’ ಹೇಳಿ ಅಪ್ಪಲೆ ಶುರು ಆತಡ. ಅಲ್ಲದ್ದೆ ದೊಡ್ಡಬ್ಬೆದು ಹೇಳಿ ಎಂತದೂ ಇಲ್ಲೆ. ಇಲ್ಲೆ ಹೇಳುದಕ್ಕೆ ದೊಡ್ಡಪ್ಪ° ಮಾಡ್ಸಿಕೊಟ್ಟ ೯ ಎಳೆ ಚಕ್ರ ಸರ ಒಂದು ಇತ್ತಡ. ಆದರೆ ಅದರಲ್ಲಿ ಅರಕ್ಕೇ ಜಾಸ್ತಿಯಾಗಿ ಚಿನ್ನ ಕಮ್ಮಿ ಇಪ್ಪದಡ. ದೊಡ್ಡಬ್ಬೆಯ ಪರಿಸ್ಥಿತಿ ಅಲ್ಲಿ ಬಾಣಲೆಯಿಂದ ಬೆಂಕಿಗೆ ಹೇಳಿ ಆತು. ಮನೆಯವಕ್ಕೆ ಆರಿಂಗೂ ಕಂಡರಾಗ. ಮುಟ್ಟಿದ್ದು ತಪ್ಪು, ತೆಗದ್ದು ತಪ್ಪು ಹೇಳುವಲ್ಲಿಗೆ ದೊಡ್ಡಬ್ಬೆಯ ಪರಿಸ್ಥಿತಿ ಎತ್ತಿತಡ. ಮಾವಂಗೆ ಅಲ್ಲಿ ಉಪ್ಪು ನಕ್ಕಲೆ ಗತಿ ಇಲ್ಲೆ ಹೇಳುವ ಹಾಂಗಿತ್ತು. ನಾಲ್ಕು ಮಕ್ಕಳೂ ಇತ್ತಿದ್ದವು. ಹೇಂಗೋ ದಿನದೂಡಿಗೊಂಡು ಇದ್ದದು. ಹಾಂಗಿಪ್ಪಗ ಮೂರನೆಯವ ಅಲ್ಲಿದ್ದರೆ ರಗಳೆ ಅಪ್ಪದು ಸಹಜವೇ ಅಲ್ಲದಾ?

ಆನು ಹುಟ್ಟಿ ಎನಗೆ ಬುದ್ಧಿ ಬರೆಕಾದರೆ ದೊಡ್ಡಬ್ಬೆ ಅಜ್ಜನಮನೆಲಿ ಇದ್ದು. ಅದು ಎಂಗಗೊ ಮಾತ್ರ ದೊಡ್ಡಬ್ಬೆ ಆಯೆಕ್ಕಾದರೂ ಊರಿನವೆಲ್ಲಾ ಅದರ ‘ದೊಡ್ಡಬ್ಬೆಕ್ಕ°’ ಹೇಳಿಯೇ ಹೇಳುದು. ಕೆಲವು ಕಡೆಲಿ ಅಡ್ಡ ಹೆಸರು ಇರ್ತಲ್ಲದಾ.

ದೊಡ್ಡಬ್ಬೆಯ ಹೆಸರು ಭಾಗ್ಯಲಕ್ಷ್ಮಿ ಹೇಳಿ ಆದರೂ ಜೇವನದಲ್ಲಿ ಯಾವ ಭಾಗ್ಯವನ್ನೂ ಕಾಣದ್ದ ಜೀವ ಅದು. ಯಾವ ಫಲಾಪೇಕ್ಷೆಯೂ ಇಲ್ಲದ್ದೆ ಗಾಣದ ಎತ್ತಿನ ಹಾಂಗೆ ಇನ್ನೊಬ್ಬರಿಂಗಾಗಿ ದುಡಿವದೇ ಅದರ ಕಾಯಕ ಆತು. ಅಲ್ಲಿ ಮನೆಯವೂ, ಹೆರಾಣವೂ, ಬಂದವೂ ಅವಕ್ಕವಕ್ಕೆ ಬೇಕಾದ್ದೆಲ್ಲಾ ದೊಡ್ಡಬ್ಬೆ ಹತ್ತರೆ ಕೆಲಸ ಮಾಡ್ಸಿಗೊಂಡಿತ್ತಿದ್ದವು.

ಎಂತ ದುರಂತ ಕೂಸುಗಳ ಪಾಡು ಆ ಕಾಲಲ್ಲಿ? ಅವರದ್ದಲ್ಲದ ತಪ್ಪಿಂಗೆ ಆ ಎಳೆಹಸುಳೆಗೆ ಎಂತಹ ಬೆಲೆ ಕೊಡೆಕ್ಕಾದ ಪರಿಸ್ಥಿತಿ ಅಂಬಗ? ಆದರೆ ಈಗ ಹಾಂಗಿಲ್ಲೆ. ಇತ್ತಿತ್ಲಾಗಿ ಅಂತೂ ಪ್ರತಿಯೊಂದು ಕೂಸುಗಳೂ ಹೇಳಿದ ಹಾಂಗೆ ಕಲ್ತು ವಿದ್ಯಾವಂತರಾಗಿ ಕೆಲಸಕ್ಕೆ ಸೇರಿ ಅವರವರ ಕಾಲ ಮೇಲೆ ಅವೇ ನಿಲ್ಲುತ್ತವು. ಬೇರೆಯವರ ಅಡಿಯಾಳಾಗಿ ಇರೆಕ್ಕಾದ ಅಗತ್ಯ ಇಂದಿಲ್ಲೆ. ಅಕಸ್ಮಾತ್ ಅವು ಎಲ್ಲಿಯಾದರೂ ವಿಧವೆಯಾದರೋ ಅಥವಾ ಗಂಡ ಡೈವೊರ್ಸ ಕೊಟ್ಟರೋ ಅವಕ್ಕೆ ಬೇರೆ ಮದುವೆ ಅಪ್ಪದಕ್ಕೂ ಅಡ್ಡಿಯಿಲ್ಲೆ. ಅದಕ್ಕೆ ಸಮಾಜದ ಬೆಂಬಲವೂ ಇದ್ದೀಗ.

ಅಜ್ಜನ ಮನೆಲಿ ದೊಡ್ಡಬ್ಬೆಯ ಪರಿಸ್ಥಿತಿ ಹೇಂಗಿತ್ತು ಹೇಳಿದರೆ ಅಲ್ಲಿ ನಡೆವ ಪ್ರತಿಯೊಂದು ಕೆಟ್ಟ ಘಟನೆಗೂ ದೊಡ್ಡಬ್ಬೆಯೇ ಕಾರಣ ಹೇಳುದು ಅಲ್ಯಣ ಪರಿಪಾಟವೇ ಆಯಿದು. ನಿಜವಾಗಿ ನೋಡಿದರೆ ದೊಡ್ಡಬ್ಬೆ ಬರೀ ಪಾಪ. ಅದಕ್ಕೆ ಎಂತದೂ ಅರಡಿಯ. ಸೌಮ್ಯ ಸ್ವಭಾವ, ಆರು ಎಂತ ಹೇಳಿದರೂ ‘ಹಿತ್ತಾಳೆ ಕೆಮಿ’ಯಾಗಿ ಇಕ್ಕು. ಯಾವುದರನ್ನೂ ದೊಡ್ಡಮಾಡ್ಲೆ ಹೋಗ. ಆರು ಬೈದರೂ ಹಂಗಿಸಿದರೂ ಅವರ ಮೋರೆಯನ್ನೇ ಒಂದರಿ ನೋಡಿಕ್ಕಿ ಅತ್ಲಾಗಿ ಹೋಕು. ಬದ್ಕಲೆ ಬೇರೆ ಆಸರೆ ಇಲ್ಲದ್ದ ಕಾರಣ ಎಲ್ಲವನ್ನೂ ಮೌನವಾಗಿ ಸಹಿಸೆಕ್ಕು ಹೇಳುವ ಕಟುಸತ್ಯವ ದೊಡ್ಡಬ್ಬೆ ಅರ್ಥಮಾಡಿಗೊಂಡಿತ್ತು. ಪಾಪ ಎಷ್ಟೇ ಕೆಲಸ ಹೇಂಗೇ ಮಾಡಿದರೂ ಸರಿಯಾಯ್ದಿಲ್ಲೆ ಹೇಳಿ ಅದಕ್ಕೆ ಕೊರತ್ತೆ ಹೇಳುದು ಅತ್ತೆ ಮಾವ° ಮಾತ್ರ ಅಲ್ಲ ಮಕ್ಕಗೂ ಅಭ್ಯಾಸ ಆಗಿತ್ತು. ಅಷ್ಟು ಮಾತ್ರ ಅಲ್ಲ, ಎಲ್ಲ ಮಾಡಿ ಉಂಬಲೆ ತಿಂಬಲೆ ಬಪ್ಪಗಲೂ ಹಂಗಿಸದ್ದೆ ಎಂತದೂ ಕೊಡವು. ಅದುದೇ ನಿನ್ನೆ ಬಾಕಿಯಾದ ಆಶನವೋ ಬೆಂದಿಯೋ ಸೊರುಗುವುದು ಅಥವಾ ಅಕೇರಿಯಣ ದೋಸೆ ಎಲ್ಲ ದೊಡ್ಡಬ್ಬೆಗೆ ಮಡುಗುವುದು. ಎಣ್ಣೆಲಿ ಹೊರದ್ದೋ ಸೀವಿಂದೋ ಮಾಡಿದರೆ ಒಂಚೂರು ಕೊಟ್ಟಿಕ್ಕಿ ಒಳದ್ದು ಮಕ್ಕ ತಿನ್ನಲಿ ಹೇಳಿ ಮಕ್ಕಳೊಟ್ಟಿಂಗೆ ಅವೇ ತಿಂಗು. ಆದರೆ ದೊಡ್ಡಬ್ಬೆಗೆ ಕೊಡವು. ಆದರೆ ದೊಡ್ಡಬ್ಬೆ ಮಾತಾಡದ್ದೆ ಅದರ ಕೊಶಿಲಿ ತಿಂಗು. ಅದರ ನೋಡ್ವಾಗ ಎನಗೆ ಹೊಟ್ಟೆಗೆ ಕತ್ತಿ ಹಾಕಿದ ಹಾಂಗೆ ಆಗ್ಯೊಂಡಿತ್ತು. ಆದರೆ ಆರೂ ಎಂತ ಮಾಡುವ ಹಾಂಗಿಲ್ಲೆ. ಬೇಜಾರ ತಡವಲೆಡಿಯದ್ದರೆ ದೊಡ್ಡಬ್ಬೆ ಮನೆ ಹಿಂದಂಗೋ ಹಟ್ಟಿ ಕರೆಂಗೋ ಹೋಗಿ ಧಿರೀನೆ ಕಣ್ಣು ನೀರು ಹಾಕುಗು. ಆ ದೃಶ್ಯ ಆನು ಎಷ್ಟೋ ಸರ್ತಿ ನೋಡಿತ್ತಿದ್ದೆ. ದೊಡ್ಡಬ್ಬೆಯ ಅಸಾಹಯಕ ಪರಿಸ್ಥಿತಿಗೆ ಎನಗೂ ಕಣ್ಣು ನೀರು ಬಂದಿತ್ತು.

ಎಂಗಳ ಅಪ್ಪನ ಮನೆಗೂ ಅಜ್ಜನ ಮನೆಗೂ ಬರೇ ಎರಡು ಮೈಲು ಅಂತರ. ಆದ ಕಾರಣ ದೊಡ್ಡಬ್ಬೆ ತಂಗೆಯ ಮನೆಗೆ ಅಂಬಗಂಬಗ ಬಕ್ಕು. ಎಂಗೋ ಕೂಸುಗ ಮೂರು ಜನವೂ ಮದ್ವೆಯಾಗಿ ಹೋಗಿ ಬಸರು, ಬಾಣಂತನ ಹೇಳಿ ಅಪ್ಪನ ಮನೆಗೆ ಬಂದಿಪ್ಪಗ ಎಲ್ಲಾ ದೊಡ್ಡಬ್ಬೆಯೇ ಎಂಗಳ ಚಾಕರಿ ಮಾಡಿಗೊಂಡಿತ್ತು. ವರ್ಷಕ್ಕೊಂದರಿ ಆಶೆಪಟ್ಟು ಎಂಗಳ ಮನೆಗೊಕ್ಕೆ ಬಕ್ಕು. ಬಂದರೆ ನಾಲ್ಕು ದಿನಂದ ಹೆಚ್ಚಿಗೆ ಕೂರ. ಕೊಟ್ಟ ಕೂಸುಗಳ ಮನೆಲಿ ಹೋಗಿ ಹೆಚ್ಚು ದಿನ ಕೂಪಲಾಗ. ಅವು ಬೇಕಾರೆ ಇಲ್ಲಿ ಎಷ್ಟು ದಿನವೂ ಬಂದು ಕೂರಲಿ ಹೇಳುಗು. ಹಲಸಿನಕಾಯಿ, ಮಾವಿನಕಾಯಿ ಸಮಯಲ್ಲಿ ತಂಗೆಗೆ ಉಪಕಾರಕ್ಕೆ ಹೇಳಿ ಬಂದು ಕೂದು ಹಪ್ಪಳ ಮಾಂಬಳ ಎಲ್ಲಾ ಧಾರಾಳ ಮಾಡಿ ಎಂಗೊಗೆಲ್ಲಾ ಒತ್ತಾಯ ಮಾಡಿ ಕೊಡುಗು. ಎಂಗಳ ಮಕ್ಕಳನ್ನೂ ಎನ್ನ ಸ್ವಂತ ಪುಳ್ಳಿಯಕ್ಕಳ ಹಾಂಗೆ ನೋಡಿಯೊಂಗು. ಪ್ರಾಯ ಆದರೂ ದೊಡ್ಡಬ್ಬೆ ಕನ್ನಡಕ ಹಾಕ. ಅದು ಉಪದ್ರ ಆವುತ್ತು ಹೇಳಿ ಅಲ್ಲಿ ಇಲ್ಲಿ ಮಡುಗುಗು. ಅಂಬಗ ಎಂಗಳ ತಮ್ಮ ನಿಂಗೊಗೆಲ್ಲಾ ಮಾಂಬಳದ ಒಟ್ಟಿಂಗೆ ಹುಳು ಪ್ರೀ ಹೇಳಿ ತಮಾಷೆ ಮಾಡುಗು. ಹೀಂಗೆ ಎಲ್ಲೋರು ದೊಡ್ಡಬ್ಬೆಯೊಟ್ಟಿಂಗೆ ಸಂತೋಷಲ್ಲಿ ಇಪ್ಪೆಯೋ°.

ಕೆಲವು ವರ್ಷಂದ ಇತ್ಲಾಗಿ ದೊಡ್ಡಬ್ಬೆ ಸಾವಿನ ಬಗ್ಗೆಯೇ ಜಾಸ್ತಿ ಮಾತಾಡಿಗೊಂಡಿತ್ತು. ಸಾವಲಪ್ಪಗ ಯಮದೂತಂಗೊ ಬತ್ತವಡ ಬಳ್ಳಿ ತೆಕ್ಕೊಂಡು. ಜೀವ ತೆಕ್ಕೊಂಡು ಹೋಪಾಗ ನೆತ್ತರಿನ ಹೊಳೆಲಿ ಕಿಚ್ಚಿಲಿ ಎಳಕೊಂಡು ಹೋವುತ್ತವಡ. ಹಾಂಗೆ ಗರುಡಪುರಾಣಲ್ಲಿ ಆನು ಓದಿದ್ದೆ. ಅದರ ಗ್ರಹಿಸುವಾಗಲೇ ಹೆದರಿಕೆ ಆವುತ್ತು ಹೇಳಿ ಎನ್ನ ಹತ್ತರೆ ಒಂದರಿ ಹೇಳಿತ್ತು.

ಅಂಬಗ ಆನು, ನಿನ್ನಷ್ಟು ಒಳ್ಳೇ ಮನುಷ್ಯರನ್ನೇ ಕಿಚ್ಚಿಂಗೆ ಕೊದಿವ ಎಣ್ಣೆಗೆ ಹಾಕಿದರೆ ಈ ಅನ್ಯಾಯ ಅನಾಚಾರಂಗಳಲ್ಲಿ ಮೆರೆವ ರಾಕ್ಷಸಂಗಳ ಎಂತದರಲ್ಲಿ ಹಾಕುದು ದೊಡ್ಡಬ್ಬೆ? ನಿನ್ನ ತೆಕೊಂಡು ಹೋಪಲೆ ಯಮದೂತರಲ್ಲ, ನಾರಾಯಣ ದೇವರ ದೂತರೇ ಬಕ್ಕಷ್ಟೆ. ನೀನು ಸ್ವರ್ಗಕ್ಕೇ ಹೋಪೆ. ಎಲ್ಲೊರಿಂಗೂ ಉಪಕಾರ ಮಾಡಿದ ಜೀವ ನಿನ್ನದು. ನೀನು ಸುಮ್ಮನೆ ಇಲ್ಲದ್ದದರ ತಲೆಗೆ ಹಾಕಿಗೊಂಡು ತಲೆ ಬೆಶಿ ಮಾಡೆಡ ಹೇಳಿ ಧೈರ್ಯ ಹೇಳಿದ್ದೆ.

ಅಲ್ಲ ನಿನಗೆಂತಾಯ್ದು? ಯಾವಾಗಂದ ನೋಡ್ತೆ ಆನು, ಮಾತಾಡಿದರೂ ಮಾತಾಡ್ತಿಲ್ಲೆ. ಎಂತ ಹೇಳಿದರೂ ಕೇಳ್ತಿಲ್ಲೆ. ಅಷ್ಟು ತಲೆಬೆಶಿ ಮಾಡ್ಲೆ ನಿನ್ನ ದೊಡ್ಡಬ್ಬೆಗೆಂತ ಸಣ್ಣ ಪ್ರಾಯವ? ಯಾವಾಗಲೂ ಕಾರಿಂಗೆ ಹತ್ತಿ ಕೂದ ಕೂಡ್ಲೆ ಮಾತಾಡ್ಲೆ ಸುರು ಮಾಡಿದರೆ ಬಾಯಿ ಮುಚ್ಚುತ್ತೇ ಇಲ್ಲೆ. ಇಂದ್ರಾಣ ನಿನ್ನ ಪರಿಸ್ಥಿತಿ ನೋಡಿದರೆ ಕಠಿಣ ಕಾಣ್ತೆನಗೆ. ಒಂದರಿ ಕಾರಿಂದ ಇಳಿ, ಎನ್ನವರ ದೊಡ್ಡ ಸ್ವರಕ್ಕೆ ಬೆಚ್ಚಿ ಬಿದ್ದೆ. ಅಂಬಗಳೇ ಆನು ಈ ಲೋಕಕ್ಕೆ ಬಂದದು.

ಇಷ್ಟು ಬೇಗ ಎತ್ತಿತ್ತಾ?’ ಕೇಳಿದೆ.

‘ಬೇಗವಾ? ಮೂರುವರೆ ಗಂಟೆ ಆತು ಹೆರಟು. ಈ ಮಾರ್ಗಲ್ಲಿ  ಡ್ರೈವು ಮಾಡಿ ಎನ್ನ ಬೆನ್ನು, ಸೊಂಟವೂ ಮುರುದತ್ತು. ಬೇಗ ಹೋಪೊ° ಎಲ್ಲೊರು ಬಂದಹಾಂಗೆ ಕಾಣುತ್ತು” ಹೇಳಿ ಅರ್ಜೆಂಟು ಮಾಡಿದವು.

ಎಂಗೊ ಅಲ್ಲಿಗೆತ್ತುವಗ ದೊಡ್ಡಬ್ಬೆಯ ಹೆರ ತಂದು ಮನಿಶಿ ಆಗಿತ್ತು. ದೊಡ್ಡಬ್ಬೆಯ ಮೋರೆ ಹೇಂಗೆ ನೋಡುವದು ಹೇಳಿ ಬೇಜಾರಾತು. ಬೇರೆ ದಾರಿ ಇಲ್ಲದ್ದೆ ಹತ್ತರೆ ಹೋಗಿ ನೋಡಿದೆ. ಮೋರೆ ಪ್ರಶಾಂತ ಆಗಿತ್ತು ಇನ್ನೊಬ್ಬಂಗಾಗಿ ಬದುಕಿ ಬಾಳಿದ ಆ ದೇಹಂದ ಯಮದೂತರಲ್ಲ ವಿಷ್ಣುದೂತರೇ ಜೀವ ತೆಕ್ಕೊಂಡೋದ್ದು ಹೇಳಿ ಎನ್ನ ಮನಸ್ಸಿಂಗಾತು. ಅಂತಹ ದೊಡ್ಡಬ್ಬೆ ಇನ್ನಿಲ್ಲೆ ಹೇಳಿ ಗ್ರೇಶಿ ಕಣ್ಣೀರು ಉಕ್ಕಿ ಬಂತು. ತಡವಲೆಡಿಯದ್ದೆ ದೊಡ್ಡಬ್ಬೆಯ ಮೇಲೆಯೇ ಬಿದ್ದು ಕೂಗಿದೆ. ಅಲ್ಲಿ ಸೇರಿದವು ಎನ್ನ ಏಳ್ಸಿ ಸಮಾಧಾನ ಮಾಡಿದವು. ಎಲ್ಲೋರು ಸೇರಿ ದೊಡ್ಡಬ್ಬೆಯ ಮುಂದಾಣ ಕಾರ್ಯಕ್ಕೆ ದೊಡ್ಡಬ್ಬೆಯ ತೆಕ್ಕೊಂಡು ಹೋದವು. ಆ ದೃಶ್ಯವ ನೋಡ್ಲೆ ಎಡಿಯದ್ದೆ ಆನು ಕಣ್ಣೀರು ಹಾಕಿಯೊಂಡು ಒಳ ಹೋದೆ.

ಪ್ರಾಯ ಆದೊವೆಲ್ಲಾ ಬಿದ್ದರೆ ಏನಾದರೂ ಪ್ರಾಕ್ಚರ್ ಆಗಿ ಮನುಗಿದಲ್ಲೇ ಆವುತ್ತೊವು. ಆ ಲೆಕ್ಕಕ್ಕೆ ದೊಡ್ಡಬ್ಬೆಕ್ಕಂಗೆ ಬೇರೆಲ್ಲಿಯೂ ಪೆಟ್ಟಾಗದ್ದೆ ಎದೆಗೇ ಬಲವಾದ ಪೆಟ್ಟಾಗಿ ಅಂಬಗಳೇ ತೀರಿಹೋದವು. ಎಂತಾದರೂ ದೊಡ್ಡಬ್ಬೆಕ್ಕ° ಪುಣ್ಯ ಮಾಡಿದ್ದವಪ್ಪ. ಹೇಳಿ ಅಲ್ಲಿ ಕೂಡಿದೊವು ಮಾತಾಡುದು ಎನಗೆ ಕೇಳಿತ್ತು. ಜೀವನಪೂರ್ತಿ ದೇವರು ದೊಡ್ಡಬ್ಬೆಗೆ ಕಷ್ಟವನ್ನೇ ಕೊಟ್ಟರೂ ಮರಣ ಕಾಲಲ್ಲಾದರೂ ಸುಖ ಕೊಟ್ಟನ್ನೆ; ಎಂಬತ್ತು ವರ್ಷದ ಬರಡು ಬಾಳು ಕಡೆಂಗಾದರೂ ಸಂತೋಷಲ್ಲಿ ಮುಕ್ತಾಯ ಆತನ್ನೆ ಹೇಳಿ ಎನ್ನ ಮನಸ್ಸಿಂಗೆ ಎಷ್ಟೋ ಸಮಾಧಾನ ಆತು.

ಅಂದ್ರಾಣ ಕ್ರಿಯಾಕರ್ಮ ಎಲ್ಲಾ ಮುಗಿಶಿಕ್ಕಿ ಎಂಗೊ ವಾಪಾಸ್ಸು ಮನೆಗೆ ಹೆರಟೆಯೊ°. ದಾರಿ ಉದ್ದಕ್ಕೂ ಮತ್ತೆ ದೊಡ್ಡಬ್ಬೆಯೇ ಕಣ್ಣ ಮುಂದೆ ಬಂದುಗೊಂಡಿತ್ತು.

ಹಿಂದಾಣ ಕಾಲದಲ್ಲಿ ದೊಡ್ಡಬ್ಬೆಯ ಹಾಂಗೆ ಲೆಕ್ಕ ಇಲ್ಲದಷ್ಟು ಕೂಸುಗಳ ಬಾಳು ಹಾಳಾಯಿದು ಹೀಂಗೆ. ಶೈಶವಾವಸ್ಥೆಂದ ಮುದುಕಿ ಅಪ್ಪಲ್ಲಿವರೆಗೂ ಇಂಥಾ ದಾರುಣ ಬಾಳು ಬಾಳಿ ಅಳುದ ಹೋದ ಆ ಜೀವಂಗೊಕ್ಕೆಲ್ಲಾ ನಮ್ಮ ಸಮಾಜವೇ ಕಾರಣ. ಅಂಬಗ ಇದ್ದ ಅತಿ ಮೂಢನಂಬಿಕೆಗೊ ಬಾಲ್ಯವಿವಾಹ ವಿಧವೆಯವರ ದೂರಮಾಡಿ ಹೀನಾಯ ರೀತಿಲ್ಲಿ ನೋಡಿಗೊಂಡಿದ್ದದು ಅಲ್ಲದ್ದೆ ಇನ್ನೂ ಅನೇಕ ಕಾರಣಂಗೊ ಇದ್ದು.

ನಮ್ಮ ಪುಣ್ಯ ಇಂದು ಹಾಂಗಿಪ್ಪ ದುಷ್ಟ ಆಚರಣೆಗೊ ನಮ್ಮ ಸಮಾಜಂದ ಹೆಚ್ಚಿಂದೂ ದೂರ ಆಯಿದು. ಆದರೂ ಪೂರ ಹೋಯಿದಿಲ್ಲೆ. ಕಾಲಕ್ರಮೇಣ ಅದೂ ಹೋಕ್ಕು. ಇಂದಾಗಿದ್ದರೆ ದೊಡ್ಡಬ್ಬೆ, ದೊಡ್ಡಬ್ಬೆಯ ಎಲ್ಲಾ ಸಮಸ್ಯೆಗೊಕ್ಕೂ ಪರಿಹಾರ ಇದ್ದತ್ತು. ಆದರೆ ಈಗ ಅವೇ ಇಲ್ಲೆನ್ನೆ.

ಎಲ್ಲಾ ಮುಗುದ ಮೇಲೆ ಮಾವ ದೊಡ್ಡಬ್ಬೆಯ ೯ ಎಳೆ ಚಕ್ರಸರಲ್ಲಿ ಎಷ್ಟು ಚಿನ್ನ ಇದ್ದು ಹೇಳಿ ತೂಗುಸಿ ನೋಡಿದವಡ. ಅದರ್ಲಿ ಭರ್ತಿ ಹದಿನೈದು ಪವನು ಚಿನ್ನ ಇದ್ದತ್ತಡ. ಒಂದೆರಡು ಪವನು ಚಿನ್ನ ಕೂಡಾ ಮಾಡ್ಸುಲೆ ಎಡಿಯದ್ದ ಮಾವಂಗೆ ಎರಡೂ ಕೂಸುಗೊಕ್ಕೂ ಕೊಡ್ಲೆ ಬೇಕಾದಷ್ಟು ಚಿನ್ನ ಆತು. ಕಡೆಂಗೂ ಬಾಗಿ ದೊಡ್ಡಬ್ಬೆಂದಾಗಿ ಮಾವನ ಭಾಗ್ಯದ ಬಾಗಿಲು ತೆಗದತ್ತು.

ಎಲ್ಲಾ ಆಗಿ ಘಟನೆ ರಜ ತಣ್ಣಂಗಾದ ಮೇಲೆ ಒಂದು ದಿನ ಮೊಬೈಲಿಂಗೆ ಒಂದು ಅನಾಮಧೇಯ ಕರೆಬಂತು. ಅದು ನಿನ್ನ ದೊಡ್ಡಬ್ಬೆದು ನಿಜವಾದ ಸಾವಲ್ಲ. ಒಂದು ರೀತಿಯ ಕೊಲೆಯೇ. ನಿನ್ನ ದೊಡ್ಡಬ್ಬೆ ಬೆಶಿನೀರಿಂಗೆ ಕಿಚ್ಚು ಹಾಕಿದ್ದು ಸಾಕಾಯ್ದಿಲ್ಲೆ. ನೀರು ಬೆಶಿಯೇ ಆಯಿದಿಲ್ಲೆ. ಬೇಕಾದಷ್ಟು ಕಿಚ್ಚು ಹಾಕುಲೆ ಎಂತ ನಿನಗೆ ಹೇಳಿ ಅಟ್ಟಕ್ಕೆ ವಸ್ತ್ರ ಆರ್ಸುಲೆ ಹೋದ ದೊಡ್ಡಬ್ಬೆಯ, ಎನ್ನ ಮಾವ ಕೋಪಲ್ಲಿ ದೂಡಿದ್ದು. ಅಂಬಗ ಅಲ್ಲಿಂದ ಕೆಳಂಗೆ ಕವುಚಿ ಬಿದ್ದ ದೊಡ್ಡಬ್ಬೆ ಹಾರ್ಟಿಂಗೆ ಪೆಟ್ಟಾಗಿ ಮೂಗಿಲ್ಲಿ ಬಾಯಿಲ್ಲಿ ನೆತ್ತರು ಕಾರಿ ತೀರಿಹೋದ್ದು. ಈ ದೃಶ್ಯವ ಆನೇ ಎನ್ನ ಕಣ್ಣಾರೆ ನೋಡಿದ್ದೆ. ಆದರೆ ನೀನು ಈ ಸುದ್ದಿಯ ಮಾತ್ರ ಇಲ್ಲಿಗೇ ಮರತ್ತು ಬಿಡು. ವಿಷಯ ಎಲ್ಲಿಯಾದರೂ ಹೆರಬಿದ್ದರೆ ಎಲ್ಲೋರು ಜೈಲಿಂಗೆ ಹೋಯೆಕಕ್ಕು…… ಹೇಳಿ ನಿಲ್ಸೆಕ್ಕಾದರೆ ಫೋನ್ ಕಟ್ ಆತು.

ಅದರ ಕೇಳಿ ಎನಗೆ ಶಾಕ್ ಆತು. ಫೋನ್ ಹಿಡ್ಕೊಂಡು ನಿಂದೋಳು ಪ್ರತಿಮೆಯ ಹಾಂಗೆ ಹಿಡ್ಕೊಂಡೇ ನಿಂದೆ. ಆ ಶಾಕ್ಂದ ಹೆರ ಬಪ್ಪಲೆ ಎನಗೆ ಅರ್ಧಗಂಟೆಯೇ ಬೇಕಾತು. ಕಡೆಂಗೂ ಫೋನಿಲ್ಲಿ ಕೇಳಿದ್ದು ಎನ್ನ ತಮ್ಮನ ಬದಲಾದ ಸ್ವರವೇ ಹೇಳಿ ಆನು ಕಂಡುಹಿಡುದೆ.

ಈಗ ಎನಗೆ ದೊಡ್ಡಬ್ಬೆಯ ಸಾವಿನ ಬಗ್ಗೆ ಇದ್ದ ಸಂಶಯ ಎಲ್ಲಾ ನಿವಾರಣೆ ಆತು. ಎನಗೆ ಈಗ ಎಲ್ಲವೂ ಅರ್ಥ ಆವುತ್ತಾ ಇದ್ದು. ಆದರೆ ಎಲ್ಲೋರ ಹಿತದೃಷ್ಟಿಂದ ಇಂದಿಂಗೂ ಆನು ಅದರ ಎಲ್ಲಾ ಮರವಲೆ ಪ್ರಯತ್ನ ಪಡ್ತಾ ಇದ್ದೆ.

—-೦—–

15 thoughts on ““ದೊಡ್ಡಬ್ಬೆ”-ಕೊಡಗಿನ ಗೌರಮ್ಮ ೨೦೧೧, ದ್ವಿತೀಯ ಬಹುಮಾನ ಪಡೆದ ಕಥೆ

  1. ಕತೆ ಲಾಯ್ಕ ಆಯಿದು.ಆಶ್ರಯ ತಪ್ಪಿ ಬಂದ ಹೆಮ್ಮಕ್ಕಳ ಪ್ರೀತಿಂದ ನೋಡಿರೆ,ಅವು ಆ ಮನೆಗೇ ಆಸರೆ ಅಪ್ಪದೂ ಇದ್ದು.ಇಲ್ಲಿ ಇದು ತೀರಾ ವಿರುದ್ಧ ಆತು.ಕತೆಯ ನಿರೂಪಣೆಯ ಬಗ್ಗೆ ಹೇಳುತ್ತರೆ-ಅಲ್ಲಲ್ಲಿ ಲೇಖಕಿ ನೇರವಾಗಿ ಅಭಿಪ್ರಾಯ ಹೇಳುವ ಬದಲು,ಕತೆಯ ಏವದಾರೂ ಪಾತ್ರಗಳಿಂದ ಹೇಳಿಸುವ ತಂತ್ರ ಅನುಸರಿಸುದು ಉತ್ತಮ ಹೇಳಿ ಎನ್ನ ಸಲಹೆ.

    1. ಆಸರೆ ತಪ್ಪಿ ಬ೦ದವರ……………………ಇದ್ದು . ನಿಜ ಆದರೆ ಹಾ೦ಗೆ ನೋಡುವೊವು ತು೦ಬಾ ವಿರಳ .ನಿರೂಪಣೆ ಬಗ್ಗೆ…………ಕಥೆಯ ಪಾತ್ರ ಸ್ವಗತಲ್ಲಿ ಇದ್ದ ಕಾರಣ ಚೇ೦ಜಿ೦ಗೆ ಇರಲಿ ಹೇಳಿ ಬರದ್ದು .ಸಲಹೆ ಸೂಚನೆಗೆ ಧನ್ಯವಾದ೦ಗೊ

  2. ಸ್ಪಷ್ಟ ನಿರೂಪಣೆ ಬಿಡದ್ದೆ ಓದುಸಿಗೊ೦ಡು ಹೋತು.ತು೦ಬಾ ಲಾಯ್ಕ ಇದ್ದು,ಕರುಳು ‘ಚುರುಕ್’ ಹೇಳುವ ಅನುಭವ ಆತು.ನಮ್ಮ ಭಾಷೆಲಿ ಭಾವನೆಗೊ ಎಷ್ಟು ಚೆ೦ದಕ್ಕೆ ಪ್ರಕಟ ಆವುತ್ತು ಹೇಳ್ತದಕ್ಕೆ ಈ ಕಥೆ ಉದಾಹರಣೆ.
    ಕತೆಯ ಎಡಕ್ಕಿಲಿ ಬಪ್ಪ (ಆ°. . . ಕ್ಷಮಿಸಿ, ದೊಡ್ಡಬ್ಬೆಯ ಬಗ್ಗೆ ಆನೇ ಆಲೋಚನೆ ಮಾಡ್ತಾ ಇಪ್ಪದಲ್ಲದ್ದೆ ನಿಂಗೊಗೆ ಎಂತದೂ ಹೇಳಿದ್ದೇ ಇಲ್ಲೆ ಅಲ್ಲದಾ? ಕೇಳಿ) ಬಹುಶಃ ಅಗತ್ಯ ಇಲ್ಲೆ.ನೆಡೂಕೆ ಒ೦ದರಿ ಬ್ರೇಕ್ ಹಾಕಿದಾ೦ಗೆ ಆಗಿ ರಸಭ೦ಗ ಆವುತ್ತೋ ಹೇಳಿ ಕ೦ಡತ್ತು.
    ಅತ್ತೇ,ಒ೦ದು ವರುಷ೦ದ ರಜ ರಜ ಬರವಲೆ ಸುರು ಮಾಡಿದ್ದು ಹೇಳಿ ನ೦ಬುಲೆ ಸಾಧ್ಯವೇ ಇಲ್ಲದ್ದಷ್ಟು ಪ್ರಬುದ್ಧ ಬರಹ.ಶುಭಾಶಯ.

    1. ನಿನ್ನ ಅಭಿಮಾನಕ್ಕೆ ಧನ್ಯವಾ ದ೦ಗೊ ರಘು .ನೀನು ಹೇಳಿದ ಹಾ೦ಗೆ ‘ಆ’ ವಾಕ್ಯ ಇದ್ದು ಅಪ್ಪು.ಆದರೆ ಕಥೆ ಮು೦ದುವರುಸುಲೆ ಎನಗೆ ಆ ವಾಕ್ಯ ಬೇಕಿತ್ತು ಹೇಳಿ ಕ೦ಡತ್ತು. ವಿಮರ್ಶಿಸಿ ಬರದ್ದಕ್ಕೆ ನಮಸ್ಕಾರ .

  3. ಹಿರಿಯ ಜೀವ ದೊಡ್ಡಬ್ಬೆಯ ಅಸಹಾಯಕ ಜೀವನದ ಕಥೆಯ ಕೇಳಿ ಮನಸ್ಸಿಂಗೆ ತುಂಬಾ ಬೇಜಾರು ಆತು. ಕಡೇಂಗೆ ಅವಕ್ಕೆ ಬಂದ ಹಾಂಗಿಪ್ಪ ಸಾವು ಆರಿಂಗೂ ಬಾರದ್ದೆ ಇರಳಿ. ಕಥೆಯ ಶೈಲಿ ಲಾಯಕಿದ್ದು. ಕಥೆ ಬರದು ಬಹುಮಾನ ಪಡದ ಪಾರ್ವತಿ ಅಕ್ಕಂಗೆ ಅಭಿನಂದನೆಗೊ. ಬೈಲಿಂಗೆ ನಿಂಗಳ ಕಥೆ ಲೇಖನಂಗೊ ಏವತ್ತುದೆ ಬತ್ತಾ ಇರಳಿ. ವಿಜಯತ್ತೆಗೆ ಧನ್ಯವಾದಂಗೊ.

    1. ಸಣ್ಣಾದಿಪ್ಪಗಳೇ ಎನಗೆ ಸಾಹಿತ್ಯಲ್ಲಿ ಅತೀವ ಆಸಕ್ತಿ ಇತ್ತು .ಆದರೆ ಅ೦ಬಗ ಹೆಚ್ಹೆ೦ತ ಬರವಲೆ ಆಯಿದಿಲ್ಲೆ.ಈಗ ಒ೦ದು ವರುಷ೦ದ ರಜ ರಜ ಬರವಲೆ ಸುರು ಮಾಡಿದ್ದಷ್ಟೇ . ನಿ೦ಗಳ ಅಭಿಮಾಕ್ಕೆ ಹಾ೦ಗೆ ಕಥೆಯ ವಿಶ್ಲೇಷಿಸಿ ಬರದ್ದಕ್ಕೆ ತಮ್ಮ ಗೋಪಾಲ೦ಗೆ ತು೦ಬಾ ತು೦ಬಾ ಧನ್ಯವಾದ೦ಗೊ.

  4. ಗೆಂಡನ ಆಶ್ರಯ ಇಲ್ಲದ್ದ ಹೆಮ್ಮಕ್ಕೊ ಬತ್ತ ಬಂಙವ ನಿರೂಪಿಸಿದ್ದು ಲಾಯಿಕ ಆಯಿದು. ಅಭಿನಂದನೆಗೊ

    1. ಮನದ ಮಾತಿನ ತಿಳಿಸಿದ್ದಕ್ಕೆ ಧನ್ಯವಾದ೦ಗೊ

  5. ಪಾಪದ ಆ ದೊಡ್ಡಬ್ಬೆ, ಬಂದ ಕಷ್ಟಂಗಳ ಎಲ್ಲಾ ನುಂಗಿಯೊಂಡು, ತನಗಾಗಿ ಏನೊಂದೂ ಇಲ್ಲದ್ದೇ, ಬಾಕಿಯೋರಿಂಗಾಗಿ ಕೆಲಸ ಮಾಡಿ ಮಾಡಿ ಕೊನೆಗೆ ಆ ತರಹ ಸಾವು ಕಂಡದೆಲ್ಲ ಓದುವಗ ತುಂಬಾ ಬೇಜಾರ ಆತು.

    1. ಪಾಪದ ದೊಡ್ದಬ್ಬೆಯ ಕಷ್ಟಕ್ಕೆ ಸ್ಪ೦ದಿಸಿದ್ದಕ್ಕೆ ಸುಮನ೦ಗೆ ನಮಸ್ಕಾರ…. 🙂

    1. ಹರೇ ರಾಮ; ಒ೦ದಕ್ಷರ ಬಿಡದ್ದೆ ಓದಿದೆ.ಎನ್ನ ಬಾಲ್ಯದ ಕೆಲವು ಘಟನಗೊ ಮನಸ್ಸಿಲ್ಲಿ ಹಾದು ಬ೦ತು; ಪೂರ್ತಿ ಒದಿಯಪ್ಪಗೆ ಕಣ್ಣು ಬೋದುಳಿತ್ತು. ಇ೦ಥ ನತದೃಷ್ಟ ಹೆಮ್ಮಕ್ಕಳ ಜೀವನವ ಹತ್ತರ೦ದ ಕ೦ಡು೦ಡ ಎನಗೆ ಇಲ್ಲಿ ಅ೦ಥ ಒ೦ದು ಜೀವದ ವಾಸ್ತವದ ಚಿತ್ರಣದ ದರ್ಶನ ಆತು!ಇ೦ಥ ದಾರುಣ ಕಥೆಯ ಒಳ್ಳೆ ಶೈಲಿಲಿ ಕಟ್ಟಿ ಕೊಟ್ಟ ಕೂಳಕ್ಕೋಡ್ಳು ಪಾರ್ವತಿ ಅಕ್ಕ೦ಗೆ ಹಾ೦ಗೂ ನಮ್ಮ ಬಯಲಿಲ್ಲಿ ಇದರ ಅನಾವರಣ ಮಾಡಿದ ಆತ್ಮೀಯ ತ೦ಗೆ ವಿಜಯ೦ಗೆ ಧನ್ಯವಾದ೦ಗೊ + ಈ ಬರಹಕ್ಕೆ ಒ೦ದು ಒಳ್ಳೆ ಒಪ್ಪ. ನಮಸ್ತೇ..

      1. ಎನ್ನ ಕಥೆಯ ಓದಿ ಮನದಾಳ೦ದ ಚೆ೦ದಕ್ಕೆ ವಿಮರ್ಶೆ ಮಾಡಿ ಬರದ್ದಕ್ಕೆ ಉದುಪುಮೂಲೆ ಅಣ್ಣ೦ಗೆ ಧನ್ಯವಾದ.. 🙂

  6. ‘ದೊಡ್ಡಬ್ಬೆ’ ಚಿತ್ರಣಲ್ಲಿ ಹಲವು ಸನ್ನಿವೇಶಂಗಳ ಚಿತ್ರಣ ನಾಜೂಕಾಗಿ ಮೂಡಿಬೈಂದು. ಅಸಹಾಯಕ ಹೆಮ್ಮಕ್ಕ ಒಬ್ಬನ್ನ ಯಥಾರ್ಥ ಜೀವನ ಕಷ್ಟವ ಉತ್ತಮವಾಗಿ ನಿರೂಪಿತವಾಯ್ದು. ಕೂಳಕ್ಕೋಡ್ಳು ಪಾರ್ವತಿ ಚಿಕ್ಕಮ್ಮಂಗೆ ಅಭಿನಂದನೆ. ವಿಜಯತ್ತೆಯ ಕಾರ್ಯಕ್ಕೆ ಶ್ಲಾಘನೆ.

    1. ಬೈಲಿ೦ಗೆ ಬರವ ಎಲ್ಲರ ಶುದ್ದಿಗೊಕ್ಕೆ ನೀನು ಮೊದಲಾಗಿ ಸ್ಪ೦ದಿಸುವ ರೀತಿ ಅದ್ಭುತ.ಹಾ೦ಗೇ ಎನ್ನ ಕತೆಯ ಬಗ್ಗೆ ಮೆಚ್ಹುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದ೦ಗೊ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×